ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ:ಅಧ್ಯಕ್ಷ,ಉಪಾಧ್ಯಕ್ಷರಾದ ರಮೇಶ್,ಶೇಖರ್

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಇಲ್ಲಿನ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಮದುವನಹಳ್ಳಿಯ ಎಸ್.ರಮೇಶ್ ಹಾಗೂ ಉಪಾಧ್ಯಕ್ಷರಾಗಿ ಮುಳ್ಳೂರಿನ ಎಂ.ಶೇಖರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಟ್ಟಣದ ಉಮಾಶಂಕರ್ ಕಲ್ಯಾಣ ಮಂಟಪದ ಎದುರುಗಡೆ ಇರುವ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಗೆ ಅಧ್ಯಕ್ಷ ಸ್ಥಾನಕ್ಕೆ ಎಸ್ ರಮೇಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಂ ಶೇಖರ್ ಹೊರತುಪಡಿಸಿ ಮತ್ಯಾರು ಅರ್ಜಿ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿಯಾಗಿ ಆಗಮಿಸಿದ್ದ ಚಾಮರಾಜನಗರ ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿರ್ದೇಶಕರ ಕಚೇರಿಯ ಅಧೀಕ್ಷಕರು ಹಾಗೂ ಚುನಾವಣಾ ಅಧಿಕಾರಿ ಎಸ್. ನಾಗೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಘೋಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಎಸ್. ರಮೇಶ್ ಅವರು ನಾನು ಇಲ್ಲಿಗೆ 25 ನೇ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು ನಾನು ಆಯ್ಕೆಯಾಗಲು ತಿಮ್ಮರಾಜಿಪುರ ಪುಟ್ಟಣ್ಣ, ಬಸವರಾಜು, ನರಸಿಂಹನ್ ಹಾಗೂ ಷಣ್ಮುಖಪ್ಪ ಅವರು ಪ್ರಮುಖ ಕಾರಣರಾಗಿದ್ದಾರೆ ಮುಖ್ಯವಾಗಿ ಮಾಜಿ ಶಾಸಕ ಆರ್.ನರೇಂದ್ರ ರವರು ಸಹಕಾರ ನೀಡಿದ್ದಾರೆ ಅವರೆಲ್ಲರಿಗೂ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.

ಎರಡನೇ ಬಾರಿ ನಿರ್ದೇಶಕನಾಗಿ ಆಯ್ಕೆಯಾಗಿರುವ ನಾನು ಪ್ರಥಮ ಬಾರಿಗೆ ಅಧ್ಯಕ್ಷನಾಗಿದ್ದೇನೆ. ಕಳೆದ ಬಾರಿಯೇ ನಾನು ಅಧ್ಯಕ್ಷನಾಗಿ ಆಯ್ಕೆ ಆಗಬೇಕಿತ್ತು, ಆದರೆ ಕಾರಣಾಂತರಗಳಿಂದ ಅಧ್ಯಕ್ಷ ಸ್ಥಾನ ಕೈ ತಪ್ಪಿತು ಎಂದು ಹೇಳಿದರು.

ಸಹಕಾರ ಬ್ಯಾಂಕ್, ರೈತರ ಬ್ಯಾಂಕ್ ಹಾಗಾಗಿ ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಬ್ಯಾಂಕಿನಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದು ಅವುಗಳನ್ನು ಅತಿ ಶೀಘ್ರದಲ್ಲಿ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.

ಸಕಾಲದಲ್ಲಿ ರೈತರು ಸಾಲ ಮರುಪಾವತಿ ಮಾಡದೆ ಸುಸ್ಥಿಯಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸುವುದಾಗಿ ತಿಳಿಸಿದ ಅವರು ಎಲ್ಲ ನಿರ್ದೇಶಕರ ಸಹಕಾರದೊಡನೆ ಬ್ಯಾಂಕನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಒಟ್ಟು 13 ನಿರ್ದೇಶಕರ ಪೈಕಿ ಪಿ.ಮಹಾದೇವಸ್ವಾಮಿ, ಎಸ್. ರವಿಕುಮಾರ್, ಎಂ. ಶೇಖರ್, ಎಂ.ಕೆ. ಪುಟ್ಟಸ್ವಾಮಿ, ಎಸ್.ರಮೇಶ್, ಸಿ.ಬಸವರಾಜು, ಲೋಕೇಶ್, ಎಸ್ ಅನ್ನಪೂರ್ಣ ಸೇರಿದಂತೆ 9 ನಿರ್ದೇಶಕರು ಚುನಾವಣೆಯಲ್ಲಿ ಭಾಗವಹಿಸಿದ್ದರು. ಎಂ.ಪಿ.ಇಂದ್ರೇಶ್ ಎಸ್.ರಾಜಶೇಖರ್ ಬಿ.ಮಂಜುನಾಥ್ ಎಂ.ಶೀಲಾ ಸೇರಿದಂತೆ ನಾಲ್ಕು ನಿರ್ದೇಶಕರು ಗೈರು ಹಾಜರಾಗಿದ್ದರು.

ಇಲ್ಲಿನ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಾಲಗಾರರ ಕ್ಷೇತ್ರದಲ್ಲಿ ಒಟ್ಟು ಒಟ್ಟು 1605 ಮತದಾರರಿದ್ದು ಸಾಲಗಾರರಲ್ಲದ ಕ್ಷೇತ್ರದಲ್ಲಿ 392 ಮತದಾರರನ್ನು ಹೊಂದಿದೆ. ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ನಿಯಮ ಹಾಗೂ ಸಂಘದ ಬೈಲದ ಪ್ರಕಾರ ಆಡಳಿತ ಮಂಡಳಿಯು13 ನಿರ್ದೇಶಕರ ಸ್ಥಾನಗಳನ್ನು ಹೊಂದಿದ್ದು. ಈ ಪೈಕಿ ಚುನಾಯಿಸಬೇಕಾದ ಸ್ಥಾನಗಳು ಒಟ್ಟು 12, ಸಾಲಗಾರರ ಕ್ಷೇತ್ರದಿಂದ 11 ಸ್ಥಾನಗಳು ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಒಂದು ಸ್ಥಾನ. ಈಗಾಗಲೇ ಸಾಲಗಾರರ ಕ್ಷೇತ್ರದ 2 ಮಹಿಳಾ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿತ್ತು. ಹಾಗಾಗಿ ಸಾಲಗಾರರ ಕ್ಷೇತ್ರದ 9 ನಿರ್ದೇಶಕರುಗಳ ಸ್ಥಾನಗಳಿಗೆ ಹಾಗೂ ಸಾಲಗಾರರಲ್ಲದ ಕ್ಷೇತ್ರದ ಒಂದು ನಿರ್ದೇಶಕ ಸ್ಥಾನ ಒಟ್ಟು 10 ಸ್ಥಾನಗಳಿಗೆ ಏಪ್ರಿಲ್ 28 ರಂದು ಚುನಾವಣೆ ನಡೆದಿತ್ತು. 

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ:ಅಧ್ಯಕ್ಷ,ಉಪಾಧ್ಯಕ್ಷರಾದ ರಮೇಶ್,ಶೇಖರ್ Read More

ಕೊಳ್ಳೇಗಾಲದಲ್ಲಿ ಅದ್ದೂರಿಯಾಗಿ ನಡೆದರಾಜಋಷಿ ಶ್ರೀ ಮಹರ್ಷಿ ಭಗೀರಥ ಜಯಂತಿ

ಕೊಳ್ಳೇಗಾಲ: ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ಕೊಳ್ಳೇಗಾಲ ಪಟ್ಟಣದಲ್ಲಿ ರಾಜಋಷಿ ಶ್ರೀ ಮಹರ್ಷಿ ಭಗೀರಥ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು

ಜಯಂತಿಯ ಅಂಗವಾಗಿ ನಡೆದ ಬೆಳ್ಳಿ ರಥದ ಬೃಹತ್ ಮೆರವಣಿಗೆಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ದೇವಲ ಮಹರ್ಷಿ ವೃತ್ತದ ಬಳಿ ಚಾಲನೆ ನೀಡಿದರು.

ಬಳಿಕ ಬೆಳ್ಳಿ ರಥದ ಮೆರವಣಿಗೆ ದೇವಲ ಮಹರ್ಷಿ ವೃತ್ತದಿಂದ ಮಂಗಳವಾದ್ಯ, ಡೊಲು ತಮಟೆ ಸೇರಿದಂತೆ ವಿವಿಧ ಕಲಾತಂಡ ಹಾಗೂ ಸತ್ತಿಗೆಗಳೊಂದಿಗೆ ಡಾ.ವಿಷ್ಣುವರ್ಧನ್ ರಸ್ತೆ, ಡಾ.ರಾಜಕುಮಾರ ರಸ್ತೆ, ಮಸೀದಿ ವೃತ್ತ, ಡಾ.ಅಂಬೇಡ್ಕರ್ ರಸ್ತೆ, ಎಡಿಬಿ ವೃತ್ತ, ಐಬಿ ರಸ್ತೆಯಲ್ಲಿ ಮೂಲಕ ತೆರಳಿ ನ್ಯಾಷನಲ್ ಸ್ಕೂಲ್ ಆವರಣಕ್ಕೆ ತಲುಪಿತು.

ಮೆರವಣಿಗೆಯುದ್ದಕ್ಕೂ ವಿವಿಧ ಗ್ರಾಮದವರು ದೊಣ್ಣೆ ಒರಸೆ ಪ್ರದರ್ಶಿಸಿದರು. ಪಟಾಕಿ ಸಿಡಿಸುವ ಮೂಲಕ ಯುವಕರು ಹಾಗೂ ಮುಖಂಡರು ಡಿ.ಜೆ ಸೌಂಡ್ ಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು.ಈ ವೇಳೆ ನಟ ದಿ.ಪುನೀತ್ ರಾಜಕುಮಾರ ಭಾವಚಿತ್ರ ಹಿಡಿದು ಕುಣಿದು ಕುಪ್ಪಳಿಸಿದ್ದು‌ ವಿಶೇಷವಾಗಿತ್ತು.

