ಎಪಿಎಂಸಿ ಮಾಜಿ ಉಪಾಧ್ಯಕ್ಷನ ಮನೆಯಲ್ಲಿ ಜಿಂಕೆ ಕೊಂಬುಗಳು!

ನಂಜನಗೂಡು: ಪಟ್ಟಣದ ಎಪಿಎಂಸಿ ಮಾಜಿ ಉಪಾಧ್ಯಕ್ಷನ ಮನೆಯಲ್ಲಿ ಎರಡು ಜಿಂಕೆ ಕೊಂಬುಗಳು ಪತ್ತೆಯಾಗಿದೆ.

ವಾಸದ ಮನೆಯಲ್ಲಿ ಇಡಲಾಗಿದ್ದ ಜಿಂಕೆ ಕೊಂಬುಗಳನ್ನ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಆಧರಿಸಿ ಅರಣ್ಯಾಧಿಕಾರಿಗಳು ದಾಳಿ ನಡೆಸಿದಾಗ ನಂಜನಗೂಡು ತಾಲೂಕು ಹೊಸಕೋಟೆ(ಮಸಗೆ) ಗ್ರಾಮದ ಮನೆಯಲ್ಲಿ ಜಿಂಕೆ ಕೊಂಬುಗಳು ಪತ್ತೆಯಾಗಿದೆ.

ಎಪಿಎಂಸಿ ಮಾಜಿ ಉಪಾಧ್ಯಕ್ಷ ಶಿವಕುಮಾರ್ ಅವರಿಗೆ ಸೇರಿದ ಮನೆಯಲ್ಲಿ ಕೊಂಬುಗಳನ್ನ ವಶಕ್ಕೆ ಪಡೆಯಲಾಗಿದೆ.

ನಂಜನಗೂಡು ವಿಭಾಗದ ಅರಣ್ಯ ಅಧಿಕಾರಿ ನಿತಿನ್ ಮತ್ತು ಶ್ರೀನಿವಾಸ್ ನೇತೃತ್ವದ ತಂಡ ದಾಳಿ ನಡೆಸಿದೆ.

ಫ್ಯಾಷನ್ ಗಾಗಿ ಜಿಂಕೆ ಕೊಂಬುಗಳನ್ನ ಬಳಸಿಕೊಳ್ಳಲಾಗಿತ್ತೆಂದು ದೂರಲಾಗಿದ್ದು,ಈಗ ಶಿವಕುಮಾರ್ ನಾಪತ್ತೆಯಾಗಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳ ಅನುಮತಿ ಇಲ್ಲದೆ ವನ್ಯ ಪ್ರಾಣಿಗಳಿಗೆ ಸಂಬಂಧಪಟ್ಟ ಯಾವುದೇ ವಸ್ತುಗಳನ್ನು ಗೌಪ್ಯವಾಗಿ ಇಟ್ಟುಕೊಂಡಿದ್ದಲ್ಲಿ ಹಾಗೂ ಕಾನೂನು ಬಾಹಿರವಾಗಿ ವನ್ಯ ಜೀವಿಗಳಿಗೆ ಸಂಬಂಧಪಟ್ಟ ವಸ್ತುಗಳನ್ನು ಸಂಗ್ರಹಿಸಿದ್ದಲ್ಲಿ ಶಿಕ್ಷಾರ್ಹ ಅಪರಾಧವಾಗುತ್ತದೆ.

ಕಾರ್ಯಚರಣೆಯಲ್ಲಿ ಸಹಾಯಕಾ ಅರಣ್ಯ ಅಧಿಕಾರಿ ಶ್ರೀನಿವಾಸ್, ಗಸ್ತು ಪಾಲಕರಾದ ವೈಶಾಖ, ಧನಂಜಯ್, ಚಾಲಕರಾದ ನಾಗ ನಿಂಗರಾಜು, ಸುನಿಲ್ ಮತ್ತು ಮಂಜು ಭಾಗವಹಿಸಿದ್ದರು.

ಎಪಿಎಂಸಿ ಮಾಜಿ ಉಪಾಧ್ಯಕ್ಷನ ಮನೆಯಲ್ಲಿ ಜಿಂಕೆ ಕೊಂಬುಗಳು! Read More

ನಂಜನಗೂಡು ಬಾ ಸ ಪ ಪೂ ಕಾಲೇಜಿಗೆ50 ವರ್ಷಗಳ ಹಿಂದಿನ ವಿದ್ಯಾರ್ಥಿಗಳ ಭೇಟಿ

ನಂಜನಗೂಡು: ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಬಹಳ ವಿಶೇಷತೆ ಇತ್ತು.

ಇದಕ್ಕೆ ಕಾರಣ 50 ವರ್ಷಗಳ ಹಿಂದೆ ಎಸ್.ಎಸ್.ಎಲ್.ಸಿ ಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಈ ಕಾಲೇಜಿಗೆ ಭೇಟಿ ನೀಡಿದ್ದು ಈ ವಿಶೇಷತೆಗೆ ಕಾರಣ.

1964-1965 ರಲ್ಲಿ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಈಗ ಆ ವಿದ್ಯಾರ್ಥಿಗಳಿಗೆ 75 ವರ್ಷಗಳು ತುಂಬಿ ತುಂಬು ಜೀವನವನ್ನ ನಡೆಸುತ್ತಿದ್ದಾರೆ.

ಅವರುಗಳು ಇಂದು ಕಾಲೇಜಿಗೆ ಭೇಟಿ ನೀಡಿ ತಮ್ಮ ಐವತ್ತು ವರ್ಷಗಳ ಹಿಂದಿನ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಮೆಲುಕು ಹಾಕಿದರು.

