ಮೈಸೂರು: ಇಡೀ ದೇಶದ ನಾಗರಿಕರು ಆರೋಗ್ಯವಾಗಿರಬೇಕೆಂಬ ಮುಖ್ಯ ಆಶಯದೊಂದಿಗೆ ಪ್ರಧಾನಿ ಮೋದಿ ಅವರು ಆರಂಭಿಸಿರುವ ‘ಫಿಟ್ ಇಂಡಿಯಾ’ ಆಂದೋಲನಕ್ಕೆ ಮೈಸೂರಿನಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ಸಂಸದರ ಕ್ರೀಡೋತ್ಸವ ಅಂಗವಾಗಿ ಮೈಸೂರು ವಿ.ವಿ ದೈಹಿಕ ಶಿಕ್ಷಣ ವಿಭಾಗ, ಮೈಸೂರು ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್, ಫೋನಿಕ್ಸ್ ಇಂಟರ್‌ನ್ಯಾಷನಲ್ ಅಕಾಡೆಮಿ, ಸೈಕ್ಲೋಪೀಡಿಯಾ, ಫನ್ ಪ್ಯಾಲೇಸ್, ಸನ್‌ಪ್ಯೂರ್, ಲಿಟ್ಲ್ ಎಲ್ಲಿ, ಬುಕ್ಸ್ ಅಂಡ್ ಬ್ರೇನ್ಸ್ ಜಂಟಿ ಸಹಯೋಗದಲ್ಲಿ ಮಾನಸಗಂಗೋತ್ರಿಯಲ್ಲಿ ಆಯೋಜಿಸಿದ್ದ ಕಿಡ್ಸ್ ಸೈಕ್ಲೊಥಾನ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಫಿಟ್ ಇಂಡಿಯಾ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಆಂದೋಲನವಾಗಿದೆ. ಕಿರಿಯ ವಯಸ್ಸಿನಿಂದಲೇ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕೆಂಬ ಪ್ರಧಾನಮಂತ್ರಿಯವರ ಆಶಯದಂತೆ ಮೈಸೂರು-ಕೊಡಗು ಕ್ಷೇತ್ರದಲ್ಲಿ ವಿವಿಧ ಕ್ರೀಡೋತ್ಸವ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಆರೋಗ್ಯ ಕುರಿತು ಜಾಗೃತಿ ಮೂಡಿಸುವುದು ನಮ್ಮ ಮುಖ್ಯ ಧ್ಯೇಯ. ಕಿರಿಯ ವಯಸ್ಸಿನಿಂದಲೇ ಕ್ರೀಡೆಗೆ ಆದ್ಯತೆ ನೀಡಿದರೆ ಭವಿಷ್ಯದಲ್ಲಿ ನಮ್ಮ ದೇಶದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿಯೂ ಪಸರಿಸಬಹುದು,ಸೈಕ್ಲಿಂಗ್ ಸ್ಪರ್ಧೆಯಲ್ಲಿ ಅಗಾಧ ಅವಕಾಶವಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಅವರಿಗೆ ವೇದಿಕೆ ಕಲ್ಪಿಸಲು ಬದ್ಧನಿದ್ದೇನೆ ಎಂದು ಯದುವೀರ್ ತಿಳಿಸಿದರು.
ಮೈಸೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಅಭಿವೃದ್ಧಿಪರ ಆಡಳಿತಕ್ಕೆ ಬಿಹಾರದ ಜನತೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಅಭೂತಪೂರ್ವ ಜಯದ ಹಾರ ತೊಡಿಸಿದ್ದಾರೆ ಎಂದು ಸಂಸದ ಯದುವೀರ ಒಡೆಯರ್ ತಿಳಿಸಿದ್ದಾರೆ.
ಬಿಹಾರ ಚುನಾವಣೆ ಫಲಿತಾಂಶ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಸದರು, ಬಿಜೆಪಿ ನೇತೃತ್ವದ ಮೈತ್ರಿಕೂಟದ ದಾಖಲೆಯ ಗೆಲುವು ಸ್ಮರಣೀಯ ಎಂದು ಹೇಳಿದ್ದಾರೆ.
