ಮಕ್ಕಳಲ್ಲಿನ ಜ್ಞಾನ ದಾಹ ನೀಗಿಸುತ್ತಿದೆ ನಮ್ಮ ಮೈಸೂರಿನ ಕಲಿಸು ಸಂಸ್ಥೆ: ಯದುವೀರ್

ನವದೆಹಲಿ: ದಾನಗಳಲ್ಲಿ ಶ್ರೇಷ್ಠ ದಾನ ವಿದ್ಯಾದಾನ ಎನ್ನುವುದು ಪ್ರತೀತಿ. ಅದಕ್ಕಾಗಿ ನಮ್ಮ ಮೈಸೂರು ಒಡೆಯರ್ ಸಂಸ್ಥಾನ ಶಿಕ್ಷಣಕ್ಕಾಗಿ ಹೆಚ್ಚು ಒತ್ತು ನೀಡುತ್ತಿತ್ತು ಎಂದು
ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಲಿಸು ಫೌಂಡೇಶನ್‌ 125ನೇ ಗ್ರಂಥಾಲಯಕ್ಕೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.

ಇದೇ ಕಾರಣಕ್ಕೆ ಮೈಸೂರು ವಿಶ್ವದ ಪ್ರಮುಖ ವಿದ್ಯಾನಗರಿಗಳಲ್ಲಿ ಒಂದಾಗಿದೆ. ಇಂಥ ಮೈಸೂರಿನ ಸಂಸ್ಥೆಯಾಗಿರುವ ಕಲಿಸು ಫೌಂಡೇಶನ್ ಮಕ್ಕಳಿಗೆ ಹಾಗೂ ಯುವ ಸಮೂಹಕ್ಕೆ ಜ್ಞಾನಾರ್ಜನೆ ಮಾಡಲು ಮುಂದಾಗಿದ್ದು, ನವದೆಹಲಿಯಲ್ಲಿ ಗ್ರಂಥಾಲಯವನ್ನು ಆರಂಭಿಸಿದೆ ಎಂದು ತಿಳಿಸಿದರು.

ಕಲಿಸು ಸಂಸ್ಥೆ ಕಳೆದ ಕೆಲವು ವರ್ಷಗಳಿಂದ ಜ್ಞಾನ ಹರಡುವ ಯಜ್ಞದಲ್ಲಿ ತೊಡಗಿದೆ. ಈ ಮಹತ್ಕಾರ್ಯದಲ್ಲಿ ನಾನೂ ಕೂಡ ಭಾಗಿಯಾಗಿದ್ದೇನೆ. ಈ ಸಂಸ್ಥೆಯ ರಾಯಭಾರಿಯಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಪುಸ್ತಕ ಸಿಗುವಂತೆ ಮಾಡಲಾಗುತ್ತಿದೆ. ನಿಜಕ್ಕೂ ಇದೊಂದು ಪುಣ್ಯದ ಕೆಲಸ ಎಂದು ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ಗ್ರಂಥಾಲಯ ಆರಂಭಿಸುವ ಮೂಲಕ ಯುವ ಸಮೂಹದ ಜ್ಞಾನ ಹೆಚ್ಚಿಸಲಾಗುತ್ತಿದೆ. ನಮ್ಮ ಮೈಸೂರಿನ ಕಲಿಸು ಫೌಂಡೇಷನ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಈ ಲೈಬ್ರರಿ ಆರಂಭಿಸಿರುವುದು ಸ್ವಾಗತಾರ್ಹ. ಈ ನಿಟ್ಟಿನಲ್ಲಿ ಸಂಸ್ಥಾಪಕರಾದ ನಿಖಿಲೇಶ್ ಅವರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಯದುವೀರ್ ತಿಳಿಸಿದರು.

ನವದೆಹಲಿಯ ಗೋಲ್ ಮಾರುಕಟ್ಟೆಯ ಅಟಲ್ ಆದರ್ಶ್ ಬೆಂಗಾಲಿ ಬಾಲಿಕಾ ವಿದ್ಯಾಲಯದಲ್ಲಿ ತಲೆ ಎತ್ತಿರುವ 125ನೇ ಗ್ರಂಥಾಲಯದಲ್ಲಿ ಸಾವಿರಾರು ಪುಸ್ತಕಗಳು ದೊರೆಯಲಿದೆ. ಇದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು ಸತ್ಪ್ರಜೆಗಳಾಗಿ ದೇಶಕ್ಕೆ, ನಾಡಿಗೆ ಕೊಡುಗೆ ನೀಡಬೇಕು ಎಂದು ಯದುವೀರ್ ಒಡೆಯರ್ ಕರೆ ನೀಡಿದರು.

