ಸುನೀತಾ ವಿಲಿಯಮ್ಸ್ ಗೆ ಶುಭ ಕೋರಿದ ಮೋದಿ

ನವದೆಹಲಿ: ಒಂಬತ್ತು ತಿಂಗಳ ನಂತರ ಸುರಕ್ಷಿತವಾಗಿ ಭೂಮಿಗೆ ಮರಳಿದ ಗಗನಯಾನಿ ಸುನೀತಾ ವಿಲಿಯಮ್ಸ್
ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ.

ಸುನೀತಾ ವಿಲಿಯಮ್ಸ್ ಭೂಮಿಗೆ ಮರಳುತ್ತಿದ್ದಂತೆ‌ ಮೋದಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಶುಭ ಕೋರಿದ್ದಾರೆ,ಅಲ್ಲದೆ ಭಾರತ ಭೇಟಿಗೆ ಸುನೀತಾಗೆ ಆಹ್ವಾನ ಕೂಡಾ ನೀಡಿದ್ದಾರೆ.

ಗಗನಯಾನಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಬಂದಿಳಿದಿದ್ದಾರೆ.ವಿಷಯ ತಿಳಿದ ತಕ್ಷಣ ಮೋದಿ ಎಕ್ಸ್​ ನಲ್ಲಿ ಪೋಸ್ಟ್ ಮಾಡಿದ್ದು, ಸ್ವಾಗತ, ಭೂಮಿ ನಿಮ್ಮನ್ನು ಮಿಸ್ ಮಾಡಿಕೊಂಡಿತ್ತು. ಸುನೀತಾ ವಿಲಿಯಮ್ಸ್ ಮತ್ತು ಗಗನಯಾತ್ರಿಗಳು ಮತ್ತೊಮ್ಮೆ ಪರಿಶ್ರಮ ಎಂದರೆ ಏನು ಎಂದು ನಮಗೆ ತೋರಿಸಿದ್ದಾರೆ ಎಂದು ಬರೆದಿದ್ದಾರೆ.

ಅವರ ಅಚಲ ದೃಢಸಂಕಲ್ಪವು ಲಕ್ಷಾಂತರ ಜನರಿಗೆ ಶಾಶ್ವತವಾಗಿ ಸ್ಫೂರ್ತಿ ನೀಡುತ್ತದೆ ಎಂದು ಮೋದಿ ಹೇಳಿದ್ದಾರೆ.

ಮಾರ್ಗದರ್ಶಕ ಮತ್ತು ಐಕಾನ್ ಆಗಿರುವ ಸುನೀತಾ ವಿಲಿಯಮ್ಸ್ ತಮ್ಮ ವೃತ್ತಿಜೀವನದುದ್ದಕ್ಕೂ ಈ ಮನೋಭಾವವನ್ನು ಪ್ರದರ್ಶಿಸಿದ್ದಾರೆ. ಅವರ ಸುರಕ್ಷಿತ ಮರಳುವಿಕೆಯನ್ನು ಖಚಿತಪಡಿಸಿಕೊಳ್ಳಲು ದಣಿವರಿಯದೆ ಕೆಲಸ ಮಾಡಿದ ಎಲ್ಲರ ಬಗ್ಗೆ ನಮಗೆ ಬಹಳ ಹೆಮ್ಮೆಯಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಸುನೀತಾ ವಿಲಿಯಮ್ಸ್ ಗೆ ಶುಭ ಕೋರಿದ ಮೋದಿ Read More

ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಆಸ್ಪತ್ರಗೆ‌ ದಾಖಲು

ನವದೆಹಲಿ,ಮಾ.9: ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ತೀವ್ರ ಎದೆ ನೋವಿನಿಂದ ಬಳಲುತ್ತಿದ್ದು ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಏಮ್ಸ್ ಗೆ ಭೇಟಿ ನೀಡಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರ ಆರೋಗ್ಯ ವಿಚಾರಿಸಿದರು. ಉಪರಾಷ್ಟ್ರಪತಿಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು

