ತವರೂರು ಮರೆಯದ ನಟ ಗಣೇಶ್ ರಾವ್:ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್!

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ತಾಲೂಕಿನ ಹೊಂಡರಬಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಲನಚಿತ್ರ ನಟ ಗಣೇಶ್ ರಾವ್ ಕೇಸರ್ ಕರ್ ಅವರು ಸ್ಮಾರ್ಟ್ ಕ್ಲಾಸ್ ಪ್ರಾರಂಭಿಸಿ ಮಕ್ಕಳಿಗೆ ನೋಟ್ ಬುಕ್ ಹಾಗೂ ಸಮವಸ್ತ್ರ ವಿತರಿಸಿದರು.

ಹುಟ್ಟಿದ ಊರಿಗೆ ಹಾಗೂ ಓದಿದ ಶಾಲೆಗೆ ಕಾಯಕಲ್ಪ ಮಾಡಲು ಹೊರಟಿರುವ ನಟ ಗಣೇಶ್ ರಾವ್ ಕೇಸರ್ ಕರ್ ಅವರು ತಂದೆ ಮಾಜಿ ಸೇನಾಧಿಕಾರಿ ದಿ.ಆರ್. ಕೃಷ್ಣರಾವ್, ತಾಯಿಯರ ಸ್ಮರಣಾರ್ಥ ತಾವು ಓದಿದ ಶಾಲೆಯನ್ನು ದತ್ತು ಪಡೆದು ಕಳೆದ 2 ವರ್ಷಗಳಿಂದ ನಿರಂತರವಾಗಿ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

ಈಗಾಗಲೇ ಶಿಥಿಲಗೊಂಡಿದ್ದ ಶಾಲಾ ಕಟ್ಟಡವನ್ನು ಕೆಡವಿ ನೂತನ ಕೊಠಡಿಗಳನ್ನು ನಿರ್ಮಾಣ ಮಾಡಿದ್ದಾರೆ. ಈಗ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಪ್ರಾರಂಭಿಸಿದ್ದು. ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಪಿಎಸ್ಐ ಸುಪ್ರೀತ್ ಅವರು ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿದರು.

ಇದಕ್ಕೂ ಮೊದಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ 2025-26 ನೇ ಶೈಕ್ಷಣಿಕ ವರ್ಷದ ಬಿಳಿ ಸಮವಸ್ತ್ರ ಹಾಗೂ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಗಣೇಶ್ ರಾವ್ ಕೇಸರ್ ಕರ್ ಮಕ್ಕಳಿಗೆ ಸಮವಸ್ತ್ರ ವಿತರಿಸಿದರು.

ಈ ವೇಳೆ ಮಾತನಾಡಿದ ಅವರು ನಾನು ಓದುವಾಗ ಶಾಲೆಯಲ್ಲಿ ಯಾವುದೇ ಸೌಲಭ್ಯವಿರಲಿಲ್ಲ ನಾನು ಇಂಗ್ಲಿಷ್ ಕಲಿತಿದ್ದು ಪಕ್ಕದ ಮದುವನಹಳ್ಳಿ ಶಾಲೆಯಲ್ಲಿ. ನಮ್ಮ ಗ್ರಾಮದಲ್ಲಿ ಶಾಲೆಯನ್ನು ಅಭಿವೃದ್ಧಿ ಪಡಿಸಬೇಕು,ಬೇರೆಡೆ ಮಕ್ಕಳು ಹೋಗಬಾರದು ಅದಕ್ಕಾಗಿ ನಮ್ಮ ತಂದೆ ತಾಯಿ ಹೆಸರಲ್ಲಿ ದತ್ತು ತೆಗೆದುಕೊಂಡಿದ್ದೇನೆ ಈ ಕಾರ್ಯಕ್ಕೆ ನನ್ನೊಡನೆ ನಮ್ಮ ಗ್ರಾಮದ ನನ್ನ ಸಹಪಾಠಿ ಮಲ್ಲೆಶ್ ಕೈಜೋಡಿಸಿದ್ದಾರೆ ಎಂದು ತಿಳಿಸಿದರು.

ಈ ಬಾರಿ ಶಾಲೆಯಲ್ಲಿ 20 ಮಕ್ಕಳ ದಾಖಲಾತಿ ಹೆಚ್ಚಳವಾಗಿದೆ ನಾನು ಶ್ರೀಮಂತನಲ್ಲ, ಆದರೂ ನಾನು ಹುಟ್ಟಿ ಬೆಳೆದ ಈ ಶಾಲೆಗೆ ಏನಾದರೂ ಮಾಡಬೇಕೆಂಬ ಬಯಕೆ, ಹಾಗಾಗಿ ಅಂಬೇಡ್ಕರ್ ಚಿಂತನೆಯಂತೆ ನಾನು ಓದಿದ ಶಾಲೆಯನ್ನು ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದು ಅಧಿಕೃತವಾಗಿ ದತ್ತು ತೆಗೆದುಕೊಂಡು ಕಾಯಕಲ್ಪ ಮಾಡಲು ಮುಂದಾಗಿದ್ದೇನೆ ಎಂದು ಹೇಳಿದರು.

ಈ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಅಭಿವೃದ್ಧಿ ಮಾಡುವ ಉದ್ದೇಶ ಹೊಂದಿದ್ದೇನೆ, ಈ ಶಾಲೆಯನ್ನು ಸ್ಮಾರ್ಟ್ ಕ್ಲಾಸ್ ಮಾಡಲು ತೀರ್ಮಾನಿಸಿದ್ದೆ. ಅದರಂತೆ ಇಂದು ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಪ್ರಾರಂಭಿಸಲಾಗಿದೆ. ವಿದ್ಯೆ ಕಲಿತರೆ ನಿಮ್ಮ ಬಳಿ ಯಾವುದೇ ಸಮಸ್ಯೆ ಸುಳಿಯುವುದಿಲ್ಲ ಎಂದು ಮಕ್ಕಳಿಗೆ ತಿಳಿಹೇಳಿದರು.

ಇದೇ ತಿಂಗಳ 24 ಕ್ಕೆ ಶಾಲೆಯಲ್ಲಿ ಕ್ರೀಡಾಕೂಟ ನಡೆಸಲು ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಮಕ್ಕಳು ಓದಿನ ಜೊತೆಗೆ ಆಟ ಪಾಠದಲ್ಲೂ ತೊಡಗಿಸಿ ಕೊಳ್ಳಬೇಕು ಯಾರು ಸಹ ಪುಸ್ತಕ ಪೆನ್ನು ಪೆನ್ಸಿಲ್ ಇಲ್ಲ ಎಂದು ಓದು ನಿಲ್ಲಿಸಬೇಡಿ ಯಾರಿಗಾದರೂ ಪೆನ್ನು ಪುಸ್ತಕ ಇಲ್ಲದಿದ್ದರೆ ಶಿಕ್ಷಕರ ಬಳಿ ಹೇಳಿಕೊಳ್ಳಿ ನಾವು ಒದಗಿಸಿಕೊಡುತ್ತೇವೆ ಎಲ್ಲರೂ ಚೆನ್ನಾಗಿ ಓದಿ ಊರಿಗೆ ಶಾಲೆಗೆ ಹೆಸರು ಕೀರ್ತಿ ತನ್ನಿ ಎಂದು ಕರೆನೀಡಿದರು.

ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಪಿಎಸ್ಐ ಸುಪ್ರೀತ್ ಮಾತನಾಡಿ ಹುಟ್ಟಿದ ಊರಿನ ಶಾಲೆಗೆ ಏನಾದರೂ ಸೇವೆ ಮಾಡಬೇಕೆಂಬುದನ್ನು ಗಣೇಶ್ ರಾವ್ ಅವರನ್ನು ನೋಡಿ ಕಲಿಯಬೇಕು ಎಂದು ಮೆಚ್ಚುಗೆಯಿಂದ ಹೇಳಿದರು.

ನಾನು ಸರ್ಕಾರಿ ಶಾಲೆಯಲ್ಲಿ ಓದಿದ್ದು ಇಂತಹ ಪ್ರೋತ್ಸಾಹ ಕೊಡುವ ವವರು ಯಾರು ಇರಲಿಲ್ಲ, ನನ್ನ ವ್ಯಾಪ್ತಿಯ 80 ಹಳ್ಳಿಗಳಲ್ಲಿ ಇಂತಹ ಸಹಕಾರ ನೀಡುವ ಯಾವುದೇ ಶಾಲೆಗಳಿಲ್ಲ ಹಾಗಾಗಿ ನಿಮಗೆ ಪ್ರೋತ್ಸಾಹ ನೀಡಲು ಗಣೇಶ್ ರಾವ್ ಇದ್ದಾರೆ, ಶಿಕ್ಷಣ ನೀಡಲು ಉತ್ತಮ ಶಿಕ್ಷಕರಿದ್ದಾರೆ ಇನ್ನೇನು ಬೇಕು ಸಾಧನೆ ಮಾಡಲು ಇದನ್ನು ಬಳಸಿಕೊಂಡು ಗಣೇಶ ರವರ ಕನಸನ್ನು ನನಸು ಮಾಡಿ ಎಂದು ಕರೆ ನೀಡಿದರು.

