ಮನೆಗಳಲ್ಲಿ ಚಿನ್ನಾಭರಣ ದೋಚುತ್ತಿದ್ದ ಅಂತರ್ ಜಿಲ್ಲಾ ಕಳ್ಳನ ಬಂಧನ

ಮಂಡ್ಯ: ಮನೆಗಳಿಗೆ ಕನ್ನ ಹಾಕಿ ಚಿನ್ನಾಭರಣ, ನಗದು ದೋಚುತ್ತಿದ್ದ ಅಂತರ್ ಜಿಲ್ಲಾ ಕಳ್ಳನನ್ನು ನಾಗಮಂಗಲ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿ ೪೦ ಲಕ್ಷ ರೂ
ಬೆಲೆಯ ಚಿನ್ನಾಭರಣ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ‌

ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಮುದಿಗೆರೆ ಗ್ರಾಮದ ಎಂ.ವಿ.ರಂಗೇಗೌಡ ಅಲಿಯಾಸ್ ಐಪಿಎಲ್ ಸಂತೋಷ (೩೭) ಬಂಧಿತ ಆರೋಪಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾಗಮಂಗಲ ಗ್ರಾಮಾಂತರ ಠಾಣೆಯ ಪೊಲೀಸರು ೪೯೦ ಗ್ರಾಂ ಚಿನ್ನದ ವಡವೆಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ವಶಪಡಿಸಿಕೊಂಡಿದ್ದು,ಅವುಗಳ ಒಟ್ಟು ಬೆಲೆ ೪೦ ಲಕ್ಷ ರೂ.ಗಳಾಗಿದೆ.

ಮೇ ೨೦ರಂದು ನಾಗಮಂಗಲ ತಾಲ್ಲೂಕಿನ ಬಿದರಕೆರೆ ಗ್ರಾಮದ ಗಂಗೇಗೌಡ ಎಂಬವರು ಬಿಂಡಿಗನವಿಲೆ ಪೊಲೀಸ್ ಠಾಣೆಗೆ ಆಗಮಿಸಿ, ಮೇ ೧೮ರಂದು ಕಳ್ಳರು ಮನೆಯ ಬೀಗ ತೆಗೆದು ಬೀರುವಿನಲ್ಲಿದ್ದ ಸುಮಾರು ೨೦ ಗ್ರಾಂ ಚಿನ್ನಾಭರಣ ಮತ್ತು ೯೭ ಸಾವಿರ ರೂ. ನಗದನ್ನು ಕಳ್ಳತನ ಮಾಡಿದ್ದಾರೆ ಎಂದು ದೂರು ನೀಡಿದ್ದರು.

ಈ ಪ್ರಕರಣ ಭೇದಿಸಲು ಅಪರ ಪೊಲೀಸ್ ಅಧೀಕ್ಷಕರಾದ ಸಿ.ಇ. ತಿಮ್ಮಯ್ಯ, ಗಂಗಾಧರಸ್ವಾಮಿ, ಡಿವೈಎಸ್ಪಿ ಬಿ.ಚಲುವರಾಜು ಅವರ ಮಾರ್ಗದರ್ಶನದಲ್ಲಿ ನಾಗಮಂಗಲ ಗ್ರಾಮಾಂತರ ಠಾಣೆಯ ಸಿಪಿಐ ಕೆ.ಎಸ್.ನಿರಂಜನ, ಪಿಎಸ್‌ಐಗಳಾದ ವೈ.ಎನ್. ರವಿಕುಮಾರ್, ಟಿ.ಮಾರುತಿ, ಪ್ರಶಾಂತ್ ಕುಮಾರ್ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು.

ಈ ತಂಡ ಜೂ.೧ರಂದು ಹಾಸನದಲ್ಲಿದ್ದ ಆರೋಪಿ ಸಂತೋಷನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ಆರೋಪಿ ಸಂತೋಷ್ ವಿರುದ್ಧ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ೩, ಬೆಳ್ಳೂರು ಠಾಣೆಯಲ್ಲಿ ೪, ನಾಗಮಂಗಲ ಗ್ರಾಮಾಂತರ ೧, ತುರುವೇಕೆರೆ ಠಾಣೆ ೧, ಹುಲಿಯೂರು ದುರ್ಗ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದ್ದು, ಹಲವು ಬಾರಿ ಸೆರೆವಾಸ ಅನುಭವಿಸಿದ್ದರೂ ಹೊರಬಂದು ಐಷಾರಾಮಿ ಜೀವನ ನಡೆಸಲು ಕಳ್ಳತನ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದನು ಎಂದು ವಿವರಿಸಿದರು.

ಪೊಲೀಸ್ ಸಿಬ್ಬಂದಿಗಳಾದ ಪ್ರಶಾಂತ್ ಕುಮಾರ್, ಮಧು ಕುಮಾರ, ಇಂದ್ರಕುಮಾರ್, ರವಿಕಿರಣ್, ಲೋಕೇಶ್, ದಿನೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಶ್ಲಾಘಿಸಿದರು.

ಮಂಡ್ಯ ನಗರದ ಹಲವು ಕಡೆ ಸಿಸಿ ಕ್ಯಾಮೆರಾಗಳನ್ನು ಈಗಾಗಲೇ ಅಳವಡಿಸಲಾಗಿದೆ, ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಇದರಿಂದಾಗಿ ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚಬಹುದಾಗಿದೆ ಎಂದು ಎಸ್ಪಿ ತಿಳಿಸಿದರು.

ಮಳವಳ್ಳಿ ಪಟ್ಟಣದಲ್ಲಿ ೧೦೦ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದೇ ರೀತಿ ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದರು.

ಮನೆಗಳಲ್ಲಿ ಚಿನ್ನಾಭರಣ ದೋಚುತ್ತಿದ್ದ ಅಂತರ್ ಜಿಲ್ಲಾ ಕಳ್ಳನ ಬಂಧನ Read More

ನಾಗಮಂಗಲ ಕೋಮುಗಲಭೆ ವೇಳೆ ಪಾಕ್ ಪರ ಘೋಷಣೆ:ಅಶೋಕ್ ಕಿಡಿ

ನಾಗಮಂಗಲ:‌ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮು
ಗಲಭೆಯಲ್ಲಿ ಮೂವರು ಕಿಡಿಗೇಡಿಗಳು ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳೆ ಹೇಳಿದ್ದಾರೆ‌ ಎಂಬುದಾಗಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.

