ಲಯನ್ಸ್ ಟ್ವಿನಿಂಗ್ ಕಾರ್ಯಕ್ರಮ

ಮೈಸೂರು: ಲಯನ್ಸ್ ಕ್ಲಬ್ ಅಫ್ ಮೈಸೂರು ಅಂಬಾಸಿಡರ್ಸ್ ಮತ್ತು ಲಯನ್ಸ್ ಕ್ಲಬ್ ಪಿರಿಯಾಪಟ್ಟಣ ವತಿಯಿಂದ ಲಯನ್ಸ್ ಟ್ವಿನಿಂಗ್ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಲಯನ್ಸ್ ಕ್ಲಬ್ ಆಫ್ ಮೈಸೂರು ಅಂಬಾಸಿಡರ್ಸ್ ಮತ್ತು ಲಯನ್ಸ್ ಕ್ಲಬ್ ಆಫ್ ಪಿರಿಯಾಪಟ್ಟಣ ಸಂಸ್ಥೆಗಳು ಟ್ವಿನಿಂಗ್ ಕಾರ್ಯಕ್ರಮದ ಅಂಗವಾಗಿ ವಿಶೇಷ ಸಭೆಯನ್ನು ನಡೆಸಿದವು.

ಕ್ಲಬ್‌ಗಳ ನಡುವಿನ ಸ್ನೇಹ, ಸೇವಾ ಸಹಕಾರ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬಲಪಡಿಸುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಭೆಯಲ್ಲಿ ಎರಡು ಕ್ಲಬ್‌ಗಳ ಸದಸ್ಯರು ಪರಸ್ಪರ ಅನುಭವ ಹಂಚಿಕೊಂಡು, ಮುಂದಿನ ಸೇವಾ ಯೋಜನೆಗಳ ಬಗ್ಗೆ ಚರ್ಚಿಸಿದರು.

ಈ ವೇಳೆ ಅಂಬಾಸಿಡರ್ ಸಂಸ್ಥೆಯ ಅಧ್ಯಕ್ಷರಾದ ಲಯನ್ ಡಾ.ಆರ್ ಡಿ ಕುಮಾರ್ ಅವರು ಮಾತನಾಡಿ ಸಮಾಜಮುಖಿ ಚಟುವಟಿಕೆಗಳ ಮೂಲಕ ಮಾನವೀಯ ಮೌಲ್ಯಗಳನ್ನು ವೃದ್ಧಿಸುವ ಅಗತ್ಯವಿದೆ ಎಂದು ಹೇಳಿದರು.

ಪಿರಿಯಾಪಟ್ಟಣ ಸಂಸ್ಥೆಯ ಅಧ್ಯಕ್ಷರಾದ ಲಯನ್ ಜೆ.ಗಿರೀಶ್ ಅವರು ಮಾತನಾಡಿ ಇಂತಹ ಕಾರ್ಯಕ್ರಮಗಳ ಆಯೋಜನೆ ಮಾಡಿದರೆ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡು ಹೊಸ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬಹುದು ಎಂದು ಸಲಹೆ ನೀಡಿದರು.

ಎರಡೂ ಸಂಸ್ಥೆಗಳವರು ಪರಸ್ಪರ ಬ್ಯಾನರ್ ಮತ್ತು ಲಯನ್ಸ ಟ್ವಿನಿಂಗ್ ಪ್ರಮಾಣ ಪತ್ರಗಳನ್ನು ಬದಲಾವಣೆಯನ್ನು ಮಾಡಿಕೊಂಡರು.

ಲಯನ್ಸ್ ಜಿಲ್ಲೆ 317 ಜಿ ಯ ಸಂಪುಟ ಕಾರ್ಯದರ್ಶಿ ಲಯನ್ ಟಿ.ಹೆಚ್ ವೆಂಕಟೇಶ್ ಅವರು ಮೈಸೂರಿನ ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಂಜನಾ ಎಂಬ ವಿದ್ಯಾರ್ಥಿಗೆ ವಾರ್ಷಿಕ ಶುಲ್ಕ 25000ಗಳನ್ನು ನೀಡಿದರು.



ಪ್ರಾಂತೀಯ ಅಧ್ಯಕ್ಷ ಲಯನ್ ಹೆಚ್.ಸಿ.ಕಾಂತರಾಜು, ಜಿಲ್ಲಾ ಅಧ್ಯಕ್ಷರುಗಳಾದ ಮಾಕಾಳ ಶಿವಕುಮಾರ್,ವಿ.ಶ್ರೀಧರ್ ಹಾಗೂ ಉಭಯ ಸಂಸ್ಥೆಗಳ ಕಾರ್ಯದರ್ಶಿಗಳಾದ ಕೆ.ಟಿ.ವಿಷ್ಣು ಮತ್ತು ವಿಜಯಕುಮಾರ್, ಖಜಾಂಚಿ ಡಾ. ಜಿ ಕಿಶೋರ್ ಮತ್ತು ಆನಂದ್ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನಿವೃತ್ತ ಸಬ್ ಇನ್ ಸ್ಪೆಕ್ಟರ್ ಎಂ.ಡಿ.ಅಪ್ಪಾಜಿ ಅವರನ್ನು ಅವರ ಸೇವಾ ಕಾರ್ಯಕ್ಷಮತೆಯ ಅಂಗವಾಗಿ ರಾಯಭಾರಿ ಆರಕ್ಷಕ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಲಯನ್ಸ್ ಟ್ವಿನಿಂಗ್ ಕಾರ್ಯಕ್ರಮ Read More

ಗ್ಯಾಸ್ ಗೀಸರ್ ಸೋರಿಕೆ:ಸಹೋದರಿಯರ ದುರ್ಮರಣ

ಮೈಸೂರು: ಸ್ನಾನದ ಮನೆಯಲ್ಲಿದ್ದ ಗ್ಯಾಸ್ ಗೀಸರ್ ಸೋರಿಕೆಯಾಗಿ ಉಸಿರುಗಟ್ಟಿ ಸಹೋದರಿಯರು ಮೃತಪಟ್ಟ ದಾರುಣ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಗ್ಯಾಸ್ ಗೀಸರ್‌ನಿಂದ ಕಾರ್ಬನ್ ಮಾನಾಕ್ಸೈಡ್ ಸೋರಿಕೆಯಾಗಿ ದುರಂತ ಸಂಭವಿಸಿದೆ.

ಪಿರಿಯಾಪಟ್ಟಣದ ಕಾವಾಡಗೇರಿಯಲ್ಲಿ ಈ ಘಟನೆ ನಡೆದಿದ್ದು,ಗುಲ್ಫರ್ಮ್ ತಾಜ್ (23), ಸಿಮ್ರಾನ್ ತಾಜ್ (20) ಮೃತಪಟ್ಟ ಸಹೋದರಿಯರು.

ಗುಲ್ಫಾರ್ಮ್, ಸಿಮ್ರಾನ್ ತಾಜ್ ಇಬ್ಬರೂ ಒಟ್ಟಿಗೆ ಸ್ನಾನದ ಕೋಣೆಗೆ ಹೋದಾಗ ಘಟನೆ ನಡೆದಿದೆ.ಸ್ನಾನದ ಕೋಣೆಗೆ ಹೋದವರು ಬಹಳ ಸಮಯವಾದರೂ ಹೊರಗೆ ಬಂದಿಲ್ಲ.

