ಹುಣಸೂರು ನಗರಸಭಾ ಮೈದಾನದಲ್ಲಿ ವಸ್ತುಪ್ರದರ್ಶನ ತೆರವಿಗೆ ಚೆಲುವರಾಜು ಆಗ್ರಹ

ಹುಣಸೂರು: ಹುಣಸೂರು ನಗರಸಭಾ ಮೈದಾನದಲ್ಲಿ ಮನರಂಜನಾ ವಸ್ತುಪ್ರದರ್ಶನ ನಡೆಯುತ್ತಿದ್ದು,ಇದರ ಅವಧಿ ಮುಗಿದಿದ್ದರೂ, ಇನ್ನೂ ತೆರವುಗೊಳಿಸಿಲ್ಲ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತಪರ್ವ ಹುಣಸೂರು ತಾ. ಅಧ್ಯಕ್ಷ ಚೆಲುವರಾಜು ಗಂಭೀರ ಆರೋಪ‌ಮಾಡಿದ್ದಾರೆ.

ಈ ಜಾಗ ಸರ್ಕಾರಿ ಸ್ವತ್ತಾಗಿದ್ದು, ಈ ಹಿಂದೆಯೂ ವಸ್ತುಪ್ರದರ್ಶನ ಅಳವಡಿಸಲು ನಾವು ವಿರೋಧಿಸಿದ್ದರೂ ಅಧಿಕಾರಿಗಳು ಒಂದು ತಿಂಗಳ ಕಾಲಾವಕಾಶ ನೀಡಿ ಅನುಮತಿ ನೀಡಿದ್ದರಿಂದ ವಸ್ತುಪ್ರದರ್ಶನ ನಡೆಯುತ್ತಿದೆ.

ಇದು ಸರ್ಕಾರಿ ಆಟದ ಮೈದಾನವಾಗಿದೆ.ಇಲ್ಲಿ ವಸ್ತುಪ್ರದರ್ಶನ ನಡೆಯುತ್ತಿರುವುದರಿಂದ ಮಕ್ಕಳಿಗೆ ಆಟವಾಡಲು ಹಾಗೂ ಸಾರ್ವಜನಿಕರು ವಾಯುವಿಹಾರ ಮಾಡಲು ಬಹಳ ತೊಂದರೆಯಾಗಿದೆ ಚೆಲುವರಾಜು ತಿಳಿಸಿದ್ದಾರೆ.

ಈಗಾಗಲೇ ವಸ್ತುಪ್ರದರ್ಶನದ ಅವಧಿ ಮುಗಿದಿರುವುದರಿಂದ ಇನ್ನು ಎರಡು ದಿನಗಳ ಒಳಗಾಗಿ ನಗರಸಭಾ ಮೈದಾನದಲ್ಲಿ ಅಳವಡಿಸಲಾಗಿರುವ ವಸ್ತುಪ್ರದರ್ಶನವನ್ನು ತೆರವುಗೊಳಿಸಬೇಕೆಂದು ಅವರು
ಒತ್ತಾಯಿಸಿದ್ದಾರೆ.

ಒಂದು ವೇಳೆ ಈ ಅವಧಿಯೊಳಗಾಗಿ ವಸ್ತುಪ್ರದರ್ಶನವನ್ನು ತೆರವುಗೊಳಿಸದಿದ್ದಲ್ಲಿ ಇನ್ನು ಮುಂದೆ ಏನೇ ಆದರೂ ನಗರಸಭೆ ಅಧಿಕಾರಿಗಳು, ಆಯುಕ್ತರು ಜವಾಬ್ದಾರರು ಎಂದು ಅವರು ಎಚ್ಚರಿಸಿದ್ದಾರೆ.

ಹಾಗೂ ಈ‌ ವಿಷಯದ ಬಗ್ಗೆ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ಚೆಲುವರಾಜು ತಿಳಿಸಿದ್ದಾರೆ.

ಹುಣಸೂರು ನಗರಸಭಾ ಮೈದಾನದಲ್ಲಿ ವಸ್ತುಪ್ರದರ್ಶನ ತೆರವಿಗೆ ಚೆಲುವರಾಜು ಆಗ್ರಹ Read More

ರಾಡಿಯಾದ ಹೌಸಿಂಗ್ ಬೋರ್ಡ್ ರಸ್ತೆ;ಬೀದಿ ದೀಪವೂ ಇಲ್ಲದೆ ಕಂಗಾಲಾದ ಜನ

ಹುಣಸೂರು: ಹುಣಸೂರು ನಗರಸಭೆ ವ್ಯಾಪ್ತಿಯ ವಾರ್ಡ್ ನಂಬರ್ 27, ಹೌಸಿಂಗ್ ಬೋರ್ಡ್ ಗೆ ಹೋಗುವ ರಸ್ತೆ ಕಿತ್ತು ರಾಡಿಯಾಗಿಬಿಟ್ಟಿದೆ.

