ಜಂಬೂಸವಾರಿ ರಾಜಕಾರಣಿಗಳು, ಅಧಿಕಾರಿಗಳ ಹಬ್ಬವಾಗದಿರಲಿ:ಮಹೇಶ್

ಮೈಸೂರು: ವಿಶ್ವ ವಿಖ್ಯಾತ ದಸರಾ ಹಬ್ಬವೆಂದರೆ ಜಿಲ್ಲೆ, ರಾಜ್ಯ, ದೇಶ ವಿದೇಶಗಳು ಸಂಭ್ರಮಿಸುವ ಹಬ್ಬವೇ ಸರಿ ಅದರಲ್ಲೂ ಮೈಸೂರು ಸುತ್ತಮುತ್ತವಿರುವ ಜನರಿಗಂತೂ ಹತ್ತು ದಿನ ಸಂಭ್ರಮ , ಸಡಗರದ ಹಬ್ಬವಾಗಿದೆ.

ಮಹಾರಾಜರ ಕಾಲದಿಂದಲೂ ಈ ಹಬ್ಬವನ್ನ ಬಹಳ ವಿಜ್ರಂಭಣೆಯಿಂದ ಆಚರಿಸಿಕೊಳ್ಳುತ್ತಾ ಬಂದಿರುವುದು ಜಗಜ್ಜಾಹೀರ.

ಸರ್ಕಾರಗಳು ಬಂದ ನಂತರ ಪ್ರತಿಯೊಂದು ವರ್ಷವೂ ಸರ್ಕಾರಗಳು ಈ ಹಬ್ಬವನ್ನ ಬಹಳ ವಿಜ್ರಂಭಣೆಯಿಂದ ಆಚರಿಸಲು ಪ್ರಯತ್ನಿಸುತ್ತಿದೆ. ಇದನ್ನ ಕಣ್ಣುತುಂಬಿ ನೋಡದವರೇ ಇಲ್ಲ

ಆದರೆ ಇತ್ತೀಚಿನ ದಿನದಲ್ಲಿ ಈ ಹಬ್ಬವು ಸರ್ಕಾರಕ್ಕೇ ಮತ್ತು ಅಧಿಕಾರಿಗಳಿಗೆ ಸೀಮಿತವಾಗಿರುವಂತೆ ಕಾಣಿಸುತ್ತಿದೆ ಎಂದು
ಉದ್ಯಮಿ ಕೆ ಮಹೇಶ ಕಾಮತ್ ಹೇಳಿದ್ದಾರೆ.

ಏಕೆಂದರೆ ದಸರಾ ಉಧ್ಗಾಟಣೆಗೂ ಸಹ ಅರ್ಹರನ್ನು ಕರೆಯದೇ ತಮಗೆಲ್ಲೋ ಯಾವುದೋ ಕಾರಣಕ್ಕೆ ಸಹಾಯವಾದವರನ್ನೇ ಕರೆಯುವಂತಾಗಿದ್ದು ಕಂಡು ಬರುತ್ತದೆ ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಂಬೂ ಸವಾರಿ ಸಮಯದಲ್ಲೂ ಕೂಡ ಕೇವಲ ರಾಜಕಾರಣಿಗಳಿಗೋಸ್ಕರ ಏರ್ಪಡಿಸಿದಂತೆ ಕಾಣುತ್ತದೆ. ನಿಜವಾದ ಪ್ರವಾಸಿಗರಿಂದ ಹಣ ಪಡೆದು ಸಹ ಮೂಲೆ ಗುಂಪು ಮಾಡಿ ರಾಜಕಾರಣಿಗಳ ಕುಟುಂಬ ಹಾಗೂ ಚೇಲಾಗಳಿಗೆ ಎಲ್ಲಿಲ್ಲದ ಮಹತ್ವ ಕೊಟ್ಟಹಾಗೆ ಕಾಣಿಸುತ್ತಿದೆ. ಅಧಿಕಾರಿ ವರ್ಗದವರೂ ಸಹ ತಮ್ಮ ಕುಟುಂಬ ಹಾಗೂ ಪರಿಚಯಸ್ಥರಿಗೆ ಹೆಚ್ಚಿನ ಮಹತ್ವ ಕೊಟ್ಟಹಾಗೆ ಕಾಣಿಸುತ್ತಿದೆ ಎಂದು ಬೇಸರ‌ ವ್ಯಕ್ತಪಡಿಸಿದ್ದಾರೆ.

ಯುವ ದಸರಾ, ರೈತ ದಸರಾ, ವಸ್ತು ಪ್ರದರ್ಶನ, ಫಲ ಪುಷ್ಪ ಪ್ರಧರ್ಶನ , ಆಹಾರ ಮೇಳ ಹಾಗೂ ಇತರ ಕಾರ್ಯಕ್ರಮಕ್ಕೂ ಕೇವಲ ತಮಗೆ ಬೇಕಾಗಿರುವವರನ್ನು ನೇಮಿಸುವ ಕಾರಣ ಅವರು ಏನೇ ತಪ್ಪು ಮಾಡಿದರೂ ಕೇಳುವವರಿಲ್ಲ ಎಂಬಂತಾಗಿದೆ ಎಂದು ಮಹೇಶ್ ಕಾಮತ್ ಬೇಸರ ವ್ಯಕ್ತಪಡಿಸಿದ್ದಾರೆ.