ವಿಕಸಿತ ಭಾರತಕ್ಕೆ ಮೋದಿ ಅವರ ದೃಢ ಸಂಕಲ್ಪ ಮತ್ತು ಬಿಹಾರದಲ್ಲಿ ಕೈಗೊಂಡ ಅಭಿವೃದ್ಧಿಪರ ಯೋಜನೆಗಳು ಬಿಜೆಪಿಗೆ ಕೈ ಹಿಡಿದಿವೆ. ಬಿಜೆಪಿ ಪರವಾಗಿ ನಾನು ಬಿಹಾರ ಜನರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಮತಚೋರಿ ಎಂಬ ಸುಳ್ಳಿನ ಕಥೆಯನ್ನು ಹೇಳಿಕೊಂಡು ಕಾಲ ಕಳೆಯುತ್ತಿದೆ.ಆದರೆ ಬಿಜೆಪಿ-ಜೆಡಿಯು ಜನಪರ ಕೆಲಸಗಳನ್ನು ಕೈಗೊಳ್ಳುತ್ತಿದೆ. ಇದೇ ನಮ್ಮ ಮೈತ್ರಿಕೂಟಕ್ಕೂ ಮಹಾ ಘಟಬಂಧನಕ್ಕೆ ಇರುವ ವ್ಯತ್ಯಾಸ ಎಂದು ಯದುವೀರ್ ತಿಳಿಸಿದ್ದಾರೆ.
ದೇಶದಲ್ಲಿ ನರೇಂದ್ರ ಮೋದಿ ಪರ ಅಲೆ ಹೇಗಿದೆ ಎಂಬುದು ಇದರಿಂದ ಮತ್ತೊಮ್ಮೆ ಸಾಬೀತಾಗುತ್ತದೆ. ನಮ್ಮ ಬಿಜೆಪಿ ಸರ್ಕಾರದಿಂದ ದೇಶಕ್ಕೆ ಇನ್ನಷ್ಟು ಹೊಸ ಹೊಸ ಕೊಡುಗೆಗಳು ದೊರೆಯಲಿದೆ. ಕರ್ನಾಟಕದಲ್ಲೂ ಮುಂದಿನ ದಿನಗಳಲ್ಲಿ ಕೇಸರಿ ಅಲೆ ಏಳಲಿದೆ ಎಂದು ಯದುವೀರ್ ಒಡೆಯರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈಸೂರು: ಸಂಸದರ ಕ್ರೀಡಾ ಮಹೋತ್ಸವದ ಅಂಗವಾಗಿ ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನೇತೃತ್ವದಲ್ಲಿ ಸಂಸದರ ಬ್ಯಾಡ್ಮಿಂಟನ್ ಕಪ್ ಪಂದ್ಯಾವಳಿ ನ.15 ರಂದು ನಡೆಯಲಿದೆ.
ಈ ಪಂದ್ಯಾವಳಿಯ ಪೋಸ್ಟರ್ ಅನ್ನು ಯದುವೀರ್ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.
ಮೈಸೂರಿನ ಬೋಗಾದಿ ಎರಡನೇ ಹಂತದ ರಾಜರಾಜೇಶ್ವರಿ ನಗರದಲ್ಲಿರುವ ಸ್ಫೋರ್ಟ್ಸ್ ಪಾರ್ಕ್‌ನಲ್ಲಿ ಈ ಪಂದ್ಯಾವಳಿ ನಡೆಯಲಿದೆ.
ಮೈಸೂರಿನ ಕ್ರೀಡಾಸಕ್ತರು ಈ ಸದವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪೋಸ್ಟರ್ ಬಿಡುಗಡೆ ವೇಳೆ ಮನವಿ ಮಾಡಿದರು.
ಜ್ಯೂನಿಯರ್, ಸೀನಿಯರ್ ವಿಭಾಗದಲ್ಲಿ ಪಂದ್ಯಗಳು ನಡೆಯಲಿವೆ.
ಬಾಲಕ-ಬಾಲಕಿಯರಿಗಾಗಿ ಮೂರು ವಿಭಾಗದಲ್ಲಿ ಹಾಗೂ ಸೀನಿಯರ್‌ನಲ್ಲಿ ಪುರುಷರು ಮತ್ತು ಮಹಿಳೆಯರ ವಿಭಾಗದಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದೆ.
ನವೆಂಬರ್ 15ರಂದು ನಡೆಯಲಿರುವ ಪಂದ್ಯಗಳಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಳ್ಳಲು ನವೆಂಬರ್ 14ರಂದು ಸಂಜೆ 4 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ.
