ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾ ದಾಳಿ

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರಿಗೆ ಬೆಳ್ಳಂಬೆಳಿಗ್ಗೆ ಚಳಿ ಬಿಡಿಸಿದ್ದಾರೆ.

ಬೆಂಗಳೂರು, ಚಿಕ್ಕಮಗಳೂರು,ಶಿವಮೊಗ್ಗ,
ಬೆಳಗಾವಿ ಜಿಲ್ಲೆಗಳಲ್ಲಿ ಲೋಕಾಯುಕ್ತರು ದಾಳಿ ನಡೆಸಿ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ,ದಾಳಿ ವೇಳೆ ಸಿಕ್ಕ ಹಣ,ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.‌

ಚಿಕ್ಕಮಗಳೂರು ನಗರಸಭೆ ನಗರಸಭೆ ಲೆಕ್ಕಾಧಿಕಾರಿ ಲತಾಮಣಿ ನಿವಾಸದ ಮೇಲೆ ದಾಳಿ ನಡೆಸಿದ್ದು ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

ಚಿಕ್ಕಮಗಳೂರು ನಗರದ ಜಯನಗರದಲ್ಲಿ ಲತಾಮಣಿ ಮನೆ ಇದ್ದು ಅವರ ಪತಿ ಚಂದ್ರಶೇಖರ್ ನಿರ್ಮಿತಿ ಕೇಂದ್ರದ ಇಂಜಿನಿಯರ್ ಆಗಿದ್ದಾರೆ.
ಎರಡು ತಂಡಗಳು ದಾಖಲೆ ಪರಿಶೀಲನೆ ಮಾಡುವ ಕಾರ್ಯದಲ್ಲಿ ತೊಡಗಿದೆ.

ಬಿಬಿಎಂಪಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಕಾಶ್ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಒಟ್ಟು ಐದು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಗೋವಿಂದರಾಜನಗರ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಕಾಶ್ ಅವರ ನಾಗರಬಾವಿ, ಗೋವಿಂದರಾಜನಗರ, ಯಲಹಂಕದಲ್ಲಿ ದಾಳಿ ನಡೆಸಲಾಗಿದೆ

ಬೆಳಗಾವಿಯಲ್ಲಿ ಇಂಜಿನಿಯರ ಮನೆ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ.

ಕರ್ನಾಟಕ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಮನೆ ಮೇಲೆ ಲೋಕಾ ದಾಳಿಯಾಗಿದ್ದು,ವಜ್ರಾಭರಣ, ಚಿನ್ನಾಭರಣ, ಬೆಳ್ಳಿ ವಸ್ತುಗಳು ಮತ್ತು ಒಂದೂವರೆ ಲಕ್ಷ ನಗದು ಸಿಕ್ಕಿದೆ.

ಕೆಎ‌ನ್‌ಎನ್ಎಲ್ ಧಾರವಾಡ ವಿಭಾಗದ
ಮುಖ್ಯ ಇಂಜಿನಿಯರ್ ಅಶೋಕ ವಾಸನದ್ ಅವರ ಬೆಳಗಾವಿಯ ರಾಮತೀರ್ಥ‌ ನಗರದಲ್ಲಿರುವ ಮನೆ ಹಾಗೂ ಧಾರವಾಡ ಕಚೇರಿ ಮೇಲೆ‌ ಏಕಕಾಲಕ್ಕೆ ದಾಳಿ ಮಾಡಿ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾ ದಾಳಿ Read More

ಲೋಕಾಯುಕ್ತ ಪೊಲೀಸರಿಂದ ಮುಡಾ ಹಗರಣ ಮುಚ್ಚಿಹಾಕುವ ಪ್ರಯತ್ನ: ಅಶೋಕ

ಬೆಂಗಳೂರು: ಮುಡಾ ಹಗರಣದಲ್ಲಿ ಇ ಡಿ ಆಸ್ತಿಗಳನ್ನು ವಶಪಡಿಸಿಕೊಂಡಿದ್ದರೂ, ಯಾವುದೇ ಕ್ರಮ ಕೈಗೊಳ್ಳದೆ ಈ ಪ್ರಕರಣ ಮುಚ್ಚಿಹಾಕಲು ಲೋಕಾಯುಕ್ತ ಪೊಲೀಸರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರದ ಮುಡಾ ಹಗರಣ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ವಿರುದ್ಧ ಬಿಜೆಪಿ ತೀವ್ರ ಹೋರಾಟ ಮಾಡಿದೆ. ಮುಡಾ ಹಗರಣದಲ್ಲಿ 4-5 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ. ಸಿಎಂ ಸಿದ್ದರಾಮಯ್ಯ14 ಸೈಟು ವಾಪಸ್‌ ನೀಡಿರುವುದರಿಂದ ತಪ್ಪಾಗಿದೆ ಎಂಬುದು ಸಾಬೀತಾಗಿದೆ,ಜಾರಿ ನಿರ್ದೇಶನಾಲಯ ಆಸ್ತಿಗಳನ್ನು ವಶಕ್ಕೆ ಪಡೆದಿದ್ದರೂ, ಲೋಕಾಯುಕ್ತ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಇದರಲ್ಲಿ ಅಧಿಕಾರಿಗಳ ತಪ್ಪು ಎನ್ನಲಾಗುತ್ತಿದೆ ಆದರೆ ಇದರ ಹಿಂದೆ ಸಿಎಂ ಸಿದ್ದರಾಮಯ್ಯ ಇರುವುದನ್ನು ಮುಚ್ಚಿಹಾಕಲಾಗುತ್ತಿದೆ. ಇದರ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಸಲಿದೆ ಎಂದು ಹೇಳಿದರು.

