ಡಿ. 21 ರಂದು ಮೈಸೂರಿನಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ

ಮೈಸೂರು: ಇದೇ ಡಿ. 21 ರಂದು ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
5 ವರ್ಷದೊಳಗಿನ ಪ್ರತಿ ಮಗುವಿಗೆ ತಪ್ಪದೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಕರೆ ನೀಡಿದ್ದಾರೆ.

ಜಿಲ್ಲಾ ಪಂಚಾಯತ್ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಕುರಿತ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಡಿಸೆಂಬರ್ 21 ರಂದು ಬೆಳಗ್ಗೆ 8 ರಿಂದ ಸಂಜೆ 5 ಗಂಟೆ ವರೆಗೆ ಬೂತ್ ಮಟ್ಟದಲ್ಲಿ ಲಸಿಕೆ ನೀಡಲಾಗುತ್ತದೆ. ಡಿಸೆಂಬರ್ 22 ರಿಂದ ಡಿಸೆಂಬರ್ 24 ರವರೆಗೆ ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್ 21 ರಿಂದ 24 ರವರೆಗೆ 4 ದಿನಗಳು ಸಂಚಾರ ಕೇಂದ್ರಗಳು ಹಾಗೂ ಹೆಚ್ಚಿನ ಅಪಾಯ ಪ್ರದೇಶಗಳಲ್ಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಡಿಸೆಂಬರ್ 21ಕ್ಕೆ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿಯೊಂದು ಮಗುವಿಗೂ ತಪ್ಪಿದೆ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ. ಪಲ್ಸ್ ಪೋಲಿಯೋ ಲಸಿಕೆ ನೀಡಲು ಅಗತ್ಯವಿರುವ ಸಿಬ್ಬಂದಿಗಳಿಗೆ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಿ. ರೂಟ್ ಮ್ಯಾಪ್ ಗಳನ್ನು ಸಮರ್ಪಕವಾಗಿ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಡಾ.ಸುದೀರ್ ನಾಯಕ್ ಮಾತನಾಡಿ, ಕಳೆದ 14 ವರ್ಷಗಳಿಂದ ದೇಶದಲ್ಲಿ ಯಾವುದೇ ಪೋಲಿಯೋ ಪ್ರಕರಣಗಳು ಕಂಡು ಬಂದಿಲ್ಲ. ಕರ್ನಾಟಕದಲ್ಲಿ 2007ರಲ್ಲಿ ಕೊನೆಯದಾಗಿ ಒಂದು ಪೋಲಿಯೋ ಪ್ರಕರಣ ಕಂಡುಬಂದಿತ್ತು. ನಂತರ ಯಾವುದೇ ಪೋಲಿಯೋ ಪ್ರಕರಣಗಳು ಕಂಡು ಬಂದಿಲ್ಲ. ಪೋಲಿಯೋ ಲಸಿಕೆ ಹಾಕಿಸಿದ ಮಗುವಿನ ಬೆರಳಿಗೆ ಇಂಕ್ ಹಾಕಲಾಗುವುದು. ಇದರಿಂದ ಯಾರಿಗೆ ಲಸಿಕೆ ಹಾಕಲಾಗಿದೆ ಎಂಬುದನ್ನು ಹಾಗೂ ಎರಡೆರಡು ಬಾರಿ ಲಸಿಕೆ ಹಾಕಿಸುವುದನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 5 ವರ್ಷದೊಳಗಿನ 2,22,084 ಮಕ್ಕಳು ಇದ್ದಾರೆ.ಅವರೆಲ್ಲರಿಗೂ‌ ಲಸಿಕೆ ನೀಡುವ ಗುರಿ ಹೊಂದಲಾಗಿದೆ. 1648 ಬೂತ್ ಗಳಲ್ಲಿ ಲಸಿಕೆ ನೀಡಲಾಗುತ್ತದೆ. 50 ಮೊಬೈಲ್ ಟೀಮ್ ಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಕ್ ತನ್ವೀರ್ ಆಸಿಫ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ ಕುಮಾರ್ ಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜು, ಆರ್.ಸಿ.ಹೆಚ್ ಅಧಿಕಾರಿ ಮಹಮ್ಮದ್ ಸಿರಾಜ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಡಿ. 21 ರಂದು ಮೈಸೂರಿನಲ್ಲಿ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ Read More

ಮಾಲೀಕರ ವಿರುದ್ಧ ಮಹಿಳಾ ಉದ್ಯೋಗಿ ನೀಡಿದ್ದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಟ್ವಿಸ್ಟ್