ಮಾಜಿ ಸಚಿವ ಎನ್.ಮಹೇಶ್, ಮಾಜಿ ಶಾಸಕರು ಆರ್.ನರೇಂದ್ರ, ಜಿ.ಎನ್.ನಂಜುಂಡಸ್ವಾಮಿ, ಎಸ್.ಬಾಲರಾಜು ಆಗಮಿಸಿ ಭಗೀರಥ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕುಂತೂರು ಮೋಳೆ ರಾಜೇಂದ್ರ, ನಗರಸಭೆ ಅಧ್ಯಕ್ಷೆ ರೇಖಾ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ರಾಜ್ಯ ಉಪ್ಪಾರ ನಿಗಮ ಮಾಜಿ ಅಧ್ಯಕ್ಷ ಶಿವಕುಮಾರ್, ಜಿ.ಪಂ ಮಾಜಿ ಸದಸ್ಯರ ಕೊಪ್ಪಾಳಿ ಮಹದೇವನಾಯಕ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ತೋಟೇಶ್, ಕಾರ್ಯದರ್ಶಿ ಬಸ್ತೀಪುರ ರವಿ,  ಪಿಎಸಿಎಸ್ಎಸ್ ನಿರ್ದೇಶಕ ಮಂಜುನಾಥ್, ಉಪ್ಪಾರ ಸಂಘದ ಅಧ್ಯಕ್ಷ ರಮೇಶ್,ಉಪವಿಭಾಗಾಧಿಕಾರಿ ಮಹೇಶ್, ತಹಶಿಲ್ದಾರ್ ಬಸವರಾಜು ಮತ್ತಿತರರು ಹಾಜರಿದ್ದರು.  

ಕೊಳ್ಳೇಗಾಲದಲ್ಲಿ ಅದ್ದೂರಿಯಾಗಿ ನಡೆದರಾಜಋಷಿ ಶ್ರೀ ಮಹರ್ಷಿ ಭಗೀರಥ ಜಯಂತಿ Read More

ಉಪ್ಪಾರ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವೆ:ಎಂ.ಆರ್ ಮಂಜುನಾಥ್

ಕೊಳ್ಳೇಗಾಲ: ಉಪ್ಪಾರ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ, ಅವರನ್ನು ಮುಖ್ಯ ವಾಹಿನಿಗೆ ತರಲು ಮನಃಪೂರ್ವಕವಾಗಿ ಪ್ರಯತ್ನಿಸುತ್ತೇನೆ ಎಂದು ಹನೂರು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು

ಭಗೀರಥ ಜಯಂತಿ ಅಂಗವಾಗಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕೊಳ್ಳೇಗಾಲ ಪಟ್ಟಣದಲ್ಲಿ ಆಯೋಜಿಸಿದ್ದ ಭಗೀರಥ ಜಯಂತಿಯ ಮೆರವಣಿಗೆಯ ಮಾರ್ಗಮಧ್ಯೆ ಭಾಗವಹಿಸಿ ಭಗೀರಥ ರಥಕ್ಕೆ ಪುಷ್ಪನಮನ ಸಲ್ಲಿಸಿ ಮೆರವಣಿಗೆಯಲ್ಲಿ ಭಾಗವಹಿಸಿ ಸಮುದಾಯದ ಮುಖಂಡರುಗಳಿಗೆ ಭಗೀರಥ ಜಯಂತಿ ಶುಭ ಕೋರಿ ಮಾತನಾಡಿದರು.

ಹನೂರು ತಾಲೂಕಿನಲ್ಲಿ ಉಪ್ಪಾರ ಸಮುದಾಯ ಮೇಲೆತ್ತಲು ಪ್ರಾಮಾಣಿಕ ಶ್ರಮ ವಹಿಸುತ್ತೇನೆ. ಹನೂರು ಕ್ಷೇತ್ರದ ಅಭಿವೃದ್ಧಿ ಮಾಡಲು ನನಗೆ ಅವಕಾಶ ಮಾಡಿಕೊಟ್ಟ ಜನರ ಋಣ ತೀರಿಸುವ ಕೆಲಸ ಮಾಡಬೇಕಾಗಿದೆ ಈ ಜನರಿಗಾಗಿ ಕ್ಷೇತ್ರದ ಅಭಿವೃದ್ಧಿಗೆ ಭಗೀರತ್ನ ಪ್ರಯತ್ನ ಮಾಡುವುದಾಗಿ ಹೇಳಿದರು.

ಇಂದು ಆಚರಿಸಲಾಗುತ್ತಿರುವ ಈ ಜಯಂತಿ ಮಹೋತ್ಸವ ಮುಂದಿನ ದಿನಗಳಲ್ಲಿ ಭಗಿರಥರ ಹೆಸರಿನಂತೆ ಕೆಲಸ ಮಾಡಲು ಅನುಕೂಲವಾಗಲಿದೆ. ಹನೂರಿನಲ್ಲಿ ವಿಜೃಂಭಣೆಯ ಭಗಿರಥ ಜಯಂತಿ ಆಚರಿಸಲು ತೀರ್ಮಾನಿಸಿದ್ದು ಈ ನಿಟ್ಟಿನಲ್ಲಿ ಮುಖಂಡರ ಜೊತೆ ಚರ್ಚಿಸಿದ್ದೇನೆ. ಮಧುವನ ಹಳ್ಳಿಯಲ್ಲಿ ಆಶ್ರಯ ಬಡಾವಣೆ ಆಗಬೇಕಿದೆ ಅದಕ್ಕಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ, ಎಸ್.ಬಾಲರಾಜು, ತಾಲೂಕು ಉಪ್ಪಾರ ಸಂಘದ ಗೌರವಾಧ್ಯಕ್ಷ ರಮೇಶ್, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷರಾದ ರಾಜೇಂದ್ರ, ರಾಜ್ಯ ಉಪ್ಪಾರ ನಿಗಮದ ಮಾಜಿ ಅಧ್ಯಕ್ಷ ಶಿವಕುಮಾರ್, ಜಿ.ಪಂ ಮಾಜಿ ಸದಸ್ಯ ಕೊಪ್ಪಾಳಿ ಮಹದೇವನಾಯಕ
ಸಮುದಾಯದ ಮುಖಂಡರುಗಳಾದ ದೊಡ್ಡಿಂದುವಾಡಿ ಮಾದೇಶ್, ಶಿವಕುಮಾರ್, ಪ್ರಶಾಂತ್, ಮಹೇಶ್ ಮತ್ತಿತರರು ಹಾಜರಿದ್ದರು.

ಉಪ್ಪಾರ ಸಮುದಾಯದ ಅಭಿವೃದ್ಧಿಗೆ ಶ್ರಮಿಸುವೆ:ಎಂ.ಆರ್ ಮಂಜುನಾಥ್ Read More

ಏ.28 ರಂದು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಇಲ್ಲಿನ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಮುಂದಿನ ಐದು ವರ್ಷಗಳ ಅವಧಿಗೆ ಇದೇ ಏ.28 ರಂದು ಚುನಾವಣೆ ನಡೆಯಲಿದೆ.

ಒಟ್ಟು 10 ನಿರ್ದೇಶಕರ ಸ್ಥಾನಗಳಿಗೆ 33 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಸಾಲಗಾರರ ಕ್ಷೇತ್ರದ 9 ನಿರ್ದೇಶಕರುಗಳ ಸ್ಥಾನಗಳಿಗೆ ಹಾಗೂ ಸಾಲಗಾರರಲ್ಲದ ಕ್ಷೇತ್ರದ ಒಂದು ನಿರ್ದೇಶಕ ಸ್ಥಾನ ಒಟ್ಟು 10 ಸ್ಥಾನಗಳಿಗೆ ಅಂದು ಚುನಾವಣೆ ನಡೆಯಲಿದೆ.

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ನಿಯಮ ಹಾಗೂ ಸಂಘದ ಬೈಲದ ಪ್ರಕಾರ ಆಡಳಿತ ಮಂಡಳಿಯು 13 ನಿರ್ದೇಶಕರ ಸ್ಥಾನಗಳನ್ನು ಹೊಂದಿರಬೇಕು.

ಈ ಪೈಕಿ ಚುನಾಯಿಸಬೇಕಾದ ಸ್ಥಾನಗಳು ಒಟ್ಟು 12, ಸಾಲಗಾರರ ಕ್ಷೇತ್ರದಿಂದ 11 ಸ್ಥಾನಗಳು ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಒಂದು ಸ್ಥಾನ.

ಈಗಾಗಲೇ ಸಾಲಗಾರರ ಕ್ಷೇತ್ರದ 2 ಮಹಿಳಾ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು ಉಳಿದ 9 ಸ್ಥಾನಗಳ ಆಯ್ಕೆಗೆ ಚುನಾವಣೆ ನಡೆಯಲಿದೆ ಎಂದು ಚಾಮರಾಜನಗರ ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿರ್ದೇಶಕರ ಕಚೇರಿಯ ಅಧೀಕ್ಷಕರು ಹಾಗೂ ಚುನಾವಣಾ ಅಧಿಕಾರಿಗಳು ಆಗಿರುವ ಎಸ್. ನಾಗೇಶ್ ತಿಳಿಸಿದರು.

ಈ ಪೈಕಿ 5 ಸಾಮಾನ್ಯ ಸ್ಥಾನಗಳಿಗೆ 12 ಅಭ್ಯರ್ಥಿಗಳು ಪ ಜಾತಿಯ ಒಂದು ಸ್ಥಾನಕ್ಕೆ 6 ಅಭ್ಯರ್ಥಿಗಳು, ಪ. ಪಂಗಡದ ಒಂದು ಸ್ಥಾನಕ್ಕೆ 2 ಅಭ್ಯರ್ಥಿಗಳು, ಬಿ.ಸಿ. ಎಂ (ಬಿ) ಒಂದು ಸ್ಥಾನಕ್ಕೆ 4 ಅಭ್ಯರ್ಥಿಗಳು, ಬಿ.ಸಿ. ಎಂ (ಎ) ಒಂದು ಸ್ಥಾನಕ್ಕೆ 2 ಅಭ್ಯರ್ಥಿಗಳು, ಒಟ್ಟು 26 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಸಾಲಗಾರರರ ಕ್ಷೇತ್ರದಲ್ಲಿ ಒಟ್ಟು 1605 ಮತದಾರರಿದ್ದು ಪ್ರತಿ ಮತದಾರರು 9 ಮತಗಳನ್ನು ಚಲಾಯಿಸುವ ಹಕ್ಕು ಹೊಂದಿದ್ದಾರೆ. ಹಾಗೆಯೇ ಸಾಲಗಾರರಲ್ಲದ ಕ್ಷೇತ್ರದಲ್ಲಿ 392 ಮತದಾರರಿದ್ದು ಒಂದು ಮತವನ್ನಷ್ಟೇ ಚಲಾಯಿಸಬಹುದಾಗಿದೆ.

