ಸಿಂಘ್ವಿ ಆಸನದಲ್ಲಿ ನೋಟಿನ ಕಂತೆ; ತನಿಖೆಗೆ ಧನಕರ್ ಆದೇಶ

ನವದೆಹಲಿ: ಚಳಿಗಾಲದ ಅಧಿವೇಶನದ ಆರಂಭದಲ್ಲೇ ಹಲವು ನಾಟಕೀಯ ಬೆಳವಣಿಗೆಗಳು ನಡೆಯುತ್ತಿವೆ,ಇದೀಗ ಕಾಂಗ್ರೆಸ್ ಸಂಸದನ ಆಸನದಲ್ಲಿ ಕಂತೆ,ಕಂತೆ ಹಣ ಪತ್ತೆಯಾಗಿದ್ದು ಭಾರಿ ಚರ್ಚೆಗೆ ಗ್ರಾಸ ಒದಗಿಸಿದೆ.

ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಅವರಿಗೆ ಮೀಸಲಾಗಿದ್ದ ಆಸನದಲ್ಲಿ ಕಂತೆ ಕಂತೆ ನೋಟು ಪತ್ತೆಯಾಗಿವೆ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಹೇಳಿದ್ದಾರೆ.

ಗುರುವಾರ ಸದನವನ್ನು ಮುಂದೂಡಿದ ಬಳಿಕ ಪರಿಶೀಲನೆ ವೇಳೆ ಆಸನ ಸಂಖ್ಯೆ 222ರಲ್ಲಿ ಭದ್ರತಾ ಸಿಬ್ಬಂದಿ ಕಂತೆ ಕಂತೆ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಸದನಕ್ಕೆ ತಿಳಿಸುವುದು ನನ್ನ ಕರ್ತವ್ಯವಾಗಿದೆ. ನೋಟುಗಳು ನಕಲಿಯೋ ಅಥವಾ ಅಸಲಿಯೋ ಎಂಬುದು ತಿಳಿದು ಬಂದಿಲ್ಲ, ಸದನದ ಶಿಷ್ಟಾಚಾರದಂತೆ ತನಿಖೆಗೆ ಆದೇಶಿಸಲಾಗಿದೆ ಎಂದು ಜಗದೀಪ್ ಧನಕರ್ ತಿಳಿಸಿದ್ದಾರೆ.

ಯಾರಾದರೂ ಕರೆನ್ಸಿ ನೋಟುಗಳು ತಮ್ಮದು ಎಂದು ಕೇಳುತ್ತಾರೇನೊ ಎಂದು ನಾನು ನಿರೀಕ್ಷಿಸುತ್ತಿದ್ದೆ. ಆದರೆ ಯಾರೂ ಅದನ್ನು ಇಲ್ಲಿಯವರೆಗೆ ತಮ್ಮದೆಂದು ಒಪ್ಪಿಕೊಂಡಿಲ್ಲ ಎಂದು ಹೇಳಿದರು.

ಈ‌ ವೇಳೆ ಸಂಸದ ಮನು ಸಿಂಘ್ವಿ ಮಾತನಾಡಿ,ಇದನ್ನು ಕೇಳಿ ನನಗೂ ಅಚ್ಚರಿಯಾಯಿತು ನಾನು ನಿನ್ನೆ ಮಧ್ಯಾಹ್ನ 12.57 ಕ್ಕೆ ಸದನದ ಒಳಗೆ ಪ್ರವೇಶ ಮಾಡಿದೆ. 1 ಗಂಟೆಗೆ ಸದನ ಆರಂಭವಾಯಿತು. ಮಧ್ಯಾಹ್ನ 1 ರಿಂದ 1.30 ರವರೆಗೆ ನಾನು ಅಯೋಧ್ಯಾ ಪ್ರಸಾದ್ ಅವರೊಂದಿಗೆ ಕುಳಿತುಕೊಂಡೆ, 1:30 ಕ್ಕೆ ನಾನು ಸಂಸತ್ತನ್ನು ಬಿಟ್ಟೆ, ನಾನು ಸದನದಲ್ಲಿ ಒಟ್ಟು 3 ನಿಮಿಷಗಳು ಮತ್ತು ಕ್ಯಾಂಟೀನ್‌ನಲ್ಲಿ ನನ್ನ ವಾಸ್ತವ್ಯ 30 ನಿಮಿಷಗಳು ಮಾತ್ರ ಇತ್ತು. ಅಂತಹ ವಿಷಯಗಳಲ್ಲಿಯೂ ರಾಜಕೀಯ ಮಾಡಲಾಗುತ್ತಿದೆ ಎಂದು ದೂರಿದರು.

ಆ ಹಣ ನನ್ನದಲ್ಲ, ಖಂಡಿತ ಬೇರೆ ಯಾರೊ ಅದನ್ನು ತಂದು ನನ್ನ ಆಸನದ ಬಳಿ ಇಟ್ಟು ಹೋಗಿರಬಹುದು ಈ ಬಗ್ಗೆ ವಿಚಾರಣೆ ನಡೆಯಬೇಕು ಎಂದು ಒತ್ತಾಯಿಸಿದರು.

ತನಿಖೆ ಪೂರ್ಣಗೊಳ್ಳದೆ ಸಭಾಪತಿಯವರು ಸದಸ್ಯರ ಹೆಸರು ಹೇಳಬಾರದಿತ್ತು ಎಂದು ರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಸಿಂಘ್ವಿ ಆಸನದಲ್ಲಿ ನೋಟಿನ ಕಂತೆ; ತನಿಖೆಗೆ ಧನಕರ್ ಆದೇಶ Read More

ಹಾಸನಕ್ಕೆ ಕಾಂಗ್ರೆಸ್ ಕೊಡುಗೆ ಏನು: ರೇವಣ್ಣ

ನವದೆಹಲಿ: ಕಳೆದ ಐವತ್ತು ವರ್ಷದಲ್ಲಿ ಹಾಸನಕ್ಕೆ ಕಾಂಗ್ರೆಸ್‌ನವರ ಕೊಡುಗೆ ಏನು ಎಂದು ಶಾಸಕ ಹೆಚ್.ಡಿ ರೇವಣ್ಣ ಗುಡುಗಿದರು.

ದೇವೇಗೌಡರು ಇಲ್ಲ ಅಂದಿದ್ದರೆ ಹಾಸನ ಅಭಿವೃದ್ಧಿಯಾಗುತ್ತಿರಲಿಲ್ಲ ಎಂದು ಹೇಳಿದರು.

ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾಸನದ ಕಾಂಗ್ರೆಸ್ ಸಮಾವೇಶ ಕುರಿತು ಪ್ರತಿಕ್ರಿಯಿಸಿ, ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ, ಶಕ್ತಿ ಪ್ರದರ್ಶನ ನಡೆಯುತ್ತಿದೆ. ಕಳೆದ ಐವತ್ತು ವರ್ಷದಲ್ಲಿ ಹಾಸನಕ್ಕೆ ಕಾಂಗ್ರೆಸ್‌ನವರ ಕೊಡುಗೆ ಏನು,ಅವರಿಂದ ಹಾಸನದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ದೂರಿದರು.

ದೇವೇಗೌಡರು ಇಲ್ಲ ಅಂದಿದ್ದರೆ ಹಾಸನ, ಅರಸೀಕೆರೆ ರೈಲು ಮಾರ್ಗ ಇರುತ್ತಿರಲಿಲ್ಲ, ಹಾಸನ ಅಭಿವೃದ್ಧಿಯಾಗುತ್ತಿರಲಿಲ್ಲ ಎಂದು ತಿರುಗೇಟು ನೀಡಿದರು.

ಈಗ ಏನು ಮಾತನಾಡಲ್ಲ 2028ಕ್ಕೆ‌ ಚುನಾವಣೆ ವೇಳೆ ಮಾತನಾಡುತ್ತೇನೆ. ಇಂತಹ ಹತ್ತು ಸಮಾವೇಶ ಮಾಡಿಕೊಳ್ಳಲಿ ಇದು ನಮ್ಮ ಮೇಲೆ ಪರಿಣಾಮ ಬೀರುವುಲ್ಲ ಎಂದು ಟಾಂಗ್ ನೀಡಿದರು.

ಜನರ ದೇವರ ಆಶೀರ್ವಾದ ಇದೆ. ಜೆಡಿಎಸ್ ಕಂಡರೆ ಕಾಂಗ್ರೆಸ್‌ನವರಿಗೆ ಭಯ. 2018ರಲ್ಲಿ ಯಾರು ಬಂದು ಕಾಲು ಕಟ್ಟಿದ್ದರೋ, ಹದಿನಾಲ್ಕು ತಿಂಗಳು ಆದಮೇಲೆ ಸರ್ಕಾರ ಯಾರು ತೆಗೆದರು, ಹಾಸನದಲ್ಲಿ ಲೋಕಸಭೆ ಚುನಾವಣೆ ಹೇಗಾಯಿತು, ಕಡೆಯ ಮೂರು ದಿನದಲ್ಲಿ ಏನಾಯಿತು, 2028 ರಣರಂಗದಲ್ಲಿ ಎಲ್ಲವೂ ಗೊತ್ತಾಗುತ್ತದೆ. ಸಮಯ ಬಂದಾಗ ಮಾತನಾಡುತ್ತೀನಿ ಎಂದು ರೇವಣ್ಣ ಮಾರ್ಮಿಕವಾಗಿ ನುಡಿದರು.

ಚನ್ನಪಟ್ಟಣದಲ್ಲಿ ರಾಷ್ಟ್ರೀಯ ಪಕ್ಷಕ್ಕೆ ಅಭ್ಯರ್ಥಿ ಇರಲಿಲ್ಲ ಬಿಜೆಪಿಯಿಂದ ಕರೆ ತಂದರು. ಜೆಡಿಎಸ್ ಹಾಗೂ ದೇವೇಗೌಡರನ್ನು ಮುಗಿಸಲು ಯಾರಿಂದಲು ಸಾಧ್ಯವಿಲ್ಲ, ಸಮಾವೇಶದ ಬಗ್ಗೆ ತಲೆಕೆಡಿಸಿಕೊಳ್ಳಲ್ಲ, ಇದಕ್ಕೆಲ್ಲ ಹೆದರಿ ಓಡುವ ಜಯಮಾನ ನನ್ನದಲ್ಲ ಎಂದು ತಿಳಿಸಿದರು.

ಹಾಸನಕ್ಕೆ ಕಾಂಗ್ರೆಸ್ ಕೊಡುಗೆ ಏನು: ರೇವಣ್ಣ Read More

ಮೇಕೆದಾಟು ಯೋಜನೆಯಿಂದ ಬೆಂಗಳೂರಿಗರ ನೀರಿನ ಬವಣೆಗೆ ಮುಕ್ತಿ- ಹೆಚ್ ಡಿ ಡಿ

ನವದೆಹಲಿ: ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಟ್ಯಾಂಕರ್ ಮಾಫಿಯಾ ಜನರನ್ನು ಸುಲಿಗೆ ಮಾಡುತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಬೇಸರ ಪಟ್ಟರು.

ರಾಜ್ಯಸಭೆಯಲ್ಲಿ ಮಾತನಾಡಿದ ಗೌಡರು, ಮಾಹಿತಿ ತಂತ್ರಜ್ಞಾನ ರಾಜಧಾನಿ ಆಗಿರುವ ಬೆಂಗಳೂರು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದರು.

ಬೆಂಗಳೂರಿನ ನೀರಿನ ಬವಣೆ ನೀಗಿಸಬೇಕಾದರೆ ಮೇಕೆದಾಟು ಯೋಜನೆಗೆ ಅನುಮತಿ ಸಿಗಬೇಕಿದೆ. ಎಲ್ಲಾ ರಾಜಕೀಯ ಬದಿಗಿಟ್ಟು ಈ ಯೋಜನೆಗೆ ಬೆಂಬಲ ಕೊಡಬೇಕು ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಮೇಕೆದಾಟು ಯೋಜನೆಗಾಗಿ ಕೆಲಸ ಮಾಡಿವೆ. ಆದರೆ ಇಲ್ಲಿಯವರೆಗೂ ಯಶಸ್ಸು ಸಿಕ್ಕಿಲ್ಲ. ಯೋಜನೆಗೆ ಅನುಮತಿ ನೀಡುವಂತೆ ಕೇಂದ್ರಕ್ಕೆ ಕರ್ನಾಟಕ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರ ಸರ್ಕಾರ ಆದಷ್ಟು ಬೇಗ ಒಪ್ಪಿಗೆ ನೀಡಬೇಕು ಎಂದು ಕೋರಿದರು.

