ಹೆಣ್ಣು ಮಕ್ಕಳಿಗೆ ಕರಾಟೆಯು ಸ್ವರಕ್ಷಣೆ; ಮನೋಬಲ ವೃದ್ದಿಗೆ ಸಹಕಾರಿ:ಮುರಳಿ

ನಂಜನಗೂಡು: ಹೆಣ್ಣು ಮಕ್ಕಳಿಗೆ ಕರಾಟೆಯು ಸ್ವರಕ್ಷಣೆ ಹಾಗೂ ಮನೋ ಬಲವೃದ್ದಿಗೆ ಸಹಕಾರಿಯಾಗಲಿದೆ ಎಂದು ಕರಾಟೆ ತರಬೇತಿದಾರ ಮುರಳಿ ತಿಳಿಸಿದರು.

ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹೆಣ್ಣು ಮಕ್ಕಳಿಗೆ ಹಮ್ಮಿಕೊಂಡಿದ್ದ ವಿಶೇಷ ಕರಾಟೆ ಸ್ವರಕ್ಷಣಾ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಸುರಕ್ಷತೆ, ಆತ್ಮರಕ್ಷಣೆ ಹಾಗೂ ಆತ್ಮವಿಶ್ವಾಸ ವೃದ್ಧಿ ಹೆಚ್ಚಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ‌ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್ ದಿನೇಶ್ ಅವರು ಮಾತನಾಡಿ,ಇಂದಿನ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸ್ವರಕ್ಷಣಾ ಕೌಶಲ್ಯ ತಿಳಿದುಕೊಳ್ಳುವುದು ಅತ್ಯಂತ ಅಗತ್ಯ ಎಂದು ತಿಳಿಹೇಳಿದರು.

ಕರಾಟೆ ತರಬೇತಿ ದೇಹದ ಬಲವರ್ಧನೆಯಷ್ಟೇ ಅಲ್ಲ, ಮನೋಬಲ ಮತ್ತು ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ ಎಂದು ಹೇಳಿದರು.

ಸ್ವರಕ್ಷಣೆಯ ಮೂಲ ತಂತ್ರಗಳು, ತುರ್ತು ಪರಿಸ್ಥಿತಿಯಲ್ಲಿ ಪ್ರತಿಕ್ರಿಯಿಸುವ ವಿಧಾನಗಳು ಹಾಗೂ ದಿನನಿತ್ಯದ ಸುರಕ್ಷತಾ ಸಲಹೆಗಳನ್ನು ವಿದ್ಯಾರ್ಥಿನಿಯರಿಗೆ ಬೋಧಿಸಲಾಗುತ್ತದೆ ಎಂದು ತಿಳಿಸಿದರು.

ಕಾಲೇಜಿನ ಹಿರಿಯ ಉಪನ್ಯಾಸಕರಾದ ಲಿಂಗಣ್ಣಸ್ವಾಮಿ ಅವರು ಮಾತನಾಡಿ, ಯುವತಿಯರು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ದಿಟ್ಟತನ ಹೊಂದಿರಬೇಕು. ಇದೇ ಮನೋಭಾವದಿಂದ ಈ ತರಬೇತಿಯನ್ನು ಆಯೋಜಿಸಲಾಗಿದ್ದು, ಮುಂದುವರಿದ ದಿನಗಳಲ್ಲಿ ಇದು ವಿದ್ಯಾರ್ಥಿನಿಯರಿಗೆ ಉಪಯುಕ್ತವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಈಗಾಗಲೇ ಕರಾಟೆ ತರಬೇತಿ ಪಡೆದ ಮಕ್ಕಳು ಸಮಾರಂಭದಲ್ಲಿ ಕರಾಟೆಯ ವಿವಿಧ ಆಯಾಮಗಳನ್ನು ಪ್ರದರ್ಶಿಸಿದರು.

ಸ್ವರಕ್ಷಣೆಯ ವಿಧಾನಗಳನ್ನು ಪ್ರಾತ್ಯಕ್ಷಿಕೆ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಾಯಿತು.

