ಅ.17 ರಂದು ಮೈಸೂರಲ್ಲಿ ಬೃಹತ್ ಉದ್ಯೋಗ ಮೇಳ: 221 ಕಂಪನಿ ಭಾಗಿ

ಮೈಸೂರು: ಮೈಸೂರು ಜಿಲ್ಲೆಯ ಮಹಾರಾಜ ಕಾಲೇಜು‌ ಮೈದಾನದಲ್ಲಿ ಅಕ್ಟೋಬರ್ 17 ರಂದು ಮೈಸೂರು ವಿಭಾಗ ಮಟ್ಟದ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.

ಇದರಲ್ಲಿ ಭಾಗವಹಿಸಲು ಈಗಾಗಲೇ 24000 ಅಭ್ಯರ್ಥಿಗಳು ನೊಂದಣಿ ಮಾಡಿಕೊಂಡಿದ್ದಾರೆ. 221 ಕಂಪನಿಗಳು ಭಾಗವಹಿಸಲಿವೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ: ಶರಣಪ್ರಕಾಶ್ ಪಾಟೀಲ್ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಅವರು ಮಾತನಾಡಿದರು.

ಉದ್ಯೋಗ ಮೇಳದಲ್ಲಿ ಭಾಗವಹಿಸಲು ಹಾಗೂ ನೇರವಾಗಿ ಕಾರ್ಯಕ್ರಮದ ದಿನದಂದು ಆಗಮಿಸಿ ಹೆಸರು ನೊಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ, ರಾಜ್ಯಾದ್ಯಾಂತ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಇಚ್ಛಿಸುವವರು https://udyogamela.ksdckarnataka.com ವೆಬ್ಸೈಟ್ ನಲ್ಲಿ ಹೆಸರು ನೊಂದಾಯಿಸಿಕೊಳ್ಳಬಹುದು‌. ಹೆಚ್ಚಿನ ಅಭ್ಯರ್ಥಿಗಳು ಭಾಗವಹಿಸಿ ಉದ್ಯೋಗ ಮೇಳವನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಕರೆ ನೀಡಿದರು.

ಉದ್ಯೋಗ ಮೇಳದಲ್ಲಿ 221 ಕಂಪನಿಗಳು ಭಾಗವಹಿಸಲು ಹೆಸರು ನೊಂದಾಯಿಸಿಕೊಂಡಿದ್ದು, ಸ್ಥಳೀಯ ಕಂಪನಿಗಳು ಸಹ ಹೆಸರು ನೊಂದಾಯಿಸಿಕೊಳ್ಳಲಿವೆ. ಉದ್ಯೋಗದಾತರು ಸುಮಾರು 45000 ಉದ್ಯೋಗ ಖಾಲಿ ಇರುವುದಾಗಿ ಮಾಹಿತಿ ನೀಡಿದ್ದಾರೆ,
ಅಭ್ಯರ್ಥಿಗಳ ಕೌಶಲ್ಯಗಳ ಮೇಲೆ ಕಂಪನಿಗಳು ಆಯ್ಕೆ ಮಾಡಿಕೊಳ್ಳಲಿದೆ. ಹೆಸರು ನೊಂದಾಯಿಸಿಕೊಂಡು ಉದ್ಯೋಗ ಮೇಳದಲ್ಲಿ ಭಾಗವಹಿಸಿದ ನಂತರ ಉದ್ಯೋಗ ಸಿಗದೇ ಇರುವ ಅಭ್ಯರ್ಥಿಗಳ ವಿವರವನ್ನು ಸಹ ಪಡೆದುಕೊಂಡು ಅವರಿಗೆ ಬೇಕಿರುವ ಕೌಶಲ್ಯಗಳ ಬಗ್ಗೆ ತರಬೇತಿಯನ್ನು ನೀಡಲಾಗುವುದು. ಇದರಿಂದ ಮುಂದಿನ ದಿನಗಳಲ್ಲಿ ಅವರು ಸಹ ಉದ್ಯೋಗ ಪಡೆದುಕೊಳ್ಳುವುದು ಸುಲಭವಾಗುತ್ತದೆ ಎಂದು ಸಚಿವರು ತಿಳಿಸಿದರು. ಫ

