ಚಾ.ಬೆಟ್ಟದಲ್ಲಿ ಅಪಘಾತ;ಗಾಯಾಳುಗಳಿಗೆ 1 ಲಕ್ಷ ರು ಚಿಕಿತ್ಸಾ ವೆಚ್ಚ ನೀಡಿ-ತೇಜಸ್ವಿ

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಕೆಎಸ್ ಆರ್ ಟಿಸಿ ಬಸ್ ಅಪಘಾತದಲ್ಲಿ ಗಾಯಗೊಂಡವರಿಗೆ ಒಂದು ಲಕ್ಷ ರೂ ಚಿಕಿತ್ಸಾ ವೆಚ್ಚ ನೀಡಬೇಕೆಂದು ಸರ್ಕಾರವನ್ನು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಆಗ್ರಹಿಸಿದ್ದಾರೆ.

ಬಸ್ ಚಾಲಕನ ನಿರ್ಲಕ್ಷ್ಯದಿಂದ ಕಾರು, ವಿದ್ಯುತ್ ಕಂಬಗಳಿಗೆ ಡಿಕ್ಕಿಯಾಗಿ ಪ್ರಯಾಣಿಕರಿಗೆ ಗಾಯಗಳಾಗಿರುವುದು ಬೇಸರದ ಸಂಗತಿ ಎಂದು ತಿಳಿಸಿದ್ದಾರೆ.

ಅದೃಷ್ಟವಶಾತ್, ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಮತ್ತು ಗಂಭೀರ ಅನಾಹುತ ಸಂಭವಿಸುವುದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ ಎಂದು ತಿಳಿಸಿದ್ದಾರೆ_

ಈ ಅಪಘಾತಕ್ಕೆ ಸಾರಿಗೆ ಬಸ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ತೇಜಸ್ವಿ ಆರೋಪಿಸಿದ್ದಾರೆ.

ಚಾಲಕನ ಮೇಲೆ ಈಗಾಗಲೇ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ, ಆದರೆ ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಕೂಡಲೇ ಚಾಲಕನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ತೇಜಸ್ವಿ ಒತ್ತಾಯಿಸಿದ್ದಾರೆ.

ಈ ಘಟನೆಯಿಂದ ಕಾರುಗಳಿಗೆ ಸಣ್ಣಪುಟ್ಟ ಹಾನಿಯಾಗಿದ್ದು, ವಿದ್ಯುತ್ ಕಂಬಗಳು ಒಡೆದಿವೆ. ಸ್ಥಳಕ್ಕೆ ತಕ್ಷಣವೇ ಆಗಮಿಸಿದ ಪೊಲೀಸರು ಮತ್ತು ಸ್ಥಳೀಯರ ಸಹಾಯದಿಂದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಗಾಯಗೊಂಡವರಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದೆ,
ಆದರೆ ಕೆಲವು ಪ್ರಯಾಣಿಕರಿಗೆ ಮೂಗೇಟು ಬಿದ್ದಿದ್ದು ಮೂಳೆ ಮುರಿತ ಉಂಟಾಗಿದೆ ಎಂದು ಅವರು ತಿಳಿಸಿದ್ದಾರೆ.

ಹೆಚ್ಚು ಗಾಯಗೊಂಡವರನ್ನು ಗುರುತಿಸಿ ಒಂದು ಲಕ್ಷ ರೂ ಚಿಕಿತ್ಸಾ ವೆಚ್ಚವನ್ನು ನೀಡುವಂತೆ ತೇಜಸ್ವಿ ನಾಗಲಿಂಗ ಸ್ವಾಮಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಚಾ.ಬೆಟ್ಟದಲ್ಲಿ ಅಪಘಾತ;ಗಾಯಾಳುಗಳಿಗೆ 1 ಲಕ್ಷ ರು ಚಿಕಿತ್ಸಾ ವೆಚ್ಚ ನೀಡಿ-ತೇಜಸ್ವಿ Read More

ಆಟೋರಿಕ್ಷಾಗಳಿಗೆ ಬಸ್ ಡಿಕ್ಕಿ:6 ಮಂದಿ ಸಾವು

ಮಂಗಳೂರು: ಕೇರಳದ ಕಾಸರಗೋಡಿನಿಂದ ಮಂಗಳೂರಿಗೆ ಬರುತ್ತಿದ್ದ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಕೇರಳದ ರಾಷ್ಟ್ರೀಯ ಹೆದ್ದಾರಿ 66 ರ ತಲಪಾಡಿ ಕ್ರಾಸ್ ಬಳಿ ಎರಡು ಆಟೋರಿಕ್ಷಾಗಳು ಮತ್ತು ರಸ್ತೆಬದಿ ನಿಂತಿದ್ದವರಿಗೆ ಡಿಕ್ಕಿ ಹೊಡೆದ ಪರಿಣಾಮ ಆರು ಜನ ಮೃತಪಟ್ಟಿದ್ದಾರೆ.

