ಕೊಳ್ಳೇಗಾಲ: ಕಾದಂಬರಿಗಳು ಹಲವರ ಜೀವನ ಬದಲಾಯಿಸಿರುವ ನಿದರ್ಶನಗಳಿವೆ ಎಂದು ಖ್ಯಾತ ಸಾಹಿತಿ ಹಾಗೂ ಮಾಜಿ ಸಚಿವೆ ಡಾ.ಬಿ.ಟಿ.ಲಲಿತಾ ನಾಯಕ್ ತಿಳಿಸಿದರು.
ಪಟ್ಟಣದ ಅರುಣಾಚಲೇಶ್ವರ ಸಭಾಂಗಣದಲ್ಲಿ ಸಾಹಿತ್ಯ ಮಿತ್ರ ಕೂಟ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಾದಂಬರಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಾದಂಬರಿಗಳಿಗೆ ಪ್ರಶಸ್ತಿ ಬಂದಿದೆ ಎಂದರೆ ಅದರಲ್ಲಿ ಜೀವನದ ಸತ್ಯದರ್ಶನದ ಮಜಲುಗಳು ತೆರೆದುಕೊಂಡಿರುತ್ತದೆ. ಅಲ್ಲಿ ಬರಹಗಾರ ಬಿತ್ತಿದಂತೆ ಸಮಾಜವನ್ನು ಬೆಳೆಸಬಹುದಾಗಿದೆ ಹಾಗಾಗಿ ಬರಹಗಾರನಿಗೆ ಬಹುದೊಡ್ಡ ಜವಾಬ್ದಾರಿಯೂ ಇರುತ್ತದೆ ಎಂದು ಹೇಳಿದರು.
ಪ್ರಸ್ತುತ ಆಯ್ಕೆಯಾಗಿರುವ ಕಾದಂಬರಿಗಳು ಬಹಳ ಪ್ರಬುಧ್ಧವಾಗಿರುವುದರಿಂದಲೇ ಅವುಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ, ಕಾದಂಬರಿ ಬರೆಯುವವರನ್ನು ಓದುಗರ ಗಮನಸೆಳೆಯಲು ಸಾಹಿತ್ಯ ಮಿತ್ರಕೂಟ ಮಾಡುತ್ತಿರುವ ಸೇವೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾದಂಬರಿಗಳ ಕುರಿತು ಮಾತನಾಡಿದ ಮೈಸೂರು ಕೃಷ್ಣಮೂರ್ತಿಯವರು ಬರೆಯುವರ ಸಂಖ್ಯೆ ಹೆಚ್ಚುತ್ತಿದೆ ಓದುಗರ ಮತ್ತು ವಿಮರ್ಶಿಸುವರ ಸಂಖ್ಯೆ ಕಡಿಮೆಯಾಗುತ್ತಿದೆ ಪ್ರಸ್ತುತ ಜನ ಮೊಬೈಲ್, ಸೀರಿಯಲ್ ಸಂಸ್ಕೃತಿ ಬೆಳೆಸಿಕೊಂಡಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಶಸ್ತಿ ವಿಜೇತರಾದ ಬಂಗಿದೊಡ್ಡ ಮಂಜುನಾಥ, ಕಾರ್ತಿಕಾದಿತ್ಯ, ಎಮ್ ಜಿ ಮಂಜುನಾಥ್ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿ ನಗದು ಬಹುಮಾನ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತ್ಯ ಮಿತ್ರಕೂಟದ ಅಧ್ಯಕ್ಷ ಮದ್ದೂರುದೊರೆಸ್ವಾಮಿ ವಹಿಸಿದ್ದರು, ಸ್ಥಾಪಕ ಅಧ್ಯಕ್ಷ,ಪ್ರೊ.ದೊಡ್ಡಲಿಂಗೇಗೌಡ, ಕಾರ್ಯದರ್ಶಿ ಸತೀಸ್, ಖಜಾಂಚಿ ಮಂಜುನಾಥ ಬಾಳಗುಣಸೆ, ಉಪಾಧ್ಯಕ್ಷ ನಂ ರಮೇಶ್, ನಿರ್ದೇಶಕರಾದ ಚನ್ನಮಾದೇಗೌಡ, ಪಳನಿಸ್ವಾಮಿ ಜಾಗೇರಿ, ಶಂಕರ್, ಕೋಮಲ, ಕಾತ್ಯಾಯಿನಿ ಮತ್ತಿತರು ಉಪಸ್ಥಿತರಿದ್ದರು.
ಕೊಳ್ಳೇಗಾಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಹದಿನಾರನೇ ಬಜೆಟ್ ಸಮತೋಲನ ಬಜೆಟ್ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿರವರು ಮೆಚ್ಚುಗೆ ವ್ಯಕ್ತಪಡಿಸಿದರು.
ಎಲ್ಲಾ ಸಮುದಾಯವರ ಎಲ್ಲಾ ವರ್ಗದವರ ಹಿತ ಕಾಯುವಂತ ಬಜೆಟ್ ಆಗಿದ್ದು,ಬಜೆಟ್ ನಲ್ಲಿ ಎಲ್ಲರಿಗೂ ನ್ಯಾಯ ಸಮ್ಮತವಾದಂತ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದಾರೆ ಎಂದು ಹೇಳಿದರು.
ತಾಲ್ಲೂಕಿನ ಟಗರಪುರ ಹಾಗೂ ಕುಂತೂರು ಗ್ರಾ. ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಸುಮಾರು 80 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ವೇಳೆ ಅವರು ಮಾತನಾಡಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಹೇಳುವ ಹಾಗೆ ಸಿದ್ದರಾಮಯ್ಯರವರು ರಾಷ್ಟ್ರಮಟ್ಟದ ನಾಯಕರಾಗಿ ಬೆಳೆಯಬಹುದಿತ್ತು, ರಾಜ್ಯದ ಜನತೆಗೆ ಭಾಗ್ಯಗಳ ಭಾಗ್ಯ ಕೊಟ್ಟ ಸಿದ್ದರಾಮಯ್ಯ ಆ ರೀತಿ ದೇಶದಲ್ಲಿ ಜನಮನ್ನಣೆಗೆ ಪಾತ್ರರಾಗಿದ್ದಾರೆ. ಅವರಿಗೆ ಹಿಂದಿ, ಉರ್ದು ಭಾಷೆಗಳು ಬರುತ್ತಿದ್ದರೆ ದೇಶದ ಇತರ ರಾಜ್ಯದವರು ಅವರನ್ನು ಕರೆದು ಬಜೆಟ್ ಬಗ್ಗೆ ಚರ್ಚಿಸುತ್ತಿದ್ದರು ಎಂದು ತಿಳಿಸಿದರು.
ವಿರೋಧ ಪಕ್ಷದವರು ನಾನಾ ರೀತಿಯಲ್ಲಿ ವ್ಯಾಖ್ಯಾನ ಮಾಡುತಿದ್ದಾರೆ.ವಿರೋಧ ಮಾಡುವವರ ಶ್ರೀಮತಿಯವರು ಗ್ಯಾರೆಂಟಿ ಯೋಜನೆಯ ಸೌಲಭ್ಯ ಪಡೆದುಕೊಳ್ಳುತ್ತಿಲ್ಲವೇ ಎಂದು ಪ್ರಶ್ನಿಸಿದರು.
ಪಕ್ಷಾತೀತವಾಗಿ ಧರ್ಮಾತೀತವಾಗಿ ಎಲ್ಲರಿಗೂ ಸಿದ್ದರಾಮಯ್ಯ ಸೇವೆ ಕಲ್ಪಿಸಿಕೊಟ್ಟಿದ್ದಾರೆ. ವಿರೋಧ ಪಕ್ಷದ ಕೆಲವರು ಗ್ಯಾರೆಂಟಿ ಯೋಜನೆಗಳನ್ನು ಒಪ್ಪಿಕೊಂಡಿದ್ದಾರೆ ಆದರೆ ಕೆಲವರು ಅದನ್ನು ಟೀಕೆ ಮಾಡುತ್ತಿದ್ದಾರೆ ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ ಅವರು ಯಾವುದೇ ಸರ್ಕಾರವಿರಲಿ ಯಾವುದೇ ಪಕ್ಷವಿರಲಿ ಜನಪರ ಕೆಲಸ ಮಾಡುವುದನ್ನು ಒಪ್ಪಿಕೊಳ್ಳುವುದು ಒಳ್ಳೆಯ ಗುಣ ಎಂದು ಅಭಿಪ್ರಾಯ ಪಟ್ಟರು.
ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆಗಳಿಗೆ 56 ಸಾವಿರ ಕೋಟಿ ರೂಗಳನ್ನು ಕಾಯ್ದಿರಿಸಿ ಉಳಿದ ಅಭಿವೃದ್ಧಿ ಯೋಜನೆಗಳಿಗೂ ಅನುದಾನ ನೀಡಲಾಗುತ್ತಿದೆ. ಇಂದು ಯಾವುದೇ ಅನುದಾನ ಕೊಡದಿದ್ದರೆ ನಾನು ಭೂಮಿ ಪೂಜೆ ಮಾಡಲು ಸಾಧ್ಯವಾಗುತ್ತಿತ್ತೇ ಎಂದು ಕೃಷ್ಣಮೂರ್ತಿ ಪ್ರಶ್ನಿಸಿದರು.
