ಪಾಳ್ಯ – ಚಿಕ್ಕಲ್ಲೂರು ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಮಂಜುನಾಥ್

(ವರದಿ:ಸಿದ್ದರಾಜು,,ಕೊಳ್ಳೇಗಾಲ)

ಕೊಳ್ಳೇಗಾಲ: ಪಾಳ್ಯ – ಚಿಕ್ಕಲ್ಲೂರು ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಹನೂರು ಶಾಸಕ ಎಂ.ಆರ್. ಮಂಜುನಾಥ್ ಅವರು ಪರಿಶೀಲಿಸಿದರು.

ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಅಭಿವೃದ್ಧಿ ಕಾಣದೆ ಹದಗೆಟ್ಟಿದ್ದ ಬಂಡಳ್ಳಿ – ಹನೂರು ರಸ್ತೆ, ಮೋಡಹಳ್ಳಿ – ದೊಡ್ಡಿಂದುವಾಡಿ ಹಾಗೂ ಚಿಕ್ಕಲ್ಲೂರು ರಸ್ತೆಗಳು ಸೇರಿದಂತೆ 6 ಕಡೆ ರಸ್ತೆಗಳ ಅಭಿವೃದ್ಧಿಗೆ ಶಾಸಕರು ಮೇ 19 ರಂದು ಗುದ್ದಲಿ ಪೂಜೆ ನೆರವೇರಿಸಿದ್ದರು.

ಕಾಮಗಾರಿ ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದ ಶಾಸರು ಕಾಮಗಾರಿಯ ವೈಖರಿಯನ್ನು ಕಂಡು ಸಿಡಿಮಿಡಿಗೊಂಡರು. ಗುತ್ತಿಗೆದಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ರಸ್ತೆಯ ನೆಲಹಾಸಿಗೆ ಗುಣಮಟ್ಟದ ಮಣ್ಣು ಬಳಸದೆ ಕಳಪೆ ಮಣ್ಣು ಬಳಸುತ್ತಿದ್ದ ಕಾರಣ ಗುತ್ತಿಗೆದಾರರ ವಿರುದ್ಧ ಹರಿಹಾಯ್ದರು. ಸಂಬಂಧ ಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯನ್ನು ಕಂಡು ಸ್ಥಳದಲ್ಲೆ ಅವರ ಮೊಬೈಲ್ ಗೆ ಕರೆಮಾಡಿ ತರಾಟೆಗೆ ತೆಗೆದುಕೊಂಡರು.

ಕೂಡಲೇ ಕಳಪೆ ಮಣ್ಣು ತೆಗೆದು ಗುಣಮಟ್ಟದ ಮಣ್ಣು ಹಾಕಿಸುವಂತೆ ತಾಕೀತು ಮಾಡಿದರು.

ನಂತರ ಶಾಸಕರು ಅಲ್ಲಲ್ಲಿ ರಸ್ತೆ ನಡುವೆ ನಿರ್ಮಿಸಿರುವ ಕಿರು ಸೇತುವೆಗಳ ಗುಣಮಟ್ಟ ನೋಡಿ ಬೇಸರ ವ್ಯಕ್ತಪಡಿಸಿದರು.

ಈ ನಡುವೆ ಪ್ರಕಾಶ್ ಪಾಳ್ಯ ಹಾಗೂ ಕೊತ್ತನೂರು ಗ್ರಾಮಗಳಲ್ಲಿ ರಸ್ತೆ ನಿರ್ಮಾಣಕ್ಕೆ ಅಡ್ಡಿಯಾಗಿರುವ ಅಂಗಡಿ ಮುಂಗಟ್ಟುಗಳು ಹಾಗೂ ಮನೆಗಳವರಿಗೆ ರಸ್ತೆ ಅಭಿವೃದ್ಧಿಗೆ ಸಹಕರಿಸಿ ಎಂದು ಮಂಜುನಾಥ್ ಮನವಿ ಮಾಡಿದರು.

ಈ ವೇಳೆ ಪ್ರಕಾಶ್ ಪಾಳ್ಯದಲ್ಲಿ ಕುಟುಂಬವೊಂದು ರಸ್ತೆ ಮಾಡುವಾಗ ಅಂಗಡಿ ಮುಂಭಾಗ ಹೋಗುತ್ತದೆ ಉಳಿಸಿ ಕೊಡಿ ಎಂದು ಮನವಿ ಮಾಡಿದರು.