ಈ ರಸ್ತೆ ಚೆನ್ನಾಗಿಯೇ ಇತ್ತು ಆದರೆ ಯಾವ ಕಾರಣಕ್ಕೆ ರಸ್ತೆಯನ್ನು ಕಿತ್ತು ಹಾಕಿದ್ದಾರೆ ಎಂಬುದು ತಿಳಿಯದು.

ರಸ್ತೆ ಗುಂಡಿಗಳಲ್ಲಿ ಈಗ ಮಳೆ ನೀರು ತುಂಬಿಕೊಂಡು ಮನೆಯಿಂದ ಮಕ್ಕಳು,ಹಿರಿಯರು ಸೇರಿದಂತೆ ಯಾರೂ ಹೊರಬರದಂತಾಗಿದೆ.

ಏಕೆಂದರೆ ರಸ್ತೆ ಗುಂಡಿ ಮಯವಾಗಿದ್ದು ಮಳೆ ನೀರು ಸದಾ ತುಂಬಿಕೊಂಡು ಹೆಸರು ಗದ್ದೆಯಾಗಿದೆ, ಇಷ್ಟು ಕೆಟ್ಟ ರಸ್ತೆಯಲ್ಲಿ ಓಡಾಡುವುದು ಹೇಗೆ? ರಾತ್ರಿಯಾಗುತ್ತಿದ್ದಂತೆ ಕತ್ತಲು ಆವರಿಸುತ್ತದೆ ಕಳ್ಳರು ಬಂದರೆ ಏನು ಮಾಡಬೇಕು ಎಂದು ಜನ ಪ್ರಶ್ನಿಸಿದ್ದಾರೆ.

ನಗರಸಭೆ ಆಯುಕ್ತರು, ಅಧಿಕಾರಿಗಳು ಜನಪ್ರತಿನಿಧಿಗಳು ಈ ರಸ್ತೆಯಲ್ಲಿ ಸಂಚರಿಸಿ ತೋರಿಸಲಿ ಎಂದು ಇಲ್ಲಿನ ಜನ ಕಿಡಿಕಾರಿ ಒತ್ತಾಯಿಸಿದ್ದಾರೆ.

ಈ ಭಾಗದ ಜನಪ್ರತಿನಿಧಿಗಳಿಗೆ ಈ ರಸ್ತೆ ಕಾಣಿಸುತ್ತದೊ ಇಲ್ಲವೋ ತಿಳಿಯದು ಚೆನ್ನಾಗಿದ್ದ ರಸ್ತೆಯನ್ನ ಕಿತ್ತು ಹಾಕಿರುವುದು ಏಕೆ ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ರಸ್ತೆಯಲ್ಲಿ ರಾತ್ರಿಯಾದರೆ ಕತ್ತಲು ಆವರಿಸಿಕೊಂಡಿರುತ್ತದೆ ಏಕೆಂದರೆ ಇಲ್ಲಿರುವ 8 ವಿದ್ಯುತ್ ಕಂಬಗಳ ದೀಪಗಳನ್ನು ತೆಗೆದುಹಾಕಲಾಗಿದೆ, ಇದುವರೆಗೆ ಬೀದಿ ದೀಪಗಳನ್ನು ಅಳವಡಿಸಿಲ್ಲ ಎಂದು ಜನ ಆಕ್ರೋಶ ದಿಂದ ನುಡಿದಿದ್ದಾರೆ.

ಎರಡು ತಿಂಗಳಿಂದ ರಸ್ತೆಯಲ್ಲಿ ಬೀದಿ ದೀಪಗಳೂ ಇಲ್ಲ, ಮೊದಲೇ ರಸ್ತೆ ಕಿತ್ತು ರಾಡಿಯಾಗಿದೆ, ಬೀದಿ ದೀಪಗಳು ಇಲ್ಲದ ಕಾರಣ ಸಂಜೆಯಾಗುತ್ತಿದ್ದಂತೆ ಸಣ್ಣಪುಟ್ಟ ಸಾಮಾನು ತರಲು ಕೂಡಾ ಹೊರ ಬರುವುದು ಸಾಧ್ಯವಾಗುತ್ತಿಲ್ಲ, ಕೆಲಸ ಕಾರ್ಯಗಳಿಗೆ ಹೊರಗೆ ಹೋದವರು ಮನೆಗೆ ವಾಪಸ್ ಬರುವುದು ಹೇಗೆ ಎಂದು ಚೆಲುವರಾಜು ಪ್ರಶ್ನಿಸಿದ್ದಾರೆ.