ಒಬ್ಬರ ಕಾಲದಲ್ಲಿ ಭೂಮಿ ಪೂಜೆ ಯಾಗಿದ್ದನ್ನು ಅವರ ಕಾಲದಲ್ಲಿ ಉದ್ಘಾಟನೆ ಮಾಡಲು ಸಾಧ್ಯವಾಗದಿದ್ದರೆ ಮುಂದಿನ ಶಾಸಕ ಉದ್ಘಾಟನೆ ಮಾಡುವುದು ಸಹಜ ಆದರೆ ಯಾರೊ ಮಾಧ್ಯಮವೊಂದರಲ್ಲಿ ಹೇಳಿಕೆ ನೀಡಿರುವುದನ್ನು ನೋಡಿದೆ. ಯಾವ ಯೋಜನೆಯಲ್ಲಿ ಅವರ ಸರ್ಕಾರದ ಯೋಜನೆಗಳು ಮುಂಜೂರು, ಜಾರಿ ಮಾಡಿದ್ದಾರೆ ಎಂಬುದನ್ನು ಸಾಬೀತುಪಡಿಸಲಿ ಎಂದು ಮಾಜಿ ಶಾಸಕರಿಗೆ ಸವಾಲು ಹಾಕಿದರು.
ವಿರೋಧ ಪಕ್ಷದ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗ್ಗೆ ಕೇಂದ್ರ ಸರ್ಕಾರದೊಡನೆ ಲೋಕಸಭೆಯಲ್ಲಿ ಹೋರಾಟ ಮಾಡದೇ ಹೋಗಿದ್ದರೆ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಅಷ್ಟೊಂದು ಅನುದಾನ ತರಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಜಿಲ್ಲೆಯಲ್ಲಿ ಅರೆ ನೀರಾವರಿಯಿದ್ದು ಪೂರ್ಣ ನೀರಾವರಿ ಯೋಜನೆಗಳಿಗೆ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಜಿಲ್ಲೆಯ ಶಾಸಕರಾದಿಯಾಗಿ ನಾನು ಕೂಡ ಲಿಖಿತ ಮನವಿ ಸಲ್ಲಿಸಿದ್ದೇನೆ, ಈ ಎಲ್ಲಾ ಯೋಜನೆಗಳಿಗೆ ಸಿದ್ದರಾಮಯ್ಯನವರು, ಉಪಮುಖ್ಯಮಂತ್ರಿಗಳಾದಿಯಾಗಿ ಎಲ್ಲಾ ಸಚಿವರು ಅನುಮೋದನೆ ನೀಡಲಿದ್ದಾರೆ ಎಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿದರು.
ಚಾಮರಾಜನಗರ ಜಿಲ್ಲೆಯಲ್ಲಿ ರೇಷ್ಮೆ ಕಾರ್ಖಾನೆಗಳನ್ನು, ರೇಷ್ಮೆ ಮಾರುಕಟ್ಟೆಗಳನ್ನು ಪುನಶ್ಚೇತನ ಗೊಳಿಸಿ ರೈತರಿಗೆ ರೇಷ್ಮೆ ಕುರಿತು ತರಬೇತಿ ಕೊಡುವ ಯೋಜನೆಗಳ ಬಗ್ಗೆ ಚಿಂತನೆ ನಡೆಸಿದ್ದು ಜಿಲ್ಲೆಯಲ್ಲಿ ರೇಷ್ಮೆಯ ಸಮಗ್ರ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಹಾಕಿರುವುದಾಗಿ ತಿಳಿಸಿದರು
ಯಳಂದೂರಿನಲ್ಲಿ 100 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಾಣವಾಗುತ್ತಿದೆ ಈ ಆಸ್ಪತ್ರೆ ಮಂಜೂರಾತಿಗೆ ಸಾಕಷ್ಟು ಶ್ರಮವಹಿಸಬೇಕಾಯಿತು,ಏಕೆಂದರೆ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿರುವ ಸೀಮ್ಸ್ ಆಸ್ಪತ್ರೆ ಈ ಎರಡು ಆಸ್ಪತ್ರೆಗಳ ನಡುವೆ ಕೇವಲ 20 ಕಿ.ಮೀ ಅಂತರದಲ್ಲಿ 100 ಹಾಸಿಗೆ ಉಳ್ಳ ಆಸ್ಪತ್ರೆ ಮಂಜೂರು ಮಾಡಲು ಸಾಧ್ಯವಿಲ್ಲ ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರನ್ನು ಮನವೊಲಿಸಿ ಕ್ಷೇತ್ರಕ್ಕೆ 100 ಹಾಸಿಗೆಯುಳ್ಳ ಆಸ್ಪತ್ರೆ ಮಂಜೂರು ಮಾಡಿಸಿದ್ದೇನೆ ಎಂದು ತಿಳಿಸಿದರು.
ಇದೇ ವೇಳೆ ಆಲಹಳ್ಳಿ ಗ್ರಾಮದಲ್ಲಿ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯ 2023-24ನೇ ಸಾಲಿನ ಅನುದಾನದ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಶುಧ್ಧ ಕುಡಿಯುವ ನೀರಿನ ಘಟಕವನ್ನು ಕೃಷ್ಣಮೂರ್ತಿ ಉದ್ಘಾಟಿಸಿದರು.
ನಂತರ 20 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ 10 ಲಕ್ಷ ರೂ. ವೆಚ್ಚದಲ್ಲಿ ಗ್ರಾಮದ ಬಸವ ಭವನದ ಮುಂದುವರಿದ ಕಾಮಗಾರಿಗೆ ಚಾಲನೆ ನೀಡಿದರು.
ಮಲ್ಲಹಳ್ಲಿ ಮಾಳ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಕೆಸ್ತೂರು ರಸ್ತೆಯ ಹುಣಸೆಕಟ್ಟೆಗೆ ರಸ್ತೆ ನಿರ್ಮಾಣ, ಕುಂತೂರುಮೋಳೆ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ಭಗೀರಥ ಭವನದ ಮುಂದುವರಿದ ಕಾಮಗಾರಿಗೆ ಚಾಲನೆ, ಚಿಲಕವಾಡಿ ಗ್ರಾಮದಲ್ಲಿರುವ ಪಾಲಿಟೆಕ್ನಿಕ್ ಕಾಲೇಜ್ ರಸ್ತೆ 20 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಆಲಹಳ್ಳಿ ಮಠದ ಬಸಪ್ಪ ಸ್ವಾಮೀಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಮಾಜಿ ತಾಪಂ ಸದಸ್ಯ ಚೆಲುವರಾಜು, ಲ್ಯಾಂಡ್ ಆರ್ಮಿ ಎ.ಇ.ಇ. ಚಿಕ್ಕಲಿಂಗಯ್ಯ, ನಿರ್ಮಿತಿ ಕೇಂದ್ರದ ಜೆ.ಇ. ಪ್ರತಾಪ್, ಟಗರುಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವಸ್ವಾಮಿ, ಉಪಾಧ್ಯಕ್ಷೆ ರಾಜಮ್ಮ,ಪಿ.ಡಿ.ಒ ಮಲ್ಲೇಶ್, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಕುಂತೂರು ಮೂಳೆ ರಾಜೇಂದ್ರ, ಮಾಜಿ ತಾಪಂ ಸದಸ್ಯ ಚೆಲುವರಾಜು, ಗೊಬ್ಬಳಿಪುರ ರಾಚಯ್ಯ, ಗ್ರಾಮದ ಮುಖಂಡರಾದ ಗೌಡಿಕೆ ಎ.ಬಿ. ಬಸವಣ್ಣ, ವೃಷಭೆಂದ್ರಪ್ಪ, ಎ.ಬಿ.ಜಗದೀಶ್ ಮತ್ತಿತರರು ಹಾಜರಿದ್ದರು.
ಕೊಳ್ಳೇಗಾಲ,ಮಾ.10: ನಿಶ್ಚಿತಾರ್ಥ ಮುಗಿಸಿ ಬರುವಾಗ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿ ಬಿದ್ದ ಪರಿಣಾಮ ನಿರ್ವಾಹಕ ಸಾವನ್ನಪ್ಪಿದ್ದು, 50 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಹನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಸ್ ಉರುಳಿಬಿದ್ದಾಗ ಬಸ್ ಡೋರ್ ನಲ್ಲಿ ನಿಂತಿದ್ದ ನಿರ್ವಾಹಕ ದೊಡ್ಡಿಂದುವಾಡಿ ನವೀನ್ ಬಸ್ ಅಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಸ್ ನಲ್ಲಿದ್ದವರು ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿಕೊಂಡು ಸ್ವಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ ತೆಳ್ಳನೂರು-ಬಂಡಳ್ಳಿ ಮಾರ್ಗ ಮಧ್ಯೆ ಭಾನುವಾರ ರಾತ್ರಿ ಈ ಅಪಘಾತ ಸಂಭವಿಸಿದೆ.
ಹನೂರು ತಾಲೂಕಿನ ಶ್ಯಾಗ್ಯ ಗ್ರಾಮದ ಯುವಕನಿಗೂ ಕನಕಪುರ ತಾಲೂಕು ಹನಿಯೂರು ಗ್ರಾಮದ ಯುವತಿಗೂ ಮದುವೆ ನಿಶ್ಚಯವಾಗಿತ್ತು.
ಯುವಕನ ಸಂಬಂಧಿಕರು ಕಬ್ಬಳ್ಳಿ ಗ್ರಾಮದಲ್ಲಿ ನಡೆದ ನಿಶ್ಚಿತಾರ್ಥ ಮುಗಿಸಿ ಕೊಂಡು ಖಾಸಗಿ ಬಸ್ ನಲ್ಲಿ ವಾಪಸ್ಸಾಗುತ್ತಿದ್ದ ವೇಳೆ ಬಳಿ ಬಸ್ ಆಯುತಪ್ಪಿ ಹಳ್ಳಕ್ಕೆ ಉರುಳಿ ಬಿದ್ದು ಈ ದುರ್ಘಟನೆ ಸಂಭವಿಸಿದೆ.
