ಡೆವಿಲ್ ಚಿತ್ರದ ಯಶಸ್ಸಿಗಾಗಿ ಕುಂಬಳಕಾಯಿ ದೃಷ್ಟಿ ತೆಗೆದು ಪ್ರಾರ್ಥಿಸಿದ ಅಭಿಮಾನಿಗಳು

ಮೈಸೂರು: ಮೈಸೂರಿನ ಲಲಿತಾ ಮಹಲ್ ರಸ್ತೆ, ಶ್ರೀ ತೂಗುದೀಪ್ ಶ್ರೀನಿವಾಸ್ ವೃತ್ತದಲ್ಲಿ ವಿಶಿಷ್ಟ ವಾತಾವರಣ ನಿರ್ಮಾಣವಾಗಿತ್ತು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸ ಚಿತ್ರ ‘ಡೆವಿಲ್’ ಯಶಸ್ವಿಯಾಗಲಿ ಎಂಬ ಹಾರೈಕೆಯೊಂದಿಗೆ ಅಭಿಮಾನಿಗಳು ಬೃಹತ್ ಗಾತ್ರದ ಫ್ಲೆಕ್ಸ್ ಅಳವಡಿಸಿ, ಅದರ ಮುಂದೆ ತಾಯಿ ಚಾಮುಂಡೇಶ್ವರಿ ಭಾವಚಿತ್ರ ಇಟ್ಟು ವಿಶೇಷ ಪೂಜೆ ನೆರವೇರಿಸಿದರು.

ಅಭಿಮಾನಿಗಳು ಕಟೌಟ್ ಮುಂದೆ ಕುಂಬಳಕಾಯಿಯಲ್ಲಿ ದೃಷ್ಟಿ ತೆಗೆದು, ಹಾಲು-ಅಕ್ಷತೆ ನೀಡಿ, ಚಿತ್ರಕ್ಕೆ ಅಡಚಣೆಗಳಿಲ್ಲದೆ ಯಶಸ್ವಿಯಾಗಲಿ, ತಂಡ ಸುಗಮ ಪಯಣ ಕಂಡು ಜನ ಮೆಚ್ಚುಗೆಯನ್ನು ಗಳಿಸಲಿ ಎಂಬ ಸಂಕಲ್ಪ ಮಾಡಲಾಯಿತು.

ಹೂವಿನ ಹಾರಹಾಕಿ ಅಭಿಮಾನಿಗಳ ಘೋಷಣೆಯ ನಡುವೆ
ಡೆವಿಲ್ ಗೆಲ್ಲುವುದು ಪಕ್ಕ,
ದರ್ಶನ್ ಮತ್ತೊಮ್ಮೆ ಸಿನಿಮಾ ರಂಗದಲ್ಲಿ ಗರ್ಜಿಸಲಿ,ಎಂಬ ಘೋಷಣೆಗಳು ಮೊಳಗಿದವು.

ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿರುವ ಈ ಚಿತ್ರದ ಯಶಸ್ಸಿಗಾಗಿ ಮಾಡಿದ ಈ ಭಕ್ತಿಪರ ಕಾರ್ಯಕ್ರಮ ಅಭಿಮಾನಿಗಳ ನಿಷ್ಠೆ, ಭಾವ ಮತ್ತು ಸಿನಿಮಾ ಪ್ರೇಮಕ್ಕೆ ಸಾಕ್ಷಿಯಾಯಿತು.

ಕಾರ್ಯಕ್ರಮದಲ್ಲಿ ಬನ್ನೂರು ಮಹೇಂದ್ರ ಸಿಂಗ್ ಕಾಳಪ್ಪ, ಜಿ. ರಾಘವೇಂದ್ರ, ರವಿಕುಮಾರ್, ಬನ್ನೂರು ಚಂದನ್, ಹರೀಶ್ ನಾಯ್ಡು, ಎಸ್.ಎನ್. ರಾಜೇಶ್, ರಾಕೇಶ್, ಮಣಿ ದಚ್ಚು, ನವೀನ್ ಹಾಗೂ ಹಲವಾರು ಅಭಿಮಾನಿಗಳು ಪಾಲ್ಗೊಂಡಿದ್ದರು.

ಡೆವಿಲ್ ಚಿತ್ರದ ಯಶಸ್ಸಿಗಾಗಿ ಕುಂಬಳಕಾಯಿ ದೃಷ್ಟಿ ತೆಗೆದು ಪ್ರಾರ್ಥಿಸಿದ ಅಭಿಮಾನಿಗಳು Read More

ಬಿ ಇ ಎಂ ಎಲ್ ಪ. ಜಾ/ ಪ.ಪಂ ನೌಕರರ ಕ್ಷೇಮಾಭಿವೃದ್ಧಿ ಸಂಘ: ಮಾದೇವ್ ಆಯ್ಕೆ

ಮೈಸೂರು: ಮೈಸೂರಿನ ಬಿ ಇ ಎಂ ಎಲ್ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ನೌಕರರ ಕ್ಷೇಮಾಭಿವೃದ್ಧಿ ಸಂಘಕ್ಕೆ 2025-2028 ಅವಧಿಯ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಚುನಾವಣೆ ನಡೆಯಿತು.