ಏಮ್ಸ್‌ಗೆ ತೆರಳಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಜಿ ಅವರ ಆರೋಗ್ಯ ವಿಚಾರಿಸಿದೆ. ಅವರ ಉತ್ತಮ ಆರೋಗ್ಯ ಮತ್ತು ಶೀಘ್ರ ಚೇತರಿಕೆಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿ ಆನ್‌ಲೈನ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಕೂಡ ಧನ್ಕರ್ ಅವರ ಆರೋಗ್ಯ ವಿಚಾರಿಸಲು ಬೆಳಿಗ್ಗೆ ಏಮ್ಸ್‌ಗೆ ಭೇಟಿ ನೀಡಿದ್ದರು.

ಧನ್ಕರ್ ಅವರನ್ನು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಏಮ್ಸ್‌ಗೆ ದಾಖಲಿಸಲಾಗಿದೆ, ಅವರನ್ನು ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ. ರಾಜೀವ್ ನಾರಂಗ್ ಅವರ ನೇತೃತ್ವದಲ್ಲಿ ಕ್ರಿಟಿಕಲ್ ಕೇರ್ ಯೂನಿಟ್ (ಸಿಸಿಯು) ಗೆ ದಾಖಲಿಸಲಾಗಿದೆ, ಅವರ‌ ಆರೋಗ್ಯ ಈಗ ಸ್ಥಿರವಾಗಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿವೆ.

ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಆಸ್ಪತ್ರಗೆ‌ ದಾಖಲು Read More

ವಕ್ಫ್‌ ತಿದ್ದುಪಡಿ ಮಸೂದೆಗೆ ಕೇಂದ್ರ ಸಂಪುಟಗ್ರೀನ್ ಸಿಗ್ನಲ್

ನವದೆಹಲಿ: ಜಂಟಿ ಸಂಸದೀಯ ಸಮಿತಿ ನೀಡಿದ ವರದಿ ಮೇರೆಗೆ ವಕ್ಫ್ (ತಿದ್ದುಪಡಿ) ಮಸೂದೆಗೆ ಕೇಂದ್ರ ಸಚಿವ ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ.

ಫೆ.13ರಂದು ಸಂಸತ್ತಿನಲ್ಲಿ ಮಂಡಿಸಲಾದ ಜಂಟಿ ಸಂಸದೀಯ ಸಮಿತಿ (JPC) ವರದಿ ಆಧರಿಸಿ ಫೆ.19ರಂದು ನಡೆದ ಸಭೆಯಲ್ಲಿ ಸಂಪುಟ ತಿದ್ದುಪಡಿಗಳನ್ನು ಅಂಗೀಕರಿಸಿದ ಬಳಿಕ ಒಪ್ಪಿಗೆ ಸೂಚಿಸಲಾಗಿದೆ.

ಸಂಸತ್ತಿನಲ್ಲಿ 2025ರ ಬಜೆಟ್ ಅಧಿವೇಶನದ ಮೊದಲಾರ್ಧದಲ್ಲಿ ಪ್ರತಿಪಕ್ಷಗಳ ಗದ್ದಲದ ನಡುವೆ ವರದಿಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಂಡಿಸಲಾಯಿತು. ಈ ವೇಳೆ ವಿಕ್ಷಗಳು ಗದ್ದಲದಿಂದಾಗಿ ಸ್ವಲ್ಪ ಸಮಯದ ವರೆಗೆ ಕಲಾಪವನ್ನು ಮುಂದೂಡಲಾಯಿತು. ಅಲ್ಲದೇ ವಿಪಕ್ಷ ಸಂಸದರು ತಮ್ಮ ಭಿನ್ನಾಭಿಪ್ರಾಯವನ್ನು ಜೆಪಿಸಿ ವರದಿಯಲ್ಲಿ ತಿರುಚಲಾಗಿದೆ ಎಂದು ದೂರಿದರು. ಆದರೆ ಕೇಂದ್ರವು ಈ ಆರೋಪವನ್ನು ನಿರಾಕರಿಸಿತು.