ಮೈಸೂರು: ಕೂರ್ಗಳ್ಳಿ ಕೈಗಾರಿಕಾ ಬಡಾವಣೆಯಲ್ಲಿರುವ ಪ್ರಿಸೈಸ್ ಗೇರ್ಸ್ ಅಂಡ್ ಟರ್ಬೈನ್ ಸಲ್ಯೂಷನ್ ಸಂಸ್ಥೆ ಮಾಲೀಕ ಮುರಳೀಧರ್ ವಿರುದ್ದ ಮಹಿಳಾ ಉದ್ಯೋಗಿಯೊಬ್ಬರು ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದೆ.

ಒಂದು ತಿಂಗಳ ಹಿಂದೆ ಕಾರ್ಖಾನೆ ಮಾಲೀಕರಾದ ಮುರಳಿಧರ್ ಮಹಿಳಾ ಉದ್ಯೋಗಿ ಸೇರಿದಂತೆ ಮೂವರ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಗಿರೀಶ್ ಹಾಗೂ ಅಜಯ್ ಎಂಬುವರ ಜೊತೆ ಸೇರಿಕೊಂಡು ಮಹಿಳಾ ಉದ್ಯೋಗಿ ಸಂಸ್ಥೆಗೆ ಸೇರಿದ 27 ಲಕ್ಷ ಹಣ ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ.

ಅಲ್ಲದೆ ಸಂಸ್ಥೆಗೆ ಸೇರಿದ ಗೌಪ್ಯ ವ್ಯವಹಾರಗಳನ್ನ ಆಕೆ ಬಹಿರಂಗಪಡಿಸಿದ್ದಾರೆ,ಒಳಸಂಚು ನಡೆಸಿ ಸಂಸ್ಥೆಗೆ ನಂಬಿಕೆ ದ್ರೋಹ ಬಗೆದಿದ್ದಾರೆಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ.

ಇದಾದ ನಂತರ ಮಹಿಳೆ ಮಾಲೀಕನ ವಿರುದ್ದ ಲೈಂಗಿಕ ಕಿರುಕುಳ ದಾಖಲಿಸಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಈ ಸಂಬಂಧ ಪೊಲೀಸರು ಕೂಲಂಕುಶವಾಗಿ ಪರಿಶೀಲನೆ ನಡೆಸಿ ನಿಜವಾದ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಮುರುಳೀಧರ್ ಮತ್ತು ಅವರ ಕಡೆಯವರು ಆಗ್ರಹಿಸಿದ್ದಾರೆ.

ಮಾಲೀಕರ ವಿರುದ್ಧ ಮಹಿಳಾ ಉದ್ಯೋಗಿ ನೀಡಿದ್ದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಟ್ವಿಸ್ಟ್ Read More

ಮಕ್ಕಳ ಶೈಕ್ಷಣಿಕ,ಸಾಂಸ್ಕೃತಿಕ ಚಟುವಟಿಕೆಗೆ ಪ್ರೋತ್ಸಾಹ ಅಗತ್ಯ-ಮಲ್ಲಿಕಾರ್ಜುನ ಸ್ವಾಮಿ

ಮೈಸೂರು: ಮಕ್ಕಳು ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಅಭಿವೃದ್ಧಿಯಾಗಲು ಪ್ರೋತ್ಸಾಹ ಅಗತ್ಯ
ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ. ಎನ್ ಮಲ್ಲಿಕಾರ್ಜುನ ಸ್ವಾಮಿ ತಿಳಿಸಿದರು.

