ವಾರ್ಡ್ ಸಮಿತಿಗಳ ಶಿಫಾರಸ್ಸಿನಂತೆ ಬಿಡುಗಡೆಯಾದ ಹಣ ಖರ್ಚಾಗಲಿ: ಆಪ್

ಬೆಂಗಳೂರು: ರಾಜ್ಯ ಸರ್ಕಾರ ಶಾಸಕರಿಗೆ ಬಿಡುಗಡೆ ಮಾಡಿರುವ 50 ಕೋಟಿ ಹಣವನ್ನು ಬೆಂಗಳೂರಿನ ಶಾಸಕರುಗಳು ಸ್ಥಳೀಯ ವಾರ್ಡ್ ಸಮಿತಿಗಳ ಶಿಫಾರಸ್ಸಿನ ಅನುಸಾರ ಸರಿಯಾಗಿ ಖರ್ಚು ಮಾಡಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

ಈ ಕುರಿತು ಆಮ್ ಆದ್ಮಿ ಪಕ್ಷದ ಬೆಂಗಳೂರು ಸಂಘಟನಾ ಕಾರ್ಯದರ್ಶಿ ಅಶೋಕ್ ಮೃತ್ಯುಂಜಯ ಮಾತನಾಡಿದ್ದು, ಈಗಾಗಲೇ ಬೆಂಗಳೂರಿನಲ್ಲಿ ನಾನಾ ಸಮಸ್ಯೆಗಳಿವೆ. ಬಿಡುಗಡೆಯಾಗಿರುವ ಹಣ ಯಾವ ಮೂಲೆಗೂ ಸಾಲದು ಎಂದು ಹೇಳಿದರು.

ಬಿಬಿಎಂಪಿ ವಿಸರ್ಜನೆಯಾಗಿ 5 ವರ್ಷ ಆಗಿದೆ.ಪ್ರತಿಯೊಂದು ವಾರ್ಡ್ ಗಳಲ್ಲಿಯೂ ನಾಗರಿಕರುಗಳಿಗೆ ವಾಸಿಸಲು ಸಾಧ್ಯವೇ ಆಗದಂತಹ ಜ್ವಲಂತ ಸಮಸ್ಯೆಗಳು ಇವೆ. ಇವುಗಳನ್ನು ವಾರ್ಡ್ ಸಮಿತಿಯ ಸಭೆಯ ಮೂಲಕ ಚರ್ಚಿಸಿ ಆದ್ಯತೆ ಮೂಲಕ ಕೈಗೆತ್ತಿಕೊಳ್ಳಬೇಕು, ಅದನ್ನು ಬಿಟ್ಟು ಬೆಂಗಳೂರಿನ ಶಾಸಕರುಗಳು ತಮ್ಮ ಸಂಬಂಧಿಗಳಿಗೆ ಹಾಗೂ ಬೆಂಬಲಿಗರಿಗೆ ಗುತ್ತಿಗೆ ನೀಡುವ ಮೂಲಕ ಹಣವನ್ನು ಲಪಟಾಯಿಸುವ ತಂತ್ರಗಾರಿಕೆಯಲ್ಲಿ ತೊಡಗಬಾರದೆಂದು ಅಶೋಕ್ ಮೃತ್ಯುಂಜಯ ಆಗ್ರಹಿಸಿದರು.

ಈ ಬಗ್ಗೆ ಸರ್ಕಾರ ಕೆಲವೊಂದು ನಿಬಂಧನೆಗಳನ್ನು ಹೊರಡಿಸಬೇಕೆಂದು ಅವರು ಆಗ್ರಹಿಸಿದರು.

ವಾರ್ಡ್ ಸಮಿತಿಗಳ ಶಿಫಾರಸ್ಸಿನಂತೆ ಬಿಡುಗಡೆಯಾದ ಹಣ ಖರ್ಚಾಗಲಿ: ಆಪ್ Read More

ಡಿಕೆಶಿ,ಸುರ್ಜೆವಾಲಾ ವಿರುದ್ಧ ಅಶೋಕ್ ವ್ಯಂಗ್ಯ

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಕ್ಷೇತ್ರದ ಅನುದಾನಕ್ಕಾಗಿ ವಿಪಕ್ಷದ ಶಾಸಕರು ತಾಳ್ಮೆಯಿಂದ ಕಾಯಬೇಕು ಎಂದರೆ ಏನು ಸ್ವಾಮಿ ಅರ್ಥ ಎಂದು ‌ಪ್ರತಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯ ವಾಡಿದ್ದಾರೆ.