ಇದು ಅಂದಿನ ಘಟನೆಯಲ್ಲಿ ನಿಷೇಧಿತ ಸಂಘಟನೆಗಳ ಕೈವಾಡವಿರುವುದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ ಎಂದು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಚಿಕ್ಕಮಗಳೂರಲ್ಲಿ ಬೈಕ್ ನಲ್ಲಿ ಪ್ಯಾಲೆಸ್ತೀನ್ ಧ್ವಜ ಹಿಡಿದಿರುವ ಪುಂಡಾಟ, ದಾವಣಗೆರೆಯ ಗಾಂಧಿನಗರ ಹಾಗೂ ಅಹ್ಮದ್ ನಗರಗಳಲ್ಲಿ ಹಿಂದೂ ಯುವಕರು ಬಾವುಟ ಕಟ್ಟಿದ್ದಕ್ಕೆ ಮತಾಂಧ ಪುಂಡರು ಅವರ ಮೇಲೆ ಹಲ್ಲೆ ಮಾಡಿರುವುದು, ಇದನ್ನೆಲ್ಲಾ ಗಮನಿಸಿದರೆ ಈ ಘಟನೆಗಳು ಗಣೇಶೋತ್ಸವವನ್ನೇ ಟಾರ್ಗೆಟ್ ಮಾಡಿರುವಂತಿದೆ ಎಂದು ಹೇಳಿದ್ದಾರೆ.

ಇಂತಹ ಘಟನೆಗಳು ಅಯೋಧ್ಯ ರಾಮ ಮಂದಿರದ ಉದ್ಘಾಟನೆ ಸಂದರ್ಭದಲ್ಲಿಯೂ ನಡೆದಿತ್ತು. ಹಿಂದೂಗಳ ಹಬ್ಬಗಳು, ಉತ್ಸವಗಳು, ಸಂಭ್ರಮಾಚರಣೆಗಳನ್ನೇ ಗುರಿಯಾಗಿಸಿ ರಾಜ್ಯಾದ್ಯಂತ ನಡೆಸುತ್ತಿರುವ ಇಂತಹ ದುಷ್ಕೃತ್ಯಗಳ ಹಿಂದೆ ಮತೀಯ ಮೂಲಭೂತವಾದಿ ಸಂಘಟನೆಗಳ ದೊಡ್ಡ ಜಾಲವೇ ಇರುವಂತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಅಂತಾರಾಜ್ಯ, ಅಂತರಾಷ್ಟ್ರೀಯ ನಂಟು ಹೊಂದಿರುವ ಇಂತಹ ವ್ಯವಸ್ಥಿತ, ಪ್ರಾಯೋಜಿತ, ಜಾಲವನ್ನ ಬೇಧಿಸುವುದು ಸ್ಥಳೀಯ ಪೊಲೀಸರಿಂದ ಅಸಾಧ್ಯವಾಗಿದ್ದು, ಕೂಡಲೇ ಈ ಪ್ರಕರಣಗಳನ್ನ ಎನ್ಐಎ ತನಿಖೆಗೆ ಒಪ್ಪಿಸಬೇಕು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಅಶೋಕ್ ಒತ್ತಾಯಿಸಿದ್ದಾರೆ.

ನಾಗಮಂಗಲ ಕೋಮುಗಲಭೆ ವೇಳೆ ಪಾಕ್ ಪರ ಘೋಷಣೆ:ಅಶೋಕ್ ಕಿಡಿ Read More

ಸಹಜ ಸ್ಥಿತಿಗೆ ಮರಳಿದ ನಾಗಮಂಗಲ

ಮಂಡ್ಯ: ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟದಿಂದ ಉದ್ವಿಗ್ನ ಗೊಂಡಿದ್ದ ನಾಗಮಂಗಲ ಸಹಜ ಸ್ಥಿತಿಗೆ ಬಂದಿದೆ.

ಸಚಿವ ಚಲುವನಾರಾಯಣಸ್ವಾಮಿ ನೇತೃತ್ವದಲ್ಲಿ ನಡೆದ ಶಾಂತಿಸಭೆ ಯಶಸ್ವಿಯಾಗಿದೆ ಭಾನುವಾರ ನಿಷೇಧಾಜ್ಞೆ ಕೂಡಾ ತೆರವುಗೊಳಿಸಲಾಗಿದೆ.

ಈ ಮಧ್ಯೆ ಕೋಮು ಗಲಭೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯಲ್ಲಿ ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿದೆ.

ನಾಗಮಂಗಲದ ಕೋಮು ಗಲಭೆಗೆ ಕೇರಳ ಲಿಂಕ್ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಅಲ್ಲದೇ ನಿಷೇಧಿತ ಪಿಎಫ್‌ಐ ಸಂಘಟನೆ ಸದಸ್ಯರೂ ಈ ಗಲಭೆ ಹಿಂದಿದ್ದಾರೆ, ಕೃತ್ಯಕ್ಕೆ ಮೊದಲೇ ಪ್ಲ್ಯಾನ್‌ ಮಾಡಲಾಗಿತ್ತಿ ಎಂಬ ಶಂಕೆ ವ್ಯಕ್ತವಾಗಿದೆ.

ಎಫ್‌ಐಆರ್‌ನಲ್ಲಿರುವ 74 ಆರೋಪಿಗಳ ಪೈಕಿ ಇಬ್ಬರು ಕೇರಳದವರು, ಪ್ರಕರಣದ 44ನೇ ಆರೋಪಿ ಯೂಸೂಫ್‌, 61ನೇ ಆರೋಪಿ ನಾಸೀರ್‌ ಇಬ್ಬರೂ ಕೇರಳ ರಾಜ್ಯದ ಮಲ್ಲಪುರಂ ನಿವಾಸಿಗಳು ಎಂದು ಗೊತ್ತಾಗಿದೆ.

