ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಖಾತೆಯಲ್ಲಿದ್ದಹಣ ದುರ್ಬಳಕೆ: ದೂರು ದಾಖಲಿಸಿದ ಪತ್ನಿ

ಮೈಸೂರು: ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿಯ ಖಾತೆಯಲ್ಲಿದ್ದ ಹಣ ದುರ್ಬಳಕೆ ಮಾಡಲಾಗಿದೆ ಎಂದು ಪತ್ನಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಎಟಿಎಂ ಕಾರ್ಡ್ ಹಾಗೂ ಯುಪಿಐ ನಿಂದ ಹಣ ವಿತ್ ಡ್ರಾ ಹಾಗೂ ವರ್ಗಾವಣೆ ಆಗಿದೆ ಎಂದು ಆರೋಪಿಸಿದ್ದಾರೆ.

ಪತಿ ಆತ್ಮಹತ್ಯೆಗೆ ಶರಣಾದ ಸುಮಾರು ಒಂದು ತಿಂಗಳ ಅವಧಿಯಲ್ಲಿ 7.5 ಲಕ್ಷ ಹಣ ದುರ್ಬಳಕೆ ಆಗಿದೆ ಎಂದು ಪತ್ನಿ ಆರೋಪಿಸಿದ್ದಾರೆ.

ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದ ಗಣೇಶ್ ಜೂನ್ ತಿಂಗಳಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇತ್ತೀಚೆಗೆ‌ ಅವರ ಪತ್ನಿ ಕೃಪಾ ಅವರು ಪತಿ ಗಣೇಶ್ ಅವರ ಲ್ಯಾಪ್ ಟಾಪ್ ಪರಿಶೀಲಿಸಿದಾಗ ಜೂನ್ 27 ರಿಂದ ಆಗಸ್ಟ್ 1 ರ ವರೆಗೆ 7.5 ಲಕ್ಷ ಹಣ ಎಟಿಎಂ ನಿಂದ ವಿತ್ ಡ್ರಾ ಆಗಿದೆ ಹಾಗೂ ಯುಪಿಐ ಮೂಲಕ ವರ್ಗಾವಣೆ ಆಗಿದೆ.

ಗಣೇಶ್ ಅವರು ಆತ್ಮಹತ್ಯೆ ಮಾಡಿಕೊಂಡ ನಂತರ ಎಟಿಎಂ ಕಾರ್ಡ್ ಗಳು ಪೊಲೀಸರ ಬಳಿ ಇದೆ ಎಂದು ಪತ್ನಿ ಕೃಪಾ ನಂಬಿದ್ದಾರೆ.ಹೀಗಿದ್ದೂ ಹಣ ಹೇಗೆ ವಿತ್ ಡ್ರಾ ಆಗಿದೆ ಎಂಬುದು ನಿಗೂಢವಾಗಿದೆ,ಪತಿ ಖಾತೆ ಹಣ ದುರ್ಬಳಕೆ ಆಗಿದೆ ಎಂದು ಆರೋಪಿಸಿ ಪತ್ನಿ ಕೃಪಾ ಪ್ರಕರಣ ದಾಖಲಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಖಾತೆಯಲ್ಲಿದ್ದಹಣ ದುರ್ಬಳಕೆ: ದೂರು ದಾಖಲಿಸಿದ ಪತ್ನಿ Read More

ತಕ್ಷಣ ಗೃಹಲಕ್ಷ್ಮೀ ಯೋಜನೆ ಹಣ ಬಿಡುಗಡೆಗೆ ಹೇಮಾ ನಂದೀಶ್ ಆಗ್ರಹ

ಮೈಸೂರು: ರಾಜ್ಯ ಸರಕಾರದ ಗೃಹಲಕ್ಷ್ಮೀ ಯೋಜನೆಯ ಹಣ ಕೂಡಲೇ ಬಿಡುಗಡೆಗೊಳಿಸುವಂತೆ ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷೆ ಹೇಮಾ ನಂದೀಶ್ ಆಗ್ರಹಿಸಿದ್ದಾರೆ.

ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಆಮಿಷ ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಇದೀಗ ಯೂ ಟರ್ನ್ ಹೊಡೆಯುವ ಲಕ್ಷಣ ತೋರಿಸುತ್ತಿದೆ ಎಂದು ಟೀಕಿಸಿದ್ದಾರೆ.

