ಕ ಪೊ ಅಕಾಡೆಮಿ ಜೊತೆ ಸಾವಿತ್ರಿಬಾಯಿ ಫುಲೆ ಮಹಿಳಾ ಮಕ್ಕಳ ಅಭಿವೃದ್ಧಿ ಸಂಸ್ಥೆ ಸಹಿ

ಮೈಸೂರು: ಕರ್ನಾಟಕ ಪೊಲೀಸ್ ಅಕಾಡೆಮಿ ಹಾಗೂ ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಒಡಂಬಡಿಕೆ ಮಾಡಿಕೊಂಡಿವೆ.

ಈ ಒಡಂಬಡಿಕೆಯು ಎರಡೂ ಸಂಸ್ಥೆಗಳ ನಡುವೆ ಸಂಪನ್ಮೂಲ ವ್ಯಕ್ತಿಗಳ ವಿನಿಮಯ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ವಿಶೇಷ ಕೋರ್ಸ್‌ಗಳನ್ನು ಅಭಿವೃದ್ಧಿಪಡಿಸಿ ನಿರ್ವಹಿಸುವ ಕುರಿತಾಗಿದ್ದು, ಎರಡೂ ಸಂಸ್ಥೆಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

ಒಡಂಬಡಿಕೆಗೆ ಸಹಿ ಹಾಕಿ ಮಾತನಾಡಿದ ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ಎಸ್.ಎಲ್.ಚೆನ್ನಬಸವಣ್ಣ, ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆಯಾದ ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯೊಡನೆ ಒಡಂಬಡಿಕೆ ಕರ್ನಾಟಕ ಪೊಲೀಸ್ ಅಕಾಡೆಮಿಗೆ ಬಹಳ ವಿಶಿಷ್ಟವಾಗಿದೆ ಎಂದು ಹೇಳಿದರು.

ಪ್ರಸ್ತುತ ಸಮಾಜದಲ್ಲಿ ಮಹಿಳೆಯರು ಮತ್ತು ಮಕ್ಕಳು ಎದುರಿಸುತ್ತಿರುವ ಸವಾಲುಗಳು, ಅವರ ಸಮಸ್ಯೆಗಳ ನಿರ್ವಹಣೆಯಲ್ಲಿ ಪೊಲೀಸ್ ಇಲಾಖೆಯ ಪಾತ್ರ, ಅವರ ಕುರಿತಾದ ಕಾನೂನುಗಳು ಹಾಗೂ ಅವರಿಗೆ ಸಂಬಂಧಪಟ್ಟ ಪ್ರಚಲಿತ ವಿದ್ಯಮಾನಗಳ ಕುರಿತು ಪೊಲೀಸ್ ಇಲಾಖೆಗೆ ಸೇರ್ಪಡೆಯಾಗುವ ಅಧಿಕಾರಿ ಗಳು ಹಾಗೂ ಕರ್ತವ್ಯನಿರತ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಅವರನ್ನು ಸಂವೇದನಾಶೀಲರನ್ನಾಗಿ ಮಾಡಲು ಬಹಳ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಈ ಒಡಂಬಡಿಕೆಯ ಮೂಲಕ ಪ್ರಸ್ತುತ ಸಮಾಜದಲ್ಲಿ ಮಹಿಳೆ ಯರ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿ, ದೌರ್ಜನ್ಯಮುಕ್ತ ಸಮಾಜ ನಿರ್ಮಾಣವಾಗುವಂತಾಗಲಿ ಎಂದು ಆಶಿಸಿದರು.

ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಪರವಾಗಿ ಒಡಂಬಡಿಕೆಗೆ ಸಹಿ ಹಾಕಿ ಮಾತನಾಡಿದ ಸಂಸ್ಥೆಯ ಬೆಂಗಳೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪಿ.ಜೆ.ಫಿಲಿಪ್ಸ್ ಅವರು, ಕರ್ನಾ ಟಕ ಪೊಲೀಸ್ ಅಕಾಡೆಮಿಯೊಡನೆ ಒಡಂಬಡಿಕೆ ನಮ್ಮ ಸಂಸ್ಥೆಗೂ ಹೆಮ್ಮೆಯ ವಿಷಯವಾಗಿದ್ದು, ಕರ್ನಾಟಕ ರಾಜ್ಯದಲ್ಲಿ ವರದಿಯಾಗುತ್ತಿರುವ ಮಹಿಳೆಯರ ಮತ್ತು ಮಕ್ಕಳ ದೌರ್ಜನ್ಯಗಳ ಸಂಖ್ಯೆಯನ್ನು ಗಣನೀಯ ವಾಗಿ ಕಡಿಮೆ ಮಾಡುವುದಲ್ಲದೇ, ರಾಜ್ಯವನ್ನು ದೌರ್ಜನ್ಯಮುಕ್ತ ಮಾಡುವಲ್ಲಿ ಪೊಲೀಸ್ ಇಲಾಖೆ ಯೊಂದಿಗೆ ಕೈಜೋಡಿಸುವುದು ಈ ಒಡಂಬಡಿಕೆಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ತರಬೇತಿ ಸಂಸ್ಥೆ ಹಾಗೂ ಕರ್ನಾಟಕ ಪೊಲೀಸ್ ಅಕಾಡೆಮಿ ಕ್ರಾಂತಿಕಾರಕ ಹೆಜ್ಜೆ ಇಟ್ಟಿದೆ. ಇಂತಹ ಆಲೋಚನೆಗೆ ಈ ಸಂಸ್ಥೆಯ ನಿರ್ದೇಶಕ ಚೆನ್ನಬಸವಣ್ಣ ಅವರು ಹಾಗೂ ಎಲ್ಲಾ ಅಧಿಕಾರಿಗಳು ಅಭಿನಂದನಾರ್ಹರು ಎಂದು ತಿಳಿಸಿದರು.

ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಬೆಂಗಳೂರು ಪ್ರಾದೇಶಿಕ ಕೇಂದ್ರದ ಉಪನಿರ್ದೇಶಕ ಲೋಕೇಶ್, ಕರ್ನಾಟಕ ಪೊಲೀಸ್ ಅಕಾಡೆಮಿಯ ಅಧಿಕಾರಿ ವರ್ಗ ಹಾಗೂ ಬೋಧಕರು ಹಾಜರಿದ್ದರು.

ಕ ಪೊ ಅಕಾಡೆಮಿ ಜೊತೆ ಸಾವಿತ್ರಿಬಾಯಿ ಫುಲೆ ಮಹಿಳಾ ಮಕ್ಕಳ ಅಭಿವೃದ್ಧಿ ಸಂಸ್ಥೆ ಸಹಿ Read More

ಆರೋಗ್ಯಕರ ಸಮಾಜ ಕಟ್ಟಲು ಪೊಲೀಸರ ಪಾತ್ರ ಮುಖ್ಯ- ಚೆನ್ನಬಸವಣ್ಣ

ಮೈಸೂರು: ಮಾನವ ಕಳ್ಳಸಾಗಾಣೆಯನ್ನು‌ ಸಂಪೂರ್ಣ ನಿರ್ಮೂಲನೆ ಮಾಡಿ,
ಆರೋಗ್ಯಕರ ಸಮಾಜ ಕಟ್ಟುವಲ್ಲಿ ಪೊಲೀಸರ ಪಾತ್ರ ಬಹಳ ಮುಖ್ಯ ಎಂದು
ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕರಾದ ಚೆನ್ನಬಸವಣ್ಣ ಅವರು ತಿಳಿಸಿದರು.

