ಪಹಲ್ಗಾಮ್ ಪ್ರವಾಸಿಗರ ಬಲಿ ಪಡೆದ ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರು ಅರೆಸ್ಟ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಮಂದಿ ಪ್ರವಾಸಿಗರನ್ನು ಬಲಿ ತೆಗೆದುಕೊಂಡಿದ್ದ ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ.

ಪರ್ವೈಜ್ ಅಹ್ಮದ್ ಜೋಥರ್ ಮತ್ತು ಬಶೀರ್ ಅಹ್ಮದ್ ಜೋಥರ್ ಎಂಬವರನ್ನು ಬಂಧಿಸಲಾಗಿದೆ.

ಇವರಿಬ್ಬರು ಪಹಲ್ಗಾಮ್ ನಿವಾಸಿಗಳಾಗಿದ್ದು, ನಿಷೇಧಿತ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ ಸಂಘಟನೆಗೆ ಸೇರಿದ ಮೂವರು ಉಗ್ರರಿಗೆ ಆಶ್ರಯ ನೀಡಿದ್ದರು.

ತನಿಖೆ ವೇಳೆ, ಬಂಧಿತರು ದಾಳಿಕೋರರ ಗುರುತುಗಳನ್ನು ಬಹಿರಂಗಪಡಿಸಿದ್ದು, ಉಗ್ರರು ಪಾಕಿಸ್ತಾನಿ ಪ್ರಜೆಗಳು ಎಂದು ದೃಢಪಟ್ಟಿದೆ.

ಆರೋಪಿಗಳ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.

ಏಪ್ರಿಲ್ 22 ರಂದು, ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ 26 ಜನರನ್ನು ಹತ್ಯೆಗೈದಿದ್ದರು.

ಪಹಲ್ಗಾಮ್ ಪ್ರವಾಸಿಗರ ಬಲಿ ಪಡೆದ ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರು ಅರೆಸ್ಟ್ Read More

ಪೆಹಲ್ಗಾಂ ಭಯೋತ್ಪಾದಕ ಕೃತ್ಯ ಖಂಡಿಸಿ ಮಹಾಜನ ಕಾನೂನು ಕಾಲೇಜಿನಿಂದ ಜಾಥಾ

ಮೈಸೂರು: ಮೈಸೂರಿನ ಎಸ್ ಬಿ ಆರ್ ಆರ್ ಮಹಾಜನ ಕಾನೂನು ಕಾಲೇಜಿನ ವತಿಯಿಂದ ಪೆಹಲ್ಗಾಂ ನಲ್ಲಿ ನಡೆದ ಘೋರ ಭಯೋತ್ಪಾದಕ ಕೃತ್ಯವನ್ನು ಖಂಡಿಸಿ ಶಾಂತಿಯುತ ಜಾಥಾ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಮಹಾಜನ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಡಾ. ಟಿ ವಿಜಯಲಕ್ಷ್ಮಿ ಮುರಳಿಧರ್, ಮಹಾಜನ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಸೌಮ್ಯಾ.ಕೆ, ಬೋಧಕ – ಬೋಧಕೇತರ ಸಿಬ್ಬಂದಿ ಹಾಗೂ ಕಾನೂನು ವಿದ್ಯಾರ್ಥಿಗಳು ಹಾಗೂ ಮಹಾಜನ ಅಂಗ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

ಮೈಸೂರಿನ ಜಯಲಕ್ಷ್ಮಿಪುರಂ ಹಾಗೂ ವಿ.ವಿ ಮೊಹಲ್ಲಾದ ಪೊಲೀಸ್ ಅಧಿಕಾರಿಗಳ ಸಹಯೋಗದೊಂದಿಗೆ ಕಾಲೇಜಿನ ಸುತ್ತಮುತ್ತಲ ಪ್ರಮುಖ ರಸ್ತೆಗಳಲ್ಲಿ ಜಾಥಾ ಯಶಸ್ವಿಯಾಗಿ ಕೈಗೊಂಡು ಸಮಾಜಕ್ಕೆ ಭಯೋತ್ಪಾದಕ ಕೃತ್ಯದ ತೀವ್ರತೆಯ ಬಗ್ಗೆ ಅರಿವು ಮೂಡಿಸಲಾಯಿತು.

ಪೆಹಲ್ಗಾಂ ಭಯೋತ್ಪಾದಕ ಕೃತ್ಯ ಖಂಡಿಸಿ ಮಹಾಜನ ಕಾನೂನು ಕಾಲೇಜಿನಿಂದ ಜಾಥಾ Read More

ಪಹಲ್ಗಾಮ್‌ ಜೊತೆ ನಾಲ್ಕು ತಾಣಗಳಲ್ಲಿ ದಾಳಿಗೆ ಪ್ಲ್ಯಾನ್ ಮಾಡಿದ್ದ ಉಗ್ರರು

ನವದೆಹಲಿ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಬಗ್ಗೆ ತನಿಖೆ ಪ್ರಾರಂಭಿಸಿದ ತನಿಖಾ ಸಂಸ್ಥೆಗಳಿಗೆ ಹಲವು ಶಾಕಿಂಗ್ ಅಂಶಗಳು ಗೊತ್ತಾಗಿದೆ.

