ಡಾ.ಅಂಬೇಡ್ಕರ್ ಫೆಲೋಶಿಪ್ ರಾಷ್ಟ್ರೀಯ ಪ್ರಶಸ್ತಿಗೆ‌‌ ಭಾಜನರಾದ ಆರ್.ನಂಜುಂಡಯ್ಯ

ಕೊಳ್ಳೇಗಾಲ: ತಾಲ್ಲೂಕಿನ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಆರ್.ನಂಜುಂಡಯ್ಯ ಅವರು 2025 ನೇ ಡಾ.ಅಂಬೇಡ್ಕರ್ ಫೆಲೋಶಿಪ್ ರಾಷ್ಟ್ರೀಯ ಪ್ರಶಸ್ತಿಗೆ‌‌ ಭಾಜನರಾಗಿದ್ದಾರೆ.

ನವದೆಹಲಿ ಆಶ್ರಮ್, ಜರೋಡಾದ ಮಾಡೆಲ್ ಟೌನ್ ನಲ್ಲಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ 41ನೇ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ರಾಷ್ಟ್ರೀಯ ಅಧ್ಯಕ್ಷ  ಡಾ:ಎಸ್.ಪಿ.ಸುಮನಾಸ್ಕರ್ ಅವರು
ಆರ್.ನಂಜುಂಡಯ್ಯ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಯಳಂದೂರು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಆರ್.ನಂಜುಂಡಯ್ಯ ಅವರು ಕಳೆದ ಮೂರು ದಿನಗಳ ಹಿಂದಷ್ಟೇ ಕೊಳ್ಳೇಗಾಲ, ತಾಲ್ಲೂಕಿನ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾಗಿ ಅಧಿಕಾರ ವಹಿಸಿ ಕೊಂಡಿದ್ದಾರೆ.

ಸಮಾಜ ಸೇವೆ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುವವರನ್ನು ಗುರುತಿಸಿ ಕೊಡಮಾಡುವ ಡಾ.ಅಂಬೇಡ್ಕರ್ ಫೆಲೋಶಿಪ್ ರಾಷ್ಟ್ರೀಯ ಪ್ರಶಸ್ತಿಯನ್ನು ಆರ್.ನಂಜುಂಡಯ್ಯನವರಿಗೆ ಕೇಂದ್ರ ಸಚಿವರು ಹಾಗೂ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ರಾಷ್ಟ್ರೀಯ ಅಧ್ಯಕ್ಷರಾದ  ಡಾ.ಎಸ್.ಪಿ. ಸುಮನಾಸ್ಕರ್, ಹಾಗೂ ಕೇಂದ್ರ ಸಚಿವರು, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ಪದಾಧಿಕಾರಿಗಳು ಸದಸ್ಯರು ಗಣ್ಯರು  ಭಾಗವಹಿಸಿದ್ದರು.

ಡಾ.ಅಂಬೇಡ್ಕರ್ ಫೆಲೋಶಿಪ್ ರಾಷ್ಟ್ರೀಯ ಪ್ರಶಸ್ತಿಗೆ‌‌ ಭಾಜನರಾದ ಆರ್.ನಂಜುಂಡಯ್ಯ Read More

ಪ್ರತಿಭೆಗಳನ್ನು ಹೊರ ತರಲು ಪ್ರತಿಭಾ ಕಾರಂಜಿ ಸಹಕಾರಿ:ಎ.ಆರ್. ಕೃಷ್ಣಮೂರ್ತಿ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮದೇ ಆದ ಪ್ರತಿಭೆಗಳನ್ನು ಹೊಂದಿರುತ್ತಾರೆ. ಪ್ರತಿಭೆಗಳನ್ನು ಹೊರ ತರುವ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿ ಯಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು
ಶಾಸಕ ಎ.ಆರ್. ಕೃಷ್ಣಮೂರ್ತಿ ತಿಳಿಸಿದರು.

ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುವಂತೆ ಶಾಸಕರು ಕರೆ ನೀಡಿದರು.

ಪಟ್ಟಣದ ಆರ್.ಮಿಷನ್ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಕರ ಇಲಾಖೆ ವತಿಯಿಂದ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ-ಕಲೋತ್ಸವ ಕಾರ್ಯಕ್ರಮವನ್ನು ಅವರು ಉದ್ಘಾಟಸಿ ಮಾತನಾಡಿದರು.

ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪತ್ಯೇತರ ಚಟುವಟಿಕೆಗೂ ಒತ್ತು ನೀಡಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ತಮ್ಮದೇ ಆದ ಪ್ರತಿಭೆಗಳನ್ನು ಹೊಂದಿರುತ್ತಾರೆ,ಅದನ್ನು ಗುರುತಿಸಿ ಪ್ರೊತ್ಸಾಹಿಸಬೇಕು ಎಂದು ದಲಹೆ ನೀಡಿದರು.
ಚಾಮರಾಜನಗರ ಜಿಲ್ಲೆಯು ಜಾನಪದ ಕಲೆಗಳ ತವರೂರಾಗಿದೆ. ವಿದ್ಯಾರ್ಥಿಗಳು ತಮ್ಮ ಸ್ಥಳೀಯ ಜಾನಪದ ಕಲೆಗಳಿಗೆ ಒತ್ತು ನೀಡಬೇಕು. ಆ ಮೂಲಕ ಜಿಲ್ಲೆಯ ಸಂಸ್ಕೃತಿಯನ್ನು ದೇಶಾದ್ಯಂತ ಪಸರಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಇತ್ತೀಚಿಗೆ ಯಳಂದೂರಿನಲ್ಲಿ ಆದರ್ಶ ಶಾಲೆಯ ವಿದ್ಯಾರ್ಥಿನಿಯರು ಕಂಸಾಳೆ ನೃತ್ಯದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ. ಅವರಂತೆ ಜಿಲ್ಲೆಯ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಬೇಕು ಎಂದು ಕೃಷ್ಣಮೂರ್ತಿ ಯವರು ಕರೆ ನೀಡಿದರು.

ರಾಜ್ಯದಲ್ಲಿ 200 ಕೆಪಿಎಸ್ ಶಾಲೆಗಳ ಪ್ರಾರಂಭಕ್ಕೆ ಸರ್ಕಾರ ಮುಂದಾಗಿದ್ದು 3 ಶಾಲೆಗಳನ್ನು ಕೊಳ್ಳೇಗಾಲ ಕ್ಷೇತ್ರಕ್ಕೆ ಮಂಜೂರು ಮಾಡಿದ್ದು ಮತ್ತೆ ಮೂರು ಶಾಲೆಗಳ ಮಂಜೂರಿಗೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ 6 ಶಾಲೆಗಳನ್ನು ಮಂಜೂರು ಮಾಡಿದ್ದಾರೆ.

ಅಲ್ಲದೇ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತಾಲೂಕಿನ ಕುರುಬನ ಕಟ್ಟಿ ಗುಡ್ಡಗಾಡು ಪ್ರದೇಶದಲ್ಲಿ 5 ಎಕರೆ ಜಾಗದಲ್ಲಿ ಮುರಾರ್ಜಿ ದೇಸಾಯಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಸತಿ ಶಾಲೆ ನಿರ್ಮಾಣಕ್ಕೆ ಅನುಮೋದನೆ ದೊರೆತ್ತಿದ್ದು, ಶೀಘ್ರವೇ ವಸತಿ ಶಾಲೆಯ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರು, ತಾಲ್ಲೂಕು ಅಧ್ಯಕ್ಷ ರಾಜೇಂದ್ರ, ತಾ.ಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ಬಿಇಒ ಮಂಜುಳಾ, ಬಿ.ಆರ್.ಸಿ ಮಹದೇವ ಕುಮಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಂಗಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೋಸೆಫ್ ಅಲೆಕ್ಸಾಂಡರ್, ಪ್ರೌಢಶಾಲಾ ಮುಖ್ಯ ಶಿಕ್ಷಕ ವಿಶ್ವನಾಥ್, ಪ್ರೌಢಶಾಲಾ ಸಹಶಿಕ್ಷಕರ ಸಂಘ ಅಧ್ಯಕ್ಷ ಅಕ್ಬರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ್, ಕಾರ್ಯಕ್ರಮ ನೂಡಲ್ ಅಧಿಕಾರಿ ವಿಜಯ್ ಕುಮಾರ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಉಪಾಧ್ಯಕ್ಷರಾದ ಬುಕಾನಿ, ಸಂಸ್ಥೆಯ ಆಂಗ್ಲ ಮಾಧ್ಯಮದ ಮುಖ್ಯ ಶಿಕ್ಷಕಿ ಸಿಸ್ಟರ್ ಲೆತಿಷಿಯ ಹಾಗೂ ಕನ್ನಡ ಮಾಧ್ಯಮದ ಮುಖ್ಯ ಶಿಕ್ಷಕಿ ಅನ್ನಮ್ಮ ದೈಹಿಕ ಶಿಕ್ಷಕ ಪೀಟರ್ ಮತ್ತಿರರು ಹಾಜರಿದ್ದರು.

ಪ್ರತಿಭೆಗಳನ್ನು ಹೊರ ತರಲು ಪ್ರತಿಭಾ ಕಾರಂಜಿ ಸಹಕಾರಿ:ಎ.ಆರ್. ಕೃಷ್ಣಮೂರ್ತಿ Read More

ಕುಂತೂರು ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಕೃಷ್ಣಮೂರ್ತಿ ಚಾಲನೆ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ತಾಲ್ಲೂಕಿನ ಕುಂತೂರು ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿಯವರು ಚಾಲನೆ ನೀಡಿದರು.