ನವದೆಹಲಿಯ ಸಂಸದೆ ಬಾನ್ಸುರಿ ಸ್ವರಾಜ್ ಮಾತನಾಡಿ, ಮಕ್ಕಳಿಗಾಗಿ ಲೈಬ್ರರಿ ಆರಂಭಿಸಿರುವ ಮೈಸೂರು ಮೂಲದ ಕಲಿಸು ಸಂಸ್ಥೆಗೆ ಶುಭ ಹಾರೈಕೆಗಳು ಎಂದು ಹೇಳಿದರು.

ಈ ಸಂಸ್ಥೆಯು ಸರ್ಕಾರ ಮಾಡುವ ಕೆಲಸವನ್ನು ಮಾಡುತ್ತಿದೆ,ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ನಾವು “ಕಲಿಸು” ಸಂಸ್ಥೆಯೊಂದಿಗೆ ಕೈ ಜೋಡಿಸಲು ಉತ್ಸುಕರಾಗಿದ್ದೇವೆ. ಮತ್ತು ಶೀಘ್ರದಲ್ಲೇ ಕಲಿಸು ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಳ್ಳಲು ಮುಂದಾಗುತ್ತೇವೆ ಎಂದು ತಿಳಿಸಿದರು.

ನಮ್ಮ ದೆಹಲಿಯ ಮಕ್ಕಳಿಗಾಗಿ ಉತ್ತಮ ಪುಸ್ತಕಗಳು ದೊರೆಯುವಂತೆ ಮಾಡಿದ್ದು ಸ್ವಾಗತಾರ್ಹ. ಇಂಥ ಲೈಬ್ರರಿಗಳು ಇನ್ನಷ್ಟು ಆರಂಭವಾಗಲಿ. ಸಂಸ್ಥಾಪಕರಿಗೆ ಹಾಗೂ ಇಡೀ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಬಾನ್ಸುರಿ ಸ್ವರಾಜ್ ತಿಳಿಸಿದರು.

ನಂತರ ಯದುವೀರ್ ಒಡೆಯರ್ ಹಾಗೂ ಬಾನ್ಸುರಿ ಸ್ವರಾಜ್ ವಿದ್ಯಾರ್ಥಿಗಳೊಂದಿಗೆ‌ ಸಂವಾದ ನಡೆಸಿ, ಭವಿಷ್ಯದ ಯೋಜನೆಗಳು, ಹವ್ಯಾಸ, ಮುಂದಿನ ಗುರಿ ಹಾಗೂ ಇಷ್ಟದ ವಿಷಯ ಹಾಗೂ ಕ್ರೀಡೆ ಬಗ್ಗೆ ಚರ್ಚಿಸಿದರು.

ಕಲಿಸು ಫೌಂಡೇಶನ್ ಸಂಸ್ಥಾಪಕರು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಿಖಿಲೇಶ್ ಮಾತನಾಡಿ, ಗ್ರಂಥಾಲಯಗಳನ್ನು ಆರಂಭಿಸುವ ಅಭಿಯಾನದ ಕುರಿತು ವಿವರಿಸಿದರು.

ರಾಜ ಮಹಾರಾಜರ ಕಾಲದಿಂದಲೂ ಮೈಸೂರಿನಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಹಾಗೂ ಗ್ರಾಮೀಣ ಭಾಗದ ಮಕ್ಕಳಿಗೆ ಹೆಚ್ಚು ಪುಸ್ತಕಗಳು ದೊರೆಯಬೇಕು ಎಂಬ ಉದ್ದೇಶದಿಂದ “ಕಲಿಸು” ಫೌಂಡೇಶನ್ ಆರಂಭಿಸಲಾಯಿತು ಎಂದು ತಿಳಿಸಿದರು.

ಮಕ್ಕಳಲ್ಲಿನ ಜ್ಞಾನ ದಾಹ ನೀಗಿಸುತ್ತಿದೆ ನಮ್ಮ ಮೈಸೂರಿನ ಕಲಿಸು ಸಂಸ್ಥೆ: ಯದುವೀರ್ Read More

ಮನೆಗೊಂದು ಗ್ರಂಥಾಲಯಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷಿ ಯೋಜನೆ ಮನೆಗೊಂದು ಗ್ರಂಥಾಲಯ ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಪ್ರಾಧಿಕಾರ ಪ್ರಕಟಿಸಿರುವ ಕುಮಾರ ವ್ಯಾಸಭಾರತ ಸಂಪುಟಗಳನ್ನು ಲೋಕಾರ್ಪಣೆ ಗೊಳಿಸಿದರು.

