ಶಿವನ ಸಮುದ್ರ ಸಮೂಹ ದೇವಾಲಯಗಳ ಹುಂಡಿ ಏಣಿಕೆ:18. 22 ಲಕ್ಷ ರೂ.ಸಂಗ್ರಹ

ಕೊಳ್ಳೇಗಾಲ: ತಾಲ್ಲೂಕಿನ‌ ಶಿವನ ಸಮುದ್ರದ ಸಮೂಹ ದೇವಾಲಯಗಳ ಹುಂಡಿ ಏಣಿಕೆ ಕಾರ್ಯ ಗುರುವಾರ ನಡೆದಿದ್ದು, 5 ತಿಂಗಳ ಅವಧಿಯಲ್ಲಿ ಬರೋಬ್ಬರಿ 18. 22 ಲಕ್ಷ ರೂ. ಹಣ ಸಂಗ್ರಹವಾಗಿದೆ.

ತಹಶೀಲ್ದಾರ್ ಬಸವರಾಜು ಅವರ ಅಧ್ಯಕ್ಷತೆಯಲ್ಲಿ ಮಧ್ಯ ರಂಗನಾಥಸ್ವಾಮಿ ದೇವಾಲಯದ ದಾಸೋಹ ಭವನದಲ್ಲಿ ಸಮೂಹ ದೇವಾಲಯಗಳಾದ ಮಧ್ಯ ರಂಗನಾಥಸ್ವಾಮಿ ದೇವಾಲಯ, ಪ್ರಸನ್ನ ಮೀನಾಕ್ಷಿ ಹಾಗೂ ಸೋಮೇಶ್ವರ ದೇವಾಲಯ ಮತ್ತು ಆದಿಶಕ್ತಿ ಮಾರಮ್ಮ ದೇವಾಲಯಗಳ‌ ಹುಂಡಿಗಳ ಎಣಿಕೆ ನಡೆಯಿತು.

ಈ ಮೂರು ದೇವಾಲಯಗಳಿಂದ ಒಟ್ಟು 18, 22, 640 ರೂ. ನಗದು 1.5 ಗ್ರಾಂ. ಚಿನ್ನ ಹಾಗೂ 8 ಗ್ರಾಂ ಬೆಳ್ಳಿಯ ಪದಾರ್ಥಗಳು ಸಂಗ್ರಹವಾಗಿದೆ.

ಬೆಳಿಗ್ಗೆಯಿಂದ ಸಂಜೆ ವರೆಗೆ ಹುಂಡಿಗಳ ಎಣಿಕೆ ಕಾರ್ಯ ನಡೆಯಿತು, ಈ ವೇಳೆ ಸಮೂಹ ದೇವಾಲಯಗಳ ಕಾರ್ಯ ನಿರ್ವಾಹಕಾಧಿಕಾರಿ ಸುರೇಶ್, ಪಾಳ್ಯ ಉಪ ತಹಶೀಲ್ದಾರ್ ವಿಜಯ ಕುಮಾರ್, ರಾಜಸ್ವ ನೀರಿಕ್ಷಕ ರಂಗಸ್ವಾಮಿ, ಕಸಬಾ ರಾಜಸ್ವ ನೀರಿಕ್ಷಕ ನಿರಂಜನ್, ಕಸಬಾ ಮತ್ತು ಪಾಳ್ಯ ಹೋಬಳಿಯ ಗ್ರಾಮ ಆಡಳಿತಾಧಿಕಾರಿಗಳಾದ ರಾಕೇಶ್ ಮರಾಠ್, ಜ್ಯೋತಿ, ಪ್ರದೀಪ್, ಶಾಂತರಾಜು, ಸತೀಶ್, ಮೀನಾಕ್ಷಿ, ಗ್ರಾಮ ಸಹಾಯಕರುಗಳಾದ ಸೀಗನಾಯಕ, ಬಸವರಾಜು, ನಾಗರಾಜು ಕೋಟೆಕ್ ಮಹೀಂದ್ರಾ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ್ ಮತ್ತು ಸಿಬ್ಬಂದಿ, ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪ್ರಭಾರ ಎಎಸ್ಐ ಉಮಾವತಿ, ಮುಖ್ಯಪೇದೆ ರಾಘವೇಂದ್ರ, ರಾಜಪ್ಪ, ದೇವಾಲಯದ ಅರ್ಚಕರಾದ ಶ್ರೀಧರ್ ಆಚಾರ್, ಮಾಧವನ್, ಮಧುಸೂದನ್, ನಾಗರಾಜು ದೀಕ್ಷಿತ್ ಮತ್ತಿತರರ ಸಮ್ಮುಖದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು.

ಶಿವನ ಸಮುದ್ರ ಸಮೂಹ ದೇವಾಲಯಗಳ ಹುಂಡಿ ಏಣಿಕೆ:18. 22 ಲಕ್ಷ ರೂ.ಸಂಗ್ರಹ Read More

ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ:ಪತ್ನಿ,ಪ್ರಿಯತಮನಿಗೆ ಜೀವಾವಧಿ ಶಿಕ್ಷೆ

ಚಾಮರಾಜನಗರ/ಕೊಳ್ಳೇಗಾಲ: ವಿವಾಹಿತೆ ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡು ಆತನ ಜತೆ‌ ಸೇರಿ ಪತಿಯನ್ನು ಕೊಂದಿರುವುದು ಸಾಬೀತಾದ ಹಿನ್ನೆಲೆಯಲ್ಲಿ
ಕೊಳ್ಳೇಗಾಲ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು 50 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ.

ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಗುಂಡಿಮಾಳ ಗ್ರಾಮದ ರಾಜಶೇಖರಮೂರ್ತಿ ಕೊಲೆಯಾದ ದುರ್ದೈವಿ.

ಆರೋಪಿಗಳಾದ ರಾಜಶೇಖರ್ ಅವರ ಪತ್ನಿ ನಂದಿನಿ ಮತ್ತು ಆಕೆಯ ಪ್ರಿಯಕರ ದಿನಕರನಿಗೆ ಅಪರ ಜಿಲ್ಲಾ ಮತ್ತು ಸತ್ರ‌ ನ್ಯಾಯಾಲಯದ ನ್ಯಾಧೀಶರಾದ‌ ಟಿ.ಸಿ.ಶ್ರೀಕಾಂತ್ ಅವರು ಜೀವಾವಧಿ ಶಿಕ್ಷೆ ಮತ್ತು ದಂಡವನ್ನು ವಿಧಿಸಿದ್ದಾರೆ.

ವಿವರ:
ರಾಜಶೇಖರಮೂರ್ತಿ ಅವರೊಂದಿಗೆ ನಂದಿನಿ ಮದುವೆಯಾಗಿ ಕಳೆದ 13 ವರ್ಷಗಳಿಂದ ಸಂಸಾರ ನಡೆಸುತ್ತಾ ಪ್ರಾರಂಭದಲ್ಲಿ ಅನ್ನೋನ್ಯವಾಗಿದ್ದಳು.

ನಂತರ ದಿನಕರನೊಂದಿಗೆ ಆಕ್ರಮ ಸಂಬಂಧವನ್ನಿಟ್ಟುಕೊಂಡಿದ್ದಳು. ಇದೇ ವಿಚಾರಕ್ಕೆ ಗಲಾಟೆಯಾಗಿ ಗ್ರಾಮದ ಮುಖಂಡರ ಸಮಕ್ಷಮದಲ್ಲಿ 2-2-2021 ಮತ್ತು 20-4-2021 ರಂದು ನ್ಯಾಯ ಪಂಚಾಯ್ತಿ ಸೇರಿಸಿ ಪ್ರತ್ಯೇಕ ಒಪ್ಪಂದ ಮಾಡಿಸಿ ಒಟ್ಟು 3 ಒಪ್ಪಂದ ಪತ್ರಗಳನ್ನು ಮಾಡಿಸಲಾಗಿತ್ತು.

ಆದರೂ ನಂದಿನಿ ಮತ್ತು ದಿನಕರ ಪುನಃ ಸಂಪರ್ಕದಲ್ಲಿದ್ದರು.23-06-2021 ರಂದು ರಾಜಶೇಖರಮೂರ್ತಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ದಿನಕರ ಮನೆಗೆ ಬಂದಿದ್ದಾನೆ.

ಸ್ವಲ್ಪ ಹೊತ್ತಿನಲ್ಲೇ ರಾಜಶೇಖರಮೂರ್ತಿ ಕೂಡಾ ಮನೆಗೆ ಬಂದಿದ್ದಾರೆ. ಆಗ ನಂದಿನಿ ಮತ್ತು ದಿನಕರ ಜೊತೆಯಲ್ಲಿ ಇದ್ದುದ್ದನ್ನು ನೋಡಿ ಆಕ್ರೋಶಗೊಂಡು ದಿನಕರನ ಮೇಲೆ ಗಲಾಟೆ ಮಾಡಿದ್ದಾರೆ.

ಆಗ ನಂದಿನಿ ಮನೆಯಲ್ಲಿದ್ದ ಖಾರದ ಪುಡಿಯನ್ನು ಗಂಡನ ಕಣ್ಣಿಗೆ ಎರಚಿ ಮಮ್ಮಟ್ಟಿಗೆ ಹಾಕುವ ಕಾವಿನಿಂದ ರಾಜಶೇಖರಮೂರ್ತಿ ಅವರ ತಲೆಗೆ ಹೊಡೆದಿದ್ದಾಳೆ. ನಂತರ ದಿನಕರ ಕೂಡಾ ಅದೇ‌ ಕಾವು ಪಡೆದು ರಾಜಶೇಖರಮೂರ್ತಿ ಅವರ ಮುಖಕ್ಕೆ ಹೊಡೆದಾಗ ಆತ ಪ್ರಜ್ಞೆ ತಪ್ಪಿ ನೆಲದ ಮೇಲೆ ಕುಸಿದು ಬಿದ್ದಿದ್ದಾರೆ.ಅವರ ಮೂಗಿನಿಂದ ರಕ್ತ ಬಂದುದನ್ನು ಕಂಡು ಆರೋಪಿಗಳಿಬ್ಬರೂ ಈ ಕೃತ್ಯವನ್ನು ಮರೆಮಾಚುವ ಸಲುವಾಗಿ ರಾಜಶೇಖರಮೂರ್ತಿಯ ಕೈ ಕಾಲು ಹಿಡಿದು ವಾಸದ ಮನೆಯ ಹಿಂಭಾಗದಲ್ಲಿರುವ ಟಾಯ್ಲೆಟ್ ಗುಂಡಿಯಲ್ಲಿ ತಲೆ ಕೆಳಗಾಗಿ ಹಾಕಿ ಟಾಯ್ಲೆಟ್ ಗುಂಡಿಯ ಸಿಮೆಂಟ್ ಪ್ಲೇಟನ್ನು ಮುಚ್ಚಿಬಿಟ್ಟಿದ್ದಾರೆ.

ಜತೆಗೆ ರಾಜಶೇಖರಮೂರ್ತಿಯ ಬಟ್ಟೆಗಳು, ಹಲ್ಲೆಗೆ ಉಪಯೋಗಿಸಿದ ಕಾವು ನೆಲದ ಮೇಲೆ ಬಿದ್ದಿದ್ದ ರಕ್ತವನ್ನು ಶ್ಯಾಂಪು ಪ್ಯಾಟ್ ಬಳಸಿ ಬಟ್ಟೆಗಳನ್ನು ಸುಟ್ಟು ಹಾಕಿದ್ದಾರೆ.

ನಂತರ ನಂದಿನಿ ಧರಿಸಿದ್ದ ನೈಟಿಯನ್ನು ಒಗೆದು ಸಾಕ್ಷಿ ನಾಶಪಡಿಸಿ ಮಾರನೇ ದಿನ ಏನೂ ತಿಳಿಯದವಳಂತೆ ರಾಜಶೇಖರಮೂರ್ತಿ ಕೆಲಸಕ್ಕೆ ಹೋಗಿದ್ದಾನೆಂದು ಆತನ ತಂದೆ ತಾಯಿಗೆ ತಿಳಿಸಿದ್ದಾಳೆ.

ರಾಜಶೇಖರಮೂರ್ತಿ ಅವರ ಸಹೋದರಿಯ ಮಕ್ಕಳನ್ನು ಬಳಸಿಕೊಂಡು ಟಾಯ್ಲೆಟ್ ಗುಂಡಿಗೆ ಮಣ್ಣು ಹಾಕಿ ಮುಚ್ಚಿದ್ದಾರೆ.

