ನಾವೆಲ್ಲರೂ ಶೂದ್ರರು: ಜಾತಿ ಯಾವುದಾದರೂ ಶೂದ್ರರೆಲ್ಲ ಒಂದೇ-ಸಿಎಂ

ಬೆಂಗಳೂರು: ನಾವೆಲ್ಲರೂ ಶೂದ್ರರು, ಜಾತಿ ಯಾವುದಾದರೂ ಶೂದ್ರರೆಲ್ಲರೂ ಒಂದೇ,
ಚಲನೆ ಇಲ್ಲದ ಜಾತಿ ವ್ಯವಸ್ಥೆಯನ್ನು ವಿರೋಧಿಸಿ ಬಸವಣ್ಣ ಹೊಸ ಧರ್ಮವನ್ನೇ ಸ್ಥಾಪಿಸಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬೃಹತ್ ಕಾರ್ಯಕ್ರಮದಲ್ಲಿ ವಿಶ್ವಗುರು ಬಸವಣ್ಣ ಅವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ವರ್ಷಾಚರಣೆ ಸಂದರ್ಭವಾಗಿ ಆಯೋಜಿಸಿದ್ದ ‘ಬಸವ ಸಂಸ್ಕೃತಿ ಅಭಿಯಾನ-2025’ ರ ಸಮಾರೋಪ ಸಮಾರಂಭದಲ್ಲಿ ಶರಣ ಸಂಸ್ಕೃತಿಯ 301 ಶರಣರು, ಗುರುಗಳು, ಸ್ವಾಮೀಜಿಗಳ ಸಾನಿದ್ಯದಲ್ಲಿ ಸಮುದಾಯದವರ ಸಮ್ಮುಖದಲ್ಲಿ ಸನ್ಮಾನ ಸ್ವೀಕರಿಸಿ ಸಿಎಂ ಮಾತನಾಡಿದರು.

ನಾನು ಬಸವಣ್ಣನವರ ಅಭಿಮಾನಿ. ಬಸವ ತತ್ವದಲ್ಲಿ‌ ನಂಬಿಕೆ-ಬದ್ದತೆ ಇಟ್ಟುಕೊಂಡಿದ್ದೀನಿ.
ಅಂದಿಗಲ್ಲ-ಇಂದಿಗಲ್ಲ-ಮುಂದೆ ಎಂದೆಂದಿಗೂ ಬಸವ ತತ್ವ ಶಾಶ್ವತ ಮತ್ತು ಪ್ರಸ್ತುತ ಎನ್ನುವುದು ನನ್ನ ನಂಬಿಕೆ, ಸಹಬಾಳ್ವೆ ಮತ್ತು ಸಹಿಷ್ಣುತೆಯನ್ನು ಬಸವಣ್ಣನವರು ಬದುಕಿನುದ್ದಕ್ಕೂ ಸಾರಿದರು,ನಾನೂ ಇದನ್ನು ಪಾಲಿಸುತ್ತೇನೆ ಎಂದು ಹೇಳಿದರು.

ಬಸವ ಜಯಂತಿಯ ದಿನವೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಾನು ಅದೇ ದಿನ ಎಲ್ಲರಿಗೂ ಬದುಕುವ ಸಮಾನ ಅವಕಾಶಗಳನ್ನು ಕಲ್ಪಿಸುವ ಬಸವಣ್ಣನವರ ಆಶಯಗಳನ್ನು ಈಡೇರಿಸುವ ತೀರ್ಮಾನ ಮಾಡಿ ಹತ್ತು ಹಲವು ಭಾಗ್ಯಗಳು, ಗ್ಯಾರಂಟಿಗಳ ಮೂಲಕ ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರ ಬದುಕಿಗೆ ಅವಕಾಶಗಳನ್ನು ಕಲ್ಪಿಸಿದೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲೂ ಬಸವಣ್ಣನವರ ಭಾವಚಿತ್ರ ಇಡುವುದನ್ನು ಕಡ್ಡಾಯ ಮಾಡಿದ್ದು ಇದೇ ಕಾರಣಕ್ಕಾಗಿ ಎಂದು ತಿಳಿಸಿದರು.