ಈಗ 50 ಅಡಿ ರಸ್ತೆ ಮಾಡಲಾಗುತ್ತದೆ. ಮುಂದೆ ಇನ್ನೂ ರಸ್ತೆ ಅಗಲವಾಗಲಿದ್ದು ದ್ವಿಪಥ ರಸ್ತೆ ನಿರ್ಮಾಣ ಮಾಡಿಸುವ ಯೋಜನೆ ಇದೆ ಆಗ ಇನ್ನೂ ರಸ್ತೆ ಅಗಲವಾಗಲಿದೆ. ಸದ್ಯಕ್ಕೆ ಈಗ ರಸ್ತೆ ಮಾಡಲು ಅನುವು ಮಾಡಿಕೊಡಿ ಎಂದು ಶಾಸಕರು ತಿಳಿಹೇಳಿದರು.

ಕೊತ್ತನೂರು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ವೇಳೆ ತೆರವುಗೊಳಿಸುವ ಮನೆಗಳಿಗೆ ಪರಿಹಾರ ಯಾವಾಗ ಬರುತ್ತದೇ ಎಂದು ಗ್ರಾಮಸ್ಥರು ಕೇಳಿದಾಗ ಲೋಕೋಪಯೋಗಿ ಇಲಾಖೆಯ ರಸ್ತೆಯನ್ನು ಅಕ್ರಮಿಸಿಕೊಂಡು ಮನೆ ನಿರ್ಮಾಣ ಮಾಡಿರುವುದರಿಂದ ರಸ್ತೆಯ ನಕ್ಷೆಯಂತೆ ರಸ್ತೆ ಅಭಿವೃದ್ಧಿ ಮಾಡಲಾಗುವುದು ಇದಕ್ಕೆ ಯಾವುದೇ ಪರಿಹಾರ ನೀಡಲಾಗುವುದಿಲ್ಲ ರಸ್ತೆ ಅಭಿವೃದ್ಧಿ ಮಾಡಲು ಸಹಕರಿಸಿ, ಇಲ್ಲ ಗ್ರಾಮದ (ಬೈಪಾಸ್) ಹೊರವಲಯದಲ್ಲಿ ರಸ್ತೆ ನಿರ್ಮಾಣ ಮಾಡಿಕೊಂಡು ಹೋಗುತ್ತೇವೆ ಎಂದಾಗ ಗ್ರಾಮದ ಹೊರವಲಯದಲ್ಲಿ ರಸ್ತೆ ನಿರ್ಮಾಣ ಮಾಡಿಕೊಂಡು ಹೋದರೆ ಗ್ರಾಮಕ್ಕೆ ಮೌಲ್ಯ ಕಡಿಮೆ ಯಾಗುತ್ತದೆ ಆದ್ದರಿಂದ ಗ್ರಾಮದೊಳಗೆ ರಸ್ತೆ ಅಭಿವೃದ್ಧಿ ಪಡಿಸಿ ಸಹಕರಿಸುವುದಾಗಿ ಜನರು ತಿಳಿಸಿದರು.

ಈ ಸಂದರ್ಭದಲ್ಲಿ ಸುದ್ದಿ ಗಾರರೊಡನೆ ಮಾತನಾಡಿದ ಶಾಸಕ ಮಂಜುನಾಥ್, ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಪ್ಯಾಕೇಜ್ 67 ಕೋಟಿ ರೂ.ಗಳ ಅನುಧಾನದಡಿ ಕ್ಷೇತ್ರದ ರಸ್ತೆಗಳ ಸಾಗುವ ಭಾಗಗಳಲ್ಲಿ ಅಭಿವೃದ್ದಿ ಕೈಗೊಂಡಿದ್ದು,ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.

