ದಿನೇಶ್‌ ಕುಮಾರ್‌ ಲೋಕಾಯುಕ್ತ ಪೊಲೀಸರ ಕಸ್ಟಡಿಗೆ

ಮೈಸೂರು: ಮುಡಾ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ಅವರನ್ನು ಹೆಚ್ಚಿನ ವಿಚಾರಣೆಗೆ ಲೋಕಾಯುಕ್ತ ಪೊಲೀಸರ ಕಸ್ಟಡಿಗೆ ನೀಡಲು ಕೋರ್ಟ್‌ ಆದೇಶಿಸಿದೆ.

ಈ ಸಂಬಂಧ ಮೈಸೂರು ಲೋಕಾಯುಕ್ತ ಪೊಲೀಸರು, ಬೆಂಗಳೂರಿನಲ್ಲಿರುವ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ಮುಡಾ ಹಗರಣದ ಹೆಚ್ಚಿನ ವಿಚಾರಣೆಗೆ ಮಾಜಿ ಆಯುಕ್ತ, ಹಾಲಿ ಜೈಲು ಶಿಕ್ಷೆಗೆ ಒಳಪಟ್ಟಿರುವ ದಿನೇಶ್‌ ಕುಮಾರ್‌ ಅವರನ್ನು ಕಸ್ಟಡಿಗೆ ನೀಡುವಂತೆ ಕೋರ್ಟ್‌ ಗೆ ಅರ್ಜಿ ಸಲ್ಲಿಸಿ ಕೋರಲಾಗಿತ್ತು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ಮೈಸೂರು ಲೋಕಾಯುಕ್ತ ಪೊಲೀಸರ ಅರ್ಜಿ ಪುರಸ್ಕರಿಸಿ ಡಿ. 12 ರಂದು ಕಸ್ಟಡಿಗೆ ನೀಡುವಂತೆ ಆದೇಶಿಸಿದೆ.

ದಿನೇಶ್‌ ಕುಮಾರ್‌ ಲೋಕಾಯುಕ್ತ ಪೊಲೀಸರ ಕಸ್ಟಡಿಗೆ Read More

ಮುಡಾ;ತನಿಖೆ ಮುಂದುವರಿಸಿಅಂತಿಮ ವರದಿ ಸಲ್ಲಿಸಲು ಕೋರ್ಟ್ ಆದೇಶ:ಸಿಎಂ ಗೆ ನಿರಾಸೆ

ಬೆಂಗಳೂರು: ಮುಡಾ ಹಗರಣದಲ್ಲಿ ಬಿಗ್ ರಿಲೀಫ್ ನಿರೀಕ್ಷೆಯಲ್ಲಿದ್ದ ಸಿಎಂ ಸಿದ್ದರಾಮಯ್ಯಗೆ ಬಹಳ ನಿರಾಸೆಯಾಗಿದೆ.

ತನಿಖೆ ಮುಂದುವರಿಸಿ, ಅಂತಿಮ ವರದಿ ಸಲ್ಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಸಿಎಂ ವಿರುದ್ಧದ ಬಿ ರಿಪೋರ್ಟ್ ವಿರೋಧಿಸಿ ದೂರುದಾರ ಸ್ನೇಹಮಯಿ ಕೃಷ್ಣ ಮತ್ತು ಇಡಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ, ಆದೇಶ ಕಾಯ್ದಿರಿಸಿದ್ದ ನ್ಯಾಯಾಲಯ ಅಂತಿಮ ವರದಿ ಬಳಿಕ ಬಿ ರಿಪೋರ್ಟ್ ಬಗ್ಗೆ ತೀರ್ಮಾನ ಮಾಡುವುದಾಗಿ ಹೇಳಿದೆ.

ತನಿಖೆ ಮುಂದುವರಿಸಲು ಅನುಮತಿ ನೀಡುವಂತೆ ಕೋರಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಪುರಸ್ಕರಿಸಿದ್ದಾರೆ.

ಆದೇಶದ ಬಳಿಕ ಮಾತನಾಡಿದ ದೂರುದಾರ ಸ್ನೇಹಮಯಿ ಕೃಷ್ಣ ಅವರು, ಲೋಕಾ ಅಧಿಕಾರಿಗಳು ಸಿಎಂ ಕುಟುಂಬವನ್ನ ರಕ್ಷಣೆ ಮಾಡುವುದಕ್ಕೆ ತನಿಖೆ ಪೂರ್ಣಗೊಳಿಸದೇ ವರದಿ ಸಲ್ಲಿಕೆ ಮಾಡಿದ್ದರು. ಹಾಗಾಗಿ ಕೋರ್ಟ್ ಅಂತಿಮ ವರದಿಯನ್ನ ಸಲ್ಲಿಸಲು ಸೂಚಿಸಿದೆ ಎಂದಿದ್ದಾರೆ.

ತನಿಖಾಧಿಕಾರಿಗಳಿಗೆ ತನಿಖೆಯ ಬಗ್ಗೆ ತಿಳಿದಿಲ್ಲ, ನ್ಯಾಯಾಲಯದ ಇಂದಿನ ಆದೇಶದಲ್ಲಿ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಸಿಎಂ ಅಧಿಕಾರ ದುರುಪಯೋಗ ಪಡಿಸಿಕೊಂಡು ಕೇಸ್ ಮುಚ್ಚಿ ಹಾಕುವ ಪ್ರಯತ್ನಕ್ಕೆ ನಾನು ಅವಕಾಶ ಕೊಡುವುದಿಲ್ಲ ಎಂದು ಹೇಳಿದ್ದಾರೆ.

