ಮಾಹಿತಿ ಹಕ್ಕಿನಡಿ ಕೇಳುವ ಅರ್ಜಿ ನಿರ್ಲಕ್ಷ್ಯ ಸಲ್ಲದು-ಮಾಹಿತಿ ಆಯುಕ್ತರು

ಚಾಮರಾಜನಗರ: ಉನ್ನತ ಅಧಿಕಾರಸ್ಥರಿಂದ ಹಿಡಿದು ಗ್ರಾಮ ಪಂಚಾಯಿತಿ ವರೆಗಿನ ಎಲ್ಲ ಸಾರ್ವಜನಿಕ ಪ್ರಾಧಿಕಾರಗಳು ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಬರಲಿವೆ. ಹೀಗಾಗಿ ಮಾಹಿತಿ ಹಕ್ಕಿನಡಿ ಕೇಳಲಾಗುವ ಯಾವುದೇ ಅರ್ಜಿಯನ್ನು ನಿರ್ಲಕ್ಷ್ಯ ಮಾಡದೆ ಕಾಲಮಿತಿಯೊಳಗೆ ವಿಲೇವಾರಿ ಮಾಡುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ ಎಂದು ಮಾಹಿತಿ ಆಯುಕ್ತರಾದ ಡಾ. ಹರೀಶ್ ಕುಮಾರ್ ಹಾಗೂ ಕೆ. ಬದ್ರುದ್ದೀನ್ ಅವರು ತಿಳಿಸಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ಮಾಹಿತಿ ಹಕ್ಕು ಕಾಯ್ದೆ ಕುರಿತ ಕಾರ್ಯಾಗಾರ ಹಾಗೂ ಸಂವಾದವನ್ನುದ್ದೇಶಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ತನ್ನದೇ ಆದ ಕರ್ತವ್ಯಗಳನ್ನು ನಿರ್ವಹಿಸಲಿದೆ. ಕಾರ್ಯಕ್ರಮಗಳು, ಯೋಜನೆಗಳನ್ನು ಪರಿಣಾಮಕಾರಿಯಾಗಿ ತಲುಪಿಸುವ ಶಾಶ್ವತ ಕಾರ್ಯಾಂಗವೆಂದರೆ ನೌಕರ ಶಾಹಿಗಳು. ಅಧಿಕಾರಿ, ನೌಕರರಿಗೆ ಗುರುತರ ಜವಾಬ್ದಾರಿ ಇರುತ್ತದೆ, ಜನರು ಮಾಹಿತಿ ಹಕ್ಕಿನಡಿ ಕೇಳುವ ಮಾಹಿತಿಯನ್ನು ಉದಾಸೀನ ಮಾಡದೇ ನೀಡಬೇಕು ಎಂದು ಸೂಚಿಸಿದರು.

ಆಡಳಿತದಲ್ಲಿ ಪಾರದರ್ಶಕತೆ, ಉತ್ತರದಾಯಿತ್ವ ಉದ್ದೇಶದೊಂದಿಗೆ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಿದೆ. ವ್ಯವಸ್ಥೆಯ ಲೋಪದೋಷಗಳನ್ನು ಕೇಳುವ ಹಕ್ಕು ಪ್ರಜೆಗಳಿಗಿದೆ. ಸ್ವಾತಂತ್ರ್ಯದ ಹಕ್ಕಿನಷ್ಟೇ ಮಹತ್ವ ಮಾಹಿತಿ ಹಕ್ಕಿಗೂ ಇದೆ. ನೀತಿ ನಿರೂಪಣೆ ಅನುಷ್ಠಾನ ಮಾಡುವ ಅಧಿಕಾರಿಗಳು ಅತ್ಯಂತ ಜವಾಬ್ದಾರಿಯುತವಾಗಿ ಮಾಹಿತಿ ಹಕ್ಕಿನ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ತಿಳಿಸಿದರು.

ಮಾಹಿತಿ ಹಕ್ಕಿನಡಿ ಸಲ್ಲಿಕೆಯಾಗುವ ಅರ್ಜಿಗಳ ಬಗ್ಗೆ ಅನಗತ್ಯ ಆತಂಕ ಬೇಡ. ಕಾಯ್ದೆ ಬಗ್ಗೆ ಅಧಿಕಾರಿಗಳು ಸ್ಪಷ್ಟವಾಗಿ ತಿಳಿದುಕೊಂಡರೆ ಅರ್ಜಿಯಲ್ಲಿ ಕೋರುವ ಮಾಹಿತಿಯನ್ನು ಸಮರ್ಪಕವಾಗಿ ನೀಡಬಹುದು. ಮಾಹಿತಿ ಹಕ್ಕು ಅಧಿನಿಯಮದ ಅಧ್ಯಾಯಗಳು, ಕಲಂಗಳನ್ನು ಓದಿ ಮನನ ಮಾಡಿಕೊಂಡಿರಬೇಕು. ಮಾಹಿತಿ ಆಯೋಗ, ನ್ಯಾಯಾಲಯಗಳು ನೀಡಿರುವ ಆದೇಶ ತೀರ್ಪುಗಳ ಬಗ್ಗೆ ತಿಳಿದುಕೊಂಡಿರಬೇಕು. ಇದರಿಂದ ಮಾಹಿತಿ ದಾಖಲೆಗಳನ್ನು ನೀಡುವಲ್ಲಿ ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.

ಜನರ ಕೆಲಸಗಳು ಮುಕ್ತ ಹಾಗೂ ತ್ವರಿತವಾಗಿ ಆಗಲೆಂದು ಸಕಾಲ, ಮಾಹಿತಿ ಹಕ್ಕು ಕಾಯ್ದೆ, ಲೋಕಾಯುಕ್ತದಂತಹ ವ್ಯವಸ್ಥೆಗಳು ಸಕ್ರಿಯವಾಗಿವೆ. ಜನರ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳು ಉತ್ಸಾಹದಿಂದ ಮುಂದಾಗಬೇಕು. ಕಾನೂನಿನ ವ್ಯಾಪ್ತಿಯಲ್ಲಿ ಬಗೆಹರಿಸಬಹುದಾದ ಸಾರ್ವಜನಿಕರ ದೂರುಗಳಿಗೆ ಆದ್ಯತೆ ಕೊಡಬೇಕು. ಕಡತಗಳ ನಿರ್ವಹಣೆ ಸಮರ್ಪಕವಾಗಿ ಇರಬೇಕು. ವಿಳಂಬ ಧೋರಣೆ ತೋರಬಾರದು ಎಂದು ಮಾಹಿತಿ ಆಯುಕ್ತರಾದ ಡಾ. ಹರೀಶ್ ಕುಮಾರ್ ಹಾಗೂ ಕೆ. ಬದ್ರುದ್ದೀನ್ ಅವರು ಹೇಳಿದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಮಾತನಾಡಿ ಮಾಹಿತಿ ಹಕ್ಕು ಕಾಯ್ದೆಯಡಿ ಕೋರಲಾಗುವ ಅರ್ಜಿಗಳಿಗೆ ಸಕಾಲದಲ್ಲಿ ಅಧಿಕಾರಿಗಳು ದಾಖಲೆ, ಮಾಹಿತಿಯನ್ನ ನೀಡಬೇಕು. ಮಾಹಿತಿ ಹಕ್ಕು ಕಾರ್ಯಾಗಾರಗಳಲ್ಲಿ ಸಲಹೆ ಮಾರ್ಗದರ್ಶನ ಪಡೆದು ಅರ್ಜಿ ವಿಲೇವಾರಿಯಲ್ಲಿ ಸಮರ್ಪಕ ಕ್ರಮಗಳಿಗೆ ಮುಂದಾಗಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಮಾಹಿತಿ ಹಕ್ಕಿನಡಿ ಕೇಳುವ ಅರ್ಜಿ ನಿರ್ಲಕ್ಷ್ಯ ಸಲ್ಲದು-ಮಾಹಿತಿ ಆಯುಕ್ತರು Read More