ಈ‌ ಇಬ್ಬರು ಆರೋಪಿಗಳು ನಿಷೇಧಿತ ಪಿಎಫ್‌ಐ ಸಂಘಟನೆ ಸದಸ್ಯರು ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸಿದ್ದು,
ಪೆಟ್ರೋಲ್ ಬಾಂಬ್ ಬಳಕೆಯಲ್ಲೂ ಕೇರಳ ಮುಸ್ಲಿಮರ ಕೈವಾಡದ ಇದೆ,ಆದ್ದರಿಂದ ಈ ಪ್ರಕರಣದ ತನಿಖೆಯನ್ನ ಎನ್‌ಐಎ ಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದೆ.

ಸಹಜ ಸ್ಥಿತಿಗೆ ಮರಳಿದ ನಾಗಮಂಗಲ Read More

ನಾಗಮಂಗಲದ ಕೃತ್ಯದ ಹಿಂದೆ ಕಾಂಗ್ರೆಸ್:ಹೆಚ್ ಡಿ ಕೆ ಆರೋಪ

ಮಂಡ್ಯ: ನಾಗಮಂಗಲದ ಕೃತ್ಯದ ಹಿಂದೆ ಕಾಂಗ್ರೆಸ್ ಇದೆ ಎಂದು ಕೇಂದ್ರ ಸಚಿವ ಮಂಡ್ಯ ಸಂಸದ ಹೆಚ್‌.ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ನಾಗಮಂಗಲದ ಗಲಭೆ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಂದೆ ವೀರೇಂದ್ರ ಪಾಟೀಲ್ ಅವರನ್ನು ಇಳಿಸಲು ರಾಮನಗರ, ಚನ್ನಪಟ್ಟಣದಲ್ಲಿ ಗಲಾಟೆ ನಡೆದಿತ್ತು. ಆಗ ಕಾಂಗ್ರೆಸ್‌ನವರೇ ಬೆಂಕಿ ಹಚ್ಚಿ ಗಲಾಟೆ ಮಾಡಿಸಿದ್ದರು ಎಂದು ಹೇಳಿದರು.

ಅದು ಕೋಮು ಗಲಭೆ ಆಗಿರಲಿಲ್ಲ,ಮುಂದೆ ಚನ್ನಪಟ್ಟಣದಲ್ಲಿ ಉಪ ಚುನಾವಣೆ ನಡೆಯಲಿದೆ,ಅದಕ್ಕಾಗಿ ಹೀಗೆ ಓಲೈಕೆ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.

ಗಣೇಶ ಕೂರಿಸಿದವರನ್ನೇ ಎಫ್‌ಐಆರ್‌ನಲ್ಲಿ ಎ1 ಆರೋಪಿಯನ್ನಾಗಿ ಮಾಡಿದ್ದೀರಾ ಇದು ನಿಮ್ಮ ನಡವಳಿಕೆ ಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

ಪೊಲೀಸರು ತಮ್ಮ ಲೋಪ ಮುಚ್ಚಿಕೊಳ್ಳಲು ಸಿಕ್ಕ ಸಿಕ್ಕವರನ್ನು ಅರೆಸ್ಟ್ ಮಾಡಿದ್ದಾರೆ. ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ, ಇದನ್ನು ಹಾಳು ಮಾಡಿಕೊಳ್ಳುವುದು ಬೇಡ ಅಮಾಯಕರನ್ನು ಬಂಧಿಸಿರೋದು ತಪ್ಪು,ಅವರು ಜೈಲಿನಿಂದ ಬರೋದು ಯಾವಾಗ ಎಂದು ಹೆಚ್ ಡಿ ಕೆ ಪ್ರಶ್ನಿಸಿದರು.

ನಾಗಮಂಗಲ ಗಲಭೆ ಪ್ರಕರಣ ಸಂಬಂಧ ನಷ್ಟವಾದ ವ್ಯಾಪರಿಗಳಿಗೆ ವೈಯಕ್ತಿಕವಾಗಿ ನಾನು ಆರ್ಥಿಕ ಸಹಾಯ ಮಾಡುತ್ತೇನೆ. ನನ್ನ ಕೈಯಲ್ಲಿ ಆದಷ್ಟು ಸಹಾಯ ಮಾಡುತ್ತೇನೆ ಎರಡು ಧರ್ಮದವರಿಗೂ ಸಹಾಯ ಮಾಡುತ್ತೇನೆ ಎಂದು ತಿಳಿಸಿದರು.

ಹಳೆ ಮೈಸೂರು ಭಾಗದಲ್ಲಿ ಎರಡು ಸಮಾಜದವರು ಸೌಹಾರ್ದತೆಯಿಂದ ಜೀವನ ಮಾಡುತ್ತಿದ್ದಾರೆ. ರಾಜಕೀಯ ಸಂಘಟನೆಗಾಗಿ ಜನರ ಬದುಕು ಛಿದ್ರ ಮಾಡಬೇಡಿ ಎಂದು ಕುಮಾರಸ್ವಾಮಿ ಹೇಳಿದರು.

ಗೃಹ ಸಚಿವರು ಇದು ಸಣ್ಣ ವಿಷಯ, ಇದಕ್ಕೆ ಮಹತ್ವ ಕೋಡೋದು ಬೇಡಾ ಅಂತಾರೆ. ಈ ರೀತಿ ಹೇಳಿಕೆ ಮೂಲಕ ಜನರಿಗೆ ಯಾವ ಸಂದೇಶ ಕೊಡುತ್ತೀರಾ ಎಂದು ಪ್ರಶ್ನಿಸಿದರು.