ಗುರುವಾರ ಮಧ್ಯಾಹ್ನ‌ 1 ಗಂಟೆ ಸಮಯದಲ್ಲಿ ಕಾಸರಗೋಡು ಜಿಲ್ಲೆ, ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಆಟೋರಿಕ್ಷಾ ಚಾಲಕ ಹೈದರ್ ಅಲಿ (47); ಖದೀಜಾ, 60; ಹಸ್ನಾ, 11; ನಫೀಸಾ, 52; ಆಯಿಷಾ ಫಿದಾ, 19; ಎಲ್ಲರೂ ದಕ್ಷಿಣ ಕನ್ನಡದ ಕೋಟೆಕಾರ್‌ನ ಅಜ್ಜಿನಡ್ಕದವರು; ಮತ್ತು ದಕ್ಷಿಣ ಕನ್ನಡದ ಫರಂಗಿಪೇಟೆಯ 72 ವರ್ಷದ ಅವಮ್ಮ ಎಂದು ಹೆಸರಿಸಿದ್ದಾರೆ. ಕಾಸರಗೋಡಿನ ಪೆರುಂಬಳದ ಲಕ್ಷ್ಮಿ (61) ಮತ್ತು ಸುರೇಂದ್ರ (39) ಗಾಯಗೊಂಡಿದ್ದಾರೆ.

ಬಸ್‌ ಚಾಲಕ ಸರ್ವಿಸ್ ರಸ್ತೆಯನ್ನು ತೆಗೆದುಕೊಳ್ಳುವ ಬದಲು ಫ್ಲೈಓವರ್‌ನಲ್ಲಿ ಚಾಲನೆ ಮಾಡಿ ಬ್ಲೈಂಡ್ ಸ್ಪಾಟ್ ಅನ್ನು ಎದುರಿಸಿ ನಾಲ್ಕು ಪ್ರಯಾಣಿಕರು ಪ್ರಯಾಣಿಸುತ್ತಿದ್ದ ಆಟೋರಿಕ್ಷಾಗೆ ಡಿಕ್ಕಿ ಹೊಡೆದಿದ್ದಾನೆ.

ಹೆದ್ದಾರಿಯಲ್ಲಿ ಅತಿ ವೇಗ ಮತ್ತು ಜಾರುವ ಸ್ಥಿತಿಯಿಂದಾಗಿ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ನಾಲ್ವರು ಮಂಗಳೂರಿನ ಹೊರವಲಯದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಆಟೋರಿಕ್ಷಾಗಳಿಗೆ ಬಸ್ ಡಿಕ್ಕಿ:6 ಮಂದಿ ಸಾವು Read More

ಕೆಟ್ಟು ನಿಲ್ಲುವ‌ ಕೆಎಸ್ಆರ್ ಟಿಸಿ ಬಸ್ ಸರ್ಕಾರಕ್ಕೆ ಛೀಮಾರಿ ಹಾಕಿದ ಕೆಪಿಪಿ

ಮೈಸೂರು: ಈ ಕೇಸ್ ಆರ್ ಟಿ ಸಿ ಬಸ್ ಗಳಿಗೆ ಅದೇನಾಗಿದೆಯೋ, ಯಾವಾಗಲೂ ತಳ್ಳು ನೂಕು ಎಂಬಂತಾಗಿದೆ.

ಮೈಸೂರಿನಿಂದ ಪಿರಿಯಾಪಟ್ಟಣಕ್ಕೆ ಹೊರಟಿದ್ದ ಕೆಎಸ್ಆರ್ ಟಿ ಸಿ ಬಸ್ ಜಲದರ್ಶಿನಿ ಬಳಿಯೇ ಕೆಟ್ಟು ನಿಂತಿತು.

ಚಾಲಕ ಮತ್ತು ನಿರ್ವಾಹಕರು ತಕ್ಷಣ ಬಸ್ ನಿಂದ ಕೆಳಗಿಳಿದು ರಿಪೇರಿ ಮಾಡಿಸಲು ಮೆಕ್ಯಾನಿಕ್ ಗೆ ಕರೆ ಮಾಡಿದರು, ಆದರೆ ಮೆಕ್ಯಾನಿಕ್ ಬರಲಿಲ್ಲ, ಹಾಗಾಗಿ ಅನಿವಾರ್ಯವಾಗಿ ಡ್ರೈವರ್ ನಿರ್ವಾಕನ ನೆರವಿನಿಂದ ಕನಿಷ್ಠ ಒಂದು ಗಂಟೆಗೂ ಹೆಚ್ಚು ಹೊತ್ತು ರಿಪೇರಿ ಕೆಲಸ ಮಾಡಿ ನಂತರ ಬಸ್ ಮುಂದಕ್ಕೆ ತೆಗೆದುಕೊಂಡು ಬಂದರು.

ಆದರೆ ಕಾದು ಸಾಕಾದ ಪ್ರಯಾಣಿಕರು ಡ್ರೈವರ್ ಕಂಡಕ್ಟರ್ ಜತೆ ಜಗಳಕ್ಕೆ ಬಿದ್ದರು.