ತಮಗೆ ಬೋದಿಸಿದ ಶಿಕ್ಷಕರಾದ ಕೃಷ್ಣ ಅಯ್ಯಂಗಾರ್ ಮತ್ತು ಪ್ರಭಾಕರ್, ದೈಹಿಕ ಶಿಕ್ಷಕರಾದ ರಾಮಯ್ಯ ಇವರನ್ನು ಜ್ಞಾಪಿಸಿಕೊಳ್ಳುತ್ತಾ ಇಂದು ನಾವು ಈ ಮಟ್ಟಕ್ಕೆ ತಲುಪಬೇಕಾದರೆ ಅವರೇ ಕಾರಣಕರ್ತರು ಎಂದು ಧನ್ಯತೆ ಮೆರೆದರು.

ಆ ಸಂದರ್ಭದ ಅನುಭವವನ್ನು ಕೆ.ಎನ್.ವಾಸುದೇವ ಶಾಸ್ತ್ರಿ, ಶ್ರೀಧರ ,ನರಸಿಂಹಮೂರ್ತಿ ,ಡಾ. ಎಸ್ ಸುಂದರೇಶ್, ಕುಮಾರಸ್ವಾಮಿ, ಶ್ಯಾಮ್ ಸುಂದರ ,ಸೊಮನಾರಾಯಣ್, ನಾಗರಾಜ್ ,ಆದಿಶೇಷ, ಕೃಷ್ಣಮೂರ್ತಿ, ಯತಿರಾಜ್ ,ಥಾಮಸ್ ಅವರುಗಳು ಇಂದು ಮತ್ತೆ 50 ವರುಷದ ಹಿಂದಿನ ನೆನಪು ಹಾಕಿದ್ದು ಶ್ಲಾಘನೀಯವಾದುದು.

ಕಾಲೇಜಿನ ಎಲ್ಲ ಉಪನ್ಯಾಸಕರಿಗೆ ಸಿಹಿ ನೀಡಿ ವಿದ್ಯಾರ್ಥಿಗಳಿಗೆ ಸೂಕ್ತವಾದ ಮಾರ್ಗದರ್ಶನ ನೀಡುವ ಮೂಲಕ ಅವರ ಮುಂದಿನ ವ್ಯಾಸಂಗ ಮುಂದಿನ ಜೀವನಕ್ಕೆ ಸಹಾಯಕವಾಗುವ ರೀತಿಯಲ್ಲಿ ಪಾಠ ಪ್ರವಚನಗಳನ್ನು ಮಾಡಿ ಎಂದು ಸಲಹೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸಿ ಆರ್ ದಿನೇಶ್, ಉಪನ್ಯಾಸಕರಾದ ಲಿಂಗಣ್ಣಸ್ವಾಮಿ, ನಾಗರಾಜು ,ಮಾಲತಿ ಟಿ.ಕೆ ರವಿ, ಆದಿಲ್ ಹುಸೇನ್, ನಾಗರಾಜ ರೆಡ್ಡಿ ಮತ್ತಿತರರು ಹಾಜ ರಿದ್ದರು.

ನಂಜನಗೂಡು ಬಾ ಸ ಪ ಪೂ ಕಾಲೇಜಿಗೆ50 ವರ್ಷಗಳ ಹಿಂದಿನ ವಿದ್ಯಾರ್ಥಿಗಳ ಭೇಟಿ Read More

ಮಕ್ಕಳ ಜೀವದ ಜೊತೆ ಚೆಲ್ಲಾಟ:ಸಂಪ್ ನಿಂದ ನೀರೆತ್ತುವ ವಿದ್ಯಾರ್ಥಿಗಳು!

ನಂಜನಗೂಡು: ಪುಟ್ಟ ಮಕ್ಕಳ ಕೈನಲ್ಲಿ ಸಂಪ್ ನಿಂದ ನೀರು ತೆಗೆಸುವ ಮೂಲಕ ಅವರ ಜೀವದ ಜೊತೆ ಸಿಬ್ಬಂದಿ ಚೆಲ್ಲಾಟವಾಡುತ್ತಿದ್ದಾರೆ.

ಇದು ಎಲ್ಲಿ ಅಂತೀರಾ. ಸಿಎಂ ತವರು ಕ್ಷೇತ್ರ, ವರುಣಾ ವಿಧಾನಸಭಾ ಕ್ಷೇತ್ರದ ಬಿಳಿಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ.

ಶಾಲೆಯ ಸಂಪ್ ನಿಂದ ಪುಟ್ಟ ಮಕ್ಕಳು ಬಿಂದಿಗೆಯಿಂದ ನೀರನ್ನ ಹೊರತೆಗೆದು ಬಳಕೆ ಮಾಡುತ್ತಿದ್ದಾರೆ.ಶಾಲೆಯ ಸಿಬ್ಬಂದಿ ಮಾಡಬೇಕಾದ ಕೆಲಸಗಳನ್ನ ಮಕ್ಕಳ ಕೈಲಿ ಮಾಡಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.

ಸುಮಾರು 10 ಅಡಿ ಆಳವಿರುವ ಸಂಪ್ ನಿಂದ ಮಕ್ಕಳು ಬಿಂದಿಗೆಯಲ್ಲಿ ನೀರು ತೆಗೆಯುತ್ತಿದ್ದಾರೆ.ಆಯತಪ್ಪಿ ಬಿದ್ದರೆ ಯಾರು ಹೊಣೆ?ಇದನ್ನು ಕೇಳುವವರು ಯಾರೂ ಇಲ್ಲವೆ?.

