ಉಕ್ಕಿ ಹರಿದ ಕಾವೇರಿ; ಜಮೀನು ಮುಳುಗಡೆ-ಪ್ರವಾಹ ಭೀತಿಯಲ್ಲಿ ಜನತೆ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೆಗಾಲ: ಕಾವೇರಿ ನದಿ ಉಕ್ಕಿ  ಹರಿಯುತ್ತಿರುವುದರಿಂದ ಕೊಳ್ಳೇಗಾಲ
ತಾಲ್ಲೂಕಿನ ನದಿ ತೀರದ ಗ್ರಾಮಗಳು ಮತ್ತೊಮ್ಮೆ ಪ್ರವಾಹದ ಭೀತಿ ಎದುರಿಸುವಂತಾಗಿದೆ.

ಕೊಳ್ಳೇಗಾಲ ತಾಲ್ಲೂಕಿನ ಹಳೇ ಹಂಪಾಪುರ ಹಾಗೂ ಮುಳ್ಳೂರು ಗ್ರಾಮಗಳಲ್ಲಿ ಜಮೀನುಗಳು ಪ್ರವಾಹದಿಂದ ಜಲಾವೃತವಾಗಿದ್ದು ಗ್ರಾಮದ ಅಂಚಿನಲ್ಲಿ ನೀರು ಹರಿಯುತ್ತಿರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ.

ಸತತವಾಗಿ ಪ್ರವಾಹ ಭೀತಿ ಎದುರಿಸುತ್ತಿರುವ ಈ ಗ್ರಾಮಗಳು ಕಳೆದ 20 ದಿನಗಳ ಹಿಂದೆ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ಜಮೀನುಗಳು ಮುಳುಗಡೆಯಾಗಿ ಗ್ರಾಮದ ಅಂಚಿನಲ್ಲಿ ನೀರು ಹರಿಯುತ್ತಿದ್ದುದ್ದರಿಂದ ಜನರಲ್ಲಿ ಆತಂಕ ಮನೆ ಮಾಡಿತ್ತು.

ರಾತ್ರಿ ಜಮೀನುಗಳು ಮುಳುಗಡೆಯಾಗಿರುವುದರಿಂದ
ಮತ್ತೊಮ್ಮೆ ಪ್ರವಾಹ ಭೀತಿ ಎದುರಿಸುವಂತಾಗಿದೆ.

ಕರ್ನಾಟಕ ರಾಜ್ಯದ ಹಾಗೂ ಕೇರಳದ ಕರಾವಳಿ ತೀರದ ಜಿಲ್ಲೆಗಳಲ್ಲಿ ಕಳೆದ ಎರಡು ತಿಂಗಳಿಂದ ವರುಣ ನಿರಂತರವಾಗಿ ಆರ್ಭಟಿಸುತ್ತಿರುವುದರಿಂದ ಕಬಿನಿ ಹಾಗೂ ಕೆ ಆರ್ ಎಸ್ ಜಲಾಶಯಗಳಿಗೆ  ನಿರಂತರವಾಗಿ ಹರಿದು ಬರುತ್ತಿದೆ.

ಹಾಗಾಗಿ ಜಲಾಶಯಗಳು ಅದಾಗಲೇ ತುಂಬಿ ಭರ್ತಿಯಾಗಿದ್ದು 2 ಜಲಾಶಯಗಳಿಂದ 1.25 ಲಕ್ಷ ಕ್ಯೂಸೆಕ್ ಗೂ ಅಧಿಕ ಪ್ರಮಾಣದಲ್ಲಿ ನೀರನ್ನು ಕಾವೇರಿ, ಕಪಿಲ ನದಿಗಳಿಗೆ ಹರಿ ಬಿಡಲಾಗುತ್ತಿದೆ.
           
ಕೆ ಆರ್ ಎಸ್ ಜಲಾಶಯದಿಂದ 80 ಸಾವಿರ ಕ್ಯೂಸೆಕ್, ಹಾಗೆಯೇ ಕಬಿನಿ ಜಲಾಶಯದಿಂದ 45 ಸಾವಿರ ಕ್ಯೂಸೆಕ್ ನೀರನ್ನು ನದಿಗಳಿಗೆ ಹರಿಬಿಡಲಾಗುತ್ತಿದೆ.

ಕಬಿನಿ ಹಾಗೂ ಕೆ.ಆರ್,ಎಸ್ 2 ಅಣೆಕಟ್ಟೆಗಳಿಂದ 1.25 ಲಕ್ಷ ಕ್ಯೂಸೆಕ್ ಗೂ ಅಧಿಕ ಪ್ರಮಾಣದಲ್ಲಿ ನದಿಗಳಿಗೆ ನೀರು ಹರಿದು ಬರುತ್ತಿರುವುದರಿಂದಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ.

ಕಬಿನಿ ಹಾಗೂ ಕಾವೇರಿ ನದಿಗಳು ಟಿ.ನರಸೀಪುರದ ಬಳಿ ಒಂದಾಗುತ್ತವೆ. ಇದರಿಂದ ಮುಂದೆ ಸಾಗುವ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತದೆ. ಹಾಗಾಗಿ ಕೆಳಭಾಗದಲ್ಲಿರುವ ಕೆಲವು ನದಿ ಪಾತ್ರದ ಗ್ರಾಮಗಳು ಪ್ರತಿವರ್ಷ ಪ್ರವಾಹ ಭೀತಿ ಎದುರಿಸುತ್ತವೆ.

ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು, ಹಳೇ ಹoಪಾಪುರ ಗ್ರಾಮಗಳ ರೈತರ ಜಮೀನುಗಳು ಪ್ರವಾಹದಿಂದ ಜಲಾವೃತವಾಗಿದ್ದು ಈ ಗ್ರಾಮಗಳೊಡನೆ ದಾಸನಪುರ, ಹಳೇ ಅಣಗಳ್ಳಿ, ಹರಳೆ, ಯಡಕುರಿಯಾ ಗ್ರಾಮಗಳ ಜನ ಕಳೆದ ಭಾರಿಯಂತೆ ಈ ಭಾರಿಯು ಮಳುಗಡೆಯ ಭೀತಿ ಎದುರಿಸುತ್ತಿದ್ದಾರೆ.

ನಿನ್ನೆ ವರೆಗೂ ನದಿ ಪಾತ್ರದಲ್ಲಿ ತುಂಬಿ ಹರಿಯುತ್ತಿದ್ದ ನೀರು ಇಂದು ಜಮೀನುಗಳಿಗೂ ನುಗ್ಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನದಿಗಳಿಗೆ ನೀರನ್ನು ಹರಿ ಬಿಡುವ ಸಾಧ್ಯತೆ ಇರುವುದರಿಂದ ನದಿಯಲ್ಲಿ ಪ್ರವಾಹ ಹೆಚ್ಚಳವಾಗಿ ಯಾವುದೇ ಕ್ಷಣದಲ್ಲಾದರು ಅಪಾಯದ ಮಟ್ಟ ಮೀರ ಬಹುದು ಎಂದು ಜನ ಆತಂಕಕ್ಕೊಳಗಾಗಿದ್ದಾರೆ.

ಒಂದು ವೇಳೆ ಅಂತಹ ಪರಿಸ್ಥಿತಿ ಎದುರಾದರೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದ್ದು ಈಗಾಗಲೆ ಕಟ್ಟೆಚ್ಚರ ವಹಿಸಿದೆ ಜನರಿಗೆ ಆತಂಕಪಡದಂತೆ ಮನವಿ ಮಾಡಿದೆ.

ಉಕ್ಕಿ ಹರಿದ ಕಾವೇರಿ; ಜಮೀನು ಮುಳುಗಡೆ-ಪ್ರವಾಹ ಭೀತಿಯಲ್ಲಿ ಜನತೆ Read More

ರಕ್ತಚಂದನ ಮರದ ತುಂಡುಗಳ‌ ಸಾಗಣೆ:ಇಬ್ಬರು ಅರೆಸ್ಟ್

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ರಕ್ತಚಂದನ ಮರದ ತುಂಡುಗಳನ್ನು ಕಳ್ಳಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಕೊಳ್ಳೆಗಾಲ ಸಿ.ಐ.ಡಿ ಅರಣ್ಯ ಸಂಚಾರಿ ದಳದ ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.

ರಾಮನಗರ ಜಿಲ್ಲೆ ಚನ್ನಪಟ್ಟಣ ಟೌನ್ ನ ಆಬೀಬ್‌ ಪುರ ಮೊಹಲ್ಲಾದ ಟ್ರ್ಯಾಕ್ಟರ್ ಚಾಲಕ ತಬ್ರೇಜ್ ಖಾನ್ (30) ಹಾಗೂ ಮೆಹದಿನಗರದ ಸಾದಿಕ್ ಪಾಷ (26) ಬಂಧಿತ ಆರೋಪಿಗಳು.