ನನಗೂ ಫ್ರೀ, ನಿನಗೂ ಫ್ರೀ, ಹೆಣ್ಣು ಮಕ್ಕಳ ಖಾತೆಗೆ ಪ್ರತಿ ತಿಂಗಳು 2000 ರೂ. ಹಣ ಜಮಾವಣೆ, ಅನ್ನಭಾಗ್ಯ, ಯುವನಿಧಿ ಎಂದು ಚುನಾವಣಾ ಪ್ರಚಾರದಲ್ಲಿ ಘಂಟಾಘೋಷವಾಗಿ ಹೇಳುತ್ತಿದ್ದ ಸಿದ್ದರಾಮಯ್ಯ ಅವರು ಈಗ ಯೋಜನೆ ಜಾರಿಗೆ ಹಣದ ಕೊರತೆ ಇದೆ ಎಂದು ಜಾರಿಗೊಳ್ಳುತ್ತಿದ್ದಾರೆ ಎಂಬುದಾಗಿ ಹೇಮಾ ನಂದೀಶ್ ದೂರಿದ್ದಾರೆ.

ಅನ್ನಭಾಗ್ಯದ ನಗದು ಫಲಾನುಭವಿಗಳಿಗೆ ನೀಡದೆ ಐದು ತಿಂಗಳಾಗಿದೆ. ಗೃಹಲಕ್ಷ್ಮೀ ಯೋಜನೆಯ ಮಾಸಿಕ ಹಣ ಫಲಾನುಭವಿಗಳ ಖಾತೆಗೆ ಪಾವತಿಸದೆ ಮೂರು ತಿಂಗಳಾಗಿದೆ. ಸರ್ಕಾರ ಕೂಡಲೇ ಗ್ಯಾರಂಟಿ ಯೋಜನೆಯ ಫಲಾನುಭವಿ ಗಳಿಗೆ ಹಣವನ್ನು ಪಾವತಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಬಸ್ ಪ್ರಯಾಣ ದರ, ಮೆಟ್ರೊ ರೈಲು ದರ, ವಿದ್ಯುತ್ ದರ ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಬರೆ ಎಳೆ ಯುತ್ತಿರುವ ಸರ್ಕಾರ, 5 ರೂಪಾಯಿ ಇದ್ದ ಜನನ, ಮರಣ ದೃಢೀಕರಣ ಪತ್ರದ ದರವನ್ನು ಏಕಾಏಕಿ 50 ರೂಪಾಯಿಗೆ ಏರಿಸುವುದರ ಮೂಲಕ ಜನವಿರೋಧಿ, ಜನರ ಜೇಬು ಲೂಟಿ ಮಾಡಲು ಹೊರಟಿರುವ ಸರ್ಕಾರ ಎಂಬುದು ಸಾಬೀತು ಪಡಿಸಿದೆ ಎಂದು ಪ್ರಕಟಣೆಯಲ್ಲಿ ಹೇಮಾ ನಂದೀಶ್ ವ್ಯಂಗ್ಯ ವಾಡಿದ್ದಾರೆ.

ತಕ್ಷಣ ಗೃಹಲಕ್ಷ್ಮೀ ಯೋಜನೆ ಹಣ ಬಿಡುಗಡೆಗೆ ಹೇಮಾ ನಂದೀಶ್ ಆಗ್ರಹ Read More

ಹಸುವಿನ ಕೆಚ್ಚಲು ಕೊಯ್ದ ಘಟನೆ ಖಂಡಿಸಿ ರಾಜ್ಯದೆಲ್ಲೆಡೆ ಬಿಜೆಪಿ ಪ್ರತಿಭಟನೆ-ಅಶೋಕ್

ಬೆಂಗಳೂರು: ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕತ್ತರಿಸಿದ ಪ್ರಕರಣದ ಸೂಕ್ತ ತನಿಖೆಗಾಗಿ ಆಗ್ರಹಿಸಿ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ಮಾಡಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.

ಹಸುವಿನ ಮಾಲಿಕ ಕರ್ಣ‌ ಅವರಿಗೆ ಬಿಜೆಪಿಯಿಂದ ಆರ್ಥಿಕ ನೆರವು ನೀಡಿದ ವೇಳೆ ಅಶೋಕ್ ಮಾಧ್ಯಮದವರೊಂದಿಗೆ ಮಾತನಾಡಿದರು.

ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕತ್ತರಿಸಿದ್ದು, ರಕ್ತ ಸುರಿಯುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ ಆದರೆ ಇದು ಒಬ್ಬರೇ ಮಾಡಿದ ಕೃತ್ಯವಲ್ಲ ಇದರಲ್ಲಿ ಹಲವರು ಭಾಗಿಯಾಗಿದ್ದಾರೆ ಎಂದು ಹೇಳಿದರು.

ಈ ಕುರಿತು ಪೊಲೀಸರು ಸರಿಯಾಗಿ ತನಿಖೆ ಮಾಡಬೇಕಿತ್ತು,ಮಾಡಿಲ್ಲಾ, ಈಗ ಸಂಕ್ರಾಂತಿ ಹಬ್ಬ ನಡೆಯುತ್ತಿದೆ. ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭಮೇಳ ನಡೆಯುತ್ತಿದೆ. ಇಂತಹ ಸಮಯದಲ್ಲೇ ಈ ಕೃತ್ಯ ಮಾಡುವುದರ ಜೊತೆಗೆ ಹಸು ಮಾಲೀಕ ಕರ್ಣ ಅವರಿಗೆ ಕಾಂಗ್ರೆಸ್‌ ಕಾರ್ಯಕರ್ತರು ಹಸುವನ್ನು ಪಡೆಯುವಂತೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದರು.

