ಕೊಲೆಯಾಗಿದ್ದ ಮಹಿಳೆ ಜೀವಂತ ಪತ್ತೆ!:3 ಪೊಲೀಸ್ ಅಧಿಕಾರಿಗಳು ಸಸ್ಪೆಂಡ್

ಮೈಸೂರು: ಕೊಲೆಯಾಗಿದ್ದ ಪತ್ನಿ ಜೀವಂತವಾಗಿ ಪತ್ತೆಯಾದ ಕುಶಾಲನಗರದ ಸುರೇಶ್ ಪ್ರಕರಣ ಸಂಬಂದ ಅಂದಿನ ತನಿಖಾಧಿಕಾರಿಗಳಾಗಿದ್ದ ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಅಂದಿನ ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ಸದ್ಯ ಕುಶಾಲನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಿ.ಜಿ.ಪ್ರಕಾಶ್, ಇಲವಾಲ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸಬ್ ಇನ್‌ಸ್ಪೆಕ್ಟರ್ ಮಹೇಶ್ ಕುಮಾರ್ ಮತ್ತು ಜಯಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಕಾಶ್ ಯತ್ತಿನಮನಿ ಅವರುಗಳನ್ನು ಪೊಲೀಸ್ ಇಲಾಖೆ ಅಮಾನತುಗೊಳಿಸಿದೆ.

ನಿರ್ಲಕ್ಷ್ಯ, ಕರ್ತವ್ಯ ಲೋಪ, ಸಾಕ್ಷ್ಯಾಧಾರಗಳ ರಚನೆ, ನ್ಯಾಯಾಲಯಕ್ಕೆ ಸುಳ್ಳು ಆರೋಪಪಟ್ಟಿ ಸಲ್ಲಿಸುವುದು ಮತ್ತು ತನಿಖೆಯಲ್ಲಿ ದೋಷಪೂರಿತ ಮತ್ತು ಅಸಡ್ಡೆ ತೋರಿದ ಆರೋಪದ ಮೇಲೆ ಅವರುಗಳನ್ನು ಅಮಾನತುಗೊಳಿಸಲಾಗಿದೆ.

ದಕ್ಷಿಣ ವಲಯ ಐಜಿಪಿ ಡಾ.ಎಂ.ಬಿ. ಬೋರಲಿಂಗಯ್ಯ ಅವರು ಅಮಾನತು ಆದೇಶವನ್ನು ಹೊರಡಿಸಿದ್ದು, ಅಮಾನತುಗೊಂಡ ಅಧಿಕಾರಿಗಳಿಗೆ ಅಧಿಕೃತವಾಗಿ ಅಮಾನತು ಆದೇಶಗಳನ್ನು ನೀಡಲಾಗಿದೆ,ಅಲ್ಲದೆ ಈ ಮೂವರ ವಿರುದ್ಧ ಇಲಾಖಾ ವಿಚಾರಣೆಗೂ ಆದೇಶಿಸಿದ್ದಾರೆ.

ಪ್ರಕರಣಕ್ಕೆ ಸಂಬಂದಿಸಿದಂತೆ ಮಾಹಿತಿ ಪಡೆದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಷರಶಃ ಬೇಸರಗೊಂಡಿದ್ದರು.

ಪ್ರಕರಣಕ್ಕೆ ಸಂಬಂದಿಸಿದಂತೆ ಕರ್ತವ್ಯಲೋಪ ಎಸಗಿರುವವರನ್ನು ಕೂಡಲೇ ಅಮಾನತ್ತುಗೊಳಿಸಿ ತನಿಖೆ ನಡೆಸುವಂತೆ ಐಜಿಪಿಗೆ ಮೌಖಿಕ ಸೂಚನೆಗಳನ್ನು ನೀಡಿದ್ದರು.

