ಗಾಂಧಿ ಹೆಸರನ್ನೇ ನಾಮಾವಶೇಷ ಮಾಡಲು ಹೊರಟಿರುವ ಬಿಜೆಪಿ ಸರ್ಕಾರ:ಆಪ್

ಬೆಂಗಳೂರು: ದೇಶದ ಪ್ರತಿ ಹಳ್ಳಿ ಹಾಗೂ ರೈತರು ಸರ್ವತೋಮುಖ ಅಭಿವೃದ್ಧಿ ಹೊಂದಿದರೆ ಮಾತ್ರ ದೇಶದ ಸಂಪೂರ್ಣ ಅಭಿವೃದ್ಧಿ ಸಾಧ್ಯ ಎಂಬುದನ್ನು ಸಾಕಾರಗೊಳಿಸುವಲ್ಲಿ ತನ್ನದೇ ಪಾತ್ರ ವಹಿಸಿದ್ದ ಮನರೇಗಾ ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಸರ್ಕಾರ ಎಳ್ಳುನೀರು ಬಿಟ್ಟಿದೆ ಎಂದು ಆಪ್ ಕಿಡಿಕಾರಿದೆ.

ನರೇಂದ್ರ ಮೋದಿ ಪ್ರಧಾನಮಂತ್ರಿ ನೇತೃತ್ವದ ಬಿಜೆಪಿ ಸರ್ಕಾರವು ಗಾಂಧೀಜಿಯವರ ಹೆಸರನ್ನೇ ನಾಮಾವಶೇಷ ಮಾಡುವ ಮೂಲಕ ಮರುನಾಮಕರಣ ಮಾಡಲು ಹೊರಟಿರುವುದನ್ನು ಆಮ್ ಆದ್ವಿ ಪಕ್ಷವು ತೀವ್ರವಾಗಿ ಖಂಡಿಸುತ್ತದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಮಂತ್ರಿಮಂಡಲವು ಈಗಾಗಲೇ ಈ ಯೋಜನೆಗೆ ಪೂಜ್ಯ ಬಾಪು ಗ್ರಾಮೀಣ ರೋಜಗಾರ್ ಖಾತರಿ ಎಂದು ಮರುನಾಮಕರಣ ಮಾಡಲು ನಿರ್ಧರಿಸಿತ್ತು. ಆದರೆ ಏಕಾಏಕಿ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಮಸೂದೆಯನ್ನು ಮಂಡಿಸುವ ಮೂಲಕ ಗಾಂಧೀಜಿಯವರ ಹೆಸರನ್ನು ಹೊರಗಿಟ್ಟು ಜನಪ್ರಿಯ ಕಲ್ಯಾಣ ಕಾರ್ಯಕ್ರಮದ ಯಶಸ್ಸನ್ನು ತನ್ನದಾಗಿಸಿಕೊಳ್ಳುವ ದುರುದ್ದೇಶದಿಂದ ವಿಬಿ–ಜಿ– ರಾಮ್ ಜಿ ಎಂಬಂತಹ ಜನತೆಗೆ ಗೊಂದಲವನ್ನುಂಟು ಮಾಡುವ ನಾಮಾಂಕಿತವನ್ನು ಇಡುತ್ತಿರುವುದು ಪೂಜ್ಯ ಗಾಂಧೀಜಿಯವರಿಗೆ ಮಾಡಿದಂತಹ ಪರಮ ದ್ರೋಹ ಎಂದು ಮುಖ್ಯಮಂತ್ರಿ ಚಂದ್ರು ಮಾಧ್ಯಮ ಪ್ರಕಟಣೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಾಂಧೀಜಿಯವರ ಸ್ವರಾಜ್ಯ ಕಲ್ಪನೆಗೆ, ಅವರ ತ್ಯಾಗ ಬಲಿದಾನಕ್ಕೆ, ಅವರ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವಂತಹ ಕೋಮುವಾದಿ ಸಂಘಟನೆಗಳ ಮೂಲ ಅಜೆಂಡಾವನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರವು ದುಷ್ಟ ಪ್ರಯತ್ನವನ್ನು ಮಾಡುತ್ತಿರುವುದನ್ನು ಭಾರತೀಯರು ಎಂದಿಗೂ ಸಹಿಸುವುದಿಲ್ಲ ಎಂದಿದ್ದಾರೆ.