ಈ‌ ಚುನಾವಣೆಯಲ್ಲಿ ಮಾದೇವ್ ಎಂ. ವಿ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಪದಾಧಿಕಾರಿಗಳಾಗಿ‌ ಲೋಕೇಶ್ ಪಿ,
ಮಹಾದೇವಸ್ವಾಮಿ, ಎಸ್ಎಂ ಮಂಜುನಾಥ್ ಎಸ್.ರವಿಕುಮಾರ್ ಚುನಾಯಿತರಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರು ಗಳಾಗಿ
ಸತೀಶ್ ಪಿ,ಪ್ರಕಾಶ್ ಸಿ, ದೀಪು,
ಶಿವಕುಮಾರ್,ಗುರಿಕರು ಹಾಗೂ
ಬಸವರಾಜು ಆಯ್ಕೆಯಾಗಿದ್ದಾರೆ

ಬಿ ಇ ಎಂ ಎಲ್ ಪ. ಜಾ/ ಪ.ಪಂ ನೌಕರರ ಕ್ಷೇಮಾಭಿವೃದ್ಧಿ ಸಂಘ: ಮಾದೇವ್ ಆಯ್ಕೆ Read More

ಚಾಮುಂಡಿ ಬೆಟ್ಟದಲ್ಲಿ ಸೇವೆಗಳ ಶುಲ್ಕ ಏರಿಕೆ ಖಂಡಿಸಿ ಕರ್ನಾಟಕ ಸೇನಾ ಪಡೆ ಪ್ರತಿಭಟನೆ

ಮೈಸೂರು: ಚಾಮುಂಡೇಶ್ವರಿ ಬೆಟ್ಟದ ದರ್ಶನ ಹಾಗೂ ಸೇವೆಗಳ ಶುಲ್ಕ ಏರಿಸಿರುವುದನ್ನು ಖಂಡಿಸಿ ಕರ್ನಾಟಕ ಸೇನಾ ಪಡೆ ಸದಸ್ಯರು ಮೈಸೂರಿನ ಹಳೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ, ಪ್ರತಿನಿತ್ಯ ಒಂದಲ್ಲ ಒಂದು ದಿನನಿತ್ಯ ಪದಾರ್ಥಗಳ ಬೆಲೆಗಳನ್ನು ಏರಿಕೆ ಮಾಡಿ ಜನರು ಜೀವನ ನಡೆಸುವುದೇ ದುಸ್ತರವಾಗಿದೆ. ಈಗಾಗಲೇ ಕೋಟ್ಯಂತರ ಆದಾಯವಿರುವ ಚಾಮುಂಡಿ ಬೆಟ್ಟದಲ್ಲಿ, ಸರ್ಕಾರ ಭಕ್ತಾದಿಗಳಿಗೆ ಅನುಕೂಲಗಳನ್ನು ಮಾಡಿಕೊಡದೆ, ಅವರನ್ನೇ ಲೂಟಿ ಮಾಡಲು ಹೊರಟಿರುವುದು ಖಂಡನೀಯ ಎಂದು ಪ್ರತಿಭಟನಾನಿರತರು ಕಿಡಿಕಾರಿದರು.

ಚಾಮುಂಡಿ ಬೆಟ್ಟದಲ್ಲಿ ದೇವಸ್ಥಾನದಿಂದ ಪ್ರಸಾದದ ರೂಪದಲ್ಲಿ ನೀಡಲಾಗುವ ಲಡ್ಡು ದರವನ್ನು 15 ರೂಪಾಯಿಯಿಂದ 25 ರೂಪಾಯಿಗೆ ಏಕಾಏಕಿ ಹೆಚ್ಚಿಸಿರುವುದು ದೇವಿ ಭಕ್ತರಲ್ಲಿ ಆಕ್ರೋಶ ಉಂಟುಮಾಡಿದೆ.

ದೇವಿ ದರ್ಶನಕ್ಕೆ ಪ್ರವೇಶ ದರ 30 ರೂ. ನಿಂದ 50 ರೂ. ಗೆ ಹಾಗೂ 100 ರೂ. ನಿಂದ 200 ರೂ. ಗೆ ಅವೈಜ್ಞಾನಿಕವಾಗಿ ಹೆಚ್ಚಿಸಲಾಗಿದೆ
ಚಾಮುಂಡಿ ಬೆಟ್ಟದಲ್ಲಿ, ನಾಮಪಲಕದಲ್ಲಿ 20 ರೂ ನಿಂದ 15 ಸಾವಿರದ ತನಕ ವಿಶೇಷ ಸೇವೆಗಳಿವೆ. ಅದರಲ್ಲಿ 220 ಹಾಗೂ 300 ರೂಗಳ ಅಭಿಷೇಕ ಸೇವೆ ಯನ್ನು ಬಹಳ ಭಕ್ತಾದಿಗಳು ಪ್ರತಿದಿನ ಮಾಡಿಸುತ್ತಿದ್ದು, ಅದನ್ನು ಪ್ರಾಧಿಕಾರ ಈಗ ಅನಧಿಕೃತವಾಗಿ ತೆಗೆದುಹಾಕಿ ಬರಿ 550 ರೂಗಳನ್ನು ಅಭಿಷೇಕಕ್ಕಾಗಿ ಜನರಿಂದ, ಭಕ್ತಾದಿಗಳಿಂದ ವಸೂಲಿ ಮಾಡಲಾಗುತ್ತಿದೆ.