ಹಿಂದಿನ ಆಡಳಿತ ಮಂಡಳಿಯ ಅವಧಿ ಕಳೆದ ಮಾರ್ಚ್ 31 ಕ್ಕೆ ಮುಕ್ತಾಯಗೊಂಡಿದ್ದು ವ್ಯವಹಾರದ ದೃಷ್ಟಿಯಿಂದ ಅಂದಿನಿಂದ ಸಂಘಕ್ಕೆ ಆಡಳಿತಾಧಿಕಾರಿಯಾಗಿ ಡಿ.ಸಿ.ಸಿ ಬ್ಯಾಂಕಿನ ಮೇಲ್ವಿಚಾರಕರಾದ ಕುಮಾರ್ ಅವರನ್ನು ನೇಮಿಸಲಾಗಿದೆ.

ಕಳೆದ 15 ದಿನಗಳಿಂದ ಚುನಾವಣೆ ಪ್ರಕ್ರಿಯೆಗಳು ಪ್ರಾರಂಭವಾಗಿದ್ದು ಇದೆ ಏ.18 ರಿಂದ 20 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು ಏ.20  ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು.

ಈ ವೇಳೆ ಸಾಲಗಾರರ ಕ್ಷೇತ್ರದಿಂದ 59 ಉಮೇದುವಾರರಿಂದ 61 ಅರ್ಜಿಗಳು ಬಂದಿದ್ದವು. ಏ. 21ರಂದು ನಾಮಪತ್ರ ಪರಿಶೀಲನೆ ನಡೆದು 22 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದ್ದರಿಂದ 33 ಮಂದಿ ನಾಮಪತ್ರ ವಾಪಸ್ ಪಡೆದು ಕೊಂಡಿದ್ದು 26 ಮಂದಿ ಕಣದಲ್ಲಿದ್ದಾರೆ.

ಹಾಗೆಯೇ ಸಾಲಗಾರರಲ್ಲದ ಕ್ಷೇತ್ರದ ಒಂದು ಸ್ಥಾನಕ್ಕೆ 10 ಮಂದಿ ನಾಮಪತ್ರ ಸಲ್ಲಿಸಿದರು ಆ ಪೈಕಿ 3 ಮಂದಿ ನಾಮಪತ್ರ ವಾಪಸ್ ಪಡೆದುಕೊಂಡಿದ್ದು ಅಂತಿಮವಾಗಿ 7 ಮಂದಿ ಕಣದಲ್ಲಿ ಉಳಿದಿದ್ದಾರೆ.

ಈ ಎಲ್ಲಾ ನಿರ್ದೇಶಕರುಗಳ ಸ್ಥಾನಗಳಿಗೆ ಇದೇ 28 ರಂದು ಸೋಮವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆ ವರೆಗೆ ಪಟ್ಟಣದ ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚುನಾವಣೆ ನಡೆಯಲಿದೆ, ಚುನಾವಣೆಯ ನಂತರ ಅಂದೇ ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ ಎಂದು ಎಸ್. ನಾಗೇಶ್ ಅವರು ವಿವರಿಸಿದರು.

ಏ.28 ರಂದು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ Read More

ಕ್ಷುಲ್ಲಕ ಕಾರಣಕ್ಕೆ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮ*ತ್ಯೆ

(ವರದಿ:ಸಿದ್ದರಾಜು ಕೊಳ್ಳೇಗಾಲ)

ಕೊಳ್ಳೇಗಾಲ: ಕ್ಷುಲ್ಲಕ ಕಾರಣಕ್ಕೆ ಗೃಹಿಣಿಯೊಬ್ಬರು ತನ್ನ ಎರಡು ಮಕ್ಕಳೊಡನೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಲೆ ಮಾದೇಶ್ವರ ಬೆಟ್ಟ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಕೂಗಳತೆ ದೂರದಲ್ಲಿರುವ ಕಾಡುಹೊಲ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಬೇಡಗಂಪನ ಜನಾಂಗದ ಮಾದೇಶ ಎಂಬುವರ ಪತ್ನಿ ಸುಶೀಲಾ (35) ಮಕ್ಕಳಾದ ಚಂದ್ರು 3ನೇ ತರಗತಿ(9), ದಿವ್ಯ 6 ನೇ ತರಗತಿ (11), ಮೃತ ದುರ್ದೈವಿಗಳು.

ಗ್ರಾಮದ ಈರಣ್ಣ ಎಂಬುವರ ಮಗಳಾದ ಸುಶೀಲಾಳನ್ನು ಕಳೆದ 15 ವರ್ಷಗಳ ಹಿಂದೆ ಅದೇ ಗ್ರಾಮದ ಮಾದೇಶ ಎಂಬಾತನಿಗೆ ಕೊಟ್ಟು ಮದುವೆ ಮಾಡಲಾಗಿತ್ತು.

ದಂಪತಿಗಳಿಗೆ ಒಂದು ಹೆಣ್ಣು ಒಂದು ಗಂಡು ಇಬ್ಬರು ಮಕ್ಕಳಿದ್ದರು. ಮೃತಳ ಸಹೋದರ ಮನೆಗೆ ಬಂದು ಹಣ ಮತ್ತು ಮೊಬೈಲ್ ತೆಗೆದುಕೊಂಡು ಹೋಗಿದ್ದ. ಈ ವಿಚಾರವಾಗಿ ಮಾದೇಶ ಹೆಂಡತಿಯನ್ನು ಪ್ರಶ್ನಿಸಿದ್ದಾನೆ.

ಈ ವೇಳೆ ಮಾತಿಗೆ ಮಾತು ಬೆಳೆದು ದಂಪತಿಗಳಿಬ್ಬರು ಜಗಳ ಮಾಡಿದ್ದಾರೆ. ಇದರಿಂದ ಮನನೊಂದ ಸುಶೀಲ ತನ್ನೆರಡು ಮಕ್ಕಳಾದ ಚಂದ್ರು ಹಾಗೂ ದಿವ್ಯಾಳನ್ನು ಕರೆದುಕೊಂಡು ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ರಂಗ ಮಾದಯ್ಯ ಎಂಬುವರ ತೋಟದ ಜಮೀನಿನಲ್ಲಿರುವ ತೆರೆದ ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆದರೆ ಹಣದ ವಿಚಾರವಾಗಿ ಆಗಾಗ ನನ್ನ ಮಗಳ ಮೇಲೆ ಗಲಾಟೆ ಮಾಡುತ್ತಿದ್ದ ಅಳಿಯ ನನ್ನ ಮಗಳು ಹಾಗೂ ಮೊಮ್ಮಕ್ಕಳನ್ನು ಬಾವಿಗೆ ತಳ್ಳಿ ಕೊಲೆ ಮಾಡಿದ್ದಾನೆ ಎಂದು ಮೃತಳ ತಂದೆ ಈರಣ್ಣ ಮಲೆ ಮಾದೇಶ್ವರ ಬೆಟ್ಟ ಠಾಣೆಗೆ ದೂರು ನೀಡಿದ್ದಾರೆ.

ಈರಣ್ಣ ನೀಡಿದ ದೂರಿನ ಮೇರೆಗೆ ಮ.ಮ. ಬೆಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವಗಳನ್ನು ಹೊರ ತೆಗೆಸಿ ಪಂಚನಾಮೆ ನಡೆಸಿ ವಾರಸುದಾರರಿಗೆ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮ*ತ್ಯೆ Read More

ಕೊಳ್ಳೇಗಾಲದ ಸಿಲ್ಕಲ್ ಪುರ,ಕುಂತೂರಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಕೃಷ್ಣಮೂರ್ತಿ ಚಾಲನೆ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ತಾಲ್ಲೂಕಿನ ಸಿಲ್ಕಲ್ ಪುರ ಹಾಗೂ ಕುಂತೂರು ಗ್ರಾಮಗಳಲ್ಲಿ ಸುಮಾರು 45 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.

ಸಿಲ್ಕಲ್ ಪುರ ಗ್ರಾಮದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ 200 ಮೀಟರ್ ಸಿಸಿ ರಸ್ತೆ ಮತ್ತು 100 ಮೀಟರ್ ಚರಂಡಿ ಕಾಮಗಾರಿ ಹಾಗೂ ಕುಂತೂರು ಗ್ರಾಮದಲ್ಲಿ 20 ಲಕ್ಷ ರೂ ವೆಚ್ಚದಲ್ಲಿ ಮುಖ್ಯ ರಸ್ತೆಯಿಂದ ಗ್ರಾಮದೊಳಗೆ ಹಾದು ಹೋಗುವ ಮುಖ್ಯ ಚರಂಡಿ ಕಾಮಗಾರಿಗಳ ನಿರ್ಮಾಣಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಮಾಜ ಕಲ್ಯಾಣ ಇಲಾಖೆಯಿಂದ ತಾಲ್ಲೂಕಿನ ಸಿಲ್ಕಲ್ ಪುರ ಹಾಗೂ ಕುಂತೂರು ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 45 ಲಕ್ಷ ರೂ. ಗಳ ಅನುದಾನವನ್ನು ಸಚಿವರಾದ ಹೆಚ್. ಸಿ. ಮಹದೇವಪ್ಪ ಅವರು  ಮಂಜೂರು ಮಾಡಿದ್ದಾರೆ, ಅದರಲ್ಲಿ ಸಿಲ್ಕಲ್ ಪುರ ಗ್ರಾಮದ ಕಾಮಗಾರಿಗೆ 25 ಲಕ್ಷ ರೂ ಪೈಕಿ 8.25 ಲಕ್ಷ ರೂ, ಕುಂತೂರು ಗ್ರಾಮದ ಕಾಮಗಾರಿಗೆ 20 ಲಕ್ಷ ರೂ ಪೈಕಿ 10 ಲಕ್ಷ ರೂ. ಬಿಡುಗಡೆಯಾಗಿದೆ, ಈ ಅನುದಾನಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಗ್ರಾಮಸ್ಥರು ಗ್ರಾಮದಲ್ಲಿ 100 × 100 ಅಳತೆ ವಿಸ್ತೀರ್ಣವುಳ್ಳ ನಿವೇಶನವಿದ್ದು ಈ ನಿವೇಶನದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಿಕೊಡುವಂತೆ ಶಾಸಕರಲ್ಲಿ ಮನವಿ ಮಾಡಿದರು.