ಇಡೀ ವಿಶ್ವದೆದುರು ತಲೆತಗ್ಗಿಸುವಂತಹ ಇಂತಹ ನೀಚ ಕೆಲಸಗಳಿಗೆ ಕೈ ಹಾಕುತ್ತಿರುವ ಪ್ರಧಾನಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಕ್ಷ ತೀವ್ರ ಖಂಡನೆ ವ್ಯಕ್ತಪಡಿಸುತ್ತದೆ ಎಂದು ಮುಖ್ಯಮಂತ್ರಿ ಚಂದ್ರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಾಂಧಿ ಹೆಸರನ್ನೇ ನಾಮಾವಶೇಷ ಮಾಡಲು ಹೊರಟಿರುವ ಬಿಜೆಪಿ ಸರ್ಕಾರ:ಆಪ್ Read More

ಮ-ನರೇಗಾ ನೆರವಲ್ಲಿ ನೂತನ ಶೌಚಾಲಯನಿರ್ಮಿಸಿ ಮಕ್ಕಳಿಗೆ ಸ್ವಾಗತ!

ಮೈಸೂರು: ಜಿಲ್ಲೆಯಾದ್ಯಂತ ಅಂಗನವಾಡಿ ಹಾಗೂ ಶಾಲೆಗಳು ಪ್ರಾರಂಭವಾಗಿವೆ,ಆದರೆ ಇಲ್ಲೊಂದು ಪ್ರಾಥಮಿಕ ಶಾಲೆ ಮಕ್ಕಳನ್ನು ವಿಶೇಷವಾಗಿ ಬರಮಾಡಿಕೊಂಡಿತು.

ನೂತನ ಶೌಚಾಲಯಗಳನ್ನು ಕಟ್ಟಿ ಚಿಣ್ಣರನ್ನು ಬರಮಾಡಿಕೊಳ್ಳಲಾಯಿತು, ಇದಕ್ಕೆ ನರೇಗಾ ನೆರವಾಗಿದೆ.

ಮಹಾತ್ಮಗಾಂಧಿಯವರ ಕನಸಿನಂತೆ ಅಭಿವೃದ್ಧಿ ಎಂಬುದು ಗ್ರಾಮಗಳಿಂದಲೇ ಆಗಬೇಕೆಂಬ ಪರಿಕಲ್ಪನೆಯಲ್ಲೇ ಮುಂದೆ ಸಾಗುತ್ತಿರುವ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಶಾಲೆಗಳ ಅಭಿವೃದ್ಧಿಯ ನೆರವಿಗೆ ಸಹಕಾರಿಯಾಗಿದೆ.

ಇಂತಹ ಪ್ರಯತ್ನ ಯಶಸ್ವಿಯಾಗಿರುವುದು ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಮಲಿಯೂರು ಗ್ರಾಮ ಪಂಚಾಯಿತಿಯ ಮೇಗಳಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ.

ಹಲವು ವರ್ಷಗಳಿಂದ ಈ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ನಡೆಯುತ್ತಿದೆ,15 ವರ್ಷಗಳ ಹಿಂದೆ ಶೌಚಾಲಯ,
ನಿರ್ಮಾಣಗೊಂಡಿತ್ತು.ಆದರೆ ಇತ್ತೀಚೆಗೆ ಬಳಕೆಗೆ ಯೋಗ್ಯವಾಗಿರಲಿಲ್ಲ.

ಅಲ್ಲದೇ ಶೌಚಾಲಯಕ್ಕೆ ನೀರಿನ ವ್ಯವಸ್ಥೆಯೂ ಇರಲಿಲ್ಲ, ಮಕ್ಕಳಿಗೆ ಕಷ್ಟವಾಗಿತ್ತು.ಇದನ್ನು ಅರಿತ ಮುಖ್ಯೋಪಾಧ್ಯಾಯರು ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದು ಶೌಚಾಲಯ ನಿರ್ಮಾಣಕ್ಕೆ ಮುಂದಾದರು.

ಇದರ ಫಲವಾಗಿ 2023-24ನೇ ಸಾಲಿನಲ್ಲಿ 5.20 ಲಕ್ಷ ರೂ.ಗಳ ಕ್ರಿಯಾ ಯೋಜನೆ ಸಿದ್ದಪಡಿಸಿ ಪುರುಷ ಹಾಗೂ ಹೆಣ್ಣು ಮಕ್ಕಳ ಸುಸಜ್ಜಿತ ಶೌಚಾಲಯಗಳ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.

ಹಾಗಾಗಿ 2024-25ನೇ ಸಾಲಿಗೆ ಕಾಮಗಾರಿ ಪೂರ್ಣಗೊಂಡು, ಈ ಸಾಲಿನಲ್ಲಿ ಆಗಮಿಸಿದ ಮಕ್ಕಳನ್ನು ನೂತನ ಶೌಚಾಲಯಗಳೊಂದಿಗೆ ಸಂತಸದಿಂದ ಸ್ವಾಗತಿಸಲಾಯಿತು.