ಭಕ್ತಾದಿಗಳ ಮೇಲೆ ಸರ್ಕಾರ ಹೊರೆಹಾಕಲು ಹೊರಟಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ ಎಂದು ಈ ವೇಳೆ ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಬೆಟ್ಟಕ್ಕೆ ಆಗಮಿಸುವ ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರು, ಸಮರ್ಪಕ ಶೌಚಾಲಯ ವ್ಯವಸ್ಥೆ ಹಾಗೂ ಆಯಾಸವನ್ನು ತಣಿಸಿಕೊಳ್ಳಲು ಸಮರ್ಪಕ ತಂಗುಧಾಣದ ವ್ಯವಸ್ಥೆಗಳನ್ನು ಮೊದಲು ಸರ್ಕಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಚಾಮುಂಡೇಶ್ವರಿ ಬೆಟ್ಟದಲ್ಲಿ ಹಸಿದು ದೇವಿಯ ದರ್ಶನ ಮಾಡಲು ಬರುವ ಭಕ್ತಾದಿಗಳಿಗೆ, ನಮ್ಮ ರಾಜ್ಯದ ಧರ್ಮಸ್ಥಳ, ಉಡುಪಿ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ನೀಡುವಂತಹ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.
ಕೂಡಲೇ ಮುಖ್ಯಮಂತ್ರಿಗಳು ಶೀಘ್ರ ಸಭೆ ನಡೆಸಿ ಇದಕ್ಕೆಲ್ಲಾ ಕಡಿವಾಣ ಹಾಕಿ ಎಲ್ಲಾ ದರ್ಶನ ಸೇವೆಗಳನ್ನು ಯಥಾ ಸ್ಥಿತಿಗೆ ತರಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ ವಹಿಸಿದ್ದರು, ಸುರೇಶ್ ಗೋಲ್ಡ್, ಪ್ರಭುಶಂಕರ, ಕೃಷ್ಣಪ್ಪ, ಹನುಮಂತೇಗೌಡ, ಗಿರೀಶ್, ಸಿಂದುವಳ್ಳಿ ಶಿವಕುಮಾರ್, ಬೋಗಾದಿ ಸಿದ್ದೇಗೌಡ, ಶಿವಲಿಂಗಯ್ಯ, ನೇಹಾ, ಮಂಜುಳಾ, ಮಧುವನ ಚಂದ್ರು, ಹೊನ್ನೇಗೌಡ, ತಾಯೂರು ಗಣೇಶ್, ಡಾ.ನರಸಿಂಹೇಗೌಡ, ಬಸವರಾಜು , ಭಾಗ್ಯಮ್ಮ, ಸುಜಾತಾ , ಪ್ರಭಾಕರ್, ಡಾ. ಶಾಂತರಾಜೇಅರಸ್, ರಾಧಾಕೃಷ್ಣ , ನಂದಕುಮಾರ್, ದರ್ಶನ್ ಗೌಡ, ಪ್ರದೀಪ್, ರಘು ಅರಸ್, ಶಿವರಾಂ, ಗಣೇಶ್ ಪ್ರಸಾದ್, ಚಂದ್ರಶೇಖರ್, ರವೀಶ್, ರವಿ ನಾಯಕ್ ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು..

ಚಾಮುಂಡಿ ಬೆಟ್ಟದಲ್ಲಿ ಸೇವೆಗಳ ಶುಲ್ಕ ಏರಿಕೆ ಖಂಡಿಸಿ ಕರ್ನಾಟಕ ಸೇನಾ ಪಡೆ ಪ್ರತಿಭಟನೆ Read More

ಕ ಪೊ ಅಕಾಡೆಮಿ ಜೊತೆ ಸಾವಿತ್ರಿಬಾಯಿ ಫುಲೆ ಮಹಿಳಾ ಮಕ್ಕಳ ಅಭಿವೃದ್ಧಿ ಸಂಸ್ಥೆ ಸಹಿ

ಮೈಸೂರು: ಕರ್ನಾಟಕ ಪೊಲೀಸ್ ಅಕಾಡೆಮಿ ಹಾಗೂ ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಒಡಂಬಡಿಕೆ ಮಾಡಿಕೊಂಡಿವೆ.

ಈ ಒಡಂಬಡಿಕೆಯು ಎರಡೂ ಸಂಸ್ಥೆಗಳ ನಡುವೆ ಸಂಪನ್ಮೂಲ ವ್ಯಕ್ತಿಗಳ ವಿನಿಮಯ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ವಿಶೇಷ ಕೋರ್ಸ್‌ಗಳನ್ನು ಅಭಿವೃದ್ಧಿಪಡಿಸಿ ನಿರ್ವಹಿಸುವ ಕುರಿತಾಗಿದ್ದು, ಎರಡೂ ಸಂಸ್ಥೆಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

ಒಡಂಬಡಿಕೆಗೆ ಸಹಿ ಹಾಕಿ ಮಾತನಾಡಿದ ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ಎಸ್.ಎಲ್.ಚೆನ್ನಬಸವಣ್ಣ, ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆಯಾದ ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯೊಡನೆ ಒಡಂಬಡಿಕೆ ಕರ್ನಾಟಕ ಪೊಲೀಸ್ ಅಕಾಡೆಮಿಗೆ ಬಹಳ ವಿಶಿಷ್ಟವಾಗಿದೆ ಎಂದು ಹೇಳಿದರು.