ಅನುಮಾನಗೊಂಡ ತಂದೆ ಅಲ್ತಾಫ್‌ ಬಾಗಿಲು ಬಡಿದಿದ್ದಾರೆ.ಆಗಲೂ ಬಾಗಿಲು ತೆಗೆದಿಲ್ಲ ತೆರೆದು ನೋಡಿದಾಗ ಮಕ್ಕಳಿಬ್ಬರು ಅರೆಪ್ರಜ್ಞಾವಸ್ಥೆಯಲ್ಲಿದ್ದುದು ಗೊತ್ತಾಗಿದೆ.

ತಕ್ಷಣ ಮಕ್ಕಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.ಆದರೆ ಇಬ್ಬರೂ ಸಹೋದರಿಯರು ಮೃತಪಟ್ಟಿದ್ದಾರೆ.

ಗ್ಯಾಸ್ ಗೀಸರ್ ಸೋರಿಕೆ:ಸಹೋದರಿಯರ ದುರ್ಮರಣ Read More

ರಸ್ತೆಯೊ‌ ಕೆಸರು ಗದ್ದೆಯೊ‌: ಕಂಠಾಪುರ ಗ್ರಾಮಕ್ಕೆ ಕಂಟಕವಾದ ಮಣ್ಣಿನ‌ರಸ್ತೆ!

ಪಿರಿಯಾಪಟ್ಟಣ: ಈ ಚಿತ್ರವನ್ನು ನೋಡಿ ಇದು ಗದ್ದೆ ಅನಿಸುತ್ತಿದೆಯೊ‌ ರಸ್ತೆ ಅನಿಸುತ್ತಿದೆಯೊ‌ ಓದುಗರೇ ನೀವೇ ಹೇಳಿ.

ಖಂಡಿತಾ ಇದು ಕೆಸರು ಗದ್ದೆಯಂತಹ ರಸ್ತೇನೆ,!. ಇಂತಹ ಕೆಟ್ಟ ರಸ್ತೆ ಇರುವುದು ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿನ ಪಿರಿಯಾಪಟ್ಟಣ ತಾಲೂಕು ಕಂಠಾಪುರ ಗ್ರಾಮದಲ್ಲಿ.

ಇಂತಹ ಕೆಸರು ಗದ್ದೆಯಂತಹ ರಸ್ತೆಗಳು ತಮ್ಮ ಕ್ಷೇತ್ರದಲ್ಲಿ ಇವೆ ಎಂಬುದೇ ಸ್ಥಳೀಯ ಶಾಸಕ ಹಾಗೂ ಸಚಿವರೂ ಆದ ಕೆ.ವೆಂಕಟೇಶ್ ಅವರಿಗೆ ಗೊತ್ತಿಲ್ಲವೇನೊ.

ಪಿರಿಯಾಪಟ್ಟಣ ತಾಲೂಕು, ಸಿದ್ದಾಪುರದ ಮುಖ್ಯ ‌ರಸ್ತೆಯಿಂದ ಕಂಠಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆ ನಿಜಕ್ಕೂ ಕೆಸರು ಗದ್ದೆಯಂತೆಯೇ ಇದೆ.

ಕಂಠಾಪುರ ಗ್ರಾಮದಲ್ಲಿ ಎಸ್ ಸಿ ಎಸ್ ಟಿ ಜನಾಂಗದವರು ಸೇರಿದಂತೆ ಹಲವು ಜಾತಿಯವರು ವಾಸ ಮಾಡುತ್ತಿದ್ದಾರೆ ಜೊತೆಗೆ ಸಮೀಪದಲ್ಲಿ ಪುಟ್ಟ ಶಾಲೆಯೂ ಇದೆ, ಆದರೆ ಈ ರಸ್ತೆಯಲ್ಲಿ ಗ್ರಾಮದ ಜನ ಅದು ಹೇಗೆ ಸಂಚರಿಸುತ್ತಾರೋ ಆ ಭಗವಂತನಿಗೆ ಪ್ರೀತಿ.

ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಶೂ ಮತ್ತು ‌ಸಾಕ್ಸ್ ಗಳನ್ನು ತೆಗೆದು ಕೈನಲ್ಲಿ ಹಿಡಿದುಕೊಂಡು ನಂತರ ರಸ್ತೆ ದಾಟಿಸಿ ಕೈ ಕಾಲು ತೊಳೆದು ಮತ್ತೆ ಶೂ ಹಾಕಿಸಿ ಪೊಷಕರು ಕರೆದುಕೊಂಡು ಹೋಗುತ್ತಾರೆ.ಅಂತಹ ಕೆಟ್ಟ ರಸ್ತೆ ಇದು.

ಈ ರಸ್ತೆಯಲ್ಲಿ ‌ನಡೆಯಲು ಸಾಧ್ಯವೇ ಇಲ್ಲ, ಗ್ರಾಮದ ಜನರು ಚಪ್ಪಲಿ ಕೈನಲ್ಲಿ ಹಿಡಿದು ಅತ್ಯಂತ‌ ಜಾಗರೂಕರಾಗಿ ಸಂಚರಿಸಬೇಕಿದೆ. ಸ್ವಲ್ಪ ಯಾಮಾರಿದರು ಜಾರಿ ಬಿದ್ದು ಕೈ ಕಾಲು ಮುರಿದುಕೊಳ್ಳುವುದು ಗ್ಯಾರಂಟಿ.

ದ್ವಿಚಕ್ರ ವಾಹನಗಳಂತೂ ರಸ್ತೆಯಲ್ಲಿ ಸ್ಕಿಡ್ ಆಗಿ ಬೀಳುತ್ತವೆ ಹಾಗಾಗಿ ವಾಹನಸವಾರರು ಇಲ್ಲಿ ಸಂಚರಿಸಲು ಭಯಪಡುತ್ತಾರೆ. ಅಷ್ಟೇ ಏಕೆ ಮೊನ್ನೆ ಲಾರಿಯ ಚಕ್ರ ಕೂಡ ಇದೇ ರಸ್ತೆಯಲ್ಲಿ ಹೂತುಕೊಂಡಿತ್ತು.ಮಧ್ಯಾಹ್ನ ತನಕ ಇದನ್ನು ತೆಗೆಯಲು ಸಾಧ್ಯವಾಗಿರಲಿಲ್ಲ ಅಂತ ಕೆಟ್ಟ ಪರಿಸ್ಥಿತಿ ಈ ರಸ್ತೆಯದು.

ಕಂಠಾಪುರ‌ ರಸ್ತೆ ರಿಪೇರಿ ಭಾಗ್ಯ ಕಂಡಿದ್ದೆ ಇಲ್ಲ. ಕಳೆದ 30 ವರ್ಷಗಳಿಂದ ಇದೇ ಪರಿಸ್ಥಿತಿ ಎಂದು ಗ್ರಾಮಸ್ಥರು ದೂರುತ್ತಾರೆ.

ಇಂದು ಪಿರಿಯಾಪಟ್ಟಣದಲ್ಲಿ ಕಾರ್ಯಕ್ರಮವೊಂದಕ್ಕೆ ಸ್ವತಃ ಸಚಿವ ಕೆ ವೆಂಕಟೇಶ್ ಅವರು ಆಗಮಿಸಿದ್ದರು. ಆ ಸಂದರ್ಭದಲ್ಲಿ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಮತ್ತಿತರರು ಗ್ರಾಮದ ರಸ್ತೆಯನ್ನು ತೋರಿಸಲು ಸಚಿವರಿಗೆ ಮನವಿ ಮಾಡಿದ್ದಾರೆ.ಆದರೆ‌ ಸಚಿವರು ತಮಗೆ ಬೇರೆ ಕೆಲಸವಿದೆ ಎಂದು ಹೇಳಿ ನುಣುಚಿಕೊಂಡಿದ್ದಾರೆ.