ಮುಡಾ;ತನಿಖೆ ಮುಂದುವರಿಸಿಅಂತಿಮ ವರದಿ ಸಲ್ಲಿಸಲು ಕೋರ್ಟ್ ಆದೇಶ:ಸಿಎಂ ಗೆ ನಿರಾಸೆ Read More

ಬುದ್ದಿ ಕಲಿಯದ ನಗರಾಭಿವೃದ್ಧಿ ಪ್ರಾಧಿಕಾರ:ಮತ್ತೊಂದು ಭ್ರಷ್ಟಾಚಾರ ಮಾಡಿದ ಮುಡಾ

ಮೈಸೂರು: ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಎಂಬ ಆರೋಪಗಳು ಸಾರ್ವಜನಿಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ.

ಭ್ರಷ್ಟಾಚಾರದ ಸರಮಾಲೆಗಳನ್ನ ಹೊತ್ತು ಇಡಿ,ಲೋಕಾಯುಕ್ತ ಕಂಗೆಣ್ಣಿಗೆ ಗುರಿಯಾಗಿದ್ದರೂ ಮುಡಾ ಅಧಿಕಾರಿಗಳು ಬುದ್ದಿ ಕಲಿತಿಲ್ಲ.

ನೂರಾರು ಪ್ರಕರಣಗಳು ಬಯಲಿಗೆ ಬಂದು ಸರ್ಕಾರಕ್ಕೆ ಮುಜುಗರ ತಂದಿರುವ ಮುಡಾ ಮತ್ತೊಂದು ಭ್ರಷ್ಟಾಚಾರಕ್ಕೆ ಎಡೆ ಮಾಡಿದೆ.

ಮರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿದ್ದ ಮನೆಯನ್ನ ಲಪಟಾಯಿಸಲು ನಕಲಿ ದಾಖಲೆ ಸೃಷ್ಟಿಸಲು ಭಾರಿ ಗೋಲ್ ಮಾಲ್ ನಡೆಸಿದ ಅಧಿಕಾರಿಗಳು ವಂಚಕರ ಜೊತೆ ಕೈ ಜೋಡಿಸಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಲು ವಂಚಕನ ಜೊತೆ ಕೈ ಜೋಡಿಸಿದ ಆರೋಪದ ಹಿನ್ನಲೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ವ್ಯವಸ್ಥಾಪಕ ಸೋಮಸುಂದ್ರು ಅವರನ್ನು ಅಮಾನತು ಮಾಡಲಾಗಿದೆ.

ಮುಡಾ ಆಯುಕ್ತ ಎ.ಎನ್.ರಘುನಂದನ್ ಅವರು ಅಮಾನತು ಮಾಡಿ ಈ ಆದೇಶ ಹೊರಡಿಸಿದ್ದಾರೆ.

ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ದಾಖಲೆ ಸಮೇತ ನೀಡಿದ ದೂರಿನ ಹಿನ್ನಲೆಯಲ್ಲಿ ಪರಿಶೀಲನೆ ನಡೆಸಿದ ಕಾರ್ಯದರ್ಶಿ ಪ್ರಸನ್ನ ಕುಮಾರ್ ನೀಡಿದ ವರದಿ ಆಧಾರದ ಮೇಲೆ ಆಯುಕ್ತರು ಮೇಲ್ನೋಟಕ್ಕೆ ಆರೋಪ ಸಾಬೀತಾದ ಕಾರಣ ಈ ಕ್ರಮ ಕೈಗೊಂಡಿದ್ದಾರೆ.

ಗೋಕುಲಂ 3 ನೇ ಹಂತ ಮಾದರಿ ಮನೆ ನಂ.867 ರ 30*40 ವಿಸ್ತೀರ್ಣದ ಸ್ವತ್ತು ಶ್ರೀಮತಿ ಲಿಲಿಯನ್ ಶಾರದಾ ಜೋಸೆಫ್ ರವರಿಗೆ 2-11-1982 ರಲ್ಲಿ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಿಂದ ಮಂಜೂರಾಗಿದ್ದು ಕರಾರು ಪತ್ರ ನೀಡಲಾಗಿದೆ.

ಆದರೆ ಹಕ್ಕು ಪತ್ರ ವಿತರಣೆ ಆಗಿರುವುದಿಲ್ಲ.ಲಿಲಿಯನ್ ಶಾರದಾ ಜೋಸೆಫ್ ರವರು 3-09-1983 ರಂದು ಮೃತಪಟ್ಟಿದ್ದಾರೆ

ಸದರಿ ಸ್ವತ್ತು 6-04-2025 ರವರೆಗೂ ಪ್ರಾಧಿಕಾರದಿಂದ ಯಾರಿಗೂ ವರ್ಗಾವಣೆ ಆಗಿರುವುದಿಲ್ಲ.26-03-2024 ರಂದು ಲಿಲಿಯನ್ ಶಾರದಾ ಜೋಸೆಫ್ ಅವರ ಕ್ರಮಬದ್ದ ವಾರಸುದಾರರಲ್ಲದ ವ್ಯಕ್ತಿಗೆ ಅಂದರೆ ನೆವಿಲ್ ಮಾರ್ಕಸ್ ಜೋಸೆಫ್ ಗೆ ಪೌತಿ ಖಾತೆ ಮಾಡಿಕೊಟ್ಟು ಭಾರಿ ಗೋಲ್ ಮಾಲ್ ಮಾಡಲಾಗಿದೆ.

