ಚಾಮರಾಜನಗರದಲ್ಲಿ ಪೊಲೀಸ್ ಧ್ವಜ ದಿನಾಚರಣೆ : ಆಕರ್ಷಕ ಪಥಸಂಚಲನ

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ, ಏ.2: ನಗರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮ ನಡೆಯಿತು.

ವಿವಿಧ ವಿಭಾಗದ ಪೊಲೀಸ್ ತಂಡಗಳಿಂದ ನಡೆದ ಪಥಸಂಚಲನ ಆಕರ್ಷಕವಾಗಿ ಮೂಡಿಬಂದಿತು.

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ, ಸಿವಿಲ್, ಸಂಚಾರಿ, ಮಹಿಳಾ ತಂಡ, ಕೊಳ್ಳೇಗಾಲ ಉಪ ವಿಭಾಗ ತಂಡಗಳು ಭಾಗವಹಿಸಿದ್ದ ಪಥಸಂಚಲನ ಕಾರ್ಯವು ಅತ್ಯಂತ ಶಿಸ್ತುಬದ್ಧವಾಗಿ ನಡೆಯಿತು.

ಪಥಸಂಚಲನದ ಬಳಿಕ ರಾಷ್ಟ್ರಧ್ವಜ ಹಾಗೂ ಪೊಲೀಸ್ ಧ್ವಜಗಳ ಆಗಮನವಾಯಿತು. ಇದೇ ವೇಳೆ ನುಡಿಸಿದ ರಾಷ್ಟ್ರಗೀತೆಗೆ ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲರೂ ಎದ್ದುನಿಂತು ಗೌರವ ಸಲ್ಲಿಸಿದರು.

ನಂತರ ವಿವಿಧ ಮುಖ ಬೆಲೆಯ ಪೊಲೀಸ್ ಧ್ವಜಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ ಕವಿತಾ ಅವರು ಬಿಡುಗಡೆಗೊಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕವಿತಾ ಅವರು ಕೌಟುಂಬಿಕ ಒತ್ತಡವನ್ನು ಬದಿಗಿಟ್ಟು, ಪ್ರಾಣದ ಹಂಗು ತೊರೆದು ದಿನದ 24 ಗಂಟೆಯು ಕಾನೂನು ಸುವ್ಯವಸ್ಥೆ ಕಾಪಾಡುವುದಲ್ಲದೆ, ಸಾರ್ವಜನಿಕರ ರಕ್ಷಣೆಗೆ ಮುಂದಾಗಿರುವ ಪೊಲೀಸರ ಸೇವೆಯನ್ನು ಸ್ಮರಿಸುವ ಸಲುವಾಗಿ ಧ್ವಜ ದಿನಾಚರಣೆಯನ್ನು 1996ರಿಂದ ಪ್ರತಿವರ್ಷ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಪೊಲೀಸ್ ಧ್ವಜ ದಿನದ ಅಂಗವಾಗಿ 10, 20, 50, 100 ರೂ. ಮುಖಬೆಲೆಯ ಪೊಲೀಸ್ ಧ್ವಜಗಳನ್ನು ಅಧಿಕಾರಿಗಳು, ನಾಗರಿಕರು ಸೇರಿದಂತೆ ಎಲ್ಲರಿಗೂ ಮಾರಾಟ ಮಾಡಿ ಹಣವನ್ನು ಸಂಗ್ರಹಿಸಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗುವ ಅಧಿಕಾರಿ, ನೌಕರರ ಆರೋಗ್ಯ ಕಲ್ಯಾಣ ಕಾರ್ಯಗಳಿಗಾಗಿ ವಿನಿಯೋಗಿಸಲಾಗುತ್ತದೆ, ಇದೊಂದು ಉತ್ತಮ ಕಾರ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕವಿತಾ ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿದ್ದ ಪೂರ್ವ ಠಾಣೆ ನಿವೃತ್ತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದರು.

ಇದೇ ವೇಳೆ ಕಳೆದ ಸಾಲಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪೊಲೀಸ್ ಅಧಿಕಾರಿ, ನೌಕರರನ್ನು ಗೌರವಿಸಿ ಸನ್ಮಾನಿಸಿ ಗೌರವಿಸಲಾಯಿತು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಶಿದರ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಚಾಮರಾಜನಗರದಲ್ಲಿ ಪೊಲೀಸ್ ಧ್ವಜ ದಿನಾಚರಣೆ : ಆಕರ್ಷಕ ಪಥಸಂಚಲನ Read More

ಸೈಬರ್ ಅಪರಾಧ ನಿಭಾಯಿಸುವ ಶಕ್ತಿ ಯುವ ಅಧಿಕಾರಿಗಳಲ್ಲಿರಲಿ:ಪುಟ್ಟ ‍ಮಾದಯ್ಯ

ಮೈಸೂರು, ಏ.2: ಇತ್ತೀಚೆಗೆ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ಸೈಬರ್ ಅಪರಾಧಗಳನ್ನು ಪತ್ತೆಹಚ್ಚಿ ನಿಭಾಯಿಸುವ ಶಕ್ತಿ ಯುವ ಅಧಿಕಾರಿಗಳಲ್ಲಿ ಇರಬೇಕು ಎಂದು ನಿವೃತ್ತ ಪೊಲೀಸ್ ಅಧಿಕಾರಿ ಪುಟ್ಟಮಾಧಯ್ಯ ತಿಳಿಸಿದರು.