ಅದೇ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಮತ್ತು ಅವರ ಜೊತೆಯವರು ಇದನ್ನು ನೋಡಿ ಪ್ರಯಾಣಿಕರ ಜೊತೆ ಸೇರಿ ಸರ್ಕಾರಕ್ಕೆ ಮತ್ತು ಕೆಎಸ್ಆರ್ ಟಿ ಸಿಗೆ ಹಿಡಿ ಶಾಪ ಹಾಕಿದರು.

ಇದು ಒಂದು ಬಸ್ ಕಥೆಯಲ್ಲ, ಮೈಸೂರಿನಲ್ಲಿ ಸಂಚರಿಸುವ ಅದೆಷ್ಟೋ ಬಸ್ ಗಳದೂ ಇದೇ ಕಥೆಯಾಗಿದೆ. ಕೆಲವು ಬಸ್ ಗಳಲ್ಲಿ ಸೀಟುಗಳು ಕಿತ್ತುಬಂದಿದ್ದರೆ,ಮತ್ತೆ ಕೆಲ ಬಸ್ ಗಳಲ್ಲಿ ಮಳೆ ಬಂದಾಗ ಬಸ್ ಒಳಗೆ ನೀರು ಸೋರಿ ಪ್ರಯಾಣಿಕರು ಕುಳಿತುಕೊಳ್ಳಲು,ನಿಲ್ಲಲು ಆಗುವುದಿಲ್ಲ ಅಂತಹ ಪರಿಸ್ಥಿತಿ ಇದೆ.

ಈಗಾಗಲೇ ಎಸ್ ಆರ್ ಟಿಸಿ ಡ್ರೈವರ್ ಕಂಡಕ್ಟರ್ ಮತ್ತು ಸಿಬ್ಬಂದಿ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ, ಅವರ ಹಾದಿ ಸರಿಯಾಗಿಯೇ ಇದೆ, ಏಕೆಂದರೆ ಬಸ್ ಗಳು ಕೆಟ್ಟುನಿಂತಾಗ ರಿಪೇರಿ ಮಾಡಿಕೊಂಡು ಜನರಿಂದ ಶಾಪ ಹಾಕಿಸಿಕೊಂಡು ಹೋಗುವ ಹಣೆಬರಹ ಅವರಿಗೆ ಏಕೆ ಬೇಕು ಎಂದು ಚಲುವರಾಜು ಪರವಾಗಿ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬರುತ್ತಿದ್ದಾರೆಂದು ಅದೆಷ್ಟೋ ಕೋಟಿ ವೆಚ್ಚ ಮಾಡುತ್ತಿದ್ದೆ ಸರ್ಕಾರ. ಆದರೆ ಕೆಎಸ್ಆರ್ ಟಿಸಿ ಸಿಬ್ಬಂದಿಗಳ ಬೇಡಿಕೆಯನ್ನು ಈಡೇರಿಸುವುದಿಲ್ಲ. ಜೊತೆಗೆ ಇಂತಹ ಕೆಟ್ಟ ಬಸ್ ಗಳನ್ನು ಬದಲಾಯಿಸಿ ಹೊಸ ಬಸ್ ಗಳನ್ನು ಕೊಡುವುದೂ ಇಲ್ಲ.ಜನರ ತೆರಿಗೆ ಹಣವನ್ನು ಹೀಗೆ ಬೇಕಾಬಿಟ್ಟಿ ಫೋಲು ಮಾಡುವ ಸರ್ಕಾರ ಪ್ರಯಾಣಿಕರಿಗೆ ಅನುಕೂಲವಾಗುವಂತಹ ಉತ್ತಮ ಬಸ್ ಗಳನ್ನು ನೀಡಬೇಕೆಂದು ಪ್ರಯಾಣಿಕರ ಪರವಾಗಿ ಚೆಲುವರಾಜು ಆಗ್ರಹಿಸಿದ್ದಾರೆ.

ಕೆಟ್ಟು ನಿಲ್ಲುವ‌ ಕೆಎಸ್ಆರ್ ಟಿಸಿ ಬಸ್ ಸರ್ಕಾರಕ್ಕೆ ಛೀಮಾರಿ ಹಾಕಿದ ಕೆಪಿಪಿ Read More

ಬಸ್‌ ಹರಿದು‌ ಹಿರಿಯ ನಾಗರೀಕ ದು*ರ್ಮರಣ

ಮೈಸೂರು: ಕೆಎಸ್ ಆರ್ ಟಿಸಿ ಬಸ್ ಹರಿದು ಹಿರಿಯ ನಾಗರೀಕರೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಶ್ರೀರಾಂಪುರದಲ್ಲಿ ಈ ಅವಘಡ ನಡೆದಿದ್ದು,ಶ್ರೀರಾಂಪುರದ ಪುರುಷೋತ್ತಮಯ್ಯ (71) ಮೃತಪಟ್ಟ ದುರ್ದೈವಿ.

