ಕೊಳ್ಳೇಗಾಲ: ಪತ್ನಿ ಶೀಲ ಶಂಕಿಸಿ ಕತ್ತು ಹಿಸುಕಿ ಹತ್ಯೆ ಮಾಡಿದ್ದ ಪತಿಗೆ ಕೊಳ್ಳೇಗಾಲ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಸೆರೆವಾಸ ಹಾಗೂ 5 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಪಟ್ಟಣದ ಮುಡಿಗುಂಡ ಬಡಾವಣೆ ನಿವಾಸಿ ಕೊಪ್ಪಳಿ ನಾಯಕ ಎಂಬುವರ ಮಗ ಕುಮಾರ್ (55) ಶಿಕ್ಷೆಗೆ ಒಳಗಾದ ವ್ಯಕ್ತಿ.
ಈತ 10 ವರ್ಷಗಳ ಹಿಂದೆ ಮುಳ್ಳೂರು ಗ್ರಾಮದ ಕಾಮರಾಜ ನಾಯಕನ ಮಗಳು ಚಿನ್ನಮ್ಮಳನ್ನು ಮದುವೆಯಾಗಿದ್ದ. ಕೆಲ ವರ್ಷಗಳ ನಂತರ ಪತ್ನಿಯ ಶೀಲ ಶಂಕಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ.
ಇದರಿಂದ ಬೇಸರಗೊಂಡ ಚಿನ್ನಮ್ಮ ತವರು ಮನೆ ಸೇರಿದ್ದಳು. ಈ ನಡುವೆ 2022 ಮಾ.31 ರಂದು ಕುಮಾರ್ ಮುಳ್ಳೂರು ಗ್ರಾಮಕ್ಕೆ ತೆರಳಿ ಯುಗಾದಿ ಹಬ್ಬ ಮಾಡೋಣ ಬಾ ಎಂದು ಹೇಳಿದ್ದಲ್ಲದೆ ಪತ್ನಿ, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಚಿನ್ನಮ್ಮಳ ತಂದೆ ಕಾಮರಾಜ ನಾಯಕ ಮತ್ತು ತಾಯಿ ರಾಜಮ್ಮ ಅವರಿಗೆ ಭರವಸೆ ನೀಡಿ ಮುಡಿಗುಂಡದ ಮನೆಗೆ ಕರೆ ತಂದಿದ್ದ.
ಆದರೂ ತನ್ನ ಚಾಳಿ ಬಿಡದ ಕುಮಾರ್, 2022 ಏ.1 ರಂದು ಬೆಳಗಿನ ಜಾವ 4.15 ರಲ್ಲಿ ಗಲಾಟೆ ಮಾಡಿ ಚಿನ್ನಮ್ಮಳ ಕಪಾಳಕ್ಕೆ ಹೊಡೆದು, ಕತ್ತು ಹಿಸುಕಿ ಕೊಲೆ ಮಾಡಿದ್ದ. ಈ ದೃಶ್ಯ ನೋಡಿ ಕೂಗಿಕೊಂಡ ಮಗ ದರ್ಶನ್ ನನ್ನು ಕೊಠಡಿಗೆ ಕೂಡಿ ಹಾಕಿದ್ದನು.
ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪಟ್ಟಣ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.
ಅಂದಿನ ಸಿಪಿಐ ಶಿವರಾಜ್ ಆರ್.ಮುಧೋಳ್ ಪ್ರಕರಣದ ಕುರಿತು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಟಿ.ಸಿ.ಶ್ರೀಕಾಂತ್ ಅವರು, ಕುಮಾರ್ ಮಾಡಿ ರುವ ಅಪರಾಧಗಳು ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಸೆರೆವಾಸ ಹಾಗೂ 5 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಅಲ್ಲದೆ, ಕುಮಾರ್ ಪುತ್ರ ದರ್ಶನ್ ಮೈನರ್ ಆಗಿದ್ದು, ಆತನ ಪೋಷಣೆಗೆ ಕಾನೂನು ಸೇವಾ ಪ್ರಾಧಿಕಾರ ದಿಂದ ಸೂಕ್ತ ಪರಿಹಾರಕ್ಕೆ ಆದೇಶಿಸಿದ್ದಾರೆ.
ಈ ಪ್ರಕರಣ ಕುರಿತು ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಪಿ.ಮಂಜುನಾಥ, ಸಿ.ಬಿ.ಗಿರೀಶ್ ಅವರು ವಾದ ಮಂಡಿಸಿದ್ದರು.
ಕೊಳ್ಳೇಗಾಲ: ತಾಲ್ಲೂಕಿನ ಸತ್ತೇಗಾಲ ಗ್ರಾಮ ಪಂಚಾಯಿತಿಯಲ್ಲಿ 2024-25 ನೇ ಸಾಲಿನ ಮೊದಲ ಹಂತದ ನರೇಗಾ ಯೋಜನೆ ಹಾಗೂ 15 ನೇ ಹಣಕಾಸು ಯೋಜನೆ, ರಾಜ್ಯ ಹಣಕಾಸು ಆಯೋಗದ ಸಾಮಾಜಿಕ ಪರಿಶೋಧನೆ ಸಭೆ ನಡೆಯಿತು.
ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಅಧ್ಯಕ್ಷ ಮಲ್ಲೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನರೇಗಾ ಯೋಜನೆಯ ಅನುದಾನದಲ್ಲಿ ಏ.1, 2024 ರಿಂದ ಮಾ.31, 2025 ರ ವರೆಗೆ ನಡೆಸಲಾಗಿರುವ ಕಾಮಗಾರಿಗಳು ಹಾಗೂ 15 ನೇ ಹಣಕಾಸು ಯೋಜನೆ, ರಾಜ್ಯ ಹಣಕಾಸು ಆಯೋಗದ ಅನುದಾನದಲ್ಲಿ 2020 – 2021 ನೇ ಸಾಲಿನಿಂದ 2024-2025 ನೇ ಸಾಲಿನ ವರೆಗೆ ನಡೆಸಲಾಗಿರುವ ಕಾಮಗಾರಿಗಳ ವಿವರವನ್ನು ನರೇಗಾ ಲೆಕ್ಕಪರಿಶೋಧನಾ ಸಂಯೋಜಕ ಸಿದ್ದಪ್ಪಾಜಿ ಅವರು ಸಾರ್ವಜನಿಕರ ಸಮ್ಮುಖದಲ್ಲಿ ಸಭೆಗೆ ಮಂಡಿಸಿದರು.
ನರೇಗಾ ಯೋಜನೆಯಡಿ ಗ್ರಾ.ಪಂ ವತಿಯಿಂದ 91ಕಾಮಗಾರಿಗಳು ಹಾಗೂ ಕಾಮಗಾರಿ ಅನುಷ್ಠಾನ ಇಲಾಖೆಗಳಿಂದ 11 ಕಾಮಗಾರಿಗಳು ಸೇರಿದಂತೆ ಒಟ್ಟು 112 ಕಾಮಗಾರಿಗಳನ್ನು ನಡೆಸಲಾಗಿದೆ. ಈ ಕಾಮಗಾರಿಗಳಿಗೆ ಒಟ್ಟು 8137684 ರೂ.ಗಳು ಖರ್ಚಾಗಿದ್ದು ಅದರಲ್ಲಿ ಕೂಲಿ ಮೊತ್ತ 7845165 ರೂ., ಸಾಮಾಗ್ರಿ ಮೊತ್ತ 292519 ರೂ.ಆಗಿದೆ. ದನದ ಕೊಟ್ಟಿಗೆನಿರ್ಮಾಣ ಕಾಮಗಾರಿ, ವಿವಿಧ ವಸತಿ ಯೋಜನೆಗಳಡಿ ಮನೆಗಳ ನಿರ್ಮಾಣ ಕಾಮಗಾರಿ, ಕಾಲುವೆಗಳ ಹೂಳು ತೆಗೆಸುವ ಕಾಮಗಾರಿ, ಮಳೆ ನೀರು ಕೊಯ್ಲು ನಿರ್ಮಾಣ ಸೇರಿದಂತೆ ಇನ್ನಿತರ ಕಾಮಗಾರಿಗಳು ನಡೆಸಲಾಗಿದ್ದು, ಈ ಕಾಮಗಾರಿ ಕೂಲಿ ಮೊತ್ತ 7433741 ರೂ., ಸಾಮಾಗ್ರಿ ವೆಚ್ಚ 98363 ರೂ. ಒಟ್ಟು 7532104 ರೂ. ವೆಚ್ಚವಾಗಿದೆ.
