ದೇವಾಲಯಗಳ ಜೀರ್ಣೋದ್ಧಾರ ಕಾಮಗಾರಿ ವೀಕ್ಷಿಸಿದ ಶಾಸಕ ಮಂಜುನಾಥ್

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಮುಕ್ತಾಯ ಹಂತದಲ್ಲಿರುವ ಶಿವನಸಮುದ್ರದ ಸುಪ್ರಸಿದ್ದ ಶ್ರೀ ಜಗನ್ಮೋಹನ ರಂಗನಾಥಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಯನ್ನು ಹನೂರು ಶಾಸಕ ಎಂ.ಆರ್. ಮಂಜುನಾಥ್‌ ವೀಕ್ಷಿಸಿದರು.

ದೇವಸ್ಥಾನದ ಪಾಕಶಾಲೆ, ದೇವಾಲಯದ ಸುತ್ತ ನೆಲಹಾಸು ಹಾಗೂ ವಿದ್ಯುತ್ ನವೀಕರಣ ಕಾಮಗಾರಿಗಳಿಗೆ ಅಂದಾಜು ಪಟ್ಟಿ ತಯಾರಿಸುವಂತೆ ಪುರಾತತ್ವ ಇಲಾಖೆಗೆ ತಾಕೀತು ಮಾಡಿದರಲ್ಲದೆ ದೇವಾಲಯದ ಸಂಪ್ರೋಕ್ಷಣೆಗೆ ದಿನಾಂಕ ನಿಗದಿ ಪಡಿಸಿ ಎಂದು ಅರ್ಚಕರಿಗೆ ಸೂಚಿಸಿದರು.

ಪ್ರವಾಸೋದ್ಯಮ ಇಲಾಖೆಯ ಅನುದಾನ 2.50 ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿರುವ ಜೀರ್ಣೋದ್ಧಾರ ಕಾಮಗಾರಿ ನಿರ್ವಹಣೆಯನ್ನು ಪುರತತ್ವ ಇಲಾಖೆ ವಹಿಸಿಕೊಂಡಿದೆ.

ದೇವಾಲಯದ ನವೀಕರಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಕಾಮಗಾರಿಗೆ ಬಿಡುಗಡೆಯಾಗಿದ್ದ 2.50 ಕೋಟಿ ರೂ. ಅನುದಾನ ಬಳಕೆಯಾಗಿದ್ದು ಪಾಕಶಾಲೆ, ದೇವಾಲಯದ ಆವರಣದ ನೆಲಹಾಸು ಹಾಗೂ ವಿದ್ಯುತ್ ನವೀಕರಣ ಕಾಮಗಾರಿಗಳಷ್ಟೆ ಬಾಕಿ ಇರುವುದರ ಬಗ್ಗೆ ಕೊಳ್ಳೇಗಾಲ ಉಪವಿಭಾಗಾಕಾರಿ ಹಾಗೂ ಸಾಮೂಹಿಕ ದೇವಾಲಯಗಳ ಆಡಳಿತ ಅಧಿಕಾರಿಯೂ ಆಗಿರುವ ಬಿ.ಆರ್. ಮಹೇಶ್ ಅವರು ಶಾಸಕರಿಗೆ ವಿವರಣೆ ನೀಡಿದರು.

ಇನ್ನೇನು ಕಾಮಗಾರಿ ಮುಗಿಯುತ್ತಿದ್ದು ಆದಷ್ಟು ಬೇಗ ದೇವಾಲಯದ ಸಂಪ್ರೋಕ್ಷಣೆಗೆ ಸೂಕ್ತವಾದ ದಿನಾಂಕ ನಿಗದಿ ಪಡಿಸಿಕೊಳ್ಳಿ ಎಂದು ಅರ್ಚಕರಾದ ಶ್ರೀಧರ್ ಆಚಾರ್ ಅವರಿಗೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅರ್ಚಕರು ಕಾರ್ತಿಕ ಮಾಸ ಸೂಕ್ತವಾಗಿದೆ. ಹಾಗಾಗಿ ಕಾರ್ತಿಕ ಮಾಸದಲ್ಲೆ ಕಾರ್ಯಕ್ರಮ ನಡೆಸುವುದು ಒಳ್ಳೆಯದು ಎಂದು ಈ ವೇಳೆ ಶಾಸಕರಿಗೆ ಸಲಹೆ ನೀಡಿದರು.

