ಸಿದ್ದರಾಮಯ್ಯ ಆರೋಗ್ಯ ಮಾರ್ಗ ಹೆಸರಿಗೆ ಮೈಸೂರು ರಕ್ಷಣಾ ವೇದಿಕೆ ಆಕ್ಷೇಪ
ಮೈಸೂರು: ಮೈಸೂರಿನ ಕೆ.ಆರ್.ಎಸ್ ರಸ್ತೆಗೆ ಹೋಗುವ ಮಾರ್ಗಕ್ಕೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ಹೆಸರಿಡಲು ಮುಂದಾಗಿರುವ ಮೈಸೂರು ಮಹಾನಗರ ಪಾಲಿಕೆ ಕ್ರಮಕ್ಕೆ ಮೈಸೂರು ರಕ್ಷಣಾ ವೇದಿಕೆ
ಅಧ್ಯಕ್ಷ ಮೈ. ಕಾ. ಪ್ರೇಮ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಂದು ಪ್ರಿನ್ಸೆಸ್ ರಸ್ತೆ ಎಂದು ನಾಮಕರಣ ಮಾಡಿದ್ದರು,ಇದಕ್ಕೆಕಾರಣ ಚೆಲುವಜಾಮ್ಮಣಿ ಮತ್ತು ಕೃಷ್ಣರಾಜಮ್ಮಣ್ಣಿ ಯವರು ಈಗಿನ ಸಿ ಎಫ್ ಟಿ ಆರ್ ಐ ಆವರಣದಲ್ಲಿರುವ ಅರಮನೆಯಲ್ಲಿ ವಾಸಿಸುತ್ತಿದ್ದರು.ಇದಕ್ಕೆ ಮತ್ತೊಂದು ಹೆಸರು ಕೆಬ್ಬೆ ಕಟ್ಟೆ ಅರಮನೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಹೋದರಿ ಪ್ರಿನ್ಸೆಸ್ ಕೃಷ್ಣ ರಾಜಮ್ಮಣ್ಣಿಯವರು ಅಂದು ಕ್ಷಯರೋಗಕ್ಕೆ ತುತ್ತಾದರು.
ಅಂದಿನ ದಿನಗಳಲ್ಲಿ ಕ್ಷಯ ರೋಗ ಎಂಬುವುದು ಒಂದು ಮಾರಣಾಂತಿಕ ಸಾಂಕ್ರಾಮಿಕ ರೋಗವೆಂದು ಜನರ ಮನಸ್ಸಿನಲ್ಲಿತ್ತು. ಆದ್ದರಿಂದ ನಾಲ್ವಡಿ ಯವರು ಸಾರ್ವಜನಿಕರ ಸಹಾಯದಿಂದ ಇಂದಿನ ಸ್ಯಾನಿಟೋರಿಯಂ ಆಸ್ಪತ್ರೆಯನ್ನು ಸುಮಾರು ನೂರು ಎಕರೆ ಮಧ್ಯದಲ್ಲಿ ಊರಾಚೆ ನಿರ್ಮಿಸಿದ್ದರು.
ಈ ಆಸ್ಪತ್ರೆಗೆ ತಮ್ಮ ಅತ್ಯಂತ ಪ್ರೀತಿ ಪಾತ್ರರಾಗಿದ್ದ ಸಹೋದರಿ ಕೃಷ್ಣರಾಜಮ್ಮಣ್ಣಿಯವರ ಹೆಸರಿನಲ್ಲಿ P K ಸ್ಯಾನಿಟೋರಿಯಂ (ಪ್ರಿನ್ಸೆಸ್ ಕೃಷ್ಣರಾಜಮ್ಮಣ್ಣಿ ಸಾನಿಟೋರಿಯಂ) ಎಂದು ನಾಮಕರಣ ಮಾಡಿದರು.
ಈ ಆಸ್ಪತ್ರೆ ಕಟ್ಟಲು ಅಂದಿನ ಮೈಸೂರಿನ ದೊಡ್ಡ ದೊಡ್ಡ ಸಾಹುಕಾರರು ಅಪಾರ ಹಣವನ್ನು ದಾನ ಮಾಡಿದ್ದರು, ಈ ರಸ್ತೆಗೆ ದಾಸಪ್ಪ ವೃತ್ತದಿಂದ ಕುಂಬಾರಕೊಪ್ಪಲು ಗೇಟ್ ತನಕ ಪ್ರಿನ್ಸೆಸ್ ರಸ್ತೆ ಎಂದು ಸ್ವತಃ ನಾಲ್ವಡಿಯವರೇ ನಾಮಕರಣ ಮಾಡಿದರು.