ತಾವು ಈ ಮೊದಲೇ ಹೇಳಿರುವಂತೆ ಶಾಸಕರು ತಮ್ಮ ಬಳಿ ತಗ್ಗಿ-ಬಗ್ಗಿ ನಡೆಯಬೇಕು ಎನ್ನುವುದು ನಿಮ್ಮ ಮಾತಿನ ಅರ್ಥವೇನು ಅಥವಾ ತಾಳ್ಮೆಯಿಂದ ಇರದಿದ್ದರೆ ನಟ್ಟು-ಬೋಲ್ಟು ಟೈಟು ಮಾಡುತ್ತೇನೆ ಎನ್ನುವ ಧಮ್ಕಿನಾ ಎಂದು ಅಶೋಕ್ ಟ್ವೀಟ್ ಮಾಡಿ ಕಾರವಾಗಿ ಪ್ರಶ್ನಿಸಿದ್ದಾರೆ.

ತಮಗೆ ಇಷ್ಟ ಬಂದ ಹಾಗೆ ಬರೀ ಕಾಂಗ್ರೆಸ್ ಶಾಸಕರಿಗೆ ಮಾತ್ರ ಅನುದಾನ ಕೊಡೋಕೆ ರಾಜ್ಯ ಸರ್ಕಾರದ ಖಜಾನೆ ನಿಮ್ಮ ಪಕ್ಷದ ಪಾರ್ಟಿ ಫಂಡ್ ಅಲ್ಲ, ಅದು ಆರೂವರೆ ಕೋಟಿ ಕನ್ನಡಿಗರ ಬೆವರಿನ ತೆರಿಗೆ ಹಣ ಎಂಬುದನ್ನು ತಿಳಿದುಕೊಳ್ಳಿ ಎಂದು ತಿರುಗೇಟು ನೀಡಿದ್ದಾರೆ.

ಈ ಮಲತಾಯಿ ದೋರಣೆ ನಿಲ್ಲಿಸಿ, ಎಲ್ಲಾ ಕ್ಷೇತ್ರಗಳಿಗೂ ಸಮಬಾಗಿ ಅನುದಾನ ಬಿಡುಗಡೆ ಮಾಡಿ ಎಂದು ಅಶೋಕ್ ಆಗ್ರಹಿಸಿದ್ದಾರೆ.

ಕಳೆದ 26 ತಿಂಗಳುಗಳಲ್ಲಿ ತಮ್ಮದೇ ಪಕ್ಷದ ಸರ್ಕಾರದಿಂದ ನಯಾ ಪೈಸೆ ಅನುದಾನ ಪಡೆಯಲಾಗದೆ ತಮ್ಮ ಕ್ಷೇತ್ರಗಳಲ್ಲಿ ತಲೆ ಎತ್ತಿಕೊಂಡು ಓಡಾಡಲಾಗದ ಪರಿಸ್ಥಿತಿ ಎದುರಿಸುತ್ತಿದ್ದ ಕಾಂಗ್ರೆಸ್ ಶಾಸಕರು, ಸೂಪರ್ ಸಿಎಂ ಸುರ್ಜೆವಾಲ ಅವರ 6 ದಿನಗಳ ಸಭೆಯ ಪರಿಣಾಮದಿಂದ, ಸಿಎಂ ಅವರ ಬಳಿ ತಲಾ 50 ಕೋಟಿ ರೂ ಅನುದಾನ ಗಿಟ್ಟಿಸಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

ಸೂಪರ್ ಸಿಎಂ ಅವರೇ, ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಡಿಸಿಕೊಟ್ಟ ತಮಗೆ ಅಭಿನಂದನೆಗಳು ಹಾಗೂ ಜೆಡಿಎಸ್, ಬಿಜೆಪಿ ಶಾಸಕರ ಕ್ಷೇತ್ರಗಳಿಗೂ ಅನುದಾನ ಕೊಡಿಸಿ ಪುಣ್ಯ ಕಟ್ಟಿಕೊಳ್ಳಿ ಸ್ವಾಮಿ ಎಂದು ಸುರ್ಜೆವಾಲ ವಿರುದ್ಧವೂ ವ್ಯಂಗ್ಯ ವಾಡಿದ್ದಾರೆ.