ತಮ್ಮದೇ ಕ್ಷೇತ್ರದ ರಸ್ತೆಗಳು‌ ಇಷ್ಟು ಹಾಳಾಗಿದ್ದರೂ ಸಚಿವರು ಏಕೆ ಗಮನ ಹರಿಸುತ್ತಿಲ್ಲವೊ ಇದು ಅವರ ಕರ್ತವ್ಯವಲ್ಲವೆ ಎಂದು ‌ಚಲುವರಾಜು ಪ್ರಶ್ನಿಸಿದ್ದಾರೆ.

ಕಂಠಾಪುರ ಗ್ರಾಮ ಪಿರಿಯಾಪಟ್ಟಣ ನಗರ ಸಭೆಗೆ ಸೇರುತ್ತದೆ ಕನಿಷ್ಠ ಈ ರಸ್ತೆಗೆ ಮಣ್ಣು ಜಲ್ಲಿ ತುಂಬಿ ಸಮತಟ್ಟು ಮಾಡಬಹುದು ಆದರೆ ನಗರಸಭೆಯವರು ಕೂಡ ಇತ್ತ ಗಮನ ಹರಿಸುತ್ತಿಲ್ಲ ಎಂದು ಗ್ರಾಮದ ಜನತೆಯ ಪರವಾಗಿ ಚಲುವರಾಜು ಆಕ್ರೊಶ‌ ವ್ಯಕ್ತ ಪಡಿಸಿದ್ದಾರೆ.

ಗ್ರಾಮದ ಜನರು ಜಮೀನು,ತೋಟ ಮತ್ತು ದಿನನಿತ್ಯದ ವಸ್ತುಗಳನ್ನು ಕೊಳ್ಳಲು ಪಟ್ಟಣಕ್ಕೆ ಬರುವುದಾದರೂ ಹೇಗೆ, ಈ ರಸ್ತೆಯಲ್ಲಿ ಸಂಚರಿಸಲಾಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಮತ್ತು ಇಲ್ಲಿನ ಶಾಸಕರೂ ಸಚಿವರೂ ಆದ ವೆಂಕಟೇಶ್ ಅವರು ರಸ್ತೆ ಸರಿಪಡಿಸಬೇಕು ಎಂದು ಕಂಠಾಪುರ ಗ್ರಾಮದ ಜನರ ಪರವಾಗಿ ಚಲುವರಾಜು ಆಗ್ರಹಿಸಿದ್ದಾರೆ.

ರಸ್ತೆಯೊ‌ ಕೆಸರು ಗದ್ದೆಯೊ‌: ಕಂಠಾಪುರ ಗ್ರಾಮಕ್ಕೆ ಕಂಟಕವಾದ ಮಣ್ಣಿನ‌ರಸ್ತೆ! Read More

ಬಡವರ ಪಾಲಿಗೆ ಪಿರಿಯಾಪಟ್ಟಣದ ಸರ್ಕಾರಿ ಆಸ್ಪತ್ರೆ ಇದ್ದರೂ ಇಲ್ಲದಂತೆ!

ಪಿರಿಯಾಪಟ್ಟಣ: ಪಿರಿಯಾಪಟ್ಟಣದ ಸರ್ಕಾರಿ ಆಸ್ಪತ್ರೆ ಸುಸಜ್ಜಿತವಾಗಿದ್ದು ಎಲ್ಲಾ ಸೌಲಭ್ಯಗಳನ್ನು ಉಳ್ಳ ಒಂದು ದೊಡ್ಡ ಆಸ್ಪತ್ರೆ. ಆದರೆ ಈ ಆಸ್ಪತ್ರೆ ಬಡ ರೋಗಿಗಳ ಪಾಲಿಗೆ ಇದ್ದೂ ಇಲ್ಲದಂತಾಗಿದೆ.

ಸರ್ಕಾರವೇನೊ ಬಡಜನರಿಗೆ ಉತ್ತಮ ಆರೋಗ್ಯ ಭಾಗ್ಯ ಸಿಗಲಿ ಎಂದು ಎಲ್ಲಾ ಪಟ್ಟಣಗಳಲ್ಲೂ ಉತ್ತಮವಾದ ಸರ್ಕಾರಿ ಆಸ್ಪತ್ರೆಗಳನ್ನು ನಿರ್ಮಿಸಿ ಕೊಟ್ಟಿದೆ,ಜತೆಗೆ ಉತ್ತಮ ಸಲಕರಣೆಗಳು, ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ.

ಆದರೆ ಈ‌ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗುತ್ತಿದೆ. ಈ ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ವೈದ್ಯರುಗಳು, ನರ್ಸ್ ಗಳು ಎಲ್ಲರೂ ಇದ್ದಾರೆ ಆದರೆ ಸಮಯಕ್ಕೆ ಸರಿಯಾಗಿ ಬರುವುದೂ ಇಲ್ಲ,ಒಂದೊಮ್ಮೆ ಬಂದರೂ ಅತ್ಯವಶ್ಯಕವಾದಾಗ ಇವರುಗಳು ಸಿಗುವುದೇ ಇಲ್ಲ.

ವೈದ್ಯರು ತಮ್ಮ ಇಷ್ಟ ಬಂದ ವೇಳೆಗೆ ಬರುತ್ತಾರೆ, ಒಮ್ಮೊಮ್ಮೆ 12,1 ಗಂಟೆ ಆದರೂ ಬರುವುದಿಲ್ಲ,ಇವರನ್ನು ಕೇಳುವವರು ಯಾರು ಇಲ್ಲ.ರೋಗಿಗಳು ಕ್ಯೂನಲ್ಲಿ ನಿಂತು ಕಾಯುತ್ತಿರುತ್ತಾರೆ ಅಷ್ಟೆ.ಇಲ್ಲಿ ವೈದ್ಯಾಧಿಕಾರಿಗಳು ಇದ್ದಾರೆಯೊ ಇಲ್ಲವೊ ಎಂಬ ಅನುಮಾನ ಕಾಡುತ್ತಿದೆ.

ಬಿಪಿಎಲ್ ಕಾರ್ಡ್ ಇದ್ದವರು ಅಂದರೆ ಕಡುಬಡವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನ್, ಎಕ್ಸರೇ ಮತ್ತಿತರ ಸೌಲಭ್ಯಗಳು ಸಂಪೂರ್ಣವಾಗಿ ಉಚಿತವಾಗಿ ಲಭ್ಯವಾಗಬೇಕು. ಆದರೆ ಇಲ್ಲಿ ಬಡವರನ್ನೂ ಬಿಡದೆ ಕಿತ್ತು ತಿನ್ನುತ್ತಾರೆ.ನೂರು,ಇನ್ನೂರು ರೂಪಾಯಿ ತೆಗೆದುಕೊಳ್ಳುತ್ತಾರೆ. ಹೀಗಾದರೆ ಕಡುಬಡವರು ಹಣ ಎಲ್ಲಿಂದ ತರಬೇಕು ದೇವರು ವರ ಕೊಟ್ಟರು ಪೂಜಾರಿ ಕೊಡುವುದಿಲ್ಲ ಎಂಬ ಗಾದೆಯಂತೆ ಈ ಆಸ್ಪತ್ರೆಯ ಕಥೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ‌ ಹುಣಸೂರು ತಾಲೂಕು ಅಧ್ಯಕ್ಷ‌ ಚಲುವರಾಜು‌ ಗಂಭೀರ ಆರೋಪ ಮಾಡಿದ್ದಾರೆ.