ಹೊಸ ಬಡಾವಣೆಯಲ್ಲಿರುವ ವಿದ್ಯುತ್ ಕಂಬಗಳನ್ನು ಸೆಸ್ಕ್ ನವರು ಅವೈಜ್ಞಾನಿಕವಾಗಿ ಅಳವಡಿಸಿದ್ದು ಸರಿಪಡಿಸಿ ಕೊಡುವಂತೆ ಕೋರಿದರು. ಇದೇ ವೇಳೆ ತೀರ ಹಳೆಯ ಮನೆಯಲ್ಲಿ ಇರುವವರಿಗೆ ಬೇರೆ ಮನೆ ನಿರ್ಮಿಸಿ ಕೊಡುವಂತೆ ಕೇಳಿಕೊಂಡರು.

ಗ್ರಾಮಸ್ಥರ ಅಹವಾಲಿಗೆ ಸ್ಪಂದಿಸಿದ ಶಾಸಕರು ಇಷ್ಟು ವಿಶಾಲವಾದ ನಿವೇಶನ ಯಾವ ಗ್ರಾಮದಲ್ಲಿಯು ಇಲ್ಲ. ಈ ಗ್ರಾಮದಲ್ಲಿ ಉತ್ತಮವಾದ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಮಾಡಲು ಸ್ಥಳ ವಿಶಾಲವಾಗಿದೆ, ಸಮುದಾಯ ಭವನ ನಿರ್ಮಾಣಕ್ಕೆ ನನ್ನ  ಶಕ್ತಿ ಮೀರಿ ಅನುದಾನ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ಹಳೆಯ ಮಣ್ಣಿನ ಮನೆಗಳನ್ನು ಕೂಡಲೇ ಜಿ.ಪಿ.ಎಸ್ ಮಾಡಿ ಅಪ್ಲೋಡ್ ಮಾಡುವಂತೆ ಗ್ರಾಪಂ ಪಿಡಿಒ ಮಲ್ಲೇಶ್ ಅವರಿಗೆ ಸೂಚಿಸಿದರು. ಸೆಸ್ಕಾಂ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಅಗತ್ಯ ಇರುವ ಕಡೆ ಅಳವಡಿಸುವಂತೆ ಆದೇಶಿಸಿದರು‌

ಕುಂತೂರು ಗ್ರಾಮದಲ್ಲಿ 20 ಲಕ್ಷ ರೂ ವೆಚ್ಚದಲ್ಲಿ ಮುಖ್ಯ ರಸ್ತೆಯಿಂದ ಗ್ರಾಮದೊಳಗೆ ಹಾದು ಹೋಗುವ ಮುಖ್ಯ ಚರಂಡಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕರು ಪರಿಶಿಷ್ಟ ಜಾತಿ ಬೀದಿಯಲ್ಲಿ ಮಳೆ ಬಂದರೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ ಆದ್ದರಿಂದ ಈ ಕಾಮಗಾರಿಯನ್ನು 20 ಲಕ್ಷ ರೂ ವೆಚ್ಚದಲ್ಲಿ ಕೈಗೊಳ್ಳಲು ಚಾಲನೆ ನೀಡಲಾಗಿದೆ, ಈ ಅನುದಾನಕ್ಕೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ ಆದ್ದರಿಂದ ಹೆಚ್ಚಿನ ಅನುದಾನಕ್ಕೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.

ಗೊಬ್ಬಳಿಪುರ ಗ್ರಾಮದಲ್ಲಿ ಗುದ್ದಲಿ ಪೂಜೆ ನೆರವೇರಿಸಬೇಕಾಗಿದ್ದ ಕಾರ್ಯಕ್ರಮವನ್ನು ಗೊಂದಲದಿಂದ ಮುಂದೂಡಲಾಗಿದೆ ಎಂದು ಎ.ಆರ್.ಕೃಷ್ಣಮೂರ್ತಿ ತಿಳಿಸಿದರು.

ಗ್ರಾಪಂ ಅಧ್ಯಕ್ಷ ಮಹಾದೇವಸ್ವಾಮಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕುಂತೂರು ರಾಜೇಂದ್ರ, ಪಿಡಿಒ ಮಲ್ಲೇಶ್, ಕೆ ಆರ್ ಐ ಡಿ ಎಲ್ ಕಾರ್ಯಾಪಾಲಕ ಅಭಿಯಂತರ ಚಿಕ್ಕಲಿಂಗಯ್ಯ, ತಾ.ಪಂ. ಮಾಜಿ ಸದಸ್ಯ ಚೆಲುವರಾಜು, ಕುಂತೂರು ಗ್ರಾಪಂ ಅಧ್ಯಕ್ಷೆ ಗಂಗಾಂಬಿಕೆ ಮಾಜಿ ಅಧ್ಯಕ್ಷರಾದ ಬಸವರಾಜು, ಲಿಂಗರಾಜು, ಸದಸ್ಯರುಗಳಾದ ರೂಪ ಸಿ ಮಲ್ಲಯ್ಯ, ಗುತ್ತಿಗೆದಾರ ಹರೀಶ್ ಗ್ರಾಮದ ಮುಖಂಡರುಗಳಾದ ಮಲ್ಲಣ್ಣ, ರಾಜೇಂದ್ರ, ಸಿದ್ದರಾಜು, ನಂಜುಂಡಸ್ವಾಮಿ ಪುಟ್ಟಮಲ್ಲಯ್ಯ ಮತ್ತಿತರ ಅನೇಕರು ಹಾಜರಿದ್ದರು.

ಕೊಳ್ಳೇಗಾಲದ ಸಿಲ್ಕಲ್ ಪುರ,ಕುಂತೂರಿನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಕೃಷ್ಣಮೂರ್ತಿ ಚಾಲನೆ Read More

ಡಾ.ಅಂಬೇಡ್ಕರ್ ಅವರ 134 ನೇ ಜಯಂತಿ: ಅದ್ದೂರಿ ಆಚರಣೆಗೆ ಭೀಮನಗರದ ಮುಖಂಡರ ಸಿದ್ಧತೆ

ಕೊಳ್ಳೇಗಾಲ: ಕೊಳ್ಳೇಗಾಲ ಭೀಮನಗರದ ಡಾ.ಅಂಬೇಡ್ಕರ್ ಜಯಂತೋತ್ಸವ ಆಚರಣೆ ಸಮಿತಿ ವತಿಯಿಂದ ಡಾ.ಅಂಬೇಡ್ಕರ್ ಅವರ 134 ನೇ ಜಯಂತಿಯನ್ನು ಸಂಭ್ರಮ ಸಡಗರ ದಿಂದ ಆಚರಿಸಲು ನಿರ್ಧರಿಸಲಾಗಿದೆ.

ಪಟ್ಟಣದ ಲೋಕೋಪಯೋಗಿ ಇಲಾಖೆ ವಸತಿಗೃಹದ ಸಭಾಂಗಣದಲ್ಲಿ ಈ ಕುರಿತು ಭೀಮನಗರದ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ದೊಡ್ಡ ಯಜಮಾನ ಚಿಕ್ಕಮಾಳಿಗೆ ಅವರು ಮಾತನಾಡಿ, ಏ.11 ರಿಂದ 14 ರವರೆಗೆ ಕೊಳ್ಳಗಾಲ ಪಟ್ಟಣದಲ್ಲಿ ಡಾ.ಅಂಬೇಡ್ಕರ್ ಜಯಂತೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲು ನಿರ್ಧರಿಸಲಾಗಿದ್ದು ಕಾರ್ಯಕ್ರಮದ ಸಿದ್ಧತೆಗಳು ಬರದಿಂದ ಸಾಗಿವೆ ಎಂದು ತಿಳಿಸಿದರು.

ಭೀಮನಗರದ ಮನೆ, ಮನೆಗಳಲ್ಲೂ ಹಬ್ಬದ ವಾತಾವರಣ ಮನೆ ಮಾಡಲಿದೆ. ಕಳೆದೊಂದು ವಾರದಿಂದ ಕಾರ್ಯಕ್ರಮದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸಿಕೊಂಡು ಸಮುದಾಯದ ಸಾಕಷ್ಟು ಯುವಕರು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಿಗೆ ತೆರಳಿ ಆಹ್ವಾನ ಪತ್ರಿಕೆಗಳನ್ನು ನೀಡಿ ಜನರನ್ನು ಆಹ್ವಾನಿಸುತ್ತಿದ್ದಾರೆ. ಈ ಬಾರಿ ಗ್ರಾಮಾಂತರ ಪ್ರದೇಶದ ಜನರೊಡಗೂಡಿ ಅಂಬೇಡ್ಕರ್ ಜಯಂತೋತ್ಸವವನ್ನು ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ಆಚರಿಸಲಿದ್ದೇವೆ ಎಂದು ತಿಳಿಸಿದರು.

