ಮಂಡ್ಯಕ್ಕೆ ಕುಮಾರಸ್ವಾಮಿಯವರ ಕೊಡುಗೆ ಏನು-ಸಿಎಂ ಪ್ರಶ್ನೆ

ಹಾಸನ: ಅಹಿಂದ ವರ್ಗಗಳ ಸಂಘಟನೆಯಲ್ಲಿ ನನ್ನ ಕೊಡುಗೆಯಿದೆ, ಮಂಡ್ಯಕ್ಕೆ ಕುಮಾರಸ್ವಾಮಿಯವರ ಕೊಡುಗೆಗಳೇನು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಹಾಸನದಲ್ಲಿ ಮಾಧ್ಯಮ ಗಳೊಂದಿಗೆ ಮಾತನಾಡಿದರು.
ಅಹಿಂದ ವರ್ಗಕ್ಕೆ ಸಿದ್ದರಾಮಯ್ಯನವರ ಕೊಡುಗೆಯ ಬಗ್ಗೆ ಪ್ರಶ್ನೆ ಮಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಅಹಿಂದ ವರ್ಗಗಳ ಸಂಘಟನೆಯಲ್ಲಿ ನಾನು ಪ್ರಮುಖ ಪಾತ್ರ ವಹಿಸಿದ್ದು, ಅವರಿಗೆ ಗ್ಯಾರಂಟಿ ಹಾಗೂ ಅನೇಕ ಭಾಗ್ಯಯೋಜನೆಗಳನ್ನು ನೀಡಿದ್ದೇವೆ. ಕಾರ್ಮಿಕರು, ಬಡವರು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರ ಸಬಲೀಕರಣಕ್ಕೆ ಗ್ಯಾರಂಟಿ ಸೇರಿದಂತೆ ಅನೇಕ ಯೋಜನೆಗಳಿಂದ ಅನುಕೂಲವಾಗಿದೆ ಎಂದು ಹೇಳಿದರು.

ಕುಮಾರಸ್ವಾಮಿಯವರು ರೈತರ ಕುಟುಂಬದವರೇ,ಆದರೆ ರೈತವರ್ಗಕ್ಕೆ ಅವರ ಕೊಡುಗೆಗಳೇನಿದೆ ಎಂದು ಸಿಎಂ ಪ್ರಶ್ನಿಸಿದರು.

ಸೆಪ್ಟೆಂಬರ್ ನಿಂದ ನವೆಂಬರ್ 2025ರವೆಗೆ ಕರ್ನಾಟಕಕ್ಕೆ ಜಿಎಸ್ ಟಿ ಸಂಗ್ರಹದಲ್ಲಿ ನಷ್ಟವಾಗಿದೆ. 2017 ರಲ್ಲಿ ಪ್ರಧಾನಿ ಮೋದಿಯವರು ಜಿಎಸ್ ಟಿ ಜಾರಿಗೆ ತಂದು, ಅಂದಿನಿಂದಲೂ ಜನರಿಂದ ತೆರಿಗೆ ವಸೂಲಿ ಮಾಡುತ್ತಿದ್ದಾರೆ. ಈಗ ಆರ್ಥಿಕ ವರ್ಷದ ಮಧ್ಯದಲ್ಲಿಯೇ ಜಿಎಸ್ ಟಿ ದರವನ್ನು ಕಡಿಮೆ ಮಾಡಿದ ಪರಿಣಾಮ, ರಾಜ್ಯ ಸರ್ಕಾರಗಳಿಗೆ ಜಿಎಸ್ ಟಿ ಸಂಗ್ರಹದಲ್ಲಿ ನಷ್ಟವಾಗಿದೆ. ಕೇರಳ, ಮಹಾರಾಷ್ಟ್ರ ಮತ್ತು ಕರ್ನಾಟಕವನ್ನು ಹೊರತುಪಡಿಸಿ, ದೇಶದ ಎಲ್ಲಾ ರಾಜ್ಯಗಳಲ್ಲಿ ಜಿಎಸ್ ಟಿ ಸಂಗ್ರಹದಲ್ಲಿ ಕೊರತೆ ಕಂಡಿದೆ ಎಂದು ಸಿದ್ದು‌ ಹೇಳಿದರು.

ಜಿಎಸ್ ಟಿ ದರ ಕಡಿತದಿಂದ ರಾಜ್ಯಕ್ಕಾಗಿರುವ ನಷ್ಟದ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿಯರು ಇದುವರೆಗೂ ಧ್ವನಿ ಎತ್ತಿಲ್ಲ ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಕೇಂದ್ರ ವಿತ್ತಸಚಿವರು 5300 ಕೋಟಿ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಈ ಘೋಷಣೆಯಲ್ಲಿ ಹಿಂದಿನ ಸರ್ಕಾರದವರು ತಮ್ಮ ಆಯವ್ಯಯದಲ್ಲಿಯೂ ಉಲ್ಲೇಖಿಸಿದರು. ಆದರೆ ಇದುವರೆಗೆ ಕೇಂದ್ರದಿಂದ ಈ ಅನುದಾನವನ್ನು ಬಿಡುಗಡೆ ಮಾಡಿಲ್ಲ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ, ಕೇಂದ್ರ ಸರ್ಕಾರದ ಅಧೀನದಲ್ಲಿದ್ದು, ರಾಜ್ಯದ ಪ್ರಮುಖ ಯೋಜನೆಗೆ ಇದುವರೆಗೆ ಅನುಮತಿ ದೊರೆತಿಲ್ಲ. ಇದರಿಂದ ಮಂಡ್ಯ ಜನರಿಗೆ ಅನ್ಯಾಯವಾಗಿದೆ ಎಂದು ಸಿದ್ದರಾಮಯ್ಯ ಅಸಮಾಧಾನದಿಂದ ನುಡಿದರು.

ಮಹಿಳಾ ಮೀಸಲಾತಿ ಜಾರಿಯಾಗಿಲ್ಲದಿರುವ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ‌ ಸಿದ್ದ ರಾಮಯ್ಯ ನಮ್ಮ ಸರ್ಕಾರ ಮೊದಲಿನಿಂದಲೂ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಮಹಿಳಾ ಮೀಸಲಾತಿ ಕೊಡಬೇಕು ಎಂದು ಒತ್ತಾಯಿಸಿಸುವವರಲ್ಲಿ ನಾವು ಮುಂಚೂಣಿಯಲಿದ್ದೇವೆ. ಮೀಸಲಾತಿ ಕೊಡಬೇಕು ಎಂದರೆ ತಕ್ಷಣ ಕೊಡಬೇಕು. ಕೇಂದ್ರ ಸರ್ಕಾರ ಇದನ್ನು ಏಕೆ ಮುಂದೂಡಬೇಕು ಎಂದು ಪ್ರಶ್ನಿಸಿದರು.

ಮಂಡ್ಯಕ್ಕೆ ಕುಮಾರಸ್ವಾಮಿಯವರ ಕೊಡುಗೆ ಏನು-ಸಿಎಂ ಪ್ರಶ್ನೆ Read More

ಟಿ ಎಸ್ ಶ್ರೀವತ್ಸ ಹುಟ್ಟು ಹಬ್ಬ: 101 ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ

ಮೈಸೂರು: ಕೆ ಆರ್ ಕ್ಷೇತ್ರದ ಶಾಸಕರಾದ ಟಿ ಎಸ್ ಶ್ರೀವತ್ಸ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ ಹೆಸರಿನಲ್ಲಿ 101 ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ನಂತರ ಸಾರ್ವಜನಿಕರಿಗೆ ಸಿಹಿ ವಿತರಿಸಿ, ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸಲು ಶಾಸಕರಿಗೆ ಶಕ್ತಿ ನೀಡಲಿ ಎಂದು ಪ್ರಾರ್ಥಿಸಲಾಯಿತು.

ಈ ಸಂಧರ್ಭದಲ್ಲಿ ಕೆ ಆರ್ ಕ್ಷೇತ್ರದ ಅಧ್ಯಕ್ಷರಾದ ಗೋಪಾಲ್ ರಾಜ ಅರಸು ಅವರು ಮಾತನಾಡಿ, ಶ್ರೀವತ್ಸ ಅವರು ಭಾರತೀಯ ಜನತಾ ಪಕ್ಷದ ತಳಮಟ್ಟದ ಬೂತ್ ಸಂಘಟನೆಯ ಕಾರ್ಯಕರ್ತರಾಗಿ ಯುವ ಮೋರ್ಚಾ ವಿಭಾಗದಿಂದ ಸಂಘಟಿಸಿ ಶಾಸಕರಾಗಿ ತಮ್ಮ ನಾಯಕತ್ವದಲ್ಲಿ ಸಾವಿರಾರು ಮಂದಿ ಮುಖಂಡರನ್ನ ಬೆಳೆಸಿದ್ದಾರೆ , ಮೂಡ ಭ್ರಷ್ಟಚಾರ ಪ್ರಕರಣ ಬಯಲಿಗೆ ತಂದು ಸರ್ಕಾರದ ಕೋಟ್ಯಾಂತರ ಆಸ್ಥಿಯನ್ನ ಮತ್ತು ಜನಸಾಮಾನ್ಯರ ತೆರಿಗೆ ಹಣವನ್ನ ಕಾಪಾಡಿದ್ದಾರೆ ಎಂದು ಬಣ್ಣಿಸಿದರು.