ಕಳೆದ ವಾರವಷ್ಟೇ ಮಸೂದೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿತ್ತು. ಈ ಮೂಲಕ ಮಾರ್ಚ್ 10 ರಂದು ಪ್ರಾರಂಭವಾಗಲಿರುವ ಬಜೆಟ್ ಅಧಿವೇಶನದ ದ್ವಿತೀಯಾರ್ಧದಲ್ಲಿ ವಕ್ಫ್ ಆಸ್ತಿಗಳ ನೋಂದಣಿಯನ್ನು ಸುಗಮಗೊಳಿಸುವ ಗುರಿ ಹೊಂದಿದೆ.

ಬಿಜೆಪಿ ನಾಯಕ ಜಗದಾಂಬಿಕಾ ಪಾಲ್ ನೇತೃತ್ವದ ಜೆಪಿಸಿ, ಪ್ರತಿಪಕ್ಷಗಳ ಭಿನ್ನಾಭಿಪ್ರಾಯದ ನಡುವೆ ಶಾಸನಕ್ಕೆ ಹಲವು ತಿದ್ದುಪಡಿಗಳನ್ನು ಸೂಚಿಸಿದೆ. ಕಳೆದ ಜನವರಿಯಲ್ಲಿ ಜೆಪಿಸಿ ಸಭೆಯಲ್ಲಿ ವಿಪಕ್ಷ ಸಂಸದರು ಸೇರಿ ಇತರರು 44 ತಿದ್ದುಪಡಿಗಳಿಗೆ ಸೂಚಿಸಿದ್ದು,ಈ ಪೈಕಿ ಬಿಜೆಪಿ ನೇತೃತ್ವದ ಎನ್‌ಡಿಎ ಸದಸ್ಯರು ಪ್ರಸ್ತಾಪಿಸಿದ 14 ತಿದ್ದುಪಡಿಗಳನ್ನು ಮಾತ್ರವೇ ಜಂಟಿ ಸಂಸದೀಯ ಸಮಿತಿ ಅಂಗೀಕರಿಸಿದೆ.

ವಕ್ಫ್‌ ತಿದ್ದುಪಡಿ ಮಸೂದೆಗೆ ಕೇಂದ್ರ ಸಂಪುಟಗ್ರೀನ್ ಸಿಗ್ನಲ್ Read More

ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: 18 ಮಂದಿ ದುರ್ಮರಣ

ನವದೆಹಲಿ: ಮಹಾಕುಂಭ ಮೇಳಕ್ಕೆ ಹೋಗಲು ದೆಹಲಿ ರೈಲು ನಿಲ್ದಾಣದಲ್ಲಿ ಅತಿಯಾಗಿ ಜನ ಸೇರಿದ್ದರಿಂದ ಕಾಲ್ತುಳಿತ ಉಂಟಾಗಿ‌ 18 ಕ್ಕೂ ಹೆಚ್ಚು ಮಂದಿ ಮೃತಪಟ್ಟ ದಾರುಣ ಘಟನೆ ಶನಿ ರಾತ್ರಿ ಸಂಭವಿಸಿದೆ.

ದೆಹಲಿ ರೈಲು ನಿಲ್ದಾಣದಲ್ಲಿ ಮಹಾ ಕುಂಭಮೇಳಕ್ಕೆ ಎರಡು ರೈಲುಗಳು ಹೋಗಬೇಕಾಗಿತ್ತು,ಆದರೆ ರೈಲುಗಳು ಬರುವುದು ವಿಳಂಬವಾಗಿದ್ದರಿಂದ ಜನದಟ್ಟಣೆ ಉಂಟಾಗಿ 11 ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದಂತೆ 18 ಜನರು ಸಾವನ್ನಪ್ಪಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ,ರಾಷ್ಟ್ರಪತಿ ದ್ರೌಪದಿ ಮುರ್ಮು,ಸಚಿವರಾದ ವಿ.ಸೋಮಣ್ಣ,ಅಶ್ವಿನಿ ವೈಷ್ಣವ್,ರಾಜನಥ್ ಸಿಂಗ್ ಮತ್ತಿತರರು ಸಂತಾಪ ಸೂಚಿಸಿದ್ದಾರೆ.