ಈ ಸರ್ಕಾರಿ ಶಾಲೆಯಲ್ಲಿ 90 ಕ್ಕೂ ಹೆಚ್ಚು ವಿಧ್ಯಾರ್ಥಿಗಳಿದ್ದಾರೆ.ಆದರೆ ಇಂತಹ ಕೆಲಸಗಳ ನಿರ್ವಹಣೆಗೆ ಕೆಲಸಗಾರರೇ ಇಲ್ಲ.
ಹೀಗಾಗಿ ಮಕ್ಕಳಿಂದಲೇ ಕೆಲಸ ಮಾಡಿಸುತ್ತಿದ್ದಾರೆ.

ಮುಖ್ಯಶಿಕ್ಷಕಿ ಸೇರಿದಂತೆ 5 ಮಂದಿ ಶಿಕ್ಷಕಿಯರಿದ್ದಾರೆ.ಮಕ್ಕಳು ಅಪಾಯಕ್ಕೆ ಆಹ್ವಾನ ನೀಡುವ ಕೆಲಸಗಳನ್ನ ಮಾಡುತ್ತಿದ್ದರೂ ಮುಖ್ಯ ಶಿಕ್ಷಕಿಗೆ ಇದು ತಿಳಿದಿಲ್ಲವೆ ಎಂಬುದು ಎಲ್ಲರ ಪ್ರಶ್ನೆಯಾಗಿದೆ.

ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಸರ್ಕಾರಿ ಶಾಲೆ ಮಕ್ಕಳೆಂದರೆ ಬಹಳ ಪ್ರೀತಿ.ಆದರೆ ಅವರು ಪ್ರತಿನಿಧಿಸುವ ಕ್ಷೇತ್ರದಲ್ಲೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಶಿಕ್ಷಣ ಇಲಾಖೆ ಏನು ಮಾಡುತ್ತಿದೆಯೊ ತಿಳಿಯದಾಗಿದೆ.

ಅನಾಹುತ ಸಂಭವಿಸುವ ಮುನ್ನಾ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.ಇತ್ತ ಗಮನ ಹರಿಸಿ ಮಕ್ಕಳ ರಕ್ಷಣೆಗೆ ಮುಂದಾಗಲಿ
ಇದಕ್ಕೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಿ.

ಮಕ್ಕಳ ಜೀವದ ಜೊತೆ ಚೆಲ್ಲಾಟ:ಸಂಪ್ ನಿಂದ ನೀರೆತ್ತುವ ವಿದ್ಯಾರ್ಥಿಗಳು! Read More

ಮುಖ್ಯ ಮಂತ್ರಿಗಳ ತವರು ಕ್ಷೇತ್ರದಲ್ಲಿ ಜಾತಿ ನಿಂದನೆ,ದೌರ್ಜನ್ಯ: ಕ್ರಮ ಕೈಗೊಳ್ಳದ ಪೊಲೀಸರು

ಮೈಸೂರು: ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ವರುಣಾದಲ್ಲಿ ಕೆಲವರು‌ ಜಾತಿ ನಿಂದನೆ ಮಾಡಿ ಕುಡಿಯುವ ನೀರಿಗೂ ತೊಂದರೆ ಕೊಡುತ್ತಿರುವ ಅಮಾನವೀಯ ಘಟನೆ ನಡೆದಿದೆ,ಆದರೆ ಪುಂಡರನ್ನು ಕೇಳುವವರೇ ಇಲ್ಲದಂತಾಗಿದೆ.

ವರುಣಾ ಕ್ಷೇತ್ರ,ನಂಜನಗೂಡು ತಾಲೂಕು,ಚಿಕ್ಕಯ್ಯನ ಛತ್ರ ಬಿದರಗೂಡು ಗ್ರಾಮದಲ್ಲಿ ಮಂಜು ಮತ್ತು ಅವರ ತಾಯಿ,ರವಿ ಮತ್ತಿತರರು ಹೀಗೆ ದೌರ್ಜನ್ಯ ನಡೆಸಿದ್ದಾರೆ ಎಂದು ಲಕ್ಷ್ಮಿ ಎಂಬವರು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಂಜು ಎಂಬಾತ ಜಾತಿ ನಿಂದನೆ ಮಾಡಿ ಕುಡಿಯುವ ನೀರಿನ ನಲ್ಲಿಯ ಪೈಪನ್ನು ಕಿತ್ತು ಹಾಕಿ ಧಮ್ಕಿ ಹಾಕಿದ್ದಾನೆ.

ಗ್ರಾಮಸ್ಥರು ಮತ್ತು ಪಿಡಿಒ ಎರಡು ಬಾರಿ ಅಳತೆ ಮಾಡಿ ಹೋಗಿದ್ದಾರೆ,ಅಲ್ಲದೆ ಮಹಿಳೆಯರಿಗೆ ತೊಂದರೆ ಕೊಡಬೇಡ ಎಂದು ಬುದ್ದಿ ಹೇಳಿದರೂ ಕೂಡಾ ಅವರ ಮಾತನ್ನು ಲೆಕ್ಕಿಸಿಲ್ಲ. ಮನೆಯಲ್ಲಿ ಹೆಣ್ಣು ಮಕ್ಕಳು ಇದ್ದರೂ ದೌರ್ಜನ್ಯ ಮಾಡಿರುವ ಮಂಜು ಮತ್ತು ಅವರ ತಾಯಿ ಕುಡಿಯೋಕೆ ನೀರು ಬರದಂತೆ ಮಾಡಿ ಒಂದುವಾರ ಆಗಿದೆ ಎಂದು ಲಕ್ಷ್ಮೀ ಅಲವತ್ತುಕೊಂಡಿದ್ದಾರೆ.