ರೈತರ ಬೇಡಿಕೆ ಈಡೇರಿಸಿದ ಸರಕಾರ:ಪ್ರತಿ ಟನ್ ಕಬ್ಬಿಗೆ 3300 ರೂ ದರ ನಿಗದಿ

ಬೆಂಗಳೂರು: ಪ್ರತಿ ಟನ್ ಕಬ್ಬಿಗೆ 3500 ರೂ ದರ ನಿಗದಿ ಮಾಡುವಂತೆ ಅಹೋರಾತ್ರಿ ಹೋರಾಟ ನಡೆಸುತ್ತಿದ್ದ ಕಬ್ಬುಬೆಳೆಗಾರರಿಗೆ ಸರ್ಕಾರ ಸ್ವಲ್ಪಮಟ್ಟಿಗೆ‌ ಸಿಹಿ ಕೊಟ್ಟಿದೆ.

ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ನಡೆಸುತ್ತಿರುವ ರೈತರ ಹೋರಾಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿದ್ದು, 3300 ರೂ ದರ ನಿಗದಿ ಮಾಡಿದೆ.

ಶುಕ್ರವಾರ ಬೆಂಗಳೂರಿನಲ್ಲಿ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲೀಕರ ಜೊತೆಗೆ ಸಿಎಂ ನಡೆಸಿದ ಸಭೆಯಲ್ಲಿ ರೈತರ ಪ್ರತಿಭಟನೆ ಬಗ್ಗೆ, ಎಫ್‌ಆರ್ ಸಿ ಬಗ್ಗೆ ಚರ್ಚಿಸಿದರು.

ನಂತರ ರೈತರ ಬೇಡಿಕೆಯಲ್ಲಿ 3500 ರೂ ಬದಲಿಗೆ‌ 3300 ರೂ ದರ ನಿಗದಿ ಮಾಡಿ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ.ಬಹಳಷ್ಟು ರೈತರು ಖುಷಿಯಿಂದ ಇದನ್ನು ಸ್ವಾಗತಿಸಿದ್ದಾರೆ.ಕೆಲವರು ನಾಳೆ ಸಭೆ ನಡೆಸಿ ತೀರ್ಮಾನಿಸುವುದಾಗಿ ತಿಳಿಸಿದ್ದಾರೆ.

ಕಬ್ಬು ಬೆಳೆಗಾರರು ಪ್ರತಿ ಟನ್ ಕಬ್ಬಿಗೆ 3500 ರೂಪಾಯಿ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಸುತ್ತಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಬೆಳಗಾವಿಯಲ್ಲಿ ನಡೆಯುತ್ತಿದ್ದ ರೈತರ ಹೋರಾಟ ಹಿಂಸಾಚಾರಕ್ಕೆ ತಿರುಗಿತ್ತು. ಈ ಬೆಳವಣಿಗೆ ಬೆನ್ನಲ್ಲೇಯಲ್ಲಿ ಎಚ್ಚೆತ್ತ ಸರಕಾರ ಕಬ್ಬು ಬೆಳೆಗಾರರ ಹೋರಾಟಕ್ಕೆ ಮಣಿದಿದೆ.

ಸದ್ಯಕ್ಕೆ ಕಬ್ಬು ಬೆಳೆಗಾರರ ಹೋರಾಟ ಅಂತ್ಯವಾಗಿದೆ, ಬೆಳಗಾವಿ ಅಷ್ಟೇ ಅಲ್ಲದೇ ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ರಾಯಚೂರು, ಕಲಬುರಗಿ, ಯಾದಗಿರಿ, ಶಿವಮೊಗ್ಗ, ದಾವಣಗೆರೆ, ಮಂಡ್ಯ ಜಿಲ್ಲೆಯ ರೈತರು ಸಹಿ ಹಂಚಿ ಸಂಭ್ರಮಿಸಿದ್ದಾರೆ.

ಇದು ಬದುಕಿನ ಹೋರಾಟ ಎಂದ ರೈತರು: ನಿರಂತರ ಒಂಬತ್ತು ದಿನಗಳಿಂದ ರೈತರು ಕೊರೆಯುವ ಚಳಿಯಲ್ಲಿ, ಬಿಸಿಲೂ, ಗಾಳಿ ಯಾವುದೇ ಲೆಕ್ಕಿಸದೆ ನಿರಂತರವಾಗಿ ಸರಕಾರದ ವಿರುದ್ದ ಹೋರಾಟ ನಡೆಸಿದ್ದರು.
ಇದು ಕೇವಲ ಕಬ್ಬಿನ ಹೋರಾಟ ಅಷ್ಟೇ ಅಲ್ಲ, ಬದುಕಿನ ಹೋರಾಟ, ಎಂದು ಗುರ್ಲಾಪುರದ ರೈತರು ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸಿದರು.
ನಿರಂತರ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ರೈತರ ಸಂತೋಷ ವ್ಯಕ್ತಪಡಿಸಿದರು. ‌

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಬ್ಬು ಬೆಳೆಗಾರರ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ ಸರಕಾರ ಪ್ರತಿ ಟನ್ ಕಬ್ಬಿಗೆ 3300 ರೂ ದರ ನಿಗದಿ ಮಾಡಲು ನಿರ್ಧರಿಸಿದೆ.

ಸರಕಾರದಿಂದ 50 ರೂಪಾಯಿ ಹಾಗೂ ಕಾರ್ಖಾನೆಯಿಂದ 50 ರೂಪಾಯಿ ನೀಡಲಾಗುವುದು. ಈ ಮೂಲಕ ಒಟ್ಟು 3300 ರೂಪಾಯಿ ನೀಡಲು ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ರೈತರ ಬೇಡಿಕೆ ಈಡೇರಿಸಿದ ಸರಕಾರ:ಪ್ರತಿ ಟನ್ ಕಬ್ಬಿಗೆ 3300 ರೂ ದರ ನಿಗದಿ Read More

ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕ್ಲಾಸ್

ಬೆಂಗಳೂರು: ರಾಜ್ಯದಲ್ಲಿ ಅಪರಾಧಗಳ ಪ್ರಮಾಣ ಇಳಿಕೆ ಆಗಿರುವುದು ಸಮಾಧಾನದ ಸಂಗತಿಯಾದರೂ ಪೊಲೀಸರ ತನಿಖೆಯ ಗುಣಮಟ್ಟ ಕಡಿಮೆಯಾಗಿದ್ದು ಇದನ್ನು ಹೆಚ್ಚಿ ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದರು.

ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಮತ್ತು ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ ಸಿಎಂ ಈ ಸೂಚನೆ ನೀಡಿದರು.