ಪ್ರತಿನಿತ್ಯ ಬೆಳಗಿನ ಅವಧಿಯಲ್ಲಿ ಕರಾಟೆ ತರಗತಿಗಳನ್ನು ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಏರ್ಪಡಿಸಲಾಗಿದ್ದು, ವಿದ್ಯಾರ್ಥಿನಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕರು ಮತ್ತು ಸಿಬ್ಬಂದಿವರ್ಗ ಹಾಜರಿದ್ದರು.

ಹೆಣ್ಣು ಮಕ್ಕಳಿಗೆ ಕರಾಟೆಯು ಸ್ವರಕ್ಷಣೆ; ಮನೋಬಲ ವೃದ್ದಿಗೆ ಸಹಕಾರಿ:ಮುರಳಿ Read More

ನಂ.ಬಾ.ಸ.ಪ ಪೂ ಕಾಲೇಜಿನಲ್ಲಿ ಪೋಷಕರ ಸಭೆ:ಶೈಕ್ಷಣಿಕ ಪ್ರಗತಿ ಬಗ್ಗೆ ಚರ್ಚೆ

ನಂಜನಗೂಡು: ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪೋಷಕರ ಸಭೆ ಹಮ್ಮಿಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಸಮಗ್ರ ಚರ್ಚೆ ಮಾಡಲಾಯಿತು.

ಸಭೆಯನ್ನು ಕಾಲೇಜಿನ ಪ್ರಾಚಾರ್ಯರಾದ ಸಿ.ಆರ್.ದಿನೇಶ್ ಉದ್ಘಾಟಿಸಿ, ವಿದ್ಯಾರ್ಥಿಗಳ ಅಧ್ಯಯನ, ಹಾಜರಾತಿ, ಶಿಸ್ತಿನ ಅವಶ್ಯಕತೆ ಮತ್ತು ಮುಂಬರುವ ಪರೀಕ್ಷೆಗಳ ಸಿದ್ಧತೆ ಕುರಿತು ಪೋಷಕರಿಗೆ ವಿವರಿಸಿದರು.

ಆಂಗ್ಲ ಭಾಷಾ ಉಪನ್ಯಾಸಕರಾದ ರಂಗಸ್ವಾಮಿ ರವರು ಮಾತನಾಡಿ ವಿಭಾಗವಾರು ತಮ್ಮ ವಿಷಯಗಳ ಪ್ರಗತಿ ವರದಿ, ಅಂಕಪಟ್ಟಿ, ಒಳ-ಮೌಲ್ಯಾಂಕನ ಫಲಿತಾಂಶ ಮತ್ತು ವಿದ್ಯಾರ್ಥಿಗಳ ಕಲಿಕಾ ದೃಢತೆಯನ್ನು ಪೋಷಕರ ಮುಂದೆ ಮಂಡಿಸಿದರು.

ವಿದ್ಯಾರ್ಥಿಗಳ ದುರ್ಬಲ ಕ್ಷೇತ್ರಗಳನ್ನು ಗುರುತಿಸಿ, ಅವುಗಳನ್ನು ಸುಧಾರಿಸುವುದಕ್ಕಾಗಿ ವಿಶೇಷ ತರಗತಿಗಳು, ಮಾರ್ಗದರ್ಶನ ಮಾಡವುದಾಗಿ ತಿಳಿಸಿದರು.

ಭೌತಶಾಸ್ತ್ರ ಉಪನ್ಯಾಸಕ ರಾಮಾನುಜ ಅವರು ಪೋಷಕರು ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳು, ಶಿಸ್ತಿನ ವ್ಯವಸ್ಥೆ, ಪಠ್ಯೇತರ ಚಟುವಟಿಕೆಗಳು ಮತ್ತು ವಿದ್ಯಾರ್ಥಿಗಳ ಒಟ್ಟು ಬೆಳವಣಿಗೆ ಕುರಿತು ಸಲಹೆಗಳನ್ನು ನೀಡಿದರು.