ಒಬ್ಬ ಯುವಕನಿಗೆ ಎರಡು ಕಾಲುಗಳು ತುಂಡರಿಸಿವೆ. ಘಟನೆಯಿಂದ 50 ಕ್ಕೂ ಹೆಚ್ಚು ಜನರಿಗೆ ಗಂಭೀರವಾದ ಗಾಯಗಳಾಗಿವೆ.
ಬಸ್ ಅಪಘಾತವಾಗಿರುವುದನ್ನು ಕಂಡ ದಾರಿಹೋಕರು ಕೂಡಲೇ ಸಂಬಂಧಪಟ್ಟವರಿಗೆ ವಿಚಾರ ಮುಟ್ಟಿಸಿದ್ದಾರೆ ವಿಷಯ ತಿಳಿದ ಶಾಗ್ಯ ಗ್ರಾಮಸ್ಥರು ಹಾಗೂ ಸಂಬಂಧಿಕರು ಸ್ಥಳಕ್ಕೆ ಆಗಮಿಸಿ ಬಸ್ ನ್ನು ಜೆಸಿಬಿಯಿಂದ ಮೇಲೆತ್ತಿಸಿ ಬಸ್ ನಲ್ಲಿದ್ದ ಗಾಯಾಳುಗಳನ್ನು ಹೊರಗೆ ತಂದು ಕೂಡಲೇ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ಸಾಗಿಸಿದ್ದಾರೆ
ಗಾಯಾಳುಗಳಾದ ಬಸವರಾಜು, ಸಿಂಧು, ರಾಚಪ್ಪ, ನೂತನ್, ರಾಚಯ್ಯ, ಚೆನ್ನಮ್ಮ ವಸಂತ್ ಶಂಕರ್ ಸಿದ್ದಮ್ಮ ಮಹಾದೇವ ತಂಬಡಿ ಮನು ರಾಚಯ್ಯ ರಾಜಮ್ಮ ಮಹಾದೇವಮ್ಮ, ಸಿದ್ದಯ್ಯ, ಹರೀಶ್, ಅರುಣ್, ನಿಖಿಲ್, ಪ್ರೇಮ್ ಸೇರಿದಂತೆ ಇನ್ನಿತರರು ಘಟನೆಯಿಂದ ತೀವ್ರ ಗಾಯಗೊಂಡಿದ್ದಾರೆ.
ಗಾಯಾಳುಗಳಿಗೆ ಕೊಳ್ಳೇಗಾಲದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ತೀವ್ರ ಗಾಯವಾಗಿರುವ 17 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಹಾಗೂ ಮೈಸೂರಿನ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಉಳಿದವರು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಷಯ ತಿಳಿದ ಕೂಡಲೆ ಕೊಳ್ಳೇಗಾಲ ಉಪವಿಭಾಗಾಧಿಕಾರಿಗಳಾದ ಎ.ಬಿ. ಮಹೇಶ್ ಅವರು ಇಲ್ಲಿನ ಉಪ ವಿಭಾಗ ಆಸ್ಪತ್ರೆಗೆ ಆಗಮಿಸಿ ಗಾಯಾಳುಗಳಿಗೆ ಉಪವಿಭಾಗ ಆಸ್ಪತ್ರೆಯ ವೈದ್ಯರುಗಳು ನರ್ಸ್ ಗಳಿಂದ ಪ್ರಥಮ ಚಿಕಿತ್ಸೆ ಕುಡಿಸುವುದರ ಮೂಲಕ ಪರಿಸ್ಥಿತಿಯನ್ನು ಸುಧಾರಿಸಿದ್ದಾರೆ.
ಈ ಸಂಬಂಧ ಹನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕೊಳ್ಳೇಗಾಲ,ಮಾ.8: ಈ ಭಾಗದ ತಿರುಪತಿ ಎಂದೆ ಕರೆಯಲಾಗುವ ತಾಲೂಕಿನ ಸಿಂಗನಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೂದುಬಾಳು ಗ್ರಾಮದ ಪ್ರಸಿದ್ಧ ಶ್ರೀ ಗುಡಿಹಟ್ಟಿ ತೀರ್ಥ ವೆಂಕಟರಮಣಸ್ವಾಮಿ ಜಾತ್ರಾ ಮಹೋತ್ಸವವು ಮಾ.13 ರಿಂದ 17 ರ ವರೆಗೆ 5 ದಿನಗಳ ಕಾಲ ನಡೆಯಲಿದೆ.
ಮಾ.13 ರಂದು ರಾತ್ರಿ 8 ಗಂಟೆಗೆ ಗಜೇಂದ್ರ ಮೋಕ್ಷದೊಡನೆ ಜಾತ್ರೆ ಪ್ರಾರಂಭವಾಗಲಿದೆ. 14 ರಂದು ಬ್ರಹ್ಮರಥೋತ್ಸವ, 15 ರಂದು ಪ್ರಹ್ಲಾದೋತ್ಸವ,16 ರಂದು ವಸಂತೋತ್ಸವ, 17 ರಂದು ಗರುಡೋತ್ಸವದೊಡನೆ ಜಾತ್ರೆಗೆ ತೆರೆ ಬೀಳಲಿದೆ.
ಈ ಹಿನ್ನೆಲೆಯಲ್ಲಿ ಜಾತ್ರೆಗೆ ಬರುವ ವಾಹನಗಳ ಹಾಗೂ ಅಂಗಡಿ ಮುಂಗಟ್ಟುಗಳ ಮೇಲಿನ ಸುಂಕದ ಹರಾಜನ್ನು ಗ್ರಾಪಂ ಅಧ್ಯಕ್ಷೆ ಗಂಗಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು
ಗ್ರಾಪಂ ಕಚೇರಿ ಆವರಣದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಸಿಂಗನಲ್ಲೂರು, ಕಾಮಗೆರೆ ಹಾಗೂ ಬಿ. ಗುಂಡಾಪುರ ಗ್ರಾಮಗಳ 16 ಮಂದಿ ಬಿಡ್ಡುದಾರರು ಭಾಗವಹಿಸಿದ್ದರು.
ಪ್ರಾರಂಭದಲ್ಲಿ ಸರ್ಕಾರಿ ಸವಾಲ್ 5,000 ರೂ. ನಿಂದ ಹರಾಜು ಪ್ರಕ್ರಿಯೆ ಪ್ರಾರಂಭವಾಯಿತು. ಅಂತಿಮವಾಗಿ ಸಿಂಗನಲ್ಲೂರು ಗ್ರಾಮದ ಶಿವಕುಮಾರ್ ಎಂಬುವವರು 67, 700 ರೂ.ಗಳಿಗೆ ಹರಾಜುನ್ನು ಕೂಗಿದರು. ಈ ಮೊತ್ತದೊಡನೆ ಶೇಕಡ 24 ರಷ್ಟು 16200 ಸೆಸ್ಸು ಸೇರಿ ಒಟ್ಟು 83,700 ರೂಗಳಿಗೆ ಹರಾಜುನ್ನು ತಮ್ಮದಾಗಿಸಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರೂಪಾ ಬಡಿಗೇರ ಅವರು ಜಾತ್ರೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು ಈಗಾಗಲೇ ಸ್ವಚ್ಛತಾ ಕಾರ್ಯ ಭರದಿಂದ ಸಾಗುತ್ತಿದೆ. ಜಾತ್ರಾ ಮಾಳದ ಕೆರೆಯ ಸುತ್ತ ಬೆಳೆದುಕೊಂಡಿರುವ ಗಿಡ ಗಂಟಿಗಳು, ಮುಳ್ಳಿನ ಪೊದೆಗಳನ್ನು ಕಡಿದು ಹಾಕಿ ಸ್ವಚ್ಛಗೊಳಿಸಲಾಗುತ್ತಿದೆ. ಹಾಗೆಯೇ ಚರಂಡಿಗಳಲ್ಲಿ ತುಂಬಿರುವ ಹೂಳನ್ನು ತೆಗೆಸಲಾಗುತ್ತಿದೆ. ಕುಡಿಯುವ ನೀರಿಗಾಗಿ 25 ಮಿನಿ ತೊಂಬೆಗಳಿದ್ದು ನೀರಿಗೆ ದಮಸ್ಯೆ ಆಗುವುದಿಲ್ಲ, ಜಾತ್ರೆಮಾಳ ಹಾಗೂ ಗ್ರಾಮದ ಎಲ್ಲಾ ಕಡೆ ಬೀದಿದೀಪಗಳನ್ನು ಅಳವಡಿಸಲಾಗಿದೆ. ಜಾತ್ರೆಗೆ ಬರುವ ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್ ಗೆ ಗ್ರಾಮದ ಹೊರ ವಲಯದಲ್ಲಿ ಎರಡು ಕಡೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಜಾತ್ರೆಯಲ್ಲಿ ಸಾವಿರಾರು ಜನ ಭಾಗವಹಿಸುವ ನಿರೀಕ್ಷೆ ಇರುವುದರಿಂದ ಯಾವುದೇ ಸಮಸ್ಯೆ ಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ, ಚೆಸ್ಕಾಂ, ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳಿಗೆ ಜಾತ್ರಾ ವೇಳೆ ಸೇವೆ ಒದಗಿಸುವಂತೆ ಮನವಿಪತ್ರ ಸಲ್ಲಿಸಲಾಗಿದೆ. ಒಟ್ಟಿನಲ್ಲಿ ಜಾತ್ರೆ ಯಶಸ್ವಿಯಾಗಿ ನಡೆಸಲು ಗ್ರಾಪಂ ವತಿಯಿಂದ ಸಕಲ ಸಿದ್ಧತೆಗಳನ್ನು ಕೈಗೊಂಡಿರುವುದಾಗಿ ರೂಪ ಬಡಿಗೇರ್ ಮಾಹಿತಿ ನೀಡಿದರು.