ಬೆಂಗಳೂರು ನಗರ ಬೆಳೆಯುತ್ತಲೇ ಇದೆ, ಉದ್ಯೋಗ ಅರಸಿ ದೇಶದ ಎಲ್ಲಾ ಮೂಲೆಗಳಿಂದ ಜನರು ಅಲ್ಲಿಗೆ ಹೋಗುತ್ತಿದ್ದಾರೆ. ಎಲ್ಲರಿಗೂ ಆಶ್ರಯ ನೀಡುವ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ ಎಂದು ಹೇಳಿದರು.

1.45 ಕೋಟಿ ಜನಸಂಖ್ಯೆ ಇರುವ ಬೆಂಗಳೂರಿಗೆ 16 ಟಿಎಂಸಿ ಅಡಿಯಷ್ಟು ಕಾವೇರಿ ನೀರನ್ನು ಪೂರೈಕೆ ಮಾಡಲಾಗುತ್ತಿದೆ. ಆದರೆ, ನಗರದ ಬೇಡಿಕೆಗೆ ಹೋಲಿಸಿದರೆ ಈ ನೀರು ಬಹಳ ಕಡಿಮೆ. ಇದನ್ನೇ ಅಸ್ತ್ರ ಮಾಡಿಕೊಂಡಿರುವ ಟ್ಯಾಂಕರ್ ಮಾಫಿಯಾ ಜನರನ್ನು ಸುಲಿಗೆ ಮಾಡುತ್ತಿದೆ. ಒಂದು ಟ್ಯಾಂಕರ್ ನೀರಿಗೆ 3000 ರೂ ತೆರಬೇಕಿದೆ, ಕೇವಲ ನಾಲ್ಕು ಜನರಿರುವ ಒಂದು ಕುಟುಂಬ ಪ್ರತೀ ತಿಂಗಳು ನೀರಿಗಾಗಿ 20,000 ಖರ್ಚು ಮಾಡಬೇಕಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಎಲ್ಲರೂ ರಾಜಕೀಯ ಬದಿಗಿಟ್ಟು ಮೇಕೆದಾಟು ಯೋಜನೆ ಬಗ್ಗೆ ಬೆಂಬಲ ನೀಡಬೇಕು ಈ ಯೋಜನೆ ಕಾರ್ಯಗತವಾದರೆ ನೀರಿನ ಸಮಸ್ಯೆಗೆ ಮುಕ್ತಿ ದೊರೆಯಲಿದೆ ಎಂದು ದೇವೇಗೌಡರು ತಿಳಿಸಿದರು.

ಮೇಕೆದಾಟು ಯೋಜನೆಯಿಂದ ಬೆಂಗಳೂರಿಗರ ನೀರಿನ ಬವಣೆಗೆ ಮುಕ್ತಿ- ಹೆಚ್ ಡಿ ಡಿ Read More

ತಂಬಾಕು ಬೆಳೆಗೆ ಬೆಂಬಲ ಬೆಲೆ ನೀಡಲು ಕೇಂದ್ರ ಸಚಿವರಿಗೆ ನಿಖಿಲ್ ಮನವಿ

ನವದೆಹಲಿ: ತಂಬಾಕು ಬೆಳೆಯನ್ನು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ವ್ಯಾಪ್ತಿಗೆ ತರಬೇಕು ಹಾಗೂ ತಂಬಾಕಿಗೆ ಬೆಂಬಲ ಬೆಲೆ ನೀಡಬೇಕು ಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ನವದೆಹಲಿಯಲ್ಲಿ ಸೋಮವಾರ ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ನಿಖಿಲ್, ನಮ್ಮ ಮನವಿಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಬೆಲೆ ಕುಸಿತ ಸೇರಿ ಹಲವಾರು ಸಮಸ್ಯೆಗಳಿಗೆ ಸಿಲುಕಿ ತೀವ್ರ ಸಂಕಷ್ಟದಲ್ಲಿರುವ ರಾಜ್ಯದ ತಂಬಾಕು ಬೆಳೆಗಾರರ ಹಿತದೃಷ್ಟಿಯಿಂದ ನಾವು ಸಚಿವರಿಗೆ ಈ ಮನವಿ ಸಲ್ಲಿಸಿದ್ದೇವೆ. ಇದೇ ವೇಳೆ ನಮ್ಮ ಜತೆಯಲ್ಲಿದ್ದ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕೂಡ ಸಚಿವ ಗೋಯಲ್ ಅವರಿಗೆ ತಂಬಾಕು ಬೆಳೆಗಾರರ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟರು ಎಂದು ನಿಖಿಲ್ ಹೇಳಿದ್ದಾರೆ.

ನೆರೆ ರಾಜ್ಯಗಳಲ್ಲಿ ತಂಬಾಕು ಬೆಳೆಗಾರಿಗೆ ಉತ್ತಮ ದರ ಸಿಗುತ್ತಿದೆ. ಕರ್ನಾಟಕದ ಬೆಳೆಗಾರರಿಗೆ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಚಿವರು ಗಮನ ಹರಿಸಿ ಬೆಳೆಗಾರರಿಗೆ ಉತ್ತಮ ಬೆಲೆ ಸಿಗುವಂತೆ ಮಾಡಬೇಕು ಎಂದು ಕೋರಿದ್ದೇನೆ ಎಂದು ಹೇಳಿದರು.

ಆಂಧ್ರ ಪ್ರದೇಶದಲ್ಲಿ ತಂಬಾಕಿನ ಬೆಲೆ ಪ್ರತಿ ಕೆಜಿಗೆ ಸರಾಸರಿ 320 ರೂ ಇದೆ. ಕರ್ನಾಟಕದಲ್ಲಿ ಪ್ರತಿ ಕೆಜಿಗೆ 265 ರೂ ಇದೆ. ಕಡಿಮೆ ಬೆಲೆಯಿಂದಗಾಗಿ ಬಡ ಹಾಗೂ ಮಧ್ಯಮ ಗಾತ್ರದ ಬೆಳೆಗಾರರಿಗೆ ಬಹಳ ನಷ್ಟವಾಗುತ್ತಿದೆ ಎಂಬ ಅಂಶವನ್ನು ಗೋಯಲ್ ಅವರ ಗಮನಕ್ಕೆ ತರಲಾಗಿದೆ ಎಂದು ಅವರು ತಿಳಿಸಿದರು.

ಐಟಿಸಿಯಂತಹ ಬೃಹತ್ ಕಂಪನಿಗಳು ಇಂತಹ ಬೆಳೆಗಾರರಿಂದ ನೇರವಾಗಿ ತಂಬಾಕು ಖರೀದಿಸುವಂತೆ ಸೂಚನೆ ಕೊಡಬೇಕು ಎಂದು ಪಿಯೂಷ್ ಗೋಯಲ್ ಅವರಲ್ಲಿ ಮನವಿ ಮಾಡಲಾಗಿದೆ ಎಂದು ನಿಖಿಲ್ ಮಾಹಿತಿ ನೀಡಿದರು.

