ಕುರುಬ ಸಮಾಜ ಯಾರ ತಟ್ಟೆಗೂ ಕೈಹಾಕಿಲ್ಲ: ಸುಬ್ರಹ್ಮಣ್ಯ

ಮೈಸೂರು: ಕುರುಬ ಸಮಾಜದ ಜನ ಇಷ್ಟು ವರ್ಷಗಳ ಕಾಲ ತಮಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಉದ್ದೇಶದಿಂದ ಎಸ್ಟಿಗೆ ಸೇರಿಸುವಂತೆ ಒತ್ತಾಯಿಸುತ್ತಿದ್ದಾರೆಯೇ ಹೊರತು ಯಾರ ತಟ್ಟೆಗೂ ಕೈಹಾಕಿಲ್ಲ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ತಿಳಿಸಿದ್ದಾರೆ.

ಕುರುಬರನ್ನು ಎಸ್‌ಟಿಗೆ ಸೇರಿಸುವ ಪ್ರಯತ್ನದಲ್ಲಿ ನಮ್ಮ ತಟ್ಟೆಯಲ್ಲಿರುವ ಅನ್ನ ಕಿತ್ತುಕೊಳ್ಳಲು ಹೋಗಬೇಡಿ ಎಂಬ ಮಾಜಿ ಸಂಸದ ವಿ.ಎಸ್‌ ಉಗ್ರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸುಬ್ರಹ್ಮಣ್ಯ, ಕುರುಬ ಸಮಾಜಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿ ಪ್ರಾಣ ತೆತ್ತವರು. ಕನಕದಾಸರು 7 ಕೊಪ್ಪರಿಕೆ ಚಿನ್ನ ಸಿಕ್ಕಿದಾಗಲೂ ಮನೆಗೆ ತರದೇ ದಾನ ಮಾಡಿದವರು ಅಂತಹ ಸಮಾಜ ಕುರುಬ ಸಮಾಜ ಎಂದು ಉದಾಹರಣೆ ನೀಡಿದ್ದಾರೆ.

ಕುರುಬ ಸಮಾಜ ಹಿಂದುಳಿದ ವರ್ಗವಾಗಿದ್ದು, ಸಾಕಷ್ಟು ವರ್ಷಗಳಿಂದ ಹಲವು ಸೌಲಭ್ಯಗಳಿಂದ ವಂಚಿತವಾಗಿದೆ. ರಾಜಕೀಯ ಮತ್ತು ಸರ್ಕಾರಿ ಸೌಲಭ್ಯಗಳಿಂದಲೂ ವಂಚಿತವಾಗಿದೆ. ಇದನ್ನ ಸರಿಪಡಿಸಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮುಂದಾಗಿದೆ. ಎಸ್ಟಿ ಸಮುದಾಯಕ್ಕೆ ಸವಲತ್ತು ಕೊಡುವುದು ಸಹ ಸರ್ಕಾರದಿಂದಲೇ,ಇದರಿಂದ ಯಾರಿಗೂ ವಂಚನೆ ಆಗುವುದಿಲ್ಲ ಎಂದು ತಿಳಿಸಿದ್ದಾರೆ.

ಕುರುಬರನ್ನ ಎಸ್ಟಿಗೆ ಸೇರಿಸಿಲು ಕೇಂದ್ರ ಸರ್ಕಾರ ನಿರ್ಧರಿಸಿದರೆ ಎಸ್ಟಿಗೆ ನಿಗದಿ ಮಾಡಿರುವ ಮೀಸಲಾತಿಯನ್ನ ದುಪ್ಪಟ್ಟು ಮಾಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ವಿಪಕ್ಷಗಳ ಕೆಲ ನಾಯಕರೂ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ. ಹಾಗಾಗಿ ಕುರುಬರು ಯಾರ ತಟ್ಟೆಗೂ ಕೈಹಾಕಿಲ್ಲ,ಹಾಕುವುದೂ ಇಲ್ಲ, ಈಗ ನಮ್ಮ ಸಮಾಜಕ್ಕೆ ನಿಗದಿಪಡಿಸಿರುವ ಮೀಸಲಾತಿಯೊಂದಿಗೆ ಎಸ್ಟಿ ಸಮುದಾಯದ ಮೀಸಲಾತಿಯನ್ನೂ ಕೊಡಬೇಕು ಎಂದು ಸುಬ್ರಹ್ಮಣ್ಯ ಮನವಿ ಮಾಡಿದ್ದಾರೆ.