ಲೋಕಾಯುಕ್ತ ಪೊಲೀಸರು ರಾಜ್ಯ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತಾರೆ. ಪೊಲೀಸರಿಗೂ ವರ್ಗಾವಣೆ, ಬಡ್ತಿ ಬೇಕಿರುತ್ತದೆ. ಆದ್ದರಿಂದ ಈ ರೀತಿ ತನಿಖೆ ನಡೆಯುತ್ತಿದೆ, ಪೊಲೀಸರು ವರದಿ ನೀಡಿದರೂ ಅದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಲೀನ್‌ ಚಿಟ್‌ ನೀಡುವುದು ಖಚಿತ ಎಂದು ಅಶೋಕ್ ತಿಳಿಸಿದರು.

ಈ ಪ್ರಕರಣವನ್ನು ಸಿಬಿಐಗೆ ವಹಿಸಿದರೆ ಮಾತ್ರ ನಿಜಾಂಶ ಹೊರಬರಲಿದೆ. ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಎಸ್‌ಐಟಿ ಕ್ಲೀನ್‌ ಚಿಟ್‌ ನೀಡಿರುವಾಗ ಮುಖ್ಯಮಂತ್ರಿಗೆ ಕ್ಲೀನ್‌ ಚಿಟ್‌ ನೀಡುವುದು ಖಚಿತ. ಆದ್ದರಿಂದ ಹೋರಾಟವನ್ನು ಮತ್ತೆ ಆರಂಭಿಸುತ್ತೇವೆ. ತನಿಖೆಯನ್ನು ಸಿಬಿಐಗೆ ವಹಿಸುವವರೆಗೂ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ಪಕ್ಷದಲ್ಲಿ ಗೊಂದಲ ಇರುವುದು ನಿಜ, ಅದನ್ನು ಸರಿಪಡಿಸುವ ಕೆಲಸ ಮಾಡಲಾಗುವುದು, ಶ್ರೀರಾಮುಲು ಅವರೊಂದಿಗೆ ನಾನು ಹಾಗೂ ಬಸವರಾಜ ಬೊಮ್ಮಾಯಿ ಚರ್ಚಿಸಲಿದ್ದೇವೆ. ನಮ್ಮಲ್ಲಿ ಯಾವುದೇ ಟೀಮ್‌ ಇಲ್ಲ, ನಾನು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ವಿರುದ್ಧ ಯಾವುದೇ ದೂರು ನೀಡಿಲ್ಲ ಎಂದು ಅಶೋಕ್ ಸ್ಪಷ್ಟಪಡಿಸಿದರು.

ಲೋಕಾಯುಕ್ತ ಪೊಲೀಸರಿಂದ ಮುಡಾ ಹಗರಣ ಮುಚ್ಚಿಹಾಕುವ ಪ್ರಯತ್ನ: ಅಶೋಕ Read More

ಮಾಧ್ಯಮಗಳೊಂದಿಗೆ ಸಿಟ್ಟಾಗಿ‌ ವರ್ತಿಸಿದ ಡಿ.ಬಿ.ನಟೇಶ್

ಮೈಸೂರು: ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದ ಮುಡಾ ಮಾಜಿ ಆಯುಕ್ತ ಡಿ.ಬಿ ನಟೇಶ್‌ ಮಾಧ್ಯಮಗಳೊಂದಿಗೆ ಸಿಟ್ಟಿನಿಂದ ವರ್ತಿಸಿದ ಪ್ರಸಂಗ ನಡೆಯಿತು.

ಕಚೇರಿಗೆ ವಿಚಾರಣೆ ಆಗಮಿಸಿದ ವೇಳೆ ಮಾಧ್ಯಮ ಪ್ರತಿನಿಧಿಗಳು ನಟೇಶ್‌ ಅವರ ವಿಡಿಯೋವನ್ನು ಚಿತ್ರೀಕರಿಸಲು ಮುಂದಾದರು.

ಈ ವೇಳೆ ಸಿಟ್ಟಾದ ನಟೇಶ್‌, ನನ್ನ ವಿಡಿಯೋ ಯಾಕೆ ಮಾಡ್ತೀರಾ ನಾನೇನು ಡ್ಯಾನ್ಸ್ ಮಾಡ್ತಿದೀನ ಅಂತಾ ಇಂಗ್ಲೀಷ್‌ನಲ್ಲಿ ಪ್ರಶ್ನಿಸಿ ಗರಂ ಆದರು.