ಜಂಬೂ ಸವಾರಿ ಪಾಸ್ ಗಳು ಕಾಳಸಂತೆಯಲ್ಲಿ ಮನಸಿಗೆ ಬಂದ ದರದಲ್ಲಿ ಮಾರಾಟಮಾಡಿದರೂ ಪೋಲೀಸರು ಮಾತ್ರ ಕಣ್ಣಿಗೆ ಬಟ್ಟೆ ಕಟ್ಟಕೊಂಡ ಹಾಗೆ ಇರುತ್ತಾರೆ. ಏಕೆಂದರೆ ಈ ಪಾಸ್ ಗಳು ಸಹ ರಾಜಕಾರಣಿಗಳ ಕಡೆಯವರೇ ಮಾರಾಟ ಮಾಡುತ್ತಾರೇನೋ ಅನಿಸುತ್ತಿದೆ.

ಪ್ರತೀ ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಜೊತೆ ಚರ್ಚಿಸಿ ಪ್ರತೀ ರಾಜ್ಯದವರಿಗೆ ಕರೆಸಿದರೆ ಈ ಕಾರ್ಯಕ್ರಮಕ್ಕೂ ಮೆರಗು ತರಬಹುದು ಎಂದು ಅವರು ಸಲಹೆ ನೀಡಿದ್ದಾರೆ.

ಇಂತಹ ಕೆಲಸವನ್ನು ಈ ಸರ್ಕಾರವೇ ಅರಿತು ಬದಲಾವಣೆ ತಂದರೆ ಇದೇ ಬದಲಾವಣೆಯನ್ನು ಮುಂದೆ ಎಲ್ಲಾ ಸರ್ಕಾರಗಳೂ ಮುಂದುವರಿಸಲಿ ಎಂದು ಆಶಿಸುತ್ತೇನೆ ಎಂದು ಕೆ ಮಹೇಶ ಕಾಮತ್ ಆಶಿಸಿದ್ದಾರೆ.

ಜಂಬೂಸವಾರಿ ರಾಜಕಾರಣಿಗಳು, ಅಧಿಕಾರಿಗಳ ಹಬ್ಬವಾಗದಿರಲಿ:ಮಹೇಶ್ Read More

ಗ್ರೊಮೋರ್ ಕಂಪನಿಯ ರಸಗೊಬ್ಬರದ ಅಂಗಡಿಯಲ್ಲಿ ದಿಢೀರ್ ತಪಾಸಣೆ

ಕೊಳ್ಳೇಗಾಲ,ಆ.1: ಉತ್ತರ ಕರ್ನಾಟಕ ಭಾಗದಲ್ಲಿ ಯೂರಿಯಾ ಕೃತಕ ಅಭಾವದಿಂದ ಉಂಟಾಗಿರುವ ಗಲಾಟೆ ಹಿನ್ನೆಲೆಯಲ್ಲಿ ಇಂದು ಪಟ್ಟಣದಲ್ಲಿರುವ ಗ್ರೊಮೋರ್ ಕಂಪನಿಯ ರಸಗೊಬ್ಬರದ ಅಂಗಡಿಯ ಮೇಲೆ ಕಾರ್ಯಾಚರಣೆ ನಡೆಯಿತು.

ಪೊಲೀಸರು ಹಾಗೂ ತಹಶೀಲ್ದಾರರು ಧಿಡೀರ್ ಜಂಟಿ ಕಾರ್ಯಾಚರಣೆ ನಡೆಸಿ ದಾಸ್ತಾನು ಪರಿಶೀಲಿಸಿದರು.

ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ಕೊಳ್ಳೇಗಾಲ ವೃತ್ತ ನಿರೀಕ್ಷಕ ಶಿವಮಾದಯ್ಯ ಹಾಗೂ ತಹಶೀಲ್ದಾರ್ ಬಸವರಾಜು ಅವರು ಕಾರ್ಯಾಚರಣೆ ನಡೆಸಿದರು.

ಮೊದಲಿಗೆ ಪಟ್ಟಣದ ರಾಮಸ್ವಾಮಿ ಬಡಾವಣೆಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗ್ರೊಮೊರ್ ಅಂಗಡಿಗೆ ಏಕಏಕಿ ನುಗ್ಗಿ ರಸ ಗೊಬ್ಬರಗಳ ದಾಸ್ತಾನು ಹಾಗೂ ಮಾರಾಟದ ಪುಸ್ತಕಗಳನ್ನು ಪರಿಶೀಲನೆ ನಡೆಸಿ,ನಂತರ ಅಂಗಡಿಗೆ ಸಂಬಂಧಿಸಿದ ಎರಡು ಗೋದಾಮುಗಳಿಗೆ ನುಗ್ಗಿ ಪರಿಶೀಲನೆ ನಡೆಸಿ, ರಸಗೊಬ್ಬರದ ದಾಸ್ತಾನು ಹಾಗೂ ದಾಸ್ತಾನು ಪುಸ್ತಕದಲ್ಲಿ ದಾಖಲಾಗಿರುವಂತೆ ವಿವಿಧ ಬಗೆಯ ಗೊಬ್ಬರಗಳ ಮೂಟೆಗಳನ್ನು ಪರಿಶೀಲಿಸಿದರು.

