ಬುಲ್ಡೋಜರ್ ನ್ಯಾಯ ಕಾನೂನುಬಾಹಿರ;ಸುಪ್ರೀಂ ತೀರ್ಪು

ನವದೆಹಲಿ: ಬುಲ್ಡೋಜರ್ ನ್ಯಾಯ ಕಾನೂನುಬಾಹಿರ. ಕ್ರಿಮಿನಲ್ ಕೃತ್ಯಗಳು, ಆರೋಪಗಳು ಅಥವಾ ಅಪರಾಧಗಳ ಕಾರಣಕ್ಕೆ ಆಸ್ತಿಗಳನ್ನು ಕೆಡವಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.

ಉತ್ತರ ಪ್ರದೇಶದ ಬುಲ್ಡೋಜರ್ ನ್ಯಾಯದ ಸಾಂವಿಧಾನಿಕ ಸಿಂಧುತ್ವದ ಕುರಿತು ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್,
ಬುಲ್ಡೋಝರ್ ನ್ಯಾಯ ಅಸಂವಿಧಾನಿಕ ಎಂದು ಹೇಳಿದೆ.

ಕಾರ್ಯಾಂಗ ನ್ಯಾಯಾಧೀಶರಾಗಲು ಸಾಧ್ಯವಿಲ್ಲ. ನ್ಯಾಯದ ಹೆಸರಿನಲ್ಲಿ ಆರೋಪಿಯನ್ನು ಅಪರಾಧಿ ಎಂದು ಘೋಷಿಸಲು ಮತ್ತು ಅವರ ಮನೆಯನ್ನು ಕೆಡುವುದು ಅಸಂವಿಧಾನಿಕ ಎಂದು ತಿಳಿಸಿದೆ.

ಬುಲ್ಡೋಝರ್ ಕ್ರಮಕ್ಕೆ ಬ್ರೇಕ್ ಹಾಕುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ, ಕಾರ್ಯಾಂಗದ ಪ್ರತಿನಿಧಿಗಳು ಒಬ್ಬ ವ್ಯಕ್ತಿಯನ್ನು ಅಪರಾಧಿ ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

ರಾಜ್ಯ ಮತ್ತು ಅಧಿಕಾರಿಗಳು ನಿರಂಕುಶ ಮತ್ತು ಅತಿಯಾದ ಕ್ರಮಗಳನ್ನು ತೆಗೆದುಕೊಳ್ಳುವಂತಿಲ್ಲ. ಪೂರ್ವಭಾವಿ ಶೋಕಾಸ್ ನೋಟಿಸ್ ನೀಡದೆ ಮತ್ತು ನೋಟಿಸ್ ಜಾರಿ ಮಾಡಿದ 15 ದಿನಗಳ ಒಳಗಾಗಿ ಯಾವುದೇ ಕಟ್ಟಡವನ್ನು ಕೆಡವಬಾರದು ಎಂದು ಸೂಚಿಸಿದೆ.

ಮನೆಗಳನ್ನು ನೆಲಸಮ ಮಾಡಿರುವುದರ ಬಗ್ಗೆ ತೀವ್ರ ಅಸಮಧಾನ ವ್ಯಕ್ತಪಡಿಸಿರುವ ಕೋರ್ಟ್‌, ರಾತ್ರೋರಾತ್ರಿ ಮಹಿಳೆಯರು, ಮಕ್ಕಳು ಬೀದಿಯಲ್ಲಿ ನಿಲ್ಲುವುದು ಒಳ್ಳೆಯ ವಿಚಾರವಲ್ಲ ಎಂದು‌ ಹೇಳಿದೆ.

ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ಮತ್ತು ಕೆ.ವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.

ಕೇವಲ ಆರೋಪವನ್ನು ಆಧರಿಸಿ, ಅವನ ಮನೆಯನ್ನು ಕೆಡವಿದರೆ, ಅದು ಕಾನೂನಿನ ಮೂಲ ತತ್ವಕ್ಕೆ ಧಕ್ಕೆ ಉಂಟು ಮಾಡುತ್ತದೆ. ಕಾರ್ಯಾಂಗದ ಪ್ರತಿನಿಧಿಗಳು ನ್ಯಾಯಾಧೀಶರಾಗಲು ಮತ್ತು ಆರೋಪಿಯ ಆಸ್ತಿಯನ್ನು ಕೆಡವುವ ಬಗ್ಗೆ ನಿರ್ಧರಿಸಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ಬುಲ್ಡೋಜರ್ ನ್ಯಾಯ ಕಾನೂನುಬಾಹಿರ;ಸುಪ್ರೀಂ ತೀರ್ಪು Read More

ಭಾರತದ 51ನೇ ಮುಖ್ಯ ನ್ಯಾಯಮೂರ್ತಿ ನ್ಯಾ.ಸಂಜೀವ್ ಖನ್ನಾ ಪ್ರಮಾಣ ವಚನ

ನವದೆಹಲಿ: ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಭಾರತದ 51 ನೇ ಮುಖ್ಯ ನ್ಯಾಯಮೂರ್ತಿಯಾಗಿ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾ.ಖನ್ನಾ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ನ್ಯಾ.ಖನ್ನಾ ಅವರ ಹೆಸರನ್ನು ನ್ಯಾ.ಡಿ.ವೈ ಚಂದ್ರಚೂಡ್ ಅವರು ಶಿಫಾರಸು ಮಾಡಿದ್ದರು.

ನ್ಯಾ.ಖನ್ನಾ ಅವರು ಮುಂದಿನ ವರ್ಷ ಮೇ 13 ರವರೆಗೆ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ನ್ಯಾ.ಚಂದ್ರಚೂಡ್ ಅವರು ನ.10 ರಂದು ನಿವೃತ್ತರಾಗಿದ್ದಾರೆ.