ಈ ಬಗ್ಗೆ ಅತ್ಯಂತ ಸಕಾರಾತ್ಮಕವಾಗಿ ಸಚಿವರು ಸ್ಪಂದಿಸಿ, ಅಧಿಕಾರಿಗಳಿಗೆ ಕೆಲ ಆದೇಶಗಳನ್ನು ನೀಡಿದ್ದಾರೆ. ಮತ್ತೊಮ್ಮೆ ಅಧಿಕಾರಿಗಳನ್ನು ಭೇಟಿ ಮಾಡಿ ತಂಬಾಕು ಬೆಳೆಗಾರರ ಸಮಸ್ಯೆಗಳ ಬಗ್ಗೆ ಆಮೂಲಾಗ್ರವಾಗಿ ಚರ್ಚೆ ಮಾಡುವಂತೆ ಹೇಳಿದರು. ಅದರಂತೆ ನಾವು ಅವರ ಇಲಾಖೆಯ ಅಧಿಕಾರಿಗಳನ್ನು ಭೇಟಿಯಾಗಿ ಮಾಹಿತಿ ಕೊಡಲಿದ್ದೇವೆ ಎಂದು ನಿಖಿಲ್ ಸ್ಪಷ್ಟಪಡಿಸಿದರು.

ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಲ್ಲೇಶ್ ಬಾಬು,
ಮಾಜಿ ಸಚಿವ ಸಾ.ರಾ.ಮಹೇಶ್, ಹುಣಸೂರು ಶಾಸಕ ಜಿ.ಟಿ.ಹರೀಶ್ ಗೌಡ ಹಾಗೂ ತಂಬಾಕು ಬೆಳೆಗಾರರು ಈ ವೇಳೆ ಹಾಜರಿದ್ದರು.

ತಂಬಾಕು ಬೆಳೆಗೆ ಬೆಂಬಲ ಬೆಲೆ ನೀಡಲು ಕೇಂದ್ರ ಸಚಿವರಿಗೆ ನಿಖಿಲ್ ಮನವಿ Read More

ನಬಾರ್ಡ್ ಹಣದಲ್ಲಿ ಶೇ58 ರಷ್ಟು ಕಡಿತ:ಸಿಎಂ ಆಕ್ರೋಶ

ನವದೆಹಲಿ: ರಾಜ್ಯದ ರೈತರಿಗೆ ನೀಡಬೇಕಾಗಿದ್ದ ನಬಾರ್ಡ್ ಹಣದಲ್ಲಿ ಶೇ58 ರಷ್ಟು ಕಡಿತಗೊಳಿಸಿರುವುದರಿಂದ ರೈತರು ಲೇವಾದೇವಿದಾರರ ಸುಳಿಗೆ ಸಿಲುಕಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತೀವ್ರ ಆತಂಕ ವ್ಯಕ್ತಪಡಿಸಿದರು.

ದೆಹಲಿಯಲ್ಲಿ ಪ್ರಧಾನಿ‌‌ ಮೋದಿ ಅವರನ್ನು ಭೇಟಿಯಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ,ಕೇಂದ್ರ ಸರ್ಕಾರ ರೈತರಿಗೆ ನೀಡುತ್ತಿದ್ದ ಸಬ್ಸಿಡಿ ಸಾಲ ಕಡಿತಗೊಳಿಸಿದ್ದರಿಂದ ರಾಜ್ಯದಲ್ಲಿ ಮತ್ತು ದೇಶದಲ್ಲಿ ಆಹಾರ ಉತ್ಪಾದನೆಯ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯದ ರೈತರಿಗೆ ಮಾತ್ರ ನಬಾರ್ಡ್ ಸಾಲದ ಪ್ರಮಾಣ ಕಡಿಮೆ ಮಾಡಿಲ್ಲ. ಇಡೀ ದೇಶದಲ್ಲಿ ಕಡಿತಗೊಳಿಸಲಾಗಿದೆಯಲ್ಲವೆ ಎಂಬ ವರದಿಗಾರರ ಪ್ರಶ್ನೆಗೆ, ಇದರಿಂದ ಇಡೀ ದೇಶದ ರೈತರನ್ನು ಸಂಕಷ್ಟಕ್ಕೆ ದೂಡಿದಂತಾಗಿದೆ ಎಂದು ಉತ್ತರಿಸಿದರು.

ನಬಾರ್ಡ್ ಶೇ.4.5 ರಷ್ಟು ಬಡ್ಡಿಗೆ ರೈತರ ಸಾಲದ ಹಣ ನೀಡುತ್ತಿತ್ತು.ಈ 4.5 ಬಡ್ಡಿಯನ್ನು ಸರ್ಕಾರವೇ ಭರಿಸುತ್ತಿತ್ತು. ಈಗ ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕ್ ಗಳಿಂದ ಸಾಲ ಪಡೆಯುವಂತೆ ಕೇಂದ್ರ ಸರ್ಕಾರ ಹೇಳುತ್ತಿದೆ. ಶೇ10 ಬಡ್ಡಿ ದರದಲ್ಲಿ ವಾಣಿಜ್ಯ ಬ್ಯಾಂಕ್ ಗಳು ಸಾಲ ನೀಡುತ್ತವೆ. ಇದರಿಂದ ಬ್ಯಾಂಕ್ ಗಳಿಗೆ ಲಾಭ ಆಗುತ್ತದೆಯೇ ಹೊರತು ರೈತರಿಗೆ ಅನುಕೂಲ ಇಲ್ಲ ಎಂದು ತಿಳಿಸಿದರು.