ನಂತರ ಬಿಜೆಪಿ ಮುಖಂಡ ಪ್ರದೀಪ್ ಕುಮಾರ್ ಅವರು ಮಾತನಾಡಿ ಸಾಂಸ್ಕೃತಿಕ ನಗರಿಗೆ ಸಂಸ್ಕಾರಯುತ ಮತ್ತು ಸರಳ ಸಜ್ಜನಿಕೆಯ ಪ್ರಾಮಾಣಿಕ ರಾಜಕಾರಣಿಯಾಗಿ, ಮಾದರಿ ಜನಪ್ರತಿನಿಧಿಯಾಗಿ ಟಿ.ಎಸ್. ಶ್ರೀವತ್ಸ ಅವರು ಕಾರ್ಯಕರ್ತರ ಶಕ್ತಿಯಾಗಿದ್ದಾರೆ, ಮುಂದಿನ ದಿನದಲ್ಲಿ ಬಿಜೆಪಿ ಸರ್ಕಾರದಲ್ಲಿ ಟಿ.ಎಸ್. ಶ್ರೀವತ್ಸ ಅವರು ಸಚಿವರಾಗಬೇಕು ಮೈಸೂರಿನ ಅಭಿವೃದ್ಧಿಗಾಗಿ ಶಾಶ್ವತ ಯೋಜನೆಗಳನ್ನು ಜಾರಿಗೆ ತರಲು ಸಮರ್ಥರಾಗಿದ್ದಾರೆ ಎಂದು ತಿಳಿಸಿದರು.

ಜಯಶಂಕರ್, ಜಯರಾಮ್, ವಿಶ್ವೇಶ್ವರಯ್ಯ, ನಗರ ಪಾಲಿಕೆ ಮಾಜಿ ಸದಸ್ಯರಾದ ಸೌಮ್ಯ ಉಮೇಶ್, ಬಿ ವಿ ಮಂಜುನಾಥ್. ಗೋಕುಲ್ ಗೋವರ್ಧನ್, ಕಿಶೋರ್, ಕೀರ್ತಿ, ಕೃಷ್ಣರಾಜ ಯುವ ಮೋರ್ಚಾ ಅಧ್ಯಕ್ಷ ಕೆ ಎಂ ನಿಶಾಂತ್, ರಾಜೇಶ್, ವಿನಯ್, ಪಂಚ್ಯಾಜನ್ಯ ಟಿ.ಪಿ. ಮಧುಸೂಧನ್, ಅಜಯ್ ಶಾಸ್ತ್ರಿ,ಡಿ.ಪಿ ಸುರೇಶ್, ಹರೀಶ್, ಉಪೇಂದ್ರ, ಜಗದೀಶ್, ಧನುಷ್, ಕನಕಗಿರಿ ಹರೀಶ್, ಅಂಕಿತ್, ಬೇಕರಿ ಚಂದ್ರು, ಚಂದ್ರಕಲಾ, ಲತಾ ಬಾಲಕೃಷ್ಣ, ಮಧುಶ್ರೀ, ಕವಿತಾ, ಲತಾ ಮುಂತಾದವರು ಹಾಜರಿದ್ದರು.

ಟಿ ಎಸ್ ಶ್ರೀವತ್ಸ ಹುಟ್ಟು ಹಬ್ಬ: 101 ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ Read More

ಅರಣ್ಯ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳು ಒತ್ತುವರಿ ತಡೆಯಿರಿ:ಶ್ರೀವತ್ಸ ಆಗ್ರಹ

ಮೈಸೂರು: ಅರಣ್ಯ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳು ಹಾಗೂ ಒತ್ತುವರಿಗಳನ್ನು ತಡೆಯಬೇಕು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಮೈಸೂರು ಭಾಗದಲ್ಲಿ ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗಲು ಕಾಡು ನಾಶ ಕಾರಣ, ಅಕ್ರಮ ಒತ್ತುವರಿ ಸಂಬಂಧ ಜನರ ಆಕ್ರೋಶ ಹೆಚ್ಚಾಗುವ ಮೊದಲು ಅರಣ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅರಣ್ಯ ವ್ಯಾಪ್ತಿಯಲ್ಲಿರುವ ರೆಸಾರ್ಟ್‌ಗಳಲ್ಲಿ ರಾತ್ರಿ ವೇಳೆ ಫೈರ್ ಕ್ಯಾಂಪ್ ಹಾಕುತ್ತಾರೆ. ಇದರಿಂದ ಪ್ರಾಣಿಗಳಿಗೆ ತುಂಬಾ ತೊಂದರೆ ಆಗುತ್ತಿದೆ. ಭಯದಿಂದಲೇ ಕಾಡುಪ್ರಾಣಿಗಳು ನಾಡಿನತ್ತ ಬರುತ್ತಿವೆ. ಇದಕ್ಕೆ ಅರಣ್ಯ ಇಲಾಖೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಎಲೆಕ್ಷನ್ ಕಮಿಷನರ್ ರಾಜಕೀಯ ಪುಡಾರಿ ರೀತಿ ವರ್ತನೆ ಮಾಡುತ್ತಿದ್ದಾರೆ ಎಂಬ ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀವತ್ಸ, ಯತೀಂದ್ರ ಹೇಳಿಕೆಯನ್ನು ಖಂಡಿಸುತ್ತೇನೆ. ಯಾವ ಯಾವ ಸಮಯದಲ್ಲಿ ಸಂವಿಧಾನ ದುರುಪಯೋಗ ಆಯ್ತು ಎಂಬುದನ್ನು ಅವರೇ ಅರಿತುಕೊಳ್ಳಲಿ ಎಂದು ಟಾಂಗ್ ನೀಡಿದರು.

ನೀವು ಚುನಾವಣೆಯಲ್ಲಿ ಗೆದ್ದರೆ ಮತಗಳ್ಳತನ ಇಲ್ಲ. ಸೋತರೆ ಮಾತ್ರ ಮತಗಳ್ಳತನಾನ? ಈ ಬಗ್ಗೆ ನೀವೇ ಪರಾಮರ್ಶೆ ಮಾಡಬೇಕು ಎಂದು ಹೇಳಿದರು.

ಆರ್‌ಎಸ್‌ಎಸ್‌ ಬಗ್ಗೆ ಪ್ರಿಯಾಂಕ್ ಖರ್ಗೆ ಪದೇ ಪದೇ ಹೇಳಿಕೆ ಕೊಡುತ್ತಿದ್ದಾರೆ,ಅವರಿಗೆ ಯಾಕೆ ಅಷ್ಟು ಕೋಪ ಎಂದು ಶಾಸಕರು ಪ್ರಶ್ನಿಸಿದರು.

ಆರ್‌ಎಸ್‌ಎಸ್‌ ಚಟುವಟಿಕೆ ನಿಷೇಧಕ್ಕೆ ಸರ್ಕಾರ ಮುಂದಾಗಿದೆ. ಇಷ್ಟಾದರೂ ಕಾಂಗ್ರೆಸ್ ಹೈಕಮಾಂಡ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಒಂದೇ ಒಂದು ಮಾತು ಆಡಿಲ್ಲ. ತಮ್ಮ ಮಗ ಎಂಬ ಕಾರಣಕ್ಕೆ ಹೇಳಿಕೆ ಕೊಡುತ್ತಿಲ್ಲವೇ? ಆರ್‌ಎಸ್‌ಎಸ್‌ ಚಟುವಟಿಕೆ ಬಗ್ಗೆ ನಿಮಗೆ ಗೊತ್ತಿಲ್ಲವೆ ಎಂದು ಕಾರವಾಗಿ ಪ್ರಶ್ನೆ ಮಾಡಿದರು.

ಈಗಿನ ಪರಿಸ್ಥಿತಿ ನೋಡಿದ್ರೆ ಖಂಡಿತ ಕ್ರಾಂತಿ ಆಗುತ್ತದೆ,ಅಂತಹ ಬೆಳವಣಿಗೆಗಳು ಕಾಂಗ್ರೆಸ್ ನಲ್ಲಿ ಕಾಣುತ್ತಿವೆ, ಸಿಎಂ ಬದಲಾವಣೆ ಆಗುವಂತ ಕಾಣುತ್ತಿದೆ, ನವೆಂಬರ್ ಕ್ರಾಂತಿ ಆಗೇ ಆಗುತ್ತದೆ ಎಂದು ಶ್ರೀವತ್ಸ ಹೇಳಿದರು.