ಮೆರವಣಿಗೆಗೆ ಅನುಮತಿ ಕೊಟ್ಟಿದ್ದು ನೀವು. ಮೆರವಣಿಗೆಗೆ ಭದ್ರತೆ ಕೊಡಬೇಕಾಗಿದ್ದು ನೀವು. ಗಣೇಶನ ಮೆರವಣಿಗೆ ವೇಳೆ ಗಣಪತಿಗೆ ಜೈಕಾರ ಹಾಕಿದ್ದಾರೆ. ಆಗ ಮಸೀದಿ ಬಳಿ ಇನ್ನೊಂದು ಜನಾಂಗ ಅವರ ಘೋಷಣೆ ಕೂಗಿದ್ದಾರೆ. ಆಲ್ಲಿ ಎಷ್ಟು ಜನ ಪೊಲೀಸರನ್ನು ಆಯೋಜಿಸಿದ್ದೀರಿ,ಇದನ್ನು ನೋಡಿದ್ರೆ ಈ ಘಟನೆ ಪೂರ್ವನಿಯೋಜಿತ ಅನ್ನಿಸುತ್ತದೆ. ಘಟನೆಗೂ ಮುನ್ನ ಇಲ್ಲಿದ್ದ ಸಿಆರ್‌ಪಿಎಫ್ ವಾಹನವನ್ನು ಕರೆಸಿಕೊಂಡಿದ್ದಾರೆ. ಘಟನೆಯಾದ ಒಂದು ಗಂಟೆಗೆ ಮಾಧ್ಯಮದವರಿಗೆ ಗೊತ್ತಾಗುತ್ತದೆ. ಪೊಲೀಸರಿಗೆ ಯಾಕೆ ಗೊತ್ತಾಗಿಲ್ಲ, ಇದರ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಈ ಎಫ್‌ಐಆರ್ ನೋಡಿದರೆ ಪರಮೇಶ್ವರ್‌ನ ಗೃಹ ಸಚಿವ ಅನ್ನುವುದಕ್ಕೆ ಆಗುತ್ತಾ ಎಂದು ಹೆಚ್ ಡಿ ಕೆ ಗುಡುಗಿದರು.

ಸ್ಥಳೀಯ ಪೊಲೀಸರ ವೈಫಲ್ಯ ಇಲ್ಲಿ ಎದ್ದು ಕಾಣುತ್ತಿದೆ, ಪ್ರತಿಯೊಂದು ರಾಜಕೀಯ ಎಂದು ಕಾಂಗ್ರೆಸ್ ಹೇಳೋದು ಸರಿಯಲ್ಲ. ಅಮಾಯಕ ಜನರ ಬದುಕು ಬೀದಿಗೆ ಬಂದಿದೆ. ಗಲಭೆಯಲ್ಲಿ ಪೊಲೀಸರನ್ನು ಕೊಲೆ ಮಾಡಲು ಬಂದಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಬರೆದಿದ್ದಾರೆ. ಪೊಲೀಸರಿಗೆ ಭದ್ರತೆ ನೀಡದ ದರಿದ್ರ ಸರ್ಕಾರ ಇದು ಎಂದು ಕಿಡಿಕಾರಿದರು.

ರಾಜಾರೋಶವಾಗಿ ತಲ್ವಾರ್ ಇಟ್ಟುಕೊಂಡು ಓಡಾಡುತ್ತಾರೆ,ಪೆಟ್ರೋಲ್ ಬಾಂಬ್ ಎಸೆಯುತ್ತಾರೆ ಎಂದರೆ ಎಷ್ಟು ಧೈರ್ಯ ಇರಬೇಕು ಇವರಿಗೆ ಎಂದು ಕುಮಾರಸ್ವಾಮಿ ಕಾರವಾಗಿ ಪ್ರಶ್ನಿಸಿದರು.

ಮಾಜಿ ಶಾಸಕ ಸುರೇಶ್ ಗೌಡ, ರವೀಂದ್ರ ಶ್ರೀಕಂಠಯ್ಯ, ಜೆಡಿಎಸ್ ಮುಖಂಡರು ಈ ವೇಳೆ ಹಾಜರಿದ್ದರು.

ನಾಗಮಂಗಲದ ಕೃತ್ಯದ ಹಿಂದೆ ಕಾಂಗ್ರೆಸ್:ಹೆಚ್ ಡಿ ಕೆ ಆರೋಪ Read More

ಹಿಂದೂಗಳ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆ

ಶ್ರೀರಂಗಪಟ್ಟಣ: ಮಂಡ್ಯದ ನಾಗಮಂಗಲ ತಾಲೂಕಿನಲ್ಲಿ ಗಣಪತಿ ವಿಸರ್ಜನೆ ವೇಳೆ ಹಿಂದೂಗಳ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಶ್ರೀರಂಗಪಟ್ಟಣದಲ್ಲಿ ಹಿಂದು ಸಂಘಟನೆಯವರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಶ್ರೀರಂಗಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಗಣಪತಿ ಸೇವಾ ಸಮಿತಿಯವರು ಹಾಗೂ ಹಿಂದೂ ಕಾರ್ಯಕರ್ತರು ಸಾರ್ವಜನಿಕರು ಒಗ್ಗೂಡಿ ಮಾನವ ಸರಪಳಿ ನಿರ್ಮಿಸಿ ಸರ್ಕಾರ ಹಾಗೂ ದುರುಳರ ವಿರುದ್ಧ ದಿಕ್ಕಾರ ಕೂಗಿದರು.

ಇದೇ ರೀತಿ ಹಿಂದುಗಳ ಮೇಲೆ ಅಟ್ಟಹಾಸ ಮೆರೆದರೆ ಉಗ್ರ ಹೋರಾಟಕ್ಕೆ ನಾವು ಸಿದ್ಧವಾಗಬೇಕಾಗುತ್ತದೆ ಎಂದು ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಎಚ್ಚರಿಕೆ ನೀಡಿದರು.

ನಾನು ಬ್ರಾಹ್ಮಣ, ನಾನು ಲಿಂಗಾಯಿತ, ನಾನು ಶೂದ್ರ, ನಾನು ವೈಶ್ಯ ಎಂದು ಕಿತ್ತಾಡಿಕೊಂಡರೆ
ನಮ್ಮ ಹಿಂದೂ ಧರ್ಮಕ್ಕೆ ಉಳಿಗಾಲವಿಲ್ಲ
ಆದ್ದರಿಂದ ನಮ್ಮ ಮನೆಯ ನಾಲ್ಕು ಗೋಡೆ ಮಧ್ಯ ಮಾತ್ರ ನಮ್ಮ ಜಾತಿ ಸೀಮಿತವಾಗಿರಬೇಕು ಮನೆಯಿಂದ ಹೊರಗೆ ಬಂದರೆ ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂಬ ಮನೋಭಾವನೆ ಬೆಳೆಸಿಕೊಂಡರೆ ಮಾತ್ರ ಹಿಂದೂ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಹೇಳಿದರು.