ಕಾಮಗಾರಿ ಅನುಷ್ಠಾನ ಇಲಾಖೆಗಳಾದ ಅರಣ್ಯ ಇಲಾಖೆ, 7 ಕಾಮಗಾರಿಗಳು, ತೋಟಗಾರಿಕೆ ಇಲಾಖೆ 3 ಕಾಮಗಾರಿಗಳು, ರೇಷ್ಮೆಇಲಾಖೆಯ 1 ಕಾಮಗಾರಿ ಸೇರಿ ಒಟ್ಟು 11 ಕಾಮಗಾರಿಗಳನ್ನು ನಡೆಸಲಾಗಿದ್ದು ಅರಣ್ಯ ಇಲಾಖೆ ಗ್ರಾ.ಪಂ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡಿರುವ ನೆಡುತೋಪು ನಿರ್ವಹಣೆ ಹಾಗೂ ವಿವಿಧೆಡೆ ಹೊಸದಾಗಿ ಸಸಿ ನೆಡುವ ಕಾಮಗಾರಿಗಳಿಗೆ ಬಳಕೆ ಯಾಗಿರುವ ಕೂಲಿ ಮೊತ್ತ 205514 ರೂ., ಸಾಮಾಗ್ರಿ ವೆಚ್ಚ 194156 ರೂ. ಒಟ್ಟು 399670 ರೂ. ಗಳು, ತೋಟಗಾರಿಕೆ ಇಲಾಖೆ ಸತ್ತೇಗಾಲ ಗ್ರಾಮದ ನಂಜುಂಡಯ್ಯ ಬಿನ್ ಲೇ.ಕೆಂಚಯ್ಯ ವೆಂಕಟೇಶ್ ಬಿನ್ ಲೇ. ವೆಂಕಟಯ್ಯ ಹಾಗೂ ಸಿದ್ದರಾಜು ಬಿನ್ ಸಿದ್ದನಾಯಕ ಅವರ ರೈತರ ಜಮೀನುಗಳಲ್ಲಿ ನಡೆಸಿರುವ ಅಂಗಾಂಶ ಬಾಳೆ ಪ್ರದೇಶ ವಿಸ್ತರಣೆ ಕಾಮಗಾರಿಯ ಕೂಲಿ ಮೊತ್ತ 169265 ರೂ., ರೇಷ್ಮೆಇಲಾಖೆ ಸತ್ತೇಗಾಲ ಗ್ರಾಮದ ಗೌರಮ್ಮ ಕೋಂ ಚಿಕ್ಕೆಂಚೇಗೌಡರ ಜಮೀನಿನಲ್ಲಿ ನಡೆಸಿರುವ ಹಿಪ್ಪುನೇರಳೆ ನಾಟಿ ಕಾಮಗಾರಿ ಕೂಲಿ 36645 ರೂ.ಗಳನ್ನು ಬಳಸಿಕೊಳ್ಳಲಾಗಿದೆ.
15 ನೆ ಹಣಕಾಸು ಯೋಜನೆ ಅನುದಾನದಲ್ಲಿ ಗ್ರಾಂ, ಪಂ. ತಾ. ಪಂ, ಜಿ.ಪಂ ಗಳ ವತಿಯಿಂದ ಕಾಮಗಾರಿಗಳನ್ನು ನಡೆಸಲಾಗಿದ್ದು ಅದರಲ್ಲಿ ಬಹುತೇಕ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಶಾಲೆಗಳ ದುರಸ್ಥಿ, ಸುತ್ತುಗೋಡೆಗಳ ನಿರ್ಮಾಣ, ಅಂಗನವಾಡಿಗಳ ದುರಸ್ಥಿ, ಚರಂಡಿ, ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಹಾಗೂ ಕುಡಿಯುವ ನೀರಿಗೆ ಕೊಳವೆ ಬಾವಿ ಕೊರೆಸುವುದು, ಪೈಪ್ ಲೈನ್, ವಿದ್ಯುತ್ ಬಿಲ್, ನೌಕರರ ವೇತನಕ್ಕಾಗಿ ಬಳಸಿಕೊಳ್ಳಲಾಗಿದೆ
ಗ್ರಾ. ಪಂ ಅನುಧಾನ 5136918 ರೂ.ಗಳು ತಾ. ಪಂ ಅನುಧಾನ 7825738 ರೂ. ಗಳು ಜಿ. ಪಂ ಅನುಧಾನ 42.55 ಲಕ್ಷ ರೂ.ಗಳು ಸೇರಿದಂತೆ ಒಟ್ಟು 13, 52.17 ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.
ಗ್ರಾ.ಪಂ. ನೋಡಲ್ ಅಧಿಕಾರಿ ಹಾಗೂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ ಮಾತನಾಡಿ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯಲ್ಲಿ ಹಲವಾರು ಉಪಯೋಗಗಳಿವೆ. ಕೇಂದ್ರ ಸರ್ಕಾರ ಗ್ರಾಮೀಣ ಭಾಗದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಅನುಷ್ಠಾನಕ್ಕೆ ತಂದು ಸಧ್ಯದ ಮಟ್ಟಿಗೆ ಈ ಯೋಜನೆಯಿಂದ ಬಡ ಜನರು ಆರ್ಥಿಕವಾಗಿ ಚೇತರಿಸಿ ಕೊಳ್ಳಲು ಅನುಕೂಲವಾಗಿದೆ. ಆದ್ದರಿಂದ ಸಾರ್ವಜನಿಕರು ಜಾಬ್ ಕಾರ್ಡ್ ಗಳನ್ನು ಮಾಡಿಸಿಕೊಂಡು ಪಂಚಾಯಿತಿಗೆ ಮುಂಚಿತವಾಗಿ ಕೆಲಸವನ್ನು ಕೇಳಿ ಅರ್ಜಿ ಸಲ್ಲಿಸಿ ಆಗತ್ಯವಾದ ಕೆಲಸಗಳನ್ನು ಮಾಡಿಸಿ ಕೂಲಿ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ ಯಾರಾದರೂ ಜಾಬ್ ಕಾರ್ಡ್ ಮಾಡಿಸಿಕೊಂಡಿಲ್ಲದಿದ್ದರೆ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಜಾಬ್ ಕಾರ್ಡ್ ಗಳನ್ನು ಮಾಡಿಸಿಕೊಂಡು ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಎಂ.ಎಸ್.ಸುವರ್ಣ, ಸದಸ್ಯರುಗಳಾದ ಮಂಟ್ಯಲಿಂಗ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜುನೇದ್ ಅಹಮದ್, ಕಾರ್ಯದರ್ಶಿ ಶಿವಪ್ರಸಾದ್ ಮತ್ತು ಸಿಬ್ಬಂದಿ ವರ್ಗ ಹಾಜರಿದ್ದರು.
ಕೊಳ್ಳೇಗಾಲ: ಆಯತಪ್ಪಿ ಬೈಕ್ ನಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಸತ್ತೇಗಾಲ ಗ್ರಾಮದ ಬೈಪಾಸ್ ನಲ್ಲಿ ನಡೆದಿದೆ.
ಹನೂರು ತಾಲ್ಲೂಕು ಮಲೆ ಮಾದೇಶ್ವರ ಬೆಟ್ಟದ ಆನೆಹೊಲ ಗ್ರಾಮದ ನಿವಾಸಿ ಶಿವರಾಜು (30) ಮೃತಪಟ್ಟ ದುರ್ದೈವಿ. ಹಿಂಬದಿ ಸವಾರ ರವಿಚಂದ್ರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರಿಬ್ಬರು ನೆನ್ನೆ ರಾತ್ರಿ ಮಳವಳ್ಳಿ ಕಡೆಯಿಂದ ಸತ್ತೇಗಾಲ ಮಾರ್ಗವಾಗಿ ಸ್ವ ಗ್ರಾಮಕ್ಕೆ ತೆರಳುತ್ತಿದ್ದಾಗ ಸತ್ತೇಗಾಲ ಹ್ಯಾಂಡ್ ಪೋಸ್ಟ್ ಬಳಿ ಬೈಪಾಸ್ ನಲ್ಲಿ ರಸ್ತೆ ಹಂಪ್ಸ್ ನಲ್ಲಿ ಬೈಕ್ ಆಯತಪ್ಪಿ ಪೊಲೀಸ್ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದು ಉರುಳಿದೆ.
ಶಿವರಾಜು ಸ್ಥಳದಲ್ಲಿ ಮೃತಪಟ್ಟಿದ್ದು, ರವಿಚಂದ್ರ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನು ನೋಡಿದ ದಾರಿಹೋಕರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ
ತಕ್ಷಣ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ,ಶಿವರಾಜು ಮೃತದೇಹವನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆ ಶವಗಾರಕ್ಕೆ ಸಾಗಿಸಿ, ರವಿಚಂದ್ರನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಸಂಬಂಧ ಮೃತ ಶಿವರಾಜುವಿನ ಪತ್ನಿ ನೀಡಿರುವ ದೂರಿನ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೊಲೀಸರಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕೊಳ್ಳೇಗಾಲ: ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ವಾರ್ತಾಭಾರತಿ ಪತ್ರಿಕೆ ತಾಲೂಕು ವರದಿಗಾರ ಹಾಗೂ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಂ.ಮರಿಸ್ವಾಮಿ ಆಯ್ಕೆಗೊಂಡಿದ್ದಾರೆ.
