ಕೆ.ಆರ್.ನಗರದಲ್ಲಿ ಹಸುವಿಗೂ ಸೀಮಂತ ಮಾಡಿ ಸಂಭ್ರಮಿಸಿದ ಕುಟುಂಬ!

ಕೆ.ಆರ್.ನಗರ: ಮನೆಯ ಮಗಳು ಚೊಚ್ಚಲ ಗರ್ಭಿಣಿಯಾದರೆ ಇಡೀ ಕುಟುಂಬ ಸಂಭ್ರಮ ಪಡುವುದು ಸಾಮಾನ್ಯ,ಆದರೆ ಕೆ.ಆರ್.ನಗರದಲ್ಲಿ ಹಸುವಿಗೂ ಸೀಮಂತ ಮಾಡುವ ಮೂಲಕ ಮನೆಯವರು ಸಂಭ್ರಮಿಸಿದ್ದಾರೆ.!

ಕೆ.ಆರ್.ನಗರ ಹೊರವಲಯದ ಕೆಂಪನಕೊಪ್ಪಲು ಗ್ರಾಮದ ರೈತ ಮಹಿಳೆ ರೇಣುಕಾ ಕೃಷ್ಣೇಗೌಡ ಅವರ ಮನೆಯಲ್ಲಿ ಹೀಗೆ‌ ಖುಷಿ,ಸಂಭ್ರಮ ಎದ್ದು ಕಾಣುತ್ತಿತ್ತು.
ರೇಣುಕಾ ಅವರು ತಮ್ಮ ಚೊಚ್ಚಲು ತುಂಬಿದ ಗರ್ಭಿಣಿ ಹಸುವಿನ ಸೀಮಂತವನ್ನು ಶಾಸ್ತ್ರೋಕ್ತವಾಗಿ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ರೇಣುಕಾ ಕೃಷ್ಣೇಗೌಡ ಅವರು ತಮ್ಮ ಮನೆಯಲ್ಲಿಯೇ ಹುಟ್ಟಿದ ಕರುವನ್ನು ಬಹಳ ಪ್ರೀತಿಯಿಂದ ಸಾಕಿದ್ದಾರೆ, ಅದು ದೊಡ್ಡದಾಗಿ ಬೆಳೆದು ಚೊಚ್ಚಲ ಗರ್ಭಿಣಿ.
ಹಾಗಾಗಿ ಅವರು ಗ್ರಾಮದ ಮುತ್ತೈದೆಯರನ್ನು ಕರೆಸಿ ಪ್ರೀತಿಯ ಹಸುವಿನ ಸೀಮಂತ ಶಾಸ್ತ್ರ ಮಾಡಿ ಸಂಭ್ರಮಾಚರಣೆ ಮಾಡಿದ್ದು ಎಲ್ಲರ ಮನೆಯಲ್ಲೂ ಇದೇ ಮಾತಾಗಿದೆ.

ರೇಣುಕಾ ಕೃಷ್ಣೇಗೌಡ ಅವರು ತಮ್ಮ ಪ್ರೀತಿಯ ಹಸುವಿಗೆ ಒಂಬತ್ತು ತಿಂಗಳು ತುಂಬಿದ ಕೂಡಲೇ ಸೀಮಂತ ಮಾಡಲು ನಿರ್ಧರಿಸಿ, ಅಕ್ಕಪಕ್ಕದ ಮನೆಯವರಿಗೆ ಹಾಗೂ ಗ್ರಾಮಸ್ಥರಿಗೆ ವುಷಯ ತಿಳಿಸಿ ಸೀಮಂತ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು.

ಮನೆಯ ಮುಂದೆ ಶಾಮಿಯಾನ ಹಾಕಿಸಿ ಎಲ್ಲರೂ ಮನೆಯ ಮಗಳು ಗರ್ಭಿಣಿಯಾದಾಗ ನಡೆಸುವ ಸೀಮಂತ ಕಾರ್ಯದಂತೆಯೇ ಹಸುವಿಗೆ ರೇಷ್ಮೆ ಸೀರೆ, ಹಸಿರುಬಳೆ ತೊಡಿಸಿ,ಕೊರಳಿಗೆ ಹೂ ಮಾಲೆ ಹಾಕಿ, ಕಾಲಿಗೆ ಗೆಜ್ಜೆ ಕಟ್ಟಿ ಶೃಂಗಾರ ಮಾಡಿ, ಐದು ಬಗೆಯ ಸಿಹಿ ತಿಂಡಿಗಳು, ಐದು ಬಗೆಯ ಹಣ್ಣುಗಳನ್ನು ನೀಡಿ, ಆರತಿ ಬೆಳಗಿದರು.

ಊರಿನ ಮುತ್ತೈದೆಯರಾದ ಪವಿತ್ರ, ಮಂಜುಳ, ಮಮತ, ಶಾಲಿನಿ, ರಶ್ಮಿ ಮಹೇಶ್ ಅವರುಗಳನ್ನು ಕರೆಸಿ ಶಾಸ್ತ್ರೋಕ್ತ ವಾಗಿ ಸೀಮಂತ ಮಾಡಿದ್ದಾರೆ.

ಜತೆಗೆ ಗ್ರಾಮಸ್ಥರಿಗೆ ಸಿಹಿ ಊಟ ಹಾಕಿಸುವ ಮೂಲಕ ರೇಣುಕಾ ಕೃಷ್ಣೇಗೌಡ ಮಾದರಿಯಾಗಿದ್ದಾರೆ.

ಗ್ರಾಮದ ಅನೇಕ ಮಹಿಳೆಯರು ಮತ್ತಿತರರು ಭಾಗವಹಿಸಿ ಗರ್ಭಿಣಿ ಹಸುವಿಗೆ ಶುಭ ಹಾರೈಸಿದರು.

ಕೆ.ಆರ್.ನಗರದಲ್ಲಿ ಹಸುವಿಗೂ ಸೀಮಂತ ಮಾಡಿ ಸಂಭ್ರಮಿಸಿದ ಕುಟುಂಬ! Read More