ಡಾ.ಬಾಬು ಜಗಜೀವನರಾಂ ಅಧ್ಯಯನ ಪೀಠದಿಂದ ಬಾಬು ಸ್ಮರಣೆ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಡಾ. ಬಾಬು ಜಗಜೀವನ ರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಿಂದ ಭಾನುವಾರ ಡಾ. ಬಾಬು ಜಗಜೀವನರಾಮ್ ಅವರ 39ನೇ ಪುಣ್ಯಸ್ಮರಣೆ ಹಮ್ಮಿಕೊಳ್ಳಲಾಯಿತು.

ಇಂದು ಬೆಳಿಗ್ಗೆ 9 ಗಂಟೆಗೆ ರೈಲ್ವೆ ನಿಲ್ದಾಣದ ಬಳಿ ಇರುವ ಡಾ. ಬಾಬು ಜಗಜೀವನರಾಮ್ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡಲಾಯಿತು.

ನಂತರ ವಿಶ್ವವಿದ್ಯಾನಿಲಯದ ಡಾ. ಬಾಬು ಜಗಜೀವನ ರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದಲ್ಲಿ ಸಮಾರಂಭ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಡೀನ್ ಅಧ್ಯಕ್ಷತೆಯನ್ನು ಪ್ರೊ. ರಾಮನಾಥಮ್ ನಾಯ್ಡು ಅವರು ವಹಿಸಿದ್ದರು.

ಅಧ್ಯಯನ ಕೇಂದ್ರಗಳ ಡೀನ್ ಡಾ.ಎನ್.ಆರ್. ಚಂದ್ರೇಗೌಡರು ಡಾ. ಬಾಬು ಜಗಜೀವನ ರಾಮ್ ರವರ ಬಾಲ್ಯ ಜೀವನ ಮತ್ತು ರಾಜಕೀಯ ಸೂಕ್ಷ್ಮತೆ ಮತ್ತು ಸಾಧನೆ ಬಗ್ಗೆ ತಿಳಿಸಿ ಕೊಟ್ಟರು.

ಡಾ. ಬಾಬು ಜಗಜೀವನರಾಮ್ ಪೀಠದ ನಿರ್ದೇಶಕರಾದ ಡಾ. ಆರ್. ಶರಣಮ್ಮ ಪ್ರಾಸ್ತಾವಿಕ ಭಾಷಣ ಮಾಡಿದರು.

ಡಾ. ಜೆ.ಎಸ್. ಚಂದ್ರಶೇಖರ್ ಹಾಗೂ ಕ.ರಾ.ಮು.ವಿ.ಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಡಾ.ಬಾಬು ಜಗಜೀವನರಾಂ ಅಧ್ಯಯನ ಪೀಠದಿಂದ ಬಾಬು ಸ್ಮರಣೆ Read More

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಕಠಿಣ ತಯಾರಿ ಅತ್ಯಗತ್ಯ:ಡಾ. ಎಂ. ಬಿ ಬೋರಲಿಂಗಯ್ಯ

ಮೈಸೂರು: ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಕಠಿಣ ತಯಾರಿ ಅತ್ಯಗತ್ಯ ಎಂದು ದಕ್ಷಿಣ ವಲಯ ಪೊಲೀಸ್ ಉಪ ಮಹಾನಿರೀಕ್ಷಕ ಡಾ. ಎಂ. ಬಿ ಬೋರಲಿಂಗಯ್ಯ ತಿಳಿಸಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ 50 ದಿನಗಳ ಐಎಎಸ್‌ ಹಾಗೂ ಕೆಎಎಸ್ ಪರೀಕ್ಷಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉದ್ಯೋಗ ಮಾರುಕಟ್ಟೆಯಲ್ಲೀಗ ಸ್ಪರ್ಧೆ ಹೆಚ್ಚಿದೆ. ಯಾವುದೇ ಜಾಬ್ ನೋಟಿಫಿಕೇಷನ್ ಪ್ರಕಟವಾಗಲಿ ಇರುವುದು ಕೆಲವೇ ಹುದ್ದೆಗಳಾಗಿದ್ದರೂ ಸಾವಿರ, ಲಕ್ಷ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿರುತ್ತಾರೆ,ಸರ್ಕಾರಿ ನೌಕರಿಗಿರುವ ಸೆಳೆತನ ಅಂತದ್ದು ಎಂದು ಅಭಿಪ್ರಾಯ ಪಟ್ಟರು.

ಕಠಿಣ ಪರಿಶ್ರಮ ಇದ್ದರೆ ಇಂತಹ ಉದ್ಯೋಗಗಳನ್ನು ನೀವು ಪಡೆಯಬಹುದು ಎಂದು‌ ಶಿಬಿರಾರ್ಥಿಗಳಿಗೆ ಕಿವಿಮಾತು ಹೇಳಿದರು.