ಪ್ರಮಾಣವಚನ ಸ್ವೀಕಾರದ ವೇಳೆ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನ್ ಕರ್, ಸಚಿವರುಗಳಾದ ರಾಜನಾಥ್ ಸಿಂಗ್, ಕಿರಣ್ ರಿಜಿಜು, ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಉಪಸ್ಥಿತರಿದ್ದರು.

ಭಾರತದ 51ನೇ ಮುಖ್ಯ ನ್ಯಾಯಮೂರ್ತಿ ನ್ಯಾ.ಸಂಜೀವ್ ಖನ್ನಾ ಪ್ರಮಾಣ ವಚನ Read More

ನ. 25 ರಿಂದ ಚಳಿಗಾಲದ ಸಂಸತ್ ಅಧಿವೇಶನ: ವಕ್ಫ್ ಮಸೂದೆ ಮಂಡನೆ ಸಾಧ್ಯತೆ

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ನ. 25ರಿಂದ ಡಿಸೆಂಬರ್ 20 ರವರೆಗೆ ನಡೆಯಲಿದೆ.

ಅಧಿವೇಶನದ ಸಮಯದಲ್ಲಿ, ದೇಶಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಒಂದು ರಾಷ್ಟ್ರ ಒಂದು ಚುನಾವಣೆ ಮತ್ತು ವಕ್ಫ್ ಮಸೂದೆಗಳನ್ನು ಮಂಡಿಸುವ ಸಾಧ್ಯತೆ ಇದೆ.

ನವೆಂಬರ್ 23 ರಂದು ಪ್ರಕಟವಾಗಲಿರುವ ಜಾರ್ಖಂಡ್ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಅಧಿವೇಶನದ ಮೇಲೆ ಮಹತ್ವದ ಪ್ರಭಾವ ಬೀರಲಿವೆ ಎಂದು ಹೇಳಲಾಗುತ್ತಿದೆ.

ಹರಿಯಾಣದ ಸೋಲಿನಿಂದ ಚುರುಕಾಗಿರುವ ಕಾಂಗ್ರೆಸ್ ಮತ್ತು ಮಹಾ ವಿಕಾಸ್ ಅಘಾಡಿ ಮತ್ತು ಅದರ ಮಿತ್ರಪಕ್ಷಗಳು ಜಾರ್ಖಂಡ್‌ನಲ್ಲಿ ಹೇಮಂತ್ ಸೋರೆನ್ ನೇತೃತ್ವದ ಸರ್ಕಾರವನ್ನು ಉಳಿಸಿಕೊಂಡು ಮಹಾರಾಷ್ಟ್ರದಲ್ಲಿ ಅಧಿಕಾರ ಹಿಡಿಯುವ ವಿಶ್ವಾಸ ಹೊಂದಿವೆ

ಸಾಂವಿಧಾನಿಕ ಹಕ್ಕುಗಳನ್ನು ಮರುಸ್ಥಾಪಿಸುವ ಹಾಗೂ ಈ ಪ್ರದೇಶದ ನಿವಾಸಿಗಳ ಅನನ್ಯ ಗುರುತನ್ನು ಕಾಪಾಡುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯಾದ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯತ್ವದ ಸ್ಥಾನಮಾನ ನೀಡಲು ಸರ್ಕಾರ ನಿರ್ಣಯ ಅಂಗೀಕರಿಸುವ ಸಾಧ್ಯತೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗೆ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ರಾಜ್ಯತ್ವವನ್ನು ಶೀಘ್ರ ಮರುಸ್ಥಾಪಿಸುವುದು ಸೇರಿದಂತೆ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿದ್ದರು.

ಭಾರತದ ಸಂವಿಧಾನವನ್ನು ಅಂಗೀಕರಿಸಿದ 75 ನೇ ವಾರ್ಷಿಕೋತ್ಸವದ ಅಂಗವಾಗಿ ನವೆಂಬರ್ 26 ರಂದು ಸಂಸತ್ತಿನ ಉಭಯ ಸದನಗಳ ವಿಶೇಷ ಜಂಟಿ ಅಧಿವೇಶನ ನಡೆಯಲಿದೆ.

ನ. 25 ರಿಂದ ಚಳಿಗಾಲದ ಸಂಸತ್ ಅಧಿವೇಶನ: ವಕ್ಫ್ ಮಸೂದೆ ಮಂಡನೆ ಸಾಧ್ಯತೆ Read More

ರಾಜ್ಯದ ಮೂರು ಕ್ಷೇತ್ರಗಳಿಗೆ ನ.13 ರಂದು ಚುನಾವಣೆ ನಿಗದಿ

ನವದೆಹಲಿ: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ.

ನವದೆಹಲಿಯ ವಿಜ್ಞಾನ ಭವನದಲ್ಲಿ
ಸುದ್ದಿಗೋಷ್ಠಿಯಲ್ಲಿ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ದಿನಾಂಕ ಘೋಷಣೆ ಮಾಡಿದರು.

ಶಿಗ್ಗಾಂವಿ ಶಾಸಕರಾಗಿದ್ದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹಾವೇರಿಯಿಂದ, ಚನ್ನಪಟ್ಟಣ ಶಾಸಕರಾಗಿದ್ದ ಹೆಚ್. ಡಿ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ ಲೋಕಸಭೆಗೆ ಪ್ರವೇಶಿಸಿದ್ದಾರೆ.ಅದೇ ರೀತಿ‌ ಈ.ತುಕಾರಾಮ್‌ ಸಂಡೂರಿನಿಂದ‌ ಶಾಸಕರಾಗಿ,ನಂತರ ಬಳ್ಳಾರಿಯಿಂದ ಸ್ಪರ್ಧಿಸಿ ಸಂಸದರಾಗಿದ್ದಾರೆ.