ಭರದಿಂದ ಸಾಗುತ್ತಿರುವ ರಂಗನಾಯಕಿ ಅಮ್ಮನವರ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ: ಜಗನ್ಮೋಹನ ರಂಗನಾಥ ಸ್ವಾಮಿ ದೇವಸ್ಥಾನದ ಮಗ್ಗುಲಲ್ಲಿರುವ ಸೌಮ್ಯಲಕ್ಷ್ಮಿ(ರಂಗನಾಯಕಿ) ಅಮ್ಮನವರ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಕೂಡಾ ಭರದಿಂದ ಸಾಗಿದೆ.

ಸುಮಾರು 1.25 ಕೋಟಿ ರೂ ವೆಚ್ಚದಲ್ಲಿ ದಾನಿಗಳಾದ ಆಂಧ್ರ ಪ್ರದೇಶದ ಉದ್ಯಮಿ, ಎ.ಎಂ.ಆರ್. ಗ್ರೂಪ್ ವ್ಯವಸ್ಥಾಪಕ ನಿರ್ದೇಶಕರಾದ ಶಿವಕುಮಾರ್ ರೆಡ್ಡಿ ಅವರು ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಯನ್ನು ಕೈಗೊಂಡಿದ್ದು ಕಾಮಗಾರಿ ಮುಕ್ತಾಯ ಹಂತ ತಲುಪಿದೆ. ಈ ಹಿನ್ನೆಲೆಯಲ್ಲಿ ಶಾಸಕ ಮಂಜುನಾಥ್ ಈ ಎರಡೂ ಕಾಮಗಾರಿಗಳನ್ನು ವೀಕ್ಷಿಸಿದರು.

ಈ ವೇಳೆ ಸಾಮೂಹಿಕ ದೇವಾಲಯಗಳ ಕಾರ್ಯನಿರ್ವಹಕ ಅಧಿಕಾರಿ ಸುರೇಶ್ ಅವರು ಶಾಸಕರಿಗೆ ದೇವಾಲಯದ ರೂಪುರೇಷೆಯ ಕುರಿತು ನೀಲನಕ್ಷೆ ತೋರಿಸಿ ವಿವರಣೆ ನೀಡಿದರು.

ಈ ಸಂದರ್ಭದಲ್ಲಿ ಅರ್ಚಕರುಗಳಾದ ಶ್ರೀಧರ್ ಆಚಾರ್ ಮುಖಂಡರುಗಳಾದ ಹನೂರು ಮಂಜೇಶ್, ವಿಜಯ್ ಕುಮಾರ್ ಮತ್ತಿತರರು ಹಾಜರಿದ್ದರು.

ದೇವಾಲಯಗಳ ಜೀರ್ಣೋದ್ಧಾರ ಕಾಮಗಾರಿ ವೀಕ್ಷಿಸಿದ ಶಾಸಕ ಮಂಜುನಾಥ್ Read More

ನಿಗಧಿತ ಜಾಗದಲ್ಲಿ ಹೆಸರು ಮುದ್ರಿಸದೆಕೆಳಗಿನ ಸಾಲಿನಲ್ಲಿ ಮುದ್ರಣ:ಆಹ್ವಾನ ಪತ್ರಿಕೆ ತಿರಸ್ಕರಿಸಿದ ಶಾಸಕ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ,ಏ.7: ಮಠದ ಜೀರ್ಣೋದ್ಧಾರ ಹಾಗೂ ಶತಮಾನೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಶಾಸಕರ ಹೆಸರನ್ನು ನಿಗಧಿತ ಜಾಗದಲ್ಲಿ ಮುದ್ರಿಸದೆ
ಕೆಳಗಿನ ಸಾಲಿನಲ್ಲಿ ಮುದ್ರಿಸಿರುವುದಕ್ಕೆ ಶಾಸಕರು ತೀವ್ರ ಬೇಸರ ವ್ಯಕ್ತಪಡಿಸಿ ಆಹ್ವಾನ ಪತ್ರಿಕೆಯನ್ನೇ ತಿರಸ್ಕರಿಸಿದ ಪ್ರಸಂಗ ನಡೆದಿದೆ.