ಕತ್ತಲೆಯಲ್ಲಿ ಈ ಕೆಟ್ಟ ರಸ್ತೆಯಲ್ಲಿ ಜನ ಬಿದ್ದು ಗಾಯಗೊಂಡ ಉದಾಹರಣೆಗಳು ಇವೆ ಆದರೂ ಸಂಬಂಧ ಪಟ್ಟ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ತಿರುಗಿ ನೋಡಿಲ್ಲ ಎಂದು ಜನರ ಪರವಾಗಿ ಅವರು ಕಿಡಿಕಾರಿದ್ದಾರೆ.

ತಕ್ಷಣವೇ 21ನೇ ವಾರ್ಡ್ ರಸ್ತೆಯನ್ನು ಸರಿಪಡಿಸಬೇಕು ಮತ್ತು ಬೀದಿ ದೀಪಗಳನ್ನು ಅಳವಡಿಸಬೇಕು ಇಲ್ಲದಿದ್ದರೆ ಜನ ನಗರ ಸಭೆ ಮುಂದೆ ಪ್ರತಿಭಟನೆ ಮಾಡಲು ಸಿದ್ಧರಿದ್ದಾರೆ ಎಂದು ಅವರು ಎಚ್ಚರಿಸಿದ್ದಾರೆ.

ರಾಡಿಯಾದ ಹೌಸಿಂಗ್ ಬೋರ್ಡ್ ರಸ್ತೆ;ಬೀದಿ ದೀಪವೂ ಇಲ್ಲದೆ ಕಂಗಾಲಾದ ಜನ Read More

ಹುಣಸೂರು ನಗರಸಭೆ ಪೌರಾಯುಕ್ತರ ವಿರುದ್ಧ ಏಕಾಂಗಿ ಧರಣಿ ನಡೆಸಿದ ಸದಸ್ಯ

ಹುಣಸೂರು: ಹುಣಸೂರು ನಗರಸಭೆಯ ಪೌರಾಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಾನಸ ಅವರ ವಿರುದ್ಧ ನಗರಸಭಾ ಸದಸ್ಯರೂ ಹಾಗೂ ಮೈಸೂರು ಜಿಲ್ಲಾ ಬಿಜೆಪಿ ಯುವ ಮೋರ್ಚ ಉಪಾಧ್ಯಕ್ಷರಾದ ವಿವೇಕಾನಂದ ಅವರು ಅರ್ಧ ದಿನ ಏಕಾಂಗಿ ಧರಣಿ ಮಾಡಿದರು.

ನಗರಸಭೆಯ ಮುಂಭಾಗದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ‌ಅವರ ಭಾವಚಿತ್ರ ಇಟ್ಟು ಹಾರ ಹಾಕಿ ಅನಿರ್ದಿಷ್ಟ ಪ್ರತಿಭಟನೆ ಪ್ರಾರಂಭಿಸಿ ಮಧ್ಯಾಹ್ನ ಮೂರು‌ ಗಂಟೆ ವೇಳೆ ಧರಣಿ ಕೈಬಿಟ್ಟಿದ್ದಾರೆ.

ಹುಣಸೂರು ನಗರಸಭೆಯಲ್ಲಿ ಖಾಸಗಿ ವ್ಯಕ್ತಿಗಳ ದರ್ಬಾರ್, ಪೌರ ಆಯುಕ್ತರು‌ ಶ್ರೀಮತಿ ಮಾನಸ ಅವರಿಂದ ಸರ್ವಾಧಿಕಾರಿ ಧೋರಣೆ, ಅಧಿಕಾರಿಗಳಿಗೆ % ನೀತಿ ವಿರೋಧಿಸಿ ನಿರಂತರ ಪ್ರತಿಭಟನೆ ಎಂದು‌ ವಿವೇಕಾನಂದ ಅವರು ಪೋಸ್ಟರ್ ಕೂಡ ಹಾಕಿದ್ದರು.

