ಮೆಟ್ರೋ ಪ್ರಯಾಣ ದರ ಹೆಚ್ಚಳ:,ಸಿಎಂ‌ ಸಿದ್ದರಾಮಯ್ಯ ಸ್ಪಷ್ಟನೆ

ಬೆಂಗಳೂರು: ಮೆಟ್ರೋ ಪ್ರಯಾಣ ದರ ಹೆಚ್ಚಳ ವಿರೋಧಿಸುತ್ತಿರುವ ಬಿಜೆಪಿ ನಾಯಕರು ಸುಳ್ಳು ಮತ್ತು ತಿರುಚಿದ ಮಾಹಿತಿ ಬಳಸಿ ರಾಜ್ಯ ಸರ್ಕಾರದ ವಿರುದ್ಧ ಆರೋಪ ಮಾಡಿ ಸಾರ್ವಜನಿಕರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ‌ ಬಗ್ಗೆ ಮುಖ್ಯ ಮಂತ್ರಿಗಳು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು,ಬೆಂಗಳೂರು ಮೆಟ್ರೊ ರೈಲಿನ ಪ್ರಯಾಣ ದರ ಹೆಚ್ಚಳಕ್ಕೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ವಾಸ್ತವಾಂಶಗಳನ್ನು ಬೆಂಗಳೂರು ಜನತೆಯ ಮುಂದಿಡಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಸರ್ಕಾರದ ಯಾವುದೇ ನೀತಿ-ನಿರ್ಧಾರಗಳನ್ನು ವಿರೋಧಿಸುವ ಅಧಿಕಾರ ಸಾರ್ವಜನಿಕರಿಗೆ ಇದೆ, ಸಂವಿಧಾನಬದ್ಧವಾದ ಅವರ ಹಕ್ಕನ್ನು ನಾನು ಗೌರವಿಸುತ್ತೇನೆ ಎಂದು ತಿಳಿಸಿದ್ದಾರೆ.

ಆದರೆ ವಿರೋಧ ಪಕ್ಷದ ಸ‍್ಥಾನದಲ್ಲಿ ಜನ ಕೂರಿಸಿರುವ ರಾಜ್ಯದ ಬಿಜೆಪಿ ರಾಜಕೀಯ ದುರುದ್ದೇಶದಿಂದ ಸುಳ್ಳು ಮಾಹಿತಿಗಳನ್ನು ನೀಡಿ ಸಾರ್ವಜನಿಕರ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿರುವುದು ಅಕ್ಷಮ್ಯ. ಒಂದೆಡೆ ಮೆಟ್ರೋ ರೈಲು ನಿರ್ಮಾಣದ ಸಾಧನೆ ಕೇಂದ್ರದ ಬಿಜೆಪಿ ಸರ್ಕಾರದ್ದು ಎಂದು ಡಂಗುರ ಬಾರಿಸುತ್ತಿರುವ ಬಿಜೆಪಿ ನಾಯಕರು ದರ ಪರಿಷ್ಕರಣೆ ವಿರುದ್ದ ಜನಾಕ್ರೋಶ ವ್ಯಕ್ತವಾಗುತ್ತಿರುವುದನ್ನು ಕಂಡು ಅದರ ಜವಾಬ್ದಾರಿಯನ್ನು ರಾಜ್ಯ ಸರ್ಕಾರದ ಮೇಲೆ ಹೊರಿಸುತ್ತಿರುವುದು ಆತ್ಮವಂಚಕ ನಡವಳಿಕೆಯಾಗಿದೆ ಎಂದು ಟೀಕಿಸಿದ್ದಾರೆ.