ಮಕ್ಕಳ ಮನಸ್ಸು ಸೂಕ್ಷ್ಮವಾಗಿದ್ದು ಮನಸ್ಸು ಸುಂದರ ಹಾಗೂ ಮೃದು ಹಾಗಾಗಿ ಗೆಲುವಿನ ಹಾದಿಯಲ್ಲಿ ಸಾಗುವ ರೀತಿ ಅವರಿಗೆ ಸ್ವತಂತ್ರ್ಯ ನೀಡಬೇಕು ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕರ್ನಾಟಕ ಕಲಾಮಂದಿರ ಆವರಣದಲ್ಲಿರುವ ಕಿರುರಂಗಮoದಿರದಲ್ಲಿ ಆಯೋಜಿಸಿದ್ದ, ಕಲಾ ಪ್ರತಿಭೋತ್ಸವ 2025-26 ಬಾಲ ಪ್ರತಿಭೆ, ಕಿಶೋರ ಪ್ರತಿಭೆ ಹಾಗೂ ಯುವ ಪ್ರತಿಭೆಗಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪಾಲಕರು ತಮ್ಮ ಮಕ್ಕಳ ಬಗ್ಗೆ ಮತ್ತು ಅವರ ಜ್ಞಾನ ತಿಳುವಳಿಕೆ ಮಟ್ಟ ಇವುಗಳ ಬಗ್ಗೆ ಯಾವಾಗಲೂ ಸಕಾರಾತ್ಮಕ ಭಾವನೆ ಹಾಗೂ ಒಳ್ಳೆಯ ದೃಷ್ಟಿಕೋನ ಹೊಂದಿರಬೇಕು ಎಂದು ಸಲಹೆ ನೀಡಿದರು.
ಶಾಲೆ ಹಾಗೂ ಮನೆ ಎರಡರಲ್ಲೂ ಮಗುವನ್ನು ಪ್ರೋತ್ಸಾಹಿಸಿದರೆ ಮಕ್ಕಳು ಸಮರ್ಥ ಪ್ರಜೆಯಾಗಿ ಹೊರಹೊಮ್ಮುತ್ತಾರೆ. ಮಕ್ಕಳು ಸೋಲನ್ನು ಸವಾಲಾಗಿ ಸ್ವೀಕರಿಸಿ ಗೆಲ್ಲುವ ಮನೋಸ್ಥೈರ್ಯ ತುಂಬುವುದು ಪೋಷಕರ ಕರ್ತವ್ಯವಾಗಿದೆ ಎಂದು ಹೇಳಿದರು.

ಪೋಷಕರು ಮಕ್ಕಳಿಗೆ ಸ್ವಾತಂತ್ರ್ಯ ನೀಡುವುದರ ಜತೆಗೆ ಕೆಲವು ನಿಯಂತ್ರಣವನ್ನೂ ಹಾಕಬೇಕು. ಮಕ್ಕಳು ತಮ್ಮ ವ್ಯಕ್ತಿತ್ವದ ನಿರ್ಮಾಣದ ಕಡೆಗೆ ಹೆಚ್ಚು ಗಮನ ಹರಿಸಬೇಕು. ಇದಕ್ಕೆ ಪೂರಕವಾಗಿ ಮಕ್ಕಳೂ ಸಹ ತಮ್ಮ ಓದಿನ ಬಗ್ಗೆ ಗಮನ ನೀಡಬೇಕು. ಉತ್ತಮ ವಿಚಾರಗಳನ್ನು ಆಸಕ್ತಿಯಿಂದ ಕಲಿಯಬೇಕು ಎಂದು ಮಲ್ಲಿಕಾರ್ಜುನ ಸ್ವಾಮಿ ತಿಳಿಹೇಳಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಿ. ಉದಯ್ ಕುಮಾರ್ ಅವರು ಮಾತನಾಡಿ ಮಕ್ಕಳೊಂದಿಗೆ ಸಂವಾದ ನಡೆಸಬೇಕು, ಅವರಲ್ಲಿ ಪಠ್ಯದ ಕುರಿತು ಆಸಕ್ತಿ ಹೆಚ್ಚಿಸಬೇಕು ಅವರ ಮನಸ್ಸನ್ನು ತಮ್ಮ ಬೋಧನೆಯತ್ತ ತಿರುಗಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಎಂ.ಡಿ ಸುದರ್ಶನ್, ತೀರ್ಪುಗಾರರಾದ ಶ್ರೀವಾಣಿ, ಲಕ್ಷ್ಮಿ, ರಮ್ಯಾ, ಅನಿತಾ, ಆನಂದ್ ಕುಮಾರ್, ರಮೇಶ್ ಚಂದ್ರ, ಎ ಪಿ ಚಂದ್ರಶೇಖರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಮಕ್ಕಳ ಶೈಕ್ಷಣಿಕ,ಸಾಂಸ್ಕೃತಿಕ ಚಟುವಟಿಕೆಗೆ ಪ್ರೋತ್ಸಾಹ ಅಗತ್ಯ-ಮಲ್ಲಿಕಾರ್ಜುನ ಸ್ವಾಮಿ Read More

ಅಜೀಜ್ ಸೇಟ್ ರ ಹೆಸರಿನ ನಾಮಫಲಕಕ್ಕೆ ಮಸಿ:ತೇಜಸ್ವಿ ಖಂಡನೆ

ಮೈಸೂರು: ಮಾಜಿ ಸಚಿವ ದಿವಂಗತ
ಅಜೀಜ್ ಸೇಟ್ ಅವರ ಹೆಸರಿನ ನಾಮಫಲಕಕ್ಕೆ ಮಸಿ ಬಳಿದಿರುವುದು ಸರಿಯಲ್ಲ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಖಂಡಿಸಿದ್ದಾರೆ.