ಈ ಆರೋಪಿಗಳು ಟಾಟಾ ಸುಮೋ ವಾಹನದಲ್ಲಿ ಆಕ್ರಮವಾಗಿ ರಕ್ತಚಂದನದ ಮರದ ತುಂಡುಗಳನ್ನು ಕಳ್ಳಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಸಲುವಾಗಿ ಸಾಗಾಟ ಮಾಡುತ್ತಿದ್ದಾರು.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕೊಳ್ಳೆಗಾಲ ಸಿ.ಐ.ಡಿ ಅರಣ್ಯ ಸಂಚಾರಿ ದಳದ ಆರಕ್ಷಕ ಉಪ ನಿರೀಕ್ಷಕ ವಿಜಯರಾಜ್ ಮತ್ತು ತಂಡ ಕೊಳ್ಳೇಗಾಲ-ಬೆಂಗಳೂರು ಮುಖ್ಯ ರಸ್ತೆಯ ಸತ್ತೇಗಾಲ ಗ್ರಾಮದ ಬಳಿ ದಾಳಿ ನಡೆಸಿದ್ದಾರೆ.

ಈ ವೇಳೆ ಟಾಟಾ ಸುಮೋ ವಾಹನದಲ್ಲಿ
7 ಪ್ಲಾಸ್ಟಿಕ್ ಚೀಲಗಳಲ್ಲಿದ್ದ 205 ಕೆ.ಜಿಯ 28 ರಕ್ತಚಂದನದ ಮರದ ತುಂಡುಗಳು ಹಾಗೂ ಪ್ಲಾಸ್ಟಿಕ್ ಟಾರ್ಪಲ್ ವಶ ಪಡಿಸಿಕೊಂಡಿದ್ದಾರೆ.

ಮುಂದಿನ ಕಾನೂನು ಕ್ರಮ‌ ಜರುಗಿಸಲು ಸ್ವಯಂ ದೂರು ತಯಾರಿಸಿ ಪ್ರಕರಣ ದಾಖಲಿಸಿ ಕೊಳ್ಳೇಗಾಲ ಬಫರ್ ವಲಯದ ಅರಣ್ಯಾಧಿಕಾರಿ ಅವರಿಗೆ ವರದಿ ನೀಡಿದ್ದಾರೆ.

ರಕ್ತಚಂದನ ಮರದ ತುಂಡುಗಳ‌ ಸಾಗಣೆ:ಇಬ್ಬರು ಅರೆಸ್ಟ್ Read More

ಡಾ.ವಿಷ್ಣು ಸಮಾಧಿ ನೆಲಸಮ:ಸರಿಪಡಿಸಲು ಸರ್ಕಾರಕ್ಕೆ ಕೆ.ಆರ್.ಬಾಲರಾಜ್ ಆಗ್ರಹ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಲಕ್ಷಾಂತರ ಅಭಿಮಾನಿಗಳ ಆರಾಧ್ಯ ದೈವ ಡಾ.ವಿಷ್ಣುವರ್ಧನ್ ಸಮಾಧಿ ನೆಲಸಮ ಮಾಡಿರುವ ವಿಚಾರದಲ್ಲಿ ನಡೆದಿರುವ ಬೆಳವಣಿಗೆಗಳು ಅತ್ಯಂತ ನೋವಿನ ಸಂಗತಿ ಎಂದು ಡಾ.ವಿಷ್ಣು ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಆರ್.ಬಾಲರಾಜ್ ನೊಂದು‌ ನುಡಿದಿದ್ದಾರೆ.

ಸರ್ಕಾರ ತಕ್ಷಣ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಮತ್ತು ಸಮಾಧಿಯನ್ನು ಪುನರ್ ಸ್ಥಾಪಿಸಬೇಕು ಎಂದು ಕೆ.ಆರ್.ಬಾಲರಾಜ್ ಆಗ್ರಹಿಸಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ತಮ್ಮ ಜೀವಿತಾವಧಿಯಲ್ಲಿ ಅಪಾರ ಸೇವೆ ಸಲ್ಲಿಸಿ, ಅದಮ್ಯ ಪ್ರತಿಭೆ ಮೂಲಕ ನಾಡಿನ ಪ್ರೀತಿಗಳಿಸಿದ ಮೇರು ನಟನೊಬ್ಬನಿಗೆ ಇಂತಹ ಅಗೌರವ ತೋರಿ ರುವುದು ನಿಜಕ್ಕೂ ಖಂಡನೀಯ ಎಂದು ಹೇಳಿದ್ದಾರೆ.

ಅವರ ವ್ಯಕ್ತಿತ್ವ ಮತ್ತು ಕಲಾಸೇವೆ ಅಜರಾಮರ, ನಟ ವಿಷ್ಣುವರ್ಧನ್‌ ಅವರು ಕನ್ನಡ ನಾಡಿನ ಹೆಮ್ಮೆಯ ಪ್ರತೀಕ. ಅವರ ಸಮಾಧಿಯನ್ನು ಭಂಗಪಡಿಸುವ ಕ್ರಮವು ನಮ್ಮ ಸಂಸ್ಕೃತಿ, ಗೌರವ ಮತ್ತು ಭಕ್ತಿಯ ಮೇಲೆ ಮಾಡಿದ ಅಪಮಾನ. ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುವುದು ಡಾ. ವಿಷ್ಣುವರ್ಧನ್ ಅವರ ಮೇಲಿನ ಅಭಿಮಾನ ಮತ್ತು ಗೌರವಕ್ಕೆ ಧಕ್ಕೆ ತರುವಂತಹದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದು ಕೇವಲ ಸ್ಮಾರಕದ ಪ್ರಶ್ನೆಯಲ್ಲ, ಅವರನ್ನು ಹೃದಯ ಪೂರ್ವಕವಾಗಿ ಆರಾಧಿಸುವ ಪ್ರತಿಯೊಬ್ಬ ಅಭಿಮಾನಿಗೂ ಇದು ಅತೀವ ನೋವುಂಟು ಮಾಡಿದೆ. ನಾಡಿನ ಮೇರು ನಟರೊಬ್ಬರ ವಿಚಾರದಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುವುದು ಅವರ ವ್ಯಕ್ತಿತ್ವ ಮತ್ತು ಕಲಾಸೇವೆಗೆ ಆಗೌರವ ತೋರಿದಂತಾಗಿದೆ. ಅಭಿಮಾನಿಗಳ ಭಾವನೆಗಳಿಗೆ ಗೌರವ ನೀಡದೆ ಈ ರೀತಿ ಕ್ರಮ ತೆಗೆದುಕೊಳ್ಳುವುದು ಅತ್ಯಂತ ಬೇಸರದ ಸಂಗತಿ ಎಂದು ತಿಳಿಸಿದರು.

ನಾವು ಅವರ ಸ್ಮಾರಕದ ನಿರ್ಮಾಣಕ್ಕೆ ತಕ್ಷಣವೇ ಪರಿಹಾರ ಕಂಡುಕೊಳ್ಳಬೇಕು. ಇದು ಅವರಿಗೆ ನಾವು ನೀಡುವ ಗೌರವ ಮತ್ತು ಕೃತಜ್ಞತೆಯ ಸಂಕೇತವಾಗಿದೆ. ಮತ್ತು ಸ್ಮಾರಕ ವಿಚಾರವಾಗಿ ನಾಯಕ ನಟರಾದ ಸುದೀಪ್ ಅವರು ಜವಾಬ್ದಾರಿ ಮತ್ತು ಹಣಕಾಸಿನ ನೆರವು ನೀಡುತ್ತೇನೆ ಎಂದಿರುವ ಮಾಧ್ಯಮ ಹೇಳಿಕೆಯನ್ನು ಸ್ವಾಗತಿಸುತ್ತೇವೆ ಎಲ್ಲಾ ವಿಷ್ಣು ಅಭಿಮಾನಿಗಳ ಪರವಾಗಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.

ನಮ್ಮೆಲ್ಲರ ಪ್ರೀತಿಯ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸ್ಮಾರಕದ ವಿಚಾರದಲ್ಲಿ ನಡೆದಿರುವ ಬೆಳವಣಿಗೆಗಳು ಅತ್ಯಂತ ಬೇಸರ ಮತ್ತು ನೋವಿನ ಸಂಗತಿ. ಇದನ್ನು ಸರ್ಕಾರ ತಕ್ಷಣವೇ ಸರಿಪಡಿಸಬೇಕು,ಎಂದು ಬಾಲರಾಜ್ ಒತ್ತಾಯಿಸಿದರು.