ಹಾಗಾಗಿ ಶಿಗ್ಗಾಂವಿ,ಚನ್ನಪಟ್ಟಣ,ಸಂಡೂರು ಕ್ಷೇತ್ರಗಳಿಗೆ ನವೆಂಬರ್ 13 ರಂದು ಉಪಚುನಾವಣೆ ನಡೆಯಲಿದೆ ಎಂದು ಆಯುಕ್ತರು ತಿಳಿಸಿದರು.

ಇದೇ‌ ವೇಳೆ ಕೇಂದ್ರ ಚುನಾವಣಾ ಆಯೋಗವು ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭಾ ಚುನಾವಣೆಗಳಿಗೆ ದಿನಾಂಕ ಘೋಷಣೆ ಮಾಡಿದೆ.

ಮಹಾರಾಷ್ಟ್ರದಲ್ಲಿ 1 ಹಂತದಲ್ಲಿ 288 ಕ್ಷೇತ್ರಗಳಿಗೆ ನವೆಂಬರ್ 20 ರಂದು ಮತದಾನ ನಡೆಯಲಿದೆ. ಜಾರ್ಖಂಡ್ ನಲ್ಲಿ 2 ಹಂತಗಳಲ್ಲಿ 81 ಕ್ಷೇತ್ರಗಳಿಗೆ ನವೆಂಬರ್ 13 ರಂದು ಮೊದಲ ಹಂತದ ಮತದಾನ, 2ನೇ ಹಂತದ ಮತದಾನ ನವೆಂಬರ್ 20 ರಂದು ನಿಗದಿಯಾಗಿದೆ. ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ ಎಂದು ‌ರಾಜೀವ್ ಕುಮಾರ್ ತಿಳಿಸಿದರು.

ಇತ್ತೀಚೆಗೆ ಪೂರ್ಣಗೊಂಡ ಹರಿಯಾಣ, ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಗಳಲ್ಲಿ ಯಾವುದೇ ಉಪಚುನಾವಣೆಗಳು ಇಲ್ಲ ಎಂದು ಮುಖ್ಯ ಆಯುಕ್ತರು ಘೋಷಿಸಿದರು.

ರಾಜ್ಯದ ಮೂರು ಕ್ಷೇತ್ರಗಳಿಗೆ ನ.13 ರಂದು ಚುನಾವಣೆ ನಿಗದಿ Read More

ನನ್ನ ಒಂದು ದಿನಕ್ಕಾದರೂ ಜೈಲಿಗೆ ಕಳಿಸಲು ಸರಕಾರದಿಂದ ಸಂಚು; ಹೆಚ್.ಡಿ.ಕೆ ಆರೋಪ

ನವದೆಹಲಿ: ಸಿದ್ದರಾಮಯ್ಯ ಅವರ ಪಟಾಲಂ ಹಿಂದೆ ನನ್ನನ್ನು ಒಂದು ದಿನವಾದರೂ ಜೈಲಿಗೆ ಕಳಿಸಬೇಕು ಎಂದು ಸಂಚು ಹೂಡಿತ್ತು ಎಂದು ಕೇಂದ್ರ ಸಚಿವ ಹೆಚಗ.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಈಗಿರುವ ಸಿದ್ದು ಪಟಾಲಂ ಕೂಡ ಅದೇ ರೀತಿಯಲ್ಲಿ ಕನಸು ಕಾಣುತ್ತಿದೆ ಎಂದು ಆರೋಪಿಸಿದರು.

ನವದೆಹಲಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ನಾನು ಒಬ್ಬ ಅಧಿಕಾರಿಯ ಕರ್ಮಕಾಂಡದ ಬಗ್ಗೆ ಮಾತಾಡಿದ್ದೆ. ಮಾಧ್ಯಮಗಳ ಮುಂದೆ ಅವರ ಕಥೆಯನ್ನು ಬಯಲು ಮಾಡಿದ್ದೆ. ಆದರೆ, ಅವರು ನನ್ನ ಜೈಲಿಗೆ ಕಳಿಸುವ ತಿರುಕನ ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯ ವಾಡಿದರು.

ನಾನು ಜಾಮೀನು ತೆಗೆದುಕೊಂಡಿದ್ದೇನೆ. ಅದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಆದರೆ ಈ ಸರ್ಕಾರದ ಕೆಟ್ಟ ಅಧಿಕಾರಿಗಳು ಏನು ಬೇಕಾದರೂ ಮಾಡುತ್ತಾರೆ ಎಂದು ನನ್ನ ವಕೀಲರು ಜಾಮೀನು ಪಡೆದುಕೊಳ್ಳಬೇಕು ಎಂದು ಹೇಳಿದ್ದರು. ಅದಕ್ಕೆ ಜಾಮೀನು ಪಡೆದಿದ್ದೇನೆ ಎಂದು ಅವರು ಕುಮಾರಸ್ವಾಮಿ ಹೇಳಿದರು.