ಅಜೀಜ್ ಸೇಠ್ ಅವರ ಕೊಡುಗೆ ಮೈಸೂರಿಗೆ ಅಪಾರ, ಅವರಿಗೆ ಅಪಮಾನ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಅಜೀಜ್ ಸೇಟ್ ಅವರು ಮೈಸೂರಿನ ಪ್ರಭಾವಿ ರಾಜಕಾರಣಿ ಯಾಗಿದ್ದರು, ಅಜೀಜ್ ಅವರು ಮೈಸೂರು ಜಿಲ್ಲೆಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಅಂತವರ ಇತಿಹಾಸ ಅರಿಯದೆ ಅವರ ಹೆಸರಿರುವ ವೃತ್ತಕ್ಕೆ ಕಪ್ಪು ಮಸಿ ಬಳಿದಿರುವುದು ಬೇಸರ ತಂದಿದೆ ಎಂದು ತೇಜಸ್ವಿ ತಿಳಿಸಿದ್ದಾರೆ.

ಅಜೀಜ್ ಸೇಟ್ ಅವರು ದೇವರಾಜ ಅರಸು ಅವರ ಆತ್ಮೀಯರಾಗಿದ್ದರು ಮತ್ತು ಅವರ ಸಂಪುಟದಲ್ಲಿ ಕಾರ್ಮಿಕ,ಕಂದಾಯ, ವಕ್ಫ್ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಅವರು ಕರ್ನಾಟಕ ರಾಜ್ಯದ ಪ್ರಥಮ ಎಂ ಎಲ್ ಸಿ ಆಗಿದ್ದರು ಅಲ್ಲದೆ ಕನ್ನಡ ಹೋರಾಟಗಾರರ ಮೇಲೆ ಅಪಾರ ಪ್ರೀತಿ ಹೊಂದಿದ್ದ ಏಕೈಕ ಮುಸ್ಲಿಂ ನಾಯಕ ಯಾರಾದರೂ ಇದ್ದರೆ ಅದು ಅಜೀಜ್ ಸೇಟ್ ಅವರು ಎಂದು ತೇಜಸ್ವಿ ನಾಗಲಿಂಗಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

ಕೆಲವು ದಿನಗಳ ಹಿಂದೆ ಅಜೀಜ್ ಸೇಟ್ ಅವರ ಇತಿಹಾಸ ತಿಳಿಯದೆ ಅವರ ಹೆಸರಿರುವ ಕಂಬಕ್ಕೆ ಯಾರೊ ಮಸಿ ಬಳಿದಿರುವುದು ಮನಸ್ಸಿಗೆ ನೋವುಂಟು ಮಾಡಿದೆ ಈ ಘಟನೆಯಿಂದಾಗಿ ಅವರ ಕುಟುಂಬಕ್ಕೆ ಮತ್ತು ಅವರ ಅಭಿಮಾನಿಗಳಿಗೆ ಕನ್ನಡಪರ ಹೋರಾಟಗಾರನಾಗಿ ವೈಯಕ್ತಿಕ ವಾಗಿ ವಿಷಾಧ ವ್ಯಕ್ತಪಡಿಸುತ್ತೇನೆ ಎಂದು ತೇಜಸ್ವಿ ತಿಳಿಸಿದ್ದಾರೆ.

ಅಜೀಜ್ ಸೇಟ್ ಅಂತಹ ಶ್ರೇಷ್ಠ ರಾಜಕಾರಣಿ ನರಸಿಂಹ ರಾಜ ಕ್ಷೇತ್ರದಿಂದ ಸುದಿರ್ಘ ವಾಗಿ ಜನರಿಂದ ಆಯ್ಕೆಯಾದ ರಾಜಕಾರಣಿ,ಅವರು ಮೈಸೂರಿನವರು ಎಂದು ಹೇಳಲು ಹೆಮ್ಮೆ ಪಡುವ ವಿಷಯ ಎಂದಿದ್ದಾರೆ.

ಪೋಲಿಸ್ ಇಲಾಖೆ ಇಂತಹ ಮಹಾನೀಯರ ವೃತ್ತಿಗಳಲ್ಲಿ ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತೇಜಸ್ವಿ ನಾಗಲಿಂಗಸ್ವಾಮಿ ಮನವಿ ಮಾಡಿದ್ದಾರೆ..