ನಾನು ಕೂಡ ಹಳ್ಳಿಯಲ್ಲಿಯೇ ಹುಟ್ಟಿ ಬೆಳೆದು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ‌ ಓದಿ ಯುಪಿಎಸ್ಸಿ ಪರೀಕ್ಷೆ ತಯಾರಿಗೆ ದೆಹಲಿಗೆ ಹೋಗಿದ್ದೆ. ಇಲ್ಲಿ ಬಹುತೇಕರು ಗ್ರಾಮೀಣ ಭಾಗದವರೇ ಇದ್ದೀರಿ ಶ್ರಮಪಟ್ಟು ಓದಿ ಎಂದು ಸಲಹೆ ನೀಡಿದರು.

ಪ್ರಸ್ತುತ ಪರೀಕ್ಷೆ ತಯಾರಿಗೆ ದೆಹಲಿಗೆ ಹೋಗಬೇಕೆಂದಿಲ್ಲ, ಮೈಸೂರಿನ ಕೆಎಸ್ಒಯು ನಡೆಸುತ್ತಿರುವ ತರಬೇತಿಯು ಅತ್ಯುತ್ತಮ ತರಬೇತಿ ಕೇಂದ್ರವಾಗಿದೆ ಎಂದು ಬೋರಲಿಂಗಯ್ಯ ತಿಳಿಸಿದರು.

ಹಾರ್ಡ್ ವರ್ಕ್ ಜೊತೆಗೆ ಓದಿನಲ್ಲಿ ತಯಾರಿ ಇರಲಿ,ಜತೆಗೆ ನಿದ್ರೆಯು ಮುಖ್ಯ. ನಿದ್ದೆಗೆಟ್ಟು ಓದುವುದು ಬೇಡ,ಎಲ್ಲದಕ್ಕೂ ಸಮಯಪಾಲನೆ ಇದ್ದರೆ ಒಳಿತು, ತಯಾರಿ ಸಮಯದಲ್ಲಿ ವಿದ್ಯಾರ್ಥಿಗಳು ಗುಂಪು ರಚಿಸಿಕೊಂಡು ಆಯ್ಕೆವಾರು ವಿಷಯಗಳನ್ನು ಚರ್ಚಿಸಿ ಸಾಧ್ಯವಾದಷ್ಟು ಸಾಮಾಜಿಕ ಜಾಲತಾಣದ ಗೀಳಿನಿಂದ ‌‌ದೂರವಿದ್ದು, ದೈನಂದಿನ ದೈಹಿಕ ಚಟುವಟಿಕೆ ಕಡೆಗೆ ಗಮನಹರಿಸಿ ಎಂದು ತಿಳಿಹೇಳಿದರು.

ಮೈಸೂರು ಮಹಾನಗರ ಪಾಲಿಕೆ ಉಪ ಆಯುಕ್ತ ಜಿ.ಎಸ್ ಸೋಮಶೇಖರ್ ಮಾತನಾಡಿ, ಪರೀಕ್ಷೆ ಎದುರಿಸುವುದಕ್ಕೆ ದೃಢ ಮನಸ್ಸು ಇರಬೇಕು, ಆತ್ಮವಿಶ್ವಾಸ, ಸಮಯಪಾಲನೆ, ನೆನಪಿನ ಶಕ್ತಿ, ಪರೀಕ್ಷೆ ಬರೆಯುವ ತಂತ್ರ ಕಲಿತರೆ ಗೆಲುವು ನಿಮ್ಮದೆ ಎಂದು ಹೇಳಿದರು.

ಪರೀಕ್ಷೆ ಬಗ್ಗೆ ತಿಳಿವಳಿಕೆ ಇರಬೇಕು. ಪಠ್ಯಕ್ರಮ, ಪರೀಕ್ಷೆ ಮಾದರಿ, ಹಿಂದಿನ ವರ್ಷದ ಪ್ರಶ್ನೆಪ್ರತ್ರಿಕೆಗಳ ಅಧ್ಯಯನದ ಜೊತೆಗೆ ಪ್ರತಿ ನಿತ್ಯ ದಿನಪತ್ರಿಕೆ, ನಿಮ್ಮಿಷ್ಟದ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿ ಎಂದು ಸಲಹೆನೀಡಿದರು.

ಕುಲಪತಿ ಪ್ರೊ.ಶರಣಪ್ಪವಿ.ಹಲಸೆ ಅವರು ಮಾತನಾಡಿ, ವಿದ್ಯಾರ್ಥಿಗಳು ಸತತ ಪ್ರಯತ್ನ ಪಟ್ಟು ಓದಬೇಕು. ನಿಮ್ಮ ನಿರಂತರ ಪ್ರಯತ್ನದಿಂದ ಎಲ್ಲವೂ ಸಾಧ್ಯ. ಶಿಕ್ಷಣ ಉದ್ಯೋಗದ ಜೊತೆಗೆ ಶಿಸ್ತನ್ನು ಕಲಿಸುತ್ತದೆ ಎಂದು ಹೇಳಿದರು.

