ಕೊಳ್ಳೇಗಾಲ: ತಾಲೂಕಿನ ಹಳೇ ಹಂಪಾಪುರ ಗ್ರಾಮದ ಸುವರ್ಣವತಿ ನದಿ ದಡದ ಬಳಿ ಮಹಿಳೆಯನ್ನು ಕೊಲೆ ಮಾಡಿ ಹೂತು ಹಾಕಿದ್ದು ಆಕೆಯ ಪ್ರಿಯಕರನೇ ಎಂದು ಪೊಲೀಸರು ತಿಳಿಸಿದ್ದು,ಈತ ಈಗ ಕಂಬಿ ಎಣಿಸುತ್ತಿದ್ದಾನೆ.
ಕೊಳ್ಳೇಗಾಲ ಮೋಳೆಯ ಸೋನಾಕ್ಷಿ (29) ಯನ್ನು ಆಕೆಯ ಪ್ರಿಯಕರ ಅದೇ ಬಡಾವಣೆಯ ನಂಜಯ್ಯನ ಮಗ ಮಾದೇಶ ಅಲಿಯಾಸ್ ಮಹೇಶ್ ಕೊಲೆ ಮಾಡಿದ್ದು, ಆತನನ್ನು ಬಂಧಿಸಲಾಗಿದೆ.
ಉಪ್ಪಾರ ಬಡಾವಣೆಯ ಕುಮಾರ್ ಎಂಬುವ ಮಗಳು ಸೋನಾಕ್ಷಿ ಅದೇ ಬಡಾವಣೆಯಲ್ಲಿರುವ ಸೋದರಮಾವ ವಿಜಯ್ ಕುಮಾರ್ ನನ್ನು ಮದುವೆಯಾಗಿದ್ದಳು ಇವರಿಗೆ ಒಂದು ಹೆಣ್ಣು ಒಂದು ಗಂಡು ಇಬ್ಬರು ಮಕ್ಕಳಿದ್ದಾರೆ.
ಸೋನಾಕ್ಷಿಗೆ ಬಡಾವಣೆಯ ಮಹೇಶ್ ನೊಡನೆ ಅಕ್ರಮ ಸಂಬಂಧವಿತ್ತು. ಹಾಗಾಗಿ ಸೋನಾಕ್ಷಿ ಗಂಡನ ಜೊತೆ ಭಿನ್ನಾಭಿಪ್ರಾಯ ಮಾಡಿಕೊಂಡು ಆಗಾಗ ಮನೆಯಿಂದ ನಾಪತ್ತೆಯಾಗುವ ಚಾಳಿ ಬೆಳೆಸಿಕೊಂಡಿದ್ದಳು.
ಎರಡು ಮೂರು ಬಾರಿ ಗಂಡನನ್ನು ಬಿಟ್ಟು ನಾಪತ್ತೆಯಾಗಿದ್ದಳು, ಅದೇ ರೀತಿ ಕಳೆದ ಫೆಬ್ರವರಿ ತಿಂಗಳಲ್ಲೂ ಕಾಣಿಯಾಗಿದ್ದಳು ಈ ವೇಳೆ ಪೊಲೀಸರು ಪತ್ತೆ ಹಚ್ಚಿ ಕರೆತಂದು ಆಕೆಯ ತಾಯಿ ಹಾಗೂ ಸೋದರನ ಜೊತೆ ತವರು ಮನೆಗೆ ಕಳುಹಿಸಿದ್ದರು.
ಸೋನಾಕ್ಷಿಯ ಮೃತದೇಹ ಜೂ.19 ರಂದು ಗುರುವಾರ ತಾಲೂಕಿನ ಹಳೇ ಹಂಪಾಪುರ ಗ್ರಾಮದ ಸುವರ್ಣವತಿ ನದಿ ದಡದ ನಿರ್ಜನ ಪ್ರದೇಶದಲ್ಲಿ ಹೂತು ಹಾಕಿದ್ದ ಸ್ಥಿತಿಯಲ್ಲಿ ಪತ್ತೆ ಯಾಗಿತ್ತು.
ಅಂದು ಶಶಿಕುಮಾರ್ ಎಂಬುವವರು ದನ ಮೇಯಿಸುತ್ತಿದ್ದ ವೇಳೆ ನಾಯಿಗಳು ಭೂಮಿಯಲ್ಲಿ ಹೂತಿದ್ದ ದೇಹದ ವಾಸನೆ ಹಿಡಿದು ಮಣ್ಣು ಎರಚಾಡಿ ಎಳೆದಾಡುತ್ತಿದ್ದುದ್ದು ಕಂಡು ಅಲ್ಲಿಗೆ ಹೋಗಿ ನೋಡಿದಾಗ ಶವದ ಮುಂಗೈ ಭೂಮಿಯಿಂದ ಹೊರಚಾಚಿರುವುದು ಕಾಣಿಸಿತ್ತು.
ಶಶಿಕುಮಾರ್ ಗಾಬರಿಯಾಗಿ ಪಟ್ಟಣ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದರು.
ಸ್ಥಳಕ್ಕೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಡಿವೈಎಸ್ಪಿ ಧರ್ಮೇಂದ್ರ, ಸಿಪಿಐ ಶಿವ ಮಾದಯ್ಯ, ಪಿ.ಎಸ್.ಐ ವರ್ಷ ಭೇಟಿ ನೀಡಿ ಪರಿಶೀಲಿಸಿ ಶವವನ್ನು ಅಂದು ರಾತ್ರಿಯೇ ಚಾಮರಾಜನಗರದ ಸಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿ ಶವ ಗುರುತು ಪತ್ತೆಗಾಗಿ ಇರಿಸಿದ್ದರು.ನಂತರ ಸೋನಾಕ್ಷಿ ತಾಯಿ ರಜನಿ ಮೃತ ದೇಹ ತಮ್ಮ ಮಗಳದ್ದೆಂದು ಗುರುತಿಸಿದ್ದರು.
ದೇಹದ ಬಲಗೆನ್ನೆಯ ಮೇಲೆ, ಎಡಭಾಗದ ಹಣೆಯ ಹತ್ತಿರ, ತಲೆಯ ಮೇಲ್ಬಾಗದಲ್ಲಿ ಹೊಡೆದಿರುವ ಗಾಯ ಕಂಡು ಬಂದಿತ್ತು.
ಐದಾರು ದಿನಗಳ ಹಿಂದೆ ಮೋಳೆ ಬಡಾವಣೆಯ ನಂಜಯ್ಯನ ಮಗ ಮಾದೇಶ ಅಲಿಯಾಸ್ ಮಹೇಶ್, ಕೆಂಚಶೆಟ್ಟಿ ಮಗ ಬಾಬು ಅಲಿಯಾಸ್ ಚಿಕ್ಕಬಾಬು ಅವರು ಸೋನಾಕ್ಷಿಯನ್ನು ಕೊಲೆ ಮಾಡಿ ಮಣ್ಣಿನಲ್ಲಿ ಹೂತಾಕಿದ್ದಾರೆಂದು ಅನುಮಾನ ವ್ಯಕ್ತ ಪಡಿಸಿ ಮೃತಳ ತಾಯಿ ರಜಿನಿ ದೂರು ನೀಡಿದ್ದರು.
ಪಟ್ಟಣ ಪೊಲೀಸ್ ಠಾಣೆಯ ಎಸೈ ವರ್ಷ ಅವರು ಪ್ರಕರಣ ದಾಖಲಸಿಕೊಂಡು ತನಿಖೆ ಪ್ರಾರಂಭಿಸಿದ್ದರು.
ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಿ ಮಾದೇಶ ಅಲಿಯಾಸ್ ಮಹೇಶ್, ಬಾಬು ಅಲಿಯಾಸ್ ಚಿಕ್ಕ ಬಾಬು ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಮಾದೇಶ ಅಲಿಯಾಸ್ ಮಹೇಶ್ ಸೋನಾಕ್ಷಿಯ ಜೊತೆ ಅಕ್ರಮ ಸಂಬಂಧ ಇಟ್ಟು ಕೊಂಡು ಬಸ್ತೀಪುರ ಬಡಾವಣೆಯಲ್ಲಿ ಮನೆ ಮಾಡಿ ಇರಿಸಿಕೊಂಡಿದ್ದ ಎಂಬುದು ಗೊತ್ತಾಗಿದೆ.
ಜೂನ್ 13 ರಂದು ಇಬ್ಬರ ನಡುವೆ ಜಗಳವಾಗಿದೆ,ಮರುದಿನವೂ ಮತ್ತೆ ಇಬ್ಬರ ನಡುವೆ ಜಗಳವಾಗಿ ಸೋನಾಕ್ಷಿಗೆ ಹಲ್ಲೆ ಮಾಡಿ ಸಾಯಿಸಿ ಬೈಕ್‌ನಲ್ಲಿ ಹಾಕಿ ಕೊಂಡು ಹಳೇ ಹಂಪಾಪುರ ಸುವರ್ಣಾವತಿ ನದಿಯ ಬಳಿ ತಂದಿದ್ದಾನೆ.
ಅಲ್ಲೆ ಇದ್ದ ಮಾವಟಿಯಿಂದ ಮಣ್ಣನ್ನು ತೆಗೆದು ಗುಂಡಿ ಯೊಳಗೆ ಹೂತು ಹಾಕಿದ್ದೆ ಎಂದು ಪೊಲೀಸ್ ವಿಚಾರಣೆಯಲ್ಲಿ ಹೇಳಿಕೆ ನೀಡಿದ್ದಾನೆ ಎಂಬುದಾಗಿ ತಿಳಿದು ಬಂದಿದೆ.