ಈ ವೇಳೆ ತಹಸೀಲ್ದಾರ್ ಬಸವರಾಜು ಅವರು ಗೋದಾಮಿನಲ್ಲಿ ದಸ್ತಾನಿರುವ ಯೂರಿಯಾ, ಅಮೋನಿಯಂ ಸಲ್ಫೇಟ್, ಪೊಟ್ಯಾಶಿಯಂ, ಡಿ.ಎಪಿ ಹಾಗೂ ಇನ್ನಿತರ ವಿವಿಧ ರಸಗೊಬ್ಬರಗಳು ದಾಸ್ತಾನಿರುವುದನ್ನು ಕಂಡು ಸ್ಥಳದಲ್ಲಿದ್ದ ಗ್ರೊಮೊರ್ ಕಂಪನಿಯ ಸಿಬ್ಬಂದಿಗಳನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಂಪನಿಯ ಪ್ರಭಾರ ವ್ಯವಸ್ಥಾಪಕ ನಂದನ್ ಕುಮಾರ್, ಕ್ಷೇತ್ರಪಾಲಕ ಬಾಲರಾಜು, ನಗದು ಗುಮಾಸ್ತ ಸುಭಾಷ್ ಗೋದಾಮಿನಲ್ಲಿರುವ ಗೊಬ್ಬರ ದಾಸ್ತಾನು ಹಾಗೂ ಮಾರಾಟದ ಕುರಿತು ಮಾಹಿತಿ ನೀಡಿದರು ಈ ವೇಳೆ ದಾಸ್ತಾನು ಪುಸ್ತಕದಲ್ಲಿ ದಾಖಲಾಗಿರುವಂತೆ ಗೋದಾಮಿನಲ್ಲಿರುವ ಗೊಬ್ಬರದ ದಾಸ್ತಾನಿನಲ್ಲಿ ಯಾವುದೇ ವ್ಯತ್ಯಾಸ ಕಂಡು ಬಾರದ ಹಿನ್ನೆಲೆಯಲ್ಲಿ ವಾಪಸ್ ತೆರಳಿದರು.

ಈ ವೇಳೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ವೃತ್ತ ನಿರೀಕ್ಷಕ ಶಿವಮಾದಯ್ಯ ಅವರು ಉತ್ತರ ಕರ್ನಾಟಕ ಭಾಗದಲ್ಲಿ ಯೂರಿಯಾ ಕೃತಕ ಅಭಾವದಿಂದ ಉಂಟಾಗಿರುವ ಗಲಾಟೆ ಹಿನ್ನೆಲೆಯಲ್ಲಿ
ಹಿರಿಯ ಅಧಿಕಾರಿಗಳ ನಿರ್ದೇಶನದ ಹಿನ್ನೆಲೆಯಲ್ಲಿ ಗೊಬ್ಬರದ ಅಂಗಡಿಗೆ ಭೇಟಿ ನೀಡಿ ತಪಾಸಣೆ ನಡೆಸಲಾಗಿದೆ. ಈ ವೇಳೆ ದಾಸ್ತಾನು ಪುಸ್ತಕದಲ್ಲಿ ದಾಖಲಾಗಿರುವಂತೆ ಗೋದಾಮಿನಲ್ಲಿರುವ ಗೊಬ್ಬರದ ದಾಸ್ತಾನಿನಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಗ್ರೊಮೋರ್ ಕಂಪನಿಯ ರಸಗೊಬ್ಬರದ ಅಂಗಡಿಯಲ್ಲಿ ದಿಢೀರ್ ತಪಾಸಣೆ Read More

ಸರ್ಕಾರಿ ಜಾಗ ಒತ್ತುವರಿ ಮಾಡಿ ಅಂಗಡಿ ಮನೆ‌ ನಿರ್ಮಿಸಿದ್ದವರಿಗೆ ಶಾಕ್

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ,ಜು.2: ಕೊಳ್ಳೇಗಾಲದ ಆರ್. ಎಂ.ಸಿ.ರಸ್ತೆಯಲ್ಲಿ ಸರ್ಕಾರಿ ಜಾಗ ವನ್ನು ಒತ್ತುವರಿ ಮಾಡಿಕೊಂಡು ವಾಸದ ಮನೆ ಅಂಗಡಿ, ಮುಂಗಟ್ಟು ನಿರ್ಮಿಸಿದ್ದವರಿಗೆ ಅಧಿಕಾರಿಗಳು ಬಿಸಿ ಮುಟ್ಟಿಸಿದರು.

ಇಂದು ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ತಹಸೀಲ್ದಾರ್ ಬಸವರಾಜು ಅವರ ನೇತೃತ್ವದಲ್ಲಿ ಜಂಟಿ ಕಾರ್ಯಚರಣೆ ನಡೆಸಿದದರು. 

ಸರ್ವೆ ನಂ.700 ಹಾಗೂ 708 ರಲ್ಲಿರುವ ಸರ್ಕಾರಿ ಜಾಗ ಮರಡಿಗುಡ್ಡವನ್ನು ಕೆಲವರು ಒತ್ತುವರಿ ಮಾಡಿ ವಾಸದ ಮನೆ, ಅಂಗಡಿ ನಿರ್ಮಿಸಿ ಸರ್ಕಾರದ ಎಲ್ಲಾ ಸೌಲಭ್ಯ ವನ್ನು ಪಡೆದುಕೊಂಡು ಕಳೆದ 30 ವರ್ಷಗಳಿಂದ ವಾಸ ಮಾಡುತ್ತಿದ್ದರು.

2023 ರಲ್ಲಿ ಭೀಮನಗರದ ಎಲ್.ನಾಗಣ್ಣ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿ ಅಕ್ರಮ ಒತ್ತುವರಿ ಮಾಡಿಕೊಂಡಿರುವ ಮರಡಿಗುಡ್ಡ ಸರ್ಕಾರಿ ಭೂಮಿಯನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯುವಂತೆ ಮನವಿ ಮಾಡಿದ್ದರು.

ಎಲ್.ನಾಗಣ್ಣನವರ ದೂರಿನ ಮೇರೆಗೆ ಈ ಪ್ರದೇಶದಲ್ಲಿ ಎಷ್ಟು ಮಂದಿ ಅಕ್ರಮ ಒತ್ತುವರಿ ಮಾಡಿ ಕೊಂಡು ವಾಸಮಾಡುತ್ತಿದ್ದಾರೆ ಎಂಬ ಬಗ್ಗೆ ನಗರಸಭೆಯಿಂದ ಮಾಹಿತಿ ಪಡೆದ ಲೋಕಾಯುಕ್ತ ಅಧಿಕಾರಿಗಳು ಕಳೆದ ಒಂದು ವರ್ಷದ ಹಿಂದೆ ಅಂದಿನ ತಹಶೀಲ್ದಾರ್ ರಿಗೆ ಅಕ್ರಮ ಒತ್ತುವರಿ ತೆರವುಗೊಳಿಸುವಂತೆ ಆದೇಶಿಸಿದ್ದರು.