ಅಜೀಜ್ ಸೇಟ್ ರ ಹೆಸರಿನ ನಾಮಫಲಕಕ್ಕೆ ಮಸಿ:ತೇಜಸ್ವಿ ಖಂಡನೆ Read More

ಪ್ರಧಾನಿ ವಿರುದ್ಧ ಅವಹೇಳನಕಾರಿ ವೀಡಿಯೋ: ನಾಳೆಯಿಂದ ಬಿಜೆಪಿ ಪ್ರತಿಭಟನೆ

ಮೈಸೂರು: ದೇಶದ ಪ್ರಧಾನಿಯವರನ್ನು ನಿಂದಿಸಿರುವವರಿಗೆ ಕಠಿಣ ಶಿಕ್ಷೆ ಜಾರಿಯಾಗಬೇಕೆಂದು ಆಗ್ರಹಿಸಿ ನಾಳೆಯಿಂದ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಸಂಸದ ಯದುವೀರ್ ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತ ಅವಹೇಳನಕಾರಿ ವೀಡಿಯೋ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸುವ ವೀಡಿಯೋಗಳನ್ನು ಹರಿಯಬಿಟ್ಟಿರುವ ಫಾಹಾದ್‌, ಬಾಸಿಲ್‌, ಸಮೀರ್‌ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇಷ್ಟು ಮಾತ್ರ ಸಾಲದು ಇವರಿಗೆ ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಯದುವೀರ್‌ ಆಗ್ರಹಿಸಿದ್ದಾರೆ.

ಈ ಸಂಬಂಧ ಮಾಧ್ಯಮ ಹೇಳಿಕೆ ನೀಡಿರುವ ಯದುವೀರ್, ಇಂಥವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ತಕ್ಕ ಪಾಠ ಕಲಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಈಗ ಬಂಧಿತರಾಗಿರುವವರಿಗೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದ್ದಾರೆ.

ಈ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ಜಾರಿಯಾದರೆ ಮುಂದೆ ಇಂತಹ ಅಪರಾಧ ಎಸಗಲು ಭೀತಿ ಉಂಟಾಗಬೇಕು. ಈ ಸಂಬಂಧ ಪೊಲೀಸ್‌ ಅಧಿಕಾರಿಗಳೊಂದಿಗೆ ಈಗಾಗಲೇ ಮಾತನಾಡಿದ್ದು, ಕಠಿಣ ಕ್ರಮ ಜರುಗಿಸಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ಯದುವೀರ್ ಹೇಳಿದ್ದಾರೆ.

ಪ್ರಧಾನಿ ವಿರುದ್ಧ ಅವಹೇಳನಕಾರಿ ವೀಡಿಯೋ: ನಾಳೆಯಿಂದ ಬಿಜೆಪಿ ಪ್ರತಿಭಟನೆ Read More

ಆನ್ ಲೈನ್ ಗೇಮ್ ನಂಬಿ 40.71 ಲಕ್ಷ ಕಳೆದುಕೊಂಡ ಉದ್ಯಮಿ

ಮೈಸೂರು: ಮೋಸ ಹೋಗುವವರು ಇರುವ ತನಕ ಮೋಸದ ಆಟ ನಡೆಯುತ್ತಲೇ ಇರುತ್ತದೆ ಇದಕ್ಕೆ ಮೈಸೂರಿನಲ್ಲಿ ಒಂದು ಸ್ಪಷ್ಟ ಉದಾರಣೆ ಇದೆ.

ಆನ್ ಲೈನ್ ಗೇಮ್ ನಲ್ಲಿ ಹೆಚ್ಚಿನ ಲಾಭ ಗಳಿಸಬಹುದೆಂದು ನಂಬಿ ಹಣ ಹೂಡಿದ ಮೈಸೂರು ಉದ್ಯಮಿಯೊಬ್ಬರು 40.71 ಲಕ್ಷ ಹಣ ಕಳೆದುಕೊಂಡಿದ್ದಾರೆ.

ಅಶೋಕ ರಸ್ತೆಯ ಉದ್ಯಮಿ ರಾಕೇಶ್ ಹಣ ಕಳೆದುಕೊಂಡ ಉದ್ಯಮಿ.