ಬಾಬು ಅಲಿಯಾಸ್ ಚಿಕ್ಕಬಾಬು ನನ್ನು ಸಹ ವಿಚಾರಣೆ ನಡೆಸಲಾಗಿದೆ. ಕೊಲೆಗೆ ಮತ್ತಷ್ಟು ಸಾಕ್ಷಿಗಳು ದೊರಕದ ಕಾರಣ ಪೊಲೀಸ್ ಅಧಿಕಾರಿಗಳು ಈ ಇಬ್ಬರು ಆರೋಪಿಗಳ ವಿಚಾರಣೆಯನ್ನು ಮುಂದುವರಿ ಸಿದ್ದಾರೆ.
ಕೊಳ್ಳೇಗಾಲ: ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರ ಗ್ರಾಮದ ಸುವರ್ಣವತಿ ನದಿ ದಡದ ನಿರ್ಜನ ಪ್ರದೇಶದಲ್ಲಿ ಹೂತು ಹಾಕಿದ್ದ ಮೃತ ದೇಹದ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಮೃತ ಮಹಿಳೆಯನ್ನು ಪಟ್ಟಣದ ಕೊಳ್ಳೇಗಾಲ ಮೋಳೆ (ಉಪ್ಪಾರ ಬಡಾವಣೆ)ಯ ವಿಜಯ್ ಕುಮಾರ್ ಎಂಬುವರ ಪತ್ನಿ ಸೋನಾಕ್ಷಿ (29) ಎಂದು ಗುರುತಿಸಲಾಗಿದೆ.
ಉಪ್ಪಾರ ಬಡಾವಣೆಯ ಕುಮಾರ್ ಎಂಬುವರ ಮಗಳು ಸೋನಾಕ್ಷಿ ಅದೇ ಬಡಾವಣೆಯಲ್ಲಿರುವ ಸೋದರಮಾವ ವಿಜಯ್ ಕುಮಾರ್ ನನ್ನು ಮದುವೆಯಾಗಿದ್ದಳು. ಗಂಡ ವಿಜಯ್ ಕುಮಾರ್ ಕೂಲಿ ಕೆಲಸ ಮಾಡಿಕೊಂಡಿದ್ದು ಇವರಿಗೆ ಒಂದು ಹೆಣ್ಣು ಒಂದು ಗಂಡು ಮಕ್ಕಳಿದ್ದಾರೆ.
ಸೋನಾಕ್ಷಿಗೆ ಬಡಾವಣೆಯ ಯುವಕನ ಜೊತೆ ಅಕ್ರಮ ಸಂಬಂಧವಿತ್ತು ಎಂದು ಹೇಳಲಾಗುತ್ತಿದ್ದು ಕಳೆದ ಫೆಬ್ರವರಿ ತಿಂಗಳಲ್ಲಿ ಕಾಣಿಯಾಗಿದ್ದಳು,ಆಗ ಪೊಲೀಸರು ಪತ್ತೆ ಹಚ್ಚಿ ಕರೆತಂದು ಆಕೆಯ ತಾಯಿ ಹಾಗೂ ಸೋದರನ ಜೊತೆ ತವರು ಮನೆಗೆ ಕಳುಹಿಸಿದ್ದರು.
ಸೋನಾಕ್ಷಿಯ ಮೃತದೇಹ ಗುರುವಾರ ತಾಲೂಕಿನ ಹಳೇ ಹಂಪಾಪುರ ಗ್ರಾಮದ ಸುವರ್ಣವತಿ ನದಿ ದಡದ ನಿರ್ಜನ ಪ್ರದೇಶದಲ್ಲಿ ಹೂತು ಹಾಕಿದ್ದ ಸ್ಥಿತಿಯಲ್ಲಿ ಪತ್ತೆ ಯಾಗಿತ್ತು.
ದುಷ್ಕರ್ಮಿಗಳು ಎಲ್ಲೋ ಕೊಲೆ ಮಾಡಿ ಇಲ್ಲಿ ತಂದು ಅರೆಬರೆ ಹೂತು ಹಾಕಿ ಪರಾರಿಯಾಗಿದ್ದರು.
ಮಣ್ಣಿನಿಂದ ಮಹಿಳೆಯ ಕೈ ಕಾಣುತ್ತಿದ್ದು ಗ್ರಾಮದ ಜನತೆ ಭೀತರಾಗಿದ್ದರು. ಗುರುವಾರ ಗ್ರಾಮದ ಶಶಿಕುಮಾರ್( ಗೃಹ ರಕ್ಷಕ ದಳದಲ್ಲಿ ಕಾರ್ಯನಿರ್ವಹಿಸುತ್ತಾರೆ) ಎಂಬುವವರು ದನ ಮೇಯಿಸುತ್ತಿದ್ದ ವೇಳೆ ನಾಯಿಗಳು ಭೂಮಿಯಲ್ಲಿ ಹೂತಿದ್ದ ದೇಹದ ವಾಸನೆ ಹಿಡಿದು ಮಣ್ಣು ಎರಚಾಡಿ ಎಳೆದಾಡುತ್ತಿದ್ದುದ್ದು ಕಂಡು ತಕ್ಷಣ ಅಲ್ಲಿಗೆ ಹೋಗಿ ನೋಡಿದಾಗ ಶವದ ಮುಂಗೈ ಭೂಮಿಯಿಂದ ಹೊರಚಾಚಿರುವುದು ಕಾಣಿಸಿತ್ತು.
ಶಶಿಕುಮಾರ್ ಶವವನ್ನು ಕಂಡು ಗಾಬರಿಯಾಗಿ ಪಟ್ಟಣ ಠಾಣೆ ಪೊಲೀಸರಿಗೆ ವಿಷಯ ತಿಳಿಸಿದ್ದರು. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದರು.
ನಂತರ ಪೊಲೀಸರು ರಾತ್ರಿ 11 ಗಂಟೆಯಲ್ಲಿ ಶವವನ್ನು ಮಣ್ಣಿನಿಂದ ಹೊರತೆಗೆಸಿ ನೋಡಿದಾಗ ದೇಹ ವಿವಾಹಿತ ಮಹಿಳೆಯಾಗಿದ್ದು ತಾಳಿ ಕಾಲುಂಗುರ ಹಾಗೂ ಚಿನ್ನದ ಬಣ್ಣದ ಬಳೆ ಧರಿಸಿರುವುದು ಕಂಡು ಬಂದಿತ್ತು.
ಶವ ಹೂಳಲಾಗಿದ್ದ ಸುಮಾರು 20 ಮೀಟರ್ ದೂರದಲ್ಲಿ ಒಂದು ದೀಪ, ಕುಡಿಯುವ ನೀರಿನ ಬಾಟಲಿ ಇನ್ನಿತರ ಪೂಜಾ ಸಾಮಗ್ರಿಗಳು ಪತ್ತೆಯಾಗಿದ್ದು ಮಾಟ, ಮಂತ್ರ ವಾಮಾಚಾರ ಶಂಕೆ ವ್ಯಕ್ತವಾಗಿತ್ತು. ಯಾರೋ ದುಷ್ಕರ್ಮಿಗಳು ಮಹಿಳೆಯನ್ನು ಅತ್ಯಾಚಾರ ವ್ಯಸಗಿ ಕೊಲೆ ಮಾಡಿ ತಂದು ಹೂತು ಹಾಕಿರಬಹುದು ಎಂಬ ಅನುಮಾನವೂ ಕಾಡುತ್ತಿತ್ತು.
ಸ್ಥಳಕ್ಕೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಡಿವೈಎಸ್ಪಿ ಧರ್ಮೇಂದ್ರ, ಸಿಪಿಐ ಶಿವ ಮಾದಯ್ಯ, ಪಿಎಸ್ಐ ವರ್ಷ ಭೇಟಿ ನೀಡಿ ಪರಿಶೀಲಿಸಿ ಶವವನ್ನು ಅಂದು ರಾತ್ರಿಯೇ ಚಾಮರಾಜನಗರದ ಸಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿ ಶವ ಗುರುತು ಪತ್ತೆಗಾಗಿ ಇರಿಸಲಾಗಿತ್ತು.
ಮೃತಳ ತಾಯಿ ರಜನಿ ಮೃತ ದೇಹವನ್ನು ಗುರುತಿಸಿದ್ದು,ಆಕೆ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕೊಂಡಿರುವ ಪಟ್ಟಣ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ತನಿಖೆಯ ನಂತರ ಯಾರು,ಯಾತಕ್ಕಾಗಿ ಕೊಲೆ ಮಾಡಿದ್ದಾರೆಂಬುದು ತಿಳಿಯಲಿದೆ.
ಕೊಳ್ಳೇಗಾಲ: ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಕೊಳ್ಳೇಗಾಲ ಉಪವಿಭಾಗ ಮಟ್ಟದ ಪ.ಜಾತಿ/ಪ.ಪಂಗಡದವರ ಕುಂದು-ಕೊರತೆ ಸಭೆ ಸಮರ್ಪಕ ಮಾಹಿತಿ ಇಲ್ಲದೆ ತರಾತುರಿಯಲ್ಲಿ ಕಾಟಾಚಾರಕ್ಕೆ ನಡೆಯಿತು.
ಪಟ್ಟಣದ ಪೊಲೀಸ್ ಉಪಾಧೀಕ್ಷಕರ ಕಚೇರಿ ಸಭಾಂಗಣದಲ್ಲಿ ನಡೆದ ಕೊಳ್ಳೇಗಾಲ ಉಪವಿಭಾಗ ಮಟ್ಟದ ಪ.ಜಾತಿ/ಪ.ಪಂಗಡದವರ ಕುಂದು-ಕೊರತೆ ಸಭೆಗೆ ಸಭೆ ನಡೆಸುವ ಹಿಂದಿನ ದಿನ ಸಂಜೆ ತಮಗೆ ಬೇಕಾದ ಕೆಲವರ ವಾಟ್ಸಪ್ ಸಂಖ್ಯೆಗೆ ಪೊಲೀಸರು ಮಾಹಿತಿ ರವಾನಿಸಿದ್ದರು.