ಚಾಮರಾಜನಗರ ಡಿ ಡಿ ಪಿ ಐ ಕಚೇರಿಯ ಡಿ ವೈ ಪಿ ಸಿ ನಾಗೇಂದ್ರ, ಡಯಟ್ ನ ನಾಗರಾಜುರವರು ಮಾತನಾಡಿ ಒಂದು ಶಾಲೆಯನ್ನ ಅಭಿವೃದ್ಧಿ ಮಾಡಿದರೆ ಆ ಗ್ರಾಮದ ಅಭಿವೃದ್ಧಿಯಾಗುತ್ತದೆ ಗಣೇಶ್ ರಾವ್ ಅವರು ಸಿನಿಮಾ ರಂಗದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಹುಟ್ಟೂರಿನ ಶಾಲೆಯನ್ನು ಮರೆತಿಲ್ಲ ಎಂದು ಗುಣಗಾನ ಮಾಡಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳ, ಶಾಲೆಯ ಮುಖ್ಯ ಶಿಕ್ಷಕ ವಾಸುದೇವ, ಗ್ರಾಮದ ಮುಖಂಡರುಗಳಾದ ಶಿವಣ್ಣ, ಗುರುಸ್ವಾಮಿ, ಮಲ್ಲಿಕಾರ್ಜುನ, ಶರತ್, ರಾಜಮ್ಮ, ಪುಷ್ಪವತಿ, ಸುರೇಶ್ ಗೌಡ, ಮಲ್ಲೇಶ್ ಮತ್ತಿತರರು ಹಾಜರಿದ್ದರು.

ತವರೂರು ಮರೆಯದ ನಟ ಗಣೇಶ್ ರಾವ್:ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್! Read More

ಸರ್ಕಾರಿ ಜಾಗ ಒತ್ತುವರಿ ಮಾಡಿ ಅಂಗಡಿ ಮನೆ‌ ನಿರ್ಮಿಸಿದ್ದವರಿಗೆ ಶಾಕ್

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ,ಜು.2: ಕೊಳ್ಳೇಗಾಲದ ಆರ್. ಎಂ.ಸಿ.ರಸ್ತೆಯಲ್ಲಿ ಸರ್ಕಾರಿ ಜಾಗ ವನ್ನು ಒತ್ತುವರಿ ಮಾಡಿಕೊಂಡು ವಾಸದ ಮನೆ ಅಂಗಡಿ, ಮುಂಗಟ್ಟು ನಿರ್ಮಿಸಿದ್ದವರಿಗೆ ಅಧಿಕಾರಿಗಳು ಬಿಸಿ ಮುಟ್ಟಿಸಿದರು.

ಇಂದು ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ತಹಸೀಲ್ದಾರ್ ಬಸವರಾಜು ಅವರ ನೇತೃತ್ವದಲ್ಲಿ ಜಂಟಿ ಕಾರ್ಯಚರಣೆ ನಡೆಸಿದದರು. 

ಸರ್ವೆ ನಂ.700 ಹಾಗೂ 708 ರಲ್ಲಿರುವ ಸರ್ಕಾರಿ ಜಾಗ ಮರಡಿಗುಡ್ಡವನ್ನು ಕೆಲವರು ಒತ್ತುವರಿ ಮಾಡಿ ವಾಸದ ಮನೆ, ಅಂಗಡಿ ನಿರ್ಮಿಸಿ ಸರ್ಕಾರದ ಎಲ್ಲಾ ಸೌಲಭ್ಯ ವನ್ನು ಪಡೆದುಕೊಂಡು ಕಳೆದ 30 ವರ್ಷಗಳಿಂದ ವಾಸ ಮಾಡುತ್ತಿದ್ದರು.

2023 ರಲ್ಲಿ ಭೀಮನಗರದ ಎಲ್.ನಾಗಣ್ಣ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿ ಅಕ್ರಮ ಒತ್ತುವರಿ ಮಾಡಿಕೊಂಡಿರುವ ಮರಡಿಗುಡ್ಡ ಸರ್ಕಾರಿ ಭೂಮಿಯನ್ನು ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯುವಂತೆ ಮನವಿ ಮಾಡಿದ್ದರು.

ಎಲ್.ನಾಗಣ್ಣನವರ ದೂರಿನ ಮೇರೆಗೆ ಈ ಪ್ರದೇಶದಲ್ಲಿ ಎಷ್ಟು ಮಂದಿ ಅಕ್ರಮ ಒತ್ತುವರಿ ಮಾಡಿ ಕೊಂಡು ವಾಸಮಾಡುತ್ತಿದ್ದಾರೆ ಎಂಬ ಬಗ್ಗೆ ನಗರಸಭೆಯಿಂದ ಮಾಹಿತಿ ಪಡೆದ ಲೋಕಾಯುಕ್ತ ಅಧಿಕಾರಿಗಳು ಕಳೆದ ಒಂದು ವರ್ಷದ ಹಿಂದೆ ಅಂದಿನ ತಹಶೀಲ್ದಾರ್ ರಿಗೆ ಅಕ್ರಮ ಒತ್ತುವರಿ ತೆರವುಗೊಳಿಸುವಂತೆ ಆದೇಶಿಸಿದ್ದರು.

ಈ ಹಿನ್ನೆಲೆಯಲ್ಲಿ ಹಿಂದಿನ ತಹಸೀಲ್ದಾರ್ ಮಂಜುಳಾ ಅವರು ಒತ್ತುವರಿ ತೆರವು ಕಾರ್ಯಚರಣೆಗೆ ಮುಂದಾದಾಗ ನಿವಾಸಿಗಳು ಶಾಸಕ ಎ.ಆರ್. ಕೃಷ್ಣಮೂರ್ತಿಯವರ ಮೊರೆ ಹೋಗಿ 6 ತಿಂಗಳ ಗಡುವು ಪಡೆದು ಕೊಂಡಿದ್ದರು.

ನಂತರ ಇತ್ತೀಚೆಗೆ ಲೋಕಾಯುಕ್ತ ಅಧಿಕಾರಿಗಳು ಅಕ್ರಮ ಒತ್ತುವರಿ ತೆರವುಗೊಳಿಸುವಂತೆ ಒತ್ತಡ ಹೇರಿದ್ದ ಕಾರಣ ಇಂದು ತಹಸೀಲ್ದಾರ್ ಬಸವರಾಜು ಅವರು ಪೊಲೀಸ್ ಇಲಾಖೆ, ಅರಣ್ಯ ಇಲಾಖೆಯ ಸಹಯೋಗದಲ್ಲಿ ಕಾರ್ಯಚರಣೆ ನಡೆಸಿದರು.

ಈ ವೇಳೆ ತಹಶೀಲ್ದಾರ್ ಹಾಗೂ ನಿವಾಸಿ ಗಳ ನಡುವೆ ಮಾತಿನ ಚಕಮಕಿ ನಡೆದು ಮತ್ತೆ 2 ದಿನ ಕಾಲಾವಕಾಶ ನೀಡುವಂತೆ ನಿವಾಸಿಗಳು ಒತ್ತಾಯಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಹಸೀಲ್ದಾರ್  ಬಸವರಾಜು ಅವರು ಈಗಾಗಲೇ 6 ತಿಂಗಳು ಗಡುವು ಪಡೆದು ಕೊಂಡಿದ್ದೀರಿ ಮತ್ತೆ ಗಡುವು ನೀಡಲು ಸಾಧ್ಯವಿಲ್ಲ.ಅಂಗಡಿ, ಮುಂಗಟ್ಟುಗಳನ್ನು ತೆರವುಗೊಳಿಸಲಾಗುವುದು.
ವಾಸದ ಮನೆಗಳಿಗೆ ಸ್ವಲ್ಪ ಕಾಲಾವಕಾಶ ನೀಡುಲಾಗುವುದು ಎಂದು ತೆರವು ಕಾರ್ಯಚರಣೆ ಮುಂದುವರಿಸಿದರು.