ಸ್ಕೂಲ್ 10x, ಎಪಿಎನ್ ಪ್ರಾಪರ್ಟೀಸ್, SWISS, ರಾಜೇಂದ್ರ ಹಾರ್ಡ್‌ವೇರ್ ಅಂಡ್ ಪ್ಲೈವುಡ್ ಸ್ಫೋರ್ ಪ್ರಾಯೋಜಕತ್ವದಲ್ಲಿ ಈ ಪಂದ್ಯಾವಳಿ ನಡೆಯುತ್ತಿದೆ.
ಹೆಚ್ಚಿನ ಮಾಹಿತಿಗಾಗಿ 99166 73300 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.
ಈ ವಿಭಾಗದಲ್ಲಿ ಸ್ಪರ್ಧೆಗಳು: ಜೂನಿಯರ್ಸ್ (ಪ್ರವೇಶ ಶುಲ್ಕ 300) 11 ವರ್ಷದೊಳಗಿನವರಿಗೆ ಸಿಂಗಲ್ಸ್ (ಬಾಲಕರು ಮತ್ತು ಬಾಲಕಿಯರು) 13 ವರ್ಷದೊಳಗಿನವರಿಗೆ ಸಿಂಗಲ್ಸ್ (ಬಾಲಕರು ಮತ್ತು ಬಾಲಕಿಯರು) 15 ವರ್ಷದೊಳಗಿನವರಿಗೆ ಸಿಂಗಲ್ಸ್ (ಬಾಲಕರು ಮತ್ತು ಬಾಲಕಿಯರು) ಸೀನಿಯರ್ಸ್ (ಪ್ರವೇಶ ಶುಲ್ಕ 600) ಪುರುಷರ ಡಬಲ್ಸ್ ಪುರುಷರ ಡಬಲ್ಸ್ 35+ ಪುರುಷರ ಡಬಲ್ಸ್ 80+ ಮಿಶ್ರ ಡಬಲ್ಸ್ ಮಹಿಳೆಯರ ಜಂಬಲ್ಡ್ 60+
ಮೈಸೂರು: ಇತ್ತೀಚೆಗೆ ನಿಧನರಾದ ಸಾರಸ್ವತ ಲೋಕದ ಧ್ರುವತಾರೆ ಡಾ. ಎಸ್.ಎಲ್. ಭೈರಪ್ಪನವರ ನಿವಾಸಕ್ಕೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಯ ಭೇಟಿ ನೀಡಿ, ಪತ್ನಿ, ಪುತ್ರರಿಗೆ ಸಾಂತ್ವನ ಹೇಳಿದರು.
ಮೈಸೂರಿನ ಕುವೆಂಪು ನಗರದಲ್ಲಿರುವ ನಿವಾಸಕ್ಕೆ ಸೋಮವಾರ ಭೇಟಿ ನೀಡಿದ ಯದುವೀರ್, ಭೈರಪ್ಪ ಅವರ ಪತ್ನಿ ಸರಸ್ವತಮ್ಮ ಹಾಗೂ ಪುತ್ರ ರವಿಶಂಕರ್ ಅವರೊಂದಿಗೆ ಮಾತುಕತೆ ನಡೆಸಿ, ಸಾಂತ್ವನ ಹೇಳಿದರು.
ದಸರಾ ಹಾಗೂ ಕೆಲವು ಧಾರ್ಮಿಕ ವಿಧಿ-ವಿಧಾನಗಳು ನಡೆಯುತ್ತಿದ್ದ ಕಾರಣ ನಮ್ಮ ಮೈಸೂರಿನ ಸಾಹಿತ್ಯ ರತ್ನ ಡಾ. ಎಸ್.ಎಲ್. ಭೈರಪ್ಪ ಅವರ ನಿವಾಸಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಈಗ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ತಿಳಿಸಿದ್ದೇವೆ ಎಂದು ಯದುವೀರ್ ಹೇಳಿದ್ದಾರೆ.
ಕರ್ನಾಟಕಕ್ಕೆ ಮತ್ತು ವಿಶೇಷವಾಗಿ ಮೈಸೂರು ಭಾಗಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರಕಿಸಿಕೊಟ್ಟಿರುವ ಎಸ್.ಎಲ್. ಭೈರಪ್ಪನವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದೇನೆ ಎಂದು ಯದುವೀರ್ ತಿಳಿಸಿದ್ದಾರೆ.