ವಕೀಲ ರಾಕೇಶ್‌ ಕಿಶೋರ್‌ನನ್ನ ಗಲ್ಲಿಗೇರಿಸಿ:
ಸುಪ್ರೀಂ ಕೋರ್ಟ್‌ ಸಿಜೆಐ ಮೇಲೆ ಶೂ ಎಸೆದ ವಕೀಲ ರಾಕೇಶ್‌ ಕಿಶೋರ್‌ ಅಂತಹವರನ್ನ ಗಲ್ಲಿಗೇರಿಸುವ‌ ಅಗತ್ಯವಿದೆ ಎಂದೂ ಸುಬ್ರಹ್ಮಣ್ಯ ಆಗ್ರಹಿಸಿದ್ದಾರೆ.

ಕೋರ್ಟ್‌ ಹಾಲ್‌ನಲ್ಲಿ ಸಿಜೆಐ ಮೇಲೆ ಶೂ ಎಸೆದಿದ್ದಲ್ಲದೇ ನನಗೆ ಈ ಬಗ್ಗೆ ಪಶ್ಚಾತಾಪವಾಗಲಿ, ವಿಷಾದವಾಗಲಿ ಇಲ್ಲ ಎಂದು ರಾಕೇಶ್‌ ಕಿಶೋರ್‌ ದರ್ಪ ತೋರಿದ್ದಾರೆ,ಇಂತಹವರನ್ನ ಗಲ್ಲಿಗೇರಿಸಬೇಕು ರಾಜ್ಯ ಸರ್ಕಾರ ಕೂಡ ಈ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕುರುಬ ಸಮಾಜ ಯಾರ ತಟ್ಟೆಗೂ ಕೈಹಾಕಿಲ್ಲ: ಸುಬ್ರಹ್ಮಣ್ಯ Read More

ಜಾತಿ, ಧರ್ಮದ ಹೆಸರಲ್ಲಿ ಬಿಜೆಪಿ ನಾಯಕರಿಂದ ವಿಷಬೀಜ ಬಿತ್ತುವ ಕೆಲಸ: ಸುಬ್ರಹ್ಮಣ್ಯ ಕಿಡಿ

ಮೈಸೂರು: ಸೌಹಾರ್ಧತೆಯಿಂದ ಇರುವ ನಮಯ ರಾಜ್ಯದಲ್ಲಿ ಜಾತಿ, ಧರ್ಮದ ಹೆಸರಲ್ಲಿ ವಿಷ ಬೀಜ ಬಿತ್ತುವ ಕೆಲಸವನ್ನ ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಅಸಮಾಧಾನ ಪಟ್ಟಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಹಿಂದೆ ಇಡೀ ಕರ್ನಾಟಕದ ಜನತೆ ಇದ್ದಾರೆ. ಆದರೆ ಬಿಜೆಪಿಗರ ವರ್ತನೆ ನಿಲ್ಲದಿದ್ದರೆ, ಜನ ನಿಮ್ಮನ್ನ ಮೂಲೆಗುಂಪು ಮಾಡುತ್ತಾರೆ ಎಂದು ಸುಬ್ರಹ್ಮಣ್ಯ ಎಚ್ಚರಿಸಿದ್ದಾರೆ.