ನೂತನ ಶೌಚಾಲಯ ಕಂಡ ಮಕ್ಕಳು ಸಂತಸದಿಂದಲೇ ನಮ್ಮ ಶಾಲೆ ಯಾವುದಕ್ಕೂ ಕಮ್ಮಿ ಇಲ್ಲ ಎಂಬಂತೆ ಸಂಭ್ರಮಿಸಿದವು.ಈ ಮೂಲಕ ಮ-ನರೇಗಾ ಯೋಜನೆ ಅನುಷ್ಠಾನ ಸದ್ದಿಲ್ಲದೆ ತನ್ನ ಸಾಧನೆ ಮಾಡಿ ತೋರಿಸಿದೆ.

ಸರ್ಕಾರಿ ಶಾಲೆಗಳತ್ತ ಮಕ್ಕಳು ಬರುವುದಿಲ್ಲ ಎನ್ನುವ ಮೊದಲು ಶಾಲೆಯಲ್ಲಿ ಮಕ್ಕಳಿಗೆ ಖಾಸಗಿ ಶಾಲೆಯ ಮಾದರಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಈ ದಿಸೆಯಲ್ಲಿ ಮ-ನರೇಗಾ ನಮ್ಮ ಶಾಲೆಯಲ್ಲಿ 30 ಮಂದಿ ಮಕ್ಕಳಿದ್ದು, ಈಗ ಶೌಚಾಲಯದಲ್ಲಿ ಹೊಸ ಹೆಜ್ಜೆ ಇರಿಸಿರುವುದು ಸಂತಸ ತಂದಿದೆ ಎಂದು
ಶಾಲೆಯ ಮುಖ್ಯಶಿಕ್ಷಕ ರಾಮು ತಿಳಿಸಿದರು.

ಶಾಲಾ ಮುಖ್ಯ ಶಿಕ್ಷಕಿಯವರು ಇಲ್ಲಿನ ಸಮಸ್ಯೆ ತಿಳಿಸಿದಾಗ ಮ-ನರೇಗಾ ಯೋಜನೆ ಬಗ್ಗೆ ಮನವರಿಕೆ ಮಾಡಿಕೊಟ್ಟು ಕಾಮಗಾರಿ ಪ್ರಾರಂಭಿಸಿ ಈಗ ಮಕ್ಕಳಿಗೆ ಹೊಸ ಶೌಚಾಲಯ ಸಿಕ್ಕಿರುವುದು ಎಲ್ಲರಿಗೂ ಖುಷಿಯಾಗಿದೆ. ಶಾಲಾ ಶೌಚಾಲಯ, ಕಾಂಪೌಂಡ್ ಹಾಗೂ ಕಟ್ಟಡದಲ್ಲಿಯೂ ನರೇಗಾ ಅನುದಾನ ಬಳಕೆ ಮಾಡಿಕೊಂಡು ಶಾಲೆಗಳ ಅಭಿವೃದ್ಧಿ ಸಾಧಿಸಬಹುದು ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದು, ತಿ.ನರಸೀಪುರ ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಅನಂತರಾಜು ಪಿ.ಎಸ್ ಹೆಮ್ಮೆ ಪಟ್ಟರು.

ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್. ಯುಕೇಶ್ ಕುಮಾರ್ ಅವರು ಕೂಡಾ
ಜಿಲ್ಲೆಯಲ್ಲಿ ಮ-ನರೇಗಾ ಕಾರ್ಯ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಹೇಳಿದರು.

ಅನೇಕ ಶಾಲೆಗಳಲ್ಲಿ ಕಟ್ಟಡ ಸಮಸ್ಯೆಗಳಿದ್ದು, ನರೇಗಾ ಮೂಲಕ ನಿವಾರಿಸಿಕೊಳ್ಳಲು ಆಯಾ ಶಿಕ್ಷಕರು ಹಾಗೂ ಪಂಚಾಯಿತಿ ಅಧಿಕಾರಿಗಳು ಮುಂದೆ ಬಂದರೆ ಸರ್ಕಾರಿ ಶಾಲೆಗಳು ತಾನಾಗಿಯೇ ಅಭಿವೃದ್ಧಿ ಕಾಣಲಿವೆ,ಇಂತಹ ಅಭಿವೃದ್ಧಿ ಕಾರ್ಯಕ್ಕೆ ಮ-ನರೇಗಾ ಯೋಜನೆ ಮುಕ್ತವಾಗಿದೆ ಎಂದು ತಿಳಿಸಿದರು.

ಮ-ನರೇಗಾ ನೆರವಲ್ಲಿ ನೂತನ ಶೌಚಾಲಯನಿರ್ಮಿಸಿ ಮಕ್ಕಳಿಗೆ ಸ್ವಾಗತ! Read More