ನಿಮ್ಮ ಸೂಚನೆಯ ಫಲವಾಗಿ ನಮ್ಮ ಪಕ್ಷದ ಶಾಸಕರ ಕ್ಷೇತ್ರಗಳಿಗೂ ಅನುದಾನ ಸಿಕ್ಕರೆ ತಮಗೆ ವಿಶೇಷ ಸನ್ಮಾನ ಮಾಡಿ ಅಭಿನಂದನೆ ಸಲ್ಲಿಸುತ್ತೇವೆ, ಕೊಡಿಸುತ್ತೀರಲ್ಲ ಎಂದು ವ್ಯಂಗ್ಯವಾಗಿಯೇ ಅಶೋಕ್ ಮನವಿ ಮಾಡಿದ್ದಾರೆ.

ಡಿಕೆಶಿ,ಸುರ್ಜೆವಾಲಾ ವಿರುದ್ಧ ಅಶೋಕ್ ವ್ಯಂಗ್ಯ Read More

ಅನಧಿಕೃತ ಫ್ಲೆಕ್ಸ್ ಬ್ಯಾನರ್; ಬೆಂಗಳೂರಿನ ಶಾಸಕರ ವಿರುದ್ಧ ಕ್ರಮಕ್ಕೆ ಆಪ್ ಆಗ್ರಹ

ಬೆಂಗಳೂರು: ಬೆಂಗಳೂರಿನ ಶಾಸಕರು ಪದೇ,ಪದೇ ಫ್ಲೆಕ್ಸ್ ಬ್ಯಾನರ್ ಗಳನ್ನು ಅಳವಡಿಸಿ ಬೆಂಗಳೂರಿನ ಸೌಂದರ್ಯವನ್ನು ಹಾಳು ಮಾಡುತ್ತಿದ್ದಾರೆ ಆಮ್ ಆದ್ಮಿ ಪಕ್ಷ ಕಿಡಿಕಾರಿದೆ.

ಅಲ್ಲದೆ ಈ ಫ್ಲೆಕ್ಸ್,ಬ್ಯಾನರ್ ಗಳು ಬಿದ್ದು ನಾಗರೀಕರಿಗೆ ಗಾಯಗಳಾಗಿರುವ ಉದಾಹರಣೆಗಳಿವೆ,ಹೀಗೆ ಅನಧಿಕೃತವಾಗಿ ಎಲ್ಲೆಂದರಲ್ಲಿ ಫ್ಲೆಕ್ಸ್,ಬ್ಯಾನರುಗಳನ್ನು ಅಳವಡಿಸುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಮ್ ಆದ್ಮಿ ಪಕ್ಷದ ನಿಯೋಗ ಬಿಬಿಎಂಪಿಯ ಮುಖ್ಯ ಕಮಿಷನರ್ ತುಷಾರ್ ಗಿರಿನಾಥ್ ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಆಗ್ರಹಿಸಿತು.

ಈ ವೇಳೆ ಪಕ್ಷದ ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ ಸುದ್ದಿಗಾರರೊಂದಿಗೆ ಮಾತನಾಡಿ, ನೂತನ ಜಾಹೀರಾತು ನೀತಿಯ ಅನುಸಾರ ಇದುವರೆಗೂ ಉಲ್ಲಂಘಿಸಿದ ವ್ಯಕ್ತಿಗಳ ವಿರುದ್ಧ ನೂರಾರು ಕೋಟಿ ರೂಪಾಯಿಗಳ ದಂಡವನ್ನು ವಸೂಲಿ ಮಾಡಬಹುದಾಗಿತ್ತು. ಬೆಂಗಳೂರಿನ ಸೌಂದರ್ಯವನ್ನು ಸಹ ಕಾಪಾಡಬಹುದಾಗಿತ್ತು,ಆದರೆ ಯಾವುದೇ ಕಠಿಣ ಕ್ರಮಗಳನ್ನು ಬಿಬಿಎಂಪಿ ಇಂಜಿನಿಯರ್ ಗಳು ತೆಗೆದುಕೊಂಡಿಲ್ಲ ಇದರಿಂದಾಗಿ ಮಹಾನಗರ ಪಾಲಿಕೆಗೆ ನೂರಾರು ಕೋಟಿ ರೂ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿದರು.