ಹನೂರು ತಾಲ್ಲೂಕಿನ ಪಿ.ಜಿ. ಪಾಳ್ಯ ಗ್ರಾಮದ ಶ್ರೀ ಗುರುಮಲ್ಲೇಶ್ವರ ಭಿಕ್ಷದ ದಾಸೋಹ ಹಳೇ ಮಠದ ಜೀರ್ಣೋದ್ಧಾರ ಹಾಗೂ ಶತಮಾನೋತ್ಸವ ಕಾರ್ಯಕ್ರಮ ಇದೇ ಏ. 17 ಹಾಗೂ 18 ರಂದು ನಡೆಯಲಿದೆ.

ಶಿಷ್ಟಾಚಾರದ ಪ್ರಕಾರ ಹನೂರು ಶಾಸಕ ಎಂ.ಆರ್. ಮಂಜುನಾಥ್‍ ಅವರ ಹೆಸರನ್ನು ನಿಗಧಿತ ಸ್ಥಳದಲ್ಲಿ ಮುದ್ರಿಸದೆ ಕೆಳಗಿನ ಸಾಲಿನಲ್ಲಿ ಮುದ್ರಿಸಿ ರುವುದಕ್ಕೆ ಶಾಸಕರು ತೀವ್ರ ಬೇಸರ ವ್ಯಕ್ತಪಡಿಸಿ ಆಹ್ವಾನ ಪತ್ರಿಕೆಯನ್ನು ತಿರಸ್ಕರಿಸಿದರು.

ತಾಲ್ಲೂಕಿನ ಸತ್ತೇಗಾಲ ಗ್ರಾಮದಲ್ಲಿ ಶಾಸಕ ಎಂ.ಆರ್. ಮಂಜುನಾಥ್‍ ಅವರು ರೈತರ ಸಭೆ ನಡೆಸುತ್ತಿದ್ದರು.ಈ ಬಗ್ಗೆ ಮಾಹಿತಿ ಅರಿತು ಪಿಜಿ ಪಾಳ್ಯ ಗ್ರಾಮದ ಮುಖಂಡರು ಶಾಸಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಬಂದಿದ್ದರು.

ಶಾಸಕರನ್ನು ಭೇಟಿ ಮಾಡಿ ಆಹ್ವಾನ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಬರುವಂತೆ ಕೋರಿದರು, ಈ ವೇಳೆ ಶಾಸಕ ಮಂಜುನಾಥ್ ಆಹ್ವಾನ ಪತ್ರಿಕೆಯನ್ನು ತೆರೆದು ನೋಡಿ ತೀವ್ರ ಬೇಸರಪಟ್ಟರು.

ಏ.18ರಂದು ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯ ಸುತ್ತೂರು ಮಠದ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳು, ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಹಣಾ ಸ್ವಾಮಿಗಳು, ಕುದುರು ಮಠದ ಶ್ರೀ ಗುರು ಶಾಂತ ಸ್ವಾಮಿಗಳು, ಶ್ರೀರಂಗಪಟ್ಟಣದ ಬೇಬಿ ಮಠದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿಗಳು, ಸಾಲೂರು ಬೃಹನ್ ಮಠದ ಡಾ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು, ಗುಂಡ್ಲುಪೇಟೆ ಚಿಕ್ಕತುಪ್ಪೂರು ಶಿವಪೂಜಾ ಮಠದ ಶ್ರೀ ಚೆನ್ನವೀರ ಸ್ವಾಮಿಗಳು ಸೇರಿದಂತೆ ಹರಗುರು ಚಿರಮೂರ್ತಿಗಳು ಭಾಗವಹಿಸಲಿದ್ದಾರೆ.