25 ಕೋಟಿ ರೂ. ವೆಚ್ಚದಲ್ಲಿ ದೊಡ್ಡಿಂದುವಾಡಿ ಗ್ರಾಮದಲ್ಲಿ ಮೋಡಹಳ್ಳಿ ವೃತ್ತದಿಂದ ದೊಡ್ಡಿಂದುವಾಡಿ ವೃತ್ತದವರೆಗೆ ದೊಡ್ಡಿಂದುವಾಡಿ – ಕನಕಗಿರಿ ರಸ್ತೆ, ಕೊತ್ತನೂರು ಗ್ರಾಮದಲ್ಲಿ ಮೊಳಗನಕಟ್ಟೆಯಿಂದ ಕೊತ್ತನೂರು ಗ್ರಾಮದ ಅಂಬೇಡ್ಕರ್ ಪ್ರತಿಮೆವರೆಗಿನ ಚಿಕ್ಕಲ್ಲೂರು ರಸ್ತೆ ಭಾಗಗಳಲ್ಲಿ 9 ಕಿ.ಮೀ. ರಸ್ತೆ, 24,.80 ಕೋಟಿ ರೂ. ವೆಚ್ಚದಲ್ಲಿ ಬಂಡಳ್ಳಿಯಲ್ಲಿ ಬಂಡಳ್ಳಿ ರಸ್ತೆ, ಹಾಗೂ ಜಿ.ವಿ.ಗೌಡ ಕಾಲೇಜು ಬಳಿ ಬಂಡಳ್ಳಿ – ಹನೂರು ರಸ್ತೆ, ಭಾಗಗಳಲ್ಲಿ 10.470  ಕಿ.ಮೀ. ರಸ್ತೆ, ಹಾಗೆಯೇ 17 ಕೋಟಿ ರೂ. ವೆಚ್ಚದಲ್ಲಿ ಹನೂರಿನ ಇಂಡಿಯನ್ ಪೆಟ್ರೋಲ್ ಬಂಕ್ ಬಳಿ ಹನೂರು, ರಾಮಾಪುರ- ಕೌದಳ್ಳಿ ಹಾಯ್ದ ಭಾಗಗಳಲ್ಲಿ ರಸ್ತೆ ಆಭಿವೃಧ್ಧಿ, ಹಾಗೂ ಕೌದಳ್ಳಿ – ರಾಮಾಪುರ ಮುಖ್ಯ ರಸ್ತೆ ಬಳಿ ಕೌದಳ್ಳಿ ಚರ್ಚ್ ರಸ್ತೆ ಸೇರಿದಂತೆ 67 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 30 ಕಿ.ಮೀ. ರಸ್ತೆಗಳ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಪಾಳ್ಯ – ಚಿಕ್ಕಲ್ಲೂರು ರಸ್ತೆಯನ್ನು 60 ಅಡಿ ಅಭಿವೃದ್ಧಿ ಪಡಿಸಲಾಗುತ್ತಿದ್ದು ರಸ್ತೆಯ ಮಧ್ಯದಿಂದ ಎರಡು ಕಡೆ 30 ಅಡಿ 30 ಅಡಿ ತೆಗೆದುಕೊಂಡು ಅಭಿವೃದ್ಧಿ ಪಡಿಸಲಾಗುತ್ತಿದೆ. ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವಂತೆ ಗುತ್ತಿಗೆದಾರರು ಹಾಗೂ ಇಂಜಿನಿಯರ್ ಅವರಿಗೆ ಸೂಚಿಸಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ವಿಜಯ್ ಕುಮಾರ್. ಮಹಾದೇವ ಗೋವಿಂದ, ಚಿನ್ನವೆಂಕಟ್, ಕೃಷ್ಣ, ಚಿನ್ನಸ್ವಾಮಿ, ಶಿವು, ಅತಿಕ್, ಮಹೇಶ್, ನಟರಾಜು ಗೌಡ ಹಾಗೂ ಗುತ್ತಿಗೆ ಸಂಸ್ಥೆ ಯ ಅಭಿಯಂತರ ವಿವೇಕ್, ಸೂಪರ್ ವೈಸರ್ ಕುಮಾರ್ ಮತ್ತುತರರು ಹಾಜರಿದ್ದರು.

ಪಾಳ್ಯ – ಚಿಕ್ಕಲ್ಲೂರು ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಮಂಜುನಾಥ್ Read More

ಹನೂರು ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿಗೆ ಮಂಜುನಾಥ್ ಚಾಲನೆ-ಜನತೆ ಖುಷ್

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಕಳೆದ ಒಂದು ದಶಕದಿಂದ ಅಭಿವೃದ್ಧಿ ಕಾಣದೆ ಹಾಳಾಗಿದ್ದ ಬಂಡಳ್ಳಿ- ಹನೂರು,ಮೋಡಹಳ್ಳಿ- ದೊಡ್ಡಿಂದುವಾಡಿ ಹಾಗೂ ಚಿಕ್ಕಲ್ಲೂರು ರಸ್ತೆಗಳು ಸೇರಿದಂತೆ 6 ಕಡೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಎಂ.ಆರ್.ಮಂಜುನಾಥ್ ಗುದ್ದಲಿ ಪೂಜೆ ನೆರವೇರಿಸಿದರು.

ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಪ್ಯಾಕೇಜ್ 67 ಕೋಟಿ ರೂ.ಗಳ ಅನುಧಾನದಡಿ ಕ್ಫೇತ್ರದ ರಸ್ತೆಗಳ ಆಯ್ದ ಭಾಗಗಳಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು.

