ಪ್ರಧಾನಿ ಜಿಎಸ್‌ಟಿ ಸರಳೀಕರಣ ಮಾಡಿ ಜನರಿಗೆ ಕೊಡುಗೆ ನೀಡಿದ್ದಾರೆ:ಸುಧಾಕರ್

ಚಿಕ್ಕಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಎಲ್ಲ ರಾಜ್ಯಗಳ ಗಮನಕ್ಕೆ ತಂದು ಜಿಎಸ್‌ಟಿ ಸುಧಾರಣೆ ತಂದಿದೆ ಎಂದು
ಸಂಸದ ಡಾ.ಕೆ.ಸುಧಾಕರ್‌ ಹೇಳಿದರು.

ರಾಜ್ಯದಲ್ಲಿ ತೆರಿಗೆ ಏರಿಕೆಯಾಗಿದ್ದರೆ, ಕೇಂದ್ರ ಸರ್ಕಾರ ತೆರಿಗೆ ಕಡಿಮೆ ಮಾಡಿ ಜನರಿಗೆ ಆರ್ಥಿಕ ಚೈತನ್ಯ ನೀಡಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಧಾಕರ್, ವಿಜಯದಶಮಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ಜಿಎಸ್‌ಟಿಯನ್ನು ಸರಳೀಕರಣ ಮಾಡಿ ಜನರಿಗೆ ಕೊಡುಗೆ ನೀಡಿದ್ದಾರೆ. ಶೇ.18 ರ ತೆರಿಗೆಯನ್ನು ಶೇ.5 ಕ್ಕೆ ತಂದಿದ್ದಾರೆ. ಕೆಲವು ಸರಕು, ಸೇವೆಗಳಲ್ಲಿ ತೆರಿಗೆ ವಿನಾಯಿತಿ ನೀಡಿದ್ದಾರೆ. ನಾನು ಆರ್ಥಿಕ ಸ್ಥಾಯಿ ಸಮಿತಿಯಲ್ಲಿ ಕೆಲಸ ಮಾಡುತ್ತಿದ್ದು, ಇಷ್ಟು ದೊಡ್ಡ ಮಟ್ಟದಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿದಿರಲಿಲ್ಲ. ಮಧ್ಯಮವರ್ಗ ಹಾಗೂ ಬಡಜನರ ಪರವಾಗಿ ನಾನು ಪ್ರಧಾನಿಯವರಿಗೆ ವಿಶೇಷವಾದ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ರೈತರು ಬಳಕೆ ಮಾಡುವ ಟ್ರ್ಯಾಕ್ಟರ್‌, ರಸಗೊಬ್ಬರ, ಹನಿ ನೀರಾವರಿ ಉಪಕರಣಗಳ ತೆರಿಗೆಯನ್ನು ಶೇ.5 ರ ವ್ಯಾಪ್ತಿಗೆ ತರಲಾಗಿದೆ. ಯುಪಿಎ ಅವಧಿಯಲ್ಲಿ ಎಲ್ಲ ಸರಕು, ಸೇವೆಗಳ ಮೇಲೆ ಶೇ.30 ರಷ್ಟು ತೆರಿಗೆ ಇತ್ತು. ಮೋದಿ ಸರ್ಕಾರ ಮೊದಲಿಗೆ ನಾಲ್ಕು ಹಂತಗಳಲ್ಲಿ ತೆರಿಗೆ ತಂದು ಈಗ ಎರಡು ಹಂತಗಳನ್ನು ಉಳಿಸಿಕೊಂಡಿದೆ. ಈ ಸುಧಾರಣೆಯಿಂದ ಎರಡೂವರೆ ಲಕ್ಷ ಕೋಟಿ ರೂ. ಜನರ ಕೈಗೆ ಸಿಗಲಿದೆ ಎಂದು ಅಂದಾಜಿಸಲಾಗಿದೆ,ಇದರಿಂದ ಖರೀದಿ ಸಾಮರ್ಥ್ಯ ಹೆಚ್ಚಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯುಪಿಎಗೆ ಹೋಲಿಸಿದರೆ ಎನ್‌ಡಿಎ ಸರ್ಕಾರ ರಕ್ಷಣಾ ವಲಯಕ್ಕೆ 34 ಪಟ್ಟು ಅಧಿಕ ಅನುದಾನ ನೀಡಿದೆ. ಹೀಗೆ ತೆರಿಗೆ ಹಣವನ್ನು ಕೇಂದ್ರ ಸರ್ಕಾರ ಸದ್ಬಳಕೆ ಮಾಡುತ್ತಿದೆ ಎಂದು ಸುಧಾಕರ್ ತಿಳಿಸಿದರು.

ಕಾಂಗ್ರೆಸ್‌ ಸರ್ಕಾರಕ್ಕೆ ಜಿಎಸ್‌ಟಿ ಎಂದರೆ ಗ್ಯಾರಂಟಿ ಸುಲಿಗೆ ಟ್ಯಾಕ್ಸ್‌. 38 ರೂ. ಇದ್ದ ಹಾಲಿಗೆ 47 ರೂ. ಆಗಿದೆ. ಬಸ್‌ ದರ 100 ಕಿ.ಮೀ. 100 ಇದ್ದಿದ್ದು 115 ರೂ. ಆಗಿದೆ. ಪೆಟ್ರೋಲ್‌ಗೆ 99 ರೂ. ಇದ್ದಿದ್ದು, 103 ರೂ. ಆಗಿದೆ ಹೀಗೆ ಎಲ್ಲದರ ದರ ಏರಿಸಿ ಜನರ ಸುಲಿಗೆ ಮಾಡಿದೆ‌ ಎಂದು ‌ಸುಧಾಕರ್ ಆರೋಪಿಸಿದರು.