ಪೋಷಕರಾದ ಪವಿತ್ರ ಮತ್ತು ಕುಮಾರಸ್ವಾಮಿ ಅವರು ಪೋಷಕರ–ಶಿಕ್ಷಕರ ಸಂವಾದದ ಮೂಲಕ ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳ್ಳಲು ಅಗತ್ಯವಾದ ಹಲವಾರು ಸೂಚನೆಗಳನ್ನು ನೀಡಿದರು.

ಪೋಷಕರ ಸಕ್ರಿಯ ಸಹಭಾಗಿತ್ವ ಮತ್ತು ಕಾಲೇಜಿನ ಶೈಕ್ಷಣಿಕ ತಂಡದ ಸಮರ್ಪಿತ ಪ್ರಯತ್ನಗಳಿಂದ ಪೋಷಕರ ಸಭೆ ಫಲಪ್ರದವಾಗಿ ಮುಕ್ತಾಯಗೊಂಡಿತು.

ಲಿಂಗಣ್ಣ ಸ್ವಾಮಿಯವರು ಸ್ವಾಗತಿಸಿದರು ದಿನೇಶ್ ಅವರು ವಂದಿಸಿದರು, ಕಾರ್ಯಕ್ರಮದ ನಿರೂಪಣೆಯನ್ನು ಹೆಚ್ಚ್ ಕೆ ಪ್ರಕಾಶ್ ಮಾಡಿದರು.

ನಂ.ಬಾ.ಸ.ಪ ಪೂ ಕಾಲೇಜಿನಲ್ಲಿ ಪೋಷಕರ ಸಭೆ:ಶೈಕ್ಷಣಿಕ ಪ್ರಗತಿ ಬಗ್ಗೆ ಚರ್ಚೆ Read More

ವಾಲ್ಮೀಕಿ ಮಹಾನ್ ಋಷಿ- ಎಮ್.ಎಸ್.ರಾಮಾನುಜ

ನಂಜನಗೂಡು: ಮಹರ್ಷಿ ವಾಲ್ಮೀಕಿ ಭಾರತೀಯ ಸಂಸ್ಕೃತಿಯ ದಿಕ್ಕು ತೋರಿಸಿದ ಮಹಾನ್ ಋಷಿ ಎಂದು ಭೌತಶಾಸ್ತ್ರ ಉಪನ್ಯಾಸಕ ಎಮ್.ಎಸ್.ರಾಮಾನುಜ ರವರು ಹೇಳಿದರು.

ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು,ವಾಲ್ಮೀಕಿ ಅವರ ‘ರಾಮಾಯಣ’ ಕಾವ್ಯವು ಮಾನವೀಯ ಮೌಲ್ಯಗಳ ಮಹತ್ತರ ಪಾಠವಾಗಿದೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್. ದಿನೇಶ್ ಅವರು ಮಾತನಾಡಿ,
ವಾಲ್ಮೀಕಿ ಅವರ ಜೀವನವು ಪರಿವರ್ತನೆಗೆ ಸ್ಫೂರ್ತಿಯಾಗಿದೆ,ಅರಣ್ಯ ವಾಸದಲ್ಲಿದ್ದವರೂ, ಜ್ಞಾನದಿಂದ ಮಹರ್ಷಿಯಾದರು ಎಂಬುದು ಪ್ರತಿಯೊಬ್ಬನಿಗೂ ಪಾಠ ಎಂದು ನುಡಿದರು.