ಪುರುಷೋತ್ತಮಯ್ಯ ಅವರು‌ ಮನೆಯಿಂದ ಸ್ಕೂಟರ್ ನಲ್ಲಿ ಹೊರಟು ಸ್ವಲ್ಪ ದೂರ ಬಂದಿದ್ದರಷ್ಟೆ.ಅಷ್ಟರಲ್ಲಿ ಹಿಂದಿನಿಂದ ಬಂದ ಕೆಎಸ್ಆರ್‌ ಟಿಸಿ ಬಸ್
ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ.

ಆಗ ಸ್ಕೂಟರ್ ಸಹಿತ ಅವರು ಕೆಳಗೆ ಬಿದ್ದಿದ್ದಾರೆ,ಆಗ ಅವರ ತಲೆಯ ಮೇಲೆ ಬಸ್ ಹರಿದಿದೆ,ಇದರಿಂದ ಪುರುಷೋತ್ತಮಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಪುರುಷೋತ್ತಮ್ಮಯ್ಯ ಅವರು ಹಾಲಿನ ಬೂತ್ ನಿಂದ ಹಾಲು ತೆಗೆದುಕೊಂಡು ಮನೆಗೆ ಹೋಗುವಾಗ ಈ ದುರ್ಘಟನೆ ನಡೆದಿದೆ.

ಬಸ್‌ ಹರಿದು‌ ಹಿರಿಯ ನಾಗರೀಕ ದು*ರ್ಮರಣ Read More

ಕೊಳ್ಳೇಗಾಲ, ಪಾಳ್ಯ ಮಾರ್ಗವಾಗಿ ಹನೂರಿಗೆ ಬಸ್ : ಮಂಜುನಾಥ್ ಚಾಲನೆ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಕೊಳ್ಳೇಗಾಲ ಪಟ್ಟಣದಿಂದ ತಾಲ್ಲೂಕಿನ ಪಾಳ್ಯ ಮಾರ್ಗವಾಗಿ ಕೊತ್ತನೂರು, ಚಿಕ್ಕಲ್ಲೂರು, ತೆಳ್ಳನೂರು, ಬಂಡಳ್ಳಿ, ಹನೂರು ಪಟ್ಟಣಕ್ಕೆ ಬಂದು ಹೋಗುವ ಬಸ್ ಗೆ ಶಾಸಕ ಎಂ.ಆರ್. ಮಂಜುನಾಥ್ ಅವರು ಚಿಕ್ಕಲೂರಿನಲ್ಲಿ ಚಾಲನೆ ನೀಡಿದರು.

ಈ‌ ವೇಳೆ ಮಾತನಾಡಿದ ಅವರು ಬಸ್ ಬೇಕೆಂಬುದು ಈ ಭಾಗದ ಜನರ ಬಹು ದಿನಗಳ ಬೇಡಿಕೆ ಆಗಿತ್ತು,ಆದರೆ ಈಗ ಚಾಲನೆ ನೀಡಲಾಗುತ್ತಿದೆ. ಇದನ್ನು ಈ ಭಾಗದ ಮುಖಂಡ ತೆಳ್ಳನೂರು ಪುಟ್ಟಮಾದಯ್ಯನವರ ಸ್ಮರಣಾರ್ಥಕವಾಗಿ ಅರ್ಪಿಸುತ್ತಿದ್ದೇನೆ ಎಂದು ತಿಳಿಸಿದರು.

ಈ ಮಾರ್ಗದ ಬಸ್ ಗಾಗಿ ಅವರು ಸಾಕಷ್ಟು ಮನವಿ ಮಾಡಿದ್ದರು ಆದರೆ ಅವರು ಈಗ ನಮ್ಮೊಡನೆ ಇಲ್ಲ ಕಳೆದ 20 ದಿನಗಳ ಹಿಂದಷ್ಟೇ ಅವರು ತೀರಿಕೊಂಡಿದ್ದಾರೆ ಎಂದು ಸ್ಮರಿಸಿದರು.

ಮುಖ್ಯವಾಗಿ ಶಾಲಾ ಮಕ್ಕಳು ದಿನಗೂಲಿ ಕೆಲಸಕ್ಕೆ ಹೋಗುವವರು ಹಾಗೂ ನೌಕರರಿಗೆ ಸಕಾಲಕ್ಕೆ ಕೆಲಸ ಕಾರ್ಯಗಳಿಗೆ ಹಾಜರಾಗಲು ಸಾರಿಗೆ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ಈ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೂತನ ಬಸ್ ಕಾರ್ಯನಿರ್ವಹಿಸಲಿದೆ ಎಂದ ಹೇಳಿದರು.

ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಚಿಕ್ಕಲ್ಲೂರು ದೇವಸ್ಥಾನಕ್ಕೆ ಈಗ ಹನೂರು ಹಾಗೂ ಕೊಳ್ಳೇಗಾಲ 2 ಮಾರ್ಗದಿಂದಲೂ ಭಕ್ತರು ಬಂದು ಹೋಗಲು ಈ ಮಾರ್ಗದ ಬಸ್ ಅನುಕೂಲವಾಗಲಿದೆ ಎಂದು ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾಮೀಣ ಭಾಗದ ಹಲವು ಕಡೆಗಳಲ್ಲಿ ಇನ್ನು ಸಾರಿಗೆ ಸೌಲಭ್ಯ ವ್ಯವಸ್ಥೆ ಸಮರ್ಪಕವಾಗಿ ಆಗಿಲ್ಲ. ಮುಂದಿನ ದಿನಗಳಲ್ಲಿ ಪ್ರತಿ ಹಳ್ಳಿಗಳಲ್ಲಿ ಸರ್ಕಾರಿ ಬಸ್ ಸಂಚರಿಸುವ ವ್ಯವಸ್ಥೆ ಮಾಡಲು ಚಿಂತನೆ ಮಾಡಲಾಗಿದೆ. ಅದಕ್ಕಾಗಿ ಸಂಬಂಧಿಸಿದ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದು ಸಾರಿಗೆ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಇದೇ ವೇಳೆ ಶಾಸಕ ಮಂಜುನಾಥ್ ಸರ್ಕಾರಿ ಬಸ್ ನಲ್ಲಿ ಜನ ಸಾಮಾನ್ಯರ ಜೊತೆ ಸಂಚಾರ ಮಾಡುವ ಮೂಲಕ ಸರಳತೆ ಮೆರೆದರು.

ಈ ಸಂದರ್ಭದಲ್ಲಿ ಮುಖಂಡರಾದ ಬಂಡಳ್ಳಿ ಜೆಸ್ಸಿಂಗ್ ಪಾಷ, ವಿಜಯಕುಮಾರ್, ಸಿಂಗಾನಲ್ಲೂರು ರಾಜಣ್ಣ, ಚಿಕ್ಕಲ್ಲೂರು ಪಿ.ಡಿ.ಒ ಶಿವಕುಮಾರ್, ಡಿಪೋ ಮ್ಯಾನೇಜರ್ ಬೋಗನಾಯಕ್, ಚರಣ್ ಗ್ರಾಮಸ್ಥರು ಹಾಗೂ ಇನ್ನಿತರ ಮುಖಂಡರುಗಳು ಹಾಜರಿದ್ದರು.

ಕೊಳ್ಳೇಗಾಲ, ಪಾಳ್ಯ ಮಾರ್ಗವಾಗಿ ಹನೂರಿಗೆ ಬಸ್ : ಮಂಜುನಾಥ್ ಚಾಲನೆ Read More

ಚಲಿಸುತ್ತಿದ್ದ ಸರ್ಕಾರಿ ಬಸ್ ನಲ್ಲಿ ಕಂಡಕ್ಟರ್ ಬರ್ತ್ ಡೇ !

ಮೈಸೂರು: ಇತ್ತೀಚೆಗೆ ಅಪಘಾತಗಳು‌ ಹೆಚ್ಚಾಗುತ್ತಿವೆ ಈ ನಡುವೆ
ಚಲಿಸುತ್ತಿದ್ದ ಸಾರಿಗೆ ಬಸ್ಸಿನಲ್ಲೇ ಅದರಲ್ಲೂ ಪ್ರಯಾಣಿಕರೇ ಕಂಡಕ್ಟರ್ ಬರ್ತಡೇ ಆಚರಣೆ ಮಾಡಿದ್ದಾರೆ.ಇದನ್ನ ಕುರುಡು ಪ್ರೀತಿ ಅನ್ನಬೇಕಾ ಏನು ಹೇಳಬೇಕು ತಿಳಿಯದಾಗಿದೆ.

ಕಂಡಕ್ಟರ್ ಹುಟ್ಟುಹಬ್ಬವನ್ನು ಮಹಿಳಾ ಪ್ರಯಾಣಿಕರು ಬಸ್ ನ ಇಂಜಿನ್ ಮೇಲೆ ಕೇಕ್ ಇಟ್ಟು ಕತ್ತರಿಸುವ ಮೂಲಕ ಆಚರಿಸಿದ್ದಾರೆ.

ಮಹಿಳೆಯರು ನಗುತ್ತಾ ಮಾತನಾಡುತ್ತಾ ಚಾಲಕನ ಗಮನವನ್ನೂ ತಮ್ಮತ್ತ ಸೆಳೆದಿದ್ದಾರೆ. ಇವರುಗಳ ಹುಚ್ಚಾಟಕ್ಕೆ ಪ್ರಯಾಣಿಕರು ಆತಂಕದಿಂದ ಸರಿಯಾಗಿ ಬಸ್ ಓಡಿಸಪ್ಪ ಎಂದು ಕೂಗಾಡಿದ್ದಾರೆ.

ಇದು ಯಾವ ಮಾರ್ಗದಲ್ಲಿ ಅಂತೀರಾ.
ನಂಜನಗೂಡು ತಾಲೂಕು ಹುಲ್ಲಹಳ್ಳಿ ,ಕಣೇನೂರು ಮಾರ್ಗವಾಗಿ ಎಚ್ ಡಿ ಕೋಟೆಯ ಕಾರಪುರಕ್ಕೆ ತೆರಳುತ್ತಿದ್ದ ಸಾರಿಗೆ ಬಸ್ ನೊಂದಣಿ ಸಂಖ್ಯೆ
KA.09 F 5074 ನಲ್ಲಿ ಈ ರೀತಿ ಬರ್ತಡೇ ಆಚರಿಸಲಾಗಿದೆ.