ಸರ್ಕಾರಿ ಜಾಗ ಒತ್ತುವರಿ ಮಾಡಿ ಅಂಗಡಿ ಮನೆ‌ ನಿರ್ಮಿಸಿದ್ದವರಿಗೆ ಶಾಕ್ Read More

ಉಪ ಅರಣ್ಯ ಸಂರಕ್ಷಣಾಧಿಕಾರಿ ಬಗ್ಗೆ ಆರ್.ನರೇಂದ್ರ ಹೇಳಿಕೆ:ಉಪ್ಪಾರ ಸಂಘ ಕಿಡಿ

ಕೊಳ್ಳೇಗಾಲ: ಹುಲಿಗಳ ಸಾವಿಗೆ ವಿಷಪ್ರಾಶನ ಕಾರಣ ಎಂಬುದು ಧೃಡಪಟ್ಟಿದ್ದರೂ ಮಾಜಿ ಶಾಸಕ ಆರ್. ನರೇಂದ್ರ ಅವರು ಏನೇನೊ ಹೇಳಿಕೆ ನೀಡಿದ್ದಾರೆಂದು ತಾಲೂಕು ಭಗೀರಥ ಉಪ್ಪಾರ ಸಂಘ ಕಿಡಿಕಾರಿದೆ.

ಯಾರದೋ ಪ್ರಭಾವಕ್ಕೆ ಒಳಗಾಗಿ ಹತಾಶೆಯಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ಅವರ ಮೇಲೆ ಇಲ್ಲ – ಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ನರೇಂದ್ರ ಅವರ ಆರೋಪವನ್ನು ತಾಲೂಕು ಭಗೀರಥ ಉಪ್ಪಾರ ಸಂಘ ತಳ್ಳಿಹಾಕಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕೊಳ್ಳೇಗಾಲ ತಾಲೂಕು ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ರಮೇಶ್ ಅವರು, ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ಅವರು ಒಬ್ಬ ದಕ್ಷ ಪ್ರಾಮಾಣಿಕ, ಖಡಕ್ ಅಧಿಕಾರಿ. ಅವರ ಬಗ್ಗೆ ಆರ್ ನರೇಂದ್ರ ದುರುದ್ದೇಶದಿಂದ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ.
ಎಂದು ತಿಳಿಸಿದ್ದಾರೆ.

ದಲಿತ ಹಾಗೂ ಹಿಂದುಳಿದ ಜನಾಂಗದ ವ್ಯಕ್ತಿಗಳು ಉನ್ನತ ಅಧಿಕಾರದಲ್ಲಿರುವವುದನ್ನು ಸಹಿಸದ ಕೆಲವರು ಚಕ್ರಪಾಣಿಯವರ ವಿರುದ್ಧ ಅವರ ತೇಜೋವಧೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರು ಅಧಿಕಾರ ವಹಿಸಿಕೊಂಡಂದಿನಿಂದಲೂ ಅವರ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದು ನರೇಂದ್ರರ ಕೆಳ ಹಂತದ ಅಧಿಕಾರಿಗಳೊಂದಿಗಿನ ಸಮನ್ವಯದ ಕೊರತೆಯಿಂದ ಈ ರೀತಿ ಆಗಿದೆ ಎಂಬುದಕ್ಕೆ ಅವರ ಹೇಳಿಕೆಯೇ ಸಾಕ್ಷಿ ಎಂದಿದ್ದಾರೆ.

ಹುಲಿಗಳ ಸಾವಿಗೆ ವಿಷಪ್ರಾಶನವೇ ಕಾರಣ ಎಂದು ಈಗಾಗಲೇ ತನಿಖೆಯಿಂದ ಧೃಡಪಟ್ಟಿದೆ. ಆದರೆ ನರೇಂದ್ರ ಅವರು ಯಾರದೋ ಪ್ರಭಾವಕ್ಕೊಳಗಾಗಿ ಹತಾಶೆಯಿಂದ ಇಲ್ಲ – ಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲವೆಂದು ನರೇಂದ್ರರವರ ಆರೋಪವನ್ನು ತಾಲೂಕು ಭಗೀರಥ ಉಪ್ಪಾರ ಸಂಘ ಖಂಡಿಸಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಬಗ್ಗೆ ಆರ್.ನರೇಂದ್ರ ಹೇಳಿಕೆ:ಉಪ್ಪಾರ ಸಂಘ ಕಿಡಿ Read More

ಅಧಿಕಾರಿಗಳ ನಂಬಿಕೆಗೆ ಚ್ಯುತಿ ಬಾರದ ಹಾಗೆ‌ ಕೆಲಸ ನಿರ್ವಹಿಸಿ-ಶಿವಪ್ರಕಾಶ್

ಕೊಳ್ಳೇಗಾಲ: ನಿಮ್ಮನ್ನು ನಂಬಿ ಅಧಿಕಾರಿಗಳು ಕಡತಗಳಿಗೆ ಸಹಿ ಹಾಕುತ್ತಾರೆ ಅವರ ನಂಬಿಕೆಗೆ ಚ್ಯುತಿ ಬಾರದ ಹಾಗೆ ಕಾರ್ಯನಿರ್ವಹಿಸಿ ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ಶಿವಪ್ರಕಾಶ್ ಅವರು ಸಿಬ್ಬಂದಿಗೆ ಸಲಹೆ ನೀಡಿದರು.

ಕೊಳ್ಳೇಗಾಲ ಜಿಲ್ಲಾ ಪಂಚಾಯತ್ ತಾಂತ್ರಿಕ ಉಪವಿಭಾಗಾದ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿ ಹೊಂದಿದ ಶಿವಹಾರೈಸಿದರು.ವರಿಗೆ ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದವರು.

ಪ್ರಾರಂಭದಲ್ಲಿ ಉಪನ್ಯಾಸಕ ನಾಗಿ ವೃತ್ತಿ ಜೀವನ ಪ್ರಾರಂಭಿಸಿದ ನಾನು 2003 ರಲ್ಲಿ ಸಹಾಯಕ ಅಭಿಯಂತರನಾಗಿ ಇಂಜಿನಿಯರ್ ವೃತ್ತಿಗೆ ಸೇರಿ ಸಾಕಷ್ಟು ಕಡೆ ಕೆಲಸ ಮಾಡಿ ನಂತರ 2022 ರ ಡಿಸೆಂಬರ್ 16 ರಲ್ಲಿ ಇಲ್ಲಿನ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಅಧಿಕಾರ ವಹಿಸಿ ಕೊಂಡೆ ನಂತರ ನಾನು ಇದರ ಜೊತೆಗೆ ಚಾಮರಾಜನಗರ ಪ್ರಭಾರ ಕಾರ್ಯಪಾಲಕ ಅಭಿಯಂತರರಾಗಿ ಹಾಗೂ ಕೊಳ್ಳೇಗಾಲ ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿಯಾಗಿ ಒಟ್ಟೊಟ್ಟಿಗೆ ಕರ್ತವ್ಯ ನಿರ್ವಹಿಸಸಿದೆ ಎಂದು ಹೇಳಿದರು.

ಅದರಲ್ಲೂ ಕೊಳ್ಳೇಗಾಲ ತಾ. ಪಂ. ಕಾರ್ಯ ನಿರ್ವಹಣಾಧಿಕಾರಿಯಾಗಿ ಕೆಲಸ ಮಾಡುವಾಗ ಸಾಕಷ್ಟು ಸಮಸ್ಯೆ ಯಾಗುತ್ತಿತ್ತು ಎಂದು ಸ್ಮರಿಸಿದರು‌

ಕೊಳ್ಳೇಗಾಲ ತಾಂತ್ರಿಕ ಉಪವಿಭಾಗ ಕೊಳ್ಳೇಗಾಲ ಮತ್ತು ಹನೂರು 2 ತಾಲ್ಲೂಕುಗಳಲ್ಲಿ ಕೆಲಸ ಮಾಡ ಬೇಕಿತ್ತು. ಕೊನೆಯ ದಿನಗಳಲ್ಲಿ ಬೇರೆಕಡೆ ವರ್ಗಾವಣೆ ಮಾಡಿಸಿ ಕೊಳ್ಳಬೇಕೆಂಬ ಮನಸ್ಥಿತಿ ಇತ್ತು. ಆದರೆ ಪರಿಸ್ಥಿತಿ ಬಹಳ ಕಷ್ಟ ಇತ್ತು ಹೇಗೋ ಕೆಲಸ ಮಾಡಿ ಈಗ ನಿವೃತ್ತಿ ಹೊಂದಿದ್ದೇನೆ ಎಂದ ಅವರು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ ಸಾರ್ವಜನಿಕರ ಕೆಲಸಕ್ಕೆ ನ್ಯಾಯ ಒದಗಿಸಿ ಎಂದು ಸಿಬ್ಬಂದಿ ವರ್ಗಕ್ಕೆ ಮನವಿ ಮಾಡಿದರು.