ಮಾನವ ಕಳ್ಳ ಸಾಗಣೆ ನಿರ್ಮೂಲನೆಯಲ್ಲಿ ಪೋಲೀಸರ ಪಾತ್ರ ಎಂಬ ವಿಷಯದ ಕುರಿತು ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳಿಗೆ ಮೂರು ದಿನಗಳ ವಿಶೇಷ ಕಾರ್ಯಾಗಾರವನ್ನು ಕರ್ನಾಟಕ ಪೊಲೀಸ್ ಅಕಾಡೆಮಿ ಹಾಗೂ ವಿಹಾನ್ ಸಂಸ್ಥೆ ಬೆಂಗಳೂರು ಅವರ ಸಹಭಾಗಿತ್ವದಲ್ಲಿ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರಿನಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಾಗಾರದಲ್ಲಿ ಮಾತನಾಡಿದ ಅಕಾಡೆಮಿಯ ನಿರ್ದೇಶಕರಾದ ಚೆನ್ನಬಸವಣ್ಣ ಅವರು ‘ಮಾನವ ಕಳ್ಳಸಾಗಾಣಿಕೆ ವಿಷಯವು ಗಂಭೀರವಾದ ಸಂಕೀರ್ಣ ಜಾಗತಿಕ ಸಮಸ್ಯೆಯಾಗಿದ್ದು, ಬದಲಾದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಇದು ತನ್ನ ವ್ಯಾಪ್ತಿಯನ್ನು ವ್ಯಾಪಕವಾಗಿ ವಿಸ್ತರಿಸಿದೆ ಎಂದು ತಿಳಿಸಿದರು ‌

ಈ ಮಾನವ ಕಳ್ಳಸಾಗಾಣಿಕೆ ಎಂಬ ಮಾಫಿಯಕ್ಕೆ ಸಮಾಜದ ದುರ್ಬಲ ವರ್ಗಗಳು ಸುಲಭವಾಗಿ ತುತ್ತಾಗುತ್ತಿದ್ದು, ಆರ್ಥಿಕ ಬಡತನ ಅಥವಾ ಮಾಫಿಯಾಗಳು ಬೀಸುವ ಬಲೆಗೆ ಬೀಳುತ್ತಿದ್ದಾರೆ. ಇದನ್ನು ತಡೆಯಲು ಹಲವು ಕಾನೂನುಗಳಿದ್ದು, ಈ ಪಿಡುಗಿನ ನಿರ್ಮೂಲನೆಗಾಗಿ ಪೊಲೀಸ್ ವ್ಯವಸ್ಥೆ, ಸರ್ಕಾರದ ಸಂಸ್ಥೆಗಳು ಹಾಗೂ ಇತರೆ ಸಂಘ-ಸಂಸ್ಥೆಗಳು ಪರಿಣಾಮಕಾರಿಯಾಗಿ ಶ್ರಮಿಸುತ್ತಿದ್ದರೂ ಕೂಡ, ಹೊಸ ಮಾರ್ಗಗಳು ಹಾಗೂ ತಂತ್ರಜ್ಞಾನದ ಮೂಲಕ ಮಾನವ ಕಳ್ಳಸಾಗಾಣಿಕೆ ಚಟುವಟಿಕೆಯಲ್ಲಿ ಪಾತಕಿಗಳು ತೊಡಗುತ್ತಿದ್ದು ವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ ಎಂದು ಚೆನ್ನಬಸವಣ್ಣ ಆತಂಕ‌ ವ್ಯಕ್ತಪಡಿಸಿದರು.

ಇಂತಹ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸರ್ಕಾರಿ ಸಂಘ ಸಂಸ್ಥೆಗಳು ಹಾಗೂ ಸರ್ಕಾರೇತರ ವಿವಿಧ ಸಂಘ ಸಂಸ್ಥೆಗಳೊಡನೆ ಸಮನ್ವಯತೆ ಸಾಧಿಸಿ ಮಾನವ ಕಳ್ಳಸಾಗಾಣಿಕೆಯಂತಹ ಸಮಾಜ ವಿರೋಧಿ ಹಾಗೂ ಮಾನವ ವಿರೋಧಿ ಚಟುವಟಿಕೆಗಳನ್ನು ಸಂಪೂರ್ಣ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.