ಬೀದರ್ ನಲ್ಲಿ ನಡೆದ ದರೋಡೆ ಪ್ರಕರಣದ ಆರೋಪಿ ಯಾರು ಎಂದು ಗೊತ್ತಾಗಿದ್ದರೂ 5 ತಿಂಗಳಿಂದ ಆತನನ್ನು ಬಂಧಿಸಲಾಗಿಲ್ಲ ಎಂದು ಗರಂ ಆದ ಸಿದ್ದು,ಬಿಡಿ ಪ್ರಕರಣಗಳಲ್ಲಿ ತನಿಖೆಯ ಗುಣಮಟ್ಟ ಹೆಚ್ಚಿದ್ದರೂ ಒಟ್ಟಾರೆ ಗಮನಿಸಿದಾಗ ತನಿಖೆಯ ಗುಣಮಟ್ಟ ಕುಸಿದಿರುವುದು ಸ್ಪಷ್ಟವಾಗುತ್ತಿದೆ ಎಂದು ಹೇಳಿದರು.

ನಾನು 1983 ರಿಂದ ಶಾಸಕನಾಗಿ ಸಿಎಂ ಆಗಿದ್ದೀನಿ. ಬೆಂಗಳೂರಿನಲ್ಲಿ ನಡೆದ ಇಂಥಾ ಕಾಲ್ತುಳಿತ ಪ್ರಕರಣವನ್ನು ನಾನು ನೋಡಿರಲಿಲ್ಲ ಎಂದು ‌ಬೇಸರಪಟ್ಟ ಸಿಎಂ, ಗುಪ್ತಚರ ಇಲಾಖೆ ಇರುವುದು ಏಕೆ ಸರಿಯಾದ ಸಮಗ್ರ ಮಾಹಿತಿ ನೀಡಲಿಲ್ಲ. ಪರಿಣಾಮ 11 ಮಂದಿ ಅಮಾಯಕರು ಮೃತಪಟ್ಟರು ಎಂದು ಖೇದ ವ್ಯಕಪಡಿಸಿದರು.

ಕಾಲ್ತುಳಿತ ಘಟನೆ ನಡೆದ ದಿನ‌ ಮಧ್ಯಾಹ್ನ 3.50 ಕ್ಕೇ ಸಾವು ಸಂಭವಿಸಿದ್ದರೂ ಸರಿಯಾದ ಮಾಹಿತಿ ಕೊಟ್ಟಿರಲಿಲ್ಲ. ಇದು ತಪ್ಪಲ್ಲವಾ, 5.45 ಕ್ಕೆ ನಾನಾಗೇ ಕೇಳಿದಾಗಲೂ ಒಂದೇ ಸಾವು ಆಗಿದೆ ಎಂಬ ಮಾಹಿತಿ ನೀಡಿದರು. ಅಷ್ಟೊತ್ತಿಗಾಗಲೇ 11 ಸಾವು ಆಗಿಬಿಟ್ಟಿತ್ತು. ಹಿರಿಯ ಅಧಿಕಾರಿ ಸರಿಯಾದ ಮಾಹಿತಿಯನ್ನು ತಕ್ಷಣ ನಮಗೆ ನೀಡಿದ್ದರೆ ಸ್ಟೇಡಿಯಂ ಕಾರ್ಯಕ್ರಮ ರದ್ದುಗೊಳಿಸಲು ಸೂಚನೆ ನೀಡಬಹುದಿತ್ತು ಎಂದು ಸಿದ್ದರಾಮಯ್ಯ ಹೇಳಿದರು.

ಹಿರಿಯ ಅಧಿಕಾರಿಗಳ ಸಸ್ಪೆಂಡ್ ಮಾಡಬೇಕಾಗಿ ಬಂದಿದ್ದಕ್ಕೆ ನನಗೂ ಬೇಸರ ಇದೆ,ಆದರೆ ತಪ್ಪಾಗಿದ್ದು ನಿಜ ತಾನೇ ಎಂದು ಪ್ರಶ್ನಿಸಿದರು.

ಅಪರಾಧ ಪ್ರಕರಣಗಳಲ್ಲಿ ಆರೋಪ ಪಟ್ಟಿಯನ್ನು ಸೂಕ್ತವಾಗಿ, ಪರಿಣಾಮಕಾರಿಯಗಿ, ಸರಿಯಾದ ಸಮಯಕ್ಕೆ ಸಲ್ಲಿಸದಿರುವುದೂ ದೊಡ್ಡ ವೈಫಲ್ಯ,ಇಂಥದ್ದನ್ನು ಸಹಿಸಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಎಚ್ಚರಿಸಿದರು.

ದ್ವೇಷ ಭಾಷಣ ಮಾಡುವವರ ವಿರುದ್ಧ, ಜನರ-ರಾಜ್ಯದ ನೆಮ್ಮದಿ ಕೆಡಿಸುವವರ ವಿರುದ್ಧ ಸ್ವಯಂಪ್ರೇರಿತ ಕ್ರಮ ಏಕೆ ತೆಗೆದುಕೊಳ್ಳುತ್ತಿಲ್ಲ ಖಾರವಾಗಿ ಪ್ರಶ್ನಿಸಿದರು.

ಕೋಮು ಘರ್ಷಣೆ ಮತ್ತು ಕೊಲೆಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಹೆಚ್ಚಾಗಿ ಆಗುತ್ತಿದೆ. ಇತರೆ ಜಿಲ್ಲೆಗಳಲ್ಲಿ ಯಾಕೆ ಆಗುತ್ತಿಲ್ಲ,ದಕ್ಷಿಣ ಕನ್ನಡ ಜಿಲ್ಲೆಯ ನೆಮ್ಮದಿ ಕೆಡಿಸುವವರನ್ನು ಮೂಲದಿಂದಲೇ ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ಕಡಕ್ ಆದೇಶ ನೀಡಿದರು.

ಪೊಲೀಸ್ ಠಾಣೆಗಳು ಜನಸ್ನೇಹಿ ಆಗುವ ಜೊತೆಗೆ ಅಪರಾಧ ಮನಸ್ಥಿತಿಯವರಿಗೆ ಕಾನೂನಿನ ಬಗ್ಗೆ ಭಯ ಇರುವ ವಾತಾವರಣ ಸೃಷ್ಟಿಸಬೇಕು ಎಂದು ಮುಖ್ಯ ಮಂತ್ರಿಗಳು ಸಲಹೆ ನೀಡಿದರು.

ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡಲು ತಿಂಗಳ‌ ಬಳಿಕ ನೇಮಕಾತಿ‌ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು,
ಪೊಲೀಸ್ ಇಲಾಖೆಯ ಬೇಡಿಕೆಗಳಲ್ಲಿ ಬಹಳಷ್ಟು ಈಡೇರಿಸಿ ಸಾಕಷ್ಟು ಹಣ, ಅನುದಾನ ಒದಗಿಸಿದ್ದೇವೆ, ಸಮಾಜದ ನೆಮ್ಮದಿ, ಕಾನೂನು- ಸುವ್ಯವಸ್ಥೆಯನ್ನು ನಿಮ್ಮಿಂದ ನಿರೀಕ್ಷಿಸುತ್ತೇನೆ ಶಕ್ತರಿಗೂ, ಅಶಕ್ತರಿಗೂ ನ್ಯಾಯ‌ ಒದಗಿಸುವುದು ಪೊಲೀಸ್ ಜವಬ್ದಾರಿ,ಕಾನೂನು ಎಲ್ಲರಿಗೂ ಒಂದೇ ಇದನ್ನು ಮರೆಯಬೇಡಿ ಎಂದು ಮುಖ್ಯ ಮಂತ್ರಿಗಳು ಕಡಕ್ಕಾಗಿ ಹೇಳಿದರು.