ಇದೀಗ ನೂತನ ಪರಿಷ್ಕೃತ ಮಾರ್ಗಸೂಚಿಯನ್ನು ರಚಿಸಿ ಈ ಅನಧಿಕೃತ ಜಾಹೀರಾತುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.

ಆದರೆ ನಿನ್ನೆಯವರೆಗೂ ಜನ್ಮ ದಿವಸಗಳ ನೆಪದಲ್ಲಿ ಬೆಂಗಳೂರಿನಲ್ಲಿ ಹಾಕಿರುವ ಫ್ಲೆಕ್ಸ್ ಬ್ಯಾನರ್ ಗಳಿಗೆ ಯಾವುದೇ ಕಠಿಣ ಕಾನೂನು ಕ್ರಮ ತೆಗೆದುಕೊಂಡಿಲ್ಲ, ದಂಡವನ್ನೂ ವಸೂಲಿ ಮಾಡಿಲ್ಲ. ಈ ಕೂಡಲೇ ಬಿಬಿಎಂಪಿ ಅಧಿಕಾರಿಗಳು ಪೊಲೀಸ್ ಇಲಾಖೆಯಲ್ಲಿ ದೂರು ನೀಡಿ ಎಫ್ಐಆರ್ ದಾಖಲಿಸುವ ಮೂಲಕ ಕಠಿಣ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಬೆಂಗಳೂರು ಸೌಂದರ್ಯಕ್ಕೆ ಪದೇಪದೇ ಧಕ್ಕೆ ತರುತ್ತಿರುವ ಬೆಂಗಳೂರಿನ ಶಾಸಕರುಗಳ ವಿರುದ್ಧ ಈ ಮೂಲಕ ಕಠಿಣ ಕ್ರಮಗಳನ್ನು ತೆಗೆದುಕೊಂಡಲ್ಲಿ ಆ ಶಾಸಕರುಗಳು ಹಾಗೂ ಅವರ ಹಿಂಬಾಲಕರುಗಳಿಗೆ ಕಾನೂನಿನ ಅರಿವು ಸ್ವಲ್ಪಮಟ್ಟಿಗಾದರೂ ಆಗುತ್ತದೆ ಎಂದು ಜಗದೀಶ್ ಚಂದ್ರ ಆಗ್ರಹ ಪಡಿಸಿದರು.

ಪಕ್ಷದ ನಿಯೋಗದಲ್ಲಿ ಮುಖಂಡರುಗಳಾದ ಅನಿಲ್ ನಾಚಪ್ಪ, ಶಶಿಧರ್ ಆರಾಧ್ಯ, ಶಿವಕುಮಾರ್, ಮೋಹನ್ ರಾಜು, ಅಣ್ಣ ನಾಯಕ್ ಮತ್ತಿತರರು ಹಾಜರಿದ್ದರು.

ಅನಧಿಕೃತ ಫ್ಲೆಕ್ಸ್ ಬ್ಯಾನರ್; ಬೆಂಗಳೂರಿನ ಶಾಸಕರ ವಿರುದ್ಧ ಕ್ರಮಕ್ಕೆ ಆಪ್ ಆಗ್ರಹ Read More

ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆ:ಅಶೋಕ್

ಬೆಂಗಳೂರು: ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಉತ್ತರ ಕರ್ನಾಟಕಕ್ಕೆ ಏನೂ ಸಿಕ್ಕಿಲ್ಲ ಈ ಬಗ್ಗೆ ನಾನೂ ಸೇರಿದಂತೆ ಈ ಭಾಗದ ಎಲ್ಲ ಶಾಸಕರು ಅಧಿವೇಶನದಲ್ಲಿ ಮಾತನಾಡಲಿದ್ದೇವೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಉತ್ತರ ಕರ್ನಾಟಕ ಭಾಗದ ಶಾಸಕರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರ ಹಣ ಇದೆ ಎಂದು ಹೇಳುತ್ತಲೇ ಇದೆ. ಆದರೂ ಉತ್ತರ ಕರ್ನಾಟಕಕ್ಕೆ ಯಾವುದೇ ಅನುದಾನ ನೀಡಿಲ್ಲ ಎಂದು ದೂರಿದರು.