ಅರಣ್ಯ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳು ಒತ್ತುವರಿ ತಡೆಯಿರಿ:ಶ್ರೀವತ್ಸ ಆಗ್ರಹ Read More

ಧರ್ಮಸ್ಥಳದ ಬಗ್ಗೆ ಅಪಚಾರ ಮಾಡುವವರ ವಿರುದ್ಧ ನಿಲ್ಲುತ್ತೇವೆ- ಶ್ರೀವತ್ಸ

ಮೈಸೂರು: ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡಲು ಬಿಡುವುದಿಲ್ಲ,ಅಪಚಾರ ಮಾಡುವವರ ವಿರುದ್ಧ ಸದಾ ನಾವು ನಿಲ್ಲುತ್ತೇವೆ ಎಂದು ಶಾಸಕ ಶ್ರೀವತ್ಸ ಎಚ್ಚರಿಸಿದರು.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಾರನ್ನ ಕೇಳಿ ಎಸ್ಐಟಿ ರಚನೆ ಮಾಡಿದರು ಎಂದು ಪ್ರಶ್ನಿಸಿದರು.

ರಾಜ್ಯ ಸರ್ಕಾರದ ಸಹಾನುಭೂತಿಯಿಂದ ಇಷ್ಟೆಲ್ಲ ನಡೆಯುತ್ತಿದೆ. ಮಂಜುನಾಥ ಸ್ವಾಮಿ ಸನ್ನಿಧಿಯ ಅಡಿಯಲ್ಲಿ ಹೆಣ ಇದೆ ಅಂತ ಅಂದರೂ ತೆಗೆಸಿಬಿಡ್ತಾರಾ ಎಂದು ಕಿಡಿಕಾರಿದರು.

ಮೈಸೂರು ಮುಡಾ ಹಗರಣ, ಅಕ್ರಮ ರೆಸಾರ್ಟ್ ಹಗರಣ ಕೋಟ್ಯಾಂತರ ರೂಪಾಯಿ ಡ್ರಗ್ಸ್ ಕೇಸ್ ಆಯಿತು ಇದೆಲ್ಲವನ್ನ ಎಸ್ ಐಟಿಗೆ ವಹಿಸಿದ್ರಾ, ಧರ್ಮ ಸ್ಥಳದ ಬಗ್ಗೆ ಯಾಕೆ ಇಷ್ಟು ಮುತುವರ್ಜಿ ಧರ್ಮಸ್ಥಳ ಕ್ಷೇತ್ರಕ್ಕೆ ಅಪಚಾರ ಮಾಡುವವರ ವಿರುದ್ಧ ಸದಾ ನಾವು ಇರುತ್ತೇವೆ ಎಂದು ಶ್ರೀವತ್ಸ ತಿಳಿಸಿದರು.

ಸಚಿವ ಸ್ಥಾನದಿಂದ ಕೆ.ಎನ್ ರಾಜಣ್ಣ ವಜಾ ವಿಚಾರಕ್ಕೆ ಪ್ರತಿಕ್ರಿಯಿಸಿದ ಶ್ರೀವತ್ಸ, ಸತ್ಯ ಹೇಳಿದ್ದಕ್ಕೆ ವಜಾ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ, ರಾಜಣ್ಣ ಅವರ ಅಧ್ಯಕ್ಷರು ಹೇಳಿದ್ದನ್ನ ಒಪ್ಪಲಿಲ್ಲ ಎಂಬ ಕಾರಣಕ್ಕೆ ಸಂಪುಟದಿಂದ ಕಿತ್ತು ಹಾಕಿದ್ದಾರೆ. ಇದು ಒಬ್ಬ ಹಿಂದುಳಿದ ನಾಯಕನಿಗೆ ಮಾಡಿದ ಅಪಮಾನ ಕಾಂಗ್ರೆಸ್ ನಲ್ಲಿ ಸತ್ಯ ಹೇಳಿದ್ರೆ ಉಳಿಗಾಲ ಇಲ್ಲ ಎಂಬುದನ್ನು ತೋರಿಸುತ್ತಿದೆ ಎಂದು ‌ಟೀಕಿಸಿದರು.

ನಟ ದರ್ಶನ್ ಜಾಮೀನು ಅರ್ಜಿ ವಜಾ ವಿಚಾರ ಕುರಿತು ಪ್ರತಿಕ್ರಿಯಿಸಿ, ಇದು ಸತ್ಯಕ್ಕೆ ಸಂದ ಜಯ. ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನ‌ ಯಾರಾದರೂ ಪ್ರಶ್ನೆ ಮಾಡೋದಕ್ಕೆ ಸಾಧ್ಯನಾ ಸುಪ್ರೀಂ ಕೋರ್ಟ್ ಎಲ್ಲವನ್ನೂ ಅವಲೋಕಿಸಿ ತೀರ್ಪು ನೀಡಿದೆ, ಕಾನೂನಿನ ಮುಂದೆ ಎಲ್ಲರೂ ಒಂದೇ, ಈ ತೀರ್ಪುನ್ನ ನಾನು ಸ್ವಾಗತ ಮಾಡುತ್ತೇನೆ ಎಂದು ಶ್ರೀವತ್ಸ ತಿಳಿಸಿದರು.

ಧರ್ಮಸ್ಥಳದ ಬಗ್ಗೆ ಅಪಚಾರ ಮಾಡುವವರ ವಿರುದ್ಧ ನಿಲ್ಲುತ್ತೇವೆ- ಶ್ರೀವತ್ಸ Read More

ಕುಡಿಯುವ ನೀರಿನ ಸಮಸ್ಯೆ: ಅಧಿಕಾರಿಗಳೊಡನೆ ಚರ್ಚಿಸಿದ ಎಂ.ಆರ್.ಮಂಜುನಾಥ್

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಪಟ್ಟಣದ ಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.

ಶಾಸಕ ಎಂ.ಆರ್. ಮಂಜುನಾಥ್ ಅವರು ಹನೂರು ವಿಧಾನಸಭಾ ಕ್ಷೇತ್ರದಲ್ಲಿ ತಲೆ ದೂರಿರುವ ಕುಡಿಯುವ ನೀರಿನ ಜ್ವಲಂತ ಸಮಸ್ಯೆಗಳ ಕುರಿತು ಅಧಿಕಾರಿಗಳೊಡನೆ ಗಂಭೀರ ಚರ್ಚೆ ನಡೆಸಿದರು.

ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳು, ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ಪಡೆದರು.

ಈ ಸಂದರ್ಭದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸೂಪರಿಡೆಂಟ್ ಇಂಜಿನಿಯರ್ ವೀರಪ್ಪ, ಚಾ.ನಗರ ಇಇ ಜಗದೀಶ್, ಎಇಇ ಸುಧನ್ವ ನಾಗ್ ಅವರು ಮಾಹಿತಿ ನೀಡಿದರು.

ಕೊಳ್ಳೇಗಾಲ ಉಪವಿಭಾಗಾದ ಎಇಇ ಸುಧನ್ವ ನಾಗ್ ಮಾತನಾಡಿ ಹನೂರು ತಾಲ್ಲೂಕಿನ ರಾಮಾಪುರ, ಅಜ್ಜಿಪುರ, ಒಡಕೆಹಳ್ಳ,ದೊಮ್ಮನಗದ್ದೆ, ಬಂಡಳ್ಳಿ, ಎಂ.ಟಿ. ದೊಡ್ಡಿ ಕೆಂಪಯ್ಯನಹಟ್ಟಿ, ಗೊಲ್ಲರದಿಂಬ, ಸತ್ತಿಮಂಗಲ,ಪಳನಿಸ್ವಾಮಿ ದೊಡ್ಡಿ ಚಂಗವಾಡಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, ಸಮಸ್ಯೆ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ದೊಡ್ಡಾಲತ್ತೂರು, ಎಲ್ಲೇಮಾಳ, ದಿನ್ನಳ್ಳಿ, ಹೂಗ್ಯಂ, ಕೂಡ್ಲೂರು, ಕೌದಳ್ಳಿ, ಕುರಟ್ಟಿಹೊಸೂರು, ದಂಟ್ಟಳ್ಳಿ,
ಮಾರ್ಟಳ್ಳಿ ಪಾಲಿಮೇಡು, ದಾಂಡಮೇಡು,
ರಾಮಾಪುರ ಮಾಮರದ ದೊಡ್ಡಿ, ಗೋಪಿಶೆಟ್ಟಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪೈಪ್ ಲೈನ್ ಮಾಡಲು ಅರಣ್ಯ ಇಲಾಖೆಯಿಂದ ಕಾನೂನು ತೊಡಕಿದೆ. ದೊಡ್ಡಾಲತ್ತೂರು ಗ್ರಾ.ಪಂ ವ್ಯಾಪ್ತಿಯ ಕೆಂಪಯ್ಯನಹಟ್ಟಿ, ವಡ್ಡರದೊಡ್ಡಿ ಗ್ರಾಮಗಳಲ್ಲಿ ಖಾಸಗಿ ಬೋರ್ ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ, ಮಾರ್ಟಳ್ಳಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಹರ್ ಗರ್ ಜಲ್ ಯೋಜನೆ ಯಡಿ ಕೊಳ್ಳೇಗಾಲ ತಾಲ್ಲೂಕಿನ 64, ಹನೂರು ತಾಲ್ಲೂಕಿನ 260 ಒಟ್ಟು131 ಹಳ್ಳಿಗಳಲ್ಲಿ ಕಾಮಗಾರಿಗಳನ್ನು ನಡೆಸಿ ಗ್ರಾ. ಪಂ ಗಳಿಗೆ ಹಸ್ತಾಂತರಿಸಲಾಗಿದೆ ಎಂದು ವಿವರಿಸಿದರು.