ಮಲ್ಲಹಳ್ಳಿಮಾಳ ಗ್ರಾಮದಲ್ಲಿ ನಿರ್ಮಾಣವಾಗಿರುವ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ನೂತನ ಕಟ್ಟಡ ಉದ್ಘಾಟನೆ ಹಾಗೂ ಕುಂತೂರು ಮೋಳೆ ಗ್ರಾಮದಲ್ಲಿ ನಿರ್ಮಾಣವಾಗಿರುವ ಭಗೀರಥ ಉಪ್ಪಾರ ಸಮುದಾಯ ಭವನ ನೂತನ ಕಟ್ಟಡ ಉದ್ಘಾಟನೆ ಹಾಗೂ ಕುಂತೂರು ಗ್ರಾಮದಲ್ಲಿ 10 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್ ಭವನ ಮುಂದುವರೆದ ಕಾಮಗಾರಿಗಳಿಗೆ ಶಾಸಕರು ಗುದ್ದಲಿಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಶಾಸಕರು ಕ್ಷೇತ್ರದ ಜನತೆಯ ಆಶೀರ್ವಾದದಿಂದ ನಾನು ಶಾಸಕನಾಗಿ ಆಯ್ಕೆಯಾದ ಮೇಲೆ ಸರ್ಕಾರದಿಂದ ಮೊದಲ ಬಾರಿಗೆ 25 ಕೋಟಿ ಅನುದಾನವನ್ನು ತಂದು ಅದರಲ್ಲಿ ಕ್ಷೇತ್ರದ ಎಲ್ಲಾ ಸಮುದಾಯದ ಎಲ್ಲಾ ವರ್ಗದ ಸಮುದಾಯಗಳ ಅಪೂರ್ಣ ಹಂತದಲ್ಲಿದ್ದ ಸಮುದಾಯ ಭವನಗಳ ಮುಂದುವರಿದ ಕಾಮಗಾರಿಗೆ ನೀಡಲಾಗಿತ್ತು ಎಂದು ತಿಳಿಸಿದರು.

ಅಂಬೇಡ್ಕ‌ರ್ ಭವನ, ಬಸವ ಭವನ, ಭಗೀರಥ ಭವನ, ವಾಲ್ಮೀಕಿ ಭವನ, ಕನಕ ಭವನ,ಶಾಧಿ ಮಹಲ್, ಕ್ರಿಶ್ಚಿಯನ್ ಸಮುದಾಯ ಭವನ, ಮಡಿವಾಳ ಭವನ ಈಗೆ ಎಲ್ಲಾ ವರ್ಗದ ಭವನಗಳ ಮುಂದುವರಿದ ಕಾಮಗಾರಿಗಳಿಗೆ 20 ಲಕ್ಷ 30 ಲಕ್ಷ 50 ಲಕ್ಷ, ಒಂದು ಕೋಟಿ ವರೆಗೂ ಅನುದಾನವನ್ನು ಕೊಡಲಾಗಿದೆ, ಕ್ಷೇತ್ರದಲ್ಲಿ ಎಲ್ಲಾ ಸಮುದಾಯದ ಜನರು ನನಗೆ ಮತ ನೋಡಿ ನನ್ನ ಗೆಲುವಿಗೆ ಸಹಕರಿಸಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.

ಈಗ 50 ಕೋಟಿ ಅನುದಾನವನ್ನು ಕೊಟ್ಟು ಸರ್ಕಾರ ರಸ್ತೆ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಆದೇಶವನ್ನು ನೀಡಿತ್ತು ಆದ್ದರಿಂದ ಲೋಕೋಪಯೋಗಿ ಇಲಾಖೆ, ಕೆ. ಆ‌ರ್. ಐ. ಡಿ. ಎಲ್, ಜಿಲ್ಲಾ ಪಂಚಾಯತ್ ಇಲಾಖೆಗಳಿಗೆ ಸಂಬಂಧ ಪಟ್ಟ ರಸ್ತೆಗಳು ಕ್ಷೇತ್ರದಲ್ಲಿ ಎಲ್ಲಾ ಗ್ರಾಮಗಳ ಎಲ್ಲಾ ಸಮುದಾಯದ ಬೀದಿಗಳಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ನೀಡಿ ಭೂಮಿ ಪೂಜೆಯನ್ನು ನೆರವೇರಿಸಲಾಗಿದೆ ಹಾಗೂ ಮುಡಿಗುಂಡ ಸೇತುವೆ ಹಳೆಯದಾಗಿದ್ದು ಪಕ್ಕದಲ್ಲಿ ಮತ್ತೊಂದು ಸೇತುವೆ ನಿರ್ಮಾಣ ಮಾಡಲು 15 ಕೋಟಿ ಅನುಮೋದನೆ ದೊರೆತಿದೆ ಎಂದು ಹೇಳಿದರು.

ಕೊಳ್ಳೇಗಾಲದಲ್ಲಿ 250 ಹಾಸಿಗೆಯ ಆಸ್ಪತ್ರೆ ನಿರ್ಮಾಣ ಮಾಡಲು ಮುಡಿಗುಂಡ ರೇಷ್ಮೆ ಇಲಾಖೆ ಜಾಗದಲ್ಲಿ ಸ್ಥಳ ನಿಗದಿ ಮಾಡಲಾಗಿದ್ದು ಸದ್ಯದಲ್ಲಿಯೇ ಮುಖ್ಯಮಂತ್ರಿಗಳಿಂದ ಕೊಳ್ಳೇಗಾಲದ ಅಂಬೇಡ್ಕರ್ ಸಮುದಾಯ ಉದ್ಘಾಟನೆ ಹಾಗೂ ಆಸ್ಪತ್ರೆ ನಿರ್ಮಾಣ ಮತ್ತು ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಲಾಗುವುದು ಎಂದು ಎ.ಆರ್.ಕೃಷ್ಣಮೂರ್ತಿ ಮಾಹಿತಿ ನೀಡಿದರು.

ಈ ಸಂಧರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರು, ತಾಲ್ಲೂಕು ಅಧ್ಯಕ್ಷ ರಾಜೇಂದ್ರ, ಯಳಂದೂರು ತಾಲ್ಲೂಕು ಅಧ್ಯಕ್ಷ ಪ್ರಭುಪ್ರಸಾದ್, ಉಪ್ಪಾರ ನಿಗಮ ಮಾಜಿ ರಾಜ್ಯಾಧ್ಯಕ್ಷ ಶಿವಕುಮಾರ್, ಕುಂತೂರು ಗ್ರಾ.ಪಂ ಅಧ್ಯಕ್ಷೆ ಗಂಗಮ್ಮಣಿ, ಉಪಾಧ್ಯಕ್ಷೆ ನಾಗರತ್ನಮ್ಮ, ಉಪ್ಪಾರ ಸಂಘದ ಅಧ್ಯಕ್ಷ ರಮೇಶ್, ತಾ.ಪಂ ಮಾಜಿ ಉಪಾಧ್ಯಕ್ಷ ಮಲ್ಲಣ್ಣ, ಮುಖಂಡರಾದ ತೋಟೇಶ್, ಚೇತನ್ ದೊರೆ, ತಾ.ಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ನಿರ್ಮಿತಿ ಕೇಂದ್ರ ಉಪಯೋಜನಾ ವ್ಯವಸ್ಥಾಪಕ ಪ್ರತಾಪ್, ಗುತ್ತಿಗೆದಾರ ರಾಚಯ್ಯ ಮತ್ತಿತರರು ಹಾಜರಿದ್ದರು.

ಕುಂತೂರು ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಕೃಷ್ಣಮೂರ್ತಿ ಚಾಲನೆ Read More

ವನ್ಯಜೀವಿ ಅರಣ್ಯ ಇಲಾಖೆ ಕಚೇರಿ: ಸಮಗ್ರ ಕಮಾಂಡ್ ಸೆಂಟರ್ ಉದ್ಘಾಟಿಸಿದ ಖಂಡ್ರೆ

(ವರದಿ:ಸಿದ್ದರಾಜು‌ ಕೊಳ್ಳೇಗಾಲ)