ಗಲಭೆ ವೇಳೆ ದುರುಳರು ಹಿಂದೂ ಧಾರ್ಮಿಕ ಮನೋಭಾವನೆಗಳ ಮೇಲೆ ಧಕ್ಕೆ ಮಾಡಿದ್ದಾರೆ, ಕಲ್ಲು ಗುಂಡುಗಳು ಮಚ್ಚು ತಲ್ವಾರ್ ಗಳಿಂದ ಹಲ್ಲೆ ನಡೆಸಿ ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಅಲ್ಲದೆ ಪೊಲೀಸರ ಮೇಲೂ ದಾಳಿ ಮಾಡಿದ್ದಾರೆ ಇದನ್ನು ಖಂಡಿಸುತ್ತೇವೆ ಎಂದು ಪ್ರತಿಭಟನಾ ನಿರತರು ಆಕ್ರೋಶ‌ ವ್ಯಕ್ತಪಡಿಸಿದರು.

ಹಿಂದೂಗಳ ಮೇಲೆ ನಡೆದ ದೌರ್ಜನ್ಯ ಖಂಡಿಸಿ ಶ್ರೀರಂಗಪಟ್ಟಣದಲ್ಲಿ ಪ್ರತಿಭಟನೆ Read More

ನಾಗಮಂಗಲ ಗಲಭೆ: ಪ್ರಭಾವಿಗಳಾಗಲಿ ಕಠಿಣ ಕ್ರಮ ಆಗಲಿ-ಸೋಮಣ್ಣ

ಮೈಸೂರು: ನಾಗಮಂಗಲ ಗಲಭೆ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿರಲಿ, ಎಷ್ಟೇ ಪ್ರಭಾವಿಗಳಾಗಿರಲಿ ಅವರ ಮೇಲೆ ಕ್ರಮ ಆಗಬೇಕು ಎಂದು ಕೇಂದ್ರ ಸಚಿವ
ಗೃಹ ಸಚಿವ ವಿ.ಸೋಮಣ್ಣ ಒತ್ತಾಯಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೃಹಸಚಿವರು ಹಿರಿಯರು, ಅನುಭವಿಗಳು,
ಯಾವ ಕಾರಣಕ್ಕಾಗಿ ಇದನ್ನ ಸಣ್ಣ ಪ್ರಕರಣ ಎಂದಿದ್ದಾರೊ ನನಗೆ ಗೊತ್ತಾಗುತ್ತಿಲ್ಲ ಎಂದು ಹೇಳಿದರು.

ಮೊದಲು ಮತ ಓಲೈಕೆ ರಾಜಕಾರಣ ಬಿಡಬೇಕು,ಎಲ್ಲಕ್ಕಿಂತ ದೇಶ ಮುಖ್ಯ
ಮುಂದೆ ಇಂತಹ ಘಟನೆ ನಡೆಯದಂತೆ ಸರ್ಕಾರ ಎಚ್ಚರವಹಿಸಬೇಕು,
ಗಣೇಶ ಮೂರ್ತಿ ನಮ್ಮ ಭಾವನೆಗಳ ಸಂಕೇತ
ಅದರ ಮೆರವಣಿಗೆ ಅಡ್ಡಿಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಸೋಮಣ್ಣ‌ ಹೇಳಿದರು.

ಗಣಪತಿ ಪೂಜೆ‌ ವೇಳೆ ಮುಖ್ಯ ನ್ಯಾಯಾಧೀಶರ ಜೊತೆಗೆ ಪ್ರಧಾನಿ ಮೋದಿ ಭಾಗವಹಿಸಿದ್ದಾರೆ,ಅದರಲ್ಲಿ ತಪ್ಪೇನಿದೆ,
ಇಬ್ಬರು ರಾಷ್ಟ್ರದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳು,ಇಬ್ಬರು ಸೇರಿ ಗಣಪತಿ ಪೂಜೆ ಮಾಡಿದರೆ ಅದರಲ್ಲಿ ತಪ್ಪನ್ನೇಕೆ ಹುಡುಕಬೇಕು,ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬೇಡ ಎಂದು ಸೋಮಣ್ಣ ಕಾಂಗ್ರೆಸ್ ನವರಿಗೆ‌ ಟಾಂಗ್ ನೀಡಿದರು.

ಅವರಿಬ್ಬರು ರಾಷ್ಟ್ರದ ಉನ್ನತಿಗಾಗಿ ದುಡಿಯುತ್ತಿದ್ದಾರೆ,
ಒಟ್ಟಾಗಿ ಸೇರಿ ಪೂಜೆ ಮಾಡಿದ್ದಾರೆ,
ಇದನ್ನೇ ದೊಡ್ಡ ವಿಚಾರ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ ಎಂದು ಹೇಳಿದರು.

ನಾಗಮಂಗಲ ಗಲಭೆ: ಪ್ರಭಾವಿಗಳಾಗಲಿ ಕಠಿಣ ಕ್ರಮ ಆಗಲಿ-ಸೋಮಣ್ಣ Read More

ನಾಗಮಂಗಲ ಗಣೇಶನ ವಿಸರ್ಜನೆ ವೇಳೆ ಗಲಭೆ:ವಿ ಹೆಚ್ ಪಿ,ರಾಜಸ್ಥಾನ್ ಸಂಘದ ಪ್ರತಿಭಟನೆ

ಮೈಸೂರು: ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶನ ವಿಸರ್ಜನೆ ವೇಳೆ ನಡೆದ ಗಲಭೆ ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ರಾಜಸ್ಥಾನ್ ಸಂಘದವರು ಪ್ರತಿಭಟನೆ ನಡೆಸಿದರು.