ಕ್ರಮಬದ್ದವಾಗಿ ವಂಶವೃಕ್ಷ ಪಡೆಯದೆ ನಕಲಿ ದಾಖಲೆ ಸೃಷ್ಟಿಸಿ ನಕಲಿ ವಾರಸುದಾರರಿಗೆ ಪೌತಿಖಾತೆ ಮಾಡಲಾಗಿದೆ.ಪೌತಿಖಾತೆ ಮಾಡಲು ಮನಸೋ ಇಚ್ಛೆ ಕಚೇರಿ ಟಿಪ್ಪಣಿಗಳನ್ನ ಸೃಷ್ಟಿಸಲಾಗಿದೆ.

ಅಲ್ಲದೆ ಬಿಟ್ ಆಫ್ ಲ್ಯಾಂಡ್ ಸಹ ಮಂಜೂರು ಮಾಡಿ ಹಕ್ಕುಪತ್ರ ನೀಡಿದ್ದಾರೆ.ಅಕ್ರಮವಾಗಿ ಪಡೆದ ಮನೆಗೆ ನೆವಿಲ್ ಮಾರ್ಕಸ್ ಜೋಸೆಫ್ ಅವರು ಈಗಾಗಲೇ ವಲಯ ಕಚೇರಿ 4 ರಲ್ಲಿ ಖಾತೆ ಮಾಡಿಸಿಕೊಂಡು ಮಮತ ಹಾಗೂ ಶ್ಯಾಂ ಎಂಬುವರಿಗೆ ಕೋಟ್ಯಾಂತರ ರೂಗಳಿಗೆ ಮಾರಾಟ ಮಾಡಿದ್ದಾರೆ.

ಈ ಅಕ್ರಮದ ಬಗ್ಗೆ ಬಿ.ಎನ್.ನಾಗೇಂದ್ರ ರವರು ಲೋಕಾಯುಕ್ತ ಹಾಗೂ ಮುಡಾ ಆಯುಕ್ತರಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.

ದಾಖಲೆಗಖನ್ನ ಪರಿಶೀಲಿಸಿದಾಗ ವ್ಯವಸ್ಥಾಪಕ ಸೋಮಸುಂದ್ರು ಹಾಗೂ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ಸದರಿ ನಿವೇಶನಕ್ಕೆ ಆಯುಕ್ತರ ಆದೇಶ ಮೀರಿ ತಮ್ಮ ಹಂತದಲ್ಲಿಯೇ ತಿದ್ದುಪಡಿ ಕ್ರಯಪತ್ರ ನೀಡಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು ಸಾಬೀತಾಗಿದೆ.

ತಪ್ಪು ಎಸಗಿದ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮ ಕೈಗೊಳ್ಳುವಂತೆ ಮುಡಾ ಕಾರ್ಯದರ್ಶಿಗಳಾದ ಪ್ರಸನ್ನಕುಮಾರ್ ಅವರು ಆಯುಕ್ತರಿಗೆ ನೀಡಿರುವ ವರದಿ ಆಧಾರದ ಮೇಲೆ ಸೋಮಸುಂದ್ರು ಅವರನ್ನ ಅಮಾನತುಗೊಳಿಸಲಾಗಿದೆ.

ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುವಂತೆ ಮುಡಾ ಆಯುಕ್ತರು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.ಸರ್ಕಾರ ಶಿಸ್ತು ಕ್ರಮ ಕೈಗೊಳ್ಳುವುದೆ ಎಂಬುದನ್ನ ಕಾದು ನೋಡಬೇಕಿದೆ.

