ವೃದ್ಧಾಶ್ರಮದ ಹಿರಿಯರಿಂದ ಸ್ವಚ್ಛತೆಯ ಕಾಯಕ ಸೇವೆ
ಮೈಸೂರು: ಮೈಸೂರಿನ ಗೋಕುಲಂ ನಾಲ್ಕನೇ ಹಂತದಲ್ಲಿರುವ ಆನಂದ ಬಾಪುಜಿ ವೃದ್ಧಾಶ್ರಮದ ಸದಸ್ಯರು ಸ್ವಚ್ಛತೆ ಎಂದರೆ ಕೇವಲ ಕಾರ್ಯವಲ್ಲ, ಅದು ಕರ್ತವ್ಯ ಎಂಬ ಸಂದೇಶದೊಂದಿಗೆ ಸ್ವಚ್ಛತೆಯ ಕಾಯಕದಲ್ಲಿ ತೊಡಗಿಸಿಕೊಂಡು ಮಾದರಿಯಾಗಿದ್ದಾರೆ.
ವಯಸ್ಸಿನ ಮಿತಿ, ದೈಹಿಕ ಅಸೌಕರ್ಯಗಳ ನಡುವೆಯೂ ಹಿರಿಯ ನಾಗರಿಕರು ಪರಿಸರ ಸಂರಕ್ಷಣೆಯ ಮಹತ್ವವನ್ನು ಅರಿತು ಸ್ವಚ್ಛತಾ ಅಭಿಯಾನವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.
ವೃದ್ಧಾಶ್ರಮದ ಆವರಣ, ಪ್ರವೇಶ ದ್ವಾರ, ಸುತ್ತಮುತ್ತಲ ಪ್ರದೇಶವನ್ನು ಸ್ವಚ್ಛವಾಗಿ ಇಡಲಾಗಿದೆ. ಈ ಮೂಲಕ ಹಿರಿಯರು ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ಯುವಕರಿಗೆ ಮಾದರಿಯಾಗಿದ್ದಾರೆ ಎಂದು ಆಶ್ರಮದ ವ್ಯೆವಸ್ಥಾಪಕಿ ನಂದಾ ಪ್ರಸಾದ್ ತಿಳಿಸಿದರು.
ಈ ಸಂದರ್ಭದಲ್ಲಿ ವೃದ್ಧಾಶ್ರಮದ ಗೌರವ ಕಾರ್ಯದರ್ಶಿ ಡಾ. ಅಲೋಕ್ ಗುಪ್ತ ಮಾತನಾಡಿ,ಹಿರಿಯ ನಾಗರಿಕರು ಸಮಾಜದಿಂದ ದೂರವಾಗಬೇಕೆಂಬ ಭಾವನೆ ತಪ್ಪು. ನಾವು ಇನ್ನೂ ಸಮಾಜಕ್ಕೆ ಕೊಡುಗೆ ನೀಡುವ ಶಕ್ತಿ ಹೊಂದಿದ್ದೇವೆ. ಸ್ವಚ್ಛತೆ ಎಂಬುದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಹೇಳಿದರು.
ಈ ವೃದ್ಧಾಶ್ರಮದ ಪಕ್ಕದಲ್ಲಿ ದಾರಿಯಲ್ಲಿ ಹೋಗುವ ನಾಗರಿಕರು ವಾಹನದಲ್ಲಿ ಬಂದು ತಮ್ಮ ಮನೆಯ ತ್ಯಾಜ್ಯಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಸುರಿದು ಗುಡ್ಡೆ ಮಾಡಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವ ವಿಚಾರ ಎಂದು ಬೇಸರ ವ್ಯಕ್ತಪಡಿಸಿದರು.
ವೃದ್ಧಾಶ್ರಮದ ವಯೋವೃದ್ಧರು ಮುಂಜಾನೆ ಬೆಳಿಗ್ಗೆ 6 ಗಂಟೆಗೆ ಎದ್ದು ತಮ್ಮ ಆಶ್ರಮದ ಸ್ವಚ್ಛತೆಯ ಕಾಯಕದಲ್ಲಿ ತೊಡಗಿರುತ್ತಾರೆ . ಆದರೆ ಗೌರವಾನ್ವಿತ ಶಿಕ್ಷಿತ ನಾಗರಿಕರು ಕಸವನ್ನು ಹಾಕುತ್ತಿವುದನ್ನು ನಿಲ್ಲಿಸಿ ವಯೋವೃದ್ಧರ ಕಾಯಕಕ್ಕೆ ಗೌರವವನ್ನು ಕಡ್ಡಾಯವಾಗಿ ನೀಡಬೇಕು ಎಂದು ಆಗ್ರಹಿಸಿದರು.
ಲಯನ್ಸ್ ಕ್ಲಬ್ ಆಫ್ ಅಂಬಾಸಿಡರಸ್ ಸಂಸ್ಥೆಯ ಸದಸ್ಯರು ಹಾಗೂ ಲಯನ್ ಜಿಲ್ಲಾಧ್ಯಕ್ಷರಾದ ಲಯನ್ ಸಿ.ಆರ್ ದಿನೇಶ್ ರವರು ಈ ವೃದ್ದಾಶ್ರಮಕ್ಕೆ ತಮ್ಮ ಮನೆಯಲ್ಲಿರುವ ಹಳೆಯ ನಿಯತಕಾಲಿಕೆಗಳು ಮತ್ತು ಓದುವ ಪುಸ್ತಕಗಳನ್ನು ನೀಡುವ ಮೂಲಕ ತಮ್ಮ ಇಳಿವಹಿಸಿನಲ್ಲಿ ಓದುವ ಹವ್ಯಾಸಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿ ಮಾಡಲು ಸಹಾಯಕವಾಗಿದ್ದಾರೆ.
ಈ ಸ್ವಚ್ಛತೆಯ ಕಾಯಕವು ಹಿರಿಯರ ಶ್ರಮ, ಸೇವಾ ಭಾವನೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಎತ್ತಿ ತೋರಿಸಿದ್ದು ಸಮಾಜದಲ್ಲಿ ಸ್ವಚ್ಛತೆ ಹಾಗೂ ಪರಿಸರ ಜಾಗೃತಿಗೆ ಹೊಸ ಚೈತನ್ಯವನ್ನು ನೀಡಿದೆ ಎಂದು ಲಯನ್ ಸಿ.ಆರ್.ದಿನೇಶ್ ಅಭಿಪ್ರಾಯಪಟ್ಟರು.