ಅಲ್ಲದೇ ಕೈಯಲ್ಲಿ ತಂದಿದ್ದ ದಾಖಲೆಗಳನ್ನ ಟೇಬಲ್ ಮೇಲೆ ಕುಕ್ಕಿ ದರ್ಪ ಪ್ರದರ್ಶಿಸಿದರು.

ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ 14 ಸೈಟ್‌ಗಳು ನಟೇಶ್‌ ಅವಧಿಯಲ್ಲಿ ಮಂಜೂರಾಗಿತ್ತು. ಸಭೆ ಮಾಡಿದ್ದು, ಸೈಟ್ ಹಂಚಿದ್ದು, ಖಾತೆ ಮಾಡಿಸಿದ್ದು ಎಲ್ಲವೂ ನಟೇಶ್ ಅವಧಿಯಲ್ಲೇ.

ಸೈಟ್‌ ಹಂಚಿಕೆಯ ವೇಳೆ ಸಿದ್ದರಾಮಯ್ಯ ಅವರ ಪ್ರಭಾವ ಇತ್ತು ಎಂಬ ಆರೋಪ‌ ನಟೇಶ್‌ ಮೇಲಿದೆ.ಹಾಗಾಗಿ ನಟೇಶ್ ಹೇಳಿಕೆ ಬಹಳ ಮಹತ್ವ ಪಡೆದಿದೆ.

ಮುಡಾ ಅಕ್ರಮ ನಿವೇಶನ ಹಂಚಿಕೆ ಪ್ರಕರಣಕ್ಕೆ ಡಿ.ಬಿ ನಟೇಶ್​ ಅವರ​ ವಿರುದ್ಧ ಪ್ರಾಸಿಕ್ಯೂಷನ್​ಗೆ ರಾಜ್ಯ ಗೃಹ ಇಲಾಖೆ ಕಳೆದ ವಾರ ಅನುಮತಿ ನೀಡಿತ್ತು.

ನಗರದ ಮಲ್ಲೇಶ್ವರಂನ 10ನೇ ಕ್ರಾಸ್ ನಲ್ಲಿರುವ‌ ನಟೇಶ್ ಮನೆ ಮೇಲೆ ಈ ಹಿಂದೆ ಇಡಿ ಅಧಿಕಾರಿಗಳು ದಾಳಿ ಮಾಡಿ,ಸತತ 33 ಗಂಟೆಗಳ ಕಾಲ ದಾಖಲೆ ಪರಿಶೀಲನೆ ಮಾಡಿ 4 ಬ್ಯಾಗ್ ಕೊಂಡೊಯ್ದಿದ್ದರು.

ಬಳಿಕ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಅವರು ಈಗಾಗಲೇ ಇಡಿ ಅಧಿಕಾರಿಗಳ ಮುಂದೆ ಮೂರು ಬಾರಿ ಹಾಜರಾಗಿ‌ ವಿಚಾರಣೆ ಎದುರಿಸಿದ್ದಾರೆ.

ಎರಡು ಗಂಟೆಗಳ ಕಾಲ ವಿಚಾರಣೆ‌ ನಡೆಸಿ ಹೊರಬಂದ ನಟೇಶ್ ಅವರನ್ನು ಮಾಧ್ಯಮಗಳು ಮಾತನಾಡಿಸಲು ಮುಂದಾಗುತ್ತಿದ್ದಂತೆ ಯಾವುದೇ ಪ್ರತಿಕ್ರಿಯೆ ನೀಡದೆ ಅವರು ಸುಮ್ಮನೆ ಹೊರಟು ಹೋದರು.

ದೃವಕುಮಾರ್ ವಿಚಾರಣೆ:
ಸಿಎಂ ಪರಮಾಪ್ತ, ಮುಡಾ ಮಾಜಿ ಅಧ್ಯಕ್ಷ ದೃವಕುಮಾರ್ ಅವರ ವಿಚಾರಣೆಯನ್ನು ಲೋಕಾಯುಕ್ತ ಎಸ್ ಪಿ ಉದೇಶ್ ಅವರು ಇದೇ‌ ವೇಳೆ ನಡೆಸಿದರು.

ಮಾಧ್ಯಮಗಳೊಂದಿಗೆ ಸಿಟ್ಟಾಗಿ‌ ವರ್ತಿಸಿದ ಡಿ.ಬಿ.ನಟೇಶ್ Read More

ಮುಡಾದಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲ ಅಧಿಕಾರಿಗಳ ವಿಚಾರಣೆಗೆ ಲೋಕಾ ನಿರ್ಧಾರ

ಮೈಸೂರು: ಮುಡಾ ಹಗರಣದಲ್ಲಿ ಮಾಜಿ ಆಯುಕ್ತರಿಗೂ ಸಂಕಷ್ಟ ಶುರುವಾಗಿದೆ, ಮುಡಾದಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲ ಅಧಿಕಾರಿಗಳ ವಿಚಾರಣೆಗೆ ಲೋಕಾಯುಕ್ತ ಎಸ್ಪಿ ಉದೇಶ್ ಮುಂದಾಗಿರುವುದೆ ಇದಕ್ಕೆ ಕಾರಣ.