ಯುವನಿಧಿ ಯೋಜನೆಯಡಿ ನೊಂದಣಿಯಾಗಿರುವ ಅಭ್ಯರ್ಥಿಗಳಿಗೆ ಯುವನಿಧಿ ಪ್ಲಸ್ ಯೋಜನೆಯಡಿ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುತ್ತಿದೆ. ಬಹಳಷ್ಟು ಮಂದಿಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿಗೆ ಹೆಸರು ನೊಂದಾಯಿಸಿಕೊಂಡರೆ ಯುವನಿಧಿ ಯೋಜನೆಯಡಿ ನೀಡಲಾಗುತ್ತಿರುವ ನಿರುದ್ಯೋಗ ಭತ್ಯೆ ನಿಂತುಹೋಗುತ್ತದೆ ಎಂಬ ತಪ್ಪು ಕಲ್ಪನೆಯಿದೆ. ಯುವನಿಧಿ ಯೋಜನೆಯಡಿ ತಿಳಿಸಿರುವಂತೆ 2 ವರ್ಷ ಅಥವಾ ಕೆಲಸ ಸಿಗುವವರೆಗೆ ಯಾವುದು ಮೊದಲು ಅಲ್ಲಿಯವರೆಗೆ ನಿರುದ್ಯೋಗ ಭತ್ಯೆ ನೀಡಲಾಗುವುದು. ಯುವನಿಧಿ ಪ್ಲಸ್ ಯೋಜನಯಡಿ ನೀಡಲಾಗುವ ಕೌಶಲ್ಯ ತರಬೇತಿಗೆ ಹೆಚ್ಚು ಅಭ್ಯರ್ಥಿಗಳು ಹೆಸರು ನೊಂದಾಯಿಸಿಕೊಳ್ಳಿ ಎಂದು ಸಲಹೆ ನೀಡಿದರು ‌

ಈ ಹಿಂದೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ನಡೆಸಿದ 6 ಉದ್ಯೋಗ ಮೇಳದಲ್ಲಿ 12966 ಅಭ್ಯರ್ಥಿಗಳು ಉದ್ಯೋಗ ಪಡೆದುಕೊಂಡಿದ್ದಾರೆ. ಕಾಲೇಜುಗಳ ಸಹಯೋಗದೊಂದಿಗೆ ನಡೆಸಿದ 3 ಉದ್ಯೋಗ ಮೇಳದಲ್ಲಿ 1177 ಅಭ್ಯರ್ಥಿಗಳಿಗೆ ಉದ್ಯೋಗ ದೊರಕಿರುತ್ತದೆ‌. ಉದ್ಯೋಗ ಮೇಳದಲ್ಲಿ ಕನಿಷ್ಠ ಹಾಗೂ ಗರಿಷ್ಠ ವಿದ್ಯಾರ್ಹತೆ ಹೊಂದಿರುವವರಿಗೂ ಉದ್ಯೋಗಾವಕಾಶವಿದೆ ಎಂದು ಶರಣ ಪ್ರಕಾಶ ಪಾಟೀಲ್ ತಿಳಿಸಿದರು.

ಯುವನಿಧಿ ಯೋಜನೆಯಡಿ ರಾಜ್ಯಾದ್ಯಂತ 3 ಲಕ್ಷ ಹಾಗೂ ಮೈಸೂರು ವಿಭಾಗದಲ್ಲಿ 43500 ಅಭ್ಯರ್ಥಿಗಳು ಹೆಸರು ನೊಂದಾಯಿಸಿಕೊಂಡಿದ್ದು, ಅವರಿಗೆ ಉದ್ಯೋಗ ಮೇಳದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲಾಗುತ್ತಿದೆ. ಉದ್ಯೋಗ ಮೇಳದಲ್ಲಿ ಭಾಗವಹಿಸುವುದರಿಂದ ಪರೋಕ್ಷವಾಗಿ ಉದ್ಯೋಗಾಕಾಂಕ್ಷಿಗಳು, ಉದ್ಯೋಗದಾತರು, ನೇರ ಸಂಪರ್ಕ ಸಾಧಿಸಬಹುದು. ಯಾವ ತಂತ್ರಜ್ಞಾನ, ಕೌಶಲ್ಯಗಳಿಗೆ ಹೆಚ್ಚು ಬೇಡಿಕೆ ಇದೆ ಎಂಬುದನ್ನು ತಿಳಿದುಕೊಂಡು, ಕೌಶಲ್ಯಗಳನ್ನು ಬೆಳೆಸಿಕೊಳ್ಳಬಹುದು ಎಂದು ಸಚಿವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತ ನಾಯಕ್,‌ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಜಿ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಎನ್ ನಾಗರಾಜ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಅ.17 ರಂದು ಮೈಸೂರಲ್ಲಿ ಬೃಹತ್ ಉದ್ಯೋಗ ಮೇಳ: 221 ಕಂಪನಿ ಭಾಗಿ Read More

ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿ ಬದುಕಿನ ಬಹುಮುಖ್ಯ ಘಟ್ಟ:ಎಂ.ಮರಿಸ್ವಾಮಿ

ಮೈಸೂರು: ತರಬೇತಿಯು ಉಪನ್ಯಾಸಕರನ್ನು ಪರಿಪೂರ್ಣತೆ ಕಡೆಗೆ ಕರೆದೊಯ್ಯಲಿ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರಾದ ಎಂ.ಮರಿಸ್ವಾಮಿ ಆಶಿಸಿದರು.