ವಾಲ್ಮೀಕಿ ಮಹರ್ಷಿ ಕೇವಲ ಕವಿ ಅಲ್ಲ, ಅವರು ಸಮಾಜದ ದಾರಿದೀಪ. ಅವರ ಆದರ್ಶಗಳು ಇಂದಿಗೂ ಪ್ರಸ್ತುತ,ಎಂದು ಕನ್ನಡ ಭಾಷಾ ಉಪನ್ಯಾಸಕಿ ಡಾ. ಎ. ಮಾಲತಿ ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎಸ್. ಲಿಂಗಣ್ಣ ಸ್ವಾಮಿ, ರಂಗಸ್ವಾಮಿ,ದಿನೇಶ್, ಎನ್ ನಾಗರಾಜ್ ,ರೂಪ ,ಎಚ್ .ಕೆ ಸ್ವಾಮಿ ಗೌಡ, ಭವ್ಯ, ಮೀನಾ ,ಸುಲಕ್ಷಣ, ಅಂಬಿಕಾ, ಪದ್ಮಾವತಿ, ವತ್ಸಲ, ಟಿ.ಕೆ. ರವಿ, ನಾಗರಾಜ ರೆಡ್ಡಿ ,ಹರೀಶ್ ,ಮಿಲ್ಟನ್, ಮಹದೇವಸ್ವಾಮಿ, ದಿವ್ಯ ಮತ್ತಿತರರು ಪಾಲ್ಗೊಂಡಿದ್ದರು.

ವಾಲ್ಮೀಕಿ ಮಹಾನ್ ಋಷಿ- ಎಮ್.ಎಸ್.ರಾಮಾನುಜ Read More

ಮೊಬೈಲ್ ಬಿಟ್ಟು ಪುಸ್ತಕದ ಕಡೆಗೆ ಬನ್ನಿ ವಿದ್ಯಾರ್ಥಿಗಳಿಗೆ ಸಿ.ಆರ್.ದಿನೇಶ್ ಕರೆ

ನಂಜನಗೂಡು: ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಡಾ. ಎಸ್ ಆರ್ ರಂಗನಾಥನ್ ಅವರ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆಯನ್ನು ಆಚರಿಸಲಾಯಿತು.

ವಿದ್ಯಾರ್ಥಿಗಳಲ್ಲಿ ಓದಿನ ಮಹತ್ವದ ಬಗ್ಗೆ ಅರಿವು ಮೂಡಿಸಿ ಮೊಬೈಲ್ ಗೀಳು ಬಿಟ್ಟು ಪುಸ್ತಕದ ಕಡೆಗೆ ಒಲವು ಹೆಚ್ಚು ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಸಿ ಆರ್ ದಿನೇಶ್ ಅವರು ಹೇಳಿದರು.

ಗ್ರಂಥಪಾಲಕಿ ಎಂ ಎನ್ ಸುಲಕ್ಷಣ ಅವರು ಮಾತನಾಡಿ ಯುವ ಮನಸ್ಸುಗಳನ್ನು ಅಧ್ಯಯನದ ಕಡೆಗೆ ಹೋಗುವ ಹಾಗೆ ಮಾಡಬೇಕು ಎಂದು ತಿಳಿಸಿದರು.

ಉಪನ್ಯಾಸಕರಾದ ಲಿಂಗಣ್ಣಸ್ವಾಮಿ, ರಂಗಸ್ವಾಮಿ ನಾಗರಾಜು, ಪ್ರಕಾಶ್ ಸ್ವಾಮಿ ಗೌಡ ,ಮಾಲತಿ ,ಭವ್ಯ ,ಮೀನಾ ,ಆದಿಲ್ ,ಸುಮಾ, ರೂಪ ,ಸುಮಿತ್ರ ,ಟಿ ಕೆ ರವಿ, ನಾಗರಾಜ್ ರೆಡ್ಡಿ, ರಾಮಾನುಜಾ, ದಿನೇಶ್, ಹರೀಶ್, ವತ್ಸಲ ,ಪದ್ಮಾವತಿ ,ಅಂಬಿಕಾ, ಶೃತಿ, ಬಿಂದು, ಬಸವಣ್ಣ, ನಟರಾಜ್, ನಾಗವೇಣಿ ,ಮಿಲ್ಟನ್ ,ಮಹದೇವಸ್ವಾಮಿ ನಿಂಗಯ್ಯ ,ದಿವ್ಯ ,ನಾಗಮ್ಮ ಮತ್ತಿತರರು ಹಾಜರಿದ್ದರು.