ಯಳಂದೂರು ಸಹಾಯಕ ಕಾರ್ಯಪಾಲಕ ಅಭಿಯಂತರ ಸಂತೋಷ್ ಕುಮಾರ್ ಮಾತನಾಡಿ ನನಗೆ ಎಇಇ ಯಾಗಿ ಬಡ್ತಿ ಹೊಂದುವ ವೇಳೆ ಸಿ ಆರ್ ಸಿ ಬರೆದು ಕೊಡುವಂತೆ ಶಿವಪ್ರಕಾಶ್ ಅವರನ್ನು ಕೇಳಿಕೊಂಡಾಗ ಅವರು ಒಳ್ಳೆಯ ಮನಸ್ಸಿನಿಂದ ಬರೆದು ಕೊಟ್ಟರು, ಇದರಿಂದಾಗಿ ನನಗೆ ಇಂದು ಬಡ್ತಿ ಸಿಕ್ಕಿದೆ ಅವರ ಒಳ್ಳೆಯ ಮನಸ್ಥಿತಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು

ಸಮಾರಂಭದಲ್ಲಿ ನಿವೃತ್ತ ಇಂಜಿನಿಯರ್ ಆನಂದ್ ಮೂರ್ತಿ, ಯಳಂದೂರು ಎಇಇ ಸಂತೋಷ್ ಕುಮಾರ್, ಮಹದೇವ, ತಾ.ಪಂ. ನರೇಗಾ ಸಹಾಯಕ ನಿರ್ದೇಶಕ ಗೋಪಾಲ್ ಕೃಷ್ಣ, ಸಿದ್ದಪ್ಪಾಜಿಗೌಡ, ಸಿದ್ದಯ್ಯ ವಿವಿಧ ಇಲಾಖೆ ಅಧಿಕಾರಿಗಳು ವಿವಿಧ ಸಂಘಟನೆಗಳ ಮುಂಖಂಡರು ಹಾಗೂ ಕಾರ್ಯಕರ್ತರು ಹಾಜರಿದ್ದರು.

ಅಧಿಕಾರಿಗಳ ನಂಬಿಕೆಗೆ ಚ್ಯುತಿ ಬಾರದ ಹಾಗೆ‌ ಕೆಲಸ ನಿರ್ವಹಿಸಿ-ಶಿವಪ್ರಕಾಶ್ Read More

ಜಾಗೇರಿಯಲ್ಲಿ ಜನರ ಕುಂದು ಕೊರತೆ ಆಲಿಸಿದ ಶಾಸಕ ಎಂ.ಆರ್ ಮಂಜುನಾಥ್

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ತಾಲೂಕಿನ ಜಾಗೇರಿಯ ವಿವಿಧ ಗ್ರಾಮಗಳಿಗೆ ಬೇಟಿ ನೀಡಿದ ಶಾಸಕ ಎಂ.ಆರ್ ಮಂಜುನಾಥ್ ಅವರು ಗ್ರಾಮಗಳ ಜನರ ಕುಂದು ಕೊರತೆ ಆಲಿಸಿದರು.

ಇಲ್ಲಿನ ಪಾಸ್ಕಲ್ ನಗರದ ಅಲ್ಪಸಂಖ್ಯಾತ ಬೀದಿಯಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಈ ವೇಳೆ ಗ್ರಾಮಸ್ಥರು ಗ್ರಾಮದಲ್ಲಿ ಮನೆ ನಿರ್ಮಾಣ ಮಾಡಲು ಹಾಗೂ ಕಾಡಂಚಿನ ಪ್ರದೇಶದ ವ್ಯಾಪ್ತಿಯಲ್ಲಿ ಉಳುಮೆ ಮಾಡಲು ಅರಣ್ಯ ಇಲಾಖೆಯ ಅಧಿಕಾರಿಗೆ ಬಿಡುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಈಗಾಗಲೇ ಸರ್ವೆ ನಡೆಯುತ್ತಿದ್ದು ಇದು ಮುಗಿದ ನಂತರ ಸಂಪೂರ್ಣ ಮಾಹಿತಿ ಸಿಗಲಿದೆ, ತದನಂತರ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಂತರ ಶಾಸಕರು ಇಲ್ಲಿನ ಶಾಂತಿ ನಗರಕ್ಕೆ ಬೇಟಿ ನೀಡಿದಾಗ ಜನರು ಗ್ರಾಮದಲ್ಲಿ ಕುಡಿಯುವ ನೀರು,ರಸ್ತೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳ ಕೊರತೆಗಳಿದ್ದು ಕೂಡಲೇ ಬಗೆಹರಿಸುವಂತೆ ಶಾಸಕರಲ್ಲಿ ಮನವಿ ನೀಡಿದರು.

ಶಾಂತಿ ನಗರದ ಜನತೆ ಹೆಚ್ಚಾಗಿ ಹೈನುಗಾರಿಕೆಯಲ್ಲಿ ತೊಡಗಿದ್ದು, ಮುಖ್ಯವಾಗಿ ಪಶುವೈದ್ಯ ಆಸ್ಪತ್ರೆ,ಅಂಗನವಾಡಿ, ವಿದ್ಯುತ್, ಕುಡಿಯುವ ನೀರಿನ ತೊಂಬೆ ನಿರ್ಮಾಣ ಹಾಗೂ ಶಾಲಾ ಕಾಂಪೌಂಡ್ ನಿರ್ಮಾಣ ಮಾಡಲು ಮನವಿ ಮಾಡಿದರು.

ಜನರ ಕುಂದು ಕೊರತೆ ಆಲಿಸಿ ಮಾತನಾಡಿದ ಶಾಸಕ ಎಂ.ಆರ್ ಮಂಜುನಾಥ್ ಅವರು, ಜಾಗೇರಿಯ ರೈತರಿಗೆ ಯಾವುದೇ ರೀತಿಯಲ್ಲೂ ತೊಂದರೆ ಯಾಗಲು ಬಿಡುವುದಿಲ್ಲ, ಇಲ್ಲೇ ವಾಸವಾಗಿದ್ದರು ಅವರಿಗೆ ಆಸ್ತಿ ಹಾಗೂ ಮನೆಗಳನ್ನು ಕಟ್ಟಲು ಅವಕಾಶ ನೀಡದ, ಕಾಡಂಚಿನ ಪ್ರದೇಶದ ಭಾಗದಲ್ಲಿ ಒತ್ತುವರಿ ತೆರವು ಹೆಸರಿನಲ್ಲಿ ತೊಂದರೆ ಕೂಡುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮವಹಿಸಲಾಗವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಸತ್ತೇಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಲ್ಲೇಶ್, ಫಾದರ್ ನೆಹರು ಮುತ್ತು, ಡಿ ಆರ್ ಹಾರ್ಡವೇರ್ ಸೀನಪ್ಪ, ಸಿಂಗಾನಲ್ಲೂರು ರಾಜಣ್ಣ, ಪ್ರಭುಸ್ವಾಮಿ, ವಿಜಯ್ ಕುಮಾರ್, ಪನ್ನಾಡಿ, ತಂಗವೇಲು ಮತ್ತಿತರರು ಹಾಜರಿದ್ದರು.

ಜಾಗೇರಿಯಲ್ಲಿ ಜನರ ಕುಂದು ಕೊರತೆ ಆಲಿಸಿದ ಶಾಸಕ ಎಂ.ಆರ್ ಮಂಜುನಾಥ್ Read More

ಸತ್ತೇಗಾಲ, ಸುತ್ತಮುತ್ತಲಿನ ಗ್ರಾಮಸ್ಥರಿಂದಜುಲೈ 4 ರಂದು ರಸ್ತೆ ತಡೆ ಚಳವಳಿ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ:‌ ಅಪಘಾತ ತಡೆ ಮತ್ತು ಸುರಕ್ಷತೆಗೆ ಆಗ್ರಹಿಸಿ ಜುಲೈ 4 ರಂದು ರಸ್ತೆ ತಡೆ ಚಳವಳಿ ಹಮ್ಮಿಕೊಳ್ಳಲು ಸತ್ತೇಗಾಲ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ತೀರ್ಮಾನಿಸಿದ್ದಾರೆ.

ಸತ್ತೇಗಾಲ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯಲ್ಲಿ ನಿರಂತರವಾಗಿ ಸಂಭವಿಸುತ್ತಿರುವ ಅಪಘಾತಗಳಿಂದ ಸಾವು-ನೋವುಗಳು ಹೆಚ್ಚಾಗುತ್ತಿದ್ದರೂ ಜನಪ್ರತಿನಿಧಿಗಳು ಅಧಿಕಾರಿಗಳ ನಡೆಯನ್ನು ಸ್ಥಳೀಯ ಜನರು ತೀವ್ರವಾಗಿ ಖಂಡಿಸಿದ್ದಾರೆ.