ಈ ಹಿನ್ನೆಲೆಯಲ್ಲಿ ಹಿಂದಿನ ತಹಸೀಲ್ದಾರ್ ಮಂಜುಳಾ ಅವರು ಒತ್ತುವರಿ ತೆರವು ಕಾರ್ಯಚರಣೆಗೆ ಮುಂದಾದಾಗ ನಿವಾಸಿಗಳು ಶಾಸಕ ಎ.ಆರ್. ಕೃಷ್ಣಮೂರ್ತಿಯವರ ಮೊರೆ ಹೋಗಿ 6 ತಿಂಗಳ ಗಡುವು ಪಡೆದು ಕೊಂಡಿದ್ದರು.

ನಂತರ ಇತ್ತೀಚೆಗೆ ಲೋಕಾಯುಕ್ತ ಅಧಿಕಾರಿಗಳು ಅಕ್ರಮ ಒತ್ತುವರಿ ತೆರವುಗೊಳಿಸುವಂತೆ ಒತ್ತಡ ಹೇರಿದ್ದ ಕಾರಣ ಇಂದು ತಹಸೀಲ್ದಾರ್ ಬಸವರಾಜು ಅವರು ಪೊಲೀಸ್ ಇಲಾಖೆ, ಅರಣ್ಯ ಇಲಾಖೆಯ ಸಹಯೋಗದಲ್ಲಿ ಕಾರ್ಯಚರಣೆ ನಡೆಸಿದರು.

ಈ ವೇಳೆ ತಹಶೀಲ್ದಾರ್ ಹಾಗೂ ನಿವಾಸಿ ಗಳ ನಡುವೆ ಮಾತಿನ ಚಕಮಕಿ ನಡೆದು ಮತ್ತೆ 2 ದಿನ ಕಾಲಾವಕಾಶ ನೀಡುವಂತೆ ನಿವಾಸಿಗಳು ಒತ್ತಾಯಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್  ಬಸವರಾಜು ಅವರು ಈಗಾಗಲೇ 6 ತಿಂಗಳು ಗಡುವು ಪಡೆದು ಕೊಂಡಿದ್ದೀರಿ ಮತ್ತೆ ಗಡುವು ನೀಡಲು ಸಾಧ್ಯವಿಲ್ಲ.ಅಂಗಡಿ, ಮುಂಗಟ್ಟುಗಳನ್ನು ತೆರವುಗೊಳಿಸಲಾಗುವುದು.
ವಾಸದ ಮನೆಗಳಿಗೆ ಸ್ವಲ್ಪ ಕಾಲಾವಕಾಶ ನೀಡುಲಾಗುವುದು ಎಂದು ತೆರವು ಕಾರ್ಯಚರಣೆ ಮುಂದುವರಿಸಿದರು.

ಸರ್ಕಾರಿ ಜಾಗ ಒತ್ತುವರಿ ಮಾಡಿ ಅಂಗಡಿ ಮನೆ‌ ನಿರ್ಮಿಸಿದ್ದವರಿಗೆ ಶಾಕ್ Read More

ಬುದ್ದಿ ಕಲಿಯದ ನಗರಾಭಿವೃದ್ಧಿ ಪ್ರಾಧಿಕಾರ:ಮತ್ತೊಂದು ಭ್ರಷ್ಟಾಚಾರ ಮಾಡಿದ ಮುಡಾ

ಮೈಸೂರು: ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಎಂಬ ಆರೋಪಗಳು ಸಾರ್ವಜನಿಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ.

ಭ್ರಷ್ಟಾಚಾರದ ಸರಮಾಲೆಗಳನ್ನ ಹೊತ್ತು ಇಡಿ,ಲೋಕಾಯುಕ್ತ ಕಂಗೆಣ್ಣಿಗೆ ಗುರಿಯಾಗಿದ್ದರೂ ಮುಡಾ ಅಧಿಕಾರಿಗಳು ಬುದ್ದಿ ಕಲಿತಿಲ್ಲ.

ನೂರಾರು ಪ್ರಕರಣಗಳು ಬಯಲಿಗೆ ಬಂದು ಸರ್ಕಾರಕ್ಕೆ ಮುಜುಗರ ತಂದಿರುವ ಮುಡಾ ಮತ್ತೊಂದು ಭ್ರಷ್ಟಾಚಾರಕ್ಕೆ ಎಡೆ ಮಾಡಿದೆ.

ಮರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿದ್ದ ಮನೆಯನ್ನ ಲಪಟಾಯಿಸಲು ನಕಲಿ ದಾಖಲೆ ಸೃಷ್ಟಿಸಲು ಭಾರಿ ಗೋಲ್ ಮಾಲ್ ನಡೆಸಿದ ಅಧಿಕಾರಿಗಳು ವಂಚಕರ ಜೊತೆ ಕೈ ಜೋಡಿಸಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಲು ವಂಚಕನ ಜೊತೆ ಕೈ ಜೋಡಿಸಿದ ಆರೋಪದ ಹಿನ್ನಲೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ವ್ಯವಸ್ಥಾಪಕ ಸೋಮಸುಂದ್ರು ಅವರನ್ನು ಅಮಾನತು ಮಾಡಲಾಗಿದೆ.