ಮಹಾರಾಜ ಪದವಿ ಪೂರ್ವ ಕಾಲೇಜಿನಲ್ಲಿ
ಮೈಸೂರು ಪದವಿ ಪೂರ್ವ ಕಾಲೇಜು
ಇತಿಹಾಸ ಮತ್ತು ರಾಜ್ಯಶಾಸ್ತ್ರ ವಿಷಯಗಳ ಉಪನ್ಯಾಸಕರಿಗೆ ಆಯೋಜಿಸಿದ್ದ ಪುನಶ್ಚೇತನ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪದವಿ ಪೂರ್ವ ಶಿಕ್ಷಣವು ವಿದ್ಯಾರ್ಥಿ ಬದುಕಿನ ಬಹುಮುಖ್ಯ ಘಟ್ಟ ವಾಗಿದ್ದು ನೀವು ಅವರ ಜ್ಞಾನ ಮಟ್ಟ ಮತ್ತು ಮನಸ್ಥಿತಿಯನ್ನು ಅರಿತು ಪಾಠ ಮಾಡಬೇಕು.ತರಗತಿಯಲ್ಲಿ ಎಲ್ಲಾ ಮಟ್ಟದ ಕಲಿಕೆಯ ಮಕ್ಕಳಿರುತ್ತಾರೆ ಅವರೆಲ್ಲರನ್ನೂ ಗಮನದಲ್ಲಿಟ್ಟುಕೊಂಡು ಬೋಧಿಸಿದರೆ ನಿರೀಕ್ಷಿತ ಫಲಿತಾಂಶ ಬರುತ್ತದೆ ಎಂದು ಹೇಳಿದರು.

ಇಲಾಖೆಯು ಇಡೀ ರಾಜ್ಯದಲ್ಲಿ ಇಂತಹ ಪುನಶ್ಚೇತನ ಕಾರ್ಯಾಗಾರಗಳನ್ನು ಹಮ್ಮಿಕೊಂಡಿದೆ.ಸರಕಾರಿ ಕಾಲೇಜುಗಳಲ್ಲಿ ಫಲಿತಾಂಶ ಉತ್ತಮವಾದರೆ ಇಂತಹ ಕಾರ್ಯಕ್ರಮಗಳು ಸಾರ್ಥಕವಾಗುತ್ತವೆ. ಇಂತಹ ತರಬೇತಿ ಕಾರ್ಯಕ್ರಮಗಳು ನಿಮ್ಮನ್ನು ಪರಿಪೂರ್ಣತೆಯ ಕಡೆಗೆ ಕರೆದೊಯ್ಯುತ್ತದೆ ಎಂದು ಮರಿಸ್ವಾಮಿ ಅಭಿಪ್ರಾಯ ಪಟ್ಟರು.

ಇತಿಹಾಸ ವೇದಿಕೆಯ ಗೌರವಾಧ್ಯಕ್ಷರಾದ ಎಂ.ಸಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು, ಪ್ರಾಂಶುಪಾಲರ ಸಂಘದ ಅಧ್ಯಕ್ಷರಾರ ಹೆಚ್.ಹೆಚ್.ರಾಜೇಶ್ವರಿ, ಪ್ರಾಂಶುಪಾಲರಾದ ಸುದೀಪ್,ರಮಾನಂದ, ಎನ್.ಉದಯಶಂಕರ್,ಸಂಚಾಲಕರಾದ ಎನ್.ಎಂ.ಶಿವಪ್ರಕಾಶ್,
ಡಾ.ಮಂಗಳ ಮೂರ್ತಿ, ಸಂಪನ್ಮೂಲ ವ್ಯಕ್ತಿ ದೊಡ್ಡ ಬೋರಯ್ಯ,ಎಂ.ಎಲ್.ಉಮೇಶ್ ಉಪಸ್ಥಿತರಿದ್ದರು.