ಜಯಂತೋತ್ಸವದ ಅಂಗವಾಗಿ ಪಟ್ಟಣದಲ್ಲಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ, ಅಂಬೇಡ್ಕರ್ ಅವರು ನ್ಯಾಯವಾದಿಗಳು ಹಾಗೂ ಕಾನೂನು ಸಚಿವರಾಗಿದ್ದರಿಂದ ಏ.11 ರಂದು ಸಂಜೆ 5 ಗಂಟೆಗೆ ಭೀಮ ನಗರದ ಸಾವಿತ್ರಿಬಾಯಿ ಪುಲೆ ಸಭಾಂಗಣದಲ್ಲಿ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗಿದೆ, ಕಾರ್ಯಕ್ರಮಕ್ಕೆ ನ್ಯಾಯಾಧೀಶರು ಚಾಲನೆ ನೀಡಲಿದ್ದಾರೆ ಎಂದು ಚಿಕ್ಕಮಾಳಿಗೆ ತಿಳಿಸಿದರು.

ಏ.12 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ರಮಾಬಾಯಿ ಸರ್ಕಾರಿ ಶಾಲೆಯಲ್ಲಿ ರಕ್ತದಾನ ಶಿಬಿರ, ಉಚಿತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ, ಈ ಕಾರ್ಯಕ್ರಮಗಳನ್ನು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಭೀಮನಗರದ ವೈದ್ಯರು ಹಾಗೂ ಸಿಬ್ಬಂದಿ ಬಳಗ ನಡೆಸಿಕೊಡಲಿದೆ.

ಏ.13 ರಂದು ಸಂಜೆ 4 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಂಜೆ 6 ಗಂಟೆಗೆ ಬೆಂಗಳೂರು ರಸ್ತೆಯಲ್ಲಿರುವ ಭೀಮ ನಗರದ ಆದಿ ಕರ್ನಾಟಕ ಜನಾಂಗದ ನಿವೇಶನದಲ್ಲಿ ಖ್ಯಾತ ರಂಗಕರ್ಮಿ ಗಿರೀಶ್ ಮಾಚಳ್ಳಿ ಅವರ ರಚನೆ ಮತ್ತು ನಿರ್ದೇಶನದ ಮನುಸ್ಮೃತಿ ಮತ್ತು ಭಾರತದ ಸಂವಿಧಾನ ಎಂಬ ನಾಟಕ ಪ್ರದರ್ಶನವಿದೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

14 ರಂದು ಬೆಳಿಗ್ಗೆ 6 ರಿಂದ 8 ರವರೆಗೆ ಭೀಮ ನಗರ ಹಾಗೂ ಜಿ.ಪಿ. ಮಲ್ಲಪ್ಪಪುರಂ ನಲ್ಲಿ ಮಹಿಳೆಯರು ಮತ್ತು ಮಕ್ಕಳಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ.

9 ಗಂಟೆಗೆ ಭೀಮ ನಗರದ ಬಸವನಗುಡಿಯಿಂದ ಅಂಬೇಡ್ಕರ್ ಪ್ರತಿಮೆ ಮೆರವಣಿಗೆ ಹೊರಡಲಿದೆ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸರ್ಕಾರಿ ನ್ಯಾಷನಲ್ ಶಾಲ ಮೈದಾನ ತಲುಪಿ ಅಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ

ಸಂಜೆ ವೇದಿಕೆ ಕಾರ್ಯಕ್ರಮಗಳು ಮುಂದುವರೆಯಲಿದ್ದು 5 ಕ್ಕೆ ರಮೇಶ್ ತಾಯೂರು ಮತ್ತು ತಂಡದಿಂದ ಭೀಮಗೀತೆಗಳ ಗಾಯನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಭೀಮನಗರದ ಕಲಾವಿದರು ಮತ್ತು ಗಣ್ಯರಿಗೆ ಗೌರವ ಸಮರ್ಪಣೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ, ಸಂಸದ ಸುನಿಲ್ ಬೋಸ್, ಶಾಸಕರಾದ ಎ ಆರ್ ಕೃಷ್ಣಮೂರ್ತಿ ಎಂ ಆರ್ ಮಂಜುನಾಥ್ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಕೊಳ್ಳೇಗಾಲ ಪಟ್ಟಣದ ಭೀಮನಗರ ಜಿಲ್ಲೆ ಹಾಗೂ ತಾಲ್ಲೂಕಿಗೆ ಶಕ್ತಿ ಕೇಂದ್ರವಾಗಿ ಗುರುತಿಸಿಕೊಂಡಿದೆ. ಸಮುದಾಯದ ಮುಖಂಡರು ಗಳಾದ ದಿವಂಗತರಾದ ಡಿ ಸಿದ್ದರಾಜು, ಪ್ರೆಸ್ ರಾಜಣ್ಣ ಹಾಗೂ ಹೋರಾಟಗಾರರಾದ ದಿವಂಗತ ಹೆಚ್. ಕೃಷ್ಣಸ್ವಾಮಿ, ಶಿವಲಂಕಾರಯ್ಯ, ದೊರೈರಾಜ್ ಅವರು ಸಂಘಟನೆ ಹೇಗೆ ಕಟ್ಟಬೇಕೆಂಬುದನ್ನು ತೋರಿಸಿಕೊಟ್ಟು ಇಂದಿನ ಪೀಳಿಗೆಗೆ ಮಾರ್ಗದರ್ಶಕರಾಗಿದ್ದಾರೆ ಎಂದು ದೊಡ್ಡ ಯಜಮಾನ ಚಿಕ್ಕಮಾಳಿಗೆ ಸ್ಮರಿಸಿದರು.

ಹಿರಿಯ ಮುಖಂಡರಾದ ಲಿಂಗರಾಜು ಅವರು ಮಾತನಾಡಿ ಕಾರ್ಯಕ್ರಮದ ವೇಳೆ ಯಾವುದೇ ಗೊಂದಲಕ್ಕೆ ಅಸ್ಪದ ಕೊಡದೆ ಬಹಳ ಶಾಂತಿಯುತವಾಗಿ ಯಶಸ್ವಿಗೊಳಿಸ ಬೇಕೆಂದು ಮನವಿ ಮಾಡಿದರು.

ನಟರಾಜು ಮಾಳಿಗೆ ಅವರು ಮಾತನಾಡಿ 1991ರಲ್ಲಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಿದೆವು ಮತ್ತೆ ಈ ಅವಕಾಶ ಈಗ ಸಿಕ್ಕಿದೆ ಗ್ರಾಮೀಣ ಪ್ರದೇಶದವರು ಹೆಚ್ಚಿನ ಸಹಕಾರ ನೀಡುವಂತೆ ಕೋರಿದರು.

ಇದೇ‌ ವೇಳೆ ಸಮಾರಂಭದ ಆಹ್ವಾನ ಪತ್ರಿಕೆ,ಬ್ರೌಶರ್ ಗಳನ್ನು ಬಿಡುಗಡೆ ಮಾಡಲಾಯಿತು.

ಸುದ್ದಿಗೋಷ್ಠಿಯಲ್ಲಿ ಭೀಮನಗರದ ಯಜಮಾನರುಗಳಾದ ವರದರಾಜು, ನಟರಾಜು, ಸಿದ್ದಾರ್ಥ, ಪಾಪಣ್ಣ, ಸನತ್ ಕುಮಾರ್, ಸಿದ್ದಪ್ಪ, ಜಯಂತೋತ್ಸವದ ಪ್ರಚಾರ ಸಮಿತಿಯ ದಿಲೀಪ್ ಸಿದ್ದಪ್ಪಾಜಿ, ಶಂಕರ್ ಚೇತನ್, ಕಿರಣ್, ಸಿದ್ದಪ್ಪಾಜಿ, ಮಾಧ್ಯಮ ಸಮಿತಿಯ ಮುಖ್ಯಸ್ಥ ನಿಂಪು ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.

ಡಾ.ಅಂಬೇಡ್ಕರ್ ಅವರ 134 ನೇ ಜಯಂತಿ: ಅದ್ದೂರಿ ಆಚರಣೆಗೆ ಭೀಮನಗರದ ಮುಖಂಡರ ಸಿದ್ಧತೆ Read More

ಉದ್ದು ಬಿತ್ತನೆ; ಉಚಿತ ಬಿತ್ತನೆ ಬೀಜದ ಮಿನಿ ಕಿಟ್ ವಿತರಿಸಿದ ಶಾಸಕ ಕೃಷ್ಣಮೂರ್ತಿ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಮುಂಗಾರು ಹಂಗಾಮಿನಲ್ಲಿ ಭತ್ತ ಬೆಳೆದಿದ್ದ ರೈತರ ತೇವಾಂಶ ಭರಿತ ಜಮೀನಿನಲ್ಲಿ ಉದ್ದು ಬಿತ್ತನೆ ಮಾಡಲು ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ರೈತರಿಗೆ ಉಚಿತ ಬಿತ್ತನೆ ಬೀಜದ ಮಿನಿ ಕಿಟ್ ಗಳನ್ನು ವಿತರಿಸಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಕಸಬಾ ರೈತ ಸಂಪರ್ಕ ಕೇಂದ್ರದಲ್ಲಿ ಫಲಾನುಭವಿಗಳಿಗೆ 4 ಕೆ.ಜಿ ಉದ್ದಿನ ಕಾಳಿನ ಬಿತ್ತನೆ ಬೀಜದ ಮಿನಿ ಕಿಟ್ ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಮುಂಗಾರು ಹಂಗಾಮಿನಲ್ಲಿ ಭತ್ತ ಬೆಳೆದಿದ್ದ ರೈತರ ತೇವಾಂಶ ಭರಿತ ಜಮೀನಿನಲ್ಲಿ ಉದ್ದಿನ ಬೆಳೆ ಬೆಳೆಯಲು ಇದು ಸಕಾಲವಾಗಿದ್ದು ಜೂನ್ – ಜುಲೈಗೆ ಮುಂಗಾರು ಹಂಗಾಮು ಪ್ರಾರಂಭವಾಗುವ 90 ದಿನದೊಳಗೆ ಪೂರ್ವ ಮುಂಗಾರಿನಲ್ಲಿ ಉದ್ದಿನ ಪಸಲು ಬೆಳೆಯ ಬಹುದಾಗಿದೆ ಎಂದು ತಿಳಿಸಿದರು.