ಮುಸ್ಲಿಮರನ್ನು ತಮ್ಮ ಬೆನ್ನ ಹಿಂದೆ ಇಟ್ಟುಕೊಳ್ಳಲು ಸಿದ್ದರಾಮಯ್ಯ ಬಾನು ಮುಷ್ತಾಕ್‌ರನ್ನ ದಸರಾ ಉದ್ಘಾಟನೆಗೆ ಕರೆದಿದ್ದಾರೆ. ಇದು ನಾಳೆ ಸಿಎಂ ಕುರ್ಚಿಗೆ ಕಂಟಕ ಬಂದಾಗ ಮುಸ್ಲಿಂ ಶಕ್ತಿಯನ್ನು ತಮ್ಮ ಹಿಂದೆ ನಿಲ್ಲಿಸಿಕೊಳ್ಳಲು ಹೆಣೆದಿರುವ ತಂತ್ರವಾಗಿದೆ ಎಂಬ ಪ್ರತಾಪ್‌ ಸಿಂಹ ಹೇಳಿಕೆಗೆ ಸುಬ್ರಮಣ್ಯ ತಿರುಗೇಟು ನೀಡಿದ್ದಾರೆ.

ಸಿದ್ದರಾಮಯ್ಯ ಅವರ ಬೆನ್ನ ಹಿಂದೆ ಇಡೀ ಕರ್ನಾಟಕದ ಜನತೆ ಇದ್ದಾರೆ. ಒಂದು ಜಾತಿ ಓಲೈಕೆ ಮಾಡುವ ಅಗತ್ಯವಿಲ್ಲ. ಈ ಹಿಂದೆ ರೈತ ಪುಟ್ಟಣ್ಣ, ಕೆ.ಎಸ್‌ ನಿಸಾರ್‌ ಅಹಮದ್‌ ಅವರಿಂದ ದಸರಾ ಉದ್ಘಾಟನೆ ಮಾಡಿಸಿದ್ದು ಸಿದ್ದರಾಮಯ್ಯ ಅವರ ಔಧಾರ್ಯ.

ಅದೇ ರೀತಿಯಲ್ಲಿ ಬೂಕರ್‌ ಪ್ರಶಸ್ತಿ ಪುರಸ್ಕೃತರನ್ನ ಆಹ್ವಾನಿಸಿದ್ದಾರೆ. ಇದರಲ್ಲಿ ಯಾವುದೇ ರೀತಿ ಜಾತಿ ಧರ್ಮ ಬರುವುದಿಲ್ಲ, ಬಿಜೆಪಿಗೆ ಅಹಿಂದ ವರ್ಗಗಳನ್ನ ಕಂಡರೆ ತಾತ್ಸಾರ. ಅದಕ್ಕಾಗಿ ಹಿಂದೂ ಮುಸ್ಲಿಮರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಸುಬ್ರಮಣ್ಯ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ಪ್ರತಿವರ್ಷ ನಗರ, ತಾಲೂಕು, ಹೋಬಳಿಯ ಗಲ್ಲಿ ಗಲ್ಲಿಗಳಲ್ಲಿ ಗಣೇಶ ಹಬ್ಬವನ್ನ ಆಚರಿಸುತ್ತಾ ಹಿಂದೂ, ಮುಸ್ಲಿಂ, ಕ್ರೈಸ್ತರು ಸೌಹಾರ್ಧತೆ ಮೆರೆಯುತ್ತಿದ್ದಾರೆ. ಇಂತಹ ರಾಜ್ಯದಲ್ಲಿ ಜಾತಿ, ಧರ್ಮದ ಹೆಸರಲ್ಲಿ ವಿಷ ಬೀಜ ಬಿತ್ತುವ ಕೆಲಸವನ್ನು ಬಿಜೆಪಿ ನಾಯಕರು ಮಾಡ್ತಿದ್ದಾರೆ. ಅದರಲ್ಲೂ ಪ್ರತಾಪ್‌ ಸಿಂಹ ಅವರು ಸದಾ ಹಿಂದೂ ಮುಸ್ಲಿಮರ ನಡುವೆ ದ್ವೇಷ ಬಿತ್ತುವಂತಹ, ಕೋಮುದ್ವೇಷಕ್ಕೆ ಕಾರಣವಾಗುವಂತಹ ಹೇಳಿಕೆಗಳನ್ನೇ ನೀಡುತ್ತಿರುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ

ಆರ್‌ಎಸ್‌ಎಸ್‌ ಮುಖ್ಯಸ್ಥರಾದ ಮೋಹನ್‌ ಭಾಗವತ್‌ ಅವರೇ ಹಿಂದೂ ಮುಸ್ಲಿಂ ಐಕ್ಯತೆ ಬಗ್ಗೆ ಮಾತನಾಡಿದ್ದಾರೆ. ಹಿಂದೂಗಳು ಎಲ್ಲವನ್ನೂ ಕಿತ್ತುಕೊಳ್ತಾರೆ ಎಂದು ಭಾವಿಸುವಂತೆ ಮಾಡಲಾಗಿದೆ ಅಂತ ಕಳವಳ ವ್ಯಕ್ತಪಡಿಸಿದ್ದಾರೆ. ಪ್ರತಾಪ್‌ ಸಿಂಹ ಅವರೇ ಕರ್ನಾಟಕ ಜನ ಪ್ರಬುದ್ಧರಾಗಿದ್ದಾರೆ ನಿಮ್ಮ ವರ್ತನೆಗೆ ಸೊಪ್ಪು ಹಾಕುವುದಿಲ್ಲ, ಈ ರೀತಿಯ ವರ್ತನೆ ಮುಂದುವರಿದರೆ, ರಾಜ್ಯದ ಜನ ನಿಮ್ಮನ್ನ ಮೂಲೆ ಗುಂಪು ಮಾಡ್ತಾರೆ. ಎಚ್ಚರವಿರಲಿ ಎಂದು ಬಿ ಸುಬ್ರಹ್ಮಣ್ಯ ತಿಳಿಸಿದ್ದಾರೆ.

ಜಾತಿ, ಧರ್ಮದ ಹೆಸರಲ್ಲಿ ಬಿಜೆಪಿ ನಾಯಕರಿಂದ ವಿಷಬೀಜ ಬಿತ್ತುವ ಕೆಲಸ: ಸುಬ್ರಹ್ಮಣ್ಯ ಕಿಡಿ Read More

ಧರ್ಮಸ್ಥಳ ಕೇಸಲ್ಲಿ ಧರ್ಮ ಎತ್ತಿಕಟ್ಟುತ್ತಿರೋದು ನೀವು: ಪ್ರತಾಪ್‌ ಸಿಂಹಗೆ ಸುಬ್ರಹ್ಮಣ್ಯ ಟಾಂಗ್

ಮೈಸೂರು: ಧರ್ಮಸ್ಥಳದ ಬಗ್ಗೆಯಾಗಲಿ, ಶ್ರೀ ಮಂಜುನಾಥನ ಬಗ್ಗೆಯಾಗಲಿ ಯಾರೂ ಅಪಪ್ರಚಾರ ಮಾಡುತ್ತಿಲ್ಲ ಎಂಬುದನ್ನ ಮೊದಲು ತಿಳಿದುಕೊಳ್ಳಿ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಮಾಜಿ ಸಂಸದ ಪ್ರತಾಪ್ ಸಿಂಹ ಅವರಿಗೆ ತಿರುಗೇಟು ನೀಡಿದ್ದಾರೆಮ

ಒಂದು ಧರ್ಮವನ್ನು ಮತ್ತೊಂದು ಧರ್ಮದ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿರುವುದು ನೀವು ಎಂದು ಬಿ. ಸುಬ್ರಹ್ಮಣ್ಯ ವಾಗ್ದಾಳಿ ನಡೆಸಿದ್ದಾರೆ.

ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ ಮತ್ತು ರಾಹುಲ್‌ ಗಾಂಧಿ ಅವರ ಮತಗಳ್ಳತನ ಆರೋಪಕ್ಕೆ ಮಾಜಿ ಸಂಸದ ಪ್ರತಾಪ್‌ ಸಿಂಹ ಟೀಕಿಸಿದ ವಿಚಾರ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ.

ಧರ್ಮಸ್ಥಳದ ಬಗ್ಗೆಯಾಗಲಿ, ಧರ್ಮಸ್ಥಳದ ಶ್ರೀಮಂಜುನಾಥನ ಬಗ್ಗೆಯಾಗಲಿ ಯಾರೂ ಅಪಪ್ರಚಾರ ಮಾಡುತ್ತಿಲ್ಲ. ಅನಾಮಿಕನ ದೂರು ಹಾಗೂ ಕರ್ನಾಟಕದ ಮಹಿಳಾ ಆಯೋಗದ ದೂರಿನ ಹಿನ್ನೆಲೆಯಲ್ಲಿ ಜವಾಬ್ದಾರಿಯುತ ಸರ್ಕಾರವು ಎಸ್‌ಐಟಿ ರಚಿಸಿದೆ. ಎಸ್ಐಟಿ ತನ್ನ ಕೆಲಸ ಮಾಡುತ್ತಿದೆ. ಇದರಲ್ಲಿ ಸಿದ್ದರಾಮಯ್ಯನವರ ವೈಯಕ್ತಿಕ ದ್ವೇಷವಾಗಲಿ, ಹಿಂದೂ ಧರ್ಮದ ಅವಹೇಳನವಾಗಲಿ ಇಲ್ಲ. ಎಸ್.ಐ.ಟಿ. ರಚನೆಗೆ ಸಂಬಂಧಿಸಿದಂತೆ ಸರ್ಕಾರದ ಕ್ರಮವನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳೇ ಸ್ವಾಗತಿಸಿದ್ದಾರೆ ಎಂದು ಸುಬ್ರಹ್ಮಣ್ಯ ಹೇಳಿದ್ದಾರೆ.

ಈವರೆಗೆ ಯಾರೊಬ್ಬರೂ ಸಹ ಹಿಂದೂ-ಮುಸ್ಲಿಂ ಎಂಬ ವಿಚಾರವನ್ನ ಈ ಪ್ರಕರಣದಲ್ಲಿ ತಂದಿಲ್ಲ. ಆದರೆ ಬಿಜೆಪಿಯವರು ಹಾಗೂ ಬಿಜೆಪಿ ಪಟಾಲಂ ಇದರಲ್ಲಿ ಧರ್ಮವನ್ನು ಎಳೆದು ತರುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಯೂಟ್ಯೂಬರ್ಸ್‌ಗಳಾಗಲಿ, ಮಾಧ್ಯಮಗಳಾಗಲಿ ಸುಳ್ಳು ಸುದ್ದಿಗಳನ್ನ ಬಿತ್ತರಿಸಿದ್ದರೆ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಬೇಕಿದ್ದರೆ ನೀವೂ ದೂರು ಕೊಡಿ. ಅದನ್ನ ಬಿಟ್ಟು  ಧರ್ಮದ ವಿರುದ್ಧ ಎತ್ತಿಕಟ್ಟುವ ಕೆಲಸ ಏಕೆ ಮಾಡುತ್ತೀರಿ ಸದಾ ಹಿಂದೂ-ಮುಸ್ಲಿಮರ ನಡುವೆ ಕೋಮುದ್ವೇಷ ಹರಡುವುದೇ ನಿಮ್ಮ ಕೆಲಸವೆ ಎಂದು ಸುಬ್ರಮಣ್ಯ ಖಾರವಾಗಿ ಪ್ರಶ್ನಿಸಿದ್ದಾರೆ.