ಮೈಸೂರಿನ ನಗರ ಕೇಂದ್ರ ಗ್ರಂಥಾಲಯಕ್ಕೆ ಡಾ. ಎಸ್.ಎಲ್. ಭೈರಪ್ಪ ಅವರ ಹೆಸರು ಮರು ನಾಮಕರಣ ಮಾಡಲು ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗಿದೆ, ಗ್ರಂಥಾಲಯದ ಆವರಣದಲ್ಲಿ ಭೈರಪ್ಪನವರ ಜೀವನ ಚರಿತ್ರೆ, ಸಾಹಿತ್ಯ ಕೃತಿಗಳನ್ನು ಪ್ರತಿಬಿಂಬಿಸುವ ಶಾಶ್ವತ ಸ್ಮಾರಕವನ್ನು ನಿರ್ಮಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ವಿನಂತಿಸಿದ್ದೇವೆ ಎಂದು ಭೈರಪ್ಪನವರ ಪತ್ನಿ ಹಾಗೂ ಪುತ್ರರಿಗೆ ಮಾಹಿತಿ ನೀಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಎಸ್.ಎಲ್. ಭೈರಪ್ಪ ಅವರ ಅಗಲಿಕೆ ಇಡೀ ನಾಡಿಗೆ ತೀವ್ರ ನೋವುಂಟು ಮಾಡಿದೆ. ಅವರು ನಮ್ಮನ್ನು ಭೌತಿಕವಾಗಿ ಅಗಲಿದ್ದರೂ ಅವರ ಅಕ್ಷರಗಳ ಮೂಲಕ ಅಮರರಾಗಿದ್ದಾರೆ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದ್ದಾರೆ.
ಮೈಸೂರು: ಸೋಷಿಯಲ್ ಮೀಡಿಯಾದಲ್ಲಿ ಎಲ್ಲೋ ಕುಳಿತುಕೊಂಡು ಕಮೆಂಟ್ ಹಾಕುತ್ತಾರೆ, ಅಂತವರಿಗೆ ಏನು ಮಾಡೋಕಾಗಲ್ಲ,ಹಾಗಾಗಿ ನಾವು ನಮ್ಮ ಕೆಲಸ ಮಾಡಿಕೊಂಡು ಹೋಗಬೇಕು ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಲಹೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ಯೋಜನಯಡಿ 193 ಕೋಟಿ ವೆಚ್ಚದಲ್ಲಿ ಮೈಸೂರು ವಸ್ತುಪ್ರದರ್ಶನ ಆವರಣದಲ್ಲಿ ಯುನಿಟಿ ಮಾಲ್ ನಿರ್ಮಾಣಗೊಳ್ಳುತ್ತಿದ್ದು, ಸಂಸದ ಯದುವೀರ್ ಶಾಸಕ ಟಿ.ಎಸ್.ಶ್ರೀವತ್ಸ ಅವರೊಂದಿಗೆ ಸ್ಥಳ ಪರಿಶೀಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಸೋಷಿಯಲ್ ಮೀಡಿಯಾದಲ್ಲಿ ನಟಿ ರಮ್ಯಗೆ ದರ್ಶನ್ ಅಭಿಮಾನಿಗಳು ಧಮ್ಕಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನಾನು ಕೂಡ ಅಂತಹ ಟೀಕೆಗಳನ್ನು ಅನುಭವಿಸಿದ್ದೇನೆ ಎಂದು ತಿಳಿಸಿದರು.
ಎಲ್ಲೋ ಕುಳಿತುಕೊಂಡು ಕಮೆಂಟ್ ಹಾಕುತ್ತಾರೆ,ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬಾರದು,ನಮ್ಮ ಕೆಲಸ ಮಾಡಿಕೊಂಡು ಹೋಗಬೇಕಷ್ಟೆ ಎಂದರು.
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ವಿಚಾರಣೆ ಮಾಡುತ್ತಿದೆ, ತೀರ್ಪು ಬರುವ ತನಕ ನಾವು ಯಾರೂ ಅದಕ್ಕೆ ಪ್ರತಿಕ್ರಿಯೆ ನೀಡಬಾರದು ಎಂದು ಸಂಸದರು ಹೇಳಿದರು.