ನಾನೇ ಖುದ್ದಾಗಿ ನಮ್ಮ ಕಡೆಯ ರೋಗಿಯೊಬ್ಬರನ್ನು ಬಿಪಿಎಲ್ ಕಾರ್ಡ್ ತೋರಿಸಿಯೇ ಪಿರಿಯಾಪಟ್ಟಣದ ಈ‌ ಸರ್ಕಾರಿ ಆಸ್ಪತ್ರೆಗೆ ‌ಕರೆದುಕೊಂಡು ಹೋಗಿದ್ದೆ. ಅವರಿಗೆ ಔಷಧಿಯನ್ನು ಚೀಟಿಯಲ್ಲಿ ವೈದ್ಯರು ಬರೆದುಕೊಟ್ಟರು.ಆದರೆ ಆಸ್ಪತ್ರೆಯಲ್ಲಿ ಔಷಧಿ ವಿಭಾಗದವರು ಔಷಧಿ ಮುಗಿದಿದೆ,ಹೊರಗಡೆ ತೆಗೆದುಕೊಳ್ಳಿ ಎಂದು ಖಾಸಗಿ ಕ್ಲಿನಿಕ್ ಗಳಿಗೆ ಬರೆದುಕೊಡುತ್ತಾರೆ. ಜೊತೆಗೆ ಸ್ಕ್ಯಾನ್ ಮತ್ತಿತರ ಸೌಲಭ್ಯಗಳನ್ನು ಹೊರಗಡೆ ಮಾಡಿಸಿ ಎಂದು ಹೇಳಿದ್ದಾರೆ. ನಾನೇ ಖುದ್ದಾಗಿ ಇದನ್ನು ಅನುಭವಿಸಿದ್ದೇನೆ ಎಂದು ತಮ್ಮ ಬೇಸರವನ್ನು ವರ್ಷಿಣಿ ನ್ಯೂಸ್ ವೆಬ್‌ ಪೋರ್ಟಲ್ ನೊಂದಿಗೆ ಹಂಚಿಕೊಂಡಿದ್ದಾರೆ.

ಇನ್ನು ಈ ಆಸ್ಪತ್ರೆಯ ವಾಚ್ ಮ್ಯಾನ್ ಅಂತೂ ತಾನೇ ಸರ್ವಾಧಿಕಾರಿ ಅಂತೆ ಆಡುತ್ತಾರೆ. ಯಾರೇ ಬಂದರೂ ಧಮ್ಕಿ ಹಾಕುವುದು,ಡಾಕ್ಟರ್ ಇಲ್ಲ ಹೋಗಿ ನಾಳೆ ಬನ್ನಿ ಎಂದು ಹೇಳುವುದು ಮಾಡುತ್ತಾರೆ.ಇಲ್ಲಿನ ವೈದ್ಯರು ಕೂಡಾ ಎಲ್ಲ ರನ್ನು ಏಕವಚನದಲ್ಲಿ ಮಾತನಾಡಿಸುತ್ತಾರೆ ಹಿರಿಯ ನಾಗರಿಕರು ಬಂದಾಗ ಅವರಿಗೆ ಬೇಸರವಾಗುವುದಿಲ್ಲವೆ ಎಂದು ‌ಅವರು ಪ್ರಶ್ನಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಗಳು ಉತ್ತಮ ದರ್ಜೆಗೆ ಏರಬೇಕು ಕಟ್ಟ ಕಡೆಯ ವ್ಯಕ್ತಿಗೂ ಅತ್ಯುತ್ತಮ ಆರೋಗ್ಯ ಸೌಲಭ್ಯ ಸಿಗಬೇಕು ಎಂದು ಸರ್ಕಾರ ಏನೆಲ್ಲಾ ಸೌಲಭ್ಯಗಳನ್ನು ಕೊಟ್ಟರೂ ಇಂತಹ ಆಸ್ಪತ್ರೆಯ ವೈದ್ಯರು,ದಾದಿಯರು,ನೌಕರರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಇಲ್ಲಿ ಎಲ್ಲವೂ ಕಮಿಷನ್ ನಿಂದಲೇ ನಡೆಯುತ್ತಿದೆ ಎಂದು ಚೆಲುವರಾಜು ದೂರಿದ್ದಾರೆ.

ಪ್ರಿಯಾಪಟ್ಟಣದ ಶಾಸಕರು ಆದ ಸಚಿವ ಕೆ ವೆಂಕಟೇಶ್ ಅವರು ಕೂಡಲೇ ಈ ಆಸ್ಪತ್ರೆಯ ಬಗ್ಗೆ ಗಮನಹರಿಸಬೇಕು ಮತ್ತು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಗ್ರಾಮಾಂತರ ಪ್ರದೇಶಗಳ ಆಸ್ಪತ್ರೆ ಕಡೆಗೆ ಒಮ್ಮೆಯಾದರೂ ಭೇಟಿ ನೀಡಿ ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಬೇಕು, ಬಡವರನ್ನು ಸರಿಯಾಗಿ ನೋಡಿಕೊಳ್ಳಬೇಕು ಉತ್ತಮ ಔಷಧೋಪಚಾರಗಳನ್ನು ಉಚಿತವಾಗಿ ನೀಡಬೇಕೆಂದು ತಾಕೀತು ಮಾಡಲಿ ಎಂದು ಚೆಲುವರಾಜು ಒತ್ತಾಯಿಸಿದ್ದಾರೆ.

ಬಡವರ ಪಾಲಿಗೆ ಪಿರಿಯಾಪಟ್ಟಣದ ಸರ್ಕಾರಿ ಆಸ್ಪತ್ರೆ ಇದ್ದರೂ ಇಲ್ಲದಂತೆ! Read More

ಗ್ರಹಣ ಹಿಡಿದ ಬಿ.ಆರ್.ಅಂಬೇಡ್ಕರ್ ಭವನ:ಸಚಿವ ವೆಂಕಟೇಶ್‌ ಇತ್ತ ಗಮನಿಸಲಿ

ಪಿರಿಯಾಪಟ್ಟಣ: ಮೈಸೂರು ಜಿಲ್ಲೆ ಪಿರಿಯಾ ಪಟ್ಟಣದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಡಾ. ಬಿ.ಆರ್ ಅಂಬೇಡ್ಕರ್ ಭವನವನ್ನು ನಿರ್ಮಿಸಲಾಗಿದೆ.

ಆದರೆ ಈ ಭವನ ಇದುವರೆಗೂ ಉದ್ಘಾಟನೆಯ ಭಾಗ್ಯವನ್ನೇ ಪಡೆಯದಿರುವುದು ಪಿರಿಯಾಪಟ್ಟಣದ ಜನರ ದೌರ್ಭಾಗ್ಯವೇ ಆಗಿದೆ.