ಭಯೋತ್ಪಾದಕರು ಪಹಲ್ಗಾಮ್‌ ಜೊತೆಗೆ ಇನ್ನೂ ನಾಲ್ಕು ತಾಣಗಳನ್ನು ಟಾರ್ಗೆಟ್‌ ಮಾಡಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ.

ಏಪ್ರಿಲ್ 22 ರಂದು 26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಯನ್ನು ನಡೆಸಿದ ಭಯೋತ್ಪಾದಕರು ಘಟನೆಗೆ ಎರಡು ದಿನಗಳ ಮೊದಲೇ ಬೈಸರನ್ ಕಣಿವೆಯಲ್ಲಿ ಇದ್ದರೆಂದು ತನಿಖೆ ವೇಳೆ ತಿಳಿದು ಬಂದಿದೆ.

ಬೈಸರನ್‌ ವ್ಯಾಲಿಯಲ್ಲಿ ದಾಳಿಗೂ ಮುನ್ನ ಉಗ್ರರು ಪರಿಶೀಲನೆ ನಡೆಸಿದ್ದರು. ದಾಳಿಗೆ ಪಕ್ಕಾ ಪ್ಲ್ಯಾನ್‌ ಮಾಡಿದ್ದರು ಎಂಬ ವಿಚಾರವನ್ನು ದಾಳಿಗೆ ಸಂಬಂಧಿಸಿದಂತೆ ಬಂಧಿತ ಓವರ್ ಗ್ರೌಂಡ್ ವರ್ಕರ್ ಗಳಲ್ಲಿ ಒಬ್ಬ ಸ್ಥಳೀಯ ಬಾಯ್ಬಿಟ್ಟಿದ್ದಾನೆ ಈತ ಉಗ್ರರಿಗೆ ಸಹಾಯ ಮಾಡಿದ್ದರಿಂದ ಬಂದನಕ್ಕೊಳಗಾಗಿದ್ದಾನೆ.

ಉಗ್ರರು ಪಹಲ್ಗಾಮ್ ಬೈಸರನ್ ವ್ಯಾಲಿ ಜೊತೆಗೆ ಅರು ವ್ಯಾಲಿ, ಸ್ಥಳೀಯ ಅಮ್ಯೂಸ್ ಮೆಂಟ್ ಪಾರ್ಕ್, ಬೇತಾಬ್ ವ್ಯಾಲಿ ಯನ್ನೂ ದಾಳಿಗೆ ಗುರಿಯಾಗಿಸಿದ್ದರು. ಆದರೆ, ಪಹಲ್ಗಾಮ್‌ನಲ್ಲಿ ಮಾತ್ರ ದಾಳಿ ಮಾಡಿದ್ದಾರೆ.

ಇದಕ್ಕೆ ಕಾರಣ ಪಹಲ್ಗಾಮ್ ಹೊರತುಪಡಿಸಿ ಉಳಿದ ಎಲ್ಲ ಕಡೆ ಬಿಗಿ ಭದ್ರತೆ ಇದ್ದುದು. ನಾಲ್ವರು ಸ್ಥಳೀಯರಿಂದ ಉಗ್ರರಿಗೆ ಸಹಾಯ ಸಿಕ್ಕಿತ್ತು. ಲಾಜಿಸ್ಟಿಕ್ ವ್ಯವಸ್ಥೆ ಮಾಡಿಕೊಡಲಾಗಿತ್ತು.

ಸ್ಥಳೀಯ 20 ಮಂದಿ ಉಗ್ರರಿಗೆ ಸಹಾಯ ಮಾಡಿದ್ದಾರೆ. ಇವರಲ್ಲಿ ಕೆಲವರನ್ನು ಬಂಧಿಸಿರುವ ಎನ್‌ಐಎ ಇನ್ನೂ ಕೆಲ ಶಂಕಿತರ ಮೇಲೆ ಕಣ್ಣಿರಿಸಿದೆ. ದಾಳಿಗೂ ಮುನ್ನ ಈ ಏರಿಯಾದಲ್ಲಿ ಮೂರು ಸ್ಯಾಟಲೈಟ್ ಫೋನ್‌ಗಳ ಬಳಕೆಯಾಗಿವೆ. ಇದರಲ್ಲಿ 2 ಫೋನ್‌ಗಳ ಸಿಗ್ನಲ್‌ ಟ್ರೇಸ್ ಮಾಡುವಲ್ಲಿ ತನಿಖಾ ತಂಡ ಯಶಸ್ವಿಯಾಗಿದೆ.