ಕೇಂದ್ರ ಮತ್ತು ಕರ್ನಾಟಕ ಸರ್ಕಾರ ಜೊತೆಗೂಡಿ ಬೆಂಗಳೂರು ಮೆಟ್ರೊ ರೈಲು ನಿಗಮವನ್ನು ಸ್ಥಾಪಿಸಿದ್ದು, ಇದರಲ್ಲಿ ಎರಡೂ ಸರ್ಕಾರಗಳ ಸಮ (50:50) ಪಾಲುದಾರಿಕೆ ಇದೆ. ಕೇಂದ್ರ ನಗರ ಮತ್ತು ವಸತಿ ವ್ಯವಹಾರ ಇಲಾಖೆಯ ಕಾರ್ಯದರ್ಶಿಯಾಗಿರುವ ಶ್ರೀನಿವಾಸ ಕಟಿಕಿಲ ಅವರು ನಿಗಮದ ಈಗಿನ ಅಧ್ಯಕ್ಷರು. ವ್ಯವಸ್ಥಾಪಕ ನಿರ್ದೇಶಕ ಮತ್ತು ನಿರ್ದೇಶಕರ ಸ‍್ಥಾನದಲ್ಲಿ ಕೇಂದ್ರ ಮತ್ತು ರಾಜ್ಯದ ಅಧಿಕಾರಿಗಳಿದ್ದಾರೆ.

ಇದೊಂದು ಸ್ವಾಯತ್ತ ಸಂಸ್ಥೆಯಾಗಿದ್ದು ಇದರ ಮೇಲೆ ರಾಜ್ಯ ಸರ್ಕಾರಕ್ಕೆ ಪೂರ್ಣ ನಿಯಂತ್ರಣಾಧಿಕಾರ ಇಲ್ಲ. ಉಳಿದೆಲ್ಲ ನಗರಗಳ ಮೆಟ್ರೋ ರೈಲು ನಿಗಮಗಳಂತೆ ಬೆಂಗಳೂರು ಮೆಟ್ರೊ ರೈಲು ನಿಗಮ ಕೂಡಾ ಕೇಂದ್ರ ಸರ್ಕಾರದ ಮೆಟ್ರೋ ರೈಲು (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ 2002ರ ಅಡಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ.

2017ರ ನಂತರ ಮೆಟ್ರೊ ರೈಲಿನ ಪ್ರಯಾಣ ದರ ಪರಿಷ್ಕರಣೆ ಮಾಡದೆ ಇರುವ ಕಾರಣ ದರ ಪರಿಷ್ಕರಣೆ ನಡೆಸುವಂತೆ ಬಿಎಂಆರ್‌ಸಿಎಲ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಪ್ರಯಾಣ ದರ ಹೆಚ್ಚಳದ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲೇ ಇದ್ದಿದ್ದರೆ ಬಿಎಂಆರ್‌ಸಿಎಲ್ ನಮಗೆ ಪತ್ರ ಬರೆಯದೆ, ಕೇಂದ್ರ ಸರ್ಕಾರಕ್ಕೆ ಯಾಕೆ ಪತ್ರ ಬರೆಯುತ್ತಿತ್ತು ಎಂದು ಪ್ರಶ್ನಿಸಿದ್ದಾರೆ.

ಬಿಎಂಆರ್‌ಸಿಎಲ್ ಪತ್ರಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಸರ್ಕಾರ ಮದ್ರಾಸ್ ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಆರ್ ಥರಾನಿ ಅವರ ಅಧ್ಯಕ್ಷತೆಯಲ್ಲಿ ದರ ಪರಿಷ್ಕರಣಾ ಸಮಿತಿ ರಚಿಸಿತ್ತು, ಈ ಸಮಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಪ್ರತಿನಿಧಿಗಳು ಸದಸ್ಯರಾಗಿದ್ದರು. 2024ರ ಸೆಪ್ಟೆಂಬರ್ 16ರಂದು ಅಧಿಕಾರ ಸ್ವೀಕರಿಸಿದ ಈ ಸಮಿತಿ ಮೂರು ತಿಂಗಳೊಳಗೆ ತನ್ನ ಶಿಫಾರಸನ್ನು ಸಲ್ಲಿಸಬೇಕೆಂದು ಕೇಂದ್ರ ಸರ್ಕಾರ ತನ್ನ ಪತ್ರದಲ್ಲಿ ತಿಳಿಸಿತ್ತು.