ಮಹದೇವಪುರದಲ್ಲಿ ಮತಗಳ್ಳತನ ನಡೆದಿದೆ ಎಂಬುದರ ಬಗ್ಗೆ ರಾಹುಲ್‌ ಗಾಂಧಿ ಅವರು ದಾಖಲೆ ಸಮೇತ ವಿವರಣೆಗಳನ್ನ ನೀಡಿದ್ದಾರೆ. 6 ತಿಂಗಳ ಕಾಲ ಸಂಶೋಧನೆ ಮಾಡಿ ದಾಖಲೆ ಸಮೇತ ಮಾತನಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಇನ್ನೊಂದು ಕ್ಷೇತ್ರದಲ್ಲಿ ನಡೆದಿಲ್ಲವೆ ಅಂತ ಕೈ ತೋರಿಸುತ್ತಿದ್ದೀರೆಯೇ ಹೊರತು, ಅದು ಸುಳ್ಳು ಎಂದು ಹೇಳುವ ಧೈರ್ಯ ನಿಮ್ಮಲ್ಲಿ ಯಾರೊಬ್ಬರಿಗೂ ಇಲ್ಲ ಎಂದು ಕುಟುಕಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆ ವೇಳೆ ಪೀಟರ್‌ ಚುನಾವಣಾಧಿಕಾರಿಯಾಗಿ ಬಂದು ಪಾರದರ್ಶಕತೆಯಿಂದ ಚುನಾವಣೆ ನಡೆಸಿದ್ದಾರೆ ಇದು ನೆನಪಿಲ್ಲವೆ, ರಾಹುಲ್‌ಗಾಂಧಿ ಅವರು ಸತ್ಯ ಹೇಳಿದ್ದಾರೋ, ಸುಳ್ಳು ಹೇಳಿದ್ದಾರೋ ಅನ್ನೋದನ್ನ ತಿಳಿಯಲು ಹಾಲಿ ನ್ಯಾಯಾಧೀಶರಿಂದಲೇ ತನಿಖೆಯಾಗಲಿ ಅವರು ಹೇಳಿದ್ದು ಸುಳ್ಳು ಅನ್ನೋದಕ್ಕೆ ನೀವು ದಾಖಲೆ ಕೊಡಿ ಎಂದು ಸುಬ್ರಹ್ಮಣ್ಯ ಸವಾಲು ಹಾಕಿದ್ದಾರೆ.

ಇತ್ತೀಚೆಗೆ ಬಿಜೆಪಿ ಸಂಸದ ಕೆ. ಸುಧಾಕರ್‌ ಅವರ ಹೆಸರಲ್ಲಿ ಡೆತ್‌ನೋಟ್‌ ಬರೆದಿಟ್ಟು ಡ್ರೈವರ್‌ ಬಾಬು ನೇಣಿಗೆ ಶರಣಾಗಿದ್ದಾರೆ. ಹಾಗಾಗಿ ಸುಧಾಕರ್‌ ವಿರುದ್ಧ ಎಫ್‌ಐಆರ್‌ ಆಗಿದೆ. ಇದಕ್ಕೆ ಬಿಜೆಪಿಯವರು ಏನು ಕ್ರಮ ಕೈಗೊಂಡರು ಎಂದು ಪ್ರಶ್ನಿಸಿರುವ ಅವರು,
ತಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಬೇರೆಯವರ ತಟ್ಟೆಯಲ್ಲಿ ಬಿದ್ದಿರೋ ನೊಣಗಳ ಬಗ್ಗೆಯೇ ಇವರಿಗೆ ಚಿಂತೆ, ನೈತಿಕತೆ ಇಲ್ಲದೇ ಸಿದ್ದರಾಮಯ್ಯರ ವಿರುದ್ಧ ಸಾರಾಸಗಟಾಗಿ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ಧರ್ಮಸ್ಥಳ ಕೇಸಲ್ಲಿ ಧರ್ಮ ಎತ್ತಿಕಟ್ಟುತ್ತಿರೋದು ನೀವು: ಪ್ರತಾಪ್‌ ಸಿಂಹಗೆ ಸುಬ್ರಹ್ಮಣ್ಯ ಟಾಂಗ್ Read More