ಪ್ರಸ್ತುತ ಸಮಾಜದಲ್ಲಿ ಮಹಿಳೆಯರು ಮತ್ತು ಮಕ್ಕಳು ಎದುರಿಸುತ್ತಿರುವ ಸವಾಲುಗಳು, ಅವರ ಸಮಸ್ಯೆಗಳ ನಿರ್ವಹಣೆಯಲ್ಲಿ ಪೊಲೀಸ್ ಇಲಾಖೆಯ ಪಾತ್ರ, ಅವರ ಕುರಿತಾದ ಕಾನೂನುಗಳು ಹಾಗೂ ಅವರಿಗೆ ಸಂಬಂಧಪಟ್ಟ ಪ್ರಚಲಿತ ವಿದ್ಯಮಾನಗಳ ಕುರಿತು ಪೊಲೀಸ್ ಇಲಾಖೆಗೆ ಸೇರ್ಪಡೆಯಾಗುವ ಅಧಿಕಾರಿ ಗಳು ಹಾಗೂ ಕರ್ತವ್ಯನಿರತ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಅವರನ್ನು ಸಂವೇದನಾಶೀಲರನ್ನಾಗಿ ಮಾಡಲು ಬಹಳ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಈ ಒಡಂಬಡಿಕೆಯ ಮೂಲಕ ಪ್ರಸ್ತುತ ಸಮಾಜದಲ್ಲಿ ಮಹಿಳೆ ಯರ ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿ, ದೌರ್ಜನ್ಯಮುಕ್ತ ಸಮಾಜ ನಿರ್ಮಾಣವಾಗುವಂತಾಗಲಿ ಎಂದು ಆಶಿಸಿದರು.

ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಪರವಾಗಿ ಒಡಂಬಡಿಕೆಗೆ ಸಹಿ ಹಾಕಿ ಮಾತನಾಡಿದ ಸಂಸ್ಥೆಯ ಬೆಂಗಳೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಪಿ.ಜೆ.ಫಿಲಿಪ್ಸ್ ಅವರು, ಕರ್ನಾ ಟಕ ಪೊಲೀಸ್ ಅಕಾಡೆಮಿಯೊಡನೆ ಒಡಂಬಡಿಕೆ ನಮ್ಮ ಸಂಸ್ಥೆಗೂ ಹೆಮ್ಮೆಯ ವಿಷಯವಾಗಿದ್ದು, ಕರ್ನಾಟಕ ರಾಜ್ಯದಲ್ಲಿ ವರದಿಯಾಗುತ್ತಿರುವ ಮಹಿಳೆಯರ ಮತ್ತು ಮಕ್ಕಳ ದೌರ್ಜನ್ಯಗಳ ಸಂಖ್ಯೆಯನ್ನು ಗಣನೀಯ ವಾಗಿ ಕಡಿಮೆ ಮಾಡುವುದಲ್ಲದೇ, ರಾಜ್ಯವನ್ನು ದೌರ್ಜನ್ಯಮುಕ್ತ ಮಾಡುವಲ್ಲಿ ಪೊಲೀಸ್ ಇಲಾಖೆ ಯೊಂದಿಗೆ ಕೈಜೋಡಿಸುವುದು ಈ ಒಡಂಬಡಿಕೆಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ತರಬೇತಿ ಸಂಸ್ಥೆ ಹಾಗೂ ಕರ್ನಾಟಕ ಪೊಲೀಸ್ ಅಕಾಡೆಮಿ ಕ್ರಾಂತಿಕಾರಕ ಹೆಜ್ಜೆ ಇಟ್ಟಿದೆ. ಇಂತಹ ಆಲೋಚನೆಗೆ ಈ ಸಂಸ್ಥೆಯ ನಿರ್ದೇಶಕ ಚೆನ್ನಬಸವಣ್ಣ ಅವರು ಹಾಗೂ ಎಲ್ಲಾ ಅಧಿಕಾರಿಗಳು ಅಭಿನಂದನಾರ್ಹರು ಎಂದು ತಿಳಿಸಿದರು.

ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಬೆಂಗಳೂರು ಪ್ರಾದೇಶಿಕ ಕೇಂದ್ರದ ಉಪನಿರ್ದೇಶಕ ಲೋಕೇಶ್, ಕರ್ನಾಟಕ ಪೊಲೀಸ್ ಅಕಾಡೆಮಿಯ ಅಧಿಕಾರಿ ವರ್ಗ ಹಾಗೂ ಬೋಧಕರು ಹಾಜರಿದ್ದರು.

ಕ ಪೊ ಅಕಾಡೆಮಿ ಜೊತೆ ಸಾವಿತ್ರಿಬಾಯಿ ಫುಲೆ ಮಹಿಳಾ ಮಕ್ಕಳ ಅಭಿವೃದ್ಧಿ ಸಂಸ್ಥೆ ಸಹಿ Read More

ಸೆಕ್ಸ್ ಗೆ ಸಹಕರಿಸು ಎಂದ ಕಾರ್ಖಾನೆ ಮಾಲೀಕನ ವಿರುದ್ದ ಮಹಿಳೆ ದೂರು

ಮೈಸೂರು: ಮಹಿಳಾ ಉದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಖಾಸಗಿ ಕಾರ್ಖಾನೆ ಮಾಲೀಕನ ವಿರುದ್ದ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೂರ್ಗಳ್ಳಿ ಕೈಗಾರಿಕಾ ಬಡಾವಣೆಯಲ್ಲಿರುವ ಪ್ರಿಸೈಸ್ ಗೇರ್ಸ್ ಅಂಡ್ ಸಲ್ಯೂಷನ್ಸ್ ಮ್ಯಾನುಫ್ಯಾಕ್ಚರ್ ಕಂಪನಿ ಮಾಲೀಕ ಮುರಳಿಧರ್ ಎಂಬುವರ ಮೇಲೆ ನೊಂದ ಮಹಿಳಾ ಉದ್ಯೋಗಿ ಪ್ರಕರಣ ದಾಖಲಿಸಿದ್ದಾರೆ.

ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಹಿಳೆಗೆ ಮಾಲೀಕ ಲೈಂಗಿಕವಾಗಿ ಕಿರುಕುಳ ನೀಡಿದ್ದಾರೆ.ಸೆಕ್ಸ್ ನಲ್ಲಿ ಸಹಾಯ ಮಾಡಿದ್ರೆ ಚೆನ್ನಾಗಿ ನೋಡಿಕೊಳ್ತೀನಿ ಎಂದು ಒತ್ತಾಯಿಸಿದ್ದಾರೆ.

ಮೊಬೈಲ್ ಗಳಿಂದ ಮೆಸೇಜ್ ಮಾಡಿದ್ದಾರೆ.ಇದರಿಂದ ನೊಂದ ಉದ್ಯೋಗಿ ಎರಡು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದಾರೆ.ಹೀಗಿದ್ದೂ ಬಿಡದ ಮಾಲೀಕ ಮುರಳಿಧರ್ ಮಹಿಳೆ ಹಿಂದೆ ಬಿದ್ದಿದ್ದಾನೆ.
ಮನೆಗೆ ಬಂದು ಕೆಲಸಕ್ಕೆ ಹಿಂದಿರುಗು ಇಲ್ಲದಿದ್ದರೆ ನಿನ್ನ ಬಗ್ಗೆ ಅಪಪ್ರಚಾರ ಮಾಡುವುದಾಗಿ ಹೆದರಿಸಿದ್ದಾನೆ.

ಕಳೆದ ಎರಡು ತಿಂಗಳಿಂದ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆಂದು ಆರೋಪಿಸಿರುವ ನೊಂದ ಮಹಿಳಾ ಉದ್ಯೋಗಿ ಮಾಲೀಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಹೆಬ್ಬಾಳ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಸೆಕ್ಸ್ ಗೆ ಸಹಕರಿಸು ಎಂದ ಕಾರ್ಖಾನೆ ಮಾಲೀಕನ ವಿರುದ್ದ ಮಹಿಳೆ ದೂರು Read More

ಕನ್ನಡಾಂಬೆ ರತ್ನ ಪ್ರಶಸ್ತಿಗೆ ಭಾಜನರಾದಸಬ್ ಇನ್ಸ್‌ಪೆಕ್ಟರ್ ಮಹೇಂದ್ರ

ಮೈಸೂರು: ಇಲವಾಲ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಹೇಂದ್ರ ಪಿ.ಅವರು
ಕನ್ನಡಾಂಬೆ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
೭೦ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಇಲವಾಲ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮಹೇಂದ್ರ ಪಿ.ಅವರಿಗೆ
ಕನ್ನಡಾಂಬೆ ರಕ್ಷಣಾ ವೇದಿಕೆ ವತಿಯಿಂದ ನೀಡಲಾದ ’ಕನ್ನಡಾಂಬೆ ರತ್ನ’ ಪ್ರಶಸ್ತಿಯನ್ನು ವೇದಿಕೆಯ ರಾಜ್ಯಾಧ್ಯಕ್ಷರಾದ ಬಿ.ಬಿ.ರಾಜಶೇಖರ್ ಅವರು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ವೇದಿಕೆಯ ರಾಜ್ಯ ಖಜಾಂಚಿ ನಂಜುಂಡ, ಕಾರ್ಯದರ್ಶಿ ಶಿವಕುಮಾರ್, ಮುಖಂಡರಾದ ಕಿರಣ್, ಇ.ವಿ.ನಾಗರಾಜು, ಹರೀಶ್, ಹೊನ್ನೇಗೌಡ, ದೊರೆಸ್ವಾಮಿ, ಗುರು, ಶೇಖರ್, ಮೋಹನ, ಶ್ರೀನಿವಾಸ್, ವಿಜಿ ಕುಮಾರ್ ಮತ್ತು ಇತರೆ ಪದಾಧಿಕಾರಿಗಳು ಹಾಜರಿದ್ದರು.

ಕನ್ನಡಾಂಬೆ ರತ್ನ ಪ್ರಶಸ್ತಿಗೆ ಭಾಜನರಾದಸಬ್ ಇನ್ಸ್‌ಪೆಕ್ಟರ್ ಮಹೇಂದ್ರ Read More

ಅಪಹರಣವಾಗಿದ್ದ ಕೆಲ ಗಂಟೆಗಳಲ್ಲೇ ಲೋಕೇಶ್ ರನ್ನು ರಕ್ಷಿಸಿದ ಪೊಲೀಸರು

ಮೈಸೂರು: ಮೈಸೂರು ವಿಜಯನಗರ ಠಾಣೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಅಪಹರಣವಾಗಿದ್ದ ಕೆಲವೇ ಗಂಟೆಗಳಲ್ಲಿ ಫೈನಾನ್ಷಿಯರ್ ಲೋಕೇಶ್ ಅವರನ್ನು ರಕ್ಷಿಸಿದ್ದಾರೆ.

ಒಂದು ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ನಾಲ್ವರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಂತೋಷ್ ಹೆಚ್ ಎಂ,ಅಭಿಷೇಕ್ ಹೆಚ್ ಎಸ್, ಪ್ರಜ್ವಲ್ ಆರ್ ಹಾಗೂ ದರ್ಶನ್ ಬಿ.ಎನ್ ಬಂಧಿತ ಆರೋಪಿಗಳು.
ಡಿ. 6 ರಂದು ರಾತ್ರಿ 8.15 ರ ಸಮಯದಲ್ಲಿ ವಿಜಯನಗರ 3ನೇ ಹಂತ ಹೆರಿಟೇಜ್ ಕ್ಲಬ್ ನಿಂದ ಮನೆಗೆ ಹೋಗಲು ಹೊರಗೆ ಬಂದ ಲೋಕೇಶ್ ಅವರ ಮೇಲೆ ಅಟ್ಯಾಕ್ ಮಾಡಿದ ಈ ನಾಲ್ಕು ಮಂದಿ ಕಣ್ಣಿಗೆ ಖಾರದ ಪುಡಿ ಎರಚಿ ಬಲವಂತವಾಗಿ ಒಂದು ಟಾಟಾ ಸುಮೋ ವಾಹನದಲ್ಲಿ ಹಾಕಿಕೊಂಡು ಅಪಹರಿಸಿದ್ದರು.