ಈ ಘಟನೆ ನಡೆದಿರುವುದು ಮಾರ್ಚ್ ಒಂದನೆ ತಾರೀಖು,ಹುಲ್ಲಹಳ್ಳಿ ಪೋಲಿಸ್ ಸ್ಟೇಷನ್ ನಲ್ಲಿ ದೂರು ದಾಖಲಾದರೂ ಇಲ್ಲಿಯ ತನಕ ನ್ಯಾಯ ಸಿಕ್ಕಿಲ್ಲ,ನೀರೂ ಕೂಡಾ ಬಂದಿಲ್ಲ ನಮಗೆ ನ್ಯಾಯ ಕೊಡಿಸಬೇಕೆಂದು ನೊಂದ ಮಹಿಳೆಯರು ಪರಿ,ಪರಿಯಾಗಿ ಬೇಡಿಕೊಂಡಿದ್ದಾರೆ.

ಸಿಎಂ ಕ್ಷೇತ್ರದಲ್ಲೇ ಹೀಗಾದರೆ ಬೇರೆ ಕಡೆ ಹೇಗಿರಬೇಡ.ಈಗಲಾದರೂ ದೌರ್ಜನ್ಯ ಮಾಡಿದವರ‌ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುವ ಅಗತ್ಯವಿದೆ.ಅಮಾಯಕರಿಗೆ ನ್ಯಾಯ ಕೊಡಿಸಬೇಕಿದೆ.

ನೀರಿಲ್ಲದೆ ಎಷ್ಟು ದಿನ ಹಾಗೇ ಇರಲು ಸಾಧ್ಯ?ತಕ್ಷಣ ಪೊಲೀಸರು ಎಚ್ಚೆತ್ತುಕೊಳ್ಳಲಿ.

ಮುಖ್ಯ ಮಂತ್ರಿಗಳ ತವರು ಕ್ಷೇತ್ರದಲ್ಲಿ ಜಾತಿ ನಿಂದನೆ,ದೌರ್ಜನ್ಯ: ಕ್ರಮ ಕೈಗೊಳ್ಳದ ಪೊಲೀಸರು Read More

ನಂಜನಗೂಡಿನಲ್ಲಿ ತಾಯಿ-ಮಗುವಿನ ಆರೈಕೆ ಕ್ಷಯ, ಕುಷ್ಠರೋಗಗಳ ಬಗ್ಗೆ ಜಾಗೃತಿ

ನಂಜನಗೂಡು,ಮಾ.8: ಜಿಲ್ಲಾ ಪಂಚಾಯತ್, ಮೈಸೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ವತಿಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಬಾಲ್ಯವಿವಾಹ, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಮತ್ತಿತರ ವಿಷಯಗಳ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ತಾಯಿ-ಮಗುವಿನ ಆರೈಕೆ, ಕ್ಷಯ ಮತ್ತು ಕುಷ್ಠರೋಗಗಳ ಬಗ್ಗೆ ಜಾಗೃತಿ ಮೂಡಿಸಲು ಜಾನಪದ ಕಲಾ ಪ್ರದರ್ಶನ ಮತ್ತು ಬೀದಿ ನಾಟಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

ಈ ಕಾರ್ಯಕ್ರಮಕ್ಕೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಿ.ಕೆ. ಯದುಗಿರೀಶ್ ಚಾಲನೆ ನೀಡಿದರು.

ಬಾಲ್ಯವಿವಾಹದಿಂದ ಉಂಟಾಗುವ ಪರಿಣಾಮಗಳು ಮತ್ತು ಕ್ಷಯ-ಕುಷ್ಠರೋಗಗಳಿಗೆ ತುತ್ತಾಗದಂತೆ ಜಾಗೃತಿ ವಹಿಸುವ ಕುರಿತು ಅರಿವು ಮೂಡಿಸಲಾಯಿತು.

ಮುಂಬರುವ ತಾಪಮಾನದ ದಿನಗಳಲ್ಲಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವುದರಿಂದ ಗ್ರಾಮೀಣ ಪ್ರದೇಶಗಳ ಜನರು ತಮ್ಮ ಸುತ್ತಮುತ್ತಲಿನ ಪರಿಸರದ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳುವಳಿಕೆ ಮಂಡಿಸಲಾಯಿತು.

ಕುಡಿಯಲು ಶುದ್ಧ ನೀರು ಬಳಸುವ ಕುರಿತು ಜಾಗೃತಿ ಮೂಡಿಸಲು ಮಹಾಬೆಳಕು ತಂಡದ ವತಿಯಿಂದ ತಾಲ್ಲೂಕಿನ ಕೊತ್ತನಹಳ್ಳಿ ಕಾಲೋನಿ, ಮುಳ್ಳೂರು, ಹೊಸಕೋಟೆ, ಮರಳೂರು, ಡೋರನಕಟ್ಟೆ ಕಾಲೋನಿಗಳಲ್ಲಿ ಬೀದಿ ನಾಟಕ ಮತ್ತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಪ್ರದರ್ಶಿಸಲಾಯಿತು.

ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಕರುಣಾಮೂರ್ತಿ, ಹಿರಿಯ ಕ್ಷಯರೋಗ ಪ್ರಯೋಗಾಲಯ ಮೇಲ್ವಿಚಾರಕ ಮಹೇಶ್, ಮಹಾಬೆಳಕು ತಂಡದ ಅಧ್ಯಕ್ಷರಾದ ಕಾತ್ಯಾಯಿನಿ ಯಶೋಮಿತ್ರ, ಅನಸೂಯ, ಚೆಲುವಸ್ವಾಮಿ, ಕೃಷ್ಣ, ರಾಜೇಶ್ವರಿ, ರತನ್ ಮತ್ತಿತರರು ಹಾಜರಿದ್ದರು.

ನಂಜನಗೂಡಿನಲ್ಲಿ ತಾಯಿ-ಮಗುವಿನ ಆರೈಕೆ ಕ್ಷಯ, ಕುಷ್ಠರೋಗಗಳ ಬಗ್ಗೆ ಜಾಗೃತಿ Read More

ಸಮಾನತೆಯ ಸಮಾಜ ದೇಶದ ಪ್ರಗತಿಗೆ ಪೂರಕ:ಸಿ.ಆರ್ ದಿನೇಶ್

ನಂಜನಗೂಡು,ಮಾ.8: ಸಮಾನತೆಯ ಸಮಾಜ ದೇಶದ ಪ್ರಗತಿಗೆ ಪೂರಕ ಎಂದು
ನಂಜನಗೂಡು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್ ದಿನೇಶ್ ತಿಳಿಸಿದರು.

ಯಾವ ಸಮಾಜದಲ್ಲಿ ಸ್ತ್ರೀ ಪುರುಷ ಎಂಬ ಸಮಾನತೆಯ ಭಾವನೆ ಇರುತ್ತದೆಯೋ ಆ ಸಮಾಜ ಅಭಿವೃದ್ಧಿ ಪಥದ ಕಡೆಗೆ ಹೋಗಲು ಸಾಧ್ಯ ಎಂದು ಅವರು ತಿಳಿಸಿದರು.

ಮಹಿಳಾ ದಿನಾಚರಣೆ ಅಂಗವಾಗಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಪ್ರಾಚೀನ ಕಾಲದಿಂದ ಹಿಡಿದು ಇಂದಿನ ಆಧುನಿಕ ಕಾಲಘಟ್ಟದಲ್ಲಿ ಮಹಿಳೆ ವಿವಿಧ ರೀತಿಯಲ್ಲಿ ಅಂತಸ್ಥನ್ನು ಹೊಂದಿದ ಮಹಿಳೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತನ್ನದೇ ಆದ ಛಾಪನ್ನು ಮೂಡಿಸಿದ್ದಾಳೆ ಎಂದು ಹೇಳಿದರು.

ಕಾರ್ಯಕ್ರಮದ ಔಚಿತ್ಯದ ಬಗ್ಗೆ ಉಪನ್ಯಾಸಕರಾದ ಲಿಂಗಣ್ಣ ಸ್ವಾಮಿ, ರಂಗಸ್ವಾಮಿ, ರಾಮಾನುಜ ಮತ್ತು ಡಾ.ಕೆ ಮಾಲತಿ ಅವರು ಮಾತನಾಡಿದರು.

ಕಾಲೇಜಿನ ಸ್ವಚ್ಛತಾ ಪರಿಚಾಯಕಿ ನಾಗಮ್ಮ ರವರನ್ನು ಈ ವೇಳೆ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ಅಶ್ವತ್ ನಾರಾಯಣ ಗೌಡ, ಹೆಚ್.ಕೆ‌ ಪ್ರಕಾಶ್, ಡಾ. ಟಿ.ಕೆ ರವಿ ,ಎನ್.ನಾಗರಾಜು ಮತ್ತು ಮಹಿಳಾ ಉಪನ್ಯಾಸಕಿಯರಾದ ಭವ್ಯ ,ಸುಮಿತ್ರ, ಡಾ. ಸುಮಾ, ಪದ್ಮಾವತಿ, ವಸಂತ ಕುಮಾರಿ ,ವತ್ಸಲ, ರೂಪ ,ಮೀನಾ, ರಾಧಾ, ದಿವ್ಯ ಮತ್ತು ಹೆಡಿಯಲಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕೆನ್ನ ಗಂಡಸ್ವಾಮಿ ಮತ್ತು ಗಿರೀಶ್ ಉಪಸಿತರಿದ್ದರು.

ಸಮಾನತೆಯ ಸಮಾಜ ದೇಶದ ಪ್ರಗತಿಗೆ ಪೂರಕ:ಸಿ.ಆರ್ ದಿನೇಶ್ Read More

ಜ್ಞಾನಾರ್ಜನೆಯನ್ನು ತಪಸ್ಸಿನಂತೆ ಮಾಡಿ ಡಾ.ಎಮ್.ಪಿ.ವರ್ಷ ಸಲಹೆ

ನಂಜನಗೂಡು: ವಿದ್ಯಾರ್ಥಿಗಳು ಜ್ಞಾನಾರ್ಜನೆಯನ್ನು ತಪಸ್ಸಿನ ರೀತಿಯಲ್ಲಿ ಮಾಡಿದರೆ ಖಂಡಿತ ತಮ್ಮ ಜೀವನದಲ್ಲಿ ಉನ್ನತ ಮಟ್ಟಕ್ಕೆ ಹೋಗಲು ಸಾಧ್ಯವಾಗುತ್ತದೆ ಎಂದು ಡಾ. ಎಂ ಪಿ ವರ್ಷ ರವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡಿ ಮಾತನಾಡಿದ ಡಾ. ಎಂ ಪಿ ವರ್ಷ, ಪ್ರತಿಯೊಬ್ಬ ವಿದ್ಯಾರ್ಥಿಯೂ ವಿದ್ಯಾಭ್ಯಾಸದ ಅವಧಿಯಲ್ಲಿ ಕ್ರಮಬದ್ಧವಾಗಿ ಓದಬೇಕು ಎಂದು ಹೇಳಿದರು.