ಬುದ್ದಿ ಕಲಿಯದ ನಗರಾಭಿವೃದ್ಧಿ ಪ್ರಾಧಿಕಾರ:ಮತ್ತೊಂದು ಭ್ರಷ್ಟಾಚಾರ ಮಾಡಿದ ಮುಡಾ Read More

ಲೋಕಾ ಮೂವರು ಹಿರಿಯ ಐಪಿಎಸ್‌ ಅಧಿಕಾರಿಗಳ ಬಗ್ಗೆ ಕೇಂದ್ರ ಜಾಗೃತಿ ಆಯೋಗಕ್ಕೆ ದೂರು

ಮೈಸೂರು: ಮುಡಾ ಹಗರಣದಲ್ಲಿ ಹಲವು ಸಾಕ್ಷಿ ಇದ್ದರೂ ಆರೋಪಿಗಳನ್ನು ರಕ್ಷಣೆ ಮಾಡಲು ಸುಳ್ಳು ವರದಿ ಸಲ್ಲಿಸಿದ್ದಾರೆಂದು ಆರೋಪಿಸಿ, ಲೋಕಾಯುಕ್ತದ ಮೂವರು ಹಿರಿಯ ಐಪಿಎಸ್‌ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತಿ ಆಯೋಗಕ್ಕೆ ಸ್ನೇಹಮಯಿ ಕೃಷ್ಣ ದೂರು ಸಲ್ಲಿಸಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ,
ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಕುಟುಂಬ ಭಾಗಿಯಾಗಿರುವ ಕುರಿತು ಸಾಕಷ್ಟು ಸಾಕ್ಷಿ ಇದ್ದರೂ, ಆರೋಪಿಗಳನ್ನು ರಕ್ಷಣೆ ಮಾಡಲು ಲೋಕಾಯುಕ್ತ ಪೊಲೀಸರು ಸುಳ್ಳು ವರದಿ ಸಲ್ಲಿಸಿದ್ದರು. ಈ ಬಗ್ಗೆ ಲೋಕಾಯುಕ್ತ ಎಡಿಜಿಪಿ ಮನೀಷ್ ಖರ್ಬೀಕರ್‌, ಐಜಿಪಿ ಸುಬ್ರಮಣ್ಯೇಶ್ವರ್‌ ರಾವ್‌ ಹಾಗೂ ಮೈಸೂರು ಲೋಕಾಯುಕ್ತ ಎಸ್‌ಪಿ ಉದ್ದೇಶ್‌ ವಿರುದ್ಧ ಕೇಂದ್ರದ ಜಾಗೃತ ಆಯೋಗಕ್ಕೆ ಮೂರು ಪುಟದ ದೂರನ್ನು ಇಮೇಲ್‌ ಹಾಗೂ ರಿಜಿಸ್ಟರ್‌ ಅಂಚೆ ಮೂಲಕ ಕಳುಹಿಸಿದ್ದೇನೆ ಎಂದು ತಿಳಿಸಿದರು.

ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದೇನೆ. ವರದಿಯಲ್ಲಿ ಲೋಕಾಯುಕ್ತ ಪೊಲೀಸರು ಯಾವುದೇ ದಾಖಲಾತಿ ಪರಿಶೀಲಿಸದೆ, ಯಾರನ್ನೋ ರಕ್ಷಣೆ ಮಾಡಲು ಸುಳ್ಳು ವರದಿ ತಯಾರಿಸಿ ದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಭಾಮೈದ ಮಲ್ಲಿಕಾರ್ಜುನ ಸ್ವಾಮಿ 1998ರಲ್ಲಿ ಪ್ರಕರಣದ ಎ4 ಆರೋಪಿ ದೇವರಾಜ್‌ ಹೆಸರಿನಲ್ಲಿ ಸುಳ್ಳು ಪತ್ರ ಸೃಷ್ಟಿಸಿದ್ದ. ಆ ಪತ್ರಕ್ಕೆ ದೇವರಾಜು ಸಹಿಯನ್ನು ಮಲ್ಲಿಕಾರ್ಜುನ ಸ್ವಾಮಿ ಮಾಡಿ, ಅಪರಾಧವೆಸಗಿದ್ದಾರೆ. ಈ ದಾಖಲೆಗಳು ವರದಿಯಲ್ಲಿ ಇವೆ. ಇಂತಹ ಹಲವು ಸಾಕ್ಷಿಗಳಿದ್ದರೂ, ಲೋಕಾಯುಕ್ತದ ಅಧಿಕಾರಿಗಳು ಸಾಕ್ಷಿಯಿಲ್ಲ ಎಂದು ಸುಳ್ಳು ವರದಿ ನೀಡಿದ್ದಾರೆ. ಯಾರನ್ನೋ ರಕ್ಷಣೆ ಮಾಡಲು ಈ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಕೇಂದ್ರ ಜಾಗೃತಿ ಆಯೋಗಕ್ಕೆ ದೂರು ಸಲ್ಲಿಸಿದ್ದೇನೆ ಎಂದು ಸ್ನೇಹಮಯಿ ಕೃಷ್ಣ ತಿಳಿಸಿದರು.

ಲೋಕಾ ಮೂವರು ಹಿರಿಯ ಐಪಿಎಸ್‌ ಅಧಿಕಾರಿಗಳ ಬಗ್ಗೆ ಕೇಂದ್ರ ಜಾಗೃತಿ ಆಯೋಗಕ್ಕೆ ದೂರು Read More

ಕೋರ್ಟ್ ನಲ್ಲಿ ವಾದಿಸಲಿದ್ದಾರೆ‌ ಸ್ನೇಹಮಯಿ ಕೃಷ್ಣ

ಮೈಸೂರು:ಮುಡಾದಿಂದ ಪರಿಹಾರ ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ಪ್ರಕರಣದಲ್ಲಿ ದೂರುದಾರ ಸ್ನೇಹಮಯಿ ಕೃಷ್ಣ ಸ್ವತಃ ‌ವಾದ ಮಂಡಿಸಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ.ಪಾರ್ವತಿ, ಅವರ ಸೋದರ ಮಾವ ಮತ್ತು ಇನ್ನೊಬ್ಬ ವ್ಯಕ್ತಿಯ ವಿರುದ್ಧ ದಾಖಲಾದ ಪ್ರಕರಣವನ್ನು ವೈಯಕ್ತಿಕವಾಗಿ ವಾದಿಸಲು ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.

ತನಿಖೆಯ ಬಗ್ಗೆ ಅಗತ್ಯ ದಾಖಲೆಗಳನ್ನು ಮತ್ತು ಅಂತಿಮ ವರದಿಯನ್ನು ಮಾರ್ಚ್ 1 ರೊಳಗೆ ಕೃಷ್ಣ ಅವರಿಗೆ ಸಲ್ಲಿಸುವಂತೆ ನ್ಯಾಯಾಲಯ ಲೋಕಾಯುಕ್ತ ಪೊಲೀಸರಿಗೆ ನಿರ್ದೇಶನ ನೀಡಿದೆ.