ದಲಿತರ ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣವನ್ನು ಗ್ಯಾರಂಟಿಗೆ ಬಳಸಲಾಗಿದೆ. ಪ್ರಸಕ್ತ ಸಾಲಿನ 2025-26 ನೇ ಬಜೆಟ್ ನಲ್ಲಿ ಎಸ್ ಸಿ ಎಸ್ ಪಿ/ಟಿ ಎಸ್ ಪಿ ಅಡಿ 42,017.51 ಕೋಟಿ ರೂ. ಅನುದಾನದಲ್ಲಿ 11,896.84 ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತಾಡುವ ಕಾಂಗ್ರೆಸ್‌ ನಾಯಕರು, ದಲಿತರ ನಿಗಮಗಳಿಗೆ ಅನುದಾನ ಕಡಿತ ಮಾಡಿದ್ದಾರೆ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅನುದಾನದಲ್ಲಿ 90 ಕೋಟಿ ರೂ. ಅನುದಾನ ಕಡಿತ, ವಿಶ್ವಕರ್ಮ ನಿಗಮಕ್ಕೆ 12 ಕೋಟಿ ರೂ. ಅನುದಾನ ಕಡಿತ, ಉಪ್ಪಾರ ನಿಗಮಕ್ಕೆ 7 ಕೋಟಿ ರೂ. ಅನುದಾನ ಕಡಿತ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ತೆರಿಗೆ ಇಳಿಕೆ ಮಾಡಿರುವುದರಿಂದ ರಾಜ್ಯಕ್ಕೆ ನಷ್ಟವಾಗಿದೆ ಎಂದು ಈಗ ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದಾರೆ. ಜಿಎಸ್‌ಟಿ ಕೌನ್ಸಿಲ್‌ನಲ್ಲಿರುವ 33 ಸದಸ್ಯರು ಕೂಡ ಇದಕ್ಕೆ ಒಪ್ಪಬೇಕಾಗುತ್ತದೆ. ರಾಜ್ಯ ಸರ್ಕಾರದ ಪರವಾಗಿ ಸಚಿವ ಕೃಷ್ಣ ಭೈರೇಗೌಡರು ಇದಕ್ಕೆ ಸಹಿ ಹಾಕಿದ್ದಾರೆ. ಸರಿ ಇಲ್ಲ ಎಂದಮೇಲೆ ಸಹಿ ಹಾಕಿದ್ದು ಏಕೆ? ಈ ಸುಧಾರಣೆ ಬಗ್ಗೆ ಒಂದು ವರ್ಷದಿಂದಲೇ ಸಿದ್ಧತೆ ನಡೆದಿದೆ. ಕೇಂದ್ರ ಸರ್ಕಾರಕ್ಕೆ ಆದಾಯ ಕಡಿಮೆಯಾದರೂ ಜನರ ಹಿತದೃಷ್ಟಿಯಿಂದ ಈ ಕ್ರಮ ತರಲಾಗಿದೆ. ಈಗ ಹಣದುಬ್ಬರ 2.7% ಹಾಗೂ ಆರ್ಥಿಕ ಬೆಳವಣಿಗೆ ದರ 7.9% ಇದೆ. ಹೀಗೆ ಪ್ರಧಾನಿ ನರೇಂದ್ರ ಮೋದಿ ಜನರಿಗೆ ಆರ್ಥಿಕ ಚೈತನ್ಯ ನೀಡಿದ್ದಾರೆ ಎಂದು ಸುಧಾಕರ್ ವಿವರಣೆ ನೀಡಿದರು.

ಪ್ರಧಾನಿ ಜಿಎಸ್‌ಟಿ ಸರಳೀಕರಣ ಮಾಡಿ ಜನರಿಗೆ ಕೊಡುಗೆ ನೀಡಿದ್ದಾರೆ:ಸುಧಾಕರ್ Read More

ಮಣಿಪುರಕ್ಕೆ ಮೊದಲ ಬಾರಿಗೆ ಭೇಟಿ ನೀಡಿದಮೋದಿ:ಶಾಂತಿ ಕಾಪಾಡುವಂತೆ ಮನವಿ

ಇಂಫಾಲ: 2023ರ ಜನಾಂಗೀಯ ಹಿಂಸಾಚಾರದ ನಂತರ ಮೊದಲ ಬಾರಿಗೆ ಮಣಿಪುರಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ಈ ವೇಳೆ ಮಾತನಾಡಿದ ಮೋದಿ,
ಮಣಿಪುರದ ಜನರು ತಮ್ಮ ಮಕ್ಕಳ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಶಾಂತಿಯನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.

ನಾನು ಮತ್ತು ಭಾರತ ಸರ್ಕಾರ ರಾಜ್ಯದ ಜನರೊಂದಿಗೆ ನಿಲ್ಲುತ್ತೇವೆ ಎಂದು ಹೇಳಿದರು. ಮಣಿಪುರದಲ್ಲಿ ಶಾಂತಿ ಮತ್ತು ಏಕತೆಗಾಗಿ ಮನವಿ ಮಾಡಿದರಲ್ಲದೆ,ಸ್ಥಿರತೆ, ನ್ಯಾಯ ಮತ್ತು ಸತ್ಯವಿಲ್ಲದೆ ಅಭಿವೃದ್ಧಿ ನಡೆಯಲು ಸಾಧ್ಯವಿಲ್ಲ ಎಂದು ಒತ್ತಿ ಹೇಳಿದರು.

ಮಣಿಪುರ ಭಾರತದ ಪ್ರಗತಿಯ ಪ್ರಮುಖ ಸ್ತಂಭವಾಗಿದೆ. ಮಣಿಪುರದ ಭೂಮಿ ಧೈರ್ಯ ಮತ್ತು ದೃಢಸಂಕಲ್ಪದ ಭೂಮಿ. ಈ ಬೆಟ್ಟಗಳು ಪ್ರಕೃತಿಯ ಅಮೂಲ್ಯ ಕೊಡುಗೆಯಾಗಿದೆ ಮತ್ತು ಅದೇ ಸಮಯದಲ್ಲಿ, ಅವು ನಿಮ್ಮ ನಿರಂತರ ಕಠಿಣ ಪರಿಶ್ರಮವನ್ನು ಸಂಕೇತಿಸುತ್ತವೆ. ಮಣಿಪುರದ ಜನರ ಚೈತನ್ಯಕ್ಕೆ ನಾನು ವಂದಿಸುತ್ತೇನೆ ಎಂದು ನುಡಿದರು.