ಗೃಹ ಸಚಿವ ಜಿ.ಪರಮೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಗೃಹ ಇಲಾಖೆ ಎಸಿಎಸ್ ಗೌರವ್ ಗುಪ್ತ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎ.ಎಂ ಸಲೀಂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕ್ಲಾಸ್ Read More

ಕಾನೂನು ಸುವ್ಯವಸ್ಥೆ,ಸತತ ಮಳೆ;ತಕ್ಷಣ ಕ್ರಮ ಕೈಗೊಳ್ಳಲು ಡಿಸಿ,ಸಿಇಒ ಗಳಿಗೆ ಸಿಎಂ ಕಡಕ್ ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸತತ ಮಳೆ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳ ಕುರಿತು ಮುಖ್ಯ ಮಂತ್ರಿ ಸಿದ್ದರಾಮಯ್ಯ ಜಿಲ್ಲಾಧಿಕಾರಿ ಗಳು ಹಾಗೂ ಸಿಇಒಗಳ ಸಭೆ ನಡೆಸಿ ಕಡಕ್ ಸೂಚನೆಗಳನ್ನು ನೀಡಿದ್ದಾರೆ.

ಯಾವುದೇ ಕಾರಣಕ್ಕೂ ಕಚೇರಿಯಲ್ಲಿ ಜಾಂಡಾ ಊರದೆ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಅರಿತು ಜನರಿಗೆ ಸ್ಪಂದಿಸಬೇಕು ಮಳೆ ಅನಾಹುತ ತಡೆಯಲು ಕ್ರಮ ತೆಗೊಬೇಕು ಎಂದು ಸಿಎಂ ಕಠಿಣ ಸೂಚನೆ ನೀಡಿದರು.

ಇದೇ ವೇಳೆ‌ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಭೂಕುಸಿತ, ಗುಡ್ದ ಕುಸಿತ ಸಂಭವಿಸಿ ಅನಾಹುತವಾಗಿದ್ದರ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಎಂ, ತಕ್ಷಣ ಅಲ್ಲಿಗೆ ತೆರಳುವಂತೆ ಸಚಿವ ದಿನೇಶ್ ಗುಂಡೂರಾವ್ ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದಲ್ಲಿ 10931 ಕೆರೆಗಳು ಒತ್ತುವರಿಯಾಗಿವೆ. ಇದುವರೆಗೆ 6065 ಕೆರೆಗಳ ಒತ್ತುವರಿ ತೆರವು ಮಾಡಲಾಗಿದೆ. ಎಲ್ಲಾ ಕೆರೆಗಳ ಸಮೀಕ್ಷೆ ನಡೆಸಿ ಒತ್ತುವರಿ ತೆರವುಗೊಳಿಸಲು ಕಳೆದ ಸಭೆಯಲ್ಲಿ ತಿಳಿಸಿದ್ದರೂ ನಿರೀಕ್ಷಿತ ಪ್ರಗತಿಯಾಗಿಲ್ಲ ಏಕೆ ಎಂದು ತರಾಟೆಗೆ ತೆಗೆದುಕೊಂಡರು.

ತಕ್ಷಣ ಎಲ್ಲಾ ಕೆರೆಗಳ ಸಮೀಕ್ಷೆ ನಡೆಸಿ, ಒತ್ತುವರಿ ತೆರವುಗೊಳಿಸಿ, ಮಳೆ ನೀರು ಸರಾಗವಾಗಿ ಕೆರೆಗೆ ಹರಿದು ಬರುವಂತೆ ವ್ಯವಸ್ಥೆ ಮಾಡಿ, ಕೆರೆಗಳ ಒತ್ತುವರಿ ವಿಷಯದಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಡಕ್ ಆದೇಶ ನೀಡಿದರು.

ರಾಜ್ಯದಲ್ಲಿ ಈ ವರ್ಷ 1395 ಪೋಕ್ಸೋ ಪ್ರಕರಣಗಳು ದಾಖಲಾಗಿವೆ. ಪೋಕ್ಸೋ ಪ್ರಕರಣಗಳಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಆಗುವಂತೆ ನೋಡಿಕೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತಕ್ಕ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸಿದ್ದು ಸೂಚಿಸಿದರು.

ಸಿಂಧುತ್ವ ಪ್ರಮಾಣ ಪತ್ರವನ್ನು ನಿಗದಿತವಾಗಿ ಒಂದು ತಿಂಗಳ ಒಳಗಾಗಿ ನೀಡಬೇಕು,ಆದರೆ ಕೆಲವು ಜಿಲ್ಲೆಗಳಲ್ಲಿ ತಿಂಗಳುಗಟ್ಟಲೆ ಸತಾಯಿಸುವ ಬಗ್ಗೆ ದೂರುಗಳು ಬರುತ್ತಿವೆ,ಇಂತಹ ವಿಳಂಬ ಸಹಿಸಲು ಸಾಧ್ಯವಿಲ್ಲ ಗೊತ್ತಾಯ್ತಾ ಎಂದು ಎಚ್ಚರಿಸಿದರು.

ಸರ್ಕಾರಿ ಶಾಲೆಗಳಿಗೆ ಎಲ್ಲಾ ಸವಲತ್ತುಗಳನ್ನು ನೀಡದರೂ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಕಳಪೆ ಫಲಿತಾಂಶ ಬರಲು ಕಾರಣವೇನು ಎಂದು ಮುಖ್ಯ ಮಂತ್ರಿಗಳು ಕಾರವಾಗಿ ಪ್ರಶ್ನಿಸಿದರು. ಈ ಬಗ್ಗೆ ಆತ್ಮಾವಲೋಕನ ನಡೆಸಿ,ತಮ್ಮ ಜಿಲ್ಲೆಗಳಲ್ಲಿ ಫಲಿತಾಂಶ ಸುಧಾರಿಸುವುದು ಆಯಾ ಜಿಲ್ಲಾಧಿಕಾರಿ ಹಾಗೂ ಸಿಇಒಗಳ ಜವಾಬ್ದಾರಿ ಎಂದು ತಿಳಿದುಕೊಳ್ಳಿ ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯದಲ್ಲಿ ಕಂದಾಯ ಗ್ರಾಮಗಳ ಘೋಷಣೆ ದಾಖಲೆ ಪ್ರಮಾಣದಲ್ಲಿ ಆಗಿದೆ. ಆದರೆ ಇನ್ನೂ ಬಾಕಿ ಉಳಿದಿರುವ ಕಂದಾಯ ಗ್ರಾಮಗಳನ್ನು ಘೋಷಿಸುವ ಕಾರ್ಯ ಮುಂದಿನ 6ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು, ಬಗರ್ ಹುಕುಂ ಅರ್ಜಿಗಳ ವಿಲೇವಾರಿ ತ್ವರಿತಗೊಳಿಸಬೇಕು ಎಂದು ಸಲಹೆ ನೀಡಿದರು.