ಡಾ.ವಿಷ್ಣು ಸಮಾಧಿ ನೆಲಸಮ:ಸರಿಪಡಿಸಲು ಸರ್ಕಾರಕ್ಕೆ ಕೆ.ಆರ್.ಬಾಲರಾಜ್ ಆಗ್ರಹ Read More

ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಿ:ಜೆಡಿಎಸ್ ಕಾರ್ಯಕರ್ತರಿಗೆ ಮಂಜುನಾಥ್ ಕರೆ

(ವರದಿ:ಸಿದ್ದರಾಜು ಕೊಳ್ಳೇಗಾಲ)

ಕೊಳ್ಳೇಗಾಲ: ಕ್ಷೇತ್ರಾದ್ಯಂತ ಪ್ರವಾಸ ಕಾರ್ಯಕ್ರಮ ಮಾಡಿ ಪಕ್ಷ ಸಂಘಟನೆ ಮಾಡಿ ದರೆ ಮುಂದಿನ ದಿನಗಳಲ್ಲಿ ಜನ ನಿಮ್ಮ ಕೈ ಹಿಡಿಯಲಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷರು ಹಾಗೂ ಶಾಸಕರಾ ಆದ ಎಂ. ಆರ್. ಮಂಜುನಾಥ್ ಕಾರ್ಯಕರ್ತರನ್ನು
ಹುರಿದುಂಬಿಸಿದರು.

ಇದರಿಂದ ಮುಂದಿನ ಚುನಾವಣೆಯಲ್ಲಿ ನಿಮ್ಮ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರಿಗೆ ತಿಳಿಹೇಳಿದರು.

ಪಟ್ಟಣದ ವೆಂಕಟೇಶ್ವರ ಮಹಲ್ ನಲ್ಲಿ ನಡೆದ ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ)ದ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಕೊಳ್ಳೇಗಾಲ ಹಾಗೂ ಯಳಂದೂರು ತಾಲ್ಲೂಕಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇದು ಸರಳವಾದ ಕಾರ್ಯಕ್ರಮವಾದರೂ ಪಕ್ಷ ಸಂಘಟನೆಗೆ ದಿಕ್ಸೂಚಿಯಾಗಿದೆ. ಮೂರು ತಾಲ್ಲೂಕುಗಳನ್ನು ಹೊಂದಿರುವ ವಿಧಾನಸಭಾ ಕ್ಷೇತ್ರ ಕೊಳ್ಳೇಗಾಲ, ಹಾಗಾಗಿ ಅಧಿಕಾರ ವ್ಯಾಪ್ತಿ ಹೆಚ್ಚಾಗಿದೆ. ಪಕ್ಷದ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಅನ್ಯಾಯವಾದಲ್ಲಿ ನೀವು ಧ್ವನಿಯಾಗಬೇಕಿದೆ,ಆಗ ಸಂಘಟನೆ ಗಟ್ಟಿಯಾಗುತ್ತದೆ, ಪಕ್ಷ ಸಂಘಟನೆಗೆ ಹೆಚ್ಚು ಸಮಯ ಕೊಡಿ‌‌. ಬೂತ್ ಮಟ್ಟದಲ್ಲಿ ಯುವಕರನ್ನು, ಮಹಿಳಾ ಸಂಘಟನೆಗಳನ್ನು ಪ್ರೊತ್ಸಾಹಿಸಿ ಇದರಿಂದ ಪಕ್ಷ ಬಲಿಷ್ಠಗೊಳ್ಳಲಿದೆ ಎಂದು ಹೇಳಿದರು.

ಪುಟ್ಟಸ್ವಾಮಿಯವರು ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿರುವುದರಿಂದ ಪಕ್ಷ ಸಂಘಟನೆಗೆ ಆನೆಬಲ ಬರಲಿದೆ ಎಂದು ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಹಾಗೂ ಪರಾಜಿತ ಅಭ್ಯರ್ಥಿ ಬಿ.ಪುಟ್ಟಸ್ವಾಮಿ ಅವರು, ಕ್ಷೇತ್ರದಲ್ಲಿ ಪಕ್ಷವನ್ನು ಬಲಿಷ್ಠವಾಗಿ, ಸಧೃಡವಾಗಿ ಸಂಘಟನೆ ಮಾಡಬೇಕೆಂದು ಪಣತೊಟ್ಟಿದ್ದೇವೆ ಅದಕ್ಕಾಗಿ ಜಿಲ್ಲಾಧ್ಯಕ್ಷರು ಹಾಗೂ ಶಾಸಕರು ಆದ ಎಂ. ಆರ್. ಮಂಜುನಾಥ್ ಅವರ ನೇತೃತ್ವದಲ್ಲಿ ಎಲ್ಲಾ ತಾಲೂಕುಗಳು ಹಾಗೂ ಹೋಬಳಿಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಿ ನಂತರ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಂತೇಮರಳ್ಳಿ ಭಾಗದಲ್ಲಿ 40, ಯಳಂದೂರು ತಾಲ್ಲೂಕಿನಲ್ಲಿ 42 ಹಾಗೂ ಕೊಳ್ಳೇಗಾಲ ತಾಲ್ಲೂಕಿನಲ್ಲಿ 32 ಗ್ರಾಮಗಳಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಮೂರು ತಿಂಗಳ ಅವಧಿಯಲ್ಲಿ ಪಕ್ಷ ಸಂಘಟಿಸಿ ಚುನಾವಣೆ ಎದುರಿಸಿದ್ದರಿಂದ ಹಿನ್ನಡೆಯಾಯಿತು. ಈ ಭಾರಿ ಪಕ್ಷ ಸಂಘಟನೆ ಮಾಡಿ ಮುಂದಿನ ಚನಾವಣೆಗೆ ಸಜ್ಜಾಗಿ ಕ್ಷೇತ್ರದಲ್ಲಿ ಅಧಿಕಾರ ಹಿಡಿಯ ಬೇಕಿದೆ ಅದಕ್ಕಾಗಿ ಕಾರ್ಯಕರ್ತರು ಮುಂದಾಗಬೇಕೆಂದು ಕರೆನೀಡಿದರು.

ಈ ವೇಳೆ ನೂತನ ಪದಾಧಿಕಾರಿಗಳಾಗಿ ನೇಮಕವಾಗಿರುವ ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷ ಮಾಂಬಳ್ಳಿ ರಾಜೇಶ್, ಪ್ರಧಾನ ಕಾರ್ಯದರ್ಶಿ ಸಿದ್ದಯ್ಯನಪುರ ರಾಚಯ್ಯ, ಉಪಾಧ್ಯಕ್ಷ ಕುಣಗಳ್ಳಿ ಸುಂದರ್, ಗೌರವ ಅಧ್ಯಕ್ಷ ಕಜ್ಜಿಹುಂಡಿ ಕಾಂತಣ್ಣ, ಬಿ.ಎಸ್.ಪಿ ತೊರೆದು ಜೆಡಿಎಸ್ ಸೇರ್ಪಡೆ ಗೊಂಡಿರುವ ಸ್ಥಳೀಯ ನಗರಸಭಾ ಸದಸ್ಯೆ ಜಯಮೇರಿ ಹಾಗೂ ಯುವ ಘಟಕ ಅಧ್ಯಕ್ಷ ಅಜಯ್, ಯಳಂದೂರು ತಾಲ್ಲೂಕು ಅಧ್ಯಕ್ಷ ಕೆಸ್ತೂರ್ ಆನಂದ್, ಪ್ರಧಾನ ಕಾರ್ಯದರ್ಶಿ ಅಂಬಳೆ ರವೀಶ್, ಯುವಘಟಕದ ಅಧ್ಯಕ್ಷ ಕಾರ್ತೀಕ್, ಸಂತೇಮರಳ್ಳಿ ಹೋಬಳಿ ಅಧ್ಯಕ್ಷ ಎಂ.ಪಿ. ಶಂಕರಪ್ಪ, ಯುವ ಘಟಕದ ಅಧ್ಯಕ್ಷ ಸಿದ್ದರಾಜು, ಕ್ಷೇತ್ರ ಸೂಚಕ ಶಶಿ ಅವರನ್ನು ನೇಮಿಸಿ ಎಲ್ಲಾ ಪದಾಧಿಕಾರಿಗಳಿಗೂ ಪಕ್ಷದ ಧ್ವಜ ನೀಡುವ ಮೂಲಕ ಪದಗ್ರಹಣ ಮಾಡಿದರು.

ಸಮಾರಂಭದಲ್ಲಿ ಚಾ.ನಗರ ಕ್ಷೇತ್ರ ಪರಾಜಿತ ಅಭ್ಯರ್ಥಿ ಆಲೂರು ಶಿವಮಲ್ಲು, ಗುಂಡ್ಲುಪೇಟೆ ಕ್ಷೇತ್ರ ಪರಾಜಿತ ಕಡಬೂರು ಮಂಜು, ಮುಖಂಡರಾದ ಕಂದಳ್ಳಿ ಶಂಕರ್, ಆಲ್ಕೆರೆ ಮಹದೇವ, ಶಿವಮಲ್ಲೇಗೌಡ, ಹನೂರು ಮಹದೇವ ಹನೂರು ವಿಜಯ್ ಕುಮಾರ್, ಶಶಿಶೇಖರ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಿ:ಜೆಡಿಎಸ್ ಕಾರ್ಯಕರ್ತರಿಗೆ ಮಂಜುನಾಥ್ ಕರೆ Read More

ಖ್ಯಾತ ಅಂತ ರಾಷ್ಟ್ರೀಯ ಕ್ರೀಡಾಪಟುಡಾ.ಕೆ.ಎಸ್ ರಾಜಣ್ಣ ಅವರಿಗೆ ಸನ್ಮಾನ

ಕೊಳ್ಳೇಗಾಲ: ಪಟ್ಟಣದ ಕಾವೇರಿ ರಸ್ತೆಯ ರಾಮಮಂದಿರದಲ್ಲಿ ವಿಶ್ವಕರ್ಮ ಸಮಾಜ ಹಾಗೂ ವಿಶ್ವಕರ್ಮ ಚಿನ್ನ ಬೆಳ್ಳಿ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ, ಹಿರಿಯರಿಗೆ ಸನ್ಮಾನ ಮಾಡಲಾಯಿತು.