ಕಳೆದ ಮೂರ್ನಾಲ್ಕು ತಿಂಗಳಿಂದ ರಾಜ್ಯದಲ್ಲಿ ಏನೆಲ್ಲಾ ನಡೆಯುತ್ತಿದೆ ಎನ್ನುವುದು ನನಗೆ ಗೊತ್ತಿದೆ. 80 ಕೋಟಿ ಗುಳುಂ ಮಾಡಿರೋ ಪ್ರಕರಣ ಏನಾಯಿತು, ಎಸ್ ಐಟಿ ಯಾರನ್ನೋ ಬಂಧನ ಮಾಡಿದ್ದರು. ಯಾರೋ ಸಂಬಂಧವಿಲ್ಲದ ವ್ಯಕ್ತಿಯ ಹೆಸರನ್ನು ಪ್ರಕರಣದಲ್ಲಿ ಸೇರಿಸಿದ್ದೀರಿ. ನಾನು ಯಾವುದೇ ಅಧಿಕಾರಿಯನ್ನು ವೈಯಕ್ತಿಕವಾಗಿ ಬಳಸಿಕೊಂಡಿಲ್ಲ. ನಾನು ಆ ಅಧಿಕಾರಿಯನ್ನು ಪ್ರಶ್ನೆ ಮಾಡಿದ್ದು ನನ್ನ ಕೇಸ್ ಬಗ್ಗೆ ಅಲ್ಲ. ರಾಜ್ಯಪಾಲರ ಕಚೇರಿ ತನಿಖೆ ಮಾಡುವುದಕ್ಕೆ ಅವಕಾಶ ಕೇಳಿ ಪತ್ರ ಬರೆದು, ಒಂದು ಖಾಸಗಿ ಚಾನೆಲ್ ಗೆ ಲೀಕ್ ಮಾಡಿರುವ ಹಿನ್ನಲೆಯಲ್ಲಿ ನಾನು ಪ್ರಶ್ನೆ ಮಾಡಿದ್ದು ಎಂದು ಅವರು ಹೇಳಿದರು.

ನಾನು ಆ ಪೋಲಿಸ್ ಅಧಿಕಾರಿಯ ಉದ್ದಟನವನ್ನು ಖಂಡಿಸಿದ್ದೆ, ಆ ಅಧಿಕಾರಿಯ ಹಿನ್ನೆಲೆ ಏನಿದೆ ಎನ್ನುವುದನ್ನು ಹೇಳಿದ್ದೇನೆ. ಬೆಂಗಳೂರಿನ ಲ್ಯಾಂಡ್ ಮಾಫಿಯಾ, ಕಾನೂನು ಬಾಹಿರ ಚಟುವಟಿಕೆ ಮಾಡುವವರ ಜತೆ ಅವರ ನೇರ ನಂಟಿದೆ. ಸಮಾಜ ವಿದ್ರೋಹಿ ಶಕ್ತಿಗಳಿಗೆ ಸಾಥ್ ನೀಡಲು ಈ ವ್ಯಕ್ತಿಗೆ ಐಪಿಎಸ್ ಸ್ಥಾನ ಕೊಟ್ಟಿದ್ದಾರಾ ಎಂದು ಹೆಚ್‌ಡಿ ಕೆ ಕಿಡಿಕಾರಿದರು.

ಗೃಹ ಸಚಿವ ಡಾ.ಪರಮೇಶ್ವರ ಶಬ್ದಪಂಡಿತರು, ನನ್ನ ಹೆಸರು ಉಲ್ಲೇಖಿಸಿಲ್ಲ ಅಂತಾರೆ,ಸಿಎಂ ಮೇಲೂ ಆರೋಪ ಇದೆ, ನಾಳೆ ಬೆಳಗ್ಗೆ ಬಂದು ನಿಮ್ಮ ಅಧಿಕಾರಿ ನಿಮ್ಮನ್ನು ಕ್ರಿಮಿನಲ್ ಮುಖ್ಯಮಂತ್ರಿ ಅಂತಾ ಕರೆದರೆ ಏನು ಮಾಡುತ್ತೀರಿ, ನನ್ನ ವಿರುದ್ಧ ಸಿಎಂ ಕಚೇರಿಯಿಂದ ಸೋಮವಾರ ರಾತ್ರಿ ಮತ್ತೊಂದು ಪತ್ರ ದಾಖಲೆಗಳು ಹೋಗಿವೆ. ಪತ್ರದಲ್ಲಿ ಉಲ್ಲೇಖಿಸಿರುವ ಕಿಶೋರ್ ಕುಮಾರ ಅವರನ್ನು ಇವರು ಎಲ್ಲಿಗೆ ಕರೆಸಿಕೊಂಡಿದ್ದರು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ನನ್ನ ಒಂದು ದಿನಕ್ಕಾದರೂ ಜೈಲಿಗೆ ಕಳಿಸಲು ಸರಕಾರದಿಂದ ಸಂಚು; ಹೆಚ್.ಡಿ.ಕೆ ಆರೋಪ Read More

ನಾಲ್ವರು ಪುತ್ರಿಯರೊಂದಿಗೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ನವದೆಹಲಿ: ವ್ಯಕ್ತಿಯೊಬ್ಬ ತನ್ನ ನಾಲ್ಕು ಪುತ್ರಿಯರೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನವದೆಹಲಿಯ ರಂಗಪುರಿ ಪ್ರದೇಶದಲ್ಲಿ ನಡೆದಿದೆ.

ಮನೆಯೊಳಗಿಂದ ಕೆಟ್ಟ ವಾಸನೆ ಬರುತ್ತಿದ್ದನ್ನು ಸಹಿಸಲಾಗದೆ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೃತರು ರಂಗಪುರಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಎಲ್ಲರೂ ಮೂಲತಃ ಬಿಹಾರದ ಛಪ್ರಾ ಜಿಲ್ಲೆಯ ನಿವಾಸಿಗಳು.

ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದ ಹೀರಾಲಾಲ್ ಶರ್ಮಾ (46) ಮತ್ತು ಅವರ ಪುತ್ರಿಯರಾದ ನೀತು (26), ನಿಕ್ಕಿ (24), ನೀರೂ( 23), ಮತ್ತು ನಿಧಿ (20) ಎಂದು ಗುರುತಿಸಲಾಗಿದೆ.