ಕೇಂದ್ರ ಸರ್ಕಾರವು ಮಣಿಪುರದ ಜನರೊಂದಿಗೆ ದೃಢವಾಗಿ ನಿಲ್ಲುತ್ತದೆ ಎಂದು ಮೋದಿ ಭರವಸೆ ನೀಡಿದರು. ಎಲ್ಲಾ ಸಂಸ್ಥೆಗಳು ಶಾಂತಿಯುತವಾಗಿ ಒಟ್ಟಾಗಿ ಮುಂದುವರಿಯಿರಿ, ನಿಮ್ಮ ಕನಸುಗಳನ್ನು ನನಸಾಗಿಸಿ ಮತ್ತು ನಿಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಿ ಎಂದು ತಿಳಿಸಿದರು.

ಮಣಿಪುರ ಒಂದು ಕಾಲದಲ್ಲಿ ಭರವಸೆ ಮತ್ತು ಕನಸುಗಳನ್ನು ಹೊಂದಿತ್ತು, ಆದರೆ ಹಿಂಸಾಚಾರದ ಹಿಡಿತದಲ್ಲಿ ಸಿಲುಕಿತ್ತು. ಎಲ್ಲಿಯಾದರೂ ಅಭಿವೃದ್ಧಿ ನಡೆಯಬೇಕಾದರೆ, ಸತ್ಯ ಮತ್ತು ನ್ಯಾಯದ ಜೊತೆಗೆ ಶಾಂತಿ ಕೂಡಾ ಅತ್ಯಗತ್ಯ ದೃಢವಾಗಿ ಎಂದು ಪ್ರಧಾನಿ ಹೇಳಿದರು.

ಮಣಿಪುರದಲ್ಲಿ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಮಹತ್ವದ ಕ್ರಮವಾಗಿ, ಪ್ರಧಾನಿ ನರೇಂದ್ರ ಮೋದಿ ಚುರಾಚಂದ್‌ಪುರದಲ್ಲಿ 7,300 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಅಡಿಪಾಯ ಹಾಕಿದರು.

ಪ್ರಮುಖ ಉಪಕ್ರಮಗಳಲ್ಲಿ 3,600 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಮಣಿಪುರದ ರಸ್ತೆಗಳು, ಒಳಚರಂಡಿ ಮತ್ತು ಆಸ್ತಿ ನಿರ್ವಹಣಾ ಸುಧಾರಣಾ ಯೋಜನೆ, 2,500 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದ 5 ರಾಷ್ಟ್ರೀಯ ಹೆದ್ದಾರಿ ಯೋಜನೆಗಳು, ಮಣಿಪುರ ಇನ್ಫೋಟೆಕ್ ಅಭಿವೃದ್ಧಿ ಯೋಜನೆ ಮತ್ತು 9 ಸ್ಥಳಗಳಲ್ಲಿ ಹರಡಿರುವ ಕೆಲಸ ಮಾಡುವ ಮಹಿಳಾ ಹಾಸ್ಟೆಲ್‌ಗಳು ಸೇರಿವೆ.

ಮಣಿಪುರದಲ್ಲಿ ಜೀವನವನ್ನು ಮತ್ತೆ ಹಳಿಗೆ ತರಲು, ನಿರಾಶ್ರಿತ ಕುಟುಂಬಗಳಿಗೆ 7,000 ಹೊಸ ಮನೆಗಳನ್ನು ನಿರ್ಮಿಸಲು ಸಹಾಯ ಮಾಡುವುದು ಸೇರಿದಂತೆ ಭಾರತ ಸರ್ಕಾರ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ಸುಮಾರು 3,000 ಕೋಟಿ ರೂ. ವಿಶೇಷ ಪ್ಯಾಕೇಜ್ ಅನ್ನು ಅನುಮೋದಿಸಲಾಗಿದೆ. ಸಂತ್ರಸ್ತರಿಗೆ ಸಹಾಯ ಮಾಡಲು ಮತ್ತು ಮಣಿಪುರದ ಬುಡಕಟ್ಟು ಯುವಕರನ್ನು ಬೆಂಬಲಿಸಲು ಕ್ರಮಗಳು ನಡೆಯುತ್ತಿವೆ ಎಂದು ಪ್ರಧಾನಿ ಭರವಸೆ ನೀಡಿದರು.

ಮಣಿಪುರಕ್ಕೆ ಮೊದಲ ಬಾರಿಗೆ ಭೇಟಿ ನೀಡಿದಮೋದಿ:ಶಾಂತಿ ಕಾಪಾಡುವಂತೆ ಮನವಿ Read More

ಭಾಷಣದಲ್ಲಿ ಚಕಾರ ಎತ್ತದ‌ಪ್ರಧಾ‌ನಿ: ಪಿಎಫ್ ನಿವೃತ್ತ ಹಿರಿಯ ನಾಗರಿಕರ ಅಳಲು

ಮೈಸೂರು: ಪ್ರಧಾನಿ ಮೋದಿ ಯವರು 79 ನೆ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪಿಎಫ್ ನಿವೃತ್ತ ಹಿರಿಯ ನಾಗರಿಕರ ಬಗ್ಗೆ ಪ್ರಸ್ತಾಪ ಮಾಡಲಿಲ್ಲ ಎಂದು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ ಮೈಸೂರು ಪದಾಧಿಕಾರಿಗಳು ಬೇಸರ ಪಟ್ಟಿದ್ದಾರೆ.

ಕಾರ್ಖಾನೆ, ಇತರೆ ಕಂಪನಿಗಳಲ್ಲಿ ಸಹಕಾರ ಬ್ಯಾಂಕ್ ಗಳಲ್ಲಿ 30-40 ವರ್ಷಗಳ ಕಾಲ ಸೇವೆ ಮಾಡಿದ್ದೇವೆ,ನಮಗೆ ಬರುವ ಪಿಂಚಣಿ ಕೇವಲ 500 ರಿಂದ 2500ರೂ ಮಾತ್ರ ಅಷ್ಟರಲ್ಲಿ ಜೀವನ ಮಾಡಬೇಕಿದೆ ಎಂದು ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸ್ವಾಮಿ ಶೆಟ್ಟಿ ಮತ್ತು ಪ್ರಧಾನ ಕಾರ್ಯದರ್ಶಿ ಆರ್ ಜಿ ಮೋಹನ್ ಕ್ರಿಷ್ಣ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಧಾನ ಮಂತ್ರಿಯವರು ಆ.15 ರಂದು 79 ನೆಯ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ, ಸುದೀರ್ಘ 103 ನಿಮಿಷಗಳ ಕಾಲದ ಸುದೀರ್ಘ ಭಾಷಣದಲ್ಲಿ ಪಿಎಫ್ ನಿವೃತ್ತ ಹಿರಿಯ ನಾಗರಿಕರ ಬಗ್ಗೆ ಪ್ರಸ್ತಾಪವನ್ನೇ ಮಾಡಿರುವುದಿಲ್ಲ.ನಾವು ಸಲ್ಲಿಸಿರುವ ಲಕ್ಷಾಂತರ ಮನವಿಗಳಿಗೆ ಪ್ರಧಾನ ಮಂತ್ರಿಯವರು ಓಗೊಡದಿರುವುದು ವಿಪರ್ಯಾಸ ಎಂದು ತಿಳಿಸಿದ್ದಾರೆ.