15 ನೇ ಹಣಕಾಸು ಆಯೋಗದಲ್ಲೂ ರಾಜ್ಯಕ್ಕೆ ಅನ್ಯಾಯ ಆಯಿತು. ಭದ್ರಾ ಮೇಲ್ದಂಡೆ ಯೋಜನೆಗೆ 5000 ಕೋಟಿ ಘೋಷಿಸಿ ಒಂದು ಪೈಸೆಯನ್ನೂ ಕೊಡಲಿಲ್ಲ. ಫೆರಿಫೆರಲ್ ರಿಂಗ್ ರಸ್ತೆಗೂ ಕೊಡಲಿಲ್ಲ. ಇವೆಲ್ಲದರಿಂದ ರಾಜ್ಯಕ್ಕೆ 11000 ಕೋಟಿ ರೂ ನಷ್ಟವಾಗಿದ್ದು ಅದನ್ನು ಪ್ರಧಾನಮಂತ್ರಿಯವರಿಗೆ ನೆನಪಿಸಿದ್ದೇವೆ, ಈ ಬಾರಿ ನಬಾರ್ಡ್ ಮೂಲಕ ಆಗಿರುವ ಅನ್ಯಾಯವನ್ನು ಸರಿಪಡಿಸಲು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ರಾಜ್ಯಕ್ಕೆ ನಿರಂತರ ಅನ್ಯಾಯ ಆಗುತ್ತಿದೆ. ಮಹದಾಯಿ, ಮೇಕೆದಾಟುಗೆ ಅನುಮತಿ ನೀಡುತ್ತಿಲ್ಲ. ಇಷ್ಟಾದರೂ ರಾಜ್ಯದಿಂದ ಆಯ್ಕೆ ಆಗಿರುವ ಬಿಜೆಪಿ ಸಂಸದರು ಬಾಯಿ ಬಿಡುತ್ತಿಲ್ಲ. ಮಣ್ಣಿನ ಮಗ ಅಂದುಕೊಂಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಏನು ಮಾಡುತ್ತಿದ್ದಾರೆ. ರಾಜ್ಯಸಭಾ ಸದಸ್ಯರಾದ ಮಾಜಿ ಪ್ರಧಾನಿ ದೇವೇಗೌಡರೂ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಬಾಯಿ ಬಿಡುತ್ತಿಲ್ಲ ಏಕೆ ಎಂದು ಸಿಎಂ ಕಾರವಾಗಿ ಪ್ರಶ್ನಿಸಿದರು.

ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ, ಪುನಾರಚನೆಯಾಗಲಿದೆಯೆ ಎಂಬ ಮಾಧ್ಯಮಗಳ ಪ್ರಶ್ನೆಗಳಿಗೆ,ಇದಕ್ಕೆ ಉತ್ತರ ಕೊಡಬೇಕಾದವರು ಮಾಧ್ಯಮಗಳವರೇ ಹೊರತು ನಾನಲ್ಲ, ಸಂಪುಟ ವಿಸ್ತರಣೆ, ಪುನಾರಚನೆ ಉದ್ದೇಶ ಸಧ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.

ಮಾಧ್ಯಮಗಳೇ ಈ ಬಗ್ಗೆ ಸುದ್ದಿಗಳನ್ನು ಬಿತ್ತರಿಸುತ್ತಿವೆ, ಸಂಭವನೀಯ ಸಚಿವರ ಪಟ್ಟಿಯನ್ನೂ ಪ್ರಕಟಿಸುತ್ತಿವೆ,ಹೀಗಾಗಿ ಪುನಾರಚನೆ, ವಿಸ್ತರಣೆ ಕುರಿತಾದ ಪ್ರಶ್ನೆಗಳಿಗೆ ಮಾಧ್ಯಮಗಳೇ ಉತ್ತರಿಸಬೇಕು ಎಂದರು.

ಸಂಪುಟ ಪುನಾರಚನೆ, ವಿಸ್ತರಣೆ ಕುರಿತಂತೆ ರಾಹುಲ್ ಗಾಂಧಿ ಅಥವಾ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚೆ ಮಾಡಿಲ್ಲ. ನಾಗೇಂದ್ರ ಅವರು ಸಂಪುಟಕ್ಕೆ ಸೇರ್ಪಡೆ ಆಗಲಿದ್ದಾರೆ. ಆದರೆ ಈಗಲೇ ಅಲ್ಲ ಎಂದು ಹೇಳಿದರು.

ನಬಾರ್ಡ್ ಹಣದಲ್ಲಿ ಶೇ58 ರಷ್ಟು ಕಡಿತ:ಸಿಎಂ ಆಕ್ರೋಶ Read More

ರಾಜ್ಯದ ನೀರಾವರಿ ವಿಚಾರ ಕುರಿತು ಚರ್ಚಿಸಲು ಪ್ರಧಾನಿ ಭೇಟಿ:ಡಿಕೆಶಿ

ನವದೆಹಲಿ: ರಾಜ್ಯದ ನೀರಾವರಿ ವಿಚಾರ ಸೇರಿದಂತೆ ಕೆಲವು ವಿಷಯಗಳ ಕುರಿತು ಚರ್ಚಿಸಲು ಪ್ರಧಾನ ಮಂತ್ರಿ ಮೋದಿಯವರನ್ನು ಭೇಟಿ ಮಾಡಲಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ,ವನ್ಯಜೀವಿ ಇಲಾಖೆ ಸಚಿವರು ಮತ್ತು ಮಂಡಳಿಯಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರನ್ನು ಈಗಾಗಲೇ ಭೇಟಿ ಮಾಡಿದ್ದೇವೆ. ವನ್ಯಜೀವಿ ಮಂಡಳಿಗೆ ಪ್ರಧಾನಿಯವರೇ ಅಧ್ಯಕ್ಷರಾಗಿದ್ದಾರೆ. ಸ್ಥಾಯಿ ಸಮಿತಿಗೆ ಸಚಿವರು ಅಧ್ಯಕ್ಷರಾಗಿದ್ದಾರೆ ಎಂದು ಹೇಳಿದರು.

ಕಳಸಾ ಬಂಡೂರಿ ನಾಲಾ ಯೋಜನೆ ವಿಚಾರದಲ್ಲಿ ಮಧ್ಯಪ್ರವೇಶಿಸಿ ಅಗತ್ಯವಿರುವ ಅರಣ್ಯ ಮತ್ತು ವನ್ಯಜೀವಿ ಮಂಡಳಿ ಅನುಮತಿ ಕೊಡಿಸಬೇಕು ಎಂದು ಮನವಿ ಮಾಡಿದ್ದೇನೆ ಎಂದು ಡಿಕೆಶಿ ತಿಳಿಸಿದರು.

ಹಾಸನ ಸಮಾವೇಶ ವಿರುದ್ಧ ಎಐಸಿಸಿ ನಾಯಕರಿಗೆ ಪತ್ರ ಹೋಗಿದೆಯಂತಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ,
ಪತ್ರ ಬಂದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ, ಆದರೆ ಮುಖ್ಯಮಂತ್ರಿಗಳು ನನಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. ಅದಕ್ಕಿಂತ ಹೆಚ್ಚು ನನಗೆ ಗೊತ್ತಿಲ್ಲ, ಪಕ್ಷದ ಉಪಸ್ಥಿತಿ ಇದ್ದೇ ಇರುತ್ತದೆ ಎಂದು ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.