25 ಕೋಟಿ ವೆಚ್ಚದಲ್ಲಿ ದೊಡ್ಡಿಂದುವಾಡಿ ಗ್ರಾಮದಲ್ಲಿ ಮೋಡಹಳ್ಳಿ ವೃತ್ತದಿಂದ ದೊಡ್ಡಿಂದುವಾಡಿ ವೃತ್ತದವರೆಗೆ ದೊಡ್ಡಿಂದುವಾಡಿ-ಕನಕಗಿರಿ ರಸ್ತೆ, ಕೊತ್ತನೂರು ಗ್ರಾಮದಲ್ಲಿ ಮೊಳಗನಕಟ್ಟೆಯಿಂದ ಕೊತ್ತನೂರು ಗ್ರಾಮದ ಅಂಬೇಡ್ಕರ್ ಪ್ರತಿಮೆ ವರೆಗಿನ ಚಿಕ್ಕಲ್ಲೂರು ರಸ್ತೆ ಆಯ್ದ ಭಾಗಗಳಲ್ಲಿ 9 ಕಿ.ಮೀ. ರಸ್ತೆ, 24.80 ಕೋಟಿ ವೆಚ್ಚದಲ್ಲಿ ಬಂಡಳ್ಳಿಯಲ್ಲಿ ಬಂಡಳ್ಳಿ ರಸ್ತೆ ಹಾಗೂ ಜಿ.ವಿ.ಗೌಡ ಕಾಲೇಜು ಬಳಿ ಬಂಡಳ್ಳಿ- ಹನೂರು ರಸ್ತೆ,ಆಯ್ದ ಭಾಗಗಳಲ್ಲಿ 10.470  ಕಿ.ಮೀ. ರಸ್ತೆ,  ಹಾಗೆಯೇ 17 ಕೋಟಿ ರೂ. ವೆಚ್ಚದಲ್ಲಿ ಹನೂರಿನ ಇಂಡಿಯನ್ ಪೆಟ್ರೋಲ್ ಬಂಕ್ ಬಳಿ ಹನೂರು, ರಾಮಾಪುರ- ಕೌದಳ್ಳಿ ಆಯ್ದ ಭಾಗಗಳಲ್ಲಿ ರಸ್ತೆ ಆಭಿವೃಧ್ಧಿ, ಹಾಗೂ ಕೌದಳ್ಳಿ – ರಾಮಾಪುರ ಮುಖ್ಯ ರಸ್ತೆ ಬಳಿ ಕೌದಳ್ಳಿ ಚರ್ಚ್ ರಸ್ತೆ ಸೇರಿದಂತೆ 67 ಕೋಟಿ ರೂ ವೆಚ್ಚದಲ್ಲಿ ಸುಮಾರು 30 ಕಿ.ಮೀ. ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಮಂಜುನಾಥ್, ಈ ಅನುದಾನ ಮಲೆ ಮಹದೇಶ್ವರ ಬೆಟ್ಟಕ್ಕೆ ಸಿಸಿ ರಸ್ತೆ ಮಾಡಲು ಮೀಸಲಿಡಲಾಗಿತ್ತು.ಈ ಅನುಧಾನದ ಬಳಕೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟದ್ದಾಗಿತ್ತು. ಆದರೆ ಹನೂರಿನಿಂದ ಪಾಲರ್ ವರೆಗೆ ರಸ್ತೆ ಅಭಿವೃದ್ಧಿಗೆ ಬಜೆಟ್ ನಲ್ಲಿ ಪ್ರಸ್ತಾಪವಾಗಿ ಕೆಶಿಫ್ ಯೋಜನೆಯಡಿ ನಿರ್ಮಿಸಲು ತೀರ್ಮಾನವಾದ ನಂತರ ಅದೇ ಅನುಧಾನವನ್ನು ಈ ರಸ್ತೆಗಳ ನಿರ್ಮಾಣಕ್ಕೆ ಬಳಸಿಕೊಳ್ಳಲು ಮುಖ್ಯಮಂತ್ರಿಗಳು ಅನುಮೋದನೆ ನೀಡಿದರು ಅದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ನಾನು ವಿರೋಧ ಪಕ್ಷದಲ್ಲಿದ್ದರೂ ಕ್ಷೇತ್ರದ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಚರ್ಚಿಸಿ ಕ್ಷೇತ್ರದ ಅಭಿವೃದ್ಧಿಗೆ ಮುಂದಡಿ ಇಟ್ಟಿದ್ದೇನೆ
ಅಭಿವೃದ್ಧಿಗಾಗಿ ಸುಮಾರು ಒಂದೂವರೆ – ಎರಡು ವರ್ಷಗಳಿಂದ ಬಹಳಷ್ಟು ಹೊಂ ವರ್ಕ್ ಮಾಡಿದ್ದೇನೆ. ಅದರಲ್ಲೂ ನೀರಾವರಿ ಯೋಜನೆಗಾಗಿ ಕ್ರಾಂತಿಯೇ ಆಗಿದೆ. ತೆಳ್ಳನೂರು ನೀರಾವರಿ ಯೋಜನೆಗೆ ಭೂ ಸ್ವಾಧೀನ ಪಡಿಸಿಕೊಳ್ಳಲು ಸರ್ಕಾರ ದಿಂದ ಅನುದಾನ ಮಂಜೂರಾಗಿದೆ. ಇದರಲ್ಲಿ ಎಕರೆಗೆ ತೆಳ್ಳನೂರು ರೈತರಿಗೆ 24 ಲಕ್ಷ ಚಿಕ್ಕಲ್ಲೂರು ರೈತರಿಗೆ 16 ಲಕ್ಷದಂತೆ ದರ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಗುಂಡಲ್ ಜಲಾಶಯದ ಅಭಿವೃದ್ಧಿಗೆ 80 ಕೋಟಿ ರೂ. ಅನುದಾನ ಕೇಳಿದ್ದೇನೆ. ಈಗಾಗಲೇ ರಾಮನಗುಡ್ಡ, ಉಬ್ಬೆಹುಣಸೆ ಜಲಾಶಯಗಳಿಗೆ ಸರ್ಕಾರ 52 ಕೋಟಿ ಅನುದಾನ ಬಿಡುಗಡೆ ಮಾಡಿದೆ ಈ ಅನುದಾನದಲ್ಲಿ ಜಲಾಶಯಗಳ ಹೂಳು ತೆಗೆದು ಪೈಪ್ಲೈನ್ ಮಾಡಲು ತಕ್ಷಣ ಟೆಂಡರ್ ಕರೆಯಲಾಗುವುದು. ಒಟ್ಟಾರೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಾಕಷ್ಟು ಶ್ರಮ ಹಾಕಲಾಗಿದೆ ಎಂದು ತಿಳಿಸಿದರು.