ಪ್ರಧಾನ ಮಂತ್ರಿಯವರಿಗೂ 75 ವರ್ಷವಾಗಿದೆ.ವಯೋವ್ರೃಧ್ಧರ ಬವಣೆಗಳ ಬಗ್ಗೆ ಅವರಿಗೂ ಗೊತ್ತಿದೆ. ಆದರೆ ಏಕೆ ವಯೋವೃದ್ಧರ ಬಗ್ಗೆ ಅನುಕಂಪ ತೋರಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಶ್ರಮ ಇಲಾಖೆ, ಪಿಎಫ್ ನವರು ಪ್ರಧಾನ ಮಂತ್ರಿಯವರನ್ನು ದಿಕ್ಕು ತಪ್ಪಿಸುತ್ತಿದ್ದಾರೆ.
ಹಿರಿಯ ನಾಗರಿಕರ ಠೇವಣಿ ಬಡ್ಡಿದರಗಳನ್ನು ಏರಿಸುತ್ತಿಲ್ಲ, ಇತ್ತಾ ರೇಲ್ವೆ ರಿಯಾಯಿತಿ ದರವನ್ನು ಹಿಂತೆಗೆದುಕೊಳ್ಳಲಾಗಿದೆ ರಿಯಾಯಿತಿ ಆರೋಗ್ಯ ವಿಮಾ ಯೋಜನೆಯಲ್ಲಿ ಸಡಿಲಿಕೆ ಯಾಗಿದೆ,
ಬಿಪಿಎಲ್ ಪಡಿತರ ಯೋಜನೆಗೆ ಅಳವಡಿಸುವಿಕೆ, ಪಿಎಫ್ ರವರಿಂದ ಆಗುತ್ತಿರುವ ನಿರಂತರ ಮಾನಸಿಕ ಕಿರುಕುಳ, ನ್ಯಾಯಾಲಯದ ತೀರ್ಪ ನ್ನೇ ತಿರುಚಿತ್ತಿರುವ ಬಗ್ಗೆ, Exempted, unexempted ಎಂದು ಮಾಡಿ ತಾರತಮ್ಯ ಮಾಡಲಾಗಿದೆ ಎಂದು ಸಂಘದವರು ಬೇಸರ ತೋಡಿಕೊಂಡಿದ್ದಾರೆ.

ಪ್ರಿ ಸೆಪ್ಟೆಂಬರ್,ಆಫ್ಟರ್ ಸೆಪ್ಟೆಂಬರ್ ಎಂದು ಸ್ರೃಷ್ಟಿಸಿ ನಿವೃತ್ತ ನೌಕರರಲ್ಲಿ ಅಸಮಾಧಾನ ನಿರ್ಮಾಣ ಮಾಡಲಾಗುತ್ತಿದೆ, ಪಿಎಫ್ ನಲ್ಲಿ ಸಾಕಷ್ಟು ಹಣವಿದ್ದರೂ,ಹಣ ವಿಲ್ಲವೆಂದು ತಪ್ಪು ಮಾಹಿತಿ ನೀಡಲಾಗುತ್ತಿದೆ,ಕನಿಷ್ಟ ಪಿಂಚಣಿ ಹೆಚ್ಚುವರಿ 7000 ದಿಂದ 9000 ರೂ ಕೊಡುವುದರ ಜೊತೆಗೆ ಡಿಎ ಮಾಡುವಂತೆ ಮನವಿ ಮಾಡಿದ್ದೇವೆ ಎಂದು ಸ್ವಾಮಿ ಶೆಟ್ಟಿ ಮತ್ತು ಆರ್ ಜಿ ಮೋಹನ್ ಕ್ರಿಷ್ಣ ತಿಳಿಸಿದ್ದಾರೆ.

ಹಲವಾರು ವಿಷಯಗಳ ಬಗ್ಗೆ ಪ್ರಧಾನ ಮಂತ್ರಿಗಳಿಗೆ ಅನೇಕ ಸಂಘಟನೆಗಳು ಅಲ್ಲದೇ ಲಕ್ಷಾಂತರ ಮಂದಿ ಅಹವಾಲು ಸಲ್ಲಿಸಿದ್ದರೂ ಸಹ ಏನೂ ಪ್ರಯೋಜನವಾಗಲಿಲ್ಲ.ನಮಗೆ ದೈನಂದಿನ ಜೀವನ ನಡೆಸಲು ಕಷ್ಟವಾಗಿದೆ.
ವಯೋಸಹಜ ಕಾಯಿಲೆಯಿಂದ ಔಷದಿ ಮಾತ್ರೆಗೆ ಹಣವಿಲ್ಲದೆ ಲಕ್ಷಾಂತರ ಮಂದಿ ಅಸುನೀಗುತ್ತಿದ್ದಾರೆ.ನೀಡಿದ ಲಕ್ಷಾಂತರ ಮನವಿಗಳು ಪ್ರಧಾನ ಮಂತ್ರಿಯವರ ಗಮನಕ್ಕೆ ಬರಲಿಲ್ಲವೇ,ಆ ಮನವಿಗಳು ಎಲ್ಲಿಗೆ ಹೋದವು ಎಂದು ಅವರು ಪ್ರಶ್ನಿಸಿದ್ದಾರೆ.