ಸಭೆ ನಡೆಸುವ ಒಂದು ವಾರ ಅಥವಾ 3 ದಿನಗಳ ಹಿಂದೆಯೇ ಸಂಬಂಧಪಟ್ಟ ಮುಖಂಡರಿಗೆ ಮಾಹಿತಿ ನೀಡಿದ್ದರೆ ಉಪವಿಭಾಗ ಮಟ್ಟದ ಸಭೆಯಾದ್ದರಿಂದ ಮುಖಂಡರು ನೂರಾರು ಸಂಖ್ಯೆಯಲ್ಲಿ ಸಭೆಗೆ ಭಾಗವಹಿಸ ಬಹುದಿತ್ತು.ಆದರೆ ಸರಿಯಾಗಿ ಮಾಹಿತಿ ತಲುಪದಿದ್ದರಿಂದ ಕೆಲವೆ ಮಂದಿ ಮಾತ್ರ ಭಾಗವಹಿಸಿದ್ದರು.
ಸಭೆಯಲ್ಲಿ ಪ.ಜಾತಿ/ಪ.ಪಂಗಡದವರ ಮೇಲಿನ ದೌರ್ಜನ್ಯ,ಮತ್ತಿತರ ಸಮಸ್ಯೆ ಕುರಿತು ಯಾವುದೆ ಗಂಭೀರ ಚರ್ಚೆಯಾಗಲಿಲ್ಲ.
ಭಾಗವಹಿಸಿದ್ದ ಮುಖಂಡರೂ ಕೂಡಾ ಚರ್ಚಿಸಲು ಮುಂದೆ ಬರಲಿಲ್ಲ. ಎಂದಿನಂತೆ ಕೇವಲ ಅಕ್ರಮ ಮಧ್ಯ ಹಾಗೂ ಇನ್ನಿತರ ಸಣ್ಣ-ಪುಟ್ಟ ವಿಚಾರಗಳಿಗಷ್ಟೆ ಸಭೆ ಸೀಮಿತವಾಯಿತು. ಒಟ್ಟಿನಲಿ ಪೊಲೀಸರು ಇಲಾಖೆಯ ಹಿರಿಯ ಅಧಿಕಾರಿಗಳ ಆದೇಶ ಪಾಲಿಸ ಬೇಕಿತ್ತು ಹಾಗಾಗಿ ತಮಗೆ ಬೇಕಾದ ಕೆಲವರನ್ನು ಕರೆದು ಸಭೆ ನಡೆಸಿ ಮುಗಿಸಿದ್ದಾರೆ.
ಎಲ್ಲೋ ಒಂದು ಕೊಲೆ ನಡೆದಿದೆ ಅಂದರೆ 24 ಗಂಟೆಯೊಳಗೆ ಪ್ರಕರಣ ಭೇದಿಸುವ ನೀವು ಕೇವಲ ಮಧ್ಯ ಅಕ್ರಮ ಮಾರಾಟ ತಡೆಯಲು ಯಾಕೆ ಆಗುತ್ತಿಲ್ಲ, ಮಧ್ಯ ಅಕ್ರಮ ಮಾರಾಟ ಪ.ಜಾತಿ/ಪ.ಪಂಗಡಗಳ ಬೀದಿಗಳಲ್ಲಿಯೇ ಯಾಕೆ ನಡೆಯುತ್ತಿದೆ ಎಂದು ಪೊಲೀಸರ ವಿರುದ್ದ ಮುಖಂಡರು ಬೇಸರ ವ್ಯಕ್ತಪಡಿಸಿದರು.
ಡಾ ಅಂಬೇಡ್ಕರ್ ಯುವಜನೇತರ ಸಂಘದ ಬಸ್ತಿಪುರ ಪ್ರಕಾಶ್ ಮಾತನಾಡಿ ನಿಮ್ಮ ಅವಧಿಯಲ್ಲಿ ಪರಿಶಿಷ್ಠರ ಎಷ್ಟು ಸಮಸ್ಯೆ ಬಗೆಹರಿಸಿದ್ದೀರಿ ಮಾಹಿತಿ ನೀಡಿ ಎಂದು ಕೇಳಿದರು.
ಗ್ರಾಮಗಳಲ್ಲಿ ಮಧ್ಯ ಅಕ್ರಮ ಮಾರಾಟ ಮಾಡುತ್ತಿದ್ದರೆ ನೇರವಾಗಿ ಹೋಗಿ ತಡೆಗಟ್ಟಿ ಅದನ್ನು ಬಿಟ್ಟು ಮಾಹಿತಿ ನೀಡಿದರೆ ಮಾತ್ರ ಕ್ರಮ ವಹಿಸುತ್ತೇವೆ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಎಲ್ಲೋ ಕೊಲೆ ನಡೆದಿದೆ ಅಂದರೆ 24 ಗಂಟೆಯೊಳಗೆ ಪ್ರಕರಣ ಭೇದಿಸುವ ನೀವು ಕೇವಲ ಮಧ್ಯ ಅಕ್ರಮ ಮಾರಾಟ ತಡೆಯಲು ಯಾಕೆ ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಆನಂದ ಜ್ಯೋತಿ ಕಾಲೋನಿಯ ಆದಿಜಾಂಬವ ಸಮುದಾಯದ ಯಜಮಾನರಾದ ಶಿವಮಲ್ಲು ಅವರು ಹರಳೆ ಗ್ರಾಮಕ್ಕೆ ತೆರಳುವ ರಸ್ತೆಯಿಂದ ಕೊಳ್ಳೇಗಾಲ ಮೋಳೆ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಗಾಂಜಾ ಸೇವಿಸುವವರು ಮತ್ತು ಕುಡುಕರ ಹಾವಳಿ ಹೆಚ್ಚಾಗಿದೆ ನಿಯಂತ್ರಿಸಬೇಕೆಂದು ಆಗ್ರಹಿಸಿದರು.
ಶ್ರೀನಿವಾಸ್ ಅವರು ದೊಡ್ಡ ನಾಯಕರ ಬೀದಿಯಲ್ಲಿ ನಿರಂತರವಾಗಿ ಮಧ್ಯ ಅಕ್ರಮ ಮಾರಾಟ ನಡೆಯುತ್ತಿದೆ. ಬೆಳಿಗ್ಗೆ 5 ಗಂಟೆಗೆ ಮಾರಾಟ ಪ್ರಾರಂಭಿಸುತ್ತಾರೆ ಪೊಲೀಸರು ಬಂದು ಬೀಟ್ ಮಾಡಿ ಹೋಗುತ್ತಾರೆ ಅಷ್ಟೇ ಎನೂ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಆಕ್ಷೇಪಿಸಿದರು.
ಉಗನಿ ಗ್ರಾಮದ ಕುಮಾರ್ ಗ್ರಾಮದಲ್ಲಿ ಅಕ್ರಮ ಮಧ್ಯ ಹಾವಳಿ ತಡೆಗಟ್ಟಿ ಎಂದು ಆಗ್ರಹಿಸಿದರೆ, ಮಧುವನಹಳ್ಳಿ ಗ್ರಾಮದ ಮಲ್ಲಿಕಾರ್ಜುನ್ ಎಲ್ಲಾ ಗ್ರಾಮಗಳ ಪ.ಜಾತಿ/ಪ.ಪಂಗಡಗಳ ಬೀದಿಗಳಲ್ಲಿಯೇ ಕುಡಿತದ ಸಮಸ್ಯೆ ಹೆಚ್ಚಾಗಿದೆ ಎಂದು ಹೇಳಿದರು.
ಮಾಂಬಳ್ಳಿ ಗ್ರಾಮದ ಬಸವರಾಜು ಮಾತನಾಡಿ ಗ್ರಾಮದಲ್ಲಿ ಕುಡುಕರ ಹಾವಳಿ ಹೆಚ್ಚಾಗಿದೆ,ಇಲ್ಲಿ ಠಾಣೆಯಿದ್ದರೂ ಸಹ ಪೊಲೀಸರು ಗಸ್ತು ಮಾಡುತ್ತಿಲ್ಲ ಆದ್ದರಿಂದ ಸಮಜೆ ೬ ರಿಂದ ರಾತ್ರಿ ೮ ರವರೆಗೆ ಗಸ್ತು ಮಾಡಿಸಿ ಎಂದು ಒತ್ತಾಯಿಸಿದರು.
ಭೀಮ ನಗರದ ಮುಖಂಡ ದಿಲೀಪ್ ಸಿದ್ದಪ್ಪಾಜಿ ಮಾತನಾಡಿ ಉಪವಿಭಾಗ ಮಟ್ಟದಲ್ಲಿ ಎಷ್ಟು ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ, ಎಷ್ಟನ್ನು ಇತ್ಯರ್ಥ ಗೊಳಿಸಿದ್ದೀರಿ, ಇನ್ನೆಷ್ಟು ಬಾಕಿ ಇವೆ ಎಂಬ ಬಗ್ಗೆ ಮೊದಲು ಸಭೆಗೆ ಮಾಹಿತಿ ನೀಡಿ ಎಂದು ಆಗ್ರಹಿಸಿದರು.
ಪುಂಡರು ಪ.ಜಾತಿ ಬೀದಿಗಳಿಗೆ ಬಂದು ವೀಲಿಂಗ್ ಮಾಡುತ್ತಿದ್ದಾರೆ ಅವರ ವಿರುದ್ದ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಹೇಳಿದರು.