ಸಭೆಯ ನಂತರ ಸುದ್ದಿಗಾರರೊಡನೆ ಮಾತನಾಡಿದ ಶಾಸಕ ಎಂ.ಆರ್. ಮಂಜುನಾಥ್ ಅವರು,ಸಭೆಯಲ್ಲಿ ಮುಖ್ಯವಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಕೊಡಲು ಏನು ತೊಡಕಿತ್ತು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಅವರಿಂದ ಮಾಹಿತಿ ಪಡೆದುಕೊಂಡು ಚರ್ಚಿಸಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಆಗದಂತೆ ನಿರ್ಧಾರ ಕೈಗೊಳ್ಳಲಾಯಿತು ಎಂದು ತಿಳಿಸಿದರು.

ಅರಣ್ಯ ಇಲಾಖೆಯಿಂದ ತೊಡಕಾಗಿರುವ ಬಗ್ಗೆ ಗೊತ್ತಾಗಿದೆ,ಅದಕ್ಕೆ 2023 ರಲ್ಲೇ ಕ್ಲಿಯರೆನ್ಸ್ ನೀಡಲಾಗಿತ್ತು. ಇಲಾಖೆ ಮತ್ತೆ ಮತ್ತೆ ಏನು ಪ್ರಶ್ನೆ ಮಾಡುತ್ತಾ ಬಂದಿದೆ ಅದನ್ನೆಲ್ಲ ಸರಿಪಡಿಸಿ ಕೊಂಡು ಬರಲಾಗಿದೆ ಆದರೂ  ಇದು ಹೀಗೆ ಹೋದರೆ ಬಹಳ ವಿಳಂಬವಾಗಲಿದೆ ಎಂದು ಬೇಸರಪಟ್ಟರು.

ಇದು ಕೇಂದ್ರ ಸರ್ಕಾರದ ಯೋಜನೆ, ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡರ ಸಮನ್ವಯತೆ ಬೇಕು ಆ ಕಾರಣಕ್ಕಾಗಿ ಈಗ ಎಲ್ಲಿ ಸಮಸ್ಯೆ ಇದೆ ಅದನ್ನು ಮತ್ತೆ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ತ್ವರಿತಗೊಳಿಸಿ ತಕ್ಷಣ ಕ್ಲೀಯರೆನ್ಸ್ ತೆಗೆದುಕೊಳ್ಳಲು ಏನು ಬೇಕು ಎಂಬ ಬಗ್ಗೆ ಇವತ್ತು ಸಭೆ ಕರೆಯಲಾಯಿತು
ಎಂದು‌ ಶಾಸಕರು ಹೇಳಿದರು.

ತ್ವರಿತವಾಗಿ ನಮಗೇನಾದರು ಕ್ಲೀಯರೆನ್ಸ್ ಆದರೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಓವರ್ ಹಡ್ ಟ್ಯಾಂಕ್ ಅರಣ್ಯದೊಳಗೆ ಪೈಪ್ ಲೈನ್ ಹಾಕುವುದು ಅಗತ್ಯ ವಾಗಿದ್ದು ಅದರ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಆದಷ್ಟು ಬೇಗ ಅದಕ್ಕೆ ಕ್ಲಿಯರೆನ್ಸ್ ಕೊಡಲು ತೀರ್ಮಾನ ಮಾಡಲಾಗಿದೆ. ಕೆಲಸ ಮಾಡಲು ಏನು ಬೇಕು ಎಂಬ ಬಗ್ಗೆ ನಂತರ ತೀರ್ಮಾನವಾಗಲಿದೆ. ಯೋಜನೆಗೆ ಅರಣ್ಯ ಇಲಾಖೆಯಿಂದ ಶೇಕಡ 60 ರಿಂದ 70 ರಷ್ಟು ಕ್ಲಿಯರೆನ್ಸ್ ಸಿಕ್ಕಿದೆ ಉಳಿದದ್ದನು ಕ್ಲಿಯರ್ ಮಾಡಬೇಕಿದೆ ಎಂದು ತಿಳಿಸಿದರು.

ಇದನ್ನು 6 ರಿಂದ 8 ತಿಂಗಳಲ್ಲಿ ಪೂರ್ಣಗೊಳಿಸ ಬೇಕೆಂಬ ಯೋಜನೆಯಿದೆ, ಸಭೆಯಲ್ಲಿ ನಡೆದ ಚರ್ಚೆ ಫಲಪ್ರದವಾಗಲಿದೆ.
ಸಮಸ್ಯೆ ಎಲ್ಲಿದೆ, ಅದನ್ನು ಬಗೆಹರಿಸುವುದು ಹೇಗೆ ಎಂಬ ಬಗ್ಗೆ ಚರ್ಚಿಸಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಶಾಸಕ ಮಂಜುನಾಥ್ ವಿವರಿಸಿದರು.

ಸಭೆಯಲ್ಲಿ ಚಾ.ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾರೋತ್, ಡಿಸಿಎಫ್ ಭಾಸ್ಕರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸೂಪರಿಡೆಂಟ್ ಇಂಜಿನಿಯರ್ ವೀರಪ್ಪ, ಚಾ.ನಗರ ಇಇ ಜಗದೀಶ್, ಎಇಇ ಸುಧನ್ವ ನಾಗ್, ಪಿ ಡಬ್ಲ್ಯೂ ಡಿ ಎಇಇ ಪುರುಷೋತ್ತಮ್, ಜೆಇ ಸುರೇಂದ್ರ, ಲ್ಯಾಂಡ್ ಆರ್ಮಿ ಇಂಜಿನಿಯರ್ ಕಾರ್ತಿಕ್, ಜೆಜೆಎಂ ಕಾಮಗಾರಿ ಗುತ್ತಿಗೆ ಪಡೆದಿರುವ ಸುಪ್ರದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪ್ರತೀಕ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಕುಡಿಯುವ ನೀರಿನ ಸಮಸ್ಯೆ: ಅಧಿಕಾರಿಗಳೊಡನೆ ಚರ್ಚಿಸಿದ ಎಂ.ಆರ್.ಮಂಜುನಾಥ್ Read More

ದೇವಾಲಯಗಳ ಜೀರ್ಣೋದ್ಧಾರ ಕಾಮಗಾರಿ ವೀಕ್ಷಿಸಿದ ಶಾಸಕ ಮಂಜುನಾಥ್

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಮುಕ್ತಾಯ ಹಂತದಲ್ಲಿರುವ ಶಿವನಸಮುದ್ರದ ಸುಪ್ರಸಿದ್ದ ಶ್ರೀ ಜಗನ್ಮೋಹನ ರಂಗನಾಥಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಯನ್ನು ಹನೂರು ಶಾಸಕ ಎಂ.ಆರ್. ಮಂಜುನಾಥ್‌ ವೀಕ್ಷಿಸಿದರು.

ದೇವಸ್ಥಾನದ ಪಾಕಶಾಲೆ, ದೇವಾಲಯದ ಸುತ್ತ ನೆಲಹಾಸು ಹಾಗೂ ವಿದ್ಯುತ್ ನವೀಕರಣ ಕಾಮಗಾರಿಗಳಿಗೆ ಅಂದಾಜು ಪಟ್ಟಿ ತಯಾರಿಸುವಂತೆ ಪುರಾತತ್ವ ಇಲಾಖೆಗೆ ತಾಕೀತು ಮಾಡಿದರಲ್ಲದೆ ದೇವಾಲಯದ ಸಂಪ್ರೋಕ್ಷಣೆಗೆ ದಿನಾಂಕ ನಿಗದಿ ಪಡಿಸಿ ಎಂದು ಅರ್ಚಕರಿಗೆ ಸೂಚಿಸಿದರು.

ಪ್ರವಾಸೋದ್ಯಮ ಇಲಾಖೆಯ ಅನುದಾನ 2.50 ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿರುವ ಜೀರ್ಣೋದ್ಧಾರ ಕಾಮಗಾರಿ ನಿರ್ವಹಣೆಯನ್ನು ಪುರತತ್ವ ಇಲಾಖೆ ವಹಿಸಿಕೊಂಡಿದೆ.