ಸಿಂಗನಲ್ಲೂರು ಗ್ರಾಮ ಪಂಚಾಯಿತಿಯು ಅಂಗಡಿ ಮುಂಗಟ್ಟುಗಳಿಗೆ 2024-25 ನೇ ಸಾಲಿನ ಸುಂಕದ ದರಗಳನ್ನು ಮೂರು ದಿನಗಳಿಗೆ ನಿಗದಿಪಡಿಸಿದ್ದು. ಮಿಠಾಯಿ ಅಂಗಡಿಗೆ 2500 ರೂ, ದೊಡ್ಡ ಹೋಟೆಲ್ ಗಳಿಗೆ 1000 ರೂ, ಸಣ್ಣ ಹೋಟೆಲ್, ಬಟ್ಟೆ ಅಂಗಡಿ, ಪಾತ್ರೆ ಅಂಗಡಿ ತೊಟ್ಟಿಲಾಟಗಳಿಗೆ ತಲಾ 750 ರೂ. ಕಡ್ಲೆಪುರಿ ಅಂಗಡಿ, ಕಬ್ಬಿನ ಅಂಗಡಿಗಳಿಗೆ 250 ರೂ. ಬೊಂಬೆ ಅಂಗಡಿ 400 ರೂ. ಸ್ಟೇಷನರಿ ಅಂಗಡಿ, ಡಾಲರ್ ಅಂಗಡಿ, ಬಳೆ ಅಂಗಡಿಗಳಿಗೆ 300 ರೂ. ಹೂವಿನ ಅಂಗಡಿ, ಎಳೆನೀರು, ಐಸ್ ಕ್ರೀಮ್ ಅಂಗಡಿ ಇತರೆ ಅಂಗಡಿಗಳಿಗೆ ತಂಪು ಪಾನೀಯಗಳು ಹಣ್ಣಿನ ಅಂಗಡಿ ಇತರ ಯಾವುದೇ ಸಣ್ಣಪುಟ್ಟ ಅಂಗಡಿಗಳಿಗೆ ತಲಾ 200 ರೂ.ಗಳು. ಹಾಗೆಯೇ ವಾಹನಗಳ ಮೇಲಿನ ಸುಂಕ ಪ್ರತಿ ಟ್ರಿಪ್ಪಿಗೆ ಬಸ್ಸು, ಲಾರಿ ಗಳಿಗೆ 50ರೂ. ಟೆಂಪೋ ಕಾರು ಲಗೇಜ್ ಆಟೋ ಗಳಿಗೆ 40 ರೂ.ಆಟೋ 30 ರೂ.ದ್ವಿಚಕ್ರ ವಾಹನಗಳಿಗೆ 10 ರೂ.ಗಳನ್ನು ನಿಗದಿಪಡಿಸಿದೆ.
ಟೆಂಡರ್ ದಾರರು ಸುಂಕ ವಸೂಲಾತಿಗೆ ಅಧಿಕೃತ ರಶೀತಿ ನೀಡುವುದು, ಗ್ರಾಪಂ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಸುಂಕ ವಸೂಲಿ ಮಾಡಬಾರದು ಹೆಚ್ಚು ವಸೂಲಿ ಮಾಡಿದರೆ ಮತ್ತು ಸುಂಕದ ಹರಾಜನ್ನು ನಡುವೆ ರದ್ದುಗೊಳಿಸಿದರೆ ನಿಮ್ಮ ಮೇಲೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ವೇಳೆ ಅಧ್ಯಕ್ಷೆ ಗಂಗಮ್ಮ, ಸದಸ್ಯರಾದ ಚಿನ್ನಮುತ್ತು, ಎಸ್ ಟಿ ಡಿ ರಾಜು, ಪ್ರಸಾದ್, ಮಧುಸೂದನ್, ರಾಣಿ, ರೂಪಾವತಿ, ಹೇಮಾವತಿ, ಜಯಮ್ಮ, ಶ್ರೀನಿವಾಸ್ ಮತ್ತಿತರರಿದ್ದರು.
ಕೊಳ್ಳೇಗಾಲ,ಮಾ.7: ಸಾಹಿತ್ಯ ಮಿತ್ರಕೂಟ ಕೊಳ್ಳೇಗಾಲದ ವತಿಯಿಂದ ನಡೆದ ರಾಜ್ಯಮಟ್ಟದ ಕಾದಂಬರಿ ಸ್ಪರ್ಧೆಯ ವಿಜೇತರಿಗೆ ಮಾ.9ರಂದು ಸಾಹಿತ್ಯ ಮಿತ್ರಕೂಟ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಮಾ. 9 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಶ್ರೀ ಅರುಣಾಚಲೇಶ್ವರ ಸಭಾಂಗಣದಲ್ಲಿ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಾಹಿತ್ಯ ಮಿತ್ರಕೂಟದ ಅಧ್ಯಕ್ಷ ಮದ್ದೂರು ದೊರೆಸ್ವಾಮಿ ತಿಳಿಸಿದ್ದಾರೆ
ಸಮಾರಂಭವನ್ನು ಖ್ಯಾತ ಸಾಹಿತಿಗಳು ಮಾಜಿ ಸಚಿವರಾದ ಡಾ.ಬಿ.ಟಿ.ಲಲಿತ ನಾಯಕ್ ಉದ್ಘಾಟಿಸಲಿದ್ದಾರೆ.
ಕೊಳ್ಳೇಗಾಲದಲ್ಲಿ ಸಾಹಿತ್ಯ ಮಿತ್ರಕೂಟ ಸ್ಥಾಪನೆಯಾಗಿ ಐದಾರು ವರ್ಷ ಕಳೆದಿದ್ದು ಈ ಭಾಗದ ಜನಪದ ಸಾಹಿತ್ಯವನ್ನು ಅಭಿವೃದ್ಧಿಪಡಿಸಬೇಕೆಂಬ ಸದುದ್ದೇಶದಿಂದ ಸ್ಥಳೀಯ ಸಾಹಿತಿಗಳ ಪುಸ್ತಕ ಬಿಡುಗಡೆ ಮಾಡಿಸುವ ಕಾರ್ಯಕ್ರಮಗಳನ್ನು ನಡೆಸುತ್ತಾ ಬರಲಾಗಿದೆ.
ಉದಯೋನ್ಮುಖ ಬರಹಗಾರರನ್ನು ಪರಿಚಯಿಸುವ ನಿಟ್ಟಿನಲ್ಲಿ ಮಿತ್ರಕೂಟ ಶ್ರಮಿಸುತ್ತಿದೆ. ಹಾಗೆಯೇ ಸಾಹಿತ್ಯ ಮಿತ್ರಕೂಟದ ಪ್ರತಿ ಮೂರು ವರ್ಷಗಳ ಅಧ್ಯಕ್ಷರ ಅವಧಿಯಲ್ಲಿ ಒಮ್ಮೆ ರಾಜ್ಯಮಟ್ಟದ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಪರಿಪಾಠವಿದ್ದು ದೊಡ್ಡ ಲಿಂಗಯ್ಯ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ರಾಜ್ಯಮಟ್ಟದ ಕಾರ್ಯಕ್ರಮವನ್ನು ರೂಪಿಸಲಾಗಿತ್ತು ಎಂದು ಮದ್ದೂರು ದೊರೆಸ್ವಾಮಿ ತಿಳಿಸಿದ್ದಾರೆ.
ಅದೇ ರೀತಿ ಈ ಬಾರಿಯೂ ಸಾಹಿತ್ಯ ಮಿತ್ರ ಕೂಟವು 2024 25 ನೇ ಸಾಲಿನಲ್ಲಿ ರಾಜ್ಯಮಟ್ಟದ ಸ್ಪರ್ಧೆಯನ್ನು ಹಮ್ಮಿಕೊಳ್ಳಲು ತೀರ್ಮಾನಿಸಿ ಮುಂದಿನ 2025 ರ ಜನವರಿ ತಿಂಗಳ ಎರಡನೇ ವಾರದಲ್ಲಿ ಕೊಳ್ಳೇಗಾಲ ಪಟ್ಟಣದ ಅರುಣಾಚಲೇಶ್ವರ ಸಭಾಂಗಣದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಚಿಂತಿಸಿತ್ತು.
ಈ ಹಿನ್ನೆಲೆಯಲ್ಲಿ ಸಾಹಿತ್ಯ ಮಿತ್ರ ಕೂಟವು 2024 25 ನೇ ಸಾಲಿನಲ್ಲಿ ರಾಜ್ಯಮಟ್ಟದ ಸ್ಪರ್ಧೆಗೆ 2022 ಹಾಗೂ 2023ನೇ ವರ್ಷಗಳಲ್ಲಿ ಪ್ರಕಟವಾಗಿರುವ ಕಾದಂಬರಿ ಸಾಹಿತ್ಯ ಪ್ರಕಾರವನ್ನು ಆಹ್ವಾನಿಸಿತ್ತು.