ಮುಖ್ಯ ಅತಿಥಿಗಳ ಪಟ್ಟಿಯ ಮೊದಲನೇ ಸಾಲಿನಲ್ಲಿ ಅಖಿಲ ಭಾರ ವೀರಶೈವ ಲಿಂಗಾಯಿತ ಮಹಾಸಭಾ ರಾಜ್ಯಧ್ಯಕ್ಷರಾದ ಶ್ರೀ ಶಂಕರ ಮಹದೇವ ಬಿದರಿ, ಗುಂಡ್ಲುಪೇಟೆ ಶಾಸಕರಾದ ಶ್ರೀ ಗಣೇಶ್ ಪ್ರಸಾದ್ ಅವರ ಹೆಸರನ್ನು ಮುದ್ರಿಸಲಾಗಿದೆ. ನಂತರ ಹನೂರು ಕ್ಷೇತ್ರದ ಬಿಜೆಪಿ ಮುಖಂಡ ಶ್ರೀ ನಿಶಾಂತ್ ಅವರು ತದನಂತರ ಕ್ಷೇತ್ರದ ಹಾಲಿ ಶಾಸಕ ಎಂ.ಆರ್. ಮಂಜುನಾಥ್ ಅವರ ಹೆಸರು ಉಳಿದಂತೆ ಮಾಜಿ ಶಾಸಕರುಗಳು ಮುಖಂಡರುಗಳ ಹೆಸರುಗಳನ್ನು ಮುದ್ರಿಸಲಾಗಿದೆ.

ಇದರಿಂದ ಅಸಮಾಧಾನಗೊಂಡ ಶಾಸಕರು ಯಾರು ಎಷ್ಟೇ ದೇಣಿಗೆ ನೀಡಿದರು ನಾನು ನಿಮ್ಮ ಕ್ಷೇತ್ರದ ಶಾಸಕ. ಅವರು ಕೋಟಿ ರೂ ದೇಣಿಗೆ ನೀಡಿದ್ದಾರೆ ಎಂಬ ಉದ್ದೇಶಕ್ಕೆ ಉದ್ದೇಶಪೂರ್ವಕವಾಗಿ ಮೇಲಿನ ಸಾಲಿನಲ್ಲಿ ಅವರ ಹೆಸರನ್ನು ಮುದ್ರಿಸಲಾಗಿದೆ ಎಂಬುದು ನನಗೆ ಮಾಹಿತಿ ಇದೆ. ಶಿಷ್ಟಾಚಾರದ ಪ್ರಕಾರ ಕ್ಷೇತ್ರದ ಶಾಸಕರನ್ನು ಈ ರೀತಿ ಅವಮಾನಿಸುವುದು ಸರಿಯಲ್ಲ ನಿಮ್ಮ ಶಾಸಕರನ್ನು ನೀವೇ ಅವಮಾನಿಸಿಕೊಂಡಂತೆ ನೀವು ನನಗೆ ಮತ ಹಾಕಿ ಅಥವಾ ಹಾಕದಿರಿ ನೀವು ನನ್ನ ಮತದಾರರು, ನಾನು ನಿಮ್ಮ ಶಾಸಕ, ನಿಮ್ಮ ಶಾಸಕರನ್ನು ನೀವೇ ಅವಮಾನಿಸಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳುವುದಿಲ್ಲ, ಬರುತ್ತೇನೆ ಆದರೆ ಆಹ್ವಾನ ಪತ್ರಿಕೆಯನ್ನು ಸರಿಪಡಿಸಿ ಇಲ್ಲದಿದ್ದರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಇವರ ಬೇಸರ ವ್ಯಕ್ತಪಡಿಸಿ ಆಹ್ವಾನ ಪತ್ರಿಕೆಯನ್ನು ಹಿಂದಿರುಗಿಸಿದರು.

ಈ ವೇಳೆ ಆಹ್ವಾನಿಸಲು ಬಂದಿದ್ದ ಮುಖಂಡರು ಮರು ಮಾತನಾಡದೆ ಆಹ್ವಾನ ಪತ್ರಿಕೆಯನ್ನು ವಾಪಸ್ ಪಡೆದು ಅಲ್ಲಿಂದ ಹಿಂತಿರುಗಿದರು.

ಇದೇ ವೇಳೆ ಗ್ರಾಮಸ್ಥರು ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯ ಗುಂಡಿಗಳನ್ನು ಮುಚ್ಚಿಸುವಂತೆ ಮನವಿ ಮಾಡಿದರು ಇದಕ್ಕೆ ಸ್ಪಂದಿಸಿದ ಶಾಸಕರು ನಿಮ್ಮ ಕೆಲಸ ಏನೇ ಇದ್ದರೂ ಸಂತೋಷವಾಗಿ ಮಾಡುತ್ತೇವೆ ಎಂದು ಸ್ಥಳದಲ್ಲೇ ಇದ್ದ ಲೋಕೋಪಯೋಗಿ ಇಲಾಖೆ ಜೆ ಇ ಸುರೇಂದ್ರರವರನ್ನು ಕರೆದು ಕೂಡಲೇ ರಸ್ತೆಯ ಗುಂಡಿಗಳನ್ನು ಮುಚ್ಚಿಸುವಂತೆ ತಾಕೀತು ಮಾಡಿದರು.