ತಾಲ್ಲೂಕು ಸಂಘದಿಂದ ಕೊಡಮಾಡುವ ಪ್ರಶಸ್ತಿಗೆ ಪತ್ರಕರ್ತರಾದ ಎನ್.ಸುರೇಶ್, ಚಿಕ್ಕಮಾಳಿಗೆ, ಎನ್.ನಟರಾಜು, ಪಿ.ಜಗದೀಶ್ ಅವರು ಆಯ್ಕೆಗೊಂಡಿದ್ದಾರೆ.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪಟ್ಟಣದ ಪಿಡಬ್ಲ್ಯೂಡಿ ಅತಿಥಿಗೃಹದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ವಾರ್ಷಿಕ ಪ್ರಶಸ್ತಿಗೆ ಪತ್ರಕರ್ತರನ್ನು ಆಯ್ಕೆ ಮಾಡುವ ಸಂಬಂಧ ತುರ್ತು ಸಭೆಯನ್ನು ಕರೆಯಲಾಗಿತ್ತು.
ಸಭೆಯು ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದೇವರಾಜು ಕಪ್ಪಸೋಗೆ ಮತ್ತು ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಗೂಳಿಪುರ ನಂದೀಶ್ ಅವರ ಜಂಟಿ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ವೇಳೆ ವರದಿಗಾರ ಎಂ.ಮರಿಸ್ವಾಮಿ ಅವರು ಜಿಲ್ಲಾ ವಾರ್ಷಿಕ ಪ್ರಶಸ್ತಿಗೆ ಆಯ್ಕೆಗೊಂಡರು.
ಜು.20 ರಂದು ಚಾಮರಾಜನಗರ ವರ್ತಕರ ಭವನದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಇವರನ್ನೊಳಗೊಂಡಂತೆ ಚಾಮರಾಜನಗರ ಜಿಲ್ಲೆಯ ಐದು ತಾಲೂಕಿನಿಂದಲೂ ತಲಾ ಒಬ್ಬ ಪತ್ರಕರ್ತರನ್ನು ಜಿಲ್ಲಾ ಸಂಘ ಸನ್ಮಾನಿಸಿ ಗೌರವಿಸಲಿದೆ.
ಜುಲೈ ಕೊನೆ ವಾರದಲ್ಲಿ ಕೊಳ್ಳೇಗಾಲ ತಾಲ್ಲೂಕು ಸಂಘದ ನೇತೃತ್ವದಲ್ಲಿ ಪಟ್ಟಣದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆಯಲ್ಲಿ ಕೊಡಮಾಡುವ ತಾಲೂಕು ವಾರ್ಷಿಕ ಪ್ರಶಸ್ತಿಗೆ ನಿಂಪುವಾರ್ತೆ ಪತ್ರಿಕೆಯ ಎನ್.ಸುರೇಶ್, ಪ್ರತಿನಿಧಿ ಪತ್ರಿಕೆಯ ಚಿಕ್ಕಮಾಳಿಗೆ, ರಣಕಹಳೆ ಪತ್ರಿಕೆಯ ಎನ್.ನಟರಾಜು, ನಿಜದನಿ ಪತ್ರಿಕೆಯ ಪಿ.ಜಗದೀಶ್ ಅವರು ಆಯ್ಕೆ ಮಾಡಲಾಗಿದೆ.
ಸಭೆಯಲ್ಲಿ ಜಿಲ್ಲಾ ಸಂಘದ ಕಾರ್ಯದರ್ಶಿ ಡಿ.ನಟರಾಜು, ತಾಲೂಕು ಸಂಘದ ಅಧ್ಯಕ್ಷ ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ಪವನ್ ಕುಮಾರ್, ಸದಸ್ಯರಾದ ಎನ್. ನಾಗೇಂದ್ರಸ್ವಾಮಿ, ಎಸ್.ರಾಜಶೇಖರ್, ಕುಮಾರಸ್ವಾಮಿ, ಮಹೇಶ್, ಸಾಗರ್, ವಸಂತ್ ಕುಮಾರ್, ಕಾರ್ತಿಕ್, ನಿಂಗರಾಜು, ಶಿವಕುಮಾರ್, ಶಂಕರ್, ಕುಮಾರ್, ಸುನಿಲ್, ಸ್ಯಾಮುವೆಲ್, ಗಿರೀಶ್ ಮತ್ತಿತರ ಸದಸ್ಯರು ಹಾಜರಿದ್ದರು.
ಕೊಳ್ಳೇಗಾಲ: ತಾಲ್ಲೂಕಿನ ಸಿದ್ದಯ್ಯನಪುರ ಹಾಗೂ ತಿಮ್ಮರಾಜೀಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಸುಮಾರು 1.20 ಕೋಟಿ ರೂ. ವೆಚ್ಚದ ವಿವಿದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಗುದ್ದಲಿಪೂಜೆ ನೆರವೇರಿಸಿದರು.
ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದಲ್ಲಿ ಅಲ್ಪಸಂಖ್ಯಾತರ ಇಲಾಖೆಯ ಅನುದಾನ 50 ಲಕ್ಷ ರೂ ವೆಚ್ಚದಲ್ಲಿ ಅರುಣೋದಯ ಚರ್ಚ್ ನ ಮುಂದುವರೆದ ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು 2008 ರಲ್ಲಿ ನಾನು ಭೇಟಿ ಕೊಟ್ಟಿದ್ದಾಗ ಅರುಣೋದಯ ಚರ್ಚ್ ಮಟ್ಟಾಳೆ ಶೆಡ್ ನಲ್ಲಿ ಸೇವಾಕಾರ್ಯಗಳು ನಡೆಯುತ್ತಿದ್ದವು, ಈ ಚರ್ಚ್ ಗೆ ಅನುದಾನ ನೀಡಿ ಅಭಿವೃದ್ಧಿಪಡಿಸಬೇಕೆಂದು ಆಗಲೇ ಅಂದುಕೊಂಡಿದ್ದೆ ಎಂದು ತಿಳಿಸಿದರು.
ಈಗ 2025 ಸುಮಾರು 17 ವರ್ಷಗಳ ನಂತರ ಇಲ್ಲಿಗೆ ಬಂದಿದ್ದೇನೆ ನಾನು ಶಾಸಕನಾಗಿ ಎರಡು ವರ್ಷ ತುಂಬಿದೆ, ಕ್ಷೇತ್ರಕ್ಕೆ 25 ಕೋಟಿ ಅನುದಾನ ನೀಡಿದ್ದು ಎಲ್ಲಾ ಜನಾಂಗ, ಎಲ್ಲಾ ಸಮುದಾಯದ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತದೆ.
50 ಲಕ್ಷ ರೂಗಳನ್ನು ಈ ಕೃಷ್ಣ ಮುಂದುವರಿದ ಕಾಮಗಾರಿಗೆ ನೀಡಿದ್ದೇನೆ. ನಿಮ್ಮ ಚರ್ಚ್ ಅಲ್ಲದೆ ಲೂಥರನ್ ಚರ್ಚ್ ಗೂ ಅನುದಾನ ನೀಡಿದ್ದೇವೆ. ನಾನು ಸಹ ಕ್ರೈಸ್ತ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆದವನು. ನಾನು ಬೆಂಗಳೂರಿನಲ್ಲಿ ಓದುವಾಗ ಕ್ರೈಸ್ತ ಮಿಷಿನರಿಯಲ್ಲಿ ಶಿಕ್ಷಣ ಪಡೆದಿದ್ದೇನೆ. ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ಸಹಕರಿಸುತ್ತೇನೆ ಎಂದು ತಿಳಿಸಿದರು.