15 ಮೂರು 2016ರಲ್ಲಿ ಈ ಡಾ. ಬಿ.ಆರ್ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಪಿರಿಯಾಪಟ್ಟಣದ ಈಗಿನ ಶಾಸಕರೂ ಸಚಿವರಾದ ಕೆ ವೆಂಕಟೇಶ್ ಅವರು ಅಂದು ಶಾಸಕರಾಗಿದ್ದರು ಆಗ ಅವರ ಅಧ್ಯಕ್ಷತೆಯಲ್ಲೇ ಈ ಭವನಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು.

ಈ ಭವನ ನಿರ್ಮಾಣವಾಗಿ ಇಲ್ಲಿಗೆ ಸುಮಾರು 9 ವರ್ಷಗಳು ಕಳೆದಿವೆ ಅದೇನು ಕಾರಣವೂ ಇದುವರೆಗೂ ಇದು ಉದ್ಘಾಟನೆ ಭಾಗ್ಯ ಕಂಡಿಲ್ಲ. ಇದಕ್ಕೆ ಕಾರಣವನ್ನು ಸಂಬಂಧಪಟ್ಟ ಮಂತ್ರಿಗಳು, ಮುಖ್ಯಮಂತ್ರಿಗಳು ಸ್ಥಳೀಯ ಆಡಳಿತ ಉತ್ತರಿಸಬೇಕಿದೆ.

ಡಾಕ್ಟರ್ ಬಿ ಆರ್ ಅಂಬೇಡ್ಕರ್ ಭವನ ನಿರ್ಮಿಸಿ ಜನಸಾಮಾನ್ಯರ ಉಪಯೋಗಕ್ಕೆ ಬಾರದೆ ಹೋದರೆ ಯಾವ ಪುರುಷಾರ್ಥಕ್ಕಾಗಿ ಇದನ್ನು ನಿರ್ಮಿಸಬೇಕಿತ್ತು ಎಂದು ಜನ ಶಾಪ ಹಾಕುತ್ತಿದ್ದಾರೆ.

ಈ ಭವನವನ್ನು ಹೇಳುವವರು ಕೇಳುವವರು ಇಲ್ಲದಂತಾಗಿದೆ, ಹಾಗಾಗಿ ಇದು ಪುಂಡು ಪೋಕರಿಗಳ ತಾಣವಾಗಿ ಬಿಟ್ಟಿದೆ. ಯಾರು,ಯರೋ ಬಂದು ಇಲ್ಲಿ ಕಸ ಕಡ್ಡಿ ಬಿಸಾಡುತ್ತಾರೆ.

ಯಾರು ಕೇಳೋರು,ಕೇಳೋರು ಇಲ್ಲದ ಕಾರಣ ದುಷ್ಕರ್ಮಿಗಳು ಭವನದ ಗಾಜುಗಳನ್ನು ಒಡೆದು ಹಾಕಿದ್ದಾರೆ.

ಇನ್ನೂ ಹೀಗೆ ಬಿಟ್ಟರೆ ಕಟ್ಟಡದಲ್ಲಿರುವ ಕಿಟಕಿ ಬಾಗಿಲುಗಳನ್ನು ಕತ್ತರಿಸಿ ಹೊತ್ತೊಯ್ಯುವುದು ಖಂಡಿತಾ.

ಈಗಾಗಲೇ ಈ ಭವನದ ಹಿಂದೆ ಮುಂದೆ ಅನೈತಿಕ ಚಟುವಟಿಕೆಗಳು ನಡೆಯುತ್ತಿದೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಗಂಭೀರ ಆರೋಪ ಮಾಡಿದ್ದಾರೆ.

ಅಂದು ಶಾಸಕರಾಗಿದ್ದ ಕೆ ವೆಂಕಟೇಶ್ ಅವರು ಈಗ ಸಚಿವರಾಗಿದ್ದಾರೆ, ಸಿದ್ದರಾಮಯ್ಯ ಅವರು ಈಗಲೂ ಮುಖ್ಯಮಂತ್ರಿ ಆಗಿದ್ದರೆ ತಮ್ಮ ತವರು ಜಿಲ್ಲೆಯಲ್ಲೇ ಹೀಗಾದರೆ ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

ಕನಿಷ್ಠ ಪಕ್ಷ ಪಿರಿಯಾಪಟ್ಟಣದ ತಾಲೂಕು ಆಡಳಿತ ದವರು ಈ ಭವನದ ಸುತ್ತ ಬೇಲಿಯನ್ನು ಹಾಕಿಸಿ ಗೇಟ್ ಅಳವಡಿಸಬೇಕು. ಇಲ್ಲಿ ಒಂದು ಸುಂದರವಾದ ಪಾರ್ಕ್ ಮಾಡಿದರೆ ಜನರು ವಿಶ್ರಾಂತಿಯನ್ನಾದರೂ ಪಡೆಯುತ್ತಾರೆ ಎಂದು ಅವರು ಸಲಹೆ ನೀಡಿದ್ದಾರೆ.

ಈಗಾಗಲೇ ಒಂಬತ್ತು ವರ್ಷ ಕಳೆದಿರುವುದರಿಂದ ಸುಣ್ಣ ಬಣ್ಣ ಕಾಣದೆ ಕಟ್ಟಡ ಶಿಥಿಲವಾಗುವ ಸಾಧ್ಯತೆ ಇದೆ.

ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಸುಂದರವಾದ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಭವನವನ್ನು ನಿರ್ಮಿಸಿದೆ.ಆದರೆ ಉಪಯೋಗಕ್ಕೆ ಬಾರದಂತಾಗಿದೆ ಇದು ಒಂದು ರೀತಿ ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನ ಎಂದು ಚೆಲುವರಾಜು ಕಿಡಿ ಕಾರಿದ್ದಾರೆ.

ಉದ್ಘಾಟನೆ ಕಾಣದೆ ಇರಲು ಕಾಣದ ಕೈಗಳು ಕೆಲಸ ಮಾಡುತ್ತಿವೆ, ಕಟ್ಟಡ ನಿರ್ಮಾಣದಲ್ಲಿ ಬೇಕಾದಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಅವರು ದೂರಿದ್ದಾರೆ.

ಇನ್ನಾದರೂ ಬಿ ಆರ್ ಅಂಬೇಡ್ಕರ್ ಭವನಕ್ಕೆ ಹಿಡಿದಿರುವ ಗ್ರಹಣವನ್ನು ಬಿಡಿಸಿ ಎಲ್ಲಿ ಏನು ತೊಡಕಾಗಿದೆ ಎಂಬುದನ್ನು ಮನಗಂಡು ಸ್ಥಳೀಯ ಶಾಸಕರು ಸಚಿವರೂ ಆದ ಕೆ ವೆಂಕಟೇಶ್ ಅವರು ಭವನ ಉದ್ಘಾಟನೆಗೆ ಕ್ರಮ ಕೈಗೊಳ್ಳಬೇಕೆಂದು ಚೆಲುವರಾಜು ಒತ್ತಾಯಿಸಿದ್ದಾರೆ.