ಮುಡಾ ಆಯುಕ್ತ ಎ.ಎನ್.ರಘುನಂದನ್ ಅವರು ಅಮಾನತು ಮಾಡಿ ಈ ಆದೇಶ ಹೊರಡಿಸಿದ್ದಾರೆ.

ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ದಾಖಲೆ ಸಮೇತ ನೀಡಿದ ದೂರಿನ ಹಿನ್ನಲೆಯಲ್ಲಿ ಪರಿಶೀಲನೆ ನಡೆಸಿದ ಕಾರ್ಯದರ್ಶಿ ಪ್ರಸನ್ನ ಕುಮಾರ್ ನೀಡಿದ ವರದಿ ಆಧಾರದ ಮೇಲೆ ಆಯುಕ್ತರು ಮೇಲ್ನೋಟಕ್ಕೆ ಆರೋಪ ಸಾಬೀತಾದ ಕಾರಣ ಈ ಕ್ರಮ ಕೈಗೊಂಡಿದ್ದಾರೆ.

ಗೋಕುಲಂ 3 ನೇ ಹಂತ ಮಾದರಿ ಮನೆ ನಂ.867 ರ 30*40 ವಿಸ್ತೀರ್ಣದ ಸ್ವತ್ತು ಶ್ರೀಮತಿ ಲಿಲಿಯನ್ ಶಾರದಾ ಜೋಸೆಫ್ ರವರಿಗೆ 2-11-1982 ರಲ್ಲಿ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ಮಂಜೂರಾಗಿದ್ದು ಕರಾರು ಪತ್ರ ನೀಡಲಾಗಿದೆ.

ಆದರೆ ಹಕ್ಕು ಪತ್ರ ವಿತರಣೆ ಆಗಿರುವುದಿಲ್ಲ.ಲಿಲಿಯನ್ ಶಾರದಾ ಜೋಸೆಫ್ ರವರು 3-09-1983 ರಂದು ಮೃತಪಟ್ಟಿದ್ದಾರೆ

ಸದರಿ ಸ್ವತ್ತು 6-04-2025 ರವರೆಗೂ ಪ್ರಾಧಿಕಾರದಿಂದ ಯಾರಿಗೂ ವರ್ಗಾವಣೆ ಆಗಿರುವುದಿಲ್ಲ.26-03-2024 ರಂದು ಲಿಲಿಯನ್ ಶಾರದಾ ಜೋಸೆಫ್ ಅವರ ಕ್ರಮಬದ್ದ ವಾರಸುದಾರರಲ್ಲದ ವ್ಯಕ್ತಿಗೆ ಅಂದರೆ ನೆವಿಲ್ ಮಾರ್ಕಸ್ ಜೋಸೆಫ್ ಗೆ ಪೌತಿ ಖಾತೆ ಮಾಡಿಕೊಟ್ಟು ಭಾರಿ ಗೋಲ್ ಮಾಲ್ ಮಾಡಲಾಗಿದೆ.

ಕ್ರಮಬದ್ದವಾಗಿ ವಂಶವೃಕ್ಷ ಪಡೆಯದೆ ನಕಲಿ ದಾಖಲೆ ಸೃಷ್ಟಿಸಿ ನಕಲಿ ವಾರಸುದಾರರಿಗೆ ಪೌತಿಖಾತೆ ಮಾಡಲಾಗಿದೆ.ಪೌತಿಖಾತೆ ಮಾಡಲು ಮನಸೋ ಇಚ್ಛೆ ಕಚೇರಿ ಟಿಪ್ಪಣಿಗಳನ್ನ ಸೃಷ್ಟಿಸಲಾಗಿದೆ.

ಅಲ್ಲದೆ ಬಿಟ್ ಆಫ್ ಲ್ಯಾಂಡ್ ಸಹ ಮಂಜೂರು ಮಾಡಿ ಹಕ್ಕುಪತ್ರ ನೀಡಿದ್ದಾರೆ.ಅಕ್ರಮವಾಗಿ ಪಡೆದ ಮನೆಗೆ ನೆವಿಲ್ ಮಾರ್ಕಸ್ ಜೋಸೆಫ್ ಅವರು ಈಗಾಗಲೇ ವಲಯ ಕಚೇರಿ 4 ರಲ್ಲಿ ಖಾತೆ ಮಾಡಿಸಿಕೊಂಡು ಮಮತ ಹಾಗೂ ಶ್ಯಾಂ ಎಂಬುವರಿಗೆ ಕೋಟ್ಯಾಂತರ ರೂಗಳಿಗೆ ಮಾರಾಟ ಮಾಡಿದ್ದಾರೆ.

ಈ ಅಕ್ರಮದ ಬಗ್ಗೆ ಬಿ.ಎನ್.ನಾಗೇಂದ್ರ ರವರು ಲೋಕಾಯುಕ್ತ ಹಾಗೂ ಮುಡಾ ಆಯುಕ್ತರಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.

ದಾಖಲೆಗಖನ್ನ ಪರಿಶೀಲಿಸಿದಾಗ ವ್ಯವಸ್ಥಾಪಕ ಸೋಮಸುಂದ್ರು ಹಾಗೂ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ಸದರಿ ನಿವೇಶನಕ್ಕೆ ಆಯುಕ್ತರ ಆದೇಶ ಮೀರಿ ತಮ್ಮ ಹಂತದಲ್ಲಿಯೇ ತಿದ್ದುಪಡಿ ಕ್ರಯಪತ್ರ ನೀಡಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು ಸಾಬೀತಾಗಿದೆ.