ಈ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕೃತರು, ರಾಷ್ಟ್ರಪ್ರಶಸ್ತಿ ಪುರಸ್ಕೃತರು, ಖ್ಯಾತ ಅಂತ ರಾಷ್ಟ್ರೀಯ ಕ್ರೀಡಾಪಟು, ರಾಜ್ಯ ಅಂಗವಿಕಲ ವ್ಯಕ್ತಿಗಳ ಅದಿನಿಯಮದ ಮಾಜಿ ಆಯುಕ್ತರಾದ ಡಾ.ಕೆ.ಎಸ್ ರಾಜಣ್ಣ ಅವರನ್ನು ಸನ್ಮಾನಿಸಿದ್ದು ವಿಶೇಷವಾಗಿತ್ತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜಣ್ಣ ಅವರು ಕೈ, ಕಾಲು ಇಲ್ಲದ ವ್ಯಕ್ತಿಗಳು ದೇಶದ ಬೆನ್ನೆಲುಬು, ದಿವ್ಯಾಂಗರನ್ನು ದೇವರೆಂದು ಪೂಜಿಸಿ ಅಂಗವಿಕಲರಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರೆ ಈ.ದೇಶಕ್ಕೆ ಗೌರವ ತಂದು ಕೊಡುತ್ತಾರೆ ಎಂದು ಹೇಳಿದರು.

ನನ್ನ ಜನಾಂಗದವರು ನನ್ನನ್ನು ಪ್ರೀತಿ ವಿಶ್ವಾಸದಿಂದ ಸನ್ಮಾನಿಸಿರುವುದು ನಾನು 2024 ರಲ್ಲಿ ಪಡೆದ ಪದ್ಮಶ್ರೀ ಪ್ರಶಸ್ತಿ ಪಡೆದ ಸಂತೋಷದಷ್ಟೇ ಆನಂದ ತಂದಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ನನ್ನ ಜನಾಂಗದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲು ಸಹ ನನಗೆ ಸಂತೋಷವಾಗುತ್ತಿದೆ ಎಂದು ತಿಳಿಸಿದರು.

ಅಮರಶಿಲ್ಪಿ ಜಕಣಚಾರಿ ಸೇರಿದಂತೆ ನಮ್ಮ ಪೂರ್ವಿಕರು ಈ ದೇಶದ ಉದ್ದಗಲಕ್ಕೂ ಅನೇಕ ಕಲೆ ಮತ್ತು ವಾಸ್ತು ಶಿಲ್ಪ ಕೊಡುಗೆಯಾಗಿ ನೀಡಿದ್ದಾರೆ. ಅವರು ಕಟ್ಟಿದ ಕಲೆಗಳನ್ನು ನಮ್ಮ ಸಮಾಜದ ಇಂದಿನ ಪೀಳಿಗೆ ಮುಂದುವರೆಸಿಕೊಂಡು ಹೋಗಲು ವಿಫಲವಾಗಿದೆ, ಕಾರಣ ಬಡತನ ಎಂದು ವಿಷಾದಸಿದರು.

ನಮ್ಮ ಜನಾಂಗದವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ವಿರಳ, ಕೇಂದ್ರ ಸರ್ಕಾರ ಮನಸ್ಸು ಮಾಡಿದ್ದರೆ ನನ್ನ ಹಿರಿತನವನ್ನು ಗಮನಿಸಿ ರಾಜ್ಯಸಭಾ ಸದಸ್ಯನನ್ನಾಗಲಿ ಅಥವಾ ಯಾವುದಾದರೂ ಒಂದು ರಾಜ್ಯಕ್ಕೆ ರಾಜ್ಯಪಾಲರಾಗಿ ನೇಮಕ ಮಾಡಿದ್ದರೆ ನಾನು ರಾಜಕೀಯವಾಗಿ ಸೇವೆ ಸಲ್ಲಿಸಲು ಅವಕಾಶ ಕೊಟ್ಟಂತಾಗುತ್ತಿತ್ತು ಎಂದು ತಮ್ಮ ಮನದಾಳದ ಮಾತನ್ನಾಡಿದರು ರಾಜಣ್ಣ.

ಪ್ರಧಾನಿ ನರೇಂದ್ರ ಮೋದಿಯವರ ಕೈಯನ್ನು ಬಲಪಡಿಸಿ ಮೋದಿಯವರ ಕೈ ಬಲಪಡಿಸಿದರೆ ನಿಮ್ಮ ಮಕ್ಕಳ ಭವಿಷ್ಯ ಬಲವಾಗುತ್ತದೆ ಎಂದು ಸಲಹೆ ನೀಡಿದರು.

ನರೇಂದ್ರ ಮೋದಿಯವರು ನನಗೆ ಪದ್ಮಶ್ರೀ ಕೊಡಿಸಲು ನೆರವಾದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನನ್ನು 2023 ರಲ್ಲಿ ಅಂಗವಿಕಲರ ರಾಜ್ಯ ಆಯುಕ್ತ ನನ್ನಾಗಿ ಮಾಡಿ ಕೆಲಸ ಮಾಡಲು ಅವಕಾಶ ಮಾಡಿ ಕೊಟ್ಟಿದ್ದರು ಎಂದು ಅವರಯ ಸ್ಮರಿಸಿದರು.

ವಿಶ್ವಕರ್ಮ ಸಮಾಜ ಅಧ್ಯಕ್ಷ ಕೆ.ಪಿ.ಸಿದ್ದಪ್ಪಾಜಿ ಮಾತನಾಡಿ ಅಡುಗೆ ಕೆಟ್ಟರೆ ಒಂದು ದಿನದ ಊಟ ನಷ್ಟ, ಬೆಳೆ ನಾಶವಾದರೆ ಒಂದು ವರ್ಷ ಊಟ ನಷ್ಟ, ಮಕ್ಕಳ ವಿದ್ಯಾಬ್ಯಾಸ ನಷ್ಟವಾದರೆ ಜೀವನ ಪೂರ್ತಿ ನಷ್ಟ ಆದ್ದರಿಂದ ಸಮಾಜದ ಬಂಧುಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಕಾಗದಂತೆ ನೋಡಿ ಕೊಳ್ಳಿ ಎಂದು ತಿಳಿಹೇಳಿದರು.

ಈ ವೇಳೆ ಮೈಸೂರು ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹೃದ್ರೋಗ ತಜ್ಞರಾದ ಡಾ.ಕೇಶವಮೂರ್ತಿ, ಕನಕಧಾಮ ಆಶ್ರಮದ ಸಂಸ್ಥಾಪಕರು ಧಾರ್ಮಿಕ ಮತ್ತು ಅಧ್ಯಾತ್ಮಿಕ ಚಿಂತಕರಾದ ಯೋಗರತ್ನ ಕೆ.ಎಸ್.ಮುಕುಂದನ್ ಅವರು ಮಾತನಾಡಿದರು.

ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸಮಾಜದ ಮಂಟೇಲಿಂಗಚಾರ್, ನಾಗಚಾರಿ ಮತ್ತಿತರರನ್ನು ಸನ್ಮಾನಿಸಲಾಯಿತು. 

ಕಾರ್ಯದರ್ಶಿ ಮುಳ್ಳೂರು ಸಿದ್ದಪ್ಪಾಜಿ, ಡಾ.ನಾಗೇಶ್, ಮಾಜಿ ಅಧ್ಯಕ್ಷ ಆರ್. ರವಿ, ಯೋಗ ಪ್ರಸಾದ್ ಮತ್ತಿತರರು‌ ಉಪಸ್ಥಿತರಿದ್ದರು.

ಖ್ಯಾತ ಅಂತ ರಾಷ್ಟ್ರೀಯ ಕ್ರೀಡಾಪಟುಡಾ.ಕೆ.ಎಸ್ ರಾಜಣ್ಣ ಅವರಿಗೆ ಸನ್ಮಾನ Read More

2 ದಶಕದ ನಂತರ ಪಾಳ್ಯ-ಉಗನಿ ರಸ್ತೆಗೆ ಅಭಿವೃದ್ಧಿ ಭಾಗ್ಯ; ಮಂಜುನಾಥ್ ಚಾಲನೆ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಕಳೆದ ಎರಡು ದಶಕಗಳಿಂದ ದುರಸ್ತಿ ಕಾಣದೆ ಹಾಳಾಗಿದ್ದ ತಾಲ್ಲೂಕಿನ ಪಾಳ್ಯ-ಉಗನಿ ರಸ್ತೆ ಅಭಿವೃದ್ಧಿ ಹಾಗೂ ಡಾಂಬರೀಕರಣ ಕಾಮಗಾರಿಗೆ ಹನೂರು ಶಾಸಕ ಎಂ. ಆರ್. ಮಂಜುನಾಥ್ ಅವರು ಚಾಲನೆ ನೀಡಿದರು.