ರಾಜ್ಯದ ನೀರಾವರಿ ವಿಚಾರ ಕುರಿತು ಚರ್ಚಿಸಲು ಪ್ರಧಾನಿ ಭೇಟಿ:ಡಿಕೆಶಿ Read More

ಪ್ರಿಯಾಂಕಾ ಗಾಂಧಿ ಪ್ರಮಾಣವಚನಸ್ವೀಕಾರ

ನವದೆಹಲಿ: ಕೈಯಲ್ಲಿ ಸಂವಿಧಾನ ಪುಸ್ತಕ ಹಿಡಿದು ಸಂಸದರಾಗಿ ಪ್ರಿಯಾಂಕಾ ಗಾಂಧಿ ಪ್ರಮಾಣ ವಚನ ಸ್ವೀಕರಿಸಿದರು.

ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ ಗಾಂಧಿ ವಯನಾಡ್‌ ಮತ್ತು ರಾಯ್‌ಬರೇಲಿ ಕ್ಷೇತ್ರಗಳಿಂದ ಸ್ಪರ್ಧಿಸಿ ಗೆದ್ದಿದ್ದರು. ಕೊನೆಗೆ ವಯನಾಡ್‌ ಕ್ಷೇತ್ರವನ್ನು ಬಿಟ್ಟರು.

ಅವರಿಂದ ತೆರವಾದ ಸ್ಥಾನಕ್ಕೆ ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದಿದ್ದಾರೆ.

ನವದೆಹಲಿಗೆ ಭೇಟಿ ನೀಡಿರುವ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಿಯಾಂಕಾ ಅವರನ್ನು ಭೇಡಿಯಾಗಿ ಹೂಗುಚ್ಛ ನೀಡಿ ಶುಭ ಹಾರೈಸಿದರು.

ಪ್ರಿಯಾಂಕಾ ಗಾಂಧಿ ಪ್ರಮಾಣವಚನಸ್ವೀಕಾರ Read More

ಇವಿಎಂ ಬದಲು ಬ್ಯಾಲೆಟ್ ಪೇಪರ್ ಕೋರಿದ್ದ ಪಿಐಎಲ್ ವಜಾ

ಬೆಂಗಳೂರು: ಮತಯಂತ್ರಗಳ (ಇವಿಎಂ) ಬದಲು ಬ್ಯಾಲೆಟ್ ಪೇಪರ್ ಮತದಾನ ವ್ಯವಸ್ಥೆಯನ್ನು ಮತ್ತೆ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಬ್ಯಾಲೆಟ್ ಪೇಪರ್ ಬದಲು ಇವಿಎಂ ಜಾರಿಗೊಳಿಸಿದ ಕ್ರಮ ಪ್ರಶ್ನಿಸಿ ಡಾ.ಕೆ.ಎ.ಪೌಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿಕ್ರಂ ನಾಥ್ ಮತ್ತು ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿದೆ. ಇದರಿಂದಾಗಿ ಚುನಾವಣೆಗಳಲ್ಲಿ ಇವಿಎಂಗಳ ಬಳಕೆಯ ಹಾದಿ ಸುಗಮವಾಗಿದೆ.

ಈ ಹಿಂದೆ ಆಂದ್ರದಲ್ಲಿನ ರಾಜಕೀಯ ನಾಯಕರ ಹೇಳಿಕೆಗಳನ್ನು ಗಮನಿಸಿದಾಗ ರಾಜಕೀಯ ನಾಯಕರಾದ ಚಂದ್ರಬಾಬು ನಾಯ್ಡು ಸೋತಾಗ ಮತ್ತು ಜಗನ್ ಮೋಹನ್ ರೆಡ್ಡಿ ಇತ್ತೀಚಿನ ಚುನಾವಣೆಗಳಲ್ಲಿ ಸೋತಾಗ ಅವರೂ ಸಹ ಒಬ್ಬರಿಗೊಬ್ಬರು ಇವಿಎಂ ಗಳನ್ನು ತಿರುಚಬಹುದು ಎಂಬ ಆರೋಪ-ಪ್ರತ್ಯರೋಪಗಳನ್ನು ಸ್ಮರಿಸಿ ಅರ್ಜಿದಾರರ ವಾದವನ್ನು ತಳ್ಳಿಹಾಕಿದರು.

ಚುನಾವಣೆಯಲ್ಲಿ ಗೆದ್ದರೆ ಇವಿಎಂಗಳನ್ನು ತಿರುಚಿಲ್ಲ, ಸೋತಾಗ ಇವಿಎಂಗಳನ್ನು ತಿರುಚಲಾಗುತ್ತದೆ ಎಂದು ಹೇಳಲಾಗುತ್ತದೆ. ಹೀಗಾಗಿ ಇಂತಹ ವಾದ ಮಂಡಿಸಲು ಇದು ಸೂಕ್ತ ಜಾಗ ಅಲ್ಲ ಎಂದು ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.

ಅರ್ಜಿದಾರರು, ಇವಿಎಂ ಬದಲು ಬ್ಯಾಲೆಟ್ ಪೇಪರ್ ಮತದಾನ ವ್ಯವಸ್ಥೆಯನ್ನು ಪುನಃ ಸ್ಥಾಪಿಸಬೇಕು ಎಂಬ ಕೋರಿಕೆಯೊಂದಿಗೆ, ಚುನಾವಣೆಯ ಸಮಯದಲ್ಲಿ ಹಣ, ಮದ್ಯ ಸೇರಿದಂತೆ ಆಮಿಷಗಳನ್ನು ಒಡ್ಡುವುದು ಸಾಬೀತಾದಲ್ಲಿ ಅಭ್ಯರ್ಥಿಗಳನ್ನು ಕನಿಷ್ಠ 5 ವರ್ಷ ಚುನಾವಣಾ ಸ್ಪರ್ಧೆಯಿಂದ ನಿಷೇಧಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು. ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ಮತದಾರರಿಗೆ ಶಿಕ್ಷಣ ಕಾರ್ಯಕ್ರಮ ಆಯೋಜಿಸಬೇಕು. ರಾಜಕೀಯ ಪಕ್ಷಗಳ ನಿಧಿಯನ್ನು ಪರಿಶೀಲಿಸಲು ತನಿಖಾ ವ್ಯವಸ್ಥೆ ರೂಪಿಸಬೇಕು. ಚುನಾವಣಾ ಸಂಬಂಧಿ ಹಿಂಸಾಚಾರಗಳನ್ನು ತಡೆಗಟ್ಟಲು ನೀತಿ ರೂಪಿಸಬೇಕು ಎಂದು ಮನವಿ ಮಾಡಿದ್ದರು.