ನಂತರ ಲೋಕೇಶ್ ಅವರನ್ನು ಒತ್ತೆಯಾಳಗಿರಿಸಿಕೊಂಡು ಒಂದು ಕೋಟಿ ರೂ ಗಳಿಗೆ ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ಕಿಡ್ನಾಪ್ ಆದ ಲೋಕೇಶ್ ಪತ್ನಿ ನಯನ ಅವರು ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ತಕ್ಷಣ ಅಲರ್ಟ್ ಆದ ವಿಜಯನಗರ ಠಾಣೆ ಪೊಲೀಸರು ಕೆಲವೇ ಘಂಟೆಗಳಲ್ಲಿ ಆರೋಪಿಗಳನ್ನು ಕೆ ಆರ್ ನಗರದ ಹಂಪಾಪುರ ಬಳಿ ವಶಕ್ಕೆ ಪಡೆದು ಲೋಕೇಶ್ ಅವರನ್ನು ರಕ್ಷಿಸಿದ್ದಾರೆ.
ಲೋಕೇಶ್ ಕುಟುಂಬ ದಿಂದ ಹಣ ಪಡೆಯಲು ಹೋಗಿದ್ದ ಮತ್ತೊಬ್ಬ ಆರೋಪಿ ಪ್ರೀತಮ್ ತಲೆಮರೆಸಿಕೊಂಡಿದ್ದು, ಶೀಘ್ರವೆ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಸಂತೋಷ್ ಮೂಲತಃ ಮಂಡ್ಯ ಜಿಲ್ಲೆ, ಕೆ ಆರ್ ಎಸ್ ರಸ್ತೆಯ ಪಂಪ್ ಹೊಸಳ್ಳಿ ಗ್ರಾಮದವನು,ಈತನಿಗೆ ಲೋಕೇಶ್ ಪರಿಚಯವಿತ್ತು ಮತ್ತು ಲೋಕೇಶ್ ಫೈನಾನ್ಸ್, ರಿಯಲ್ ಎಸ್ಟೇಟ್ ನಲ್ಲಿ ಹಣ ಮಾಡಿರುವ ವಿಚಾರ ಗೊತ್ತಿದ್ದು ಈತ ತನ್ನ ಗ್ರಾಮದವರೇ ಆದ ಪ್ರಜ್ವಲ್, ಪ್ರೀತಮ್, ದರ್ಶನ್ ಹಾಗೂ ಮೇಟಗಳ್ಳಿ ನಿವಾಸಿ ಅಭಿಷೇಕ್ ಅವರೊಂದಿಗೆ ಸೇರಿ ಲೋಕೇಶ್ ರನ್ನು ಕಿಡ್ನಾಪ್
ಮಾಡಲು ಸಂಚು ರೂಪಿಸಿದ್ದರು.

ಲೋಕೇಶ್ ರನ್ನು ಒತ್ತೆಯಾಳಾಗಿ ಇರಿಸಿಕೊಂಡು ಹಣ ಮಾಡಿಕೊಳ್ಳಬಹುದು ಎಂಬ ದುರುದ್ದೇಶ ದಿಂದ ಸುಮಾರು 15 ದಿನ ಅವರನ್ನು ಹಿಂಬಾಲಿಸಿ ಹೊಂಚು ಹಾಕಿದ್ದರು.
ಡಿ.6 ರಂದು ರಾತ್ರಿ ಹೇರಿಟೇಜ್ ಕ್ಲಬ್ ನಿಂದ ಹೊರಬಂದ ಲೋಕೇಶ್ ರನ್ನ ಅಪಹರಿಸಿ ಪತ್ನಿ ಗೆ ಒಂದು ಕೋಟಿ ರೂ ಹಣ ಕಳುಹಿಸುವಂತೆ ಡಿಮ್ಯಾಂಡ್ ಮಾಡಿದ್ದರು. ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.

ಈ ಬಗ್ಗೆ ಪತ್ನಿ ನಯನ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣವನ್ನು ಗಂಭೀರ ವಾಗಿ ಪರಿಗಣಿಸಿ ಎರಡು ಮೂರು ತಂಡಗಳನ್ನ ರಚಿಸಿ ಕಾರ್ಯಾಚರಣೆ ಆರಂಭಿಸಲಾಯಿತು.
ಘಟನೆ ನಡೆದ ಕೆಲವೇ ಗಂಟೆ ಗಳಲ್ಲಿ ಪೊಲೀಸರು ಕೆ ಆರ್ ನಗರ ಹಂಪಾಪುರ ಬಳಿ ಲೋಕೇಶ್ ರನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ವಿಜಯನಗರ ಎಸಿಪಿ ರವಿ ಪ್ರಸಾದ್, ಇನ್ಸ್ಪೆಕ್ಟರ್ ಎಸ್ ಡಿ ಸುರೇಶ್ ಕುಮಾರ್, ಸಬ್ ಇನ್ಸ್ಪೆಕ್ಟರ್ ಗಳಾದ ಜೈ ಕೀರ್ತಿ ಎಂ, ಆನಂದ್ ಹಾಗೂ ಸಿಬ್ಬಂದಿ ಶಂಕರ್, ವೆಂಕಟೇಶ್, ಸುನೀಲ್, ಗಂಗಾಧರ್, ಲಿಖಿತ್, ಮಂಜುನಾಥ್, ಲೋಕೇಶ್, ಚಾಲಕ ಗಿರೀಶ್ ಭಾಗವಹಿಸಿದ್ದರು.