ಸ್ನೇಹಮಯಿ‌ ಕೃಷ್ಣ ಮತ್ತು ಲೋಕಾಯುಕ್ತ ಪೊಲೀಸರನ್ನು ಪ್ರತಿನಿಧಿಸುವ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವೆಂಕಟೇಶ್ ಅರಬಟ್ಟಿ ಅವರ ವಾದ ಆಲಿಸಿದ ನಂತರ ಹಾಲಿ ಮತ್ತು ಮಾಜಿ ಸಂಸದರು ಜಾಗೂ ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು ಆದೇಶವನ್ನು ಹೊರಡಿಸಿ, ವಿಚಾರಣೆಯನ್ನು ಮಾರ್ಚ್ 7 ಕ್ಕೆ ಮುಂದೂಡಿದರು.

ಈ ಹಿಂದೆ, ಕೃಷ್ಣ ಅವರು ವೈಯಕ್ತಿಕವಾಗಿ ಪಕ್ಷಕಾರರಾಗಿ ಪ್ರಕರಣವನ್ನು ವಿಚಾರಣೆಗೆ ಒಳಪಡಿಸಲು ಅನುಮತಿ ನೀಡಬಹುದು ಎಂದು ಸಲ್ಲಿಸಿದರು. ಸಿಆರ್ಪಿಸಿಯ ಸೆಕ್ಷನ್ 173 ರ ಅಡಿಯಲ್ಲಿ ಅವರು ಅರ್ಜಿ ಸಲ್ಲಿಸಿದ್ದು, ಪ್ರಕರಣವನ್ನು ವಿಚಾರಣೆಗೆ ಒಳಪಡಿಸಲು ಅಂತಿಮ ವರದಿಯ ಪ್ರತಿಯನ್ನು ನೀಡುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.

ನ್ಯಾಯಾಲಯವು ಮೆಮೋ ಮತ್ತು ಅರ್ಜಿ ಎರಡಕ್ಕೂ ಅನುಮತಿ ನೀಡಿತು ಮತ್ತು ಲೋಕಾಯುಕ್ತ ಪೊಲೀಸರು ಸಲ್ಲಿಸಿದ ಸಂಪೂರ್ಣ ಅಂತಿಮ ವರದಿಯ ಪ್ರತಿಯನ್ನು ಸಲ್ಲಿಸುವಂತೆ ರಿಜಿಸ್ಟ್ರಿಗೆ ನಿರ್ದೇಶನ ನೀಡಿತು.

ಎಸ್ ಪಿಪಿ ಪರವಾಗಿ, ತನಿಖಾ ಸಂಸ್ಥೆ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳನ್ನು ಒಂದು ವಾರದೊಳಗೆ ಮೈಸೂರಿನ ತನಿಖಾಧಿಕಾರಿಗಳ ಕಚೇರಿಯಲ್ಲಿ ದೂರುದಾರರಿಗೆ ಸಲ್ಲಿಸಲಿದೆ ಎಂದು ಮೆಮೋ ಸಲ್ಲಿಸಲಾಯಿತು

ದೂರುದಾರರು ಸಹ ಒಪ್ಪಿಕೊಂಡರು ಮತ್ತು ಮಾರ್ಚ್ 1 ರಂದು ಅಥವಾ ಅದಕ್ಕೂ ಮೊದಲು ದಾಖಲೆಗಳನ್ನು ಒದಗಿಸಬಹುದು ಎಂದು ವಿನಂತಿಸಿದರು.

ಲೋಕಾಯುಕ್ತ ಪೊಲೀಸರು ಇತ್ತೀಚೆಗೆ ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿದ್ದರು. ಈ ನಡೆ ಬಗ್ಗೆ ದೂರುದಾರ ಸ್ನೇಹಮಯಿ ಕೃಷ್ಣ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ತನಿಖಾ ಸಂಸ್ಥೆ ಪ್ರಭಾವಕ್ಕೆ ಒಳಗಾಗಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಆರೋಪಿಸಿದ್ದರು, ಇದೀಗ ತಾವೇ ಖುದ್ದು ಕೋರ್ಟ್‌ ನಲ್ಲಿ ಪ್ರಕರಣದ ಬಗ್ಗೆ ವಾದಿಸಲಿದ್ದಾರೆ.

ಕೋರ್ಟ್ ನಲ್ಲಿ ವಾದಿಸಲಿದ್ದಾರೆ‌ ಸ್ನೇಹಮಯಿ ಕೃಷ್ಣ Read More

ಕೋರ್ಟ್ ತೀರ್ಪು ಸ್ವಾಗತಾರ್ಹ:ಬಸವರಾಜ ಬಸಪ್ಪ

ಮೈಸೂರು: ಮುಡಾ ಪ್ರಕರಣ ಸಿಬಿಐಗೆ ಒಪ್ಪಿಸಬೇಕೆಂದು ಕೋರಿದ ಪ್ರಕರಣ ಹೈಕೋರ್ಟ್‌ ತಿರಸ್ಕರಿಸಿರುವುದು ಸ್ವಾಗತಾರ್ಹ ಎಂದು ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ ತಿಳಿಸಿದ್ದಾರೆ.

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಒಂದಿಲ್ಲೊಂದು ರೀತಿಯಲ್ಲಿ ತೊಂದರೆ ಕೊಡುತ್ತ ಬಂದಿರುವ ಬಿಜೆಪಿ ನಾಯಕರಿಗೆ ಇಂದಿನ ಹೈಕೋರ್ಟ್ ತೀರ್ಪು ಬುದ್ದಿ ಕಲಿಸಿದಂತಾಗಿದೆ ಎಂದು ಅವರು ಹೇಳಿದ್ದಾರೆ.