ಪರಿಚಯದವರೊಬ್ಬರು ಹೇಳಿದ ಮಾತು ನಂಬಿ FUN IN MATCH 360 ಎಂಬ ಆಪ್ ಡೌನ್ ಲೋಡ್ ಮಾಡಿದ ರಾಕೇಶ್ ಎರಡು ಹಂತದಲ್ಲಿ 40.71 ಲಕ್ಷ ಹಣ ಹೂಡಿಕೆ ಮಾಡಿದ್ದಾರೆ.

ಖಾತೆಯಲ್ಲಿ ಹೆಚ್ಚಿನ ಲಾಭ ತೋರಿಸಿದೆ.ಹಣ ಡ್ರಾ ಮಾಡಲು ಮುಂದಾದಾಗ ತಾವು ವಂಚನೆಗೆ ಒಳಗಾಗಿರುವುದು ಖಚಿತವಾಗಿದೆ.
ಈ ಕುರಿತು ರಾಕೇಶ್ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆನ್ ಲೈನ್ ಗೇಮ್ ನಂಬಿ 40.71 ಲಕ್ಷ ಕಳೆದುಕೊಂಡ ಉದ್ಯಮಿ Read More

ಹನುಮಾನ್ ಜಯಂತಿ: ದೇವರಾಜ ಅರಸು ರಸ್ತೆಯಲ್ಲಿ ಅನ್ನದಾನ

ಮೈಸೂರು: ಹನುಮಾನ್ ಜಯಂತಿ ಅಂಗವಾಗಿ ಮೈಸೂರಿನ ದೇವರಾಜ ಅರಸು
ರಸ್ತೆಯಲ್ಲಿರುವ ಜಯದೇವ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ಶಾಸಕ ಹರೀಶ್ ಗೌಡ ಮತ್ತು ಅವರ ಪತ್ನಿ ಗೌರಿ ಅವರು ಪೂಜೆಯಲ್ಲಿ ಭಾಗಿಯಾಗಿ
ಆಂಜನೇಯ ಸ್ವಾಮಿಯ
ಆಶೀರ್ವಾದ ಪಡೆದರು.

ನಂತರ ಅನ್ನ ಸಂತರ್ಪಣೆಗೆ ಚಾಲನೆ ನೀಡಿದರು.
ಈ ವೇಳೆ ರಾಮರಾಜ,
ಕಿಶನ್ ಹರೀಶ್ ಗೌಡ, ಪುರುಷೋತ್ತಮ್, ನವೀನ್, ಕನಕ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ರವಿಚಂದ್ರ ಹಾಗೂ ಮತ್ತಿತರರು ಹಾಜರಿದ್ದರು.

ಹನುಮಾನ್ ಜಯಂತಿ: ದೇವರಾಜ ಅರಸು ರಸ್ತೆಯಲ್ಲಿ ಅನ್ನದಾನ Read More

ಕನ್ನಡ ನಾಮಫಲಕ:ಕನ್ನಡ ಹೋರಾಟಗಾರರ ತುರ್ತು ಸಭೆ ಕರೆಯಲು ತೇಜಸ್ವಿ ಆಗ್ರಹ

ಮೈಸೂರು: ಕನ್ನಡ ನಾಮಫಲಕ ವಿಷಯವಾಗಿ ಮೈಸೂರು ನಗರ ಪೋಲಿಸ್ ಆಯುಕ್ತರು ಮತ್ತು ಮೈಸೂರು ಮಹಾನಗರ ಪಾಲಿಕೆ ಆಯುಕ್ತರ ಅಧ್ಯಕ್ಷತೆಯಲ್ಲಿ ಕನ್ನಡ ಹೋರಾಟಗಾರರ ತುರ್ತು ಸಭೆ ನಡೆಸುವಂತೆ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಆಗ್ರಹಿಸಿದ್ದಾರೆ.