ಕುಲಸಚಿವ ಪ್ರೊ.ಕೆ.ಬಿ ಪ್ರವೀಣ ಅವರು ಮಾತನಾಡಿ, ವಿದ್ಯಾರ್ಥಿಗಳು ಹಾರ್ಡ್ ವರ್ಕ್ ಜೊತೆಗೆ ಸ್ಮಾರ್ಟ್ ವರ್ಕ್ ಮಾಡಬೇಕು. ಆಸೆ ಪಟ್ಟು ಓದಿ. ವಿವಿಯ ಆವರಣದಲ್ಲಿ ಎಲ್ಲಾ ರೀತಿಯ ಸೌಕರ್ಯಗಳಿವೆ. ಇವುಗಳನ್ನು ಉಪಯೋಗಿಸಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪರೀಕ್ಷಾಂಗ ಕುಲಸಚಿವ ಪ್ರೊ. ಹೆಚ್.ವಿಶ್ವನಾಥ್, ಹಣಕಾಸು ಅಧಿಕಾರಿ ಪ್ರೊ. ನಿರಂಜನ್‌ ರಾಜ್‌, ಅಧ್ಯಯನ ಕೇಂದ್ರದ ಡೀನ್‌ ಪ್ರೊ. ರಾಮನಾಥಂ ನಾಯ್ಡು, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್‌ ಹೊನ್ನೂರ್‌, ಗಣೇಶ್‌ ಕೆ.ಜಿ. ಕೊಪ್ಪಲ್‌, ಇದ್ದರು.

ಕಾರ್ಯಕ್ರಮದಲ್ಲಿ ದಕ್ಷಿಣವಲಯದ ಪೊಲೀಸ್ ಉಪ ಮಹಾನಿರೀಕ್ಷಕ ಡಾ.ಎಂ.ಬಿ ಬೋರಲಿಂಗಯ್ಯ ಮತ್ತು ಮಹಾನಗರ ಪಾಲಿಕೆಯ ಉಪ ಆಯುಕ್ತ ಜಿ.ಎಸ್ ಸೋಮಶೇಖರ್ ಅವರನ್ನು ಕರಾಮುವಿ ಸ್ಪರ್ಧಾತ್ಮಕ ತರಬೇತಿ ಕೇಂದ್ರದ ವತಿಯಿಂದ ಸನ್ಮಾನಿಸಲಾಯಿತು.

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಕಠಿಣ ತಯಾರಿ ಅತ್ಯಗತ್ಯ:ಡಾ. ಎಂ. ಬಿ ಬೋರಲಿಂಗಯ್ಯ Read More

ಕೆಎಸ್ಒಯು 20ನೇ ಘಟಿಕೋತ್ಸವ:ಮೂವರಿಗೆ ಗೌರವ ಡಾಕ್ಟರೇಟ್

ಮೈಸೂರು: ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 20ನೇ ವಾರ್ಷಿಕ ಘಟಿಕೋತ್ಸವ ವಿಶೇಷವಾಗಿ ನೆರವೇರಿತು.

ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಘಟಿಕೋತ್ಸವ ಭವನದಲ್ಲಿ ಬೆಳಿಗ್ಗೆ ನಡೆದ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ವಹಿಸಿದ್ದರು.

ಕೌಶಲ್ಯ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ ಘಟಿಕೋತ್ಸವ ಭಾಷಣ ಮಾಡಿ ದರು.

ಈ ಬಾರಿ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ, ಐಡಿಯಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಸಿ. ಎಂ. ಇರ್ಫಾನುಲ್ಲಾ ಷರೀಫ್, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ದಾಕ್ಷಾಯಿಣಿ ಎಸ್. ಅಪ್ಪಾ ಅವರುಗಳಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.

ಆದರೆ ಇಂದಿನ ಸಮಾರಂಭಕ್ಕೆ ಸಚಿವ ಸತೀಶ್ ಜಾರಕಿಹೊಳಿ ಆಗಮಿಸಲಿಲ್ಲ ಹಾಗೂ ಉನ್ನತ ಶಿಕ್ಷಣ ಸಚಿವರು ಸಹ ಈ ಸಮಾರಂಭದಲ್ಲಿ ಭಾಗವಹಿಸಿರಲಿಲ್ಲ.

ಈ ಬಾರಿಯ ಘಟಿಕೋತ್ಸವದಲ್ಲಿ 17348 ಅಭ್ಯರ್ಥಿಗಳು ವಿವಿಧ ಪದವಿಗಳನ್ನು ಪಡೆಯಲು ಅರ್ಹರಾಗಿದ್ದರು. ಇವರಲ್ಲಿ 6402 ಪುರುಷರು ಮತ್ತು 10946 ಮಹಿಳೆಯರು.