ಪಟ್ಟಣದ ಮುಡಿಗುಂಡ ಮಾರುಕಟ್ಟೆ ಎದುರುಗಡೆ ಇರುವ ಪ.ಜಾತಿ ಬೀದಿಯಲ್ಲಿ ಹೆಚ್ಚು ಮಧ್ಯಪಾನ ಮಾಡಿ ಗಲಾಟೆ ಮಾಡುತ್ತಾರೆ ಎಂದು ಕರೆ ಮಾಡಿ ಮಾಹಿತಿ ನೀಡಿದರೆ ಪೊಲೀಸರು ಅಲ್ಲಿ ಏನು ನಡೆಯುತ್ತಿಲ್ಲ ನೀನೇ ಸುಳ್ಳು ದೂರು ನೀಡಿದ್ದೀಯ ಎಂದು ದಬಾಯಿಸುತ್ತಾರೆ ಆಗ ನಾನೇ ಖುದ್ದಾಗಿ ಠಾಣೆಗೆ ಹೋದರೆ ಓ… ನೀವಾ… ಹೋಗಿ ನೋಡಿ ಕ್ರಮವಹಿಸುತ್ತೇವೆ ಎನ್ನುತ್ತಾರೆ ಏಕೆ ನಿಮ್ಮ ಪೊಲೀಸರು ಮುಖ ನೋಡಿ ಪ್ರತಿಕ್ರಿಯಿಸುತ್ತಾರೆ ಎಂದು ಪ್ರಶ್ನಿಸಿದರು.
ಗ್ರಾಮಗಳಲ್ಲಿ ಪಂಚಾಯಿತಿ ನಡೆಸುವ ಯಜಮಾನರುಗಳು ಸಣ್ಣ-ಪುಟ್ಟ ವಿಚಾರಗಳಿಗೂ ಅತಿ ಹೆಚ್ಚು ದಂಡ ವಿಧಿಸುವುದು, ಬಹಿಷ್ಕಾರ ಹಾಕುವುದು ಮಾಡುತ್ತಾರೆ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮವಹಿಸಿ ಪ.ಜಾತಿ/ಪ.ಪಂಗಡದವರು ದೂರು ನೀಡಲು ಠಾಣೆಗೆ ಬಂದರೆ ನಿಮ್ಮ ಅಧಿಕಾರಿಗಳು ಸಿಬ್ಬಂದಿಗಳು ಏರು ಧ್ವನಿಯಲ್ಲಿ ಮಾತನಾಡುತ್ತಾರೆ ಎಂದು ದೂರಿದ ಡಿ.ಎಸ್.ಎಸ್. ಸಂಚಾಲಕ ನಿಂಗರಾಜು, ಅಂಥವರನ್ನು ಬದಲಾಯಿಸಿ ಎಂದು ಒತ್ತಾಯಿಸಿದರು.
ಹನೂರು ತಾಲೂಕಿನ ಕೆಂಪಯ್ಯನ ಹಟ್ಟಿ ಹಾಗೂ ಯಳಂದೂರು ತಾಲೂಕಿನ ವೈ.ಕೆ ಮೋಳೆ ಗ್ರಾಮಸ್ಥರು ಮಾತನಾಡಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಸರ್ಕಾರ ನಿವೇಶನ ಮಂಜೂರು ಮಾಡಿ ಅನುದಾನ ಬಿಡುಗಡೆ ಮಾಡಿದ್ದರು ಮೇಲ್ವರ್ಗದವರು ಭವನ ನಿರ್ಮಾಣ ಮಾಡಲು ತೊಂದರೆ ಕೊಡುತ್ತಿದ್ದಾರೆ ಈ ಕುರಿತು ಕ್ರಮ ವಹಿಸದಿದ್ದರೆ ಎಲ್ಲಾ ಸಂಘಟನೆಗಳ ನೆರವಿನಿಂದ ನ್ಯಾಯಕ್ಕಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಇದಕ್ಕೆ ಸಭೆಯಲ್ಲಿ ಹಾಜರಿದ್ದ ಇನ್ನಿತರ ಮುಖಂಡರು ಧ್ವನಿಗೂಡಿಸಿದರು.
ಮುಳ್ಳೂರು ಮಂಜುನಾಥ್ ಮಾತನಾಡಿ ಸಭೆ ನಡೆಸುವ ಮುನ್ನ 2 – 3 ದಿನಗಳ ಮುಂಚಿತವಾಗಿ ಮಾಹಿತಿ ನೀಡಿ, ಎಲ್ಲಾ ಪತ್ರಿಕಾ ಮಾಧ್ಯಮದವರಿಗೆ ಮಾಹಿತಿ ನೀಡಿ ಸಭೆಗೆ ಆಹ್ವಾನಿಸಿ, ಮಹಿಳಾ ಹೋರಾಟಗಾರರಿಗೆ ಮಾಹಿತಿ ನೀಡಿದ್ದರೆ ಅವರು ಸಭೆಗೆ ಬರುವವರಿದ್ದರು. ಹಾಗೆಯೇ ಎಲ್ಲಾ ಇಲಾಖೆಗಳಲ್ಲೂ ಎಸ್ಸಿ/ಎಸ್‌ಟಿ ಸಭೆ ಆಗಬೇಕು, ಸಭೆ ನಡಾವಳಿ ದಾಖಲಾಗಬೇಕು ಎಂದು ಆಗ್ರಹಿಸಿದರು.
ದೊಡ್ಡ ನಾಯಕರ ಬೀದಿಯ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣ ಮಾಡುವುದಾಗಿ ಕಿತ್ತುಹಾಕಿ 3 ತಿಂಗಳಾದರೂ ಕಾಮಗಾರಿ ಪ್ರಾರಂಭಿಸಿಲ್ಲ. ಇದರಿಂದಾಗಿ ಮನೆಯ ಮುಂದೆ ತೆಗೆದಿರುವ ಗುಂಡಿಗೆ ವೃದ್ಧರು ಆಯತಪ್ಪಿ ಬಿದ್ದು ಅನಾಹುತ ಮಾಡಿಕೊಳ್ಳುತ್ತಿದ್ದಾರೆ ಎಂದು ಸಮುದಾಯದ ಮುಖಂಡ ಸುರೇಂದ್ರ ಗಮನ ಸೆಳೆದರು.
ಡಿ.ವೈ.ಎಸ್.ಪಿ ಧರ್ಮೇಂದ್ರ ಮಾತನಾಡಿ ಇಂದಿನ ಸಭೆಯಲ್ಲಿ 20 ಸಮಸ್ಯೆಗಳು ಬಂದಿವೆ. ಈ ಬಾರಿ 21 ಗಾಂಜಾ ಪ್ರಕರಣ 95 ಅಬಕಾರಿ ಪ್ರಕರಣ 19 ಪಡಿತರ ಅಕ್ಕಿ ಪ್ರಕರಣ 7 ಸಿಡಿ ಮದ್ದು ಪ್ರಕರಣಗಳನ್ನು ದಾಖಲಿಸಿದ್ದೇವೆ ಎಂದು ತಿಳಿಸಿದರು.
2024 ರಲ್ಲಿ 27 ಜಾತಿ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು 4 ಪ್ರಕರಣಗಳು ಸುಳ್ಳು ಅವುಗಳಿಗೆ ಬಿ ರಿಪೋರ್ಟ್ ಹಾಕಲಾಗಿದೆ ಉಳಿದ 23 ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ. ಈ ಬಾರಿ (2025 ರಲ್ಲಿ) 11 ಜಾತಿ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಅದರಲ್ಲಿ ಮೂರು ಪ್ರಕರಣಗಳು ತನಿಖೆ ಹಂತದಲ್ಲಿವೆ. ಜಾತಿ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ಜಾರಿ ನಿರ್ದೇಶನಾಲಯ ಪ್ರತಿ ಜಿಲ್ಲೆಯಲ್ಲೂ ಒಂದು ಠಾಣೆಯನ್ನು ತೆರೆಯುತ್ತಿದೆ ಇನ್ನು ಮುಂದೆ ಜಾತಿ ದೌರ್ಜನ್ಯ ಪ್ರಕರಣಗಳನ್ನು ಅವರೇ ನಿರ್ವಹಿಸಲಿದ್ದಾರೆ ಎಂದು ವಿವರಿಸಿದರು.
ಸಭೆಯಲ್ಲಿ ಜಿ.ಪಂ ಮಾಜಿ ಸದಸ್ಯ ಕೊಪ್ಪಾಳಿ ಮಹದೇವನಾಯಕ, ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ನಟರಾಜು ಮಾಳಿಗೆ, ಮುಖಂಡರಾದ ಮಾಂಬಳ್ಳಿ ಬಸವರಾಜು, ನಗರಸಭಾ ಸದಸ್ಯ ಶಾಂತರಾಜು, ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಆನಂದ್, ಕಾರ್ಯದರ್ಶಿ ಪಾಪಣ್ಣ, ಪ್ರಕಾಶ್, ನಾಗರಾಜು, ಸುರೇಂದ್ರ, ಅಣಗಳ್ಳಿ ಬಸವರಾಜು, ಶಂಕರ್ ಚೇತನ್, ಮುಳ್ಳೂರು ಮಂಜುನಾಥ್, ಡಿ.ಎಸ್.ಎಸ್. ಸಂಚಾಲಕರಾದ ಯರಿಯೂರು ರಾಜಣ್ಣ, ಮ.ಮ. ಬೆಟ್ಟ ದೊರೆಸ್ವಾಮಿ (ಜಾನಿ), ಅಣಗಳ್ಳಿ ನಿಂಗರಾಜು, ಮ.ಮ. ಬೆಟ್ಟ ಗ್ರಾ.ಪಂ.ಮಾಜಿ ಅಧ್ಯಕ್ಷ ವಿಜಯಕುಮಾರ್, ದೊಡ್ಡಾಲತ್ತೂರು ಗುರುದೇವ್, ಮ.ಮ. ಬೆಟ್ಟ ಸಿ.ಪಿ.ಐ ಜಗಧೀಶ್ ಪಟ್ಟಣ ಠಾಣೆ ಪಿ.ಎಸ್.ಐ ವರ್ಷ ಪಾಲ್ಗೊಂಡಿದ್ದರು.