ವಾರಾಂತ್ಯವಾಗಿದ್ದರಿಂದ ರೈಲು ನಿಲ್ದಾಣದಲ್ಲಿ ಕುಂಭ ಮೇಳಕ್ಕೆ ಹೋಗುವ ಭಕ್ತರ ಸಂಖ್ಯೆ ಹೆಚ್ಚಾಗಿದೆ,ಪ್ರಯಾಗ್‌ರಾಜ್ ಮೂಲಕ ಹಾದುಹೋಗುವ ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ಮತ್ತು ಭುವನೇಶ್ವರ ರಾಜಧಾನಿ ರೈಲುಗಳು ನಿಲ್ದಾಣಕ್ಕೆ ಬರುವುದು ವಿಳಂಬವಾದೆ. ಈ ರೈಲುಗಳ ಪ್ರಯಾಣಿಕರು 12, 13 ಮತ್ತು 14, 15ನೇ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಂತಿದ್ದರು.

ಆಗ ತಡವಾಗಿ ಪ್ರಯಾಗ್‌ರಾಜ್ ಎಕ್ಸ್‌ಪ್ರೆಸ್ ಪ್ಲಾಟ್‌ಫಾರ್ಮ್ ಸಂಖ್ಯೆ 14ಕ್ಕೆ ಬಂದಾಗ ಜನರು ಅದರಲ್ಲಿ ಹತ್ತಲು ಒಮ್ಮೆಗೆ ನುಗ್ಗಿದ್ದಾರೆ,ಈ‌ ವೇಳೆ ನೂಕುನುಗ್ಗಲಾಗಿ ಈ ಘೋರ ದುರ್ಘಟನೆ ನಡೆದು ಹೋಗಿದೆ.

ಕೇಂದ್ರ ಸರ್ಕಾರ ಈ ಘಟನೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ
10 ಲಕ್ಷ,ಗಂಭೀರವಾಗಿ ಗಾಯಗೊಂಡವರಿಗೆ 2.5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ‌.

ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: 18 ಮಂದಿ ದುರ್ಮರಣ Read More

ಸಿಎಂ ಸ್ಥಾನಕ್ಕೆ ಅತಿಶಿ ರಾಜೀನಾಮೆ

ನವದೆಹಲಿ: ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿದ್ದ ಆಮ್‌ ಆದ್ಮಿ ಪಕ್ಷ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಬೆನ್ನಲ್ಲೇ ಸಿಎಂ ಸ್ಥಾನಕ್ಕೆ ಅತಿಶಿ ರಾಜೀನಾಮೆ ಸಲ್ಲಿಸಿದ್ದಾರೆ.

ಕೇಂದ್ರ ಚುನಾವಣಾ ಆಯೋಗವು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕೃತ ಜಯ ಘೋಷಿಸಿದ ಒಂದು ದಿನದ ನಂತರ ಅಶಿತಿ, ರಾಜ್ಯಪಾಲ ವಿ.ಕೆ ಸಕ್ಸೇನಾ ಅವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಈ ಬಾರಿ ಚುನಾವಣೆಯಲ್ಲಿ ಆಪ್ ನ ಮಾಜಿ ಸಿಎಂ ಕೇಜ್ರಿವಾಲ್‌ ಸೇರಿದಂತೆ ಘಟಾನುಘಟಿ ನಾಯಕರೇ ಸೋಲುಂಡ ಹೊರತಾಗಿಯೂ ಅತಿಶಿ ತಮ್ಮ ಕಲ್ಕಾಜಿ ಕ್ಷೇತ್ರದಲ್ಲಿ ಮತ್ತೆ ಗೆಲುವು ಸಾಧಿಸಿದ್ದಾರೆ.

ಆರಂಭದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್‌ ಬಿಧೂರಿ ವಿರುದ್ಧ ತೀವ್ರ ಹಿನ್ನಡೆ ಅನುಭವಿಸಿದ್ದ ಅತಿಶಿ 8-9ನೇ ಸುತ್ತಿನ ಬಳಿಕ‌ ಸತತವಾಗಿ ಮುನ್ನಡೆ ಕಾಯ್ದುಕೊಂಡು ಗೆಲುವು ಸಾಧಿಸಿದ್ದರು.ಈಗ ಅವರು ತಮ್ಮ ಪಕ್ಷ ಸೋಲನುಭವಿಸಿದ ಹಿನ್ನೆಲೆಯಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಸಿಎಂ ಸ್ಥಾನಕ್ಕೆ ಅತಿಶಿ ರಾಜೀನಾಮೆ Read More

ದೆಹಲಿಯಲ್ಲಿ ಈಗಿನಿಂದ ಅಭಿವೃದ್ಧಿ,ನಂಬಿಕೆಯ ಹೊಸ ಯುಗ ಆರಂಭ:ಅಮಿತ್ ಶಾ

ನವದೆಹಲಿ: ದೆಹಲಿಯಲ್ಲಿ ಈಗಿನಿಂದ ಅಭಿವೃದ್ಧಿ ಮತ್ತು ನಂಬಿಕೆಯ ಹೊಸ ಯುಗ ಆರಂಭವಾಗಿದೆ ಎಂದು ಕೇಂದ್ರ ಗೃಹ ಸಚಿವರು ಅಮಿತ್ ಶಾ ಹೇಳಿದ್ದಾರೆ.

ದೆಹಲಿಯ ಜನ ತಮ್ಮ ಪಕ್ಷಕ್ಕೆ ಬೆಂಬಲ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ ಅಮಿತ್ ಶಾ, ಬಿಜೆಪಿ ತನ್ನ ಎಲ್ಲಾ ಭರವಸೆಗಳನ್ನು ಈಡೇರಿಸಲಿದೆ ಎಂದು ತಿಳಿಸಿದರು.

ಇದು ಮೋದಿ ಗ್ಯಾರಂಟಿ ಗೆಲುವು ಮತ್ತು ಮೋದಿಜಿಯವರ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ದೆಹಲಿಯ ಜನ ನಂಬಿಕೆ ಇಟ್ಟಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದು ಹೇಳಿದರು.

ಈ ಬೃಹತ್ ಜನಾದೇಶಕ್ಕಾಗಿ ದೆಹಲಿ ಜನರಿಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ, ಮೋದಿಯವರ ನೇತೃತ್ವದಲ್ಲಿ, ಬಿಜೆಪಿ ತನ್ನ ಎಲ್ಲಾ ಭರವಸೆಗಳನ್ನು ಈಡೇರಿಸಲು ಮತ್ತು ದೆಹಲಿಯನ್ನು ವಿಶ್ವದ ನಂಬರ್-1 ರಾಜಧಾನಿಯನ್ನಾಗಿ ಮಾಡಲು ದೃಢನಿಶ್ಚಯ ಮಾಡಿದೆ ಎಂದು ಅಮಿತ್ ಶಾ ನುಡಿದರು.

ದೆಹಲಿಯಲ್ಲಿ ಈಗಿನಿಂದ ಅಭಿವೃದ್ಧಿ,ನಂಬಿಕೆಯ ಹೊಸ ಯುಗ ಆರಂಭ:ಅಮಿತ್ ಶಾ Read More

ಜನಾದೇಶವನ್ನು ನಮ್ರತೆಯಿಂದ ಸ್ವೀಕರಿಸುತ್ತೇವೆ:ಕೇಜರಿವಾಲ್

ನವದೆಹಲಿ: ಜನಾದೇಶವನ್ನು ನಾವು ಅತ್ಯಂತ ನಮ್ರತೆಯಿಂದ ಸ್ವೀಕರಿಸುತ್ತೇವೆ ಎಂದು ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ.

ದೆಹಲಿ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಗೆದ್ದಿರುವುದಕ್ಕೆ ನಾನು ಅಭಿನಂದಿಸುತ್ತೇನೆ. ಚುನಾವಣೆಯಲ್ಲಿ ಅವರು ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತಾರೆ ಎಂಬುದಾಗಿ ಭಾವಿಸುತ್ತೇನೆ ಎಂದು ತಿಳಿಸಿದರು.