ಶುಕ್ರವಾರ ಸತ್ತೇಗಾಲ ಗ್ರಾಮದ ನಟರಾಜು ಮತ್ತು ಮಾಯಪ್ಪ ಅಲಿಯಾಸ್ ಮಹೇಶ್ ಎಂಬ ರೈತರು ತಮ್ಮ ಜಮೀನಿಗೆ ಬೈಕ್‌ನಲ್ಲಿ ತೆರಳುವಾಗ ಎದುರಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದು ಇಬ್ಬರೂ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದರು.

ಈ ಇಬ್ಬರು ರೈತರ ಸಾವಿನಿಂದ ಕಂಗಾಲಾಗಿರುವ ಸತ್ತೇಗಾಲ, ಎಡಕುರಿಯಾ, ಅಗ್ರಹಾರ, ಹ್ಯಾಂಡ್ ಪೋಸ್ಟ್, ಶಿವನಸಮುದ್ರ, ಜಾಗೇರಿ ಹಾಗೂ ಇನ್ನಿತರ ಗ್ರಾಮಗಳ ಮುಖಂಡರು ಗ್ರಾಮಪಂಚಾಯಿತಿ ಅಧ್ಯಕ್ಷರು, ಸದಸ್ಯರು, ರೈತ ಸಂಘದ ಪದಾಧಿಕಾರಿಗಳು ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಮುಖಂಡರು ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬೈಪಾಸ್ ರಸ್ತೆಯಲ್ಲಿ ಸೇರಿದ್ದ ಸಭೆಯಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿ,ಜುಲೈ 4 ರಂದು ರಸ್ತೆ ತಡೆ ಮಾಡಲು ತೀರ್ಮಾನ ಕೈಗೊಂಡರು.

ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಗ್ರಾಮಗಳ ಮುಖಂಡರು ಮಾತನಾಡಿ ಬೈಪಾಸ್ ರಸ್ತೆಯಲ್ಲಿ ಪ್ರತಿದಿನ ಒಂದಲ್ಲಾ ಒಂದು ಸಾವು-ನೋವುಗಳು ಸಂಭವಿಸುತ್ತಿದೆ, ಈ ಸ್ಥಳಗಳಲ್ಲಿ ಮೇಲುಸೇತುವೆ ನಿರ್ಮಿಸಿ ಕೊಡಬೇಕು ಹಾಗೂ ಬೈಪಾಸ್‌ನಲ್ಲಿ ಸಾರಿಗೆ ಬಸ್ಸುಗಳು ತೆರಳುತ್ತಿದ್ದು ಪ್ರಯಾಣಿಕರು ಪರಿತಪಿಸುವಂತಾಗಿದೆ. ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿ ವಾಹನಗಳ ಚಾಲಕರು ಅತೀ ವೇಗವಾಗಿ ಚಾಲನೆ ಮಾಡುವುದರಿಂದ ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸಿ ಸಾರ್ವಜನಿಕರು ಮತ್ತು ವಾಹನ ಸವಾರರು ದಾರುಣವಾಗಿ ಸಾವನ್ನಪ್ಪುತ್ತಿದ್ದಾರೆ. ಅಪಘಾತಗಳು ಸಂಭವಿಸುತ್ತಿರುವ ಸ್ಥಳಗಳಾದ ಹ್ಯಾಂಡ್ ಪೋಸ್ಟ್ ಬೈಪಾಸ್ ಗ್ರಾಮದ ರೈತರು ಜಮೀನುಗಳಿಗೆ ತೆರಳುವ ರಸ್ತೆ, ಸತ್ತೇಗಾಲದಿಂದ ಉಗನಿಯಾ ಗ್ರಾಮಕ್ಕೆ ತೆರಳುವ ರಸ್ತೆ, ಕೊಳ್ಳೇಗಾಲ-ಸತ್ತೇಗಾಲ ಈ ರಸ್ತೆಗಳಲ್ಲಿ ಮೇಲುಸೇತುವೆ ನಿರ್ಮಿಸಿ ಅಪಘಾತಗಳನ್ನು ತಡೆಯಿರಿ ಎಂದು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಡಿವೈಎಸ್‌ಪಿ, ಗ್ರಾಮಾಂತರ ಪೊಲೀಸ್ ಠಾಣೆಯ ಎಸೈ ಹಾಗೂ ರಸ್ತೆಸಾರಿಗೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರು ಕ್ರಮ ಕೊಂಡಿಲ್ಲ,ಇದರ ಬಗ್ಗೆ ವಿಷಯ ತಿಳಿದರೂ ಶಾಸಕ ಎಂ. ಆರ್. ಮಂಜುನಾಥ್, ಸಂಸದ ಸುನೀಲ್‌ ಬೋಸ್, ಮಾಜಿ ಶಾಸಕ ಆರ್.ನರೇಂದ್ರ ಇವರುಗಳು ಸಹ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸತ್ತೇಗಾಲ ಹಾಗೂ ಹ್ಯಾಂಡ್ ಪೋಸ್ಟ್ ಗ್ರಾಮದೊಳಗೆ ಬಸ್ಸುಗಳು ಸಂಚಾರ ಮಾಡಿಸುವಂತೆ ಒತ್ತಾಯಿಸಿ ಜುಲೈ 4 ರಂದು ಸತ್ತೇಗಾಲ ಹ್ಯಾಂಡ್ ಪೋಸ್ಟ್‌ನ ಬೈಪಾಸ್ ರಸ್ತೆಯಲ್ಲಿ ರಸ್ತೆ ಚಳವಳಿ ಮಾಡಲು ಜೂನ್ 30 ರಂದು ಉಪವಿಭಾಗಾಧಿಕಾರಿ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗೆ ಮನವಿಪತ್ರ ನೀಡಿ ಬಳಿಕ ಕರಪತ್ರವನ್ನು ಎಲ್ಲಾ ಸಮುದಾಯದ ಮನೆ ಮನೆಗಳಿಗೆ ಹಂಚಲು ಸಭೆಯಲ್ಲಿ ಒಮ್ಮತದಿಂದ ತೀರ್ಮಾನ ಕೈಗೊಂಡರು.

ಹನೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮುಕುಂದವರ್ಮ, ಗ್ರಾಂ.ಪಂ. ಅಧ್ಯಕ್ಷ ಮಲ್ಲೇಶ್, ಸದಸ್ಯರು ಗಳಾದ ಗೋವಿಂದ, ನವೀನ್‌ ಕುಮಾ‌ರ್, ಆರೋಗ್ಯಸ್ವಾಮಿ, ಡಾ.ಬಿ. ಆರ್. ಅಂಬೇಡ್ಕರ್ ಸತ್ಯಾದ್ರಿ ಯುವಕ ಸಂಘದ ಅಧ್ಯಕ್ಷ ಅವಿನಾಶ್, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಮಾದೇಗೌಡ, ತಾಪಂ ಮಾಜಿ ಸದಸ್ಯ ಅರುಣ್, ರೈತ ಸಂಘದ ಬಾಸ್ಕರ್, ಮಾದಪ್ಪ, ಕುಮಾರ, ಚಾರ್ಲಿಸ್, ಮುಖಂ ಡರುಗಳಾದ ಹ್ಯಾಂಡ್‌ ಪೋಸ್ಟ್ ಮಾದೇವು, ರವಿಶಂಕರ್, ಟಿ.ಮಹದೇವಯ್ಯ, ನಾರಾಯಣಸ್ವಾಮಿ, ಕಾಂತರಾಜು, ನಂಜುಂಡಮೂರ್ತಿ, ಗುಲ್ಲಾ ಶಿವಣ್ಣೆ ಗೌಡ, ಬಸವಣ್ಣ, ಸಿದ್ದರಾಜು, ಎಡಕುರಿಯಾ ಬಸವರಾಜು, ನಂಜುಂಡ, ಶಾಂತರಾಜು, ಪ್ರಭು, ಶಿವಲಿಂಗ, ರಾಜಶೇಖರ್, ಸಂಜು, ಬಸವ, ಶಾಮಿಯಾನ ನಾಗರಾಜು, ಬಾಟಲ್ ನಾಗರಾಜು, ಶಿವನಸಮುದ್ರದ ಚಿಕರಾವಳಯ್ಯ, ಕಾಳಯ್ಯ, ಚಂದ್ರಶೇಖರ್, ನಾಗೇಂದ್ರ, ಪುಟ್ಟರಾಚ, ರಕ್ಷಣಾ ವೇದಿಕೆಯ ಪದಾಧಿಕಾರಿಗಳು, ಡಾ.ಬಿ.ಆರ್ ಅಂಬೇಡ್ಕರ್ ಸತ್ಯಾದ್ರಿ ಯುವಕ ಸಂಘದ ಪದಾಧಿಕಾರಿಗಳು, ಹಲವಾರು ಮುಖಂಡರು ಮತ್ತು ಯುವಕರು ಹಾಜರಿದ್ದರು.