ಸುಮಾರು 5 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ನಂತರ ಮಂಜುನಾಥ್ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಭಾಗದ ಜನರ ಬಹುದಿನಗಳ ಬೇಡಿಕೆಯಾದ ಈ ಪಾಳ್ಯ-ಉಗನಿಯ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ಗುದ್ದಲಿಪೂಜೆ ಮಾಡಲಾಗಿದೆ. ಈ ಕಾಮಗಾರಿಯ ಗುಣಮಟ್ಟವನ್ನು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಾಪಾಡಿ ಕೊಳ್ಳುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.

ನಾನು ಕಳೆದ ಎರಡೂವರೆ ವರ್ಷಗಳ ಹಿಂದೆ ಚುನಾವಣೆ ಸಂದರ್ಭದಲ್ಲಿ ಈ ಪಾಳ್ಯ ಮತ್ತು ಉಗನಿಯ ಗ್ರಾಮಕ್ಕೆ ಭೇಟಿ ನೀಡಿದ್ದಾಗ ಸಣ್ಣ ಸಣ್ಣ ಮಕ್ಕಳು ಈ ರಸ್ತೆ ತುಂಬಾ ಹಾಳಾಗಿದೆ ಅದಕ್ಕೆ ಬಸ್ಸು, ಆಟೋಗಳು ರಸ್ತೆಯಲ್ಲಿ ಬರಲು ಒಪ್ಪುತ್ತಿಲ್ಲ, ನಮಗೆ ಶಾಲಾ ಕಾಲೇಜುಗಳಿಗೆ ಹೋಗಿ ಬರಲು ನಿತ್ಯ ತೊಂದರೆಯಾಗುತ್ತಿದೆ ಎಂದು ಅಳಲು ತೋ ಡಿಕೊಂಡಿದ್ದರು,ಜತೆಗೆ ಸತ್ತೇಗಾಲ ತನಕ ರಸ್ತೆ ತೀರಾ ಹದಗೆಟ್ಟು ಈ ಮಾರ್ಗದಲ್ಲಿ ಜನರು ಓಡಾಡುವುದಕ್ಕೆ ತುಂಬಾ ಕಷ್ಟಕರವಾಗಿತ್ತು ಇದರ ಮಧ್ಯ ಮಳೆ ಬಂದರೆ ಹೆಚ್ಚಿನ ಅಪಘಾತಗಳು ಆಗುತ್ತಿತ್ತು ಇದನ್ನೆಲ್ಲ ನೋಡಿದ ಗ್ರಾಮದ ಜನರು ದಿನ ಬೆಳೆಗಾದರೆ ನನ್ನ ಬಳಿ ಬಂದು ಅಳಲು ತೋಡಿ ಕೊಳ್ಳುತ್ತಿದ್ದರು ಅದಕ್ಕೆ ಸ್ಪಂದಿಸಿದ್ದೇನೆ ಎಂದು ತಿಳಿಸಿದರು.

ಕೂಡಲೆ ಈ ರಸ್ತೆ ಅಭಿವೃದ್ದಿ ಆಗಲೇಬೇಕೆಂದು ನನಗೆ ತುಂಬಾ ಚಿಂತೆ ಕಾಡುತ್ತಿತ್ತು ಹಾಗಾಗಿ ಈ ರಸ್ತೆ ಅಭಿವೃದ್ಧಿಗೆ ಈಗ ಕಾಲ ಕೂಡಿ ಬಂದಿದೆ ಅದಕ್ಕೆ ಗ್ರಾಮಸ್ಥರು ತಾವೇ ನಿಂತು ಈ ರಸ್ತೆ ಅಭಿವೃದ್ಧಿ ಮಾಡಿಸಿಕೊಳ್ಳಿ ಎಂದು ಕರೆ ನೀಡಿದರು.

ನಾನು ಇಡಿ ಕ್ಷೇತ್ರವನ್ನು ಬಹಳಷ್ಟು ಅಭಿವೃದ್ಧಿ ಮಾಡಬೇಕೆಂದು ಸರ್ಕಾರಕ್ಕೆ 254 ಕೋಟಿ ರೂ.ಗಳ ಬೇಡಿಕೆ ಇಟ್ಟಿದ್ದೆ. ಆದರೆ ಸರ್ಕಾರ 50 ಕೋಟಿ ಅಭಿವೃದ್ಧಿಗಾಗಿ ನೀಡಿದೆ, ಹಾಗಾಗಿ ಮುಂದಿನ ದಿನಗಳಲ್ಲಿ ಆ ಹಣವನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಸಿ ಕೊಳ್ಳುವುದಾಗಿಯೂ ಮುಂದಿನ ದಿನಗಳಲ್ಲಿ ಉಗನಿಯ-ಸತ್ತೇಗಾಲ ರಸ್ತೆ ಅಭಿವೃದ್ಧಿ ಮಾಡುವುದಾಗಿ ಶಾಸಕರು
ಭರವಸೆ ನೀಡಿರು.

ಉಗನಿ ಗ್ರಾಮದ ಮುಖಂಡ ಹಾಗೂ ಮಾಜಿ ಗ್ರಾ.ಪಂ.ಅಧ್ಯಕ್ಷ ಮೂರ್ತಿ ಮಾತನಾಡಿ ಕಳೆದ 30 ವರ್ಷಗಳ ಹಿಂದೆ ನಾಗಪ್ಪ ಅವರ ಅವಧಿಯಲ್ಲಿ ಪಾಳ್ಯ-ಉಗನಿಯ ರಸ್ತೆ ಕಾಮಗಾರಿ ನಡೆದಿದ್ದು ಮತ್ತೆ ಇಲ್ಲಿವರೆಗೂ ಈ ರಸ್ತೆ ಅಭಿವೃದ್ಧಿ ಕಂಡಿಲ್ಲ ಎಂದು ಹೇಳಿದರು.

ಕಳೆದೆರಡು ದಶಕಗಳಿಂದ ದುರಸ್ತಿ ಕಾಣದೆ ತೀರಾ ಹದಗೆಟ್ಟಿದ್ದು ಈ ರಸ್ತೆಯಲ್ಲಿ ರೈತರು, ಶಾಲೆಯ ಮಕ್ಕಳು ಹಾಗೂ ಗ್ರಾಮದ ಜನರು ಓಡಾಡಲು ತುಂಬಾ ತೊಂದರೆಯಾಗಿತ್ತು, ನಾನು ನಮ್ಮ ಗ್ರಾಮದವರು ಒಟ್ಟುಗೂಡಿ ಈ ಹಿಂದೆ ಕಳೆದ ಮೂರು ಬಾರಿ ಶಾಸಕರಾಗಿದ್ದ ಆರ್.ನರೇಂದ್ರ ಅವರಿಗೆ ಈ ರಸ್ತೆ ಅಭಿವೃದ್ಧಿ ಮಾಡಿಸಿಕೊಡುವಂತೆ ಮನವಿ ಮಾಡಿದ್ದೆವು ಎಂದು ಹೇಳಿದರು.

ಆದರೆ ಒಂದು ಮೂರು ಅಡಿಯನ್ನು ರಸ್ತೆ ಅಭಿವೃದ್ಧಿಯನ್ನು ಮಾಡುವುದಕ್ಕೆ ಮಾಜಿ ಶಾಸಕರಾದ ನರೇಂದ್ರ ರವರ ಕೈಯಲ್ಲಿ ಸಾಧ್ಯವಾಗಲಿಲ್ಲ ಎಂದು ಮಾಧ್ಯಮದವರ ಮುಂದೆ ಆರೋಪ ಮಾಡಿದರು.