ಮೈಸೂರು ನಗರ ವ್ಯಾಪ್ತಿಯಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸಲು ಈಗಾಗಲೇ ಸರ್ಕಾರ ಆದೇಶ ನೀಡಿದ್ದರೂ ಸಹ ಕೆಲವರು ಮೈಸೂರು ನಗರದ ನಾನಾ ಭಾಗಗಳಲ್ಲಿ ಆಂಗ್ಲ ಭಾಷೆಯಲ್ಲಿ ಮತ್ತು ಬೇರೆ ಬೇರೆ ಭಾಷೆಗಳಲ್ಲಿ ನಾಮಫಲಕ ಹಾಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನು ಖಂಡಿಸಿ ಕನ್ನಡ ಹೋರಾಟಗಾರರು ಮೈಸೂರಿನ ಕೆಲವು ಭಾಗಗಳಲ್ಲಿ ನಾಮಫಲಕಗಳನ್ನು ತೆರವು ಗೊಳಿಸುವ ಮತ್ತು ಮಸಿ ಬಳಿಯುವ ಅಭಿಯಾನ ಕಾರ್ಯಗಳನ್ನು ಆರಂಭಿಸಿದ್ದಾರೆ,
ಈ ಸಂದರ್ಭದಲ್ಲಿ ಅಂಗಡಿಗಳ ಮಾಲಿಕರಿಗು ಮತ್ತು ಹೋರಾಟಗಾರರ ನಡುವೆ ವಾಗ್ವಾದ ಉಂಟಗುತ್ತಿರುವುದು ಕಂಡುಬರುತ್ತಿದೆ.
ಆದ್ದರಿಂದ ಪೋಲಿಸ್ ಆಯುಕ್ತರು ಮತ್ತು ಮೈಸೂರು ಮಹಾನಗರ ಪಾಲಿಕೆ ಆಯುಕ್ತರ ಅಧ್ಯಕ್ಷತೆಯಲ್ಲಿ ತುರ್ತಾಗಿ ಕನ್ನಡ ಹೋರಾಟಗಾರರ ಸಭೆ ನಡೆಸಬೇಕು.

ಈಗಾಗಲೇ ಕನ್ನಡ ನಾಮಫಲಕ ವಿಷಯವಾಗಿ ಕಾವೇರಿರುವ ಮೈಸೂರು ನಗರವನ್ನು ಶಾಂತಿ ಗೊಳಿಸುವ ನಿಟ್ಟಿನಲ್ಲಿ ಕನ್ನಡ ಹೋರಾಟಗಾರರ ಸಭೆ ನಡೆಸಿ ಅಹವಾಲು ಸ್ವೀಕಾರ ಮಾಡಬೇಕು ಎಂದು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಮೈಸೂರು ನಗರ ಪೋಲಿಸ್ ಆಯುಕ್ತರಿಗೆ ಮತ್ತು ಮೈಸೂರು ಮಹಾನಗರ ಪಾಲಿಕೆ ಆಯುಕ್ತರನ್ನು ಒತ್ತಾಯಿಸಿದ್ದಾರೆ.

ಕನ್ನಡ ನಾಮಫಲಕ:ಕನ್ನಡ ಹೋರಾಟಗಾರರ ತುರ್ತು ಸಭೆ ಕರೆಯಲು ತೇಜಸ್ವಿ ಆಗ್ರಹ Read More

ದಿನೇಶ್‌ ಕುಮಾರ್‌ ಲೋಕಾಯುಕ್ತ ಪೊಲೀಸರ ಕಸ್ಟಡಿಗೆ

ಮೈಸೂರು: ಮುಡಾ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ಅವರನ್ನು ಹೆಚ್ಚಿನ ವಿಚಾರಣೆಗೆ ಲೋಕಾಯುಕ್ತ ಪೊಲೀಸರ ಕಸ್ಟಡಿಗೆ ನೀಡಲು ಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಮೈಸೂರು ಲೋಕಾಯುಕ್ತ ಪೊಲೀಸರು, ಬೆಂಗಳೂರಿನಲ್ಲಿರುವ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಮುಡಾ ಹಗರಣದ ಹೆಚ್ಚಿನ ವಿಚಾರಣೆಗೆ ಮಾಜಿ ಆಯುಕ್ತ, ಹಾಲಿ ಜೈಲು ಶಿಕ್ಷೆಗೆ ಒಳಪಟ್ಟಿರುವ ದಿನೇಶ್‌ ಕುಮಾರ್‌ ಅವರನ್ನು ಕಸ್ಟಡಿಗೆ ನೀಡುವಂತೆ ಕೋರ್ಟ್‌ ಗೆ ಅರ್ಜಿ ಸಲ್ಲಿಸಿ ಕೋರಲಾಗಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ಮೈಸೂರು ಲೋಕಾಯುಕ್ತ ಪೊಲೀಸರ ಅರ್ಜಿ ಪುರಸ್ಕರಿಸಿ ಡಿ. 12 ರಂದು ಕಸ್ಟಡಿಗೆ ನೀಡುವಂತೆ ಆದೇಶಿಸಿದೆ.