ಮೂರು ತಿಂಗಳ ಅವಧಿಯಲ್ಲಿ ಸಮಿತಿ ಬಿಎಂಆರ್‌ಸಿಎಲ್ ಅಧಿಕಾರಿಗಳ ಜೊತೆ ಮಾತ್ರವಲ್ಲ ದೆಹಲಿ ಮತ್ತು ಚೆನೈಗಳಿಗೆ ತೆರಳಿ ಅಲ್ಲಿನ ಮೆಟ್ರೋ ಸಂಸ್ಥೆಗಳ ಅಧಿಕಾರಿಗಳ ಜೊತೆಯಲ್ಲಿ ಕೂಡಾ ಕಾರ್ಯಾಚರಣೆ ಮತ್ತು ಪ್ರಯಾಣ ದರದ ಬಗ್ಗೆ ಸಮಾಲೋಚನೆ ನಡೆಸಿತ್ತು.

2017ರ ಜೂನ್ ನಲ್ಲಿ ಬೆಂಗಳೂರು ಮೆಟ್ರೋ ರೈಲಿಗೆ ನಿಗದಿಗೊಳಿಸಿದ್ದ ಪ್ರಯಾಣದರ, ಮೆಟ್ರೋದಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರ ಅನುಭವಗಳನ್ನು ದರಪರಿಷ್ಕರಣ ಸಮಿತಿ ಕಲೆ ಹಾಕಿತ್ತು. ಇದರ ಜೊತೆಯಲ್ಲಿ ಬಿಎಂಆರ್‌ಸಿಎಲ್ ನ ಹಣಕಾಸು ಸಾಮರ್ಥ್ಯವನ್ನು ಕೂಡಾ ಸಮಿತಿ ಅಧ್ಯಯನ ಮಾಡಿ 2024ರ ಡಿಸೆಬರ್ 16ರಂದು ಸಮಿತಿ ತನ್ನ ವರದಿನ್ನು ಸಲ್ಲಿಸಿತ್ತು.
2017ರ ಜೂನ್ ತಿಂಗಳಲ್ಲಿ ಬಿಎಂಆರ್‌ಸಿಎಲ್ ಪ್ರಯಾಣ ದರ ನಿಗದಿಪಡಿಸಿದಾಗ ಮೆಟ್ರೋ ಪ್ರಥಮ ಹಂತದ 42.30 ಕಿ.ಮೀ ಮಾರ್ಗ ಮಾತ್ರ ಪೂರ್ಣಗೊಂಡಿತ್ತು. ಮೆಟ್ರೋ ಎರಡನೇ ಹಂತ ಭಾಗಶ: ಪೂರ್ಣಗೊಂಡ ನಂತರ ಈಗ ಮೆಟ್ರೋ ಮಾರ್ಗ 42.30 ಕಿ.ಮೀಟರ್ ಗೆ ವಿಸ್ತರಣೆ ಗೊಂಡಿದೆ. ಮೆಟ್ರೋ 2, 2ಎ, ಮತ್ತು 2ಬಿ ಮಾರ್ಗಗಳು (96.60 ಕಿ.ಮೀ.) 2026ರ ಡಿಸೆಂಬರ್ ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು ಆಗ ಬೆಂಗಳೂರು ಮೆಟ್ರೋ ಮಾರ್ಗ 175,55 ಕಿ.ಮೀ.ಗೆ ವಿಸ್ತರಣೆಯಾಗಲಿದೆ.

ಬೆಂಗಳೂರು ಮೆಟ್ರೋ ರೈಲಿಗೆ ಸಂಬಂಧಿಸಿದ ಈ ಎಲ್ಲ ಅಂಶಗಳನ್ನು ಗಮನಕ್ಕೆ ತೆಗೆದುಕೊಂಡು ಚರ್ಚೆ ನಡೆಸಿದ ನಂತರ ಹತ್ತು ಅಧ್ಯಾಯಗಳಲ್ಲಿ ತನ್ನ ವರದಿ ನೀಡಿದೆ. ಸಮಿತಿ ದೇಶದ ಉಳಿದ ಮೆಟ್ರೋ ರೈಲಿನ ಪ್ರಯಾಣದರವನ್ನು ಅಧ್ಯಯನ ಮಾಡಿದೆ. ಸದ್ಯ ಬೆಂಗಳೂರು ಮೆಟ್ರೋ ಪ್ರಯಾಣ ದರ ಕನಿಷ್ಠ ರೂ.10 ಮತ್ತು ಗರಿಷ್ಠ ರೂ.60 ಆಗಿದೆ. ಮುಂಬೈ ಮೆಟ್ರೋ ರೈಲಿನ ಕನಿಷ್ಠ ಪ್ರಯಾಣದರ ರೂ.10 ಮತ್ತು ಗರಿಷ್ಠ ಪ್ರಯಾಣ ದರ ರೂ.80 ಆಗಿದೆ ಎಂದು ಸಿಎಂ ಸ್ಪಷ್ಟ ಪಡಿಸಿದ್ದಾರೆ.