ಸತ್ತೇಗಾಲ, ಸುತ್ತಮುತ್ತಲಿನ ಗ್ರಾಮಸ್ಥರಿಂದಜುಲೈ 4 ರಂದು ರಸ್ತೆ ತಡೆ ಚಳವಳಿ Read More

ಕೊಳ್ಳೇಗಾಲ, ಪಾಳ್ಯ ಮಾರ್ಗವಾಗಿ ಹನೂರಿಗೆ ಬಸ್ : ಮಂಜುನಾಥ್ ಚಾಲನೆ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಕೊಳ್ಳೇಗಾಲ ಪಟ್ಟಣದಿಂದ ತಾಲ್ಲೂಕಿನ ಪಾಳ್ಯ ಮಾರ್ಗವಾಗಿ ಕೊತ್ತನೂರು, ಚಿಕ್ಕಲ್ಲೂರು, ತೆಳ್ಳನೂರು, ಬಂಡಳ್ಳಿ, ಹನೂರು ಪಟ್ಟಣಕ್ಕೆ ಬಂದು ಹೋಗುವ ಬಸ್ ಗೆ ಶಾಸಕ ಎಂ.ಆರ್. ಮಂಜುನಾಥ್ ಅವರು ಚಿಕ್ಕಲೂರಿನಲ್ಲಿ ಚಾಲನೆ ನೀಡಿದರು.

ಈ‌ ವೇಳೆ ಮಾತನಾಡಿದ ಅವರು ಬಸ್ ಬೇಕೆಂಬುದು ಈ ಭಾಗದ ಜನರ ಬಹು ದಿನಗಳ ಬೇಡಿಕೆ ಆಗಿತ್ತು,ಆದರೆ ಈಗ ಚಾಲನೆ ನೀಡಲಾಗುತ್ತಿದೆ. ಇದನ್ನು ಈ ಭಾಗದ ಮುಖಂಡ ತೆಳ್ಳನೂರು ಪುಟ್ಟಮಾದಯ್ಯನವರ ಸ್ಮರಣಾರ್ಥಕವಾಗಿ ಅರ್ಪಿಸುತ್ತಿದ್ದೇನೆ ಎಂದು ತಿಳಿಸಿದರು.

ಈ ಮಾರ್ಗದ ಬಸ್ ಗಾಗಿ ಅವರು ಸಾಕಷ್ಟು ಮನವಿ ಮಾಡಿದ್ದರು ಆದರೆ ಅವರು ಈಗ ನಮ್ಮೊಡನೆ ಇಲ್ಲ ಕಳೆದ 20 ದಿನಗಳ ಹಿಂದಷ್ಟೇ ಅವರು ತೀರಿಕೊಂಡಿದ್ದಾರೆ ಎಂದು ಸ್ಮರಿಸಿದರು.

ಮುಖ್ಯವಾಗಿ ಶಾಲಾ ಮಕ್ಕಳು ದಿನಗೂಲಿ ಕೆಲಸಕ್ಕೆ ಹೋಗುವವರು ಹಾಗೂ ನೌಕರರಿಗೆ ಸಕಾಲಕ್ಕೆ ಕೆಲಸ ಕಾರ್ಯಗಳಿಗೆ ಹಾಜರಾಗಲು ಸಾರಿಗೆ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ. ಈ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೂತನ ಬಸ್ ಕಾರ್ಯನಿರ್ವಹಿಸಲಿದೆ ಎಂದ ಹೇಳಿದರು.

ತಾಲೂಕಿನ ಪ್ರಸಿದ್ಧ ಧಾರ್ಮಿಕ ಪುಣ್ಯಕ್ಷೇತ್ರ ಚಿಕ್ಕಲ್ಲೂರು ದೇವಸ್ಥಾನಕ್ಕೆ ಈಗ ಹನೂರು ಹಾಗೂ ಕೊಳ್ಳೇಗಾಲ 2 ಮಾರ್ಗದಿಂದಲೂ ಭಕ್ತರು ಬಂದು ಹೋಗಲು ಈ ಮಾರ್ಗದ ಬಸ್ ಅನುಕೂಲವಾಗಲಿದೆ ಎಂದು ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾಮೀಣ ಭಾಗದ ಹಲವು ಕಡೆಗಳಲ್ಲಿ ಇನ್ನು ಸಾರಿಗೆ ಸೌಲಭ್ಯ ವ್ಯವಸ್ಥೆ ಸಮರ್ಪಕವಾಗಿ ಆಗಿಲ್ಲ. ಮುಂದಿನ ದಿನಗಳಲ್ಲಿ ಪ್ರತಿ ಹಳ್ಳಿಗಳಲ್ಲಿ ಸರ್ಕಾರಿ ಬಸ್ ಸಂಚರಿಸುವ ವ್ಯವಸ್ಥೆ ಮಾಡಲು ಚಿಂತನೆ ಮಾಡಲಾಗಿದೆ. ಅದಕ್ಕಾಗಿ ಸಂಬಂಧಿಸಿದ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದು ಸಾರಿಗೆ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಇದೇ ವೇಳೆ ಶಾಸಕ ಮಂಜುನಾಥ್ ಸರ್ಕಾರಿ ಬಸ್ ನಲ್ಲಿ ಜನ ಸಾಮಾನ್ಯರ ಜೊತೆ ಸಂಚಾರ ಮಾಡುವ ಮೂಲಕ ಸರಳತೆ ಮೆರೆದರು.

ಈ ಸಂದರ್ಭದಲ್ಲಿ ಮುಖಂಡರಾದ ಬಂಡಳ್ಳಿ ಜೆಸ್ಸಿಂಗ್ ಪಾಷ, ವಿಜಯಕುಮಾರ್, ಸಿಂಗಾನಲ್ಲೂರು ರಾಜಣ್ಣ, ಚಿಕ್ಕಲ್ಲೂರು ಪಿ.ಡಿ.ಒ ಶಿವಕುಮಾರ್, ಡಿಪೋ ಮ್ಯಾನೇಜರ್ ಬೋಗನಾಯಕ್, ಚರಣ್ ಗ್ರಾಮಸ್ಥರು ಹಾಗೂ ಇನ್ನಿತರ ಮುಖಂಡರುಗಳು ಹಾಜರಿದ್ದರು.

ಕೊಳ್ಳೇಗಾಲ, ಪಾಳ್ಯ ಮಾರ್ಗವಾಗಿ ಹನೂರಿಗೆ ಬಸ್ : ಮಂಜುನಾಥ್ ಚಾಲನೆ Read More

ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

ಕೊಳ್ಳೇಗಾಲ: ಜಮೀನು ವಿಚಾರಕ್ಕೆ ವ್ಯಕ್ತಿಯ ತಲೆಗೆ ಗೂಟದಿಂದ ಹೊಡೆದು ಕೊಲೆ ಮಾಡಿದ್ದ ಆರೋಪಿಗೆ ಇಲ್ಲಿನ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಹನೂರು ತಾಲ್ಲೂಕಿನ ಜಿ.ಕೆ.ಹೊಸೂರು ಗ್ರಾಮದ ಆರೋಪಿ ರವಿ ಶಿಕ್ಷೆಗೊಳ್ಳಲಾದ ಕೊಲೆ ಆರೋಪಿ.

ಕಳೆದ 2022 ರ ಮಾ.23 ರಂದು ಅದೇ ಗ್ರಾಮದ ತನ್ನ ಸಂಬಂಧಿ ಮನೋಜ್ ಎಂಬಾತನನ್ನು ಜಮೀನಿನ ವಿಚಾರಕ್ಕೆ ಈತ ಕೊಲೆ ಮಾಡಿದ್ದ.

ಮೃತನ ತಾಯಿ ಚಿಕ್ಕಮಣಿ ಕುಟುಂಬದವರಿಗೂ ಪಿತ್ರಾರ್ಜಿತವಾಗಿ ಬಂದ ಜಮೀನಿಗೆ ಸಂಬಂಧಿಸಿದಂತೆ ಭಾಗಾಂಶದ ವಿಚಾರದಲ್ಲಿ ವೈಮನಸ್ಸಿದ್ದು ಜಿ.ಕೆ.ಹೊಸೂರು ಗ್ರಾಮದ ಸರ್ವೆ ನಂ.183/ಸಿ & 183/14 ಸಂಬಂಧಿಸಿದಂತೆ ಆರೋಪಿ ರವಿ ಮತ್ತು ಚಿಕ್ಕಮಣಿ ನಡುವೆ ಜಮೀನಿನ ಸ್ವಾಧೀನತೆ ಬಗ್ಗೆ ತಕರಾರಿತ್ತು.