ನಂತರ ಪ ಜಾತಿ ಬೀದಿಯಲ್ಲಿ 6 ಲಕ್ಷ ರೂ ಹಾಗೂ ಕುರುಬ ಸಮುದಾಯ ಬೀದಿಯಲ್ಲಿ 10 ಲಕ್ಷ ರೂ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ, ಲಕ್ಕರಸನಪಾಳ್ಯ ಗ್ರಾಮದಲ್ಲಿ 20 ಲಕ್ಷ ರೂ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿ, ತಿಮ್ಮರಾಜೀಪುರ ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಅನುದಾನ 20 ಲಕ್ಷ ರೂಗಳ ವೆಚ್ಚದಲ್ಲಿ ಬಸವ ಭವನ ನಿರ್ಮಾಣ ಕಾಮಗಾರಿ ಹಾಗೂ 10 ಲಕ್ಷ ರೂಗಳ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ, ಹಿತ್ತಲದೊಡ್ಡಿ ಗ್ರಾಮದಲ್ಲಿ 5 ಲಕ್ಷ ರೂ ವೆಚ್ಚದಲ್ಲಿ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ಈ ಅರುಣೋದಯ ಚರ್ಚ್ ಫಾದರ್ ಅಮಲ್ ದಾಸ್, ಧರ್ಮ ಪ್ರಚಾರಕ ಜೆರುಬಾಬಲ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕುಂತೂರು ರಾಜೇಂದ್ರ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ನಗರ ಸಭೆ ಮಾಜಿ ಅಧ್ಯಕ್ಷರುಗಳಾದ ಉಮೇಶ್ ಬಸ್ತಿಪುರ ಶಾಂತರಾಜು, ಸದಸ್ಯರುಗಳಾದ ಜಿ.ಎಂ.ಸುರೇಶ್, ಸ್ವಾಮಿನಂಜಪ್ಪ, ದೇವಾನಂದ್, ಇ.ಒ.ಗುರುಶಾಂತಪ್ಪ ಬೆಳ್ಳುಂಡಗಿ, ಕೆ.ಆರ್.ಐ.ಡಿ.ಎಲ್ ಸಹಾಯಕ ಕಾರ್ಯ ಪಾಲಕ ಅಭಿಯಂತರ ಚಿಕ್ಕಲಿಂಗಯ್ಯ, ಜೆಇ ಕಾರ್ತಿಕ್, ನಿರ್ಮಿತಿ ಕೇಂದ್ರದ ಜೆ.ಇ.ಪ್ರತಾಪ್, ಗುತ್ತಿಗೆದಾರ ಪುಟ್ಟಸ್ವಾಮಿ, ಸಿದ್ದಯ್ಯನಪುರ ಗ್ರಾ.ಪಂ.ಅಧ್ಯಕ್ಷೆ ಶಾಂತಮ್ಮ, ಸದಸ್ಯೆ ಲಕ್ಮೀ, ಪಿಡಿಒ ಶಿವಮೂರ್ತಿ, ತಿಮ್ಮರಾಜೀಪುರ ಗ್ರಾ.ಪಂ.ಅಧ್ಯಕ್ಷೆ ರಶ್ಮಿರಾಜು, ಉಪಾಧ್ಯಕ್ಷೆ ಸಹನಪ್ರಿಯ, ಸದಸ್ಯರಾದ ಕೆಂಪರಾಜು, ಕುಮಾರ್, ಫಿಲಿಪ್ ಮೋಹನ್ ಕುಮಾರ್, ತಾ.ಪಂ.ಮಾಜಿ ಸದಸ್ಯ ಮರಿಸ್ವಾಮಿ ಮತ್ತಿತರರು ಭಾಗವಹಿಸಿದ್ದರು.
ಕೊಳ್ಳೇಗಾಲ: ಕಳೆದ ವರ್ಷಗಳಿಂದ ಇಲ್ಲಿನ ಉಪ ವಿಭಾಗ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ರಾಮನಗರ ಜಿಲ್ಲಾಸ್ಪತ್ರೆಗೆ ವರ್ಗಾವಣೆ ಗೊಂಡ ಡಾ.ರಾಜಶೇಖರ್ ಹಾಗೂ ಮೂವರು ಸಿಬ್ಬಂದಿಗೆ ಆಸ್ಪತ್ರೆಯ ಸಿಬ್ಬಂದಿ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಿದರು.
ಈ ಸಂದರ್ಭದಲ್ಲಿ ಡಾ. ರಾಜಶೇಖರ್ ಅವರೂ ಭಾವುಕರಾಗಿ ಮಾತನಾಡಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 10 ವರ್ಷ 8 ತಿಂಗಳು ಸುಧೀರ್ಘ ಸೇವೆ ಸಲ್ಲಿಸಿದ ನಾನು 2015 ರ ಜುಲೈ 7 ರಲ್ಲಿ ವರ್ಗಾವಣೆಯಾಗಿ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ಬಂದು ಇಲ್ಲಿಯೂ ಸಹ 9 ವರ್ಷ 10 ತಿಂಗಳ ಕಾಲ ವೈದ್ಯನಾಗಿ ಆಡಳಿತ ಅಧಿಕಾರಿಯಾಗಿ ತೃಪ್ತಿಕರವಾಗಿ ಸುಧೀರ್ಘ ಸೇವೆ ಸಲ್ಲಿಸಿದ್ದೇನೆ ಎಂದು ತಿಳಿಸಿದರು.
ನಾನು ಇಲ್ಲಿನ ಸಿದ್ದಯ್ಯನಪುರ ಗ್ರಾಮದವನು. ಸ್ವಂತ ಊರಿನಲ್ಲಿ ಕೆಲಸ ಮಾಡುವುದು ಕಷ್ಟಕರ ಏಕೆಂದರೆ ಸಂಬಂಧಿಕರು ಸ್ನೇಹಿತರು ಸ್ಥಳೀಯರು ಎಲ್ಲರೂ ನಮ್ಮನ್ನು ಗಮನಿಸುತ್ತಿರುತ್ತಾರೆ. ಆದರೂ ನನ್ನ ಅವಧಿಯಲ್ಲಿ ಯಾವುದಕ್ಕೂ ಯಾರಿಗೂ ಚ್ಯುತಿ ಬಾರದ ಹಾಗೆ ಕೆಲಸ ಮಾಡಿದ್ದೇನೆ ನಾನು ಇಲ್ಲಿ ಉತ್ತಮ ವಾಗಿ ಕೆಲಸ ಮಾಡಲು ಪ್ರೇರಣೆ ನನ್ನ ಕುಟುಂಬ ವರ್ಗ ಎಂದು ಹೇಳಿದರು.
ಯಾವುದೇ ಆಡಳಿತ ಮಾಡಲು ಕೆಲವರನ್ನು ನೆನಪಿಸಿಕೊಳ್ಳಬೇಕು. ಕೋವಿಡ್ ಸಂದರ್ಭದಲ್ಲಿ ಇಲ್ಲಿನ ಆಡಳಿತ ವೈದ್ಯಾಧಿಕಾರಿ ಡಾ. ಗಣೇಶ್ ಕುಮಾರ್ ಅವರು ಮೃತಪಟ್ಟ ನಂತರ ಅಂದಿನ ಶಾಸಕರಾಗಿದ್ದ ಎನ್ ಮಹೇಶ್ ಅವರು ನನಗೆ ಆಸ್ಪತ್ರೆಯ ಆಡಳಿತ ಅಧಿಕಾರಿಯಾಗುವ ಅವಕಾಶ ನೀಡಿದರು. ಅದೇ ರೀತಿ ಹಾಲಿ ಶಾಸಕ ಎ. ಕೃಷ್ಣಮೂರ್ತಿ ಅವರು ನನಗೆ ಸಹಕಾರ ನೀಡಿದರು. ಹಾಗಾಗಿ ನನ್ನ ಅವಧಿಯಲ್ಲಿ ತಾಯಿ ಮಕ್ಕಳ ಆಸ್ಪತ್ರೆಗೆ ಆಕ್ಸಿಜನ್ ಪ್ಲಾಂಟ್ ಪ್ರಾರಂಭಿಸಿದೆ. ಇಲ್ಲಿ ಜಿಲ್ಲಾ ಆಸ್ಪತ್ರೆಯನ್ನು ಮೀರಿಸುವಷ್ಟು ಸುಮಾರು 70 ರೋಗಿಗಳಿಗೆ ಡಯಲಿಸಿಸ್ ಮಾಡಲಾಗುತ್ತಿದೆ. ಆಸ್ಪತ್ರೆಯ ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಸುಧಾರಣೆ ಮಾಡಲಾಗಿದೆ. ಆಸ್ಪತ್ರೆಯ ಸೇವೆಯನ್ನು ಮನಗೊಂಡ ಸರ್ಕಾರ ಈ ಆಸ್ಪತ್ರೆಯನ್ನು ಜಿಲ್ಲಾ ಮಟ್ಟದ ಆಸ್ಪತ್ರೆಯನ್ನಾಗಿ ಮೇಲ್ ದರ್ಜೆಗೇರಿಸಿದೆ. ಆಸ್ಪತ್ರೆಗೆ ಕೋವಿಡ್ ಗೂ ಮೊದಲು ಬರುತ್ತಿದ್ದ ಶೇಕಡ 70ರಷ್ಟು ಔಷಧಿಗಳು ಕಡಿಮೆಯಾಗಿದೆ, ನಿಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿ ಯಾರೇ ಬಂದರೂ ಉತ್ತಮ ಸೇವೆ ನೀಡಿ ಎಂದು ಸಿಬ್ಬಂದಿಗೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಆಸ್ಪತ್ರೆಯಿಂದ ವರ್ಗಾವಣೆಗೊಂಡ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರಾಜಶೇಖರ್ ಅವರಿಗೆ ಶಾಲು, ಹಾರ ಹಾಕಿ ಉಡುಗೊರೆ ನೀಡುವ ಮೂಲಕ ಸನ್ಮಾನಿಸಿ ಅಭಿನಂದಿಸಿ ಬೀಳ್ಕೊಡಲಾಯಿತು.