2022 ಜನವರಿಯಿಂದ ಡಿಸೆಂಬರ್ 2023ನೇ ಜನವರಿಯಿಂದ ಡಿಸೆಂಬರ್ ವರ್ಷಗಳಲ್ಲಿ ಪ್ರಕಟವಾಗಿರುವ ಕಾದಂಬರಿ ಸಾಹಿತ್ಯ ಪ್ರಕಾರವನ್ನು ಆಹ್ವಾನಿಸಿ. ಈ ಸ್ಪರ್ಧೆಯಲ್ಲಿ ಆಯ್ಕೆಗೊಂಡ 3 ಕಾದಂಬರಿ ಕೃತಿಗಳಿಗೆ ಪ್ರಥಮ ಬಹುಮಾನ 10 ಸಾವಿರ, ದ್ವಿತೀಯ ಬಹುಮಾನ 7 ಸಾವಿರ ಹಾಗೂ ತೃತೀಯ ಬಹುಮಾನ 5 ಸಾವಿರ ರೂಗಳನ್ನು ಬಹುಮಾನವಾಗಿ ನೀಡುವುದರ ಜೊತೆಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಕಾದಂಬರಿ ಕೃತಿಗಳನ್ನು ಸಾಹಿತ್ಯ ವಲಯದ ಪ್ರಾಜ್ಞರಿಂದ ಮೂರು ಹಂತದಲ್ಲಿ ಓದಿಸಿ ಅಂತಿಮವಾಗಿ ಮೂರು ಕಾದಂಬರಿ ಕೃತಿಗಳನ್ನು ರಾಜ್ಯಮಟ್ಟದ ಸಾಹಿತ್ಯ ಮಿತ್ರಕೂಟ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಕಂಪ್ಲಿ, ಬಂಗಿದೊಡ್ಡ ಮಂಜುನಾಥ ರವರ ‘”ಅರಳು ಮಲ್ಲಿಗೆ”’ ಕಾದಂಬರಿಗೆ ಪ್ರಥಮ ಸ್ಥಾನ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಬೆಳ್ಗೋಡು ಕಾರ್ತಿಕಾದಿತ್ಯ ರವರ “ಪ್ಯಾರಾಸೈಟ್” ಕಾದಂಬರಿಗೆ ದ್ವಿತೀಯ,
ಬೆಂಗಳೂರಿನ ಬಿ.ಎಂ. ಗಿರಿರಾಜ ರವರ “ಕತೆಗೆ ಸಾವಿಲ್ಲ”’ ಕಾದಂಬರಿ ತೃತೀಯ ಸ್ಥಾನ ಲಭಿಸಿದೆ.
ಅಂದು ನಡೆಯುವ ಸಮಾರಂಭದಲ್ಲಿ ಈ ಮೂರು ಕಾದಂಬರಿಗಳ ವಿಜೇತರಿಗೆ ಗಣ್ಯರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಸಾಹಿತ್ಯ ಮಿತ್ರಕೂಟದ ಅಧ್ಯಕ್ಷ ಮದ್ದೂರು ದೊರೆಸ್ವಾಮಿಯವರು ವಹಿಸಲಿದ್ದಾರೆ.
ಮೈಸೂರಿನ ಸಾಹಿತಿಗಳಾದ ಪ್ರೊ ಮೈಸೂರು ಕೃಷ್ಣಮೂರ್ತಿರವರು ಬಹುಮಾನ ಕೃತಿ ಕುರಿತು ಮಾತಾಡಲಿದ್ದಾರೆ. ಸಾಹಿತ್ಯ ಮಿತ್ರಕೂಟದ ಸಂಸ್ಥಾಪಕ ಅಧ್ಯಕ್ಷರಾದ ಪ್ರೊ ಡಿ ದೊಡ್ಡ ಲಿಂಗೇಗೌಡ ಕಾರ್ಯದರ್ಶಿ ಸತೀಶ್. ಎಂ ಉಪಸ್ಥಿತರಿರುವರು ಎಂದು ಮದ್ದೂರು ದೊರೆಸ್ವಾಮಿ ಮಾಹಿತಿ ನೀಡಿದ್ದಾರೆ.
ಕೊಳ್ಳೇಗಾಲ,ಮಾ.5: ಕುಡಿದ ಮತ್ತಿನಲ್ಲಿ ಹಣಕಾಸಿನ ವಿಚಾರದಲ್ಲಿ ಕ್ಯಾತೆ ತೆಗೆದು ವ್ಯಕ್ತಿಯೊಬ್ಬನಿಗೆ ಗಾರೆ ಕೆಲಸದ ಮೇಸ್ತ್ರಿ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಕೊಲೆ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಪಟ್ಟಣ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬೆಂಗಳೂರಿನ ಉತ್ತರಹಳ್ಳಿ ಮೂಲದ ಶಿವಣ್ಣ ಎಂಬುವರ ಮಗ ಪುನೀತ್ (55) ಕೊಲೆಯಾದ ದುರ್ದೇವಿ.
ಈತ ಹಲವಾರು ತಿಂಗಳುಗಳಿಂದ ಮ. ಮ ಬೆಟ್ಟ, ಮಳವಳ್ಳಿ ಈಗೆ ಸುತ್ತಮುತ್ತಲಿನ ಕಡೆ ಗಾರೆ ಕೆಲಸ ಮಾಡಿಕೊಂಡಿದ್ದ. ಈತನ ಮೇಲೆ ಪಟ್ಟಣದ ಗಾರೆ ಕೆಲಸದ ಮೇಸ್ತ್ರಿ ಮಂಜುನಾಥ್ @ ಮಣಿಕಂಠ @ಮಣಿ ಚಾಕುವಿನಿಂದ ಹೊಟ್ಟೆಗೆ ಇರಿದು ಪರಾರಿಯಾಗಿದ್ದ.
ಕೂಡಲೇ ಆತನನ್ನು ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ವರ್ಷ ಹಾಗೂ ಸಿಬ್ಬಂದಿ ಆಸ್ಪತ್ರೆಗೆ ದಾಖಲು ಮಾಡಿ ಡಾ. ಲೋಕೇಶ್ವರಿ ಯವರು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರು ಕೆ.ಆರ್. ಆಸ್ಪತ್ರೆಗೆ ರವಾನೆ ಮಾಡಿಸಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗಿನ ಜಾವ ಸುಮಾರು 7 ಗಂಟೆಯಲ್ಲಿ ಪುನೀತ್ ಮೃತಪಟ್ಟಿದ್ದಾನೆ.
ಪುನೀತ್ ಗಾರೆ ಕೆಲಸ ಮಾಡಿಕೊಂಡು ಪಟ್ಟಣದ ಫೀಸ್ ಪಾರ್ಕ್ ಬಳಿಯ ಚೆನ್ನಮ್ಮ ಲಾಡ್ಜ್ ನಲ್ಲಿ ವಾಸಿಸುತ್ತಿದ್ದ. ಮಂಗಳವಾರ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಹಣಕಾಸಿನ ವಿಚಾರಕ್ಕೆ ಮೇಸ್ತ್ರಿಗೂ ಈತನಿಗೂ ಗಲಾಟೆಯಾಗಿದೆ ಈ ವೇಳೆ ಮೇಸ್ತ್ರಿ ಮಣಿ ಪುನೀತ್ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಈ ಸಂಬಂಧ ಲಾಡ್ಜ್ ಮ್ಯಾನೆಜರ್ ಪುಟ್ಟರಾಜು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕೊಂಡ ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮೃತ ವ್ಯಕ್ತಿಯು ಪುನೀತ್ ಬಿನ್ ಶಿವಣ್ಣ 55 ವರ್ಷ ಉತ್ತರಹಳ್ಳಿ ಬೆಂಗಳೂರು ಎಂದು ವಿಳಾಸ ತಿಳಿಸಿ ಮೃತಪಟ್ಟಿದ್ದಾನೆ ಇವರ ವಾರಸುದಾರರು ಅಥವಾ ಸಂಬಂಧಿಕರ ವಿಳಾಸ ಪತ್ತೆ ಆಗಿಲ್ಲ. ಇವರ ವಿಳಾಸ ಮಾಹಿತಿಯನ್ನು ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಗೆ ಕೆಳಗೆ ಕೊಟ್ಟಿರುವ ನಂಬರ್ ಗಳಿಗೆ ಕರೆ ಮಾಡಿ ತಿಳಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ. ದೂರವಾಣಿ ಸಂಖ್ಯೆ -08224 252368, -9480804653, 8310954515
ಕೊಳ್ಳೇಗಾಲ,ಮಾ.3:ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ವೇಳೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ದಶಕಗಳ ನೋವನ್ನು ಜನತೆ ಮುಂದೆ ಬಿಚ್ಚಿಟ್ಟರು.
ಪಟ್ಟಣ ವ್ಯಾಪ್ತಿಯ 29ನೇ ವಾರ್ಡ್ ನ ಬೆಂಡರಹಳ್ಳಿ ಬಡಾವಣೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕೆ ಎ.ಆರ್.ಕೃಷ್ಣಮೂರ್ತಿ ಶಂಕುಸ್ಥಾಪನೆ ನೆರವೇರಿಸಿದರು.
ಈ ವೇಳೆ ವೇದಿಕೆ ಕಾರ್ಯಕ್ರಮದಲ್ಲಿ ನಗರಸಭಾಧ್ಯಕ್ಷೆ ರೇಖಾ ರಮೇಶ್ ಹಾಗೂ ಉಪಾಧ್ಯಕ್ಷ ಎ.ಪಿ ಶಂಕರ್ ಸೇರಿದಂತೆ ಬಹುತೇಕ ಮುಖಂಡರು ತಾವು ಸಚಿವರಾಗಿ ಬಂದು ಈ ಕಟ್ಟಡದ ಉದ್ಘಾಟನೆ ಮಾಡುವಂತಾಗಲಿ ಎಂದು ಹಾರೈಕೆಯ ನುಡಿಗಳನ್ನಾಡಿದರು.