ಈ ವಿಚಾರಕ್ಕೆ ಕಳೆದ 2022 ರ ಮಾ.23 ರಂದು ರವಿ ಸರ್ವೆ ಮಾಡಿಸಿದ್ದು ಸರ್ವೆಯಲ್ಲಿ ಗಡಿ ಗುರುತುಗಳನ್ನು ತೋರಿಸಿದ್ದರೂ ರವಿ ಅದಕ್ಕೆ ಒಪ್ಪದೆ ಒತ್ತುವರಿ ಮಾಡಿಕೊಂಡಿದ್ದ.

ಸಂಜೆ 4 ಗಂಟೆ ಸಮಯದಲ್ಲಕ 1ನೇ ಆರೋಪಿ ಸರ್ವೆ 183/1ನ್ನು ಉಳುಮೆ ಮಾಡಿಸುತ್ತಿದ್ದಾಗ ಮೃತ ಮನೋಜ್ ಮತ್ತು ಆತನ ತಾಯಿ ಚಿಕ್ಕಮಣಿ ಜಮೀನಿನ ಬಳಿ ಹೋಗಿ ತಡೆದಿದ್ದಾರೆ.

ಆಗ ಆರೋಪಿಗಳಾದ ರವಿ, ಶ್ರೀಕಂಠಮೂರ್ತಿ,ಗಿರೀಶ, ಶಶಿಕಲಾ, ಮಹೇಶ, ಮಾದೇವಪ್ಪ ಇವರುಗಳು ಗುಂಪು ಕಟ್ಟಿಕೊಂಡು 1ನೇ ಆರೋಪಿ ರವಿಯು ಮನೋಜನ ಕುತ್ತಿಗೆ ಪಟ್ಟಿ ಹಿಡಿದು ಅವನನ್ನು ಕೊಲ್ಲುವ ಉದ್ದೇಶದಿಂದ ಅಲ್ಲಿ ಬಿದ್ದಿದ್ದ ಗೂಟದ ದೊಣ್ಣೆಯನ್ನು ತೆಗೆದುಕೊಂಡು ಮನೋಜನ ತಲೆಯ ಮೇಲೆ 3-4 ಬಾರಿ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.

ತಕ್ಷಣ ಮನೋಜ್ ರಕ್ತಸಿಕ್ತವಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದು ಆತನನ್ನು ಹೋಲಿಕ್ರಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿತ್ತು,ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ಆತ ಮೃತಪಟ್ಟಿದ್ದ.

ಈ ಸಂಬಂಧ ಮೃತನ ತಾಯಿ ಚಿಕ್ಕಮಣಿ ಅವರು ಹನೂರು ಠಾಣೆಗೆ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಅಂದಿನ ಪಿಐ ಸಂತೋಷ್ ಕಶ್ಯಪ್ ಅವರು, ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ಅಂತಿಮ ವರದಿಯನ್ನು ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯವು ಕೊಲೆ ಮಾಡಿರುವುದು ಸಾಕ್ಷ್ಯಾಧಾರಗಳಿಂದ ದೃಢಪಟ್ಟಿರುವುದರಿಂದ 1ನೇ ಆರೋಪಿ ರವಿಗೆ ಜೀವಾವಧಿ ಕಠಿಣ ಶಿಕ್ಷೆ ಮತ್ತು 5000 ರೂ. ದಂಡ ಪಾವತಿಸುವಂತೆ ಶಿಕ್ಷೆ ವಿಧಿಸಿ ಉಳಿದ ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ.

ಅಪರ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರಾದ ಟಿ. ಸಿ. ಶ್ರೀಕಾಂತ್‌ ರವರು ತೀರ್ಪು ನೀಡಿ ಶಿಕ್ಷೆ ವಿಧಿಸಿದ್ದು ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಬಿ.ಪಿ. ಮಂಜುನಾಥ್, ಸಿ.ಬಿ. ಗಿರೀಶ್ ವಿಚಾರಣೆ ನಡೆಸಿ ದಾದ ಮಂಡಿಸಿದ್ದರು.

ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ Read More

ಐದು ಹುಲಿ ಸಾವಿನ ಪ್ರಕರಣ: ಆರೋಪಿಗಳಿಗೆ 3 ದಿನ ನ್ಯಾಯಾಂಗ ಬಂಧನ

(ವರದಿ: ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಮಲೈಮಹದೇಶ್ವರ ಅರಣ್ಯ ವನ್ಯಜೀವಿ ವಿಭಾಗದಲ್ಲಿ ನಡೆದ ಐದು ಹುಲಿ ಸಾವಿನ ಪ್ರಕರಣದ ಮೂವರು ಆರೋಪಿಗಳನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಬಳಿಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಯಿತು.

ಹನೂರು ತಾಲ್ಲೂಕಿನ ಮಿಣ್ಯಂ ವ್ಯಾಪ್ತಿಯ ಕೊಪ್ಪ ಗ್ರಾಮದ ಮಾಧುರಾಜ್, ನಾಗರಾಜ್, ಕೊನ್ನಪ್ಪ ಎಂಬ ಆರೋಪಿಗಳನ್ನು
ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕಾವ್ಯಶ್ರೀ ಅವರ ಮುಂದೆ ಹಾಜರು ಪಡಿಸಲಾಯಿತು.

ಈ ವೇಳೆ ನ್ಯಾಯಾಧೀಶರು ಆರೋಪಿಗಳನ್ನು ಮೂರು ದಿನಗಳ ಕಾಲ (ಸೋಮವಾರ ತನಕ) ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.

ಡಿಸಿಎಫ್ ಚಕ್ರಪಾಣಿ, ಎಸಿಎಫ್ ಗಜಾನನ ಹೆಗಡೆ ಹಾಗೂ ಹೂಗ್ಯಂ ಅರಣ್ಯ ವಲಯಾಧಿಕಾರಿ ಮಾದೇಶ್ ತಂಡದೊಂದಿಗೆ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.

ಐದು ಹುಲಿ ಸಾವಿನ ಪ್ರಕರಣ: ಆರೋಪಿಗಳಿಗೆ 3 ದಿನ ನ್ಯಾಯಾಂಗ ಬಂಧನ Read More

ಪತ್ರಕರ್ತರ ಬೇಡಿಕೆಗಳು ಹಂತ,ಹಂತವಾಗಿ ಈಡೇರಲಿವೆ:ಕೆ.ವೆಂಕಟೇಶ್

(ವರದಿ:ಸಿದ್ದರಾಜು ಕೊಳ್ಳೇಗಾಲ)

ಕೊಳ್ಳೇಗಾಲ: ಸಿಎಂ ಸಿದ್ದರಾಮಯ್ಯ ಪತ್ರಕರ್ತರ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು ಮುಂದಿನ ದಿನಗಳಲ್ಲಿ ಪ್ರಮುಖ ಬೇಡಿಕೆಗಳನ್ನು ಈಡೇರಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಭರವಸೆ ನೀಡಿದರು.

ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ಭವನದ ಹೊರ ಆವರಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ, ತಾಲ್ಲೂಕು ಪರ್ತಕರ್ತರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರವಧಿಯಲ್ಲಿ ಪತ್ರಕರ್ತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮನವಿ ಈಡೇರಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಪತ್ರಕರ್ತರ ಬೇಡಿಕೆಗಳನ್ನು ಹಂತ,ಹಂತವಾಗಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲೆಯು ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟ ಕಟ್ಟಿಕೊಂಡಿದೆ, ಹಿಂದುಳಿದ ಜಿಲ್ಲೆಯ ಹಣೆಪಟ್ಟಿ ತೆಗೆಯಲು ಮಹದೇಶ್ವರಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಲಾಯಿತು. ಸುಮಾರು 3ಸಾವಿರ ಕೋಟಿಗೂ ಹೆಚ್ಚು ಅನುದಾನದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿವೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಬಂದು 75 ವರ್ಷಗಳಾದರು ಜಿಲ್ಲೆಯ ಅನೇಕ ಹಾಡಿಗಳಿಗೆ ವಿದ್ಯುತ್, ರಸ್ತೆ ಇರಲಿಲ್ಲ. ಆದರೆ ಈಗ ಅನೇಕ ಹಾಡಿಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಲಾಗಿದೆ ಜಿಲ್ಲೆಯ ಅಭಿವೃದ್ಧಿಗೆ ಕ್ರಮವಹಿಸಲಾಗಿದೆ ಎಂದು ಹೇಳಿದರು.