ಕೊಡಗಿನ ಕುಶಾಲನಗರದ ಬಸವನಹಳ್ಳಿಯ ಬುಡಕಟ್ಟು ನಿವಾಸಿ ಸುರೇಶ್ ಅವರ ಪತ್ನಿ ವಿವಾಹವಾದ ೧೮ ವರ್ಷಗಳ ನಂತರ ನಾಪತ್ತೆಯಾಗಿದ್ದರು. ಈ ಸಂಬಂದ ಸುರೇಶ್ ಕುಶಾಲನಗರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಆರಂಭಿಕ ತನಿಖೆಯ ನಂತರ ಪ್ರಕರಣದ ತನಿಖೆ ವೇಗ ಕಳೆದುಕೊಂಡಿತ್ತು. ಅದಾದ ಏಳು ತಿಂಗಳ ನಂತರ, ಜೂನ್ ೨೦೨೧ ರಲ್ಲಿ, ಪಿರಿಯಾಪಟ್ಟಣದ ಬೆಟ್ಟದಪುರ ಪೊಲೀಸ್ ಠಾಣೆಯ ತನಿಖಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಪತ್ತೆಯಾದ ಮಹಿಳೆಯ ಅಸ್ಥಿಪಂಜರವನ್ನು ಗುರುತಿಸಲು ಸುರೇಶ್ ಅವರನ್ನು ಕರೆತಂದರು.

ಅಸ್ಥಿಪಂಜರದ ಅವಶೇಷಗಳು, ಬಟ್ಟೆಗಳು ಮತ್ತು ಚಪ್ಪಲಿಗಳು ಕಾಣೆಯಾದ ತನ್ನ ಹೆಂಡತಿಯದ್ದಾಗಿವೆ ಎಂದು ಗುರುತಿಸಲು ಸುರೇಶ್ ನನ್ನು ಒತ್ತಾಯಿಸಿದ್ದರು. ಪೊಲೀಸರ ಬಲವಂತದ ಮೇರೆಗೆ, ಆಕೆಯ ಕೊಲೆಯನ್ನು ಒಪ್ಪಿಕೊಳ್ಳುವಂತೆ ಮಾಡಲಾಗಿತ್ತು.

ಅಲ್ಲದೆ ಎಫ್‌ಐಆರ್ ದಾಖಲಿಸಿ ಸುರೇಶ್ ಅವರನ್ನು ಬಂಧಿಸಲಾಯಿತು.

ಹೈಕೋರ್ಟ್‌ನಿಂದ ಜಾಮೀನು ಪಡೆಯುವ ಮೊದಲು ಅವರು ಎರಡು ವರ್ಷಗಳ ಕಾಲ ಜೈಲಿನಲ್ಲಿ ಕಳೆದಿದ್ದರು.

ಏಪ್ರಿಲ್ ೧, ೨೦೨೫ ರಂದು, ಸುರೇಶ್ ಅವರ ಸ್ನೇಹಿತರು ಅವರ ಪತ್ನಿ ಮಲ್ಲಿಗೆಯನ್ನು ಅಚಾನಕ್ಕಾಗಿ ಜೀವಂತವಾಗಿ ನೋಡಿದ್ದರು.

ಆಕೆಯ ಪ್ರಿಯಕರನೊಂದಿಗೆ ಮಡಿಕೇರಿಯ ಹೋಟೆಲ್ ಒಂದರಲ್ಲಿ ಆಕೆ‌ ಇದ್ದಳು, ಇದರಿಂದ ಎಚ್ಚರಗೊಂಡ ಪೊಲೀಸರು ಮಲ್ಲಿಗೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ಕಳೆದ ಐದು ವರ್ಷಗಳಿಂದ ಪೊನ್ನಂಪೇಟೆ ತಾಲ್ಲೂಕಿನ ಟಿ.ಶೆಟ್ಟಿಗೇರಿ ಗ್ರಾಮದಲ್ಲಿ ಗಣೇಶ್ ಜೊತೆ ವಾಸಿಸುತ್ತಿರುವುದಾಗಿ ಆಕೆ ಒಪ್ಪಿಕೊಂಡಳು.

ಆಕೆಯ ಪತ್ತೆಯಿಂದಾಗಿ ಪೊಲೀಸ್ ಇಲಾಖೆ ಹಾಗೂ ನ್ಯಾಯಾಂಗ ಶಾಕ್ ಗೆ ಒಳಗಾಗಬೇಕಾಯಿತು.