ಬಂಡಳ್ಳಿಯಲ್ಲಿ ಸಂಭ್ರಮ:
ಕಳೆದ 25 ವರ್ಷಗಳ ಹಿಂದೆ ಅಭಿವೃದ್ಧಿಯಾಗಿದ್ದ ಬಂಡಳ್ಳಿ ರಸ್ತೆ ಹತ್ತು ವರ್ಷಗಳ ನಂತರ ಹಾಳಾಗಿ ಗುಂಡಿ ಬಿದ್ದಿತ್ತು.ಇದರಿಂದ ಸಂಚಾರಕ್ಕೆ ತೊಡಕಾಗಿ ಈ ಭಾಗದ ಜನ ನಿತ್ಯ ನರಕಾಯತನೆ ಆಗಿತ್ತು. ಈ ರಸ್ತೆಗಳನ್ನು ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿ ಜನರು ಸಂಬಂಧ ಪಟ್ಟವರಿಗೆ ಮನವಿ ಮಾಡಿದ್ದರೂ ಗಮನ ಹರಿಸದ ಕಾರಣ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ರಸ್ತೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಗುದ್ದಲಿ ಪೂಜೆ ನೆರವೇರಿಸಿರುವುದರಿಂದ ಕ್ಷೇತ್ರದ ಜನರು ಖುಷಿಯಾಗಿದ್ದಾರೆ.

ಶಾಸಕರು ಗುದ್ದಲಿ ಪೂಜೆಗೆಂದು ಬಂಡಳ್ಳಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಪಟಾಕಿ ಸಿಡಿಸಿ ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಸಂಭ್ರಮಾಚರಣೆ ಮಾಡಿದ್ದು ವಿಶೇಷವಾಗಿತ್ತು.

ಸುಮಾರು ಅರ್ಧ ಕಿಲೋಮೀಟರ್ ವರೆಗೆ ಶಾಸಕರನ್ನು ಮೆರವಣಿಗೆ ಮೂಲಕ ಗುದ್ದಲಿ ಪೂಜೆ ನಡೆಯುವ ಸ್ಥಳಕ್ಕೆ ಕರೆತಂದು ಸಂಭ್ರಮದಿಂದ ಗುದ್ದಲಿ ಪೂಜೆ ನೆರವೇರಿಸಿದರು.