ಸೋಷಿಯಲ್ ಮೀಡಿಯಾದಲ್ಲಿನ ಕಾಮೆಂಟ್ ಗಳನ್ನ ನಿರ್ಲಕ್ಷ ಮಾಡಬೇಕಷ್ಟೆ ಎಂದು ತಿಳಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಗೆ ಸಿಎಂ ಸಿದ್ದರಾಮಯ್ಯ ಹೋಲಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಯದುವೀರ್, ನಾಯಕತ್ವ ಇರೋದು ಕೆಲಸ ಮಾಡೋಕೆ ಹೋಲಿಕೆ ಮಾಡೋಕಲ್ಲ ಎಂದು ಕಾಂಗ್ರೆಸಿಗರಿಗೆ ಟಾಂಗ್ ನೀಡಿದರು.
ನಾನು ಸಂಸದನಾಗಿ ನನ್ನ ಕೆಲಸ ಮಾಡುತ್ತಿದ್ದೇನೆ. ನನ್ನ ಹಿಂದಿನವರು ಏನು ಮಾಡಿದರು ಅದನ್ನು ನಾನು ಹೋಲಿಕೆ ಮಾಡಲ್ಲ. ನನ್ನ ಆಲೋಚನೆಗಳ ಪ್ರಕಾರ ಕೆಲಸ ಮಾಡುತ್ತಿದ್ದೇನೆ. ಸರ್ಕಾರದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ಯತೀಂದ್ರ ಅವರ ಹೇಳಿಕೆ ಖಂಡಿಸಿ ಪ್ರತಿಭಟನೆಗಳು ಆಗುತ್ತಿವೆ, ಕ್ಷಮೆ ಕೇಳುವಂತೆ ಆಗ್ರಹ ವ್ಯಕ್ತವಾಗುತ್ತಿದೆ. ಕ್ಷಮೆ ಕೇಳೋದು ಬಿಡೋದು ಅವರಿಗೆ ಬಿಟ್ಟಿದ್ದು. ಜನರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅವರೇ ಉತ್ತರ ಕೊಡುತ್ತಾರೆ ಎಂದು ಯದುವೀರ್ ಹೇಳಿದರು.
ಮೈಸೂರಿನಲ್ಲಿ ಡ್ರಗ್ಸ್ ಜಾಲ ಪತ್ತೆ ಹಿನ್ನಲೆ, ಇದೊಂದು ಒಳ್ಳೆಯ ಕಾರ್ಯಾಚರಣೆ. ಡ್ರಗ್ಸ್ ಅನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕು, ಇದನ್ನು ಗಂಭೀರವಾಗಿ ಪರಿಗಣಿಸಬೇಕು,ಈ ಬಗ್ಗೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇವೆ, ಪೊಲೀಸರು ಕೂಡ ಇನ್ನೂ ಹೆಚ್ಚಿನದಾಗಿ ಕೆಲಸ ಮಾಡಬೇಕು. ಡ್ರಗ್ಸ್ ತಡೆಯುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಯದುವೀರ್ ತಿಳಿಸಿದರು.
ಮೈಸೂರಿನ ವಸ್ತುಪ್ರದರ್ಶನದ ಆವರಣದಲ್ಲಿ ನಿರ್ಮಾಣ ಗೊಳ್ಳುವ ಮಾಲ್ ನಲ್ಲಿ 99 ಮಳಿಗೆಗಳು ಇರುತ್ತದೆ. ಮೈಸೂರಿನ ಪರಂಪರೆ ಸಾರುವ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಮೈಸೂರಿನ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಎಲ್ಲಾ ರೀತಿಯ ಅಂಗಡಿಗಳನ್ನು ಕೂಡ ಇಲ್ಲಿ ತೆರೆಯಲು ನಿರ್ಧಾರ ಮಾಡಲಾಗಿದೆ ಎಂದು ವಿವರಿಸಿದರು.
ನವದೆಹಲಿ: ದಾನಗಳಲ್ಲಿ ಶ್ರೇಷ್ಠ ದಾನ ವಿದ್ಯಾದಾನ ಎನ್ನುವುದು ಪ್ರತೀತಿ. ಅದಕ್ಕಾಗಿ ನಮ್ಮ ಮೈಸೂರು ಒಡೆಯರ್ ಸಂಸ್ಥಾನ ಶಿಕ್ಷಣಕ್ಕಾಗಿ ಹೆಚ್ಚು ಒತ್ತು ನೀಡುತ್ತಿತ್ತು ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಲಿಸು ಫೌಂಡೇಶನ್ 125ನೇ ಗ್ರಂಥಾಲಯಕ್ಕೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.