ಕೊಳ್ಳೆಗಾಲ: ಅಪ್ರಾಪ್ತೆಯನ್ನು ಪುಸಲಾಯಿಸಿ ಕರೆ ತಂದು ತಾಲ್ಲೂಕಿನ ಕುರಬನಕಟ್ಟೆಯ ಬಳಿ ಅತ್ಯಾಚಾರ ಎಸಗಿದ್ದ ಆರೋಪಿಯನ್ನ ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಕೊಳ್ಳೆಗಾಲ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಕುಣಗಳ್ಳಿ ಗ್ರಾಮದ ಕೃಷ್ಣ ಅಲಿಯಾಸ್ ಡಿಚ್ಚಿ ಕೃಷ್ಣ ಎಂಬಾತ ಬಂಧಿತ ಆರೋಪಿ.
ಮಂಡ್ಯ ಜಿಲ್ಲೆ ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುದರಗುಂಡಿ ಗ್ರಾಮದ 10 ನೇ ತರಗತಿ ಓದುತಿದ್ದ ಅಪ್ರಾಪ್ತ ವಿಧ್ಯಾರ್ಥಿನಿಯ ಮೊಬೈಲ್ ನಂಬರ್ ಪಡೆದಿದ್ದ ಕೃಷ್ಣ ಅಲಿಯಾಸ್ ಡಿಚ್ಚಿ, ಆಕೆ ವಾಟ್ಸಾಪ್ ನಂಬರ್ ಗೆ ಹಾಯ್ ಎಂದು ಸಂದೇಶ ಕಳುಹಿಸಿ ಬಲೆಗೆ ಬೀಳಿಸಿಕೊಂಡಿದ್ದ.
ನಂತರ ನಿರಂತರ ಸಂಪರ್ಕದಲ್ಲಿದ್ದು ಆಕೆಯನ್ನು ಕೊಳ್ಳೆಗಾಲದ ಕುರುಬನ ಕಟ್ಟೆಗೆ ದೇವರ ದರ್ಶನಕ್ಕೆಂದು ಕರೆದುಕೊಂಡು ಬಂದು ಆಕೆಯ ಒಪ್ಪಿಗೆ ಇಲ್ಲದೆ ಅತ್ಯಾಚಾರ ನಡೆಸಲು ಮುಂದಾಗಿದ್ದಾನೆ.
ಆಕೆ ಒಪ್ಪದಿದ್ದಾಗ ಏನೇನೊ ಹೇಳಿ ನಂಬಿಸಿ ಆಕೆಯನ್ನು 18-3-25 ರಿಂದ 25-4-25 ರ ತನಕ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ
ವಿಧ್ಯಾರ್ಥಿನಿಗೆ ಆರೋಗ್ಯದಲ್ಲಿ ಏರು ಪೇರಾದ ಕಾರಣ ಮದ್ದೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಬಂದಾಗ ಆಕೆ 3 ತಿಂಗಳ ಗರ್ಭಿಣಿಯಾಗಿರುವುದು ಗೊತ್ತಾಗಿದೆ.
ಈ ಬಗ್ಗೆ ಆಸ್ಪತ್ರೆಯ ವೈದ್ಯರು ಸ್ಥಳಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಮಾಹಿತಿ ನೀಡಿದ್ದರು.
ನಂತರ ಇಲಾಖೆಯ ಅಧಿಕಾರಿಗಳು ಅಪ್ರಾಪ್ತೆಯನ್ನು ಕೌನ್ಸಿಲಿಂಗ್ ನಡೆಸಿ ನಡೆದಿರುವ ಘಟನೆ ಬಗ್ಗೆ ಸಂತ್ರಸ್ತೆಯಿಂದ ಹೇಳಿಕೆ ಪಡೆದು ನೆನ್ನೆ ಅಂದರೆ ಜೂ.12 ರಂದು ಗುರುವಾರ ಮದ್ದೂರು ಪೊಲೀಸ್ ಠಾಣೆಗೆ ಅಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯ ಮೇಲ್ವಿಚಾರಕಿ ಆಸ್ಮಭಾನು ಎಂಬುವವರು ನೀಡಿದ್ದಾರೆ.
ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಮದ್ದೂರು ಠಾಣೆ ಪೊಲೀಸರು ನಂತರ ಪ್ರಕರಣವನ್ನು ಕೊಳ್ಳೆಗಾಲ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.
ಪ್ರಕರಣದ ಬೆನ್ನತ್ತಿದ ಕೊಳ್ಳೆಗಾಲ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ ಐ ಸುಪ್ರೀತ್ ಮತ್ತು ತಂಡ ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ಕೊಡಗಿನ ಸೋಮವಾರಪೇಟೆಯಲ್ಲಿ ಅವಿತುಕೊಂಡಿದ್ದ ಕೃಷ್ಣ @ ಡಿಚ್ಚಿಯನ್ನು ಬಂಧಿಸಿದ್ದಾರೆ
ಈ ಅತ್ಯಾಚಾರಿ ಯುವಕನ ಪತ್ತೆಗಾಗಿ ರಾತ್ರೋ ರಾತ್ರಿ ಅಂದರೆ ರಾತ್ರಿ 10 ರಲ್ಲಿ ಪ್ರಾರಂಭವಾದ ಕಾರ್ಯಾಚರಣೆ ಮುಂಜಾನೆ 4 ರವರೆಗೆ ನಡೆಸಿದ್ದಾರೆ.
ಮೂಲತಃ ಕುಣಗಳ್ಳಿ ಗ್ರಾಮದ ಡಿಚ್ಚಿ ಕೃಷ್ಣನ ಕುಟುಂಬ ಕೊಡಗಿನ ಸೋಮವಾರ ಪೇಟೆಯ ಕಾಫಿ ತೋಟದಲ್ಲಿ ಕೂಲಿ ಕೆಲಸದಲ್ಲಿ ತೊಡಗಿಕೊಂಡಿದೆ.
ಆತನ ಕುಟುಂಬ ವಾಸಮಾಡುತ್ತಿದ್ದ ಎರಡು ಮನೆಗಳಲ್ಲೂ ಪಿಎಸ್ ಐ ಸುಪ್ರೀತ್ ಮತ್ತು ತಂಡ ಶೋಧನೆ ನಡೆಸಿ ಇಂದು ಮುಂಜಾನೆ 4 ಗಂಟೆಯಲ್ಲಿ ಒಂದು ಮನೆಯಲ್ಲಿ ಡಿಚ್ಚಿ ಕೃಷ್ಣನನ್ನು ಪತ್ತೆ ಮಾಡಿ ಹೆಡೆಮುರಿಕಟ್ಟಿ ಕೊಳ್ಳೆಗಾಲಕ್ಕೆ ಕರೆತಂದಿದ್ದಾರೆ.
ಕೊಳ್ಳೇಗಾಲ: ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು ಗ್ರಾಮದ ಶ್ರೀ ಕಾವೇರಿ ಮೀನುಗಾರರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್.ಸಿದ್ದಶೆಟ್ಟಿ, ಉಪಾಧ್ಯಕ್ಷರಾಗಿ ಎಂ.ಕೃಷ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗ್ರಾಮದ ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಸ್.ಸಿದ್ದಶೆಟ್ಟಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಂ.ಕೃಷ್ಣ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರ ಹಿನ್ನಲೆಯಲ್ಲಿ ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನಾಗೇಶ್ ಘೋಷಿಸಿದರು.
ಚುನಾವಣೆಯಲ್ಲಿ ನಿರ್ದೇಶಕರಾದ ಅಂಗಡಿ ಸಿದ್ದಶೆಟ್ಟಿ, ಮಹದೇವಶೆಟ್ಟಿ, ಶಂಭುಲಿಂಗಶೆಟ್ಟಿ, ಸಿದ್ದರಾಜನಾಯಕ, ಸಾಕಮ್ಮ, ಬಿ.ಶಿವಮ್ಮ ಭಾಗವಹಿಸಿದ್ದರು.
ಈ ವೇಳೆ ನೂತನ ಅಧ್ಯಕ್ಷ ಎಸ್.ಸಿದ್ದಶೆಟ್ಟಿ ಮೀನುಗಾರರ ಸಹಕಾರ ಸಂಘಕ್ಕೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ್ದ ಎಲ್ಲರಿಗೂ ಧನ್ಯವಾದ ತಿಳಿಸಿದರು.
ನಮ್ಮ ಸಂಘದ ಸದಸ್ಯರುಗಳಿಗೆ ಸರ್ಕಾರದಿಂದ ಬರುವ ಎಲ್ಲಾ ಸವಲತ್ತುಗಳನ್ನು ಕೊಡಿಸಿ ಆರ್ಥಿಕವಾಗಿ ಅಭಿವೃದ್ಧಿ ಪಡಿಸಲು ಶ್ರಮಿಸುವುದಾಗಿ ಅವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಯಜಮಾನರುಗಳಾದ ರಾಜೇಶ್, ಮಾದೇಶ್, ಸೋಮಣ್ಣ, ಶಂಕರ್,ಪಿಎಸಿಸಿಎಸ್ ನಿರ್ದೇಶಕ ಎಂ.ಕೆ.ಪುಟ್ಟಸ್ವಾಮಿ, ಮುಖಂಡರಾದ ಕೆ.ಸಿದ್ದಪ್ಪಸ್ವಾಮಿ, ಜೆ.ಮಾದೇಶ್, ಬಸವಣ್ಣ, ವಿ.ಚಂದ್ರಶೇಖರ್ ಮತ್ತಿತರರು ಹಾಜರಿದ್ದರು.