ರೈತರ ಅನುಕೂಲಕ್ಕಾಗಿ ಸರ್ಕಾರದ ಆದೇಶದಂತೆ ಕೃಷಿ ಇಲಾಖೆ ವತಿಯಿಂದ 4 ಕೆ.ಜಿ ಬಿತ್ತನೆ ಬೀಜವುಳ್ಳ 437 ಮಿನಿ ಕಿಟ್ ಗಳನ್ನು ಉಚಿತವಾಗಿ ನೀಡುತ್ತಿದ್ದು ಇಂದು 50 ಫಲಾನುಭವಿಗಳಿಗೆ ಸಾಂಕೇತಿಕವಾಗಿ ವಿಚಾರಿಸಲಾಗಿದೆ ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ಉದ್ದು ಬೆಳೆಯುವ ರೈತರು ಇದರ ಸದುಪಯೋಗ ಪಡೆದು ಕೊಳ್ಳುವಂತೆ ಮನವಿ ಮಾಡಿದ ಶಾಸಕರು,ಸೂಕ್ತ ದಾಖಲಾತಿಗಳನ್ನು ಇಲಾಖೆ ಅಧಿಕಾರಿಗಳಿಗೆ ನೀಡಿ ಸರ್ಕಾರದಿಂದ ಬರುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ಅಭಿವೃದ್ಧಿ ಹೊಂದುವಂತೆ ಸಲಹೆ ನೀಡಿದರು.

ಸಹಾಯಕ ಕೃಷಿ ನಿರ್ದೇಶಕ ರಂಗಸ್ವಾಮಿ ಮಾತನಾಡಿ ನಮ್ಮ ಇಲಾಖೆ ವತಿಯಿಂದ ರೈತರಿಗೆ 4 ಕೆ.ಜಿ ಬಿತ್ತನೆ ಬೀಜವುಳ್ಳ 437 ಮಿನಿ ಕಿಟ್ ಗಳನ್ನು ಉಚಿತವಾಗಿ ನೀಡಲಾಗುತ್ತಿದೆ, ಉಳಿದ ಫಲಾನುಭವಿಗಳು ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳನ್ನು ಖರೀದಿಸಬಹುದು ಎಂದು ಹೇಳಿದರು.

ಪ.ಜಾತಿ / ಪ.ಪಂಗಡದ ಫಲಾನುಭವಿಗಳಿಗೆ ಶೇ 75 ರಷ್ಟು ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಶೇ 50 ರಷ್ಟು ರಿಯಾಯಿತಿ ನೀಡಲಾಗುವುದು.

ಹೆಸರು ಕಾಳು ಹಾಗೂ ಉದ್ದಿನ ಕಾಳಿನ ಬೆಳೆ ಬೆಳೆಯುವ ರೈತರಿಗೆ ಜೂನ್ – ಜುಲೈ ವೇಳೆಗೆ ಮುಂಗಾರು ಹಂಗಾಮು ಪ್ರಾರಂಭವಾಗಲಿರುವುದರಿಂವ ಈ ವೇಳೆ ಭತ್ತ, ರಾಗಿ, ಮುಸುಕಿನ ಜೋಳದ ಬಿತ್ತನೆ ಬೀಜಗಳನ್ನು ಜುಲೈನಲ್ಲಿ ರಿಯಾಯಿತಿ ದರದಲ್ಲಿ ವಿತರಿಸಲಾಗುವುದು. ಪಾರದರ್ಶಕವಾಗಿ ರೈತರಿಗೆ ಆನ್ ಲೈನ್  ಮೂಲಕ ಬಿತ್ತನೆ ಬೀಜ ವಿತರಿಸಲಿರುವುದರಿಂದ ರೈತರು ಕಡ್ಡಾಯವಾಗಿ ಪಹಣಿ ಹಾಗೂ ಆಧಾರ್ ಕಾರ್ಡ್ ತರಬೇಕು ಎಂದು ಮನವಿ ಮಾಡಿದರು.

20 ಅಧಿಕಾರಿಗಳ ಹುದ್ದೆ ಖಾಲಿ : 
ಕೊಳ್ಳೇಗಾಲ ಕೃಷಿ ಇಲಾಖೆ ವ್ಯಾಪ್ತಿಗೆ ಬರುವ ಹನೂರು ಹಾಗೂ ಕೊಳ್ಳೇಗಾಲ ತಾಲ್ಲೂಕಿನ 5 ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳು ಸೇರಿದಂತೆ ಒಟ್ಟು 22 ಅಧಿಕಾರಿಗಳ ಹುದ್ದೆಗಳ ಪೈಕಿ ಇಬ್ಬರು ಅಧಿಕಾರಿಗಳು ಹೊರತುಪಡಿಸಿ ಉಳಿದ 20 ಅಧಿಕಾರಿಗಳ ಹುದ್ದೆ ಖಾಲಿ ಇವೆ.

ಹನೂರು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ನಾಗೇಂದ್ರ ಹಾಗೂ ಲೊಕ್ಕನಹಳ್ಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಹರೀಶ್ ಮಾತ್ರ ಮಂಜೂರಾತಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದ 20 ಅಧಿಕಾರಿಗಳ ಹುದ್ದೆ ಖಾಲಿ ಇರುವುದರಿಂದ ಪ್ರಭಾರ ಹಾಗೂ ಹೊರ ಗುತ್ತಿಗೆ ಆಧಾರದ ಮೇಲೆ ನೇಮಕವಾಗಿರುವವರು ಆಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೊಳ್ಳೇಗಾಲ ಪಟ್ಟಣದಲ್ಲಿರುವ ಕಸಬಾ ಕೇಂದ್ರದ ಕೃಷಿ ಅಧಿಕಾರಿ ಹುದ್ದೆಯನ್ನು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ತಾಂತ್ರಿಕ ಅಧಿಕಾರಿಯಾಗಿರುವ ವಿಜಯಲಕ್ಷ್ಮಿರವರು ಪ್ರಭಾರವಾಗಿ ನಿರ್ವಹಿಸುತ್ತಿದ್ದಾರೆ.

ಹಾಗೆಯೇ ರಾಮಪುರ ರೈತ ಸಂಪರ್ಕ ಕೇಂದ್ರದಲ್ಲಿ ಜಿಲ್ಲಾ  ನಿರ್ದೇಶಕರ ಕಚೇರಿಯ ತಾಂತ್ರಿಕ ಅಧಿಕಾರಿ ಮನೋಹರ್ ಪ್ರಭಾರವಾಗಿ ನಿರ್ವಹಿಸುತ್ತಿದ್ದಾರೆ
ಉಳಿದಂತೆ ಐದು ಹೋಬಳಿ ಕೇಂದ್ರಗಳಲ್ಲಿರುವ ಕಂಪ್ಯೂಟರ್ ಆಪರೇಟರ್ ಗಳು ಸಹ ಹೊರಗುತ್ತಿಗೆ ಆದರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸಹಾಯಕ ಕೃಷಿ ನಿರ್ದೇಶಕ ರಂಗಸ್ವಾಮಿ ಮಾಹಿತಿ ನೀಡಿದರು.

ತಾಂತ್ರಿಕ ಅಧಿಕಾರಿ ವಿಜಯಲಕ್ಷ್ಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ, ನಗರಸಭಾಧ್ಯಕ್ಷೆ ರೇಖಾ ಮತ್ತಿತರರು ಹಾಜರಿದ್ದರು.

ಉದ್ದು ಬಿತ್ತನೆ; ಉಚಿತ ಬಿತ್ತನೆ ಬೀಜದ ಮಿನಿ ಕಿಟ್ ವಿತರಿಸಿದ ಶಾಸಕ ಕೃಷ್ಣಮೂರ್ತಿ Read More

ಹುಟ್ಟಿದ ಊರಿನಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿರುವ ನಟ ಗಣೇಶ್ ರಾವ್ ಕೇಸರ್ಕರ್

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ,ಏ.8: ಹುಟ್ಟಿದ ಊರಿಗೆ ಹಾಗೂ ಓದಿದ ಶಾಲೆಗೆ ಕಾಯಕಲ್ಪ ಮಾಡಲು ಹೊರಟಿರುವ ಚಲನಚಿತ್ರ ನಟ ಗಣೇಶ್ ರಾವ್ ಕೇಸರ್ ಕರ್ ಅವರು ತಮ್ಮ ತಂದೆ, ತಾಯಿ ಸ್ಮರಣಾರ್ಥ ದೇವಾಲಯ ನಿರ್ಮಾಣ ಮತ್ತಿತರ ಮಾದರಿ ಕೆಲಸ ಮಾಡುತ್ತಿದ್ದಾರೆ.

ಗ್ರಾಮದಲ್ಲಿ ದೇವಾಲಯ ನಿರ್ಮಿಸಿ, ಓದಿದ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಮಾಡಲು ಹೊರಟಿದ್ದು ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ ನಡೆಸುವ ಮೂಲಕ ಸ್ವಗ್ರಾಮದ ಜನರ ಸೇವೆಗೆ ಮುಂದಾಗಿದ್ದಾರೆ.

