ಶಂಕರ ನಾಗ್ ಹುಟ್ಟುಹಬ್ಬದ ದಿನ: ಆಟೋ ಚಾಲಕರ ದಿನಾಚರಣೆ ಘೋಷಣೆಗೆ ಆಗ್ರಹ
ಮೈಸೂರು: ಶಂಕರ ನಾಗ್ ಅವರ ಹುಟ್ಟುಹಬ್ಬದ ದಿನವನ್ನು ಆಟೋ ಚಾಲಕರ ದಿನಾಚರಣೆ ಎಂದು ಘೋಷಿಸುವಂತೆ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್ ಮನವಿ ಮಾಡಿದರು.
ಕರ್ನಾಟಕ ಹಿತರಕ್ಷಣಾ ವೇದಿಕೆ ವತಿಯಿಂದ ದೇವರಾಜ ಅರಸು ರಸ್ತೆಯಲ್ಲಿರುವ ಆಟೋ ನಿಲ್ದಾಣದಲ್ಲಿ ಕನ್ನಡ ಚಿತ್ರರಂಗದ ಕರಾಟೆ ಕಿಂಗ್, ನಟ, ನಿರ್ದೇಶಕ ಶಂಕರನಾಗ್ ಅವರ ಹುಟ್ಟುಹಬ್ಬವನ್ನು ಸಿಹಿ ವಿತರಿಸಿ ಆಚರಿಸಿದ ವೇಳೆ ಸದಸ್ಯರಾದ ನಜರ್ಬಾದ್ ನಟರಾಜ್ ಮಾತನಾಡಿದರು.
ಆಟೋ ಚಾಲಕರು ಸ್ವಾಭಿಮಾನಿಗಳು. ಸಂಪಾದನೆಯ ಜೊತೆಯಲ್ಲೆ ಸಮಾಜದ ಒಳತಿಗಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಹೃದಯವಂತರು ಎಂದು ಬಣ್ಣಿಸಿದರು.
ಕನ್ನಡಚಿತ್ರರಂಗದ ಬಹುಮುಖ ಪ್ರತಿಭಾವಂತ ಕರಾಟೆಕಿಂಗ್ ಶಂಕರ್ ನಾಗ್ ಅವರು ನಿರ್ದೇಶನ ಮತ್ತು ನಟನೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದ ದೂರದೃಷ್ಟಿಯುಳ್ಳ ಕಲಾವಿದ. ಇವರ ನಿರ್ದೇಶನದ ಮಾಲ್ಗುಡಿ ಡೇಸ್ ವಿಶ್ವವಿಖ್ಯಾತಿ ಪಡೆದ ದಂತಕಥೆಯಾಗಿದೆ ಎಂದು ಹೇಳಿದರು.
ಸಾಧನೆಯೇ ಬದುಕಿನ ಗುರಿ ಎಂಬ ಶಂಕರನಾಗ್ ಅವರ ತತ್ವ ನಮ್ಮೆಲ್ಲರಿಗೂ ಪ್ರೇರಣೆ. ಮುಂದಿನ ದಿನದಲ್ಲಿ ರಾಜ್ಯ ಸರ್ಕಾರ ಕಾರ್ಮಿಕ ಇಲಾಖೆ ವತಿಯಿಂದ ಶಂಕರ ನಾಗ್ ಅವರ ಹುಟ್ಟುಹಬ್ಬದ ದಿನವನ್ನು ಆಟೋ ಚಾಲಕರ ದಿನಾಚರಣೆ ಎಂದು ಘೋಷಿಸಲು ಮುಂದಾಗಬೇಕು ಎಂದು ಕೋರಿದರು.
ಕರ್ನಾಟಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್ ಮಾತನಾಡಿ,ಮೆಟ್ರೋ ರೈಲ್ವೆ ನಿಲ್ದಾಣಕ್ಕೆ ಶಂಕರ್ ನಾಗ್ ಹೆಸರು ಇಡಬೇಕು ಹಾಗೂ ಮೈಸೂರಿನಲ್ಲಿ ಶಂಕರ್ ನಾಗ್ ಸ್ಮಾರಕ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.
ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷ ಎಸ್ ಎನ್ ರಾಜೇಶ್, ನೀತು, ದಿನೇಶ್,ಕಡಕೋಳ ಶಿವು, ಭರತ್, ಅಭಿ, ರಾಕೇಶ್ ಹಾಗೂ ಆಟೋ ಚಾಲಕರು
ಹಾಜರಿದ್ದರು.