ಕೊಳ್ಳೆಗಾಲ: ಅರಣ್ಯ ಕ್ಷೀಣಿಸುತ್ತಿದ್ದು, ವನ್ಯಜೀವಿಗಳ ಸಂಖ್ಯೆಯಲ್ಲಿ ಹೆಚ್ಚಳ ಆಗುತ್ತಿರುವುದು ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗಿದೆ ಎಂದು ಅರಣ್ಯ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದರು.
ಅತ್ಯಾಧುನಿಕ ತಂತ್ರಜ್ಞಾನದ ಬಳಕೆ ಹಾಗೂ ಸಹಬಾಳ್ವೆಯಿಂದ ಮಾತ್ರ ಸಂಘರ್ಷ ನಿಯಂತ್ರಣ ಸಾಧ್ಯ ಎಂದು ಹೇಳಿದರು.
ಕೊಳ್ಳೆಗಾಲದ ಮಲೈ ಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯ ಇಲಾಖೆಯ ಕಚೇರಿ ಆವರಣದಲ್ಲಿ ಸಮಗ್ರ ಕಮಾಂಡ್ ಸೆಂಟರ್ ಕೇಂದ್ರ ಉದ್ಘಾಟಿಸಿ ಮಾತನಾಡಿದ ಸಚಿವರು, ಗಸ್ತು ಹೆಚ್ಚಳದ ಮೂಲಕ ಹಾಗೂ ಅರಣ್ಯದಂಚಿನ ಜನರಲ್ಲಿ ಸಹಬಾಳ್ವೆಯ ಬಗ್ಗೆ ಅರಿವು ಮೂಡಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ, ಈ ನಿಟ್ಟಿನಲ್ಲಿ ಕಮಾಂಡ್ ಕೇಂದ್ರ ಯಶಸ್ವೀ ಪರಿಹಾರ ಆಗಲಿದೆ ಎಂದು ಹೇಳಿದರು.
ಪ್ರಸ್ತುತ ನಾಗರಹೊಳೆ, ಎಂ.ಎಂ.ಹಿಲ್ಸ್, ಕಾಳಿ, ಮಡಿಕೇರಿ ಸೇರಿ ನಾಲ್ಕು ಕಡೆಗಳಲ್ಲಿ ಕಮಾಂಡ್ ಕೇಂದ್ರ ಸಿದ್ಧವಾಗಿದ್ದು ಸಿಬ್ಬಂದಿಗೆ ತರಬೇತಿಯನ್ನೂ ನೀಡಲಾಗಿದೆ.
ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಿರುವ ಚಿಕ್ಕಮಗಳೂರು ವಿಭಾಗ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ಮೈಸೂರು ವಿಭಾಗ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶ ಹಾಗೂ ಹಾಸನ ವಲಯದಲ್ಲಿ ಕಮಾಂಡ್ ಸೆಂಟರ್ ತೆರೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ರಾಜ್ಯ ಮಟ್ಟದ ಕೇಂದ್ರ ಸಿದ್ಧವಾಗುತ್ತಿದ್ದು, ಅಧಿವೇಶನದ ನಂತರ ಇದನ್ನು ಉದ್ಘಾಟಿಸಲಾಗುವುದು ಎಂದು ಸಚಿವರು ತಿಳಿಸಿದರು.
ಕೃತಕ ಬುದ್ಧಿಮತ್ತೆಯ (ಎ.ಐ) ಕ್ಯಾಮರಾ, ಥರ್ಮಲ್ ಡ್ರೋನ್ ಕ್ಯಾಮರಾ ಇತ್ಯಾದಿಗಳನ್ನು ಬಳಸಿ ವನ್ಯಜೀವಿಗಳ ಚಲನ ವಲನದ ಬಗ್ಗೆ ನಿಗಾ ಇಟ್ಟು, ಯಾವ ಕಾಡಿನಂಚಿನ ಗ್ರಾಮದ ಬಳಿ ವನ್ಯಜೀವಿ ಇದೆ ಎಂಬ ಬಗ್ಗೆ ತತ್ ಕ್ಷಣ ಮಾಹಿತಿ ನೀಡಿದರೆ ಅಮೂಲ್ಯ ಜೀವಹಾನಿ ತಡೆಯಬಹುದು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ಕಚೇರಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಕಮಾಂಡ್ ಸೆಂಟರ್ ಮಾಹಿತಿ ನೀಡಿದ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ರಾಜನ್, ಈ ತಂತ್ರಾಂಶದಲ್ಲಿ ಯಾವ ಸಿಬ್ಬಂದಿ ಎಷ್ಟು ಹೊತ್ತಿನಲ್ಲಿ ಯಾವ ವಲಯದಲ್ಲಿ ಗಸ್ತಿನಲ್ಲಿದ್ದರು ಎಂಬ ಮಾಹಿತಿ ಲಭಿಸಲಿದೆ. ಅದೇ ರೀತಿ ವನ್ಯಜೀವಿಗಳು ನಾಡಿನತ್ತ ಬಂದಾಗ ಸಕಾಲಿಕ ಮಾಹಿತಿ ಪಡೆದು ಕಾಡಿನಂಚಿನ ಜನರಿಗೆ ವಾಟ್ಸ್ ಅಪ್ ಮತ್ತು ಇತರ ಮಾಧ್ಯಮಗಳ ಮೂಲಕ ಮಾಹಿತಿ ನೀಡಲು ಕಮಾಂಡ್ ಸೆಂಟರ್ ಮಹತ್ವದ ಪಾತ್ರ ವಹಿಸಲಿದೆ ಎಂದು ವಿವರಿಸಿದರು.
ನಾಲೆಯಲ್ಲಿ ಸಿಲುಕಿದ್ದ ಸಲಗ ರಕ್ಷಿಸಿದ ಅರಣ್ಯ ಸಿಬ್ಬಂದಿಗೆ ಸನ್ಮಾನ:
ಇತ್ತೀಚೆಗೆ ಶಿವನಸಮುದ್ರದ ಜಲವಿದ್ಯುತ್ ಗಾರದ ಜಲಾಶಯದ ಬಳಿ ನಾಲೆಯಲ್ಲಿ ಸಿಲುಕಿದ್ದ ಸಲಗವನ್ನು ಯಶಸ್ವಿಯಾಗಿ ರಕ್ಷಿಸಿದ ಅರಣ್ಯ ಸಿಬ್ಬಂದಿ ಮತ್ತು ಪಶುವೈದ್ಯರನ್ನು ಈಶ್ವರ ಬಿ ಖಂಡ್ರೆ ಅವರು ಸನ್ಮಾನಿಸಿದರು.
ಕೊಳ್ಳೆಗಾಲದಲ್ಲಿ ಕಮಾಂಡ್ ಸೆಂಟರ್ ಉದ್ಘಾಟಿಸಿದ ತರುವಾಯ ನಡೆದ ಅಧಿಕಾರಿಗಳ ಸಭೆಗೂ ಮುನ್ನ 40 ಅಡಿ ಆಳದಿಂದ ಆನೆಯನ್ನು ರಕ್ಷಿಸಿದ ತಂಡದಲ್ಲಿದ್ದ ಮಂಡ್ಯ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರಘು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹದೇವಸ್ವಾಮಿ, ವಲಯ ಅರಣ್ಯಾಧಿಕಾರಿ ಗವಿಯಪ್ಪ, ಪಶುವೈದ್ಯ ಆದರ್ಶ್ ಹಾಗೂ ಶಾರ್ಪ್ ಶೂಟರ್ ಅಕ್ರಮ್ ಅವರನ್ನು ಸಚಿವರು ಸನ್ಮಾನಿಸಿದರು.
ಉತ್ತಮ ಕಾರ್ಯ ಮಾಡಿದ ಸಿಬ್ಬಂದಿ ಪ್ರಶಂಸೆಗೆ ಮತ್ತು ಸನ್ಮಾನಕ್ಕೆ ಅರ್ಹರಾಗುತ್ತಾರೆ. ಅದೇ ರೀತಿ ತಪ್ಪು ಮಾಡುವ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದರು.
ಕಮಾಂಡ್ ಸೆಂಟರ್ ಉದ್ಘಾಟನಾ ಸಮಾರಂಭದಲ್ಲಿ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಎಂ.ಆರ್. ಮಂಜುನಾಥ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾದಿಕಾರದ ಅಧ್ಯಕ್ಷರಾದ ಎಚ್.ವಿ.ಚಂದ್ರು,ಜಿಲ್ಲಾಧಿಕಾರಿ ಶಿಲ್ಪನಾಗ್, ಜಿಲ್ಲಾ ಪಂಚಾಯತ್ ಸಿಇಒ ಮೋನಾ ರೌತ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್, ಡಿ.ಸಿಎಫ್. ಭಾಸ್ಕರ್ ಮತ್ತಿತರರು ಪಾಲ್ಗೊಂಡಿದ್ದರು.

ವನ್ಯಜೀವಿ ಅರಣ್ಯ ಇಲಾಖೆ ಕಚೇರಿ: ಸಮಗ್ರ ಕಮಾಂಡ್ ಸೆಂಟರ್ ಉದ್ಘಾಟಿಸಿದ ಖಂಡ್ರೆ Read More

ದಲಿತರನ್ನು ಕಾಂಗ್ರೆಸ್ ವೋಟ್ ಬ್ಯಾಂಕ್‌ಗೆ ಸೀಮಿತವಾಗಿಸಿದೆ: ನಾರಾಯಣಸ್ವಾಮಿ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಬಿಜೆಪಿಯ ಯಾರೋ ಒಬ್ಬರು ತಲೆ ಕೆಟ್ಟು ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದನ್ನೇ ಕಾಂಗ್ರೆಸ್‌ನವರು ಇನ್ನೂ ಜನತೆ ಮುಂದೆ ಹೇಳಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಟಾಂಗ್ ನೀಡಿದರು

ಪಟ್ಟಣದ ಭ್ರಮರಾಂಬ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಸಂವಿಧಾನ ಸಮರ್ಪಣಾ ದಿನ, ಸಂವಿಧಾನ ಜಾಗೃತಿಗಾಗಿ ಭೀಮ ನಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ನಾಯಕ ಎಂಬುದನ್ನು ಇಡೀ ದೇಶದ ಜನರೇ ಒಪ್ಪಿದ್ದಾರೆ. ಹಿಂದೆ ದೇಶದಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿತ್ತು. ಆದರೆ ಈಗ ಕಾಂಗ್ರೆಸ್ ತನ್ನ ಆಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ  ಕಾಂಗ್ರೆಸ್ ದಲಿತರನ್ನು ವೋಟ್ ಬ್ಯಾಂಕ್‌ಗೆ ಮಾತ್ರ ಸೀಮಿತವಾಗಿಸಿದೆ. 75 ವರ್ಷಗಳ ಕಾಲ ದೇಶದಲ್ಲಿ ಕಾಂಗ್ರೆಸ್ ದಲಿತರನ್ನು ಗುಲಾಮರನ್ನಾಗಿಸಿಕೊಂಡಿದೆ. ದೇಶದಲ್ಲಿ ಎಲ್ಲಿಯೂ ಕೂಡ ದಲಿತರಿಗೆ ಮುಖ್ಯಮಂತ್ರಿಸ್ಥಾನ ನೀಡಲಿಲ್ಲ ಎಂದು ಆರೋಪಿಸಿದರು.