ಆಗ ಮನ ಬಿಚ್ಚಿ ಮಾತನಾಡಿದ ಎ.ಆರ್ ಕೃಷ್ಣಮೂರ್ತಿ ಅವರು ಈ ಮಂತ್ರಿ ಎಂಬುದೇ 19 ವರ್ಷ ವನವಾಸ ಮಾಡಿಸಿತು ನನ್ನೊಡನೆ ರಾಜಕೀಯಕ್ಕೆ ಬಂದ ಬಹುತೇಕರು ಶಾಸಕರಾಗಿ, ಸಚಿವರು, ಸಿ.ಎಂ ಕೂಡ ಆಗಿದ್ದಾರೆ. ಆದರೆ ನನಗೆ ಈ ಸಚಿವ ಸ್ಥಾನದ ವನವಾಸ ಇನ್ನು ಮುಗಿದಿಲ್ಲ. ಈ ಸಾಮಾಜಿಕ ವ್ಯವಸ್ಥೆಯಲ್ಲಿ ಭಗವಂತನ ಇಚ್ಛೆ ಇದ್ದರೆ ನಿಮ್ಮೆಲ್ಲರ ಇಚ್ಛೆಯಂತೆ ಆಗಲಿ ಎಂದರು.
ಸಂತೇಮರಳ್ಳಿ ಕ್ಷೇತ್ರ ಕ್ಷೇತ್ರ ಪುನರ್ ವಿಂಗಡಣೆ ನೆಲೆಯಲ್ಲಿ ರದ್ದಾದಾಗ 2008 ರ ಚುನಾವಣೆಗೆ ಕೊಳ್ಳೇಗಾಲ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡೆ,ನಾನು ಅಂದು ಅನಿವಾರ್ಯ ಪರಿಸ್ಥಿತಿಯಿಂದ ಜೆಡಿಎಸ್ ನಲ್ಲಿ ಮುಂದುವರೆದಿದ್ದೆ. ಕಾರಣ ನಮ್ಮ ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಎಸ್ ನಲ್ಲಿ ಮುಂದುವರೆಯುವಂತೆ ಒತ್ತಾಯಿಸಿದ್ದರು ಎಂದು ಸ್ಮರಿಸಿದರು.
1952 ರಿಂದ ನನ್ನ ತಂದೆ ದಿವಂಗತ ಬಿ ರಾಚಯ್ಯ ದ್ವಿ ಸದಸ್ಯ ಕ್ಷೇತ್ರ ಸಂತೆಮರಳ್ಳಿಯಿಂದ ಜನತಾದಳದಿಂದ ಆಯ್ಕೆಯಾಗಿದ್ದರು ಅದೇ ವೇಳೆ ದಿವಂಗತ ರಾಜಶೇಖರ ಮೂರ್ತಿರವರು ಸಹ ಅದೇ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು ಎಂದು ನೆನೆದರು.
ಮರಳಿ ಮನೆಗೆ ಬುದ್ಧನೆಡೆಗೆ ಕಾರ್ಯಕ್ರಮದಡಿ ಶ್ರೀನಿವಾಸ್ ಪ್ರಸಾದ್ ಸಿದ್ದರಾಮಯ್ಯ, ಹೆಚ್. ಎಸ್. ಮಹಾದೇವ ಪ್ರಸಾದ್, ಆರ್.ಧೃವನಾರಾಯಣ್, ಕೆ.ವೆಂಕಟೇಶ್ ಹಾಗೂ ಡಾ.ಹೆಚ್ ಸಿ ಮಹದೇವಪ್ಪ, ಎಸ್ ಜಯಣ್ಣ ಸೇರಿದಂತೆ ಇನ್ನಿತರ ಪ್ರಮುಖರು ಅಂದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.ಅಂದೇ ನನಗೂ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನವಿತ್ತು ಆದರೆ ಅವಕಾಶವಿರಲಿಲ್ಲ. ಅಂದು ಕಾಂಗ್ರೆಸ್ ಪಕ್ಷದಲ್ಲಿ ನನಗೆ ಅವಕಾಶ ಕಲ್ಪಿಸಿ ಕೊಟ್ಟಿದ್ದರೆ ಕಾಂಗ್ರೆಸ್ ಸೇರುತ್ತಿದ್ದೆ. ಈ ವೇಳೆ ನಾನು ಕಾಂಗ್ರೆಸ್ ಸೇರಲು ಸಾಧ್ಯವಾಗಲಿಲ್ಲ. ಅಂದು. ಮಲ್ಲಿಕಾರ್ಜುನ ಖರ್ಗೆ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು ಆದರೂ ಅಭಿಪ್ರಾಯ ಬೇರೆಯೇ ಆಗಿತ್ತು. ಪರಿಸ್ಥಿತಿ ಸರಿ ಇಲ್ಲದ ಕಾರಣ ನನಗೆ ಪಕ್ಷ ಸೇರಲು ಅವಕಾಶ ನೀಡಿರಲಿಲ್ಲ ಎಂದು ಹೇಳಿದರು.
1994 ರಲ್ಲಿ ನನಗೂ ಬಿಜೆಪಿಗೂ ವಿರೋಧವಿತ್ತು. ಅಂದು ಧ್ರುವನಾರಾಯಣ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದರು. ನಂತರ 2003 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 3000 ಓಟು ಪಡೆದುಕೊಂಡಿತು. ಇದು ಧೃವನಾರಾಯಣ್ ಅವರನ್ನ ಗೆಲ್ಲಿಸ ಬೇಕೆಂದು ಕೊಟ್ಟ ಮತವಲ್ಲ ಎ.ಆರ್ ಕೃಷ್ಣಮೂರ್ತಿ ಸೋಲಿಸಬೇಕೆಂದು ಕೊಟ್ಟ ಮತ. ಅಂದು ನಿರಂತರವಾಗಿ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದೆ, ನೊಂದು ಬೆಂದು ಹೋಗಿದ್ದೆ. ಹಾಗಾಗಿ ಅಂದು ಮತ ಭಿಕ್ಷೆ ಎನ್ನುವ ಪದ ಬಳಕೆ ಮಾಡುತ್ತಿದೆ. ಈ ಭಾರಿ ಸೋತಿದ್ದರೆ ರಾಜಕೀಯ ತ್ಯಜಿಸಬೇಕೆಂದಿದ್ದೆ ಮನದಾಳದ ನೋವನ್ನು ಕೃಷ್ಣಮೂರ್ತಿ ತೋಡಿಕೊಂಡರು.
2018 ರ ವರೆಗೂ ಕ್ಷೇತ್ರದಲ್ಲಿ 52000 ಮತ ಪಡೆದವರು ಸೋತಿರಲಿಲ್ಲ ಆದರೆ ನಾನು 53,000 ಮತ ಪಡೆದು ಸೋತಿದ್ದೆ. ಆ ಚುನಾವಣೆಯಲ್ಲಿ ಎಸ್.ಬಾಲರಾಜು ಪಕ್ಷ ಬಿಟ್ಟು ಹೋದರು ಜಿ ಎನ್ ನಂಜುಂಡಸ್ವಾಮಿ ಬಂದರು.
ನಾನು ಒಂದು ಓಟಿನಿಂದ ಸೋತರು ಯಾವುದೇ ಮಾಧ್ಯಮ ಸಂಸ್ಥೆ ನನ್ನ ಸಂದರ್ಶನ ಮಾಡಲಿಲ್ಲ, ನಾನು ಸಾಕಷ್ಟು ನಿರೀಕ್ಷಿಸಿದ್ದೆ ಆದರೆ ಪ್ರಜಾವಾಣಿ ಪತ್ರಿಕೆಯ ಮೈಸೂರು ವರದಿಗಾರರೊಬ್ಬರು ನನ್ನನ್ನು ಸಂದರ್ಶಿಸಿದ್ದರು ಉಳಿದ ಯಾವುದೇ ಮಾಧ್ಯಮ ಸಂಸ್ಥೆಗಳು ನನ್ನ ಸಂದರ್ಶನ ಮಾಡಿರಲಿಲ್ಲ ಇದು ನನಗೆ ತುಂಬಾ ನೋವುಂಟು ಮಾಡಿತ್ತು ಎಂದು ನೊಂದು ನುಡಿದರು.