ನಂಜನಗೂಡಿನ ಮಾಜಿ ಶಾಸಕರಾದ ಕಳಲೆ ಕೇಶವಮೂರ್ತಿ ಅವರು ಮಾತನಾಡಿ, ಪದವಿ ಪೂರ್ವ ಹಂತ ಎಂಬುದು ವಿದ್ಯಾರ್ಥಿಗಳಿಗೆ ತಮ್ಮ ಜೀವನವನ್ನು ತಿರುವು ತೆಗೆದುಕೊಳ್ಳುವ ಹಂತ. ಹಾಗಾಗಿ ವಿದ್ಯಾರ್ಥಿಗಳು ಈ ಹಂತದಲ್ಲಿ ಉತ್ತಮ ನಡುವಳಿಕೆಯನ್ನು ಹೊಂದಬೇಕೆಂದು ಕಿವಿ ಮಾತು ಹೇಳಿದರು.

ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಎಂ.ಎಸ್ ರಾಮಪ್ರಸಾದ್ ಮಾತನಾಡಿ ವಿದ್ಯಾರ್ಥಿಗಳು ತಾವು ಏನನ್ನು ಮಾಡುತ್ತಿದ್ದೇವೆ ಎಂಬ ಅರಿವನ್ನು ಹೊಂದಿರಬೇಕು. ಆಗ ಮಾತ್ರ ಪರೀಕ್ಷೆಯಲ್ಲಿ ಸಫಲತೆಯನ್ನು ಸಾಧಿಸಬಹುದು ಎಂದು ಹೇಳಿದರು.

ನಗರಸಭಾ ಸದಸ್ಯರಾದ ಶ್ರೀ ಮಹೇಶ್ ಅತ್ತೀಖಾನೆ ಅವರು ಮಾತನಾಡಿ ಪಾಠ ಮತ್ತು ಪಾಠೇತರ ವಿದ್ಯಾರ್ಥಿಗಳಿಗೆ ಅವಿಭಾಜ್ಯ ಅಂಗ. ಎರಡನ್ನು ಸಮಭಾಗವಾಗಿ ಸ್ವೀಕರಿಸಿದರೆ ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ಸಮಾಜಕ್ಕೆ ಯೋಗ್ಯ ವ್ಯಕ್ತಿಗಳಾಗಲು ಸಾಧ್ಯ ಎಂದು ತಿಳಿಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಸಿ.ಅರ್. ದಿನೇಶ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದೆ ಸಾರ್ಥಕತೆಯ ಬದುಕನ್ನು ಕಂಡುಕೊಳ್ಳಬೇಕಾದರೆ ಈ ಅವಧಿಯಲ್ಲಿ ವಿದ್ಯಾರ್ಥಿಗಳು ಅಧ್ಯಯನವನು ಸಾರ್ಥಕ ರೀತಿಯಲ್ಲಿ ಅಭ್ಯಸಿಸಬೇಕು. ಆಗ ಮಾತ್ರ ಸಾರ್ಥಕ ಜೀವನ ಮಾಡಲು ವಿದ್ಯಾಭ್ಯಾಸ ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಅಶ್ವತ್ ನಾರಾಯಣಗೌಡ, ಲಿಂಗಣ್ಣ ಸ್ವಾಮಿ, ರಂಗಸ್ವಾಮಿ, ಡಾ. ಟಿ.ಕೆ ರವಿ, ಸ್ವಾಮಿ ಗೌಡ ,ಡಾ.ಸುಮಾ ,ದಿನೇಶ್ ಎನ್. ಮತ್ತಿತರರು ಉಪಸ್ಥಿತರಿದ್ದರು.

ಜ್ಞಾನಾರ್ಜನೆಯನ್ನು ತಪಸ್ಸಿನಂತೆ ಮಾಡಿ ಡಾ.ಎಮ್.ಪಿ.ವರ್ಷ ಸಲಹೆ Read More

ಬ್ರಾಹ್ಮಣರಿಗೆ ಸಿಗದ ಪ್ರಾತಿನಿಧ್ಯ: ಮಾ ವಿ ರಾಮ್ ಪ್ರಸಾದ್ ಅಸಮಾಧಾನ

ಮೈಸೂರು: ಅಖಿಲ ಕರ್ನಾಟಕ
ಬ್ರಾಹ್ಮಣ ಮಹಾಸಭಾಗೆ 50 ವರ್ಷ ತುಂಬಿದ್ದು, ಜನವರಿ ತಿಂಗಳಿನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ ಎಂದು ನಗರ ಪಾಲಿಕೆ ಮಾಜಿ ಸದಸ್ಯರಾದ ಮಾ ವಿ ರಾಮ್ ಪ್ರಸಾದ್ ಹೇಳಿದರು.

ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ನಂಜನಗೂಡಿನ ಹುರ ಗ್ರಾಮದಲ್ಲಿ ಬ್ರಾಹ್ಮಣರ ಮಂಡಳಿಯ 2025 ನೆ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಮಾವೇಶದ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು
ಮಾತನಾಡಿದರು.