ಒಂದೆರಡು ದಿನವಾದರೂ ಮಗ ಕಾಣದೆ ಹೋದಾಗ ರಾಜಶೇಖರಮೂರ್ತಿ ಅವರ ತಂದೆ ಮಗ ಕಾಣೆಯಾದ ಬಗ್ಗೆ ಠಾಣೆಗೆ ದೂರನ್ನು ನೀಡಿದ್ದಾರೆ.

ನಂತರ ಮನೆಯ ಹಿಂಭಾಗ ಟಾಯ್ಲೆಟ್ ಗೊಂಡಿಯ ಸುತ್ತ ದುರ್ವಾಸನೆ ಬರುತ್ತಿದ್ದನ್ನು ಗಮನಿಸಿ ಅನುಮಾನದಿಂದ ಗುಂಡಿಯ ಸಿಮೆಂಟ್ ಪ್ಲೇಟನ್ನು ಗ್ರಾಮಸ್ಥರ ಸಮ್ಮುಖದಲ್ಲಿ ತೆಗೆಸಿ ನೋಡಿದಾಗ ರಾಜಶೇಖರಮೂರ್ತಿಯ ಶವ ಕೊಳೆತ ಸ್ಥಿತಿಯಲ್ಲಿದ್ದುದು ಕಂಡುಬಂದಿದೆ.

ನಂತರ ಮಗನ ಕೊಲೆಯಾದ ಬಗ್ಗೆ ತಂದೆ ನೀಡಿದ ದೂರಿನ ಆಧಾರದಲ್ಲಿ ತನಿಖಾಧಿಕಾರಿ ಸಂತೋಷ್ ಕಶ್ಯಪ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ.

ಈ ಪ್ರ ರಣದಲ್ಲಿ ಎ 1 ಆರೋಪಿ ನಂದಿನಿ,ಎ2 ಆರೋಪಿ ದಿನಕರ ವಿರುದ್ಧ ನ್ಯಾಯಾಲಯ ವಿಚಾರಣೆ ನಡೆಸಿ ಆರೋಪ ಸಾಭೀತಾದ ಹಿನ್ನೆಲೆಯಲ್ಲಿ ಆರೋಪಿಗಳಿಬ್ಬರಿಗೂ ಜೀವಾವಧಿ ಶಿಕ್ಷೆ ಮತ್ತು 50,000 ರೂ ದಂಡ ವಿಧಿಸಿ ತೀರ್ಪು ನೀಡಿದೆ.

ಸಿ.ಡಿ ಗಿರೀಶ್, ಸರ್ಕಾರಿ ಅಭಿಯೋಜಕರು, ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಳ್ಳೇಗಾಲ ಇವರು ಸರ್ಕಾರದ ಪರವಾಗಿ, ವಾದ ಮಂಡಿಸಿದರು.

ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ:ಪತ್ನಿ,ಪ್ರಿಯತಮನಿಗೆ ಜೀವಾವಧಿ ಶಿಕ್ಷೆ Read More

ಶ್ರೀ ರಾಮಲಿಂಗ ಚೌಡೇಶ್ವರಿ ದೊಡ್ಡ ಕತ್ತಿ ಹಬ್ಬ ಮುಂದೂಡಲು ನಿರ್ಧಾರ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಶ್ರೀ ರಾಮಲಿಂಗ ಚೌಡೇಶ್ವರಿ ದೊಡ್ಡ ಕತ್ತಿ ಹಬ್ಬವನ್ನು ಕುಲದ ಶಿಷ್ಟಾಚಾರ ಪಾಲನೆಯಿಲ್ಲದೆ 16 ಬೀದಿಗಳ ಏಜೆಂಟರು, ಕುಲಸ್ಥರು ಮತ್ತು ಶೆಟ್ಟಿಗಾರರ ಅನುಮತಿ ಇಲ್ಲದೆ ಕೆಲವರು ಸಮಿತಿಯ ಮೂಲಕ ಕತ್ತಿ ಹಬ್ಬವನ್ನು ಮಾಡಲು ಹೊರಟಿರುವ ಕ್ರಮವನ್ನು ವಿರೋಧಿಸಿರುವ ಸಮುದಾಯದ ಮುಖಂಡರು ಹಬ್ಬವನ್ನು ಮುಂದೂಡಿದ್ದಾರೆ.

ಪಟ್ಟಣದಲ್ಲಿ ಆಂಧ್ರ ದೇವಾಂಗ ಸಮುದಾಯ ತಮ್ಮ ಕುಲದೇವತೆಯಾದ ಶ್ರೀರಾಮಲಿಂಗ ಚೌಡೇಶ್ವರಿ ಅಮ್ಮನವರ ದೊಡ್ಡ ಕತ್ತಿ ಹಬ್ಬವನ್ನು 20-07-1921 ರಿಂದ 28-07-1921, 09-02-1962 ರಿಂದ 17-02-1962, 24-05-1982 ರಿಂದ 31-05-1982, 20-01-1999 ರಿಂದ 28-01-1999, 22-01-2015 ರಿಂದ 01-02-2015 ರಲ್ಲಿ ನಡೆಸಿಕೊಂಡು ಬಂದಿದೆ.

ಪ್ರತಿ 12 ವರ್ಷಗಳಿಗೊಮ್ಮೆ ನಡೆಸುವ ಈ ಪ್ರಸಿದ್ಧ ದೊಡ್ಡ ಕತ್ತಿಹಬ್ಬ ಆಚರಣೆ ವಿಚಾರವಾಗಿ ಗೊಂದಲ ಉಂಟಾದ ಕಾರಣ 4-02-2026 ರಿಂದ 18-02-2026 ವರೆಗೆ ಶ್ರೀರಾಮಲಿಂಗ ಚೌಡೇಶ್ವರಿ ಅಮ್ಮನವರ ದೊಡ್ಡ ಕತ್ತಿಹಬ್ಬ ಸೇವಾ ಸಮಿತಿ ವತಿಯಿಂದ ನಡೆಯಬೇಕಿದ್ದ ಹಬ್ಬ ಸಮುದಾಯದ ಯಜಮಾನರು ಹಾಗೂ ಕುಲಸ್ತರ ಸಮ್ಮತಿ ಇಲ್ಲದ ಕಾರಣ ಹಬ್ಬವನ್ನು ಮುಂದೂಡುವಂತಾಗಿದೆ, ಇದರಿಂದಾಗಿ ಹಬ್ಬ ಆಚರಣೆ ಸೇವಾ ಸಮಿತಿಗೆ ಹಿನ್ನಡೆಯಾಗಿದೆ.

ಸಿ.ಎಂ. ಪರಮೇಶ್ವರಯ್ಯ (ಚಿಂತು)ಅವರ ಅಧ್ಯಕ್ಷತೆಯಲ್ಲಿ ಶ್ರೀರಾಮಲಿಂಗ ಚೌಡೇಶ್ವರಿ ಅಮ್ಮನವರ ದೊಡ್ಡ ಕತ್ತಿಹಬ್ಬ ಸೇವಾ ಸಮಿತಿ ವತಿಯಿಂದ ಪಟ್ಟಣದಲ್ಲಿ 4-02-2026 ರಿಂದ 18-02-2026 ವರೆಗೆ ಶ್ರೀ ರಾಮಲಿಂಗ ಚೌಡೇಶ್ವರಿ ಅಮ್ಮನವರ ದೊಡ್ಡ ಕತ್ತಿ ಹಬ್ಬ ನಡೆಸಲು ಮುಂದಾಗಿದ್ದರು. ಆಚರಣಾ ಸಮಿತಿಯ ಸಲಹಾ ಸಮಿತಿ ಸದಸ್ಯರುಗಳಾಗಿ ಬಿ.ಸಿ. ಅಣಾದ್ರಯ್ಯ, ಹಾಗೂ ಡಿ.ವಿ. ಚಂದ್ರಶೇಖರ್, ಅಧ್ಯಕ್ಷರಾಗಿ ಸಿ.ಎಂ. ಪರಮೇಶ್ವರಯ್ಯ (ಚಿಂತು), ಪ್ರಧಾನ ಕಾರ್ಯದರ್ಶಿಯಾಗಿ ಜಿ.ಶ್ರೀ ನೀವಾಸ್, ಖಜಾಂಚಿಯಾಗಿ ಜಿ.ಸಿ. ಉಮಾಶಂಕರ್, ಉಪಾಧ್ಯಕ್ಷರುಗಳಾಗಿ ಎನ್.ಗಿರೀಶ್ ಬಾಬು, ಕೆ.ಸಿ.ರಾಮಯ್ಯ, ಕೆ.ಗೋಪಿನಾಥ್, ಸಿ.ಚೇತನ್ , ಎಸ್.ಮಂಜುನಾಥ್, ಜೆ. ಸುಂದರೇಶ್ ಕುಮಾರ್, ಟಿ.ಎಲ್.ಕೃಷ್ಣಯ್ಯ. ಕಾರ್ಯದರ್ಶಿಗಳಾಗಿ ಎಂ.ಎನ್ ಪರಮೇಶ್ವರಯ್ಯ, ಬಿ.ಎಲ್.ಮನೋಹರ್, ವಿ.ಸುರೇಂದ್ರ, ಜಿ.ಪಿ.ಶ್ರೀನೀವಾಸ್, ಬಿ.ಎನ್. ರವಿಬಾಬು, ಬಿ.ಎನ್. ಶಿವಾನಂದ ಸ್ವಾಮಿ, ಎನ್. ರಾಜು, ಯುವ ಅಧ್ಯಕ್ಷರಾಗಿ ಕೆ.ಎಸ್.ಕಿರಣ್ ರವರನ್ನೊಳಗೊಂಡವರ ಸಮಿತಿ ಮಾಡಿಕೊಂಡು ದೊಡ್ಡ ಕತ್ತಿ ಹಬ್ಬ ಆಚರಣೆಗೆ ಮುಂದಾಗಿದ್ದ ಈ ಸಮಿತಿ ಇದೇ ಅ.6 ರಂದು ಪಟ್ಟಣದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಹಬ್ಬದ ಆಚರಣೆ ಸಂಬಂಧ ಸಭೆ ನಡೆಸಿ ಶಾಸಕ ಎ.ಆರ್.ಕೃಷ್ಣಮೂರ್ತಿ, ಸಂಸದ ಸುನಿಲ್ ಬೋಸ್ ಅವರ ಸಮ್ಮುಖದಲ್ಲಿ ಶ್ರೀ ರಾಮಲಿಂಗ ಚೌಡೇಶ್ವರಿ ದೊಡ್ಡ ಕತ್ತಿಹಬ್ಬ ಲಾಂಛನ ಉದ್ಘಾಟನೆ ಹಾಗೂ ಕಾರ್ಯಕ್ರಮಗಳಿಗೆ ಚಾಲನೆ  ನೀಡಿತ್ತು.

ಇದೇ ವೇಳೆ ಈ ದೊಡ್ಡ ಕತ್ತಿ ಹಬ್ಬ ನಡೆಸಲು 75 ಲಕ್ಷ ದಿಂದ 80 ಲಕ್ಷ ರೂ.ಗಳು ಖರ್ಚಾಗಬಹುದೆಂದು ಅಂದಾಜಿಸಿ ದಾನಿಗಳಿಂದ ಧನ ಸಹಾಯನ್ನು ಕೋರಿತ್ತು.