ಜಾತಿಯಿಂದ ಯಾರೂ ಶ್ರೇಷ್ಠರಲ್ಲ. ಹಾಗೆಯೇ ಪ್ರತಿಭೆ, ಜ್ಞಾನ ಕೂಡ ಯಾವುದೇ ಒಂದು ಜಾತಿಯ ಸ್ವತ್ತು ಅಲ್ಲ, ನಾನು ಅರ್ಜಿ ಹಾಕಿಕೊಂಡು ಕುರುಬ ಜಾತಿಯಲ್ಲಿ ಹುಟ್ಟಿಲ್ಲ, ಶೂದ್ರ ಎನ್ನುವ ಕಾರಣಕ್ಕೆ ಶಿಕ್ಷಣ ಪಡೆಯುವ ಅರ್ಹತೆ ಇಲ್ಲ ಎನ್ನುವುದು ಪಟ್ಟಭದ್ರರ ಷಡ್ಯಂತ್ರ ಎಂದು ಅಸಮಾಧಾನ ದಿಂದ ಸಿಎಂ ನುಡಿದರು.

ಜಾತಿ-ವರ್ಗ ರಹಿತ ಮಾನವ ಸಮಾಜದ ನಿರ್ಮಾಣ ಬಸವಣ್ಣನವರ ಕನಸಾಗಿತ್ತು. ನಾವೆಲ್ಲರೂ ಮೊದಲು ಮನುಷ್ಯರು, ಬಳಿಕ ಭಾರತೀಯರು. ಹೀಗಾಗಿ ನಾವು ಮನುಷ್ಯ ನಿರ್ಮಿತ ಜಾತಿ, ಧರ್ಮದ, ಅಸಮಾನತೆಯ ತಾರತಮ್ಯಗಳನ್ನು ಸಹಿಸಬಾರದು, ಆಚರಿಸಬಾರದು ಎಂದು ಮುಖ್ಯ ಮಂತ್ರಿಗಳು ಕರೆ ನೀಡಿದರು.

ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವ ಸಂವಿಧಾನದ ಆಶಯ ಆದರೆ ಬಸವಣ್ಣನವರೂ ಜಾತಿ ರಹಿತ, ವರ್ಗ ರಹಿತ ಬ್ರಾತೃತ್ವದ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದರು. ಹೀಗಾಗಿ ಬಸವಣ್ಣನವರು ಯಾವತ್ತಿಗೂ ಪ್ರಸ್ತುತ ಎಂದರು‌.

ವಚನ ವಿಶ್ವ ವಿದ್ಯಾಲಯ ಸ್ಥಾಪಿಸುವ ಬೇಡಿಕೆ ಬಗ್ಗೆ ಸರ್ಕಾರದ ಒಪ್ಪಿಗೆ ಇದ್ದು, ಮುಂದಿನ ವರ್ಷ ವಚನ ವಿವಿ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಸಿದ್ದರಾಮಯ್ಯ ಪ್ರಕಟಿಸಿದರು

ನಮ್ಮ ಮೆಟ್ರೋಗೆ “ಬಸವ ಮೆಟ್ರೋ” ಎಂದು ನಾಮಕರಣ ಮಾಡುವ ಬಗ್ಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತೇವೆ. ಇದು ಪೂರ್ಣವಾಗಿ ರಾಜ್ಯ ಸರ್ಕಾರದ ಯೋಜನೆ ಆಗಿದ್ದರೆ ಇವತ್ತೇ ಬಸವ ಮೆಟ್ರೋ ಎಂದು ಘೋಷಿಸಿ ಬಿಡುತ್ತಿದ್ದೆ ಎಂದು ಸಿಎಂ ಹೇಳಿದರು.

ಕಾರ್ಯಕ್ರಮದಲ್ಲಿ ಲಿಂಗಾಯತ ಧರ್ಮ ಚಳವಳಿಯ ಪ್ರಮುಖರು, ಪ್ರಗತಿಪರ ಚಿಂತಕರು, ಹೋರಾಟಗಾರರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶರಣ ಸಂಸ್ಕೃತಿ ಬಗೆಗಿನ ಬದ್ಧತೆಯನ್ನು ಶ್ಲಾಘಿಸಿ ಅಭಿನಂದಿಸಿದರು.