ಆದರೆ ಬಿ. ಬಿ. ಸಿ ಹಾಗೂ ಸಿ.ಎನ್.ಎನ್ ಚಾನಲ್ ಗಳು ನನ್ನನ್ನು ಪ್ರಪಂಚದಾದ್ಯಂತ ಸುದ್ದಿ ಮಾಡಿದ್ದವು. ಈಗಲೂ ಕೂಡ ಒಂದು ಓಟಿನ ಮಹತ್ವದ ಬಗ್ಗೆ ಕ್ವಿಜ್ ನಲ್ಲಿ ಬರುತ್ತದೆ ಅಂಬೇಡ್ಕರ್ ರವರು ಓಟಿನ ಮಹತ್ವ ಏನೆಂದು ತೋರಿಸಿ ಕೊಟ್ಟಿದ್ದರು. ಆದರೆ ಒಂದು ಓಟಿನ ಮಹತ್ವ ಏನೆಂದು ಒಂದು ಮತದಿಂದ ನನಗಾದ ಸೋಲು ತಿಳಿಸಿಕೊಟ್ಟಿದೆ. ಈ ಮೂಲಕ ಗುಂಡಿಗಿಂತ ಹರಿತವಾದದ್ದು ಮತದಾನ ಎಂಬುದನ್ನು ಮತದಾರರು ಪ್ರಪಂಚಕ್ಕೆ ತೋರಿಸಿಕೊಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಅಂದು ನೂತನ ಸಂಸತ್ ಭವನದ ಮುಂದೆ ಅಂಬೇಡ್ಕರ್ ಅವರ ಪುತ್ತಳಿ ಅನಾವರಣ ಮಾಡುವ ವೇಳೆ ಅಂಬೇಡ್ಕರ್ ಪಾದಕ್ಕೆ ತಲೆ ಇಟ್ಟು ಸ್ಮರಿಸಿದ್ದರು. ಆದರೆ ಮೋದಿಯವರು ಎಂದೂ ಸಹ ದಲಿತರ ಬಗ್ಗೆ ಕಾಳಜಿ ತೋರಲಿಲ್ಲ ಇದು ನಾಟಕ ಎಂಬಂತೆ ಕಾಣುತ್ತದೆ ಎಂದ ಅವರು ಹೊರ ಜಗತ್ತಿಗೆ ನಿಮ್ಮ ಕ್ಷೇತ್ರಕ್ಕೆ ನಾನು ಶಾಸಕ ಆದರೆ ನನ್ನ ಕ್ಷೇತ್ರಕ್ಕೆ ನಾನು ಜನ ಸೇವಕ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇದೇ ವೇಳೆ ಬೆಂಡರಹಳ್ಳಿ ಬಡಾವಣೆಯಲ್ಲಿ ಶಾಸಕರ ನಿಧಿಯಿಂದ 10 ಲಕ್ಷ ವೆಚ್ಚದಲ್ಲಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ್ದೇನೆ ಬೆಂಡರಹಳ್ಳಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ ಅಚ್ಚುಕಟ್ಟಾಗಿ ನಡೆದು ಎಲ್ಲರೂ ಸದುಪಯೋಗ ಪಡಿಸಿಕೊಳ್ಳುವಂತಾಗಲಿ ಎಂದು ಶಾಸಕರು ಹಾರೈಸಿದರು.
ಈ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷರು ರೇಖಾ, ಉಪಾಧ್ಯಕ್ಷರು ಎ.ಪಿ.ಶಂಕರ್, ಸದಸ್ಯರಾದ ರಮ್ಯ ಮಹೇಶ್, ಮಂಜುನಾಥ್, ಜಿ.ಪಿ.ಶಿವಕುಮಾರ್, ದೇವಾನಂದ, ಮಾಜಿ ಸದಸ್ಯ ಮಹದೇವಪ್ರಸಾದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಶಾಸಕರ ಆಪ್ತ ಕಾರ್ಯದರ್ಶಿ ಬಸ್ತೀಪುರ ರವಿ,ಬೆಂಡರಹಳ್ಳಿ ಯಜಮಾನರು ರಾಜಪ್ಪ, ಅಶೋಕ, ಮಹದೇವ, ಸೋಮಣ್ಣ, ತೋಪರಾಜ್, ಮುಖಂಡರಾದ ಮಹೇಂದ್ರ, ಎಂ.ಶಾಂತರಾಜು, ಲಿಂಗರಾಜು, ಶ್ರೀಕಂಠ, ಭೀಮ, ಮಲ್ಲರಾಜು, ರವಿಕುಮಾರ್, ಲಿಂಗರಾಜು, ಜೈರಾಜು, ನಿರ್ಮಿತಿ ಕೇಂದ್ರ ಉಪಯೋಜನಾ ವ್ಯವಸ್ಥಾಪಕರು ಪ್ರತಾಪ್ ಕುಮಾರ್.ಎಂ.ಮತ್ತಿತರರು ಹಾಜರಿದ್ದರು.
ಕೊಳ್ಳೇಗಾಲ,ಮಾ.2:ಕೊಳ್ಳೇಗಾಲ ತಾಲ್ಲೂಕಿನ ಹಳೇ ಹಂಪಾಪುರ ಗ್ರಾಮದ ಪ್ರಸಿದ್ಧ ಶ್ರೀ ಬಾಳೆಎಲೆ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಬಾಳೆಎಲೆ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಶ್ರೀ ಶನೇಶ್ವರ ಸ್ವಾಮಿಯ ವಿಶೇಷ ಪೂಜೆಗಳು ವಿಜೃಂಭಣೆಯಿಂದ ಜರುಗಿದವು.
ಹಾಗೂ ಭಕ್ತರಿಗೆ ಅನ್ನ ಸಂತಪ೯ಣೆ ನಡೆಸಲಾಯಿತು.
ಹಂಪಾಪುರ ಗ್ರಾಮದ ಕಾವೇರಿ ತಟದಲ್ಲಿ ನೆಲೆಸಿರುವ ಪ್ರಸಿದ್ಧ ಶ್ರೀ ಬಾಳೆಎಲೆ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ.
ಶ್ರೀ ಸ್ವಾಮಿಯು ಆಂಧ್ರದ ಶ್ರೀಶೈಲ ಪರ್ವತದಿಂದ ತನ್ನ ಸಹೋದರ ವೀರಭದ್ರ ಹಾಗೂ ಸಹೋದರಿ ಬಿಸಿಲು ಮಾರಮ್ಮನೊಡನೆ ಇಲ್ಲಿ ಬಂದು ನೆಲೆಸಿದ್ದಾನೆ ಎಂಬ ಪ್ರತೀತಿ ಇದೆ.
ಇಲ್ಲಿ ಹಿಂದೆ ಅನೇಕ ಪವಾಡಗಳು ನಡೆಯುತ್ತಿದ್ದವು ಕ್ರಮೇಣ ಎಲ್ಲವೂ ಬದಲಾಗಿದೆ ಎಂದು ಹಿರಿಯರು ಹೇಳುತ್ತಾರೆ.
ಈ ದೇವಾಲಯಕ್ಕೆ ಸುತ್ತ ಮುತ್ತಲಿನ ಹಾಗೂ ನದಿಯಾಚೆಗಿನ ಮಳವಳ್ಳಿ ತಾಲೂಕು ಹಾಗೂ ಟಿ ನರಸೀಪುರ ತಾಲ್ಲೂಕಿನ ಬಹುತೇಕ ಗ್ರಾಮಗಳ ಜನರು ಒಕ್ಕಲಾಗಿದ್ದು ಅಪಾರ ಭಕ್ತ ವೃಂದವನ್ನು ಹೊಂದಿದೆ.
ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಶನಿವಾರ ದೇವರಿಗೆ ವಿವಿಧ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.
ಶ್ರೀ ಸ್ವಾಮಿಗೆ ಬೆಳಿಗ್ಗೆಯಿಂದಲೇ ರುದ್ರಾಭಿಷೇಕ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ, ಮಹಾಪ್ರಸಾದ ವಿನಿಯೋಗ ಹಾಗೂ ನವಗ್ರಹ ಪೂಜೆ,ನವಗ್ರಹ ಹೋಮ,ಶ್ರೀ ಶನೇಶ್ವರಸ್ವಾಮಿಯವರ ಮಹಾ ಪೂರ್ಣಾಹುತಿ, ಮಹಾಕುಂಭಾಭಿಷೇಕ ಮಧ್ಯಾಹ್ನ ಅನ್ನಸಂತರ್ಪಣೆ ಕೂಡಾ ಹಮ್ಮಿಕೊಳ್ಳಲಾಗಿತ್ತು ನೂರಾರು ಮಂದಿ ಭಾಗವಹಿಸಿ ದೇವರ ದರ್ಶನ ಪಡೆದರು.
ಮೈಸೂರಿನ ನಟರಾಜು, ಹಂಪಾಪುರ ರಾಜೇಶ್ ಮತ್ತು ತಂಡ ಹಾಗೂ ಮಹೇಶ್, ಶ್ರೀ ಶನೇಶ್ವರ ಸ್ವಾಮಿಯ ಹರಿಕಥೆ ನಡೆಸಿಕೊಟ್ಟರು. ಈ ಎಲ್ಲಾ ಕಾರ್ಯಕ್ರಮ ದೇಗುಲದ ಪ್ರಧಾನ ಅರ್ಚಕರಾದ ಪರಮೇಶ್ವರರಾಧ್ಯರವರ ನೇತೃತ್ವದಲ್ಲಿ ಜರುಗಿದವು.
ಅರ್ಚಕರಾದ ಸಂದೀಪ್ ಆರಾಧ್ಯ, ಗ್ರಾಮಸ್ಥರು ಹಾಗೂ ಸುತ್ತ ಮುತ್ತಲ ಗ್ರಾಮಗಳ ನೂರಾರು ಮಂದಿ ಭಾಗವಹಿಸಿದ್ದರು.
ಕೊಳ್ಳೇಗಾಲ,ಮಾ.1: ಅತಿ ವೇಗವಾಗಿ ಬಂದ ಟಿಪ್ಪರ್ ಕಾರ್ ಗೆ ಅಪ್ಪಳಿಸಿದ ಪರಿಣಾಮ ಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿದ್ದ ಐದು ಮಂದಿ ಮೃತಪಟ್ಟ ಘಟನೆ ಮಲೆ ಮಹದೇಶ್ವರ ಬೆಟ್ಟ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಅಪಘಾತದಲ್ಲಿ ಮೂವರು ಯುವಕರು ಇಬ್ಬರು ಯುವತಿಯರು ಒಟ್ಟು ಐವರು ಸ್ಥಳದಲ್ಲೆ ಸಾವನ್ನಪ್ಪಿದ್ದು,ಈ ಘಟನೆ ಚಿಕ್ಕಿoದುವಾಡಿ ಸಮೀಪ ಇಂದು ಬೆಳಿಗ್ಗೆ ಸಂಭವಿಸಿದೆ
ಮಂಡ್ಯ ಜಿಲ್ಲೆ, ಮದ್ದೂರು ತಾಲ್ಲೂಕು ಹಲ್ಲೆಗೆರೆ ಗ್ರಾಮದ ಶ್ರೇಯಸ್, ಇದೇ ತಾಲೂಕಿನ ಲಕ್ಷ್ಮಿಗೌಡನದೊಡ್ಡಿಯ ನಿತಿನ್, ಮಂಡ್ಯದ ಶ್ರೀರಾಮನಗರ ನಿವಾಸಿ ಸುಹಾಸ್, ಮೈಸೂರಿನ ಆಲನಹಳ್ಳಿ ವಾಸಿ ಶ್ರೀ ಲಕ್ಷ್ಮಿ ಹಾಗೂ ಪಿರಿಯಾಪಟ್ಟಣ ತಾಲೂಕು ಶಾನುಭೋಗನ ಹಳ್ಳಿಯ ಲಿಖಿತ ಮೃತಪಟ್ಟ ದುರ್ದೈವಿಗಳು.