ಆದರೆ ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಸಮುದಾಯದ ದೊಡ್ಡ ಯಜಮಾನರಾದ ಅಚ್ಗಾಳ್ ನಾಗರಾಜಯ್ಯ ಅವರ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿರುವ ದೇವಾಂಗ ಸಮುದಾಯದ ಮುಖಂಡರು ಈ ನಿರ್ಧಾರವನ್ನು ವಿರೋಧಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಚ್ಗಾಳ್ ನಾಗರಾಜಯ್ಯ ಅವರು ನಮ್ಮ ದೇವಾಂಗ ಸಮಾಜದ ಒಂದು ಗುಂಪಿನ ಪಿ.ಎನ್.ಶಿವಕುಮಾರ್. ಸಿ.ಎಂ.ಪರಮೇಶ್ವರಯ್ಯ (ಚಿಂತು), ಸುರೇಶ್, ಪಿ.ವಿ. ಲಕ್ಷ್ಮಣ ಹಾಗೂ ಇನ್ನಿತರ ಮುಖಂಡರ ಒಂದು ಗುಂಪು ಸೇರಿ 4/02/2026 ರಿಂದ 13/02/2026 ಶ್ರೀ ರಾಮಲಿಂಗ ಚೌಡೇಶ್ವರಿ ದೊಡ್ಡ ಕತ್ತಿ ಹಬ್ಬವನ್ನು ಆಚರಿಸಲು ಮುಂದಾಗಿದ್ದು ಇವರು ನಮ್ಮ ಕುಲದ ಶಿಷ್ಟಚಾರವನ್ನು ಪಾಲನೆ ಮಾಡದೆ 16 ಬೀದಿಗಳ ಎಜೆಂಟ್‌ ರುಗಳು, ಕುಲಸ್ಥರು, ಶೆಟ್ಟಿಗಾರರ ಅನುಮತಿ ಇಲ್ಲದೆ, ವಿಚಾರಗಳನ್ನು ಪಾಲನೆ ಮಾಡದೆ ಹಬ್ಬ ಎಲ್ಲಾ ಯಜಮಾನರುಗಳು ಮತ್ತು ಮುಖಂಡರುಗಳು ಸೇರಿ ಹಬ್ಬದ ಬಗ್ಗೆ ಚರ್ಚೆ ನಡೆಸಿ ಹಬ್ಬ ಆಚರಿಸಲು ತೀರ್ಮಾನ ಕೈಗೊಳ್ಳಬೇಕಾಗಿತ್ತು.

ಆದರೆ ಶ್ರೀರಾಮಲಿಂಗ ಚೌಡೇಶ್ವರಿ ದೊಡ್ಡ ಕತ್ತಿ ಹಬ್ಬ ಸೇವಾ ಸಮಿತಿ ಹೆಸರಿನಲ್ಲಿ ಕತ್ತಿ ಹಬ್ಬ ಮಾಡುತ್ತೇನೆಂದು ಹೊರಟಿರುವುದು ಸರಿಯಲ್ಲ ಎಂದು ಹೇಳಿದರು.

ಮೊದಲು ಮಹಾಸಭೆ ಹಬ್ಬದ ಬಗ್ಗೆ ಚರ್ಚೆಯಾಗಿ ತೀರ್ಮಾನವಾದ ನಂತರ ಪಟ್ಟಣದ ಎಲ್ಲಾ ವರ್ಗದ ಯಜಮಾನರುಗಳು ಮತ್ತು ಮುಖಂಡರುಗಳ ಜೊತೆ ಹಬ್ಬದ ಬಗ್ಗೆ ಚರ್ಚೆ ನಡೆಸಿ ಹಬ್ಬ ಮಾಡಬೇಕೆಂದು ತೀರ್ಮಾನವಾದ ನಂತರ ನಮ್ಮ ಕುಲದಲ್ಲಿ ಸಂಪ್ರದಾಯದಂತೆ ಹಬ್ಬ ಆಚರಣೆ ಮಾಡಬೇಕು. ಇವೆಲ್ಲವನ್ನು ದಿಕ್ಕರಿಸಿ ಕತ್ತಿ ಹಬ್ಬ ಮಾಡಲು ಒಪ್ಪಿಗೆ ನೀಡಲ್ಲ. 2027ಕ್ಕೆ ಕತ್ತಿ ಹಬ್ಬವನ್ನು ಮಾಡಲು ನಾವು ಚಿಂತೆ ಮಾಡಿದ್ದೇವೆ ಎಂದು ಹೇಳಿದರು.

ನಗರಸಭೆ ಉಪಾಧ್ಯಕ್ಷ ಎ.ಪಿ ಶಂಕರ್ ಮಾತನಾಡಿ ಕತ್ತಿ ಹಬ್ಬ ಮಾಡಬೇಕಾದರೆ ಕುಲದ ಗುರುಗಳಾದ ಮಹೇಶ್ ಸ್ವಾಮಿ, ಮಲ್ಲಿಕಾರ್ಜುನಸ್ವಾಮಿ ಇವರ ಅಪ್ಪಣೆ ಪಡೆದುಕೊಂಡೇ ಹಬ್ಬದ ಸಿದ್ಧತೆ ಮಾಡಬೇಕು, 11 ವರ್ಷ ತುಂಬಿ 12ನೇ ವರ್ಷದ ಬಳಿಕ ಕತ್ತಿ ಹಬ್ಬ ಮಾಡಲು ಪದ್ಧತಿ ಇದೆ. ಇವೆಲ್ಲವನ್ನು ದಿಕ್ಕರಿಸಿ ಕತ್ತಿ ಹಬ್ಬ ಮಾಡಲು ಹೊರಟಿರುವುದು ಸರಿಯಲ್ಲ ಒಮ್ಮತದ ತೀರ್ಮಾನ ಕೈಗೊಂಡು 2027ಕ್ಕೆ ಕತ್ತಿ ಹಬ್ಬ ಮಾಡೋಣ ಎಂದು ಸಲಹೆ ನೀಡಿದರು.

ದೇವಾಂಗ ಮಹಾಸಭಾ ಶ್ರೀ ಕಾಶಿವಿಶ್ವನಾಥ ಗುಡಿ ಬೀದಿ ಶ್ರೀನಿವಾಸ್ ಶಾಸ್ತ್ರಿ ಮಾತನಾಡಿ ದೇವಾಂಗ ಸಮುದಾಯದ ಆಚಾರ ವಿಚಾರವನ್ನು ಪಾಲನೆ ಮಾಡದೆ ಒಂದು ಗುಂಪು ಕತ್ತಿ ಹಬ್ಬ ಮಾಡುತ್ತೇವೆಂದು ಶ್ರೀ ರಾಮಲಿಂಗ ಚೌಡೇಶ್ವರಿ ದೊಡ್ಡ ಕತ್ತಿ ಹಬ್ಬ ಸೇವಾ ಸಮಿತಿ ಹೆಸರಿನಲ್ಲಿ ಹಬ್ಬ ಮಾಡುತ್ತೇವೆಂದು ದೇಣಿಗೆ ಸಂಗ್ರಹಿಸಲು ಹೊರಟಿದ್ದಾರೆ. ಈ ಸಮಿತಿಗೆ ದೇಣಿಗೆ ನೀಡಬಾರದು ಮತ್ತು ಸಹಕಾರವನ್ನು ನೀಡಬಾರದೆಂದು ಸಮುದಾಯದ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಇರುವ ಭಕ್ತರಲ್ಲಿ ಮನವಿ ಮಾಡಿದರು.

ಶೆಟ್ಟರ್‌ಗಳಾದ ಎಂ.ಮಹೇಶ್, ಕೆ.ಸಿ. ವೀರಭದ್ರಸ್ವಾಮಿ, ಜಿ.ಕನಕರಾಜು, ಜಿ.ಸುರೇಶ್, ಸಮುದಾಯದ ಹಿರಿಯ ಮುಖಂಡ ನಿರಂಜನ್, ಅರುಣಚಲೇಶ್ವರ ಟ್ರಸ್ಟ್‌ನ ಅಧ್ಯಕ್ಷ ಸುಂದರ್, ಶೆಟ್ಟಿಗಾರರು ಮತ್ತು ಕುಲಸ್ಥರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಶ್ರೀ ರಾಮಲಿಂಗ ಚೌಡೇಶ್ವರಿ ದೊಡ್ಡ ಕತ್ತಿ ಹಬ್ಬ ಮುಂದೂಡಲು ನಿರ್ಧಾರ Read More

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿ ಋಣ ತೀರಿಸುತ್ತೇನೆ-ಮಂಜುನಾಥ್

(ವರದಿ:ಸಿದ್ದರಾಜು,ಕೊಳ್ಳೇಗಾಲ)


ಕೊಳ್ಳೇಗಾಲ: ನನಗೆ ಒಂದು ಅವಕಾಶ ನೀಡಿದ್ದೀರಿ ಅದಕ್ಕಾಗಿ ಮುಂದಿನ ದಿನಗಳಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ನಿಮ್ಮ ಋಣ ತೀರಿಸುತ್ತೇನೆ ಎಂದು ಶಾಸಕ ಎಂ. ಆರ್ ಮಂಜುನಾಥ್ ಮನದಾಳದಿಂದ ನುಡಿದರು.

ತಾಲ್ಲೂಕಿನ ಸತ್ತೇಗಾಲ ಗ್ರಾಮದಲ್ಲಿ ಮಾರಮ್ಮನ ದೇವಸ್ಥಾನದಿಂದ ಈಶ್ವರನ ದೇವಸ್ಥಾನದವರೆಗೆ ಕಾವೇರಿ ನದಿಗೆ ತೆರಳುವ ರಸ್ತೆಗೆ ಡಾಂಬರೀಕರಣ ಹಾಗೂ ಸಿಸಿ ಚರಂಡಿ ನಿರ್ಮಾಣ ಕಾಮಗಾರಿಗೆ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ ಇಲಾಖೆ ಹಾಗೂ ಮಳೆ ಪರಿಹಾರ ಯೋಜನೆಯ ಅಡಿಯಲ್ಲಿ ಎರಡು ಕೋಟಿ ವೆಚ್ಚದಲ್ಲಿ  
ಗುದ್ದಲಿ ಪೂಜೆ ನೆರವೇರಿಸಿ ಶಾಸಕರು ಮಾತನಾಡಿದರು.

ಈ ರಸ್ತೆ ಹದಗೆಟ್ಟಿದ್ದರಿಂದ ಬಹಳಷ್ಟು ಜನರಿಗೆ ಕಾವೇರಿ ನದಿ ಹಾಗೂ ಶಿವನ ದೇವಸ್ಥಾನಕ್ಕೆ ಹೋಗಿ ಬರಲು ಸಂಕಷ್ಟವಾಗುತ್ತಿತ್ತು. ಎರಡು ಕೋಟಿ ರೂ ವೆಚ್ಚದಲ್ಲಿ ಈ ರಸ್ತೆಗೆ ಡಾಂಬರೀಕರಣ ಮಾಡಲು ನಿರ್ಧರಿಸಲಾಗಿತ್ತು ಆದರೆ ಇದು ದೊಡ್ಡ ಗ್ರಾಮವಾದ್ದರಿಂದ ಈ ರಸ್ತೆಯನ್ನು ಸಿಸಿ ರಸ್ತೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು,ಜತೆಗೆ ಸಿಸಿ ರಸ್ತೆಗೆ ಬೇಕಾಗುವ ಹೆಚ್ಚುವರಿ ಅನುದಾನವನ್ನು ಹೊಂದಿಸಿ ಕೊಡುವುದಾಗಿ‌ ಭರವಸೆ ನೀಡಿದರು.

ಇದು ದೊಡ್ಡ ಗ್ರಾಮವಾಗಿದ್ದು ಇಲ್ಲಿನ ಆಸ್ಪತ್ರೆ ಯಲ್ಲಿನ ಕೊರತೆ ನೀಗಿಸಲು ಪ್ರಯತ್ನಿಸೋಣ ಇಲ್ಲಿ ವೈದ್ಯರು ಮತ್ತು ಸಿಬ್ಬಂದಿ ಉಳಿಯಲು ವಸತಿ ಹಾಗೂ ಮೂಲಭೂತ ಸೌಕರ್ಯವಾಗಬೇಕು. ಗ್ರಾಮ ಲೆಕ್ಕಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಸಿಗುವ ಹಾಗೆ ಮಾಡಲು ಒಂದು ಸೂಕ್ತ ಸ್ಥಳ ನೋಡಿ ಎಂದು ಶಾಸಕರು ಸಲಹೆ ನೀಡಿದರು.

ಗ್ರಾಮದ ಮೂಲಭೂತ ಸೌಲಭ್ಯಕ್ಕೆ ನನ್ನ ವಿಶೇಷ ಅನುದಾನದಲ್ಲಿ ಈಗಾಗಲೇ ಅನುದಾನ ನೀಡಿದ್ದೇನೆ ಪ ಜಾತಿ ಮತ್ತು ಪ ಪಂಗಡಗಳ ಬಡಾವಣೆಗಳಲ್ಲಿ ಸಿಸಿ ರಸ್ತೆ ಹಾಗೂ ಚರಂಡಿಗಳ ನಿರ್ಮಾಣ ಮಾಡಲಾಗಿದೆ. ಅದೇ ರೀತಿ ಸಾಮಾನ್ಯ ವರ್ಗದ ಜನರು ವಾಸಿಸುವ ಬೀದಿಗಳ ರಸ್ತೆಗಳು ಅಭಿವೃದ್ಧಿ ಕಾಣಬೇಕು ಹಾಗಾಗಿ ಈ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ ಎಂದು ಶಾಸಕರು ತಿಳಿಸಿದರು.