ಅಪಹರಣವಾಗಿದ್ದ ವ್ಯಕ್ತಿಯನ್ನ ರಕ್ಷಿಸಿ ಆರೋಪಿಗಳನ್ನು ಬಂಧಿಸಿದ ಇಡೀ ತಂಡಕ್ಕೆ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಉಪ ಪೊಲೀಸ್ ಆಯುಕ್ತರುಗಳಾದ ಬಿಂದುಮಣಿ ಹಾಗೂ ಸುಂದರರಾಜ್ ಅಭಿನಂದಿಸಿದ್ದಾರೆ.

ಅಪಹರಣವಾಗಿದ್ದ ಕೆಲ ಗಂಟೆಗಳಲ್ಲೇ ಲೋಕೇಶ್ ರನ್ನು ರಕ್ಷಿಸಿದ ಪೊಲೀಸರು Read More

ಡಾ. ಬಿ ಆರ್ ಅಂಬೇಡ್ಕರ್ 69ನೇ ಮಹಾ ಪರಿನಿಬ್ಬಾಣ ದಿನ-ಸೇವಾಕಾರ್ಯ

ಮೈಸೂರು: .ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಡಾ. ಬಿ ಆರ್ ಅಂಬೇಡ್ಕರ್ 69ನೇ ಮಹಾ ಪರಿನಿಬ್ಬಾಣ ದಿನದ ಪ್ರಯುಕ್ತ‌ ಸೇವಾಕಾರ್ಯ ಹಮ್ಮಿಕೊಳ್ಳಲಾಯಿತು.

ನಗರದ ಸರಸ್ವತಿಪುರಂನಲ್ಲಿರುವ ಸಾನಿಧ್ಯ ವೃದ್ಧಾಶ್ರಮದ ಹಿರಿಯ ನಾಗರಿಕ ಬಂಧುಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ವತಿಯಿಂದ ಹಣ್ಣು ಹಂಪಲು ವಿತರಿಸುವ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಾಪರಿನಿಬ್ಬಾಣ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿ ಗೌರವ ನಮನ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಹಿರಿಯ ಕ್ರೀಡಾಪಟು ಮಹದೇವ್, ಭಾರತ ರತ್ನ ಡಾ ಬಿ ಆರ್ ಅಂಬೇಡ್ಕರ್ ಅವರ 69ನೇ ಮಹಾಪರಿ ನಿಬ್ಬಣ ದಿನವನ್ನು ಇಂದಿನ ಯುವಪೀಳಿಗೆ ಸ್ಮರಿಸಬೇಕು ಎಂದು ಹೇಳಿದರು.
ಅಂಬೇಡ್ಕರ್ ಅವರ ಆದರ್ಶ, ತತ್ವ ಸಿದ್ಧಾಂತವನ್ನು ಅಳವಡಿಸಿಕೊಂಡು ಅವರು ನೀಡಿರುವ ಸಂವಿಧಾನ ಅಡಿಯಲ್ಲಿ ಎಲ್ಲರೂ ಶಾಂತಿಯುತವಾಗಿ ಸಹ ಬಾಳ್ವೆಯೊಂದಿಗೆ ಬಾಳಬೇಕು ಎಂದು ತಿಳಿಸಿದರು.

ಸ್ನೇಹ ಬಳಗವು ಸೇವಾ ಕಾರ್ಯದೊಂದಿಗೆ ಗೌರವ ನಮನ ಸಲ್ಲಿಸುತ್ತಿರುವುದು ಅತ್ಯಂತ ಸಂತೋಷಕರ ಸಂಗತಿ ಎಂದು ಹೇಳಿದರು.
ಜೆ.ಡಿ.ಎಸ್. ಕಾರ್ಯಾಧ್ಯಕ್ಷ ಎಸ್ ಪ್ರಕಾಶ್ ಪ್ರಿಯದರ್ಶನ್ ಮಾತನಾಡಿ,ಡಾ. ಬಿ. ಆರ್.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವನ್ನು ಭಾರತದ ಪ್ರತಿಯೊಬ್ಬ ಪ್ರಜೆಯು ಅಳವಡಿಸಿಕೊಂಡು ಬದುಕುತ್ತಿದ್ದೇವೆ ಎಂದು ತಿಳಿಸಿದರು.

ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ಮತದಾನದ ಹಕ್ಕನ್ನು ನೀಡಿರುವ ಈ ಆದರ್ಶ ಪುರುಷ ಭೌತಿಕವಾಗಿ ನಮ್ಮ ಜೊತೆ ಇಲ್ಲದೆ ಇರಬಹುದು ಆದರೆ ಅವರ ನಡೆದು ಬಂದ ಹಾದಿ ಅವರ ಆದರ್ಶ ವ್ಯಕ್ತಿತ್ವ ನಮಗೆಲ್ಲರಿಗೂ ಸದಾ ಪ್ರೇರಣೆಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮ ದಲ್ಲಿ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್,ಸಿಂಚನಗೌಡ (ಮಂಗಳಮುಖಿ), ವಿದ್ಯಾ, ಛಾಯಾ,ಗಾಯಕ ಯಶವಂತ್ ಕುಮಾರ್, ರಾಜೇಶ್ ಕುಮಾರ್, ಮಹೇಶ, ನಿರೀಕ್ಷಿತ್,ದತ್ತ ಮತ್ತಿತರರು ಹಾಜರಿದ್ದರು.