ಈ ಬಾರಿ ಮೂವರಿಗೆ ಗೌರವ ಡಾಕ್ಟರೇಟ್, 41 ಮಂದಿಗೆ ಪಿಹೆಚ್. ಡಿ, 54 ಮಂದಿಗೆ ಚಿನ್ನದ ಪದಕಗಳು ಹಾಗೂ 58 ಮಂದಿಗೆ ನಗದು ಬಹುಮಾನ ವಿತರಿಸಲಾಯಿತು.

ಕೆಎಸ್ಒಯುನಲ್ಲಿ ಈ ಬಾರಿ ಒಟ್ಟು 25109 ಮಂದಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 17307 ಮಂದಿ ಉತ್ತೀರ್ಣರಾಗಿದ್ದಾರೆ ಅದರಲ್ಲಿ 10,929 ಮಂದಿ ಮಹಿಳೆಯರು ಮತ್ತು 6378 ಮಂದಿ ಪುರುಷರು.

ಸಮಾರಂಭದಲ್ಲಿ ಕೆಎಸ್ಒಯು ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ, ಕುಲ ಸಚಿವರಾದ ಪ್ರೊ. ಕೆ. ಬಿ. ಪ್ರವೀಣ, ಡಾ. ಹೆಚ್. ವಿಶ್ವನಾಥ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಕೆಎಸ್ಒಯು 20ನೇ ಘಟಿಕೋತ್ಸವ:ಮೂವರಿಗೆ ಗೌರವ ಡಾಕ್ಟರೇಟ್ Read More

ಕೆಎಸ್ಒಯು ಕುಲಸಚಿವರ ಕಚೇರಿ ಬಾಗಿಲಿಗೆ ಹಣದ ತೋರಣ ಕಟ್ಟಿ ಪ್ರೊಟೆಸ್ಟ್

ಮೈಸೂರು: ಕೆಎಸ್ಒಯು ಕುಲಸಚಿವರ ಕಚೇರಿ ಬಾಗಿಲ ಮುಂದೆ ಗರಿ ಗರಿ ನೋಟುಗಳ ತೋರಣ ರಾರಾಜಿಸುತ್ತಿದೆ.

ಇದು ಏನು ಎಂಬ ಅಚ್ಚರಿಯೆ?,ಕೆಎಸ್ಒಯು ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದಿಂದ ರೋಸಿ ಹೋದ ಸಿಬ್ಬಂದಿ ಹೀಗೆ ನೋಟಿನ ತೋರಣ ಕಟ್ಟಿ ವಿನೂತನವಾಗಿ ಪ್ರತಿಭಟಿಸಿದ್ದಾರೆ.

ಕುಲಸಚಿವರ ಕಚೇರಿ ಬಾಗಿಲಿಗೆ ಹಣದ ತೋರಣ ಕಟ್ಟಿದ ಸಿಬ್ಬಂಧಿಗಳು ದಿಢೀರ್ ಪ್ರತಿಭಟನೆ ನಡೆಸಿದರು.

ಸಿಬ್ಬಂದಿ ವರ್ಗಾವಣೆ, ಪದನಾಮ ಬದಲಾವಣೆ, ಪದೋನ್ನತಿ ಇನ್ನಿತರ ವಿಚಾರಗಳಿಗೆ ಲಂಚದ ಬೇಡಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಕುಲಸಚಿವರ‌ ವಿರುದ್ಧ ಘೋಷಣೆ ಕೂಗಿದರು.

ಈವೇಳೆ ಕೆಎಸ್ಒಯು ಸಿಬ್ಬಂದಿ ಹಾಗೂ ಕುಲಸಚಿವಾಲಯ ಅಧಿಕಾರಿಗಳ ಮದ್ಯೆ ಮಾತಿನ ಚಕಮಕಿ ಕೂಡಾ ನಡೆದಿದೆ.

ಕೆಎಸ್ಒಯು ಕುಲಸಚಿವರ ಕಚೇರಿ ಬಾಗಿಲಿಗೆ ಹಣದ ತೋರಣ ಕಟ್ಟಿ ಪ್ರೊಟೆಸ್ಟ್ Read More

ಜಗತ್ತಿನಲ್ಲೇ ಭಾರತ ಕಥೆಗಳ ಆಗರ: ಕೇಂದ್ರ‌ಸಚಿವ ಡಾ.ಮುರುಗನ್ ಬಣ್ಣನೆ

ಮೈಸೂರು: ಭಾರತ ರಾಮಾಯಣ, ಮಹಾಭಾರತದಂತಹ ವಿಶಿಷ್ಟ ಕಥೆಗಳನ್ನು ನೀಡುವ ಮೂಲಕ ಜಗತ್ತಿನಲ್ಲೇ ಕಥೆಗಳ ಆಗರವೆನಿಸಿದೆ‌ ಎಂದು ಕೇಂದ್ರ ಸಚಿವ ಡಾ.ಎಲ್.ಮುರುಗನ್ ಬಣ್ಣಿಸಿದರು‌.