ಗ್ರಾಮದ ಕೋಟೆ ಬಡಾವಣೆಯ ಅಭಿವೃದ್ಧಿಗೆ ಒಂದಷ್ಟು ಅನುದಾನ ಬಿಡುಗಡೆಯಾಗಿದೆ. ಎಸ್ ಸಿ ಪಿ / ಟಿಎಸ್ ಪಿ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ,ಅದಕ್ಕೆ ಕಾರಣ ನಾವು ಹೇಳಲಾಗುವುದಿಲ್ಲ, ಶತಾಯ ಗತಾಯ ಬಿಡುಗಡೆ ಮಾಡಿಸಿ ಅನುದಾನ ತಂದು ಅಭಿವೃದ್ಧಿ ಮಾಡುವುದಾಗಿ ಮಂಜುನಾಥ್ ಶಪತ ಮಾಡಿದರು.

ಗ್ರಾಮದ ಹೊರವಲಯದಲ್ಲಿ ಹಾದು ಹೋಗುವ ಬೈಪಾಸ್ ಹೆದ್ದಾರಿ ಈಗಾಗಲೇ ಅಪಘಾತಗಳು ಸಂಭವಿಸಿದ್ದು ಮತ್ತೊಂದು ಅವಘಡ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಬೇಕಾಗಿದೆ. ಈ ರಸ್ತೆಯಲ್ಲಿ ಕತ್ತಲು ಆವರಿಸುವುದರಿಂದ ಕೂಡಲೇ ವಿದ್ಯುತ್ ದೀಪ ಅಳವಡಿಸಿ ಸಂಪರ್ಕ ಕಲ್ಪಿಸಲಾಗುವುದು. ಕ್ಷೇತ್ರದ ನೀರಾವರಿ ಅಭಿವೃದ್ಧಿಗೆ ಬಿಡುಗಡೆಯಾಗಿದ್ದ 50 ಕೋಟಿ ಅನುದಾನದಲ್ಲಿ ಉಳಿದ ಹಣವನ್ನು ಬಳಸಿಕೊಂಡು ಈ ಭಾಗದ ರೈತರ ಜೀವನಾಡಿ ಧನಗೆರೆ ಜಹಗೀರ್ ದಾರ್ ಕಾಲುವೆ ಅಭಿವೃದ್ಧಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇನ್ನು ಸತ್ಯಗಾಲ ಹಾಗೂ ಪಾಳ್ಯ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು ಈಗಾಗಲೇ ಪಾಳ್ಯದಿಂದ ಉಗನಿಯ ಗ್ರಾಮದವರೆಗೆ ರಸ್ತೆ ಅಭಿವೃದ್ಧಿಗೆ 5 ಕೋಟಿ ರೂ. ಬಿಡುಗಡೆಯಾಗಿದ್ದು ಈ ಅನುದಾನದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ, ಅದೇ ರೀತಿ ಉಗನಿಯ ಗ್ರಾಮದಿಂದ ಸತ್ಯಗಾಲದವರಿಗೆ ರಸ್ತೆ ಅಭಿವೃದ್ಧಿಯಾಗಬೇಕಿದೆ ಎಂದ ಹೇಳಿದರು.

ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ ಲೋಕೋಪಯೋಗಿ ಇಲಾಖೆ ಅನುದಾನ  223 ಕೋಟಿ ರೂ.ಗಳು ಬಂದಿದೆ.
ಒಟ್ಟಾರೆ ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಇನ್ನೂ 600 ಕೋಟಿಗೂ ಹೆಚ್ಚು ಅನುದಾನ ಬೇಕು ಎಂದು ತಿಳಿಸಿದರು‌

4.5 ಕೋಟಿ ಅನುದಾನ ಕ್ಷೇತ್ರದ ಗಿರಿಜನರ ವಸತಿ ಯೋಜನೆಗೆ ಬಿಡುಗಡೆಯಾಗಿದೆ. ಉಳಿದಂತೆ ಮುಂದೆ ವಸತಿ ಯೋಜನೆಗಳಿಗೆ ಪ್ರತಿ ಮನೆಗೆ 3 ರಿಂದ 3.5 ಲಕ್ಷ ರೂಗಳ ವರೆಗೆ ಅನುದಾನ (ಸಹಾಯಧನ) ಹೆಚ್ಚಳವಾಗಲಿದೆ ಹೆಚ್ಚಳವಾದ ನಂತರ ಅನುದಾನ ಬಿಡುಗಡೆಯಾಗಲಿದೆ ಎಂದು ಹೇಳಿದರು.

ಇದೇ ವೇಳೆ ಗ್ರಾಮಸ್ಥರು ಈಶ್ವರ ದೇವಾಲಯ ಅಭಿವೃದ್ಧಿಯಾಗಬೇಕು ಅದಕ್ಕಾಗಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸುವಂತೆ ಒತ್ತಾಯಿಸಿದರು.

ಇದಕ್ಕೂ ಮೊದಲು ಗ್ರಾಮದಲ್ಲಿರುವ ಡಾ ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಜನರು ಪಟಾಕಿ ಸಿಡಿಸಿ ಶಾಸಕರನ್ನು ಬರ ಮಾಡಿಕೊಂಡರು.

ಇದೇ ವೇಳೆ ಶಾಸಕ ಮಂಜುನಾಥ್ ಅವರ 53 ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸತ್ತೇಗಾಲದ ಗ್ರಾಮಸ್ಥರು ಬೃಹತ್ ಗಾತ್ರದ ಹಾರ ಹಾಕಿ ಕೇಕ್ ಕತ್ತರಿಸಿ ವಿಜೃಂಭಣೆಯಿಂದ ಆಚರಣೆ ಮಾಡಿದರು.

ಈ ಸಂದರ್ಭದಲ್ಲಿ ಸತ್ತೇಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲೇಶ್, ಉಪಾಧ್ಯಕ್ಷೆ ಸುವರ್ಣ, ಸದಸ್ಯರುಗಳಾದ ಕವಿತಾ, ದೇವಿಕಾ, ವಸಂತ, ನಾಗರಾಜು, ಚಿಕ್ಕವೆಂಕಟನಾಯ್ಕ, ಗೋವಿಂದ, ಮರೀಲಿಂಗೇಗೌಡ, ಮಹದೇವ್, ಮಲ್ಲೇಶ್, ಉಮೇಶ್, ರಾಜೇಂದ್ರ, ಮಾಜಿ ಅಧ್ಯಕ್ಷರುಗಳಾದ ಶಾಂತಕುಮಾರಿ, ಕೆಂಪರಾಜು, ಪ್ರಭು, ಚೇತನ್, ಮಂಜೇಶ್ ಗೌಡ, ಕೆ ಆರ್ ಐ ಡಿ ಎಲ್ ನ ಎಇಇ ಚಿಕ್ಕಲಿಂಗಯ್ಯ, ಜೆಇ ಕಾರ್ತಿಕ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿ ಋಣ ತೀರಿಸುತ್ತೇನೆ-ಮಂಜುನಾಥ್ Read More

ಪತ್ರಕರ್ತ ಚಿಕ್ಕಮಾಳಿಗೆ ಅವರ ಮೇಲೆ ಯುವಕ ಹಲ್ಲೆ

ಕೊಳ್ಳೇಗಾಲ: ಪತ್ರಕರ್ತರು ಹಾಗೂ ಪಟ್ಟಣದ ಭೀಮನಗರದ ಯಜಮಾನರಾದ ಚಿಕ್ಕಮಾಳಿಗೆ ಅವರ ಮೇಲೆ ವ್ಯಕ್ತಿಯೊಬ್ಬ ಕ್ಷಲ್ಲಕ ವಿಚಾರಕ್ಕೆ ಹಲ್ಲೆ ಮಾಡಿ ಕೈ ಮುರಿದಿದ್ದು ಅವರು ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ.

ಪ್ರತಿನಿಧಿ ಪತ್ರಿಕೆಯ ತಾಲ್ಲೂಕು ವರದಿಗಾರಾದ ಚಿಕ್ಕಮಾಳಿಗೆ ಅವರು ಕೊಳ್ಳೇಗಾಲ ಪಟ್ಟಣದ ಭೀಮನಗರದ ದೊಡ್ಡ ಯಜಮಾನರು. 

ರಾತ್ರಿ ಸುಮಾರು 8.30 ರಲ್ಲಿ ತಮ್ಮ ಪತ್ನಿಯೊಂದಿಗೆ ಪಟ್ಟಣದ ದೇವಾಂಗ ಪೇಟೆಯ ಹೋಟೆಲ್ ನಲ್ಲಿ ತಿಂಡಿ ತಿನ್ನಲು ಹೋಗಿದ್ದಾರೆ. ತಿಂಡಿ ತಿನ್ನುವಾಗಲೇ ಅಲ್ಲಿಗೆ ಬಂದ ತಾಲೂಕಿನ ಪಾಳ್ಯ ಗ್ರಾಮದ ರವಿನಾಯಕ ಎಂಬಾತ ನಾನು ಭೀಮನಗರದವನು ನನಗೆ ಬೇಗ ತಿಂಡಿ ಕೊಡು ಎಂದು ಹೋಟೆಲ್ ನವರೊಡನೆ ಕ್ಯಾತೆ ತೆಗೆದು ಗಲಾಟೆಗಳಿದ್ದಿದ್ದಾನೆ.

ಹೋಟೆಲ್ ಮಾಲಿಕ ಯಾಕಪ್ಪ ಭೀಮನಗರದ ದೊಡ್ಡ ಯಜಮಾನರು ಇಲ್ಲಿಯೇ ತಿಂಡಿ ತಿನ್ನುತ್ತಾ ಕುಳಿತಿದ್ದಾರೆ. ಸ್ವಲ್ಪ ತಾಳು ಎಂದು ಸಮಾಧಾನ ಮಾಡಲು ಮುಂದಾಗಿದ್ದಾರೆ.

ಆದರೆ ಆತ ಇನ್ನೂ ಗಲಾಟೆ ಹೆಚ್ಚು ಮಾಡಿದ.
ಈ ವೇಳೆ ಪಕ್ಕದಲ್ಲಿ ತಿಂಡಿ ತಿನ್ನುತ್ತಾ ಕುಳಿತಿದ್ದ ಚಿಕ್ಕಮಾಳಿಗೆ ಅವರು ಆತನನ್ನು ನೀನು ಭೀಮ ನಗರದಲ್ಲಿ ಯಾರ ಮಗ ಎಂದು ಪ್ರಶ್ನಿಸಿದ್ದಾರೆ. ನಾನು ಪಾಳ್ಯ ಗ್ರಾಮದ ನಾಯಕ ಸಮುದಾಯದವನು ಎಂದು ಆತ ಹೇಳಿದ್ದಾನೆ. ಇದಕ್ಕೆ ಚಿಕ್ಕಮಾಳಿಗೆ ಅವರು ನಾವು ಹಾಗೂ ನಾಯಕ ಜನಾಂಗದವರು ಅಣ್ಣ ತಮ್ಮಂದಿರಂತೆ ಇದ್ದೇವೆ ನೀನ್ಯಾಕೆ ಭೀಮ ನಗರದ ಹೆಸರು ಹೇಳಿಕೊಂಡು ದಬ್ಬಾಳಿಕೆ ಮಾಡುತ್ತಿದ್ದೀಯಾ ಎಂದಿದ್ದಾರೆ.

ಇದರಿಂದ ಕುಪಿತನಾದ ಆತ ಇದನ್ನು ಕೇಳಲು ನೀನು ಯಾರು ಎಂದು ಹಲ್ಲೆಗೆ ಮುಂದಾಗಿ ಅವರ ಕೈ ಹಿಡಿದು ಬಲವಾಗಿ ತಿರುವಿದ್ದಾನೆ.

ಇದರಿಂದ ಚಿಕ್ಕಮಾಳಿಗೆ ಅವರ ಕೈ ಮುರಿತಕ್ಕೊಳಗಾಗಿದೆ. ಕೂಡಲೇ ಅಲ್ಲಿದ್ದವರು ಜಗಳ ಬಿಡಿಸಿ ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಾಗಿ ಶಸ್ತ್ರ ಚಿಕಿತ್ಸೆ ಮೂಲಕ ಮುರಿತಕ್ಕೊಳಗಾಗಿದ್ದ ಕೈಯನ್ನು ಸರಿಪಡಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ.