ನಂತರ ಸುರೇಶ್ ಅವರನ್ನು ನ್ಯಾಯಾಲಯವು ಖುಲಾಸೆಗೊಳಿಸಿತು. ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದ ಒಬ್ಬ ಅಮಾಯಕ ವ್ಯಕ್ತಿಯ ಜೀವವನ್ನು ಬಲಿ ತೆಗೆದುಕೊಂಡ ತನಿಖೆಯ ಕ್ಷಮತೆಯ ಬಗ್ಗೆ ನ್ಯಾಯಾಲಯ ಅಸಮಧಾನ ವ್ಯಕ್ತಪಡಿಸಿತ್ತು.

ತನಿಖೆಯ ಸಮಯದಲ್ಲಿ ಸುಳ್ಳುಗಳನ್ನು ದಾಖಲು ಮಾಡಿದ್ದ ಇನ್ಸಪೆಕ್ಟರ್ ಬಿ.ಜಿ.ಪ್ರಕಾಶ್ ಬೈಲಕುಪ್ಪೆ ವೃತ್ತದ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಮತ್ತು ಮಹೇಶ್ ಕುಮಾರ್ ಹಾಗೂ ಪ್ರಕಾಶ್ ಯತ್ತಿನಮನಿ ಬೆಟ್ಟದಪುರ ಠಾಣೆಯಲ್ಲಿ ಸಬ್ ಇನ್‌ಸ್ಪೆಕ್ಟರ್‌ಗಳಾಗಿದ್ದರು. ಇದೀಗ ಮೂವರೂ ಅಮಾನತುಗೊಂಡಿದ್ದಾರೆ.

ಕೊಲೆಯಾಗಿದ್ದ ಮಹಿಳೆ ಜೀವಂತ ಪತ್ತೆ!:3 ಪೊಲೀಸ್ ಅಧಿಕಾರಿಗಳು ಸಸ್ಪೆಂಡ್ Read More

ಕೊಲೆ ಪ್ರಕರಣದ ತನಿಖೆ ಪರಿಶೀಲಿಸಲು ಎಸ್ ಪಿಗೆ ಸಿಎಂ ಸೂಚನೆ

ಕಲಬುರಗಿ: ಕಳೆದ ಆಗಸ್ಟ್ 22 ರಂದು ಮಾನ್ವಿ ತಾಲ್ಲೂಕಿನ ಕುರ್ಡಿ ಗ್ರಾಮದಲ್ಲಿ ನಡೆದಿದ್ದ ಸಂಜಯ್ ಕುರ್ಡೀಕರ್ ಕೊಲೆ ಪ್ರಕರಣದ ತನಿಖೆಯನ್ನು ಪರಿಶೀಲಿಸುವಂತೆ ರಾಯಚೂರು ಎಸ್‌ಪಿ ಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

ಕಲಬುರಗಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿದ್ದ ವೇಳೆ ಕೊಲೆಯಾದ ಸಂಜಯ್ ಅವರ ಪತ್ನಿ ಶಾಂತಮ್ಮ ನ್ಯಾಯ ಕೊಡಿಸುವಂತೆ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿಕೊಂಡರು.

ಶಾಂತಮ್ಮ ಅವರ ನೋವಿಗೆ ಮರುಗಿದ ಸಿಎಂ,ತಕ್ಷಣ ದೂರವಾಣಿ ಕರೆ ಮಾಡಿ ರಾಯಚೂರು ಎಸ್ ಪಿ ಅವರನ್ನು ಸಂಪರ್ಕಿಸಿ ಕೊಲೆ ಪ್ರಕರಣದ ವಿವರಣೆ ನೀಡುವಂತೆ ಸೂಚಿಸಿದರು,ಜತೆಗೆ ಖುದ್ದಾಗಿ ಪರಿಶೀಲಿಸುವಂತೆ ಸೂಚಿಸಿದರು.

ನಂತರ ಈ ಬಗ್ಗೆ ತಮಗೆ ವರದಿ ನೀಡಬೇಕು, ಪ್ರಕರಣದ ತನಿಖೆ ಏನಾಯಿತು ಎಂಬ ಬಗ್ಗೆ ವರದಿ ಮಾಡಬೇಕು ಎಂದು ಸೂಚಿಸಿದರು.

ಕೊಲೆ ಪ್ರಕರಣದ ತನಿಖೆ ಪರಿಶೀಲಿಸಲು ಎಸ್ ಪಿಗೆ ಸಿಎಂ ಸೂಚನೆ Read More