ಜೊತೆಗೆ ಆಸ್ಪತ್ರೆಯಿಂದ ತಲಕಾಡು ಆಸ್ಪತ್ರೆಗೆ ವರ್ಗಾವಣೆಯಾದ ನರ್ಸ್ ರೂಪಶಾಲಿನಿ, ಚಾ.ನಗರ ಆಸ್ಪತ್ರೆಗೆ ವರ್ಗವಾದ ನಿಂಗಮ್ಮ, ಮೈಸೂರು ಜಯಲಕ್ಷ್ಮೀ ಆಸ್ಪತ್ರೆಗೆ ವರ್ಗವಾದ ಗ್ರೂಪ್ ಡಿ ಸಿದ್ದಮ್ಮ ಅವರನ್ನೂ ಸನ್ಮಾನಿಸಿ ಅಭಿನಂದಿಸಲಾಯುತು.
ಇಲ್ಲಿಗೆ ಬೇರೆ ಕಡೆಯಿಂದ ವರ್ಗವಾಗಿ ಆಗಮಿಸಿದ್ದ ನರ್ಸ್ ಗಳಾದ ಬೆನಿಟ, ಶೃತಿ, ದಿವ್ಯಶ್ರೀ ಹಾಗೂ ಹೇಮಾವತಿ ಅವರಿಗೆ ಹೂ ನೀಡುವ ಮೂಲಕ ಸ್ವಾಗತಿಸಿದರು.
ಈ ಸಂಧರ್ಭದಲ್ಲಿ ಡಾ.ಕೆ.ಎಲ್.ಲೋಕೇಶ್ವರಿ, ಡಾ.ಎನ್.ಬಸವರಾಜು, ಡಾ.ಕೆ.ಬಿ.ಎನ್. ರಾಜು, ಡಾ.ಸುನಿತಾ, ಡಾ.ಟೀನಾ, ಡಾ.ಚೇತನ್, ಡಾ.ದಿಲೀಪ್, ಡಾ. ಕಾವ್ಯ ತಿಮ್ಮಯ್ಯ, ಡಾ.ಶೇಖರಾಜು, ಡಾ.ರಮೇಶ್ ಡಾ.ಶೃತಿ, ಡಾ.ಸುನೀತಾ, ನಿವೃತ್ತ ವೈದ್ಯಾಧಿಕಾರಿ ಡಾ.ರವಿಂದ್ರ, ಶುಶೂಷಕ ಸಿಬ್ಬಂದಿ ವರ್ಗ ಹಾಜರಿದ್ದರು.
ಕೊಳ್ಳೇಗಾಲ: ಪಟ್ಟಣದ ಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು.
ಶಾಸಕ ಎಂ.ಆರ್. ಮಂಜುನಾಥ್ ಅವರು ಹನೂರು ವಿಧಾನಸಭಾ ಕ್ಷೇತ್ರದಲ್ಲಿ ತಲೆ ದೂರಿರುವ ಕುಡಿಯುವ ನೀರಿನ ಜ್ವಲಂತ ಸಮಸ್ಯೆಗಳ ಕುರಿತು ಅಧಿಕಾರಿಗಳೊಡನೆ ಗಂಭೀರ ಚರ್ಚೆ ನಡೆಸಿದರು.
ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳು, ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸೂಪರಿಡೆಂಟ್ ಇಂಜಿನಿಯರ್ ವೀರಪ್ಪ, ಚಾ.ನಗರ ಇಇ ಜಗದೀಶ್, ಎಇಇ ಸುಧನ್ವ ನಾಗ್ ಅವರು ಮಾಹಿತಿ ನೀಡಿದರು.
ಕೊಳ್ಳೇಗಾಲ ಉಪವಿಭಾಗಾದ ಎಇಇ ಸುಧನ್ವ ನಾಗ್ ಮಾತನಾಡಿ ಹನೂರು ತಾಲ್ಲೂಕಿನ ರಾಮಾಪುರ, ಅಜ್ಜಿಪುರ, ಒಡಕೆಹಳ್ಳ,ದೊಮ್ಮನಗದ್ದೆ, ಬಂಡಳ್ಳಿ, ಎಂ.ಟಿ. ದೊಡ್ಡಿ ಕೆಂಪಯ್ಯನಹಟ್ಟಿ, ಗೊಲ್ಲರದಿಂಬ, ಸತ್ತಿಮಂಗಲ,ಪಳನಿಸ್ವಾಮಿ ದೊಡ್ಡಿ ಚಂಗವಾಡಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ, ಸಮಸ್ಯೆ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ದೊಡ್ಡಾಲತ್ತೂರು, ಎಲ್ಲೇಮಾಳ, ದಿನ್ನಳ್ಳಿ, ಹೂಗ್ಯಂ, ಕೂಡ್ಲೂರು, ಕೌದಳ್ಳಿ, ಕುರಟ್ಟಿಹೊಸೂರು, ದಂಟ್ಟಳ್ಳಿ, ಮಾರ್ಟಳ್ಳಿ ಪಾಲಿಮೇಡು, ದಾಂಡಮೇಡು, ರಾಮಾಪುರ ಮಾಮರದ ದೊಡ್ಡಿ, ಗೋಪಿಶೆಟ್ಟಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪೈಪ್ ಲೈನ್ ಮಾಡಲು ಅರಣ್ಯ ಇಲಾಖೆಯಿಂದ ಕಾನೂನು ತೊಡಕಿದೆ. ದೊಡ್ಡಾಲತ್ತೂರು ಗ್ರಾ.ಪಂ ವ್ಯಾಪ್ತಿಯ ಕೆಂಪಯ್ಯನಹಟ್ಟಿ, ವಡ್ಡರದೊಡ್ಡಿ ಗ್ರಾಮಗಳಲ್ಲಿ ಖಾಸಗಿ ಬೋರ್ ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ, ಮಾರ್ಟಳ್ಳಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಹರ್ ಗರ್ ಜಲ್ ಯೋಜನೆ ಯಡಿ ಕೊಳ್ಳೇಗಾಲ ತಾಲ್ಲೂಕಿನ 64, ಹನೂರು ತಾಲ್ಲೂಕಿನ 260 ಒಟ್ಟು131 ಹಳ್ಳಿಗಳಲ್ಲಿ ಕಾಮಗಾರಿಗಳನ್ನು ನಡೆಸಿ ಗ್ರಾ. ಪಂ ಗಳಿಗೆ ಹಸ್ತಾಂತರಿಸಲಾಗಿದೆ ಎಂದು ವಿವರಿಸಿದರು.
ಸಭೆಯ ನಂತರ ಸುದ್ದಿಗಾರರೊಡನೆ ಮಾತನಾಡಿದ ಶಾಸಕ ಎಂ.ಆರ್. ಮಂಜುನಾಥ್ ಅವರು,ಸಭೆಯಲ್ಲಿ ಮುಖ್ಯವಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಕೊಡಲು ಏನು ತೊಡಕಿತ್ತು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಅವರಿಂದ ಮಾಹಿತಿ ಪಡೆದುಕೊಂಡು ಚರ್ಚಿಸಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಆಗದಂತೆ ನಿರ್ಧಾರ ಕೈಗೊಳ್ಳಲಾಯಿತು ಎಂದು ತಿಳಿಸಿದರು.
ಅರಣ್ಯ ಇಲಾಖೆಯಿಂದ ತೊಡಕಾಗಿರುವ ಬಗ್ಗೆ ಗೊತ್ತಾಗಿದೆ,ಅದಕ್ಕೆ 2023 ರಲ್ಲೇ ಕ್ಲಿಯರೆನ್ಸ್ ನೀಡಲಾಗಿತ್ತು. ಇಲಾಖೆ ಮತ್ತೆ ಮತ್ತೆ ಏನು ಪ್ರಶ್ನೆ ಮಾಡುತ್ತಾ ಬಂದಿದೆ ಅದನ್ನೆಲ್ಲ ಸರಿಪಡಿಸಿ ಕೊಂಡು ಬರಲಾಗಿದೆ ಆದರೂ ಇದು ಹೀಗೆ ಹೋದರೆ ಬಹಳ ವಿಳಂಬವಾಗಲಿದೆ ಎಂದು ಬೇಸರಪಟ್ಟರು.