1 ಲಕ್ಷ ರೂ ಪರಿಹಾರವನ್ನು ಹಸು ಮಾಲೀಕ ಕರ್ಣ ಅವರಿಗೆ ಬಿಜೆಪಿ ವತಿಯಿಂದ ನೀಡಲಾಗಿದೆ. ಹಿಂದೂಗಳು ಬೇಡುವ ಸ್ಥಿತಿಯಲ್ಲಿಲ್ಲ. ಕಾಂಗ್ರೆಸ್‌ನವರು ಒಂದು ಕೈಯಲ್ಲಿ ಹಸುವನ್ನು ನೀಡುತ್ತಾರೆ. ಮತ್ತೊಂದು ಕಡೆ ಅವರ ಕಡೆಯವರೇ ನೀಡುವ ಹಸುವನ್ನು ಕತ್ತರಿಸುತ್ತಾರೆ ಎಂದು ಕಿಡಿಕಾರಿದರು.

ನನಗೀಗ ಪೊಲೀಸರು ಹಾಗೂ ಸರ್ಕಾರದ ಮೇಲೆಯೇ ಅನುಮಾನ ಬಂದಿದೆ. ಆರೋಪಿ ಜೇಬಿನಲ್ಲಿ ಬ್ಲೇಡ್‌ ಇಟ್ಟುಕೊಂಡು ಓಡಾಡುತ್ತಿದ್ದ, ಆತನಿಗೆ ಮತಿಭ್ರಮಣೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇಂತಹ ವ್ಯಕ್ತಿ 10 ವರ್ಷ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ಹೇಗೆ ಸಾಧ್ಯ, ಮುಂಜಾನೆ 3-4 ಗಂಟೆಗೆ ಆತ ಇಲ್ಲಿಗೆ ಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಇಲ್ಲಿ ಪಶು ಆಸ್ಪತ್ರೆ ಬಹಳ ಕಡಿಮೆ ಸಂಖ್ಯೆಯಲ್ಲಿದೆ. ಅದರ ಜಾಗ ಲೂಟಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಖಾತೆ ತಿದ್ದುಪಡಿ ಮಾಡಿ ವಕ್ಫ್‌ ಮಂಡಳಿಗೆ ನೀಡಿದ್ದಾರೆ. ಹಸು ಮಾಲೀಕ ಕರ್ಣನ ಮೇಲೆ ದಾಳಿ ಮಾಡಲು ಸಾಧ್ಯವಾಗಿಲ್ಲ. ಆದರೆ ಹಸುವಿನ ಮೇಲೆ ದಾಳಿ ಮಾಡಿ ಕರ್ಣನಿಗೆ ಎಚ್ಚರಿಕೆ ನೀಡಿದ್ದಾರೆ. ಆದರೂ ಸಿಎಂ ಸಿದ್ದರಾಮಯ್ಯನವರ ಬಾಯಲ್ಲಿ ಯಾವುದೇ ವಿರೋಧದ ಮಾತು ಬಂದಿಲ್ಲ ಎಂದು ಅಶೋಕ್ ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಅವರನ್ನು ಬಂಧಿಸಿ ಕಬ್ಬಿನ ಗದ್ದೆಯಲ್ಲಿ ಇರಿಸಲಾಗಿತ್ತು. ಆದರೆ ಈ ಪ್ರಕರಣದ ಆರೋಪಿಯನ್ನು ನೇರವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪೊಲೀಸರು ತನಿಖೆ ಮಾಡಲು ಆರೋಪಿಯನ್ನು ಕಸ್ಟಡಿಗೆ ಪಡೆಯಬೇಕಿತ್ತು. ಅದನ್ನು ಮಾಡದೆ ತನಿಖೆ ಸ್ಥಗಿತಗೊಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯನವರು ಔಟ್‌ ಗೋಯಿಂಗ್‌ ಸಿಎಂ. ಇಂತಹ ಸಮಯದಲ್ಲಿ ಹಾಲು ನೀಡುವ ಹಸುವಿಗೆ ನ್ಯಾಯ ನೀಡುವ ಕೆಲಸ ಮಾಡಲಿ ಎಂದು ಅಶೋಕ್ ಸಲಹೆ ನೀಡಿದರು.

ಹಸುವಿನ ಕೆಚ್ಚಲು ಕೊಯ್ದ ಘಟನೆ ಖಂಡಿಸಿ ರಾಜ್ಯದೆಲ್ಲೆಡೆ ಬಿಜೆಪಿ ಪ್ರತಿಭಟನೆ-ಅಶೋಕ್ Read More