ಮುಡಾ ಪ್ರಕರಣದ ಬಗ್ಗೆ ಈಗಾಗಲೇ ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿದೆ. ಆದರೆ ಸಿಬಿಐ ಮೂಲಕ ಸಿದ್ದರಾಮಯ್ಯನವರನ್ನು ಕಟ್ಟಿ ಹಾಕಬೇನ್ನುವ ಬಿಜೆಪಿ ನಾಯಕರ ಕನಸಿಗೆ ಭಂಗವಾಗಿದೆ,ಇನ್ನಾದರೂ ನಾಯಕರು ಎಚ್ಚೆತ್ತು ಕೊಳ್ಳಲಿ ಎಂದು ಬಸವರಾಜ್ ಬಸಪ್ಪ ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಬಿಜೆಪಿ ಆಡಳಿತದಲ್ಲಿಯೇ 50:50 ರಂತೆ ಸೈಟ್ ಹಂಚಿಕೆ ನಿಯಮ ಮಾಡಿಕೊಂಡು, ಅದೇ ಅವಧಿಯಲ್ಲಿ ಸೈಟ್ ಹಂಚಿಕೆ ಮಾಡಿ ಸಿದ್ದರಾಮಯ್ಯನವರದ್ದೇ ತಪ್ಪು ಎಂದು ಸಾರಲು ಹೊರಟವರಿಗೆ ಹೈಕೋರ್ಟ್ ನೀಡಿದ ತೀರ್ಪು ಚಾಟಿ ಏಟು ನೀಡಿದಂತಾಗಿದೆ
ಎಂದು ಅವರು ತಿಳಿಸಿದ್ದಾರೆ.

ಕೋರ್ಟ್ ತೀರ್ಪು ಸ್ವಾಗತಾರ್ಹ:ಬಸವರಾಜ ಬಸಪ್ಪ Read More

ಮುಡಾ ಪ್ರಕರಣ; ಸುಪ್ರೀಂ ಕೋರ್ಟ್‌ಗೆ ಹೋಗುವೆ:ಸ್ನೇಹಮಯಿ ಕೃಷ್ಣ

ಮೈಸೂರು: ನಮ್ಮ ಹೋರಾಟಕ್ಕೆ ಅಲ್ಪ ಹಿನ್ನಡೆಯಾಗಿದೆ,ಹಾಗಂತ ಹೋರಾಟದಿಂದ ಹಿಂದೆ ಸರಿಯುವುದಿಲ್ಲ, ಸುಪ್ರೀಂ ಕೋರ್ಟ್‌ಗೆ ಹೋಗುವೆ ಎಂದು ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ಧಾರವಾಡ ಹೈಕೋರ್ಟ್‌ ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದರು.

ನ್ಯಾಯಾಲಯ ಯಾವ ವಿಚಾರವನ್ನಿಟ್ಟುಕೊಂಡು ಸಿಬಿಐ ತನಿಖೆಗೆ ಕೊಡಲು ನಿರಾಕರಿಸಿದೆ ಎಂಬುದು ಗೊತ್ತಾಗಿಲ್ಲ, ಆ ಅಂಶಗಳನ್ನು ನೋಡಿ ನಮ್ಮ ವಕೀಲರ ಜೊತೆ ಮಾತಾಡುತ್ತೇನೆ. ಬಳಿಕ ನಾವು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ. ಲೋಕಾಯುಕ್ತ ತನಿಖೆ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಹೇಳಿದಂತೆ ತನಿಖೆ ನಡೆಯುತ್ತಿದೆ ಎಂಬ ಅನುಮಾನ ಇತ್ತು. ಅದಕ್ಕಾಗಿ ನಾವು ಸಿಬಿಐಗೆ ಹೋಗುತ್ತೇವೆ, ಮುಂದಿನ ವಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇವೆ. ಈ ಪ್ರಕರಣವನ್ನ ಸಿಬಿಐಗೆ ನೀಡುವಂತೆ ಹೋರಾಟ ಮುಂದುವರಿಸುತ್ತೇವೆ ಎಂದು ತಿಳಿಸಿದರು.

ಇದುವರೆಗೆ ನಾವು ಗೆದ್ದಿದ್ದೆವು, ಈಗ ಸಣ್ಣ ಹಿನ್ನಡೆಯಾಗಿದೆ, ಇದರಿಂದ ನಾನು ದೃತಿಗೆಡುವುದಿಲ್ಲ. ಈಗಲೂ ನನಗೆ ಲೋಕಾಯುಕ್ತದ ತನಿಖೆ ಮೇಲೆ ನಂಬಿಕೆ ಇಲ್ಲ. ಸುಪ್ರೀಂ ಕೋರ್ಟ್‌ ಮುಡಾ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸುತ್ತದೆ ಎಂಬ ನಂಬಿಕೆಯಿದೆ ಎಂದು ಹೇಳಿದರು.