ಆದರೆ ದುರ್ದೈವ ಮೈಸೂರಿನ ಇತಿಹಾಸ ಅರಿಯದ ಭಟ್ಟoಗಿ ಅಧಿಕಾರಿಗಳು ಸಿದ್ದರಾಮಯ್ಯ ಆರೋಗ್ಯ ಮಾರ್ಗ ಎಂದು ಕರೆಯಲು ಸಾಧ್ಯವಾಗದ ರೀತಿಯಲ್ಲಿರುವ ಅವೈಜ್ಞಾನಿಕ ಹೆಸರನ್ನು ನಾಮಕರಣ ಮಾಡಲು ಮುಂದಾಗಿದ್ದಾರೆ ಎಂದು ಮೈ. ಕಾ. ಪ್ರೇಮ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮೈಸೂರಿನ ಈಗಿನ ಸಂಸದರ ಮೇಲೆ ವೈಯಕ್ತಿಕ ದ್ವೇಷವನ್ನು ಇಟ್ಟುಕೊಂಡಂತೆ ತಮ್ಮನಡವಳಿಕೆ ತೋರಿಸಿ, ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರನ್ನಿಡಲು ಯಾವುದೇ ಆಕ್ಷೇಪಣೆ ನಮಗಿಲ್ಲವೆಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ ಇದು ಸರಿಯಲ್ಲ ಎಂದು ಪ್ರೇಮ್ ಕುಮಾರ್ ತಿಳಿಸಿದ್ದಾರೆ.
ಎರಡು ಭಾರಿ ರಾಜ್ಯದ ಮುಖ್ಯಮಂತ್ರಿ ಗಾದಿಯನ್ನು ಹಿಡಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರನ್ನು ಇಡಲು ಮೈಸೂರಿನ ಬಹುತೇಕ ನಾಗರೀಕರಿಗೆ ಯಾವುದೇ ಆಕ್ಷೇಪಣೆ ಇಲ್ಲ.
ಕಾರಣ ಮುಖ್ಯಮಂತ್ರಿಗಳು ಮೈಸೂರಿನ ಅಭಿವೃದ್ಧಿಗೆ ಅದರಲ್ಲೂ ಪ್ರಿನ್ಸಸ್ ರಸ್ತೆಯಲ್ಲಿರುವ ಜಯದೇವ ಆಸ್ಪತ್ರೆ, ಟ್ರಾಮಾ ಸೆಂಟರ್ ನಂತಹ ದೊಡ್ಡ ದೊಡ್ಡ ಆಸ್ಪತ್ರೆಗಳನ್ನು ತಮ್ಮ ಅಧಿಕಾರ ಅವಧಿಯಲ್ಲಿ ನಿರ್ಮಿಸಿದ್ದಾರೆ. ಅದರಿಂದ ಮೈಸೂರಿನ ಜನ ಅವರಿಗೆ ಋಣಿಗಳಾಗಿದ್ದಾರೆ.
ಮೊದಲ ಬಾರಿಗೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಈಗಿನ ರಾಮಕೃಷ್ಣ ಪರಮಹಂಸ ವೃತ್ತದಲ್ಲಿ ಕನಕದಾಸರ ಪ್ರತಿಮೆ ಪ್ರತಿಷ್ಠಾಪಿಸಲು ನಿವೃತ್ತ ಜಿಲ್ಲಾಧಿಕಾರಿಯೊಬ್ಬರು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದಾಗ ಅದನ್ನು ನಯವಾಗಿ ತಿರಸ್ಕರಿಸಿ ಅಲ್ಲಿ ರಾಮಕೃಷ್ಣರ ಪ್ರತಿಮೆಯನ್ನು ಸ್ಥಾಪಿಸಿದ ಹೆಗ್ಗಳಿಕೆ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ.
ಇಂತಹ ಔದಾರ್ಯವಿರುವ ಸಿದ್ದರಾಮಯ್ಯನವರ ಕಾರ್ಯ ಸಾಧನೆಗೆ ಮೈಸೂರಿನ ಯಾವುದೇ ಹೊಸ ಬಡಾವಣೆಗಳಿಗೆ ಅವರ ಹೆಸರನ್ನು ಸೂಚಿಸುವುದು ಅಥವಾ ನಾಮಕರಣ ಮಾಡುವುದು ಸೂಕ್ತವೆಂದು ಮೈಸೂರು ರಕ್ಷಣಾ ವೇದಿಕೆ ಪರವಾಗಿ ಪ್ರೇಮ್ ಕುಮಾರ್ ಸಲಹೆ ನೀಡಿದ್ದಾರೆ.
ಆದರೆ ಈ ಹೆಸರು ಇಡುವ ಭರದಲ್ಲಿ ಇತಿಹಾಸವನ್ನು ಮುಚ್ಚಿಹಾಕುವ ಪ್ರಯತ್ನವನ್ನು ಮಾಡುವುದು ಸರ್ವದಾ ಅಪರಾಧ ಎಂದು ಪ್ರೇಮ್ ಕುಮಾರ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿದ್ದರಾಮಯ್ಯ ಆರೋಗ್ಯ ಮಾರ್ಗ ಹೆಸರಿಗೆ ಮೈಸೂರು ರಕ್ಷಣಾ ವೇದಿಕೆ ಆಕ್ಷೇಪ Read More