ದೇವಾಲಯದ ನವೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಕಾಮಗಾರಿಗೆ ಬಿಡುಗಡೆಯಾಗಿದ್ದ 2.50 ಕೋಟಿ ರೂ. ಅನುದಾನ ಬಳಕೆಯಾಗಿದ್ದು ಪಾಕಶಾಲೆ, ದೇವಾಲಯದ ಆವರಣದ ನೆಲಹಾಸು ಹಾಗೂ ವಿದ್ಯುತ್ ನವೀಕರಣ ಕಾಮಗಾರಿಗಳಷ್ಟೆ ಬಾಕಿ ಇರುವುದರ ಬಗ್ಗೆ ಕೊಳ್ಳೇಗಾಲ ಉಪವಿಭಾಗಾಕಾರಿ ಹಾಗೂ ಸಾಮೂಹಿಕ ದೇವಾಲಯಗಳ ಆಡಳಿತ ಅಧಿಕಾರಿಯೂ ಆಗಿರುವ ಬಿ.ಆರ್. ಮಹೇಶ್ ಅವರು ಶಾಸಕರಿಗೆ ವಿವರಣೆ ನೀಡಿದರು.

ಇನ್ನೇನು ಕಾಮಗಾರಿ ಮುಗಿಯುತ್ತಿದ್ದು ಆದಷ್ಟು ಬೇಗ ದೇವಾಲಯದ ಸಂಪ್ರೋಕ್ಷಣೆಗೆ ಸೂಕ್ತವಾದ ದಿನಾಂಕ ನಿಗದಿ ಪಡಿಸಿಕೊಳ್ಳಿ ಎಂದು ಅರ್ಚಕರಾದ ಶ್ರೀಧರ್ ಆಚಾರ್ ಅವರಿಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅರ್ಚಕರು ಕಾರ್ತಿಕ ಮಾಸ ಸೂಕ್ತವಾಗಿದೆ. ಹಾಗಾಗಿ ಕಾರ್ತಿಕ ಮಾಸದಲ್ಲೆ ಕಾರ್ಯಕ್ರಮ ನಡೆಸುವುದು ಒಳ್ಳೆಯದು ಎಂದು ಈ ವೇಳೆ ಶಾಸಕರಿಗೆ ಸಲಹೆ ನೀಡಿದರು.

ಭರದಿಂದ ಸಾಗುತ್ತಿರುವ ರಂಗನಾಯಕಿ ಅಮ್ಮನವರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ: ಜಗನ್ಮೋಹನ ರಂಗನಾಥ ಸ್ವಾಮಿ ದೇವಸ್ಥಾನದ ಮಗ್ಗುಲಲ್ಲಿರುವ ಸೌಮ್ಯಲಕ್ಷ್ಮಿ(ರಂಗನಾಯಕಿ) ಅಮ್ಮನವರ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಕೂಡಾ ಭರದಿಂದ ಸಾಗಿದೆ.

ಸುಮಾರು 1.25 ಕೋಟಿ ರೂ ವೆಚ್ಚದಲ್ಲಿ ದಾನಿಗಳಾದ ಆಂಧ್ರ ಪ್ರದೇಶದ ಉದ್ಯಮಿ, ಎ.ಎಂ.ಆರ್. ಗ್ರೂಪ್ ವ್ಯವಸ್ಥಾಪಕ ನಿರ್ದೇಶಕರಾದ ಶಿವಕುಮಾರ್ ರೆಡ್ಡಿ ಅವರು ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಯನ್ನು ಕೈಗೊಂಡಿದ್ದು ಕಾಮಗಾರಿ ಮುಕ್ತಾಯ ಹಂತ ತಲುಪಿದೆ. ಈ ಹಿನ್ನೆಲೆಯಲ್ಲಿ ಶಾಸಕ ಮಂಜುನಾಥ್ ಈ ಎರಡೂ ಕಾಮಗಾರಿಗಳನ್ನು ವೀಕ್ಷಿಸಿದರು.

ಈ ವೇಳೆ ಸಾಮೂಹಿಕ ದೇವಾಲಯಗಳ ಕಾರ್ಯನಿರ್ವಹಕ ಅಧಿಕಾರಿ ಸುರೇಶ್ ಅವರು ಶಾಸಕರಿಗೆ ದೇವಾಲಯದ ರೂಪುರೇಷೆಯ ಕುರಿತು ನೀಲನಕ್ಷೆ ತೋರಿಸಿ ವಿವರಣೆ ನೀಡಿದರು.

ಈ ಸಂದರ್ಭದಲ್ಲಿ ಅರ್ಚಕರುಗಳಾದ ಶ್ರೀಧರ್ ಆಚಾರ್ ಮುಖಂಡರುಗಳಾದ ಹನೂರು ಮಂಜೇಶ್, ವಿಜಯ್ ಕುಮಾರ್ ಮತ್ತಿತರರು ಹಾಜರಿದ್ದರು.

ದೇವಾಲಯಗಳ ಜೀರ್ಣೋದ್ಧಾರ ಕಾಮಗಾರಿ ವೀಕ್ಷಿಸಿದ ಶಾಸಕ ಮಂಜುನಾಥ್ Read More

ಸಮಾಜದ ಕಟ್ಟಕಡೆಯ ವ್ಯಕ್ತಿಯ ಮಕ್ಕಳ ಬದುಕು ಹಸನಾಗಬೇಕು-ಕೃಷ್ಣಮೂರ್ತಿ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಸಮಾಜದ ಕಟ್ಟಕಡೆಯ ವ್ಯಕ್ತಿಯ ಮಕ್ಕಳ ಬದುಕು ಹಸನಾಗಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಮನದಾಳದಿಂದ ನುಡಿದರು.

ನಗರಸಭೆ ನಗರೋತ್ಥಾನ 4 ನೇ ಹಂತದ ಯೋಜನೆಯಡಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು ಸರ್ಕಾರ ಅನೇಕ ಯೋಜನೆ ರೂಪಿಸಿದೆ, ಬಡಜನರ ಬದುಕು ಹಸನಾಗಿ ಉತ್ತಮ ಜೀವನ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಇಂದು ಹೊಲಿಗೆ ಯಂತ್ರ ನೀಡಲಾಗಿದೆ ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಿ ಎಂದು ಕರೆ ನೀಡಿದರು.

ಪ್ರತಿ ಹೊಲಿಗೆ ಯಂತ್ರಕ್ಕೆ 8000 ರೂ ನಂತೆ 235 ಫಲಾನುಭವಿಗಳಿಗೆ 20.60 ಲಕ್ಷ ರೂ ವೆಚ್ಚದಲ್ಲಿ ಹೊಲಿಗೆ ಯಂತ್ರಗಳನ್ನು ವಿತರಿಸಲಾಗಿದೆ, ಅದರಲ್ಲಿ ಮೀಸಲಾತಿವಾರು ಸೌಲಭ್ಯ ನೀಡಿದ್ದು ಪ.ಜಾತಿಯರಿಗೆ ಶೇ 15 ರಷ್ಟು, ಪ ಪಂಗಡದವರಿಗೆ ಶೇ.6.95 ಇತರರಿಗೆ ಶೇ.7.25 ಅನುಪಾತದಲ್ಲಿ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.

ಈ ಹಿಂದೆ ಅಧಿಕಾರಿಗಳು ಜನಪ್ರತಿನಿಧಿಗಳಿಂದ ಸಾಂಕೇತಿಕವಾಗಿ ಸೌಲಭ್ಯಗಳನ್ನು ವಿತರಿಸಿ ನಂತರ ತಮಗೆ ಬೇಕಾದವರಿಗೆ ಕೊಡುತ್ತಿದ್ದರು ಇದರಿಂದಾಗಿ ಅರ್ಹರಿಗೆ ಸಿಗದೆ ಮತ್ಯಾರಿಗೋ ಸಿಗುತ್ತಿತ್ತು. ಸೌಲಭ್ಯ ಪಡೆದ ಕೆಲವರು ಮಾರಾಟ ಮಾಡಿಕೊಳ್ಳುತ್ತಿದ್ದರು. ಈಗ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ನೀಡಲಾಗಿದೆ. ಆದ್ದರಿಂದ ಯಾರೂ ಮಾರಾಟ ಮಾಡಬೇಡಿ ಏಕೆಂದರೆ ನಾನು ಯಾವ ಸಂದರ್ಭದಲ್ಲಿ ಪಟ್ಟಿ ಹಿಡಿದು ನಿಮ್ಮ ಮನೆಗೆ ಪರಿಶೀಲನೆಗೆ ಬರುವೆನೋ ತಿಳಿಯದು ಎಂದು ಎಚ್ಚರಿಕೆ ನೀಡಿದರು.

ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಇಷ್ಟೊಂದು ಸೌಲಭ್ಯಗಳಿವೆ ಎಂದು ಇಲ್ಲಿನ ಯಾರಿಗೂ ತಿಳಿದಿರಲಿಲ್ಲ. ನಗರಸಭೆ ವತಿಯಿಂದ ಸಾಂಸ್ಕೃತಿಕ ಸಾಧನೆ ಮಾಡಿದವರಿಗೆ 1 ಲಕ್ಷ ರೂ, ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ 2.20 ಲಕ್ಷ ರೂ, ಶೌಚಾಲಯ ನಿರ್ಮಾಣ ಫಲಾನುಭವಿಗಳಿಗೆ 5 ಲಕ್ಷ ರೂ, ವಿವಿಧ ವಸತಿ ಯೋಜನೆ ಫಲಾನುಭವಿಗಳಿಗೆ 10 ಲಕ್ಷ ಪಕ್ಕಾ ಮನೆ ನಿರ್ಮಾಣಕ್ಕಾಗಿ 1.8 ಕೋಟಿ ರೂ, ಎಸ್ಸಿ/ಎಸ್ಟಿ ಫಲಾನುಭವಿಗಳಿಗೆ ನೀಡಲಾಗಿದೆ ಹಾಗೆಯೇ ಇತರ ಜನಾಂಗದ ಫಲಾನುಭವಿಗಳಿಗೆ 73.90 ಲಕ್ಷ ರೂಗಳನ್ನು ನೀಡಲಾಗಿದೆ ಎಂದು ಶಾಸಕ ಕೃಷ್ಣಮೂರ್ತಿ ವಿವರಿಸಿದರು‌

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್, ತಹಶೀಲ್ದಾರ್ ಬಸವರಾಜು, ಜಿಲ್ಲಾ ನಗರಾಭಿವೃದ್ಧಿ ಕೋಶ ಇಇ ಅಲ್ತಾಫ್, ನಗರಸಭಾಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ. ಪಿ. ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯರುಗಳಾದ ಮಂಜುನಾಥ್, ರಾಘವೇಂದ್ರ, ಕವಿತ ಭಾಗ್ಯ, ನಾಗಸುಂದ್ರಮ್ಮ,ಪೌರಾಯುಕ್ತ ರಮೇಶ್, ಎಇಇ ನಾಗೇಂದ್ರ, ಆರೋಗ್ಯಾಧಿಕಾರಿ ಚೇತನ್, ಪರಶಿವಯ್ಯ ಮತ್ತಿತರರು ಹಾಜರಿದ್ದರು.

ಸಮಾಜದ ಕಟ್ಟಕಡೆಯ ವ್ಯಕ್ತಿಯ ಮಕ್ಕಳ ಬದುಕು ಹಸನಾಗಬೇಕು-ಕೃಷ್ಣಮೂರ್ತಿ Read More

ಜಾಗೇರಿಯಲ್ಲಿ ಜನರ ಕುಂದು ಕೊರತೆ ಆಲಿಸಿದ ಶಾಸಕ ಎಂ.ಆರ್ ಮಂಜುನಾಥ್

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ತಾಲೂಕಿನ ಜಾಗೇರಿಯ ವಿವಿಧ ಗ್ರಾಮಗಳಿಗೆ ಬೇಟಿ ನೀಡಿದ ಶಾಸಕ ಎಂ.ಆರ್ ಮಂಜುನಾಥ್ ಅವರು ಗ್ರಾಮಗಳ ಜನರ ಕುಂದು ಕೊರತೆ ಆಲಿಸಿದರು.

ಇಲ್ಲಿನ ಪಾಸ್ಕಲ್ ನಗರದ ಅಲ್ಪಸಂಖ್ಯಾತ ಬೀದಿಯಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಈ ವೇಳೆ ಗ್ರಾಮಸ್ಥರು ಗ್ರಾಮದಲ್ಲಿ ಮನೆ ನಿರ್ಮಾಣ ಮಾಡಲು ಹಾಗೂ ಕಾಡಂಚಿನ ಪ್ರದೇಶದ ವ್ಯಾಪ್ತಿಯಲ್ಲಿ ಉಳುಮೆ ಮಾಡಲು ಅರಣ್ಯ ಇಲಾಖೆಯ ಅಧಿಕಾರಿಗೆ ಬಿಡುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಈಗಾಗಲೇ ಸರ್ವೆ ನಡೆಯುತ್ತಿದ್ದು ಇದು ಮುಗಿದ ನಂತರ ಸಂಪೂರ್ಣ ಮಾಹಿತಿ ಸಿಗಲಿದೆ, ತದನಂತರ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಂತರ ಶಾಸಕರು ಇಲ್ಲಿನ ಶಾಂತಿ ನಗರಕ್ಕೆ ಬೇಟಿ ನೀಡಿದಾಗ ಜನರು ಗ್ರಾಮದಲ್ಲಿ ಕುಡಿಯುವ ನೀರು,ರಸ್ತೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳ ಕೊರತೆಗಳಿದ್ದು ಕೂಡಲೇ ಬಗೆಹರಿಸುವಂತೆ ಶಾಸಕರಲ್ಲಿ ಮನವಿ ನೀಡಿದರು.

ಶಾಂತಿ ನಗರದ ಜನತೆ ಹೆಚ್ಚಾಗಿ ಹೈನುಗಾರಿಕೆಯಲ್ಲಿ ತೊಡಗಿದ್ದು, ಮುಖ್ಯವಾಗಿ ಪಶುವೈದ್ಯ ಆಸ್ಪತ್ರೆ,ಅಂಗನವಾಡಿ, ವಿದ್ಯುತ್, ಕುಡಿಯುವ ನೀರಿನ ತೊಂಬೆ ನಿರ್ಮಾಣ ಹಾಗೂ ಶಾಲಾ ಕಾಂಪೌಂಡ್ ನಿರ್ಮಾಣ ಮಾಡಲು ಮನವಿ ಮಾಡಿದರು.

ಜನರ ಕುಂದು ಕೊರತೆ ಆಲಿಸಿ ಮಾತನಾಡಿದ ಶಾಸಕ ಎಂ.ಆರ್ ಮಂಜುನಾಥ್ ಅವರು, ಜಾಗೇರಿಯ ರೈತರಿಗೆ ಯಾವುದೇ ರೀತಿಯಲ್ಲೂ ತೊಂದರೆ ಯಾಗಲು ಬಿಡುವುದಿಲ್ಲ, ಇಲ್ಲೇ ವಾಸವಾಗಿದ್ದರು ಅವರಿಗೆ ಆಸ್ತಿ ಹಾಗೂ ಮನೆಗಳನ್ನು ಕಟ್ಟಲು ಅವಕಾಶ ನೀಡದ, ಕಾಡಂಚಿನ ಪ್ರದೇಶದ ಭಾಗದಲ್ಲಿ ಒತ್ತುವರಿ ತೆರವು ಹೆಸರಿನಲ್ಲಿ ತೊಂದರೆ ಕೂಡುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮವಹಿಸಲಾಗವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸತ್ತೇಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಲ್ಲೇಶ್, ಫಾದರ್ ನೆಹರು ಮುತ್ತು, ಡಿ ಆರ್ ಹಾರ್ಡವೇರ್ ಸೀನಪ್ಪ, ಸಿಂಗಾನಲ್ಲೂರು ರಾಜಣ್ಣ, ಪ್ರಭುಸ್ವಾಮಿ, ವಿಜಯ್ ಕುಮಾರ್, ಪನ್ನಾಡಿ, ತಂಗವೇಲು ಮತ್ತಿತರರು ಹಾಜರಿದ್ದರು.

ಜಾಗೇರಿಯಲ್ಲಿ ಜನರ ಕುಂದು ಕೊರತೆ ಆಲಿಸಿದ ಶಾಸಕ ಎಂ.ಆರ್ ಮಂಜುನಾಥ್ Read More

ಅಭಿವೃದ್ಧಿ ಕಾಮಗಾರಿಗಳಿಗೆ ಮಂಜುನಾಥ್ ಗುದ್ದಲಿ ಪೂಜೆ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೂದು ನೀರು ನಿರ್ವಹಣೆ ಹಾಗೂ ಇನ್ನಿತರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹನೂರು ಶಾಸಕ ಎಂ.ಆರ್. ಮಂಜುನಾಥ್ ಗುದ್ದಲಿ ಪೂಜೆ ನೆರವೇರಿಸಿದರು.

ನರೇಗಾ ಯೋಜನೆ ಹಾಗೂ ಪಿ.ಆರ್.ಇ.ಡಿ ಇಲಾಖೆಯ ಸುಮಾರು 2.50 ಕೋಟಿ ರೂ. ವಿಶೇಷ ಅನುದಾನದಲ್ಲಿ ಕೈಗೊಳ್ಳುವ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.