ಕೆಲ ದಿನಗಳ ಹಿಂದೆ ಮುಡಾ ಆಯುಕ್ತರಾಗಿ ನಿವೃತ್ತರಾಗಿದ್ದ ಸಧ್ಯ ಜೆಎಸ್ಎಸ್ ಸಂಸ್ಥೆ ಮುಖ್ಯ ಆಡಳಿತಾಧಿಕಾರಿಯಾಗಿರುವ ಸಿ.ಜಿ.ಬೆಟ್ಸೂರ್ ಮಠ್ ಅವರನ್ನು ಲೋಕಾಯುಕ್ತ ಎಸ್ಪಿ ಉದೇಶ್ ಅವರು ವಿಚಾರಣೆಗೊಳಪಡಿಸಿದ್ದರು.

ಈ ಹಿಂದೆ ಮುಡಾ ಆಯುಕ್ತರಾಗಿ ಹೆಚ್ಚುವರಿ ಪ್ರಭಾರ ವಹಿಸಿದ್ದರಿಂದ ಹೇಳಿಕೆ ನೀಡಲು ಅವರನ್ನು ಕರೆಸಿ,ಅರ್ಧ ಗಂಟೆಗಳ ಕಾಲ ವಿಚಾರಣೆಗೊಳಪಡಿಸಲಾಗಿತ್ತು.

ಮುಡಾ ಮಾಜಿ ಆಯುಕ್ತ ನಟೇಶ್ ಅವರಿಗೆ ನೋಟಿಸ್ ನೀಡಿದ ಬೆನ್ನಲ್ಲೆ ಮುಡಾದಲ್ಲಿ ಕರ್ತವ್ಯ ನಿರ್ವಹಿಸಿದ್ದ ಹಿಂದಿನ ಆಯುಕ್ತರು ಹಾಗೂ ಅಧಿಕಾರಿಗಳಿಗೆ ನೋಟಿಸ್ ನೀಡಲು ಲೋಕಾಯುಕ್ತ ಎಸ್ಪಿ ಉದೇಶ್ ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಿಂದಿನ ಆಯುಕ್ತರಾಗಿದ್ದ ಡಾ.ಮಹೇಶ್, ಪಿ.ಎಸ್.ಕಾಂತರಾಜ್, ದಿನೇಶ್ ಸೇರಿದಂತೆ ಒಟ್ಟಾರೆ 2010 ರಿಂದ ಈವರೆಗೆ ಮುಡಾದಲ್ಲಿ ಆಯುಕ್ತರಾಗಿ ಸೇವೆ ಸಲ್ಲಿಸಿರುವ ಎಲ್ಲಾ ಅಧಿಕಾರಿಗಳಿಗೂ ನೋಟಿಸ್ ನೀಡುವ ಸಾಧ್ಯತೆ ಇದೆ.

ಮುಡಾದಲ್ಲಿ ಕರ್ತವ್ಯ ನಿರ್ವಹಿಸಿದ ಎಲ್ಲ ಅಧಿಕಾರಿಗಳ ವಿಚಾರಣೆಗೆ ಲೋಕಾ ನಿರ್ಧಾರ Read More

ಮುಡಾ ಪ್ರಕರಣ: ವಿಚಾರಣೆಗೆ ಹಾಜರಾಗಲು ಸಿಎಂಗೆ‌ ಲೋಕಾ ನೊಟೀಸ್

ಮೈಸೂರು: ಮುಡಾ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಪೊಲೀಸರು ನೋಟೀಸ್ ಜಾರಿ ಮಾಡಿದ್ದಾರೆ.

ನ. 6ರಂದು ಬೆಳಗ್ಗೆ 10.30ಕ್ಕೆ ಲೋಕಾಯುಕ್ತ ಕಚೇರಿಗೆ ಹಾಜರಾಗುವಂತೆ ಸಿದ್ದರಾಮಯ್ಯ ಅವರಿಗೆ ಮೈಸೂರು ಲೋಕಾಯುಕ್ತ ಎಸ್​​​​ಪಿ ಟಿ.ಜೆ.ಉದೇಶ್ ನೋಟೀಸ್ ನೀಡಿದ್ದಾರೆ.

ಈ ಬಗ್ಗೆ ಶಿಗ್ಗಾವಿಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ನವೆಂಬರ್ 6 ರಂದೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ತಿಳಿಸಿದ್ದಾರೆ.