ಕೇವಲ ಎರಡು ವರ್ಷ ಮೂರು ತಿಂಗಳಲ್ಲಿ ಹಾಲಿ ಶಾಸಕ ಎಂ ಆರ್ ಮಂಜುನಾಥ್ ಅವರು ಸರ್ಕಾರದ ಗಮನಕ್ಕೆ ತಂದು ಹೋರಾಟ ಮಾಡಿ 5 ಕೋಟಿ ಅನುದಾನ ತಂದು ಪಾಳ್ಯ ಮಾರ್ಗದಿಂದ ಉಗನಿಯ ಗ್ರಾಮದವರೆಗೆ ರಸ್ತೆ ಅಭಿವೃದ್ಧಿ ಮಾಡಿಸಲು ಇಂದು ಗುದ್ದಲಿ ಪೂಜೆ ನೆರವೇರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಉಗನಿ ಗ್ರಾಮದಿಂದ ಸತ್ತೇಗಾಲವರೆಗೆ ರಸ್ತೆ ಅಭಿವೃದ್ಧಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಈಗಾಗಲೇ ಎರಡು ವರ್ಷ ಮೂರು ತಿಂಗಳು ಅವಧಿಯಲ್ಲಿ 200 ಕ್ಕೂ ಹೆಚ್ಚು ಕೋಟಿ ಅನುದಾನ ತಂದು ಕ್ಷೇತ್ರದ ಬಹಳಷ್ಟು ಗ್ರಾಮಗಳನ್ನು ಅಭಿವೃದ್ಧಿ ಮಾಡುವುದಕ್ಕೆ ಮುಂದಾಗಿದ್ದಾರೆ ಇಂತಹ ಶಾಸಕರು ಸಿಕ್ಕಿರುವುದು ನಮ್ಮ ಭಾಗ್ಯ ಎಂದು ಶ್ಲಾಘಿಸಿದರು.

ಈ ಸಂಧರ್ಭದಲ್ಲಿ ಲೋಕೋಪಯೋಗಿ ಇಲಾಖೆ ಕಿರಿಯ ಅಭಿಯಂತರ ಸುರೇಂದ್ರ, ಪಾಳ್ಯ ಗ್ರಾಮ ಪಂಚಾಯತಿ ಸದಸ್ಯರಾದ ರವಿ, ಕಮಲಾಪುರ ರಾಜು, ಮುಖಂಡರಾದ ಗೋಪಾಲನಾಯಕ, ದೊಡ್ಡ ಸಿಗನಾಯಕ,ದೊಡ್ಡರಾಜು, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಬಸವರಾಜು,ಉಗನಿಯ ಮೂರ್ತಿ, ಶಿವಮಾದಯ್ಯ, ರಘು, ಸಿಂಗನಲ್ಲೂರು ರಾಜಣ್ಣ, ಎಸ್.ಆರ್ ಮಹದೇವ್, ಹನೂರು ಗೋವಿಂದ, ಅಮೀನ್, ವೆಂಕಟೇಶ್, ಹನೂರು ಮಂಜೇಶ್ ಮತ್ತಿತರರು ಹಾಜರಿದ್ದರು.

2 ದಶಕದ ನಂತರ ಪಾಳ್ಯ-ಉಗನಿ ರಸ್ತೆಗೆ ಅಭಿವೃದ್ಧಿ ಭಾಗ್ಯ; ಮಂಜುನಾಥ್ ಚಾಲನೆ Read More

ಕೊಳ್ಳೇಗಾಲ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಎನ್. ಬಸವರಾಜು ಆಯ್ಕೆ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಕೊಳ್ಳೇಗಾಲ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಎನ್. ಬಸವರಾಜು, ಪ್ರಧಾನ ಕಾರ್ಯದರ್ಶಿಯಾಗಿ ಡಿ. ಕೆಂಪಯ್ಯರವರು ಆಯ್ಕೆ ಯಾಗಿದ್ದಾರೆ.

ನ್ಯಾಯಾಲಯದ ಕಟ್ಟಡದಲ್ಲಿರುವ ವಕೀಲರ ಗ್ರಂಥಾಲಯದಲ್ಲಿ ಶುಕ್ರವಾರ ಸಂಘದ ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಯಿತು.

ಹಿರಿಯ ವಕೀಲರಾದ
ಮಾದಪ್ಪ ಚುನಾವಣಾಕಾರಿಗಳಾಗಿದ್ದರು.

ವಕೀಲರಾದ ಡಿ ವೆಂಕಟಾಚಲ, ಎಂ. ಮಲ್ಲಿಕಾರ್ಜುನ, ಸಿ.ಬಿ. ಮಹೇಶ್ ಕುಮಾರ್ ಹಾಗೂ ಎನ್ ಬಸವರಾಜು ಅವರುಗಳು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು.

ಚುನಾವಣೆಯಲ್ಲಿ 86 ಮತಗಳು ಚಲಾವಣೆಗೊಂಡು 40 ಮತಗಳು ಎನ್. ಬಸವರಾಜುರವರಿಗೆ ಲಭಿಸಿದ್ದರಿಂದ ಅಂತಿಮವಾಗಿ ಎನ್. ಬಸವರಾಜು ಜಯಗಳಿಸಿ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಉಳಿದ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಡಿ. ಕೆಂಪಯ್ಯ, ಉಪಾಧ್ಯಕ್ಷರಾಗಿ ಸೀಮಾ ತಹಸೀನಾ, ಖಜಾಂಚಿಯಾಗಿ ಅಮೃತ ರಾಜ್, ಸಹ ಕಾರ್ಯದರ್ಶಿಯಾಗಿ ವಿನಯ್ ಅವರು ಆಯ್ಕೆಯಾಗಿದ್ದಾರೆ.

ಈ ಹಿಂದೆ ಅಧ್ಯಕ್ಷರಾಗಿದ್ದ ಸಿ.ರವಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿ.ಬಿ.ಮಹೇಶ್ ಕುಮಾರ್ ಅವರ ಅವಧಿ ಕಳೆದ ಜುಲೈಗೆ ಮುಕ್ತಾಯ ಕೊಂಡಿದ್ದರ ಹಿನ್ನೆಲೆಯಲ್ಲಿ ಮುಂದಿನ ಎರಡು ವರ್ಷದ ಅವಧಿಗೆ ಚುನಾವಣೆ ನಡೆಯಿತು.

ಕೊಳ್ಳೇಗಾಲ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಎನ್. ಬಸವರಾಜು ಆಯ್ಕೆ Read More

ಗ್ರೊಮೋರ್ ಕಂಪನಿಯ ರಸಗೊಬ್ಬರದ ಅಂಗಡಿಯಲ್ಲಿ ದಿಢೀರ್ ತಪಾಸಣೆ

ಕೊಳ್ಳೇಗಾಲ,ಆ.1: ಉತ್ತರ ಕರ್ನಾಟಕ ಭಾಗದಲ್ಲಿ ಯೂರಿಯಾ ಕೃತಕ ಅಭಾವದಿಂದ ಉಂಟಾಗಿರುವ ಗಲಾಟೆ ಹಿನ್ನೆಲೆಯಲ್ಲಿ ಇಂದು ಪಟ್ಟಣದಲ್ಲಿರುವ ಗ್ರೊಮೋರ್ ಕಂಪನಿಯ ರಸಗೊಬ್ಬರದ ಅಂಗಡಿಯ ಮೇಲೆ ಕಾರ್ಯಾಚರಣೆ ನಡೆಯಿತು.

ಪೊಲೀಸರು ಹಾಗೂ ತಹಶೀಲ್ದಾರರು ಧಿಡೀರ್ ಜಂಟಿ ಕಾರ್ಯಾಚರಣೆ ನಡೆಸಿ ದಾಸ್ತಾನು ಪರಿಶೀಲಿಸಿದರು.

ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ಕೊಳ್ಳೇಗಾಲ ವೃತ್ತ ನಿರೀಕ್ಷಕ ಶಿವಮಾದಯ್ಯ ಹಾಗೂ ತಹಶೀಲ್ದಾರ್ ಬಸವರಾಜು ಅವರು ಕಾರ್ಯಾಚರಣೆ ನಡೆಸಿದರು.

ಮೊದಲಿಗೆ ಪಟ್ಟಣದ ರಾಮಸ್ವಾಮಿ ಬಡಾವಣೆಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗ್ರೊಮೊರ್ ಅಂಗಡಿಗೆ ಏಕಏಕಿ ನುಗ್ಗಿ ರಸ ಗೊಬ್ಬರಗಳ ದಾಸ್ತಾನು ಹಾಗೂ ಮಾರಾಟದ ಪುಸ್ತಕಗಳನ್ನು ಪರಿಶೀಲನೆ ನಡೆಸಿ,ನಂತರ ಅಂಗಡಿಗೆ ಸಂಬಂಧಿಸಿದ ಎರಡು ಗೋದಾಮುಗಳಿಗೆ ನುಗ್ಗಿ ಪರಿಶೀಲನೆ ನಡೆಸಿ, ರಸಗೊಬ್ಬರದ ದಾಸ್ತಾನು ಹಾಗೂ ದಾಸ್ತಾನು ಪುಸ್ತಕದಲ್ಲಿ ದಾಖಲಾಗಿರುವಂತೆ ವಿವಿಧ ಬಗೆಯ ಗೊಬ್ಬರಗಳ ಮೂಟೆಗಳನ್ನು ಪರಿಶೀಲಿಸಿದರು.