ಮುಡಾ ಪ್ರಕರಣ; ಸುಪ್ರೀಂ ಕೋರ್ಟ್‌ಗೆ ಹೋಗುವೆ:ಸ್ನೇಹಮಯಿ ಕೃಷ್ಣ Read More

ಇಡಿಯಿಂದ ದುರುದ್ದೇಶದಿಂದ ನಮ್ಮ ಹೆಸರುಬಳಕೆ:ಡಾ.ಯತೀಂದ್ರ

ಮೈಸೂರು: ಮುಡಾದಲ್ಲಿ ಆಗಿರುವ ಭ್ರಷ್ಟಾಚಾರಕ್ಕೂ ನಮ್ಮ14 ನಿವೇಶನಗಳಿಗೂ ಸಂಬಂಧ ಇಲ್ಲ, ಇದೇ ಬೇರೆ ವಿಚಾರ,ಇಡಿಯ ವರು ದುರುದ್ದೇಶದಿಂದ ನಮ್ಮ ಹೆಸರು ಬಳಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ‌ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಮಾಧ್ಯಮ ಪ್ರತನಿಧಿಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ಮುಡಾದಲ್ಲಿ ನಮ್ಮ ಜಮೀನು ವಶ ಪಡಿಸಿಕೊಂಡಿದ್ದಕ್ಕೆ ಬದಲಿ ನಿವೇಶನ ಕೊಟ್ಟಿದ್ದರು.ಆದರೆ,ಮುಡಾದಲ್ಲಿ ಆಗಿರುವ ಭ್ರಷ್ಟಾಚಾರಕ್ಕೂ ನಮ್ಮ 14 ನಿವೇಶನಗಳಿಗೂ ಸಂಬಂಧ ಇಲ್ಲ,ನಮಗೆ ಕೊಟ್ಟಿರುವ ಸೈಟು ಕಾನೂನಾತ್ಮಕವಾಗಿದೆ ಎಂದು ಅವರಿಗೂ ಗೊತ್ತು,ಹೇಗಾದರೂ ಮಾಡಿ ಸಿದ್ದರಾಮಯ್ಯ ಅವರನ್ನ ಆರೋಪಿ ಸ್ಥಾನದಲ್ಲಿ ನಿಲ್ಲಿಸಬೇಕು ಎಂದು ಕೇಂದ್ರ ಬಿಜೆಪಿ ಮತ್ತು ರಾಜ್ಯ ಬಿಜೆಪಿ ಇಡಿಗೆ ಒತ್ತಡ ಹೇರಿವೆ ಎಂದು ಆರೋಪಿಸಿದರು.

ಕೇಂದ್ರ ತನಿಖಾ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿಲ್ಲ,
ಬಿಜೆಪಿ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ.
ಸತ್ಯ,ನ್ಯಾಯಕ್ಕೆ ಜಯ ಸಿಕ್ಕೇ ಸಿಗುತ್ತದೆ,
ಸಿದ್ದರಾಮಯ್ಯ ಅವರು ಈ ಆರೋಪದಿಂದ ಮುಕ್ತರಾಗಿ ಹೊರ ಬರುತ್ತಾರೆ ಎಂದು ಯತೀಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮ ಕುಟುಂಬ ಪ್ರಾಪರ್ಟಿ ಸೀಜ್ ಮಾಡಿಲ್ಲ,ಯಾವುದೇ ದಾಖಲೆ ಕೂಡ ಸಿಕ್ಕಿಲ್ಲ
ಇದೆಲ್ಲವು ಜನರ ಮನಸ್ಸಲ್ಲಿ ಸಿದ್ದರಾಮಯ್ಯ ಅವರನ್ನ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ಅಷ್ಟೇ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಯತೀಂದ್ರ,
ಅದು ದೊಡ್ಡ ನಾಯಕರಿಗೆ ಬಿಟ್ಟಿದ್ದು
ಆ ಬಗ್ಗೆ ಮಾತನಾಡಲು ನಾನು ಚಿಕ್ಕವನು ಎಂದು ತಿಳಿಸಿದರು.

ಅಧ್ಯಕ್ಷರಿಗೂ ಸಿಎಂ ಗೂ ಭಿನ್ನಾಭಿಪ್ರಾಯ ಇದೆ ಅಂತ ಹೇಳೋರು ಬಿಜೆಪಿಯವರು.
ಆ ರೀತಿ ಬೆಳವಣಿಗೆ ಕಾಂಗ್ರೆಸ್ ನಲ್ಲಿ ಇಲ್ಲ.
ಅದು ಬಿಜೆಪಿಯ ವ್ಯಾಖ್ಯಾನ ಅಷ್ಟೆ.
ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರೆ,ಹೈಕಮಾಂಡ್ ಮತ್ತು ಅಧ್ಯಕ್ಷರೂ ಸೇರಿದಂತೆ ಎಲ್ಲರೂ ಸಿದ್ದರಾಮಯ್ಯ ಅವರ ಪರವಾಗಿದ್ದಾರೆ ಯತೀಂದ್ರ ಹೇಳಿದರು.

ಇಡಿಯಿಂದ ದುರುದ್ದೇಶದಿಂದ ನಮ್ಮ ಹೆಸರುಬಳಕೆ:ಡಾ.ಯತೀಂದ್ರ Read More

ಮುಡ ಪ್ರಕರಣ:ಅಂತಿಮ ಹಂತ ತಲುಪಿದ ಲೋಕಾಯುಕ್ತ ತನಿಖೆ

ಮೈಸೂರು: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಮುಡಾದಿಂದ ಪಡೆದಿದ್ದ 14 ಸೈಟ್‌ಗಳ ಬಗೆಗಿನ ಲೋಕಾಯುಕ್ತ ತನಿಖೆ ಅಂತಿಮ ಹಂತ ತಲುಪಿದೆ.