ಬಿಜೆಪಿಯನ್ನು ಮೀಸಲಾತಿ ವಿರೋಧಿ ಪಕ್ಷ ಎಂದು ಹೇಳುವ ಕಾಂಗ್ರೆಸ್ಸಿಗರು ಕರ್ನಾಟಕದಲ್ಲಿ ಎಸ್ಸಿಗೆ ಶೇ.15 ರಿಂದ ಶೇ.18 ಗೆ, ಎಸ್ ಟಿಗೆ 3 ರಿಂದ 7 ರಷ್ಟು ಮೀಸಲಾತಿ ಹೆಚ್ಚಳ ಮಾಡಿದ್ದು ಬಿಜೆಪಿ ಸರ್ಕಾರ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ‌ತಿರುಗೇಟು ನೀಡಿದರು.

ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರೋವರೆಗೂ ಸಂವಿಧಾನ ಬದಲಾವಣೆ ಮಾತೇ ಇಲ್ಲ, ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಜೀವವನ್ನು ಕೈಯಲ್ಲಿ ಹಿಡಿದು ಬದುಕುತ್ತಿದ್ದ ಜಮ್ಮು-ಕಾಶ್ಮೀರದ ಜನರಿಗೆ 370 ನೇ ವಿಧಿಯನ್ನು ರದ್ದುಗೊಳಿಸಿ, ಎಲ್ಲಾ ಮೂಲಭೂತ ಸೌಕರ್ಯ ಸಿಗುವಂತೆ ಮಾಡಲಾಗಿದೆ ಎಂದು ತಿಳಿಸಿದರು.

ಡಿಕೆಶಿ ಯಾವತ್ತೂ ಸಿಎಂ ಸಿದ್ದರಾಮಯ್ಯ ಮನೆಗೆ ಹೋದವರಲ್ಲ, ಸಿದ್ದರಾಮಯ್ಯ ಕೂಡ ಯಾವತ್ತೂ ಡಿಕೆಶಿ ಮನೆ ಹೋಗಿಲ್ಲ. ಅಧಿಕಾರದ ಆಸೆ, ಸಿಎಂ ಸ್ಥಾನ ಉಳಿಸಿಕೊಳ್ಳಬೇಕೆಂಬ ಹಪಾಹಪಿಯಿಂದ ಅವರ ಮನೆಗೆ ಹೋಗಿದ್ದಾರೆ. ಮನಸ್ಸುಗಳೇ ಬ್ರೇಕ್ ಆಗಿರುವಾಗ ಬ್ರೇಕ್ ಫಾಸ್ಟ್ ತೇಪೆ ಹಚ್ಚುತ್ತಾರೆ ಎಂದು ‌ಟೀಕಾಪ್ರಹಾರ ನಡೆಸಿದರು ‌

ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತಿಸಲು ಸೇರಿದ್ದಾರಾ, ದಲಿತರ ಸಮಸ್ಯೆ, ರೈತರ ಸಮಸ್ಯೆ ಬಗೆಹರಿಸಲು ಏನಾದ್ರೂ ಸೇರಿದ್ದಾರಾ ಬ್ರೇಕ್ ಫಾಸ್ಟ್, ಪಾರ್ಟಿ ಮಾಡಿಕೊಂಡು ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನಲ್ಲಿ ದಲಿತರಿಗೆ ಕುರ್ಚಿ ಇಲ್ಲ ಅಂತಾ ಸಾಬೀತಾಗಿದೆ. ಸಂಪುಟ ಪುನರ್ ರಚನೆಯಾದರೆ ಸಂಪುಟದಿಂದ ಪರಮೇಶ್ವರ್, ಮಹದೇವಪ್ಪ ಹಾಗೂ ಮುನಿಯಪ್ಪ ಔಟ್ ಆಗುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಇನ್ನೊಬ್ಬ ದಲಿತರನ್ನು ಸಿಎಂ ಆಗಲೂ ಬಿಡಲ್ಲ, ಸಿಎಂ ಆದ್ರೆ ಪ್ರಿಯಾಂಕ ಖರ್ಗೆಗೆ ಮಾತ್ರ ಅವಕಾಶ,ಅವರನ್ನ ಸಿಎಂ ಅಥವಾ ಡಿಸಿಎಂ ಮಾಡುತ್ತಾರೆ ಎಂದು ಭವಿಷ್ಯ ನುಡಿದರು.

ಮಾಜಿ ಶಾಸಕ ಎನ್ ಮಹೇಶ್ ಮಾತನಾಡಿ,
ಬಿಜೆಪಿರವರು ಸಂವಿಧಾನದ ವಿರೋಧಿಗಳು ಅವರು ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಾಯಿಸುತ್ತಾರೆ ಎಂದು ಕಾಂಗ್ರೆಸ್ ನವರು ಆರೋಪಿಸುತ್ತಾರೆ, ಕೇಂದ್ರದಲ್ಲಿ 12 ವರ್ಷ ಬಿಜೆಪಿ ಅಧಿಕಾರದಲ್ಲಿದೆ ಮತ್ತು ಅಟಲ್ ಬಿಹಾರಿ ವಾಜಪೇಯಿ ರವರ ಕಾಲದಲ್ಲಿ 5 ವರ್ಷ ಅಧಿಕಾರದಲ್ಲಿತ್ತು ನಾವು ಸಂವಿಧಾನವನ್ನು ಬದಲಾಯಿಸಿದ್ದಿವಾ ಎಂದು ಪ್ರಶ್ನಿಸಿದರು.

ಡಾ. ಅಂಬೇಡ್ಕರ್ ಅವರು ಸಂವಿಧಾನವನ್ನು ಆಯಾ ಕಾಲಕ್ಕೆ ಅನುಗುಣವಾಗಿ ಸರ್ಕಾರಗಳು ಮಾಡಿಕೊಡಲು ಅವಕಾಶ ಇತ್ತು. ಕಾಂಗ್ರೆಸ್, ಬಿಜೆಪಿ ಹಾಗೂ ಜನತಾ ಪಕ್ಷಗಳು ಸೇರಿ ಇಲ್ಲಿವರೆಗೂ 106 ಭಾರಿ ಸಂವಿಧಾನ ತಿದ್ದುಪಡಿ ಮಾಡಿವೆ. ಇದರ ಬಗ್ಗೆ ಜನರು ಸರಿಯಾಗಿ ಗಮನ ಹರಿಸಬೇಕು ಎಂದು ತಿಳಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಲ್ಲಾ ಸದಸ್ಯರ ಅಭಿಪ್ರಾಯವನ್ನು ಸಂಗ್ರಹ ಮಾಡಿ 4,700 ತಿದ್ದುಪಡಿಗಳನ್ನು ಮಾಡಿ 1949 ರ ನವಂಬರ್ 26 ರಂದು ದೇಶಕ್ಕೆ ಸಮರ್ಪಣೆ ಮಾಡಿದ್ದಾರೆ.1949 ರಲ್ಲಿ ಮೊದಲನೇ ಸಾರ್ವತ್ರಿಕ ಚುನಾವಣೆ ನಡೆಯಿತು. 1951 ರಿಂದ 2025 ವರೆಗೆ ವಿವಿಧ ಸರ್ಕಾರಗಳು 106 ತಿದ್ದುಪಡಿಗಳನ್ನು ಮಾಡಿವೆ. ಈ 106 ತಿದ್ದುಪಡಿಗಳಲ್ಲಿ ಕಾಂಗ್ರೆಸ್ ಸರ್ಕಾರದಲ್ಲೇ 75 ತಿದ್ದುಪಡಿಗಳು ಆಗಿವೆ. ಕಾಂಗ್ರೆಸ್ಸೇತರ ಸರ್ಕಾರಗಳು 31 ತಿದ್ದುಪಡಿಗಳನ್ನು ಮಾತ್ರ ಮಾಡಿವೆ ಎಂದು ಮಹೇಶ್ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷ ಸಿ.ಎಸ್ ನಿರಂಜನ್ ಕುಮಾರ್, ಮಾಜಿ ಶಾಸಕರಾದ ಎಸ್ ಬಾಲರಾಜ್, ಪ್ರೊ ಮಲ್ಲಿಕಾರ್ಜುನಪ್ಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಕೊಡ ಪ್ರಕಾಶ್, ಹೊನ್ನೂರು ಮಹಾದೇವಸ್ವಾಮಿ, ಮಾಜಿ ನಿಗಮ ಮಂಡಳಿ ಅಧ್ಯಕ್ಷ ಎಂ ರಾಮಚಂದ್ರ, ಹಿಂದುಳಿದ ಮೋರ್ಚಾಗಳ ಅಧ್ಯಕ್ಷ ಹನೂರು ವೆಂಕಟೇಶ್, ನೂರೊಂದಶೆಟ್ಟಿ, ಜಯ ಸುಂದರ, ಆರ್ ಸುಂದರ ಮೂರ್ತಿ, ಚಂದ್ರು, ಜಿಲ್ಲಾ  ಉಪಾಧ್ಯಕ್ಷ ಅರಕಲವಾಡಿ ನಾಗೇಂದ್ರ, ನಟರಾಜ್ ಗೌಡ, ರೇವಣ್ಣ, ಬೂದಿ ತಿಟ್ಟು ಶಿವಕುಮಾರ್,ಮಹೇಶ್, ಮಂಡಲ ಅಧ್ಯಕ್ಷರುಗಳಾದ ಚಿಂತು ಪರಮೇಶ್, ಅನಿಲ್, ವೃಷಬೇಂದ್ರೆ, ಸಾಹಿತಿ ಕೋಡಿ ಉಗನೇ ಮಂಜು, ಶ್ರೀ ಧರ್ ಎಸ್.ಸಿ ಮೋರ್ಚಾ ಮಂಡಲ್ ಸಿದ್ದಪ್ಪ ವಿವಿಧ ಮೋರ್ಚಾಗಳ ಅಧ್ಯಕ್ಷರು ಪದಾಧಿಕಾರಿಗಳು ಹಾಜರಿದ್ದರು.