ಕೇಂದ್ರ ಸರ್ಕಾರ ಬೆಲೆ ಏರಿಸಿದ್ರೆ ಬಿಜೆಪಿಗರು ಮೋದಿ ರಾಜೀನಾಮೆ ಕೇಳ್ತಾರ: ಸುಬ್ರಹ್ಮಣ್ಯ ಪ್ರಶ್ನೆ

ಮೈಸೂರು: ರಾಜ್ಯದಲ್ಲಿ ಬೆಲೆ ಏರಿಕೆಯಾದರೆ ಮುಖ್ಯಮಂತ್ರಿಯೇ ಕಾರಣ ಎನ್ನುವ ಬಿಜೆಪಿ ನಾಯಕರು ಕೇಂದ್ರದಲ್ಲಿ ಬೆಲೆ ಏರಿಕೆಯಾದ್ರೆ ಮೋದಿ ಅವರ ರಾಜೀನಾಮೆ ಕೇಳುತ್ತಾರಾ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ
ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಅವರ ಸರ್ಕಾರ ಹಾಲಿನ ದರ ಏರಿಸಿದ್ದಕ್ಕೆ ಬಿಜೆಪಿ ನಾಯಕರು ಬೊಬ್ಬೆ ಹೊಡೆದರು, ಆದರೆ ಆ ಹಣ ರೈತರಿಗೆ ಸೇರುತ್ತಿದೆ. ಈಗ ಕೇಂದ್ರ ಸರ್ಕಾರ ರೈಲಿನ ಟಿಕೆಟ್‌ ದರ ಏರಿಕೆ ಮಾಡುತ್ತಿದೆ ಈಗ ಕೇಂದ್ರದ ವಿರುದ್ಧ ಬಿಜೆಪಿಗರ ನಿಲುವೇನು? ಇಲ್ಲಿ ಸಿದ್ದರಾಮಯ್ಯರ ರಾಜೀನಾಮೆ ಕೇಳುವವರು ಕೇಂದ್ರದಲ್ಲಿ ಮೋದಿ ಅವರ ರಾಜೀನಾಮೆ ಕೇಳುವರೆ ಎಂದು ಕಾರವಾಗಿ ಸುಬ್ರಮಣ್ಯ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಅವರು 2ನೇ ಬಾರಿ ಸಿಎಂ ಆಗಿ ಈಗಾಗಲೇ 2 ವರ್ಷ ಯಶಸ್ವಿಯಾಗಿ ಪೂರೈಸಿದ್ದಾರೆ. 569 ಭರವಸೆಗಳಲ್ಲಿ 249 ಭರವಸೆಗಳನ್ನ ಈಡೇರಿಸಿ ಕರ್ನಾಟಕವನ್ನ ಸಮೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ವರ್ಷದಿಂದ ವರ್ಷಕ್ಕೆ ರಸಗೊಬ್ಬರ, ಅಡುಗೆ ಅನಿಲ, ಪೆಟ್ರೋಲ್‌, ಡೀಸೆಲ್‌ ದರ ಏರಿಸುತ್ತಿದೆ. ಈಗ ರೈಲಿನ ಟಿಕೆಟ್‌ ದರ ಕೂಡ ಏರಿಕೆ ಮಾಡುತ್ತಿದೆ ಇದೆಲ್ಲ ಬಿಜೆಪಿ ನಾಯಕರ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಟೀಕಿದ್ದಾರೆ.