ಎಷ್ಟು ಹೂಡಿಕೆ ಬಂದಿದೆ, ಎಷ್ಟು ಬೆಳೆಹಾನಿ ಪರಿಹಾರ ಸಿಕ್ಕಿದೆ, ನೀರಾವರಿ ಯೋಜನೆಗೆ ಎಷ್ಟು ಅನುದಾನ ನೀಡಲಾಗಿದೆ ಎಂಬ ಬಗ್ಗೆ ಉತ್ತರ ಕರ್ನಾಟಕದ ಬಿಜೆಪಿ ಶಾಸಕರು ಚರ್ಚೆ ಮಾಡಿದ್ದಾರೆ, ಇದನ್ನೆಲ್ಲ ಸದನದಲ್ಲಿ ಪ್ರಶ್ನಿಸುವ, ಮಾತನಾಡುವ ಬಗ್ಗೆ ಶಾಸಕರು ಹೇಳಿದ್ದಾರೆ ಎಂದು ತಿಳಿಸಿದರು.

ಸಾರಿಗೆ ಇಲಾಖೆ ನೌಕರರು ಬಂದ್‌ ಮಾಡುತ್ತೇವೆ ಎಂದು ಹೇಳಿದ್ದಾರೆ. ಅಬಕಾರಿ ಇಲಾಖೆ ಗುತ್ತಿಗೆದಾರರು ಕೂಡ ಬಂದ್‌ ಮಾಡಲು ಮುಂದಾಗಿದ್ದರು. ಈ ನಡುವೆ ರಸ್ತೆ ಅಭಿವೃದ್ಧಿ, ಆಸ್ಪತ್ರೆ ನಿರ್ಮಾಣ, ಬೆಳೆಹಾನಿ ಪರಿಹಾರ ಯಾವುದಕ್ಕೂ ಹಣ ಇಲ್ಲ. ಕಲ್ಯಾಣ ಕರ್ನಾಟಕಕ್ಕೆ ಆದ್ಯತೆ ನೀಡಲು ಕಲಬುರ್ಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗಿತ್ತು. ಆದರೆ ಈವರೆಗೆ ಯಾವುದೇ ಯೋಜನೆಯ ಕಾರ್ಯಾದೇಶವಾಗಿಲ್ಲ ಎಂದು ಆರೋಪಿಸಿದರು.

ಅಬಕಾರಿ ಇಲಾಖೆಯಲ್ಲಿ ಪರವಾನಗಿಗೆ ಅರ್ಜಿ ಸಲ್ಲಿಸಿದಾಗ ಲಂಚ ಕೇಳಿದ ಧ್ವನಿಮುದ್ರಣ ಈಗ ಬಿಡುಗಡೆಯಾಗಿದೆ. ಕಾಂಗ್ರೆಸ್‌ ಕಾರ್ಯಕರ್ತ ಆಗಿರುವುದರಿಂದ ಶೇ.50 ರಿಯಾಯಿತಿ ಎಂದು ಅಧಿಕಾರಿ ಹೇಳಿದ್ದಾರೆ. ಇದು ಈಗ ಜಗಜ್ಜಾಹೀರಾಗಿದೆ. ಈ ಭ್ರಷ್ಟಾಚಾರದ ವಿರುದ್ಧವೂ ಬಿಜೆಪಿ ಹೋರಾಟ ಮಾಡಲಿದೆ. ಇಷ್ಟು ಸಾಕ್ಷಿ ಇದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರೆದ ಪುಸ್ತಕ ಎಂದು ಹೇಳುತ್ತಿದ್ದಾರೆ. ದಾಖಲೆ ನೀಡಿದರೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರು. ಈಗ ಅವರು ರಾಜೀನಾಮೆ ನೀಡಲಿ ಎಂದು ಅಶೋಕ್ ಒತ್ತಾಯಿಸಿದರು.

ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆ:ಅಶೋಕ್ Read More