ನಗರದ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಏಕೀಕರಣದ ನಂತರ ಮೈಸೂರು ರಾಜ್ಯದಲ್ಲಿ ಪೊಲೀಸ್ ಧ್ವಜ ವಿಭಿನ್ನವಾಗಿದ್ದವು. ಅದನ್ನು ಮಾರ್ಪಡಿಸಿ 1960 ರಲ್ಲಿ ರಾಜ್ಯ ಪೊಲೀಸ್ ಕಾಯ್ದೆ ಜಾರಿಗೊಳಿಸಿ ನಿವೃತ್ತ ಪೊಲೀಸರ ಕಲ್ಯಾಣ ನಿಧಿ ಜಾರಿಗೊಳಿಸಲಾಯಿತು ಎಂದು ಹೇಳಿದರು.

ಬೇರೆ ಇಲಾಖೆಗಳಿಗಿಂತ ಪೊಲೀಸ್ ಇಲಾಖೆ ಭಿನ್ನ,ಇಲ್ಲಿ ಕೆಲಸಕ್ಕೆ ನಿರ್ಧಿಷ್ಟ ಸಮಯ ಇರುವುದಿಲ್ಲ,ಎಲ್ಲಾ ಸಂದರ್ಭದಲ್ಲೂ ತಯಾರಿರಬೇಕು ಎಂದು ತಿಳಿಸಿದರು.

ಆರೋಗ್ಯ ಸಮಸ್ಯೆಗಳೂ ಬೇಗ ಬರುತ್ತವೆ ಹಾಗಾಗಿ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಸಾರ್ವಜನಿಕ ಜೀವನದಲ್ಲಿ ನಡೆದುಕೊಳ್ಳುವ ರೀತಿ ಮುಖ್ಯ. ಈ ದಿನಗಳಲ್ಲಿ ರಾಜಕೀಯ ಗೊಂದಲ, ಸೈಬರ್ ಅಪರಾಧಗಳನ್ನು ನಿಭಾಯಿಸುವ ಶಕ್ತಿ ಯುವ ಅಧಿಕಾರಿಗಳಲ್ಲಿ ಇರಬೇಕು. ನಿವೃತ್ತ ಅಧಿಕಾರಿಗಳ ಪಟ್ಟಿ ಠಾಣಾ ಮಟ್ಟದಲ್ಲಿ ನಿರ್ವಹಣೆ ಆಗಬೇಕು. ನಿವೃತ್ತರನ್ನು ಗೌರವಿಸಬೇಕು ಎಂದು ಪುಟ್ಟ ಮಾದಯ್ಯ ಸಲಹೆ ನೀಡಿದರು.

ಪ್ರಧಾನ ದಳಪತಿ ಸಹಾಯಕ ಕಮಾಂಡರ್ ರಾಜು.ಎಂ ತುಕಡಿಗಳ ಪರಿವೀಕ್ಷಣೆಗೆ ಕರೆದೊಯ್ದರು.ತೆರೆದ ವಾಹನದಲ್ಲಿ ಪರಿವೀಕ್ಷಣೆ ಮಾಡಲಾಯಿತು.

ನಗರ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ನಗರ ನಾಗರಿಕ ಪೊಲೀಸ್, ಸಂಚಾರ ವಿಭಾಗ, ಅಶ್ವರೋಹಿ ದಳ ಸೇರಿ 10 ತಂಡಗಳಿಂದ ಪಥಸಂಚಲನ ನಡೆಯಿತು.

ಕಾರ್ಯಕ್ರಮದಲ್ಲಿ ದಕ್ಷಿಣ ವಲಯದ ಐ.ಜಿ.ಪಿ
ಬೋರಲಿಂಗಯ್ಯ, ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ನಗರ ಡಿ ಸಿ ಪಿ ಮುತ್ತುರಾಜ್, ಎಸ್.ಜಾಹ್ನವಿ, ಎಡಿಎಸ್ಪಿ ನಾಗೇಶ್, ಕಮಾಂಡೆಂಟ್ ಶೈಲೇಂದ್ರ,ಕೆಪಿಎ ನಿರ್ದೇಶಕ ಚನ್ನಬಸವಣ್ಣ, ಸೆಸ್ಕಾಂ ಎ ಎಸ್ಪಿ ಸವಿತಾ ಹೂಗಾರ್ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಸೈಬರ್ ಅಪರಾಧ ನಿಭಾಯಿಸುವ ಶಕ್ತಿ ಯುವ ಅಧಿಕಾರಿಗಳಲ್ಲಿರಲಿ:ಪುಟ್ಟ ‍ಮಾದಯ್ಯ Read More