ಮೈಸೂರು ನಗರಾಭಿದ್ಧಿ ಪ್ರಾಧಿಕಾರದ 50:50 ಸೈಟ್ ಹಂಚಿಕೆ ಹಗರಣ ಸಂಬಂಧ ಮೈಸೂರು ಲೋಕಾಯುಕ್ತ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಸಿಎಂ A1 ಆರೋಪಿಯಾಗಿದ್ದು, ಅವರ ಪತ್ನಿ ಪಾರ್ವತಿ ಅವರು A2 ಆರೋಪಿಯಾಗಿದ್ದಾರೆ.

ಮುಡಾ ಪ್ರಕರಣ: ವಿಚಾರಣೆಗೆ ಹಾಜರಾಗಲು ಸಿಎಂಗೆ‌ ಲೋಕಾ ನೊಟೀಸ್ Read More

ಮುಡಾ ನಿವೇಶನ ಹಂಚಿಕೆ ಪ್ರಕರಣ: ಮಾಹಿತಿ ನೀಡಿದ ಕುಮಾರನಾಯ್ಕ್

ಮೈಸೂರು: ರಾಯಚೂರು ಕಾಂಗ್ರೆಸ್‌ ಸಂಸದ ಜಿ.ಕುಮಾರನಾಯ್ಕ್ ಲೋಕಾಯುಕ್ತ ಕಚೇರಿಗೆ ಆಗಮಿಸಿ ಮುಡಾ ನಿವೇಶನ ಹಂಚಿಕೆ ಪ್ರಕರಣ ಸಂಬಂದ ಮಾಹಿತಿ ನೀಡಿದರು.

ಮುಡಾ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರದ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪ್ರಕರಣ ಕೋರ್ಟ್‌ ಮೆಟ್ಟಿಲು ಹತ್ತಿದ ಪರಿಣಾಮ ಇದೀಗ ಕೋರ್ಟ್‌ ಆದೇಶದಂತೆ ಲೋಕಾಯುಕ್ತ ತನಿಖೆ ನಡೆಯುತ್ತಿದೆ.

ಮುಡಾ ನಿವೇಶನ ಹಂಚಿಕೆಯಾದ ವೇಳೆ ಜಿ.ಕುಮಾರನಾಯ್ಕ್‌ ಮೈಸೂರು ಜಿಲ್ಲಾಧಿಕಾರಿಯಾಗಿ ಕರ್ತವ್ಯದಲ್ಲಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ಬಗ್ಗೆ ಅವರಿಂದ ಲೋಕಾಯುಕ್ತ ಎಸ್ಪಿ ಟಿ.ಜೆ.ಉದೇಶ್ ಮಾಹಿತಿ ಹಾಗೂ ಹೇಳಿಕೆ ಪಡೆದರು.

ಈ ಬಗ್ಗೆ ಮಾಧ್ಯಮದೊಂದಿಗೆ‌ ಮಾತನಾಡಿದ ಜಿ. ಕುಮಾರನಾಯ್ಕ್‌ ಅವರು ಮುಡಾ ನಿವೇಶನ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವಿಚಾರಣೆ ನಡೆಯುತ್ತಿದೆ. ಘಟನೆ ನಡೆದ ವೇಳೆ ನಾನು ಮೈಸೂರು ಜಿಲ್ಲಾಧಿಕಾರಿಯಾಗಿದ್ದೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತರು ನೋಟಿಸ್‌ ನೀಡಿ ವಿಚಾರಣೆಗೆ ಆಗಮಿಸುವಂತೆ ತಿಳಿಸಿದ್ದರು.ಲೋಕಾಯುಕ್ತ ಕಚೇರಿಗೆ ಬಂದು ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ ಎಂದು ತಿಳಿಸಿದರು.

ಈ ಘಟನೆ ನಡೆದು ಇಪ್ಪತ್ತು ವರ್ಷಗಳು ಕಳೆದಿದೆ, ಭೂಸ್ವಾಧೀನದ ಪ್ರಕ್ರಿಯೆಯ ಬಗ್ಗೆ ಲೋಕಾಯುಕ್ತರು ಕೇಳಿದ ಮಾಹಿತಿಗಳನ್ನು ಒದಗಿಸಿರುವೆ. ಸುಮಾರು ಎರಡು ತಾಸುಗಳವರೆಗೆ ಪ್ರಶ್ನಾವಳಿ ನಡೆದವು ಎಂದು ಕುಮಾರನಾಯ್ಕ್‌ ತಿಳಿಸಿದರು.

ಮುಡಾ ನಿವೇಶನ ಹಂಚಿಕೆ ಪ್ರಕರಣ: ಮಾಹಿತಿ ನೀಡಿದ ಕುಮಾರನಾಯ್ಕ್ Read More

ಲೊಕಾಯುಕ್ತ ಮುಂದೆ ವಿಚಾರಣೆಗೆ ಹಾಜರಾದ ಮುಡಾ ಪ್ರಕರಣದ ಆರೋಪಿಗಳು

ಮೈಸೂರು: ಲೋಕಾಯುಕ್ತ ಪೊಲೀಸರು ಮುಡಾ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು ಪ್ರಕರಣದ ಎ 3 ಹಾಗೂ ಎ 4 ಆರೋಪಿಗಳು ವಿಚಾರಣೆಗೆ ಹಾಜರಾಗಿದ್ದರು.