ಇದೇ ಕಾರಣಕ್ಕೆ ಮೈಸೂರು ವಿಶ್ವದ ಪ್ರಮುಖ ವಿದ್ಯಾನಗರಿಗಳಲ್ಲಿ ಒಂದಾಗಿದೆ. ಇಂಥ ಮೈಸೂರಿನ ಸಂಸ್ಥೆಯಾಗಿರುವ ಕಲಿಸು ಫೌಂಡೇಶನ್ ಮಕ್ಕಳಿಗೆ ಹಾಗೂ ಯುವ ಸಮೂಹಕ್ಕೆ ಜ್ಞಾನಾರ್ಜನೆ ಮಾಡಲು ಮುಂದಾಗಿದ್ದು, ನವದೆಹಲಿಯಲ್ಲಿ ಗ್ರಂಥಾಲಯವನ್ನು ಆರಂಭಿಸಿದೆ ಎಂದು ತಿಳಿಸಿದರು.
ಕಲಿಸು ಸಂಸ್ಥೆ ಕಳೆದ ಕೆಲವು ವರ್ಷಗಳಿಂದ ಜ್ಞಾನ ಹರಡುವ ಯಜ್ಞದಲ್ಲಿ ತೊಡಗಿದೆ. ಈ ಮಹತ್ಕಾರ್ಯದಲ್ಲಿ ನಾನೂ ಕೂಡ ಭಾಗಿಯಾಗಿದ್ದೇನೆ. ಈ ಸಂಸ್ಥೆಯ ರಾಯಭಾರಿಯಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಪುಸ್ತಕ ಸಿಗುವಂತೆ ಮಾಡಲಾಗುತ್ತಿದೆ. ನಿಜಕ್ಕೂ ಇದೊಂದು ಪುಣ್ಯದ ಕೆಲಸ ಎಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿ ಗ್ರಂಥಾಲಯ ಆರಂಭಿಸುವ ಮೂಲಕ ಯುವ ಸಮೂಹದ ಜ್ಞಾನ ಹೆಚ್ಚಿಸಲಾಗುತ್ತಿದೆ. ನಮ್ಮ ಮೈಸೂರಿನ ಕಲಿಸು ಫೌಂಡೇಷನ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಈ ಲೈಬ್ರರಿ ಆರಂಭಿಸಿರುವುದು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ಸಂಸ್ಥಾಪಕರಾದ ನಿಖಿಲೇಶ್ ಅವರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಯದುವೀರ್ ತಿಳಿಸಿದರು.
ನವದೆಹಲಿಯ ಗೋಲ್ ಮಾರುಕಟ್ಟೆಯ ಅಟಲ್ ಆದರ್ಶ್ ಬೆಂಗಾಲಿ ಬಾಲಿಕಾ ವಿದ್ಯಾಲಯದಲ್ಲಿ ತಲೆ ಎತ್ತಿರುವ 125ನೇ ಗ್ರಂಥಾಲಯದಲ್ಲಿ ಸಾವಿರಾರು ಪುಸ್ತಕಗಳು ದೊರೆಯಲಿದೆ. ಇದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಸತ್ಪ್ರಜೆಗಳಾಗಿ ದೇಶಕ್ಕೆ, ನಾಡಿಗೆ ಕೊಡುಗೆ ನೀಡಬೇಕು ಎಂದು ಯದುವೀರ್ ಒಡೆಯರ್ ಕರೆ ನೀಡಿದರು.
ನವದೆಹಲಿಯ ಸಂಸದೆ ಬಾನ್ಸುರಿ ಸ್ವರಾಜ್ ಮಾತನಾಡಿ, ಮಕ್ಕಳಿಗಾಗಿ ಲೈಬ್ರರಿ ಆರಂಭಿಸಿರುವ ಮೈಸೂರು ಮೂಲದ ಕಲಿಸು ಸಂಸ್ಥೆಗೆ ಶುಭ ಹಾರೈಕೆಗಳು ಎಂದು ಹೇಳಿದರು.