ಡಾ. ಬಿ ಆರ್ ಅಂಬೇಡ್ಕರ್ 69ನೇ ಮಹಾ ಪರಿನಿಬ್ಬಾಣ ದಿನ-ಸೇವಾಕಾರ್ಯ Read More

ಹೊದಿಕೆ ವಿತರಣಾ ಅಭಿಯಾನ 6ನೇದಿನಕ್ಕೆ

ಮೈಸೂರು: ಮೈಸೂರಿನ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ
ಚಳಿಗಾಲದ ಹೊದಿಕೆ ವಿತರಣಾ ಅಭಿಯಾನವು 6ನೇದಿನ ಕೂಡಾ ಮುಂದುವರೆಯಿತು.

ಚಾಮರಾಜ ಜೋಡಿ ರಸ್ತೆ, ಅಗ್ರಹಾರ ರಸ್ತೆಯಲ್ಲಿ ರಸ್ತೆ ಬದಿ ಮಲಗಿರುವ ನಿರಾಶ್ರಿತರಿಗೆ ಹೊದಿಕೆ ವಿತರಿಸಲಾಯಿತು.
ಹೊದಿಕೆ ವಿತರಣೆ ಕೈಜೋಡಿಸಿದ
ಯುವ ಭಾರತ್ ಸಂಘಟನೆಯ ಅಧ್ಯಕ್ಷರಾದ ಜೋಗಿ ಮಂಜು,ಬೆಳಕು ಸಂಸ್ಥೆಯ ಅಧ್ಯಕ್ಷರಾದ ಕೆಎಂ ನಿಶಾಂತ್ ಅವರಿಗೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್ ಅಭಿನಂದನೆ ಸಲ್ಲಿಸಿದ್ದಾರೆ.

ಹೊದಿಕೆ ವಿತರಣಾ ಅಭಿಯಾನ 6ನೇದಿನಕ್ಕೆ Read More

ಭುವನೇಶ್ವರಿ ದೇವಿಯನ್ನು ನಾಡ ದೇವತೆಯಾಗಿ ಘೋಷಣೆ ಮಾಡಲು ಮನವಿ

ಮೈಸೂರು: ಕರ್ನಾಟಕ ರಾಜ್ಯದ ನಾಡ ದೇವತೆಯಾಗಿ ಕನ್ನಡ ತಾಯಿ ಭುವನೇಶ್ವರಿ ದೇವಿ ಯನ್ನು ಅಧಿಕೃತವಾಗಿ ಘೋಷಣೆ ಮಾಡುವಂತೆ ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಕೋರಿದ್ದಾರೆ.

ಪ್ರಸ್ತುತ ಚಾಮುಂಡೇಶ್ವರಿ ದೇವಿಯನ್ನು ನಾಡ ದೇವತೆಯಾಗಿ ಕರೆಯಲಾಗುತ್ತಿದೆ ಆದರೆ ಚಾಮುಂಡೇಶ್ವರಿ ದೇವಿಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ( ಬೀದರ್ ಇಂದ ಚಾಮರಾಜನಗರ ) ವರೆಗೂ ಹೆಚ್ಚಾಗಿ ಪೂಜಿಸುವುದು ಕಡಿಮೆ ಸುಮಾರು ನಾಲ್ಕು, ಐದು, ಜಿಲ್ಲೆಗಳಲ್ಲಿ ಹೆಚ್ಚಾಗಿ ಪೂಜಿಸುತ್ತಾರೆ.
ಅಖಂಡ ಕರ್ನಾಟಕದಾದ್ಯಂತ ಕನ್ನಡಿಗರು ಕನ್ನಡ ತಾಯಿ ಭುವನೇಶ್ವರಿ ದೇವಿ ಯನ್ನು ಪೂಜಿಸಿ ಆರಾಧಿಸುತ್ತಿದ್ದಾರೆ,ರಾಜ್ಯ ಸರ್ಕಾರ ವಿಧಾನ ಸೌಧದಲ್ಲಿ ಕನ್ನಡ ತಾಯಿ ಭುವನೇಶ್ವರಿ ದೇವಿಯ ಭವ್ಯ ಪ್ರತಿಮೆ ಯನ್ನು ಸ್ಥಾಪಿಸಿರುವುದೇ ಸಾಕ್ಷಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೆ ಈಗಾಗಲೇ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕನಾಗಿ ವಿಶ್ವ ಗುರು ಬಸವಣ್ಣ ನವರನ್ನು ಅಧಿಕೃತವಾಗಿ ಘೋಷಣೆ ಮಾಡಿದೆ
ಆದ ಕಾರಣ ರಾಜ್ಯ ಸರ್ಕಾರ ಈ ಮೇಲಿನ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ಕೂಡಲೇ ನಾಡ ದೇವತೆಯಾಗಿ ಭುವನೇಶ್ವರಿ ದೇವಿಯನ್ನು ಅಧಿಕೃತವಾಗಿ ಘೋಷಣೆ ಮಾಡಬೇಕು ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯಿಸಿದ್ದಾರೆ.

ಭುವನೇಶ್ವರಿ ದೇವಿಯನ್ನು ನಾಡ ದೇವತೆಯಾಗಿ ಘೋಷಣೆ ಮಾಡಲು ಮನವಿ Read More