ತಪ್ಪು ಎಸಗಿದ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮ ಕೈಗೊಳ್ಳುವಂತೆ ಮುಡಾ ಕಾರ್ಯದರ್ಶಿಗಳಾದ ಪ್ರಸನ್ನಕುಮಾರ್ ಅವರು ಆಯುಕ್ತರಿಗೆ ನೀಡಿರುವ ವರದಿ ಆಧಾರದ ಮೇಲೆ ಸೋಮಸುಂದ್ರು ಅವರನ್ನ ಅಮಾನತುಗೊಳಿಸಲಾಗಿದೆ.

ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಮುಡಾ ಆಯುಕ್ತರು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.ಸರ್ಕಾರ ಶಿಸ್ತು ಕ್ರಮ ಕೈಗೊಳ್ಳುವುದೆ ಎಂಬುದನ್ನ ಕಾದು ನೋಡಬೇಕಿದೆ.

ಬುದ್ದಿ ಕಲಿಯದ ನಗರಾಭಿವೃದ್ಧಿ ಪ್ರಾಧಿಕಾರ:ಮತ್ತೊಂದು ಭ್ರಷ್ಟಾಚಾರ ಮಾಡಿದ ಮುಡಾ Read More

ಸೆರ್ವೆ ಮಾಡಲು ಬಂದ ಅಧಿಕಾರಿಗಳಿಗೆ ಮೊಚ್ಚು ತೋರಿಸಿ, ಬೆಂಕಿ ಉಗುಳಿ ಬೆದರಿಕೆ

ಮೈಸೂರು: ಜಮೀನು ಸರ್ವೆ ಮಾಡಲು ಬಂದ ಅಧಿಕಾರಿಗಳಿಗೆ ಮೊಚ್ಚು ತೋರಿಸಿ ಬೆಂಕಿ ಉಗುಳಿ ಬೆದರಿಸಿದ ಘಟನೆ ಜಿಲ್ಲೆಯ ಹುಣಸೂರು ತಾಲೂಕು ಹನಗೋಡು ಹೋಬಳಿಯಲ್ಲಿ ನಡೆದಿದೆ.

ಶಿಂಡೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಲವ ಎಂಬಾತ ಮೊಚ್ಚು ತೋರಿಸಿ ಬೆಂಕಿ ಉಗುಳಿ ಬೆದರಿಸಿದ್ದಾನೆ.

ಸರ್ವೆ ಅಧಿಕಾರಿಗಳ ಜೊತೆ ಪೊಲೀಸರು ಇದ್ದರೂ ಈತ ಬೆದರಿಸಿದ್ದಾನೆ,ಈತ ಬೆಂಕಿ ಉಗುಳಿ ಬೆದರಿಕೆ ಹಾಕಿರುವ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ.

ಹುಣಸೂರು ತಾಲೂಕು ಹನಗೋಡು ಹೋಬಳಿ ಶಿಂಡೇನಹಳ್ಳಿ ಗ್ರಾಮದ ಸರ್ವೆ ನಂ.66/12 ರ 4 ಎಕರೆ 3 ಗುಂಟೆ ಜಮೀನು ವಿವಾದವಿದ್ದು ನ್ಯಾಯಾಲಯದ ಮೆಟ್ಟಿಲೇರಿದೆ.

ಮಂಗಳವಾರಮ್ಮ ಹಾಗೂ ಲವ,ಕುಶ ಎಂಬುವರ ನಡುವೆ ವಿವಾದ ನಡೆದಿದ್ದು ಕೆಲವು ದಿನಗಳ ಹಿಂದೆ ಮಂಗಳವಾರಮ್ಮ ಪರವಾಗಿ ತೀರ್ಪು ನೀಡಲಾಗಿದೆ.ಹಾಗಾಗಿ ಜಮೀನು ಸರ್ವೆ ನಡೆಸಿ ರಕ್ಷಣೆ ಮಾಡಿಕೊಡುವಂತೆ ಸರ್ವೆ ಅಧಿಕಾರಿಗಳಿಗೆ ಎಸಿ ನ್ಯಾಯಾಲಯದಲ್ಲಿ ಆದೇಶವಾಗಿದೆ.

ಈ ಆದೇಶದ ಹಿನ್ನೆಲೆಯಲ್ಲಿ ಸರ್ವೆ ಮಾಡಲು ಬಂದ ಅಧಿಕಾರಿಗಳ ಮೇಲೆ ಆವಾಜ್ ಹಾಕಿ ಹಿಂದೆ ಕಳಿಸಿದ ಪ್ರಕರಣಗಳೂ ನಡೆದಿವೆ.

ಸೂಕ್ತ ಪೊಲೀಸ್ ಬಂದೋ ಬಸ್ತ್ ನಡುವೆ ಎಡಿಎಲ್ ಆರ್ ಮಹಮದ್ ಹುಸೇನ್,ಸರ್ವೆ ಅಧಿಕಾರಿಗಳಾದ ಕುಮಾರ್,ಮಂಜು ಅವರು ಬಂದಾಗ ಲವ ಮೊಚ್ಚು ಸಮೇತ ಬಂದು ಬೆದರಿಕೆ ಹಾಕಿದ್ದಾನೆ.

ಪೊಲೀಸ್ ಸಿಬ್ಬಂದಿಗಳಿದ್ದರೂ ಕೇರ್ ಮಾಡದೆ ಆವಾಜ್ ಹಾಕಿದ್ದಲ್ಲದೆ ಸೀಮೆಣ್ಣೆ ಕುಡಿದು ಬೆಂಕಿ ಉಗುಳಿ ಬೆದರಿಕೆ ಹಾಕಿದ್ದಾನೆ.