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಎರಡು ದಿನಗಳ ಕಾಲ ನಡೆದ ಮೂರನೇ ‘ಪರಿದೃಶ್ಯ’ ಅಂತರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಮುರುಗನ್ ಮಾತನಾಡಿದರು.

ಕಥಾ ನಿರೂಪಣೆ ಒಂದು ಜಾಗತಿಕ ಕಲೆಯಾಗಿದೆ, ಭಾರತದಲ್ಲಿ ನಿರ್ಮಾಣವಾದ ಸಿನೆಮಾಗಳು ಈಗ ಕೇವಲ ರಾಜ್ಯಗಳಿಗೆ ಸೀಮಿತವಾಗಿಲ್ಲ. ಬದಲಾಗಿ ಜಾಗತಿಕ ಮಟ್ಟದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುತ್ತಿವೆ ಎಂದು ಹೇಳಿದರು‌.

ಭಾರತವನ್ನು ಜಾಗತಿಕ ಮಟ್ಟದ ಸೃಜನಾತ್ಮಕ ಆರ್ಥಿಕತೆಯಾಗಿ ಮಾಡಲು ಆಡಿಯೋ ವಿಶ್ಯುವಲ್ ಎಂಟರ್ ಟೈನ್ಮೆಂಟ್ ಸಮ್ಮಿಟ್ ಅನ್ನು 2019 ರಲ್ಲಿ  ಘೋಷಣೆ ಮಾಡಲಾಗಿತ್ತು, ಈ ವರ್ಷ ಅದು ನಡೆಯಲಿದೆ. ಎಲ್ಲಾ ರೀತಿಯ ಮಾಧ್ಯಮಗಳಿಗೂ ಇದು ಪೂರಕವಾದದ್ದು ಎಂದು ತಿಳಿಸಿದರು.

ಪಾರಂಪರಿಕ ಮಾಧ್ಯಮ, ಟಿವಿ ಮಾಧ್ಯಮ, ಗೇಮಿಂಗ್, ಸಾಮಾಜಿಕ ಜಾಲತಾಣ ಕ್ಷೇತ್ರಕ್ಕೆ ಪ್ರೋತ್ಸಾಹದಾಯಕವಾಗಿದೆ. ಯಂಗ್ ಫಿಲ್ಮ್ ಮೇಕರ್ಸ್ ಚಾಲೆಂಜ್ ಎಂಬುದು ಕೂಡ ಇದರ ಒಂದು ಭಾಗ. ಇದರ ಅಡಿಯಲ್ಲಿ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಗೋವಾದಲ್ಲಿ 100 ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಪ್ರಸ್ತುತ ಹಾಲಿವುಡ್ ಸಿನೆಮಾಗಳ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಮಾಡಲು ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.

ನಮ್ಮ ದಕ್ಷಿಣ ಭಾರತದ ಸಿನೆಮಾಗಳಾದ ಆರ್ ಆರ್ ಆರ್, ಕಾಂತಾರ, ಬಾಹುಬಲಿ, ಪುಷ್ಪದಂತಹ ಸಿನೆಮಾಗಳು ನಮ್ಮ ತನದ ಕಥೆಗಳನ್ನು ಹೇಳುವ ಮೂಲಕ ವಿಶ್ವದಾದ್ಯಂತ ಮನ್ನಣೆ ಪಡೆದಿದೆ. ಸಿನೆಮಾಗಳಿಗೆ ಬೇಕಾದ ಅನುದಾನವನ್ನು ಕೇಂದ್ರದಿಂದ ನೀಡಲಾಗುತ್ತಿದೆ ಎಂದು ಡಾ.ಮುರುಗನ್ ತಿಳಿಸಿದರು.

ಮುಖ್ಯಅತಿಥಿಯಾಗಿ ಭಾಗವಹಿಸಿದ ಸುನೀಲ್ ಪುರಾಣಿಕ್ ಪರಿದೃಶ್ಯದಲ್ಲಿ ಉತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿ ಪಡೆದ ಚಿತ್ರ ಇಂದು ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿದೆ. ಸಾಕ್ಷ್ಯಚಿತ್ರ, ಕಿರುಚಿತ್ರದ ಮೂಲಕ, ಸಿನೆಮಾ ಕ್ಷೇತ್ರಕ್ಕೆ ಬರಬೇಕೆನ್ನುವ ಪ್ರತಿಭೆಗಳಿಗೆ ಪರಿದೃಶ್ಯ ಉತ್ತಮ ವೇದಿಕೆ. ಬೆಂಗಳೂರಲ್ಲಿ ಪ್ರಾರಂಭವಾದ ಪರಿದೃಶ್ಯ ಮುಂದಿನ ದಿನಗಳಲ್ಲಿ ಸಿನೆಮಾ ಕ್ಷೇತ್ರದ ಹಬ್ ಆಗಲಿರುವ ಮೈಸೂರಿಗೆ ರವಾನೆಯಾಗಿದ್ದು ಅಭಿನಂದನಾರ್ಹ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಉದ್ಯಮಿ ಜಗನ್ನಾಥ ಶೆಣೈ, ಮೈಸೂರು ಸಿನೆಮಾ ಸೊಸೈಟಿಯ ಅಧ್ಯಕ್ಷ ಡಾ. ಚಂದ್ರಶೇಖರ ಸಿ ಆರ್, ಕಾರ್ಯದರ್ಶಿ ಪದ್ಮಾವತಿ ಎಸ್ ಭಟ್ ಉಪಸ್ಥಿತರಿದ್ದರು.