ಮೊಬೈಲ್ ಬಿಟ್ಟು ಪುಸ್ತಕದ ಕಡೆಗೆ ಬನ್ನಿ ವಿದ್ಯಾರ್ಥಿಗಳಿಗೆ ಸಿ.ಆರ್.ದಿನೇಶ್ ಕರೆ Read More

ವಿಕಲಚೇತನ ವಿನಯ್ ಗೆ ಬ್ಯಾಟರಿ ಆಧಾರಿತ ತ್ರಿಚಕ್ರ ವಾಹನ:ಅಪೂರ್ವ ಕ್ಷಣ

ನಂಜನಗೂಡು: ನಂಜನಗೂಡು ಬಾಲಕರ ಪದವಿ ಪೂರ್ವ ಕಾಲೇಜನಲ್ಲಿಂದು ಅಪೂರ್ವ ಪ್ರಸಂಗ ಕೂಡಿ ಬಂದಿತ್ತು.

ಇದಕ್ಕೆ ವಿಕಲಚೇತನ ವಿದ್ಯಾರ್ಥಿ ಸಿ. ವಿನಯ್ ಕಾರಣ.

ನಂಜನಗೂಡಿನ ಶಂಕರಪುರದ ನಿವಾಸಿ ವಿನಯ್. ಹೆಸರಿಗೆ ಅನ್ವರ್ಥವಾಗಿ ವಿನಯ‌ ವಿದೇಯ ವಿದ್ಯಾರ್ಥಿ. ಮೆಲು ಮಾತು,ನಗು ಮುಖ. ಈ ಸುಂದರ ಮನದ ಹುಡುಗ ದೇವರ ಮಗು.ಸೊಂಟದ ಕೆಳಗಿನ ಭಾಗ ಕ್ರಿಯಾಶೀಲವಿಲ್ಲ ಒಂದು ಕೈ ಸ್ವಾಧೀನವಿಲ್ಲ. ಎರಡು ಕೈಗಳಿಂದ ಭಾರದ ಪುಸ್ತಕವನ್ನು ಹಿಡಿಯಲಾರದ ವಿಶಿಷ್ಟ ಚೇತನ ಮಗು ಈತ.

ತಂದೆ ಚಿಕ್ಕಲಿಂಗಯ್ಯ ತಾಯಿ ಸಣ್ಣಮಂಚಮ್ಮ. ತಾಯಿ ಮತ್ತು ಗೆಳೆಯರು ವಿನಯನಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ತಾಯಿಯ ತಾಳ್ಮೆ ಅವನಿಗೊಂದು ಭರವಸೆ. ಸಹ್ಯಭಾವದೊಡನೆ ನಿಸರ್ಗಕರೆಗೂ ಕರೆದೊಯ್ಯುವ ಸಹಪಾಠಿಗಳು ಇವನ ಬದುಕಿಗೆ ಚೈತನ್ಯವೇ ಸರಿ.

ಈ ವಿಶೇಷ ಚೇತನ ವಿಧ್ಯಾರ್ಥಿ ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿ ಯು ಸಿ ವ್ಯಾಸಂಗ ಮಾಡುತ್ತಿದ್ದಾನೆ. ಪ್ರತಿನಿತ್ಯ ತಾಯಿ ತ್ರಿಚಕ್ರ ವಾಹನದಲ್ಲಿ ಮಗನನ್ನು ಕಾಲೇಜಿಗೆ ಕರೆದುಕೊಂಡು ಬರಬೇಕು ಮತ್ತೆ ಸಾಯಂಕಾಲ ಕರೆದುಕೊಂಡು ಹೋಗಬೇಕು.