ನಾಲ್ಕೂ ಹೆಣ್ಣು ಮಕ್ಕಳು ಜತೆಗೆ ಅವರಲ್ಲಿ ಇಬ್ಬರು ವಿಕಲಚೇತನರು,ಮಕ್ಕಳ ತಾಯಿ ಈಗಾಗಲೇ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದು ತಂದೆ ಮಕ್ಕಳನ್ನು ಮದುವೆ ಮಾಡಲಾಗದೆ‌ ಅವರ‌ ಔಷಧಿಗೆ‌ ಹಣ ಹೊಂದಿಸಲಾಗದೆ ಅಸಹಾಯಕನಾಗಿ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ

ಪೊಲೀಸರು ಮನೆಯ ಬೀಗ ಒಡೆದು ಎಲ್ಲಾ ಶವಗಳನ್ನು ಹೊರತೆಗೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮನೆಯ ಒಂದು ರೂಮ್ ನಲ್ಲಿ ತಂದೆಯ ಶವ‌ ಪತ್ತೆಯಾಗಿದೆ.ಮತ್ತೊಂದು ಕೊಠಡಿಯಲ್ಲಿ ನಾಲ್ಕು ಹೆಣ್ಣು ಮಕ್ಕಳ ದೇಹ ಪತ್ತೆಯಾಗಿದೆ.

ಜತೆಗೆ ಮೂರು ಪ್ಯಾಕೆಟ್‌ ಸಲ್ಫರ್,ಒಂದು‌ ಗ್ಲಾಸ್,ಸ್ಪೂನ್ ಸಿಕ್ಕಿದ್ದು ವಿಷ‌ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡಿರಬಹುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಾಲ್ವರು ಪುತ್ರಿಯರೊಂದಿಗೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ Read More

ದೆಹಲಿಯ ನೂತನ ಸಿಎಂ ಆಗಿ ಅತಿಶಿ ಆಯ್ಕೆ: ಹೆಸರು ಪ್ರಸ್ತಾಪಿಸಿದ ಕೇಜ್ರಿವಾಲ್

ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಅತಿಶಿ ಅವರು ಆಯ್ಕೆಯಾಗಿದ್ದು,ಅವರ ಹೆಸರನ್ನು ಹಾಲಿ ಸಿಎಂ ಕೇಜ್ರಿವಾಲ್ ಪ್ರಸ್ತಾಪಿಸಿದರು.

ಮಂಗಳವಾರ ನಡೆದ ಎಎಪಿ ಶಾಸಕರ ಸಭೆಯಲ್ಲಿ ಪಕ್ಷದ ನಾಯಕ ದಿಲೀಪ್ ಪಾಂಡೆ, ನೂತನ ಮುಖ್ಯಮಂತ್ರಿಯನ್ನು ಕೇಜ್ರಿವಾಲ್ ನಿರ್ಧರಿಸಬೇಕೆಂದು ಪ್ರಸ್ತಾಪಿಸಿದರು. ಎಎಪಿ ರಾಷ್ಟ್ರೀಯ ಸಂಚಾಲಕರು ಅತಿಶಿ ಅವರ ಹೆಸರನ್ನು ಪ್ರಸ್ತಾಪಿಸಿದಾಗ, ಎಲ್ಲಾ ಎಎಪಿ ಶಾಸಕರು ಎದ್ದುನಿಂತು ಅದನ್ನು ಸರ್ವಾನುಮತದಿಂದ ಒಪ್ಪಿಕೊಂಡರು.

ಹಾಗಾಗಿ ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಅತಿಶಿ ಆಯ್ಕೆಯಾಗಿದ್ದಾರೆ.

ಎಎಪಿ ಪಕ್ಷದ ಶಾಸಕರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು ಈ ಸಂಬಂಧ ಪಕ್ಷದಿಂದ ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ.

ಅತಿಶಿ ಪ್ರಸ್ತುತ ದೆಹಲಿ ಸರ್ಕಾರದಲ್ಲಿ ಶಿಕ್ಷಣ ಮತ್ತು ಲೋಕೋಪಯೋಗಿ ಇಲಾಖೆಯಂತಹ ಪ್ರಮುಖ ಖಾತೆಗಳನ್ನು ಹೊಂದಿದ್ದಾರೆ. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿ ಮತ್ತು ರೋಡ್ಸ್ ವಿದ್ವಾಂಸರಾಗಿದ್ದಾರೆ.

ಕಲ್ಕಾಜಿಯ ಶಾಸಕರಾಗಿದ್ದ 43 ವರ್ಷದ ಅತಿಶಿ, ದೆಹಲಿಯ ಈಗ ರದ್ದುಗೊಂಡಿರುವ ಅಬಕಾರಿ ನೀತಿ ಪ್ರಕರಣದಲ್ಲಿ ಭ್ರಷ್ಟಾಚಾರ ಆರೋಪದಲ್ಲಿ ಸಿಸೋಡಿಯಾ ಅವರನ್ನು ಬಂಧಿಸಿದ ನಂತರ ಸಚಿವರಾಗಿದ್ದರು.

ಕೇಜ್ರಿವಾಲ್ ಮತ್ತು ಸಿಸೋಡಿಯಾ ಜೈಲಿನಲ್ಲಿದ್ದಾಗ ಅತಿಶಿ ಪಕ್ಷದ ಕಾರ್ಯಕ್ರಮಗಳು ಮತ್ತು ಮಾಧ್ಯಮ ಸಂವಾದದಲ್ಲಿ ಪಕ್ಷದ ನಿಲುವನ್ನು ಸ್ಪಷ್ಪಡಿಸುವ ಮೂಲಕ ಬಿಜೆಪಿ ಹಾಗೂ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.