ಕೊಳ್ಳೇಗಾಲ: ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಕೇಳಲು ಹೋದರೆ ಕುಣಗಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಗೂಂಡಾವರ್ತನೆ ತೋರುತ್ತಿದ್ದಾರೆ ಎಂದು ಪಟ್ಟಣದ ಸುರೇಶ್ ಆರೋಪಿಸಿದ್ದಾರೆ.
ಪಟ್ಟಣದ ಭೀಮನಗರದ ಎನ್. ಸುರೇಶ್ ಅವರು ಕುಣಗಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಮೇಲೆ ಕ್ರಮಕ್ಕೆ ಆಗ್ರಹಿಸಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ.
ಕುಣಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ನರೇಗಾ ಯೋಜನೆಯ ಒಂದು ಕಾಮಗಾರಿಯ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಕುಣಗಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ಏಪ್ರಿಲ್ 17, 2025 ರಂದು ಕೊಳ್ಳೇಗಾಲದಲ್ಲಿರುವ ಪ್ರಧಾನ ಅಂಚೆ ಕಚೇರಿಯಿಂದ ರಿಜಿಸ್ಟರ್ ಪೋಸ್ಟ್ ಮೂಲಕ ಮಾಹಿತಿ ಹಕ್ಕು ಅರ್ಜಿಯನ್ನು ಕುಣಗಳ್ಳಿ ಗ್ರಾಮ ಪಂಚಾಯಿತಿಯ ಅಂಚೆ ಕಚೇರಿಗೆ ರವಾನಿಸಲಾಗಿತ್ತು.
ಸದರಿ ಅಂಚೆ ಕಚೇರಿಯಯವರು ರಿಜಿಸ್ಟರ್ ಪೋಸ್ಟ್ ಅನ್ನು ಕುಣಗಳ್ಳಿ ಗ್ರಾಮ ಪಂಚಾಯಿತಿ ಕಚೇರಿಗೆ ರವಾನಿಸಿ ಸಹಿ ಪಡೆದುಕೊಂಡಿದ್ದರು.
ಆದರೆ ನಾನು ಸಲ್ಲಿಸಿದ ಮಾಹಿತಿ ಹಕ್ಕು ಅರ್ಜಿಯ ಬಗ್ಗೆ ಕುಣಗಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಚೈತ್ರ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ನನಗೆ ಯಾವುದೇ ರೀತಿಯ ಮಾಹಿತಿ ಹಕ್ಕು ಅರ್ಜಿ ರಿಜಿಸ್ಟರ್ ಪೋಸ್ಟ್ ಮೂಲಕ ಬಂದಿಲ್ಲ, ಒಮ್ಮೆ ಪರಿಶೀಲಿಸಿ ಸಿಕ್ಕ ನಂತರ ತಮಗೆ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದ್ದರು ಎಂದು ಸುರೇಶ್ ಹೇಳಿದ್ದಾರೆ.
ಈ ವಿಷಯದ ಬಗ್ಗೆ ಕುಣಗಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಚನ್ನೇಶ್ ಅವರನ್ನು ಕೂಡ ದೂರವಾಣಿ ಮೂಲಕ ಸಂಪರ್ಕಿಸಿದಾಗ ಇದೇ ಉತ್ತರವನ್ನು ನೀಡಿದ್ದರು.
ಈ ವಿಷಯದ ಬಗ್ಗೆ ಅರ್ಜಿ ಸಲ್ಲಿಸಿದ್ದ 30 ದಿನಗಳ ನಂತರ ಪಂಚಾಯಿತಿ ಪಿಡಿಒ ಚನ್ನೇಶ್ ಮತ್ತು ಕಾರ್ಯದರ್ಶಿ ಚೈತ್ರ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ ನನ್ನ ಕರೆಯನ್ನು ಸ್ವೀಕರಿಸದೆ ನಿರ್ಲಕ್ಷ್ಯತೆಯನ್ನು ತೋರಿದರೆಂದು ಅವರು ದೂರಿದ್ದಾರೆ.
ನಾನು ಈ ಅರ್ಜಿ ಸಲ್ಲಿಸಿದ್ದ ವಿಷಯದ ಬಗ್ಗೆ ಅನುಮಾನ ಬಂದು ನಾನು ಅಂಚೆ ಕಚೇರಿಯಿಂದ ನೀಡಿದ್ದ ರಶೀತಿಯನ್ನು ಕುಣಗಳ್ಳಿ ಅಂಚೆ ಕಚೇರಿಗೆ ತೆಗೆದುಕೊಂಡು ಹೋಗಿ ಈ ರಿಜಿಸ್ಟರ್ ಪೋಸ್ಟ್ ಪಂಚಾಯಿತಿಗೆ ತಲುಪಿದೆಯೋ, ಇಲ್ಲವೋ ಎಂದು ವಿಚಾರಿಸಿದಾಗ ನಾನು ಕಳುಹಿಸಿದ್ದ ಮಾಹಿತಿಹಕ್ಕು ರಿಜಿಸ್ಟರ್ ಪೋಸ್ಟ್ ಏಪ್ರಿಲ್ 21, 2025 ರಂದು ಕುಣಗಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸ್ವೀಕೃತಗೊಂಡಿರುವುದು ಖಚಿತವಾಗಿದೆ.
ಆದರೆ ಈ ರಿಜಿಸ್ಟರ್ ಪೋಸ್ಟ್ ಅನ್ನು ಅಲ್ಲಿನ ಗುಮಾಸ್ತೆಯಾಗಿ ಕೆಲಸ ನಿರ್ವಹಿಸುವ ಕೆಂಚಮ್ಮ ಎಂಬುವವರು ಸ್ವೀಕರಿಸಿದ್ದಾರೆ ಎಂದು ಹೆಬ್ಬೆರಳಿನ ಮುದ್ರೆ ಹಾಕಿ ಅವರ ಹೆಸರು ಬರೆದು ಮೊಬೈಲ್ ಸಂಖ್ಯೆ: 6362654331 ಎಂದು ನಮೂದಿಸಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಪಂಚಾಯಿತಿ ಕಚೇರಿಯಲ್ಲಿ ವಿಚಾರಿಸಲು ತೆರಳು ಈ ವಿಷಯದ ಬಗ್ಗೆ ಪಿ.ಡಿ.ಒ. ಚನ್ನೇಶ್ ಬಳಿ ನಾನು ನಿಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದು ನರೇಗಾ ಯೋಜನೆಯ ಕಾಮಗಾರಿಯ ಬಗ್ಗೆ ಮಾಹಿತಿ ಹಕ್ಕು ಅರ್ಜಿಯನ್ನು ರಿಜಿಸ್ಟರ್ ಪೋಸ್ಟ್ ಮೂಲಕ ಕಳುಹಿಸಿದ್ದೆ ಆದರೆ ಈವರೆಗೆ ನನಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ತಿಳಿಸಿದೆ. ಇದಕ್ಕೆ ಪಿ.ಡಿಒ.ಅವರು ಉತ್ತರಿಸಿ ನಮ್ಮ ಗ್ರಾಮ ಪಂಚಾಯಿತಿಗೆ ಯಾವುದೇ ಅರ್ಜಿ ಬಂದಿಲ್ಲ ಎಂದರು.
ನಂತರ ಪೋಸ್ಟ್ ಡೆಲವರಿ ಆಗಿರುವ ಬಗ್ಗೆ ಸಾಕ್ಷಿ ಸಮೇತ ಆಧಾರ ತೋರಿಸಿದೆ. ಅದಕ್ಕೆ ನೀವು ಇನ್ನೊಮ್ಮೆ ಅರ್ಜಿ ಹಾಕಿ ಆ ಅರ್ಜಿ ನಮಗೆ ದೊರೆತಿಲ್ಲ ಎಂದು ಹೇಳಿದರು.
ಇದಕ್ಕೆ ನಾನು ನನ್ನ ಅರ್ಜಿಯ ಪೋಸ್ಟ್ ನಿಮ್ಮ ಗ್ರಾಮ ಪಂಚಾಯಿತಿ ಕಚೇರಿಯ ಸಿಬ್ಬಂದಿ ಕೆಂಚಮ್ಮ ಎಂಬವರು ಸಹಿ ಮಾಡಿ ರಿಜಿಸ್ಟರ್ ಪೋಸ್ ತೆಗೆದುಕೊಂಡಿದ್ದಾರೆ ಎಂದಾಗ ಕೆಂಚಮ್ಮ ಎಂಬ ಸಿಬ್ಬಂದಿ ನಾನು ಯಾವುದೇ ಸಹಿ ಮಾಡಿ ಪೋಸ್ಟ್ ತೆಗೆದುಕೊಂಡಿಲ್ಲ ಎಂದಿದ್ದಾರೆ.
ನಂತರ ಪಿ.ಡಿ.ಒ. ರವರು ನಿಮಗೆ ಒಂದು ಸಲ ಹೇಳಿದರೆ ಅರ್ಥವಾಗುವುದಿಲ್ಲವೇ ನಿಮಗೆ ಮಾಹಿತಿ ಬೇಕಿದ್ದರೆ ಮತ್ತೊಮ್ಮೆ ಅರ್ಜಿ ಕೊಡು ಇಲ್ಲವಾದಲ್ಲಿ ನೀನು ಏನು ಮಾಡಿಕೊಳ್ಳುತ್ತೀಯೋ ಮಾಡಿಕೊ ನೀನು ಯಾರು ಎಂದು ನನಗೆ ಗೊತ್ತು ಎಂದು ಧಮ್ಕಿ ಹಾಕುದರೆಂದು ಸುರೇಶ್ ಆರೋಪಿಸಿದ್ದಾರೆ.