ಈ ಇಳಿವಯಸ್ಸಿನಲ್ಲಿ, ಪಿಂಚಣಿಗಾಗಿ ಹೋರಾಟ ಮುಂದುವರಿಸಬೇಕೇ, ನಮಗೆ ಈಗ ಉಳಿದಿರುವುದು ದಯಾಮರಣ
ಕೋರುವುದಷ್ಟೇ ಎಂದು ಸ್ವಾಮಿ ಶೆಟ್ಟಿ ಮತ್ತು ಆರ್ ಜಿ ಮೋಹನ್ ಕ್ರಿಷ್ಣ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘ ಮೈಸೂರು, ಕರ್ನಾಟಕ ರಾಜ್ಯದ ಪರವಾಗಿ ಪ್ರಕಟಣೆಯಲ್ಲಿ ಅಳಲು ತೋಡಿಕೊಂಡಿದ್ದಾರೆ.

ಭಾಷಣದಲ್ಲಿ ಚಕಾರ ಎತ್ತದ‌ಪ್ರಧಾ‌ನಿ: ಪಿಎಫ್ ನಿವೃತ್ತ ಹಿರಿಯ ನಾಗರಿಕರ ಅಳಲು Read More

ಗಾಂಧಿನಗರದಲ್ಲಿ ಮೋದಿ ಮೆಗಾ ರೋಡ್ ಶೋ

ಗುಜರಾತ್​ : ಪ್ರಧಾನಿ ನರೇಂದ್ರ ಮೋದಿ ಅವರ ಗುಜರಾತ್ ಪ್ರವಾಸದ ಎರಡನೇ ದಿನ ಗಾಂಧಿನಗರದಲ್ಲಿ ಮೆಗಾ ರೋಡ್ ಶೋ ನಡೆಸಿದರು.

ರಸ್ತೆಯ ಎರಡೂ ಬದಿ ಕಿಕ್ಕಿರಿದು ನಿಂತಿದ್ದ ಸಾವಿರಾರು ಜನರು ಮೋದಿ ಅವರಿಗೆ ಜಯಕಾರ ಹಾಕುತ್ತಾ ಪುಷ್ಪವೃಷ್ಟಿ ಸುರಿಸಿದರು.

ರೋಡ್​ ಶೋ ನಡೆದ ಹಾದಿ ಉದ್ದಕ್ಕೂ ತ್ರಿವರ್ಣ ಧ್ವಜಗಳನ್ನು ಹಿಡಿದು ಜನರು ಭಾರತೀಯ ಸೇನೆಗೆ ಗೌರವ ಸಲ್ಲಿಸಿದರು.

ನಂತರ ನಡೆದ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ 1947 ರಲ್ಲಿ ಕಾಶ್ಮೀರಕ್ಕೆ ನುಗ್ಗಿದ್ದ ಮುಜಾಹಿದ್ದೀನ್​​ಗಳನ್ನು ಮಟ್ಟ ಹಾಕಿದ್ದರೆ ಈಗ ನಾವು ಇಂತಹ ದುಃಸ್ಥಿತಿಯನ್ನು ಎದುರಿಸುತ್ತಿರಲಿಲ್ಲ ಎಂದು ಹೇಳಿದರು.

1947 ರಲ್ಲಿ ಸರ್ದಾರ್​ ವಲ್ಲಭಬಾಯಿ ಪಟೇಲ್​ ಅವರು ಪಾಕ್​ ಆಕ್ರಮಿತ ಕಾಶ್ಮೀರವನ್ನು ಮರಳಿ ಪಡೆಯಲು ಬಯಸಿದ್ದರು. ಪಿಒಕೆ ಮರಳಿ ಮರು ವಶವಾಗುವವರೆಗೂ ಸೇನಾ ಕಾರ್ಯಾಚರಣೆ ನಿಲ್ಲಿಸಬಾರದು ಅವರು ನಿರ್ಧರಿಸಿದ್ದರು ಎಂದು ಹೇಳಿದರು

75 ವರ್ಷಗಳಿಂದ ನಾವು ಒಂದಲ್ಲಾ ಒಂದು ತೊಂದರೆಯನ್ನು ಅನುಭವಿಸುತ್ತಲೇ ಇದ್ದೇವೆ. ಪಹಲ್ಗಾಮ್​ನಲ್ಲಿ ನಡೆದಿದ್ದು, ಆ ದಾಳಿಯ ವಿಕೃತ ರೂಪವಷ್ಟೇ. ಪ್ರತಿ ಸಲವೂ ಪಾಕಿಸ್ತಾನದ ಸೇನೆಯ ವಿಫಲ ಯತ್ನವನ್ನು ನಮ್ಮ ಯೋಧರು ಹಿಮ್ಮೆಟ್ಟಿಸಿದ್ದಾರೆ. ಭಾರತವನ್ನು ಸೋಲಿಸಲು ಸಾಧ್ಯವೇ ಇಲ್ಲ ಎಂಬುದು ಈಗ ಆ ದೇಶಕ್ಕೆ ಮನವರಿಕೆಯಾಗಿದೆ ಎಂದು ಪ್ರಧಾನಿ ಟಾಂಗ್ ನೀಡಿದರು ‌

ನಾವು ಈಗ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿ, ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದ್ದೇವೆ. ನಮ್ಮ ಭಾಗದ ಅಣೆಕಟ್ಟುಗಳ ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಾರಂಭಿಸಿದ್ದೇವೆ. ಇದು ಆ ದೇಶಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಗಾಂಧಿನಗರದಲ್ಲಿ ಮೋದಿ ಮೆಗಾ ರೋಡ್ ಶೋ Read More

ಸುನೀತಾ ವಿಲಿಯಮ್ಸ್ ಗೆ ಶುಭ ಕೋರಿದ ಮೋದಿ

ನವದೆಹಲಿ: ಒಂಬತ್ತು ತಿಂಗಳ ನಂತರ ಸುರಕ್ಷಿತವಾಗಿ ಭೂಮಿಗೆ ಮರಳಿದ ಗಗನಯಾನಿ ಸುನೀತಾ ವಿಲಿಯಮ್ಸ್
ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.