ಈ ಎಲ್ಲಾ ಕೋರಿಕೆಗಳನ್ನು ತಳ್ಳಿಹಾಕಿದ ವಿಭಾಗೀಯ ಪೀಠ, ರಾಜಕೀಯ ಪಕ್ಷಗಳಿಗೆ ಈ ವ್ಯವಸ್ಥೆಯಿಂದ ಯಾವುದೇ ತೊಂದರೆ ಇಲ್ಲ, ನಿಮಗೆ ಸಮಸ್ಯೆ ಇದೆ ಎಂದು ಅಭಿಪ್ರಾಯಪಟ್ಟಿತು.

ಈ ಎಲ್ಲಾ ಕೋರಿಕೆಗಳನ್ನು ವಿಭಾಗೀಯ ಪೀಠ, ನಾವು ಇದನ್ನು ತಳ್ಳಿಹಾಕುತ್ತಿದ್ದೇವೆ. ನೀವು ಇದನ್ನೆಲ್ಲ ವಾದಿಸುವ ಸ್ಥಳ ಇದು ಅಲ್ಲ ಎಂದು ಹೇಳಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿ ಆದೇಶಿಸಿತು.

ಇವಿಎಂ ಬದಲು ಬ್ಯಾಲೆಟ್ ಪೇಪರ್ ಕೋರಿದ್ದ ಪಿಐಎಲ್ ವಜಾ Read More

ಅದಾನಿಗೆ ಕೇಂದ್ರ ಸರ್ಕಾರ ಪೂರ್ಣ ಬೆಂಬಲ ನೀಡುತ್ತಿದೆ-ಖರ್ಗೆ ಆರೋಪ

ನವದೆಹಲಿ: ಕೇಂದ್ರ ಸರ್ಕಾರ ಅದಾನಿಗೆ ಸಂಪೂರ್ಣ ಬೆಂಬಲ ಮಾಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಅದಾನಿ ವಿರುದ್ಧ ಯುಎಸ್ ಕೋರ್ಟ್‌ನಿಂದ ವಾರೆಂಟ್ ಜಾರಿ ವಿಚಾರವಾಗಿ ಮಾತನಾಡಿದ ಖರ್ಗೆ, ಗೌತಮ್ ಅದಾನಿಯನ್ನು ಕೂಡಲೇ ಕೇಂದ್ರ ಸರ್ಕಾರ ಬಂಧನ ಮಾಡಬೇಕು. ಆದರೆ ಪ್ರಧಾನಿ ಮೋದಿ, ಅಮಿತ್ ಶಾ ಅದಾನಿಯನ್ನ ರಕ್ಷಣೆ ಮಾಡುತ್ತಿದ್ದಾರೆ ಎಂದು ದೂರಿದರು.

ಈ ವಿಚಾರವನ್ನ ನಾವು ಸಂಸತ್ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ. ಅದಾನಿ ಕಾನೂನು ಬಾಹಿರ ಕೆಲಸ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಕೇಸ್‌ಲ್ಲಿ ಭಾಗಿಯಾಗಿದ್ದಾರೆ ಎಂದು ಅನೇಕ ವರ್ಷಗಳಿಂದ ಹೇಳುತ್ತಿದ್ದೇವೆ. ಇಷ್ಟೆಲ್ಲಾ ಇದ್ದರೂ ಮೋದಿ ಸ್ವಲ್ವವೂ ಈ ಬಗ್ಗೆ ಮಾತನಾಡಲ್ಲ. ಅಮಿತ್ ಶಾ ಕಡೆ ಇಡಿ ಇದೆ. ಸಿಬಿಐ ಇದೆ. ಯಾಕೆ ತನಿಖೆ ಮಾಡುತ್ತಿಲ್ಲ ಎಂದು ಕಾರವಾಗಿ ಪ್ರಶ್ನಿಸಿದರು.

ಹಿಂಡೆನ್‌ಬರ್ಗ್ ಸಂಶೋಧನಾ ವರದಿ ಪ್ರಕಟಿಸಿದಾಗ ಇದೆಲ್ಲ ಸುಳ್ಳು ಅಂದರು. ಈಗ ವಿದೇಶದಲ್ಲಿ ಅಕ್ರಮದ ಬಗ್ಗೆ ಚರ್ಚೆ ಆಗುತ್ತಿದೆ. ನಮ್ಮ ದೇಶದ ಆಸ್ತಿಯನ್ನ ಅದಾನಿಗೆ ಕೊಡುತ್ತಿದ್ದಾರೆ. ಏರ್ಪೋರ್ಟ್ ಜಮೀನು ಸೇರಿ ಎಲ್ಲಾ ಅದಾನಿಗೆ ಕೊಡುತ್ತಿದ್ದಾರೆ.ಆತ ನ್ಯಾಯವಾಗಿ ಮಾಡಿಕೊಂಡರೆ ಪರವಾಗಿಲ್ಲ. ಒಬ್ಬನಿಗೆ ಶ್ರೀಮಂತ ಮಾಡಲು ಹೀಗೆ ಅಕ್ರಮ ಮಾಡುತ್ತಿದ್ದಾರೆ, ಅಕ್ರಮದ ಬಗ್ಗೆ ತನಿಖೆ ಆಗಬೇಕು ಅದಾನಿ ಬಂಧನ ಮಾಡಬೇಕು ಎಂದು ಆಗ್ರಹಿಸುತ್ತೇವೆ ಎಂದು ತಿಳಿಸಿದರು.

