ಮಳೆಗೆ ಕುಸಿದುಬಿದ್ದ ಮೇಲ್ಛಾವಣಿ:ನೆರವಿಗೆ ದಾವಿಸದ ಅಧಿಕಾರಿಗಳು.
ನಂಜನಗೂಡು: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಮನೆಯವರು ಗಾಯಗೊಂಡರೂ ಸಹಾಯಹಸ್ತ ನೀಡುವವರೇ ಇಲ್ಲದಂತಾಗಿದೆ.

ನಂಜನಗೂಡು ತಾಲೂಕಿನ ಹೊಸಹಳ್ಳಿ ಗ್ರಾಮದ ಮಲ್ಲಿಗಮ್ಮ ಎಂಬುವರಿಗೆ ಸೇರಿದ ವಾಸದ ಮನೆಯ ಛಾವಣಿ ಕುಸಿದಿದೆ,ಅದೃಷ್ಟವಶಾತ್ 7 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆದರೆ ಘಟನೆ ನಡೆದು ಮೂರು ದಿನಗಳಾದರೂ ಯಾವುದೇ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಇತ್ತ ತಿರುಗಿ ನೋಡಿಲ್ಲ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.
ಮನೆ ಕಳೆದುಕೊಂಡು ನಿರಾಶ್ರಿತರಾದ ಕುಟುಂಬದ ನೆರವಿಗೆ ತಾಲೂಕು ಆಡಳಿತ ಧಾವಿಸಿ,ಈ ಕುಟುಂಬಕ್ಕೆ ಪರ್ಯಾಯ ಆಸರೆ ಕಲ್ಪಿಸಿಕೊಡಬೇಕಿದೆ.
ಮಧ್ಯರಾತ್ರಿ ಮನೆಯವರು ಮಲಗಿದ್ದ ಭಾಗ ಹೊರತುಪಡಿಸಿ ಉಳಿದ ಭಾಗ ಕುಸಿದಿದೆ,ಹಾಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಶಿಥಿಲಗೊಂಡ ಮನೆ ಸರಿಪಡಿಸಿಕೊಡುವಂತೆ ಕಳೆದ ವರ್ಷದ ಪ್ರವಾಹದ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಮತ್ತು ರೆವಿನ್ಯೂ ಅಧಿಕಾರಿ ಗಮನಕ್ಕೆ ತಂದಿದ್ದೆವು, ದೇವಿರಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೂ ಮನವಿ ಪತ್ರ ನೀಡಿದ್ದೆವು ಎಂದು ಮನೆಯವರು ಬೇಸರ ತೋಡಿಕೊಂಡಿದ್ದಾರೆ.
ಕಳೆದ ವರ್ಷ ಪರಿಹಾರ ನೀಡುವುದಾಗಿ ತಿಳಿಸಿ ಭಾವಚಿತ್ರ ತೆಗೆದುಕೊಂಡು ಹೋದ ಕಂದಾಯ ಅಧಿಕಾರಿಗಳು ಪರಿಹಾರವನ್ನೂ ಕೊಡಲಿಲ್ಲ,ವಾಸದ ಮನೆಯ ಸೌಲಭ್ಯವನ್ನೂ ನೀಡಿಲ್ಲ.ಜೀವ ಹಾನಿ ಆಗಿದ್ದರೆ ಯಾರು ಹೊಣೆ ಎಂದು ಹೊಸಹಳ್ಳಿ ಗ್ರಾಮಸ್ಥರು ಮತ್ತು ಮನೆ ಕಳೆದುಕೊಂಡ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಶಾಸಕರು ಮತ್ತು ತಾಲೂಕು ಆಡಳಿತ ಎಚ್ಚೆತ್ತು ನಿರಾಶ್ರಿತರಾಗಿರುವ ಈ ಬಡ ಕುಟುಂಬಕ್ಕೆ ಆಸರೆ ನೀಡಬೇಕಿದೆ.
ಮಳೆಗೆ ಕುಸಿದುಬಿದ್ದ ಮೇಲ್ಛಾವಣಿ:ನೆರವಿಗೆ ದಾವಿಸದ ಅಧಿಕಾರಿಗಳು. Read More