ಹನೂರಿನ ಶಾಸಕ ಮಂಜುನಾಥ್ ಅವರು ಜೆ.ಡಿ.ಎಸ್ ಪಕ್ಷದವರಾಗಿದ್ದು ತಮ್ಮ ಸರ್ಕಾರವಿಲ್ಲದಿದ್ದರೂ ಪ್ರಸ್ತುತ ಕಾಂಗ್ರೆಸ್ ಸರ್ಕಾರದೊಡನೆ ಹೋರಾಟ ಮಾಡಿ ಕ್ಷೇತ್ರದ ರಸ್ತೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮುಂದಾಗಿದ್ದಾರೆ. ಈ ರಸ್ತೆಗಳ ಅಭಿವೃದ್ಧಿಗೆ ಕಳೆದ ನಾಲ್ಕೈದು ತಿಂಗಳ ಹಿಂದೆಯೇ ಚಾಲನೆ ನೀಡಬೇಕಾಗಿತ್ತು ಆದರೆ ತಾಂತ್ರಿಕ ಸಮಸ್ಯೆಯಿಂದ ತಡವಾಗಿ ಗುದ್ದಲಿ ಪೂಜೆ ನೆರವೇರಿಸಲಾಗಿದೆ.

ಗುದ್ದಲಿ ಪೂಜೆ ಸಂದರ್ಭದಲ್ಲಿ
ದೊಡ್ಡಿಂದುವಾಡಿ ಗ್ರಾ.ಪಂ. ಅಧ್ಯಕ್ಷ ಶಿವರುದ್ರ, ಚಿಕ್ಕಲ್ಲೂರು ಗ್ರಾ.ಪಂ. ಅಧ್ಯಕ್ಷೆ ಗೀತಾ, ಕೆ.ಎಂ.ಎಫ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ ಹಾಲಿ ಸದಸ್ಯ ಉದ್ದನೂರು ಪ್ರಸಾದ್, ಹನೂರು ಪಟ್ಟಣ ಪಂಚಾಯತಿ ಅಧ್ಯಕ್ಷ ಬೇಗ್ ಉಪಾಧ್ಯಕ್ಷ ಆನಂದ್ ಮುಖಂಡರಾದ ಡಾ. ದತ್ತೇಶ್ ಕುಮಾರ್, ಬಂಡಳ್ಳಿ ಜೆಸ್ಸಿಂ ಪಾಷ, ಹನೂರು ಮಂಜೇಶ್, ವಿಜಯ್ ಕುಮಾರ್, ಗೋವಿಂದ, ವೆಂಕಟೇಶ್, ಮತ್ತಿಪುರ ಮಹಾದೇವ, ಪಾಳ್ಯ ಬಸವರಾಜು, ಗೋವಿಂದ ನಾಯಕ, ನಾಗರಾಜು, ದೊಡ್ಡಿಂದುವಾಡಿ ಸಿದ್ದರಾಜು, ಕರಿಯನಪುರ ಸಿದ್ದಯ್ಯ, ಲೋಕೋಪಯೋಗಿ ಇಲಾಖೆ ಎಇಇ ಗಳಾದ ಪುರುಷೋತ್ತಮ್, ಚಿನ್ನಣ್ಣನ್, ಜೆಇ ಗಳಾದ ಸುರೇಂದ್ರ, ಮಹೇಶ್, ಗುತ್ತಿಗೆದಾರರಾದ ಲೋಕೇಶ್, ಕೃಷ್ಣ ಮತ್ತಿತರರು ಹಾಜರಿದ್ದರು.

ಹನೂರು ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿಗೆ ಮಂಜುನಾಥ್ ಚಾಲನೆ-ಜನತೆ ಖುಷ್ Read More

ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ:ಮಂಜುನಾಥ್

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಬೇಸಿಗೆ ಸಂದರ್ಭದಲ್ಲಿ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗದ ಹಾಗೆ ಪರಿಸ್ಥಿತಿ ನಿಭಾಯಿಸಿ ಎಂದು ಹನೂರು ಶಾಸಕ ಎಂ.ಆರ್ ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಹನೂರು ವಿಧಾನಸಭಾ ಕ್ಷೇತ್ರದ ಪಾಳ್ಯ ಹೋಬಳಿ ವ್ಯಾಪ್ತಿಯ 9 ಗ್ರಾ. ಪಂ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಪರಿಸ್ಥಿತಿ ನಿಭಾಯಿಸುವ ಸಂಬಂಧ ಹಾಗೂ ಸ್ವಚ್ಛತೆ ಕುರಿತು ತಹಸಿಲ್ದಾರ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮೀಣ ಕುಡಿಯುವ ನೀರಿನ ವಿಭಾಗದ ಕಾರ್ಯ ಪಾಲಕ ಅಭಿಯಂತರರು ಹಾಗೂ ಗ್ರಾ.ಪಂ. ಪಿ.ಡಿ.ಒ ಗಳ ಸಭೆಯಲ್ಲಿ ಮಾತನಾಡಿದ ಅವರು ಬೇಸಿಗೆಯಲ್ಲಿ ನೀರಿನ ಭವಣೆ ಎದುರಿಸಲು ತಕ್ಷಣದಿಂದಲೇ ಸಜ್ಜಾಗಿ ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದ ಹಾಗೆ ಮುಂಜಾಗ್ರತೆ ವಹಿಸುವ ಸಲುವಾಗಿ ಮಾರ್ಚ್ 1 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಹಾಗೆಯೇ ಮಾರ್ಚ್ 7 ರಂದು ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಲಾಗಿದೆ. ಈಗ ಶಾಸಕರ ಅಧ್ಯಕ್ಷತೆಯಲ್ಲಿ ಹೋಬಳಿ ವ್ಯಾಪ್ತಿಯ ಗ್ರಾ.ಪಂ. ಗಳ ಸಭೆ ನಡೆಸಲಾಗುತ್ತಿದೆ ಎಂದು ತಾ.ಪಂ. ಇಒ ಗುರುಶಾಂತಪ್ಪ ಬೆಳ್ಳುಂಡಗಿ ಸಭೆಯಲ್ಲಿ ತಿಳಿಸಿದರು