ಕಾಲೇಜಿನ ಸಮಯದಲ್ಲಿ ಗೆಳೆಯರಿಂದ ಸಹಕಾರ. ಪಿಯುಸಿಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣ.ಮುಂದೆ ಪದವಿಗೆ ಸೇರಬೇಕಾದರೆ ಮನೆಯಿಂದ ಡಿಗ್ರಿ ಕಾಲೇಜು ತುಂಬಾ ದೂರ ಇರುವ ಕಾರಣ ಪಿಯುಸಿಗೆ ಸಾಕು ಎಂಬ ಚಿಂತನೆಯಲ್ಲಿ ಇದ್ದ ವಿನಯ್.

ತನ್ನ ಹಳೆಯ ತ್ರಿಚಕ್ರವಾಹನದಲ್ಲಿ ಅಡಕವಾಗಿದ್ದ ವಿನಯನ ಬದುಕಿನಲ್ಲಿ ಸುದಿನ ಬಂದಿದೆ.

ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ತನ್ನ ಅಂಕಪಟ್ಟಿ ತೆಗೆದುಕೊಳ್ಳಲು ಬಂದಾಗ ಕಾಲೇಜಿನ ಆಂಗ್ಲ ಭಾಷೆಯ ಉಪನ್ಯಾಸಕರಾದ ರಂಗಸ್ವಾಮಿ ಅವರು ಕಾಲೇಜಿನ ಪ್ರಾಂಶುಪಾಲರಾದ ಲಯನ್ ಸಿ.ಆರ್.ದಿನೇಶ್ ಅವರಿಗೆ ಈ ವಿದ್ಯಾರ್ಥಿಗೆ ನಿಮ್ಮ ಲಯನ್ ಸಂಸ್ಥೆಯಿಂದ ಅಥವಾ ಗೆಳೆಯರಿಂದ ಬ್ಯಾಟರಿ ಆಧಾರಿತ ತ್ರಿಚಕ್ರ ವಾಹನ ಕೊಡಿಸಿದರೆ ಖಂಡಿತ ಈತನ ಮುಂದಿನ ವ್ಯಾಸಂಗ ಮುಂದುವರೆಯುತ್ತದೆ ಎಂದು ಹೇಳಿದರು.

ಅದಕ್ಕೆ ತಕ್ಷಣ ಸ್ಪಂದಿಸಿದ ಕಾಲೇಜಿನ ಪ್ರಾಂಶುಪಾಲರು ಬೆಂಗಳೂರಿನ ಬ್ಯಾಟರಿ ಅಧಾರಿತ ತ್ರಿಚಕ್ರ ಸಂಸ್ಥೆಯನ್ನು ಸಂಪರ್ಕಿಸಿ ಅದಕ್ಕೆ ಬೇಕಾದ ವೆಚ್ಚವನ್ನು ಭರಿಸಲು ತಮ್ಮ ಲಯನ್ ಸಂಸ್ಥೆಯ ಲಯನ್ಸ್ ಕ್ಲಬ್ ಅಂಬಾಸಿಡರಸ್ ಮತ್ತು ಇತರ ಗೆಳೆಯರಿಗೆ ಮಾಹಿತಿ ನೀಡಿದರು.ಮಾಹಿತಿ ನೀಡಿದ ಕೆಲವೇ ಗಂಟೆಗಳಲ್ಲಿ ಬ್ಯಾಟರಿ ಆಧಾರಿತ ತ್ರಿಚಕ್ರ ವಾಹನಕ್ಕೆ ಬೇಕಾದ ಹಣ ಸಂದಾಯವಾಯಿತು.

ಸುಮಾರು ೪೫೦೦೦ ರೂ ಗಳನ್ನು ದಾನಿಗಳಾದ ಲಯನ್ ಟಿ ಹೆಚ್ ವೆಂಕಟೇಶ್, ಲಯನ್ ವೇದನಾಯಗಮ್, ಲಯನ್ ಎಮ್.ಎನ್. ಜಯಪ್ರಕಾಶ್, ಲಯನ್ ವಿ. ಶ್ರೀಧರ್ ,ಎಚ್.ವಿ.ಮಂಜುನಾಥ್, ಪುಟ್ಟಸ್ವಾಮಿಗೌಡ,ನಂಜುಂಡಸ್ವಾಮಿ(ಅಂಬಿ), ಲಯನ್ ಸಿ.ಆರ್. ದಿನೇಶ್ ಅವರು ಧನ ಸಹಾಯ ಮಾಡಿದರು.