ಕಳೆದ 10 ವರ್ಷಗಳಲ್ಲಿ ನಾವು ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇವೆ, ರಚನಾತ್ಮಕ ವಿರೋಧ ಪಕ್ಷವಾಗಿ ಕೆಲಸ ಮಾಡುವುದರ ಜೊತೆಗೆ ಜನರ ನಡುವೆಯೇ ಇದ್ದು ಅವರಿಗೆ ಸೇವೆ ಸಲ್ಲಿಸುವುದನ್ನು ಮುಂದುವರಿಸುತ್ತೇವೆ ಎಂದು ಕೇಜರಿವಾಲ್ ಹೇಳಿದರು.

ಜನಾದೇಶವನ್ನು ನಮ್ರತೆಯಿಂದ ಸ್ವೀಕರಿಸುತ್ತೇವೆ:ಕೇಜರಿವಾಲ್ Read More

ದೆಹಲಿ ಚುನಾವಣೆಯಲ್ಲಿ ಸೋಲು:ಕೇಜ್ರಿವಾಲ್ ಕನಸು ಭಗ್ನ

ನವದೆಹಲಿ: ನವದೆಹಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯ ಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಸೋಲನುಭವಿಸಿದ್ದು ಆಪ್ ಗೆ ತೀವ್ರ ಮುಖ‌ಭಂಗ ವಾದಂತಾಗಿದೆ

ಬಿಜೆಪಿ ಅಭ್ಯರ್ಥಿ ಪರ್ವೇಶ್‌ ಸಾಹಿಬ್‌ ಸಿಂಗ್‌ ವಿರುದ್ಧ ಅರವಿಂದ್ ಕೇಜ್ರಿವಾಲ್ ಸೋಲನು ಭವಿಸಿದ್ದು, ದೆಹಲಿಗೆ ಹ್ಯಾಟ್ರಿಕ್ ಮುಖ್ಯಮಂತ್ರಿಯಾಗುವ ಕನಸು ನುಚ್ಚುನೂರಾಗಿದೆ.

ಕಳೆದ 2 ಚುನಾವಣೆಗಳಲ್ಲೂ ನವದೆಹಲಿ ಕ್ಷೇತ್ರದಿಂದಲೇ ಸ್ಪರ್ಧಿಸಿದ್ದ ಕೇಜ್ರಿವಾಲ್‌ ಸತತ 2 ಬಾರಿ ಸಿಎಂ ಆಗಿದ್ದರು. 3ನೇ ಬಾರಿಯೂ ಅದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಪರ್ವೇಶ್‌ ವಿರುದ್ಧ 3,000ಕ್ಕೂ ಅಧಿಕ ಮತಗಳ ಅಂತರದಿಂದ ಸೋತಿದ್ದಾರೆ.

ದೆಹಲಿ ಚುನಾವಣೆಯಲ್ಲಿ ಸೋಲು:ಕೇಜ್ರಿವಾಲ್ ಕನಸು ಭಗ್ನ Read More

ಖಾತೆ ತೆರೆಯದ ಕಾಂಗ್ರೆಸ್‌: ಕೈ ನಾಯಕರಿಗೆ ಮುಖಭಂಗ

ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ದೆಹಲಿ ಚುನಾವಣೆ ಫಲಿತಾಂಶ‌ ಪ್ರಕಟವಾಗಿದ್ದು,ಕಾಂಗ್ರೆಸ್ ಖಾತೆಯನ್ನೇ ತೆರೆಯದೆ ತೀವ್ರ ಮುಖಭಂಗ ಅನುಭವಿಸಿದೆ.

ಉಚಿತ ಗ್ಯಾರಂಟಿ ಘೋಷಿಸಿ ಸೀಮಿತ ಹೋರಾಟ ನಡೆಸಿದ ಕಾಂಗ್ರೆಸ್‌ ಒಂದೂ ಕ್ಷೇತ್ರದಲ್ಲೂ ಖಾತೆ ತೆರೆದಿಲ್ಲ,ಹಾಗಾಗಿ ಕೇಂದ್ರದ ಕಾಂಗ್ರೆಸ್ ನಾಯಕರಿಗೆ ಮುಖಭಂಗವಾದಂತಾಗಿದೆ.