ಮುಂದೆ ಪರಣಾಮ ನೆಟ್ಟಗಿರುವುದಿಲ್ಲ, ನಾನು ನಿನಗೆ ಏನು ಬೇಕಾದರೂ ಮಾಡಿಬಿಡುತ್ತೇನೆ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಎಲ್ಲಾ ಅಧಿಕಾರಿಗಳು ನನ್ನ ಜೊತೆ ಚೆನ್ನಾಗಿದ್ದಾರೆ. ಮುಂದೆ ಯಾವುದೇ ಮಾಹಿತಿ ಕೇಳಿದರೂ ನನ್ನನ್ನು ಏನನ್ನು ಮಾಡಿಕೊಳ್ಳಲಾಗುವುದಿಲ್ಲ ಎಂದು ಮಾನಸಿಕವಾಗಿ ನಿಂದಿಸಿದ್ದಾರೆ.
ಹಾಗಾಗಿ ಪಿ.ಡಿ.ಒ ಚನ್ನೇಶ್ ವಿರುದ್ಧ ಸೂಕ್ತಕ್ರಮ ಕೈಗೊಂಡು ನನ್ನ ಮಾಹಿತಿ ಹಕ್ಕು ಅರ್ಜಿ ಕಾಣೆಯಾಗಿರುವ ವಿಚಾರದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕೆಂದು ಸುರೇಶ್ ಮನವಿ ಮಾಡಿದ್ದಾರೆ.
ಕೊಳ್ಳೇಗಾಲ: ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಹಾಗೂ ನಿರ್ವಾಹಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನಾಲ್ವರು ನೌಕರರಿಗೆ ಕೊಳ್ಳೇಗಾಲ ಘಟಕದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೊಳ್ಳೇಗಾಲ ಘಟಕದಲ್ಲಿ ಕಳೆದ ಹಲವಾರು ವರ್ಷಗಳಿಂದ ಚಾಲಕರಾಗಿ ಸೇವೆ ಸಲ್ಲಿಸಿರುವ ಸೈಯದ್ ಜಬಿವುಲ್ಲಾ, ಸಯ್ಯದ್ ಅನ್ವರ್, ಚಿನ್ನದ ಪದಕವನ್ನು ಪಡೆದ ಚಾಲಕ ವಿ ಗೋವಿಂದಯ್ಯ ಹಾಗೂ ನಿರ್ವಾಹಕರಾಗಿ ಸೇವೆ ಸಲ್ಲಿಸಿರುವ ಆರ್.ಕುಮಾರಸ್ವಾಮಿ ಅವರು ಸೇವೆಯಿಂದ ವಯೋ ನಿವೃತ್ತಿ ಹೊಂದಿರುವುದರಿಂದ ಈ ನಾಲ್ವರನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೊಳ್ಳೇಗಾಲ ಘಟಕದ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಕೊಳ್ಳೇಗಾಲ ಘಟಕದಲ್ಲಿ 2024- 25 ನೇ ಸಾಲಿನಲ್ಲಿ ನಿವೃತ್ತಿ ಹೊಂದಿರುವ ನೌಕರರಿಗೆ ನೌಕರರು ಹಾಗೂ ಆಡಳಿತ ವಿಭಾಗದ ಪರವಾಗಿ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮವನ್ನು ಘಟಕ ವ್ಯವಸ್ಥಾಪಕರಾದ ಭೋಗ ನಾಯಕ್ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಸ್ಥೆ ಪರವಾಗಿ ಹಾಗೂ ನೌಕರರ ಪರವಾಗಿ ಘಟಕ ವ್ಯವಸ್ಥಾಪಕರು ನಿವೃತ್ತಿ ಹೊಂದಿದ ನೌಕರರಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಸನ್ಮಾನಿಸಿ ಬೀಳ್ಕೊಟ್ಟರು.
ಈ ಕಾರ್ಯಕ್ರಮದ ನಿರೂಪಣೆಯನ್ನು ನಿರ್ವಾಹಕ ಡಿ.ರಂಗಸ್ವಾಮಿ ಅವರು ನೆರವೇರಿಸಿದರು.
ಕೊಳ್ಳೇಗಾಲ: ಅಕ್ರಮವಾಗಿ ಸಾಗಿಸುತ್ತಿದ್ದ 12. 37 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಆಹಾರ ಇಲಾಖೆ ಅಧಿಕಾರಿಗಳೊಡನೆ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ದಾಳಿ ವೇಳೆ ವಾಹನ ಸಮೇತ ಅಕ್ಕಿಯನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಮಳವಳ್ಳಿ ತಾಲ್ಲೂಕು ದೊಡ್ಡಬಾಗಿಲು ಸಮೀಪದ ನರೀಪುರ ಗ್ರಾಮದ ಅಜ್ಗಲ್ ಆಲಿ ಬಂಧಿತ ಆರೋಪಿ.
ಈತ ಗ್ರಾಮೀಣ ಪ್ರದೇಶದ ನಾಗರಿಕರಿಂದ ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ ರೈಸ್ ಮಿಲ್ ಗಳಿಗೆ ಮಾರಾಟ ಮಾಡುತ್ತಿದ್ದ.
ಕೊಳ್ಳೇಗಾಲ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸರಗೂರು ಬಳಿ ಗ್ರಾಮಾಂತರ ಠಾಣೆ ಪೊಲೀಸರು ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದಾಗ ನಿನ್ನೆ ಸಂಜೆ ಪಾಳ್ಯ ನರೀಪುರ ಮಾರ್ಗವಾಗಿ ಕೆ. ಎ. 13 ಬಿ 2920 ಸಂಖ್ಯೆಯ ಮಾಕ್ಸಿಮೊ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ವೇಳೆ ಈತ ಸಿಕ್ಕಿಬಿದ್ದಿದ್ದಾನೆ.
ಈ ವೇಳೆ ಪೊಲೀಸರು ವಾಹನ ತಡೆದು ಪರಿಶೀಲಿಸಿದಾಗ ವಾಹನದಲ್ಲಿ ಪಡಿತರ ಅಕ್ಕಿ ಸಾಗಿಸುತ್ತಿರುವುದು ಗೊತ್ತಾಗಿ ಕೂಡಲೇ ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಆಹಾರ ನಿರೀಕ್ಷಕ ಎಂ.ಎನ್. ಪ್ರಸಾದ್ ಅವರು ಕೊಳ್ಳೇಗಾಲ ಗ್ರಾಮಾಂತರ ಠಾಣೆ ಆರಕ್ಷಕ ಉಪ ನಿರೀಕ್ಷ ಸುಪ್ರೀತ್ ರೊಡನೆ ಅಕ್ಕಿ ತುಂಬಿದ ಮಾಕ್ಸಿಮೊ ಗೂಡ್ಸ್ ವಾಹನವನ್ನು ಜಪ್ತಿ ಮಾಡಿ ಸೂಕ್ತ ಕ್ರಮಕ್ಕಾಗಿ ವಾಹನ ಮತ್ತು ಆರೋಪಿಯನ್ನು ಒಪ್ಪಿಸಿದ್ದಾರೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕ ಎಂ.ಎನ್. ಪ್ರಸಾದ್ ಅವರು ನೀಡಿದ ದೂರಿನ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿಯಲ್ಲಿ ಆರಕ್ಷಕ ಉಪನಿರೀಕ್ಷಕ ಸುಪ್ರೀತ್ ಮುಖ್ಯ ಪೇದೆಗಳಾದ ರಾಜಪ್ಪ, ಶಾಂತರಾಜು, ಮನೋಹರ್, ಚಾಲಕ ನಂಜುಂಡಸ್ವಾಮಿ ಭಾಗವಹಿಸಿದ್ದರು.
ಕೊಳ್ಳೇಗಾಲ: ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತ ಪತಿ ಆಕೆಯ ಕುತ್ತಿಗೆ ಕೊಯ್ದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಹನೂರು ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಒಡೆಯರಪಾಳ್ಯ ಸಮೀಪದ ಗೂಳ್ಯದ ಬಯಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಗ್ರಾಮದ ಮಾದೇವಿ (32) ಕೊಲೆಯಾದ ಮಹಿಳೆ.ಈಕೆಯ ಪತಿ ಭದ್ರ ಎಂಬಾತ ಕೊಲೆ ಮಾಡಿರುವ ಆರೋಪಿ.
ಗೂಳ್ಯದ ಬಯಲು ಗ್ರಾಮದ ಸೋಲಿಗ ಜನಾಂಗದ ಲೇ. ಶಂಭಯ್ಯ ಹಾಗೂ ಈರಮ್ಮ ಎಂಬುವವರ ಮಗಳು ಮಾದೇವಿಯನ್ನು ಕಳೆದ 10 ವರ್ಷಗಳ ಹಿಂದೆ ಅದೇ ಗ್ರಾಮದ ಲೇ.ಈರಣ್ಣನ ಮಗ ಭದ್ರ ಎಂಬಾನಿಗೆ ಕೊಟ್ಟು ಮದುವೆ ಮಾಡಲಾಗಿತ್ತು.
ದಂಪತಿಗಳು ಪ್ರಾರಂಭದಲ್ಲಿ ಅನ್ಯೋನ್ಯವಾಗಿದ್ದರು. ಇವರಿಗೆ 4 – 5 ವರ್ಷದವರೆಗೆ ಮಕ್ಕಳಿರಲಿಲ್ಲ. 4 ವರ್ಷದ ಒಂದು ಹಾಗೂ ಒಂದುವರೇ ವರ್ಷದ ಒಂದು ಇಬ್ಬರು ಗಂಡು ಮಕ್ಕಳಿದ್ವಾರೆ.
ಆದರೆ ಮಾದೇವಿ ಅದೇ ಗ್ರಾಮದ ಸ್ವಾಮಿ ಎಂಬ ಯುವಕನೊಂದಿಗೆ ಅಕ್ರಮ ಸಂಬಂಧವಿರಿಸಿ ಕೊಂಡಿದ್ದಳು ಇದು ಗಂಡ ಭದ್ರನಿಗೆ ತಿಳಿದು ಹುಚ್ಚನಂತಾಗಿದ್ದ.