ಜಿಲ್ಲಾ ಇತಿಹಾಸ ವೇದಿಕೆಯ ಅಧ್ಯಕ್ಷರಾದ ಹೆಚ್.ಬಿ.ವಾಸು ಕಾರ್ಯಕ್ರಮ ನಿರೂಪಿಸಿದರು.ಡಾ.ಶಶಿಕಲಾ ಸ್ವಾಗತಿಸಿ, ಮಹದೇವಯ್ಯ ವಂದಿಸಿದರು.

ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿ ಬದುಕಿನ ಬಹುಮುಖ್ಯ ಘಟ್ಟ:ಎಂ.ಮರಿಸ್ವಾಮಿ Read More

ಮಕ್ಕಳು ಕೇವಲ ಪಠ್ಯಕ್ಕೆ ಸೀಮಿತವಾಗದೆ, ಪ್ರತಿಭೆ ಅನಾವರಣಗೊಳಿಸಿ: ಗಾಯತ್ರಿ ಕೆ.ಎಂ

ಮೈಸೂರು: ಮಕ್ಕಳು ಕೇವಲ ಪಠ್ಯ ಕ್ರಮಕ್ಕೆ ಸೀಮಿತವಾಗದೆ, ತಮ್ಮಲ್ಲಿರುವಂತಹ ಪ್ರತಿಭೆಗಳನ್ನು ಅನಾವರಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಾಯತ್ರಿ ಕೆ.ಎಂ ಹೇಳಿದರು.

ಮಹಾರಾಜ ಪದವಿ ಪೂರ್ವ ಕಾಲೇಜಿ (ಪ್ರೌಢಶಾಲಾ ವಿಭಾಗ) ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ, 2024-25 ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಕಾರ್ಯಕ್ರಮವು ಮೂಲೆ ಮೂಲೆಯಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವ ವೇದಿಕೆಯಾಗಿದೆ, ಈ ಸದವಕಾಶವನ್ನು ಬಳಸಿಕೊಂಡು ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಿ ನಮ್ಮ ರಾಜ್ಯಕ್ಕೆ ಕೀರ್ತಿ ತರುವಂತರಾಗಬೇಕು ಎಂದು ಸಲಹೆ ನೀಡಿದರು.

ಹಲವಾರು ಮಕ್ಕಳು ಕೇವಲ ಶಿಕ್ಷಣವೆಂಬುದು ಅಂಕಕ್ಕೆ ಸೀಮಿತವಾಗಿದೆ ಎಂದು ಭಾವಿಸಿ ಅಂಕದ ಕಡೆಗೆ ಗಮನ ನೀಡಿ ಬೇರೆ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ,ಅದು ಸರಿಯಲ್ಲ,ಮಕ್ಕಳ ಒಳಿತಿಗಾಗಿ ಶಿಕ್ಷಕರು ಶಾಲೆಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅವರಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಜಗತ್ತಿಗೆ ಪರಿಚಯಿಸುವ ಕೆಲಸವನ್ನು ಮಾಡುತ್ತಾರೆ ಎಂದು ಹೇಳಿದರು.

ಪ್ರತಿ ಮಕ್ಕಳು ಸೋಲು ಗೆಲುವಿನ ಬಗ್ಗೆ ಯೋಚನೆ ಮಾಡದೆ ಪ್ರಯತ್ನಗಳನ್ನು ಮುಂದುವರಿಸುವುದರ ಕಡೆ ಗಮನಹರಿಸಬೇಕು ಎಂದು ಕಿವಿ ಮಾತು ಹೇಳಿದರು.

ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ(ಆಡಳಿತ)ಎಸ್.ಟಿ ಜವರೇಗೌಡ ಅವರು ಮಾತನಾಡಿ, ಪ್ರತಿಭಾ ಕಾರಂಜಿ ಮಕ್ಕಳಲ್ಲಿರುವ ಪ್ರತಿಭೆ ಅನಾವರಣಗೊಳಿಸುವುದಾಗಿದೆ ಎಂದು ಹೇಳಿದರು.

ಜಿಲ್ಲಾ ಮಟ್ಟದಲ್ಲಿ ಭಾಗವಹಿಸುವ ಪ್ರತಿ ಮಕ್ಕಳಿಗೂ ಆಯಾ ಶಾಲೆಯ ಶಿಕ್ಷಕರು ನಿಯೋಜನೆಗಳನ್ನು ತಮ್ಮ ತಮ್ಮ ಶಾಲೆಗಳಲ್ಲಿ ನೀಡಬೇಕು. ಮಕ್ಕಳು ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು.
ಎಲ್ಲಾ ಮಕ್ಕಳು ರಾಜ್ಯ ಮಟ್ಟಕ್ಕೆ ಹೋಗುವಂತಾಗಲಿ ಎಂದು ಹಾರೈಸಿದರು.

ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕೆ.ಬಿ ಸೋಮೇಗೌಡ ಅವರು ಮಾತನಾಡಿ, ಮಕ್ಕಳು ಹೊರ ಜಗತ್ತಿನ ಬಗ್ಗೆ ತಿಳಿದುಕೊಳ್ಳಬೇಕೆಂಬ ದೃಷ್ಟಿಯಿಂದ ಪ್ರತಿ ವರ್ಷ ಪ್ರತಿಭಾ ಕಾರಂಜಿ ಆಯೋಜಿಸಿ ಹೊಸ ಹೊಸ ಪ್ರತಿಭೆ ಗಳನ್ನು ಜಗತ್ತಿಗೆ ನೀಡುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಎಂ.ಆರ್ ಅನಂತರಾಜು, ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್ ರಾಜು, ನಂಜನಗೂಡಿನ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಮೈಸೂರು ಜಿಲ್ಲಾ ಘಟಕದ ಕ.ರಾ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಕೃಷ್ಣ, ಪ್ರಾಥಮಿಕ ಶಾಲಾ ಮುಖ್ಯೋಪಧ್ಯಾಯರ ಸಂಘದ ಅಧ್ಯಕ್ಷ ದುಂಡಯ್ಯ, ಮಾಧ್ಯಮಿಕ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ.ಸಿ ಕೃಷ್ಣಮೂರ್ತಿ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ (ಗ್ರೇಡ್-2)ಅಧ್ಯಕ್ಷ ರಾಜೇಂದ್ರ ಮತ್ತಿತರರು ಉಪಸ್ಥಿತರಿದ್ದರು.

ಮಕ್ಕಳು ಕೇವಲ ಪಠ್ಯಕ್ಕೆ ಸೀಮಿತವಾಗದೆ, ಪ್ರತಿಭೆ ಅನಾವರಣಗೊಳಿಸಿ: ಗಾಯತ್ರಿ ಕೆ.ಎಂ Read More

ಆಹಾರ ಮೇಳದ ಅಧ್ಯಕ್ಷ, ಉಪಾಧ್ಯಕ್ಷರಿಗೆ ಶುಭ ಕೋರಿದ ಡಾ.ಕಾಂತರಾಜು

ಮೈಸೂರು: ನಾಡಹಬ್ಬ ದಸರಾ 2024ರ ಆಹಾರ ಮೇಳದ ಅಧ್ಯಕ್ಷರಾಗಿ ಕೆಪಿಸಿಸಿ ಸದಸ್ಯ ಜಿ ಶ್ರೀನಾಥ್ ಬಾಬು, ಉಪಾಧ್ಯಕ್ಷರಾಗಿ ನಗರ ಪಾಲಿಕೆ ಮಾಜಿ ಸದಸ್ಯ ರಘುರಾಜ್ ಅರಸ್ ಆಯ್ಕೆಯಾಗಿದ್ದಾರೆ.

ಜಿ ಶ್ರೀನಾಥ್ ಬಾಬು ಮತ್ತು ರಘುರಾಜ್ ಅರಸ್ ಅವರಿಗೆ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಆಹಾರ ಮೇಳದಲ್ಲಿ ಆಹಾರ ಭದ್ರತೆ ಮತ್ತು ಸುರಕ್ಷತೆ ಪ್ರಾಧಿಕಾರ ಜಿಲ್ಲಾ ಅಂಕಿತ ಅಧಿಕಾರಿ ಡಾ ಕಾಂತರಾಜು ಅವರು ಹೂಗೊಚ್ಚ ನೀಡಿ ಶುಭ ಹಾರೈಸಿದರು

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಜಿ ರಾಘವೇಂದ್ರ, ವರುಣ ಮಹಾದೇವ್, ಕಿಶೋರ್ ಕುಮಾರ್, ಮಹಾನ್ ಶ್ರೇಯಸ್, ಸಂತೋಷ್ ಕಿರಾಳು, ಚೇತನ್ ಗೌಡ, ಹರೀಶ್ ನಾಯ್ಡು ಮತ್ತಿತರ ಸದಸ್ಯರು ಹಾಜರಿದ್ದರು.

ಆಹಾರ ಮೇಳದ ಅಧ್ಯಕ್ಷ, ಉಪಾಧ್ಯಕ್ಷರಿಗೆ ಶುಭ ಕೋರಿದ ಡಾ.ಕಾಂತರಾಜು Read More