ಮಧುವನಹಳ್ಳಿ ಗ್ರಾಮದ ಉಪ್ಪಾರರ ಎರಡು ಬಡಾವಣೆಗಳಲ್ಲಿ ಪಿ.ಆರ್.ಇ.ಡಿ ಇಲಾಖೆಯ ವಿಶೇಷ ಅನುದಾನದಡಿ 70 ಲಕ್ಷ ರೂ ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ, ಹಾಗೂ ನರೇಗಾ ಯೋಜನೆಯಡಿ 9,21 ಲಕ್ಷ ರೂ ಸೇರಿದಂತೆ 2.8 ಕೋಟಿ ರೂ. ವೆಚ್ಚದಲ್ಲಿ ಬೂದು ನೀರು ನಿರ್ವಹಣೆ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಹಾಗೆಯೇ ದೊಡ್ಡಿಂದುವಾಡಿ ಗ್ರಾಮದಲ್ಲಿ 5.ಲಕ್ಷ ರೂ ವೆಚ್ಚದಲ್ಲಿ ಬೂದು ನೀರು ನಿರ್ವಹಣೆ, ಸಿಂಗನಲ್ಲೂರು ಗ್ರಾಮದಲ್ಲಿ 26 ಲಕ್ಷ ರೂ ವೆಚ್ಚದಲ್ಲಿ ಬೂದು ನೀರು ನಿರ್ವಹಣೆ, ಸತ್ತೇಗಾಲ ಗ್ರಾಮದಲ್ಲಿ 10 ಲಕ್ಷ ರೂ ವೆಚ್ಚದಲ್ಲಿ ಬೂದು ನೀರು ನಿರ್ವಹಣೆ, ಕಾಮಗಾರಿಗಳಿಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ತಾಲೂಕಿನ ಮದವನಹಳ್ಳಿ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ 14 ಲಕ್ಷ ವೆಚ್ಚದ ಶೌಚಾಲಯ ನಿರ್ಮಾಣ ಕಾಮಗಾರಿಗೂ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಾಸಕರು, ಬೂದು ನೀರು ನಿರ್ವಹಣೆ ಯೋಜನೆಯು ರಾಜ್ಯ ಸರಕಾರದ ಮಹತ್ವಕಾoಕ್ಷೆ ಯೋಜನೆಯಾಗಿದ್ದು ಹಿಂದೆ ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ಹಾಗೂ ನಗರಪಾಲಿಕೆಗಳಲ್ಲಿ ಈ ಯೋಜನೆಯನ್ನು ಕಾಣುತ್ತಿದ್ದೆವು. ಈಗ ಸರ್ಕಾರ ಗ್ರಾ. ಪಂ ಮಟ್ಟದಲ್ಲೂ ಈ ಯೋಜನೆ ಕೈ ಗೊಂಡಿದೆ ಎಂದು ತಿಳಿಸಿದರು.

ನೈರ್ಮಲ್ಯ ತಡೆಗಟ್ಟುವುದು ಇದರ ಮೂಲ ಉದ್ದೇಶ, ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಲು ಸಹಕಾರಿಯಾಗಲಿದೆ. ಹಲವಾರು ಕೋಟಿ ರೂ. ವೆಚ್ಚದಲ್ಲಿ ಈ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ, ಗ್ರಾಮದ ಮನೆ ಮನೆಯಿಂದ ಹೊರಹೊಮ್ಮುವ ನೀರು ಒಂದೆಡೆ ನಿಂತು ಬೂದು ಬಣ್ಣಕ್ಕೆ ತಿರುಗುತ್ತದೆ. ಈ ಎಲ್ಲಾ ನಿರುಪಯುಕ್ತ ನೀರನ್ನು ಒಂದು ಸೋಪ್ ಫಿಟ್ ಮಾಡಿ ಅಲ್ಲಿ ಒಂದೆಡೆ ಶೇಖರಣೆ ಮಾಡಿ ಅಲ್ಲಿ ತಿಳಿಯಾದ ನೀರನ್ನು ಮುಂದೆ ಹೋಗಿ ವೆಟ್ ಲ್ಯಾಂಡ್ ನಿರ್ಮಾಣ ಮಾಡಲಾಗುತ್ತದೆ. ಅಲ್ಲಿ ಶುದ್ಧವಾದ ನೀರನ್ನು ಕೃಷಿ ಚಟುವಟಿಕೆಗಳಿಗೆ ಮರುಬಳಕೆ ಮಾಡಲಾಗುವುದು ಹಾಗೂ ಉಳಿದ ನೀರು ಹಳ್ಳ ಸೇರುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ವಿವರಿಸಿದರು.

ಗುತ್ತಿಗೆದಾರರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸದಸ್ಯರು, ಗ್ರಾಮಸ್ಥರು ಹೇಳುವ ಸಮಸ್ಯೆ ಶೀಘ್ರದಲ್ಲಿ ಬಗಹರಿಸಿ ಒಂದು ವಾರದ ಒಳಗಡೆ ಕಾಮಗಾರಿಯನ್ನು ಪ್ರಾರಂಭಿಸಿ ಮೂರು ತಿಂಗಳ ಒಳಗೆ ಮುಕ್ತಾಯಗೊಳಿಸಿ. ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ ಸಾರ್ವಜನಿಕರ ಸಹಕಾರದ ಜೊತೆ ಕೆಲಸ ಮಾಡಿ .ಗ್ರಾಮಸ್ಥರು ನಿಂತು ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಿ ಎಂದು ಮಂಜುನಾಥ್ ಸಲಹೆ ನೀಡಿದರು.

ಇದೇ ವೇಳೆ ಶಾಸಕ ಮಂಜುನಾಥ್ ಅವರಿಗೆ ಭಾರೀ ಗಾತ್ರದ ಗುಲಾಬಿ ಹಾರ ಹಾಕಿ‌ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಜಿಪಂ ತಾಂತ್ರಿಕ ಉಪ ವಿಭಾಗದ ಎ.ಇ.ಇ ಶಿವಪ್ರಸಾದ್ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎ.ಇ.ಇ ಸುಧನ್ವ ನಾಗ್, ನರೇಗಾ ಎ.ಡಿ ಗೋಪಾಲಕೃಷ್ಣ, ಮದುವನಹಳ್ಳಿ ಗ್ರಾಪಂ ಅಧ್ಯಕ್ಷ ಸಿದ್ದಪ್ಪ ಸತ್ತೇಗಾಲ ಗ್ರಾ. ಪಂ. ಅಧ್ಯಕ್ಷ ಮಲ್ಲೇಶ್ ಸಿಂಗನಲ್ಲೂರುಗ್ರಾ. ಪಂ. ಅಧ್ಯಕ್ಷೆ ಗಂಗಮ್ಮ, ಸದಸ್ಯ ಚಿನ್ನಮತ್ತು, ಮುಖಂಡರುಗಳಾದ ಸಿಂಗನಲ್ಲೂರು ರಾಜಣ್ಣ, ಮಂಜೇಶ್, ಕಣ್ಣೂರು ಮಹಾದೇವ, ಹೆಚ್ ಆರ್ ಮಹಾದೇವ, ಪಾಳ್ಯ ಗೋಪಾಲ್ ನಾಯ್ಕ, ಶಿವಮೂರ್ತಿ, ಜೋಗಪ್ಪ, ಪ್ರಭುಸ್ವಾಮಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಜುನೈದ್ ಅಹ್ಮದ್, ಶೋಭರಾಣಿ, ಕಮಲ್ ರಾಜ್, ಮರಿಸ್ವಾಮಿ, ಶಿವಕುಮಾರ್, ಮಹೇಂದ್ರ ಹಾಗೂ ವಿವಿಧ ಗ್ರಾ. ಪಂ ಅಧ್ಯಕ್ಷರು, ಸದಸ್ಯರು ಹಾಗೂ ಜೆಡಿಎಸ್, ಬಿಜೆಪಿ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.

ಅಭಿವೃದ್ಧಿ ಕಾಮಗಾರಿಗಳಿಗೆ ಮಂಜುನಾಥ್ ಗುದ್ದಲಿ ಪೂಜೆ Read More

ನಿಗಧಿತ ಜಾಗದಲ್ಲಿ ಹೆಸರು ಮುದ್ರಿಸದೆಕೆಳಗಿನ ಸಾಲಿನಲ್ಲಿ ಮುದ್ರಣ:ಆಹ್ವಾನ ಪತ್ರಿಕೆ ತಿರಸ್ಕರಿಸಿದ ಶಾಸಕ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ,ಏ.7: ಮಠದ ಜೀರ್ಣೋದ್ಧಾರ ಹಾಗೂ ಶತಮಾನೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಶಾಸಕರ ಹೆಸರನ್ನು ನಿಗಧಿತ ಜಾಗದಲ್ಲಿ ಮುದ್ರಿಸದೆ
ಕೆಳಗಿನ ಸಾಲಿನಲ್ಲಿ ಮುದ್ರಿಸಿರುವುದಕ್ಕೆ ಶಾಸಕರು ತೀವ್ರ ಬೇಸರ ವ್ಯಕ್ತಪಡಿಸಿ ಆಹ್ವಾನ ಪತ್ರಿಕೆಯನ್ನೇ ತಿರಸ್ಕರಿಸಿದ ಪ್ರಸಂಗ ನಡೆದಿದೆ.