ಲೋಕಾಯುಕ್ತ ಅಧಿಕಾರಿಗಳು ಮುಡಾ ಪ್ರಕರಣದ ಎ3 ಆರೋಪಿ ಮಲ್ಲಿಕಾರ್ಜುನ ಹಾಗೂ ಎ4 ಆರೋಪಿ ದೇವರಾಜು ಅವರಿಗೆ ನೋಟಿಸ್ ನೀಡಿ ಅ. ೧೦ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

ಆದ್ದರಿಂದ ಗುರುವಾರ ಮಲ್ಲಿಕಾರ್ಜುನ ಮತ್ತು ದೇವರಾಜು ನಗರದಲ್ಲಿರುವ ಲೋಕಾಯುಕ್ತ ಕಚೇರಿಗೆ ಆಗಮಿಸಿ ವಿಚಾರಣೆಗೆ ಎದುರಿಸಿದರು.

ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು ದೂರುದಾರ ಸ್ನೇಹಮಯಿ ಕೃಷ್ಣ ಅವರ ವಿಚಾರಣೆಯನ್ನು ನಡೆಸಿದ್ದಾರೆ.

ಮೈಸೂರಿನ ಕೆಸರೆ ಗ್ರಾಮಕ್ಕೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರಿಗೆ ನಗರದ ವಿಜಯನಗರದಲ್ಲಿ ನೀಡಲಾಗಿರುವ 14 ಸೈಟ್ ಇರುವ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲಿಸಿದ್ದರು.

ಮೂಡಾ ಪ್ರಕರಣದ ತನಿಖೆಯನ್ನು ನಡೆಸಿ ಡಿಸೆಂಬರ್ ಒಳಗೆ ಮಾಹಿತಿ ನೀಡುವಂತೆ ನ್ಯಾಯಾಲಯ ಸೂಚಿಸಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಲೊಕಾಯುಕ್ತ ಮುಂದೆ ವಿಚಾರಣೆಗೆ ಹಾಜರಾದ ಮುಡಾ ಪ್ರಕರಣದ ಆರೋಪಿಗಳು Read More

ಮುಡಾ ಪ್ರಕರಣ:ಎ3, ಎ 4 ಆರೋಪಿ ಗಳಿಗೆ ನೋಟೀಸ್

ಮೈಸೂರು: ಲೋಕಾಯುಕ್ತ ಪೊಲೀಸರು ಮೂಡಾ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಲೋಕಾಯುಕ್ತ ಅಧಿಕಾರಿಗಳು ಮೂಡಾ ಪ್ರಕರಣದ ಎ 3 ಆರೋಪಿ ಮಲ್ಲಿಕಾರ್ಜುನ ಹಾಗೂ ಎ 4 ಆರೋಪಿ ದೇವರಾಜು ಅವರಿಗೆ ನೋಟಿಸ್ ನೀಡಿ ಅ.10 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಈಗಾಗಲೇ ಲೋಕಾಯುಕ್ತ ಅಧಿಕಾರಿಗಳು ದೂರುದಾರ ಸ್ನೇಹಮಯಿ ಕೃಷ್ಣ ಅವರ ವಿಚಾರಣೆಯನ್ನು ನಡೆಸಿದ್ದಾರೆ.

ಮೈಸೂರಿನ ಕೆಸರೇ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ ಹಾಗೆಯೇ ಸಿಎಂ ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರಿಗೆ ನೀಡಲಾಗಿರುವ 14 ಸೈಟ್ ಗಳಿರುವ ವಿಜಯನಗರಕ್ಕೂ ಭೇಟಿ ನೀಡಿ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.

ಇದೀಗ ಈ ಪ್ರಕರಣದ ಆರೋಪಿಗಳಾದ ಎ 3 ಹಾಗೂ ಎ 4 ಮಲ್ಲಿಕಾರ್ಜುನ ಮತ್ತು ದೇವರಾಜು ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ನ್ಯಾಯಾಲಯ ಡಿಸೆಂಬರ್ ಒಳಗೆ ಮೂಡಾ ಪ್ರಕರಣದ ತನಿಖೆ ನಡೆಸಿ ಮಾಹಿತಿ ನೀಡುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎ1 ಆರೋಪಿ ಮತ್ತು ಅವರ ಪತ್ನಿ ಪಾರ್ವತಿ ಎ 2 ಆರೋಪಿ ಆಗಿದ್ದಾರೆ. ಅವರಿಗೆ ಅಧಿಕಾರಿಗಳು ನೋಟಿಸ್ ನೀಡಿ ಯಾವ ರೀತಿ ವಿಚಾರಣೆ ನಡೆಸಲಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಮುಡಾ ಪ್ರಕರಣ:ಎ3, ಎ 4 ಆರೋಪಿ ಗಳಿಗೆ ನೋಟೀಸ್ Read More

ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್:ಸಂಕಷ್ಟ ಪ್ರಾರಂಭ

ಮೈಸೂರು: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರುಗೆ ಈಗ ಸಂಕಷ್ಟ ಪ್ರಾರಂಭವಾಗಿದೆ.

ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಸ್ನೇಹಮಯಿ ಕೃಷ್ಣ ಅವರ ದೂರಿನ ಆಧಾರದ ಮೇಲೆ ಮೈಸೂರಿನ ಲೋಕಾಯುಕ್ತ ಪೊಲೀಸರು ಸಿಎಂ ಮತ್ತು ಇತರರ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಹಗರಣ ಸಂಬಂಧ ಸಿಆರ್‌ಪಿಸಿ ಸೆಕ್ಷನ್ 156(3) ಅಡಿ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಆದೇಶ ನೀಡಿದ್ದರು.

ಎಫ್ಐಆರ್ ಯಾರ ವಿರುದ್ಧ, ವಿವರ ಇಲ್ಲಿದೆ:

ಸಿದ್ದರಾಮಯ್ಯ, ಮುಖ್ಯಮಂತ್ರಿ (A1)
ಪಾರ್ವತಿ ಬಿಎಂ, ಸಿದ್ದರಾಮಯ್ಯ ಪತ್ನಿ(A2)
ಮಲ್ಲಿಕಾರ್ಜುನ ಸ್ವಾಮಿ, ಸಿದ್ದರಾಮಯ್ಯ, ಬಾಮೈದ(A3)
ದೇವರಾಜು, ಮಾರಾಟಗಾರ, ನಕಲಿ ಭೂ ಮಾಲೀಕ (A4) ಮತ್ತು ಇತರರು‌.
ಕಾಯ್ದೆಗಳು:
ಭ್ರಷ್ಟಾಚಾರ ತಡೆ ಕಾಯ್ದೆ 1988,
ಬೇನಾಮಿ ಆಸ್ತಿ ವಹಿವಾಟು ಕಾಯ್ದೆ 1988, ಕರ್ನಾಟಕ ಭೂಮಿ ಕಬಳಿಕೆ ನಿಷೇಧ ಕಾಯ್ದೆ 2011ರ ಅನ್ವಯ ಪ್ರಕರಣ ದಾಖಲು,
ಸೆಕ್ಷನ್ 120 ಬಿ ಕ್ರಿಮಿನಲ್ ಪಿತೂರಿ,
ಸೆಕ್ಷನ್ 166 ಸಾರ್ವಜನಿಕ ಸೇವಕ ಕಾನೂನು ಉಲ್ಲಂಘನೆ ಮಾಡುವುದು,
ಸೆಕ್ಷನ್ 403 ಆಸ್ತಿಯ ದುರ್ಬಳಕೆ,
ಸೆಕ್ಷನ್ 406 ನಂಬಿಕೆಯ ಉಲ್ಲಂಘನೆ
ಸೆಕ್ಷನ್ 420 ವಂಚನೆ,
ಸೆಕ್ಷನ್ 426 ದುಷ್ಕೃತ್ಯವೆಸಗುವುದು,
ಸೆಕ್ಷನ್ 465 ಫೋರ್ಜರಿ,
ಸೆಕ್ಷನ್ 468 ವಂಚನೆ ಉದ್ದೇಶಕ್ಕಾಗಿ ದಾಖಲೆಗಳ ಫೋರ್ಜರಿ,
ಸೆಕ್ಷನ್ 340 ಅಕ್ರಮ ಬಂಧನ,
ಸೆಕ್ಷನ್ 351 ಇತರರಿಗೆ ಹಾನಿಯನ್ನುಂಟು ಮಾಡುವುದು.

ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ಐಆರ್:ಸಂಕಷ್ಟ ಪ್ರಾರಂಭ Read More

ಮುಡ ಆಸ್ತಿ ವಶ ಪ್ರಕರಣ;2017 ರಲ್ಲಿ ದಾಖಲಾಗಿದ್ದ ಎಫ್ಐಆರ್-ಈಗ ಲೋಕಾದಿಂದ 18 ಮಂದಿಗೆ ನೋಟೀಸ್

ಮೈಸೂರು: ಉಳ್ಳವರಿಗೆ ಹಂಚಿಕೆ ಮಾಡಿದ್ದ ಮುಡ ಆಸ್ತಿಯನ್ನು ವಶಕ್ಕೆ ಪಡೆಯುವಂತೆ 2017ರಲ್ಲಿ ಆರ್ ಟಿಐ ಕಾರ್ಯಕರ್ತ ಗಂಗರಾಜು ದೂರು ನೀಡಿದ್ದ ಕುರಿತು ದಾಖಲಾಗಿರುವ ಎಫ್ ಐಆರ್ ಗೆ ಈಗ ಮತ್ತೆ ಜೀವ ಬಂದಿದೆ.