ಮಾನಸ ಅವರು ಕೆ.ಎಂ.ಎ.ಎಸ್ ಮುಖ್ಯಾಧಿಕಾರಿ ಶ್ರೇಣಿ-2 ಅಧಿಕಾರಿಯಾಗಿದ್ದು, ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸದೆ ನಗರಸಭೆಗೆ ಆರ್ಥಿಕ ನಷ್ಟ ಉಂಟುಮಾಡಿದ್ದಾರೆ ಎಂದು ಆರೋಪಿಸಿ ಅವರು ಶನಿವಾರ ಬೆಳಿಗ್ಗೆ ಈ ಪ್ರತಿಭಟನೆ ಪ್ರಾರಂಭಿಸಿದ್ದರು.

ಸರ್ಕಾರಿ ಕೆರೆಗೆ ಮತ್ತು ನಗರಸಭೆಯ ಆಸ್ತಿಗಳನ್ನು ರಕ್ಷಣೆ ಮಾಡದೆ, ಅಕ್ರಮವಾಗಿ ವಾಣಿಜ್ಯ ಕಟ್ಟಡಗಳ ನಿರ್ಮಾಣಕ್ಕೆ ಲೈಸೆನ್ಸ್ ಮಂಜೂರು ಮಾಡಿದ್ದಾರೆ ಎಂದು ವಿವೇಕಾನಂದ ಅವರು ಗಂಭೀರ ಆರೋಪ ಮಾಡಿದ್ದರು.

ಹುಣಸೂರು ನಗರಸಭೆ ಪೌರಾಯುಕ್ತರ ವಿರುದ್ಧ ಏಕಾಂಗಿ ಧರಣಿ ನಡೆಸಿದ ಸದಸ್ಯ Read More

ನಂಜನಗೂಡು ನಗರಸಭೆ ನಾಲ್ಕು ಸದಸ್ಯರ ಅನರ್ಹಗೊಳಿಸಿದ ಡಿಸಿ ಕೋರ್ಟ್

ಮೈಸೂರು: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ನಂಜನಗೂಡು ನಗರಸಭೆಯ ನಾಲ್ಕು ಸದಸ್ಯರನ್ನು ಅನರ್ಹಗೊಳಿಸಿ ಮೈಸೂರಿನ ಜಿಲ್ಲಾಧಿಕಾರಿಗಳ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ.

ಗಿರೀಶ್ ಕುಮಾರ್ ಟಿ.ಎಂ, ಗಾಯತ್ರಿ, ಮೀನಾಕ್ಷಿ ನಾಗರಾಜು, ವಿಜಯಲಕ್ಷ್ಮೀ ಅನರ್ಹಗೊಂಡ ಸದಸ್ಯರು.

ಈ ನಾಲ್ವರು ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಚಿಹ್ನೆಯಿಂದ ಗೆಲುವು ಸಾಧಿಸಿ ಅಧಿಕಾರದ ಗದ್ದುಗೆ ಹಿಡಿದಿದ್ದರು.

ನಂಜನಗೂಡು ನಗರದ ವಾರ್ಡ್ ನಂಬರ್ 1 ನೇ ಸದಸ್ಯ ಗಿರೀಶ್ ಕುಮಾರ್ ಟಿ.ಎಂ, ವಾರ್ಡ್ ಸಂಖ್ಯೆ 12 ರ ಸದಸ್ಯೆ ಗಾಯತ್ರಿ, ವಾರ್ಡ್ ನಂಬರ್ 22 ರ ಸದಸ್ಯೆ ಮೀನಾಕ್ಷಿ ನಾಗರಾಜು, ವಾರ್ಡ್ ಸಂಖ್ಯೆ 27 ರ ಸದಸ್ಯೆ ವಿಜಯಲಕ್ಷ್ಮೀ ಎಂಬುವವರನ್ನು ಸಚೇತನ (ವಿಪ್) ಉಲ್ಲಂಘನೆ ಮಾಡಿರುವುದರಿಂದ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ.

ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ ಪಕ್ಷಾಂತರ ನಿಷೇಧ ಅದಿನಿಯಮ 1987 ಸೆಕ್ಷನ್ 3(1)(b) ಉಲ್ಲಂಘನೆಯ ಆಧಾರದ ಮೇಲೆ ನಾಲ್ವರು ನಗರಸಭಾ ಸದಸ್ಯರನ್ನು ಸದಸ್ಯತ್ವದಿಂದ ಅನರ್ಹ ಗೊಳಿಸಿ‌ ಮೈಸೂರಿನ ಜಿಲ್ಲಾಧಿಕಾರಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ.

ನಂಜನಗೂಡು ನಗರಸಭೆ ನಾಲ್ಕು ಸದಸ್ಯರ ಅನರ್ಹಗೊಳಿಸಿದ ಡಿಸಿ ಕೋರ್ಟ್ Read More