ದಲಿತರನ್ನು ಕಾಂಗ್ರೆಸ್ ವೋಟ್ ಬ್ಯಾಂಕ್‌ಗೆ ಸೀಮಿತವಾಗಿಸಿದೆ: ನಾರಾಯಣಸ್ವಾಮಿ Read More

ಸರ್ಕಾರ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ:ವೆಂಕಟೇಶ್

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಸರ್ಕಾರ ಗ್ರಾಮೀಣ ಪ್ರದೇಶದ ಮಕ್ಕಳು ಮತ್ತು ವಿದ್ಯಾರ್ಥಿಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ವೆಂಕಟೇಶ್ ತಿಳಿಸಿದರು.

ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವತಿಯಿಂದ ಕೊಳ್ಳೇಗಾಲ ತಾಲ್ಲೂಕಿನ ಚಿಲಕವಾಡಿ ಬೆಟ್ಟದ ತಪ್ಪಲಿನಲ್ಲಿ ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಿರುವ ಸರ್ಕಾರಿ ಪಾಲಿಟೆಕ್ನಿಕ್ ಬಾಲಕರ ವಿದ್ಯಾರ್ಥಿ ನಿಲಯ ಉದ್ಘಾಟಿಸಿ ಸಚಿವರು ಮಾತನಾಡಿದರು.

ಭಾರತ ಸಂವಿಧಾನ ಸಮರ್ಪಣೆ ದಿನಾಚರಣೆಯನ್ನು ದೇಶದ್ಯಾಂತ ಆಚರಿಸಲಾಗುತ್ತಿದೆ ನಾವು ಕೂಡ ಚಾಮರಾಜನಗರ ಜಿಲ್ಲಾ ಘಟಕದಲ್ಲಿ ಆಚರಣೆ ಮಾಡಿ ನಿಲಯ ಉದ್ಘಾಟನೆಗೆ ಆಗಮಿಸಿ ಉದ್ಘಾಟನೆ ಮಾಡಿದ್ದೇವೆ, ಸರ್ಕಾರದ ಮಟ್ಟದಲ್ಲಿ ಹಿಂದುಳಿದ ಗಡಿ ಜಿಲ್ಲೆ ಚಾಮರಾಜನಗರವನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಎಲ್ಲಾ ರೀತಿಯ ಪ್ರಯತ್ನ ನಡೆಯುತ್ತಿದೆ ಎಂದು ‌ತಿಳಿಸಿದರು.

ಶಿಕ್ಷಣಕ್ಕೆ ಅದರಲ್ಲೂ ವೃತ್ತಿ ಪರ ಶಿಕ್ಷಣಕ್ಕೂ ಆದ್ಯತೆ ಕೊಟ್ಟು ಕಾಲೇಜುಗಳಿಗೆ ಅನುದಾನಗಳನ್ನು ನೀಡಿ ಅಭಿವೃದ್ಧಿ ಪಡಿಸಲಾಗುತ್ತಿದೆ, ಪಾಲಿಟೆಕ್ನಿಕ್ ಕಾಲೇಜು ಹಾಸ್ಟೆಲ್ ಗೆ ಅನುದಾನ ಕೊಟ್ಟು ಕಟ್ಟಡ ನಿರ್ಮಾಣವಾಗಿದೆ ಕ್ಷೇತ್ರದ ಶಾಸಕರು ಎ. ಆರ್. ಕೃಷ್ಣಮೂರ್ತಿಯವರು ಎಲ್ಲಾ ರೀತಿಯಲ್ಲೂ ಶ್ರಮ ವಹಿಸುತ್ತಿದ್ದಾರೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯವನ್ನು ಒದಗಿಸಲಾಗುತ್ತದೆ, ಆದರೆ ವಿರೋಧ ಪಕ್ಷದವರು ಸುಮ್ಮನೆ ನಮ್ಮ ಸರ್ಕಾರ ಲಾಸ್ ಆಗಿದೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಅವರಿಗೆ ಅಧಿಕಾರ ದಾಹ ಇದೆ ಆದ್ದರಿಂದ ಹೇಗಾದರೂ ಮಾಡಿ ಕಾಂಗ್ರೆಸ್ ಸರ್ಕಾರದ ಮೇಲೆ ಅಪಪ್ರಚಾರ ಮಾಡುತ್ತಿದೆ ಎಂದು ‌ದೂರಿದರು.

ಕಾಂಗ್ರೆಸ್ ಸರ್ಕಾರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ, ನಮ್ಮ ಚಾಮರಾಜನಗರ ಜಿಲ್ಲೆಗೆ 1 ಲಕ್ಷ ಕೋಟಿ ಅನುದಾನ ಕೊಟ್ಟಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅನುದಾನವನ್ನು ಕೊಟ್ಟಿದೆ ಆದರೆ ಬಿಜೆಪಿಯವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ, ಕೇಂದ್ರ ಸರ್ಕಾರ ನಮ್ಮ ರಾಜ್ಯದ ಅಭಿವೃದ್ಧಿಗೆ ಯಾವುದೇ ಅನುದಾನವನ್ನು ಕೊಟ್ಟಿಲ್ಲ ಬಿಜೆಪಿಯವರು ಅದರ ಬಗ್ಗೆ ಮಾತನಾಡುತ್ತಿಲ್ಲ, ನಮ್ಮ ಸರ್ಕಾರ ಜನರಿಗೆ ಏನೇನು ಭರವಸೆಗಳನ್ನು ಕೊಟ್ಟಿತ್ತೋ ಏನು ಮಾತು ಕೊಟ್ಟಿತ್ತೊ ಅದರಂತೆ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸುವ ಜೊತೆಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದ ಅಭಿವೃದ್ಧಿ ಕೆಲಸವನ್ನು ಮಾಡುತ್ತಾ ಬರುತ್ತಿದೆ ಎಂದು ವೆಂಕಟೇಶ್ ತಿಳಿಸಿದರು.

ಕೊಳ್ಳೇಗಾಲ ಪಾಲಿಟೇಕ್ನಿಕ್ ಕಟ್ಟಡ ಹಾಗೂ ವಿದ್ಯಾರ್ಥಿ ನಿಲಯ ನಿರ್ಮಾಣ ಕಾರ್ಯ ನಡೆದಿದೆ, ಕುಡಿಯುವ ನೀರಿನ ಸೌಲಭ್ಯಗಳನ್ನು ಮಾಡಿ ಕೊಡಲು ಕೇಳಿಕೊಂಡಿದ್ದಾರೆ ಮುಂದಿನ ದಿನಗಳಲ್ಲಿ ಕಾಲೇಜಿಗೆ ಕುಡಿಯುವ ನೀರಿನ ಸೌಲಭ್ಯಗಳನ್ನು ಮಾಡಿ ಕೊಡಲಾಗುವುದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅಭಿವೃದ್ಧಿಗೆ ಶ್ರಮ ವಹಿಸಲಾಗುವುದು ಎಂದು ‌ಭರವಸೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎ.ಆರ್. ಕೃಷ್ಣಮೂರ್ತಿ ಯವರು ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿ ನಿಲಯ ಸಂವಿಧಾನ ಸಮರ್ಪಣೆ ಅದ ಶುಭ ದಿವಸ ಉದ್ಘಾಟನೆಯಾದುದು ಸಂತೋಷದ ಸಂಗತಿ,ಮಾಜಿ ಶಾಸಕರಾದ ಜಯಣ್ಣ ಅವರ ಅವಧಿಯಲ್ಲಿ ಮಂಜೂರಾದ ಪಾಲಿಟೆಕ್ನಿಕ್ ಕಾಲೇಜು ಹಾಗೂ ವಿದ್ಯಾರ್ಥಿ ನಿಲಯ  ಪ್ರಾರಂಭವಾಗಿ ಹಳ್ಳಿಗಾಡಿನ ಮಕ್ಕಳಾ ವ್ಯಾಸಂಗಕ್ಕೆ ಅನುಕೂಲವಾಗಿದೆ ಹಾಗೂ ವಿದ್ಯಾರ್ಥಿ ನಿಲಯ ಗ್ರಾಮೀಣ ಭಾಗದ ಮಕ್ಕಳು ಉಳಿದುಕೊಂಡು ವ್ಯಾಸಂಗ ಮಾಡುವುದಕ್ಕೆ ಉಪಯುಕ್ತವಾಗಿದೆ,  ಜಿಲ್ಲೆಯ ಸಚಿವರಾದ ವೆಂಕಟೇಶ್ ಅವರ ಅನುದಾನಗಳಿಂದ ಬಿಳಿಗಿರಿ ರಂಗನ ಬೆಟ್ಟ ಹಾಗೂ ಹಲವು ಕಡೆ ಅಭಿವೃದ್ಧಿ ಕೆಲಸ ನಡೆಯುತ್ತಿದೆ,ನಮ್ಮ ಕ್ಷೇತ್ರದಲ್ಲಿ 250 ಹಾಸಿಗೆಯ ಆಸ್ಪತ್ರೆ ನಿರ್ಮಾಣಕ್ಕೆ ರೇಷ್ಮೆ ಇಲಾಖೆ ಜಾಗದಲ್ಲಿ ನಿರ್ಮಾಣಕ್ಕೆ ಸಚಿವರು ಅನುಕೂಲ ಮಾಡಿ ಕೊಟ್ಟಿದ್ದಾರೆ,ಈ ಆಸ್ಪತ್ರೆ ನಿರ್ಮಾಣವಾಗುವುದರಿಂದ ಹನೂರು ಯಳಂದೂರು ಕಡೆಯಿಂದ ಬರುವ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಮುಡಿಗುಂಡ ಬಳಿ ನೂತನ ಸೇತುವೆ ನಿರ್ಮಾಣಕ್ಕೆ ಸಚಿವರು 15 ಕೋಟಿ ಅನುದಾನ ಕೊಟ್ಟಿದ್ದಾರೆ, ಆದ್ದರಿಂದ ಸಚಿವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಈ ಬಾರಿ ಬಜೆಟ್ ನಲ್ಲಿ 50 ಕೋಟಿ ಅನುದಾನದಲ್ಲಿ ರಸ್ತೆ ಕಾಮಗಾರಿಗಳಿಗೆ ಉಪಯೋಗಿಸಿಕೊಳ್ಳಲು ಆದೇಶವಾಗಿತ್ತು ಆದ್ದರಿಂದ ಕ್ಷೇತ್ರ ರಸ್ತೆ ಅಭಿವೃದ್ಧಿಗೆ ಅನುದಾನವನ್ನು ಕೊಟ್ಟು ಕಾಮಗಾರಿಗಳು ನಡೆಯುತ್ತಿವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರು, ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷ ರಾಜೇಂದ್ರ, ಯಳಂದೂರು ತಾಲ್ಲೂಕು ಅಧ್ಯಕ್ಷ ಪ್ರಭುಪ್ರಸಾದ್, ಕುಂತೂರು ಗ್ರಾ.ಪಂ ಅಧ್ಯಕ್ಷೆ ಗಂಗಮ್ಮಣಿ, ಉಪಾಧ್ಯಕ್ಷೆ ನಾಗರತ್ನಮ್ಮ, ಜಿಲ್ಲಾಧಿಕಾರಿ ಶಿಲ್ಪಾನಾಗ್, ಸಿಇಒ ಮೋನಾರೋತ್, ಉಪವಿಭಾಗಾಧಿಕಾರಿ ದಿಲೀಪ್ ಕುಮಾರ್ ಮೀನಾ, ತಹಶಿಲ್ದಾರ್ ಬಸವರಾಜು, ತಾ.ಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ತೋಟೇಶ್ ಮತ್ತಿತರರು ಹಾಜರಿದ್ದರು.