ಸುನೀತಾ ವಿಲಿಯಮ್ಸ್ ಭೂಮಿಗೆ ಮರಳುತ್ತಿದ್ದಂತೆ‌ ಮೋದಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಶುಭ ಕೋರಿದ್ದಾರೆ,ಅಲ್ಲದೆ ಭಾರತ ಭೇಟಿಗೆ ಸುನೀತಾಗೆ ಆಹ್ವಾನ ಕೂಡಾ ನೀಡಿದ್ದಾರೆ.

ಗಗನಯಾನಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಬಂದಿಳಿದಿದ್ದಾರೆ.ವಿಷಯ ತಿಳಿದ ತಕ್ಷಣ ಮೋದಿ ಎಕ್ಸ್​ ನಲ್ಲಿ ಪೋಸ್ಟ್ ಮಾಡಿದ್ದು, ಸ್ವಾಗತ, ಭೂಮಿ ನಿಮ್ಮನ್ನು ಮಿಸ್ ಮಾಡಿಕೊಂಡಿತ್ತು. ಸುನೀತಾ ವಿಲಿಯಮ್ಸ್ ಮತ್ತು ಗಗನಯಾತ್ರಿಗಳು ಮತ್ತೊಮ್ಮೆ ಪರಿಶ್ರಮ ಎಂದರೆ ಏನು ಎಂದು ನಮಗೆ ತೋರಿಸಿದ್ದಾರೆ ಎಂದು ಬರೆದಿದ್ದಾರೆ.

ಅವರ ಅಚಲ ದೃಢಸಂಕಲ್ಪವು ಲಕ್ಷಾಂತರ ಜನರಿಗೆ ಶಾಶ್ವತವಾಗಿ ಸ್ಫೂರ್ತಿ ನೀಡುತ್ತದೆ ಎಂದು ಮೋದಿ ಹೇಳಿದ್ದಾರೆ.

ಮಾರ್ಗದರ್ಶಕ ಮತ್ತು ಐಕಾನ್ ಆಗಿರುವ ಸುನೀತಾ ವಿಲಿಯಮ್ಸ್ ತಮ್ಮ ವೃತ್ತಿಜೀವನದುದ್ದಕ್ಕೂ ಈ ಮನೋಭಾವವನ್ನು ಪ್ರದರ್ಶಿಸಿದ್ದಾರೆ. ಅವರ ಸುರಕ್ಷಿತ ಮರಳುವಿಕೆಯನ್ನು ಖಚಿತಪಡಿಸಿಕೊಳ್ಳಲು ದಣಿವರಿಯದೆ ಕೆಲಸ ಮಾಡಿದ ಎಲ್ಲರ ಬಗ್ಗೆ ನಮಗೆ ಬಹಳ ಹೆಮ್ಮೆಯಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಸುನೀತಾ ವಿಲಿಯಮ್ಸ್ ಗೆ ಶುಭ ಕೋರಿದ ಮೋದಿ Read More

ಕುಂಭಮೇಳದಲ್ಲಿ ಪ್ರಧಾನಿ ಮೋದಿ; ಚುನಾವಣಾ ಗಿಮಿಕ್:ರವಿ ಮಂಚೇಗೌಡನ ಕೊಪ್ಲು

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಕುಂಭಮೇಳದಲ್ಲಿ ಸ್ನಾನ ಮಾಡಿದ್ದು‌ ಚುನಾವಣಾ ಗಿಮಿಕ್ ಎಂದು ಚಾಮರಾಜ ಕ್ಷೇತ್ರ ಇಂದಿರಾ ಗಾಂಧಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರವಿ ಮಂಚೇಗೌಡನ ಕೊಪ್ಲು ಟೀಕಿಸಿದ್ದಾರೆ.

ದೇವರು- ಧರ್ಮದ ಹೆಸರಿನಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ,
ಇದಕ್ಕೆ ಮೋದಿ ಅವರು ಹೊರತಲ್ಲ ದೆಹಲಿ
ಚುನಾವಣೆ ಗಾಗಿ ಉತ್ತರಪ್ರದೇಶದ ಕುಂಭಮೇಳದಲ್ಲಿ ಮೋದಿ ಸ್ನಾನ ಮಾಡುತ್ತಿದ್ದಾರೆ ಚುನಾವಣಾ ಗಿಮಿಕ್ ಆಗಿದೆ ಎಂದು ಹೇಳಿದ್ದಾರೆ.

ದೇಶದ ಪ್ರಧಾನಿಗೆ ಕುಂಭಮೇಳಕ್ಕೆ ಹೋಗಲು ಸಮಯವಿದೆ. ಆದರೆ, ಮಣಿಪುರಕ್ಕೆ ಹೋಗಲು ಸಮಯವಿಲ್ಲ, ಮಣಿಪುರ ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಇಲ್ಲವೆ ಎಂದು ರವಿ ಅವರು ಪ್ರಶ್ನಿಸಿದ್ದಾರೆ.

ಈ ಹಿಂದೆ ರಾಜ್ಯ ವಿಧಾನಸಭಾ ಚುನಾವಣಾ ಸಮಯದಲ್ಲಿ ಮಾಂಗಲ್ಯದ ಬಗ್ಗೆ ಮಾತನಾಡಿದ್ದ ಮೋದಿ, ತಾಕತ್ತಿದ್ದರೆ ದೇವೇಗೌಡರ ಕುಟುಂಬದಿಂದ
ನೊಂದಿರುವ ಮಹಿಳೆಯರ ಪರ ಮಾತನಾಡಲಿ ಎಂದು ಸವಾಲು ಹಾಕಿದ್ದಾರೆ.