ಮಹಾರಾಷ್ಟ್ರ, ಜಾರ್ಖಂಡ್ ರಾಜ್ಯಗಳಲ್ಲಿ ಇಂಡಿಯಾ ಕೂಟ ಗೆಲ್ಲಲಿದೆ ಎರಡು ರಾಜ್ಯದಲ್ಲಿಯೂ ನಮಗೆ ನಿರೀಕ್ಷೆ ಇದೆ. ನಾವು ಉತ್ತಮವಾಗಿ ಕೆಲಸ ಮಾಡಿದ್ದೇವೆ. ನಾಳೆ ಫಲಿತಾಂಶ ಬರುತ್ತಲ್ಲಾ ನೋಡೋಣ. ಈಗ ನಾವು ಏನೇ ಹೇಳಿದರೂ ಅದೆಲ್ಲಾ ಊಹಾಪೋಹಗಳು ಆಗುತ್ತವೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಅದಾನಿಗೆ ಕೇಂದ್ರ ಸರ್ಕಾರ ಪೂರ್ಣ ಬೆಂಬಲ ನೀಡುತ್ತಿದೆ-ಖರ್ಗೆ ಆರೋಪ Read More

ದೇಶದ ಹಾಲು ಉತ್ಪಾದನೆಯಲ್ಲಿ ಕರ್ನಾಟಕ 2 ನೆ ಸ್ಥಾನದಲ್ಲಿ: ಸಿದ್ದರಾಮಯ್ಯ

ನವದೆಹಲಿ: ದೇಶದ ಹಾಲು ಉತ್ಪಾದನೆಯಲ್ಲಿ ಗುಜರಾತ್ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ನವದೆಹಲಿಯಲ್ಲಿ ಗುರುವಾರ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಲ ಹಾಗೂ ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ ನಿಯಮಿತದ ವತಿಯಿಂದ ನಂದಿನಿ ವಿವಿಧ ಶ್ರೇಣಿಯ ಹಾಲು ಬಿಡುಗಡೆ ಮಾಡಿ ಸಿಎಂ ಮಾತನಾಡಿದರು.

ದೆಹಲಿ ನಗರದಲ್ಲಿ ಕೆ.ಎಂ.ಎಫ್ ಮತ್ತು ಮಂಡ್ಯ ಹಾಲು ಒಕ್ಕೂಟ ಸೇರಿ ವಿವಿಧ ಶ್ರೇಣಿಯ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಇಡೀ ದೇಶದಲ್ಲಿ ರೈತರ ಉಪಕಸುಬು ಪಶುಸಂಗೋಪನೆ. ಗುಜರಾತ್ ನಲ್ಲಿ ಕುರಿಯನ್ ಅವರು ಹಾಲು ಉತ್ಪಾದಕರ ಸಂಘವನ್ನು ಪ್ರಾರಂಭ ಮಾಡಿದರು ಎಂದು ತಿಳಿಸಿದರು.

ಹಿಂದೆ ಪಶುಸಂಗೋಪನಾ ಸಚಿವನಾಗಿದ್ದು, ಒಂದು ವರ್ಷ ಕಾಲ ಕರ್ನಾಟಕ ಹಾಲು ಮಹಾಮಂಡಲದ ಅಧ್ಯಕ್ಷನೂ ಆಗಿದ್ದೆ ಎಂದು ಸಿದ್ದರಾಮಯ್ಯ ಸ್ಮರಿಸಿದರು.

ಪಶುಸಂಗೋಪನಾ ಸಚಿವನಾಗಿದ್ದಾಗಲೇ ಹಾಲು ಉತ್ಪಾದಕರಿಗೆ ಶೋಷಣೆಯಾಗುತ್ತಿದ್ದುದ್ದನ್ನು ಮನಗಂಡು ಶಾಶ್ವತ ಮಾರುಕಟ್ಟೆ ಕಲ್ಪಿಸಲು ಹಾಲು ಉತ್ಪಾದಕರ ಸಂಘಗಳನ್ನು ರಚಿಸಲಾಯಿತು ಎಂದು ಹೇಳಿದರು.

ರಾಜ್ಯದಲ್ಲಿ ಪ್ರತಿದಿನ 92 ರಿಂದ 93 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ರೈತರಿಂದ ಲೀ. ಗೆ 32 ರೂ.ಗಳಿಗೆ ಹಾಲು ಖರೀದಿಸಲಾಗುತ್ತಿದ್ದು, ರಾಜ್ಯ ಸರ್ಕಾರ ಕ್ಷೀರಧಾರೆ ಯೋಜನೆಯಡಿ ಹಾಲು ಉತ್ಪಾದಕರಿಗೆ ಪ್ರತಿ ಲೀಟರಿಗೆ 5 ರೂ. ಪ್ರೋತ್ಸಾಹಧನ ನೀಡುತ್ತಿದೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾಲದಲ್ಲಿ 2 ರೂ. ಇದ್ದ ಪ್ರೋತ್ಸಾಹಧನ, ನಂತರ 3 ರೂ. ಆಯಿತು. ನಾನು ಮುಖ್ಯಮಂತ್ರಿಯಾದ ನಂತರ ಇದನ್ನು 5 ರೂ.ಗೆ ಹೆಚ್ಚಿಸಲು ಘೋಷಣೆ ಮಾಡಲಾಯಿತು ಎಂದು ಸಿಎಂ ತಿಳಿಸಿದರು.

ನಮ್ಮ ರಾಜ್ಯದಲ್ಲಿ ಅಂದಾಜು 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಆಂಧ್ರಪ್ರದೇಶ, ಮಹಾರಾಷ್ಟ್ರಕ್ಕೆ ಪ್ರತಿ ದಿನ ತಲಾ 2.5 ಲಕ್ಷ ಲೀ.ಟರ್ ಹಾಲು ಪೂರೈಕೆಯಾಗುತ್ತಿದೆ.ಈಗ ಆರಂಭಿಕ ಹಂತದಲ್ಲಿ 2.5 ಲಕ್ಷ ಲೀಟರ್ ಹಾಲು ನವದೆಹಲಿಗೆ ಪೂರೈಸುವ ಯೋಜನೆ ರೂಪಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಸಚಿವರುಗಳಾದ ವೆಂಕಟೇಶ್, ಚೆಲುವರಾಯಸ್ವಾಮಿ, ಬೈರತಿ ಸುರೇಶ್, ಕರ್ನಾಟಕ ಹಾಲು ಮಹಾಮಂಡಲದ ಅಧ್ಯಕ್ಷ ಭೀಮಣ್ಣ ನಾಯಕ್, ರಾಜ್ಯ ಸಭಾ ಸದಸ್ಯ ಈರಣ್ಣ ಕರಾಡಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ಮಂಡ್ಯ ಹಾಲು ಒಕ್ಕೂಟದ ಅಧ್ಯಕ್ಷ ತಿಮ್ಮೇಗೌಡ ಮತ್ತಿತರರು ಉಪಸ್ಥಿತರಿದ್ದರು.

ದೇಶದ ಹಾಲು ಉತ್ಪಾದನೆಯಲ್ಲಿ ಕರ್ನಾಟಕ 2 ನೆ ಸ್ಥಾನದಲ್ಲಿ: ಸಿದ್ದರಾಮಯ್ಯ Read More