ಮಾನವ ಕಳ್ಳಸಾಗಾಣಿಕೆ ಜಾಲಕ್ಕೆ ಬಲಿಯಾದ ಸಂತ್ರಸ್ತರಿಗೆ ರಕ್ಷಣೆ ನೀಡಿ, ಅವರಿಗೆ ಮಾನಸಿಕ ಧೈರ್ಯ ತುಂಬುವುದೂ ಅಲ್ಲದೇ, ಸಂತ್ರಸ್ತರಿಗಾಗಿ ಲಭ್ಯವಿರುವ ಪುನರ್ವಸತಿ ಸೌಲಭ್ಯಗಳು ಹಾಗೂ ಕಾನೂನು ನೆರವನ್ನು ಒದಗಿಸಲು ಪೊಲೀಸ್ ಅಧಿಕಾರಿಗಳು ಮುಂದಾಗಬೇಕು ಎಂದು ನಿರ್ದೇಶಕರು ಸಲಹೆ ನೀಡಿದರು.

ಕಾರ್ಯಾಗಾರದಲ್ಲಿ ರಾಜ್ಯದ ವಿವಿಧ ಪೊಲೀಸ್ ಘಟಕಗಳಿಂದ ಇಬ್ಬರು ಡಿವೈಎಸ್ಪಿ, 4 ಇನಸ್ಪೆಕ್ಟರ್, 24 ಸಬ್ ಇನಸ್ಪೆಕ್ಟರ್ ದರ್ಜೆಯ ಅಧಿಕಾರಿಗಳು ಸೇರಿ ಒಟ್ಟು 31 ಸೇವಾನಿರತ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕರಾದ ಶ್ರೀ. ಚೆನ್ನಬಸವಣ್ಣ ಕಾರ್ಯಾಗಾರದ ಸಂಯೋಜಕರಾದ ವೆಂಕಟೇಶ್ ಎಸ್. ವಿಹಾನ್ ಸಂಸ್ಥೆಯ ಶ್ರೀಮತಿ ರೋವಿನ ಬಾಸ್ಟಿನ್, ಅಂಬರೀಷ್ ಜೈರಾಜ್, ಹಾಗೂ ಅಕಾಡೆಮಿಯ ಅಧಿಕಾರಿಗಳು ಹಾಜರಿದ್ದರು.

ಆರೋಗ್ಯಕರ ಸಮಾಜ ಕಟ್ಟಲು ಪೊಲೀಸರ ಪಾತ್ರ ಮುಖ್ಯ- ಚೆನ್ನಬಸವಣ್ಣ Read More

ಹೊಸ ಬಗೆಯ ಸೈಬರ್ ಅಪರಾಧ ತಡೆಗಟ್ಟಲು ಪೊಲೀಸರು ಸನ್ನದ್ಧರಾಗಿ- ಚೆನ್ನಬಸವಣ್ಣ ಎಸ್ ಎಲ್

ಮೈಸೂರು: ಹೊಸ ಬಗೆಯ ಸೈಬರ್ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಸನ್ನದ್ಧರಾಗಬೇಕು ಎಂದು ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರಿನ ನಿರ್ದೇಶಕರ ಚೆನ್ನಬಸವಣ್ಣ ಎಸ್ ಎಲ್ ಅವರು ಸಲಹೆ ನೀಡಿದರು.