ನಗರದ ಸಿದ್ದಾರ್ಥ ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ವಿಶ್ವ ಹಿಂದೂ ಪರಿಷತ್ ಹಾಗೂ ರಾಜಸ್ಥಾನ್ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿ ಘೋಷಣೆಗಳನ್ನು ಕೂಗಿದರು.

ನಾಗಮಂಗಲದಲ್ಲಿ ಗಣೇಶನ ವಿಸರ್ಜನೆ ವೇಳೆ ನಡೆದ ಗಲಭೆ ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ರಾಜಸ್ಥಾನ್ ಸಂಘದವರು ಪ್ರತಿಭಟನೆ ನಂತರ ಮಾನವ ಸರಪಳಿ ನಿರ್ಮಿಸಿದರು.

ಹಿಂದೂ ವಿರೋಧಿ ಸರ್ಕಾರಕ್ಕೆ ದಿಕ್ಕಾರ, ಭಾರತ್ ಮಾತಾ ಕಿ ಜೈ, ಕಿಡಿಗೇಡಿಗಳನ್ನು ಬಂಧಿಸಿ, ಬಂಧಿಸಿ ಮುಂತಾದ ಘೋಷಣೆ ಕೂಗಿದರು.

ಈ‌ ವೇಳೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಮೈಸೂರು ಜಿಲ್ಲಾಧ್ಯಕ್ಷ ಮಹೇಶ್ ಕಾಮತ್ ಅವರು ಭಾರತದ ಹಿಂದೂಗಳು ಯಾವಾಗಲೂ ಶಾಂತಿ ಪ್ರೀಯರು ಮತ್ತು ಎಲ್ಲಾ ಧರ್ಮದ ಜನರ ಜೊತೆ ಹೊಂದಾಣಿಕೆಯಿಂದ ಬದುಕುವವರು ಎಂದು ಹೇಳಿದರು.

ಕರ್ನಾಟಕದಲ್ಲೂ ಹಿಂದುಗಳು ಎಲ್ಲಾ ದರ್ಮೀಯರ ಜೊತೆ ಉತ್ತಮ ಸಾಮರಸ್ಯದ ಜೊತೆ ಜೀವನ ನಡೆಸಿಕೊಂಡು ಬರುತ್ತಿದ್ದಾರೆ, ಎಲ್ಲಾ ದರ್ಮೀಯರ ಹಬ್ಬ ಹರಿದಿನಕ್ಕೆ ಪ್ರತಿ ಬಾರತೀಯನು ಸಹಕರಿಸಲೇಬೇಕು ಇದು ನಮ್ಮ ಬಾರತೀಯರ ಸಂಸ್ಕ್ರತಿಯೂ ಹೌದು. ಪರದರ್ಮೀಯರ ಯಾವುದೇ ಹಬ್ಬ ಹರಿದಿನಕ್ಕೆ ಹಿಂದುಗಳು ಎಂದೂ ತೊಂದರೆ ಕೊಟ್ಟಿಲ್ಲ ಎಂದು ತಿಳಿಸಿದರು.

ಆದರೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಗಣೇಶ ವಿಸರ್ಜನೆ ವೇಳೆ ಬೇರೆ ದರ್ಮದವರು ವ್ಯವಸ್ಥಿತ ಪಿತೂರಿ ಮಾಡಿ ಹಿಂದುಗಳ ಮೇಲೆ ಹಾಗೂ ಗಣೇಶ ವಿಗ್ರಹದ ಮೇಲೆ ಧಾಳಿ ಮಾಡಿದ್ದಲ್ಲದೇ ಹಿಂದೂ ಅಂಗಡಿ ಮುಗ್ಗಟ್ಟಿನ ಮೇಲೆ ದಾಳಿ ಮಾಡಿ ಅವರ ಜೀವನೋಪಾಯಕ್ಕಾಗಿ ಇರುವ ಅಂಗಡಿ ಮುಗ್ಗಟ್ಟಿಗೆ ಬೆಂಕಿ ಹಚ್ಚಿರುವುದು ನಿಜಕ್ಕೂ ಖಂಡನೀಯ ಎಂದು ಆಕ್ರೋಶಭರಿತರಾಗಿ ನುಡಿದರು.

ಬಹು ಸಂಖ್ಯಾತರಾಗಿರುವ ಹಾಗೂ ಶಾಂತಿಯುತರಾಗಿರುವ ಹಿಂದೂಗಳಿಗೆ ಈ ರೀತಿ ಕೆಣಕುವ ಕೆಲಸ ಮಾಡದಂತೆ ಮತ್ತು ಕ್ರೌರ್ಯ ಮಾಡುವವರಿಗೆ ಸರಿಯಾದ ಶಿಕ್ಷೆ ನೀಜಬೇಕೆಂದು ಆಗ್ರಹಿಸಿ ಪ್ರತಿಭಟನೆ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ಮೈಸೂರು ಜಿಲ್ಲಾ ಕಾರ್ಯದರ್ಶಿ ಮಧುಶಂಕರ್, ವಿಭಾಗ ಸಂಚಾಲಕರಾದ ಸವಿತಾ ಘಾಟ್ಕೇ, ಉಪಾಧ್ಯಕ್ಷರಾದ ಅಂಬಿಕಾ ಜೀವನ್ ಮಿತ್ರ, ಜನಾರ್ಧನ್, ಮೈಸೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಿರಿಧರ್, ಮುಖಂಡರಾದ ಶ್ರೀ ಮುರಳಿ, ಮೈಸೂರು ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲೋಹಿತ್, ಡಾಕ್ಟರ್ ಕೃಷ್ಣಮೂರ್ತಿ, ಶಿವು, ರಾಣಿ, ಚೇತನ್ ಮಂಜುನಾಥ್, ಭಾಗ್ಯ,
ಬೆರುಮಲ್ ರಾಥೋಡ್, ಕಾಂತಿಲಾಲ್ ಗುಲೆಚ, ದಲ್ಲಿಚಂದ್ ಶ್ರೀ ಶ್ರೀ ಮಾಲ್, ರಾಜೀವ್ ಕುಮಾರ್, ಲಾಲಾರಂ ಪುರೋಹಿತ್, ಮದನ್ ಲಾಲ್ ಪುರೋಹಿತ್, ಹಾಗೂ ರಾಜಸ್ಥಾನ ಸಮುದಾಯದ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನಾಗಮಂಗಲ ಗಣೇಶನ ವಿಸರ್ಜನೆ ವೇಳೆ ಗಲಭೆ:ವಿ ಹೆಚ್ ಪಿ,ರಾಜಸ್ಥಾನ್ ಸಂಘದ ಪ್ರತಿಭಟನೆ Read More