ಈ ಸಂಬಂಧ ಇದೀಗ ವಿಚಾರಣೆಗೆ ಹಾಜರಾಗುವಂತೆ ಮುಡಾದ 18 ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಮೂರು ದಿನಗಳ‌ ಒಳಗೆ ವಿಚಾರಣೆಗೆ ಹಾಜರಾಗುವಂತೆ ಮುಡಾದ 18 ಅಧಿಕಾರಿಗಳಿಗೆ ಮೈಸೂರು ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ದಾರೆ.

ಸರ್ವೆ ನಂ.89 ಹಿನಕಲ್, ವಿಜಯ ನಗರ 2 ನೇ ಹಂತ, ಮೈಸೂರು ಇಲ್ಲಿ ಪ್ರಾಧಿಕಾರದ 7 ಎಕರೆ 18 ಗುಂಟೆ ಜಮೀನನ್ನ ವಿಜಯ ನಗರ 2 ನೇ ಹಂತದ ಬಡಾವಣೆ ನಿರ್ಮಿಸಲು ಭೂ ಸ್ವಾದೀನಪಡಿಸಿಕೊಳ್ಳಲಾಗಿತ್ತು.

1996-97 ರಲ್ಲಿ ಹಿನಕಲ್ ಪಂಚಾಯತಿಯ ಅಂದಿನ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಮತ್ತು ಅಂದಿನ ಸದಸ್ಯರುಗಳು ಹಿನಕಲ್ ಬಡಜನರಿಗೆ ಆಶ್ರಯ ನಿವೇಶನ ರಚಿಸಿ ಹಂಚುತ್ತೇವೆ ಎಂದು ಪ್ರಾಧಿಕಾರದ ಆಸ್ತಿಗೆ ಅತಿಕ್ರಮ ಪ್ರವೇಶ ಮಾಡಿ ಪ್ರಾಧಿಕಾರದ ಅನುಮತಿ ಪಡೆಯದೇ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಪ್ರಾಧಿಕಾರದ ಆಸ್ತಿಯಲ್ಲಿ ಸುಮಾರು 350 ಕ್ಕೂ ಹೆಚ್ಚು 25*25 ಅಳತೆಯ ನಿವೇಶನಗಳನ್ನು ರಚಿಸಿದ್ದರು.

ಈ ನಿವೇಶನಗಳನ್ನ ಬಿಎಂಎಲ್ ನೌಕರರಿಗೆ, ಶಾಲಾ ಶಿಕ್ಷಕರಿಗೆ, ಪಂಚಾಯತ್ ಪಿಡಿಒ ಗಳಿಗೆ, ಪೋಸ್ಟ್ ಆಫೀಸ್ ನೌಕರರಿಗೆ, ಸರ್ಕಾರಿ ನೌಕರರಿಗೆ, ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು,ಸದಸ್ಯರು ಹಾಗೂ ಇನ್ನಿತರ ಉಳ್ಳವರಿಗೆ ಹಂಚಿಕೆ ಮಾಡಿದ್ದರು.

ಈ ಸಂಬಂಧ 2017ರಲ್ಲಿ ಗಂಗರಾಜು ಎಂಬುವವರು ಪ್ರಾಧಿಕಾರದ ಆಸ್ತಿಯನ್ನು ವಶಕ್ಕೆ ಪಡೆಯಲು ಪ್ರಾಧಿಕಾರಕ್ಕೆ ಹಾಗೂ ಎಸಿಬಿಯಲ್ಲಿ ದೂರು ದಾಖಲಿಸಿದ್ದರು.

ಈ ಸಂಬಂಧ ಎಫ್ಐಆರ್ ದಾಖಲು ಮಾಡಲು ಸರ್ಕಾರದಿಂದ ಅನುಮತಿ ನೀಡಲಾಗಿತ್ತು.

ಅಂತೆಯೇ 2022ರಲ್ಲಿ ಎಸಿಬಿ ಎಫ್ಐಆರ್ ದಾಖಲು ಮಾಡಿದ್ದು ಇದು ಲೋಕಾಯುಕ್ತಕ್ಕೆ ವರ್ಗಾವಣೆಗೊಂಡಿತ್ತು.

ಈಗ ಲೋಕಾಯುಕ್ತ ಪೊಲೀಸರು ಪ್ರಾಧಿಕಾರದ 18 ಅಧಿಕಾರಿಗಳಿಗೆ ವಿಚಾರಣೆಗೆ 3 ದಿವಸದೊಳಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

ಮುಡಾ ಸೂಪರಿಂಟೆಂಡೆಂಟ್, ಇಂಜಿನಿಯರ್, ಕಾರ್ಯದರ್ಶಿ ಸೇರಿದಂತೆ 2017ರಲ್ಲಿ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಮುಡ ಆಸ್ತಿ ವಶ ಪ್ರಕರಣ;2017 ರಲ್ಲಿ ದಾಖಲಾಗಿದ್ದ ಎಫ್ಐಆರ್-ಈಗ ಲೋಕಾದಿಂದ 18 ಮಂದಿಗೆ ನೋಟೀಸ್ Read More