ನಿಗಧಿತ ಜಾಗದಲ್ಲಿ ಹೆಸರು ಮುದ್ರಿಸದೆಕೆಳಗಿನ ಸಾಲಿನಲ್ಲಿ ಮುದ್ರಣ:ಆಹ್ವಾನ ಪತ್ರಿಕೆ ತಿರಸ್ಕರಿಸಿದ ಶಾಸಕ Read More

ಅಂತರ್ಜಲ ಇದ್ದರೂ ನೀರು ಕೊಡಲಾಗುತ್ತಿಲ್ಲ-ಶಾಸಕ ಎಂ.ಆರ್. ಮಂಜುನಾಥ್ ವಿಷಾದ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ,ಏ.7: ಬೇರೆ ಜಿಲ್ಲೆಯವರು ಸಾವಿರಾರು ಕೋಟಿ ಹಣ ತಂದು ಇಲ್ಲಿಂದ ನೀರು ತೆಗೆದುಕೊಂಡು ಹೋಗಿ ನೀರಾವರಿ ಕಲ್ಪಿಸಿಕೊಂಡು ಬೆಳೆ ಬೆಳೆಯುತ್ತಾರೆ ಆದರೆ ಇಲ್ಲಿ ಹತ್ತಿರದಲ್ಲೇ ನೀರು ಹರಿಯುತ್ತಿದ್ದರು ಏಕೆ ನೀರು ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಹನೂರು ಶಾಸಕ ಎಂ.ಆರ್. ಮಂಜುನಾಥ್
ಪ್ರಶ್ನಿಸಿದ್ದಾರೆ.

ತಾಲ್ಲೂಕಿನ ಸತ್ತೇಗಾಲ ಗ್ರಾಮದ ಪ್ರೌಢಶಾಲಾ ಆವರಣದಲ್ಲಿ ನೀರಾವರಿ ಇಲಾಖೆ ಏರ್ಪಡಿಸಿದ್ದ ಧನಗೆರೆ ಜಹಗೀರ್ ದಾರ್ ನಾಲೆ, ಸತ್ತೇಗಾಲ ಏತ ನೀರಾವರಿ ಹಾಗೂ ಸರಗೂರು ಅಚ್ಚುಕಟ್ಟು ವ್ಯಾಪ್ತಿಯ ರೈತರ ಹಿತಾಸಕ್ತಿ ಸಭೆಯಲ್ಲಿ ರೈತರ ಅಭಿಪ್ರಾಯಗಳನ್ನು ಆಲಿಸಿ ನಂತರ ಶಾಸಕರು ಮಾತನಾಡಿದರು.

ಇದುವರೆಗೆ ಕಬಿನಿ ಇಲಾಖೆಯಲ್ಲಿ ಕಾರ್ಯಪಾಲಕ ಅಭಿಯಂತರರು ಇರಲಿಲ್ಲ. ಆ ಜವಾಬ್ದಾರಿಯನ್ನು ಎಇಇ ಗಳಾದ ರಾಮಕೃಷ್ಣ ಹಾಗೂ ರಮೇಶ್ ನೋಡಿಕೊಳ್ಳುತ್ತಿದ್ದರು ಈಗ ಕಾರ್ಯಪಾಲಕ ಅಭಿಯಂತರರಾಗಿ ಈರಣ್ಣರವರು ಬಂದಿದ್ದಾರೆ.