ಈ ಸಂಸ್ಥೆಯು ಸರ್ಕಾರ ಮಾಡುವ ಕೆಲಸವನ್ನು ಮಾಡುತ್ತಿದೆ,ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ನಾವು “ಕಲಿಸು” ಸಂಸ್ಥೆಯೊಂದಿಗೆ ಕೈ ಜೋಡಿಸಲು ಉತ್ಸುಕರಾಗಿದ್ದೇವೆ. ಮತ್ತು ಶೀಘ್ರದಲ್ಲೇ ಕಲಿಸು ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗುತ್ತೇವೆ ಎಂದು ತಿಳಿಸಿದರು.
ನಮ್ಮ ದೆಹಲಿಯ ಮಕ್ಕಳಿಗಾಗಿ ಉತ್ತಮ ಪುಸ್ತಕಗಳು ದೊರೆಯುವಂತೆ ಮಾಡಿದ್ದು ಸ್ವಾಗತಾರ್ಹ. ಇಂಥ ಲೈಬ್ರರಿಗಳು ಇನ್ನಷ್ಟು ಆರಂಭವಾಗಲಿ. ಸಂಸ್ಥಾಪಕರಿಗೆ ಹಾಗೂ ಇಡೀ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಬಾನ್ಸುರಿ ಸ್ವರಾಜ್ ತಿಳಿಸಿದರು.
ನಂತರ ಯದುವೀರ್ ಒಡೆಯರ್ ಹಾಗೂ ಬಾನ್ಸುರಿ ಸ್ವರಾಜ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಭವಿಷ್ಯದ ಯೋಜನೆಗಳು, ಹವ್ಯಾಸ, ಮುಂದಿನ ಗುರಿ ಹಾಗೂ ಇಷ್ಟದ ವಿಷಯ ಹಾಗೂ ಕ್ರೀಡೆ ಬಗ್ಗೆ ಚರ್ಚಿಸಿದರು.
ಕಲಿಸು ಫೌಂಡೇಶನ್ ಸಂಸ್ಥಾಪಕರು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಿಖಿಲೇಶ್ ಮಾತನಾಡಿ, ಗ್ರಂಥಾಲಯಗಳನ್ನು ಆರಂಭಿಸುವ ಅಭಿಯಾನದ ಕುರಿತು ವಿವರಿಸಿದರು.
ರಾಜ ಮಹಾರಾಜರ ಕಾಲದಿಂದಲೂ ಮೈಸೂರಿನಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಹಾಗೂ ಗ್ರಾಮೀಣ ಭಾಗದ ಮಕ್ಕಳಿಗೆ ಹೆಚ್ಚು ಪುಸ್ತಕಗಳು ದೊರೆಯಬೇಕು ಎಂಬ ಉದ್ದೇಶದಿಂದ “ಕಲಿಸು” ಫೌಂಡೇಶನ್ ಆರಂಭಿಸಲಾಯಿತು ಎಂದು ತಿಳಿಸಿದರು.
ಮೈಸೂರು: ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ಸಂಬಂಧ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಹೆಸರು ಹೇಳದೆ ಮಾಜಿ ಸಂಸದ ಪ್ರತಾಪ್ ಸಿಂಹ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಚಾಮುಂಡಿ ಬೆಟ್ಟದ ಪ್ರಾಧಿಕಾರ ಸ್ಥಾಪನೆಗೆ ರಾಜಮನೆತನ ವಿರೋಧ ವಿಚಾರ ಕುರಿತು ಮಾತನಾಡಿದ ಪ್ರತಾಪ್ ಸಿಂಹ, ಸಿದ್ದರಾಮಯ್ಯರನ್ನು ಕೆಲವು ಸೈದ‍್ಧಾಂತಿಕ ವಿಚಾರದಲ್ಲಿ ಮಾತ್ರ ವಿರೋಧಿಸುತ್ತೇನೆ. ಬೆಟ್ಟದ ಯದ್ವಾತದ್ವಾ ಬೆಳವಣಿಗೆ ನಿಯಂತ್ರಿಸಲು ನ್ಯೂನತೆಗಳನ್ನು ಸರಿದೂಗಿಸಲು ಪ್ರಾಧಿಕಾರ ಅವಶ್ಯಕತೆ ಇದೆ ಎಂದು ಪರೋಕ್ಷವಾಗಿ ಯದುವೀರ್ ಗೆ ಟಾಂಗ್ ನೀಡಿದರು.