ಇದು ಕೇಂದ್ರ ಸರ್ಕಾರದ ಯೋಜನೆ, ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡರ ಸಮನ್ವಯತೆ ಬೇಕು ಆ ಕಾರಣಕ್ಕಾಗಿ ಈಗ ಎಲ್ಲಿ ಸಮಸ್ಯೆ ಇದೆ ಅದನ್ನು ಮತ್ತೆ ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ತ್ವರಿತಗೊಳಿಸಿ ತಕ್ಷಣ ಕ್ಲೀಯರೆನ್ಸ್ ತೆಗೆದುಕೊಳ್ಳಲು ಏನು ಬೇಕು ಎಂಬ ಬಗ್ಗೆ ಇವತ್ತು ಸಭೆ ಕರೆಯಲಾಯಿತು ಎಂದು ಶಾಸಕರು ಹೇಳಿದರು.
ತ್ವರಿತವಾಗಿ ನಮಗೇನಾದರು ಕ್ಲೀಯರೆನ್ಸ್ ಆದರೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಓವರ್ ಹಡ್ ಟ್ಯಾಂಕ್ ಅರಣ್ಯದೊಳಗೆ ಪೈಪ್ ಲೈನ್ ಹಾಕುವುದು ಅಗತ್ಯ ವಾಗಿದ್ದು ಅದರ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡಿದ್ದೇವೆ. ಆದಷ್ಟು ಬೇಗ ಅದಕ್ಕೆ ಕ್ಲಿಯರೆನ್ಸ್ ಕೊಡಲು ತೀರ್ಮಾನ ಮಾಡಲಾಗಿದೆ. ಕೆಲಸ ಮಾಡಲು ಏನು ಬೇಕು ಎಂಬ ಬಗ್ಗೆ ನಂತರ ತೀರ್ಮಾನವಾಗಲಿದೆ. ಯೋಜನೆಗೆ ಅರಣ್ಯ ಇಲಾಖೆಯಿಂದ ಶೇಕಡ 60 ರಿಂದ 70 ರಷ್ಟು ಕ್ಲಿಯರೆನ್ಸ್ ಸಿಕ್ಕಿದೆ ಉಳಿದದ್ದನು ಕ್ಲಿಯರ್ ಮಾಡಬೇಕಿದೆ ಎಂದು ತಿಳಿಸಿದರು.
ಇದನ್ನು 6 ರಿಂದ 8 ತಿಂಗಳಲ್ಲಿ ಪೂರ್ಣಗೊಳಿಸ ಬೇಕೆಂಬ ಯೋಜನೆಯಿದೆ, ಸಭೆಯಲ್ಲಿ ನಡೆದ ಚರ್ಚೆ ಫಲಪ್ರದವಾಗಲಿದೆ. ಸಮಸ್ಯೆ ಎಲ್ಲಿದೆ, ಅದನ್ನು ಬಗೆಹರಿಸುವುದು ಹೇಗೆ ಎಂಬ ಬಗ್ಗೆ ಚರ್ಚಿಸಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಶಾಸಕ ಮಂಜುನಾಥ್ ವಿವರಿಸಿದರು.
ಸಭೆಯಲ್ಲಿ ಚಾ.ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾರೋತ್, ಡಿಸಿಎಫ್ ಭಾಸ್ಕರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸೂಪರಿಡೆಂಟ್ ಇಂಜಿನಿಯರ್ ವೀರಪ್ಪ, ಚಾ.ನಗರ ಇಇ ಜಗದೀಶ್, ಎಇಇ ಸುಧನ್ವ ನಾಗ್, ಪಿ ಡಬ್ಲ್ಯೂ ಡಿ ಎಇಇ ಪುರುಷೋತ್ತಮ್, ಜೆಇ ಸುರೇಂದ್ರ, ಲ್ಯಾಂಡ್ ಆರ್ಮಿ ಇಂಜಿನಿಯರ್ ಕಾರ್ತಿಕ್, ಜೆಜೆಎಂ ಕಾಮಗಾರಿ ಗುತ್ತಿಗೆ ಪಡೆದಿರುವ ಸುಪ್ರದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪ್ರತೀಕ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕೊಳ್ಳೇಗಾಲ: ಕೊಳ್ಳೇಗಾಲ ಪಟ್ಟಣದ ಬಸ್ತೀಪುರ ಇತಿಹಾಸವುಳ್ಳ ಜೈನರ ಕ್ಷೇತ್ರ. ಕ್ರಿ. ಶ 7 ನೇ ಶತಮಾನದಲ್ಲಿ ಜೈನಮುನಿ ಶ್ರೀ ಪುಷ್ಪನಂದಿ ಮುನಿಗಳು ಮುಕ್ತಿಗಾಗಿ ಇಲ್ಲಿ ಸಲ್ಲೇಖನ ವ್ರತವನ್ನಾಚರಿಸಿದ್ದರು.
ಇದರ ನೆನಪಿಗಾಗಿ ಜಿನ ಭಕ್ತರು ಅಂದು ಕಲ್ಲಿನ ಅರೆಯ ಮೇಲೆ ಪಾದಗಳನ್ನು ಮತ್ತು ಸಂಸ್ಕೃತದಲ್ಲಿ ಜಿನ ಶಾಸನ ಬರೆಯಿಸಿದ್ದರು ಎಂದು ಕಲ್ಲಿನ ಶಿಲ್ಪ ಸಂಶೋಧಕರು ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿ ಸದಸ್ಯರಾದ ರಘು. ಆರ್ ತಿಳಿಸಿದರು.
ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹದ ಪ್ರಯುಕ್ತ ಭಗವಾನ್ ವಾಲ್ಮೀಕಿ ಟ್ರಸ್ಟ್ ಕೊಳ್ಳೇಗಾಲದ ವಿವಿಧ ಸಂಘಟನೆಗಳ ಸಹಾಯದೊಡನೆ 1 ರಿಂದ 10ನೇ ತರಗತಿ ಹಾಗೂ ಪಿಯುಸಿ ವರೆಗೆ ವಿವಿಧ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳ ವಿತರಣಾ ಕಾರ್ಯಕ್ರಮವನ್ನು ಮುಂದುವರೆಸಿದ್ದಾರೆ.
ಇಂದು ಪಟ್ಟಣದ ಬಸ್ತೀಪುರ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿ ಮಾತನಾಡಿದ ಅವರು ಕಲ್ಲಿನ ಅರೆಯ ಮೇಲೆ ಪಾದಗಳನ್ನು ಮತ್ತು ಸಂಸ್ಕೃತದಲ್ಲಿ ಬರೆಸಿದ್ದ ಜಿನ ಶಾಸನವನ್ನು ಸಾರ್ವಜನಿಕರು ಅಂದು ನೋಡಿದ್ದರು. ಮಾನವ ತನ್ನ ದುರಾಸೆಯಿಂದ ಪರಿಸರ ನಾಶ ಮಾಡಿದ್ದು,ಈಗ ಶಾಸನ ಬರೆಸಿದ್ದ ಸ್ಥಳ ಹಾಗೂ ಕಲ್ಲುಅರೆ ನೀರಿನ ಹೊಂಡಾ ಆಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ತಾಲ್ಲೂಕಿನ ಸರಗೂರು ಗ್ರಾಮದಲ್ಲಿ ಶ್ರೀ ಬಾಹುಬಲಿ ಮುನಿಯವರು ವೈಭವದಿಂದ ಸಲ್ಲೇಖನ ವ್ರತ ಆಚರಿಸಿ ಮುಕ್ತಿ ಹೊಂದಿದ್ದಕ್ಕೆ ಇಲ್ಲಿಯೂ ಶಾಸನ ಬರೆಸಿದ್ದಾರೆ. ಗಂಗರು ಹಾಗೂ ಚೋಳರ ಕಾಲದಲ್ಲಿ ಮುಡಿಗುಂಡ ಚತುರ್ವೇದಿ ಮಂಗಲ ಎಂದು ಶಾಸನದಲ್ಲಿ ಉಲ್ಲೇಖವಿದೆ ಅಂದು ಮುಡಿಗುಂಡಂ ಪಟ್ಟಣವಾಗಿತ್ತು ಎಂದು ತಿಳಿಸಿದರು.
ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ, ಹಿಂದುಳಿದ ವರ್ಗಗಳ ಶಾಲಾ ಮಕ್ಕಳಿಗೆ 1 ರಿಂದ 10ನೇ ತರಗತಿ ಹಾಗೂ ಪಿಯುಸಿ ವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕವನ್ನು ಸಂಘದ ನಿಯಮದಂತೆ ವಿತರಿಸಲಾಗುತ್ತಿದೆ. ಈ ಮಹತ್ಕಾರ್ಯಕ್ಕೆ ಚಿತ್ರಕಲಾ ಶಿಕ್ಷಕರು ಮತ್ತು ಕಾರ್ಯಕಾರಿ ಸಮಿತಿ,ಪಶುಸಂಗೋಪನೆ ಇಲಾಖೆ ಪಾಳ್ಯ, ಹಾಗೂ ಸಂಘದ ಎಲ್ಲಾ ಸದಸ್ಯರ ಸಹಾಯದಿಂದ ಈಗಾಗಲೇ ಮೇದಿನಿ ಗ್ರಾಮ, ಪಾಳ್ಯ ಗ್ರಾಮ, ಶ್ರೀ ಚೌಡೇಶ್ವರಿ ಶಾಲೆ, ಬಾಪುನಗರ ಸರ್ಕಾರಿ ಶಾಲೆ, ಮುಡಿಗುಂಡ, ಬಸ್ತೀಪುರ, ಮಾಸ್ತಿಗೌಡನ ದೊಡ್ಡಿ ಶಾಲೆಗಳ ಒಟ್ಟು 1001 ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕವನ್ನು ವಿತರಿಸಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಕೊಂಡು ಉತ್ತಮ ಭವಿಷ್ಯ ರೂಪಿಸಿ ಕೊಳ್ಳುವಂತೆ ರಘು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿ ಅಧ್ಯಕ್ಷ ಸಿದ್ದಪ್ಪಾಜಿ, ಯಜಮಾನರಾದ ಬಸವರಾಜು, ರಂಗಸ್ವಾಮಿ, ಸಿದ್ದಮ್ಮ, ನಂದೀಶ, ಗೋವಿಂದ ನಾಯಕ, ಜೆಲ್ಲಿ ಸಿದ್ದಪ್ಪ, ಶಿವಕುಮಾರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಕೊಳ್ಳೆಗಾಲ: ತಾಲ್ಲೂಕಿನ ಕಾಮಗೆರೆ ಗ್ರಾಮದ ಆದಿಜಾಂಬವ ಸಮುದಾಯ ಭವನದಲ್ಲಿ ಅಡುಗೆ ಮನೆ ನಿರ್ಮಾಣ ಕಾಮಗಾರಿಗೆ ಶಾಸಕ ಎಂ.ಆರ್. ಮಂಜುನಾಥ್ ಅವರು ಗುದ್ದಲಿ ಪೂಜೆ ನೆರವೇರಿಸಿದರು.
2023/24 ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಅನುದಾನದಡಿ 10 ಲಕ್ಷ.ರೂ ವೆಚ್ಚದಲ್ಲಿ ಅಡುಗೆ ಮನೆ ನಿರ್ಮಾಣ ಮಾಡಲಾಗುತ್ತಿದೆ.
ಈ ವೇಳೆ ಮಾತನಾಡಿದ ಶಾಸಕರು, ಕಾಮಗಾರಿಯನ್ನು ಕೂಡಲೆ ಪ್ರಾರಂಭಿಸಿ ಆದಷ್ಟು ಬೇಗ ಪೂರ್ಣಗೊಳಿಸಿ ಜನರ ಸೇವೆಗೆ ಸಿದ್ದ ಮಾಡಿಕೊಡಬೇಕೆಂದು ತಿಳಿಸಿದರು.
ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳುವಂತೆ ನಿರ್ಮಿತಿ ಕೇಂದ್ರದ ಕಿರಿಯ ಅಭಿಯಂತರ ರವಿ ಅವರಿಗೆ ಮಂಜುನಾಥ್ ಸೂಚಿಸಿದರು.
ಈ ಸಂದರ್ಭದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಮಂಜೇಶ್ ಗೌಡ, ಲಿಂಗರಾಜು, ರಾಜಣ್ಣ, ಶಿವು, ಚಿಕ್ಕಸ್ವಾಮಿ, ಸಿಂಗಾನಲ್ಲೂರು ರಾಜಣ್ಣ, ಚಿನ್ನವೆಂಕಟ್, ಗೋವಿಂದ, ಶ್ರೀರಂಗ, ಡಿ.ಕೆ ರಾಜು, ಅಮೀನ್, ವೆಂಕಟೇಶ್ ಮತ್ತಿತರರು ಹಾಜರಿದ್ದರು.
ಪಾಳ್ಯದ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ: ತಾಲ್ಲೂಕಿನ ಪಾಳ್ಯದ ಸಮೀಪದ ಬಹುಗ್ರಾಮ ಕುಡಿಯುವ ನೀರು ಶುದ್ಧೀಕರಣ ಘಟಕಕ್ಕೂ ಶಾಸಕ ಎಂ.ಆರ್ ಮಂಜುನಾಥ್ ಬೇಟಿ ನೀಡಿ ಪರಿಶೀಲಿಸಿದರು.
ತಾಲೂಕಿನ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಶುದ್ಧ ಕುಡಿಯುವ ನೀರಿನ ಘಟಕದ ವಿವಿಧ ಕ್ಲಾರಿ ಪ್ಲೋರಿಟ್, ಫಿಲ್ಟರ್ ಹೌಸ್, ಪಂಪ್ ಹೌಸ್, ಪ್ರಯೋಗಾಲಯ, ಹಾಗೂ ಇನ್ನಿತರ ಭಾಗಗಳಿಗೆ ಶಾಸಕರು ಭೇಟಿ ನೀಡಿ ದಿನನಿತ್ಯದ ನೀರಿನ ಸಂಗ್ರಹಣೆ ಹಾಗೂ ಸಾರ್ವಜನಿಕವಾಗಿ ಯಾವ ಯಾವ ಭಾಗಕ್ಕೆ ಎಷ್ಟೆಷ್ಟು ನೀರು ತಲುಪುತ್ತಿದೆ ಎಂಬುದರ ಬಗ್ಗೆ ಜಲಜೀವನ್ ಮಿಷನ್ (ಜೆಜೆಎಂ) ಸಹಾಯಕ ಕಾರ್ಯಪಾಲಕ ಅಭಿಯಂತರ ಸುಧನ್ವನಾಗ್ ಅವರಿಂದ ಮಾಹಿತಿ ಪಡೆದುಕೊಂಡರು.
ಇಲ್ಲಿ ದಿನನಿತ್ಯ ಬಳಸುವ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಎಚ್ಚರಿಕೆ ವಹಿಸುವಂತೆ ತಾಕೀತು ಮಾಡಿದರು.
ಈ ವೇಳೆ ಪಾಳ್ಯ ಗ್ರಾ.ಪಂ. ಉಪಾಧ್ಯಕ್ಷ ಮಹೇಶ್, ಸದಸ್ಯ ಸಿಗಣ್ಣ,ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಮಂಜೇಶ್ ಗೌಡ, ಚಿನ್ನವೆಂಕಟ್ ಶಿವು, ಶ್ರೀರಂಗ, ವಿಜಯ್ ಕುಮಾರ್, ಡಿ.ಕೆ ರಾಜು, ಎಸ್.ಆರ್ ಮಹದೇವ್ ಹಾಗೂ ಮತ್ತಿತರರು ಹಾಜರಿದ್ದರು.
ಡಾ.ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಸ್ಥಳಕ್ಕೆ ಮಂಜುನಾಥ್ ಭೇಟಿ: ಕೊಳ್ಳೇಗಾಲ, ತಾಲ್ಲೂಕಿನ ಕೊಂಗರಹಳ್ಳಿ ಗ್ರಾಮದ ಡಾ.ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಸ್ಥಳಕ್ಕೆ ಎಂ. ಆರ್. ಮಂಜುನಾಥ್ ಭೇಟಿ ನೀಡಿ ಅನುಧಾನ ನೀಡುವ ಭರವಸೆ ನೀಡಿದರು.
ಗ್ರಾಮದ ಕೊಳ್ಳೇಗಾಲ-ಹನೂರು ಮುಖ್ಯ ರಸ್ತೆಯ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ಗ್ರಾಮಸ್ಥರು ಡಾ.ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಕಾಮಗಾರಿ ಕೈಗೊಂಡಿದ್ದು ಪ್ರತಿಮೆ ನಿರ್ಮಾಣ ಮಾಡಲು ಶಾಸಕರನ್ನು ಗ್ರಾಮದ ಯಜಮಾನರು ಹಾಗೂ ಯುವಕರು ಅನುದಾನ ನೀಡುವಂತೆ ಮನವಿ ಮಾಡಿದರು.
ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿ ಮಾತನಾಡಿದ ಶಾಸಕರು ಸರಕಾರದಿಂದ ಬರುವ ಅನುದಾನವನ್ನು ಬಳಸಿಕೊಂಡು ಪುತ್ತಳಿ ನಿರ್ಮಾಣ ಮಾಡಿ ವ್ಯಯಕ್ತಿಕವಾಗಿ ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಜೊತೆಗೆ ಕೊಂಗರಹಳ್ಳಿ ಮಾರ್ಗವಾಗಿ ಗುಂಡಾಲ್ ಜಲಾಶಯಕ್ಕೆ ತೆರಳುವ ರಸ್ತೆ ತೀರಾ ಹಾಳಾಗಿದ್ದನ್ನು ಸ್ಥಳೀಯರು ಶಾಸಕರ ಗಮನಕ್ಕೆ ತಂದರು.
ಈ ಮಾರ್ಗವಾಗಿ ದಿನ ನಿತ್ಯ ನೂರಾರು ವಾಹನಗಳು ಚಲಿಸುತ್ತವೆ. ಗುಂಡಾಲ್ ಜಲಾಶಯಕ್ಕೆ ತೆರಳುವ ರಸ್ತೆಯನ್ನು ಮುಂದಿನ ದಿನಗಳಲ್ಲಿ ಸ್ಥಳೀಯರ ಒಪ್ಪಿಗೆಯ ಮೇರೆಗೆ ಅಗಲ ಮಾಡಿ ಅಭಿವೃದ್ಧಿ ಪಡಿಸಲಾಗುವುದು, ಹಾಗೂ ಕೊಂಗರಹಳ್ಳಿ ಗ್ರಾಮದ ಪರಿಶಿಷ್ಟರ ನೂತನ ಬಡಾವಣೆಯಲ್ಲಿ ರಸ್ತೆ ಇಲ್ಲದಿರುವುದನ್ನು ಖುದ್ದಾಗಿ ನಾನೇ ನೋಡಿದ್ದೇನೆ. ಕೆಲವೇ ದಿನಗಳಲ್ಲಿ ಗುದ್ದಲಿ ಪೂಜೆ ನೆರವೇರಿಸಿ ರಸ್ತೆ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಂಜುನಾಥ್ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರುಗಳಾದ ಹುಚ್ಚಯ್ಯ, ಮಂಜೇಶ್, ಅಮೀನ್, ಕೊಂಗರಹಳ್ಳಿ ಗ್ರಾಮದ ಯಜಮಾನರಾದ ಮಹೇಶ್, ಕೃಷ್ಣ, ಶಿವಮಲ್ಲು, ಯುವಕರುಗಳಾದ ಮಹೇಶ್, ಮಹದೇವಸ್ವಾಮಿ, ರಾಜಪ್ಪ, ಮುಖಂಡರುಗಳಾದ ಲಕ್ಷ್ಮಣ, ರಾಜಣ್ಣ ಮುಂತಾದವರು ಹಾಜರಿದ್ದರು.
ಕೊಳ್ಳೇಗಾಲ: ಸಮಾಜದ ಕಟ್ಟಕಡೆಯ ವ್ಯಕ್ತಿಯ ಮಕ್ಕಳ ಬದುಕು ಹಸನಾಗಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಮನದಾಳದಿಂದ ನುಡಿದರು.
ನಗರಸಭೆ ನಗರೋತ್ಥಾನ 4 ನೇ ಹಂತದ ಯೋಜನೆಯಡಿ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು ಸರ್ಕಾರ ಅನೇಕ ಯೋಜನೆ ರೂಪಿಸಿದೆ, ಬಡಜನರ ಬದುಕು ಹಸನಾಗಿ ಉತ್ತಮ ಜೀವನ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಇಂದು ಹೊಲಿಗೆ ಯಂತ್ರ ನೀಡಲಾಗಿದೆ ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಿ ಎಂದು ಕರೆ ನೀಡಿದರು.
ಪ್ರತಿ ಹೊಲಿಗೆ ಯಂತ್ರಕ್ಕೆ 8000 ರೂ ನಂತೆ 235 ಫಲಾನುಭವಿಗಳಿಗೆ 20.60 ಲಕ್ಷ ರೂ ವೆಚ್ಚದಲ್ಲಿ ಹೊಲಿಗೆ ಯಂತ್ರಗಳನ್ನು ವಿತರಿಸಲಾಗಿದೆ, ಅದರಲ್ಲಿ ಮೀಸಲಾತಿವಾರು ಸೌಲಭ್ಯ ನೀಡಿದ್ದು ಪ.ಜಾತಿಯರಿಗೆ ಶೇ 15 ರಷ್ಟು, ಪ ಪಂಗಡದವರಿಗೆ ಶೇ.6.95 ಇತರರಿಗೆ ಶೇ.7.25 ಅನುಪಾತದಲ್ಲಿ ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.
ಈ ಹಿಂದೆ ಅಧಿಕಾರಿಗಳು ಜನಪ್ರತಿನಿಧಿಗಳಿಂದ ಸಾಂಕೇತಿಕವಾಗಿ ಸೌಲಭ್ಯಗಳನ್ನು ವಿತರಿಸಿ ನಂತರ ತಮಗೆ ಬೇಕಾದವರಿಗೆ ಕೊಡುತ್ತಿದ್ದರು ಇದರಿಂದಾಗಿ ಅರ್ಹರಿಗೆ ಸಿಗದೆ ಮತ್ಯಾರಿಗೋ ಸಿಗುತ್ತಿತ್ತು. ಸೌಲಭ್ಯ ಪಡೆದ ಕೆಲವರು ಮಾರಾಟ ಮಾಡಿಕೊಳ್ಳುತ್ತಿದ್ದರು. ಈಗ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ನೀಡಲಾಗಿದೆ. ಆದ್ದರಿಂದ ಯಾರೂ ಮಾರಾಟ ಮಾಡಬೇಡಿ ಏಕೆಂದರೆ ನಾನು ಯಾವ ಸಂದರ್ಭದಲ್ಲಿ ಪಟ್ಟಿ ಹಿಡಿದು ನಿಮ್ಮ ಮನೆಗೆ ಪರಿಶೀಲನೆಗೆ ಬರುವೆನೋ ತಿಳಿಯದು ಎಂದು ಎಚ್ಚರಿಕೆ ನೀಡಿದರು.
ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಇಷ್ಟೊಂದು ಸೌಲಭ್ಯಗಳಿವೆ ಎಂದು ಇಲ್ಲಿನ ಯಾರಿಗೂ ತಿಳಿದಿರಲಿಲ್ಲ. ನಗರಸಭೆ ವತಿಯಿಂದ ಸಾಂಸ್ಕೃತಿಕ ಸಾಧನೆ ಮಾಡಿದವರಿಗೆ 1 ಲಕ್ಷ ರೂ, ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ 2.20 ಲಕ್ಷ ರೂ, ಶೌಚಾಲಯ ನಿರ್ಮಾಣ ಫಲಾನುಭವಿಗಳಿಗೆ 5 ಲಕ್ಷ ರೂ, ವಿವಿಧ ವಸತಿ ಯೋಜನೆ ಫಲಾನುಭವಿಗಳಿಗೆ 10 ಲಕ್ಷ ಪಕ್ಕಾ ಮನೆ ನಿರ್ಮಾಣಕ್ಕಾಗಿ 1.8 ಕೋಟಿ ರೂ, ಎಸ್ಸಿ/ಎಸ್ಟಿ ಫಲಾನುಭವಿಗಳಿಗೆ ನೀಡಲಾಗಿದೆ ಹಾಗೆಯೇ ಇತರ ಜನಾಂಗದ ಫಲಾನುಭವಿಗಳಿಗೆ 73.90 ಲಕ್ಷ ರೂಗಳನ್ನು ನೀಡಲಾಗಿದೆ ಎಂದು ಶಾಸಕ ಕೃಷ್ಣಮೂರ್ತಿ ವಿವರಿಸಿದರು
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್, ತಹಶೀಲ್ದಾರ್ ಬಸವರಾಜು, ಜಿಲ್ಲಾ ನಗರಾಭಿವೃದ್ಧಿ ಕೋಶ ಇಇ ಅಲ್ತಾಫ್, ನಗರಸಭಾಧ್ಯಕ್ಷೆ ರೇಖಾ, ಉಪಾಧ್ಯಕ್ಷ ಎ. ಪಿ. ಶಂಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಸದಸ್ಯರುಗಳಾದ ಮಂಜುನಾಥ್, ರಾಘವೇಂದ್ರ, ಕವಿತ ಭಾಗ್ಯ, ನಾಗಸುಂದ್ರಮ್ಮ,ಪೌರಾಯುಕ್ತ ರಮೇಶ್, ಎಇಇ ನಾಗೇಂದ್ರ, ಆರೋಗ್ಯಾಧಿಕಾರಿ ಚೇತನ್, ಪರಶಿವಯ್ಯ ಮತ್ತಿತರರು ಹಾಜರಿದ್ದರು.