ಅರವಿಂದ್ ಕೇಜ್ರಿವಾಲ್ ಭಾನುವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದ್ದರು. ಜನರು ಪ್ರಾಮಾಣಿಕತೆ ಪ್ರಮಾಣ ಪತ್ರ ನೀಡಿದಾಗ ಮಾತ್ರ ಸಿಎಂ ಕುರ್ಚಿ ಮೇಲೆ ಕೂರುತ್ತೇನೆ ಎಂದು ಅವರು ಹೇಳಿದ್ದರು.

ಹಾಗಾಗಿ ಸೆಪ್ಟೆಂಬರ್ 26 ಮತ್ತು 27ರಂದು ದೆಹಲಿ ವಿಧಾನಸಭೆಯ ವಿಶೇಷ ಅಧಿವೇಶನ ಕರೆಯಲಾಗಿದೆ. ಅರವಿಂದ್ ಕೇಜ್ರಿವಾಲ್ ಲೆಫ್ಟಿನೆಂಟ್ ಗವರ್ನರ್ ಅವರನ್ನು ಭೇಟಿಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ದೆಹಲಿಯ ನೂತನ ಸಿಎಂ ಆಗಿ ಅತಿಶಿ ಆಯ್ಕೆ: ಹೆಸರು ಪ್ರಸ್ತಾಪಿಸಿದ ಕೇಜ್ರಿವಾಲ್ Read More

ರಾಹುಲ್‌ ಹೇಳಿಕೆಗೆ ಅಮಿತ್‌ ಶಾ ಟೀಕೆ

ನವದೆಹಲಿ: ರಾಹುಲ್‌ ಗಾಂಧಿ ಹೇಳಿಕೆಯಿಂದ ಮತ್ತೊಮ್ಮೆ ಕಾಂಗ್ರೆಸ್‌ನ ಮೀಸಲಾತಿ ವಿರೋಧಿ ನೀತಿ ಬಯಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಟೀಕಿಸಿದ್ದಾರೆ.

ಮೀಸಲಾತಿ ವಿಚಾರದ ಬಗ್ಗೆ ರಾಹುಲ್‌ ಗಾಂಧಿ ಪ್ರಸ್ತಾಪ ಮಾಡಿದ್ದನ್ನು ಉಲ್ಲೇಖಿಸಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಶಾ ಕಾಂಗ್ರೆಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶವನ್ನು ವಿಭಜಿಸುವ ಷಡ್ಯಂತ್ರ ರೂಪಿಸುವ ಶಕ್ತಿಗಳೊಂದಿಗೆ ನಿಂತು ದೇಶ ವಿರೋಧಿ ಹೇಳಿಕೆ ನೀಡುವುದು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಅಭ್ಯಾಸವಾಗಿ ಹೋಗಿದೆ ಎಂದು ಜರಿದಿದ್ದಾರೆ.

ಕಾಶ್ಮೀರದಲ್ಲಿ ದೇಶ ವಿರೋಧಿ ನ್ಯಾಷನಲ್‌ ಕಾನ್ಫರೆನ್ಸ್‌ ಬೆಂಬಲಿಸಿರುವ ಕಾಂಗ್ರೆಸ್‌ ಈಗ ಮೀಸಲಾತಿ ವಿರೋಧಿ ಅಜೆಂಡಾವನ್ನು ಬೆಂಬಲಿಸುತ್ತಿದೆ. ವಿದೇಶಿ ವೇದಿಕೆಗಳಲ್ಲಿ ಭಾರತ ವಿರೋಧಿ ಹೇಳಿಕೆಗಳನ್ನು ನೀಡುವ ಮೂಲಕ ರಾಹುಲ್ ಗಾಂಧಿ ಯಾವಾಗಲೂ ರಾಷ್ಟ್ರದ ಭಾವನೆಗಳನ್ನು ಘಾಸಿಗೊಳಿಸುತ್ತಿದ್ದಾರೆ ಎಂದು ದೂರಿದ್ದಾರೆ.

ರಾಹುಲ್ ಗಾಂಧಿಯವರ ಹೇಳಿಕೆಯು ಪ್ರಾದೇಶಿಕತೆ, ಧರ್ಮ ಮತ್ತು ಭಾಷಿಕ ಭಿನ್ನಾಭಿಪ್ರಾಯದ ರೀತಿಯಲ್ಲಿ ಬಿರುಕುಗಳನ್ನು ಉಂಟುಮಾಡುವ ಕಾಂಗ್ರೆಸ್‌ನ ರಾಜಕೀಯವನ್ನು ಬಯಲು ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

ಬಿಜೆಪಿ ಇರುವವರೆಗೂ ಯಾರೊಬ್ಬರೂ ಮೀಸಲಾತಿಯನ್ನು ರದ್ದುಪಡಿಸಲು ಸಾಧ್ಯವಿಲ್ಲ ಅಥವಾ ರಾಷ್ಟ್ರದ ಭದ್ರತೆಯೊಂದಿಗೆ ಯಾರೂ ಗೊಂದಲಕ್ಕೀಡಾಗಲು ಸಾಧ್ಯವಿಲ್ಲ ಎಂದು ನಾನು ರಾಹುಲ್ ಗಾಂಧಿಗೆ ಹೇಳಲು ಬಯಸುತ್ತೇನೆ ಎಂದು ಅಮಿತ್ ಶಾ ಕಟುವಾಗಿ ಹೇಳಿದ್ದಾರೆ.