ಬೆಟ್ಟಕ್ಕೆ ಪೋಲಿಸ್ ಠಾಣೆ ಹಾಗೂ ಆಸ್ಪತ್ರೆ ಬೇಕು, ಇದೆಲ್ಲಾ ಆಗಲು ಒಂದು ಪ್ರಾಧಿಕಾರ ಬೇಕೇ ಬೇಕು. ಈ ಹಿಂದೆ ಬಿಜೆಪಿ ಸರ್ಕಾರದಲ್ಲೂ ಪ್ರಾಧಿಕಾರ ಬೇಕೆಂದು ಧ್ವನಿ ಎತ್ತಿದ್ದೆವು. ಸಿದ್ದರಾಮಯ್ಯನವರು ಪ್ರಾಧಿಕಾರ ರಚನೆ ಮಾಡಿದ್ದಾರೆ. ಖಂಡಿತ ಇದು ಒಳ್ಳೆಯ ಕೆಲಸ ಎಂದು ಸಿಎಂ ಪರ ಬ್ಯಾಟಿಂಗ್ ಮಾಡಿದರು.
ಆಸ್ತಿ ಹೊಡೆದಾಟದ ಬಗ್ಗೆ ನಾನು ಮಾತನಾಡಲ್ಲ ಆದರೆ ದೇವರು ಭಕ್ತರಿಗೆ ಸೇರಬೇಕು. ಭಕ್ತರಿಗೆ ಸೌಲಭ್ಯ ಕಲ್ಪಿಸಬೇಕಾಗಿದ್ದು ಸರ್ಕಾರದ ಕರ್ತವ್ಯ ಎಂದು ತಿಳಿಸಿದರು.
ಅಮೃತ್ ಯೋಜನೆ ಕುಡಿಯುವ ನೀರು ಚಾಮುಂಡಿ ಬೆಟ್ಟಕ್ಕೆ ತಲುಪದಿರಲು ಕಾರಣ ಯಾರು,ನಾನು ಹೇಳಿದ್ರೆ ಕಾಂಟ್ರವರ್ಸಿ ಆಗುತ್ತೆ. ಪೈಪ್ ಲೈನ್ ಎಲ್ಲಿ ತಡೆದು ನಿಂತಿದೆ ನೀವೆ ಹೋಗಿ ಹುಡುಕಿ ಎಂಬುದಾಗಿ ಹೇಳುವ ಮೂಲಕ ಯದುವೀರ್ ಒಡೆಯರ್ ಹೆಸರು ಹೇಳದೆ ಪ್ರತಾಪ್ ಸಿಂಹ ಟಾಂಗ್ ನೀಡಿದರು.
ಚಾಮುಂಡಿ ಬೆಟ್ಟದ ದೇವಿಕೆರೆ ಮೇಲೆ ನಮಾಜ್ ಮಾಡುತ್ತಿದ್ದರು, ಚಾಮುಂಡಿ ಬೆಟ್ಟದಲ್ಲಿ 12 ಮುಸ್ಲಿಂ ಷಾಪ್ ಗಳು ಇದ್ದವು, ಹಿಂದೂಗಳ ದೇವಸ್ಥಾನ, ಭಕ್ತಿ ಭಾವದಿಂದ ಹೋಗುವ ಜಾಗದಲ್ಲಿ ಇವರು ಯಾಕೆ ಅಂಗಡಿ ಇಡಬೇಕು. ಮುಜರಾಯಿ ಕಾನೂನಿನಲ್ಲಿ ಕೂಡ ಇದಕ್ಕೆ ಅವಕಾಶ ಇಲ್ಲ ಎಂದು ಮುಸ್ಲಿಂ ಅಂಗಡಿಗಳನ್ನು ತೆಗೆಸಿದ್ದೆ, ಚಾಮುಂಡೇಶ್ವರಿಗೆ ಅವಮಾನದ ರೀತಿಯಲ್ಲಿದ್ದ ಮಹಿಷ ದಸರಾ ತಡೆಯೊ ಕೆಲಸ ಮಾಡಿದೆ,ಚಾಮುಂಡೇಶ್ವರಿ ತಾಯಿಗೆ ಅನ್ಯಾಯ ಆಗುವಾಗ ಮಾತನಾಡಲಿಲ್ಲ, ಇಂದು ಬೇರೆ ಬೇರೆ ಕಾರಣಕ್ಕೆ ಕಾಂಟ್ರವರ್ಸಿ ಮಾಡುತ್ತಾರೆ ಎಂದು ಪ್ರತಾಪ್ ಸಿಂಹ ಮುಗುಮ್ಮಾಗಿ ಹೇಳಿದರು.