ಈ ಸಂಬಂಧ ಪಟ್ಟಣ ಠಾಣೆ ಪಿಎಸ್ಐ ವರ್ಷ ಅವರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ನಂತರ ಜಾಮಿನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ವಿಷಯ ತಿಳಿದ ಚಾಮರಾಜನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜು ಕಪ್ಪುಸೋಗೆ, ಉಪಾಧ್ಯಕ್ಷ ಡಿ ನಟರಾಜು, ಖಜಾಂಚಿ ರೇಣುಕೇಶ್, ಗಂಗಾಧರ್, ಎನ್ ರಾಜೇಶ್, ರಾಜ್ಯ ಸಮಿತಿ ಸದಸ್ಯ ಗೂಳಿಪುರ ನಂದೀಶ್, ತಾಲೂಕು ಕಾರ್ಯಕರ್ತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ ಸಿದ್ದರಾಜು, ಉಪಾಧ್ಯಕ್ಷ ಎಂ ಮರಿಸ್ವಾಮಿ, ಸದಸ್ಯರಾದ ಎಸ್.ರಾಜಶೇಖರ್, ಪ್ರೇಮ್ ಸಾಗರ್, ವಸಂತ್ ಕುಮಾರ್, ಪಿ. ಜಗದೀಶ್, ಶಂಕರ್, ಶ್ಯಾಮ್ ವೆಲ್, ಹನೂರು ಸಂಘದ ಗೌರವಾಧ್ಯಕ್ಷ ದೇವರಾಜ ನಾಯ್ಡು, ಕಾಮಗೆರೆ ಪ್ರಕಾಶ್ ಸೇರಿದಂತೆ ಅನೇಕರು ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಗೆ ತೆರಳಿ ಚಿಕ್ಕಮಾಳಿಗೆ ಅವರ ಯೋಗ ಕ್ಷೇಮ ವಿಚಾರಿಸಿ ಕುಟುಂಬದವರಿಗೆ ನೈತಿಕ ಧೈರ್ಯ ತುಂಬಿದರು.

ನಂತರ ಕೊಳ್ಳೇಗಾಲ ಡಿ ವೈ ಎಸ್ ಪಿ ಕಚೇರಿಗೆ ತೆರಳಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಡಿ ವೈ ಎಸ್ ಪಿ ಧರ್ಮೇಂದ್ರ ಅವರಿಗೆ ಮನವಿ ಮಾಡಲಾಯಿತು. ಇದಕ್ಕೆ ಪ್ರತಿಕ್ರಿಸಿದ ಧರ್ಮೇಂದ್ರ ರವರು ಗಾಯಾಳುವಿನ ಹೇಳಿಕೆ ಹಾಗೂ ವೈದ್ಯರ ಪ್ರಮಾಣ ಪತ್ರ ಪಡೆದು ಆರೋಪಿಯನ್ನು ಬಂಧಿಸಲಾಗುವುದು ಎಂದು ತಿಳಿಸಿದರು.

ಮಾಜಿ ಶಾಸಕ ಎನ್. ಮಹೇಶ್ ಅವರು ಕೂಡಾ ಆಸ್ಪತ್ರೆಗೆ ತೆರಳಿ ಚಿಕ್ಕಮಾಳಿಗೆ ಅವರ ಯೋಗಕ್ಷೇಮ ವಿಚಾರಿಸಿ ಧೈರ್ಯ ತುಂಬಿದರು.

ಪತ್ರಕರ್ತ ಚಿಕ್ಕಮಾಳಿಗೆ ಅವರ ಮೇಲೆ ಯುವಕ ಹಲ್ಲೆ Read More

ದೇವರಾಜ ಅರಸರಂತಹ ಮೇರು ವ್ಯಕ್ತಿತ್ವದ ರಾಜಕಾರಣಿಗಳನ್ನೇ ಆರಿಸಿ: ಕೃಷ್ಣಮೂರ್ತಿ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ದಿವಂಗತ ಡಿ ದೇವರಾಜ ಅರಸು ಅವರು ಬಡವರ ಪರವಾದ ಧೀಮಂತ ನಾಯಕ ಅಂತಹ ಮೇರು ವ್ಯಕ್ತಿತ್ವದ ರಾಜಕಾರಣಿಗಳು ಇತ್ತೀಚಿನ ದಿನಗಳಲ್ಲಿ ಬಹಳ ವಿರಳ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

ಅರಸು ಅವರಂತಹ ಮೇರು ವ್ಯಕ್ತಿತ್ವವಿರುವ ನಾಯಕರುಗಳನ್ನೇ ಮುಂದಿನ ಚುನಾವಣೆಗಳಲ್ಲಿ ಆಯ್ಕೆ ಮಾಡಬೇಕು ಎಂದು ಜನರಲ್ಲಿ ಮನವಿ ಮಾಡಿದರು.

ತಾಲ್ಲೂಕು ಆಡಳಿತ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಾರ್ಯಲಯ ವತಿಯಿಂದ ಪಟ್ಟಣದಲ್ಲಿ ನಡೆದ ಹಿಂದುಳಿದ ವರ್ಗಗಳ ನೇತಾರ, ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ, ಅರಸುರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಕೇಕ್ ಕತ್ತರಿಸಿ ಕೃಷ್ಣಮೂರ್ತಿ ಅವರು ಮಾತನಾಡಿದರು.

ಡಿ.ದೇವರಾಜು ಅರಸು ಅವರು ಬಹಳ ನಿಷ್ಠೆ, ಪ್ರಾಮಾಣಿಕತೆಯಿಂದ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದವರು. 1952 ರಲ್ಲಿ ಡಿ ದೇವರಾಜ ಅರಸರು ಹುಣಸೂರು ಕ್ಷೇತ್ರದಿಂದ ಪ್ರಥಮ ಭಾರಿಗೆ ಆಯ್ಕೆ ಯಾಗುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟರು. ಅದೇ ವೇಳೆ ನಮ್ಮ ತಂದೆ ದಿವಂಗತ ಬಿ.ರಾಚಯ್ಯ ನವರು ಸಹ ಯಳಂದೂರು ಮೀಸಲು ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಅವರೊಡನೆ ದಿ. ರಾಜಶೇಖರಮೂರ್ತಿ, ದಿ.ಗುರುಪಾದಸ್ವಾಮಿ ಅವರು ಸೇರಿದಂತೆ ಇನ್ನೂ ಅನೇಕ ನಾಯಕರು ಜೊತೆಗಿದ್ದರು ಎಂದು ಸ್ಮರಿಸಿದರು.

1952 ರಿಂದ 57 ಹಾಗೂ1957 ರಿಂದ 62 ರ ವರೆಗೆ ಎರಡು ಅವಧಿಗೆ 10 ವರ್ಷಗಳ ಕಾಲ ಸತತವಾಗಿ ಶಾಸಕರಾಗಿ, ಸಚಿವರಾಗಿ ದಕ್ಷತೆಯಿಂದ ಆಳ್ವಿಕೆ ಮಾಡಿದರು. ನಂತರ ಮುಖ್ಯಮಂತ್ರಿಯಾಗಿ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದರು. ರಾಜ್ಯದ್ಯಂತ ಹಿಂದುಳಿದ ವರ್ಗಗಳ ಹಾಗೂ ಇನ್ನಿತರ ಜನಾಂಗದವರ ಅಭಿವೃದ್ಧಿಗಾಗಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು. ದೇವರಾಜ ಅರಸು ಅವರು ಬಾಯಲ್ಲಿ ಹೇಳಿದ ಮಾತನ್ನೇ ಅಧಿಕಾರಿಗಳು ಆದೇಶ ಮಾಡುತ್ತಿದ್ದರು ಎಂದು ಶಾಸಕರು ತಿಳಿಸಿದರು.

ಅಧಿಕಾರಿಗಳ ವಿಶ್ವಾಸಕ್ಕೆ ತಗೆದುಕೊಂಡು ಉತ್ತಮವಾದ ಕೆಲಸವನ್ನು ಮಾಡಿಸುತ್ತಿದ್ದರು ಅವರ ನಂತರ 1962 ರಿಂದ 70 ರ ವರೆಗೆ ಎಸ್.ಆರ್. ಕಂಠಿ ನಿಜಲಿಂಗಪ್ಪ ಅವರು ಆಳ್ವಿಕೆ ನಡೆಸಿದರು ಎಂದು ಸ್ಮರಿಸಿದರು.

ಅರಸುರವರು ರಾಜಕೀಯ ಕ್ಷೇತ್ರದಲ್ಲಿ ರಾಜಕಾರಣ ಮಾಡಿದವರು ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಯವರನ್ನು ಚಿಕ್ಕಮಗಳೂರು ಕ್ಷೇತ್ರದಲ್ಲಿ ನಿಲ್ಲಿಸಿ ಗೆಲ್ಲಿಸುವ ಮೂಲಕ ಅವರಿಗೆ ರಾಜಕೀಯ ಪುನರ್ ಜನ್ಮ ಕೊಟ್ಟವರು. ಅಂತಹ ಮೇರು ವ್ಯಕ್ತಿತ್ವದ ರಾಜಕಾರಣಿಗಳು ಇತ್ತೀಚಿನ ದಿನಗಳಲ್ಲಿ ಬಹಳ ವಿರಳ, ಅವರಂತಹ ಮೇರು ವ್ಯಕ್ತಿತ್ವವಿರುವ ನಾಯಕರುಗಳನ್ನು ಚುನಾವಣೆಯಲ್ಲಿ ಆಯ್ಕೆ ಮಾಡಬೇಕೆಂದು ಜನರಲ್ಲಿ ಮನವಿ ಮಾಡಿದರು.

ಅಂದು ಮೈಸೂರು ರಾಜ್ಯವಾಗಿದ್ದ ಕರ್ನಾಟಕ ರಾಜ್ಯ ಏಕೀಕರಣಕ್ಕೆ ಅರಸು ಅವರ ಕೊಡುಗೆ ಅಪಾರ,ಏಕೀಕರಣ ಸಂದರ್ಭದಲ್ಲಿ ರಾಜ್ಯದ ಅನೇಕ ಭಾಗಗಳು ನೆರೆ ರಾಜ್ಯಗಳ ಆಡಳಿತ ಕ್ಕೊಳಪಟ್ಟಿದ್ದವು. ಗಡಿ ವಿಸ್ತೀರ್ಣ ಹಾಗೂ ನೀರಿನ ಹಂಚಿಕೆ ವಿಚಾರಕ್ಕೆ ನೆರೆ ರಾಜ್ಯಗಳೊಡನೆ ವ್ಯಾಜ್ಯಗಳು ನಡೆದವು. ನೀರಿನ ಹಂಚಿಕೆ ವಿಚಾರಕ್ಕೆ ಮೊದಲು ಹೋರಾಟ ಮಾಡಿದ್ದು ಚಾಮರಾಜನಗರ ಜಿಲ್ಲೆ. ಈ ವೇಳೆ ಬಹಳ ಹೋರಾಟ ನಡೆದು ಮನುಷ್ಯ ಮನುಷ್ಯನನ್ನೇ ದಹಿಸಿ ಬಿಟ್ಟಿದ್ದ. ಇಂದು ಕೂಡ ಗಡಿ ವಿಚಾರದಲ್ಲಿ ಅನೇಕ ಹೋರಾಟ ಗಳು ನಡೆಯುತ್ತಿವೆ ಎಂದು ಶಾಸಕ ಕೃಷ್ಣಮೂರ್ತಿ ವಿಷಾದಿಸಿದರು.

