ರಮಣ ಜ್ಞಾನ ಕೇಂದ್ರದಲ್ಲಿ ಸಾಮೂಹಿಕ ಸರಸ್ವತಿ ಪೂಜಾ ಮಂತ್ರ ಕಲಿಕೆ
ಮೈಸೂರು: ಕುವೆಂಪು ನಗರದಲ್ಲಿರುವ ಶ್ರೀ ರಮಣ ಜ್ಞಾನ ಕೇಂದ್ರದಲ್ಲಿ ನಗರದ ಸಾಧನ ಮಂದಿರದ ಪೂಜ್ಯ ಸ್ವಾಮಿ ಹಂಸಾನಂದರ ಮಾರ್ಗದರ್ಶನದಲ್ಲಿ ಮಕ್ಕಳು ಮತ್ತು ಯುವಕರಿಗಾಗಿ ಸಾಮೂಹಿಕ ಸರಸ್ವತಿ ಪೂಜಾ ಮಂತ್ರ ಕಲಿಕೆ ಶಿಬಿರ ಆಯೋಜಿಸಲಾಗಿತ್ತು.
ಸುಮಾರು 15 ದಿನಗಳ ಕಾಲ ನಿರಂತರವಾಗಿ, ಮಕ್ಕಳಿಗೆ ಸರಸ್ವತಿ ಪೂಜೆಯ ಮಂತ್ರ ಉಚ್ಚಾರಣೆ, ಕ್ರಮ ವಿಧಿಗಳು ಮತ್ತು ಪೂಜೆಯ ತತ್ತ್ವಾರ್ಥಗಳನ್ನು ವಿವರವಾಗಿ ಬೋಧಿಸಲಾಯಿತು.
ಈ ಮೂಲಕ ಮಕ್ಕಳಲ್ಲಿ ಸಂಸ್ಕಾರ, ಶ್ರದ್ಧೆ ಮತ್ತು ನೈತಿಕ ಮೌಲ್ಯಗಳನ್ನೂ ಬೆಳೆಸುವ ಉದ್ದೇಶದಿಂದ ಈ ಶಿಬಿರ ಆಯೋಜಿಸಲಾಗಿತ್ತು.
ಶಿಬಿರವು ಸೋಮವಾರ ಯಶಸ್ವಿಯಾಗಿ ಸಂಪನ್ನಗೊಂಡಿತು. ಶಿಬಿರದ ಅಂತ್ಯದಲ್ಲಿ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ಉಸ್ತುವಾರಿಯನ್ನು ಪೂಜ್ಯ ಸ್ವಾಮಿ ಹಂಸಾನಂದರು ವಹಿಸಿದ್ದರು.
ಕೇಂದ್ರದ ಕಾರ್ಯದರ್ಶಿ ಗೀತಾ ಚರಣ್, ವ್ಯವಸ್ಥಾಪಕ ಶಶಿಕುಮಾರ್, ಕೇಂದ್ರದ ಅಧ್ಯಾಪಕರು ಹಾಗೂ ಭಕ್ತರು ಮತ್ತು ಪೋಷಕರು ಕಾರ್ಯಕ್ರಮಕ್ಕೆ ಸಾಥ್ ನೀಡಿದರು.
ಈ ವೇಳೆ ಸ್ವಾಮಿ ಹಂಸಾನಂದರು ಮಾತನಾಡಿ,ಬಾಲ್ಯದಲ್ಲೇ ಧಾರ್ಮಿಕ ಜ್ಞಾನ ಮತ್ತು ಸಂಸ್ಕಾರಗಳನ್ನು ನೀಡುವುದು ಜೀವನ ರೂಪಿಸುವ ಮಹತ್ವದ ಹೆಜ್ಜೆ, ಮಕ್ಕಳು ಪೂಜಾ ವಿಧಾನ ಕಲಿಯುವುದು ನಮ್ಮ ಸಂಸ್ಕೃತಿ ಉಳಿಯುವ ದಾರಿ
ಎಂದು ತಿಳಿಹೇಳಿದರು.