ಸರ್ಕಾರ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ:ವೆಂಕಟೇಶ್ Read More

ಜಿಂಕೆ ಬೇಟೆಯಾಡಿ ಮಾಂಸ ಪಾಲು ಮಾಡಿದ್ದ ಇಬ್ಬರು ಅಂದರ್

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಜಿಂಕೆಯನ್ನು ಬೇಟೆಯಾಡಿ ಅದರ ಮಾಂಸವನ್ನು ತುಂಡು ಮಾಡಿ ಪಾಲು ಹಾಕುತ್ತಿದ್ದ ಇಬ್ಬರನ್ನು ಕೊಳ್ಳೇಗಾಲ ಅರಣ್ಯ ಸಂಚಾರಿ ದಳದ ಪೊಲೀಸರು
ಬಂಧಸಿದ್ದಾರೆ.

ತಾಲ್ಲೂಕಿನ ಇಕ್ಕಡಹಳ್ಳಿ ಗ್ರಾಮದ ಮಹದೇವ (42) ಹಾಗೂ ದೊಡ್ಡಿಂದುವಾಡಿ ಗ್ರಾಮದ ಕಿರಣ್ (30) ಬಂಧಿತ ಆರೋಪಿಗಳು.

ಆರೋಪಿಗಳಿಂದ 41 ಕೆ.ಜಿ ಮಾಂಸ, ಒಂದು ತಲೆ ಐದು ಕಾಲುಗಳು, ಒಂದು ಮಚ್ಚು, 4 ಚೂರಿಗಳು, 3 ಮೋಟಾರ್ ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ‌ಬಂಧಿತರು ಸೇರಿದಂತೆ ಐವರು ಆರೋಪಿಗಳು ಜಿಂಕೆಯನ್ನು ಬೇಟೆಯಾಡಿ ತಂದು ದೊಡ್ಡಿಂದುವಾಡಿ ಕಬಿನಿ ಚಾನೆಲ್ ಬಳಿ ತುಂಡು ಮಾಡಿ ಅದರ ಮಾಂಸವನ್ನು ಪಾಲು ಹಾಕುತ್ತಿದ್ದರು.

ಈ ಬಗ್ಗೆ ಬಂದ ಖಚಿತ ಮಾಹಿತಿ ಆಧರಿಸಿ ಕೊಳ್ಳೇಗಾಲ ಅರಣ್ಯ ಸಂಚಾರಿ ದಳದ ಪೊಲೀಸರು ಕೂಡಲೆ ಮಡಿಕೇರಿ ಅರಣ್ಯ ಘಟಕದ ಪ್ರಭಾರ ಪೊಲೀಸ್ ಅಧೀಕ್ಷಕ ಸುದರ್ಶನ್ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ನಂತರ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಪೊಲೀಸರು 41 ಕೆಜಿ ಜಿಂಕೆಯ ಹಸಿ ಮಾಂಸ, ಜಿಂಕೆಯ ಒಂದು ತಲೆ ಐದು ಕಾಲುಗಳು, ಮಾಂಸವನ್ನು ಕತ್ತರಿಸಲು ಬಳಸಿದ್ದ ಒಂದು ಮಚ್ಚು ಹಾಗೂ 4 ಚೂರಿಗಳು ಹಾಗೂ 3 ಮೋಟಾರ್ ಬೈಕ್ ಗಳನ್ನು ವಶಪಡಿಸಿಕೊಂಡು ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿತರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.

ಉಳಿದ ಆರೋಪಿಗಳು ಪೊಲೀಸರನ್ನು ಕಂಡು ಸ್ಥಳದಿಂದ ಪರಾರಿಯಾಗಿ ತಲೆಮರಿಸಿಕೊಂಡಿದ್ದಾರೆ. ದಾಳಿಯಲ್ಲಿ ಪಿ.ಎಸ್‌.ಐ ವಿಜಯರಾಜ್ ಮುಖ್ಯ ಪೇದೆಗಳಾದ ಸ್ವಾಮಿ, ಬಸವರಾಜು, ರಾಮಚಂದ್ರ, ಜಮಿಲ್, ಪ್ರಭಾಕರ ಹಾಗೂ ಮಹಿಳಾ ಮುಖ್ಯ ಪೇದೆ ಲತಾ ಮತ್ತು ಪೇದೆ ಬಸವರಾಜು ರವರು ಭಾಗವಹಿಸಿದ್ದರು.

ಜಿಂಕೆ ಬೇಟೆಯಾಡಿ ಮಾಂಸ ಪಾಲು ಮಾಡಿದ್ದ ಇಬ್ಬರು ಅಂದರ್ Read More

ಸರ್ಕಾರಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮ ವಹಿಸುತ್ತಿವೆ:ಕುಂತೂರು ರಾಜೇಂದ್ರ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಅಂಬೇಡ್ಕರ್ ಆಶಯದಂತೆ ಸರ್ಕಾರಗಳು ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಸಮಾನತೆ ಕಲ್ಪಿಸಿ ಕೊಡುವಲ್ಲಿ ಬಹಳ ಶ್ರಮ ವಹಿಸುತ್ತಿವೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರ ಕುಂತೂರು ರಾಜೇಂದ್ರ ತಿಳಿಸೊ.

ಹೆಣ್ಣು, ಗಂಡು ಎಂಬ ತಾರತಮ್ಯವಿಲ್ಲದೆ ಎಲ್ಲಾ ಮಕ್ಕಳ ಕನಸನ್ನು ನನಸು ಮಾಡಬೇಕೆಂದರೆ ಶಿಕ್ಷಕರು, ಪೋಷಕರ ಜೊತೆಗೆ ವಿದ್ಯಾರ್ಥಿಗಳ ಮನೋಬಲ ಒಟ್ಟಿಗೆ ಸೇರಿದರೆ ಮಾತ್ರ ಕನಸು ನನಸಾಗಲಿದೆ ಎಂದು ಅವರು ಹೇಳಿದರು.

ಪಟ್ಟಣದ ಸರ್ಕಾರಿ ಎಸ್.ವಿ.ಕೆ ಬಾಲಿಕಾ ಪದವಿ ಪೂರ್ವ ಕಾಲೇಜುನಲ್ಲಿ ಬೆಂಗಳೂರು ಶಾಲಾ ಶಿಕ್ಷಣ ಇಲಾಖೆ, ಚಾ.ನಗರ ಜಿ.ಪಂ ವತಿಯಿಂದ ನಡೆದ ಪೋಷಕರ-ಶಿಕ್ಷಕರ ಮಹಾಸಭೆ-2025 ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.

ಮಾಜಿ ಪ್ರಧಾನಿ ನೆಹರು ಅವರು ಮಕ್ಕಳನ್ನು ಬಹಳ ಪ್ರೀತಿಸುತ್ತಿದ್ದರು ಅವರ ಭವಿಷ್ಯದ ಕನಸು ನನಸು ಮಾಡಲಿಕ್ಕಾಗಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ಈ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಾ ಬಂದಿದ್ದೇವೆ ಎಂದು ತಿಳಿಸಿದರು.

ಸರ್ಕಾರ ಇದುವರೆಗೂ ಯಾವುದೇ ಶಿಕ್ಷಕರು ಪೋಷಕರ ಮಹಾಸಭೆಯನ್ನು ಮಾಡುತ್ತಾ ಬಂದಿರಲಿಲ್ಲ ಈ ವರ್ಷದಿಂದ ನಮ್ಮ ಸರ್ಕಾರ ಈ ಮಹಾಸಭೆಯನ್ನು ಆಯೋಜಿಸಿದೆ.