ಮೆಟ್ರೋ ಪ್ರಯಾಣ ದರ ಹೆಚ್ಚಳ:,ಸಿಎಂ‌ ಸಿದ್ದರಾಮಯ್ಯ ಸ್ಪಷ್ಟನೆ Read More

ಮೆಟ್ರೋ ದರ ಹೆಚ್ಚಳ: ಆಪ್ ತೀವ್ರ ಆಕ್ರೋಶ

ಬೆಂಗಳೂರು: ಬೆಂಗಳೂರು ಮೆಟ್ರೋ ದರವನ್ನು ಏಕಾಏಕಿ ದುಪ್ಪಟ್ಟು ಹೆಚ್ಚಿಸಿರುವ ಬೆಂಗಳೂರು ಮೆಟ್ರೋ ನಿಗಮದ ಕ್ರಮವನ್ನು
ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸಿದೆ.

ಮಾಧ್ಯಮಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಆಪ್ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಅವರು, ಈ ದರ ಹೆಚ್ಚಳ ದೆಹಲಿ ರಾಜ್ಯದ ಚುನಾವಣೆಯ ನಂತರ ಕೇಂದ್ರ ಸರ್ಕಾರ ಬೆಂಗಳೂರಿಗರಿಗೆ ನೀಡುತ್ತಿರುವ ಕೊಡುಗೆ ಎಂದು ಟೀಕಿಸಿದರು.

ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರದ ಜನಸಾಮಾನ್ಯ ವಿರೋಧಿ ನಿಲುವನ್ನು ಇದು ಸ್ಪಷ್ಟಪಡಿಸುತ್ತಿದೆ. ಮೆಟ್ರೊ ನಿಗಮವು ತನ್ನ ಹೇಳಿಕೆಯಲ್ಲಿ ದೆಹಲಿ ಚುನಾವಣೆಯ ನಿಮಿತ್ತ ದರ ಏರಿಸಿರಲಿಲ್ಲ ಎಂದು ಹೇಳಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಖಂಡಿಸಿದರು.

ಜನಸಾಮಾನ್ಯರು ಈಗಾಗಲೇ ಎಲ್ಲ ಅವಶ್ಯಕತೆಗಳ ಬೆಲೆ ಏರಿಕೆಯಿಂದಾಗಿ ತತ್ತರಿಸುತ್ತಿರುವ ಸಂದರ್ಭದಲ್ಲಿ ಮೆಟ್ರೋ ದರ ಹೆಚ್ಚಳದಿಂದಾಗಿ ಮತ್ತೊಂದು ಬರೆಯನ್ನು ಎಳೆದಿದ್ದಾರೆ.

ಮಹಾನಗರಗಳು ಅದರಲ್ಲೂ ಬೆಂಗಳೂರಿನಂತಹ ವಿಶ್ವಮಟ್ಟದ ನಗರದಲ್ಲಿ ಸಂಚಾರ ಒತ್ತಡದ ಸಮಸ್ಯೆಯಿಂದಾಗಿ ದೇಶದ ಆರ್ಥಿಕತೆ ಕುಸಿಯುತ್ತಿರುವ ಕಾಲಘಟ್ಟದಲ್ಲಿ ಮೆಟ್ರೋ ಸಂಚಾರದಿಂದಾಗಿ ಸಂಚಾರದ ಒತ್ತಡ ಕಡಿಮೆ ಮಾಡುವ ಮೂಲ ಆಶಯವನ್ನೇ ಮೆಟ್ರೋ ನಿಗಮ ಹಾಗೂ ರಾಜ್ಯ, ಕೇಂದ್ರ ಸರ್ಕಾರಗಳು ಮರೆತಿರುವುದು ನಿಜಕ್ಕೂ ಶೋಚನೀಯ ಎಂದು ಟೀಕಿಸಿದರು.

