ಅಪರೂಪದ ಶಸ್ತ್ರ ಚಿಕಿತ್ಸೆ ಮಾಡಿ ದೇಶದ ಗಮನ ಸೆಳೆದ ಕೆ.ಆರ್.ಆಸ್ಪತ್ರೆ ವೈದ್ಯರ ತಂಡ
ಮೈಸೂರು: ಸರ್ಕಾರಿ ಆಸ್ಪತ್ರೆಗಳು ಎಂದರೆ ಮೂಗು ಮುರಿಯುವವರೇ ಹೆಚ್ಚು,ಆದರೆ ಮೈಸೂರಿನ ದೊಡ್ಡಾಸ್ಪತ್ರೆ ಖ್ಯಾತಿಯ ಕೆ.ಆರ್.ಆಸ್ಪತ್ರೆ ವೈದ್ಯರು ದೇಶದಲ್ಲಿಯೇ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ ದೇಶದ ಗಮನ ಸೆಳೆದಿದ್ದಾರೆ.
ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ 72 ವರ್ಷದ ವಯೋವೃದ್ಧರ ಬಲಭಾಗದ ಯಕೃತ್ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.
ಶಸ್ತ್ರಚಿಕಿತ್ಸೆ ನಡೆಸಿದ ಕೇವಲ ಎರಡು ವಾರಗಳಲ್ಲಿ ರೋಗಿಯು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿರುವುದು ವಿಶೇಷ.
ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಮೂಲದ 72 ವರ್ಷದ ವಯೋವೃದ್ಧರ ಯಕೃತ್ ನ ಅರ್ಧ ಭಾಗವನ್ನ ಕತ್ತರಿಸಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ, ರೋಗಿಯ ಆರೋಗ್ಯದಲ್ಲಿ ಏರುಪೇರಾಗದ ರೀತಿ ಎಚ್ಚರಿಕೆ ವಹಿಸಿ ರೋಗಿಯ ಜೀವ ಉಳಿಸುವ ಮೂಲಕ ಹೊಸ ಸಾಧನೆ ಮಾಡಿದ್ದಾರೆ.
ರೋಗಿಯ ಯಕೃತ್ ಶೇ.60 ರಷ್ಟು ಭಾಗ ಕತ್ತರಿಸುವ ವೇಳೆ ಸಾಕಷ್ಟು ಸವಾಲುಗಳು ಎದುರಾಗಿತ್ತು. ಶಸ್ತ್ರ ಚಿಕಿತ್ಸೆ ಸಂದರ್ಭದಲ್ಲಿ ರಕ್ತಸ್ರಾವ ಹೆಚ್ಚಾಗಿದ್ದ ಕಾರಣ ಕ್ಯಾವಿಟ್ರಾನ್ ಅಲ್ಟ್ರಾಸಾನಿಕ್ ಸರ್ಜಿಕಲ್ ಆಸ್ಪಿರೇಟರ್ ನಂತಹ ಹೈಟೆಕ್ ಉಪಕರಣವನ್ನ ಬಳಸಬೇಕಾದ ಅಗತ್ಯವಿರುತ್ತದೆ.
ಸಾಮಾನ್ಯವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿರುವ ಹೈಟೆಕ್ ಸಲಕರಣೆಗಳು ಕೆ.ಆರ್.ಆಸ್ಪತ್ರೆಯಲ್ಲಿ ಲಭ್ಯವಿಲ್ಲ. ಆದರೂ ಕೂಡ CUSA ಉಪಕರಣ ಬಳಸದೆ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿರುವುದು ನಿಜಕ್ಕೂ ವಿಶೇಷ.
ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮುಖ್ಯಸ್ಥ ಡಾ.ಎಸ್.ಚಂದ್ರಶೇಖರ್, ಸರ್ಜಿಕಲ್ ಅಂಕೋಲಜಿ ವಿಭಾಗದ ಕ್ಯಾನ್ಸರ್ ತಜ್ಞ ಡಾ.ನವೀನ್ ಗೌಡ, ಸರ್ಜಿಕಲ್ ಗ್ಯಾಸ್ಟ್ರೋ ವಿಭಾಗದ ಡಾ.ಶ್ರೀವತ್ಸ ಅರವಳಿಕೆ ವಿಭಾಗದ ಡಾ.ವಿ.ವೈ.ಶ್ರೀನಿವಾಸ್, ಡಾ.ದೀಪಾ, ಡಾ.ಪೂಲನ್ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ರೋಗಿಗೆ ಮರುಜೀವ ನೀಡಿದೆ.
72 ವರ್ಷ ವಯೋವೃದ್ಧರಾಗಿರುವ ಕಾರಣ ಶಸ್ತ್ರಚಿಕಿತ್ಸೆ ಸವಾಲಾಗಿತ್ತು. ಯಕೃತ್ ಭಾಗದ ಶೇ.60 ರಷ್ಟು ಭಾಗ ತೆಗೆದು ಆಪರೇಷನ್ ಮಾಡಿ ಜೀವ ಉಳಿಸುವುದು ಕಷ್ಟ, ಆದರೆ ನಮ್ಮಲ್ಲಿರುವ ಸಿಬ್ಬಂದಿಗಳ ಕಠಿಣ ಶ್ರಮದಿಂದ ಸಾಧ್ಯವಾಗಿದೆ ಎಂದು ಕೆಆರ್ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರ ಚಿಕಿತ್ಸಕ ಡಾ.ನವೀನ್ ಗೌಡ ಹೆಮ್ಮೆಯಿಂದ ಹೇಳಿದ್ದಾರೆ.
ಯಾವುದೇ ಅತ್ಯಾಧುನಿಕ ಉಪಕರಣಗಳಿಲ್ಲದೇ ಎಲ್ಲಾ ವೈದ್ಯರ ಶ್ರಮದಿಂದ ರೋಗಿ ಕೇವಲ ಎರಡು ವಾರದಲ್ಲಿಯೇ ಸಂಪೂರ್ಣ ಗುಣಮುಖರಾಗಿರುವುದು ಪವಾಡವೇ ಆಗಿದೆ.
ರೋಗಿಗಳು ಸರ್ಕಾರಿ ಆಸ್ಪತ್ರೆ ಎಂಬ ಕೀಳರಿಮೆ ಬಿಟ್ಟು ಕೆ.ಆರ್.ಆಸ್ಪತ್ರೆಗೆ ಬನ್ನಿ ಎಂದು ಡಾ.ನವೀನ್ ಗೌಡ ಜನತೆಗೆ ಕರೆ ನೀಡಿದ್ದಾರೆ
ವೈದ್ಯೋ ನಾರಾಯಣೋ ಹರಿ ಅಂತ ಕರೆಯುತ್ತಾರೆ, ನನ್ನ ಪಾಲಿಗೆ ವೈದ್ಯರು ನಿಜಕ್ಕೂ ದೇವರುಗಳಂತೆ ಕಾಣುತ್ತಾರೆ, ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನನಗೆ ಈ ಘೋರ ಕ್ಯಾನ್ಸರ್ ಕೂಡ ಕಾಡಿತ್ತು. ಆದರೆ ,ವೈದ್ಯರ ಕಠಿಣ ಶ್ರಮದಿಂದ ನನ್ನ ಜೀವ ಉಳಿದಿದೆ,ನಾನು ಅವರಿಗೆಲ್ಲರಿಗೂ ಋಣಿಯಾಗಿದ್ದೇನೆ ಎಂದು ಕ್ಯಾನ್ಸರ್ ಗೆದ್ದು ಬಂದ ರೋಗಿ ಕೃತಜ್ಞತೆ ಸಲ್ಲಿಸಿದ್ದಾರೆ.
ಅಪರೂಪದ ಶಸ್ತ್ರ ಚಿಕಿತ್ಸೆ ಮಾಡಿ ದೇಶದ ಗಮನ ಸೆಳೆದ ಕೆ.ಆರ್.ಆಸ್ಪತ್ರೆ ವೈದ್ಯರ ತಂಡ Read More