ವಿ.ಪಿ.ಸಿಂಗ್ ಪ್ರಧಾನಿ ಯಾಗಿದ್ದ ಸಂದರ್ಭದಲ್ಲಿ ಮಂಡಲ್ ಆಯೋಗ ಜಾರಿಯಾಯಿತು. ಈ ವೇಳೆ ರಾಜ್ಯದಲ್ಲಿ ಆನೇಕರು ವಿರೋಧಿಸಿದರು. ಆದರೆ ಮಂಡಲ್ ಆಯೋಗದ ಜಾರಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡಿಸುವ ಸಲುವಾಗಿ ಎಂಬುದನ್ನು ತಿಳಿಯ ಪಡಿಸಿದಾಗ ಜನರಿಗೆ ಅರಿವಾಯಿತು. ಆಯೋಗ ರಚನೆಯಾಗಿ ಎಲ್ಲಾ ವರ್ಗದ ಎಲ್ಲಾ ಸಮುದಾಯದ ಜನರಿಗೂ ಮೀಸಲಾತಿ ದೊರೆತು ಉತ್ತಮ ಜೀವನವನ್ನು ನಡೆಸುವಂತಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ಮೀಸಲಾತಿ ಒದಗಿಸಿಕೊಟ್ಟ ಏಕೈಕ ಮುಖ್ಯಮಂತ್ರಿ ಎಂದರೆ ದೇವರಾಜ ಅರಸುರವರು. ಇಂದಿನ ರಾಜಕಾರಣಿಗಳು ನೆನಪು ಮಾಡಿಕೊಳ್ಳುವ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಿದ್ದಾರೆ. ಅವರ ಕಾಲದಲ್ಲಿ ಅನೇಕ ಸುಧಾರಣೆಯನ್ನು ತಂದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮೀಸಲಾತಿಯನ್ನು ಕೇವಲ ಅತಿ ಶೂದ್ರರಿಗೆ ಮಾತ್ರ ಕೊಟ್ಟಿಲ್ಲ ಎಲ್ಲಾ ಸಮುದಾಯದವರಿಗೂ ಸಮಾನವಾಗಿ ಮೀಸಲಾತಿಯನ್ನು ಒದಗಿಸಿಕೊಟ್ಟಿದ್ದಾರೆ ಎಂದು ಶಾಸಕರು ಹೇಳಿದರು

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಹೆಚ್. ಡಿ. ವಿಶ್ವನಾಥ್ ಅವರು ದಿವಂಗತ ಡಿ.ದೇವರಾಜ ಅರಸು ಅವರ ಕುರಿತು ಸುಧೀರ್ಘ ಭಾಷಣ ಮಾಡಿದರು. ಇದೇ ಸಂಧರ್ಭದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಡಿಗ್ರಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ್ದ ಮಕ್ಕಳನ್ನು ಸನ್ಮಾನಿಸಲಾಯಿತು.

ಇದಕ್ಕೂ ಮೊದಲು ಡಿ‌.ದೇವರಾಜು ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ 2022-23 ಸಾಲಿನ ಬಾಲಕಿಯರ ವಿದ್ಯಾರ್ಥಿನಿಲಯದ ಹೆಚ್ಚುವರಿ ಕಟ್ಟಡವನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಉದ್ಘಾಟಿಸಿದರು

ಕಾರ್ಯಕ್ರಮದಲ್ಲಿ ನಗರಸಭಾಧ್ಯಕ್ಷೆ ರೇಖಾ, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ ಕುಂತೂರು, ಜಿ.ಪಂ ಮಾಜಿ ಉಪಾಧ್ಯಕ್ಷ ಯೋಗೀಶ್, ಡಿ ವೈಎಸ್ ಪಿ ಧರ್ಮೇಂದ್ರ, ಜಿಲ್ಲಾ ಬಿಸಿಎಂ ಅಧಿಕಾರಿ ವಿಶ್ವನಾಥ್, ತಾಲ್ಲೂಕು ಅಧಿಕಾರಿ ಶಿವರಾಜು, ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಗ್ರೇಡ್ 2 ತಹಶೀಲ್ದಾರ್ ಕುಮಾರ್, ಬಿಇಒ ಎಂ.ಮಂಜುಳ, ಕೆ.ಆರ್.ಐ.ಡಿ.ಎಲ್ ಸಹಾಯಕ ಕಾರ್ಯ ಪಾಲಕ ಅಭಿಯಂತರ ಚಿಕ್ಕಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.

ದೇವರಾಜ ಅರಸರಂತಹ ಮೇರು ವ್ಯಕ್ತಿತ್ವದ ರಾಜಕಾರಣಿಗಳನ್ನೇ ಆರಿಸಿ: ಕೃಷ್ಣಮೂರ್ತಿ Read More

ತಾ. ಮಟ್ಟದ ಥ್ರೋ ಬಾಲ್ ಪಂದ್ಯಾವಳಿ:ಆರ್ ಸಿ. ಎಂ ಆಂಗ್ಲ,ಕನ್ನಡ ಮಾಧ್ಯಮ ಶಾಲೆಗೆ ಜಯ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: 14 ವರ್ಷದೊಳಗಿನ ತಾಲ್ಲೂಕು ಮಟ್ಟದ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಆರ್. ಸಿ. ಎಂ. ಆಂಗ್ಲ ಮಾಧ್ಯಮ ಶಾಲೆಯ ಬಾಲಕಿಯರು ಹಾಗೂ ಕನ್ನಡ ಮಾಧ್ಯಮ ಶಾಲೆಯ ಬಾಲಕರು ವಿಜೇತರಾಗಿದ್ದಾರೆ.

ಪಂದ್ಯದಲ್ಲಿ ಒಂದೇ ಶಾಲೆಯ 2 ತಂಡಗಳು ಭರ್ಜರಿ ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವುದು ವಿಶೇಷ.

ಈ ಹಿನ್ನೆಲೆಯಲ್ಲಿ ಸಂತಸ ವ್ಯಕ್ತಪಡಿಸಿರುವ ಶಾಲೆಯ ಆಡಳಿತ ಮಂಡಳಿ ವಿಜೇತ ತಂಡವನ್ನು ಅಭಿನಂದಿಸಿದೆ.

ಪಟ್ಟಣದ ಸರ್ಕಾರಿ ಶ್ರೀ ಮಹದೇಶ್ವರ ಕಾಲೇಜು ಕ್ರೀಡಾಂಗಣದಲ್ಲಿ ನಡೆದ 14 ವರ್ಷದ ಒಳಪಟ್ಟ ತಾಲ್ಲೂಕು ಮಟ್ಟದ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ತಾಲ್ಲೂಕಿನ ವಿವಿಧ ಶಾಲೆಗಳ ಬಾಲಕರು ಹಾಗೂ ಬಾಲಕಿಯರು ಭಾಗವಹಿಸಿದ್ದರು.

ಅಂತಿಮವಾಗಿ ಬಾಲಕಿಯರ ವಿಭಾಗದಲ್ಲಿ ಪಟ್ಟಣದ ಆರ್. ಸಿ. ಎಂ. ಆಂಗ್ಲ ಮಾಧ್ಯಮ ಶಾಲೆ ಹಾಗೂ ತಾಲ್ಲೂಕಿನ ಕಾಮಗೆರೆ ಎಸ್. ಡಿ. ಎ ಶಾಲೆಯ ಬಾಲಕಿಯರ ನಡುವೆ ಸೆಣೆಸಾಟ ನಡೆದು ಆರ್. ಸಿ. ಎಂ. ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ವಿಜೇತರಾದರು.

ಅದೇ ರೀತಿ ಬಾಲಕರ ವಿಭಾಗದಲ್ಲಿ ಸಿಂಗನಲ್ಲೂರು ಗ್ರಾಮದ ನಿಸರ್ಗ ಶಾಲೆ ಹಾಗೂ ಪಟ್ಟಣದ ಆರ್. ಸಿ. ಎಂ ಕನ್ನಡ ಮಾಧ್ಯಮ ಶಾಲೆಯ ಬಾಲಕರ ನಡುವಿನ ಪಂದ್ಯಾವಳಿಯಲ್ಲಿ ಆರ್. ಸಿ. ಎಂ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ವಿಜೇತರಾದರು. ಒಂದೇ ಶಾಲೆಯ 2 ತಂಡಗಳು ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಗೆಲುವು ಸಾಧಿಸಿದ ಬಾಲಕರು ಹಾಗೂ ಬಾಲಕಿಯರ ತಂಡಗಳನ್ನು ಶಾಲಾಡಳಿತ ಅಭಿನಂದಿಸಿತು,ಜತೆಗೆ ಮುಂದಿನ ಪಂದ್ಯಾವಳಿಯನ್ನು ಕೂಡ ಉತ್ತಮವಾಗಿ ಆಡುವಂತೆ ಪ್ರೋತ್ಸಾಹ ನೀಡಿ ಅಭಿನಂದಿಸಿತು.

ಬಾಲಕಿಯರ ತಂಡವನ್ನು ಆಂಗ್ಲ ಮಾಧ್ಯಮದ ಮುಖ್ಯ ಶಿಕ್ಷಕಿ ಸಿಸ್ಟೆರ್ ಲೆತಿಷಿಯ ಅವರು ಹಾಗೂ ಬಾಲಕರ ತಂಡವನ್ನು ಕನ್ನಡ ಮಾಧ್ಯಮದ ಮುಖ್ಯ ಶಿಕ್ಷಕಿ ಅಣ್ಣಮ್ಮ ಅವರು ಶ್ಲಾಘಿಸಿದರು.

ಈ ವೇಳೆ ಶಾಲೆಯ ಎಲ್ಲಾ ಶಿಕ್ಷಕರು ಉಭಯ ತಂಡಗಳಿಗೂ ಅಭಿನಂದನೆ ಸಲ್ಲಿಸಿ ಸಂತೋಷ ವ್ಯಕ್ತಪಡಿಸಿದರು.

ತಾ. ಮಟ್ಟದ ಥ್ರೋ ಬಾಲ್ ಪಂದ್ಯಾವಳಿ:ಆರ್ ಸಿ. ಎಂ ಆಂಗ್ಲ,ಕನ್ನಡ ಮಾಧ್ಯಮ ಶಾಲೆಗೆ ಜಯ Read More

ನ್ಯಾಯಬೆಲೆ ಅಂಗಡಿಗಳಿಗೆ ಕಲಬೆರಕೆ ರಾಗಿ ಸರಬರಾಜು: ಕ್ರಮಕ್ಕೆ ರಾಜೇಂದ್ರ ಸೂಚನೆ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ನ್ಯಾಯಬೆಲೆ ಅಂಗಡಿಗಳಿಗೆ ಕಲಬೆರಕೆ ರಾಗಿ ಸರಬರಾಜಾಗುತ್ತಿರುವ ಬಗ್ಗೆ
ದೂರುಗಳು ಕೇಳಿಬರುತ್ತಿದ್ದು,ಕೂಡಲೆ ಕ್ರಮ ವಹಿಸಿ ಎಂದು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಕುಂತೂರು ಮೋಳೆ ರಾಜೇಂದ್ರ ಸೂಚಿಸಿದರು.

ಪಡಿತರದಾರರಿಗೆ ಅದೇ ಕಲಬೆರಕೆ ರಾಗಿ ವಿತರಣೆಯಾಗುತ್ತಿರುವ ಬಗ್ಗೆಯೂ ದೂರುಗಳು ಕೇಳಿ ಬರುತ್ತಿವೆ ಕೂಡಲೇ ಪರಿಶೀಲಿಸಿ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು‌