ದಿನನಿತ್ಯ ಸಂಜೆ 7.30ರ ವೇಳೆಗೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಬಸ್ ನಿಲ್ದಾಣದಿಂದ ಬಿಟ್ಟು ಕಾರಾಪುರಕ್ಕೆ ಈ ಬಸ್ ತೆರಳುತ್ತದೆ.

ನಿನ್ನೆ ರಾತ್ರಿ ಎಂಟು ಗಂಟೆ ವೇಳೆ ಕಣೇನೂರು ಗ್ರಾಮದ ಬಳಿ ಚಲಿಸುತ್ತಿದ್ದ ಬಸ್ಸಿನಲ್ಲಿ ಕೇಕ್ ಕತ್ತರಿಸಿ ಪ್ರಯಾಣಿಕರ ಕೆಂಗಣ್ಣಿಗೆ ಚಾಲಕ ಮತ್ತು ನಿರ್ವಾಹಕ ಗುರಿಯಾಗಿದ್ದಾರೆ ಇದಕ್ಕೆ ಮಹಿಳಾ ಪ್ರಯಾಣಿಕರ‌ ಸಾಥ್ ಇತ್ತು.

ಬರ್ತ್ ಡೇ ಆಚರಿಸಲು ಈ ಜನರಿಗೆ ಚಲಿಸುವ ಬಸ್ ಬೇಕಿತ್ತಾ.ಹಲವು ಪ್ರಯಾಣಿಕರನ್ನ ಸುರಕ್ಷಿತವಾಗಿ ಕರೆದೊಯ್ಯುವ ಜವಾಬ್ದಾರಿ ಚಸಲಕ,ನಿರ್ವಾಹಕರದ್ದು.

ಆದರೆ ಇವರಿಬ್ಬರು ಬಸ್ ನಲ್ಲಿ ಬೆರಳೆಣಿಕೆಯ ಮಹಿಳಾ ಪ್ರಯಾಣಿಕರ ಪ್ರೀತಿಯ ಹುಡುಗಾಟಕ್ಕೆ ಸ್ಪಂದಿಸಿದ್ದಾರೆ.

ಒಂದು ವೇಳೆ ಈ ಸಂಭ್ರಮದಲ್ಲಿ ಅನಾಹುತ ನಡೆದರೆ ಹೊಣೆ ಯಾರು? ಸಾರಿಗೆ ಸಚಿವರು ಇದನ್ನೆಲ್ಲ ಗಮನಿಸುತ್ತಾರಾ,ಇಂತಹ ಚಾಲಕ, ನಿರ್ವಾಹಕರಿಗೆ ಬುದ್ದಿ ಹೇಳುತ್ತಾರಾ ಕಾದು ನೋಡಬೇಕಿದೆ.

ಚಲಿಸುತ್ತಿದ್ದ ಸರ್ಕಾರಿ ಬಸ್ ನಲ್ಲಿ ಕಂಡಕ್ಟರ್ ಬರ್ತ್ ಡೇ ! Read More

ಬಸ್, ಟಾಟಾ ಏಸ್ ವಾಹನ ಮುಖಾಮುಖಿ ಡಿಕ್ಕಿ: ಇಬ್ಬರು ಸಾವು 15 ಮಂದಿಗೆ ಗಂಭೀರ ಗಾಯ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಕೆ.ಎಸ್.ಆರ್.ಟಿ. ಸಿ ಬಸ್ ಹಾಗೂ ಟಾಟಾಏಸ್ ವಾಹನ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿ 15 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಪಟ್ಟಣದ ಹೊರವಲಯದಲ್ಲಿಂದು ನಡೆದಿದೆ.

ಕೊಳ್ಳೇಗಾಲ ಸಮೀಪದ ಸಿದ್ದಯ್ಯನಪುರ ಗ್ರಾಮದ ಬಳಿ ಇಂದು ಮಧ್ಯಾಹ್ನ ಈ ಭೀಕರ ಅಪಘಾತ ಸಂಭವಿಸಿದ್ದು,
ತಾಲೂಕಿನ ಬಾನೂರು ಗ್ರಾಮದ ರಾಜಮ್ಮ (53) ಶೃತಿ (30) ಮೃತ ದುರ್ದೈವಿಗಳು.

ರತ್ನಮ್ಮ, ಹರ್ಷಿತ, ನಿಂಗರಾಜು, ಸುಧಾ, ಗೌತಮ್, ಪ್ರಕಾಶ್, ರಮೇಶ್, ಮಹೇಶ್, ರಾಧಮ್ಮ, ಸಣ್ಣಮ್ಮ, ಸಿಂಧು, ಮಹದೇವ ಅವರುಗೆ ಗಂಭೀರ ಗಾಯಗಳಾಗಿವೆ.