ಗ್ರಹಣ ಹಿಡಿದ ಬಿ.ಆರ್.ಅಂಬೇಡ್ಕರ್ ಭವನ:ಸಚಿವ ವೆಂಕಟೇಶ್‌ ಇತ್ತ ಗಮನಿಸಲಿ Read More

ಕುಸಿದು ಬೀಳುತಿದೆ ಮಹಾನ್ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿವಾಸ

ಪಿರಿಯಾಪಟ್ಟಣ: ಗೆಜ್ಜೆಪೂಜೆ, ಶರಪಂಜರ ಸೇರಿದಂತೆ ಹಲವಾರು ಪ್ರಸಿದ್ಧ ಚಲನಚಿತ್ರಗಳನ್ನು ನಾಡಿಗೆ ನೀಡಿದ ಕನ್ನಡ ಚಲನಚಿತ್ರಗಳ ಮಹಾನ್ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರನ್ನು ಎಲ್ಲರೂ ತೆರೆಮರೆಗೆ ಸೇರಿಸಿ ಬಿಟ್ಟಿದ್ದಾರೆ ಅನಿಸುತ್ತಿದೆ.

ಪಟ್ಟಣ ಕಣಗಾಲ್ ಅವರು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಕಣಗಾಲು ಗ್ರಾಮದಲ್ಲಿ ಜನಿಸಿದವರು. ಅವರು ಆಡಿ ಬೆಳೆದ ಮನೆ ಈಗ ಕುಸಿದು ಪಾಳು ಬಿದ್ದಿದೆ,ಆದರೆ ಕೇಳುವವರೇ ಇಲ್ಲದಂತಾಗಿದೆ.

ಪಟ್ಟಣ ಕಣಗಾಲ್ ಅವರು ನಿಧನ ಹೊಂದಿ ದಶಕಗಳೇ ಕಳೆದರೂ ಇದುವರೆಗಿನ ಯಾವುದೇ ಸರ್ಕಾರಗಳು ಕೂಡ ಕಣಗಾಲಿನಲ್ಲಿರುವ ಪುಟ್ಟಣ್ಣ ಅವರ ನಿವಾಸವನ್ನು ಅಭಿವೃದ್ಧಿಪಡಿಸಲೇ ಇಲ್ಲ.

ಯಾವುದೇ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೂ ತಾವು ಕಲೆ, ಸಾಹಿತ್ಯ, ಚಲನಚಿತ್ರ ಸಂಗೀತ, ನಾಟಕ,ಕನ್ನಡ ಭಾಷೆ ಎಲ್ಲದಕ್ಕೂ ಹೆಚ್ಚು ಒತ್ತು ನೀಡುತ್ತೇವೆ, ಕನ್ನಡದ ಅಭಿವೃದ್ಧಿಯೇ ನಮ್ಮ ದ್ಯೇಯ ಎಂದು ಹೇಳಿಕೊಳ್ಳುತ್ತವೆ ಆದರೆ ಇದೆಲ್ಲ ಭಾಷಣಗಳಿಗೆ ಮಾತ್ರ ಸೀಮಿತ ಎಂಬುದು ಪುಟ್ಟಣ್ಣ ಕಣಗಾಲ್ ಅವರ ನಿವಾಸವನ್ನು ನೋಡಿದವರಿಗೆ ಅನಿಸುವುದು ಸಹಜ.

ಪುಟ್ಟಣ್ಣ ಅವರು ಜನಿಸಿದ ಮನೆ ತೊಟ್ಟಿ ಮನೆ, ಬಹಳ ದೊಡ್ಡದಾಗಿದೆ ಆದರೆ ಮನೆಯ ಮುಂಭಾಗದ ಹೆಂಚುಗಳು ಹಾಳಾಗಿ ಒಡೆದು ಹೋಗಿದೆ. ಗೋಡೆ ಕೂಡ ಕುಸಿಯುತ್ತಿದೆ,ಕಂ ಬಗಳು ಬೀಳುವಂತಿವೆ, ಚಾವಣಿ ಆಗಲೇ ಬಿದ್ದಂತಾಗಿದೆ.

ತಮ್ಮ ಊರಿಗೆ ಗ್ರಾಮ ಪಂಚಾಯಿತಿ ಕಚೇರಿ ಬೇಕು ಎಂದುಕೊಂಡು ಪುಟ್ಟಣ್ಣ ಅವರು ಅದಾಗಲೇ ತಮಗೆ ಸೇರಿದ ಜಾಗವನ್ನು ಬಿಟ್ಟುಕೊಟ್ಟು ಅಲ್ಲಿ ಕಣಗಾಲು ಗ್ರಾಮ ಪಂಚಾಯಿತಿ ಬರುವಂತೆ ಮಾಡಿದ್ದಾರೆ. ಈಗಲೂ ಕಣಗಾಲ್ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಪುಟ್ಟಣ್ಣ ಅವರ ಪುಟ್ಟ ಪ್ರತಿಮೆಯನ್ನು ಇಟ್ಟು,ಗ್ರಾನೈಟ್ ನಲ್ಲಿ ಅವರ ಹೆಸರು ಹಾಕಿ ಕೃತಜ್ಞತೆ ಸಲ್ಲಿಸಿದ್ದಾರೆ.ಆದರೆ ಏನು ಪ್ರಯೋಜನ?.

ಆದರೆ ಇದೇ ಗ್ರಾಮ ಪಂಚಾಯಿತಿಯ ಅರ್ಧ ಕಿಲೋಮೀಟರ್ ದೂರದಲ್ಲಿ ಪುಟ್ಟಣ್ಣವರ ನಿವಾಸ ಇದ್ದು ಬಾಳು ಬಿದ್ದಿರುವುದು ಕಂಡುಬಂದರೂ ಅಲ್ಲಿನ ಅಧ್ಯಕ್ಷರಾಗಲಿ ಸದಸ್ಯರಾಗಲಿ ಯಾರು ತಲೆಕೆಡಿಸಿಕೊಳ್ಳುವುದಿಲ್ಲ.ಮನೆಯ ಸುತ್ತ,ಮುತ್ತ‌ ಗಿಡಗಂಟಿಗಳು ಬೆಳೆದು ನಿಂತಿದ್ದರೂ ಕನಿಷ್ಠ ಅದನ್ನೆಲ್ಲ ಸ್ವಚ್ಛ ಮಾಡುವ ಗೋಜಿಗೂ ಹೋಗದಿರುವುದು ವಿಪರ್ಯಾಸ.

ಅಷ್ಟೆ ಏಕೆ ಪಿರಿಯಾಪಟ್ಟಣದ ಈಗಿನ ಶಾಸಕರಾದ ವೆಂಕಟೇಶ್ ಅವರು ಕಾಂಗ್ರೆಸ್ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದಾರೆ ಅವರು ಕೂಡ ಇದರ ಬಗ್ಗೆ ಧ್ವನಿ ಎತ್ತದಿರುವುದು ದುರ್ದೈವದ ಸಂಗತಿಯಾಗಿದೆ.

ಪುಟ್ಟಣ್ಣನವರು ವಾಸಿಸಿದ ಈ ಮನೆಯನ್ನು ಮ್ಯೂಸಿಯಂ ಮಾಡಬೇಕೆಂಬ ಕೂಗು ಬಹಳ ವರ್ಷಗಳ ಹಿಂದೆಯೇ ಎದ್ದಿತ್ತು. ಅದಕ್ಕಾಗಿ ಸರ್ಕಾರ ಹಣ ಬಿಡುಗಡೆ ಮಾಡಿದೆ ಎಂದು ಹೇಳಲಾಗುತ್ತಿದೆ ಆದರೆ ಅದು ನಿಜವೊ ಸುಳ್ಳೊ ತಿಳಿಯದು, ಈ ಬಗ್ಗೆ ಪಂಚಾಯತಿಯವರನ್ನು ಕೇಳಿದರೆ ಯಾವುದೇ ಹಣ ಬಂದಿಲ್ಲ ಎನ್ನುತ್ತಾರೆ. ಇದು ಕೂಡ ನಿಜವೋ ಸುಳ್ಳು ಗೊತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು,
ಜನಪ್ರತಿನಿಧಿಗಳು ಇದರ ಬಗ್ಗೆ ತಕ್ಷಣ ಗಮನಹರಿಸಬೇಕು. ಚಲನಚಿತ್ರ ಉದ್ಯಮದವರು ಕೂಡ ಈ ಬಗ್ಗೆ ಗಮನಹರಿಸ ಬೇಕೆಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಒತ್ತಾಯಿಸಿದ್ದಾರೆ.