ಈ ವೇಳೆ ತಹಸೀಲ್ದಾರ್ ಬಸವರಾಜು ಅವರು ಗೋದಾಮಿನಲ್ಲಿ ದಸ್ತಾನಿರುವ ಯೂರಿಯಾ, ಅಮೋನಿಯಂ ಸಲ್ಫೇಟ್, ಪೊಟ್ಯಾಶಿಯಂ, ಡಿ.ಎಪಿ ಹಾಗೂ ಇನ್ನಿತರ ವಿವಿಧ ರಸಗೊಬ್ಬರಗಳು ದಾಸ್ತಾನಿರುವುದನ್ನು ಕಂಡು ಸ್ಥಳದಲ್ಲಿದ್ದ ಗ್ರೊಮೊರ್ ಕಂಪನಿಯ ಸಿಬ್ಬಂದಿಗಳನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಂಪನಿಯ ಪ್ರಭಾರ ವ್ಯವಸ್ಥಾಪಕ ನಂದನ್ ಕುಮಾರ್, ಕ್ಷೇತ್ರಪಾಲಕ ಬಾಲರಾಜು, ನಗದು ಗುಮಾಸ್ತ ಸುಭಾಷ್ ಗೋದಾಮಿನಲ್ಲಿರುವ ಗೊಬ್ಬರ ದಾಸ್ತಾನು ಹಾಗೂ ಮಾರಾಟದ ಕುರಿತು ಮಾಹಿತಿ ನೀಡಿದರು ಈ ವೇಳೆ ದಾಸ್ತಾನು ಪುಸ್ತಕದಲ್ಲಿ ದಾಖಲಾಗಿರುವಂತೆ ಗೋದಾಮಿನಲ್ಲಿರುವ ಗೊಬ್ಬರದ ದಾಸ್ತಾನಿನಲ್ಲಿ ಯಾವುದೇ ವ್ಯತ್ಯಾಸ ಕಂಡು ಬಾರದ ಹಿನ್ನೆಲೆಯಲ್ಲಿ ವಾಪಸ್ ತೆರಳಿದರು.

ಈ ವೇಳೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ವೃತ್ತ ನಿರೀಕ್ಷಕ ಶಿವಮಾದಯ್ಯ ಅವರು ಉತ್ತರ ಕರ್ನಾಟಕ ಭಾಗದಲ್ಲಿ ಯೂರಿಯಾ ಕೃತಕ ಅಭಾವದಿಂದ ಉಂಟಾಗಿರುವ ಗಲಾಟೆ ಹಿನ್ನೆಲೆಯಲ್ಲಿ
ಹಿರಿಯ ಅಧಿಕಾರಿಗಳ ನಿರ್ದೇಶನದ ಹಿನ್ನೆಲೆಯಲ್ಲಿ ಗೊಬ್ಬರದ ಅಂಗಡಿಗೆ ಭೇಟಿ ನೀಡಿ ತಪಾಸಣೆ ನಡೆಸಲಾಗಿದೆ. ಈ ವೇಳೆ ದಾಸ್ತಾನು ಪುಸ್ತಕದಲ್ಲಿ ದಾಖಲಾಗಿರುವಂತೆ ಗೋದಾಮಿನಲ್ಲಿರುವ ಗೊಬ್ಬರದ ದಾಸ್ತಾನಿನಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಗ್ರೊಮೋರ್ ಕಂಪನಿಯ ರಸಗೊಬ್ಬರದ ಅಂಗಡಿಯಲ್ಲಿ ದಿಢೀರ್ ತಪಾಸಣೆ Read More

ನಿಯಮ ಮೀರಿ ವೈನ್ ಶಾಪ್ ಮುಂದೆಮದ್ಯ ಸೇವನೆ:ಕ್ರಮಕ್ಕೆ ತಹಸೀಲ್ದಾರ್ ಸೂಚನೆ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ,ಆ.1: ವೈನ್ ಶಾಪ್ ವೊಂದರಲ್ಲಿ ನಿಯಮ ಮೀರಿ ತಹಶೀಲ್ದಾರ್ ಹಾಗೂ ಪೊಲೀಸ್ ವೃತ್ತ ನಿರೀಕ್ಷಕರ ಎದುರೇ ಗ್ರಾಹಕರು ಮದ್ಯ ಸೇವನೆ ಮಾಡುತ್ತಿದ್ದುದು ಕಂಡು ಅಬಕಾರಿ ನಿರೀಕ್ಷಕರ ಮೇಲೆ ತಹಶೀಲ್ದಾರರು ಅಸಮಾಧಾನಗೊಂಡ ಪ್ರಸಂಗ ನಡೆದಿದೆ.

ಅಬಕಾರಿ ನಿಯಮದ ಪ್ರಕಾರ ಸಿ.ಎಲ್ 7 ಪರವಾನಗಿ ಹೊಂದಿರುವ ಬಾರ್ ಗಳಲ್ಲಿ ಮಾತ್ರ ಕುಡಿಯಲು ಅವಕಾಶವಿರುವಿದೆ, ಆದರೆ ಸಿ.ಎಲ್ 2 ಪರವಾನಗಿ ಹೊಂದಿರುವ ಪಟ್ಟಣದ ದೀಪ ವೈನ್ಸ್ ನಲ್ಲಿ ನಿಯಮ ಮೀರಿ ರಾಜಾರೋಷವಾಗಿಯೇ ತಹಶೀಲ್ದಾರ್ ಹಾಗೂ ಪೊಲೀಸ್ ವೃತ್ತ ನಿರೀಕ್ಷಕರ ಎದುರೇ ಗ್ರಾಹಕರು ಮದ್ಯ ಸೇವನೆ ಮಾಡುತ್ತಿದ್ದರು.ಇದನ್ನು ಕಂಡು ಅಬಕಾರಿ ನಿರೀಕ್ಷಕರ ಮೇಲೆ ತಹಶೀಲ್ದಾರ್ ಅಸಮಾಧಾನಗೊಂಡರು.

ಗುರುವಾರ ಸಂಜೆ ತಹಶೀಲ್ದಾರ್ ಬಸವರಾಜು ಅವರು ಆರಕ್ಷಕ ವೃತ್ತ ನಿರೀಕ್ಷಕ ಶಿವಮಾದಯ್ಯ ಅವರ ಜೊತೆ ಗ್ರೊಮೊರ್ ರಸಗೊಬ್ಬರ ಕಂಪನಿಯ ಗೋದಾಮು ಪರಿಶೀಲನೆಗೆ ಹೋಗಿದ್ದಾಗ ಅವರ ವಾಹನವನ್ನು ದೀಪ ವೈನ್ಸ್ ಬಳಿ ನಿಲ್ಲಿಸಿದ್ದರು. ಈ ವೇಳೆ ಅವರ ಎದುರೇ ಗಿರಾಕಿಗಳು ರಾಜಾರೋಷವಾಗಿ ದೀಪವೈನ್ಸ್ ಶಾಪ್ ಕೌಂಟರ್ ಹಾಗೂ ಆಸುಪಾಸಿನಲ್ಲಿ ಮದ್ಯ ಸೇವನೆ ಮಾಡುತ್ತಿದ್ದುದು ಅಸಮಾಧಾನಕ್ಕೆ ಕಾರಣವಾಗಿದೆ.

ವೈನ್ಸ್ ಶಾಪ್ ಬಳಿ ಕುಡಿದು ಬಿಸಾಡಿದ್ದ ಮದ್ಯದ ಪೌಚ್ ಗಳ ರಾಶಿ ಬಿದ್ದು ಅಶುಚಿತ್ವವಾಗಿರುವುದನ್ನು ಕಂಡು ಕೂಡಲೇ ಅಬಕಾರಿ ನಿರೀಕ್ಷಕ ದಯಾನಂದ್ ಅವರಿಗೆ ಮೊಬೈಲ್ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಸೂಚಿಸಿದ್ದಾರೆ.

ಆದರೆ ದಯಾನಂದ ಅವರು ತಹಶೀಲ್ದಾರ್ ರವರ ಕರೆಯನ್ನು ಗಣನೆಗೆ ತೆಗೆದುಕೊಂಡಂತೆ ಕಂಡಿಲ್ಲ. ಹಾಗಾಗಿ ಮತ್ತೆ ಕರೆ ಮಾಡಿದ್ದಾರೆ, ಕರೆ ಮಾಡಿದ 40 ನಿಮಿಷದ ಬಳಿಕ ಅಬಕಾರಿ ಇಲಾಖೆಯ ಮುಖ್ಯ ಪೇದೆ ಪ್ರದೀಪ್ ಎಂಬುವವರು ಸ್ಥಳಕ್ಕೆ ಬಂದಿದ್ದಾರೆ.

ಈ ವೇಳೆ ಪ್ರದೀಪ್ ನನ್ನು ಪ್ರಶ್ನಿಸಿದ ತಹಶೀಲ್ದಾರ್ ಬಸವರಾಜು ಅವರು ಈ ಅಂಗಡಿಗೆ ನೀಡಿರುವ ಲೈಸೆನ್ಸ್ ಯಾವುದು ಎಂದು ಕೇಳಿದ್ದಾರೆ. ಇದಕ್ಕೆ ಪ್ರದೀಪ್ ಅವರು ಸಿ ಎಲ್ 2 ಎಂದಿದ್ದಾರೆ.