ನಾನು ಪ್ರತಿ ಭಾರಿ ಇಲ್ಲಿಗೆ ಬಂದಾಗಲೂ ನಾಲೆ ದುರಸ್ತಿ ಪಡಿಸಿ ಕೊಡುವಂತೆ ಒತ್ತಾಯ ಕೇಳಿ ಬರುತ್ತಿತ್ತು ಆದರೂ ಇದು ಜವಾಬ್ದಾರಿ ಕೆಲಸ. ಬೇರೆ ಜಿಲ್ಲೆಯವರು ಸಾವಿರಾರು ಕೋಟಿ ಹಣ ತಂದು ಇಲ್ಲಿಂದ ನೀರು ತೆಗೆದುಕೊಂಡು ಹೋಗಿ ನೀರಾವರಿ ಕಲ್ಪಿಸಿಕೊಂಡು ಬೆಳೆ ಬೆಳೆಯುತ್ತಾರೆ ಆದರೆ ಇಲ್ಲಿ ಹತ್ತಿರದಲ್ಲಿ ನೀರು ಹರಿಯುತ್ತಿದ್ದರು ಏಕೆ ನೀರು ಕೊಡಲು ಸಾಧ್ಯವಾಗುತ್ತಿಲ್ಲ,ಇದು ಮದುವೆ ಮನೆಯಲ್ಲಿ ಗಂಜಿಗೆ ಅತ್ತಂತಾಗಿದೆ ಇಲ್ಲಿನ ಸ್ಥಿತಿ‌ ಎಂದು ‌ಬೇಸರ ಪಟ್ಟರು.

ಈ ಹೋಬಳಿಯ ರೈತರಿಗೆ ನೀರು ಕೊಡುವುದು ಸುಲಭ. ಈ ಜ್ವಲಂತ ಸಮಸ್ಯೆಗಳನ್ನು ನಿಮ್ಮ ಮುಂದೆ ಕುಳಿತು ಪರಿಹರಿಸಲು ಬಂದಿದ್ದೇನೆ ಕಾಲಾವಕಾಶ ಕೊಡಿ ವರ್ಷಕ್ಕೆ ಎರಡು ಬೆಳೆ ಬೆಳೆಯುವಂತಹ ಕೆಲಸ ಮಾಡುತ್ತೇನೆ. ಇದರಿಂದ ಧನಗೆರೆ ಜಹಗೀರ್ ದಾರ್ ನಾಲೆಯ 6060 ಎಕರೆ, ಸತ್ತೇಗಾಲ ಏತ ನೀರಾವರಿಯ 500 ಎಕರೆ ಹಾಗೂ ಸರಗೂರು ಅಚ್ಚುಕಟ್ಟು ವ್ಯಾಪ್ತಿಯ 450 ಎಕರೆ ರೈತರ ಕುಟುಂಬಗಳಿಗೆ ಅನುಕೂಲ ವಾಗಲಿದೆ ಎಂದು ಹೇಳಿದರು.

ಆದರೆ ಹನೂರು ಕ್ಷೇತ್ರದ ಉಳಿದ ಹೋಬಳಿಗಳ ರೈತರ ಜಮೀನುಗಳಿಗೆ ನೀರು ತೆಗೆದುಕೊಂಡು ಹೋಗುವುದು ದುಸ್ಥರ. ಕೃಷಿಗೆ ನೀರಿಲ್ಲದೆ ಈಗಾಗಲೇ ಶೇಕಡ 30 ರಷ್ಟು ರೈತರು ಗುಳೆ ಹೋಗಿದ್ದಾರೆ, ಒಟ್ಟಾರೆ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳಿಗೆ 52 ಕೋಟಿ ಅನುದಾನ ಬಂದಿದೆ. ಅದನ್ನು ಅನುಮೋದನೆ ಮಾಡಿಸಿ ಹಣ ಬಿಡುಗಡೆ ಮಾಡಿಸಲು ಕ್ರಮವಹಿಸುತ್ತೇನೆ. 52 ಕೋಟಿ ರೂ.ಗಳಿಗೆ ಡಿ.ಪಿ.ಆರ್ ಮಾಡದೆ ಆಗಲೇ ಎರಡು ಕೋಟಿ ಅನುದಾನ ತಂದಿದ್ದೆ ಎಂದರು.