ಪತ್ನಿಯ ನಡತೆಯಿಂದ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈ ವೇಳೆ ಮಗಳಿಗೆ ಬುದ್ಧಿವಾದ ಹೇಳಿದ್ದ ಮಾದೇವಿಯ ಮನೆಯವರು ಸ್ವಾಮಿಯ ಜೊತೆ ಜಗಳ ಮಾಡಿ ಇನ್ನು ಮುಂದೆ ನಮ್ಮ ಮನೆಯ ಕಡೆ ಬರಬೇಡ ಎಂದು ಎಚ್ಚರಿಕೆ ನೀಡಿದ್ದರು.
ಆದರೂ ಮಾದೇವಿ ಸ್ವಾಮಿಯ ಜೊತೆ ಅಕ್ರಮ ಸಂಬಂಧ ಮುಂದುವರೆಸಿದ್ಧಳು ಇದರಿಂದಾಗಿ ಭದ್ರ ಮಾನಸಿಕ ನಿಯಂತ್ರಣ ಕಳೆದು ಕೊಂಡು ಹುಚ್ಚನಾಗಿದ್ದ.
ಈ ವೇಳೆ ಮಾದೇವಿ ತನ್ನ ತವರು ಮನೆಯಲ್ಲೇ ಇದ್ದಳು. ಅಲ್ಲಿಗೆ ಸ್ವಾಮಿ ರಾತ್ರಿ ಹೊತ್ತು ಬರುತ್ತಿದ್ದ ಎಂದು ಹೇಳಲಾಗಿದ್ದು. ಅದೇ ಕನವರಿಕೆಯಲ್ಲಿದ್ದ ಭದ್ರ ಇದೇ 20 ರಂದು ರಾತ್ರಿ ಮಾದೇವಿಯ ತವರು ಮನೆಗೆ ಬಂದು ಸ್ವಾಮಿ ನನ್ನ ಹೆಂಡತಿಯ ಜೊತೆ ಮಲಗಿದ್ದಾನೆ ಎಂದು ಗಲಾಟೆ ಮಾಡಿದ್ದಾನೆ.ಮನೆಯವರು ಇಲ್ಲಿ ಯಾರೂ ಇಲ್ಲ ಎಂದು ಸಮಾಧಾನ ಮಾಡಿ ಕಳುಹಿಸಿದ್ದಾರೆ.
21 ರಂದು ಹೆಂಡತಿಯ ಮನೆಗೆ ಬಂದು ಊಟ ಮಾಡಿದಗದಾನೆ. ಈ ವೇಳೆ ಪತ್ನಿಯೇ ಅನ್ನ ಮಾಡಿ ಬಡಿಸಿದ್ದಾಳೆ. ಆದರೂ ಈತನ ತಲೆಯಲ್ಲಿರುವ ಅನುಮಾನ ಹೋಗಿರಲಿಲ್ಲ.
ಬದ್ರ ಒಡೆಯರಪಾಳ್ಯಕ್ಕೆ ಬಂದು ನಾಗಭೂಷಣ್ ಎಂಬುವವರ ಅಂಗಡಿಯಲ್ಲಿ ಚಾಕು ಖರೀದಿಸಿದ್ದಾನೆ.
ನಂತರ ಮಾದೇವಿಯ ತವರಿನಲ್ಲಿ ಎಲ್ಲರೂ ಕೂಲಿ ಕೆಲಸಕ್ಕೆ ತೆರಳಿದ ಮೇಲೆ ಮನೆಗೆ ಬಂದು ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ.ಈ ವೇಳೆ ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದರೂ ಬಿಡದೆ ಆಕೆಯ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದು ಕೂಲೆ ಮಾಡಿದ್ದಾನೆ.
ಚೀರಾಟ ಕೇಳಿದ ಅಕ್ಕ ಪಕ್ಕದ ಮನೆಯವರು ಓಡಿ ಬಂದಿದ್ದಾರೆ ಕೊಲೆ ಮಾಡಿ ಅಲ್ಲೇ ಪಕ್ಕದಲ್ಲೇ ಕುಳಿತಿದ್ದ ಬದ್ರನನ್ನು ಹಿಡಿಯಲಿ ಯತ್ನಿಸಿದಾಗ ಆತ ಅವರಿಗೂ ಚಾಕು ತೋರಿಸಿ ಹೆದರಿಸಿ ಪರಾರಿಯಾಗಿದ್ದಾನೆ.
ವಿಷಯ ತಿಳಿದ ಕೂಡಲೇ ಹನೂರು ಠಾಣೆ ಪಿ ಎಸ್ ಐ ಮಂಜುನಾಥ್ ಪ್ರಸಾದ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಾದೇವಿಯ ಶವವನ್ನು ಚಾಮರಾಜನಗರ ಆಸ್ಪತ್ರೆ ಶವಗಾರಕ್ಕೆ ಸಾಗಿಸಿ, ವೈದ್ಯರಿಂದ ಪಂಚನಾಮೆ ನಡೆಸಿ ನಂತರ ವಾರಸುದಾರರಿಗೆ ನೀಡಿದ್ದಾರೆ
ಈ ಸಂಬಂಧ ಮೃತಳ ಸಹೋದರ ಮಾದೇಶ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಹನೂರು ಠಾಣೆ ಪೊಲೀಸರು ಆರೋಪಿ ಬದ್ರನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಕೊಳ್ಳೇಗಾಲ: ತಾಲ್ಲೂಕಿನ ಶಿವನ ಸಮುದ್ರದ ಸಮೂಹ ದೇವಾಲಯಗಳ ಹುಂಡಿ ಏಣಿಕೆ ಕಾರ್ಯ ಗುರುವಾರ ನಡೆದಿದ್ದು, 5 ತಿಂಗಳ ಅವಧಿಯಲ್ಲಿ ಬರೋಬ್ಬರಿ 21, 78, 740 ರೂ. ಹಣ ಸಂಗ್ರಹವಾಗಿದೆ.
ಉಪವಿಭಾಗಾಧಿಕಾರಿ ಮಹೇಶ್ ನೇತೃತ್ವದಲ್ಲಿ ಮಧ್ಯ ರಂಗನಾಥಸ್ವಾಮಿ ದೇವಾಲಯದ ದಾಸೋಹ ಭವನದಲ್ಲಿ ಸಮೂಹ ದೇವಾಲಯಗಳಾದ ಮಧ್ಯ ರಂಗನಾಥಸ್ವಾಮಿ ದೇವಾಲಯ, ಪ್ರಸನ್ನ ಮೀನಾಕ್ಷಿ ಹಾಗೂ ಸೋಮೇಶ್ವರ ದೇವಾಲಯ ಮತ್ತು ಆದಿಶಕ್ತಿ ಮಾರಮ್ಮ ದೇವಾಲಯಗಳ ಹುಂಡಿಗಳ ಎಣಿಕೆ ನಡೆಯಿತು.
ಈ ಮೂರು ದೇವಾಲಯಗಳಿಂದ ಒಟ್ಟು 21, 78, 740 ರೂ. ನಗದು ಸಂಗ್ರಹವಾಗಿದೆ. 2 ಗ್ರಾಂ. ಚಿನ್ನದ ಪದಾರ್ಥಗಳು, 8 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.
ಬೆಳಿಗ್ಗೆ ಯಿಂದ ಸಂಜೆ ವರೆಗೆ ಹುಂಡಿಗಳ ಎಣಿಕೆ ಕಾರ್ಯ ನಡೆದಿದೆ. ಈ ವೇಳೆ ಸಮೂಹ ದೇವಾಲಯಗಳ ಕಾರ್ಯ ನಿರ್ವಾಹಕಾಧಿಕಾರಿ ಸುರೇಶ್, ಪಾಳ್ಯ ಉಪ ತಹಶೀಲ್ದಾರ್ ವಿಜಯ ಕುಮಾರ್, ರಾಜಸ್ವ ನೀರಿಕ್ಷಕ ರಂಗಸ್ವಾಮಿ, ಕಸಬಾ ರಾಜಸ್ವ ನೀರಿಕ್ಷಕ ನಿರಂಜನ್, ಕಸಬಾ ಮತ್ತು ಪಾಳ್ಯ ಹೋಬಳಿಯ ಗ್ರಾಮ ಆಡಳಿತಾಧಿಕಾರಿಗಳಾದ ರಾಕೇಶ್, ಮಮತ, ಪ್ರದೀಪ್, ಶಾಂತರಾಜು, ಭೀಮಪ್ಪ, ಮಹೇಶ್, ಅನಿಲ್, ಗ್ರಾಮ ಸಹಾಯಕರುಗಳಾದ ಸೀಗನಾಯಕ, ಬಸವರಾಜು, ನಾಗರಾಜು ಕೋಟೆಕ್ ಮಹೀಂದ್ರಾ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ್ ಮತ್ತು ಸಿಬ್ಬಂದಿ, ಕೊಳ್ಳೇಗಾಲ ಗ್ರಾಮಾಂತರ ಠಾಣೆ ಸಿಬ್ಬಂದಿಗಳಾದ ಮುಖ್ಯಪೇದೆ ವಿನೋದ್, ಕಿರಣ್ ಕುಮಾರ್, ರೇವಣ್ಣಸ್ವಾಮಿ, ದೇವಾಲಯದ ಅರ್ಚಕರಾದ ಶ್ರೀಧರ್ ಆಚಾರ್, ಮಾಧವನ್, ಮಧುಸೂದನ್, ನಾಗರಾಜು ದೀಕ್ಷಿತ್ ಮತ್ತಿತರರ ಸಮ್ಮುಖದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.