ಆರಂಭದಿಂದಲೂ ಬಿಜೆಪಿ-ಆಪ್‌ ನಡುವೆ ಪೈಪೋಟಿ ಮುಂದುವರಿದಿತ್ತು,

ಮ್ಯಾಜಿಕ್‌ ನಂಬರ್‌ ತಲುಪಿರುವ ಬಿಜೆಪಿ 27‌ ವರ್ಷಗಳ ಬಳಿಕ ದೆಹಲಿಯಲ್ಲಿ ಸರ್ಕಾರ ರಚಿಸುವ ವಿಶ್ವಾಸದಲ್ಲಿದೆ.

ಖಾತೆ ತೆರೆಯದ ಕಾಂಗ್ರೆಸ್‌: ಕೈ ನಾಯಕರಿಗೆ ಮುಖಭಂಗ Read More

ಪರವಾನಗಿ ರಹಿತ ತಂಬಾಕು ಬೆಳೆಗಾರರಿಗೂ ಮಾರಾಟ ಮಾಡಲು ಅವಕಾಶಕ್ಕೆ ಯದುವೀರ್ ಮನವಿ

ನವದೆಹಲಿ: ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಪರವಾನಗಿ ರಹಿತ ತಂಬಾಕು ಬೆಳೆಗಾರರಿಗೆ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿರುವುದಾಗಿ ಸಂಸದ ಯದುವೀರ್ ಒಡೆಯರ್ ತಿಳಿಸಿದ್ದಾರೆ.

ಪರವಾನಗಿ ರಹಿತ ತಂಬಾಕು ಬೆಳೆಗಾರರ ಮೇಲೆ ವಿಧಿಸಲಾಗುತ್ತಿದ್ದ ದಂಡವನ್ನು ಮನ್ನಾ ಮಾಡಬೇಕೆಂದು ಮನವಿ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.

ನವದೆಹಲಿಯಲ್ಲಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿದ ನಂತರ ಸಂಸದರು ಮಾಧ್ಯಮಗಳಿಗೆ‌ ಮಾಹಿತಿ ನೀಡಿದರು.

ಇದಕ್ಕೆ ಸೂಕ್ತವಾಗಿ ಸ್ಪಂದಿಸಿದ ಸಚಿವರಾದ ಪಿಯೂಷ್ ಗೋಯಲ್, ಕಾರ್ಡ್ ಹೊಂದಿರದ (ಪರವಾನಗಿ ರಹಿತ) ತಂಬಾಕು ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸುವ ಕುರಿತು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಪರವಾನಗಿ ತಂಬಾಕು ಬೆಳೆಗಾರರಿಗೆ ವಿಧಿಸುತ್ತಿದ್ದ ದಂಡವನ್ನು ಮನ್ನಾ ಮಾಡುವ ಸಂಬಂಧ ತಂಬಾಕು ಮಂಡಳಿಗೆ ಸೂಕ್ತ ನಿರ್ದೇಶನ ನೀಡುವುದಾಗಿಯೂ ಭರವಸೆ ನೀಡಿದ್ದಾರೆ ಎಂದು ಯದುವೀರ್ ತಿಳಿಸಿದರು.

ಅತಿ ಶೀಘ್ರದಲ್ಲೇ ನಿರ್ಧಾರ ಹೊರಬೀಳುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರಲ್ಲದೆ ನಮ್ಮ ಕ್ಷೇತ್ರದ ಬೆಳಗಾರರ ಪರವಾಗಿ ದನಿ ಎತ್ತಲು ನಾನು ಸದಾ ಬದ್ಧನಾಗಿದ್ದೇನೆ ಎಂದು ಯದುವೀರ್ ಭರವಸೆ ನೀಡಿದರು.

ಪರವಾನಗಿ ರಹಿತ ತಂಬಾಕು ಬೆಳೆಗಾರರಿಗೂ ಮಾರಾಟ ಮಾಡಲು ಅವಕಾಶಕ್ಕೆ ಯದುವೀರ್ ಮನವಿ Read More