ನೀರಿನ ಲಭ್ಯತೆಗೆ ದಾರಿ ಹುಡುಕುತ್ತೇನೆ ಆದರೆ ಅದನ್ನು ಅನುಷ್ಠಾನಕ್ಕೆ ತರುವ ಕೆಲಸ ವಾಗಬೇಕಿದೆ. ಇಲ್ಲಿ ಕನಿಷ್ಠ ಅಂತರ್ಜಲವಿದ್ದು, ಹೆಚ್ಚು ಕೆಲಸವಾಗಬೇಕು, ಸ್ಥಳಗಳನ್ನು ಗುರುತು ಮಾಡಿಕೊಂಡಿದ್ದೇನೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ಮುಂದಿನ ವರ್ಷದೊಳಗೆ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕ ಮಂಜುನಾಥ್ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಕಬಿನಿ ಕಚೇರಿಯಲ್ಲಿ ಸಭೆ ಕರೆಯಲು ಚರ್ಚಿಸಲು ಅವಕಾಶ ಮಾಡಿಕೊಡಿ,ಇವೇ ಮುಂತಾದ ಬೇಡಿಕೆಗಳನ್ನು ರೈತರು ಶಾಸಕರ ಮುಂದಿಟ್ಟರು.

ಮಾರಮ್ಮ ದೇವಸ್ಥಾನದಿಂದ ಕಾವೇರಿ ನದಿ ಹೋಗುವ ರಸ್ತೆ ತೀರಾರ ಹದಗೆಟ್ಟಿದ್ದು ಕೂಡಲೇ ದುರಸ್ತಿಯಾಗಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಸಿದ ಶಾಸಕರು 3.20 ಕೋಟಿ ರೂ ಗಳಿಗೆ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.
 
ಕಬಿನಿ ಕಾರ್ಯಪಾಲಕ ಅಭಿಯಂತರ ಈರಣ್ಣ ಮಾತನಾಡಿ ಎಲ್ಲಾ ಅರ್ಜಿಗಳನ್ನು ಪರಿಶೀಲನೆ ಮಾಡುತ್ತೇವೆ. ಶೇಕಡ 75 ರಷ್ಟು ಇಲ್ಲಿ ಒಣ ಭೂಮಿ ಇದೆ ಶೇ. 35 ರಿಂದ 40 ರಷ್ಟು ರೈತರು ಗುಳೆ ಹೋಗಿದ್ದಾರೆ ಅವರುಗಳನ್ನು ಕರೆತಂದು ಮತ್ತೆ ರೈತರಿಂದ ಪುನರ್ ಕೃಷಿ ಸ್ಥಾಪಿಸುವ ನಿಟ್ಟಿನಲ್ಲಿ ಕ್ರಮ ವಹಿಸುತ್ತೇವೆ ಎಂದು ತಿಳಿಸಿದರು.

ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷ ಎಂ.ಮಲ್ಲೇಶ್, ಉಪಾಧ್ಯಕ್ಷೆ ಸುವರ್ಣ, ಸದಸ್ಯರಾದ ದೇವಿಕಾ, ಕವಿತಾ, ಗೋವಿಂದ, ಶಾಂತಕುಮಾರಿ, ಚಿಕ್ಕರವಳಿ, ಕಾಂತಣ್ಣ, ಕಬಿನಿ ಇಲಾಖೆ ಕಾರ್ಯಪಾಲಕ ಅಬಿಯಂತರ  ಈರಣ್ಣ,ಸಹಾಯಕ ಕಾರ್ಯಪಾಲಕ ಅಬಿಯಂತರರುಗಳಾದ ರಾಮಕೃಷ್ಣ, ರಮೇಶ್, ಜಿ.ಪಂ. ಎಇಇ ಹಾಗೂ ಕೆ.ಆರ್.ಎ.ಡಿ.ಎಲ್ ಎಇಇ ಚಿಕ್ಕಲಿಂಗಯ್ಯ ಸತ್ತೇಗಾಲ ಪಿಡಿಒ ಜುನೈದ್ ಅಹಮದ್, ಧನಗೆರೆ ಪಿಡಿಒ ಕಮಲ್ ರಾಜು, ಮತ್ತಿತರರು ಪಾಲ್ಗೊಂಡಿದ್ದರು.

ಅಂತರ್ಜಲ ಇದ್ದರೂ ನೀರು ಕೊಡಲಾಗುತ್ತಿಲ್ಲ-ಶಾಸಕ ಎಂ.ಆರ್. ಮಂಜುನಾಥ್ ವಿಷಾದ Read More