ಸಭೆಯಲ್ಲಿ ಭಾಗವಹಿಸಿದ್ದ ಪಾಳ್ಯ, ಚಿಕ್ಕಲ್ಲೂರು, ತೆಳ್ಳನೂರು, ಧನಗೆರೆ, ಸತ್ತೇಗಾಲ, ಮದುವನಹಳ್ಳಿ, ದೊಡ್ಡಿಂದುವಾಡಿ ಸಿಂಗನಲ್ಲೂರು, ಕೊಂಗರಹಳ್ಳಿ, ಗ್ರಾಮ ಪಂಚಾಯಿತಿಗಳ ಪಿಡಿಒಗಳು ನಮ್ಮ ಪಂಚಾಯಿತಿಗಳಲ್ಲಿ ಯಾವುದೇ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ, ಬೇಸಿಗೆ ವೇಳೆ ಕುಡಿಯುವ ನೀರಿನ ಭವಣೆ ಉಂಟಾದರೆ ಎದುರಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದರು.

ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿಂದ ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಟ್ಯಾಂಕ್ ಗಳು ತೊಂಬೆಗಳು ಹಾಗೂ ನೀರಿನ ತೊಟ್ಟಿಗಳನ್ನು ಸ್ವಚ್ಛಗೊಳಿಸಿದ್ದೇವೆ ಎಂದು ಹೇಳಿದರು.

ಈ ನಡುವೆ ಮಾತನಾಡಿದ ಧನಗೆರೆ ಗ್ರಾ.ಪಂ. ಪಿ.ಡಿ.ಒ ಕಮಲ್ ರಾಜ್, ಬೇಸಿಗೆ ವೇಳೆ ಕುಡಿಯುವ ನೀರಿನ ಸಮಸ್ಯೆ ಎದುರಿಸಲು 15 ನೇ ಹಣಕಾಸು ಯೋಜನೆಯಡಿ 14 ಲಕ್ಷ ರೂ.ಗಳನ್ನು ಮೀಸಲಿಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.

ಪಿಡಿಒಗಳಿಂದ ಮಾಹಿತಿ ಪಡೆದು ಮಾತನಾಡಿದ ಶಾಸಕರು ಪ್ರತಿ ಮೂರು ತಿಂಗಳಿಗೊಮ್ಮೆ ನೀರಿನ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸಿ, ಈಗಾಗಲೇ ಸ್ವಚ್ಛಗೊಳಿಸಿರುವ ಟ್ಯಾಂಕ್ ಗಳು, ತೊಂಬೆಗಳು ಹಾಗೂ ನೀರಿನ ತೊಟ್ಟಿಗಳಿಗೆಲ್ಲಾ ಒಂದೇ ರೀತಿಯ ಬಣ್ಣ ಬಳಿಸಿ ಎಂದು ತಾಕಿತು ಮಾಡಿದರು.

ಹಾಗೆಯೇ ಯಾವಾಗ ಸ್ವಚ್ಛಗೊಳಿಸಿದ್ದೀರಾ ಮುಂದೆ ಸ್ವಚ್ಛಗೊಳಿಸುವ ದಿನಾಂಕ ಯಾವುದು ಎಂಬುದನ್ನು ನೀರಿನ ಟ್ಯಾಂಕ್ ಹಾಗೂ ತೊಂಬೆಗಳ ಮೇಲೆ ಬರೆಸಬೇಕು. ಇದರಿಂದಾಗಿ ಜನರಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ. ಈ ಅಭಿಯಾನ ನಮ್ಮಿಂದಲೇ ಪ್ರಾರಂಭವಾಗಲಿ ಎಂದು ಪಿ ಡಿ ಒ ಗಳಿಗೆ ಸೂಚಿಸಿದರು.