ಇದೇ ಖುಷಿಯಲ್ಲಿ ಕಾಲೇಜಿನಲ್ಲಿ ಸರಳ ಸಮಾರಂಭ ಹಮ್ಮಿಕೊಂಡು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ರಾಮಪ್ರಸಾದ್, ಹಿರಿಯ ಉಪನ್ಯಾಸಕರಾದ ಲಿಂಗಣ್ಣ ಸ್ವಾಮಿ ಮತ್ತು ಎಲ್ಲಾ ಉಪನ್ಯಾಸಕರ ಸಮ್ಮುಖದಲ್ಲಿ ವಿಶೇಷ ಚೇತನ ವಿದ್ಯಾರ್ಥಿ ವಿನಯ್ ಗೆ ಬ್ಯಾಟರಿ ಆಧಾರಿತ ತ್ರಿಚಕ್ರವನ್ನು ನೀಡಲಾಯಿತು.

ವಿನಯ್ ಸ್ವತಂತ್ರವಾಗಿ ಬ್ಯಾಟರಿ ಆಧಾರಿತ ತ್ರಿಚಕ್ರ ವಾಹನವನ್ನು ಓಡಿಸಿದಾಗ ಉಪನ್ಯಾಸಕರು ಮತ್ತು ಎಲ್ಲಾ ವಿದ್ಯಾರ್ಥಿಗಳು ಸಾರ್ಥಕ ಭಾವದಿಂದ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.

ಈ ವೇಳೆ ವಿದ್ಯಾರ್ಥಿ ವಿನಯ್ ಕಣ್ಣಿನಲ್ಲಿ ಆತ್ಮವಿಶ್ವಾಸ ಪ್ರಜ್ವಲಿಸುತ್ತಿತ್ತು.

ನಂಜಗೂಡಿನ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಡಾ.ರವಿಶಂಕರ್ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಲಯನ್ ಸಿ.ಆರ್.ದಿನೇಶ್,ಉಪನ್ಯಾಸಕರಾದ ಡಾ.ಟಿ.ಕೆ.ರವಿ ಅವರು ಪದವಿ ಕಾಲೇಜಿನ ಶುಲ್ಕವನ್ನು ಭರಿಸಿ ವಿನಯ್ ಅವರನ್ನ ಪ್ರಥಮ ವರ್ಷದ ಪದವಿಗೆ ಸೇರ್ಪಡೆ ಮಾಡಿಸಿ ಆದರ್ಶ ಮೆರೆದಿದ್ದಾರೆ.

ವಿನಯ್ ಪದವಿ ಮತ್ತು ಸ್ನಾತಕೋತ್ತರ ಪ‌ದವಿ ಪಡೆದು ಮುಂದೆ ಉದ್ಯೋಗ ಪಡೆಯುವ ಮೂಲಕ ಸಾಧನೆ ಮಾಡಿ ಸಾಧಕರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಲಿ ಎಂಬ ಆಶಯ ಪ್ರತಿಯೊಬ್ಬರದ್ದಾಗಿದೆ ಎಂದು
ನಂಜನಗೂಡು ಪದವಿ ಪೂರ್ವ ಕಾಲೇಜು
ಕನ್ನಡ ಉಪನ್ಯಾಸಕರಾದ
ಡಾ.ಕೆ.ಮಾಲತಿ ತಿಳಿಸಿದ್ದಾರೆ‌.

ವಿಕಲಚೇತನ ವಿನಯ್ ಗೆ ಬ್ಯಾಟರಿ ಆಧಾರಿತ ತ್ರಿಚಕ್ರ ವಾಹನ:ಅಪೂರ್ವ ಕ್ಷಣ Read More