ಜಗತ್ತಿನಲ್ಲೇ ಭಾರತ ಕಥೆಗಳ ಆಗರ: ಕೇಂದ್ರ‌ಸಚಿವ ಡಾ.ಮುರುಗನ್ ಬಣ್ಣನೆ Read More

ದೇಶ ತಿದ್ದುವ ಒಳ್ಳೆಯ ಪ್ರಾಧ್ಯಾಪಕರಾಗಿ:ಡಾ.ಅಹಲ್ಯಾ ಕಿವಿಮಾತು

ಮೈಸೂರು: ನಾಡಿನ ಭವಿಷ್ಯದ ರೂವಾರಿಗಳಾದ ನೀವು ದೇಶ ತಿದ್ದುವ ಒಳ್ಳೆಯ ಪ್ರಾಧ್ಯಾಪಕರಾಗಿ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯ ಕುಲಪತಿ ಡಾ.ಎಸ್ ಅಹಲ್ಯಾ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ವತಿಯಿಂದ 53 ದಿನ ನಡೆದ ಕೆ- ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷೆಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ವಿಧ್ಯಾರ್ಥಿಗಳಿಗೆ ಶುಭಹಾರೈಸಿ ಮಾತನಾಡಿದರು.

ಯಾವುದೇ ಪ್ರತಿಫಲಾಪೇಕ್ಷವಿಲ್ಲದೆ, ಶಿಕ್ಷಕ ವೃತ್ತಿಯಲ್ಲಿ ತೊಡಗಿಸಿಕೊಳ್ಳಿ. ನೀವು ಗುರುಗಳಾಗಿ ನಿಮ್ಮಿಂದ ತಿದ್ದುವ ವಿದ್ಯಾರ್ಥಿಗಳಿಗೆ ಸರಿ ದಾರಿ ತೋರಿಸಿ ಎಂದು ಸಲಹೆ ನೀಡಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಮನೋಜ್ ಜೈನ್ ಅಧ್ಯಯನ ಪುಸ್ತಕ ಬಿಡುಗಡೆ ಮಾಡಿದರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಶರಣಪ್ಪ ವಿ ಹಲಸೆ ಅವರು ಎಲ್ಲಾ ಭವಿಷ್ಯದ ಪ್ರಾಧ್ಯಾಪಕರಿಗೆ ಶುಭಾಶಯ ತಿಳಿಸಿದರು.

ವಿ.ವಿ. ಕುಲಸಚಿವ ಪ್ರೊ. ಕೆ.ಬಿ. ಪ್ರವೀಣ, ಪರೀಕ್ಷಾಂಗ ಕುಲಸಚಿವ ಪ್ರೊ. ಹೆಚ್. ವಿಶ್ವನಾಥ್, ಡೀನ್ ಶೈಕ್ಷಣಿಕ ಪ್ರೊ. ರಮಾನಾಥಂ ನಾಯ್ಡು, ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಪ್ರಾಧ್ಯಾಪಕರಾದ ಡಾ. ಶೆಲ್ಪಪಿಳ್ಳೆ ಅಯ್ಯಂಗಾರ್, ಡಾ. ಶೈಲೇಶ್ ರಾಜೇ ಅರಸ್, ಡಾ. ಜ್ಯೋತಿಶಂಕರ್, ವಿಶೇಷಾಧಿಕಾರಿ ಮಹದೇವ, ಹಿರಿಯ ಪ್ರಾಧ್ಯಾಪಕ ಎನ್.ಎನ್ ಪ್ರಹ್ಲಾದ, ಸಿಬ್ಬಂದಿಗಳಾದ ಗಣೇಶ್ ಕೆ.ಜಿ. ಕೊಪ್ಪಲ್ ಮತ್ತು ಸಿದ್ಧೇಶ್ ಹೊನ್ನೂರು ಮತ್ತತರರು ಹಾಜರಿದ್ದರು.