ತಾಲೂಕಿನ ಹೊಂಡರಬಾಳು ಗ್ರಾಮದವರಾದ ಗಣೇಶ್ ರಾವ್ ಕೇಸರ್ ಕರ್ ಅವರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಜಿ.ಆರ್.ಫಿಲಮ್ಸ್ ಅಂಡ್ ಕಲ್ಚರಲ್ ಅಕಾಡೆಮಿ, ಶ್ರೀ ಸಿದ್ದೇಶ್ವರ ಗ್ರಾಮೀಣಾಭಿವೃದ್ಧಿ ಹಾಗೂ ಹಬ್ಬ ಹರಿದಿನ ಜಾತ್ರಾ ಸೇವಾ ಸಮಿತಿ,ಲಯನ್ಸ್ ಕ್ಲಬ್ ಆಪ್ ಸೆಂಟೇನಿಯಲ್, ಸ್ಪಂದನ ಶ್ರದ್ಧಾ ಐ ಕೇರ್ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ  ಉಚಿತಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮ ಅಕಾಡೆಮಿಯಿಂದ ಅನ್ನ, ಆರೋಗ್ಯ ಅಕ್ಷರಕ್ಕೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ನಮ್ಮ ತಂದೆ ಆರ್.ಕೃಷ್ಣರಾವ್ ಸೈನಿಕರಾಗಿದ್ದವರು. ತಂದೆ, ತಾಯಿಯರ ಸ್ಮರಣಾರ್ಥ ಗ್ರಾಮದಲ್ಲಿ ಬಸಪ್ಪ ದೇವರ ಗದ್ದಿಗೆ ನಿರ್ಮಾಣ ಮಾಡಿ ಕಳೆದ ಫೆಬ್ರವರಿ 21ರಂದು ದೇವಾಲಯದ ಉದ್ಘಾಟನೆ ಮಾಡಲಾಗಿದೆ. ಹಾಗೆಯೇ ಒಂದು ದೇವಸ್ಥಾನ ಕಟ್ಟುವ ಬದಲು 10 ಶಾಲೆ ನಿರ್ಮಿಸಿ ಎಂಬ ಡಾ ಅಂಬೇಡ್ಕರ್ ಚಿಂತನೆಯಂತೆ ನಾನು ಓದಿದ ಶಾಲೆಯನ್ನು ಅದೇ ದಿನ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದು ಅಧಿಕೃತವಾಗಿ ದತ್ತು ತೆಗೆದುಕೊಂಡು ಕಾಯಕಲ್ಪ ಮಾಡಲು ಮುಂದಾಗಿದ್ದೇನೆ,ಈ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಅಭಿವೃದ್ಧಿ ಮಾಡುವ ಉದ್ದೇಶ ಹೊಂದಿದ್ದು ಸ್ಮಾರ್ಟ್ ಕ್ಲಾಸ್ ಮಾಡಲು ತೀರ್ಮಾನಿಸಿದ್ದೇನೆ. ಅದಕ್ಕಾಗಿ ಈಗಾಗಲೇ ಒಂದಷ್ಟು ಸಂಘ ಸಂಸ್ಥೆಗಳೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದರು.

ಶಾಲೆಯ ಅಭಿವೃದ್ಧಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಫೇಸ್ಬುಕ್ ಖಾತೆ ತೆರೆದು ಸಕ್ರಿಯವಾಗಿದ್ದು ಇದನ್ನು ನೋಡಿದ ಸಂತೂರವರು ವಾಟರ್ ಫಿಲ್ಟರ್ ಅನ್ನು ಶಾಲೆಗೆ ಕೊಡುಗೆಯಾಗಿ ನೀಡಿದ್ದಾರೆ.

ಕೆಚ್ಚೆದೆಯ ಕನ್ನಡತಿ ಅನು ಅಕ್ಕ ಅವರ ಸಹಕಾರ ದೊಡನೆ ಶಾಲೆಯ ಗೋಡೆಗಳಿಗೆ ಸುಣ್ಣ ಬಣ್ಣ ಬಳಿಸಿ ಸಾಮಾಜಿಕ ಸಂದೇಶವಾದ ಘೋಷವಾಕ್ಯಗಳನ್ನು ಬರೆಸಲಾಗಿದೆ. ಇಂದಿಗೆ ದೇವಾಲಯ ಉದ್ಘಾಟನೆಯಾಗಿ 48 ದಿನವಾಗಿದೆ. ಮಂಡಲ ಪೂಜೆ ಕಾರ್ಯಕ್ರಮದ ಅಂಗವಾಗಿ ಗ್ರಾಮದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದ್ದು. 75 ಮಂದಿ ಈ ಶಿಬಿರದ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಗಣೇಶ್ ರಾವ್ ಕೇಸರ್ ಕರ್ ತಿಳಿಸಿದರು

ಕೆಚ್ಚೆದೆಯ ಕನ್ನಡತಿ ಅನು ಮಾತನಾಡಿ ಶಾಲೆಯ ದುರಸ್ತಿ ಹಾಗೂ ಸುಣ್ಣ-ಬಣ್ಣದ ಖರ್ಚು ವೆಚ್ಚಗಳನ್ನು ಗಣೇಶ್ ರಾವ್ ಕೇಸರ್ ಕರ್ ರವರೆ ನೋಡಿಕೊಂಡಿದ್ದಾರೆ. ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿ ಅಭಿಯಾನ ನಡೆಸುತ್ತಿದ್ದು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದೇನೆ ಎಂದು ಹೇಳಿದರು.

ಬಡವರಿಗೆ ಶಿಕ್ಷಣ ಸಿಗುವುದು ಕನ್ನಡ ಶಾಲೆಗಳಲ್ಲಿ ಮಾತ್ರ. ಜೊತೆ ಜೊತೆಗೆ ಧೂಳು ಮುಕ್ತ ಕರ್ನಾಟಕ ಅಭಿಯಾನ, ಕಾಡು ಬೆಳೆಸಿ ಅಭಿಯಾನ, ವ್ಯಸನಮುಕ್ತ ಅಭಿಯಾನ, ಸ್ವಚ್ಛ ಭಾರತ ಅಭಿಯಾನ ಸೇರಿದಂತೆ ಅಭಿಯಾನಗಳನ್ನು ಕೈಗೊಂಡಿದ್ದು ರಾಜ್ಯದ 25 ಜಿಲ್ಲೆಗಳಲ್ಲಿ ಈಗಾಗಲೇ 147 ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ಸುಣ್ಣ-ಬಣ್ಣ ಬಳಿದಿದ್ದೇವೆ‌ ಎಂದು ಹೇಳಿದರು.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಚನ್ನ ಒಡೆಯನಪುರ ಹಾಗೂ ಕೊಳ್ಳೇಗಾಲ ತಾಲೂಕಿನ ಹೊಂಡರಬಾಳು ಗ್ರಾಮದ ಸರ್ಕಾರಿ ಶಾಲೆಗಳನ್ನು ಸ್ವಚ್ಛಗೊಳಿಸಿ ಸುಣ್ಣಬಣ್ಣ ಬಳಿದಿದ್ದೇವೆ ಮೈಸೂರು ಭಾಗದ ನಾಗರಹೊಳೆ ಹೆಗ್ಗಡದೇವನ ಕೋಟೆ, ಹಾಸನ, ಮಂಡ್ಯ ಹಾಗೂ ಇನ್ನಿತರ ಜಿಲ್ಲೆಯ ಗ್ರಾಮಗಳ ಶಾಲೆಗಳನ್ನು ಸ್ವಚ್ಛಗೊಳಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಈ ಶಾಲೆಯಲ್ಲಿ ಕಳೆದ ಹತ್ತು ದಿನಗಳಿಂದ ನಮ್ಮ ತಂಡ ಕೆಲಸ ಮಾಡುತ್ತಿದೆ.13 ಮಂದಿ ನಮ್ಮ ತಂಡದಲ್ಲಿದ್ದಾರೆ, ಕನಿಷ್ಠ 10 ವರ್ಷ ಸೇವೆ ಮಾಡಲು ಮನೆಯವರಿಂದ ಅನುಮತಿ ಪಡೆದು ಬಂದಿದ್ದೇವೆ. ನಾನು ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನವಳು ಕಲ್ಯಾಣ ಕರ್ನಾಟಕ ತುಂಬಾ ಹಿಂದುಳಿದಿದೆ ಇಲ್ಲಿ ಅನಕ್ಷರತೆ, ಬಡತನ, ನಿರುದ್ಯೋಗ ತುಂಬಾ ಇದೆ. ಈ ಭಾಗದ ಜನ ದುಶ್ಚಟಕ್ಕೆ ಒಳಗಾಗುತ್ತಿದ್ದಾರೆ ಕನ್ನಡ ಶಾಲೆಗಳು ಮುಚ್ಚುತ್ತಿರುವ ಬಗ್ಗೆ ಮಾಹಿತಿ ಅರಿತು ಈ ಅಭಿಯಾನ ಪ್ರಾರಂಭಿಸಿದೆ ಎಂದು ತಿಳಿಸಿದರು.

ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಲಿಂಗಾಪುರ ಶಾಲೆಯಲ್ಲಿ ಪ್ರಥಮವಾಗಿ ಸ್ವಚ್ಛತಾ ಕಾರ್ಯ ಪ್ರಾರಂಭಿಸಿದೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಅಲ್ಲಿಂದ ಇದನ್ನೇ ಮುಂದುವರೆಸಿದೆ ಇದು ಯಾವುದೇ ಪ್ರಶಸ್ತಿ ಅಥವಾ ಹೆಸರಿಗಲ್ಲ ನಾನೇನು ರಾಜಕಾರಣಿಯೂ ಅಲ್ಲ ಸೇವೆಗಾಗಿ ಈ ಕೆಲಸ ಮಾಡುತ್ತಿದ್ದೇನೆ. ಏಕೆಂದರೆ ಮಾನವರಾದ ನಾವು ಮಾನವೀಯ ಮೌಲ್ಯ ಹೊಂದಿರಬೇಕು ಇದು ಸರ್ಕಾರಕ್ಕೆ ಮುಟ್ಟಬೇಕು ಕಳಪೆ ಕಾಮಗಾರಿಗಳು ನಿಲ್ಲಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳ, ಶಾಲೆಯ ಮುಖ್ಯ ಶಿಕ್ಷಕ ವಾಸುದೇವ, ಸುರೇಶ್ ಗೌಡ, ರವಿ ಸಂತೂ, ಮಲ್ಲೇಶ್ ಮತ್ತಿತರರು ಹಾಜರಿದ್ದರು.

.

ಹುಟ್ಟಿದ ಊರಿನಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿರುವ ನಟ ಗಣೇಶ್ ರಾವ್ ಕೇಸರ್ಕರ್ Read More

ನಿಗಧಿತ ಜಾಗದಲ್ಲಿ ಹೆಸರು ಮುದ್ರಿಸದೆಕೆಳಗಿನ ಸಾಲಿನಲ್ಲಿ ಮುದ್ರಣ:ಆಹ್ವಾನ ಪತ್ರಿಕೆ ತಿರಸ್ಕರಿಸಿದ ಶಾಸಕ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ,ಏ.7: ಮಠದ ಜೀರ್ಣೋದ್ಧಾರ ಹಾಗೂ ಶತಮಾನೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಶಾಸಕರ ಹೆಸರನ್ನು ನಿಗಧಿತ ಜಾಗದಲ್ಲಿ ಮುದ್ರಿಸದೆ
ಕೆಳಗಿನ ಸಾಲಿನಲ್ಲಿ ಮುದ್ರಿಸಿರುವುದಕ್ಕೆ ಶಾಸಕರು ತೀವ್ರ ಬೇಸರ ವ್ಯಕ್ತಪಡಿಸಿ ಆಹ್ವಾನ ಪತ್ರಿಕೆಯನ್ನೇ ತಿರಸ್ಕರಿಸಿದ ಪ್ರಸಂಗ ನಡೆದಿದೆ.