ಪೊಲೀಸರು ಮಧ್ಯ ಪ್ರವೇಶಿಸಿ ಲವ ಕೈಲಿದ್ದ ಮೊಚ್ಚು ವಶಪಡಿಸಿಕೊಂಡಿದ್ದಾರೆ.ಲವ ನಿಗೆ ಕೆಂಡ,ಹರೀಶ,ಸೋಮೇಗೌಡ ಸಹಕರಿಸಿದ್ದಾರೆ.

ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನಲೆ ದೂರು ದಾಖಲಿಸುವಂತೆ ಸೂಚಿಸಲಾಗಿದೆ.

ಸೆರ್ವೆ ಮಾಡಲು ಬಂದ ಅಧಿಕಾರಿಗಳಿಗೆ ಮೊಚ್ಚು ತೋರಿಸಿ, ಬೆಂಕಿ ಉಗುಳಿ ಬೆದರಿಕೆ Read More

ಅಧಿಕಾರಿಗಳಿಗೆ ಚಳಿ ಬಿಡಿಸಿದ ಸಿದ್ದರಾಮಯ್ಯ

ಬೆಂಗಳೂರು: ವಿಧಾನಸೌಧದ ಸಮ್ಮೇಳನ‌ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಚಳಿ ಬಿಡಿಸಿದರು.

ದೇವದಾಸಿ ಪದ್ಧತಿ ನಿಷೇಧ ಆಗಿದೆ. ಎಲ್ಲಿಯಾದರೂ ನಡೆದದ್ದು ಗಮನಕ್ಕೆ ಬಂದರೆ ಜಿಲ್ಲಾಧಿಕಾರಿ ಗಳು ಮತ್ತು ‌ಪೊಲೀಸ್‌ ವರಿಷ್ಟಾಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಠಿಣ ಎಚ್ಚರಿಕೆ ನೀಡಿದರು.

ಜಾತಿ ದೌರ್ಜನ್ಯ ಪ್ರಕರಣಗಳಲ್ಲಿ ಆರೋಪಿಗಳಿಗೆ ಸಲೀಸಾಗಿ ಬೇಲ್ ಸಿಕ್ಕರೆ ಅದು ನಿಮ್ಮ ದೌರ್ಬಲ್ಯ,
ಗಂಭೀರ ಪ್ರಕರಣಗಳಲ್ಲಿ ಆರೋಪಿಗಳಿಗೆ ಸಲೀಸಾಗಿ ಜಾಮೀನು ಸಿಕ್ಕರೆ, ಮೇಲ್ಮನವಿ ಹೋಗಿ ಜಾಮೀನು ರದ್ದುಪಡಿಸಿ ಆರೋಪಿಗೆ ಶಿಕ್ಷೆ ಕೊಡಿಸಿದ ಪ್ರಕರಣಗಳು ಎಷ್ಟಿವೆ ವಿವರ ಕೊಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪೊಲೀಸ್ ಇಲಾಖೆಯಲ್ಲಿ ಸೀನಿಯರಿಟಿ ಲಿಸ್ಟ್ ಉಲ್ಲಂಘನೆ ಆಗಿ ಪರಿಶಿಷ್ಠರಿಗೆ ಅನ್ಯಾಯ ಆಗುತ್ತಿದೆ. ಸಮಿತಿ ಮುಂದೆ ದೂರು ಬಂದು ಹಿರಿಯ ಅಧಿಕಾರಿಗಳ ಗಮನಕ್ಕೂ ತಂದರೂ ಸಮಸ್ಯೆ ಬಗೆಹರಿಸುತ್ತಿಲ್ಲ ಏಕೆ ಎಡಿಜಿಪಿ ಅಡ್ಮಿನ್ ಸರಿಯಾಗಿ ನಡೆದುಕೊಳ್ಳುತ್ತಿಲ್ಲ ಎಂದು ಸಂಸದ ಈ.ತುಕಾರಾಮ್ ಮತ್ತು ಶಾಸಕ ನರೇಂದ್ರಸ್ವಾಮಿ ಸಿಎಂ ಗಮನಕ್ಕೆ ತಂದರು.

ಆಗ ಅಸಮಾಧಾನಗೊಂಡ ಸಿಎಂ ಈ ವಿಚಾರವನ್ನು ಮುಂದಿನ ಕ್ಯಾಬಿನೆಟ್ ಗೆ ತರುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಸಿದ್ದರಾಮಯ್ಯ ಸೂಚಿಸಿದರು.

ಬ್ಯಾಕ್ ಲಾಗ್ ಮತ್ತು ಬಡ್ತಿ ವಿಚಾರದಲ್ಲಿ ಆಗುತ್ತಿರುವ ಅನ್ಯಾಯಗಳನ್ನು ಸಬ್ ಕಮಿಟಿ ಪತ್ತೆ ಹಚ್ಚಿ ಸಮಸ್ಯೆಗಳನ್ನು ನಿಮ್ಮ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಸದೆ ನಿರ್ಲಕ್ಷ್ಯ ತೋರಿಸುತ್ತಿದ್ದೀರಿ. ಹಾಗಾದರೆ ಸಬ್ ಕಮಿಟಿ ಕೊಡುವ ವರದಿಗಳಿಗೆ ಬೆಲೇನೆ ಇಲ್ಲವೇ ಎಂದು ವಿಧಾನ ಪರಿಷತ್ ಸದಸ್ಯ ಸುಧಾಮ್ ದಾಸ್ ಗಮನ ಸೆಳೆದರು.

ಎಲ್ಲಾ ಇಲಾಖೆಗಳೂ ಬಡ್ತಿಯಲ್ಲಿ ಮೀಸಲಾತಿಯನ್ನು ಚಾಚೂ ತಪ್ಪದೆ ಪಾಲಿಸಬೇಕು ಎಂದು ಸಿಎಂ ಸೂಚಿಸಿದರು.