ಎಲ್ಲರೂ ಕೊಳ್ಳೇಗಾಲದಿಂದ ಟಾಟಾ ಏಸ್ ನಲ್ಲಿ ತಮ್ಮ ಊರುಗಳಿಗೆ ತೆರಳುತ್ತಿದ್ದರು. ಈ ವೇಳೆ ಹನೂರು ಕಡೆಯಿಂದ ಬರುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಸಿದ್ದಯ್ಯನಪುರದ ಬಳಿ ಮುಖಾಮುಖಿ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಟಾಟಾ ಎಸ್ ನಜ್ಜುಗುಜ್ಜಾಗಿದ್ದು ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ, 15 ಮಂದಿ ಗಾಯಗೊಂಡಿದ್ದಾರೆ.

ವಿಷಯ ತಿಳಿದ ಕೂಡಲೇ ಕೊಳ್ಳೇಗಾಲ ಪಟ್ಟಣ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಗೊಂಡವರನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ಸಾಗಿಸಿದ್ದಾರೆ.

ಅಲ್ಲಿನ ವೈದ್ಯರಾದ ಡಾಕ್ಟರ್ ರಾಜಶೇಖರ್ ಡಾಕ್ಟರ್ ದಿಲೀಪ್ ಡಾಕ್ಟರ್ ರಮೇಶ್ ಹಾಗೂ ಇತರ ವೈದ್ಯರು ತುರ್ತು ಪ್ರಥಮ ಚಿಕಿತ್ಸೆ ನೀಡಿದರು.

ನಂತರ ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ಚಾಮರಾಜನಗರ ಹಾಗೂ ಮೈಸೂರಿನ ಆಸ್ಪತ್ರೆಗಳಿಗೆ ರವಾನಿಸಲಾಯಿತು.ಆಸ್ಪತ್ರೆ ಮುಂದೆ ಜನಜಾತ್ರೆ ಸೇರಿದೆ.

ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ

ಬಸ್, ಟಾಟಾ ಏಸ್ ವಾಹನ ಮುಖಾಮುಖಿ ಡಿಕ್ಕಿ: ಇಬ್ಬರು ಸಾವು 15 ಮಂದಿಗೆ ಗಂಭೀರ ಗಾಯ Read More

ತಲೆ ಹೊರಹಾಕಿದ ಮಹಿಳೆಯ ಕುತ್ತಿಗೆ ಕಟ್

ಮೈಸೂರು: ಚಲಿಸುತ್ತಿದ್ದ ಬಸ್ ನಿಂದ ಉಗುಳಲು ತಲೆ ಹೊರಹಾಕಿದ ಮಹಿಳೆಯ ಕುತ್ತಿಗೆ ಕಟ್ ಆಗಿ ಭೀಕರವಾಗಿ ಮೃತಪಟ್ಟ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.

ನಂಜನಗೂಡು ತಾಲೂಕು ತಾಲೂಕು ಸಿಂಧುವಳ್ಳಿ ಸಮೀಪ ಈ ಘಟನೆ ನಡೆದಿದ್ದು ಗುಂಡ್ಲುಪೇಟೆ ಆಲಹಳ್ಳಿ ಗ್ರಾಮದ ಶಿವಲಿಂಗಮ್ಮ(45) ಮೃತಪಟ್ಟಿದ್ದಾರೆ.

ಸಾಮಾನ್ಯವಾಗಿ ಬಸ್ ಗಳಲ್ಲಿ ಚಾಲಜ ನಿರ್ವಾಹಕರು ಯಾರಾದರೂ ತಲೆ ಅಥವಾ ಕೈ ಹೊರ ಹಾಕಿದರೆ ಎಚ್ಚರಿಕೆ ನೀಡುತ್ತಲೇ ಇರುತ್ತಾರೆ.ಆದರೂ ಇಂತಹ ಘಟನೆಗಳು ನಡೆಯುತ್ತಲೆ ಇರುವುದು ನಿಜಕ್ಕೂ ದುರಂತ.

ಮೈಸೂರಿನಿಂದ ಗುಂಡ್ಲುಪೇಟೆಯತ್ತ ತೆರಳುತ್ತಿದ್ದ ಕೆಎಸ್ ಆರ್.ಟಿ ಸಿ ಬಸ್ ನಲ್ಲಿ ಶಿವಲಿಂಗಮ್ಮ ಪ್ರಯಾಣಿಸುತ್ತಿದ್ದರು.

ಸಿಂಧುವಳ್ಳಿ ಸಮೀಪ ಬಸ್ ಮುಂದೆ ಹೋಗುತ್ತಿದ್ದ ವಾಹನವೊಂದನ್ನ ಓವರ್ ಟೇಕ್ ಮಾಡುವ ಸಂಧರ್ಭದಲ್ಲಿ ಶಿವಲಿಂಗಮ್ಮ ಉಗುಳಲು ತಲೆ ಹೊರಹಾಕಿದ್ದಾರೆ.ಆಗ ಪಕ್ಕದಲ್ಲಿ ಸಾಗುತ್ತಿದ್ದ ವಾಹನ‌ ವೇಗವಾಗಿ ಚಲಿಸಿ ಶಿವಲಿಂಗಮ್ಮನ ಕತ್ತು ಹಾಗೂ ಕೈ ಕಟ್ ಆಗಿದೆ.