ಮಹಿಳೆಯರಿಗೆ 5 ಕೋಟಿ ರೂವರೆಗೆ ಸ್ವಯಂ ಉದ್ಯೋಗಕ್ಕೆ ಸಾಲ ನೀಡುತ್ತೇವೆ. ಇದರಿಂದ ಗ್ರಾಮೀಣ ಮಹಿಳೆಯರಿಗೆ ಅನುಕೂಲ ಆಗಲಿದೆ ಅಂದಿದ್ದರು, ಆದರೆ ಬ್ಯಾಂಕಿನಲ್ಲಿ ನೂರೆಂಟು ಕಂಡಿಷನ್‌ ಹಾಕುತ್ತಾರೆ, ಗ್ರಾಮೀಣ ಪ್ರದೇಶದಲ್ಲಿ ಬಹಳ ಮಂದಿಗೆ ಉಳಿತಾಯ ಮಾಡುವುದು ಕಷ್ಟ, ಅಂತಹುದರಲ್ಲಿ ಆದಾಯ ತೆರಿಗೆ ಕಟ್ಟಬೇಕು ಅಂತಾರೆ, ಐಟಿ ರಿಟರ್ನ್ಸ್‌ ಕೇಳ್ತಾರೆ ಅವರೆಲ್ಲ ಇದನ್ನೆಲ್ಲ ಎಲ್ಲಿಂದ ತರಬೇಕು ಎಂದಿದ್ದಾರೆ‌ ಸುಬ್ರಮಣ್ಯ.

ಈಗ ಟೋಲ್‌ ಪಾಸ್‌ ವ್ಯವಸ್ಥೆ ಮಾಡಿದ್ದಾರೆ. ಇದು ನಿಯಮಿತ ಪ್ರಯಾಣಿಕರಾಗಿದ್ದವರಿಗೆ ಮಾತ್ರ ಅನುಕೂಲವಾಗುತ್ತದೆ. ಆದರೆ ಗೂಡ್ಸ್‌, ಟ್ರಾನ್ಸ್‌ಪೋರ್ಟ್‌ಗೆ ಹೇಗೆ ಉಳಿತಾಯ ಆಗುತ್ತದೆ ಎಂಬುದನ್ನ ಹೇಳಲಿ ಎಂದು ಅವರು ಒತ್ತಾಯಿಸಿದ್ದಾರೆ.

ಒಂದು ಟೋಲ್‌ ಪಾಸ್‌ಗೆ 1 ವರ್ಷ ಅಥವಾ 200 ಟ್ರಿಪ್‌ ಅಂದಿದ್ದಾರೆ. ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್‌ವೇ ನಲ್ಲಿ 2 ಟೋಲ್‌ ಇದೆ. ಒಮ್ಮೆ ಹೋಗಿ ಬಂದರೆ 4 ಟ್ರಿಪ್‌ ಮುಗಿದೇ ಹೋಗುತ್ತದೆ, ಇದು ವಾರ್ಷಿಕ ಪಾಸ್‌ ಹೇಗಾಗುತ್ತದೆ. ರಾಜ್ಯದಲ್ಲಿರುವ ಬಿಜೆಪಿ ನಾಯಕರು ಹಾಗೂ ರಾಜ್ಯದಿಂದ ಕೇಂದ್ರಕ್ಕೆ ಆಯ್ಕೆಯಾದವರು ಮೊದಲು ಈ ಬಗ್ಗೆ ಪ್ರಶ್ನೆ ಮಾಡುವ ನೈತಿಕತೆ ಬೆಳೆಸಿಕೊಳ್ಳಲಿ ಎಂದು ಬಿ ಸುಬ್ರಹ್ಮಣ್ಯ ಸಲಹೆ ನೀಡಿದ್ದಾರೆ.

ಕೇಂದ್ರ ಸರ್ಕಾರ ಬೆಲೆ ಏರಿಸಿದ್ರೆ ಬಿಜೆಪಿಗರು ಮೋದಿ ರಾಜೀನಾಮೆ ಕೇಳ್ತಾರ: ಸುಬ್ರಹ್ಮಣ್ಯ ಪ್ರಶ್ನೆ Read More