ಪಟ್ಟಣದ ಕೊಳ್ಳೇಗಾಲ ಮೋಳೆಯ ಸರ್ಕಾರಿ ಶಾಲೆ ಆವರಣದಲ್ಲಿ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಹಮ್ಮಿಕೊಂಡಿದ್ದ ಪಂಚ ಗ್ಯಾರೆಂಟಿ ಯೋಜನೆ ನಡೆ, ಹಳ್ಳಿಯ ಕಡೆ, ಫಲಾನುಭವಿಗಳ ಜೊತೆ ಸಂವಾದ ಕಾರ್ಯಕ್ರಮ ಮತ್ತು ವಾರ್ಷಿಕ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಬಹುತೇಕ ನ್ಯಾಯಬೆಲೆ ಅಂಗಡಿಗಳಿಗಲ್ಲಿ ಪಡಿತರ ಜೊತೆಗೆ ಇದೇ ರಾಗಿಯನ್ನು ವಿತರಿಸುತ್ತಿದ್ದಾರೆ ಎಂದು ಪಡಿತರದಾರರು ಆರೋಪಿಸುತ್ತಿದ್ದಾರೆ. ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ಗುಣಮಟ್ಟದ ಆಹಾರ ನೀಡಲು ಶ್ರಮಿಸುತ್ತಿದೆ. ಆದರೆ ಕಲಬೆರಕೆ ರಾಗಿ ವಿತರಿಸಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಕೂಡಲೇ ಪರಿಶೀಲಿಸಿ ಕ್ರಮ ವಹಿಸಿ ಎಂದು ಆಹಾರ ಇಲಾಖೆ ಶಿರಸ್ತೇದಾರ್ ವಿಶ್ವನಾಥ್ ರವರಿಗೆ ಖಡಕ್ ಸೂಚನೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿಶ್ವನಾಥ್ ಅವರು ಒಂದೆರಡು ಅಂಗಡಿಗಳಲ್ಲಿ ಕಲಬೆರಕೆ ರಾಗಿ ಸರಬರಾಜಾಗಿರುವ ಬಗ್ಗೆ ಮಾಹಿತಿ ಇದೆ, ಕೂಡಲೇ ಪರಿಶೀಲಿಸಿ ಆ ನ್ಯಾಯಬೆಲೆ ಅಂಗಡಿಗಳಲ್ಲಿ ಬೇರೆ ರಾಗಿ ವಿತರಣೆ ಮಾಡವುದಾಗಿ ಅಥವಾ ರಾಗಿಯ ಬದಲು ಅಕ್ಕಿ ವಿತರಣೆ ಮಾಡಲಾಗುವುದು ಪಡಿತರದಾರರಿಗೆ ಯಾವುದೇ ರೀತಿಯ ಸಮಸ್ಯೆಯಾಗದ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಗೃಹ ಜ್ಯೋತಿ ಯೋಜನೆಗೆ ಇನ್ನೂ 40 ಫಲಾನುಭವಿಗಳು ನೊಂದಣಿ ಮಾಡಿಸಿಲ್ಲ ಎಂದು ಬೆಸ್ಕಾಂ ಎಇಇ ರಾಜು ಸಭೆಗೆ ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ವಾಹಕಿ ಶಿವಲೀಲಾ ಇನ್ನೂ 24 ಮಂದಿ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ ಮಾಡಿಲ್ಲ ಎಂದು ತಿಳಿಸಿದರು.

ಕೂಡಲೇ ಬಾಕಿ ಇರುವ ಫಲಾನುಭವಿಗಳನ್ನು ಯೋಜನೆಗೆ ನೊಂದಣಿ ಮಾಡಿಸಿ ಎಂದು ಅಧ್ಯಕ್ಷ ರಾಜೇಂದ್ರ ಸೂಚಿಸಿದರು ಹಾಗೂ ಕೊಳ್ಳೇಗಾಲ ಪಟ್ಟಣದಲ್ಲಿರುವ ಮೋಳೆ ಬಡಾವಣೆಯ ವಿದ್ಯುತ್ ಸಂಪರ್ಕವನ್ನು ಚಿಲಕವಾಡಿ ವಿಭಾಗಕ್ಕೆ ಸೇರಿಸಿದ್ದು ಆ ಸಂಪರ್ಕವನ್ನು ಪಟ್ಟಣ ವಿಭಾಗಕ್ಕೆ ಸೇರಿಸುವಂತೆ ಬೆಸ್ಕಾಂ ಎಇಇ ರಾಜು ಅವರಿಗೆ ತಾಕೀತು ಮಾಡಿದರು.

ಪಂಚ ಗ್ಯಾರಂಟಿ ಯೋಜನೆಗಳಿಗೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು ಪ್ರಸಕ್ತ ವರ್ಷದ ಮಾಹಿತಿ ನೀಡಿದರು.

ಸಭೆಯಲ್ಲಿ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ತಾ.ಪಂ. ಇ.ಒ ಗುರು ಶಾಂತಪ್ಪ ಬೆಳ್ಳುಂಡಗಿ, ಸದಸ್ಯರುಗಳಾದ ರಾಜುಗೌಡ, ಶಿವಕುಮಾರ, ಶಾಂತರಾಜು, ನಿಂಗರಾಜು, ಪರಮೇಶ್, ನಾರಾಯಣ, ಬಾಬು, ಪರಶಿವ, ನಾಗವೇಣಿ ಹಾಗೂ ಶ್ರೀನಿವಾಸಮೂರ್ತಿ ಉಪಸ್ಥಿತರಿದ್ದರು.

ನ್ಯಾಯಬೆಲೆ ಅಂಗಡಿಗಳಿಗೆ ಕಲಬೆರಕೆ ರಾಗಿ ಸರಬರಾಜು: ಕ್ರಮಕ್ಕೆ ರಾಜೇಂದ್ರ ಸೂಚನೆ Read More

ಉಗ್ರಾಣ ನಿಗಮದ ಗೋದಾಮುಗಳನ್ನು ಬಳಸಿಕೊಂಡು ರೈತರು ಬೆಳೆ ಸಂರಕ್ಷಿಸಲಿ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ತಾಲೂಕಿನ ರೈತರು ಭತ್ತ, ರಾಗಿ, ಮುಸುಕಿನ ಜೋಳ, ಉದ್ದು, ಹೆಸರು, ಹುರುಳಿ ಅಲಸಂದೆ ಕಾಳು ಹಾಗೂ ವಾಣಿಜ್ಯ ಬೆಳೆಗಳಾದ ಅರಿಸಿನ, ತೆಂಗು ಇನ್ನಿತರ ಬೆಳೆಗಳನ್ನು ಬೆಳೆಯುತ್ತಾರೆ.

ಆದರೆ ಬಹುತೇಕ ರೈತರು ತಾವು ಬೆಳೆದ ಧಾನ್ಯಗಳನ್ನು ಮನೆಯಲ್ಲಿ ದಾಸ್ತಾನು ಮಾಡಲು ಸ್ಥಳಾಭಾವ ಹಾಗೂ ಅನುಕೂಲವಿಲ್ಲದೆ ಜಮೀನುಗಳಲ್ಲೇ ಕಡಿಮೆ ಬೆಲೆಗೆ ಮಾರಾಟ ಮಾಡಿಕೊಳ್ಳುತ್ತಾರೆ. ಇದರಿಂದಾಗಿ ರೈತರು ಬೆಳೆದ ಬೆಳೆಗಳಿಂದ ದಲ್ಲಾಳಿಗಳು ಲಾಭ ಮಾಡಿಕೊಳ್ಳುತ್ತಾರೆ.

ಇದರಿಂದ ರೈತರು ಕಷ್ಟಪಟ್ಟು ಬೆಳೆದ ಬೆಳೆಗೆ ನಿರೀಕ್ಷಿತ ಪ್ರಮಾಣದಲ್ಲಿ ಬೆಲೆ ಸಿಗುತ್ತಿಲ್ಲ, ಇತ್ತ ಧಾನ್ಯಗಳನ್ನು ಸಂರಕ್ಷಣೆ ಮಾಡಿ ಕೊಳ್ಳಲೂ ಆಗುತ್ತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರೈತರಿದ್ದಾರೆ. ಆದ್ದರಿಂದ ಉಗ್ರಾಣ ನಿಗಮದ ಗೋದಾಮುಗಳನ್ನು ಬಳಸಿ ಕೊಳ್ಳುವ ಮೂಲಕ ರೈತರು ತಾವು ಬೆಳೆದ ಧಾನ್ಯಗಳನ್ನು ಸಂರಕ್ಷಣೆ ಮಾಡಿ ಕೊಳ್ಳಬಹುದಾಗಿದೆ.

ಹೌದು,ಇದು ನಿಜ. ಕರ್ನಾಟಕ ರಾಜ್ಯ ಉಗ್ರಾಣ ನಿಗಮವು ಒಂದು ಸರ್ಕಾರಿ ಸಂಸ್ಥೆಯಾಗಿದ್ದು, ರಾಜ್ಯದಲ್ಲಿ ಕೃಷಿ ಉತ್ಪನ್ನಗಳ ಉಗ್ರಾಣ ವ್ಯವಸ್ಥೆಯನ್ನು ನಿರ್ವಹಿಸುತ್ತದೆ. 1956 ರ ಕೃಷಿ ಉತ್ಪನ್ನ (ಅಭಿವೃದ್ಧಿ ಮತ್ತು ಉಗ್ರಾಣ ವ್ಯವಸ್ಥೆ) ನಿಗಮ ಅಧಿನಿಯಮದ ಪ್ರಕಾರ ಇದನ್ನು ಸ್ಥಾಪಿಸಲಾಗಿದೆ, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಪ್ರಕಾರ ಇದು ಕೃಷಿ ಉತ್ಪನ್ನಗಳ ಉಗ್ರಾಣ ವ್ಯವಸ್ಥೆಯನ್ನು ನೋಡಿಕೊಳ್ಳುತ್ತದೆ, ರಾಜ್ಯದಲ್ಲಿ ಉಗ್ರಾಣಗಳನ್ನು ನಿರ್ವಹಿಸುತ್ತದೆ, ಕೃಷಿ ಉತ್ಪನ್ನಗಳ ಸಂಗ್ರಹಣೆ ಮತ್ತು ವಿತರಣೆಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತದೆ.

ಈ ನಿಗಮವು ರಾಜ್ಯಾದ್ಯಂತ ಸುಮಾರು 170 ಶಾಖೆಗಳನ್ನು ಹೊಂದಿದ್ದು18 ಲಕ್ಷ ಮೆಟ್ರಿಕ್ ಟನ್ ಧಾನ್ಯ ದಾಸ್ತಾನು ಸಾಮರ್ಥ್ಯ ಇರುವ ಗೋದಾಮುಗಳಿವೆ. ವಿವಿಧ ಜಿಲ್ಲೆಗಳ ಬಹುತೇಕ ರೈತರು ಉಗ್ರಾಣ ನಿಗಮದ ಗೋದಾಮುಗಳನ್ನು ಬಳಸಿಕೊಳ್ಳುತ್ತಿದ್ದಾರೆ.

ಅದೇ ರೀತಿ 1984 ರಲ್ಲಿ ರಾಷ್ಟ್ರೀಯ ಉಗ್ರಾಣ ಜಾಲದ ಯೋಜನೆಯಡಿ ಕರ್ನಾಟಕ ರಾಜ್ಯ ಉಗ್ರಾಣ ನಿಗಮವು ಕೊಳ್ಳೇಗಾಲ ಶಾಖೆಯನ್ನು ಪ್ರಾರಂಭಿಸಿದೆ.
ಪಟ್ಟಣದ ಕುರುಬನಕಟ್ಟೆ ರಸ್ತೆಯಲ್ಲಿರುವ ಎ.ಪಿ.ಎಂ.ಸಿ ಆವರಣದಲ್ಲಿ ಸುಮಾರು 1.25 ಎಕರೆ ವಿಸ್ತೀರ್ಣದಲ್ಲಿದಲ್ಲಿರುವ ಈ ಕೇಂದ್ರವು ಸುಮಾರು 3000 ಮೆಟ್ರಿಕ್ ಟನ್ ದಾಸ್ತಾನು ಸಾಮರ್ಥ್ಯವನ್ನು ಹೊಂದಿದೆ. ಇಲ್ಲಿ 2000 ಮೆಟ್ರಿಕ್ ಟನ್ ಮತ್ತು 1000 ಮೆಟ್ರಿಕ್ ಟನ್ ಒಟ್ಟು 3000 ಮೆಟ್ರಿಕ್ ಟನ್ ಸಾಮರ್ಥ್ಯವಿರುವ 2 ಗೋದಾಮುಗಳಿದ್ದು ಪ್ರಸ್ತುತ 600 ಟನ್ ಭತ್ತವನ್ನು (16 ಸಾವಿರ ಚೀಲಗಳು) ರೈತರು ದಾಸ್ತಾನು ಮಾಡಿದ್ದಾರೆ.

ಈ ಉಗ್ರಾಣ ಕೇಂದ್ರವನ್ನು ಅಂದಿನ ವ್ಯವಸಾಯ ಉತ್ಪನ್ನ ಮಾರುಕಟ್ಟೆ ಮತ್ತು ಉಗ್ರಾಣ ನಿಗಮದ ರಾಜ್ಯ ಸಚಿವರಾದ ಎ.ಎಸ್. ಬಂಡಿಸಿದ್ದೇಗೌಡರು ಉದ್ಘಾಟಿಸಿದ್ದರು. ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರು ಹಾಗೂ ಶಾಸಕರು ಆದ ಜಿ ಎಫ್ ಉಪನಾಳ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಂದು ಗೃಹಖಾತೆ ಸಚಿವರಾಗಿದ್ದ ಬಿ. ರಾಚಯ್ಯ ಅವರು ಶಾಸಕರು ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಬಿ.ಬಸವಯ್ಯ ಅವರು ಭಾಗವಹಿಸಿದ್ದರು. ಅಂದಿನಿಂದ ಈ ಕೇಂದ್ರವು ನಿರಂತರವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ.