ಹಾಗಿದ್ದರೆ ಇಲ್ಲಿ ಪಾರ್ಸೆಲ್ ಕೊಡಲು ಮಾತ್ರ ಅವಕಾಶ ಇದೆ, ನಿಯಮ ಮೀರಿ ಅಂಗಡಿಯಲ್ಲಿ ಕುಡಿಯಲು ಅವಕಾಶ ನೀಡಿದ್ದಾರೆ ನಿಮ್ಮ ಇಲಾಖೆ ನಿಯಮದ ಪ್ರಕಾರ ಇವರ ಮೇಲೆ ಏನು ಕ್ರಮ ಜರುಗಿಸ ಬಹುದು ಎಂದು ಪ್ರದೀಪ್ ನನ್ನು ಪ್ರಶ್ನಿಸಿದ್ದಾರೆ, ಅದಕ್ಕೆ ಪ್ರದೀಪ ಬಿ ಎಲ್ ಸಿ ಕಾಯ್ದೆಯಡಿ ಪ್ರಕರಣ ದಾಖಲಿಸಬಹುದು ಎಂದು ಹೇಳಿದ್ದಾರೆ ಹಾಗಾದರೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಇಷ್ಟೆಲ್ಲ ನಡೆಯುತ್ತಿದ್ದರು ವೃತ್ತ ನಿರೀಕ್ಷಕ ಶಿವಮಾದಯ್ಯ ಅವರು ಮಾತ್ರ ಏನು ಮಾತನಾಡದೆ ಮೌನ ವಹಿಸಿದ್ದರು

ನಂತರ ತಹಸಿಲ್ದಾರ್ ಬಸವರಾಜು ಅವರು ಮತ್ತೆ ದಯಾನಂದ್ ಅವರಿಗೆ ಕರೆ ಮಾಡಿ  ಈ ಕೂಡಲೇ ಈ ವೈನ್ ಶಾಪ್ ಮೇಲೆ ಪ್ರಕರಣ ದಾಖಲಿಸಿ ಗರಿಷ್ಠ ದಂಡ ವಿಧಿಸಿ ಮತ್ತೆ ಇದೇ ರೀತಿ ಮರುಕಳಿಸಿದರೆ ಇವರ ಪರವಾಗಿ ರದ್ದತಿಗೆ ಸರ್ಕಾರಕ್ಕೆ ಶಿಫಾರಸು ಮಾಡಿ ಎಂದು ಕಾರವಾಗಿ ಸೂಚಿಸಿದರು.

ನಿಯಮ ಮೀರಿ ವೈನ್ ಶಾಪ್ ಮುಂದೆಮದ್ಯ ಸೇವನೆ:ಕ್ರಮಕ್ಕೆ ತಹಸೀಲ್ದಾರ್ ಸೂಚನೆ Read More

ಅಕ್ರಮ ಪಡಿತರ ವಶ:ಮೂವರ ವಿರುದ್ಧ ಪ್ರಕರಣ ದಾಖಲು

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೆಗಾಲ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತಿದ್ದ ವೇಳೆ ಪೊಲೀಸ್ ಇಲಾಖೆ ಮತ್ತು ಆಹಾರ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಚರಣೆ ನಡೆಸಿ
ಚುರುಕು ಮುಟ್ಟಿಸಿದ್ದಾರೆ.

ಈ ವೇಳೆ ಪಡಿತರ ಅಕ್ಕಿ ಹಾಗೂ ಸಾಗಾಟಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದು ಮೂವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ನೆನ್ನೆ 4:30 ರ ವೇಳೆ ಸತ್ತೆಗಾಲ ರಸ್ತೆಯಲ್ಲಿ ಚಾ.ನಗರ ಪಟ್ಟಣದ ಮೂವರು ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತಿದ್ದರು.

ಆಹಾರ ಇಲಾಖೆ ಶಿರಸ್ತೆದಾ‌ರ್ ವಿಶ್ವನಾಥ್ ಅವರಿಗೆ ಬಂದ ಖಚಿತ ಮಾಹಿತಿ ಆಧರಿಸಿ ಪೊಲೀಸ್ ಇಲಾಖೆ ಮತ್ತು ಆಹಾರ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಚರಣೆ ನಡೆಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಚೆಲುವನಹಳ್ಳಿ ಅಡ್ಡರಸ್ತೆ ಬಳಿ ಕಾರನ್ನು ಅಡ್ಡಗಟ್ಟಿದ್ದಾರೆ‌. ಈ ವೇಳೆ ಕೆ.ಎ.05_ಎಂ.ಟಿ. 3778 ಸಂಖ್ಯೆಯ ಸ್ವಿಪ್ಟ್ ಕಾರಿನಲ್ಲಿದ್ದ 248 ಕೆ.ಜಿ ಪಡಿತರ ಅಕ್ಕಿ ಹಾಗೂ ಸಾಗಾಟಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ.

ಇದಾಯತ್, ಜುಬೇದ್ ಮತ್ತು ವಾಸೀಂ ಎಂಬುವವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಪಡಿತರ ಅಕ್ಕಿ ಖರೀದಿಸಿ ಸಾಗಾಟ ಮಾಡುವ ಜಾಲಗಳ ಮೇಲೆ ಪೊಲೀಸರು ಮತ್ತೆ ಆಹಾರ ಇಲಾಖೆ ಅಧಿಕಾರಿಗಳು ಎಷ್ಟೇ ಧಾಳಿ ನಡೆಸಿ ಅಕ್ರಮವನ್ನು ಬೇಧಿಸುತಿದ್ದರೂ ಮತ್ತೆ ಈ ಜಾಲಗಳು ಕವಲೊಡೆಯುತಿದೆ.

ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪಡಿತರ ಅಕ್ಕಿಯನ್ನು ಖರೀದಿಸಿ ದಾಸ್ತಾನು ಮಾಡಿಕೊಂಡು ಹೆಚ್ಚಿನ ಬೆಲೆಗೆ ರೈಸ್ ಮಿಲ್ ಮಾಲೀಕರಿಗೆ ಸಾಗಿಸುವ ವ್ಯವಸ್ಥಿತ ಕಳ್ಳ ಜಾಲಗಳು ಬಡವರನ್ನೆ ಬಂಡವಾಳ ಮಾಡಿಕೊಂಡಿವೆ.

ಉಚಿತವಾಗಿ ನೀಡುವ ಶಕ್ತಿವರ್ಧಿತ ಪಡಿತರ ಅಕ್ಕಿಯನ್ನು ಏನೇನೋ ನೆಪ ಹೇಳಿಕೊಂಡು ಬರುವ ಅಕ್ಕಿ ಕಳ್ಳರ ಜಾಲ ಅದನ್ನು ಬಳಸದಂತೆ ನೋಡಿಕೊಂಡು ಕಡಿಮೆ ಬೆಲೆಗೆ ಖರೀದಿಸುತ್ತಾರೆ. ಅದನ್ನ ರೈಸ್ ಮಿಲ್ ಗಳಿಗೆ ತೆಗೆದುಕೊಂಡು ಹೋಗಿ ಪಾಲಿಶ್ ಮಾಡಿ ಅದೇ ಅಕ್ಕಿಯನ್ನ 25 ಕೆ.ಜಿಯ ಬ್ರಾಂಡೆಡ್ ಚೀಲಕ್ಕೆ ತುಂಬಿ ದಿನಸಿ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದಾರೆ.

ಇಲ್ಲಿ ಕಡಿಮೆ ಬೆಲೆಗೆ ನಾವು ಕೊಟ್ಟ ಪಡಿತರ ಅಕ್ಕಿಯೇ ಪಾಲೀಶ್ ಮಾಡಿ ಹೆಚ್ಚಿನ ಬೆಲೆ ನಮಗೆ ಮಾರಾಟ ಮಾಡುತ್ತಾರೆ ಎಂಬುದನ್ನು‌ ಜನ ಅರಿಯಬೇಕಿದೆ.

ಚಾ.ನಗರ ಜಿಲ್ಲೆಯಲ್ಲಿ ತಿಂಗಳಿಗೆ ಮೂರರಿಂದ ನಾಲ್ಕು ಪ್ರಕರಣಗಳು ಅಕ್ರಮ ಪಡಿತರ ಅಕ್ಕಿ ಸಾಗಾಟದ ಮೇಲೆ ದಾಖಲಾಗುತ್ತಿದೆ. ಆದರೂ ಕಾಳಸಂತೆಕೋರರು ಕಡಿಮೆಯಾಗದೆ ಹೆಚ್ಚಾಗಿ ಪಡಿತರ ಅಕ್ಕಿ ಮಾಫಿಯದಲ್ಲಿ ತೊಡಗಿಕೊಳ್ಳುತಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಆಹಾರ ನಿರೀಕ್ಷಕ ಎಂ.ಎನ್. ಪ್ರಸಾದ್, ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪಿಎಸ್ಐ ಸುಪ್ರೀತ್ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಅಕ್ರಮ ಪಡಿತರ ವಶ:ಮೂವರ ವಿರುದ್ಧ ಪ್ರಕರಣ ದಾಖಲು Read More