ಹನೂರು ತಾಲ್ಲೂಕಿನ ಪಿ.ಜಿ. ಪಾಳ್ಯ ಗ್ರಾಮದ ಶ್ರೀ ಗುರುಮಲ್ಲೇಶ್ವರ ಭಿಕ್ಷದ ದಾಸೋಹ ಹಳೇ ಮಠದ ಜೀರ್ಣೋದ್ಧಾರ ಹಾಗೂ ಶತಮಾನೋತ್ಸವ ಕಾರ್ಯಕ್ರಮ ಇದೇ ಏ. 17 ಹಾಗೂ 18 ರಂದು ನಡೆಯಲಿದೆ.

ಶಿಷ್ಟಾಚಾರದ ಪ್ರಕಾರ ಹನೂರು ಶಾಸಕ ಎಂ.ಆರ್. ಮಂಜುನಾಥ್‍ ಅವರ ಹೆಸರನ್ನು ನಿಗಧಿತ ಸ್ಥಳದಲ್ಲಿ ಮುದ್ರಿಸದೆ ಕೆಳಗಿನ ಸಾಲಿನಲ್ಲಿ ಮುದ್ರಿಸಿ ರುವುದಕ್ಕೆ ಶಾಸಕರು ತೀವ್ರ ಬೇಸರ ವ್ಯಕ್ತಪಡಿಸಿ ಆಹ್ವಾನ ಪತ್ರಿಕೆಯನ್ನು ತಿರಸ್ಕರಿಸಿದರು.

ತಾಲ್ಲೂಕಿನ ಸತ್ತೇಗಾಲ ಗ್ರಾಮದಲ್ಲಿ ಶಾಸಕ ಎಂ.ಆರ್. ಮಂಜುನಾಥ್‍ ಅವರು ರೈತರ ಸಭೆ ನಡೆಸುತ್ತಿದ್ದರು.ಈ ಬಗ್ಗೆ ಮಾಹಿತಿ ಅರಿತು ಪಿಜಿ ಪಾಳ್ಯ ಗ್ರಾಮದ ಮುಖಂಡರು ಶಾಸಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಬಂದಿದ್ದರು.

ಶಾಸಕರನ್ನು ಭೇಟಿ ಮಾಡಿ ಆಹ್ವಾನ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಬರುವಂತೆ ಕೋರಿದರು, ಈ ವೇಳೆ ಶಾಸಕ ಮಂಜುನಾಥ್ ಆಹ್ವಾನ ಪತ್ರಿಕೆಯನ್ನು ತೆರೆದು ನೋಡಿ ತೀವ್ರ ಬೇಸರಪಟ್ಟರು.

ಏ.18ರಂದು ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯ ಸುತ್ತೂರು ಮಠದ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳು, ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಹಣಾ ಸ್ವಾಮಿಗಳು, ಕುದುರು ಮಠದ ಶ್ರೀ ಗುರು ಶಾಂತ ಸ್ವಾಮಿಗಳು, ಶ್ರೀರಂಗಪಟ್ಟಣದ ಬೇಬಿ ಮಠದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿಗಳು, ಸಾಲೂರು ಬೃಹನ್ ಮಠದ ಡಾ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು, ಗುಂಡ್ಲುಪೇಟೆ ಚಿಕ್ಕತುಪ್ಪೂರು ಶಿವಪೂಜಾ ಮಠದ ಶ್ರೀ ಚೆನ್ನವೀರ ಸ್ವಾಮಿಗಳು ಸೇರಿದಂತೆ ಹರಗುರು ಚಿರಮೂರ್ತಿಗಳು ಭಾಗವಹಿಸಲಿದ್ದಾರೆ.

ಮುಖ್ಯ ಅತಿಥಿಗಳ ಪಟ್ಟಿಯ ಮೊದಲನೇ ಸಾಲಿನಲ್ಲಿ ಅಖಿಲ ಭಾರ ವೀರಶೈವ ಲಿಂಗಾಯಿತ ಮಹಾಸಭಾ ರಾಜ್ಯಧ್ಯಕ್ಷರಾದ ಶ್ರೀ ಶಂಕರ ಮಹದೇವ ಬಿದರಿ, ಗುಂಡ್ಲುಪೇಟೆ ಶಾಸಕರಾದ ಶ್ರೀ ಗಣೇಶ್ ಪ್ರಸಾದ್ ಅವರ ಹೆಸರನ್ನು ಮುದ್ರಿಸಲಾಗಿದೆ. ನಂತರ ಹನೂರು ಕ್ಷೇತ್ರದ ಬಿಜೆಪಿ ಮುಖಂಡ ಶ್ರೀ ನಿಶಾಂತ್ ಅವರು ತದನಂತರ ಕ್ಷೇತ್ರದ ಹಾಲಿ ಶಾಸಕ ಎಂ.ಆರ್. ಮಂಜುನಾಥ್ ಅವರ ಹೆಸರು ಉಳಿದಂತೆ ಮಾಜಿ ಶಾಸಕರುಗಳು ಮುಖಂಡರುಗಳ ಹೆಸರುಗಳನ್ನು ಮುದ್ರಿಸಲಾಗಿದೆ.

ಇದರಿಂದ ಅಸಮಾಧಾನಗೊಂಡ ಶಾಸಕರು ಯಾರು ಎಷ್ಟೇ ದೇಣಿಗೆ ನೀಡಿದರು ನಾನು ನಿಮ್ಮ ಕ್ಷೇತ್ರದ ಶಾಸಕ. ಅವರು ಕೋಟಿ ರೂ ದೇಣಿಗೆ ನೀಡಿದ್ದಾರೆ ಎಂಬ ಉದ್ದೇಶಕ್ಕೆ ಉದ್ದೇಶಪೂರ್ವಕವಾಗಿ ಮೇಲಿನ ಸಾಲಿನಲ್ಲಿ ಅವರ ಹೆಸರನ್ನು ಮುದ್ರಿಸಲಾಗಿದೆ ಎಂಬುದು ನನಗೆ ಮಾಹಿತಿ ಇದೆ. ಶಿಷ್ಟಾಚಾರದ ಪ್ರಕಾರ ಕ್ಷೇತ್ರದ ಶಾಸಕರನ್ನು ಈ ರೀತಿ ಅವಮಾನಿಸುವುದು ಸರಿಯಲ್ಲ ನಿಮ್ಮ ಶಾಸಕರನ್ನು ನೀವೇ ಅವಮಾನಿಸಿಕೊಂಡಂತೆ ನೀವು ನನಗೆ ಮತ ಹಾಕಿ ಅಥವಾ ಹಾಕದಿರಿ ನೀವು ನನ್ನ ಮತದಾರರು, ನಾನು ನಿಮ್ಮ ಶಾಸಕ, ನಿಮ್ಮ ಶಾಸಕರನ್ನು ನೀವೇ ಅವಮಾನಿಸಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳುವುದಿಲ್ಲ, ಬರುತ್ತೇನೆ ಆದರೆ ಆಹ್ವಾನ ಪತ್ರಿಕೆಯನ್ನು ಸರಿಪಡಿಸಿ ಇಲ್ಲದಿದ್ದರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಇವರ ಬೇಸರ ವ್ಯಕ್ತಪಡಿಸಿ ಆಹ್ವಾನ ಪತ್ರಿಕೆಯನ್ನು ಹಿಂದಿರುಗಿಸಿದರು.

ಈ ವೇಳೆ ಆಹ್ವಾನಿಸಲು ಬಂದಿದ್ದ ಮುಖಂಡರು ಮರು ಮಾತನಾಡದೆ ಆಹ್ವಾನ ಪತ್ರಿಕೆಯನ್ನು ವಾಪಸ್ ಪಡೆದು ಅಲ್ಲಿಂದ ಹಿಂತಿರುಗಿದರು.

ಇದೇ ವೇಳೆ ಗ್ರಾಮಸ್ಥರು ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯ ಗುಂಡಿಗಳನ್ನು ಮುಚ್ಚಿಸುವಂತೆ ಮನವಿ ಮಾಡಿದರು ಇದಕ್ಕೆ ಸ್ಪಂದಿಸಿದ ಶಾಸಕರು ನಿಮ್ಮ ಕೆಲಸ ಏನೇ ಇದ್ದರೂ ಸಂತೋಷವಾಗಿ ಮಾಡುತ್ತೇವೆ ಎಂದು ಸ್ಥಳದಲ್ಲೇ ಇದ್ದ ಲೋಕೋಪಯೋಗಿ ಇಲಾಖೆ ಜೆ ಇ ಸುರೇಂದ್ರರವರನ್ನು ಕರೆದು ಕೂಡಲೇ ರಸ್ತೆಯ ಗುಂಡಿಗಳನ್ನು ಮುಚ್ಚಿಸುವಂತೆ ತಾಕೀತು ಮಾಡಿದರು.

ನಿಗಧಿತ ಜಾಗದಲ್ಲಿ ಹೆಸರು ಮುದ್ರಿಸದೆಕೆಳಗಿನ ಸಾಲಿನಲ್ಲಿ ಮುದ್ರಣ:ಆಹ್ವಾನ ಪತ್ರಿಕೆ ತಿರಸ್ಕರಿಸಿದ ಶಾಸಕ Read More