ಹೆಣ್ಣುಮಕ್ಕಳಿಗೆ ಕಾನೂನು ಅರಿವು ಅಗತ್ಯ:ತಿಮ್ಮಯ್ಯ ಅಭಿಮತ
ಮೈಸೂರು: ಹೆಣ್ಣುಮಕ್ಕಳು ಕಾನೂನು ಅರಿವು ಪಡೆಯುವುದು ಅಗತ್ಯವಿದೆ ಎಂದು
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಹಾಗು ಒಂದನೇ ಅಪರ ಜಿಲ್ಲಾ ಸರ್ಕಾರಿ ವಕೀಲ ಎ.ಜಿ.ತಿಮ್ಮಯ್ಯ ಅಭಿಪ್ರಾಯಪಟ್ಟರು
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ವಿದ್ಯಾರ್ಥಿನಿಲಯದಲ್ಲಿ ಹಿರಿಯ ವಿದ್ಯಾರ್ಥಿಗಳು, ಪ್ರಥಮ ಪದವಿ ತರಗತಿ ವಿದ್ಯಾರ್ಥಿಗಳಿಗೆ ಶನಿವಾರ ಆಯೋಜಿಸಿದ್ದ ಫ್ರೆಶರ್ಸ್ ದಿನ ಆಚರಣೆ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಾಮಾಜಿಕ ಜಾಲತಾಣ ಮತ್ತು ತಂತ್ರಜ್ಞಾನದ ಬಳಕೆ ಹೆಚ್ಚಾದಂತೆ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯದಂತಹ ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿವೆ. ಇದಕ್ಕೆಹಲವಾರು ಕಾರಣಗಳಿವೆ, ಅವನ್ನು ತಡೆಯುವ ಅಗತ್ಯ ಇದೆ ಹಾಗಾಗಿ ಹೆಣ್ಣುಮಕ್ಕಳು ಕಾನೂನು ಅರಿವು ಪಡೆದುಕೊಂಡರೆ ಅವನ್ನು ಕಾನೂನಾತ್ಮಕವಾಗಿ ಎದುರಿಸಬಹುದು ಎಂದು ತಿಳಿಸಿದರು.
ದೈನಂದಿನ ಬದುಕಿನ ಪ್ರತೀ ಹಂತದಲ್ಲಿಯೂ ಒಂದಲ್ಲಾ ಒಂದು ರೀತಿ ಹೆಣ್ಣುಮಕ್ಕಳ ಮೇಲೆ ಅಸಹನೆ ಹೆಚ್ಚು. ಅವನ್ನು ಮೆಟ್ಟಿ ನಿಲ್ಲಲು ಕಾನೂನು ತಿಳಿದುಕೊಳ್ಳಿ ಎಂದು ಹೇಳಿದರು.
ಅಕಾಡೆಮಿಕ್ ಆಗಿ ಅಭ್ಯಾಸ ಮಾಡಿ ಪರೀಕ್ಷೆ ಪಾಸು ಮಾಡುವುದು ಕೆಲಸ ಪಡೆಯಲು. ಆದರೆ, ಕಾನೂನು ಅರಿವು ಕೆಡುಕಿನ ಮನಸ್ಥಿತಿಯ ಜನರನ್ನು ಎದುರಿಸಿ ಬದುಕನ್ನು ಹಸನು ಮಾಡಿಕೊಳ್ಳಲಲು ಸಹಕಾರಿ ಎಂದು ಹೇಳಿದರು.
ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕರಾದ ಡಾ. ಪ್ರತಿಮಾ ಡಿ. ಎಸ್ ಅವರು,ಜೀವನದಲ್ಲಿ ಸಾಧನೆ ಮುಖ್ಯ. ಸಾಧನೆಗೆ ಅಧ್ಯಯನ ಮುಖ್ಯ. ಹಾಗಾಗಿ, ಓದಿನ ಕಡೆ ಗಮನಹರಿಸಿ ಎಂದು ಸಲಹೆ ನೀಡಿದರು.
ಜೀವನದಲ್ಲಿ ಗುರಿ ಇರಬೇಕು. ಅದನ್ನು ತಲುಪಲು ಶಿಸ್ತು ಪಾಲನೆ ಅಗತ್ಯ. ಶಿಸ್ತು ಪಾಲನೆ ಒಂದು ಜವಾಬ್ದಾರಿ. ಹಾಗಾಗಿ ಎಲ್ಲರೂ ಜವಾಬ್ದಾರಿಯಿಂದ ಇರುವುದು ಅಗತ್ಯವಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾoಶುಪಾಲ ಪ್ರೊ. ಅಬ್ದುಲ್ ರಹಿಮಾನ್ ಎಂ ಅವರು, ಸರ್ಕಾರಿ ಸೌಲಭ್ಯ ಬಳಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಿ ಹಾಗೂ ಮರಳಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಿ ಎಂದು ಸಲಹೆ ನೀಡಿದರು.
ವಿದ್ಯಾರ್ಥಿನಿಲಯ ಸಮಿತಿಯ ಸದಸ್ಯರಾದ ಡಾ.ಸಿ.ದಾಕ್ಷಾಯಿಣಿ ಹಾಗು ಸಹ ಪ್ರಾಧ್ಯಾಪಕ ಗೋವಿಂದರಾಜು ಮಾತನಾಡಿದರು.
ಇದೇ ಸಂದರ್ಭದಲ್ಲಿ ಅತಿಥಿಗಳನ್ನು ಸನ್ಮಾನಿಸಲಾಯಿತು.
ತೃತೀಯ ಪದವಿಯ ಅನನ್ಯ ಎಂ. ಸ್ವಾಗತಿಸಿದರು, ಹರ್ಷಿತ
ವಂದಿಸಿದರು,ಸಹನಾ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ತೃತೀಯ ಮತ್ತು ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿಗಳು ನೃತ್ಯ, ಹಾಡುಗಾರಿಕೆ ಸೇರಿದಂತೆ ಹಲವಾರು ಮನೋರಂಜನೆ ಕಾರ್ಯಕ್ರಮ ನಡೆಸಿಕೊಟ್ಟರು.
ಸಮಾರಂಭದಲ್ಲಿ ನಿಲಯಪಾಲಕಿ ಪದ್ಮ ಸಿ, ಸಿಬ್ಬಂದಿ ದಾಕ್ಷಾಯಿಣಿ
ಬೇಬಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.