ಶಾಲೆ, ಆಸ್ಪತ್ರೆ, ಅಂಗನವಾಡಿ, ಸ್ಮಶಾನ, ಕಬರಸ್ತಾನಗಳಿಗೆ ನಿವೇಶನ ಒದಗಿಸುವುದನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು ವಿಳಂಬ ಮಾಡಬಾರದು,
ಅರಣ್ಯ ಹಕ್ಕುಗಳಿಗಾಗಿ 295176 ಅರ್ಜಿಗಳು ಸಲ್ಲಿಕೆಯಾಗಿದ್ದು, 16700 ಮಾತ್ರ ಅರಣ್ಯ ಹಕ್ಕು ಪತ್ರ ಒದಗಿಸಲಾಗಿದೆ,ತಕ್ಷಣ ಸರಿಯಾಗಿ ವಿಲೇವಾರಿ ಮಾಡಬೇಕು ಎಂದು ಸಿಎಂ ಆದೇಶಿಸಿದರು.

ಕಾನೂನು ಸುವ್ಯವಸ್ಥೆ,ಸತತ ಮಳೆ;ತಕ್ಷಣ ಕ್ರಮ ಕೈಗೊಳ್ಳಲು ಡಿಸಿ,ಸಿಇಒ ಗಳಿಗೆ ಸಿಎಂ ಕಡಕ್ ಸೂಚನೆ Read More

ಹಾಲು ಒಕ್ಕೂಟಗಳ ದರ ಏರಿಕೆ ಬೇಡಿಕೆಗೆ ಮಣಿಯದ ಸಿಎಂ:ಸಂಪುಟ‌ ಸಭೆಯಲ್ಲಿ ಚರ್ಚಿಸಿ ನಿರ್ಧಾರ

ಬೆಂಗಳೂರು: ಹಾಲು ಒಕ್ಕೂಟಗಳು ಇರುವುದು ರೈತರಿಗೆ ಅನುಕೂಲ ಮಾಡುವುದಕ್ಕೆ ಮಾತ್ರ, ಲಾಭ ಮಾಡುವುದಕ್ಕಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಖಡಕ್ ಆಗಿ ಹೇಳಿದ್ದಾರೆ.

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷರು, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಕಾವೇರಿಯಲ್ಲಿ ನಡೆಸಿದ ಸಭೆಯ ನಂತರ ಸಿಎಂ ಮಾತನಾಡಿದರು.

ಒಕ್ಕೂಟಗಳ ದರ ಏರಿಕೆ ಬೇಡಿಕೆಗಳನ್ನು ಆಲಿಸಿದರೂ ಮಣಿಯದೆ ಈ ವಿಚಾರವನ್ನು ಸಚಿವ ಸಂಪುಟದಲ್ಲಿ ಚರ್ಚಿಸಿ ನಂತರ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಹಾಲಿನ ದರ ಹೆಚ್ಚಳ ಕುರಿತು ಒಕ್ಕೂಟಗಳ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ, ಹಾಲಿನದರ ಹೆಚ್ಚಳ ಮಾಡಿದರೆ ಮೊತ್ತವನ್ನು ಸಂಪೂರ್ಣವಾಗಿ ರೈತರಿಗೆ ವರ್ಗಾವಣೆಯಾಗಬೇಕು ಎಂಬುವುದು ಸರ್ಕಾರದ ದೃಢ ನಿಲುವು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

ಹಾಲು ಒಕ್ಕೂಟಗಳು ಖರ್ಚು ವೆಚ್ಚ ಕಡಿಮೆ ಮಾಡಬೇಕು, ಪಾರದರ್ಶಕತೆಯನ್ನು ಪಾಲಿಸಬೇಕು, ಒಕ್ಕೂಟಗಳು ಅಗತ್ಯಕ್ಕಿಂತ ಹೆಚ್ಚು ಜನರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಬಾರದು,ಇದರಿಂದಾಗಿಯೇ ವೆಚ್ಚ ಹೆಚ್ಚಾಗುತ್ತಿದೆ. ಅನಗತ್ಯ ಆಡಳಿತಾತ್ಮಕ ವೆಚ್ಚಗಳಿಂದಾಗಿಯೇ ಕೆಲವು ಒಕ್ಕೂಟಗಳು ನಷ್ಟ ಅನುಭವಿಸುವಂತಾಗಿದೆ ಎಂದು ಸಿಎಂ ಕಡಕ್ ಆಗಿ ನುಡಿದರು.

ಹಾಲು ಒಕ್ಕೂಟಗಳ ದರ ಏರಿಕೆ ಬೇಡಿಕೆಗೆ ಮಣಿಯದ ಸಿಎಂ:ಸಂಪುಟ‌ ಸಭೆಯಲ್ಲಿ ಚರ್ಚಿಸಿ ನಿರ್ಧಾರ Read More

ಜಾತಿ ಗಣತಿ ವರದಿ ಅನುಷ್ಠಾನ ಗ್ಯಾರಂಟಿ:ಸಿಎಂ

ಬೆಂಗಳೂರು: ಜಾತಿ ಗಣತಿ ವರದಿಯು ವೈಜ್ಞಾನಿಕವಾಗಿ ನಡೆದಿದ್ದು ಅದನ್ನು ನಮ್ಮ ಸರ್ಕಾರ ಖಂಡಿತಾ ಜಾರಿಗೊಳಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಹಿಂದುಳಿದ ವರ್ಗಗಳ ಮುಖಂಡರು ಹಾಗೂ ಹಿಂದುಳಿದ ವರ್ಗಗಳ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ವಿಧಾನಸೌಧದಲ್ಲಿ ಇಂದು ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಜಾತಿ ಗಣತಿ ಅನುಷ್ಠಾನಕ್ಕೆ ಸಭೆಯಲ್ಲಿ ತೀವ್ರ ಒತ್ತಾಯ ಬಂದಾಗ ಪ್ರತಿಕ್ರಿಯಿಸಿದ ಸಿಎಂ,
ಸರ್ಕಾರ ಜಾತಿ ಗಣತಿ ಪರವಾಗಿದೆ, ವರದಿಯನ್ನು ಸ್ವೀಕರಿಸಲಾಗಿದೆ,ಖಂಡಿತಾ ಜಾರಿ ಮಾಡಲಾಗುತ್ತದೆ ಅದರ ಬಗ್ಗೆ ಅನುಮಾನವೇ ಬೇಡ ಎಂದು ತಿಳಿಸಿದರು.

ತಮಿಳು ನಾಡು ಮಾದರಿಯಲ್ಲಿ ಮೀಸಲಾತಿ ಹೆಚ್ಚಳಕ್ಕೆ ಸಭೆ ಆಗ್ರಹಿಸಿದಾಗ 1992 ರ ಇಂದಿರಾ ಸಹಾನಿ ಕೇಸನ್ನು ಉಲ್ಲೇಖಿಸಿ ಮೀಸಲಾತಿ ಶೇಕಡ 50ರಷ್ಟು ಮೀರಬಾರದು ಎಂಬ ಅಂಶವನ್ನು ವಿವರಿಸಿದರು.