ಪಹಲ್ಗಾಮ್‌ ಜೊತೆ ನಾಲ್ಕು ತಾಣಗಳಲ್ಲಿ ದಾಳಿಗೆ ಪ್ಲ್ಯಾನ್ ಮಾಡಿದ್ದ ಉಗ್ರರು Read More

ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿ:ಅಮಿತ್ ಶಾ ವಿಷಾದ

ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಗೃಹ ಸಚಿವ ಅಮಿತ್ ಶಾ ಅವರಿಗೆ ದೂರವಾಣಿಯಲ್ಲಿ ಕರೆ ಮಾಡಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

ಉಗ್ರರ ದಾಳಿಯಲ್ಲಿ ಪ್ರವಾಸಕ್ಕೆ ತೆರಳಿದ್ದ 12 ಜನರಿಗೆ ಗಾಯಗಳಾಗಿದ್ದು,ಒಬ್ಬರು ಮೃತಪಟ್ಟಿದ್ದಾರೆ. ಮೃತರಾದ ವ್ಯಕ್ತಿ ಶಿವಮೊಗ್ಗದವರು ಎಂದು ತಿಳಿದುಬಂದಿದೆ.

ಕಾಶ್ಮೀರದ ಸೌಂದರ್ಯ ಸವಿಯಲು ತೆರಳಿದವರಿಗೆ ಈ ದಿನ ಅವರ ಜೀವನದ ಅತ್ಯಂತ ಕೆಟ್ಟ ದಿನವಾಗಿ ಪರಿವರ್ತನೆಯಾಗಿದೆ.

ಈ ಘಟನೆಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯಿಸಿದ್ದು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಿಂದ ದುಃಖಿತನಾಗಿದ್ದೇನೆ. ಮೃತರ ಕುಟುಂಬದವರೊಂದಿಗೆ ನಾವಿದ್ದೇವೆ ಎಂದು ಹೇಳಿದರು.

ಈ ಹೇಯ ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಸುಮ್ಮನೆ ಬಿಡಲಾಗುವುದಿಲ್ಲ. ಅವರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಇಂದು ಪಹಲ್ಗಾಮ್​ನಲ್ಲಿ ನಡೆದ ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಫೋನ್​ನಲ್ಲಿಯೇ ವಿವರಿಸಿದ್ದೇನೆ. ಸಂಬಂಧಿತ ಅಧಿಕಾರಿಗಳೊಂದಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಭೆ ನಡೆಸಿದ್ದೇನೆ. ಎಲ್ಲಾ ಸಂಸ್ಥೆಗಳೊಂದಿಗೆ ತುರ್ತು ಭದ್ರತಾ ಪರಿಶೀಲನಾ ಸಭೆ ನಡೆಸಲು ಶೀಘ್ರದಲ್ಲೇ ಶ್ರೀನಗರಕ್ಕೆ ತೆರಳುತ್ತೇನೆ ಎಂದು ಅಮಿತ್ ಶಾ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿರುವ ಬೈಸರನ್‌ನಲ್ಲಿರುವ ರೆಸಾರ್ಟ್ ಪ್ರದೇಶದಲ್ಲಿ ಭಯೋತ್ಪಾದಕರ ಗುಂಪು ದಾಳಿ ನಡೆಸಿತು. ಬೈಸರನ್ ಹುಲ್ಲುಗಾವಲಿನಲ್ಲಿ ಈ ದಾಳಿ ನಡೆದಿದೆ.

ಇದು ಕಾಲ್ನಡಿಗೆಯಲ್ಲಿ ಅಥವಾ ಕುದುರೆಗಳ ಮೇಲೆ ಮಾತ್ರ ತಲುಪಬಹುದಾದ ಒಂದು ಸುಂದರ ಸ್ಥಳವಾಗಿದ್ದು, ಆ ಸಮಯದಲ್ಲಿ ಪ್ರವಾಸಿಗರ ಗುಂಪು ಭೇಟಿ ನೀಡುತ್ತಿತ್ತು. ಕಾಶ್ಮೀರದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯ ಮಧ್ಯೆ ಈ ಘಟನೆ ನಡೆದಿದ್ದು ಆತಂಕ ವ್ಯಕ್ತವಾಗಿದೆ.

ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉನ್ನತ ಮಟ್ಟದ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಲ್ಲಿ ಅವರು ಜಮ್ಮು ವಿಭಾಗದ ಮೇಲೆ ವಿಶೇಷ ಗಮನ ಹರಿಸಿ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಆದೇಶಗಳನ್ನು ನೀಡಿದ್ದರು.ಇದರ ಬೆನ್ನಲ್ಲೇ ಈ ಘಟನೆ ನಡೆದಿದೆ.

ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿ:ಅಮಿತ್ ಶಾ ವಿಷಾದ Read More