ಪ್ರಸ್ತುತ ಯಾವುದೇ ಪಕ್ಷದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸೂಕ್ತ ಸ್ಥಾನಮಾನ, ಪ್ರಾತಿನಿಧ್ಯ ಹಾಗೂ ಪ್ರಾಶಸ್ತ್ರ ದೊರೆಯುತ್ತಿಲ್ಲ. ಅಸಡ್ಡೆಯಿಂದ ಕಾಣಲಾಗುತ್ತಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ವಿಪ್ರ ಸಮುದಾಯದ ಒಗ್ಗಟ್ಟು ಪ್ರದರ್ಶನ, ಜನರಲ್ಲಿ ಜಾಗೃತಿ ಮೂಡಿಸಲು ಸಮಾವೇಶ ಉತ್ತಮ ವೇದಿಕೆಯಾಗಲಿದೆ,ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿಪ್ರರು ಭಾಗವಹಿಸಬೇಕೆಂದು ಮನವಿ ಮಾಡಿದರು.

ನಗರ ಪಾಲಿಕೆ ಮಾಜಿ ಸದಸ್ಯ ಎಂ ಡಿ ಪಾರ್ಥಸಾರಥಿ ಮಾತನಾಡಿ ಮುಂದಿನ ಐವತ್ತು ವರ್ಷಗಳಿಗೆ ಸುಭದ್ರ ಅಡಿಪಾಯ ಹಾಕಬೇಕು. ಯುವ ಸಮೂಹವನ್ನು ಮುನ್ನೆಲೆಗೆ ತರಬೇಕು. ವಿವಿಧ ಕ್ಷೇತ್ರಗಳ ಗಣ್ಯರ ಜತೆ ಸಂವಾದ, ಉದ್ಯೋಗ ಮೇಳ ಹಾಗೂ ಸ್ವಂತ ಉದ್ದಿಮೆ ಪ್ರಾರಂಭಿ- ಸುವವರಿಗೆ ನಿಮ್ಮ ಆಲೋಚನೆ-ನಮ್ಮ ಹಣ ಘೋಷಣೆಯಡಿ ಆರ್ಥಿಕ ಸೌಲಭ್ಯ ಕಲ್ಪಿಸುವುದೂ ಸೇರಿ ಹಲವು ವಿಶೇಷ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್,
ಸುಚಿಂದ್ರ, ಎಚ್ ಎಸ್ ಸತೀಶ, ಎನ್ ವಲ್ಲೀಶ,
ಎಚ್ ಎಸ್ ಸತೀಶ, ಎಚ್ ಸಿ ರಾಜೇಂದ್ರ ಶರ್ಮ, ಎಚ್ ಎಸ್ ನಾಗರಾಜ್, ಎಂ ಆರ್ ವೆಂಕಟೇಶ್ ಮತ್ತಿತರರು ಹಾಜರಿದ್ದರು.

ಬ್ರಾಹ್ಮಣರಿಗೆ ಸಿಗದ ಪ್ರಾತಿನಿಧ್ಯ: ಮಾ ವಿ ರಾಮ್ ಪ್ರಸಾದ್ ಅಸಮಾಧಾನ Read More

ಮೂವರು ದಲಿತ ಯುವಕರ ಮೇಲೆ ಹಲ್ಲೆ

ನಂಜನಗೂಡು: ಅಂತರ್ಜಾತಿ ವಿವಾಹ ಮಾಡಿದ್ದರಿಂದ ಆಕ್ರೋಶಗೊಂಡ ಸವರ್ಣೀಯರು ಮೂವರು ದಲಿತ ಯುವಕರ ಮೇಲೆ ಹಲ್ಲೆ ನಡೆಸಿದ ಘಟನೆ ನಂಜನಗೂಡು ತಾಲೂಕು ಗೀಕಳ್ಳಿ ಗ್ರಾಮದಲ್ಲಿ ನಡೆದಿದೆ.

ಹಲ್ಲೆಯಿಂದಾಗಿ ಗ್ರಾಮದ ಆಕಾಶ್,ನಿತಿನ್ ಮತ್ತು ಸಂತೋಷ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹಲ್ಲೆ ನಡೆಸಿದ ಆರೋಪಿಗಳನ್ನ ಬಂಧಿಸುವಂತೆ ದಲಿತ ಸಂಘಟನೆಗಳ ಮುಖಂಡರು ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಕೆಲವು ದಿನಗಳ ಹಿಂದೆ ಗೀಕಳ್ಳಿಯಲ್ಲಿ ಅಂತರ್ಜಾತಿ ವಿವಾಹ ನೆರವೇರಿದ್ದು,ಇದರಿಂದ ಎರಡು ಕೋಮುಗಳ ನಡುವೆ ವೈಮನಸ್ಸು ಬೆಳೆದಿತ್ತು.

ಮಂಗಳವಾರ ರಾತ್ರಿ ಇದನ್ನೇ ನೆಪ ಮಾಡಿಕೊಂಡ ಒಂದು ಜಾತಿಯ ಯುವಕರು ಮೂವರು ದಲಿತ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ.