ಕಳೆದ ಸರ್ಕಾರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಎಂದು ( EWS) ಮೀಸಲಾತಿ ಕಲ್ಪಿಸಿದ್ದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ.
ಸಂವಿಧಾನದ ಆರ್ಟಿಕಲ್ ( 15)(16)ರ ಪ್ರಕಾರ ಮೀಸಲಾತಿ ನೀಡಬೇಕಾಗಿರುವುದು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮಾತ್ರ ಎಂದಿದೆ.

ಜಾತಿ ಗಣತಿಯ ವರದಿ ವೈಜ್ಞಾನಿಕವಾಗಿ ತಯಾರಾಗಿದ್ದು ಸಮಾಜದ ಎಲ್ಲಾ ವರ್ಗಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ತಿಳಿಯಲು ಅನುಕೂಲ ವಾಗಿದೆ, ಕೆಲವರು ತಪ್ಪು ಗ್ರಹಿಕೆಯಿಂದ ಅದನ್ನು ವಿರೋಧಿಸುತ್ತಿದ್ದಾರೆ ಎಂದು ಸಿಎಂ ಬೇಸರಪಟ್ಟರು‌

ಹಿಂದುಳಿದ ಜಾತಿಗಳಲ್ಲೂ ತಾರತಮ್ಯ ಅಸಮಾನತೆ ಇದೆ ಇದನ್ನು ಒಂದೇ ಬಾರಿಗೆ ಹೋಗಲಾಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಅಲೆಮಾರಿ ಜನಾಂಗಕ್ಕೆ ವಿಶೇಷ ಸ್ಥಾನಮಾನ ನೀಡುವ ಬಗ್ಗೆ ಪ್ರತಿಕ್ರಿಯಿಸಿ ಅಲೆಮಾರಿ ಆಯೋಗ ರಚನೆಗೆ ಉಂಟಾಗಿರುವ ಸಮಸ್ಯೆಗಳಿಂದಾಗಿ ಸಾಧ್ಯವಾಗಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ಜಾತಿ ಗಣತಿ ವರದಿ ಅನುಷ್ಠಾನ ಗ್ಯಾರಂಟಿ:ಸಿಎಂ Read More

ಉದಯಗಿರಿ ಘಟನೆ: ತಪ್ಪಿತಸ್ಥರು ಯಾರೇ ಇದ್ದರೂ ಮುಲಾಜಿಲ್ಲದೆ ಕ್ರಮ ಜರುಗಿಸಿ-ಸಿಎಂ ಕಡಕ್ ಸೂಚನೆ

ಬೆಂಗಳೂರು: ಮೈಸೂರಿನ ಉದಯಗಿರಿ ಘಟನೆಯಲ್ಲಿ ತಪ್ಪಿತಸ್ಥರು ಯಾರೇ ಇದ್ದರೂ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸುವಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಕಡಕ್ ಸೂಚನೆ ನೀಡಿದ್ದಾರೆ.

ಸಂಜೆ ಮೈಸೂರು ಉದಯಗಿರಿ ಘಟನೆಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸದಲ್ಲಿ ಸಭೆ ನಡೆಸಿ ಹಿರಿಯ ಅಧಿಕಾರಿಗಳಿಗೆ ಕಡಕ್ ಸೂಚನೆಗಳನ್ನು ನೀಡಿದ್ದಾರೆ.

ಮೈಸೂರು ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ, ಮೈಸೂರು ಪೊಲೀಸ್ ಆಯುಕ್ತರು ಮತ್ತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಸಭೆಯಲ್ಲಿ ಭಾಗವಹಿಸಿದ್ದರು.

ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು ತಪ್ಪು ಯಾರೇ ಮಾಡಿದ್ದರೂ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಿ,ಕಾನೂನು ಕೈಗೆ ಎತ್ತಿಕೊಂಡ ಪ್ರತಿಯೊಬ್ಬರನ್ನೂ ಪತ್ತೆಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಿ ಎಂದು ಆದೇಶಿಸಿದ್ದಾರೆ.

ಅಮಾಯಕರಿಗೆ ತೊಂದರೆ ಕೊಡಬಾರದು,
ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ಕಾನೂನು ಸುವ್ಯವಸ್ಥೆಗೆ ಭಂಗ ತರುವ ಪ್ರಯತ್ನ ಮಾಡಿದ ಎಲ್ಲರನ್ನೂ ಕಾನೂನು ಕ್ರಮಕ್ಕೆ ಒಳಪಡಿಸಬೇಕು,ಪೊಲೀಸ್ ಠಾಣೆ ಮೇಲೆ ಕಲ್ಲು ತೂರಿದವರು, ಇದಕ್ಕೆ ಪ್ರಚೋದನೆ ನೀಡಿದ ಎಲ್ಲರನ್ನೂ ಶೀಘ್ರ ಪತ್ತೆಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸಿ ಎಂದು ಸಿದ್ದರಾಮಯ್ಯ ಕಠಿಣ ಸೂಚನೆ ನೀಡಿದ್ದಾರೆ.

ಉದಯಗಿರಿ ಘಟನೆ: ತಪ್ಪಿತಸ್ಥರು ಯಾರೇ ಇದ್ದರೂ ಮುಲಾಜಿಲ್ಲದೆ ಕ್ರಮ ಜರುಗಿಸಿ-ಸಿಎಂ ಕಡಕ್ ಸೂಚನೆ Read More

ಮೈಕ್ರೋ ಫೈನಾನ್ಸ್ ಮಾಲಿಕರ ವಿರುದ್ಧ ಸಿದ್ದರಾಮಯ್ಯ ಗರಂ

ಬೆಂಗಳೂರು: ಬಲವಂತದ ಸಾಲ ವಸೂಲಿ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಕಡಕ್ ಎಚ್ಚರಿಕೆ ನೀಡಿದರು.

ಸಿದ್ದರಾಮಯ್ಯ ಅವರು ಮೈಕ್ರೋ ಫೈನಾನ್ಸ್‌ ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತು ಶನಿವಾರ ಉನ್ನತ ಮಟ್ಟದ ಸಭೆ ನಡೆಸಿದರು.

ಫೈನಾನ್ಸ್ ಕಂಪನಿಯವರು ಕಡ್ಡಾಯ ನಿಯಮ ಪಾಲನೆ ಮಾಡಲೇಬೇಕು, ಬಲವಂತದ ಸಾಲ ವಸೂಲಿ ಮಾಡಿದರೆ ಕ್ರಿಮಿನಲ್ ಮೊಕದ್ದಮೆ ಎದುರಿಸಿ ಎಂದು ಎಚ್ಚರಿಸಿದರು.

ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮೈಕ್ರೋ ಫೈನಾನ್ಸ್ ಗಳಿಂದ ಸಾಲ ಪಡೆಯುವವರ ಹಿತ ಕಾಪಾಡಲು ಸರ್ಕಾರ ಬದ್ಧವಾಗಿದೆ, ಸಾಲಗಾರರಿಗೆ ಕಿರುಕುಳ ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ‌ ಕೈಗೊಳ್ಳಲಾಗುವುದು. ಸಾಲಗಾರರ ಹಿತವನ್ನು ಕಾಪಾಡುವ ದೃಷ್ಟಿಯಿಂದ ಶೀಘ್ರ ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು ರಚನೆ ಮಾಡಲಾಗುವುದು ಎಂದು ತಿಳಿಸಿದರು ‌

ಬಲವಂತದ ಸಾಲ ವಸೂಲಾತಿ ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ, ಈ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲು ಸಾಧ್ಯವಾಗುವಂತೆ ಈಗಿರುವ ಕಾನೂನು ಇನ್ನಷ್ಟು ಬಲಪಡಿಸಲು ಕ್ರಮ ಕೈಗೊಳ್ಳಲಾಗುವುದು,ಇದರಲ್ಲಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ನೋಂದಣಿಯಾಗದ ಲೇವಾದೇವಿಗಾರರ ಮೇಲೆ ನಿಯಂತ್ರಣಕ್ಕೆ ಹೊಸ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗುವುದು.

ಯಾರಾದರೂ ಮೈಕ್ರೋ ಫೈನಾನ್ಸ್ ವ್ಯಕ್ತಿಗಳಿಂದ ಕಿರುಕುಳ ಎದುರಿಸುತ್ತಿದ್ದರೆ ಸ್ಥಳೀಯವಾಗಿ ಪೊಲೀಸರಿಗೆ ದೂರು ನೀಡಬೇಕು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗಳು ಸಭೆ ನಡೆಸಿ ಈ ಕುರಿತು ಜನರಿಗೆ ಸೂಕ್ತ ತಿಳುವಳಿಕೆ ನೀಡಬೇಕು

ಈ ಕುರಿತು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪ್ರತಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ಆರಂಭಿಸಲು ಸೂಚನೆ ನೀಡಲಾಗಿದೆ ತೊಂದರೆಗೊಳಗಾದವರು ಇಲ್ಲಿ ದೂರು ನೀಡಬಹುದು ಎಂದು ಸಿದ್ದರಾಮಯ್ಯ ತಿಳಿಸಿದರು.

ಮೈಕ್ರೋ ಫೈನಾನ್ಸ್ ಮಾಲಿಕರ ವಿರುದ್ಧ ಸಿದ್ದರಾಮಯ್ಯ ಗರಂ Read More

ವಕ್ಫ್ ವಿಚಾರದಲ್ಲಿ ರೈತರಿಗೆ ನೀಡಿರುವ ನೋಟೀಸ್ ತಕ್ಷಣ ವಾಪಸ್- ಅಧಿಕಾರಿಗಳಿಗೆ ಸಿಎಂ ಆದೇಶ

ಬೆಂಗಳೂರು: ವಕ್ಫ್‌ ವಿಚಾರದಲ್ಲಿ ರೈತರಿಗೆ ನೀಡಿರುವ ನೋಟಿಸುಗಳನ್ನು ತಕ್ಷಣ ವಾಪಸ್‌ ಪಡೆಯಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಆದೇಶಿಸಿದ್ದಾರೆ

ಜತೆಗೆ‌ ಇನ್ನು ಮುಂದೆ ರೈತರಿಗೆ ಯಾವುದೇ ತೊಂದರೆ ನೀಡಕೂಡದು ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.

ಕಂದಾಯ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ವಕ್ಫ್‌ ಮಂಡಳಿಯ ಹಿರಿಯ ಅಧಿಕಾರಿಗಳ ಜೊತೆ ಸಿದ್ದರಾಮಯ್ಯ ಸಭೆ ನಡೆಸಿ ಅಧಿಕಾರಿಗಳಿಗೆ ಮೇಲಿನ ಸೂಚನೆ ನೀಡಿದರು.

ವಕ್ಫ್‌ ಜಮೀನು ವಿಚಾರದಲ್ಲಿ ಇತ್ತೇಚೆಗೆ ನಡೆದಿರುವ ಬೆಳವಣಿಗೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಿಎಂ, ನೋಟಿಸ್‌ ವಿಚಾರದಲ್ಲಿ ಕೆಲ ಅಧಿಕಾರಿಗಳು ಕೈಗೊಂಡಿರುವ ಕ್ರಮದ ಬಗ್ಗೆ ಗರಂ ಆದರು.

ವಕ್ಫ್‌ ವಿಚಾರವನ್ನು ಜೆಡಿಎಸ್‌ ಮತ್ತು ಬಿಜೆಪಿ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ. ಈ ಮೂಲಕ ರಾಜ್ಯದಲ್ಲಿ ಶಾಂತಿ ಕದಡುವ ದುಷ್ಟ ಪ್ರಯತ್ನವನ್ನು ಆ ಪಕ್ಷಗಳು ಜಂಟಿಯಾಗಿ ಮಾಡುತ್ತಿವೆ. ಇಂತಹ ಹೀನ ಪ್ರಯತ್ನಗಳಿಗೆ ಜನತೆ ಸೊಪ್ಪು ಹಾಕಬಾರದು,ಅಪ ಪ್ರಚಾರಗಳಿಗೆ ಕಿವಿಗೊಡಬಾರದು ಎಂದು ಕೋರಿದರು.

ಅಧಿಕಾರಿಗಳು ಕೂಡಾ ಈ ಕುರಿತು ಎಚ್ಚರ ವಹಿಸಬೇಕು. ರೈತರಿಗೆ ತೊಂದರೆ ಆಗುವ ಯಾವುದೇ ತೀರ್ಮಾನವನ್ನು ಕೈಗೊಳ್ಳಬಾರದು ಎಂದು ನಿರ್ದೇಶಿಸಿದರು.

ರೈತರ ಪಹಣಿ ಬದಲಾವಣೆ ಸಂಬಂಧ ಈಗಾಗಲೇ ನೀಡಿರುವ ನೋಟೀಸ್‌ಗಳನ್ನು ತಕ್ಷಣ ವಾಪಸ್‌ ಪಡೆಯಬೇಕು,ರೈತರ ಸ್ವಾಧೀನದಲ್ಲಿರುವ ಜಮೀನುಗಳಿಗೆ ತೊಂದರೆ ನೀಡಬಾರದು,ಕಾನೂನು ಬಾಹಿರವಾಗಿ ಹಾಗೂ ನೋಟೀಸ್‌ ನೀಡದೆ ಪಹಣಿಯಲ್ಲಿ ಯಾವುದೇ ರೀತಿಯ ತಿದ್ದುಪಡಿಗಳನ್ನು ಮಾಡಿದ್ದರೆ ತಕ್ಷಣ ರದ್ದು ಮಾಡಬೇಕು ಎಂದು ತೀರ್ಮಾನಿಸಲಾಯಿತು.