ಇನ್ನು ಮುಂದಾದರೂ ಸರ್ಕಾರ ಎಚ್ಚೆತ್ತುಕೊಂಡು ಈ ಮಹಾನ್ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ನಿವಾಸವನ್ನು ಅಭಿವೃದ್ಧಿಪಡಿಸಿ ಅವರ ನಿರ್ದೇಶನದ ಚಿತ್ರಗಳು, ಸಂಬಂಧಪಟ್ಟ ವಸ್ತುಗಳನ್ನು ಇಟ್ಟು ಮ್ಯೂಸಿಯಂ ಮಾಡೀತೆ ಕಾದು ನೋಡಬೇಕಿದೆ.

ಕುಸಿದು ಬೀಳುತಿದೆ ಮಹಾನ್ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿವಾಸ Read More

ಹಿಂದೂ ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿಯವರ ಪ್ರತಿಭಟನೆ

ಪಿರಿಯಾಪಟ್ಟಣ: ಪಿರಯಾಪಟ್ಟಣ ಬೆಟ್ಟದಪುರ ವೃತ್ತದಲ್ಲಿ ಹಿಂದೂ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯವರು ಹಿಂದೂಗಳ ಮೇಲಿನ‌ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಸಿದರು.

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದುಗಳ ಮೇಲೆ ದೌರ್ಜನ್ಯ ಖಂಡಿಸಿ ಮೌನ ಪ್ರತಿಭಟನೆ ಮಾಡಿದರು.

ಪ್ರತಿಭಟನೆಯಲ್ಲಿ ಮೈಸೂರು ಜಿಲ್ಲಾ ಅಧ್ಯಕ್ಷರಾದ ನಳಿನಾ ಗೌಡ, ರಾಜೇಗೌಡ, ಹರೀಶ್, ಯಾದವಾಚಾರ್, ಭಾಗ್ಯಕ್ಕ, ಜಯಶ್ರೀ, ಭವ್ಯ,ಪ್ರಸನ್ನ, ಶಿವರಾಮೇಗೌಡ,ಆದರ್ಶ್, ಯಶವಂತ್ ಮತ್ತಿತರರು ಪಾಲ್ಗೊಂಡಿದ್ದರು.

ಬಾಂಗ್ಲಾದೇಶ ಸರಕಾರಕ್ಕೆ ಧಿಕ್ಕಾರ ಧಿಕ್ಕಾರ, ಬಾಂಗ್ಲಾದೇಶದ ಹಿಂದುಗಳನ್ನು ರಕ್ಷಿಸಿರಿ ಮತ್ತು ಅವರಿಗೆ ಸಂರಕ್ಷಣೆ ಒದಗಿಸಿ, ಎದ್ದೇಳಿ ಹಿಂದುಗಳೇ ಎದ್ದೇಳಿ ಭಾರತವನ್ನು ಬಾಂಗ್ಲಾದೇಶಿ ನುಸಳು ಕೋರರಿಂದ ಮುಕ್ತಗೊಳಿಸಿ, ಬಾಂಗ್ಲಾದೇಶದಲ್ಲಾಗುತ್ತಿರುವ ಹಿಂದುಗಳ ನರಸಂಹಾರವನ್ನು ತಕ್ಷಣ ತಡೆಗಟ್ಟಿ, ಒಗ್ಗಟ್ಟಾಗಿದ್ದರೆ ಸುರಕ್ಷಿತರಾಗಿರುವೆವು, ಬಾಂಗ್ಲಾದೇಶಿ ನುಸುಳು ಕೋರರಿಂದ ಮುಕ್ತ ಭಾರತ ಇದುವೇ ನಿಜವಾದ ಸ್ವಚ್ಛತಾ ಅಭಿಯಾನ, ಹಿಂದೂಗಳ ಮೇಲೆ ಆಕ್ರಮಣ ಮಾಡುವ ಮಂದಿರಗಳ ಮೇಲೆ ದಾಳಿ ನಡೆಸುವ ಬಾಂಗ್ಲಾದೇಶಕ್ಕೆ ಧಿಕ್ಕಾರ, ಬಾಂಗ್ಲಾದೇಶಿ ಆಕ್ರಮಣಕಾರರಿಗೆ ಸಹಾಯ ಮಾಡುವವರ ಮೇಲೆ ರಾಜದ್ರೋಹದ ಅಪರಾಧ ದಾಖಲಿಸಿ, ಹಿಂದುಗಳಿಂದ ಒಂದೇ ಬೇಡಿಕೆ ನಿಲ್ಲಿಸಿ ಬಾಂಗ್ಲಾದೇಶಿ ಹಿಂದೂಗಳ ಮೇಲಿನ ಅನಾಚಾರ ಮುಂತಾದ ಬರಹಗಳುಳ್ಳ ಭಿತ್ತಿಚಿತ್ರಗಳನ್ನು ಪ್ರತಿಭಟನಾ ನಿರತರು ಪ್ರದರ್ಶಿಸಿದರು.

ಹಿಂದೂ ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿಯವರ ಪ್ರತಿಭಟನೆ Read More

ನೇಣು ಬಿಗಿದ‌ ಸ್ಥಿತಿಯಲ್ಲಿ ದಂಪತಿ ಶವ ಪತ್ತೆ

ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣ ತಾಲೂಕು ದೊಡ್ಡ ಹೊನ್ನೂರು ಕಾವಲಿನ ಬಳಿ ನೇಣುಬಿಗಿದ ಸ್ಥಿತಿಯಲ್ಲಿ ದಂಪತಿ ಶವ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿದೆ

ಪಿರಿಯಾಪಟ್ಟಣ ತಾಲೂಕಿನ ದೊಡ್ಡ ಹೊನ್ನೂರು ಕಾವಲಿನ ಜಮೀನೊಂದರಲ್ಲಿರುವ ಹಳೆಯ ಖಾಲಿ ಮನೆಯಲ್ಲಿ ದಂಪತಿ ದೇಹಗಳು ಪತ್ತೆಯಾಗಿದ್ದು ಆತಂಕ ಸೃಷ್ಟಿಸಿದೆ.

ಪಿರಿಯಾಪಟ್ಟಣ ತಾಲ್ಲೂಕು ಕೊಪ್ಪ ಗ್ರಾಮದ ನಿವಾಸಿಗಳಾದ ಸುರೇಶ್ (40) ಮತ್ತು ಅವರ ಪತ್ನಿ ಪಲ್ಲವಿ (28) ಮೃತ ದಂಪತಿ.

ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಸುರೇಶ್ ಉದ್ಯಮದಲ್ಲಿ ನಷ್ಟ ಹೊಂದಿದ್ದು ಬೇಸರಗೊಂಡಿದ್ದರು ಜತೆಗೆ ಸಾಲಗಾರರ ಕಿರುಕುಳದಿಂದ ನೊಂದಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.