ಗಾಯಗೊಂಡ ಯುವಕರಿಗೆ ದಲಿತ ಸಂಘಟನೆಯ ಮುಖಂಡರು ಆತ್ಮಸ್ಥೈರ್ಯ ತುಂಬಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ಕ್ಷೇತ್ರದಲ್ಲೇ ದಲಿತರಿಗೆ ರಕ್ಷಣೆ ಇಲ್ಲ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಹಲ್ಲೆ ಮಾಡಿದ ಆರೋಪಿಗಳನ್ನ ತಕ್ಷಣ ಬಂಧಿಸಬೇಕು.ದಲಿತರಿಗೆ ರಕ್ಷಣೆ ನೀಡಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ನಂಜನಗೂಡು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮೂವರು ದಲಿತ ಯುವಕರ ಮೇಲೆ ಹಲ್ಲೆ Read More

ರಾಷ್ಟ್ರ ಅಭಿವೃದ್ಧಿ ಹೊಂದಲು ಆ ದೇಶದ ಸಂವಿಧಾನದ ಪಾತ್ರ ಮುಖ್ಯ:ರಾಮಪ್ರಸಾದ್

ನಂಜನಗೂಡು: ಒಂದು ರಾಷ್ಟ್ರ ಸರ್ವಾಂಗೀಣ ಅಭಿವೃದ್ಧಿ ಹೊಂದಬೇಕಾದರೆ ಆ ದೇಶದ ಸಂವಿಧಾನ ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂದು ನಂಜನಗೂಡು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಂ ರಾಮಪ್ರಸಾದ್ ತಿಳಿಸಿದರು.

ಕಾಲೇಜಿನಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಸಂವಿದಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸಂವಿದಾನವನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು.

ರಾಜ್ಯಶಾಸ್ತ್ರ ಉಪನ್ಯಾಸಕ ಹೆಚ್. ಕೆ ಸ್ವಾಮಿಗೌಡ ಅವರು ಸಂವಿಧಾನದ ಪೀಠಿಕೆ ,ಹಕ್ಕುಗಳು, ಕರ್ತವ್ಯಗಳ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿದರು.

ಆಂಗ್ಲ ಭಾಷೆ ಉಪನ್ಯಾಸಕ ರಂಗಸ್ವಾಮಿ ಅವರು ಭಾರತ ದೇಶದಲ್ಲಿ ಸಾಮಾನ್ಯ ವ್ಯಕ್ತಿಯು ಉನ್ನತ ಮಟ್ಟಕ್ಕೆ ಹೋಗಲು ಸಾಧ್ಯ ಇದಕ್ಕೆ ಮುಖ್ಯ ಕಾರಣ ನಮ್ಮ ದೇಶದ ಸಂವಿಧಾನ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಸಿ.ಆರ್. ದಿನೇಶ್ ಅವರು ಒಂದು ಕುಟುಂಬಕ್ಕೆ, ಒಂದು ಕಾಲೇಜಿಗೆ, ಒಂದು ಕಾರ್ಖಾನೆಗೆ, ಒಂದು ಸಂಸ್ಥೆಗೆ ಯಾವ ರೀತಿಯಲ್ಲಿ ಕಾನೂನುಗಳು ಇರುತ್ತದೆಯೋ ಹಾಗೆಯೇ ಒಂದು ರಾಷ್ಟ್ರಕ್ಕೆ ಸಂವಿಧಾನ ಇರುತ್ತದೆ ಎಂದು ಹೇಳಿದರು.

ಯಾವ ರಾಷ್ಟ್ರ ಸಂವಿಧಾನ ಮತ್ತು ಕಾನೂನುಗಳನ್ನು ಕ್ರಮಬದ್ಧವಾಗಿ ಪಾಲಿಸುತ್ತದೆಯೋ ಆ ದೇಶ ಉನ್ನತ ಮಟ್ಟಕ್ಕೆ ಹೋಗುತ್ತದೆ ಎಂದು ತಿಳಿಸಿದರು.

ಇಂದು ಪ್ರಪಂಚ ನಮ್ಮ ದೇಶದತ್ತ ಕಣ್ಣು ಹಾಯಿಸಬೇಕಾದರೆ ನಮ್ಮ ದೇಶದ ಸಂವಿಧಾನವೇ ಕಾರಣ. ಹಾಗಾಗಿ ಭಾರತೀಯರು ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ಮನಪೂರ್ವಕವಾಗಿ ಧನ್ಯವಾದಗಳು ಅರ್ಪಿಸಬೇಕು ಎಂದು ಸಲಹೆ ನೀಡಿದರು.

ಎಚ್ ಕೆ ಸ್ವಾಮಿ ಗೌಡ, ಡಾ ಟಿ ಕೆ ರವಿ, ಹಿರಿಯ ಉಪನ್ಯಾಸಕರಾದ ಅಶ್ವತ ನಾರಾಯಣ ಗೌಡ,ಲಿಂಗಣ್ಣ ಸ್ವಾಮಿ,ಪ್ರಕಾಶ್, ರೂಪ,ವತ್ಸಲ, ರಾಮಾನುಜ ,ದಿನೇಶ್ ,ಹರೀಶ್ ನಾಗರಾಜು ,ಮೀನಾ, ವಸಂತ್ ಕುಮಾರಿ, ಪದ್ಮಾವತಿ ,ಬಸವಣ್ಣ, ಹರೀಶ್ ,ಚೇತನ, ನಾಗವೇಣಿ ,ಸಿದ್ದಪ್ಪಾಜಿ ,ನಾಗರಾಜು,ಮೋಹನ್, ಹರೀಶ್ ,ಬಿಂದು ಮತ್ತಿತರರು ಉಪಸ್ಥಿತರಿದ್ದರು.

ರಾಷ್ಟ್ರ ಅಭಿವೃದ್ಧಿ ಹೊಂದಲು ಆ ದೇಶದ ಸಂವಿಧಾನದ ಪಾತ್ರ ಮುಖ್ಯ:ರಾಮಪ್ರಸಾದ್ Read More