ದಿನೇಶ್‌ ಕುಮಾರ್‌ ಲೋಕಾಯುಕ್ತ ಪೊಲೀಸರ ಕಸ್ಟಡಿಗೆ Read More

ಡೆವಿಲ್ ಚಿತ್ರದ ಯಶಸ್ಸಿಗಾಗಿ ಕುಂಬಳಕಾಯಿ ದೃಷ್ಟಿ ತೆಗೆದು ಪ್ರಾರ್ಥಿಸಿದ ಅಭಿಮಾನಿಗಳು

ಮೈಸೂರು: ಮೈಸೂರಿನ ಲಲಿತಾ ಮಹಲ್ ರಸ್ತೆ, ಶ್ರೀ ತೂಗುದೀಪ್ ಶ್ರೀನಿವಾಸ್ ವೃತ್ತದಲ್ಲಿ ವಿಶಿಷ್ಟ ವಾತಾವರಣ ನಿರ್ಮಾಣವಾಗಿತ್ತು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸ ಚಿತ್ರ ‘ಡೆವಿಲ್’ ಯಶಸ್ವಿಯಾಗಲಿ ಎಂಬ ಹಾರೈಕೆಯೊಂದಿಗೆ ಅಭಿಮಾನಿಗಳು ಬೃಹತ್ ಗಾತ್ರದ ಫ್ಲೆಕ್ಸ್ ಅಳವಡಿಸಿ, ಅದರ ಮುಂದೆ ತಾಯಿ ಚಾಮುಂಡೇಶ್ವರಿ ಭಾವಚಿತ್ರ ಇಟ್ಟು ವಿಶೇಷ ಪೂಜೆ ನೆರವೇರಿಸಿದರು.

ಅಭಿಮಾನಿಗಳು ಕಟೌಟ್ ಮುಂದೆ ಕುಂಬಳಕಾಯಿಯಲ್ಲಿ ದೃಷ್ಟಿ ತೆಗೆದು, ಹಾಲು-ಅಕ್ಷತೆ ನೀಡಿ, ಚಿತ್ರಕ್ಕೆ ಅಡಚಣೆಗಳಿಲ್ಲದೆ ಯಶಸ್ವಿಯಾಗಲಿ, ತಂಡ ಸುಗಮ ಪಯಣ ಕಂಡು ಜನ ಮೆಚ್ಚುಗೆಯನ್ನು ಗಳಿಸಲಿ ಎಂಬ ಸಂಕಲ್ಪ ಮಾಡಲಾಯಿತು.

ಹೂವಿನ ಹಾರಹಾಕಿ ಅಭಿಮಾನಿಗಳ ಘೋಷಣೆಯ ನಡುವೆ
ಡೆವಿಲ್ ಗೆಲ್ಲುವುದು ಪಕ್ಕ,
ದರ್ಶನ್ ಮತ್ತೊಮ್ಮೆ ಸಿನಿಮಾ ರಂಗದಲ್ಲಿ ಗರ್ಜಿಸಲಿ,ಎಂಬ ಘೋಷಣೆಗಳು ಮೊಳಗಿದವು.

ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿರುವ ಈ ಚಿತ್ರದ ಯಶಸ್ಸಿಗಾಗಿ ಮಾಡಿದ ಈ ಭಕ್ತಿಪರ ಕಾರ್ಯಕ್ರಮ ಅಭಿಮಾನಿಗಳ ನಿಷ್ಠೆ, ಭಾವ ಮತ್ತು ಸಿನಿಮಾ ಪ್ರೇಮಕ್ಕೆ ಸಾಕ್ಷಿಯಾಯಿತು.

ಕಾರ್ಯಕ್ರಮದಲ್ಲಿ ಬನ್ನೂರು ಮಹೇಂದ್ರ ಸಿಂಗ್ ಕಾಳಪ್ಪ, ಜಿ. ರಾಘವೇಂದ್ರ, ರವಿಕುಮಾರ್, ಬನ್ನೂರು ಚಂದನ್, ಹರೀಶ್ ನಾಯ್ಡು, ಎಸ್.ಎನ್. ರಾಜೇಶ್, ರಾಕೇಶ್, ಮಣಿ ದಚ್ಚು, ನವೀನ್ ಹಾಗೂ ಹಲವಾರು ಅಭಿಮಾನಿಗಳು ಪಾಲ್ಗೊಂಡಿದ್ದರು.

ಡೆವಿಲ್ ಚಿತ್ರದ ಯಶಸ್ಸಿಗಾಗಿ ಕುಂಬಳಕಾಯಿ ದೃಷ್ಟಿ ತೆಗೆದು ಪ್ರಾರ್ಥಿಸಿದ ಅಭಿಮಾನಿಗಳು Read More