ಮನೆಗೊಂದು ಗ್ರಂಥಾಲಯದ ಮೊದಲ ಗ್ರಂಥಾಲಯವನ್ನು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿಯೇ ಸ್ಥಾಪಿಸುತ್ತಿದ್ದು, ಗ್ರಂಥಾಲಯಕ್ಕೆ ಹಿರಿಯ ಸಾಹಿತಿ ನಾಡೋಜ ಡಾ. ಹಂ ಪ ನಾಗರಾಜಯ್ಯ ಚಾಲನೆ ನೀಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಗ್ರಂಥಾಲಯ ಫಲಕವನ್ನು ಅನಾವರಣಗೊಳಿಸಿದರು.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು,ಆಡು ಭಾಷೆಯಲ್ಲಿ ಮಹಾ ಕಾವ್ಯ ಕಟ್ಟಿಕೊಟ್ಟ ಹಿರಿಮೆ ಗದುಗಿನ ನಾರಾಣಪ್ಪ ಅವರದ್ದು ಎಂದು ಬಣ್ಣಿಸಿದರು.

ಕುಮಾರವ್ಯಾಸ ಎಂದೇ ಪ್ರಖ್ಯಾತರಾದ ಗದುಗಿನ ನಾರಾಣಪ್ಪ ರಚಿಸಿದ ಕರ್ಣಾಟ ಭಾರತ ಕಥಾಮಂಜರಿ ಕುಮಾರವ್ಯಾಸ ಭಾರತ ಎಂದೇ ಪ್ರಖ್ಯಾತವಾಗಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಲೋಕದ ಅಜರಾಮರ ಕೃತಿಯಾದ ಕುಮಾರವ್ಯಾಸ ಭಾರತವನ್ನು ಅತ್ಯಂತ ಕಡಿಮೆ ಬೆಲೆಯಲ್ಲಿ ಓದುಗರಿಗೆ ಒದಗಿಸಲಾಗುವುದೆಂದು ಸುವರ್ಣ ಸಂಭ್ರಮ ಕಾರ್ಯಕ್ರಮದ ನಿಮಿತ್ತ ಕಳೆದ ವರ್ಷ ಗದಗಿನಲ್ಲಿ ಆಚರಿಸಲಾಗಿದ್ದ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರು ಘೋಷಿಸಿದ್ದರು. ಅದರಂತೆ ಕನ್ನಡ ಗಣಕ ಪರಿಷತ್ತು ಈ ಹಿಂದೆ ಪ್ರಕಟಿಸಿದ್ದ ಕುಮಾರವ್ಯಾಸ ಭಾರತದ ಕೃತಿಯ ಹಕ್ಕುಗಳನ್ನು ಪುಸ್ತಕ ಪ್ರಾಧಿಕಾರ ಪಡೆದುಕೊಂಡು ಈ ಕೃತಿಯನ್ನು ಪ್ರಕಟಿಸಿದೆ. ಕನ್ನಡ ಪುಸ್ತಕ ಪ್ರಾಧಿಕಾರ ಈ ಕುಮಾರವ್ಯಾಸ ಭಾರತವನ್ನು ಎರಡು ಸಂಪುಟಗಳಲ್ಲಿ ಪ್ರಕಟಿಸಿದೆ. ಈ ಎರಡೂ ಸಂಪುಟಗಳು
ಸೇರಿ ಒಟ್ಟು 500 ರೂ ಬೆಲೆ ನಿಗದಿಪಡಿಸಲಾಗಿದೆ ಎಂದು ಸಿಎಂ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಶಿವರಾಜ್ ತಂಗಡಗಿ, ಇಲಾಖೆ ಕಾರ್ಯದರ್ಶಿ ಡಾ. ಎನ್. ಮಂಜುಳಾ, ಇಲಾಖೆ ನಿರ್ದೇಶಕರಾದ ಡಾ. ಧರಣೀದೇವಿ ಮಾಲಗತ್ತಿ ಹಾಗೂ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ, ಕನ್ನಡ ಸಾಹಿತ್ಯ ಅಧ್ಯಕ್ಷರಾದ ಡಾ. ಮಹೇಶ್ ಜೋಶಿ, ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕಿರಣ್ ಸಿಂಗ್ ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಮನೆಗೊಂದು ಗ್ರಂಥಾಲಯಕ್ಕೆ ಚಾಲನೆ ನೀಡಿದ ಸಿದ್ದರಾಮಯ್ಯ Read More