ಇ-ಖಾತೆ ವಿತರಣೆ;ರಾಜ್ಯದಲ್ಲಿ ಮೈಸೂರಿಗೆ ಎರಡನೇ ಸ್ಥಾನ: ಶಾಸಕ ಶ್ರೀವತ್ಸ
ಮೈಸೂರು: ಇ-ಖಾತೆ ವಿತರಣೆಯಲ್ಲಿ ರಾಜ್ಯದಲ್ಲಿ ಮೈಸೂರಿಗೆ ಎರಡನೇ ಸ್ಥಾನ ಇದೆ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ತಿಳಿಸಿದರು.
ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಹಾನಗರ ಪಾಲಿಕೆ ಕಚೇರಿ-೧ ಮತ್ತು ೨ರಲ್ಲಿ ಶ್ರೀವತ್ಸ ಅವರು ೨೫೦ಕ್ಕೂ ಹೆಚ್ಚು ಮಂದಿಗೆ ಇ-ಖಾತೆ ಪತ್ರ ಹಂಚಿಕೆ ಮಾಡಿ ಮಾತನಾಡಿದರು.

ಆಯುಕ್ತ ತನ್ವೀರ್ ಅವರು ಆಯುಕ್ತರಾಗಿ ಬಂದ ನಂತರ ಸಾರ್ವಜನಿಕರಿಗೆ ಇ-ಖಾತೆ ಹಂಚಿಕೆಯ ವೇಗ ಹೆಚ್ಚಾಗಿದ್ದು, ವಲಯ ಕಚೇರಿಗಳ ಆಯುಕ್ತರುಗಳಿಗೆ ಹೆಚ್ಚಿನ ಜವಾಬ್ದಾರಿಯನ್ನು ಕೊಟ್ಟು ಖಾತೆ ವಿತರಣೆ ಮಾಡಿಸುತ್ತಿರುವುದರಿಂದ ರಾಜ್ಯದಲ್ಲಿ ಮೈಸೂರು ಜಿಲ್ಲೆ ಎರಡನೇ ಸ್ಥಾನ ಪಡೆದು ಕೊಂಡಿದೆ ಎಂದು ಹೇಳಿದರು.
ಅತ್ಯಂತ ಸಾಧಾರಣವಾದ ನಿಮ್ಮಲ್ಲಿ ಈಗಾಗಲೇ ಇರುವ ದಾಖಲಾತಿಗಳಾದ ಟೈಟಲ್ ಡೀಡ್, ರಿಜಿಸ್ಟ್ರೇಷನ್ ಪ್ರತಿ, ಇಸಿ, ಆಸ್ತಿಯ ಛಾಯಾಚಿತ್ರ, ಪಾಸ್ ಪೋರ್ಟ್ ಫೋಟೋ, ತೆರಿಗೆ ಪಾವತಿಸಿರುವ ರಸೀದಿ, ಐಡಿ ದಾಖಲೆ ನೀಡಿ ಇ-ಖಾತೆ ಪಡೆದುಕೊಳ್ಳಿ ಎಂದು ಶ್ರೀವತ್ಸ ಜನರಿಗೆ ತಿಳಿಸಿದರು.
ಆಯುಕ್ತ ತನ್ವೀರ್ ಅವರು ಮಾತನಾಡಿ, ವಲಯ ಕಚೇರಿ-೧ರ ಸಹಾಯಕ ಆಯುಕ್ತರು ಹತ್ತು ದಿನಗಳಲ್ಲಿ ಇ-ಖಾತೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಗತ್ಯ ದಾಖಲೆ ನೀಡಿ ಸಾರ್ವಜನಿಕರು ಸಹಕರಿಸಿ ಎಂದು ಮನವಿ ಮಾಡಿದರು.
ಈಗಾಗಲೇ ೪೫ ದಿನಗಳಲ್ಲಿ ೯ ಸಾವಿರ ಇ-ಖಾತೆ ವಿತರಿಸಲಾಗಿದೆ. ಈ ವಲಯದಲ್ಲಿ ಪ್ರತೀ ತಿಂಗಳು ೮೦೦/೯೦೦ ಖಾತೆ ವಿತರಿಸುವ ಮೂಲಕ ಗುರಿ ಮುಟ್ಟಬೇಕಿದೆ. ಸಾರ್ವಜನಿಕರು ದಾಖಲೆ ನೀಡಿ ಪಡೆದುಕೊಳ್ಳಿ ಎಂದು ಹೇಳಿದರು.
ಸ್ವಚ್ಛ ಸರ್ವೇಕ್ಷಣ್ ನಡೆಯುತ್ತಿದೆ. ಈ ಸಾಲಿನಲ್ಲಿ ಮೈಸೂರು ನಗರ ೧ನೇ ಸ್ಥಾನ ಪಡೆಯಲು ಪ್ರಯತ್ನಿಸುತ್ತಿದೆ. ಸಾರ್ವಜನಿಕರು ನಿಮ್ಮ ದೂರವಾಣಿಗಳ ಮೂಲಕ ಈ ವಿಚಾರವಾಗಿ ಹೆಚ್ಚು ಪ್ರಚಾರ ಮಾಡುವ ಮೂಲಕ ಸಹಕರಿಸಿ ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಉಪ ಆಯುಕ್ತ(ಕಂದಾಯ) ಸೋಮಶೇಖರ್, ವಲಯ-೧ರ ಸಹಾಯಕ ಆಯುಕ್ತ ಮಂಜುನಾಥ ರೆಡ್ಡಿ, ಕಂದಾಯಾಧಿಕಾರಿ ಸ್ವರ್ಣಲತಾ, ಸಹಾಯಕ ಕಂದಾಯಾಧಿಕಾರಿ ಪ್ರತಾಪ್ ಮತ್ತಿತರರು ಉಪಸ್ಥಿತರಿದ್ದರು.
ಇ-ಖಾತೆ ವಿತರಣೆ;ರಾಜ್ಯದಲ್ಲಿ ಮೈಸೂರಿಗೆ ಎರಡನೇ ಸ್ಥಾನ: ಶಾಸಕ ಶ್ರೀವತ್ಸ Read More