ದೇಶ ತಿದ್ದುವ ಒಳ್ಳೆಯ ಪ್ರಾಧ್ಯಾಪಕರಾಗಿ:ಡಾ.ಅಹಲ್ಯಾ ಕಿವಿಮಾತು Read More

ದೇಶದಲ್ಲಿ ರೇಷ್ಮೆ ಬೆಳೆ ಬೃಹತ್ ಉದ್ಯಮವಾಗಿ ಬೆಳೆದಿದೆ-ಹೆಚ್ ಡಿ ಕೆ

ಮೈಸೂರು: ದೇಶದ 27 ರಾಜ್ಯಗಳಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತಿದ್ದು, ರೇಷ್ಮೆ ಉದ್ಯಮವು ಬೃಹತ್ ಉದ್ಯಮವಾಗಿ ಬೆಳೆದಿದೆ ಎಂದು
ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ರೇಷ್ಮೆ ಉದ್ಯಮ ದೇಶದ ಜಿ ಡಿಪಿ ಬೆಳವಣಿಗೆಗೆ ಉತ್ತಮ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.

ಶುಕ್ರವಾರ ಕೇಂದ್ರ ರೇಷ್ಮೆ ಮಂಡಳಿ ವತಿಯಿಂದ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿದ್ದ ಕೇಂದ್ರ ರೇಷ್ಮೆ ಮಂಡಳಿಯ ಪ್ಲಾಟಿನಮ್ ಜುಬಿಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದ 27 ರಾಜ್ಯಗಳ ರೈತರು ತಮ್ಮನ್ನು ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡು ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ಕೂಡಾ ರೇಷ್ಮೆ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಮೈಸೂರು ಭಾಗದಲ್ಲಿ ಅಭಿವೃದ್ಧಿ ಹೊಂದಲು ಮೈಸೂರು ಅರಸರ ಕೊಡುಗೆ ಹೆಚ್ಚು ಎಂದು ತಿಳಿಸಿದರು.

ಚೀನಾದಲ್ಲಿ ಹೆಚ್ಚು ರೇಷ್ಮೆ ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಭಾರತವು ರೇಷ್ಮೆ ಬೆಳೆಯಲ್ಲಿ ಪ್ರಥಮ ಸ್ಥಾನ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರವು 1.52 ಲಕ್ಷ ಕೋಟಿ ಹಣವನ್ನು ಕೃಷಿ ಕ್ಷೇತ್ರಕ್ಕೆ ನೀಡುತ್ತಿದೆ. ಪ್ರತಿ ಕ್ಯಾಬಿನೆಟ್ ಸಭೆಯಲ್ಲಿ ರೈತರ ಅಭಿವೃದ್ಧಿಗೆ ಸಂಬಂದಿಸಿದ ಚರ್ಚೆಗಳು ನಡೆಯುತ್ತವೆ. ರೈತರ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ,ಅದಕ್ಕಾಗಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ರೈತರು ಆತ್ಮ ವಿಶ್ವಾಸದಿಂದ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಶ್ಯಾಮ್ ಪ್ರಕಾಶ್ ಮುಖರ್ಜಿ ಅವರ ದೂರ ದೃಷ್ಟಿಯಿಂದ ಕೇಂದ್ರೀಯ ರೇಷ್ಮೆ ಮಂಡಳಿ ಪ್ರಾರಂಭವಾಯಿತು. ಈ ಮಂಡಳಿಯ ಪ್ರಾರಂಭದಿಂದ ರೇಷ್ಮೆ ಬೆಲೆಯಲ್ಲಿ ಹಲವು ಆವಿಷ್ಕಾರ ಆಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಜವಳಿ ಖಾತೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಮಾತನಾಡಿ ಮೈಸೂರಿನ ರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರಿಗೆ ರೇಷ್ಮೆಯನ್ನು ಪರಿಚಯಿಸಿದರು. ಮೈಸೂರು ರೇಷ್ಮೆ ಸೀರೆಗಳು ಇಂದು ವಿಶ್ವ ಪ್ರಸಿದ್ಧಿಯನ್ನು ಪಡೆದಿವೆ. ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು ರೇಷ್ಮೆ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

ಚೈನಾದ ರೇಷ್ಮೆ ಯಿಂದ ಭಾರತದ ರೇಷ್ಮೆ ಗೆ ಬೆಲೆ ಕಡಿಮೆ ಇದೆ. ಆದರೆ ಮುಂದಿನ ದಿನಗಳಲ್ಲಿ ಚೈನಾದ ರೇಷ್ಮೆ ಕಡಿಮೆ ಆಗುತ್ತದೆ ಅಲ್ಲಿ ಕೆಲಸಗಾರರ ಕೊರತೆ ಉಂಟಾಗುತ್ತಿದೆ. ಇದರಿಂದ ಭಾರತದ ರೇಷ್ಮೆಗೆ ಉತ್ತಮ ಬೆಲೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರೇಷ್ಮೆ ಬೆಳೆಯನ್ನು ಬೆಳೆಯುವುದರಿಂದ ರೈತರು ಉತ್ತಮ ಆದಾಯ ಗಳಿಸಬಹುದಾಗಿದೆ. ದೇಶದ ರೇಷ್ಮೆ ಬೆಳೆಗಾರರ ಹಿತ ಕಾಪಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಗಿರಿರಾಜ್ ಸಿಂಗ್ ಭರವಸೆ ನೀಡಿದರು.