ಹನೂರು ತಾಲ್ಲೂಕಿನ ಪಿ.ಜಿ. ಪಾಳ್ಯ ಗ್ರಾಮದ ಶ್ರೀ ಗುರುಮಲ್ಲೇಶ್ವರ ಭಿಕ್ಷದ ದಾಸೋಹ ಹಳೇ ಮಠದ ಜೀರ್ಣೋದ್ಧಾರ ಹಾಗೂ ಶತಮಾನೋತ್ಸವ ಕಾರ್ಯಕ್ರಮ ಇದೇ ಏ. 17 ಹಾಗೂ 18 ರಂದು ನಡೆಯಲಿದೆ.

ಶಿಷ್ಟಾಚಾರದ ಪ್ರಕಾರ ಹನೂರು ಶಾಸಕ ಎಂ.ಆರ್. ಮಂಜುನಾಥ್‍ ಅವರ ಹೆಸರನ್ನು ನಿಗಧಿತ ಸ್ಥಳದಲ್ಲಿ ಮುದ್ರಿಸದೆ ಕೆಳಗಿನ ಸಾಲಿನಲ್ಲಿ ಮುದ್ರಿಸಿ ರುವುದಕ್ಕೆ ಶಾಸಕರು ತೀವ್ರ ಬೇಸರ ವ್ಯಕ್ತಪಡಿಸಿ ಆಹ್ವಾನ ಪತ್ರಿಕೆಯನ್ನು ತಿರಸ್ಕರಿಸಿದರು.

ತಾಲ್ಲೂಕಿನ ಸತ್ತೇಗಾಲ ಗ್ರಾಮದಲ್ಲಿ ಶಾಸಕ ಎಂ.ಆರ್. ಮಂಜುನಾಥ್‍ ಅವರು ರೈತರ ಸಭೆ ನಡೆಸುತ್ತಿದ್ದರು.ಈ ಬಗ್ಗೆ ಮಾಹಿತಿ ಅರಿತು ಪಿಜಿ ಪಾಳ್ಯ ಗ್ರಾಮದ ಮುಖಂಡರು ಶಾಸಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಬಂದಿದ್ದರು.

ಶಾಸಕರನ್ನು ಭೇಟಿ ಮಾಡಿ ಆಹ್ವಾನ ಪತ್ರಿಕೆ ನೀಡಿ ಕಾರ್ಯಕ್ರಮಕ್ಕೆ ಬರುವಂತೆ ಕೋರಿದರು, ಈ ವೇಳೆ ಶಾಸಕ ಮಂಜುನಾಥ್ ಆಹ್ವಾನ ಪತ್ರಿಕೆಯನ್ನು ತೆರೆದು ನೋಡಿ ತೀವ್ರ ಬೇಸರಪಟ್ಟರು.

ಏ.18ರಂದು ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯ ಸುತ್ತೂರು ಮಠದ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳು, ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಹಣಾ ಸ್ವಾಮಿಗಳು, ಕುದುರು ಮಠದ ಶ್ರೀ ಗುರು ಶಾಂತ ಸ್ವಾಮಿಗಳು, ಶ್ರೀರಂಗಪಟ್ಟಣದ ಬೇಬಿ ಮಠದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿಗಳು, ಸಾಲೂರು ಬೃಹನ್ ಮಠದ ಡಾ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು, ಗುಂಡ್ಲುಪೇಟೆ ಚಿಕ್ಕತುಪ್ಪೂರು ಶಿವಪೂಜಾ ಮಠದ ಶ್ರೀ ಚೆನ್ನವೀರ ಸ್ವಾಮಿಗಳು ಸೇರಿದಂತೆ ಹರಗುರು ಚಿರಮೂರ್ತಿಗಳು ಭಾಗವಹಿಸಲಿದ್ದಾರೆ.

ಮುಖ್ಯ ಅತಿಥಿಗಳ ಪಟ್ಟಿಯ ಮೊದಲನೇ ಸಾಲಿನಲ್ಲಿ ಅಖಿಲ ಭಾರ ವೀರಶೈವ ಲಿಂಗಾಯಿತ ಮಹಾಸಭಾ ರಾಜ್ಯಧ್ಯಕ್ಷರಾದ ಶ್ರೀ ಶಂಕರ ಮಹದೇವ ಬಿದರಿ, ಗುಂಡ್ಲುಪೇಟೆ ಶಾಸಕರಾದ ಶ್ರೀ ಗಣೇಶ್ ಪ್ರಸಾದ್ ಅವರ ಹೆಸರನ್ನು ಮುದ್ರಿಸಲಾಗಿದೆ. ನಂತರ ಹನೂರು ಕ್ಷೇತ್ರದ ಬಿಜೆಪಿ ಮುಖಂಡ ಶ್ರೀ ನಿಶಾಂತ್ ಅವರು ತದನಂತರ ಕ್ಷೇತ್ರದ ಹಾಲಿ ಶಾಸಕ ಎಂ.ಆರ್. ಮಂಜುನಾಥ್ ಅವರ ಹೆಸರು ಉಳಿದಂತೆ ಮಾಜಿ ಶಾಸಕರುಗಳು ಮುಖಂಡರುಗಳ ಹೆಸರುಗಳನ್ನು ಮುದ್ರಿಸಲಾಗಿದೆ.

ಇದರಿಂದ ಅಸಮಾಧಾನಗೊಂಡ ಶಾಸಕರು ಯಾರು ಎಷ್ಟೇ ದೇಣಿಗೆ ನೀಡಿದರು ನಾನು ನಿಮ್ಮ ಕ್ಷೇತ್ರದ ಶಾಸಕ. ಅವರು ಕೋಟಿ ರೂ ದೇಣಿಗೆ ನೀಡಿದ್ದಾರೆ ಎಂಬ ಉದ್ದೇಶಕ್ಕೆ ಉದ್ದೇಶಪೂರ್ವಕವಾಗಿ ಮೇಲಿನ ಸಾಲಿನಲ್ಲಿ ಅವರ ಹೆಸರನ್ನು ಮುದ್ರಿಸಲಾಗಿದೆ ಎಂಬುದು ನನಗೆ ಮಾಹಿತಿ ಇದೆ. ಶಿಷ್ಟಾಚಾರದ ಪ್ರಕಾರ ಕ್ಷೇತ್ರದ ಶಾಸಕರನ್ನು ಈ ರೀತಿ ಅವಮಾನಿಸುವುದು ಸರಿಯಲ್ಲ ನಿಮ್ಮ ಶಾಸಕರನ್ನು ನೀವೇ ಅವಮಾನಿಸಿಕೊಂಡಂತೆ ನೀವು ನನಗೆ ಮತ ಹಾಕಿ ಅಥವಾ ಹಾಕದಿರಿ ನೀವು ನನ್ನ ಮತದಾರರು, ನಾನು ನಿಮ್ಮ ಶಾಸಕ, ನಿಮ್ಮ ಶಾಸಕರನ್ನು ನೀವೇ ಅವಮಾನಿಸಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಹೇಳುವುದಿಲ್ಲ, ಬರುತ್ತೇನೆ ಆದರೆ ಆಹ್ವಾನ ಪತ್ರಿಕೆಯನ್ನು ಸರಿಪಡಿಸಿ ಇಲ್ಲದಿದ್ದರೆ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ಇವರ ಬೇಸರ ವ್ಯಕ್ತಪಡಿಸಿ ಆಹ್ವಾನ ಪತ್ರಿಕೆಯನ್ನು ಹಿಂದಿರುಗಿಸಿದರು.

ಈ ವೇಳೆ ಆಹ್ವಾನಿಸಲು ಬಂದಿದ್ದ ಮುಖಂಡರು ಮರು ಮಾತನಾಡದೆ ಆಹ್ವಾನ ಪತ್ರಿಕೆಯನ್ನು ವಾಪಸ್ ಪಡೆದು ಅಲ್ಲಿಂದ ಹಿಂತಿರುಗಿದರು.

ಇದೇ ವೇಳೆ ಗ್ರಾಮಸ್ಥರು ಗ್ರಾಮಕ್ಕೆ ತೆರಳುವ ಮುಖ್ಯ ರಸ್ತೆಯ ಗುಂಡಿಗಳನ್ನು ಮುಚ್ಚಿಸುವಂತೆ ಮನವಿ ಮಾಡಿದರು ಇದಕ್ಕೆ ಸ್ಪಂದಿಸಿದ ಶಾಸಕರು ನಿಮ್ಮ ಕೆಲಸ ಏನೇ ಇದ್ದರೂ ಸಂತೋಷವಾಗಿ ಮಾಡುತ್ತೇವೆ ಎಂದು ಸ್ಥಳದಲ್ಲೇ ಇದ್ದ ಲೋಕೋಪಯೋಗಿ ಇಲಾಖೆ ಜೆ ಇ ಸುರೇಂದ್ರರವರನ್ನು ಕರೆದು ಕೂಡಲೇ ರಸ್ತೆಯ ಗುಂಡಿಗಳನ್ನು ಮುಚ್ಚಿಸುವಂತೆ ತಾಕೀತು ಮಾಡಿದರು.

ನಿಗಧಿತ ಜಾಗದಲ್ಲಿ ಹೆಸರು ಮುದ್ರಿಸದೆಕೆಳಗಿನ ಸಾಲಿನಲ್ಲಿ ಮುದ್ರಣ:ಆಹ್ವಾನ ಪತ್ರಿಕೆ ತಿರಸ್ಕರಿಸಿದ ಶಾಸಕ Read More