ಹಿಂದುಳಿದ ಜಿಲ್ಲೆ ಎಂಬ ಹಣೆ ಪಟ್ಟಿ ತೆಗೆಯಲು ಸರ್ಕಾರ ಈಚೆಗೆ ಚಾಮರಾಜನಗರ ಜಿಲ್ಲೆಯಲ್ಲಿ ಸಚಿವ ಸಂಪುಟ ಸಭೆ ನಡೆಸಿ 3 ಸಾವಿರ ಕೋಟಿಗೂ ಹೆಚ್ಚು ಅನುದಾನ ಘೋಷಿಸಿದೆ‌ ಹಾಡಿಗಳು ಕೂಡಾ ಅಭಿವೃದ್ಧಿ ಕಾಣುತ್ತಿವೆ ಎಂದು ಸಚಿವ‌ ವೆಂಕಟೇಶ್ ತಿಳಿಸಿದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಮಾತನಾಡಿ, ಪರೀಕ್ಷಾ ಫಲಿತಾಂಶವೇ ಪ್ರತಿಭೆಯ ಮಾನದಂಡವಲ್ಲ; ಜ್ಞಾನ, ಸಾಧನೆ ಹಾಗೂ ಪರಿಶ್ರಮ ನಿಜವಾದ ಸಾಧನೆಯಾಗಿದೆ ಎಂದು ಹೇಳಿದರು.

ಶಿಕ್ಷಣ ವ್ಯವಸ್ಥೆ ದುಬಾರಿಯಾಗಿದ್ದು ಪೋಷಕರು ಮಕ್ಕಳ ಶಿಕ್ಷಣದ ಬಗ್ಗೆ ಸದಾ ಯೋಚಿಸಬೇಕಾದ ಪರಿಸ್ಥಿತಿ ಇದೆ, ಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕಾಗಿ ಎಲ್ಲ ವಿಚಾರಗಳಲ್ಲೂ ರಾಜಿ ಮಾಡಿಕೊಳ್ಳಬೇಕಾದ ಸಂದಿಗ್ಧತೆಯಲ್ಲಿ ಪೋಷಕರು ಸಿಲುಕಿದ್ದಾರೆ. ಮಕ್ಕಳು ಶೈಕ್ಷಣಿಕವಾಗಿ ನಿರೀಕ್ಷೆಗೂ ಮೀರಿ ಸಾಧನೆ ಮಾಡಿದಾಗ ಪೋಷಕರ ಶ್ರಮಕ್ಕೆ ಬೆಲೆ ಸಿಗುತ್ತದೆ ಎಂದು ತಿಳಿಸಿದರು.

ಪ್ರತಿಭಾ ಪುರಸ್ಕಾರ ಕಣ್ಣುಂಬಿಕೊಳ್ಳುವಾಗ ಆಗುವ ಸಮಾಧಾನ, ಸಂತೋಷ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಮಕ್ಕಳು ಪರಿಶ್ರಮದಿಂದ ಕಲಿತರೆ ಪೋಷಕರ ಮೇಲಿನ ಆರ್ಥಿಕ ಹೊರೆ ತಗ್ಗಲಿದೆ ಎಂದು ಹೇಳಿದರು.

ಎಸ್‌ಎಸ್‌ಎಲ್‌ಸಿ, ಪಿಯುಸಿ ದಾಟಿದ ನಂತರ ವಿದ್ಯಾರ್ಥಿಗಳ ಪರಿಶ್ರಮ, ಜ್ಞಾನದ ದಾಹ, ಕಲಿಕೆಯ ಹಸಿವು ಹೆಚ್ಚಾಗಬೇಕು. ಮಕ್ಕಳ ಏಳೆಗೆಗೆ ಬದುಕನ್ನೇ ಮೀಸಲಿರಿಸಿದ ಪೋಷಕರನ್ನು ಖುಷಿಯಾಗಿಡಬೇಕು, ಮಕ್ಕಳು ಪೋಷಕರನ್ನು ವೃದ್ದಾಶ್ರಮಗಳಿಗೆ ದೂಡದೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು.

ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ಸೌಲಭ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 1 ರಂದು ಚಾಲನೆ ನೀಡಲಿದ್ದಾರೆ ಪತ್ರಕರ್ತರಿಗೆ 5 ಲಕ್ಷದವರೆಗೆ ಆರೋಗ್ಯ ಚಿಕಿತ್ಸಾ ವೆಚ್ಚ ಭರಿಸುವ ಆರೋಗ್ಯ ಸಂಜೀವಿನಿ ಕಾರ್ಡ್ ಸೌಲಭ್ಯಕ್ಕೂ ಅಂದು ಸಿ.ಎಂ ಚಾಲನೆ ನೀಡಲಿದ್ದಾರೆ ಎಂದು ಪ್ರಭಾಕರ್ ಮಾಹಿತಿ ನೀಡಿದರು.

ಜಿಲ್ಲಾ ಪತ್ರಕರ್ತರ ಭವನ ಮತ್ತು ತಾಲೂಕು ಪತ್ರಕರ್ತರ ಭವನದ ನಿರ್ಮಾಣಕ್ಕೂ ಸರ್ಕಾರದ ಜೊತೆ ಮಾತನಾಡಿ ಆಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪತ್ರಕರ್ತರ ವೃತ್ತಿ ಹಾಗೂ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿದೆ. ಉಳಿದ ಬೇಡಿಕೆಗಳು ಶೀಘ್ರ ಈಡೇರಲಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರಕರ್ತರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುತ್ತಿದ್ದಾರೆ ಎಂದು ಕೆ.ವಿ.ಪ್ರಭಾಕರ್ ಹೇಳಿದರು.

ಪ್ರತಿಭೆ ಅಂದರೆ ಕೇವಲ ಪರೀಕ್ಷಾ ಫಲಿತಾಂಶ ಅಲ್ಲ, ಜ್ಞಾನ ಮತ್ತು ನಿರಂತರ ಸಾಧನೆ ಮತ್ತು ನೀವು ಪಟ್ಟ ಪರಿಶ್ರಮ ಮೂರು ಬೆರೆತ ಮಿಶ್ರಣ. ಇಂದು ಪ್ರತಿಭಾ ಪುರಸ್ಕಾರ ಸ್ವೀಕರಿಸುತ್ತಿರುವ ಎಲ್ಲ ಮಕ್ಕಳಿಗೂ ಎಲ್ಲ ಪೋಷಕರ ಪರವಾಗಿ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸತತ ಐದನೇ ವರ್ಷ ಈ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಆಯೋಚಿಸಿದೆ. ಇದಕ್ಕಾಗಿ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮತ್ತು ಪದಾಧಿಕಾರಿಗಳನ್ನು ನಾನು ಅಭಿನಂದಿಸುತ್ತೇನೆ ಎಂದು ಪ್ರಭಾಕರ್ ಹೇಳಿದರು.

100ಕ್ಕೂ ಹೆಚ್ಚು ಮಕ್ಕಳಿಗೆ ಪ್ರತಿಭಾ ಪುರಸ್ಕಾರ: ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ 100ಕ್ಕೂ ಹೆಚ್ಚು ಮಕ್ಕಳಿಗೆ ನೆನಪಿನ ಕಾಣಿಕೆ, ಬ್ಯಾಗ್, ಪ್ರಮಾಣಪತ್ರ, ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಶಾಸಕರಾದ ಎಂ.ಆರ್. ಮಂಜುನಾಥ್, ಎ.ಆರ್.ಕೃಷ್ಣಮೂರ್ತಿ ಮಾತನಾಡಿದರು.

ಜಿಲ್ಲಾಧಿಕಾರಿ ಶಿಲ್ಪಾನಾಗ್, ಎಸ್‌ಪಿ ಬಿ.ಟಿ.ಕವಿತಾ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ್, ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ಅಜ್ಜಮಾಡ ರಮೇಶ್ ಕುಟ್ಟಪ್ಪ, ಭವಾನಿಸಿಂಗ್, ಕಾರ್ಯದರ್ಶಿಗಳಾದ ಮತ್ತಿಕೆರೆ ಜಯರಾಮ, ಸೋಮಶೇಖ‌ರ್ ಕೆರೆಗೋಡು, ನಿಂಗಪ್ಪ ಚಾವಡಿ,ಖಜಾಂಚಿ ವಾಸುದೇವ ಹೊಳ್ಳ, ಜಿಲ್ಲಾ ಸಂಘದ ಅಧ್ಯಕ್ಷ ದೇವರಾಜ ಕಪ್ಪಸೋಗೆ, ಪ್ರಧಾನ ಕಾರ್ಯದರ್ಶಿ ಎಸ್.ಪ್ರಸಾದ್ ಲಕ್ಕೂರು, ಹನೂರು ತಾಲ್ಲೂಕು ಅಧ್ಯಕ್ಷ ಮಹದೇಶ್, ಮಲೆ-ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು, ಬಿಜೆಪಿ ಮುಖಂಡ ನಿಶಾಂತ್ ಮತ್ತಿತರರು ಉಪಸ್ಥಿತರಿದ್ದರು.

ಪತ್ರಕರ್ತರ ಬೇಡಿಕೆಗಳು ಹಂತ,ಹಂತವಾಗಿ ಈಡೇರಲಿವೆ:ಕೆ.ವೆಂಕಟೇಶ್ Read More