ದುರುಳರು ಯಾವುದೇ ಜಾತಿ, ಧರ್ಮದವರಾದರೂ ಕಠಿಣ ಕ್ರಮ: ಸಿಎಂ

ಬೆಂಗಳೂರು: ದುರುಳರು ಯಾವುದೇ ಜಾತಿ, ಧರ್ಮದವರಾಗಿರಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಡ್ಯ ಜಿಲ್ಲೆ, ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಡಿರುವುದು ಸಮಾಜದ ಶಾಂತಿ, ನೆಮ್ಮದಿಗೆ ಧಕ್ಕೆತರುವ ಕಿಡಿಗೇಡಿಗಳ ದುಷ್ಕೃತ್ಯ ಎನ್ನುವುದು ನಿಸ್ಸಂಶಯ ಎಂದು ಸಿಎಂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಈಗಾಗಲೇ 50ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದ್ದು, ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡುವುದೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಬರೆದಿದ್ದಾರೆ.

ಕಳೆದ ಒಂದೂವರೆ ವರ್ಷಗಳಿಂದ ಯಾವುದೇ ಗಲಭೆ, ಗಲಾಟೆ, ಹಿಂಸಾಚಾರಗಳು ನಡೆಯದೆ ಸರ್ವಜನಾಂಗದ ಶಾಂತಿಯ ತೋಟದಂತಿದ್ದ ನಾಡನ್ನು, ಧಾರ್ಮಿಕ ನೆಲೆಗಟ್ಟಿನಲ್ಲಿ ವಿಭಜಿಸಲು ಯತ್ನಿಸುವ ದುರುಳರು ಯಾವುದೇ ಜಾತಿ, ಧರ್ಮದವರಾಗಿರಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಸಾರ್ವಜನಿಕರು ಪ್ರಚೋದನೆಗಳಿಗೆ ಒಳಗಾಗದೇ ಶಾಂತಿ, ಸಂಯಮ ಕಾಪಾಡಿಕೊಳ್ಳುವ ಮೂಲಕ ನಮ್ಮೊಂದಿಗೆ ಸಹಕರಿಸಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ದುರುಳರು ಯಾವುದೇ ಜಾತಿ, ಧರ್ಮದವರಾದರೂ ಕಠಿಣ ಕ್ರಮ: ಸಿಎಂ Read More

ನಾಗಮಂಗಲದಲ್ಲಿ ಶಾಂತಿ ಮರು ಸ್ಥಾಪನೆಗೆ ಕ್ರಮ ಕೈಗೊಳ್ಳಿ-ಹೆಚ್ ಡಿ ಕೆ ಆಗ್ರಹ

ಬೆಂಗಳೂರು: ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಘಟನೆಯನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಉಗ್ರವಾಗಿ ಖಂಡಿಸಿದ್ದಾರೆ.

ಗಣಪತಿ ದೇವರ ಮೆರವಣಿಗೆಯಲ್ಲಿ ಶಾಂತಿಯಿಂದ ತೆರಳುತ್ತಿದ್ದ ಭಕ್ತರನ್ನು ಗುರಿ ಮಾಡಿ ಒಂದು ಸಮುದಾಯದ ಪುಂಡರು ಉದ್ದೇಶಪೂರ್ವಕವಾಗಿಯೇ ದಾಂಧಲೆ ಮಾಡಿ ಸಾರ್ವಜನಿಕರು-ಪೊಲೀಸರ ಮೇಲೆ ಕಲ್ಲು, ಚಪ್ಪಲಿ ಎಸೆದು ಪೆಟ್ರೋಲ್ ಬಾಂಬ್ ಸ್ಫೋಟಿಸಿ ತಲ್ವಾರ್ ಝಳಪಿಸುವ ಮೂಲಕ ದುಸ್ಸಾಹಸ ಮಾಡಿ ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ವೈಫಲ್ಯಕ್ಕೆ ಕಾರಣರಾಗಿದ್ದಾರೆ‌ ಎಂದು ಟ್ವೀಟ್‌ ಮಾಡಿ ಕಿಡಿಕಾರಿದ್ದಾರೆ.

ಪೊಲೀಸ್ ಠಾಣೆ ಎದುರು ರಕ್ಷಣೆ ಕೊಡಿ ಎಂದು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರ ಮೇಲೂ ಪುಂಡರು ದಬ್ಬಾಳಿಕೆ ನಡೆಸುತ್ತಾರೆ ಎಂದರೆ ನಾವು ಎಲ್ಲಿದ್ದೇವೆ ಎನ್ನುವ ಅನುಮಾನ ಬರುತ್ತದೆ. ಇಲ್ಲಿ ಸ್ಥಳೀಯ ಪೊಲೀಸರ ವೈಫಲ್ಯವೂ ಎದ್ದು ಕಾಣುತ್ತಿದೆ ಎಂದು ಗರಂ ಆಗಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಸರ್ಕಾರ ರಾಜಕೀಯ ಸ್ವಾರ್ಥಕ್ಕಾಗಿ ಒಂದು ನಿರ್ದಿಷ್ಟ ಸಮುದಾಯವನ್ನು ಅತಿಯಾಗಿ ಓಲೈಸಿ ತುಷ್ಟೀಕರಣ ಮಾಡಿದ್ದರ ಫಲವಾಗಿ ನಾಗಮಂಗಲದಲ್ಲಿ ಈ ಹೇಯ ಘಟನೆ ನಡೆದಿದೆ ಎಂದು ಹೆಚ್ ಡಿ ಕೆ ಜರಿದಿದ್ದಾರೆ.