ಅಮೆರಿಕ ಪ್ರವಾಸದಲ್ಲಿರುವ ರಾಹುಲ್‌ ಗಾಂಧಿ ಜಾರ್ಜ್‌ಟೌನ್‌ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳ ಜೊತೆಗಿನ ಸಂವಾದ ನಡೆಸಿದ್ದಾಗ ಮೀಸಲಾತಿಯು ಎಷ್ಟು ಕಾಲ ಮುಂದುವರಿಯಲಿದೆ ಎಂಬ ಪ್ರಶ್ನೆಗೆ ರಾಹುಲ್‌ ಗಾಂಧಿ, ಭಾರತದಲ್ಲಿ ಸಮಾನತೆಯ ಸ್ಥಿತಿ ಮೂಡಿದಾಗ ಮೀಸಲಾತಿಯನ್ನು ತೆಗೆದುಹಾಕುವ ಬಗ್ಗೆ ಕಾಂಗ್ರೆಸ್ ಪಕ್ಷವು ಆಲೋಚನೆ ಮಾಡಲಿದೆ. ಈಗ ಸಮಾನತೆಯ ಪರಿಸ್ಥಿತಿ ಇಲ್ಲ ಎಂದು ಉತ್ತರಿಸಿದ್ದನ್ನು ಸ್ಮರಿಸಬಹುದು.

ರಾಹುಲ್‌ ಹೇಳಿಕೆಗೆ ಅಮಿತ್‌ ಶಾ ಟೀಕೆ Read More

ಕೈಗಾರಿಕೆ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ಪೂರ್ಣ ಸಹಕಾರ:ಎಂ.ಬಿ.ಪಾಗೆ ಹೆಚ್ ಡಿ ಕೆ ಭರವಸೆ

ನವದೆಹಲಿ: ಕರ್ನಾಟಕದ ಕೈಗಾರಿಕೆ ಅಭಿವೃದ್ಧಿಗೆ ಪೂರ್ಣ ಸಹಕಾರ ನೀಡುವುದಾಗಿ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.

ರಾಜ್ಯದ ಕೈಗಾರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ನವದೆಹಲಿಯ ಉದ್ಯೋಗ ಭವನದಲ್ಲಿರುವ ಭಾರೀ ಕೈಗಾರಿಕೆ ಸಚಿವಾಲಯದ ಕಚೇರಿಯಲ್ಲಿ ಭೇಟಿಯಾದ ಕರ್ನಾಟಕದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಈ ಭರವಸೆ ಸಿಕ್ಕುದೆ.

ಕೈಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ಅಗತ್ಯ ಸಹಕಾರ ಬೇಕೆಂದು ಎಂ.ಬಿ.ಪಾಟೀಲ್ ಮನವಿ ಮಾಡಿದರು. ಸಚಿವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಹೆಚ್ ಡಿ ಕೆ ಸಂಪೂರ್ಣ ಸಹಕಾರದ ಭರವಸೆ ನೀಡಿದರು.

ಕರ್ನಾಟಕದಲ್ಲಿ ಕೈಗಾರಿಕಾ ಕ್ಷೇತ್ರದ ಸ್ಥಿತಿಗತಿಗಳ ಬಗ್ಗೆ ಪಾಟೀಲ್ ಅವರಿಂದ ಕುಮಾರಸ್ವಾಮಿ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಕೆಲ ಕೈಗಾರಿಕೆಗಳ ಬಗ್ಗೆ ಮನವಿ ಸಲ್ಲಿಸಿದ ಅವರು; ಕೇಂದ್ರ ಸರ್ಕಾರದಿಂದ ಸಿಗಬೇಕಿರುವ ಒಪ್ಪಿಗೆಯ ಬಗ್ಗೆ ಪ್ರಸ್ತಾವನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಕೈಗಾರಿಕೆ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡುವ ಅಗತ್ಯವಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಸ್ಪಷ್ಟ ನಿರ್ದೇಶನವಿದೆ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಕುಮಾರಸ್ವಾಮಿ ಅವರು ಎಂ.ಬಿ.ಪಾಟೀಲ್ ಅವರಿಗೆ ಹೇಳಿದರು.

ರಾಜ್ಯದಲ್ಲಿ ಹೆಚ್ಚು ಹೆಚ್ಚು ಕೈಗಾರಿಕೆಗಳು ಸ್ಥಾಪನೆಯಾಗಬೇಕು ಹಾಗೂ ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚಿನ ಪ್ರಮಾಣದಲ್ಲಿ ಆಗಬೇಕು. ಈ ನಿಟ್ಟಿನಲ್ಲಿ ರಾಜ್ಯಕ್ಕೆ ಪೂರ್ಣ ಸಹಕಾರ ನೀಡುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹೆಚ್ ಎಂ ಟಿ ಭೂಮಿ ವಿವಾದ ಹಾಗೂ ದೇವದಾರಿ ಗಣಿಗಾರಿಕೆ ಯೋಜನೆಗಳ ಬಗ್ಗೆಯೂ ಕೇಂದ್ರ ಸಚಿವರು ಪಾಟೀಲ್ ಅವರ ಜತೆ ಚರ್ಚೆ ನಡೆಸಿದರು.

ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಸಂಘರ್ಷ ಬೇಡ. ರಾಜಕೀಯ ಮೀರಿ ಅಭಿವೃದ್ಧಿ ಪರವಾಗಿ ಕೆಲಸ ಮಾಡಲು ನಾನು ಮುಕ್ತ ಮನಸ್ಸು ಹೊಂದಿದ್ದೇನೆ, ರಾಜ್ಯದ ಒಳಿತಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಹೆಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದರು.