ಖಾಸಗಿ ಶಾಲೆಗಳು ಪ್ರತಿ ತಿಂಗಳು ಪೋಷಕರ ಸಭೆಯನ್ನು ನಡೆಸಿ ಶಿಕ್ಷಕರು ಮತ್ತು ಪೋಷಕರ ನಡುವೆ ಚರ್ಚೆ ನಡೆದು ಮಕ್ಕಳ ಭವಿಷ್ಯದ ಶಿಕ್ಷಣ ಕುರಿತು ಚರ್ಚೆ ನಡೆಸಿ ಉತ್ತಮ ಶಿಕ್ಷಣ ನೀಡಲು ಅನುಕೂಲ ಕರ ವಾತಾವರಣ ಮಾಡಿಕೊಡಲಾಗುತ್ತಿದೆ.ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕಾರ್ಯಕ್ರಮಗಳು ಬಹಳ ವಿರಳ. ಗ್ರಾಮೀಣ ಪ್ರದೇಶದ ಮಕ್ಕಳ ಪೋಷಕರು ಮಕ್ಕಳನ್ನು ಶಾಲೆಗೆ ಸೇರಿಸಿ ಕೈ ತೊಳೆದುಕೊಳ್ಳುತ್ತಾರೆ. ಮಕ್ಕಳ ಓದಿನ ಬಗ್ಗೆ ಯಾವುದೇ ಕಾಳಜಿ ವಹಿಸುವುದಿಲ್ಲ. ಏಕೆಂದರೆ ಸಂಸಾರದ ಜಂಜಾಟದಲ್ಲಿ ಮಕ್ಕಳ ಶೈಕ್ಷಣಿಕ ಭವಿಷ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಇದನ್ನು ಮನಗಂಡ ಸರ್ಕಾರ ಈ ಕಾರ್ಯಕ್ರಮವನ್ನು ರೂಪಿಸಿದೆ. ಈ ಅಮೂಲ್ಯವಾದ ಕಾರ್ಯಕ್ರಮದಿಂದ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಕುಂತೂರು ರಾಜೇಂದ್ರ ತಿಳಿಸಿದರು.

ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಜೊತೆ ಪೋಷಕರ ಪಾತ್ರ ಬಹಳ ಇದೆ. ಏಕೆಂದರೆ ಶಿಕ್ಷಕರು ನೂರು ಮಕ್ಕಳನ್ನು ನೋಡಿಕೊಳ್ಳಬೇಕು ಆದರೆ ಪೋಷಕರು ತಮ್ಮ ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸಿ ಶಿಕ್ಷಕರ ಜೊತೆ ಕೈಜೋಡಿಸಿ ಅವರ ಶೈಕ್ಷಣಿಕ ಪ್ರಗತಿಯ ಬಗ್ಗೆ ಕಾಳಜಿ ವಹಿಸಿದರೆ ಮಕ್ಕಳ ಭವಿಷ್ಯ ಹಸನಾಗಲಿದೆ. ಆದ್ದರಿಂದ ಪೋಷಕರು ಈ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಗಳು ಮಕ್ಕಳ ಭವಿಷ್ಯದ ಬಗ್ಗೆ ಏನು ಸಲಹೆ ನಿರ್ದೇಶನಗಳನ್ನು ನೀಡುತ್ತಾರೋ ಅದನ್ನು ಪಾಲಿಸುವಂತೆ ಕರೆ ನೀಡಿದರು.

ವಿದ್ಯಾರ್ಥಿಗಳೇ ನಿಮ್ಮ ಅನುಕೂಲಕ್ಕಾಗಿ ವಿದ್ಯಾಶ್ರೀ ಬಿಸಿ ಊಟದಂತ ಕಾರ್ಯಕ್ರಮಗಳು ಅನುಕೂಲವಾಗಲಿದೆ ಇವುಗಳನ್ನು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕ ಸಾಧನೆ ಮಾಡಿ ಎಂದು ಸಲಹೆ ನೀಡಿದರು

ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ತಾ.ಪಂ ಇ.ಒ ಗುರುಶಾಂತಪ್ಪ ಬೆಳ್ಳುಂಡಗಿಯವರು ಮಾತನಾಡಿ, ಒಂದು ಮಗುವಿನ ಉತ್ತಮ ಬೆಳವಣಿಗೆಗೆ ಪೋಷಕರು ಹಾಗೂ ಶಿಕ್ಷಕರ ಪಾತ್ರ ಬಹಳ ಮುಖ್ಯ ಎಂದು ಹೇಳಿದರು.

ವಿದ್ಯಾರ್ಥಿಗಳು ಉನ್ನತ್ತ ಶಿಕ್ಷಣ ಪಡೆಯುವ ಮೂಲಕ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ತಾ.ಪಂ ವತಿಯಿಂದ 150 ಚೇರ್ ಗಳನ್ನು ಮುಂದಿನ ತಿಂಗಳು ಕೊಡಿಸುತ್ತೇನೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಅಂಗವಿಕಲ ವಿದ್ಯಾರ್ಥಿಗಳಿಗಾಗಿ ಶೌಚಾಲಯ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದರು.

ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಹಾಗೂ ಹೆಚ್ಚಿನ ಹಾಜರಾತಿ ಪಡೆದಿರುವ ಮಕ್ಕಳನ್ನು ಸನ್ಮಾನಿಸಿ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಇಒ ಮಂಜುಳಾ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹರ್ಷ, ಪ್ರಾಂಶುಪಾಲರಾದ ಡಾ.ಮಂಗಳಮೂರ್ತಿ, ಉಪಪ್ರಾಂಶುಪಾಲ ವಿಶ್ವನಾಥ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೋಸೆಫ್ ಅಲೆಕ್ಸಾಂಡರ್, ಡಯಟ್ ಉಪನ್ಯಾಸಕಿ ಕಾತ್ಯಾಯಿನಿ, ಪ್ರೌಢಶಾಲಾ ವಿಭಾಗ ಎಸ್.ಡಿ.ಎಂ.ಸಿ ಅಧ್ಯಕ್ಷೆ ಪವಿತ್ರ ಮತ್ತಿತರರು ಉಪಸ್ಥಿತರಿದ್ದರು.

ಸರ್ಕಾರಗಳು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮ ವಹಿಸುತ್ತಿವೆ:ಕುಂತೂರು ರಾಜೇಂದ್ರ Read More

ಬಿಹಾರದಲ್ಲಿ ಎನ್ ಡಿಎಗೆ ಭಾರಿ ಬಹುಮತ:ಕೊಳ್ಳೇಗಾಲದಲ್ಲಿ ಬಿಜೆಪಿ ಸಂಭ್ರಮಾಚರಣೆ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಬಿಹಾರ ಚುನಾವಣೆಯಲ್ಲಿ ಎನ್ ಡಿ ಎ ಭರ್ಜರಿ ಬಹುಮತ ಪಡೆದ ಹಿನ್ನೆಲೆಯಲ್ಲಿ ಕೊಳ್ಳೇಗಾಲ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಕಾರ್ಯಕರ್ತರಿಗೆ ಸಿಹಿ ತಿನ್ನಿಸಿ ಮಾತನಾಡಿದ ಮಾಜಿ ನಗರ ಮಂಡಲ ಅಧ್ಯಕ್ಷ ರಮೇಶ್ ಮುರಾರಿ‌ ಅವರು, ಉತ್ತಮ ಆಡಳಿತ ನೀಡಿ ಜನಮನ್ನಣೆ ಗಳಿಸಿರುವ ನಿತೀಶ್ ಕುಮಾರ್ ಅವರ ನೇತೃತ್ವದ ಎನ್ ಡಿಎ ಸರ್ಕಾರದ ಮುಂದೆ ಆರ್ ಜೆ ಡಿ ಕಾಂಗ್ರೆಸ್ ಮಹಾಘಟ ಬಂಧನ್ ಗೆಲ್ಲಲು ಸಾಧ್ಯವೇ ಎಂದು ಲೇವಡಿ ಹಾಡಿದರು.

ಬಿಹಾರದ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪಕ್ಷವನ್ನು ಸಾರಾಸಗಟಾಗಿ ತಿರಸ್ಕರಿಸಿ ಪ್ರಧಾನಿ ಮೋದಿ ಹಾಗೂ ನಿತೀಶ್ ಕುಮಾರ್ ಅವರ ನೇತೃತ್ವದ ಎನ್ ಡಿ ಎ ಮೈತ್ರಿಕೂಟಕ್ಕೆ ಮತ್ತೊಮ್ಮೆ ಸ್ಪಷ್ಟ ಜನಾದೇಶ ನೀಡಿದ್ದಾರೆ ಎಂದು ಹೇಳಿದರು.

ಈ ಮೂಲಕ ಬಿಹಾರದ ಜನತೆ ಕಾಂಗ್ರೆಸ್ ಪಕ್ಷವನ್ನು ಧೂಳಿಪಟ ಮಾಡಿದ್ದಾರೆ. ಅದೇ ರೀತಿ ಈಗಾಗಲೇ ಜನಮನ್ನಣೆ ಕಳೆದು ಕೊಂಡಿರುವ ಕಾಂಗ್ರೆಸ್‌ ಪಕ್ಷ ಕರ್ನಾಟಕದಲ್ಲೂ ಧೂಳೀಪಟ ಆಗಲಿದೆ ಎಂದು ಭವಿಷ್ಯ ನುಡಿದರು.

ಬಿಹಾರದಲ್ಲಿ ಎನ್, ಡಿ, ಎ ಗೆ ಮತ ನೀಡಿದ ಪ್ರತಿಯೊಬ್ಬ ಮತದಾರರಿಗೂ ಹಾಗೂ ಗೆಲುವಿಗೆ ಕಾರಣೀಭೂತರಾದ ಜನತೆ ಹಾಗೂ‌ ಮೈತ್ರಿಕೂಟದ ಎಲ್ಲ ನಾಯಕರು, ಕಾರ್ಯಕರ್ತರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ರಮೇಶ್ ಮುರಾರಿ‌
ತಿಳಿಸಿದರು.