ಇಲ್ಲಿ ರೈತರು ಬೆಳೆದ ಧಾನ್ಯಗಳನ್ನು ದಾಸ್ತಾನು ಮಾಡಲು ಮಾಹೆಯಾನ ಶುಲ್ಕ 70 ಕೆ.ಜಿ.ಯ ಪ್ರತಿ ಚೀಲಕ್ಕೆ ಜಿ.ಎಸ್‌.ಟಿ ಸೇರಿ ಕೇವಲ 6.ರೂ. 30 ಪೈಸೆ ನಿಗದಿ ಪಡಿಸಲಾಗಿದೆ.

ಪ. ಜಾತಿ ಪ.ಪಂಗಡದವರಿಗೆ ಶೇಕಡ 40 ರಷ್ಟು ರಿಯಾಯಿತಿ ನೀಡಲಾಗುವುದು. ಇಲ್ಲಿ ದಾಸ್ತಾನಿಡುವ ಆಹಾರ ಧಾನ್ಯಗಳಿಗೆ ಪ್ರತಿ ತಿಂಗಳು ಎರಡು ಬಾರಿ ಔಷಧಿ ಸಿಂಪಡಣೆ ಮಾಡಲಾಗುವುದು. ಅದು ಸಹ ಧಾನ್ಯಗಳ ವಿಧಗಳ ಮೇಲೆ ಔಷಧಿ ಸಿಂಪಡಣೆ ಮಾಡಲಾಗುತ್ತದೆ. ಇದರಿಂದ ಧಾನ್ಯಗಳು ಹುಳು ಉಪ್ಪಟಗಳಿಂದ ಹಾಳಾಗುವುದರಿಂದ ಹಾಗೂ ಇಲಿ ಹೆಗ್ಗಣ ದಾಳಿಯಿಂದ ರಕ್ಷಿಸಿಕೊಳ್ಳಲು ಸಹಕಾರಿಯಾಗಲಿದೆ.

ಅಲ್ಲದೆ ರೈತರು ಬೆಳೆದ ಧಾನ್ಯಗಳನ್ನು ದಾಸ್ತಾನು ಮಾಡಿಕೊಂಡು ಬಾಂಡ್ ವಿತರಿಸಲಾಗುತ್ತದೆ. ತುರ್ತು ಹಣಕಾಸು ಸಮಸ್ಯೆ ಉಂಟಾದಾಗ ರೈತರು ಈ ಬಾಂಡ್ ಗಳನ್ನು ಬಳಸಿಕೊಂಡು ಬ್ಯಾಂಕಿನಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು. ನಂತರ ಬೆಲೆ ಹೆಚ್ಚಾದಾಗ ಮಾರಾಟ ಮಾಡಿಕೊಳ್ಳಲು ಅನುಕೂಲವಾಗಲಿದೆ.

ಇಲ್ಲಿ ರೈತರು ದಾಸ್ತಾನು ಇರಿಸುವ ದವಸ ಧಾನ್ಯಗಳು ಯಾವುದಾದರೂ ಅವಗಡ ಸಂಭವಿಸಿ ನಾಶವಾದರೆ ಎಂಬ ಉದ್ದೇಶದಿಂದ ಮುಂಗಡವಾಗಿ ವಿಮೆ ಸೌಲಭ್ಯ ಕಲ್ಪಿಸಲಾಗುತ್ತದೆ ರೈತರು ಇದರ ಸದುಪಯೋಗ ಪಡೆದು ಕೊಳ್ಳಬಹುದಾಗಿದೆ. ಎಂದು ಹೇಳುತ್ತಾರೆ ನಿಗಮದ ಕೊಳ್ಳೇಗಾಲ ಶಾಖೆಯ ವ್ಯವಸ್ಥಾಪಕರಾದ ಎ.ಎಂ. ಸಂಜಯ್ ಕುಮಾರ್ ಅವರು. 

ಕೊಳ್ಳೇಗಾಲದ ಮಾಜಿ ಶಾಸಕ ಎಸ್. ಜಯಣ್ಣ ಅವರು ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದರು. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಆಪ್ತ ರಾಗಿದ್ದ ಅವರು ನಿಗಮದ ಅಧ್ಯಕ್ಷರಾಗಿದ್ದ ವೇಳೆ ರಾಜ್ಯ ಉಗ್ರಾಣ ನಿಗಮವನ್ನು ಸಾಕಷ್ಟು ಅಭಿವೃದ್ಧಿ ಪಡಿಸುವ ಆಲೋಚನೆ ಹೊಂದಿದ್ದರು. ಆದರೆ ಅವರು ಕಳೆದ 8 ತಿಂಗಳ (2024 ರ ಡಿ. 10 ರಂದು) ಹಿಂದೆ ಅಕಾಲಿಕ ನಿಧಾನರಾಗಿದ್ದಾರೆ.

ಮುಂದೆ ಯಾರು ಬರುತ್ತಾರೋ‌ ಅವರು ರಾಜ್ಯ ಉಗ್ರಾಣ ನಿಗಮವನ್ನು ಅಭಿವೃದ್ಧಿ ಪಡಿಸಲಿ ರೈತರಿಗೆ ಒಳಿತಾಗಲಿ.

ಉಗ್ರಾಣ ನಿಗಮದ ಗೋದಾಮುಗಳನ್ನು ಬಳಸಿಕೊಂಡು ರೈತರು ಬೆಳೆ ಸಂರಕ್ಷಿಸಲಿ Read More

ಛಾಯಾಗ್ರಹಣ ವೃತ್ತಿ ಬಹಳ ಶ್ರೇಷ್ಠವಾದುದು:ನಗರ ಸಭಾಧ್ಯಕ್ಷೆ ರೇಖಾ ಬಣ್ಣನೆ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಛಾಯಾಗ್ರಹಣ ವೃತ್ತಿ ಬಹಳ ಶ್ರೇಷ್ಠವಾದುದು ಎಂದು ನಗರ ಸಭಾಧ್ಯಕ್ಷೆ ರೇಖಾ ಬಣ್ಣಿಸಿದರು.

ಛಾಯಾಗ್ರಾಹಕರು ನಮ್ಮನ್ನು ಸುಂದರವಾಗಿ ಕಾಣುವಂತೆ ಸಾಕಷ್ಟು ಭಂಗಿಗಳಲ್ಲಿ ಫೋಟೋ ತೆಗೆಯುತ್ತಾರೆ ಎಂದು ಹೇಳಿದರು.

ತಾಲ್ಲೂಕು ಛಾಯಾಚಿತ್ರಗ್ರಾಹಕರ ಸಂಘದ ವತಿಯಿಂದ ಪಟ್ಟಣದ ಗುರುಭವನದಲ್ಲಿ ನಡೆದ 186 ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಾವರು, ಫೋಟೋ ತೆಗೆಯುವ ಮೂಲಕ ಈ ಹಿಂದಿನ ನಮ್ಮ ಮೇಮೋರಿಯನ್ನು ನೆನಪಿಸುವಂತೆ  ಮಾಡುತ್ತಾರೆ ಎಂದು ತಿಳಿಸಿದರು.

ಸಂಘಗಳ ಅರಿವು ಕುರಿತು ಉಪನ್ಯಾಸ ನೀಡಿದ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ಎಸ್. ಸಿದ್ದಲಿಂಗಮೂರ್ತಿ ಅವರು ಛಾಯಾಚಿತ್ರಗ್ರಾಹಕರ ವೃತ್ತಿ ಒಂದು ಒಳ್ಳೆಯ ವೃತ್ತಿ, 1960 ರ ಸಹಕಾರ ಕಾಯ್ದೆಗಳ ಪ್ರಕಾರ ಕೊಳ್ಳೇಗಾಲ ಛಾಯಾಚಿತ್ರ ಗ್ರಾಹಕರ ಸಂಘ ನೊಂದಣಿಯಾಗಿದ್ದು, ಸಂಘ ಆರ್ಥಿಕ ಅಭಿವೃದ್ಧಿ ಮತ್ತು ಸಂಘಟನೆಯಲ್ಲಿ ಸಫಲತೆ ಕಂಡಿಲ್ಲ ಎಂದು ಹೇಳಿದರು.

ಸಂಘವನ್ನು ಬೈಲಾ ಪ್ರಕಾರ ನಡೆಸಬೇಕು, ಪ್ರತಿ ಮೂರು ವರ್ಷಗಳಿಗೊಮ್ಮೆ ನವೀಕರಣ ಮಾಡಿಸಿಕೊಳ್ಳಬೇಕು, ಸರ್ವ ಸದಸ್ಯರ ಅಭಿವೃದ್ಧಿಗಾಗಿ ಸಂಘವನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಮಿಕ ನಿರೀಕ್ಷಕ ಡಿ.ಎಲ್ ಪ್ರಸಾದ್ ಮಾತನಾಡಿ ಸರ್ಕಾರ ಕಾರ್ಮಿಕರಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ ಎಲ್ಲರೂ ಕಾರ್ಮಿಕ ಇಲಾಖೆಯ ಮೂಲಕ ನೊಂದಾಯಿಸಿಕೊಂಡು ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದು ಕರೆ ನೀಡಿದರು

ಡಾ ಬಿ ಆರ್ ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಆನಂದ ಮೂರ್ತಿ ಮಾತನಾಡಿ ಛಾಯಾಗ್ರಹಕರ ವೃತ್ತಿ ಬಹಳ ಜವಾಬ್ದಾರಿಯುತವಾಗಿದ್ದು, ನೀವಿಲ್ಲದೆ ಯಾವುದೇ ಕಾರ್ಯಕ್ರಮಗಳು ನಡೆಯುವುದಿಲ್ಲ. ಆದ್ದರಿಂದ ನಿಮ್ಮ ಇತಿ ಮಿತಿಯೊಳಗೆ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಸಿದ್ದರಾಜು, ಛಾಯಾಚಿತ್ರಗ್ರಾಹಕರ ಸಂಘದ ಜಿಲ್ಲಾಧ್ಯಕ್ಷ ಮಂಜೇಶ್ ಮಾತನಾಡಿದರು.

ಕಾರ್ಯಕ್ರಮ ಪ್ರಾರಂಭಕ್ಕೂ ಮುನ್ನ ಪಟ್ಟಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ವೃತ್ತಕ್ಕೆ ತೆರಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಛಾಯಾಚಿತ್ರಗ್ರಾಹಕರ ಸಂಘದ ಯಳಂದೂರು ತಾಲ್ಲೂಕು ಅಧ್ಯಕ್ಷ  ಕೃಷ್ಣ, ಗುಂಡ್ಲುಪೇಟೆ ತಾಲ್ಲೂಕು ಅಧ್ಯಕ್ಷ ನಾಗೇಂದ್ರ ಹನೂರು ತಾಲ್ಲೂಕು ಅಧ್ಯಕ್ಷ ಫಾರೂಕ್, ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷ ಜಯಪ್ರಕಾಶ್, ಗೌರವಾಧ್ಯಕ್ಷ ಷಣ್ಮುಖಸ್ವಾಮಿ, ಉಪಾಧ್ಯಕ್ಷ ಸರ್ದಾರ್ ಪಾಷ, ಕಾರ್ಯದರ್ಶಿ ರೋಷನ್ ಕುಮಾರ್, ಖಜಾಂಚಿ ಸಿ.ಪ್ರಸಾದ್ ಕುಮಾರ್, ನಿರ್ದೇಶಕರುಗಳಾದ ನವೀನ್ ಕುಮಾರ್, ವಸಂತ್ ಕುಮಾರ್, ಜಿ.ಆರ್.ರಘು, ಡಿ.ರಘುನಾಥ್, ರಕ್ಷಿತ್ ಕುಮಾರ್ ಎನ್ ಹಾಗೂ ಎಲ್ಲಾ ಸದಸ್ಯರು ಹಾಜರಿದ್ದರು.

ಛಾಯಾಗ್ರಹಣ ವೃತ್ತಿ ಬಹಳ ಶ್ರೇಷ್ಠವಾದುದು:ನಗರ ಸಭಾಧ್ಯಕ್ಷೆ ರೇಖಾ ಬಣ್ಣನೆ Read More