ಅಲ್ಲದೆ ಇಲಾಖಾವಾರು ಮುಂಬಡ್ತಿಯಲ್ಲಿ ಆಗಿರುವ ಅನ್ಯಾಯಗಳ ಬಗ್ಗೆ ಪರಿಶೀಲಿಸಲು ಪ್ರತ್ಯೇಕ ರಿವ್ಯೂವ್ ಮೀಟಿಂಗ್ ಕರೆಯಿರಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚಿಸಿದರು.

ಪ್ರತೀ ಆರು ತಿಂಗಳಿಗೊಮ್ಮೆ ಉಸ್ತುವಾರಿ ಸಮಿತಿ ಸಭೆಯನ್ನು ಕಡ್ಡಾಯವಾಗಿ ಕರೆಯುತ್ತೇವೆ,ಅದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಂಡು ಬಂದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯ ಮಂತ್ರಿಗಳು ಎಚ್ಚರಿಸಿದರು.

ರಾಯಚೂರಿನ‌ ಅಂಬೇಡ್ಕರ್ ವೃತ್ತದಲ್ಲಿ ಪ್ರಗತಿಪರ ಸಂಘಟನೆಗಳ ಕ್ರಿಯಾ ಸಮಿತಿ ಅಡಿಯಲ್ಲಿ ನಡೆಯುತ್ತಿರುವ ಮಹಿಳೆಯರ ಅಹೋರಾತ್ರಿ ಧರಣಿ ವಿಚಾರದ ಬಗ್ಗೆ ಇದೇ ವೇಳೆ ಪ್ರಸ್ತಾಪಿಸಿದರು

ದೇವದಾಸಿ ಸಮಸ್ಯೆ ಮತ್ತು ಪುನರ್ವಸತಿ ಬಗ್ಗೆ ಸಮಗ್ರ ವರದಿ ಸಿದ್ದಪಡಿಸಲು ಮುಖ್ಯ ಕಾರ್ಯದರ್ಶಿಗಳಿಗೆ ಸಿಎಂ ಆದೇಶಿಸಿದರು

ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಹಕ್ಕು ಪತ್ರ ಸಮರ್ಪಕವಾಗಿ ನೀಡಬೇಕು. ಯಾವುದೇ ಕಾರಣಕ್ಕೂ ಅರಣ್ಯವಾಸಿಗಳನ್ನು ಕಾಡಿನಿಂದ ಹೊರಗೆ ಹಾಕಬಾರದು ಎಂದು ಸಿದ್ದರಾಮಯ್ಯ ಕಡಕ್ ಆದೇಶ ನೀಡಿದರು.

ಅಧಿಕಾರಿಗಳಿಗೆ ಚಳಿ ಬಿಡಿಸಿದ ಸಿದ್ದರಾಮಯ್ಯ Read More

1.50 ಕೋಟಿ ಹಣ ಪಡೆದನಾಲ್ವರು ಜಿ ಎಸ್ ಟಿ ಅಧಿಕಾರಿಗಳ ಬಂಧನ

ಬೆಂಗಳೂರು: ಬೆಂಗಳೂರಿನಲ್ಲಿ ನಾಲ್ವರು ಜಿಎಸ್ ಟಿ ಅಧಿಕಾರಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೇಸ್ ಒಂದನ್ನು ಮುಚ್ಚಿ ಹಾಕಲು 1.50 ಕೋಟಿ ಹಣ ಪಡೆದಿದ್ದ ಜಿಎಸ್ ಟಿ ಅಧಿಕಾರಿಗಳು ನಂತರ ನಾಪತ್ತೆ ಆಗಿದ್ದರು. ಉದ್ಯಮಿ ಕೇಶವ್ ತಕ್ ಈ ಬಗ್ಗೆ ಬೈಯ್ಯಪ್ಪನಹಳ್ಳಿ ಠಾಣೆಗೆ ದೂರು ನೀಡಿದ್ದರು.

ಕಾರ್ಯಾಚರಣೆ ನಡೆಸಿದ ಪೊಲೀಸರು, ಮಹಿಳಾ ಅಧಿಕಾರಿ ಸೇರಿದಂತೆ ನಾಲ್ವರು ಜಿಎಸ್ ಟಿ ಅಧಿಕಾರಿಗಳನ್ನು ಬಂಧಿಸಿದ್ದಾರೆ.

ಕೇಂದ್ರ ಗುಪ್ತದಳದ ಮಹಿಳಾ ಅಧಿಕಾರಿ ಸೇರಿದಂತೆ, ಸೀನಿಯರ್ ಇಂಟಲಿಜನ್ಸ್ ಆಫೀಸರ್ ಮನೋಜ್ ಸೈನಿ, ಅಧೀಕ್ಷಕ ಅಭಿಷೇಕ್, ಸಿನೀಯರ್ ಇಂಟಲಿಜನ್ಸ್ ಆಫೀಸರ್ ನಾಗೇಶ್ ಬಂಧಿತ ಅಧಿಕಾರಿಗಳು.

ಸುಮಾರು ನಾಲ್ಕೈದು ಮಂದಿ ತನ್ನನ್ನು ಕರೆದುಕೊಂಡು ಹೋಗಿ ಅಪಾರ ಪ್ರಮಾಣದ ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದ್ದ ಉದ್ಯಮಿ 1.5 ಕೋಟಿ ರೂ.ಗಳನ್ನು ಪಡೆದು ಬಿಟ್ಟುಕಳಿಸಿದರೆಂದು ಹೇಳಿದ್ದಾರೆ.

1.50 ಕೋಟಿ ಹಣ ಪಡೆದನಾಲ್ವರು ಜಿ ಎಸ್ ಟಿ ಅಧಿಕಾರಿಗಳ ಬಂಧನ Read More