ಕೇಂದ್ರ ಜವಳಿ ರಾಜ್ಯ ಸಚಿವರಾದ ಪವಿತ್ರ ಮಾರ್ಗರೇಟ್ ಕನ್ನಡ ಭಾಷೆಯು ಹೆಚ್ಚು ಶ್ರೀಮಂತವಾದ ಬಾಷೆಯಾಗಿದೆ. ರೇಷ್ಮೆ ಬೆಳೆಯು ಅಬಿವೃದ್ದಿ ಹೊಂದಲು 1949 ರಿಂದ ರೇಷ್ಮೆ ಮಂಡಳಿಯ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ, ಇದು ಗ್ರಾಮೀಣ ಜನರ ಹಾಗೂ ಮಹಿಳೆಯರ ನೆಚ್ಚಿನ ಬೆಳೆಯಾಗಿದೆ. ಇದರಿಂದ ಗ್ರಾಮಿಣ ಜನರ ಆದಾಯವನ್ನು ಹೆಚ್ಚಿಸುತ್ತಿದೆ ಎಂದು ತಿಳಿಸಿದರು.

ಪಶು ಸಂಗೋಪನೆ ಹಾಗೂ ರೇಷ್ಮೆ ಇಲಾಖೆಯ ಸಚಿವರಾದ ಕೆ ವೆಂಕಟೇಶ್ ಅವರು ಮಾತನಾಡಿ ರೇಷ್ಮೆ ಕರ್ನಾಟಕ ರಾಜ್ಯದಲ್ಲಿ ಪ್ರತಿಷ್ಠಿತ ಬೆಳೆಯಾಗಿದೆ. ಕೇಂದ್ರ ಸರಕಾರದಿಂದ ರೇಷ್ಮೆ ಬೆಳೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ರೇಷ್ಮೆ ಬೆಳೆಗಾರರಿಗೆ ಅನುಕೂಲಕರವಾದ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರಬೇಕು ಎಂದು ಮನವಿ ಮಾಡಿದರು.

ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ ಮೈಸೂರಿಗೂ ರೇಷ್ಮೆ ಗೂ ಅವಿನಾಭಾವ ಸಂಬಂಧ ಇದೆ. ವಿಜಯನಗರ ಅರಸರ ಕಾಲದಿಂದ ರೇಷ್ಮೆ ಇಲ್ಲಿ ಪ್ರಚಲಿತದಲ್ಲಿ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರೇಷ್ಮೆ ಬೆಳೆಯ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ರೇಷ್ಮೆ ಬೆಳೆಗೆ ಪ್ರೋತ್ಸಾಹ ನೀಡಲು ಎಲ್ಲಾ ರೀತಿಯ ಕಾರ್ಯ ನಿರ್ವಹಿಸಲಾಗುವುದು ಎಂದು ತಿಳಿಸಿದರು.

ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯರಾದ ಡಾ. ಕೆ ಸುಧಾಕರ್ ಮಾತನಾಡಿ ಶಿಡ್ಲಘಟ್ಟದಲ್ಲಿ ಹೈಟೆಕ್ ಮಾರುಕಟ್ಟೆಯನ್ನು ಸ್ಥಾಪಿಸಲಾಗುತ್ತಿದೆ ಎಂದು ಹೇಳಿದರು.

ಕೇಂದ್ರ ಜವಳಿ ಇಲಾಖೆಯ ಕಾರ್ಯದರ್ಶಿ ರಚನಾ ಷಾ,ರಾಜ್ಯ ಸಭಾ ಸದಸ್ಯ ನಾರಾಯಣ್ ಕೊರಗಪ್ಪ,ಶಾಸಕ ಜಿ. ಟಿ ದೇವೇಗೌಡ,ರೇಷ್ಮೆ ಇಲಾಖೆ ಆಯುಕ್ತ ರಾಜೇಶ್ ಗೌಡ, ಕೇಂದ್ರ ಜವಳಿ ಇಲಾಖೆಯ ಜಂಟಿ ಕಾರ್ಯದರ್ಶಿ ಪ್ರಜಕ್ತ ಎಲ್ ವರ್ಮ ಮತ್ತಿತರ ಅಧಿಕಾರಿಗಳು,ರೈತರು ಉಪಸ್ಥಿತರಿದ್ದರು.

ದೇಶದಲ್ಲಿ ರೇಷ್ಮೆ ಬೆಳೆ ಬೃಹತ್ ಉದ್ಯಮವಾಗಿ ಬೆಳೆದಿದೆ-ಹೆಚ್ ಡಿ ಕೆ Read More