ನಿರುದ್ಯೋಗ, ಬೆಲೆ ಏರಿಕೆ, ಹಣದುಬ್ಬರ ಸಮಸ್ಯೆ, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ, ರೈತರ ಸರಣಿ ಆತ್ಮಹತ್ಯೆಗಳ ಬಗ್ಗೆ ದಿವ್ಯ ಮೌನ ವಹಿಸಿರುವ ಪ್ರಧಾನಿ ಮೋದಿ ಅವರು ಇನ್ನಾದರೂ ಮಾತನಾಡಲಿ ಎಂದು ರವಿ ಮಂಚನಗೌಡನ ಕೊಪ್ಲು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಕುಂಭಮೇಳದಲ್ಲಿ ಪ್ರಧಾನಿ ಮೋದಿ; ಚುನಾವಣಾ ಗಿಮಿಕ್:ರವಿ ಮಂಚೇಗೌಡನ ಕೊಪ್ಲು Read More

ಮಹಾಕುಂಭ ಮೇಳದಲ್ಲಿ ಕಾಲ್ತುಳಿತ: ಪ್ರಧಾನಿ ಮೋದಿ ತೀವ್ರ ಸಂತಾಪ

ನವದೆಹಲಿ: ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಕುಟುಂಬ ಸದಸ್ಯರನ್ನು ಕಳೆದುಕೊಂಡವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೀವ್ರ ಸಂತಾಪ ಸೂಚಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮೋದಿ, ಪ್ರಯಾಗ್ರಾಜ್ ಮಹಾಕುಂಭದಲ್ಲಿ ಸಂಭವಿಸಿದ ಕಾಲ್ತುಳಿತ ಅತ್ಯಂತ ನೋವು ತಂದಿದೆ. ದುರಂತದಲ್ಲಿ ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡ ಭಕ್ತರಿಗೆ ತೀವ್ರ ಸಂತಾಪಗಳನ್ನು ಸೂಚಿಸುತ್ತೇನೆ ಎಂದು ಹೇಳಿದ್ದಾರೆ.

ಎಲ್ಲಾ ಗಾಯಾಳುಗಳು ಶೀಘ್ರ ಗುಣಮುಖರಾಗಲಿ. ಸ್ಥಳೀಯ ಆಡಳಿತವು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವನ್ನು ಒದಗಿಸುತ್ತಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೂ ಮಾತನಾಡಿದ್ದೇನೆ, ರಾಜ್ಯ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ತಿಳಿಸಿದ್ದಾರೆ.

ಮಹಾಕುಂಭ ಮೇಳದಲ್ಲಿ ಕಾಲ್ತುಳಿತ: ಪ್ರಧಾನಿ ಮೋದಿ ತೀವ್ರ ಸಂತಾಪ Read More

ಬಾಂಗ್ಲಾ ಹಿಂದೂಗಳ ರಕ್ಷಣೆ ಮಾಡಿ ಮೋದಿಯವರಿಗೆ ರವಿ ಮಂಚೇಗೌಡನ ಕೊಪ್ಪಲು ಆಗ್ರಹ

ಮೈಸೂರು: ನೆರೆಯ ಬಾಂಗ್ಲಾದೇಶದಲ್ಲಿ ಅಲ್ಪ ಸಂಖ್ಯಾತ ಹಿಂದೂಗಳ ಮೇಲೆ ನಡೆದ ದೌರ್ಜನ್ಯ ಖಂಡನಾರ್ಹ ಎಂದು ಇಂದಿರಾಗಾಂಧಿ ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡನ ಕೊಪ್ಪಲು ಹೇಳಿದ್ದಾರೆ.

ಕೂಡಲೆ ಪ್ರಧಾನಿ ಮೋದಿಯವರು ಮಧ್ಯಪ್ರವೇಶಿಸಿ ಬಾಂಗ್ಲಾ ಸರ್ಕಾರ ದೊಂದಿಗೆ
ಮಾತುಕತೆ ನಡೆಸಿ,ಹಿಂದೂಗಳು ಹಾಗೂ ಇತರೆ ಅಲ್ಪ ಸಂಖ್ಯಾತರ ರಕ್ಷಣೆ ಮಾಡಬೇಕೆಂದು ರವಿ ಆಗ್ರಹಿಸಿದ್ದಾರೆ.

1971ರಲ್ಲಿ ನಡೆದ ಯುದ್ಧದಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿಯವರ ದಿಟ್ಟ ನಿರ್ಧಾರದಿಂದ ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಗೆದ್ದು ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕೆ ಕಾರಣವಾದರು.

ಅಲ್ಲದೇ, ಬಾಂಗ್ಲಾದೇಶ ಕೂಡಾ ಒಂದು ಜಾತ್ಯತೀತ ರಾಷ್ಟ್ರವಾಗಿ ಉದಯವಾಯಿತು. ಎಲ್ಲಾ ಧರ್ಮಿಯರನ್ನು ರಕ್ಷಣೆ ಮಾಡುವುದು ಅಲ್ಲಿನ ಆಡಳಿತದ ಆದ್ಯ ಕರ್ತವ್ಯ,ಆದರೆ ಅಲ್ಲಿನ ಸರ್ಕಾರ ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.

ಪ್ರಧಾನಿ ಮೋದಿಯವರು ಕೂಡಲೇ ಮಧ್ಯಪ್ರವೇಶಿಸಿ ನೆರೆ ರಾಷ್ಟ್ರದ ಪ್ರಧಾನಿ ಜೊತೆ ಮಾತುಕತೆ ನಡೆಸಿ, ಹಿಂದಿನ ಭಾರತದ ಸಹಾಯವನ್ನು ನೆನಪಿಸಿ ಕೊಟ್ಟು ಅಲ್ಲಿರುವ ಹಿಂದೂಗಳ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಬೇಕು, ಅವಶ್ಯಬಿದ್ದರೆ ಸೈನ್ಯದ ನೆರವನ್ನು ನೀಡಲು ಹಿಂಜರಿಯಬಾರದು ಎಂದು ರವಿ ಮಂಚೇಗೌಡನ ಕೊಪ್ಪಲು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಂಗ್ಲಾ ಹಿಂದೂಗಳ ರಕ್ಷಣೆ ಮಾಡಿ ಮೋದಿಯವರಿಗೆ ರವಿ ಮಂಚೇಗೌಡನ ಕೊಪ್ಪಲು ಆಗ್ರಹ Read More

ರಾಜ್ಯದ ನೀರಾವರಿ ವಿಚಾರ ಕುರಿತು ಚರ್ಚಿಸಲು ಪ್ರಧಾನಿ ಭೇಟಿ:ಡಿಕೆಶಿ

ನವದೆಹಲಿ: ರಾಜ್ಯದ ನೀರಾವರಿ ವಿಚಾರ ಸೇರಿದಂತೆ ಕೆಲವು ವಿಷಯಗಳ ಕುರಿತು ಚರ್ಚಿಸಲು ಪ್ರಧಾನ ಮಂತ್ರಿ ಮೋದಿಯವರನ್ನು ಭೇಟಿ ಮಾಡಲಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ,ವನ್ಯಜೀವಿ ಇಲಾಖೆ ಸಚಿವರು ಮತ್ತು ಮಂಡಳಿಯಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಈಗಾಗಲೇ ಭೇಟಿ ಮಾಡಿದ್ದೇವೆ. ವನ್ಯಜೀವಿ ಮಂಡಳಿಗೆ ಪ್ರಧಾನಿಯವರೇ ಅಧ್ಯಕ್ಷರಾಗಿದ್ದಾರೆ. ಸ್ಥಾಯಿ ಸಮಿತಿಗೆ ಸಚಿವರು ಅಧ್ಯಕ್ಷರಾಗಿದ್ದಾರೆ ಎಂದು ಹೇಳಿದರು.