ಕೈಗಾರಿಕೆ ಕ್ಷೇತ್ರದಲ್ಲಿ ಕರ್ನಾಟಕಕ್ಕೆ ಪೂರ್ಣ ಸಹಕಾರ:ಎಂ.ಬಿ.ಪಾಗೆ ಹೆಚ್ ಡಿ ಕೆ ಭರವಸೆ Read More

ಸಂಸತ್ ಮೇಲೆ ದಾಳಿ: ಮೈಸೂರಿನ ಮನೋರಂಜನ್ ಪ್ರಮುಖ ಸಂಚುಕೋರ

ನವದೆಹಲಿ: ಕಳೆದ ವರ್ಷ ಸಂಸತ್ ಮೇಲೆ ಸ್ಮೋಕ್ ದಾಳಿ ನಡೆಸಿದ್ದ ಆರೋಪಿಗಳು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕ ತರಲು ಬಯಸಿದ್ದರು ಎಂಬ ಸ್ಫೋಟಕ ಅಂಶ ಬಯಲಾಗಿದೆ.

ಸಂಸತ್ ನಲ್ಲಿ ಭದ್ರತಾಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 1 ಸಾವಿರ ಪುಟಗಳ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಪರಿಣಾಮಕಾರಿಯಾಗಿಲ್ಲ ಎಂದು ನಂಬಿದ್ದ ಆರೋಪಿಗಳು ಅದನ್ನು ಬದಲಿಸಬೇಕು ಎಂಬ ಉದ್ದೇಶ ಹೊಂದಿದ್ದರು ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

ಯೋಜನೆ ಕಾರ್ಯಗತ ಗೊಳಿಸುವ ಮೊದಲು ಸುಮಾರು ಎರಡು ವರ್ಷಗಳ ಕಾಲ ಪ್ಲ್ಯಾನ್ ಮಾಡಿದ್ದರು.

ಸಾಮಾಜಿಕ ಜಾಲತಾಣದ ಮೂಲಕ ಪರಸ್ಪರ ಸ್ನೇಹಿತರಾಗಿದ್ದ ಇವರು ಮೈಸೂರು, ಗುರುಗ್ರಾಮ, ದೆಹಲಿ ಸೇರಿ ಐದು ಕಡೆ ಸಭೆ ನಡೆಸಿ ಸಂಸತ್ ಮೇಲೆ ದಾಳಿಗೆ ಯೋಜನೆ ರೂಪಿಸಿದ್ದರು. ಈ ಮೂಲಕ ಶೀಘ್ರದಲ್ಲಿ ಜಾಗತಿಕವಾಗಿ ಖ್ಯಾತಿ ಪಡೆಯಲು ಬಯಸಿದ್ದರು.

ಮೈಸೂರಿನ ಮನೋರಂಜನ್ ಪ್ರಕರಣದ ಕಿಂಗ್ ಪಿನ್. ಮೈಸೂರಿನಲ್ಲೇ ಮನೋರಂಜನ್ ನೇತೃತ್ವದಲ್ಲಿ ಮೊದಲ ಸಭೆ ನಡೆದಿತ್ತು. ಮೊದಲ ಸಭೆಯಲ್ಲಿ ಹತ್ತು ಮಂದಿ ಭಾಗಿಯಾಗಿದ್ದರು ಎಂದು ತಿಳಿಸಲಾಗಿದೆ.

ಸಭೆಯಲ್ಲಿ ಹಿಂಸಾತ್ಮಕ ವಿಡಿಯೋ ತೋರಿಸಿ, ಪ್ರತ್ಯೇಕ ಸಂಘಟನೆ ಹುಟ್ಟುಹಾಕುವ ಯೋಜನೆಯನ್ನು ಮನೋರಂಜನ್ ವಿವರಿಸಿದ್ದ. ಎರಡನೇ ಸಭೆಯನ್ನು ಹರಿಯಾಣದ ಗುರುಗ್ರಾಮದಲ್ಲಿ ನಡೆಸಲಾಗಿತ್ತು. ಇದರಲ್ಲಿ ಏಳು ಮಂದಿ ಭಾಗಿಯಾಗಿದ್ದರು.

ತಂಡಕ್ಕೆ ಮಹಿಳೆಯರನ್ನು ಸೇರಿಕೊಳ್ಳುವ ಉದ್ದೇಶದಿಂದ ನೀಲಂಳನ್ನು ಸೇರಿಸಿಕೊಳ್ಳಲಾಗಿತ್ತು.

ಮೂರನೇ ಸಭೆಯನ್ನು ದೆಹಲಿಯಲ್ಲಿ ನಡೆಸಿದ್ದರು. ಕಡೆಯದಾಗಿ ಇಂಡಿಯಾ ಗೇಟ್ ಬಳಿ ಸೇರಿ ಅಲ್ಲಿಂದ ಸ್ಮೋಕ್ ಕ್ಯಾನ್ ಬಳಸಿ ದಾಳಿ ಮಾಡಲು ಸಂಸತ್ ಗೆ ತೆರಳಿದ್ದರು.

ಅಲ್ಟ್ರಾ ಮಾವೋವಾದಿ-ಪ್ರೇರಿತ ಚಿಂತನೆಯಿಂದ ಪ್ರಚೋದನೆಗೆ ಒಳಗಾಗಿದ್ದ ಮನೋರಂಜನ್ ಈ ವ್ಯವಸ್ಥೆಯನ್ನು ಬದಲಾಯಿಸಲು ಮುಂದಾಗಿದ್ದ.

ಸಂಸತ್ ಮೇಲೆ ದಾಳಿ: ಮೈಸೂರಿನ ಮನೋರಂಜನ್ ಪ್ರಮುಖ ಸಂಚುಕೋರ Read More