ಮದುವನಹಳ್ಳಿ ದೊಡ್ಡ ಗ್ರಾಮವಾಗಿದ್ದು ಇಲ್ಲಿ 7,574 ಜನಸಂಖ್ಯೆ ಇದೆ ಆದರೆ ಇಲ್ಲಿರುವುದು ಒಂದೇ ಶುದ್ಧ ನೀರಿನ ಕುಡಿಯುವ ನೀರಿನ ಘಟಕ ಆದ್ದರಿಂದ ಇಲ್ಲಿ ಮತ್ತೊಂದು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡುವಂತೆ ತಾ.ಪಂ. ಇಒ ಗುರು ಶಾಂತಪ್ಪ ಬೆಳ್ಳುಂಡಗಿ ಅವರಿಗೆ ಸಲಹೆ ನೀಡಿದರು.

ಇದೇ ವೇಳೆ ಕಾಡಂಚಿನ ಗ್ರಾಮಗಳ ಜನರಲ್ಲಿ ಕಾಡ್ಗಿಚ್ಚು ಬೆಂಕಿ ಅನಾಹುತಗಳ ಬಗ್ಗೆ ಅರಿವು ಮೂಡಿಸುವ ಕುರಿತು ತಹಸಿಲ್ದಾರ್ ಬಸವರಾಜ್ ಅವರಿಗೆ ಶಾಸಕರು ಸೂಚಿಸಿದಾಗ ಪ್ರತಿಕ್ರಿಯಿಸಿದ ತಹಸಿಲ್ದಾರರು ರಾಜಸ್ವ ನಿರೀಕ್ಷಕರು, ಅಗ್ನಿಶಾಮಕ ದಳದ ಅಧಿಕಾರಿಗಳು ಪಿಡಿಒ ಹಾಗೂ ಅರಣ್ಯ ಅಧಿಕಾರಿಗಳ ತಂಡ ಕಾಡಂಚಿನ ಗ್ರಾಮಗಳಿಗೆ ಭೇಟಿ ನೀಡಿ ಬೆಂಕಿ ಅನಾಹುತದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲು ಮುಂದಾಗಿರುವುದಾಗಿ ತಿಳಿಸಿದರು.

ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಎಂ.ಆರ್ ಮಂಜುನಾಥ್, ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಮಾಪುರ, ಹನೂರು, ಲೊಕ್ಕನಹಳ್ಳಿ ಹೋಬಳಿಗಳಿಗೆ ಹೋಲಿಕೆ ಮಾಡಿದರೆ ಪಾಳ್ಯ ಹೋಬಳಿ ವ್ಯಾಪ್ತಿಯಲ್ಲಿ ನೀರಿನ ಅಭಾವವಿಲ್ಲ,ಏಕೆಂದರೆ ಅಂತರ್ಜಲ ಇಲ್ಲಿ ಚೆನ್ನಾಗಿದೆ ಎಂದು ತಿಳಿಸಿದರು.

ಆದರೂ ಅಧಿಕಾರಿಗಳು ಪರಿಸ್ಥಿತಿ ಎದುರಿಸಲು ಸನ್ನದ್ದರಾಗಿದ್ದಾರೆ. ಹಾಗೆ ಸ್ವಚ್ಛತೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ, ಇನ್ನು 15 ದಿನಗಳಲ್ಲಿ ಸಾಮೂಹಿಕವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಿದ್ದಾರೆ, ಸ್ವಚ್ಛತೆ ಇದ್ದರೆ ರೋಗ ಹರಡುವುದಿಲ್ಲ ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಈ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ  ತಹಸೀಲ್ದಾರ್ ಎ.ಇ.ಬಸವರಾಜು ತಾ.ಪಂ. ಇಒ ಗುರುಶಾಂತಪ್ಪ ಬೆಳ್ಳುಂಡಗಿ. ಗ್ರಾಮೀಣ ಕಃಡಿಯುವ ನೀರು ಯೋಜನೆಯ ಕೊಳ್ಳೇಗಾಲ ಉಪವಿಭಾಗದ ಕಾರ್ಯ ಪಾಲಕ ಅಭಿಯಂತರ ಸುಧನ್ವ ನಾಗ್ ಹಾಗೂ ಪಾಳ್ಯ ಹೋಬಳಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.

ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ:ಮಂಜುನಾಥ್ Read More