ಸೈಬರ್ ಅಪರಾಧಗಳು ಮತ್ತು ಅವುಗಳ ಹೊಸ ಮಾದರಿಗಳು ಹಾಗೂ ಪರಿಣಾಮಕಾರಿ ತನಿಖೆ ವಿಷಯದ ಕುರಿತು ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗಳಿಗೆ ಹಮ್ಮಿಕೊಂಡಿರುವ ಮೂರು ದಿನಗಳ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು,ಇದು ಪೊಲೀಸ್ ವ್ಯವಸ್ಥೆಗೆ ಹಾಗೂ ಸಮಾಜಕ್ಕೆ ಬಹಳ ದೊಡ್ಡ ಸವಾಲಾಗಿದೆ. ಸೈಬರ್ ಅಪರಾಧಗಳಿಗೆ ಮುಗ್ಧ ಜನರು ಬಲಿಪಶುಗಳಾಗುತ್ತಿದ್ದು, ನವೀನ ತಂತ್ರಜ್ಞಾನ ಬಳಸಿ ಅಪರಾಧಗಳಲ್ಲಿ ತೊಡಗುತ್ತಿರುವುದರಿಂದ, ಅವುಗಳ ತನಿಖೆ ಪೊಲೀಸ್ ವ್ಯವಸ್ಥೆಗೆ ಬಹಳ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಹೊಸ ಬಗೆಯ ಸೈಬರ್ ಅಪರಾಧಗಳು ಮತ್ತು ಅವುಗಳ ಕಾರ್ಯ ವಿಧಾನಗಳ ಬಗ್ಗೆ ನಮ್ಮ ಪೊಲೀಸ್ ಅಧಿಕಾರಿಗಳು ಸಂವೇದನಾಶೀಲರಾಗಿ, ಸೈಬರ್ ಅಪರಾಧಗಳನ್ನು ತಡೆಗಟ್ಟಲು ಹಾಗೂ ಘಟಸಿರುವ ಅಪರಾಧಗಳನ್ನು ಪರಿಣಾಮಕಾರಿಯಾಗಿ ತನಿಖೆ ನಡೆಸಿ, ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಎಂದು ತಿಳಿಸಿದರು ‌

ಈ ನಿಟ್ಟಿನಲ್ಲಿ ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಸೇವಾನಿರತ ಪೊಲೀಸ್ ಅಧಿಕಾರಿಗಳಿಗೆ ಮೊರು ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಈ ಕಾರ್ಯಾಗಾರದಲ್ಲಿ, ಸೈಬರ್ ಅಪರಾಧಗಳ ತನಿಖೆ ಕುರಿತು ಅಪಾರ ಜ್ಞಾನ ಹೊಂದಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ಸೈಬರ್ ವಿಷಯ ತಜ್ಞರು ಹಾಗೂ ಸೈಬ‌ರ್ ಶಿಕ್ಷಣ ಕ್ಷೇತ್ರದ ತಜ್ಞರಿಂದ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡುತ್ತಾರೆ,ಅದರ ಉಪಯೋಗವನ್ನು ಪಡೆದುಕೊಂಡು, ತಮ್ಮ ಕಾರ್ಯಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ತನಿಖೆ ನಡೆಸುವುದೂ ಅಲ್ಲದೇ, ಸೈಬರ್ ಅಪರಾಧಗಳು ಘಟಿಸುವ ಮೊದಲೇ ಕಾರ್ಯಪ್ರವೃತ್ತರಾಗಿ ಅವುಗಳನ್ನು ತಡೆಗಟ್ಟಿ, ಸಂತ್ರಸ್ತರಿಗೆ ಹಾಗೂ ಸಾಮಾಜಿಕ ವ್ಯವಸ್ಥೆಗೆ ನ್ಯಾಯ ಒದಗಿಸಲು ಪೊಲೀಸ್ ಅಧಿಕಾರಿಗಳು ಸನ್ನದ್ಧರಾಗಬೇಕೆಂದು ಚೆನ್ನಬಸವಣ್ಣ ಎಸ್ ಎಲ್ ಪೊಲೀಸ್ ಅಧಿಕಾರಿಗಳಿಗೆ ತಿಳಿಹೇಳಿದರು.

ಕಾರ್ಯಕ್ರಮದಲ್ಲಿ ಆಕಾಡೆಯಿಯ ಸಹಾಯಕ ನಿರ್ದೇಶಕರು ಹಾಗೂ ಕಾರ್ಯಾಗಾರದ ಸಂಯೋಜಕರಾದ ಎಂ ಎಚ್ ಖಾನ್ ಹಾಗೂ ಸಹಾಯಕ ನಿರ್ದೇಶಕರುಗಳು ಹಾಜರಿದ್ದರು.

ಹೊಸ ಬಗೆಯ ಸೈಬರ್ ಅಪರಾಧ ತಡೆಗಟ್ಟಲು ಪೊಲೀಸರು ಸನ್ನದ್ಧರಾಗಿ- ಚೆನ್ನಬಸವಣ್ಣ ಎಸ್ ಎಲ್ Read More