ಮುಡಾದಲ್ಲಿ ಲೋಕಾಯುಕ್ತ ಅಧಿಕಾರಿಗಳು, ಕೆಲ ಆಡಿಯೋ ಹಾಗೂ ಕಡತಗಳನ್ನು ತೆಗೆದುಕೊಂಡು ಹೋಗಿದ್ದಾರೆ.

ಪ್ರಕರಣದ ವರದಿಯನ್ನು ನ್ಯಾಯಾಲಯಕ್ಕೆ ನೀಡಲು ಲೋಕಾಯುಕ್ತಕ್ಕೆ ಜ. 27 ಕೊನೆಯ ದಿನವಾಗಿದ್ದು, ಲೋಕಾಯುಕ್ತ ಪೊಲೀಸರು ಕೊನೆಯ ಹಂತದ ವಿಚಾರಣೆ ಕೈಗೊಂಡಿದ್ದಾರೆ.

50:50 ಅನುಪಾತದ ಸೈಟು ಹಂಚಿಕೆ ವಿಚಾರದಲ್ಲಿ ಮುಡಾ ಸದಸ್ಯರ ಅಭಿಪ್ರಾಯ ಏನಾಗಿತ್ತು ಎಂಬ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಮುಡಾ ಕಚೇರಿಗೆ ಲೋಕಾಯುಕ್ತ ಎಸ್ಪಿ ಟಿ.ಜೆ ಉದೇಶ್ ನೇತೃತ್ವದ ತಂಡ ಭೇಟಿ ನೀಡಿ, 50:50 ಅನುಪಾತದ ಬಗ್ಗೆ ಚರ್ಚೆಯಾದ ಸಭೆಯ ಬಗ್ಗೆ ಮಾಹಿತಿ ಸಂಗ್ರಹಿಸಿ, 2020ರ ನ.11ರಂದು ನಡೆದ ಸಭೆ ನಡಾವಳಿ ಪರಿಶೀಲಿಸಿ ಅಂದಿನ ಸಭಾ ನಡವಳಿ, ಧ್ವನಿ ಸುರಳಿ ಕೇಳಿಸಿಕೊಂಡು ಅದರ ಮಾಹಿತಿಯನ್ನೂ ದಾಖಲಿಸಿಕೊಂಡಿದೆ.

ಅಂದಿನ ಸಭೆಯಲ್ಲಿ ಮಾಜಿ ಆಯುಕ್ತ ನಟೇಶ್ ಹಾಗೂ ಮಾಜಿ ಅಧ್ಯಕ್ಷ ಹೆಚ್‌.ವಿ ರಾಜೀವ್ ಇದ್ದ ಅವಧಿಯ ಸಭೆ ಆಡಿಯೋ ಇದಾಗಿದ್ದು ಅಂದಿನ ಸಭೆಯಲ್ಲಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ, ಶಾಸಕ ತನ್ವೀರ್‌ ಸೇಠ್, ಜಿ.ಟಿ ದೇವೇಗೌಡ, ಎಸ್.ಎ ರಾಮ್‌ದಾಸ್, ಎಲ್. ನಾಗೇಂದ್ರ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಸೇರಿ ಹಲವು ಪ್ರಮುಖರು ಭಾಗಿಯಾಗಿದ್ದರು.

ಸಭೆಯಲ್ಲಿ 50 : 50 ಅನುಪಾತ ಚರ್ಚೆ ನಡೆದಿತ್ತು. ಹಾಗಾಗಿ ಇದರ ಮಾಹಿತಿಯನ್ನು ಲೋಕಾಯುಕ್ತ ಪೊಲೀಸರು ಸಂಗ್ರಹಿಸಿದ್ದಾರೆ ಎಂದು ಗೊತ್ತಾಗಿದೆ.

ಮುಡ ಪ್ರಕರಣ:ಅಂತಿಮ ಹಂತ ತಲುಪಿದ ಲೋಕಾಯುಕ್ತ ತನಿಖೆ Read More

ಮುಡಾ ಹಗರಣ: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಲಾದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ 27ಕ್ಕೆ ಮುಂದೂಡಿದೆ.

ಮುಡಾ ನಿವೇಶನ ಹಂಚಿಕೆ ಹಗರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ತನಿಖಾ ವರದಿಯನ್ನು ಜನವರಿ 27ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಲೋಕಾಯುಕ್ತಕ್ಕೆ ಸೂಚಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಹಿರಿಯ ವಕೀಲ ರವಿವರ್ಮ ಕುಮಾರ್, ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದರು, ಅರ್ಜಿದಾರರ ಪರ ಮಣಿಂದರ್ ಸಿಂಗ್ ವಾದ ಮಂಡಿಸಿದರು.

ವಾದದ ವೇಳೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಮೂಲ ಕಡತಗಳು ನಾಪತ್ತೆಯಾಗಿವೆ ಎಂದು ಸಿಂಗ್ ಆರೋಪಿಸಿದರು.

ನಾವು ಎಲ್ಲವನ್ನೂ ನಿಭಾಯಿಸುತ್ತೇವೆ. ಆದರೆ, ಮೊದಲು ಲೋಕಾಯುಕ್ತರು ಇದುವರೆಗೆ ಮಾಡಿದ ತನಿಖೆಯ ಎಲ್ಲ ವಿವರಗಳನ್ನು ನ್ಯಾಯಾಲಯಕ್ಕೆ ಒದಗಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಮುಡಾ ಹಗರಣ: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ Read More