ಶಿವಲಿಂಗಮ್ಮ ಸ್ಥಳದಲ್ಲೇ ಭೀಕರವಾಗಿ ಮೃತಪಟ್ಟಿದ್ದಾರೆ.ಬಸ್ ನಲ್ಲಿದ್ದ ಇತರೆ ಪ್ರಯಾಣಿಕರು ಭಯಪಟ್ಟರು.

ನಂಜನಗೂಡು ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ತಲೆ ಹೊರಹಾಕಿದ ಮಹಿಳೆಯ ಕುತ್ತಿಗೆ ಕಟ್ Read More

ಮಹಿಳಾ ಪ್ರಯಾಣಿಕರ ಜೊತೆ ನಿರ್ವಾಹಕ ಅನುಚಿತ ವರ್ತನೆ: ಡಿಪೋ ಮ್ಯಾನೇಜರ್ ಗೆ ದೂರು

ಮೈಸೂರು: ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಕೆ ಎಸ್ ಆರ್ ಟಿ ಸಿ ಬಸ್ ನಿರ್ವಾಹಕನ ವಿರುದ್ದ ಸಂಘಟಕರು ಡಿಪೋ ಮ್ಯಾನೇಜರ್ ಗೆ ದೂರು ನೀಡಿದ್ದಾರೆ.

ನಂಜನಗೂಡಿನಿಂದ ಚಿಕ್ಕಬರಗಿ ಗ್ರಾಮಕ್ಕೆ ತೆರಳುವ ಬಸ್ ಸಂಖ್ಯೆ KA59 F 0879 ನ ಚಾಲಕ ಹಾಗೂ ನಿರ್ವಾಹಕ ಮಂಜುನಾಥ್ ವಿರುದ್ದ ದೂರು ನೀಡಲಾಗಿದೆ.

ಮಹಿಳೆಯೊಬ್ಬರೊಂದಿಗೆ ಮಾತನಾಡುವಾಗ ಅಶ್ಲೀಲ ಪದ ಬಳಸಿ ಆಕೆಯ ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡಿದ್ದಾರೆಂದು ಆರೋಪಿಸಿ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.

ಡಿ.20ರಂದು ಸರ್ಕಾರಿ ಬಸ್ ಹೆಡಿಯಾಲ ಸಮೀಪ ನಿಳಲಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಮುಂಭಾಗ ಸಾಗಿದೆ.ಬಸ್ ಗೆ ಕಾದಿದ್ದ ಶಾಲೆ ಸಿಬ್ಬಂದಿ ನಾಗಮ್ಮ ಅವರು ನಿಲ್ಲಿಸುವಂತೆ ಕೈ ತೋರಿಸಿದ್ದಾರೆ.

ಚಾಲಕ ಸ್ವಲ್ಪದೂರ ಸಾಗಿ ಬಸ್ ನಿಲ್ಲಿಸಿದ್ದಾನೆ.ಈ ಬಗ್ಗೆ ಪ್ರಶ್ನಿಸಿದಾಗ ಮಹಿಳೆ ಎಂದು ಪರಿಗಣಿಸದೆ ಅಶ್ಲೀಲ ಪದ ಬಳಕೆ ಮಾಡಿ ನಿಂದಿಸಿದ್ದಾನೆ.

ಬಸ್ ನಿಂತ ಮೇಲೆ ನಾಗಮ್ಮ ಅವರ ಫೋಟೋ ಮತ್ತು ವಿಡಿಯೋ ಗಳನ್ನ ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾನೆ.ಈ ವಿಚಾರವನ್ನ ನಾಗಮ್ಮ ತಮ್ಮ ಪತಿ ಮಹದೇವಸ್ವಾಮಿಗೆ ತಿಳಿಸಿದ್ದಾರೆ.

ಕೂಡಲೇ ಸಂಘಟಕರ ನೆರವಿನಿಂದ ಮಹದೇವಸ್ವಾಮಿ ನಂಜನಗೂಡು ಘಟಕದ ಬಸ್ ಡಿಪೋ ಮ್ಯಾನೇಜರ್ ಗೆ ದೂರು ನೀಡಿದ್ದಾರೆ.

ಡಿಪೋ ಮ್ಯಾನೇಜರ್‌ ಅವರು ಮಂಜುನಾಥ್ ಮೊಬೈಲ್ ವಶಕ್ಕೆ ಪಡೆದಿದ್ದು,ಪರಿಶೀಲಿಸಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಮಹಿಳಾ ಪ್ರಯಾಣಿಕರ ಜೊತೆ ನಿರ್ವಾಹಕ ಅನುಚಿತ ವರ್ತನೆ: ಡಿಪೋ ಮ್ಯಾನೇಜರ್ ಗೆ ದೂರು Read More