ಸಭೆಯಲ್ಲಿ ಸಚಿವರುಗಳಾದ ಎಚ್.ಕೆ. ಪಾಟೀಲ್‌, ಕೃಷ್ಣ ಬೈರೇಗೌಡ,ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ, ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಪೊನ್ನಣ್ಣ,ರಾಜಕೀಯ ಕಾರ್ಯದರ್ಶ಼ಿ ನಸೀರ್‌ ಅಹಮದ್‌,
ವಕ್ಫ್‌ ಮಂಡಳಿಯ ಸಿಇಒ ಜಿಲಾನಿ, ಅಲ್ಫ ಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮನೋಜ್‌ ಜೈನ್‌‌ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ವಕ್ಫ್ ವಿಚಾರದಲ್ಲಿ ರೈತರಿಗೆ ನೀಡಿರುವ ನೋಟೀಸ್ ತಕ್ಷಣ ವಾಪಸ್- ಅಧಿಕಾರಿಗಳಿಗೆ ಸಿಎಂ ಆದೇಶ Read More

ಡ್ರಗ್ ಜಾಲದ ಬೇರುಗಳನ್ನೆ ಕತ್ತರಿಸುತ್ತೇವೆ: ಸಿಎಂ

ಬೆಂಗಳೂರು: ರಾಜ್ಯದಲ್ಲಿ ಡ್ರಗ್ ಜಾಲದ ಬೇರುಗಳನ್ನೇ ಕತ್ತರಿಸಲು
ತೀರ್ಮಾನಿಸಲಾಗಿದೆ ಎಂದು
ಮುಖ್ಯ ಮಂತ್ರಿ ಸಿದ್ದರಾಮಯ್ಯ ಕಡಕ್ಕಾಗಿ ಹೇಳಿದರು.

ಡ್ರಗ್ಸ್ ಜಾಲ ತಡೆಯುವ ಬಗ್ಗೆ ಸಚಿವರು,ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ,ಡ್ರಗ್ಸ್ ಹಾವಳಿ ತಡೆಗೆ
ಗೃಹ ಸಚಿವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗುವುದು ಎಂದು ‌ತಿಳಿಸಿದರು.

ಪದೇ,ಪದೇ ಸಭೆಗಳನ್ನು ನಡೆಸಿ, ಅಗತ್ಯ ಕಾರ್ಯತಂತ್ರ ರೂಪಿಸಲು ಸೂಚನೆ ನೀಡಿದ್ದೇನೆ,ಟಾಸ್ಕ್ ಫೋರ್ಸ್ ನಲ್ಲಿ ಆರೋಗ್ಯ ಸಚಿವರು, ಶಿಕ್ಷಣ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ಇರುತ್ತಾರೆ ಎಂದು ಹೇಳಿದರು.

ಯಾವುದೇ ಠಾಣಾಧಿಕಾರಿಗಳಿಗೆ ಗೊತ್ತಿಲ್ಲದೆ ಡ್ರಗ್ ದಂಧೆ ನಡೆಯಲು ಸಾಧ್ಯವಿಲ್ಲ ಅಸಮಾಧಾನ ವ್ಯಕ್ತಪಡಿಸಿದ ಸಿಎಂ, ದಂಧೆ ಕಂಡುಬಂದಲ್ಲಿ ಠಾಣಾಧಿಕಾರಿ, ಡಿವೈಎಸ್ ಪಿ, ಎಸಿಪಿ ಮತ್ತು ಎಸ್ ಪಿ ಗಳನ್ನು ಹೊಣೆ ಮಾಡಿ ಅವರ ವಿರುದ್ಧವೇ ಕ್ರಮ ತೆಗೆದುಕೊಳ್ಳುವುದಾಗಿ ಕಠಿಣ ಎಚ್ಚರಿಕೆ ನೀಡಿದರು.

ಅಗತ್ಯಬಿದ್ದರೆ ಹೊಸ ಕಾನೂನು ಮಾಡುತ್ತೇವೆ ಈಗ ಇರುವ ಕಾನೂನನ್ನು ಮತ್ತಷ್ಟು ಗಟ್ಟಿ ಮಾಡ್ತೇವೆ ಡ್ರಗ್ ಪೆಡ್ಲರ್ ಗಳಿಗೆ ಜೀವಾವಧಿ ಶಿಕ್ಷೆವರೆಗೆ ಕಠಿಣ ಶಿಕ್ಷೆ ವಿಧಿಸಲು ಕಾನೂನು ತಿದ್ದುಪಡಿಗೆ ಕ್ರಮ ವಹಿಸಲಾಗುವುದು ಎಂದು
ಸಿಎಂ ತಿಳಿಸಿದರು.

ಪುನರ್ವಸತಿ ಕೇಂದ್ರಗಳನ್ನು ಹೆಚ್ಚಿಸಲು ಮತ್ತು ಸಮರ್ಪಕಗೊಳಿಸಲು ಕ್ರಮ ತೆಗೆದುಕೊಂಡು
ಡ್ರಗ್ ಹಾವಳಿ ತೊಡೆದು ಹಾಕಲು ಕ್ಷಿಪ್ರ ಮತ್ತು ತೀಕ್ಷ್ಣ ಕ್ರಮ ಕೈಗೊಳ್ಳುತ್ತೇವೆ ಭರವಸೆ ನೀಡಿದರು.

ವಿದ್ಯಾರ್ಥಿಗಳು, ಯುವ ಜನರ ಮೇಲೆ, ಕುಟುಂಬಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವುದನ್ನು ತಡೆಯಲು ಮತ್ತ
ಡ್ರಗ್ ಸೇವಿಸಿ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವ ಪ್ರಕರಣಗಳಿಗೆ ಬ್ರೇಕ್ ಹಾಕಲು ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ವಿದ್ಯಾರ್ಥಿ-ಯುವ ಜನರ, ಪೋಷಕರ ಸಹಭಾಗಿತ್ವದಲ್ಲಿ ಮಾಹಿತಿ ಸಂಗ್ರಹಿಸಿ ಡ್ರಗ್ ಹಾವಳಿಗೆ ಬ್ರೇಕ್ ಹಾಕುವ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದೇವೆ,ಈಗಾಗಲೇ ರಾಜ್ಯ ಮಟ್ಟದ ಸಮಿತಿಯಿಂದ ಮಾಹಿತಿ, ಅಭಿಪ್ರಾಯ ಸಂಗ್ರಹಿಸಿದ್ದೇವೆ ಎಂದು ತಿಳಿಸಿದರು.

ಬೆಂಗಳೂರು ಪೂರ್ವ ವಿಭಾಗದಲ್ಲಿ ಡ್ರಗ್ ಹಾವಳಿ ತೀವ್ರವಾಗಿದೆ ಎಂಬ ಮಾಹಿತಿ ಸಿಕ್ಕಿದೆ,ಅದನ್ನ ಪೂರ್ಣ ನಿರ್ನಾಮ ಮಾಡಲು ನಿರ್ಧರಿಸಿದ್ದೇವೆ,ಒಡಿಶ್ಶಾ, ಆಂಧ್ರ, ಉತ್ತರ ಪ್ರದೇಶ ಸೇರಿ ಹಲವು ರಾಜ್ಯಗಳಿಂದ ಮಾದಕ ವಸ್ತು ರಾಜ್ಯಕ್ಕೆ ತರಲಾಗುತ್ತಿದೆ ಇದು ಅತ್ಯಂತ‌ ಗಂಭೀರ‌ ವಿಷಯವಾಗಿದ್ದು ಇದನ್ನು ತಡೆಯಲು ಹೊಸ ಕಾರ್ಯತಂತ್ರ ರೂಪಿಸುತ್ತಿದ್ದೇವೆ ಎಂದು ಮುಖ್ಯ ಮಂತ್ರಿಗಳು ಸ್ಪಷ್ಟಪಡಿಸಿದರು.

ಡ್ರಗ್ ಜಾಲದ ಬೇರುಗಳನ್ನೆ ಕತ್ತರಿಸುತ್ತೇವೆ: ಸಿಎಂ Read More