ಬೆಂಗಳೂರು ಮೆಟ್ರೋ ನಿಗಮದ ನೌಕರರ ಸಂಘದವರೇ ಈ ರೀತಿಯ ಬೆಲೆ ಏರಿಕೆಯನ್ನು ಖಂಡಿಸಿ ಪರಿಹಾರ ಕ್ರಮಗಳನ್ನು ಸೂಚಿಸಿದ್ದರೂ ಅಧಿಕಾರಿಗಳ ಅಂದಾ ದರ್ಬಾರ್, ಮೆಟ್ರೋ ಆಸ್ತಿಗಳ ಬಾಡಿಗೆ ಸಂಗ್ರಹಣೆಯಲ್ಲಿ ವೈಫಲ್ಯ, ಸ್ವಚ್ಛತೆಯ ನೆಪದಲ್ಲಿ ಪ್ರತಿವರ್ಷ ನೂರಾರು ಕೋಟಿಗಳ ಲೂಟಿ ಅನವಶ್ಯಕ ಸಿಬ್ಬಂದಿಗಳ ನೇಮಕ ಹಾಗೂ ಇನ್ನೂ ಮುಂತಾದ ವಿಷಯಗಳಲ್ಲಿ ಅಧಿಕಾರಿಗಳ ನಿರ್ಲಕ್ಷತನ,
ಬೇಜವಾಬ್ದಾರಿತನಗಳಿಂದಾಗಿ ಬೆಂಗಳೂರಿನ ಜನಸಾಮಾನ್ಯರು ಬೆಲೆ ತೆರುವಂತಾಗಿದೆ ಎಂದು ಜಗದೀಶ್ ಅಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಬೆಂಗಳೂರು ನಗರಾಧ್ಯಕ್ಷ ಡಾ. ಸತೀಶ್ ಕುಮಾರ್ ಮಾತನಾಡಿ, ಬೆಂಗಳೂರು ಉಸ್ತುವಾರಿ ಸಚಿವ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ ಮೆಟ್ರೋ ಹೆಚ್ಚಳದ ಬಗ್ಗೆ ನಮ್ಮ ಆಕ್ಷೇಪಣೆ ಏನು ಇಲ್ಲ ಎಂದು ಹೇಳಿರುವುದು 136 ಸ್ಥಾನಗಳನ್ನು ನೀಡಿ ರಾಜ್ಯದಲ್ಲಿ ಅಧಿಕಾರ ನೀಡಿದಂತಹ ಕರ್ನಾಟಕದ ಪ್ರಭುದ್ಧ ಜನತೆಗೆ ಮಾಡಿದಂತಹ ಮಹಾ ದ್ರೋಹ ಎಂದು ಖಂಡಿಸಿದರು.

ಈ ತಕ್ಷಣದಿಂದಲೇ ಬಿಜೆಪಿಯ ಬೆಂಗಳೂರಿನ ಮೂವರು ಲೋಕಸಭಾ ಸದಸ್ಯರು ಹಾಗೂ ರಾಜ್ಯದಿಂದ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯರುಗಳು ಬೀದಿಗಿಳಿದು ಹೋರಾಟ ಮಾಡಬೇಕು ನಮ್ಮ ಪಕ್ಷವೂ ಸಹ ಬೆಂಗಳೂರಿಗರೊಂದಿಗೆ ಉಗ್ರ ಸ್ವರೂಪದ ಹೋರಾಟ ಕೈಗೊಳ್ಳಲಿದೆ, ಯಾವುದೇ ಕಾರಣಕ್ಕೂ ಬೆಲೆ ಏರಿಕೆಯನ್ನು ಹೆಚ್ಚಿಸಲು ಬಿಡುವುದಿಲ್ಲ ಎಂದು ಸತೀಶ್ ಎಚ್ಚರಿಸಿದರು.

ಮೆಟ್ರೋ ದರ ಹೆಚ್ಚಳ: ಆಪ್ ತೀವ್ರ ಆಕ್ರೋಶ Read More