ಈ ನತದೃಷ್ಟರು ಸುಮಾರು 22 ರಿಂದ 23 ವಯಸ್ಸಿನ ಆಸುಪಾಸಿನವರು.
ಇಂದು ಬೆಳಿಗ್ಗೆ 9.30 ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಮೃತರೆಲ್ಲರೂ ಸ್ನೇಹಿತರು. ಸ್ವಿಫ್ಟ್ ಕಾರಿನಲ್ಲಿ ಇಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿದ್ದ ಮಹಾ ರಥೋತ್ಸವಕ್ಕೆ ತೆರಳುತ್ತಿದ್ದರು ಎಂದು ಗೊತ್ತಾಗಿದೆ.
ಹನೂರು ಕಡೆಯಿಂದ ಬರುತ್ತಿದ್ದ ಟಿಪ್ಪರ್ ಚಾಲಕ ಮುಂದೆ ಹೋಗುತ್ತಿದ್ದ ವಾಹನವನ್ನು ಹಿಂದಿಕ್ಕುವ ಭರದಲ್ಲಿ ಸ್ವಿಫ್ಟ್ ಕಾರ್ ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿ ರಸ್ತೆ ಬದಿಯ ಗದ್ದೆಗೆ ಉರುಳಿ ಬಿದ್ದಿದೆ. ಘಟನೆಯಿಂದ ಕಾರಿನಲ್ಲಿದ್ದ ಐವರು ಕಾರಿನೊಳಗೆ ಉಸಿರು ಚೆಲ್ಲಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತ ದೇಹಗಳನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದಾರೆ.
ಸ್ಥಳಕ್ಕೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಕವಿತಾ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಮುಂದಿನ ಕ್ರಮದ ಬಗ್ಗೆ ಸೂಚಿಸಿದ್ದಾರೆ
ಆದರೆ ಕಾರಿನಲ್ಲಿದ್ದ ಇವರು ಒಟ್ಟಿಗೆ ಮೃತಪಟ್ಟಿರುವುದರಿಂದ ಮೃತರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇನ್ನು ಲಭ್ಯವಾಗಿಲ್ಲ. ಸ್ವಿಫ್ಟ್ ಕಾರಿನ ಸಂಖ್ಯೆ ಕೆ.ಎ11 ಆಗಿರುವುದರಿಂದ ಮಂಡ್ಯ ಜಿಲ್ಲೆಯವರಿರ ಬೇಕೆಂದು ಶಂಕಿಸಲಾಗಿದೆ.
ಕೊಳ್ಳೇಗಾಲ ಮಲೆ ಮಾದೇಶ್ವರ ಬೆಟ್ಟ ರಸ್ತೆಯನ್ನು ಕೆ ಸಿಫ್ ಯೋಜನೆಯಡಿ ಅಭಿವೃದ್ಧಿಪಡಿಸಿರುವುದರಿಂದ ವಾಹನ ಸವಾರರು ತಮ್ಮ ವಾಹನಗಳನ್ನು ಅತಿ ವೇಗವಾಗಿ ಚಲಾಯಿಸುವುದರಿಂದ ಆಗಿಂದಾಗ್ಗೆ ಈ ರಸ್ತೆಯಲ್ಲಿ ಭೀಕರ ಅಪಘಾತಗಳು ಸಂಭವಿಸುತ್ತಿರುವೆ.
ರಸ್ತೆ ಅಭಿವೃದ್ಧಿಪಡಿಸಿರುವ ಕೇಸಿಫ್ ಯೋಜನೆ ಅಧಿಕಾರಿಗಳು ರಸ್ತೆ ಅಭಿವೃದ್ಧಿ ವೇಳೆ ಈ ರಸ್ತೆಯನ್ನು ಅಲ್ಲಲ್ಲಿ ಸುಮಾರು 6 ರಿಂದ 8 ಅಡಿ ಎತ್ತರಕ್ಕೆ ಎತ್ತರಿಸಿದ್ದಾರೆ.
ಆದರೆ ರಸ್ತೆಗಳ ಇಕ್ಕೆಲಗಳಲ್ಲಿ ತಡೆಗೋಡೆ ನಿರ್ಮಿಸಿಲ್ಲ .ಇದರಿಂದಾಗಿ ಅತಿ ವೇಗವಾಗಿ ಚಲಿಸುವ ಬಹುತೇಕ ವಾಹನಗಳು ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಉರುಳಿ ಬಿದ್ದು ಸಾವು,ನೋವು ಹೆಚ್ಚಾಗುತ್ತಿದೆ.
ಕೊಳ್ಳೇಗಾಲ: ಡಾ. ವಿಷ್ಣು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ಕೊಳ್ಳೇಗಾಲ ಪಟ್ಟಣದಲ್ಲಿ ವಿಷ್ಣುವರ್ಧನ್ ಅವರ ಪುತ್ಥಳಿ ನಿರ್ಮಾಣ ಮಾಡಲಾಗುತ್ತಿದೆ.
ಡಾ. ವಿಷ್ಣುವರ್ಧನ್ ಅವರ ಪುತ್ಥಳಿ ನಿರ್ಮಾಣ ಕಾರ್ಯಕ್ಕೆ ಫೆ.21 ರಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಭೂಮಿ ಪೂಜೆ ನೆರವೇರಿಸಲಿದ್ದಾರೆ ಎಂದು ಟ್ರಸ್ಟ್ ನ ಅಧ್ಯಕ್ಷರಾದ ಕೆ.ಆರ್. ಬಾಲರಾಜು ನಾಯಕ್ ಅವರು ತಿಳಿಸಿದ್ದಾರೆ.
ಪಟ್ಟಣದ ಬಸ್ ನಿಲ್ದಾಣದ ಬಳಿ ವಿಜಯಲಕ್ಷ್ಮಿ ಲಾಡ್ಜ್ ಮುಂಭಾಗ ಸುಮಾರು 35 ಲಕ್ಷ ರೂ.ಗಳ ವೆಚ್ಚದಲ್ಲಿ ವುಷ್ಣು ಪುತ್ಥಳು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ವಿಷ್ಣುವರ್ಧನ್ ಅವರ ಸಾಹಸಸಿಂಹ ಚಿತ್ರದ ಶೈಲಿಯ 10 ಅಡಿ ಎತ್ತರದ 600 ಕೆಜಿ ತೂಕದ ಕಂಚಿನ ಪ್ರತಿಮೆ ತಯಾರಿಸಲು ಬೆಂಗಳೂರಿನ ಆಕಾರ್ ಸಂಸ್ಥೆಗೆ ನೀಡಿದ್ದು ಪ್ರತಿಮೆ ಸ್ಥಾಪನೆಗೆ ಮಂಟಪ ಹಾಗೂ ಪಾರ್ಕಿಂಗ್ ನಿರ್ಮಾಣ ಕಾರ್ಯಕ್ಕೆ ಶಾಸಕರು ಭೂಮಿ ಪೂಜೆ ನೆರವೇರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ರೇಖಾ ರಮೇಶ್, ಪೌರಾಯುಕ್ತ ರಮೇಶ್, ಮಾಜಿ ಸಚಿವ ಎನ್. ಮಹೇಶ್, ಮಾಜಿ ಶಾಸಕರಾದ ಜಿ.ಎನ್. ನಂಜುಂಡಸ್ವಾಮಿ, ಎಸ್.ಬಾಲರಾಜು, ನಿಗಮ ಮಂಡಳಿ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ, ಬೆಂಗಳೂರಿನ ಸಂಜಯ್ ಗಾಂಧಿ ಆಸ್ಪತ್ರೆಯ ಖ್ಯಾತ ಬೆನ್ನು ಹುರಿ ಮೂಳೆ ತಜ್ಞರಾದ ಡಾ. ಎನ್.ಎಸ್. ಮೋಹನ್ ನಗರಸಭಾ ಉಪಾಧ್ಯಕ್ಷ ಎ.ಪಿ.ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಎಂ.ಸುರೇಶ್ ಹಾಗೂ ನಗರಸಭೆಯ ಸದಸ್ಯರು, ಕನ್ನಡಪರ ಸಂಘಟನೆಗಳ ಮುಖಂಡರು, ರೈತ ಮುಖಂಡರು, ವಿಷ್ಣುವರ್ಧನ್ ಅಭಿಮಾನಿಗಳು ಆಗಮಿಸಲಿದ್ದಾರೆ ಎಂದು ಡಾ. ವಿಷ್ಣು ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷರಾದ ಬಾಲರಾಜು ನಾಯಕ ಅವರು ತಿಳಿಸಿದ್ದಾರೆ.