ಈ ವೇಳೆ ಜಿಲ್ಲಾ ಕಾರ್ಯದರ್ಶಿ ಬೂದಿತಿಟ್ಟು ಶಿವಕುಮಾರ್, ಜಿಲ್ಲಾ ಎಸ್. ಸಿ. ಮೋರ್ಚಾ ಉಪಾಧ್ಯಕ್ಷ ರೇವಣ್ಣ, ಜಿಲ್ಲಾ ಕಾರ್ಯದರ್ಶಿ ರಾಜಶೇಖರ್, ಮೊಟ್ಟೆ ಶಂಕರ್, ಮಾಜಿ ಅಧ್ಯಕ್ಷ ಕೆ.ಕೆ.ಮೂರ್ತಿ, ಎಸ್ ಸಿ ಮೋರ್ಚಾ ಅಧ್ಯಕ್ಷ ಸಿದ್ದಪ್ಪ, ಲಿಂಗಣಾಪುರ ಬಸವರಾಜಪ್ಪ, ಕೆಂಪನಪಾಳ್ಯ ಮಂಜು,  ಡೈರಿ ಗಿರಿಶ್, ಸೋಮಣ್ಣ, ನಟರಾಜು, ವರದರಾಜ್, ಮಧುಚಂದ್ರ, ಬಳೆ ರವಿ, ತೆರಂಬಳ್ಳಿ ರವಿ, ನಿರಂಜನ್ ರವಿ, ನಾರಾಯಣ, ಯುವ ಮೋರ್ಚಾ ಅಧ್ಯಕ್ಷ ಆನಂದ್ ರವಿ, ಬಸ್ತಿಪುರ ಮಮತಾ ಬದ್ರಿನಾಥ್, ಬಾರ್ ನಾಗಣ್ಣ, ಕಜ್ಜಿಹುಂಡಿ ಪ್ರಭು, ಜಯರಾಜ್, ಸುರೇಶ, ರಂಗಸ್ವಾಮಿ, ಹಾಗೂ ಕಾರ್ಯಕರ್ತರು ಹಾಜರಿದ್ದರು.

ಬಿಹಾರದಲ್ಲಿ ಎನ್ ಡಿಎಗೆ ಭಾರಿ ಬಹುಮತ:ಕೊಳ್ಳೇಗಾಲದಲ್ಲಿ ಬಿಜೆಪಿ ಸಂಭ್ರಮಾಚರಣೆ Read More

ನ. 29 ರಂದು ಅಂಬೇಡ್ಕರ್ ಭವನ ಲೋಕಾರ್ಪಣೆ:ಆನಂದ್ ಮೂರ್ತಿ

ಕೊಳ್ಳೇಗಾಲ: ಇದೇ ನವಂಬರ್ 29 ರಂದು ಪಟ್ಟಣದ ಜನತೆಯ ಬಹುನಿರೀಕ್ಷಿತ ಅಂಬೇಡ್ಕರ್ ಭವನ ಲೋಕಾರ್ಪಣೆಗೊಳ್ಳಲಿದೆ ಎಂದು ಡಾ. ಅಂಬೇಡ್ಕರ್ ಸ್ಮಾರಕ ಸಂಘದ ಅಧ್ಯಕ್ಷ ಆನಂದ್ ಮೂರ್ತಿ ತಿಳಿಸಿದರು.

ಪಟ್ಟಣದ ನೂತನ ಅಂಬೇಡ್ಕರ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಟ್ಟಣದ ಭೀಮನಗರದ ಬಹು ದಿನಗಳ ಕನಸು ಈ ತಿಂಗಳ ಅಂತ್ಯದಲ್ಲಿ ನನಸಾಗುವ ಕಾಲ ಕೂಡಿಬಂದಿದೆ. ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಅಂಬೇಡ್ಕರ್ ಭವನ ಉದ್ಘಾಟನೆ ಆಗುತ್ತಿರುವುದು ಸಮುದಾಯದ ಜನರಲ್ಲಿ ಹರ್ಷ ತಂದಿದೆ ಎಂದು ತಿಳಿಸಿದರು.

ಎಲ್ಲಾ ಕಾರ್ಯಕ್ರಮಗಳು ಕೊಳ್ಳೇಗಾಲ ಶಾಸಕ ಎ.ಆರ್ ಕೃಷ್ಣಮೂರ್ತಿ ಅವರ ಘನ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಚನ್ನಾಲಿಂಗನಹಳ್ಳಿ ಚೇತವನದ ಮನೋರಕಿತ ಬಂತೆ ಜಿ, ಮೈಸೂರಿನ ಉರಿಲಿಂಗಿ ಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿಗಳು ದಿವ್ಯ ಸಾನ್ವಿಧ್ಯ ವಹಿಸಲಿದ್ದಾರೆ.

ಸಮಾಜ ಕಲ್ಯಾಣ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ನವರು ಭವನವನ್ನು ಉದ್ಘಾಟಿಸಲಿದ್ದಾರೆ, ಗೃಹ ಸಚಿವ ಜಿ ಪರಮೇಶ್ವರ್ ಅವರು ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ, ಸಂಸದ ಸುನಿಲ್ ಬೋಸ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು

ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಬೆಳಿಗ್ಗೆ ಭೀಮನಗರದಿಂದ ಮೆರವಣಿಗೆ ಹೊರಟು ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ, ಅಂಬೇಡ್ಕರ್ ಭವನ ತಲುಪಲಿದೆ. ನಂತರ ಭವನ ಉದ್ಘಾಟನೆ ಗೊಳ್ಳಲಿದ್ದು
ವೇದಿಕೆ ಕಾರ್ಯಕ್ರಮಗಳು ನಡೆಯಲಿದೆ. ಇದು ಭೀಮ ನಗರದ ಹೆಮ್ಮೆಯ ಕಾರ್ಯಕ್ರಮವಾಗಿದ್ದು ಸಮುದಾಯದ ಮುಖಂಡರು ಯಜಮಾನರು ಭವನ ಉದ್ಘಾಟನೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಉತ್ಸುಕರಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಹಾಲಿ ಹಾಗೂ ಮಾಜಿ ಶಾಸಕರುಗಳು ಚುನಾಯಿತ ಪ್ರತಿನಿಧಿಗಳು ವಿವಿಧ ಸಮುದಾಯಗಳ ಮುಖಂಡರು ಹಾಗೂ ಜಿಲ್ಲೆಯ ಎಲ್ಲಾ ಅಂಬೇಡ್ಕರ್ ಸಂಘಗಳ ಪದಾಧಿಕಾರಿಗಳು ಅಂಬೇಡ್ಕರ್ ಅನುಯಾಯಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಭೀಮನಗರದ ಯಜಮಾನರಾದ ಚಿಕ್ಕಮಾಳಿಗೆ ಮಾತನಾಡಿ ಅಂದಿನ ಕಾರ್ಯಕ್ರಮವನ್ನು ಜಿಲ್ಲಾಡಳಿತ ಅಚ್ಚುಕಟ್ಟಾಗಿ ನಡೆಸಲು ಮುಂದಾಗಿದ್ದು ಈಗಾಗಲೇ ಕಾರ್ಯಕ್ರಮಕ್ಕೆ ತಯಾರಿ ನಡೆಸುತ್ತಿದೆ ಎಂದು ತಿಳಿಸಿದರು.

ಜಿಲ್ಲಾಡಳಿತ ನಡೆಸುವ ಕಾರ್ಯಕ್ರಮಕ್ಕೆ ಸಮುದಾಯದ ಮುಖಂಡರು ಯಜಮಾನರು ಸಾಥ್ ನೀಡಲಿದ್ದಾರೆ ನ.29 ರಂದು ಉದ್ಘಾಟನೆಯಾಗಲಿರುವ ಭವನದಲ್ಲಿ ಮುಂದುವರಿದ ಕಾಮಗಾರಿ ನಡೆಯಲಿದ್ದು ಕಾಮಗಾರಿ ಸಂಪೂರ್ಣ ಮುಗಿದ ಬಳಿಕ ಜನವರಿ ನಂತರ ಸಾರ್ವಜನಿಕರ ಸೇವೆಗೆ ದೊರಕಲಿದೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಅಂಬೇಡ್ಕರ್ ಸಂಘದ ಪ್ರಧಾನ ಕಾರ್ಯದರ್ಶಿ ಪಾಪಣ್ಣ, ಉಪಾಧ್ಯಕ್ಷ ಕಿರಣ್, ಸಹಕಾರ್ಯದರ್ಶಿ ಶಶಿಕುಮಾರ್, ಖಜಾಂಚಿ ರಾಜೇಶ್, ನಿರ್ದೇಶಕರುಗಳಾದ ಎಂ ಮರಿಸ್ವಾಮಿ, ಪಿ ಕೃಷ್ಣರಾಜು, ಮಣಿ, ಪುಟ್ಟಲಿಂಗಯ್ಯ, ಭೀಮನಗರದ ಯಜಮಾನರುಗಳಾದ ಮಹದೇವಸ್ವಾಮಿ, ಆನಂದ್ ಮುಖಂಡರುಗಳಾದ ನಾಗರಾಜು, ಲಿಂಗರಾಜು, ಯುವ ವಕೀಲ ಹರ್ಷ ಮತ್ತಿತರರು ಉಪಸ್ಥಿತರಿದ್ದರು.

ನ. 29 ರಂದು ಅಂಬೇಡ್ಕರ್ ಭವನ ಲೋಕಾರ್ಪಣೆ:ಆನಂದ್ ಮೂರ್ತಿ Read More