ಸಾರ್ವಜನಿಕರು ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿರುವ ಕುಮಾರಸ್ವಾಮಿ, ತಕ್ಷಣವೇ ಪಟ್ಟಣದಲ್ಲಿ ಶಾಂತಿ ಮರುಸ್ಥಾಪನೆ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ನಾಗಮಂಗಲದಲ್ಲಿ ಶಾಂತಿ ಮರು ಸ್ಥಾಪನೆಗೆ ಕ್ರಮ ಕೈಗೊಳ್ಳಿ-ಹೆಚ್ ಡಿ ಕೆ ಆಗ್ರಹ Read More

ನಾಗಮಂಗಲ ಗಣೇಶ ವಿಸರ್ಜನೆ ವೇಳೆ ನಡೆದ ಘಟನೆಗೆ ಅಶೋಕ್ ಆಕ್ರೋಶ

ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಮತಾಂಧ ಶಕ್ತಿಗಳು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದು, ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕದಲ್ಲಿ ಜಿಹಾದಿ ಮುಳ್ಳುಗಳು ಶಾಂತಿ ಕದಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ಬುಧವಾರ ರಾತ್ರಿ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಘಟನೆಯನ್ನು ಖಂಡಿಸಿರುವ ಅಶೋಕ್, ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಗೆ ಇದು ಮತ್ತೂಂದು ನಿದರ್ಶನವಾಗಿದೆ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

ಕಳೆದ ವರ್ಷವೂ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಇಂತದ್ದೇ ಘಟನೆ ನಡೆದಿತ್ತು,ಆದರೂ ಈ ವರ್ಷ ಪೊಲೀಸರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದರಿಂದಲೇ ಘಟನೆ ಮರುಕಳಿಸಿದೆ.

ಶಾಂತಿಯುತವಾಗಿ ಸಾಗುತ್ತಿದ್ದ ಗಣೇಶ ವಿಸರ್ಜನೆ ಮೆರವಣಿಗೆಗೆ ಅಡ್ಡಿಪಡಿಸುವ ದುರುದ್ದೇಶದಿಂದ ಕೆಲ ಪುಂಡರು ಪೂರ್ವನಿಯೋಜಿತವಾಗಿ ದಾಂಧಲೆ ಎಬ್ಬಿಸಿ ಸಾರ್ವಜನಿಕರು, ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ, ಚಪ್ಪಲಿ ಎಸೆದು, ಪೆಟ್ರೋಲ್ ಬಾಂಬ್ ಸ್ಫೋಟಿಸುವುದು, ತಲ್ವಾರ್ ಝಳಪಿಸುವಂತಹ ದುಸ್ಸಾಹಸಕ್ಕೆ ಮುಂದಾಗಿದ್ದಾರೆ ಅಂದರೆ ರಾಜ್ಯದಲ್ಲಿ ಇಂತಹ ಮತಾಂಧ ಪುಂಡರಿಗೆ, ಕಾನೂನಿನ ಭಯವೇ ಇಲ್ಲದಂತಾಗಿರುವುದು ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ.

ರಕ್ಷಣೆ ಕೊಡಿ ಎಂದು ಪೊಲೀಸ್ ಠಾಣೆಗೆ ಬಂದವರ ಮೇಲೂ ಈ ಮತಾಂಧ ಪುಂಡರು ದಬ್ಬಾಳಿಕೆ ನಡೆಸಿರುವುದು ನೋಡಿದರೆ ಈ ದುಷ್ಟರ ತಾಲಿಬಾನ್ ಮನಸ್ಥಿತಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಎಷ್ಟು ಪ್ರೋತ್ಸಾಹ ದೊರಕುತ್ತಿದೆ ಎಂಬುದನ್ನು ಊಹಿಸಿಕೊಳ್ಳಿ ಎಂದು ತಿಳಿಸಿದ್ದಾರೆ.

ಪಕ್ಷ ಮತ್ತು ರಾಜ್ಯ ಸರ್ಕಾರದ ವೋಟ್ ಬ್ಯಾಂಕ್ ರಾಜಕಾರಣ, ಓಲೈಕೆ ರಾಜಕಾರಣ, ತುಷ್ಟೀಕರಣವೇ ಇಂತಹ ಘಟನೆಗಳು ಮರುಕಳಿಸುತ್ತಿರುವುದಕ್ಕೆ ನೇರ ಕಾರಣ ಎಂದು ಕಟುವಾಗಿ ಹೇಳಿದ್ದಾರೆ.

ಇಂತಹ ಮತಾಂಧ ಪುಂಡರ ಬಾಲ ಕತ್ತರಿಸದೆ ಹೀಗೆ ಬಿಟ್ಟರೆ ಇಂತಹವರು ನಾಳೆ ಉಗ್ರವಾದಿಗಳಾಗುವುದರಲ್ಲಿ ಸಂಶಯವೇ ಇಲ್ಲ ಎಂದು ಅಶೋಕ್ ಎಚ್ಚರಿಸಿದ್ದಾರೆ.

ನಾಗಮಂಗಲ ಗಲಭೆಗೆ ಕಾರಣರಾದ ಸಮಾಜ ಘಾತುಕ ಶಕ್ತಿಗಳನ್ನ ಕೊಡಲೇ ಬಂಧಿಸಿ ಕಾನೂನು ವಶಕ್ಕೆ ಒಪ್ಪಿಸಿ ಕರ್ನಾಟಕದಲ್ಲಿ ಜಿಹಾದಿ ಮಾನಸಿಕತೆಗೆ ಜಾಗವಿಲ್ಲ ಎಂಬ ದಿಟ್ಟ ಸಂದೇಶ ರವಾನಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಒತ್ತಾಯಿಸಿದ್ದಾರೆ.

ನಾಗಮಂಗಲ ಗಣೇಶ ವಿಸರ್ಜನೆ ವೇಳೆ ನಡೆದ ಘಟನೆಗೆ ಅಶೋಕ್ ಆಕ್ರೋಶ Read More