ಕಳಸಾ ಬಂಡೂರಿ ನಾಲಾ ಯೋಜನೆ ವಿಚಾರದಲ್ಲಿ ಮಧ್ಯಪ್ರವೇಶಿಸಿ ಅಗತ್ಯವಿರುವ ಅರಣ್ಯ ಮತ್ತು ವನ್ಯಜೀವಿ ಮಂಡಳಿ ಅನುಮತಿ ಕೊಡಿಸಬೇಕು ಎಂದು ಮನವಿ ಮಾಡಿದ್ದೇನೆ ಎಂದು ಡಿಕೆಶಿ ತಿಳಿಸಿದರು.

ಹಾಸನ ಸಮಾವೇಶ ವಿರುದ್ಧ ಎಐಸಿಸಿ ನಾಯಕರಿಗೆ ಪತ್ರ ಹೋಗಿದೆಯಂತಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ,
ಪತ್ರ ಬಂದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ, ಆದರೆ ಮುಖ್ಯಮಂತ್ರಿಗಳು ನನಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. ಅದಕ್ಕಿಂತ ಹೆಚ್ಚು ನನಗೆ ಗೊತ್ತಿಲ್ಲ, ಪಕ್ಷದ ಉಪಸ್ಥಿತಿ ಇದ್ದೇ ಇರುತ್ತದೆ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.

ರಾಜ್ಯದ ನೀರಾವರಿ ವಿಚಾರ ಕುರಿತು ಚರ್ಚಿಸಲು ಪ್ರಧಾನಿ ಭೇಟಿ:ಡಿಕೆಶಿ Read More

ಜಾರ್ಖಂಡ್ ಮುಕ್ತಿ ಮೋರ್ಚಾ ನೇತೃತ್ವದ ಮೈತ್ರಿಕೂಟದ ವಿರುದ್ಧ ಮೋದಿ ವಾಗ್ದಾಳಿ

ಜಾರ್ಖಂಡ್: ಜಾರ್ಖಂಡ್ ಮುಕ್ತಿ ಮೋರ್ಚಾ ನೇತೃತ್ವದ ಮೈತ್ರಿಕೂಟದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದರು.

ಬಾಂಗ್ಲಾದೇಶಿ ನುಸುಳುಕೋರರನ್ನು ಬೆಂಬಲಿಸಿದ ಆರೋಪಕ್ಕಾಗಿ ಅವರು ಮೈತ್ರಿಯನ್ನು ಒಳನುಸುಳುಕೋರರ ಬಂಧ ಮತ್ತು ಮಾಫಿಯಾದ ಗುಲಾಮ ಎಂದು ಜರಿದರು.

ಜಾರ್ಖಂಡ್‌ನಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಪ್ರಧಾನಿ, ಜಾರ್ಖಂಡ್‌ನಲ್ಲಿ ತುಷ್ಟೀಕರಣದ ರಾಜಕೀಯ ಉತ್ತುಂಗಕ್ಕೇರಿದೆ. ಇದೆಲ್ಲ ಇನ್ನೂ ಮುಂದುವರಿದರೆ ರಾಜ್ಯದಲ್ಲಿ ಬುಡಕಟ್ಟು ಸಮಾಜದ ವ್ಯಾಪ್ತಿ ಕುಗ್ಗಲಿದೆ ಎಂದು ಹೇಳಿದರು.

ಜಾರ್ಖಂಡ್‌ನ ಗರ್ವಾದಲ್ಲಿ ಇಂದು ನಡೆದ ತಮ್ಮ ಮೊದಲ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಜಾರ್ಖಂಡ್‌ನಲ್ಲಿ ಸಮ್ಮಿಶ್ರ ನಾಯಕರು ನಡೆಸುತ್ತಿರುವ ಹಗರಣಗಳು ಈಗ ಉದ್ಯಮದ ರೂಪವನ್ನು ಪಡೆದಿವೆ. ಭ್ರಷ್ಟಾಚಾರವು ಗೆದ್ದಲು ಹುಳುಗಳಂತೆ ರಾಜ್ಯವನ್ನು ನುಂಗುತ್ತಿದೆ. ಈ ಮೂರು ರಾಜ್ಯಗಳು ಸಾಮಾಜಿಕ ಫ್ಯಾಬ್ರಿಕ್ ಅನ್ನು ಮುರಿಯುವ ಉದ್ದೇಶವನ್ನು ಹೊಂದಿವೆ ಎಂದು ವಾಗ್ದಾಳಿ ನಡೆಸಿದರು.

ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ), ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಬಾಂಗ್ಲಾದೇಶಿ ನುಸುಳುಕೋರರನ್ನು ಮತಬ್ಯಾಂಕ್ ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿವೆ ಇದು ಸಾಮಾಜಿಕ ರಚನೆಗೆ ಸಂಪೂರ್ಣ ಬೆದರಿಕೆಯಾಗಿದ್ದು, ರಾಜ್ಯದಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿದೆ ಎಂದು ಮೋದಿ ಆತಂಕ ವ್ಯಕ್ತಪಡಿಸಿದರು.

ಜಾರ್ಖಂಡ್ ಮುಕ್ತಿ ಮೋರ್ಚಾ ನೇತೃತ್ವದ ಮೈತ್ರಿಕೂಟದ ವಿರುದ್ಧ ಮೋದಿ ವಾಗ್ದಾಳಿ Read More