ಸಾಲಗಾರರ ಹಿಂಸೆಯಿಂದ ನೊಂದು ಪತಿ,ಪತ್ನಿ ಆತ್ಮಹತ್ಯೆಗೆ ಶರಣಾಗಿರಬಹುದೆ ಅಥವಾ ನೇಣು ಬಿಗಿದ ಸ್ಥಿತಿಯಲ್ಲಿ ದೇಹಗಳು ಪತ್ತೆಯಾಗಿರುವುದರಿಂದ ಯಾರಾದರೂ ಕೊಲೆ ಮಾಡಿ ನೇಣು ಹಾಕಿ ಹೋಗಿರಬಹುದೆ
ಎಂಬ ಅನುಮಾನ ಕಾಡುತ್ತಿದ್ದು ತನಿಖೆಯಿಂದ ಸತ್ಯ ಗೊತ್ತಾಗಬೇಕಿದೆ.

ಬೈಲುಕುಪ್ಪೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನೇಣು ಬಿಗಿದ‌ ಸ್ಥಿತಿಯಲ್ಲಿ ದಂಪತಿ ಶವ ಪತ್ತೆ Read More

ಮಹಿಳೆಯರು ಸ್ವಾವಲಂಬನೆ ಹೊಂದಲು ಎನ್ ಆರ್ ಎಲ್ ಎಂ ಯೋಜನೆ ಸಹಕಾರಿ:ಕೆ.ಎಂ.ಗಾಯಿತ್ರಿ

ಮೈಸೂರು: ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಎನ್ ಆರ್ ಎಲ್ ಎಂ ಯೋಜನೆ ಸಹಕಾರಿ,
ಗ್ರಾಮಪಂಚಾಯಿತಿಗಳು ಈ ಯೋಜನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಪಂ ಸಿಇಒ ಕೆ.ಎಂ.ಗಾಯಿತ್ರಿ ತಿಳಿಸಿದರು.

ಪಿರಿಯಾಪಟ್ಟಣ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಗ್ರಾಮಪಂಚಾಯಿತಿ ಮಟ್ಟದಲ್ಲಿ ನಡೆಸುವ ಮಾಸಿಕ ಸಂತೆಯಲ್ಲಿ ಎನ್ ಆರ್ ಎಲ್ ಎಂ ಯೋಜನೆಯ ಮೂಲಕ ಸ್ಥಳೀಯ ಪದಾರ್ಥಗಳ ಮಾರಾಟಕ್ಕೆ ಮಾರುಕಟ್ಟೆಗೆ ಅವಕಾಶ ನೀಡಬೇಕು. ಗ್ರಾಮಪಂಚಾಯಿತಿಗಳು ಈ ನಿಟ್ಟಿನಲ್ಲಿ ಮುಂದುವರೆದರೆ ಜಿಲ್ಲಾ ಮಟ್ಟದಲ್ಲಿ ವೇದಿಕೆ ಕಲ್ಪಿಸಿಕೊಡುವುದಾಗಿ ಭರವಸೆ ನೀಡಿದರು.

ಬೆಟ್ಟದಪುರ ಗ್ರಾಮಪಂಚಾಯಿತಿಯಲ್ಲಿ ಸ್ವ-ಸಹಾಯ ಸಂಘದ ಮಹಿಳೆಯರು ಈ ಯೋಜನೆಯಡಿ ಆರ್ಥಿಕ ನೆರವು ಪಡೆದು ಬಟ್ಟೆ ಬ್ಯಾಗ್ ಗಳನ್ನು ಸಿದ್ಧಪಡಿಸುತ್ತಿದ್ದು, ಆರ್ಥಿಕವಾಗಿ ಲಾಭಗಳಿಸುತ್ತಿದ್ದಾರೆ. ಉಳಿದ ಗ್ರಾಮಪಂಚಾಯಿತಿಯವರು ಈ ಕಡೆ ಗಮನಹರಿಸಬೇಕು. ಈ ಯೋಜನೆ ಅಳವಡಿಕೆಗೆ ಕೃಷಿ ಸಖಿ, ಪಶು ಸಖಿಗಳನ್ನು ಬಳಸಿಕೊಳ್ಳಬೇಕು,ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಒತ್ತು ನೀಡಿ ಎಂದು ಪಿಡಿಒಗಳಿಗೆ ಸಲಹೆ ನೀಡಿದರು.

ಈಗಾಗಲೇ ಸಂಜೀವಿನಿ ಶೆಡ್ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿರುವ ಪಂಚಾಯಿತಿಗಳಲ್ಲಿ ಕೂಡಲೇ ಕಾಮಗಾರಿಯನ್ನು ಆರಂಭಿಸಿ ಹಾಗೂ ಪ್ರಗತಿಯಲ್ಲಿರುವ ಶಾಲಾ ಶೌಚಾಲಯ, ಕಾಂಪೌಂಡ್, ಆಟದ ಮೈದಾನ ಕಾಮಗಾರಿಗಳನ್ನು ಪೂರ್ಣಗೊಳಿಸಿ ಎಂದು ಗಾಯಿತ್ರಿ ಸೂಚಿಸಿದರು.

ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಪ್ರಭುಸ್ವಾಮಿ ಅವರು ಮಾತನಾಡಿ,ಗ್ರಾಮೀಣ ಪ್ರದೇಶದ ಹಣ್ಣುಗಳು, ಸೊಪ್ಪು, ಧಾನ್ಯ ಪದಾರ್ಥಗಳಿಗೆ ವಿಶೇಷ ಬೇಡಿಕೆ ಹಾಗೂ ಉತ್ತಮ ಬೆಲೆಯಿದ್ದು, ಅದನ್ನು ಒದಗಿಸುವ ಕಾರ್ಯವಾಗಬೇಕು ಎಂದು ಹೇಳಿದರು.

ಕಾರ್ಯನಿರ್ವಾಹಕ ಅಧಿಕಾರಿ ಡಿ.ಬಿ.ಸುನಿಲ್ ಕುಮಾರ್,‌ ಪಿ ಆರ್ ಇ ಡಿ ಎಇಇ ಮಲ್ಲಿಕಾರ್ಜುನಸ್ವಾಮಿ, ಆರ್ ಡಬ್ಲ್ಯೂ ಎಸ್ ಎಇಇ ಕೃಷ್ಣಮೂರ್ತಿ, ಸಹಾಯಕ ನಿರ್ದೇಶಕ(ಗ್ರಾ.ಉ) ಕರುಣಾಕರ್, ಲೆಕ್ಕಾಧಿಕಾರಿ ರಂಗನಾಥ್ ಹಾಗೂ 34 ಗ್ರಾಮಪಂಚಾಯಿತಿ ಪಿಡಿಒಗಳು, ನರೇಗಾ ಹಾಗೂ ಎನ್ ಆರ್ ಎಲ್ ಎಂ ಸಿಬ್ಬಂದಿ ಹಾಜರಿದ್ದರು.

ಮಹಿಳೆಯರು ಸ್ವಾವಲಂಬನೆ ಹೊಂದಲು ಎನ್ ಆರ್ ಎಲ್ ಎಂ ಯೋಜನೆ ಸಹಕಾರಿ:ಕೆ.ಎಂ.ಗಾಯಿತ್ರಿ Read More