ನಾವೆಲ್ಲರೂ ಶೂದ್ರರು: ಜಾತಿ ಯಾವುದಾದರೂ ಶೂದ್ರರೆಲ್ಲ ಒಂದೇ-ಸಿಎಂ Read More

ತಾತ್ಕಾಲಿಕ ಶಾಲೆಗೆ ಖುಷಿಯಿಂದ ಬಂದ ಮಾವುತ,ಕಾವಾಡಿಗಳ ಮಕ್ಕಳು

ಮೈಸೂರು: ದಸರಾ ಮಹೋತ್ಸವದ ಗಜಪಡೆ ಜತೆ ಆಗಮಿಸಿ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಮಾವುತ,ಕಾವಾಡಿಗಳ ಮಕ್ಕಳಿಗೆ ಶಾಲಾ ಶಿಕ್ಷಣ ಇಲಾಖೆ ತಾತ್ಕಾಲಿಕ ಶಾಲೆ ಪ್ರಾರಂಭವಾಗಿದ್ದು,ಖುಷಿಯಿಂದಲೇ ಮಕ್ಕಳು ಬಂದಿದ್ದರು.

ಮೊದಲ ದಿನವೇ ೨೦ ಮಕ್ಕಳು ಶಾಲೆಗೆ ಖುಷಿಯಿಂದ ಹಾಜರಾಗಿದ್ದರು.

ಆ.೪ರಂದು ಗಜಪಯಣದ ಮೂಲಕ ಮೈಸೂರಿಗೆ ಆಗಮಿಸಿದ ಮೊದಲ ತಂಡದ ೯ ಆನೆಗಳ ಮಾವುತ, ಕಾವಾಡಿಗಳ ಮಕ್ಕಳು ಅರಮನೆ ಆವರಣದಲ್ಲಿ ಬೀಡು ಬಿಟ್ಟಿದ್ದಾರೆ.

ಶಾಲೆ ಬಿಟ್ಟು ಪೋಷಕರೊಂದಿಗೆ ಬಂದಿರುವ ಮಕ್ಕಳಿಗೆ ಪಠ್ಯಕ್ರಮದ ಕಲಿಕೆಯಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕಳೆದ ಹಲವು ವರ್ಷಗಳಿಂದ ಆನೆ ಬಿಡಾರದ ಬಳಿ ಟೆಂಟ್ ಶಾಲೆ ಆರಂಭಿಸುವ ಕಾರ್ಯ ಚಾಲ್ತಿಗೆ ಬಂದಿತು.

ಆದರೆ,ಕಳೆದ ನಾಲ್ಕೈದು ವರ್ಷದಿಂದ ಟೆಂಟ್ ಶಾಲೆ ಪದ್ದತಿ ಪರಿವರ್ತನೆಯಾಗಿ ತಾತ್ಕಾಲಿಕ ಶಾಲೆ ಎಂದು ಮಾರ್ಪಟ್ಟಿದೆ.

ಈ ಬಾರಿ ತಾತ್ಕಾಲಿಕ ಶಾಲೆ ಔಪಚಾರಿಕವಾಗಿ ಆರಂಭಿಸಲಾಗಿದೆ.ಸಾಮಾನ್ಯವಾಗಿ ದಸರಾ ಗಜಪಡೆ ಮಾವುತ, ಕಾವಾಡಿಗಳ ಮಕ್ಕಳು ನಾಚಿಕೆ ಸ್ವಭಾವದವರಾಗಿದ್ದು, ನಗರ ವಾಸಿಗಳು, ಅಪರಿಚಿತರೊಂದಿಗೆ ಬೆರೆಯುವುದಿಲ್ಲ.

ಅದರಲ್ಲೂ ಟೆಂಟ್ ಶಾಲೆಗೆ ಕಲಿಯಲು ಬನ್ನಿ ಎಂದರೂ ಮಕ್ಕಳು ಬರುತ್ತಿರಲಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಾವುತ, ಕಾವಾಡಿ ಮಕ್ಕಳು ತಾತ್ಕಾಲಿಕ ಶಾಲೆಗೆ ಬರಲು ಆಸಕ್ತಿ ತೋರುತ್ತಿದ್ದಾರೆ.

ಈ ತಾತ್ಕಾಲಿಕ ಶಾಲೆಗೆ ಮೂವರು ಶಿಕ್ಷಕಿಯರನ್ನು ನಿಯೋಜಿಸಲಾಗಿದೆ. ಡಿಡಿಪಿಐ ಜವರೇಗೌಡ ಮಾರ್ಗದರ್ಶನದಲ್ಲಿ ದಕ್ಷಿಣ ವಲಯ ಬಿಇಒ ಎಂ.ಆರ್.ಅನಂತರಾಜು, ಬಿಆರ್‌ಸಿ ಎಂ.ಬಿ.ಶ್ರೀಕಂಠಸ್ವಾಮಿ ನೇತೃತ್ವದಲ್ಲಿ ತಾತ್ಕಾಲಿಕ ಶಾಲೆ ನಡೆಯಲಿದೆ.

ಅದಕ್ಕಾಗಿ ದಕ್ಷಿಣ ಬಿಇಒ ಕಚೇರಿ ವತಿಯಿಂದ ವಿದ್ಯಾರಣ್ಯಪುರಂ ರೆಹಮಾನಿಯಾ ಉರ್ದು ಶಾಲೆಯ ಶಿಕ್ಷಕಿ ನೂರ್‌ಫಾತಿಮ, ಕುಕ್ಕರಹಳ್ಳಿ ಶಾಲೆಯ ದಿವ್ಯ ಪ್ರಿಯದರ್ಶಿನಿ, ಚಾಮುಂಡಿಪುರಂ ವಿಎಂಇ ಬಾಲಬೋಧಿನಿ ಶಾಲೆಯ ಮೋಸಿನ್ ತಾಜ್ ಅವರನ್ನು ಈ ಬಾರಿ ತಾತ್ಕಾಲಿಕ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಲು ನಿಯೋಜಿಸಲಾಗಿದೆ.

ಕಾಡಿನ ಸುಂದರ ಪರಿಸರದಲ್ಲಿರುವ ಮಾವುತ, ಕಾವಾಡಿಗಳ ಮಕ್ಕಳಿಗೆ ಸಾಮಾನ್ಯ ಶೈಲಿಯಂತೆ ಪಾಠ ಮಾಡಿದರೆ ಮನಮುಟ್ಟುವುದಿಲ್ಲ ಎಂಬುದನ್ನು ಗಮನಿಸಿದ ಶಿಕ್ಷಣ ಇಲಾಖೆ ತಾತ್ಕಾಲಿಕ ಶಾಲೆಯಲ್ಲಿ ನಲಿ-ಕಲಿ ವಿಧಾನದ ಮೂಲಕ ವಿವಿಧ ಫಲಕ(ಚಾರ್ಟ್) ಪ್ರದರ್ಶಿಸಿ, ಅಕ್ಷರ ಕಲಿಸಲಾಗುತ್ತಿದೆ.

ತಾತ್ಕಾಲಿಕ ಶಾಲೆಗೆ ಬರುವ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವುದಕ್ಕೂ ಕ್ರಮ ಕೈಗೊಳ್ಳಲಾಗಿದೆ. ಅಕ್ಷರ ದಾಸೋಹ ಯೋಜನೆಯಡಿ ಇಸ್ಕಾನ್ ಸಂಸ್ಥೆ ಪೂರೈಸುವ ಮಧ್ಯಾಹ್ನದ ಬಿಸಿಯೂಟ ಮಾವುತ, ಕಾವಾಡಿಗಳ ಮಕ್ಕಳಿಗೂ ಸರಬರಾಜು ಮಾಡಲಾಗುತ್ತದೆ.

ಗಜಪಡೆಯ ಎರಡನೇ ತಂಡ ಆ.೨೫ರಂದು ಆಗಮಿಸಲಿದ್ದು, ೫ ಆನೆಗಳ ಮಾವುತ, ಕಾವಾಡಿಗಳ ಮಕ್ಕಳೂ ಸೇರಿದಂತೆ ಇನ್ನಷ್ಟು ಮಕ್ಕಳು ಅರಮನೆಗೆ ಆಗಮಿಸಲಿದ್ದಾರೆ, ಈ ಭಾರಿ ೪೦ ಮಕ್ಕಳು ತಾತ್ಕಾಲಿಕ ಶಾಲೆಯಲ್ಲಿ ಕಲಿಯುವ ಸಾಧ್ಯತೆ ಇದೆ. ಇದಕ್ಕಾಗಿ ಈಗಿನಿಂದಲೇ ಸಿದ್ಧತೆ ಪ್ರಾರಂಭವಾಗಿದೆ.

ತಾತ್ಕಾಲಿಕ ಶಾಲೆಗೆ ಖುಷಿಯಿಂದ ಬಂದ ಮಾವುತ,ಕಾವಾಡಿಗಳ ಮಕ್ಕಳು Read More